Saturday, 30 December 2017

ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಫಲ ಪುಷ್ಪ ಪ್ರದರ್ಶನ


ಕೊಪ್ಪಳ ಡಿ. 30 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ “ಕೊಪ್ಪಳ ಜಿಲ್ಲಾ ಮಟ್ಟದ ಫಲ-ಪುಷ್ಪ ಪ್ರದರ್ಶನವನ್ನು 2018 ರ ಜನೇವರಿ. 03 ರಿಂದ 05 ರವರೆಗೆ 3 ದಿನಗಳ ಕಾಲ ಕೊಪ್ಪಳ ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. 
    “ಕೊಪ್ಪಳ ಜಿಲ್ಲಾ ಮಟ್ಟದ ಫಲ-ಪುಷ್ಪ ಪ್ರದರ್ಶನ” ಕಾರ್ಯಕ್ರಮವು ಹೂಗಳಿಂದ ಅಲಂಕರಿಸಿದ ವಿವಿಧ ಸ್ಥಬ್ದ ಚಿತ್ರಗಳ ಪ್ರದರ್ಶನ.  ಹಣ್ಣು ಮತ್ತು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆ.  ಹೈಡ್ರೋಪೋನಿಕ್ಸ್ (ಜಲಕೃಷಿ) ಮಾದರಿ ಪ್ರದರ್ಶನ.  ಕೈತೋಟ ಮತ್ತು ತಾರಸಿ ತೋಟದ ಪ್ರಾತ್ಯಕ್ಷತೆ.  ಅಣಬೆ ಕೃಷಿ ಮತ್ತು ಜೇನು ಸಾಕಣೆ ಪ್ರಾತ್ಯಕ್ಷತೆ.  ವಿವಿಧ ಜಾತಿಯ ಅಲಂಕಾರಿಕ ಗಿಡಗಳು ಹಾಗೂ ಹೂಕುಂಡಗಳ ಪ್ರದರ್ಶನ.  ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಕಸಿ/ ಸಸಿಗಳ ಪ್ರದರ್ಶನ ಹಾಗೂ ಮಾರಾಟ.  ಕೊಪ್ಪಳ ಜಿಲ್ಲೆಯ ರೈತರು ಬೆಳೆದ ಉತ್ತಮ ಗುಣಮಟ್ಟದ ಹೂ, ಹಣ್ಣು ಮತ್ತು ತರಕಾರಿಗಳ ಪ್ರದರ್ಶನ.  ಹಾರ್ಟಿ ಕ್ಲಿನಿಕ್ ವಿಷಯ ತಜ್ಞರಿಂದ ತೋಟಗಾರಿಕೆಯಲ್ಲಿ ನವೀನ ತಂತ್ರಜ್ಞಾನಗಳ ಬಗ್ಗೆ ಮಾಹಿತಿ.  ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಇತ್ಯಾದಿ ವಿಶೇಷತೆಗಳನ್ನು ಹೊಂದಿದೆ.  ಸಾರ್ವಜನಿಕರು ಈ ಆಕರ್ಷಕ ಫಲಪುಷ್ಪ ಪ್ರದರ್ಶನ ಮಳಿಗೆಗೆ ಭೇಟಿ ನೀಡಿ, ವೀಕ್ಷಿಸುವಂತೆ ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕಂದ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಜ. 04 ರಂದು ಕೊಪ್ಪಳದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡದ ಉದ್ಘಾಟನೆ


ಕೊಪ್ಪಳ ಡಿ. 30 (ಕರ್ನಾಟಕ ವಾರ್ತೆ): ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಸುಸಜ್ಜಿತವಾದ ಕಾರ್ಯಾಲಯ ಹಾಗೂ ವಾಣಿಜ್ಯ ಸಂಕೀರ್ಣ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ 2018 ರ ಜನೇವರಿ. 04 ರಂದು ಬೆಳಿಗ್ಗೆ 11 ಗಂಟೆಗೆ ಹೊಸಪೇಟೆ ರಸ್ತೆಯ ಬಿ.ಸಿ ಪಾಟೀಲ್ ಲೇಔಟ್‍ನಲ್ಲಿ ಆಯೋಜಿಸಲಾಗಿದೆ
    ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡದ ಉದ್ಘಾಟನೆ ನೆರವೇರಿಸುವರು.  ನಗರಾಭಿವೃದ್ಧಿ ಮಂತ್ರಿಗಳಾದ ಆರ್. ರೋಷನ್ ಬೇಗ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸರ್ಕಾರದ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಲೋಕೋಪಯೋಗಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಬಸವರಾಜ ವೈ. ಬಂಡಿವಡ್ಡರ್ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಡಿಸೆಂಬರ್ ಮಾಹೆಯ ನ್ಯಾಯಬೆಲೆ ಅಂಗಡಿಯ ಪಡಿತರ ವಿತರಣೆಗೆ ಕಾಲಾವಕಾಶ


ಕೊಪ್ಪಳ ಡಿ. 30 (ಕರ್ನಾಟಕ ವಾರ್ತೆ): ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಡಿಸೆಂಬರ್ ಮಾಹೆಯ ನ್ಯಾಯಬೆಲೆ ಅಂಗಡಿ ಪಡಿತರ ವಿತರಣೆಯ ಕಾಲಾವಧಿಯನ್ನು ವಿಸ್ತರಿಸಲಾಗಿದೆ ಎಂದು ಇಲಾಖೆ ಉಪನಿರ್ದೇಶಕರಾದ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ. 
    ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಹಂಚಿಕೆ ವಿಳಂಬವಾಗಿದ್ದು, ಹಾಗೂ ಗೊದಾಮಿನಲ್ಲಿ ಸಂಗ್ರಹಣೆ ಇರುವ ಪಡಿತರ ಧಾನ್ಯಗಳನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಎತ್ತುವಳಿ ಮಾಡಲು ಅಲ್ಪ ವಿಳಂಬವಾಗಿರುತ್ತದೆ.   ಪಡಿತರದಾರರಿಗೆ ಪಡಿತರ ಧಾನ್ಯಗಳ ಹಂಚಿಕೆಯನ್ನು ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಎತ್ತುವಳಿ ಮಾಡುವ ಸಂಬಂಧ ಡಿ. 31 ರಿಂದ ಒಂದು ವಾರದವರೆಗೆ ವಿಸ್ತರಣೆ ಮಾಡಿದಲ್ಲಿ ಅನುಕೂಲವಾಗುತ್ತದೆ ಎಂದು ಇಲಾಖಾ ಆಯುಕ್ತರಿಗೆ ಮನವಿ ಮಾಡಲಾಗಿತ್ತು.  ಇದೀಗ ಮನವಿಗೆ ಸ್ಪಂದಿಸಿರುವ ಆಯುಕ್ತರು, ಕಾಲವಕಾಶವನ್ನು 2018 ರ ಜನೇವರಿ. 05 ರವರೆಗೆ ವಿಸ್ತರಿಸಲು ಅನುಮತಿ ನೀಡಿರುತ್ತಾರೆ.
    ಡಿಸೆಂಬರ್ ಮಾಹೆಯ ಪಡಿತರ ಧಾನ್ಯಗಳನ್ನು ಹಂಚಿಕೆ ಎತ್ತುವಳಿ, ವಿತರಣೆ ಮಾಡಲು ಗೋದಾಮಿನ ವ್ಯವಸ್ಥಾಪಕರು ಹಾಗೂ ಎಲ್ಲಾ ನ್ಯಾಯಬೆಲೆ ಅಂಗಡಿಕಾರರಿಗೆ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.  ಪಡಿತರದಾರರು ನಿಗದಿತ ಅವಧಿಯಲ್ಲಿ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.  ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಆಹಾರ ಶಿರಸ್ತೇದಾರರು ಮತ್ತು ಆಹಾರ ನಿರೀಕ್ಷಕರು ಈ ವಿಷಯದಲ್ಲಿ ಸೂಕ್ತ ಕ್ರಮ ವಹಿಸುವಂತೆ ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಸಿ.ಡಿ. ಗೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಶಕ್ತ ಮನ ವಿದ್ಯಾರ್ಥಿ ದೆಸೆಯಿಂದಲೇ ಬರಬೇಕು- ಎಂ. ಕನಗವಲ್ಲಿ


ಕೊಪ್ಪಳ ಡಿ. 30 (ಕರ್ನಾಟಕ ವಾರ್ತೆ): ಜೀವನದ ಕಷ್ಟ-ಸುಖಗಳನ್ನು ಸಮರ್ಥವಾಗಿ ಎದುರಿಸಬೇಕಾದಲ್ಲಿ, ಸಶಕ್ತ ಮನದ ನಿರ್ಮಾಣ ವಿದ್ಯಾರ್ಥಿ ದೆಸೆಯಿಂದಲೇ ಆಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಜಿಲ್ಲಾಡಳಿತ, ಗವಿಮಠ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗವಿಮಠದ ಆವರಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ‘ಸಶಕ್ತ ಮನ-ಸಂತೃಪ್ತ ಜೀವನ’ ಕುರಿತ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಜಾತ್ರೆ ಎಂದರೆ, ಬರೀ ಇಷ್ಟದ ತಿಂಡಿ ತಿಂದು, ಸಾಮಗ್ರಿಗಳನ್ನು ಖರೀದಿಸಿ, ಆಟ ಆಡಿ,  ಸಂಭ್ರಮಪಡುವುದು, ಇದಷ್ಟೇ ಆಗಬಾರದು, ಸಮಾಜಕ್ಕೆ ಒಳ್ಳೆಯ ಸಂದೇಶ ಹೊತ್ತು ಮರಳುವಂತಾಗಬೇಕು.  ಈ ನಿಟ್ಟಿನಲ್ಲಿ ಕೊಪ್ಪಳದ ಗವಿಮಠ ಇಡೀ ದೇಶದಲ್ಲಿಯೇ ಗಮನ ಸೆಳೆಯುವಂತಹ ಚಟುವಟಿಕೆಗಳನ್ನು ಹಮ್ಮಿಕೊಂಡು, ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆಯುತ್ತಿದೆ.  ಸಾಮಾಜಿಕ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸಲು ಕೊಪ್ಪಳ ಗವಿಮಠ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.  ಇಂದಿನ ಸ್ಪರ್ಧಾತ್ಮಕ ಜೀವನ ಕಾಲದಲ್ಲಿ ಮಕ್ಕಳಿಂದ ಮೊದಲುಗೊಂಡು, ವಯಸ್ಕರೂ ಕೂಡ ಒತ್ತಡದ ನಡುವೆ ಬದುಕುತ್ತಿದ್ದಾರೆ.  ಒತ್ತಡದ ಬದುಕನ್ನು ಸಮರ್ಥವಾಗಿ ನಿಭಾಯಿಸಿ, ಜೀವನವನ್ನು ಸಾಗಿಸುವುದು ಯಶಸ್ವಿಯ ಮಾರ್ಗವಾಗಬೇಕು.  ಹಿಂದಿನ ಕಾಲದಲ್ಲಿ ಅವಿಭಜಿತ ಕುಟುಂಬಗಳ ನಡುವೆ ಮಕ್ಕಳು ಬೆಳೆಯುತ್ತಿದ್ದರು.  ಅವರಿಗೆ ಕಷ್ಟ-ಸುಖದ ಅನುಭವ ಹಾಗೂ ಅರಿವು ದೊರೆಯುತ್ತಿತ್ತು.  ಆದರೆ ಈಗೆಲ್ಲ ಸಣ್ಣ ಸಣ್ಣ ವಿಭಜಿತ ಕುಟುಂಬ ವ್ಯವಸ್ಥೆ ಹೆಚ್ಚಾಗಿರುವುದರಿಂದ, ಇಂತಹ ಕುಟುಂಬಗಳಲ್ಲಿ ಬೆಳೆಯುವ ಮಕ್ಕಳಿಗೆ ಕಷ್ಟದ ಅರಿವಾಗುವುದು ಕಡಿಮೆ.  ಬೇಕಾಗಿದ್ದು, ಬೇಡವಾಗಿದ್ದು, ಎಲ್ಲವನ್ನೂ ಪಾಲಕರು ಮಕ್ಕಳ ಮೇಲಿನ ಪ್ರೀತಿಗೆ ತಂದು ಕೊಡುತ್ತಾರೆ. ಇದರಿಂದ ಮಕ್ಕಳ ಮನಸ್ಸು ಕೇವಲ ಸುಖದ, ಪ್ರೀತಿಯ ಬಗ್ಗೆಯೇ ಅನುಭವ ಪಡೆಯುತ್ತದೆ.  ಮಕ್ಕಳಿಗೆ ಜೀವನದ ಮೌಲ್ಯ, ಕಷ್ಟ-ಸುಖಗಳ ಅರಿವು, ಅನುಭವದ ಪರಿಚಯವಾಗುವಂತಾಗಬೇಕು. ಇಲ್ಲದಿದ್ದಲ್ಲಿ ಭವಿಷ್ಯದ ಜೀವನದಲ್ಲಿ ಸಣ್ಣ-ಪುಟ್ಟ ಕಷ್ಟಗಳನ್ನು ಕೂಡ ಎದುರಿಸುವಷ್ಟು ಮನಸ್ಸು ಸಶಕ್ತವಾಗುವುದಿಲ್ಲ.  ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಣ್ಣ, ಸಣ್ಣ ವಿಚಾರಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ.  ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನಡೆಯದಿದ್ದರೆ, ಮನಸ್ಸು ನಿರಾಶೆಗೊಳಗಾಗಿ, ಖಿನ್ನತೆಯತ್ತ ಜಾರುವ ಸಾಧ್ಯತೆಗಳೇ ಹೆಚ್ಚು.  ಇತರರ ತಪ್ಪು ಮಾತ್ರ ಕಂಡುಹಿಡಿಯಲು ಯತ್ನಿಸುತ್ತೇವೆಯೇ ಹೊರತು, ತಾವು ಮಾಡುವ ತಪ್ಪುಗಳನ್ನು ಅರಿತು, ಅದನ್ನು ತಿದ್ದುಕೊಳ್ಳಲು ಯಾರೂ ಮನಸ್ಸು ಮಾಡುವುದಿಲ್ಲ.  ಒತ್ತಡ ರಹಿತ ಬದುಕು ಇಂದಿನ ಕಾಲದಲ್ಲಿ ಸಾಧ್ಯವಿಲ್ಲ.  ಆದರೆ ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಜೀವನ ಕಂಡುಕೊಳ್ಳುವ ಕಲೆ ಕಲಿಯುವುದು ಈಗಿನ ಅಗತ್ಯಗಳಲ್ಲೊಂದಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಮಾನಸಿಕ ತಜ್ಞ ವೈದ್ಯ ಡಾ. ಅಜಯಕುಮಾರ ಅವರು ಮಾನಸಿಕ ಒತ್ತಡಗಳ ನಿವಾರಣೆ ಹಾಗೂ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ನೀಡಿ, ಜಗತ್ತಿನಲ್ಲಿ ಒತ್ತಡ ಎದುರಿಸುತ್ತಿರುವ 40 ವ್ಯಕ್ತಿಗಳ ಪೈಕಿ ಪ್ರತಿ ನಿಮಿಷಕ್ಕೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಪ್ರತಿಯೊಬ್ಬರೂ ಒತ್ತಡದಲ್ಲಿಯೇ ಜೀವನ ನಡೆಸುತ್ತಿದ್ದಾರೆ.  ಜನರಿಗೆ ಬರುವ ರೋಗಗಳ ಪೈಕಿ ಶೇ. 90 ರಷ್ಟು ರೋಗಗಳು ಒತ್ತಡದ ಕಾರಣದಿಂದಲೇ ಬರುವುದು, ವೈದ್ಯಕೀಯವಾಗಿ ಸಾಬೀತಾಗಿದೆ.  ನೆಗಡಿ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮುಂತಾದ ರೋಗಗಳಿಗೂ ಮೂಲ ಕಾರಣ ಒತ್ತಡವೇ ಆಗಿದೆ.  ಇಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಣ, ಕಲಿಕೆ, ಪರೀಕ್ಷೆ, ಉದ್ಯೋಗ, ಸೌಲಭ್ಯ ಹೀಗೆ ಬಹಳಷ್ಟು ಒತ್ತಡವನ್ನು ಎದುರಿಸುತ್ತಿದ್ದಾರೆ.  ಇದಕ್ಕೆ ಕೌಟುಂಬಿಕ ಕಾರಣಗಳು, ಮಹತ್ವಾಕಾಂಕ್ಷೆ, ಆರ್ಥಿಕ ತೊಂದರೆಗಳು ಬಹುಮುಖ್ಯ ಕಾರಣಗಳಾಗಿವೆ.  ಒತ್ತಡ ರಹಿತ ಬದುಕು ರೂಪಿಸಿಕೊಂಡು, ಸಂತೃಪ್ತ ಜೀವನ ನಡೆಸಲು ಎಲ್ಲರೂ ಪ್ರಮುಖ 10 ವಿಧಾನಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.  ಪ್ರಮುಖವಾಗಿ ಭಾವನೆಗಳನ್ನು ಹಂಚಿಕೊಳ್ಳಬೇಕು.  ಆದರೆ ಇತ್ತೀಚಿನ ದಿನಗಳಲ್ಲಿ ಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿದ್ದು, ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ.  ಭಾವನೆಗಳನ್ನು ನಂಬಿಕೆಗೆ ಪಾತ್ರರಾದವರಲ್ಲಿ, ಆತ್ಮೀಯರಲ್ಲಿ ಮಾತ್ರ ಹಂಚಿಕೊಳ್ಳಬೇಕು.  ಸದಾ ಚಟುವಟಿಕೆಯಿಂದಿರಬೇಕು,  ದೇಹ ಮತ್ತು ಮನಸ್ಸು ಚಟುವಟಿಕೆಯಿಂದಿದ್ದರೆ, ಕೆಟ್ಟ ಆಲೋಚನೆಗಳಿಗೆ ಅವಕಾಶ ಸಾಧ್ಯತೆ ಕಡಿಮೆ.  ಯೋಗ, ಧ್ಯಾನ ಮಾಡುವುದರಿಂದ ಒತ್ತಡ ನಿವಾರಣೆಯಾಗುವುದಾಗಿ ವೈದ್ಯಕೀಯವಾಗಿ ಸಾಬೀತಾಗಿದ್ದು, ಇದನ್ನು ಅನುಸರಿಸುವುದು ಉತ್ತಮ.  ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಒಡನಾಟವನ್ನು ಹೆಚ್ಚು ಹೆಚ್ಚು ಬೆಳೆಸಿಕೊಂಡಲ್ಲಿ, ಬಾಂಧವ್ಯ ವೃದ್ಧಿಯ ಜೊತೆಗೆ ಭಾವನೆಯ ಹಂಚಿಕೆಗೂ ಅವಕಾಶ ದೊರೆಯುತ್ತದೆ.  ಅಗತ್ಯವೆನಿಸಿದಾಗ ಇತರರ ಸಹಾಯ ಪಡೆಯುವುದು ಕೂಡ ಉತ್ತಮ ವಿಚಾರವಾಗಿದೆ.  ದೈನಂದಿನ ನಮ್ಮ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು, ಸ್ವಲ್ಪ ವಿರಾಮ ತೆಗೆದುಕೊಳ್ಳುವುದು, ಒತ್ತಡದ ನಿವಾರಣೆಗೆ ಒಳ್ಳೆಯದು.  ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು, ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ಹಗುರಾಗುತ್ತದೆ.  ನಮ್ಮನ್ನು ನಾವಿರುವಂತೆಯೇ ಒಪ್ಪಿಕೊಳ್ಳುವುದು ಉತ್ತಮ.  ಸೇವಾ ಮನೋಭಾವ ಬೆಳೆಸಿಕೊಂಡು, ಇತರರಿಗೆ ನೆರವಾದಾಗ, ನಿಜಕ್ಕೂ ಮನಸ್ಸು ಹೆಮ್ಮೆ ಪಡುತ್ತದೆ.  ಜೀವನ ಶೈಲಿಯಲ್ಲಿ ಇಂತಹ ಚಟುವಟಿಕೆಗಳನ್ನು ರೂಪಿಸಿಕೊಂಡಲ್ಲಿ, ಮನಸ್ಸು ಶಕ್ತವಾಗುವುದರ ಜೊತಗೆ ಒತ್ತಡವನ್ನೂ ನಿಭಾಯಿಸಲು ಸಾಧ್ಯವಾಗಲಿದೆ ಎಂದರು.

     ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಜಾಗೃತಿಯ ನಡಿಗೆ ಹಾಗೂ ವಿಚಾರಗೋಷ್ಠಿಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ನೆರವಾದವರಿಗೆ ಕೃತಜ್ಞತೆ ಸಲ್ಲಿಸಿದರು.  ಅಲ್ಲದೆ ಇಂದಿನ ಕಾರ್ಯಕ್ರಮ ಇನ್ನೊಂದು ಜಾತ್ರೆಯನ್ನೇ ನೋಡಿದಂತಹ ಅನುಭವವಾಯಿತು.  ಇಂದಿನ ಕಾರ್ಯಕ್ರಮದ ಯಶಸ್ಸು ನಮಗೆ ಇನ್ನಷ್ಟು ಸ್ಫೂರ್ತಿ ನೀಡಲಿದೆ ಎಂದು ಬಣ್ಣಿಸಿದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಸೋಮರಡ್ಡಿ ಅಳವಂಡಿ ಅವರು, ಗವಿಮಠ ಜಾತ್ರೆ ಇಂದು ಕೇವಲ ಧಾರ್ಮಿಕ ಉತ್ಸವವಾಗಿ ಉಳಿದಿಲ್ಲ.  ಸಾಮಾಜಿಕ ಜಾಗೃತಿ ಮೂಡಿಸುವಂತಹ ಚೈತನ್ಯಕಾರಿ ಉತ್ಸವವಾಗಿ ರೂಪುಗೊಳ್ಳುತ್ತಿದೆ.  ಜಾತ್ರೆಯ ಅಂಗವಾಗಿ ಈ ಹಿಂದೆ ಕೈಗೊಂಡ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆಯಾಗಲು ಪರಿಣಾಮ ಬೀರಿರುವುದಂತೂ ಸತ್ಯ.  ಈ ಮೊದಲು ಬಾಲ್ಯ ವಿವಾಹ ವಿಷಯದಲ್ಲಿ ರಾಜ್ಯದಲ್ಲಿಯೇ ಅಗ್ರ ಸ್ಥಾನವನ್ನು ಕೊಪ್ಪಳ ಜಿಲ್ಲೆ ಪಡೆದಿತ್ತು.  ಜಾಗೃತಿ ಕಾರ್ಯಕ್ರಮಗಳು ಹಾಗೂ ವಿವಿಧ ಇಲಾಖೆಗಳ ಸಕ್ರಿಯ ಕ್ರಮ ಮತ್ತು ಜನರ ಸಹಕಾರದಿಂದಾಗಿ ಇದೀಗ 12 ನೇ ಸ್ಥಾನಕ್ಕೆ ಇಳಿದಿದೆ.  ಕಳೆದ ವರ್ಷ ನೀರಿನ ಮಹತ್ವವನ್ನು ಸಾರಲು ಕೈಗೊಂಡ ಜಲದೀಕ್ಷೆ ಜಾಗೃತಿ ಕಾರ್ಯಕ್ರಮವೂ ಕೂಡ ಸಾಕಷ್ಟು ಪರಿಣಾಮ ಬೀರಿದ್ದು, ಕೃಷಿ ಹೊಂಡದಂತಹ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಕೃಷಿ ಹೊಂಡಗಳು ನಿರ್ಮಾಣಗೊಂಡಿವೆ.  ಈ ಬಾರಿ ಸಶಕ್ತ ಮನ-ಸಂತೃಪ್ತ ಜೀವನ ಎನ್ನುವ ವಿಚಾರವನ್ನಿಟ್ಟುಕೊಂಡು ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
     ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿಲ್ಲಾ ಮಾನಸಿಕ ಆರೋಗ್ಯ ಅನುಷ್ಠಾನಾಧಿಕಾರಿ ಡಾ. ಎಸ್.ಕೆ. ದೇಸಾಯಿ, ಮಾನಸಿಕ ತಜ್ಞ ಡಾ. ಕೃಷ್ಣ ಓಂಕಾರ, ಡಿಡಿಪಿಐ ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ದಾಸರ್, ಗವಿವ ಟ್ರಸ್ಟ್ ಕಾರ್ಯದರ್ಶಿ ಮಲ್ಲಿಕಾರ್ಜು ಸೋಮಲಾಪುರ ಅವರು ಪಾಲ್ಗೊಂಡಿದ್ದರು.  ವಿಚಾರಗೋಷ್ಠಿಯಲ್ಲಿ ಕೊಪ್ಪಳದ ವಿವಿಧ ಶಾಲಾ ಕಾಲೇಜುಗಳ ಸುಮಾರು 15 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.  ಜಾಗೃತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಸಿದ್ದಾರ್ಥ- ಪ್ರಥಮ, ಪ್ರಿಯಾಂಕಾ ಪಾಟೀಲ್- ದ್ವಿತೀಯ ಹಾಗೂ ಸ್ಫೂರ್ತಿ- ತೃತೀಯ ಬಹುಮಾನ ಪಡೆದುಕೊಂಡರು.  ಪ.ಪೂ. ಕಾಲೇಜು ವಿಭಾಗದಲ್ಲಿ ಶ್ರೀನಿವಾಸ ಶಿರೂರ- ಪ್ರಥಮ ಹಾಗೂ ಅಕ್ಕಮಹಾದೇವಿ- ದ್ವಿತೀಯ ಬಹುಮಾನ ಪಡೆದರು.  ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

Friday, 29 December 2017

ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು - ಹೆಚ್.ಎಸ್. ಪಾಟೀಲ್


ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ)  ರಾಷ್ಟ್ರ ಕವಿ ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೊಪ್ಪಳದ ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ್ ಅವರು ಬಣ್ಣಿಸಿದರು.

     ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶುಕ್ರವಾರದಂದು ಏರ್ಪಡಿಸಲಾದ ವಿಶ್ವ ಮಾನವ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಕುವೆಂಪು ಮತ್ತು ಬೇಂದ್ರೆ ಅವರನ್ನು ಕರ್ನಾಟಕ ಸರಸ್ವತಿಯ ಎರಡು ಕಣ್ಣುಗಳು ಎಂದೇ ಬಿಂಬಿಸಲಾಗುತ್ತದೆ.  ಈ ನಾಡಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬಹುದಾದ ಶ್ರೇಷ್ಠ ಸಾಹಿತಿಗಳಲ್ಲಿ ಪ್ರಮುಖರು.  ಕುವೆಂಪು ಅವರನ್ನು ಬರೀ ಗದ್ಯ, ಸಾಹಿತ್ಯಕ್ಕಷ್ಟೇ ಲೇಖಕರೆಂದು ಅವರನ್ನು ಗುರುತಿಸಲು ಸಾಧ್ಯವಿಲ್ಲ.  ಏಕೆಂದರೆ, ಇವರು ರಚಿಸಿದ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ, ಆಧುನಿಕ ಕಾಲದ ಶ್ರೇಷ್ಠ ಕಾವ್ಯಗಳಲ್ಲೊಂದಾಗಿದ್ದು, ಕುವೆಂಪು ಅವರ ಭಾಷಾ ಸಾಮಥ್ರ್ಯ ಏನೆಂಬುದನ್ನು ಸಾಬೀತುಪಡಿಸಿದೆ.  ಛಂದಸ್ಸು, ಷಟ್ಪದಿ ಇತ್ಯಾದಿ ಪ್ರಕಾರಗಳು ಓದುಗರಿಗೆ ಕಷ್ಟಕರ, ಆದರೆ ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ಕುವೆಂಪು ಅವರು ರಚಿಸಿರುವ ಕವನ, ಕಾವ್ಯ, ಕಾದಂಬರಿಗಳು, ಕುವೆಂಪು ಅವರಿಗೆ ಭಾಷೆಯ ಮೇಲಿದ್ದ ಹಿಡಿತ, ಅವರ ಪಾಂಡಿತ್ಯ, ಜ್ಞಾನಾರ್ಜನೆಯ ಪರಿಚಯ ಮಾಡಿಸುತ್ತದೆ.  ಆಧುನಿಕ ಕವಿಗಳಿಗೆ ಉತ್ತೇಜನ ದೊರೆಯುವಂತೆ ಮಾಡಿದ ಕುವೆಂಪು ಅವರು, ನವ ಕವಿಗಳಿಗೆ ರಾಜಮಾರ್ಗ ಹಾಕಿಕೊಟ್ಟರು.  ನಿಸರ್ಗದ ಬಗ್ಗೆ ಕುವೆಂಪು ಅವರು ಅತಿ ಹೆಚ್ಚು ಮನಸೋತಿದ್ದರು. ಹುಟ್ಟುವ ಎಲ್ಲರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ.  ಆದರೆ ಬೆಳೆದಂತೆಲ್ಲ ಅಲ್ಪ ಮಾನವರಾಗುತ್ತಾರೆ.  ಅಂತಹವರನ್ನು ವಿಶ್ವ ಮಾನವರನ್ನಾಗಿ ಮಾಡುವುದೇ ಸಾಹಿತ್ಯದ ಕರ್ತವ್ಯವಾಗಬೇಕು ಎಂಬುದು ಕುವೆಂಪು ಅವರ ಶ್ರೇಷ್ಠ ನುಡಿಯಾಗಿತ್ತು.   ಅವರು ಹೇಳಿದರು.
      ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳದ ಡಾ. ರಾಜಶೇಖರ ಜಮದಂಡಿ ಅವರು, ಕುವೆಂಪು ಅವರು ರಾಮಕೃಷ್ಣ ಪರಮಹಂಸರು, ಶಾರದಾ ಮಾತೆ, ಸ್ವಾಮಿ ವಿವೇಕಾನಂದರಂತಹ ಮಹನೀಯರಿಂದ ಪ್ರಭಾವಿತರಾಗಿದ್ದರು.  ಪ್ರೀತಿ, ವಾತ್ಸಲ್ಯ, ಕರುಣೆ, ಮಾನವ ಗುಣ ದೋಷಗಳು, ಶೋಷಣೆ, ಮೂಢನಂಬಿಕೆ ಹೀಗೆ ಕುವೆಂಪು ಅವರು ಬರೆಯದ ವಸ್ತು ಹಾಗೂ ವಿಷಯಗಳೇ ಇಲ್ಲ.  10 ನೇ ಶತಮಾನದಲ್ಲಿ ಆದಿಕವಿ ಪಂಪ ಅವರು ಮಹಾಕಾವ್ಯ ರಚಿಸಿದರೆ, 20 ನೇ ಶತಮಾನದಲ್ಲಿ ಕುವೆಂಪು ಅವರು ರಾಮಾಯಣ ದರ್ಶನಂ ಮಹಾಕಾವ್ಯ ರಚಿಸಿದ್ದು, ಮಹಾಕಾವ್ಯ ರಚನೆಯ ಪರಂಪರೆಯನ್ನು ಈ ರೀತಿ ಮುಂದುವರೆಸಿದರು.  ಪ್ರಕೃತಿ ಸೌಂದರ್ಯವನ್ನು, ಕರ್ನಾಟಕದ ಸೊಬಗನ್ನು ಕಟ್ಟಿಗೆ ಕಟ್ಟುವಂತೆ ಕುವೆಂಪು ಅವರು ರಚಿಸಿರುವ ಅನೇಕ ಕವಿತೆಗಳು ಜನರ ನಾಲಿಗೆಯ ಮೇಲೆ ಇಂದಿಗೂ ಹರಿದಾಡುತ್ತಿವೆ.  ಕುವೆಂಪು ಅವರು ಪ್ರತಿ ವಸ್ತುವಿನಲ್ಲಿಯೂ ಚೈತನ್ಯ ಕಾಣುತ್ತಿದ್ದರು.  ಕುವೆಂಪು ಅವರು ಪ್ರಾರಂಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿಯೇ ಕವಿತೆಗಳನ್ನು ರಚಿಸುತ್ತಿದ್ದರು.  ಒಮ್ಮೆ ಕುವೆಂಪು ಅವರು ನಮ್ಮ ನಾಡಿನ ಸಂಸ್ಕøತಿ ಬಿಂಬಿಸುವ ಉಡುಪನ್ನು ಧರಿಸಿಕೊಂಡು  ಐರಿಷ್ ಕವಿಯ ಬಳಿ ತೆರಳಿ, ಇಂಗ್ಲೀಷ್ ಭಾಷೆಯಲ್ಲಿ ರಚಿಸಿದ ಕವಿತೆ ತೋರಿಸಿದಾಗ, ‘ಉಡುಪು ದೇಶೀಯದು, ಆದರೆ ಕವಿತೆ ಮಾತ್ರ ವಿದೇಶದ್ದು’ ಎಂದು ಹೇಳಿ, ಮಾತೃಭಾಷೆಯಲ್ಲಿಯೇ ಹೆಚ್ಚಿನ ಕವಿತೆಗಳನ್ನು ರಚಿಸುವಂತೆ ಆ ಐರಿಷ್ ಕವಿ ಸಲಹೆ ನೀಡಿದರು.  ಇದರ ನಂತರ ಕುವೆಂಪು ಅವರು ಕನ್ನಡ ಭಾಷೆಯಲ್ಲಿಯೇ ಹೆಚ್ಚಿನ ಕವನಗಳ ರಚನೆಯನ್ನು ಪ್ರಾರಂಭಿಸಿದರು.  ಕವಿತೆ, ವಿಮರ್ಶೆ, ಜೀವನಚರಿತ್ರೆ, ಆತ್ಮಕಥೆ, ಕಾದಂಬರಿ, ಮಕ್ಕಳ ಗೀತೆ ಹೀಗೆ ಕುವೆಂಪು ಅವರು ಅನೇಕ ಪ್ರಕಾರಗಳ ಸಾಹಿತ್ಯ ಕೃಷಿ ಕೈಗೊಂಡಿದ್ದಾರೆ ಎಂದರು.
     ಕಾರ್ಯಕ್ರಮದ ಅಂಗವಾಗಿ ಕೊಪ್ಪಳದ ದೀಕ್ಷಾ ನಾಟ್ಯ ಕಲಾ ಸಂಘದವರು ನಡೆಸಿಕೊಟ್ಟ ನೃತ್ಯ  ರೂಪಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಬಿ. ಚಲುವಾದಿ, ಜಿಲ್ಲಾ ಖಜಾನಾಧಿಕಾರಿ ಹರಿನಾಥಬಾಬು, ತಹಸಿಲ್ದಾರ್ ಗುರುಬಸವರಾಜ, ಮಹಾಂತೇಶ್ ಮಲ್ಲನಗೌಡರ, ಶಿವಾನಂದ ಹೊದ್ಲೂರ, ಮಹಾಂತೇಶ್ ಮಲ್ಲನಗೌಡರ, ವಾರ್ತಾಧಿಕಾರಿ ತುಕಾರಾಂರಾವ್, ಜಿಲ್ಲಾ ಬಿಸಿಎಂ ಅಧಿಕಾರಿ ಚಿದಾನಂದ ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಸ್ವಾಗತಿಸಿ, ವಂದಿಸಿದರು.  ಸಿ.ವಿ. ಜಡಿಯವರ್ ನಿರೂಪಿಸಿದರು. ಬಾಷಾ ಹಿರೇಮನಿ ತಂಡದವರು ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿದರು.    
  

ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಗೆ ಶಿಶುಕ್ಷು ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ): ಕೊಪ್ಪಳ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜಿಲ್ಲೆಯ ಐ.ಟಿಐ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್) ಬೆಂಗಳೂರು, ಕಂಪನಿಯಲ್ಲಿ ಶಿಶುಕ್ಷು (ಅಪ್ರೆಂಟಿಶಿಪ್) ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು ಐ.ಟಿ.ಐ ಪರೀಕ್ಷೆಯ ಫಿಟ್ಟರ್, ಟರ್ನರ, ಮಶಿನಿಷ್ಟ, ಎಲೆಕ್ಟ್ರೀಷನ್, ವೆಲ್ಡರ್, ಪಾಸಾ, ಕಾರ್‍ಪೆಂಟರ್, ಪೌಂಡರಿಮ್ಯಾನ್, ಶೀಟ್ ಮೇಟಲ್ ವರ್ಕರ್ ವೃತ್ತಿಯಲ್ಲಿ ಉತ್ತೀರ್ಣರಾಗಿರಬೇಕು.  ಶಿಶುಕ್ಷು (ಅಪ್ರೆಂಟಿಶಿಫ್) ತರಬೇತಿ ಪಡೆಯಲಿಚ್ಚಿಸುವ ಆಸಕ್ತ ಅಭ್ಯರ್ಥಿಗಳು ವೆಬ್‍ಸೈಟ್  www.apprenticeship.gov.in ನಲ್ಲಿ ನೊಂದಣಿ ಮಾಡಿಕೊಳ್ಳಬೇಕು.  ನೊಂದಣಿ ಸಂಖ್ಯೆಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕೊಪ್ಪಳ ಇಲ್ಲಿಗೆ ಸಲ್ಲಿಸಿ, ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಅಂಗವಿಕಲ ಅಭ್ಯರ್ಥಿಗಳು ಅಂಗವಿಕಲ ಪ್ರಮಾಣ ಪತ್ರ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ 2018 ರ ಜನೇವರಿ. 18 ರೊಳಗಾಗಿ ಅರ್ಜಿ ಸಲ್ಲಿಸಬೇಕು.
    ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಉಚಿತವಾಗಿ ನೆರವು ನೀಡಲಾಗುವುದು.  ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದೂರವಾಣಿ ಸಂಖ್ಯೆ 08539-220859 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆವಿಮೆ ನೊಂದಾಯಿಸಿಕೊಳ್ಳಲು ಸೂಚನೆ


ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ): ಕೊಪ್ಪಳ ಕೃಷಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆ ವಿಮೆ ನೊಂದಾಯಿಸಿಕೊಳ್ಳಲು ರೈತರಿಗೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
    ಕೊಪ್ಪಳ ಕೃಷಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಅನುಷ್ಠಾನಗೊಳಿಸುವ ಬೆಳೆವಿಮೆಯನ್ನು ಹಿಂಗಾರು ಹಂಗಾಮು ಬೆಳೆಯಾದ ಮಳೆ ಆಶ್ರಿತ ಕಡಲೆ ಬೆಳೆಯನ್ನು ಡಿ. 30 ರೊಳಗೆ ಬೆಳೆವಿಮೆ ನೊಂದಾಯಿಸಿಕೊಳ್ಳಬೇಕು.  ಬೇಸಿಗೆ ಹಂಗಾಮು ಬೆಳೆಗಳಾದ ನೀರಾವರಿ ಶೇಂಗಾ, ಭತ್ತ ಮತ್ತು ಸೂರ್ಯಕಾಂತಿ ಬೆಳೆಯನ್ನು 2018 ರ ಫೆಬ್ರವರಿ. 28 ರೊಳಗೆ ಬೆಳೆವಿಮೆ ನೋಂದಾಯಿಸಿಕೊಳ್ಳಬೇಕು.
    ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಎಲ್ಲಾ ವರ್ಗದ ರೈತರು ಪಾಲ್ಗೊಂಡು, ಬೆಳೆ ವಿಮೆ ಪ್ರೀಮಿಯಮ್ ತುಂಬಿ ಯೋಜನೆಯ ಪ್ರಯೋಜನೆ ಪಡೆಯಬಹುದಾಗಿದೆ.      ಹೆಚ್ಚಿನ ವಿವರಗಳಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರಿ ಇಲಾಖೆ, ಸ್ಥಳೀಯ ವಾಣಿಜ್ಯ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Tuesday, 26 December 2017

ಕುಕನೂರು ನೂತನ ತಾಲೂಕು ರಚನೆ : ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿ ಪ್ರಾರಂಭಕ್ಕೆ ಸಿದ್ಧತೆ ಕೈಗೊಳ್ಳಿ- ಬಸವರಾಜ ರಾಯರಡ್ಡಿಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ) : ಯಲಬುರ್ಗಾ ತಾಲೂಕಿನ ಕುಕನೂರನ್ನು ನೂತನ ತಾಲೂಕನ್ನಾಗಿ ಸರ್ಕಾರ ಈಗಾಗಲೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ನೂತನ ತಾಲೂಕಿನಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಇಲಾಖಾ ಕಚೇರಿಗಳ ಪ್ರಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಕುಕನೂರು ನೂತನ ತಾಲೂಕು ಪ್ರಾರಂಭಿಸುವ ಸಂಬಂಧ ಕುಕನೂರಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕುಕನೂರನ್ನು ನೂತನ ತಾಲೂಕನ್ನಾಗಿ ರಚಿಸಿ, ಸರ್ಕಾರ ಈಗಾಗಲೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.  ನೂತನ ತಾಲೂಕು ವ್ಯಾಪ್ತಿ ನಿಗದಿ ಸಂಬಂಧ ಈಗಾಗಲೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಒದಗಿಸಿದೆ.  ಇದರ ನಂತರ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುವುದು.  ಕುಕನೂರಿನಲ್ಲಿ ತಾಲೂಕು ಕಚೇರಿ ಪ್ರಾರಂಭಿಸಲು ಈಗಾಗಲೆ ಸರ್ಕಾರಿ ಕಟ್ಟಡವೇ ಆಗಿರುವ ಕಲ್ಯಾಣ ಮಂಟಪವನ್ನು ಗುರುತಿಸಲಾಗಿದ್ದು, ಕಟ್ಟಡವನ್ನು ಸಜ್ಜುಗೊಳಿಸುವ ಕಾರ್ಯವನ್ನು ತ್ವರಿತಗೊಳಿಸಬೇಕು. ಸರ್ಕಾರಿ ಕಚೇರಿಗಳು ಪ್ರಾರಂಭಿಸಲು ಅಗತ್ಯವಿರುವ ಮಾದರಿಯಲ್ಲಿ ಕಟ್ಟಡವನ್ನು ಸಿದ್ಧಗೊಳಿಸಬೇಕು.  ನೂತನ ತಾಲೂಕಿನಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಕೂಡ ಪ್ರಾರಂಭವಾಗಬೇಕಿರುವುದರಿಂದ, ಆಯಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಮ್ಮ ಇಲಾಖೆಯೊಂದಿಗೆ ಸಂಪರ್ಕಿಸಿ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಜ. 26 ರಂದು ನೂತನ ತಾಲೂಕಿನಲ್ಲಿ ಆಯಾ ಇಲಾಖೆಗಳ ಎಲ್ಲ ಕಚೇರಿಗಳು ಕಾರ್ಯಾರಂಭ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಸಭೆಯ ನಂತರ ತಾಲೂಕು ಕಚೇರಿಗಳು ಪ್ರಾರಂಭವಾಗುವ ಕಲ್ಯಾಣ ಮಂಟಪ ಕಟ್ಟಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕಟ್ಟಡದ ಸ್ಥಿತಿ-ಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾಂತಲಾ ಚಲುವಾದಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಾವತಿ ದೇಸಾಯಿ, ಜಿ.ಪಂ. ಸದಸ್ಯ ಹನುಮಂತಗೌಡ ಚಂಡೂರ, ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಯಲಬುರ್ಗಾ-ಕುಷ್ಟಗಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು : 763 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ 02 ವರ್ಷದೊಳಗೆ ಪೂರ್ಣ- ಬಸವರಾಜ ರಾಯರಡ್ಡಿ


ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ಎಲ್ಲ ಜನವಸತಿ ಪ್ರದೇಶಗಳಿಗೆ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ 763 ಕೋಟಿ ರೂ. ವೆಚ್ಚದ ಯೋಜನೆ ಎರಡು ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಸ್ವಯಂಚಾಲಿತ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿರುವ ಅತ್ಯುತ್ತಮ ಯೋಜನೆ ಇದಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸುವ ಗುತ್ತಿಗೆ ಪಡೆದಿರುವ ಎಲ್ & ಟಿ ಕಂಪನಿಯ ದ್ಯಾಂಪುರ ಗ್ರಾಮ ಬಳಿಯ ಸೈಟ್ ಕಚೇರಿ ಹಾಗೂ ಸ್ಟಾಕ್ ಯಾರ್ಡ್ ಸ್ಥಳಕ್ಕೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  

     ಯಲಬುರ್ಗಾ-ಕುಷ್ಟಗಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ 763 ಕೋಟಿ ರೂ. ವೆಚ್ಚದ ಈ ಯೋಜನೆಯು ರಾಜ್ಯದಲ್ಲಿಯೇ ಅತ್ಯಂತ ಬೃಹತ್ ಯೋಜನೆಯಾಗಿದ್ದು, ಪ್ರತಿಷ್ಠಿತ ಕಂಪನಿಯಾಗಿರುವ ಎಲ್ & ಟಿ ಕಂಪನಿಯು ಯೋಜನೆ ಕಾರ್ಯರೂಪಕ್ಕೆ ತರುವ ಗುತ್ತಿಗೆಯನ್ನು ಪಡೆದುಕೊಂಡಿದೆ.  ಕಂಪನಿಯೇ ಯೋಜನೆಯ ವಿನ್ಯಾಸ ರೂಪಿಸಿ, ನಿರ್ಮಿಸಿ ನಂತರ ನಿರ್ವಹಣೆ ಮಾಡುವಂತಹ ರೀತಿಯಲ್ಲಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, 2048 ನೇ ಇಸವಿಯ ವೇಳೆಗೆ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನಲ್ಲಿ ಇರಬಹುದಾದ 6. 60 ಲಕ್ಷ ಜನಸಂಖ್ಯೆಯನ್ನು ಆಧಾರವಾಗಿರಿಸಿಕೊಂಡು, ದೂರದೃಷ್ಟಿಯ ಯೋಜನೆಯನ್ನು ರೂಪಿಸಲಾಗಿದೆ.  ಎರಡು ವರ್ಷಗಳ ಒಳಗೆ ಈ ಯೋಜನೆ ಪೂರ್ಣಗೊಂಡು, ಜನರಿಗೆ ನೀರು ಪೂರೈಕೆಯಾಗಲಿದೆ.  ಕೃಷ್ಣಾ ನದಿಯಿಂದ ನೀರನ್ನು ಪಡೆದು, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಎಲ್ಲ 331 ಜನವಸತಿ ಪ್ರದೇಶಗಳಿಗೆ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 85 ಲೀ. ನೀರು ಲಭ್ಯವಾಗುವ ರೀತಿಯಲ್ಲಿ ಯೋಜನೆ ಕೈಗೊಳ್ಳಲಾಗುತ್ತಿದೆ.  ಕಳೆದ ಸೆ. 22 ರಂದು ಮುಖ್ಯಮಂತ್ರಿಗಳು ಈ ಯೋಜನೆಗೆ ಕೊಪ್ಪಳದಲ್ಲಿ ಜರುಗಿದ ಸಮಾರಂಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದು, ಇದೀಗ ಕಾಮಗಾರಿಯ ಗುತ್ತಿಗೆ ಪಡೆದಿರುವ, ಗುಣಮಟ್ಟದ ಕಾಮಗಾರಿಗೆ ಹೆಸರಾಗಿರುವ ಎಲ್ & ಟಿ ಕಂಪನಿಯು ಕಾಮಗಾರಿಯನ್ನು ಪ್ರಾರಂಭಿಸಲಿದೆ.  ಯೋಜನೆಯ ಜಾರಿಯಿಂದ ಈ ಎರಡೂ ತಾಲೂಕುಗಳ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.  ಸೈಟ್ ಕಚೇರಿ ಹಾಗೂ ಸ್ಟಾಕ್ ಯಾರ್ಡ್ ಸ್ಥಳದಲ್ಲಿ ಮಂತ್ರಿಗಳು ಇದೇ ಸಂದರ್ಭದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
     ಕಾಮಗಾರಿಯ ಗುತ್ತಿಗೆ ಪಡೆದಿರುವ ಎಲ್ & ಟಿ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಪಿ. ಜಗವೀರ ಪಾಂಡ್ಯನ್ ಅವರು ಮಾತನಾಡಿ ಯೋಜನೆ ಜಾರಿಗಾಗಿ ಈಗಾಗಲೆ ಕಂಪನಿಯು ಸರ್ವೆ ಕಾರ್ಯ ಪೂರ್ಣಗೊಳಿಸಿದ್ದು, ಡಿಸೈನ್ ರೂಪಿಸಲಾಗಿದೆ.  ಸರ್ಕಾರದಿಂದ ಡಿಸೈನ್‍ಗೆ ಅನುಮೋದನೆ ದೊರಕಿದ ಕೂಡಲೆ ಭೌತಿಕ ಕಾಮಗಾರಿಯನ್ನು ಫೆಬ್ರವರಿ ಒಳಗಾಗಿ ಪ್ರಾರಂಭಿಸಲಾಗುವುದು.  ಯೋಜನೆಯಲ್ಲಿ ನೀರು ಎತ್ತುವುದು, ಪೈಪ್‍ಲೈನ್‍ನಲ್ಲಿ ಸರಬರಾಜು ಮಾಡುವುದು, ನೀರಿನ ಮೇಲ್ತೊಟ್ಟಿಗಳಿಗೆ ಪೂರೈಕೆ ಮಾಡುವುದು ಹೀಗೆ ಎಲ್ಲ ಕಾರ್ಯವೂ ಸ್ವಯಂಚಾಲಿತವಾಗಿ ನಡೆಯಲಿದ್ದು, ಇದರಲ್ಲಿ ಹೆಚ್ಚು ಮಾನವ ಸಂಪನ್ಮೂಲ ಬಳಕೆಯ ಕಾರ್ಯ ಇರುವುದಿಲ್ಲ.  ಕಂಪನಿಯು ಈಗಾಗಲೆ ತಮಿಳುನಾಡಿನಲ್ಲಿ 1500 ಕೋಟಿ ರೂ. ವೆಚ್ಚದ ನೀರು ಪೂರೈಕೆ ಯೋಜನೆ, ಆಂಧ್ರಪ್ರದೇಶದ ಅನಂತಪುರ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡು, ನೀರು ಪೂರೈಕೆ ಮಾಡಲಾಗುತ್ತಿದೆ.  ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 1200 ಕಿ.ಮೀ. ಪೈಪ್‍ಲೈನ್ ಕೈಗೊಳ್ಳಲಾಗುವುದು ಎಂದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾಂತಲಾ ಚಲುವಾದಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಾವತಿ ದೇಸಾಯಿ, ಜಿ.ಪಂ. ಸದಸ್ಯ ಹನುಮಂತಗೌಡ ಚಂಡೂರ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಡಿ. 27 ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ಗ್ರಾಹಕ ದಿನಾಚರಣೆ


ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಇವರ ಸಹಯೋಗದಲ್ಲಿ “ರಾಷ್ಟ್ರೀಯ ಗ್ರಾಹಕ ದಿನಾಚರಣೆ” ಕಾರ್ಯಕ್ರಮವನ್ನು ಡಿ. 27 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ. 
    ರಾಷ್ಟ್ರೀಯ ಗ್ರಾಹಕ ದಿನಾಚರಣೆ ಕಾರ್ಯಕ್ರಮವನ್ನು “ಬೆಳೆಯುತ್ತಿರುವ ಡಿಜಿಟಲ್ ಮಾರುಕಟ್ಟೆ : ಗ್ರಾಹಕರು ರಕ್ಷಣೆಯಲ್ಲಿ ಸಮಸ್ಯೆಗಳು ಮತ್ತು ಸವಾಲುಗಳು” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದೆ.  ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸುವರು.  ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ಏಕತಾ ಹೆಚ್.ಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯರುಗಳಾದ ರವಿರಾಜು ಕುಲಕರ್ಣಿ ಹಾಗೂ ಸುಜಾತಾ ಅಕ್ಕಸಾಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.  ಜಿಲ್ಲಾ ಗ್ರಾಹಕರ ವೇದಿಕೆಯ ಸಹಾಯಕ ನೋಂದಣಾಧಿಕಾರಿಗಳಾದ ಪಿ.ಎಸ್. ಅಮರದೀಪ ಅವರು “ರಾಷ್ಟ್ರೀಯ ಗ್ರಾಹಕ ದಿನಾಚರಣೆ” ಕಾರ್ಯಕ್ರಮ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 29 ರಂದು ಕೊಪ್ಪಳದಲ್ಲಿ ವಿಶ್ವ ಮಾನವ ದಿನಾಚರಣೆ


ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಡಿ. 29 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಆಯೋಜಿಸಲಾಗಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್ ಪಾಲ್ಗೊಳ್ಳುವರು.  ಕೊಪ್ಪಳದ ಸಾಹಿತಿಗಳಾದ ಡಾ. ರಾಜಶೇಖರ ಜಮದಂಡಿ ಅವರು ವಿಶ್ವ ಮಾನವ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ವಿಕಲಚೇತನರ ರಿಯಾಯಿತಿ ಬಸ್ ಪಾಸ್ : ನವೀಕರಿಸಿಕೊಳ್ಳಲು ಅವಧಿ ವಿಸ್ತರಣೆ


ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಈ.ಕ.ರ.ಸಾ.ಸಂಸ್ಥೆ, ಕೊಪ್ಪಳ ವಿಭಾಗದ ವತಿಯಿಂದ ವಿಕಲಚೇತನರ ರಿಯಾಯಿತಿ ಬಸ್ ಪಾಸ್‍ಗಳನ್ನು ನವೀಕರಿಸಿಕೊಳ್ಳಲು ಅವಧಿ ವಿಸ್ತರಿಸಲಾಗಿದೆ.   
ಈ.ಕ.ರ.ಸಾ.ಸಂಸ್ಥೆ, ಕೊಪ್ಪಳ ವಿಭಾಗವು ವಿಕಲಚೇತನರ ರಿಯಾಯಿತಿ ಬಸ್ ಪಾಸ್‍ಗಳನ್ನು ನವೀಕರಿಸಿಕೊಳ್ಳಲು ಫಲಾನುಭವಿಗಳಿಗೆ ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ ವಿತರಿಸಲಾಗಿರುವ ಡಿ. 31 ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್‍ಗಳನ್ನು ನವೀಕರಿಸಿಕೊಳ್ಳಲು ಅವಧಿಯನ್ನು 2018 ರ ಫೆಬ್ರವರಿ 28 ರವರೆಗೆ ವಿಸ್ತರಿಸಲಾಗಿದ್ದು, ಫಲಾನುಭವಿಗಳು ರೂ. 660/- ಮೊತ್ತವನ್ನು ನಗದು ರೂಪದಲ್ಲಿ (ಡಿ.ಡಿ ಅವಶ್ಯವಿರುವುದಿಲ್ಲ) ಪಾವತಿಸಿ ಹಾಗೂ ಪಾಸ್‍ಗಳನ್ನು ನವಿಕರಿಸಿಕೊಳ್ಳಲು ಗುರುತಿನ ಚೀಟಿಯನ್ನು ಪಡೆದಿರುವ ಇಲಾಖೆಯಿಂದ ಗುರುತಿನ ಚೀಟಿ ನೀಡಿರುವ ಕುರಿತು ದೃಢೀಕರಣ ಪಡೆದು ದಾಖಲೆಗಳನ್ನು ಕಡ್ಡಾಯವಾಗಿ ನೀಡಿ ನವೀಕರಿಸಿಕೊಳ್ಳಬೇಕು. 
2018 ರ ಜನೇವರಿ. 01 ರಿಂದ, 2018ನೇ ಸಾಲಿನ ಪಾಸ್‍ಗಳನ್ನು ನವೀಕರಿಸಿಕೊಳ್ಳಬೇಕು.  ಹಾಗೂ ಹೊಸದಾಗಿ ಪಾಸ್‍ಗಳನ್ನು ಪಡೆಯುವ ವಿಕಲಚೇತನರು ಜನೇವರಿ. 01 ರಿಂದ ಪಡೆಯಬಹುದಾಗಿದೆ ಎಂದು ಈ.ಕ.ರ.ಸಾ.ಸಂಸ್ಥೆ, ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 22 December 2017

ಹಿಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗ ಕೂಡಲೆ ಪ್ರಾರಂಭಿಸಿ- ಗುರುದತ್ ಹೆಗ್ಡೆ


ಕೊಪ್ಪಳ, ಡಿ.22 (ಕರ್ನಾಟಕ ವಾರ್ತೆ): ಪ್ರಸಕ್ತ ಹಿಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗವನ್ನು ಮೊಬೈಲ್ ತಂತ್ರಾಂಶದಲ್ಲಿ ಕೂಡಲೆ ಪ್ರಾರಂಭಿಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕೊಪ್ಪಳ ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಅವರು ಅಧಿಕಾರಿ, ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

     ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2017-18 ನೇ ಸಾಲಿನ ಹಿಂಗಾರು ಹಂಗಾಮು ಬೆಳೆ ಸಮೀಕ್ಷೆಯ ಮೂಲ ಕಾರ್ಯಕರ್ತರಿಗೆ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.


     ಬೆಳೆ ಕಟಾವು ಸಮೀಕ್ಷಾ ಕಾರ್ಯವು ಈ ಮೊದಲು ಮ್ಯಾನುವಲ್ ಮೂಲಕ ಮಾಡಲಾಗುತ್ತಿತ್ತು.  ಆದರೆ ಇದೀಗ ಸರ್ಕಾರ ಬೆಳೆ ಕಟಾವು ಸಮೀಕ್ಷಾ ವರದಿಯು ನಿಖರವಾಗಿರಬೇಕು ಹಾಗೂ ದೋಷ ರಹಿತವಾಗಿರಬೇಕು ಎನ್ನುವ ಉದ್ದೇಶದಿಂದ ಮೊಬೈಲ್ ಆ್ಯಪ್ ತಂತ್ರಾಂಶವನ್ನು ಸಿದ್ಧಪಡಿಸಿ, ಈ ತಂತ್ರಾಂಶದಲ್ಲಿಯೇ ಸಮೀಕ್ಷಾ ಕಾರ್ಯ ಆಗಬೇಕು ಎನ್ನುವುದನ್ನು ಕಡ್ಡಾಯಗೊಳಿಸಿದೆ.  ಈ ತಂತ್ರಾಂಶದಲ್ಲಿ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ಅಳವಡಿಕೆಗೆ ಅವಕಾಶವಿಲ್ಲ.  ಯಾವುದೇ ಅಧಿಕಾರಿ, ಸಿಬ್ಬಂದಿ ತಪ್ಪೆಸಗಿದರೂ, ತಂತ್ರಾಂಶದಲ್ಲಿ ತಿಳಿಯುವುದರಿಂದ, ನಿರ್ಲಕ್ಷ್ಯ ಅಥವಾ ವಿಳಂಬ ಮಾಡಿದಲ್ಲಿ, ಸಂಬಂಧಿಸಿದವರು ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ.  ಮೊಬೈಲ್ ತಂತ್ರಾಂಶದಲ್ಲಿ ಬೆಳೆ ಕಟಾವು ಪ್ರಯೋಗ ಹಾಗೂ ಮಾಹಿತಿ ಸಲ್ಲಿಕೆ ಕುರಿತು ಯಾವುದೇ ಗೊಂದಲಗಳಿದ್ದರೂ, ಜಿಲ್ಲಾ ಅಥವಾ ತಾಲೂಕು ಮಟ್ಟದಲ್ಲಿನ ನೋಡಲ್ ಅಧಿಕಾರಿಗಳು ಪರಿಹರಿಸಿಕೊಡುತ್ತಾರೆ.  ಬೆಳೆ ಕಟಾವು ಪ್ರಯೋಗದ ಸಮೀಕ್ಷಾ ಕಾರ್ಯವು ಕೇವಲ ಬೆಳೆ ವಿಮಾ ಉದ್ದೇಶಕ್ಕೆ ಮಾತ್ರ ಸೀಮಿತವಲ್ಲ.  ಈ ಕಾರ್ಯವು ಜಿಲ್ಲೆಯಲ್ಲಿ ಬೆಳೆಯಲಾದ ವಿವಿಧ ಬೆಳೆಗಳ ಪ್ರಮಾಣ, ಕೃಷಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ.  ಹೀಗಾಗಿ ಅಧಿಕಾರಿ, ಸಿಬ್ಬಂದಿಗಳು ಬೆಳೆ ಕಟಾವು ಪ್ರಯೋಗದ ಕಾರ್ಯವನ್ನು ಕೂಡಲೆ ಪ್ರಾರಂಭಿಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಅವರು ಹೇಳಿದರು.

     ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಹಿಂಗಾರು ಹಂಗಾಮಿಗೆ ಹೋಬಳಿ ಮಟ್ಟದಲ್ಲಿ ಸಮೀಕ್ಷೆಗಾಗಿ 1070 ಪ್ರಯೋಗಗಳು ಮತ್ತು ಗ್ರಾ.ಪಂ. ಮಟ್ಟದ 648 ಪ್ರಯೋಗಗಳು ಸೇರಿದಂತೆ ಒಟ್ಟು 1718 ಪ್ರಯೋಗಗಳನ್ನು ಆಯ್ಕೆ ಮಾಡಲಾಗಿದೆ.  ಜಿಲ್ಲೆಯಲ್ಲಿ ಕೃಷಿ, ಪಂಚಾಯತಿ ರಾಜ್, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 227 ಮೂಲ ಕಾರ್ಯಕರ್ತರನ್ನು ನೇಮಿಸಲಾಗಿದ್ದು, ಇವರೆಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕಾಗುತ್ತದೆ.  ಇದಕ್ಕೆ ಸಂಬಂಧಿಸಿದಂತೆ ಈಗಾಗಲೆ ತರಬೇತಿ ಕೈಗೊರ್ಳಳಲಾಗಿದೆ.  ಮೂಲ ಕಾರ್ಯಕರ್ತರು ಬೆಳೆ ಕಟಾವುಗಳನ್ನು ಯಾವುದೇ ಕಾರಣಕ್ಕೂ ನಷ್ಟಗೊಳಿಸಬಾರದು.  ಸಮೀಕ್ಷಾ ಹಂತದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸುವುದು ಕಡ್ಡಾಯವಾಗಿದ್ದು, ಸಮೀಕ್ಷೆ ಕೈಗೊಳ್ಳುವ ಮುನ್ನ ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯ.  ಮೂಲ ಕಾರ್ಯಕರ್ತರೇ ಕಡ್ಡಾಯವಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಬೇಕು.  ಆಯ್ಕೆಯಾದ ಬೆಳೆಯು ವಿಮಾ ಘಟಕದಲ್ಲಿ ಬಿತ್ತನೆ ಮಾಡದಿದ್ದಲ್ಲಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆಯಬೇಕು ಎಂದು ವಿವರಿಸಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ವೈ.ಬಿ. ಚಲವಾದಿ, ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ತಹಸಿಲ್ದಾರ್ ಗುರುಬಸವರಾಜ, ಕೃಷಿ ಸಹಾಯಕ ನಿರ್ದೇಶಕ ವೀರಣ್ಣ ಕಮತರ್ ಉಪಸ್ಥಿತರಿದ್ದರು.  ಕಾರ್ಯಗಾರದಲ್ಲಿ ಕೃಷಿ, ಪಂಚಾಯತಿ ರಾಜ್, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

ಮಗುವಿನೊಂದಿಗೆ ದಂಪತಿಗಳು ಕಾಣೆ : ಪತ್ತೆಗೆ ಸಹಕರಿಸಲು ಮನವಿ


ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಗಿಣಗೇರಿ ಗ್ರಾಮದ ನಿವಾಸಿಗಳಾದ ಆನಂದ ತಂದೆ ಯಮನಪ್ಪ ವಾಸ್ಟರ್, ಹಾಗೂ ರೇಣುಕಾ ಗಂಡ ಆನಂದ ವಾಸ್ಟರ್, ಎಂಬ ದಂಪತಿಗಳು ತಮ್ಮ ಎರಡು ವರ್ಷದ ಮಗುವಿನೊಂದಿಗೆ ಡಿ. 15 ರಂದು ಕಾಣೆಯಾಗಿದ್ದು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
    ಗಿಣಗೇರಿ ಗ್ರಾಮದ ತಮ್ಮ ಮಗ ಆನಂದ ವಾಸ್ಟರ್(32), ಸೊಸೆ ರೇಣುಕಾ (28) ಹಾಗೂ ಮೊಮ್ಮಗಳು ಚೈತನ್ಯ (02) ಮಗುವಿನೊಂದಿಗೆ ಡಿ. 15 ರಂದು ಬೆಳಗಿನಜಾವ 4 ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಟಿ.ವಿ.ಎಸ್ ಮೋಟಾರ ಸೈಕಲ್ ತೆಗೆದುಕೊಂಡು ಹೋದವರು ವಾಪಸ್ ಬಾರದೆ ಕಾಣೆಯಾಗಿದ್ದಾರೆ ಎಂದು ಆನಂದ ವಾಸ್ಟರ್ ಅವರ ತಂದೆ ಯಮನಪ್ಪ ವಾಸ್ಟರ್ ಅವರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
    ಕಾಣೆಯಾದ ದಂಪತಿಗಳ ಹಾಗೂ ಮಗುವಿನ ಚಹರೆ ವಿವರ ಇಂತಿದೆ.  ಆನಂದ ತಂದೆ ಯಮನಪ್ಪ ವಾಸ್ಟರ್ (32), ಎತ್ತರ 5.6 ಅಡಿ, ತಳ್ಳನೆಯ ಮೈಕಟ್ಟು, ಎಣ್ಣೆ ಕೆಂಪು ಮೈಬಣ್ಣ, ದುಂಡು ಮುಖ, ಕಪ್ಪು ತಲೆ ಕೂದಲು ಹೊಂದಿದ್ದು, ಕಾಣೆಯಾದಾಗ ಆಕಾಶನೀಲಿ ಗೆರೆಗಳ ಶರ್ಟ ಹಾಗೂ ಕರಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.  ರೇಣುಕಾ ಗಂಡ ಆನಂದ ವಾಸ್ಟರ್ (28), ಎತ್ತರ 5.3 ಅಡಿ, ಮಧ್ಯಮ ಮೈಕಟ್ಟು, ಕೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದಾಗ ಕೆಂಪು ಬಣ್ಣದ ಕುಪ್ಪಸ ಹಾಗೂ ಸೀರೆ ಧರಿಸಿರುತ್ತಾಳೆ.  ದಂಪತಿಗಳಿಬ್ಬರೂ ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ.  ಚೈತನ್ಯ (02), ಎತ್ತರ ಒಂದೂವರೆ ಅಡಿ, ಕೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದಾಗ ಹಸಿರು ಮತ್ತು ಹಳದಿ ಬಣ್ಣದ ಫ್ರಾಕ್ ಧರಿಸಿದ್ದಾಳೆ.
ಈ ದಂಪತಿಗಳು ಹಾಗೂ ಮಗುವಿನ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಪಿಎಸ್‍ಐ ಕೊಪ್ಪಳ ಗ್ರಾಮೀಣ ವೃತ್ತ ದೂ.ಸಂ 08539-221333, ಮೊ. 9480803746, ಸಿಪಿಐ ಕೊಪ್ಪಳ ಮೊ.-9480803731, ಡಿವೈಎಸ್‍ಪಿ ದೂ.ಸಂ. 08539-230342, ಮೊ. 9480803720, ಕೊಪ್ಪಳ ಎಸ್.ಪಿ ಕಚೇರಿ ದೂ.ಸಂ. 08539-230111, ಕೊಪ್ಪಳ ಕಂಟ್ರೂಲ್ ರೂಂ 08539-230222-100 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಸತಿ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2018-19ನೇ ಸಾಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಕರ್ನಾಟಕ ಸರ್ಕಾರವು 2018-19ನೆ ಸಾಲಿನಲ್ಲಿ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗದ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್.  ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದ ಪ್ರ.ವರ್ಗ-1 ರ ವಿದ್ಯಾರ್ಥಿಗಳ ಕುಟುಂಬದವರ ವಾರ್ಷಿಕ ಆದಾಯ ರೂ.2.50 ಲಕ್ಷ ಮೀರಿರಬಾರದು.  ಹಾಗೂ ಪ್ರ.ವರ್ಗ 2ಎ, 2ಬಿ, 3ಎ, 3ಬಿ. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂ. ಮೀರಿರಬಾರದು.  ಅರ್ಜಿಯನ್ನು ಜಿಲ್ಲೆಯ ಎಲ್ಲ ವಸತಿ ಶಾಲೆಗಳಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ತಾಲೂಕ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಜಿಲ್ಲೆಯ ಎಲ್ಲಾ ವಸತಿ ಶಾಲಾ ಪ್ರಾಚಾರ್ಯರ ಕಚೇರಿಯಲ್ಲಿ 2018 ಜನವರಿ. 13 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬಹುದು. 
    ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು 2018 ಜನವರಿ. 25 ರಿಂದ 31 ರವರೆಗೆ ಪಡೆಯಬಹುದು.  ಪ್ರವೇಶ ಪರೀಕ್ಷೆ ಫೆಬ್ರವರಿ. 18 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ನಡೆಯಲಿದ್ದು, ಕೊಪ್ಪಳದ ನಾಗರಾಜ್ ಮೊ.ಸಂ - 9986255166, ಯಲಬುರ್ಗಾದ ಶರಣಪ್ಪ ಕರಜಗಿ ಮೊ.ಸಂ – 8970283895, ಗಂಗಾವತಿಯ ಶರಣಪ್ಪ ಮೊ.ಸಂ – 9880089531, ಹಾಗೂ ಕುಷ್ಟಗಿಯ ನಾಗರಾಜ ಸಂಗನಾಳ ಮೊ.ಸಂ – 9945878030, ಅವರು ತಾಲೂಕ ಪರೀಕ್ಷಾಧಿಕಾರಿಗಳಾಗಿದ್ದಾರೆ.  ಅರ್ಜಿ ಹಾಗೂ ಹೆಚ್ಚಿನ ವಿವರಗಳನ್ನು ಪಡೆಯಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕೃತ ವೆಬ್‍ಸೈಟ್  www.kreis.kar.nic.in  ನಲ್ಲಿ ಪಡೆಯಬಹುದಾಗಿದೆ.  ಈ ವರ್ಷದಿಂದ ಪ್ರಶ್ನೆ ಪತ್ರಿಕೆಯಲ್ಲಿ ಅಲ್ಪ ಬದಲಾವಣೆ ತರಲು ಉದ್ದೇಶಿಸಲಾಗಿದ್ದು, ಅಗತ್ಯ ಮಾಹಿತಿಗಾಗಿ ಪಾಲಕರು, ಶಿಕ್ಷಕರು ಅಥವಾ ವಿದ್ಯಾರ್ಥಿಗಳು ಆಯಾ ತಾಲೂಕಿನ ಪ್ರವೇಶ ಪರೀಕ್ಷಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬ್ಯಾಕಿಂಗ್ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ : ಪದವಿ ಅಂಕಗಳ ಮಾಹಿತಿ ಸಲ್ಲಿಸಲು ಸೂಚನೆ


ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡುವ ಪ್ರಸಕ್ತ ಸಾಲಿನ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ತರಬೇತಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಪದವಿ ಅಂಕಗಳ ಮಾಹಿತಿಯನ್ನು ನಮೂದಿಸಿಕೊಳ್ಳಬೇಕು ಎಂದು ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.     
       ಪ್ರಸಕ್ತ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯ ಪರೀಕ್ಷಾ ಪೂರ್ವ ತರಬೇತಿಗಾಗಿ ಈಗಾಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿಲ್ಲ.  ಬದಲಾಗಿ ಅಭ್ಯರ್ಥಿಗಳು ತಾವು ಪದವಿಯಲ್ಲಿ ಗಳಿಸಿರುವ ಅಂಕಗಳು ಮತ್ತು ಪ್ರವರ್ಗವಾರು ಮೀಸಲಾತಿಯನ್ವಯ ಆಯ್ಕೆ ಮಾಡಲಾಗುವುದರಿಂದ ಅಭ್ಯರ್ಥಿಗಳು ತಾವು ಪದವಿಯಲ್ಲಿ ಗಳಿಸಿರುವ ಅಂಕಗಳ ಮಾಹಿತಿಯನ್ನು ಆನ್‍ಲೈನ್ ಮೂಲಕ ಡಿ. 27 ರೊಳಗಾಗಿ ನಮೂದಿಸಿಕೊಳ್ಳಬೇಕು.  
ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್  www.backwardclasses.kar.nic.in ನ್ನು ನೋಡಬಹುದಾಗಿದೆ.  ಅಥವಾ ಸಹಾಯವಾಣೆ ಸಂಖ್ಯೆ 080-65970004 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 23 ರಂದು ಕೊಪ್ಪಳ ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ


ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ನಗರದ ಎಫ್-10 ಗವಿಮಠ ಫೀಡರ್ ತುರ್ತು ನಿರ್ವಹಣಾ ಕೆಲಸದ ಸಲುವಾಗಿ ಈ ಫೀಡರ್ ವ್ಯಾಪ್ತಿಗೆ ಬರುವ ನಗರದ ವಿವಿಧ ಪ್ರದೇಶಗಳಲ್ಲಿ ಡಿ. 23 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಂಟಾಗಲಿದೆ.
     ಕೊಪ್ಪಳ ಗವಿಮಠ ಫೀಡರ್ ವ್ಯಾಪ್ತಿಗೆ ಬರುವ ಗವಿಶ್ರೀ ನಗರ, ದೇವರಾಜ ಅರಸ ಕಾಲೋನಿ, ಸಜ್ಜಿಹೊಲ, ಫಿಶ್ ಮಾರ್ಕೆಟ್, ಗಡಿಯಾರ ಕಂಬ, ಕುವೆಂಪು ನಗರ, ಕೋಟೆ ಏರಿಯಾ, ನಿರ್ಮತಿ ಕೇಂದ್ರ, ಹಮಾಲರ ಕಾಲೋನಿ, ಮಹೆಬೂಬ ನಗರ, ಕಾತರಕಿ ರಸ್ತೆಯಲ್ಲಿ ಬರುವ ಪ್ರದೇಶದಲ್ಲಿ ಡಿ. 23 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೊಪ್ಪಳ ಜೆಸ್ಕಾಂ ಕಾ ಮತ್ತು ಪಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಡಿ. 24 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ


ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಕಿನ್ನಾಳ, ಹಿರೇಸಿಂದೋಗಿ, ಗಿಣಿಗೇರಾ ಹಾಗೂ ಕೊಪ್ಪಳ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿ. 24 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
    ಕ.ವಿ.ಪ್ರ.ನಿ.ನಿ. ಮುನಿರಾಬಾದ್ ಇವರ ಸಂದೇಶದಂತೆ 110/33/11 ಕೆ.ವಿ ಕೊಪ್ಪಳ/ ಗಿಣಿಗೇರಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಲೈನ್ ನಿರ್ವಹಣಾ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ಡಿ. 24 ರಂದು ಬೆಳಿಗ್ಗೆ 09 ರಿಂದ ಸಾಯಂಕಾಲ 5 ಗಂಟೆಯವರೆಗೆ ಕೊಪ್ಪಳ ತಾಲೂಕಿನ ಕಿನ್ನಾಳ, ಹಿರೆಸಿಂದೋಗಿ, ಗಿಣಿಗೇರಾ ಹಾಗೂ ಕೊಪ್ಪಳ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಈ ಪ್ರದೇಶಗಳ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಕೊಪ್ಪಳ ಜೆಸ್ಕಾಂ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 21 December 2017

ಮಾಸಿಕ ವ್ಯಾಸಂಗ/ ಫೆಲೋಶಿಪ್ ಹಾಗೂ ಶುಲ್ಕ ವಿನಾಯಿತಿಗಾಗಿ ಅವಧಿ ವಿಸ್ತರಣೆ


ಕೊಪ್ಪಳ ಡಿ. 21 (ಕರ್ನಾಟಕ ವಾರ್ತೆ): ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳು ಮಾಸಿಕ ವ್ಯಾಸಂಗ ವೇತನ/ ಫೆಲೋಶಿಪ್ ಹಾಗೂ ಶುಲ್ಕ ವಿನಾಯಿತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಡಿ. 23 ರವರೆಗೆ ವಿಸ್ತರಿಸಲಾಗಿದೆ.
ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ಹಾಗೂ ಇತರೆ ಓ.ಬಿ.ಸಿ. ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡುವ ಮಾಸಿಕ ರೂ. 5000/- ವ್ಯಾಸಂಗ ವೇತನ/ ಫೆಲೋಶಿಪ್ ಹಾಗೂ ನಿಗದಿತ ಶುಲ್ಕ ವಿನಾಯಿತಿಗಾಗಿ ಈ ಹಿಂದೆ ಆಯ್ಕೆಯಾಗಿದ್ದು, ಪ್ರಸ್ತುತ ಸಾಲಿನಲ್ಲಿ ಮುಂದುವರಿಯುತ್ತಿರುವ ಅರ್ಹ ನವೀಕರಣ ವಿದ್ಯಾರ್ಥಿಗಳು ಹಾಗೂ ಏಪ್ರೀಲ್. 01 ರಿಂದ ಈಚೆಗೆ ಪ್ರಥಮ ವರ್ಷದಲ್ಲಿ ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಂದ ಈ ಮೊದಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಏಪ್ರೀಲ್. 01 ರಿಂದ ಹಿಂದೆ ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳು ಸಹ ಈಗ ಅರ್ಜಿ ಸಲ್ಲಿಸಬಹುದಾಗಿದೆ.  ಅದೇ ರೀತಿ 2, 3 ಮತ್ತು 4ನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಮೊದಲು ಈ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸದಿದ್ದಲ್ಲಿ, ಈಗ ಅರ್ಜಿ ಸಲ್ಲಿಸಬಹುದಾಗಿದೆ. 
ಅರ್ಜಿ ಸಲ್ಲಿಸುವ ದಿನಾಂಕವನ್ನು ಡಿ. 23 ರವರೆಗೆ ವಿಸ್ತರಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೆಬ್‍ಸೈಟ್  www.backwardclasses.kar.nic.in ನ್ನು ನೋಡಬಹುದಾಗಿದೆ.  ಅಥವಾ ಸಹಾಯವಾಣೆ ಸಂಖ್ಯೆ 080-65970004 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಸಾಂತ್ವನ-ಹರೀಶ್ ಯೋಜನೆ : ಜೀವ ಉಳಿಸಿದವರಿಗೆ ಜೀವ ರಕ್ಷಕ ಪ್ರಶಸ್ತಿಕೊಪ್ಪಳ: ಡಿ.21 (ಕರ್ನಾಟಕ ವಾರ್ತೆ) ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸೂಕ್ತ ಸಹಾಯ ಹಾಗೂ ತಕ್ಷಣ ಚಿಕಿತ್ಸೆ ಲಭ್ಯವಾದರೆ ಸಾಕು, ಬಹಳಷ್ಟು ಪ್ರಾಣಗಳನ್ನು ಉಳಿಸಿಕೊಳ್ಳಬಹುದು. ಅಪಘಾತ ಸಂದರ್ಭದಲ್ಲಿ ಮಾನವೀಯತೆ ಮೆರೆದು, ಅಪಘಾತಕ್ಕೊಳಗಾದವರಿಗೆ ನೆರವು ನೀಡಿ, ಚಿಕಿತ್ಸೆ ದೊರಕಿಸಲು ಕಾರಣರಾದ ಮಹನೀಯರನ್ನು ಗುರುತಿಸಿ, ಅಂತಹವರಿಗೆ ಮುಖ್ಯಮಂತ್ರಿಗಳ ಸಾಂತ್ವನ-ಹರೀಶ್ ಯೋಜನೆಯಡಿ ಜೀವ ರಕ್ಷಕ ಪ್ರಶಸ್ತಿಯನ್ನು ಸರ್ಕಾರ ಜಿಲ್ಲಾ ಮಟ್ಟದಲ್ಲಿ ನೀಡಿ ಗೌರವಿಸುತ್ತಿದೆ.
 
ಕಳೆದ 2016 ರ ಫೆಬ್ರವರಿ 16 ರಂದು ಬೆಂಗಳೂರಿನ ನೆಲಮಂಗಲ ಬಳಿ ನಡೆದ ರಸ್ತೆ ಅಪಘಾತದಲ್ಲಿ ದೇಹ ಎರಡು ತುಂಡಾಗಿ ಸಾವು ಬದುಕಿನ ಹೋರಾಟದಲ್ಲಿದ್ದರೂ, ತನ್ನ ಕಣ್ಣು ಮತ್ತು ಇತರ ಅಂಗಾಂಗಗಳನ್ನು ಹರೀಶ್ ದಾನ ಮಾಡಿ, ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದರಿಂದ ಸರ್ಕಾರ ಈ ಯೋಜನೆಗೆ ಹರೀಶ್ ಹೆಸರಿಡುವ ಮೂಲಕ ತನ್ನ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದೆ.
 
ರಾಜ್ಯದ ವ್ಯಾಪ್ತಿಯೊಳಗೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಯಾವುದೇ ರಸ್ತೆ ಅಪಘಾತಕ್ಕೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುವ ಗಾಯಾಳುಗಳಿಗೆ ಅವರ ಪೂರ್ವಾಪರ ವಿಚಾರಿಸದೆ ತುರ್ತಾಗಿ ನಗದು ರಹಿತ ಉನ್ನತ ಗುಣಮಟ್ಟದ ಉಚಿತ ವೈಧ್ಯಕೀಯ ಚಿಕಿತ್ಸೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಕ್ಕೆ ತಂದಿರುವ ಯೋಜನೆ ಇದಾಗಿದೆ. ಯಾವುದೇ ವ್ಯಕ್ತಿ ಅಪಘಾತ ಸಂದರ್ಭದಲ್ಲಿ ತುರ್ತಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಬೇಕು, ಅಪಘಾತಕ್ಕೀಡಾದ ವ್ಯಕ್ತಿಗೆ ಸರ್ಕಾರದ ವತಿಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎನ್ನುವ ಆಶಯದೊಂದಿಗೆ ಸರ್ಕಾರ ಮುಖ್ಯಮಂತ್ರಿ ಸಾಂತ್ವನ ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೊಳಿಸಿದೆ. ಅಪಘಾತಕ್ಕೊಳಗಾದ ವ್ಯಕ್ತಿಯ ಜೀವವನ್ನು ರಕ್ಷಿಸಲು ಅಥವಾ ಉಳಿಸಲು ಮೊದಲ 48 ಗಂಟೆಗಳ ಅವಧಿಗೆ 25 ಸಾವಿರ ರೂ. ಗಳವರೆಗೆ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟಾರೆ ಅಪಘಾತದ ಸಂದರ್ಭದಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯವಾಗಿದ್ದು, ಸಾರ್ವಜನಿಕರು ಇಂತಹ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುವುದು. ಆಂಬುಲೆನ್ಸ್ ಸೇವೆ ಬಳಸಲು ನೆರವಾಗುವುದು ಅತ್ಯಂತ ಪ್ರಮುಖ ಸಂಗತಿಯಾಗಿದೆ.
ಈ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಜೀವ ಉಳಿಸುವ ನಾಗರಿಕರಿಗೆ ಜೀವ ರಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರಶಸ್ತಿಗಾಗಿ ಒಟ್ಟು 8 ಅರ್ಜಿಗಳು ಸ್ವೀಕೃತಗೊಂಡಿದ್ದವು. ಇವುಗಳಲ್ಲಿ ಪರೋಪಕಾರ ಹಾಗೂ ಅದರಿಂದ ಗಾಯಾಳುವಿಗಾದ ಸಹಾಯವನ್ನು ಆಧರಿಸಿ, ಕೊಪ್ಪಳ ತಾಲೂಕು ಹಲಗೇರಿಯ ವೀರಭದ್ರಪ್ಪ ಶ್ಯಾನಭೋಗರ, ಗಂಗಾವತಿ ತಾಲೂಕು ಜಬ್ಬಲಗುಡ್ಡದ ಮಾರುತಿ ಯಲ್ಲಪ್ಪ, ಹಾಗೂ ಹೊಸಳ್ಳಿ ಕ್ಯಾಂಪ್‍ನ ರಮೇಶ ನಾಯಕ, ಈ ಮೂರು ಜನರನ್ನು ಜೀವ ರಕ್ಷಕ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದ ಸಮಿತಿಯು ಆಯ್ಕೆ ಮಾಡಿ, ಪ್ರಶಸ್ತಿ ಪ್ರದಾನವನ್ನು ಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರ ಪರೋಪಕಾರ ಃ
********************
ಪ್ರಕರಣ-1 :
****** ಕೊಪ್ಪಳ ತಾಲೂಕಿನ ಹಲಗೇರಿ ಬಳಿ 2017ರ ಮೇ.1 ರಂದು ಬೆಂಗಳೂರಿನಿಂದ ಕೊಪ್ಪಳ ಮಾರ್ಗವಾಗಿ ಮುಂಡರಗಿ ಹೋಗಬೇಕಿದ್ದ ಖಾಸಗಿ ಗ್ರೀನ್ ಲೈನ್ ಬಸ್ಸಿಗೆ ಹಿಂದಿನ ಇಂಡಿಕೇಟರಿನಲ್ಲಿ ಬೆಂಕಿ ತಗುಲಿದ್ದನ್ನು ನೋಡಿದ ಹಲಗೇರಿ ಗ್ರಾಮದ ದೈಹಿಕ ಶಿಕ್ಷಕ ವೀರಭದ್ರಪ್ಪ ಶ್ಯಾನಭೋಗರ ಅವರು ಹಿಂದಿನಿಂದ ಕೂಗುತ್ತಾ ಓಡಿ ಹೋಗಿ, ಬಸ್ ನಿಲ್ಲಿಸಿ, ಬಸ್ಸ್‍ನಲ್ಲಿ ನಿದ್ರಾವಸ್ಥೆಯಲ್ಲಿರುವ 8 ಜನ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದರು. ಬಸ್ಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ವೀರಭದ್ರಪ್ಪ ನವರ ಸಮಯಪ್ರಜ್ಞೆ ಹಾಗೂ ಪರೋಪಕಾರಿ ಮನೋಭಾವದಿಂದಾಗಿ 08 ಜನರ ಪ್ರಾಣ ಉಳಿಯಲು ಸಾಧ್ಯವಾಯಿತು.
ಪ್ರಕರಣ-2 :
****** ಕೊಪ್ಪಳದಿಂದ ಗಂಗಾವತಿಗೆ ಹೋಗುವ ಹೆದ್ದಾರಿಯ ಅಮರೇಶ್ವರ ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ 2017ರ ಜೂ.20 ರಂದು ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡು, ರಕ್ತದ ಮಡುವಿನಲ್ಲಿ ಬಿದ್ದು ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದವರನ್ನು ನೋಡಿದ ಮಾರುತಿ ಯಲ್ಲಪ್ಪ ಎನ್ನುವವರು ತನ್ನ ಸ್ವಂತ ಟಾಟಾ ಮ್ಯಾಜಿಕ್ ವಾಹನದಲ್ಲಿ ಗಾಯಾಳುಗಳನ್ನು ಹಾಕಿಕೊಂಡು ಹೋಗಿ ಗಂಗಾವತಿಯ ಸರಕಾರಿ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಮಾನವಿಯತೆ ಮೆರೆದಿದ್ದರು. ಇಬ್ಬರ ಜೀವ ಉಳಿಸುವಲ್ಲಿ ಮಾರುತಿಯವರು ಮಹತ್ವದ ಪಾತ್ರ ವಹಿಸಿದ್ದರು. ಇವರ ಮಾನವೀಯತೆ ಜನರ ಪ್ರಶಂಸೆಗೆ ಪಾತ್ರವಾಯಿತು.
ಪ್ರಕರಣ-3 :
****** ಗಂಗಾವತಿ ತಾಲೂಕಿನ ಹೊಸಳ್ಳಿಯ ಕಂಪ್ಲಿ ಕ್ರಾಸ್ ಬಳಿ 2017ರ ಮಾ.14 ರಂದು ಟಾಟಾ ಎಸ್ ಮತ್ತು ತಳ್ಳುವ ಗಾಡಿಯ ನಡುವೆ ಅಪಘಾತವಾಗಿ ಟಾಟಾ ಎಸ್ ಬಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದ ಪರಿಣಾಮ, ಯುವಕರು ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಾಗ, ರಸ್ತೆ ಪಕ್ಕದಲ್ಲಿ ಎಳೆನೀರು ವ್ಯಾಪಾರಿಯಾಗಿದ್ದ ರಮೇಶ್ ನಾಯಕ್ ಎಂಬ ವ್ಯಕ್ತಿ ಕೂಡಲೇ ಅವರನ್ನು ಹತ್ತಿರದ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಿ ಆ ಯುವಕರ ಜೀವ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು.
ಅಪಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಡಿಸುವುದೇ ಮೊದಲ ಆದ್ಯತೆಯಾಗಿರಬೇಕು ಎಂದು ಕಾನೂನು ಹೇಳುತ್ತದೆಯೇ ಹೊರತು, ನೆರವಾದವರಿಗೆ ತೊಂದರೆ ಕೊಡುವಂತಹ ಪರಿಸ್ಥಿತಿ ಈಗ ಇಲ್ಲ. ಅಪಘಾತದ ಗಾಯಾಳುಗಳಿಗೆ ನೆರವಾದವರನ್ನು ಸರ್ಕಾರ ಜೀವ ರಕ್ಷಕ ಪ್ರಶಸ್ತಿಯನ್ನು ನೀಡುವ ಮೂಲಕ ಇಂತಹ ಮಾನವೀಯ ಮೌಲ್ಯಗಳಿಗೆ ಉತ್ತೇಜನ ನೀಡುತ್ತಿದೆ. ಇನ್ನಾದರೂ ಯಾವುದೇ ಅಪಘಾತದ ಗಾಯಾಳುಗಳನ್ನು ಕೂಡಲೆ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎನ್ನುವುದೇ ಸರ್ಕಾರದ ಆಶಯವಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು.

                                                                                       -ಬಸವರಾಜ ಬೋದೂರು
                                                                                                  ಕೊಪ್ಪಳ.

ಡಿ. 29 ರಂದು ಕೊಪ್ಪಳದಲ್ಲಿ ಅರ್ಥಪೂರ್ಣ ವಿಶ್ವ ಮಾನವ ದಿನ ಆಚರಣೆ- ಡಾ. ರುದ್ರೇಶ್ ಘಾಳಿ


ಕೊಪ್ಪಳ, ಡಿ.21 (ಕರ್ನಾಟಕ ವಾರ್ತೆ): ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಡಿ. 29 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ವಿಶ್ವ ಮಾನವ ದಿನ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
     ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಕೊಪ್ಪಳದಲ್ಲಿ ವಿಶ್ವ ಮಾನವ ದಿನ ಆಚರಣೆ ಸಂಬಂಧ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
     ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ರಾಜ್ಯ ಸರ್ಕಾರದ ವತಿಯಿಂದ ಡಿ. 29 ರ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ.  ಕನ್ನಡ ನಾಡಿನ ಹಿರಿಮೆಯನ್ನು ತಮ್ಮ ಅದ್ಭುತ ಸಾಹಿತ್ಯ ಮತ್ತು ಕವನಗಳ ಮೂಲಕ ಜಗತ್ತಿಗೆ ಪರಿಚಯಿಸಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತಿರುವುದು ಅರ್ಥಪೂರ್ಣವಾಗಿದೆ.  ಕಾರ್ಯಕ್ರಮವನ್ನು ಡಿ. 29 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗುವುದು.  ಕಾರ್ಯಕ್ರಮದ ಅಂಗವಾಗಿ ಅಂದು ಕುವೆಂಪು ಅವರು ರಚಿಸಿರುವ ಕವನಗಳ ಗೀತಗಾಯನ ಕಾರ್ಯಕ್ರಮ ಅಲ್ಲದೆ  ಕುವೆಂಪು ರಚಿತ ‘ಓ ನನ್ನ ಚೇತನ’ ಮತ್ತು ‘ವಿಶ್ವ ಮಾನವ ಗೀತೆ’ ಗಳಿಗೆ ಕಲಾವಿದರಿಂದ ಗೀತ ಗಾಯನ, ನೃತ್ಯ ರೂಪಕವನ್ನು ಏರ್ಪಡಿಸಲಾಗುವುದು.   ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು.  ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.  ವಿಶ್ವ ಮಾನವ ದಿನವನ್ನು ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಲ್ಲಿ ಆಚರಿಸುವಂತೆ ಸೂಚನೆ ನೀಡಲಾಗುವುದು.  ಕುವೆಂಪು ಅವರ ಕುರಿತ ಕಿರು ಪರಿಚಯ ಸಹಿತದ 2018 ರ ಕ್ಯಾಲೆಂಡರ್ ಅನ್ನು ಅಧಿಕಾರಿಗಳು ಸಿದ್ಧಪಡಿಸಬೇಕು.  ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತಾಗಬೇಕು.  ಅಲ್ಲದೆ ಎಲ್ಲ ಸಾರ್ವಜನಿಕರು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಕೋರಿದರು.
     ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರಾದ ಮಹಾಂತೇಶ ಮಲ್ಲನಗೌಡರ, ಶಿವಾನಂದ ಹೊದ್ಲೂರ,  ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪರಿಷ್ಕøತ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಡಿ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರ ಉದ್ದೇಶಿತ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಪರಿಷ್ಕøತಗೊಂಡಿದೆ.  ಇದರನ್ವಯ ಮಂತ್ರಿಗಳು ಡಿ. 25 ರಿಂದ 27 ರವರೆಗೆ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
    ಬಸವರಾಜ ರಾಯರಡ್ಡಿ ಅವರು ಡಿ. 25 ರಂದು ಸಂಜೆ 6 ಗಂಟೆಗೆ ಯಲಬುರ್ಗಾ ತಾಲೂಕಿನ ಕುಕನೂರಿಗೆ ಆಗಮಿಸಿ, ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು.  ರಾತ್ರಿ 8-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಡಿ. 26 ರಂದು ಬೆಳಿಗ್ಗೆ 10 ಗಂಟೆಗೆ ಕುಕನೂರಿಗೆ ತೆರಳಿ, ನೂತನ ತಾಲೂಕು ಆರಂಭದ ಕುರಿತು ಕುಕನೂರು ಪ್ರವಾಸಿಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಮಧ್ಯಾಹ್ನ 12 ಗಂಟೆಗೆ ದ್ಯಾಂಪುರ ಎಲ್ & ಟಿ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ 03 ಗಂಟೆಗೆ ಯಲಬುರ್ಗಾಕ್ಕೆ ತೆರಳಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು.  ರಾತ್ರಿ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಡಿ. 27 ರಂದು ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾಕ್ಕೆ ತೆರಳುವರು.  ನಂತರ ಯಲಬುರ್ಗಾದಲ್ಲಿ ಪಟ್ಟಣ ಪಂಚಾಯತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮಂತ್ರಿಗಳು ಅದೇ ದಿನ ಮಧ್ಯಾಹ್ನ 03 ಗಂಟೆಗೆ ಕಲಬುರಗಿ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಶುಶ್ರೂಷಕಿಯರ ಹುದ್ದೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ ಡಿ. 21 (ಕರ್ನಾಟಕ ವಾರ್ತೆ): ಕೊಪ್ಪಳ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆಯ ಎನ್.ಹೆಚ್.ಎಂ ಯೋಜನೆಯಡಿ ಗುತ್ತಿಗೆ ಆಧಾರದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಆಹ್ವಾನಿಸಲಾಗಿದೆ.
    ಕೊಪ್ಪಳ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ಕಿರಿಯ ಆರೋಗ್ಯ ಸಹಾಯಕಿಯರು, ಆರ್.ಬಿ.ಎಸ್.ಕೆ ಕಾರ್ಯಕ್ರಮದ ಶುಶ್ರೂಷಕಿಯರು, 24*7 ಪ್ರಾ.ಆ.ಕೇಂದ್ರ ಶುಶ್ರೂಷಕಿಯರು, ಅರ್ಬನ್ ಶುಶ್ರೂಷಕಿಯರು ಹಾಗೂ ಆಶಾ ಮೇಲ್ವಿಚಾರಕೀಯರ ಹುದ್ದೆಯ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.  ಈ ಆಯ್ಕೆ ಪಟ್ಟಿ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಲಿಖಿತವಾಗಿ ಜಿಲ್ಲಾ ಯೋಜನಾ ನಿರ್ವಹಣಾ ಘಟಕ ಕೊಪ್ಪಳ ಇವರಲ್ಲಿ ಡಿ. 26 ರೊಳಗಾಗಿ ಸಲ್ಲಿಸಬಹುದು.  ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆ


ಕೊಪ್ಪಳ ಡಿ. 21(ಕರ್ನಾಟಕ ವಾರ್ತೆ) :  ಕರ್ನಾಟಕ ಸಾಹಿತ್ಯ ಅಕಾಡೆಮಿಯು “ಬಂಗಾರದ ಎಲೆಗಳು” ಎಂಬ ಹೆಸರಿನ ಕ್ರಿ.ಶ. 1820 ರಿಂದ 2020 ರವರೆಗಿನ ಕನ್ನಡ ಸಾಹಿತಿಗಳ ಮಾಹಿತಿಯನ್ನು ಸಂಗ್ರಹಿಸುವ ಯೋಜನೆಗೆ ನಗರದ ಹಿರಿಯ ಸಾಹಿತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರುತರಾದ ವಿಠ್ಠಪ್ಪ ಗೋರಂಟ್ಲಿ, ಎಚ್.ಎಸ್.ಪಾಟೀಲ್ ಹಾಗೂ ಹನುಮಾಕ್ಷಿ ಗೋಗಿ ಅವರು ತಮ್ಮ ಮಾಹಿತಿಯನ್ನು ಜಿಲ್ಲಾ ಕ್ಷೇತ್ರ ಸಂಗ್ರಹಕರರಾದ ವೀರಪ್ಪ  ನಿಂಗೋಜಿ ಅವರಿಗೆ ಕೊಡುವ ಮೂಲಕ ಜಿಲ್ಲೆಯ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆಗೊಳಿಸಲಾಯಿತು.
    ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಜಿಲ್ಲಾ ಕ್ಷೇತ್ರ ಸಂಗ್ರಹಗಾರರಾದ ವೀರಪ್ಪ ನಿಂಗೋಜಿ ಮಾತನಾಡಿ 2018 ಜನೇವರಿ 15 ರೊಳಗಾಗಿ ಮಾಹಿತಿಯನ್ನು ಜಿಲ್ಲಾ ಕ್ಷೇತ್ರ ಸಂಗ್ರಹಕಾರರಿಗೆ ಅಥವಾ ತಾಲೂಕಾ ಸಹಾಯಕ ಸಂಗ್ರಹಕರಾದ ಅಕ್ಬರ ಕಾಲಿಮಿರ್ಚಿ ಅವರಿಗೆ ಮಾಹಿತಿಯನ್ನು ಒದಗಿಸಲು ಕೋರಿದರು.
     ಈ ಸಂದರ್ಭದಲ್ಲಿ ತಾಲೂಕಿನ ಮಾಹಿತಿ ಸಹಾಯಕ ಸಂಗ್ರಹಕರಾದ    ಅಕ್ಬರ್ ಸಿ. ಕಾಲಿಮಿರ್ಚಿ, ಸಾಹಿತಿಗಳಾದ ಬಸವರಾಜ ಆಕಳವಾಡಿ, ಅಲ್ಲಮಪ್ರಭು ಬೆಟ್ಟದೂರ, ಡಾ ಮಹಾತೇಶ ಮಲ್ಲನಗೌಡರ,  ಜಿಎಸ್. ಗೋನಾಳ, ವಿಮಲಾ ಇನಾಮದಾರ, ಶಿ.ಕಾ.ಬಡೀಗೇರ ಮಹೇಶ ಬಾಬು ಸುರ್ವೆ, ವೈ.ಬಿ.ಜೂಡಿ, ಮಂಜುನಾಥ ಗೊಂಡಬಾಳ, ವೀರಣ್ಣ ವಾಲಿ, ಉಮೇಶ ಪೂಜಾರ, ಸ. ಶರಣಪ್ಪ ಪಾಟೀಲ್, ಹಾಗೂ ಇತರರು ಉಪಸ್ಥಿತರಿದ್ದರು.

ಶಿಶುಕ್ಷು ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಡಿ. 21 (ಕರ್ನಾಟಕ ವಾರ್ತೆ): ಕೊಪ್ಪಳ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹೆಚ್.ಎ.ಎಲ್ ಬೆಂಗಳೂರು, ಕಂಪನಿಯಲ್ಲಿ ಶಿಶುಕ್ಷು (ಅಪ್ರೆಂಟಿಸ್) ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಅಡ್ವಾನ್ಸ್ ಆಪರೇಟರ್ ಮಶೀನ್ ಟೂಲ್ ವಿಷಯಕ್ಕೆ ಸಂಬಂಧಿಸಿದಂತೆ ಶಿಶುಕ್ಷು ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನದಲ್ಲಿ ಶೇ. 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.  15 ರಿಂದ 18 ವರ್ಷ ವಯೋಮಿತಿಯಲ್ಲಿರಬೇಕು.  ಕರ್ನಾಟಕ ರಾಜ್ಯದ ಆರ್ಥಿಕ ಬಡ ವಿದ್ಯಾರ್ಥಿಗಳು ಬಿ.ಪಿ.ಎಲ್/ ಅಂತ್ಯೋದಯ ಪಡಿತರ ಚೀಟಿ ಹೊಂದಿರಬೇಕು.  ಶಿಶುಕ್ಷು ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ/ ಶಿಕ್ಷಣ, ಸಂಬಳ ಮತ್ತು ಭತ್ಯೆಗಳು (ಕನಿಷ್ಠ 5500 ಮಾಹೆಯಾನ).  ಹಾಗೂ ವಸತಿ ಸೌಲಭ್ಯ ಒದಗಿಸಲಾಗುವುದು. 
    ಅರ್ಜಿಯನ್ನು ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಜಿಲ್ಲಾಡಳಿತ ಭವನ ಕೊಪ್ಪಳ ಇವರಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಪ್ರತಿ, ಬಿ.ಪಿ.ಎಲ್/ ಅಂತ್ಯೋದಯ ಪಡಿತರ ಚೀಟಿ, ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಿ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಅಥವಾ ಅಡಿಷನಲ್ ಜನರಲ್ ಮ್ಯಾನೇಜರ್ (ಟಿ.ಟಿ.ಐ), ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್, ವಿಮಾನಪುರ, ಬೆಂಗಳೂರು-560017, ಇವರಿಗೆ ನೇರವಾಗಿಯೂ ಸಹ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು ಡಿ. 28 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದೂರವಾಣಿ ಸಂಖ್ಯೆ 08539-220859 ಕ್ಕೆ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಂಗಭದ್ರ ಎಡದಂಡೆ ಮುಖ್ಯ ಕಾಲುವೆ : ನಿಷೇಧಾಜ್ಞೆ ಜಾರಿ


ಕೊಪ್ಪಳ ಡಿ. 21 (ಕರ್ನಾಟಕ ವಾರ್ತೆ): ತುಂಗಭದ್ರ ಎಡದಂಡೆ ಮುಖ್ಯಕಾಲುವೆಯ ಮೈಲ್ 0 ರಿಂದ 47 ರವರೆಗೆ ಡಿ. 16 ರಿಂದ ಫೆ. 28 ರವರೆಗೆ ಸಿ.ಆರ್.ಪಿ.ಸಿ 1973 ಕಲಂ 144 ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
    ಅಭಿಯಂತರು, ಕ.ನೀ.ನಿ.ನಿ ನೀರಾವರಿ ಕೇಂದ್ರ ವಲಯ ಮುನಿರಾಬಾದ್ ಇವರು ರಾಯಚೂರು ಜಿಲ್ಲೆಗೆ ತುಂಗಭದ್ರ ಜಲಾಶಯದಿಂದ ಜನ/ ಜಾನುವಾರುಗಳಿಗೆ ಕುಡಿಯುವ ಸಲುವಾಗಿ ತುಂಗಭದ್ರ ಎಡದಂಡೆ ನಾಲೆಗೆ ಡಿ. 16 ರಿಂದ 2018 ರ ಫೆಬ್ರವರಿ. 28 ರವರೆಗೆ ಸುಮಾರು 2000 ಕ್ಯೂಸೆಕ್ಸ್ ನೀರು ಹರಿಸಬೇಕಾಗಿರುವ ಹಿನ್ನಲೆಯಲ್ಲಿ, ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ತುಂಗಭದ್ರ ಎಡದಂಡೆ ಮುಖ್ಯ ಕಾಲುವೆ ಮೈಲು: 0 ರಿಂದ 47 ರವರೆಗೆ ಮುಖ್ಯ ಕಾಲುವೆ ಎಡ ಮತ್ತು ಬಲ ದಡದಿಂದ 100 ಮೀಟರ ಅಂತರದ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
    ತುಂಗಭದ್ರ ಎಡದಂಡೆ ಕಾಲುವೆಯ ನಿಷೇದಾಜ್ಞೆ ಜಾರಿಗೊಳಿಸಿದ ಪ್ರದೇಶದ 100 ಮೀಟರ ಅಂತರದ ವ್ಯಾಪ್ತಿಯಲ್ಲಿ ದಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಎರಡು ಜನಕ್ಕಿಂತ ಹೆಚ್ಚಾಗಿ ಒಡಾಡುವುದನ್ನು, ಕಾಲುವೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ.  ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ.  ಈ ಆದೇಶವು 2018 ರ ಫೆಬ್ರವರಿ. 28 ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ತುಂಗಭದ್ರ ನೀರಿನ ಸಮರ್ಪಕ ನಿರ್ವಹಣೆ : ಪೊಲೀಸ್ ಸಿಬ್ಬಂದಿಗಳ ನೇಮಕ


ಕೊಪ್ಪಳ ಡಿ. 21 (ಕರ್ನಾಟಕ ವಾರ್ತೆ): ತಂಗಭದ್ರಾ ಜಲಾಶದ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
    ಅಭಿಯಂತರು, ಕ.ನೀ.ನಿ.ನಿ ನೀರಾವರಿ ಕೇಂದ್ರ ವಲಯ ಮುನಿರಾಬಾದ್ ಇವರು ರಾಯಚೂರು ಜಿಲ್ಲೆಗೆ ತುಂಗಭದ್ರ ಜಲಾಶಯದಿಂದ ಜನ/ ಜಾನುವಾರುಗಳಿಗೆ ಕುಡಿಯುವ ಸಲುವಾಗಿ ತುಂಗಭದ್ರ ಎಡದಂಡೆ ನಾಲೆಗೆ ಡಿ. 16 ರಿಂದ 2018 ರ ಫೆಬ್ರವರಿ. 28 ರವರೆಗೆ ಸುಮಾರು 2000 ಕ್ಯೂಸೆಕ್ಸ್ ನೀರು ಹರಿಸಬೇಕಾಗಿರುವ ಹಿನ್ನಲೆಯಲ್ಲಿ ನೀರನ್ನು ರೈತರು ಅನಧಿಕೃತವಾಗಿ ಬಳಸದಂತೆ ಮತ್ತು ವಿತರಣಾ ಕಾಲುವೆಗಳ ಗೇಟಗಳನ್ನು ಆಪರೇಟ ಮಾಡದಂತೆ ಕಾರ್ಯ ನಿರ್ವಹಿಸಲು, ಅಗತ್ಯ ಪೊಲೀಸ್ ಬಂದೋಬಸ್ತ್‍ಗಾಗಿ ಪೊಲೀಸ್ ಸಿಬ್ಬಂದಿಯನ್ನು ತಂಗಭದ್ರಾ ಎಡದಂಡೆ ನಾಲೆಯ 0 ಮೈಲು ನಿಂದ 47 ರ ಮೈಲಿಗೆ ನಿಯೋಜಿಸಲಾಗಿದೆ.  ತುಂಗಭದ್ರಾ ವಿತರಣಾ ಉಪ ಕಾಲುವೆ ಸಂಖ್ಯೆಗಳಿಗೆ ಅನುಗುಣವಾಗಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿ, ಪೊಲೀಸ್ ಸಿಬ್ಬಂದಿಗಳು ಹಾಗೂ ನೀರಾವರಿ ಅಧಿಕಾರಿಗಳ ಕಾರ್ಯ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ನೀರಾವರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನೀರಿನ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆ ವಹಿಸಿಕೊಂಡು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Monday, 18 December 2017

ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜದಿಂದ ಸಮೃದ್ಧಿಯ ಬೆಳೆಕೊಪ್ಪಳ ಡಿ. 18 (ಕರ್ನಾಟಕ ವಾರ್ತೆ): ಜಿಲ್ಲೆ ಸತತ ಬರಗಾಲದಿಂದ ಸಂಕಸ್ಟಕ್ಕೆ ತುತ್ತಾಗಿ ರೈತರು ಕೃಷಿಯ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡಿದ್ದರು. ಆದರೆ ಜಿಲ್ಲೆಯಲ್ಲಿ ಈ ಬಾರಿ ಸುರಿದ ಹಿಂಗಾರುಮಳೆ ರೈತರ ಮೊಗದಲ್ಲಿ ಸಂತಸ ತಂದಿದೆ. ಜಿಲ್ಲೆಯ ರೈತರಿಗೆ ಕೃಷಿ ಇಲಾಖೆ ಹಲವಾರು ಸೌಲಭ್ಯಗಳನ್ನ ನೀಡುತ್ತಿದ್ದು, ಕೃಷಿಕರು ಹಾಗೂ ರೈತರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗಲೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ.

ಕೃಷಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆ  ಕೃಷಿ ಅಭಿಯಾನದ ಮೂಲಕ ರೈತರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಿಳಿಸುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳ ಯೋಜನೆಗಳ ಸೌಲಭ್ಯಗಳ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕಿದೆ. 

ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳಲ್ಲಿ ಪ್ರಮಾಣಿತ/ಗುಣಮಟ್ಟದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮವೂ ಒಂದಾಗಿದ್ದು ಈ ಕಾರ್ಯಕ್ರಮದ ಉದ್ದೇಶ ಪ್ರಮಾಣಿತ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ರೈತರಿಗೆ ಸಕಾಲದಲ್ಲಿ ಒದಗಿಸುವುದಾಗಿದೆ.
     ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಎಲ್ಲಾ ವರ್ಗದ ರೈತರಿಗೆ ಮುಖ್ಯ ಬೆಳೆಗಳ ಹೈಬ್ರಿಡ್, ಅಧಿಕ ಇಳುವರಿ ತಳಿಗಳು ಮತ್ತು ತಳಿಗಳ ಉತ್ತಮ ಗುಣಮಟ್ಟದ ಪ್ರಮಾಣಿತ ಹಾಗೂ ನಿಜ ಚೀಟಿ ಬಿತ್ತನೆ ಬೀಜಗಳನ್ನು ಮುಂಗಾರು, ಹಿಂಗಾರು/ಬೇಸಿಗೆ ಹಂಗಾಮುಗಳಲ್ಲಿ ರಿಯಾಯಿತಿ ದರದಲ್ಲಿ ಸಕಾಲದಲ್ಲಿ ರೈತರಿಗೆ ಒದಗಿಸಿ ಅಧಿಕ ಇಳುವರಿ ಪಡೆಯಲು ನೆರವಾಗುವುದು.
        ಮುಂಗಾರು ಹಂಗಾಮಿನಲ್ಲಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು “ಬೀಜಗಳ ಪೂರೈಕೆ ಹಾಗೂ ಇತರೆ ಹೂಡುವಳಿ” ಯೋಜನೆಯಡಿ ವಿತರಿಸಿದೆ. ಸಾಮಾನ್ಯ ರೈತರಿಗೆ ಶೇ.50 ಹಾಗೂ ಪ.ಜಾತಿ ಪ.ಪಂಗಡದ ರೈತರಿಗೆ ಶೇ.75 ರ ರೀಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಿಸಲಾಗಿದೆ.
ಸಸ್ಯ ಕಾರ್ಯಕ್ರಮ:
******** ಈ ಕಾರ್ಯಕ್ರಮವು ಜಿಲ್ಲೆಯ ವಿವಿಧ ಕೃಷಿ ವಲಯಗಳಲ್ಲಿ ಬಾಧಿಸುವ ಕೀಟ/ರೋಗ/ಕಳೆಗಳ ನಿರ್ವಹಣೆಗೆ ತುರ್ತು ಸಸ್ಯ ಸಂರಕ್ಷಣಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಸ್ಯ ಸಂರಕ್ಷಣಾ ಔಷಧಿ/ ಉಪಕರಣಗಳು, ಕೀಟನಾಶಕಗಳು, ಜೈವಿಕ ಪೀಡೆನಾಶಕಗಳು ಮುಂತಾದವುಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.
ಸಸ್ಯ ಸಂರಕ್ಷಣಾ ಪೀಡೆನಾಶಕಗಳ ವಿತರಣೆ ಶೇ.50 ರ ರೀಯಾಯಿತಿ ದರದಲ್ಲಿ ಪ್ರತಿ ಹೆಕ್ಟೇರಿಗೆ ರೂ.500 ಮೀರದಂತೆ ಪ್ರತಿ ರೈತರಿಗೆ ಪ್ರತಿ ಹಂಗಾಮಿಗೆ ಗರಿಷ್ಟ 2 ಹೆಕ್ಟೇರಿಗೆ ಕೀಟನಾಶಕಗಳು, ಶಿಲೀಂದ್ರ ನಾಶಕಗಳು, ಕಳೆ ನಾಶಕಗಳು, ಸಸ್ಯ ಮೂಲ ಕೀಟನಾಶಕಗಳು, ಮತ್ತು ಜೈವಿಕ ಪೀಡೆನಾಶಕಗಳು/ ಜೈವಿಕ ನಿಯಂತ್ರಣಕಾರಕಗಳು ಮುಂತಾದವುಗಳ ವಿತರಣೆ ಮಾಡಲಾಗುವುದು. ಶೇ.50ರ ರೀಯಾಯಿತಿ ದರದಲ್ಲಿ ಪ್ರತಿಯೊಂದು ಉಪಕರಣಕ್ಕೆ ಗರಿಷ್ಟ ರೂ.800 ಮೀರದಂತೆ ಸಸ್ಯ ಸಂರಕ್ಷಣಾ ಉಪಕರಣಗಳ ವಿತರಣೆ ಮಾಡಲಾಗುವುದು.
      2017-18 ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಜೈವಿಕ ಪೀಡೆನಾಶಕ/ ಜೈವಿಕ ನಿಯಂತ್ರಣಕಾರಕಗಳ ವಿತರಣೆ ಶೇ.50 ರ ಸಹಾಯಧನದಲ್ಲಿ ರೂ.500 ಪ್ರತಿ ಹೆ.ಗೆ ಮೀರದಂತೆ ಕೊಪ್ಪಳ ಜಿಲ್ಲೆಯಾದ್ಯಂತ ಒಟ್ಟು ಭೌತಿಕ 3750, ಆರ್ಥಿಕ 75 ಲಕ್ಷ ರೂ ನಿಗದಿ ಪಡಿಸಲಾಗಿದೆ.  ಸುಧಾರಿತ ಧಾನ್ಯ ಸಂಗ್ರಹಣಾ ಪೆಟ್ಟಿಗೆಗಳ ವಿತರಣೆ ಶೇ.50 ರ ಸಹಾಯಧನದಲ್ಲಿ ರೂ.750 ಮೀರದಂತೆ (106) ಒಟ್ಟು ಬೌತಿಕ 133 ಆರ್ಥಿಕ 10 ಲಕ್ಷ ರೂ ನಿಗದಿಪಡಿಸಿದೆ.
ಸಸ್ಯ ಸಂರಕ್ಷಣೆ(ಕೀಟನಾಶಕ ನಿಯಂತ್ರಣ ಪ್ರಯೋಗ ಶಾಲೆ)
1.    ಜೈವಿಕ ಪೀಡೆನಾಶಕ ಮತ್ತು ಜೈವಿಕ ನಿಯಂತ್ರಣಕಾರಕಗಳ ವಿತರಣೆಯಲ್ಲಿ ಮುಖ್ಯ ಬೆಳೆಗಳಿಗೆ ಬಾಧಿಸುವ ಕೀಟ/ರೋಗಗಳ ನಿರ್ವಹಣೆಗೆ ರಾಸಾಯನಿಕ ಪೀಡೆನಾಶಕಗಳನ್ನು ಉತ್ತೇಜಿಸುವುದಕ್ಕಾಗಿ ಶೇ.50ರ ರೀಯಾಯಿತಿಯಲ್ಲಿ ಪ್ರತಿ ಹೆಕ್ಟೇರಿಗೆ ರೂ.500 ಮೀರದಂತೆ ಪ್ರತಿ ರೈತರಿಗೆ ಪ್ರತಿ ಹಂಗಾಮಿಗೆ ಗರಿಷ್ಠ 2 ಹೆಕ್ಟೇರಿಗೆ ಸೀಮಿತಗೊಳಿಸಿ ವಿತರಿಸಲು ಕ್ರಮ ವಹಿಸಲಾಗಿದೆ.
2.    ವೈಜ್ಞಾನಿಕ ಧಾನ್ಯ ಸಂಗ್ರಹಣೆಗಾಗಿ ಸುಧಾರಿತ ಧಾನ್ಯ ಸಂಗ್ರಹಣಾ ಪೆಟ್ಟಿಗೆ ವಿತರಣೆಯಲ್ಲಿ ಧಾನ್ಯ ಸಂಗ್ರಗಣೆಯಲ್ಲಿ ದವಸ ಧಾನ್ಯಗಳಿಗೆ ಕಾಡುವ ಇಲಿ, ಹೆಗ್ಗಣ, ಕೀಟ ಮತ್ತು ರೋಗ ಬಾಧೆಗಳಿಂದ ಆಗುವ ನಷ್ಟವನ್ನು ಸಂಗ್ರಹಣಾ ಪೆಟ್ಟಿಗೆಗಳು ಪ್ರಯೋಜನಕಾರಿಯಾಗಿವೆ. ರೈತರಿಗೆ ಅರ್ಧ ಕ್ವಿಂಟಾಲಿನಿಂದ ಹತ್ತು ಕ್ವಿಂಟಾಲ್ ಸಾಮಥ್ರ್ಯದವರೆಗಿನ ಧಾನ್ಯ ಸಂಗ್ರಹಣಾ ಪೆಟ್ಟಿಗೆಯನ್ನು ಶೇ.50ರ ರಿಯಾಯಿತಿಯಲ್ಲಿ ಪ್ರತಿ ಪೆಟ್ಟಿಗೆಗೆ ಗರಿಷ್ಟ ರೂ.750 ಮೀರದಂತೆ ವಿತರಣೆ. ಪ್ರತಿ ಫಲಾನುಭವಿಗೆ ಒಂದು ಪೆಟ್ಟಿಗೆ ಸೀಮಿತಗೊಳಿಸಲಾಗಿದೆ.
       ಕೃಷಿ ಇಲಾಖೆಯಿಂದ ಆಯೋಜಿಸಲಾಗುವ ಈ ಎಲ್ಲಾ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಸಿಕೊಳ್ಳಲು ಯುವ ರೈತರು ಮುಂದಾಗಿ ಅನಕ್ಷರಸ್ಥ ರೈತರುಗಳಿಗೆ ಈ ಎಲ್ಲಾ ಸೌಲಭ್ಯಗಳ ಮನವರಿಕೆ ಮಾಡಿಕೊಟ್ಟು ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿ ತೋರಿಸಬಹುದು. ಯುವಕರು,  ಕೃಷಿಕರು ಹಾಗೂ ರೈತರು ಸರ್ಕಾರದ ಈ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಹಾಗೂ ಪ್ರಯೋಜನಕಾರಿಯಾಗಿ ಪಡೆದು ಅಭಿವೃದ್ಧಿ ಹೊಂದುವಂತೆ ಮಾಡುವುದೇ ಕೃಷಿ ಇಲಾಖೆಯ ಆಶಯವಾಗಿದೆ.

                                                                     -ನಾಗರಾಜ ಬೆಲ್ಲದ
                                                                          ಕೊಪ್ಪಳ

ಪಶುಭಾಗ್ಯ ಯೋಜನೆ : ರೈತರ ಆದಾಯೋತ್ಪನ್ನ ಕಸುಬಿಗೆ ಉತ್ತೇಜನಕೊಪ್ಪಳ: ಡಿ.18 (ಕರ್ನಾಟಕ ವಾರ್ತೆ) : ಕೃಷಿ ಚಟುವಟಿಕೆಯನ್ನು ನಂಬಿಕೊಂಡು ಬದುಕು ಸಾಗಿಸುತ್ತಿರುವ ರೈತರಿಗೆ ಸರ್ಕಾರ ಜಾರಿಗೊಳಿಸಿರುವ ಪಶುಭಾಗ್ಯ ಯೋಜನೆ ರೈತರ ಆರ್ಥಿಕ ಸ್ವಾವಲಂಬನೆಗೆ ಭರವಸೆಯ ಆಶಾಕಿರಣ ಮೂಡಿಸಿದಂತಾಗಿದೆ.

      ಪಶುಭಾಗ್ಯ ಯೋಜನೆಯಡಿ ಹಲವಾರು ಸೌಲಭ್ಯಗಳು ಲಭ್ಯವಿದ್ದು, ವಿವಿಧ ಘಟಕಗಳಲ್ಲಿ ರೈತರಿಗೆ ಯೋಜನೆಯನ್ನು ತಲುಪಿಸುವುದಾಗಿದೆ. 2015-16 ರಲ್ಲಿ ಜಾರಿಗೆ ಬಂದ ಈ ಯೋಜನೆಗೆ ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ 1.20 ಲಕ್ಷದ ವರೆಗೆ ಸಾಲ ಪಡೆದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ, ಕೋಳಿ, ಘಟಕಗಳನ್ನು ಸ್ಥಾಪಿಸಿ, ಗ್ರಾಮೀಣ ಭಾಗದ ಜನರ ಪ್ರಮುಖ ಆದಾಯೋತ್ಪನ್ನ ಕಸುಬಾಗಿರುವ ಪಶುಸಂಗೋಪನೆ ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶ.
ಪಶುಭಾಗ್ಯ ಯೋಜನೆಗೆ ಒಳಪಡುವ ವಿವಿಧ ಘಟಕಗಳಾದ, ಮಿಶ್ರತಳಿ ಹಸು, ಎಮ್ಮೆಗಳ ಹೈನುಗಾರಿಕೆ ಗಟಕ. ಕುರಿ, ಮೇಕೆ ಘಟಕ. ಕುಕ್ಕಟ ಘಟಕ. ಮಹಿಳೆಯರಿಗಾಗಿ ಹೈನುಗಾರಿಕೆ ಅಮೃತ ಯೋಜನೆ. ಕುರಿ, ಮೇಕೆ ಸಾಕಾಣಿಕೆ ಘಟಕಗಳ ಮೂಲಕ  ಫಲಾನುಭವಿಗಳಿಗೆ ಯೋಜನೆಯನ್ನು ಹಂಚಿಕೆ ಮಾಡಲಾಗುತ್ತದೆ. ಪ.ಜಾ. ಮತ್ತು ಪ.ಪಂ. ದವರಿಗೆ ಶೇ.50 ಹಾಗೂ ಇತರರಿಗೆ ಶೇ.25 ರಷ್ಟು ಸಹಾಯಧನ ಒದಗಿಸಲಾಗುತ್ತದೆ. ಅಮೃತ ಯೋಜನೆಯಡಿ ವಿಧವೆಯರು, ದೇವದಾಸಿಯರು, ಮತ್ತು ನಿರ್ಗತಿಕ ಮಹಿಳೆಯರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುವುದು.
ಜಿಲ್ಲೆಯಲ್ಲಿ 2017-18 ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆ ಅಡಿಯಲ್ಲಿರುವ ಎಲ್ಲಾ ಘಟಕಗಳನ್ನು ಒಗ್ಗೂಡಿಸಿ 516 ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಒದಗಿಸಲು ಗುರಿ ನಿಗದಿಪಡಿಸಿದ್ದು ಇದಕ್ಕಾಗಿ 1. 01 ಕೋಟಿ ರೂ.  ಅನುದಾನ ಒದಗಿಸಲಾಗಿದೆ.  ಈಗಾಗಲೆ ಶೇ. 75 ಕ್ಕೂ ಹೆಚ್ಚು ಸಾಧನೆಯನ್ನು ಇಲಾಖೆ ಮಾಡಿದೆ. 
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ:
***************** ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ, ಈ ಯೋಜನೆಗಳ ಮೂಲಕ ದೊರೆಯುವ ಸಹಾಯಧನ ಮತ್ತು ಪೂರಕ ಬ್ಯಾಂಕ್ ಸಾಲದ ಮೂಲಕ ಪಶುಪಾಲನಾ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲರನ್ನಾಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
    ವಿಶೇಷ ಘಟಕ ಯೋಜನೆಯಲ್ಲಿ ಹೈನುಗಾರಿಕೆಯಡಿ  ಮಿಶ್ರತಳಿ ಹಸು ಘಟಕ, ಸುಧಾರಿತ ಎಮ್ಮೆ ಘಟಕ ಪಡೆಯಬಹುದು. ರೂ.1.20 ಲಕ್ಷಗಳಲ್ಲಿ ಶೇ.50 ರಷ್ಟು ಸಹಾಯಧನ ರೂ.60 ಸಾವಿರ ಜೊತೆಗೆ ಪೂರಕ ಬ್ಯಾಂಕ್ ಸಾಲ ರೂ.60 ಸಾವಿರ ವನ್ನು ನಿಗದಿ ಪಡಿಸಿದ ರಾಷ್ಟ್ರೀಕೃತ ಸಹಕಾರ ಬ್ಯಾಂಕ್ ಮೂಲಕ ಒದಗಿಸುವುದು. ಕುರಿ, ಮೇಕೆ ಘಟಕ ವೆಚ್ಚ 67400 ರೂ. ಅನುಷ್ಠಾನದಲ್ಲಿ 10 ಕುರಿ, 1 ಟಗರು, ಅಥವಾ 10 ಮೇಕೆ, 1 ಹೋತ ಖರೀದಿಸಲು ಅವಕಾಶವಿದೆ.  ಶೇ.50 ರಷ್ಟು ಸಹಾಯಧನ, ಶೇ. 50 ರಷ್ಟು ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ಬಿಡುಗಡೆಯಾಗುತ್ತದೆ.  ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗಳನ್ನು ಒಗ್ಗೂಡಿಸಿ ಒಟ್ಟು 24 ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಗುರಿ ಇದ್ದು  ಈವರೆಗೆ ಶೇ.75 ರಷ್ಟು ಸಾಧನೆಯಾಗಿದೆ.
ಕುರಿ, ಮೇಕೆ ಸತ್ತರೆ ಪರಿಹಾರ ಧನ :
************* ಈ ಯೋಜನೆಯು 2013 ರಿಂದಲೂ ಜಾರಿಯಲ್ಲಿದ್ದು, ಈ ವಿಮೆಗೆ 6 ತಿಂಗಳ ಮೇಲ್ಪಟ್ಟ ಕುರಿ, ಮೇಕೆಗಳು ಆಕಸ್ಮಿಕ, ನಿರ್ದಿಷ್ಟ ಪ್ರಕರಣಗಳಲ್ಲಿ ಮರಣ ಹೊಂದಿದಾಗ ಕುರಿಗಾರರಿಗೆ ಆರ್ಥಿಕ ನಷ್ಟ ಭರಿಸಲು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಪರಿಹಾರವಾಗಿ ಪ್ರತಿ ಕುರಿ, ಮೇಕೆಗೆ ರೂ.5000, ಪರಿಹಾರ ಧನವನ್ನು ಒದಗಿಸುವುದಾಗಿದೆ.    ಜಿಲ್ಲೆಯಲ್ಲಿ 2015 ರಿಂದ 2017-18 ನೇ ಸಾಲಿನವರೆಗೆ ಮರಣಿಸಿದ ಒಟ್ಟು 4537 ಕುರಿ, ಮೇಕೆಗಳ ಪರಿಹಾರಕ್ಕಾಗಿ ರೂ.2. 26 ಕೋಟಿ ಮೊತ್ತದ ಪ್ರಸ್ತಾವನೆಯನ್ನು ಇಲಾಖೆ ಕುರಿ ಮಂಡಳಿಗೆ ಸಲ್ಲಿಸಿದೆ.   ಇದುವರೆಗೂ 51.25 ಲಕ್ಷ ರೂ. ಬಿಡುಗಡೆಯಾಗಿದ್ದು, ಆಯಾ ಕುರಿ, ಮೇಕೆ, ಮಾಲಿಕರ ಬ್ಯಾಂಕ್ ಖಾತೆಗಳಿಗೆ ಆರ್.ಟಿ.ಜಿ.ಎಸ್ ಮುಖಾಂತರ ಜಮಾ ಮಾಡಿದೆ.
ಆಕಸ್ಮಿಕವಾಗಿ ಮರಣಿಸಿದ ದನ, ಎಮ್ಮೆಗಳಿಗೆ ಪರಿಹಾರ ಧನ :
************ ಈ ಯೋಜನೆಯಲ್ಲಿ ಆಕಸ್ಮಿಕವಾಗಿ ಮರಣಿಸಿದ ದನ, ಎಮ್ಮೆಗಳಿಗೆ ಇಲಾಖೆಯಿಂದ ಪ್ರತಿ ರಾಸುವಿಗೆ ರೂ.10 ಸಾವಿರ ಪರಿಹಾರ ಧನವನ್ನು ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ 2017-18 ನೇ ಸಾಲಿನಲ್ಲಿ 19 ರಾಸುಗಳು ಸಾವನ್ನಪ್ಪಿದ್ದು, ಪರಿಹಾರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ.
ಮೇವಿನ ಕಿರು ಪೊಟ್ಟಣಗಳ ವಿತರಣೆ :
********* ಆಂತರಿಕ ಮೇವಿನ ಲಭ್ಯತೆಯನ್ನು ಹೆಚ್ಚಿಸುವ ಹಿತದೃಷ್ಟಿಯಿಂದ 2017-18ನೇ ಸಾಲಿನಲ್ಲಿ 6500 ಆಸಕ್ತ ರೈತರಿಗೆ 8434 ಮೇವಿನ ಕಿರುಪೊಟ್ಟಣಗಳನ್ನು ಇಲಾಖೆ ವಿತರಿಸಿದೆ.
ಗಿರಿರಾಜ ಕೋಳಿ ಮರಿಗಳ ವಿತರಣೆ :
************ಕೇಂದ್ರ ಪುರಸ್ಕøತ ರಾಷ್ಟ್ರೀಯ ಜಾನುವಾರು ಅಭಿಯಾನದಡಿ ಗ್ರಾಮೀಣ ಹಿತ್ತಲ ಕೋಳಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ರಾಜ್ಯದಲ್ಲಿ ಕೊಪ್ಪಳ, ಬಿದರ್, ಹಾಗೂ ಹಾಸನ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯು ಮೂರು ವರ್ಷದ್ದಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಮೊದಲ ವರ್ಷ-10, ಎರಡನೇ ವರ್ಷ-15 ಹಾಗೂ ಮೂರನೇ ವರ್ಷ-20 ಗಿರಿರಾಜ ಕೋಳಿ ಮರಿಗಳನ್ನು ವಿತರಿಸುವುದರ ಜೊತೆಗೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕಾಗಿ ಧನ ಸಹಾಯ ನೀಡಲಾಗುವುದು.  ಪ್ರಸಕ್ತ  ಸಾಲಿನಲ್ಲಿ ಜಿಲ್ಲೆಯಲ್ಲಿ ಮೊದಲನೆ ವರ್ಷಕ್ಕೆ  ಪ್ರತಿ ಫಲಾನುಭವಿಗೆ 10 ಕೋಳಿಮರಿಗಳಂತೆ ಒಟ್ಟು 380 ಫಲಾನುಭವಿಗಳಿಗೆ 3800 ಗಿರಿರಾಜ ಕೋಳಿ ಮರಿಗಳನ್ನು ವಿತರಿಸಿದೆ ಎಂದು ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ತಿಳಿಸಿದೆ.

                                                                   -ಬಸವರಾಜ ಬೋದೂರು
                                                                           ಕೊಪ್ಪಳ.

ವಿಮಾ ಮೊತ್ತ ಪಾವತಿಸಲು ಕಂಪನಿಗೆ ಗ್ರಾಹಕರ ವೇದಿಕೆ ಆದೇಶ


ಕೊಪ್ಪಳ ಡಿ. 18 (ಕರ್ನಾಟಕ ವಾರ್ತೆ): ಜೀವ ವಿಮಾ ಮೊತ್ತವನ್ನು ಪಾವತಿಸದೆ, ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿ, ವಿಮಾ ಕಂಪನಿಯು ಸೇವಾ ನ್ಯೂನತೆ ಕೈಗೊಂಡಿದ್ದು, ಕೂಡಲೆ ಜೀವ ವಿಮಾ ಮೊತ್ತವನ್ನು ನಾಮ ನಿರ್ದೇಶಿತ ಅಭ್ಯರ್ಥಿಗೆ ಪಾವತಿಸುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.
     ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಯರಡೋಣಾದ ಸುಶೀಲಾಬಾಯಿ ಗಂಡ ಪಂಪನಗೌಡ ಅವರು  2015 ರ ಸೆ. 22 ರಂದು ಹೆಚ್‍ಡಿಎಫ್‍ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಸುರೆನ್ಸ್ ಕಂಪನಿ ಲಿ. ಮುಂಬೈ ಇವರಲ್ಲಿ 10. 10 ಲಕ್ಷ ರೂ. ಗಳ ಅರ್ಧ ವಾರ್ಷಿಕ ಪ್ರೀಮಿಯಂ 25 ಸಾವಿರ ರೂ. ಗಳಂತೆ ಪಾವತಿಸುವ ಪಾಲಿಸಿಯನ್ನು ಪಡೆದುಕೊಂಡಿದ್ದರು.  ಆದರೆ ಪಾಲಸಿದಾರರಾದ ಸುಶೀಲಾಬಾಯಿ ಗಂಡ ಪಂಪಗೌಡ ಅವರು 2015 ರ ನವೆಂಬರ್ 18 ರಂದು ಹೃದಯಘಾತವಾಗಿ ಮೃತಪಟ್ಟರು. ಪಾಲಿಸಿದಾರರಾಗಿದ್ದ ಸುಶೀಲಾಬಾಯಿಯವರ ಮಗ ಅಮರೇಗೌಡ ಅವರು ಪಾಲಿಸಿಯಲ್ಲಿ ನಾಮಿನಿ ಅಭ್ಯರ್ಥಿಯಾಗಿದ್ದರಿಂದ, ಪಾಲಿಸಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಮತ್ತು ವಾರಸುದಾರಿಕೆ ಪತ್ರದೊಂದಿಗೆ ವಿಮಾ ಕಂಪನಿಗೆ ತಮ್ಮ ಕ್ಲೇಮ್ ಸಲ್ಲಿಸಿ, ತನ್ನ ತಾಯಿಯ ಜೀವ ವಿಮಾ ಮೊತ್ತವನ್ನು ಪಾವತಿಸುವಂತೆ ವಿನಂತಿಸಿಕೊಂಡಿದ್ದರು.  ಆದರೆ ವಿಮಾ ಕಂಪನಿಯು, ಪಾಲಿಸಿದಾರರು, ಪಾಲಿಸಿ ಪಡೆಯುವ ಸಂದರ್ಭದಲ್ಲಿ ಹೊಂದಿರುವ ಇತರೆ ಪಾಲಿಸಿಗಳ ಬಗ್ಗೆ ತಿಳಿಸದೆ, ವಿಷಯ ಮುಚ್ಚಿಟ್ಟು ಪಾಲಿಸಿ ಪಡೆದಿದ್ದು, ವಿಮಾ ಮೊತ್ತ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತು.  ಈ ಕುರಿತಂತೆ ಅಮರೇಗೌಡ ಅವರು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋದರು.  ಗ್ರಾಹಕರ ವೇದಿಕೆಗೆ ಹಾಜರಾದ ಕಂಪನಿಯು, ಪಾಲಿಸಿದಾರರು ಪ್ರಪೋಸಲ್ ಫಾರಂನಲ್ಲಿ ಕೇಳಿದ ಕೆಲವು ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿದ್ದರು, ಮತ್ತು ಪಾಲಸಿ ಪಡೆದ ಕೇವಲ 57 ದಿವಸಗಳಲ್ಲಿ ಮೃತಳಾಗಿದ್ದರಿಂದಾಗಿ ವಿಮಾ ಕಂಪನಿಯು ವಿವರವಾದ ತನಿಖೆಯನ್ನು ಕೈಗೊಂಡಿದ್ದು, ಪಾಲಸಿದಾರರು ತೀರಿಕೊಂಡ ಸಮಯದಲ್ಲಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು ಮತ್ತು ಅದಕ್ಕಾಗಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಬೆಂಗಳೂರು, ಕಸ್ತೂರಬಾ ಆಸ್ಪತ್ರೆ, ಮಣಿಪಾಲ ಮತ್ತು ಆರ್.ಬಿ ಪಾಟೀಲ್ ಕ್ಯಾನ್ಸರ್ ಆಸ್ಪತ್ರೆ ಹಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.  ಇದರಿಂದಾಗಿ ಅವರು 2015ನೇ ಇಸ್ವಿಯ ಮಧ್ಯಬಾಗದಲ್ಲಿ ತೀರಿಕೊಂಡಿದ್ದಾರೆ.  ಆದರೆ ಪಾಲಸಿದಾರರು 2015 ರ ನವೆಂಬರ್ 18 ರಂದು ಮೃತರಾಗಿದ್ದಾರೆ ಎಂದು ಸುಳ್ಳು ಪ್ರಮಾಣ ಪತ್ರವನ್ನು ಹಾಜರುಪಡಿಸಿದ್ದಾರೆ.  ಮತ್ತು ಸುಶೀಲಾಬಾಯಿಯು ತಾನು ಹೊಂದಿರುವ ಬೇರೆ ಜೀವ ವಿಮಾ ಪಾಲಸಿಗಳ ಬಗ್ಗೆಯಾಗಲೀ ಅಥವಾ ತಾನು ಬಳಲುತ್ತಿರುವ ರೋಗಗಳ ಬಗ್ಗೆ ಏನನ್ನು ಹೇಳದೆ ಪಾಲಸಿಯನ್ನು ಪಡೆದಿರುವುದರಿಂದ ಸೆಕ್ಷನ್ 45 ಆಫ್ ಇನ್ಸುರೆನ್ಸ್ ಆಕ್ಟ್ 1938ರ ಪ್ರಕಾರ ಪಾಲಸಿಯ ಹಣ ಕೊಡಲು ಸಾಧ್ಯವಿಲ್ಲವೆಂದು ವಾದಿಸಿದರು. 
    ಕೊಪ್ಪಳ ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಏಕತಾ ಹೆಚ್.ಡಿ ಹಾಗೂ ಮಹಿಳಾ ಸದಸ್ಯರಾದ ಸುಜಾತಾ ಅಕ್ಕಸಾಲಿ ವಾದ ಮತ್ತು ಪ್ರತಿ ವಾದಗಳನ್ನು ಆಲಿಸಿ, ಪಾಲಿಸಿದಾರರು ಈ ಮೊದಲೇ ಹೊಂದಿರುವ ಪಾಲಿಸಿಗಳ ಬಗ್ಗೆಯಾಗಲೀ ಅಥವಾ ಅವರು ಕ್ಯಾನ್ಸರ್‍ನಿಂದ ಬಳಲುತ್ತಿದ್ದರು ಎನ್ನುವುದರ ಬಗ್ಗೆ ಯಾವುದೇ ಸಾಕ್ಷಾಧಾರಗಳನ್ನು ಜೀವ ವಿಮಾ ಕಂಪನಿಯವರು, ಹಾಜರುಪಡಿಸದೇ ಕೇವಲ ಪಾಲಸಿದಾರರು ತಮ್ಮ ಅನಾರೋಗ್ಯ ವಿವರ ಮುಚ್ಚಿಟ್ಟಿದ್ದರೆನ್ನುವ ಬಗ್ಗೆ ಯಾವುದೇ ಪುರಾವೆಯನ್ನು ಹಾಜರುಪಡಿಸದೇ ಪಾಲಸಿಯನ್ನು ತೀರಸ್ಕರಿಸಿರುವುದು ಸರಿಯಲ್ಲವೆಂದು ನಿರ್ಧರಿಸಿತು.  ಹೆಚ್.ಡಿ.ಎಫ್.ಸಿ ಸ್ಟ್ಯಾಂಡಡ್ ಲೈಫ್ ಇನ್ಸುರೆನ್ಸ್ ಕಂಪನಿ ಲಿ. ರಿಂದ ನಿರ್ಲಕ್ಯತನ ಹಾಗೂ ಸೇವಾ ನ್ಯೂನತೆ ಉಂಟಾಗಿದೆಯೆಂದು ತೀರ್ಮಾನಿಸಿ,  ಪಾಲಿಸಿದಾರರ ಮಗನಾದ ಅಮರೇಗೌಡ ಅವರಿಗೆ, ಪಾಲಸಿ ಮೊತ್ತ ರೂ. 10,10,224, ಮಾನಸಿಕ ವ್ಯಥೆಗೆ ರೂ. 10,000 ಮತ್ತು ದೂರಿನ ಖರ್ಚು ರೂ. 2500 ಗಳನ್ನು ಒಂದು ತಿಂಗಳ ಒಳಗಾಗಿ ಪಾವತಿಸುವಂತೆ, ಒಂದು ವೇಳೆ ಒಂದು ತಿಂಗಳೊಳಗಾಗಿ ಪಾವತಿಸಲು ವಿಫಲರಾದರೆ, ವಿಮಾ ಕಂಪನಿಯವರು ಈ ಹಣದ ಮೊತ್ತದ ಮೇಲೆ ದೂರು ದಾಖಲಾದ ದಿನದಿಂದ 9% ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿದ್ದಾರೆ  ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆಯ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 16 December 2017

ಗವಿಸಿದ್ದೇಶ್ವರ ಜಾತ್ರೆ ವಿಜೃಂಭಣೆಯಿಂದ ಆಚರಿಸಲು ಸಹಕಾರ - ಡಿಸಿ ಎಂ. ಕನಗವಲ್ಲಿ


ಕೊಪ್ಪಳ, ಡಿ. 16 (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ಜ.03 ರಿಂದ ಜರುಗಲಿರುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಹಾಗೂ ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಗವಿಸಿದ್ದೇಶ್ವರ ಜಾತ್ರೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳದಲ್ಲಿ ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರೆ ಇದೀಗ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಉಳಿದಿಲ್ಲ.  ಸಾಮಾಜಿಕ ಜಾಗೃತಿ ಮೂಡಿಸುವಂತಹ ಅನೇಕ ಕಾರ್ಯಕ್ರಮಗಳು ಜಾತ್ರೆಯ ಅಂಗವಾಗಿ ಏರ್ಪಡಿಸಲಾಗುತ್ತಿರುವುದರಿಂದ, ಜಾತ್ರೆಯ ಆಚರಣೆ ಇನ್ನಷ್ಟು ಅರ್ಥಪೂರ್ಣವಾಗುತ್ತಿದೆ.  ಜಾತ್ರೆಯ ಕಾರ್ಯಕ್ರಮಗಳು ಇಡೀ ರಾಜ್ಯಕ್ಕೆ ಸಂಭ್ರಮ ತರುವಂತಾಗಬೇಕು ಜೊತೆಗೆ ಧಾರ್ಮಿಕ ಉತ್ಸವವೂ ಆಗಬೇಕು.  ರಾಜ್ಯದ ವಿವಿಧ ಭಾಗಗಳಿಂದ ಸುಮಾರು 5 ಲಕ್ಷ ಭಕ್ತಾದಿಗಳು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ.  ಜ. 03 ರಂದು ಮಹಾರಥೋತ್ಸವ ನಡೆಯಲಿದ್ದು, ಜಾತ್ರೆ ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ಜರುಗುವಂತೆ ಜಿಲ್ಲಾಡಳಿತದಿಂದ ಸಕಲ ರೀತಿಯ ಸಹಕಾರ ನೀಡಲಾಗುವುದು.   ರಥೋತ್ಸವದ ದಿನದಂದು ಟ್ರಾಫಿಕ್ ಜಾಮ್ ಆಗದಂತೆ ಎಚ್ಚರ ವಹಿಸಲು ಈಗಾಗಲೆ ಪೊಲೀಸ್ ಇಲಾಖೆ ಯೋಜನೆಯನ್ನು ರೂಪಿಸಿದೆ.  ಬಸ್‍ನಿಲ್ದಾಣ ಹಾಗೂ ನಗರದ ವಿವಿಧೆಡೆಗಳಿಂದ ಗವಿಮಠ ಬಳಿಗೆ ಸಿಟಿ ಬಸ್ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸಲು ಈಕರಸಾ ಸಂಸ್ಥೆಗೆ ಸೂಚನೆ ನೀಡಲಾಗುವುದು.  ಒಟ್ಟಾರೆ ಭಕ್ತಾದಿಗಳು ಶ್ರೀ ಗವಿಸಿದ್ದೇಶ್ವರ ಜಾತ್ರೆಯನ್ನು ಸಂತೋಷದಿಂದ ಸಂಭ್ರಮಿಸಿ, ಸುರಕ್ಷಿತವಾಗಿ ಮನೆಗೆ ಮರಳುವಂತಾಗಬೇಕು ಎಂದರು.  ಈ ಬಾರಿಯ ಜಾತ್ರೆ ಅಂಗವಾಗಿ, ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಯೂನಿಸೆಫ್‍ನ ಹರೀಶ್ ಜೋಗಿ ಅವರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪ್ರಸಕ್ತ ಜೀವನ ಸ್ಥಿತಿಯಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಅತಿ ಹೆಚ್ಚು ಒತ್ತಡದಲ್ಲಿ ಬದುಕು ಸಾಗಿಸುವ ಸ್ಥಿತಿ ಇದೆ.  ಒತ್ತಡದ ಬದುಕನ್ನು ನಿರ್ವಹಿಸುವುದು ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ವಿಚಾರಸಂಕಿರಣದಂತಹ ವಿಶೇಷ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದರು.
ಸ್ವಚ್ಛತೆಗೆ ಆದ್ಯತೆ :
********* ಗವಿಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ನಗರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.  ಸಾರ್ವಜನಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯಬೇಕು.  ಮೂರು ದಿನಗಳ ಕಾಲವೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗದಂತೆ ಎಚ್ಚರಿಕೆ ವಹಿಸಬೇಕು.  ಬೀದಿ ದೀಪದ ವ್ಯವಸ್ಥೆ, ತುರ್ತು ಆರೋಗ್ಯ ಸೇವೆ ಒದಗಸಬೇಕು.  ಮುಂಜಾಗ್ರತೆಯ ಕ್ರಮವಾಗಿ ಗವಿಮಠದ ಬಳಿ ಅಗ್ನಿಶಾಮಕ ವಾಹನವನ್ನು ಸಿದ್ಧವಾಗಿರಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಲಿ :
***************** ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ದಾಸೋಹ ನಡೆಯುವ ಸ್ಥಳ, ಮಳಿಗೆಗಳ ಆವರಣ, ಪಾರ್ಕಿಂಗ್ ಸ್ಥಳ ಮುಂತಾದೆಡೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.  ಜಾತ್ರಾ ಅವಧಿಯಲ್ಲಿ ನಗರದ ರಸ್ತೆ ಹಾಗೂ ಗವಿಮಠ ಆವರಣ ಸ್ವಚ್ಛವಾಗಿರಸಲು, ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಪೊಲೀಸ್ ಬಂದೋಬಸ್ತ್ :
*********** ಸಭೆಯಲ್ಲಿ ಉಪಸ್ಥಿತರಿದ್ದ  ಡಿವೈಎಸ್‍ಪಿ ಸಂದಿಗವಾಡ ಅವರು ಮಾತನಾಡಿ, ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು.   ಪೊಲೀಸರು, ಗೃಹರಕ್ಷಕ ದಳ, ಪೊಲೀಸ್ ಅಧಿಕಾರಿಗಳನ್ನು ಜಾತ್ರೆಯ ಬಂದೋಬಸ್ತ್‍ಗೆ ನೇಮಿಸಲಾಗುವುದು.  ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಲಾರಿ, ಜೀಪ್, ಕಾರು ಮುಂತಾದ ವಾಹನಗಳ ಪಾರ್ಕಿಂಗ್ ಮಾಡಲು ಸ್ಥಳ ನಿಗದಿಪಡಿಸಲಾಗುವುದು.  ಜಾತ್ರೆ ಸಂದರ್ಭದಲ್ಲಿ ಜೇಬುಗಳ್ಳತನ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.  ಜಾತ್ರೆ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ತಡೆಗಟ್ಟಲು ವಾಹನ ಸಂಚಾರ ಮಾರ್ಗಗಳ ಬದಲಾವಣೆ ಮಾಡಲಾಗುವುದು ಎಂದರು. 
ಜಾಗೃತಿ ನಡಿಗೆ :
******** ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಡಿ. 30 ರಂದು ‘ಸಶಕ್ತ ಮನ- ಸಂತೃಪ್ತ ಜೀವನ’ ಘೋಷವಾಕ್ಯದೊಂದಿಗೆ ‘ನಮ್ಮ ನಡೆ ಒತ್ತಡ ರಹಿತ ಬದುಕಿನ ಕಡೆ’ ಎಂಬ ಆಶಯವನ್ನಿಟ್ಟುಕೊಂಡು, ಜನರಲ್ಲಿ ಜಾಗೃತಿ ಮೂಡಿಸಲು ಈ ಬಾರಿ ಗವಿಮಠ ನಿರ್ಧರಿಸಿದ್ದು, ಜಾಗೃತಿ ನಡಿಗೆ ಅಂದು ಬೆಳಿಗ್ಗೆ 8-30 ಗಂಟೆಗೆ ನಗರದ ಬನ್ನಿಕಟ್ಟೆ ಹತ್ತಿರದ ಗೌರಿಶಂಕರ ದೇವಸ್ಥಾನದಿಂದ ಆರಂಭಗೊಂಡು, ಅಶೋಕ ವೃತ್ತ, ಗಡಿಯಾರ ಕಂಬ ಮಾರ್ಗವಾಗಿ ಗವಿಮಠ ತಲುಪಲಿದೆ.  ನಡಿಗೆ ಜಾಥಾಕ್ಕೆ ನಗರದ ಶಾಲಾ ಕಾಲೇಜುಗಳು ಸಹಕಾರ ನೀಡಬೇಕಿದೆ ಎಂದು ಯೂನಿಸೆಫ್‍ನ ಹರೀಶ್ ಜೋಗಿ ಅವರು ಸಭೆಯಲ್ಲಿ ಮನವಿ ಮಾಡಿದರು.
ತೆಪ್ಪೋತ್ಸವ :
********* ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಾತ್ರಾ ಮಹೋತ್ಸವದ ಅಂಗವಾಗಿ ತೆಪ್ಪೋತ್ಸವವನ್ನು ಆಯೋಜಿಸಲಾಗಿದೆ.  ಡಿ. 31 ರಂದು ಸಂಜೆ 06 ಗಂಟೆಗೆ ಗವಿಮಠ ಬಳಿಯ ನವೀಕರಿಸಿದ ಗವಿಮಠ ಕೆರೆಯಲ್ಲಿ ತೆಪ್ಪೋತ್ಸವ ಏರ್ಪಡಿಸಲಾಗಿದೆ ಎಂದು ಗವಿಮಠದ ಪರವಾಗಿ ಆಗಮಿಸಿದ್ದ ಮಲ್ಲಿಕಾರ್ಜುನ ಸೋಮಲಾಪುರ ಅವರು ಹೇಳಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಪೌರಾಯುಕ್ತ ಪರಮೇಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಿ.ವೈ. ಬಂಡಿವಡ್ಡರ್,  ಗವಿಮಠದ ವತಿಯಿಂದ ಬಸವರಾಜ ಬಳ್ಳೊಳ್ಳಿ, ಶರಣು, ರಾಜೇಶ್ ಯಾವಗಲ್, ಪತ್ರಕರ್ತ ಸೋಮರಡ್ಡಿ ಅಳವಂಡಿ, ತಹಸಿಲ್ದಾರ್ ಗುರುಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು  ಭಾಗವಹಿಸಿದ್ದರು.

ಕನಕಗಿರಿ ಪಟ್ಟಣ ಪಂಚಾಯತ ವತಿಯಿಂದ ಪರಿಷ್ಕøತ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ ಡಿ. 16 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣ ಪಂಚಾಯತ ವತಿಯಿಂದ 2016-17ನೇ ಮತ್ತು ಪ್ರಸಕ್ತ ಸಾಲಿನ ಶೇ. 24.10% 7.25% & 3% ಯೋಜನೆಯ ಎಸ್.ಎಫ್.ಸಿ ಅನುಧಾನದ ಪರಿಷ್ಕøತ ಯೋಜನೆಗಳನ್ನು ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
2016-17 ಮತ್ತು ಪ್ರಸಕ್ತ ಸಾಲಿನ ಎಸ್.ಎಫ್.ಸಿ. ಅನುದಾನದ ಪರಿಷ್ಕøತ ಯೋಜನೆಗಳಲ್ಲಿ ಪ.ಜಾ. ಮತ್ತು ಪ.ಪಂ. ಜನಾಂಗದವರಿಗೆ/ ಇತರೆ ಬಡ ಜನಾಂಗದವರಿಗೆ/ ವಿಕಲಚೇತನರ ಕಲ್ಯಾಣಕ್ಕಾಗಿ ಮೀಸಲಿರಿಸಿದ ಶೇ 24.10,7.25&3% ಅನುದಾನದಲ್ಲಿ, ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಈ ಯೋಜನೆಗಳ ಲಾಭ ಪಡೆಯಲು ಕನಕಗಿರಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಾಡುವ ಆರ್ಥಿಕ ದುರ್ಬಲ ಹಾಗೂ ಕನಕಗಿರಿ ಪಟ್ಟಣದ ಕಾಯಂ ನಿವಾಸಿಗಳು ಪ.ಜಾ. & ಪ.ಪಂ. ಜನಾಂಗದವರಿಗೆ/ ಇತರೆ ಬಡ ಜನಾಂಗದವರಿಗೆ/ ವಿಕಲಚೇತನರಿಗೆ ಪರಿಷ್ಕøತ ಯೋಜನೆಗಳನ್ನು ನೀಡಲಾಗುತ್ತಿದೆ. 
ಅರ್ಜಿ ಸಲ್ಲಿಸಲಿಚ್ಛಿಸುವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಮತದಾರರ ಭಾವಚಿತ್ರವಿರುವ ಕಾರ್ಡ, ಆದಾರ ಕಾರ್ಡ, ಬ್ಯಾಂಕ್ ಖಾತೆ ಜೆರಾಕ್ಸ್ ಪ್ರತಿ, ಇತ್ಯಾದಿ ದಾಖಲೆಗಳನ್ನು ಕಡ್ಡಾಯವಾಗಿ ದೃಢೀಕರಿಸಿ, 2 ಭವಚಿತ್ರಗಳೊಂದಿಗೆ ಲಗತ್ತಿಸಿ, ಡಿ. 26 ರೊಳಗಾಗಿ ಕನಕಗಿರಿ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಡಿ. 22 ರಿಂದ ಬಾಗಲಕೋಟದಲ್ಲಿ ತೋಟಗಾರಿಕೆ ಮೇಳ


ಕೊಪ್ಪಳ ಡಿ. 16 (ಕರ್ನಾಟಕ ವಾರ್ತೆ): ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ “ತೋಟಗಾರಿಕೆ ಮೇಳ”ವನ್ನು ಡಿ. 22 ರಿಂದ 23 ರವರೆಗೆ ಬಾಗಲಕೋಟೆಯ ನವನಗರದ ಉದ್ಯಾನಗರಿಯಲ್ಲಿ ಆಯೋಜಿಸಲಾಗಿದೆ.
         ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಿ. 22, 23 ಮತ್ತು 24 ರಂದು ಮೂರು ದಿನಗಳಕಾಲ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ತೋಟಗಾರಿಕೆ ಮೇಳ ಜರುಗಲಿದೆ. ತೋಟಗಾರಿಕೆ ಮೇಳವನ್ನು ಪ್ರಸ್ತುತ ವರ್ಷ “ಕೌಶಲ್ಯೋದ್ಯಮ ತೋಟಗಾರಿಕೆ” ಪ್ರಗತಿಯ ಪ್ರಣಾಳಿಕೆ ಎಂಬ ಧ್ಯೇಯದೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಅರಿವು ಮೂಡಿಸುವುದು, ರೈತರ ಸಾಮಥ್ರ್ಯ ಬಲವರ್ಧನೆ ಮಾಡಿ, ಕೌಶಲ ಕಲಿತು ಉದ್ದಿಮೆ ಕೈಗೊಳ್ಳುವ ದಿಕ್ಕಿನಲ್ಲಿ ಚಿಂತನೆ ಮಂಥನ, ರೈತರ ಆದಾಯವನ್ನು ವೃದ್ಧಿಗೊಳಿಸುವಂತೆ ಮಾಡುವುದು ಹಾಗೂ ಸುಸ್ಥಿರಗೊಳಿಸುವುದು. ಒಂದೇ ಸೂರಿನಡಿಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಪಶುಪಾಲನೆ ಇತ್ಯಾದಿ ಸಮಗ್ರತೆ ಬಿಂಬಿಸುವ ತಾಂತ್ರಿಕತೆಗಳ ಬಗ್ಗೆ ಮಾಹಿತಿ, ಹನಿ ನೀರಾವರಿ, ಸಿಂಚಣ ನೀರಾವರಿ, ತುಂತುರು ನೀರಾವರಿ ಉಪಕರಣಗಳು ರೈತರಿಗೆ ಬೇಕಾಗುವ ಎಲ್ಲಾ ಕೃಷಿ ಉಪಕರಣಗಳು ಮತ್ತು ಅವುಗಳ ಮಾಹಿತಿ ಮೇಳದಲ್ಲಿ ದೊರೆಯಲಿದೆ.
ವಿಶೇಷತೆಗಳು :
************* ತೋಟಗಾರಿಕೆ ಮೇಳದ ವಿಶೇಷತೆಗಳು ಇಂತಿವೆ, ನವೀನ ಪದ್ಧತಿಯಲ್ಲಿ ಸುಸ್ಥಿರ ತರಕಾರಿ ಬೇಸಾಯ. ದೇಶಿ ಹಾಗೂ ವಿದೇಶಿ ತರಕಾರಿಗಳ ಪ್ರಾತ್ಯಕ್ಷಿಕೆ, ತಾರಸಿ ತರಕಾರಿ, ಹೂವು ಹಾಗೂ ಹಣ್ಣಿನ ತೋಟ. ಎರೋಪೋನಿಕ್ಸ್, ಹೈಡ್ರೊಪೋನಿಕ್ಸ್ ಮಾದರಿಗಳು. ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ. ಜಾನುಮಾರು ಮೇಳ. ಕೃಷಿ ಬ್ಯಾಂಕಿಂಗ್ ವ್ಯವಹಾರಗಳು. ಕೃಷಿ ಮತ್ತು ತೋಟಗಾರಿಕೆ ಪ್ರಕಟಣೆಗಳು. ರೈತರಿಗೆ ಆತ್ಮಸ್ಥೈರ್ಯ ತುಂಬುಬ ಕಾರ್ಯಕ್ರಮಗಳು. ಲಂಬ ತೋಟಗಳ ಮಾದರಿ. ನೆರಳು ಮನೆಯಲ್ಲಿ ಪಪಾಯಿ ಹಾಗೂ ವೀಳ್ಯದೆಲೆ ತಾಕುಗಳು. ಕೃಷಿ ಯಂತ್ರೋಪಕರಣಗಳ ಹಾಗೂ ಉಪಕರಣಗಳ ಪ್ರದರ್ಶನ. ರಾಸಾಯನಿಕ ಗೊಬ್ಬರಗಳು ಹಾಗೂ ಪೀಡನಾಶಕಗಳು. ಭವಿಷ್ಯದ ಬೆಳೆಗಳಾದ ಡ್ರ್ಯಾಗನ್ ಹಣ್ಣು, ಪೊದೆ ಮೆಣಸು, ಗೋಡಂಬಿ, ಹಲಸು, ಸ್ಟ್ರಾಬೆರ್ರಿ, ಅಂಜೂರ, ಸೀತಾಫಲ ಹಾಗೂ ಬಾರೆ ಹಣ್ಣು. ಇಸ್ರೇಲ್ ಮಾದರಿಯ ತೂಗು ತೋಟಗಳು. ರಸಾವರಿ ಮಾದರಿಗಳು. ಕಿರು ಹಣ್ಣಿನ ಪ್ರಾತ್ಯಕ್ಷಿಕೆ ತಾಕುಗಳು. ಜೇನು ಕೃಷಿ-ಮಧುವನ. ಸಮಗ್ರ ಕೃಷಿ ಪದ್ಧತಿ, ಸುಸ್ಥಿರ ಕೃಷಿ ಪದ್ಧತಿಗಳು. ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿ. ಕೃಷಿ ಪರಿಕರಗಳ ಪ್ರದರ್ಶನ. ಶ್ರೇಷ್ಠ ರೈತ/ ರೈತ ಮಹಿಳೆ ಪ್ರಶಸ್ತಿ ಸಮಾರಂಭ. ಕೌಶಲ್ಯ ಪ್ರಾತ್ಯಕ್ಷಿಕೆಗಳು ಎಂಬ ವಿಶೇಷತೆಗಳನ್ನು ತೋಟಗಾರಿಕೆ ಮೇಳವು ಹೊಂದಿದೆ.
ರೈತರಿಗೆ ಸಮಗ್ರ ಮಾಹಿತಿ :
****************************ತೋಟಗಾರಿಕೆ ಮೇಳವು ರೈತರಲ್ಲಿ ಅಪೇಕ್ಷಿತ ಬದಲಾವಣೆ ತರುವ ಒಂದು ಅವಕಾಶವನ್ನು ಒದಗಿಸುತ್ತದೆ. ಇದರಲ್ಲಿ ತೋಟಗಾರಿಕೆ ಮತ್ತು ಕೃಷಿ ಬೆಳೆಗಳ, ವಿವಿಧ ತಳಿಗಳ, ಉತ್ಪನ್ನಗಳ ಪ್ರದರ್ಶನ, ಕ್ಷೇತ್ರ ಭೇಟಿ, ಪ್ರಾತ್ಯಕ್ಷಿಕೆ, ಭಿತ್ತಿಚಿತ್ರ, ವಿಡಿಯೋ ಮುಂತಾದವುಗಳ ಮೂಲಕ ರೈತರಿಗೆ ತಂತ್ರಜ್ಞಾನದ ಮಾಹಿತಿ ನೀಡಲಾಗುತ್ತದೆ. ಸಮಗ್ರ ಕೃಷಿ ಪದ್ಧತಿಯ ಅಡಿಯಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯು ದೊರೆಯುತ್ತದೆ. ವಿಜ್ಞಾನಿಗಳು, ಪ್ರಗತಿಪರ ರೈತ, ರೈತ ಉದ್ಯಮಿ ಮುಂತಾದವರನ್ನು ನೇರವಾಗಿ ಭೇಟಿಯಾಗಿ ಅವರ ಯಶೋಗಾಥೆಗಳಿಂದ ಪ್ರೇರಣೆ ಪಡೆಯುವುದಲ್ಲದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ರೈತರಿಗೆ ಸನ್ಮಾನ :
*********** ತೋಟಗಾರಿಕೆ ಮೇಳದಲ್ಲಿ 23 ಜಿಲ್ಲೆಗಳ ಸಾಧಕ ರೈತರಿಗೆ ಸನ್ಮಾನಿಸಲಾಗುವುದು. ತೋಟಗಾರಿಕೆ ಮೇಳದ ಎಲ್ಲಾ ಪ್ರದರ್ಶನಗಳ ಜೊತೆಗೆ ವಿಷಯವಾರು ತಾಂತ್ರಿಕ ಗೋಷ್ಠಿಗಳು ನಿರಂತರವಾಗಿ ಮೂರು ದಿನಗಳ ಕಾಲ ನಡೆಯುತ್ತವೆ. ತೋಟಗಾರಿಕೆಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಅನುಭವಿ ವಿಜ್ಞಾನಿಗಳಿಂದ ವಿಷಯ ಮಂಡನೆ ಪ್ರಗತಿಪರ ರೈತರೊಂದಿಗೆ ಇತರ ರೈತರ ಸಂವಾದ ಕಾರ್ಯಕ್ರಮಗಳು ಜರುಗುತ್ತವೆ. ಹಾಗೂ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ 23 ಜಿಲ್ಲೆಗಳಿಂದ ಸಾಧಕ ರೈತರನ್ನು ಗುರುತಿಸಿ ಅವರಿಗೆ ಗೌರವಪೂರ್ವಕ ಸನ್ಮಾನ ಸಮಾರಂಭ ಜರುಗಲಿದೆ.
ಈ ತೋಟಗಾರಿಕೆ ಮೇಳದಲ್ಲಿ ಸುಮಾರು ರೈತರು ಹಾಗೂ ಇತರರು ಸೇರಿ ಒಟ್ಟು 4 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ರೈತರು ಮತ್ತು ವೀಕ್ಷಕರಿಗಾಗಿ ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಾಗಲಕೋಟ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಪಿ.ಎಂ ಗಂಗಾಧರಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕಿತ್ಸಾ ವೆಚ್ಚ ಭರಿಸುವಂತೆ ವಿಮಾ ಕಂಪನಿಗೆ ಗ್ರಾಹಕರ ವೇದಿಕೆ ಆದೇಶ


ಕೊಪ್ಪಳ ಡಿ. 16 (ಕರ್ನಾಟಕ ವಾರ್ತೆ): ಆರೋಗ್ಯ ವಿಮೆ ಮಾಡಿಸಿದ ಪಾಲಿಸಿದಾರರು, ಪಾಲಿಸಿ ಪಡೆದ ಮೊದಲನೆ ವರ್ಷದಲ್ಲಿ ಚಿಕಿತ್ಸೆ ಮಾಡಿಸಿಕೊಂಡ, ವೆಚ್ಚವನ್ನು ಯುನಿಟೆಡ್ ಇಂಡಿಯಾ ಇನ್ಸುರೆನ್ ವಿಮಾ ಕಂಪನಿ ಭರಿಸಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.
     ಶರಣಯ್ಯ ಸ್ವಾಮಿ ತಂದೆ ವೀರಭದ್ರಯ್ಯ ಸ್ವಾಮಿ ಅವರು ಗಂಗಾವತಿ ತಾಲೂಕು ಕಾರಟಗಿಯ ಆಂಧ್ರಾ ಬ್ಯಾಂಕ್ ಮೂಲಕ ಯುನಿಟೆಡ್ ಇಂಡಿಯಾ ಇನ್ಸುರೆನ್ ವಿಮಾ ಕಂಪನಿ ಇವರಲ್ಲಿ 1 ಲಕ್ಷ ರೂ. ಗಳ ಮೊತ್ತಕ್ಕೆ ಆರೋಗ್ಯಧಾನ ಮೆಡಿಕ್ಲೇಮ್ ಹೆಸರಿನ ಆರೋಗ್ಯ ವಿಮಾ ಪಾಲಿಸಿಯನ್ನು 2015 ರ ಜೂನ್ 09 ರಂದು ಮಾಡಿಸಿದ್ದರು.  ಪಾಲಿಸಿಯು 2016 ರ ಜೂ. 08 ರವರೆಗೆ ಚಾಲ್ತಿಯಲ್ಲಿ ಇತ್ತು.  ಈ ಅವಧಿಯಲ್ಲಿ ಪಾಲಿಸಿದಾರರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳ ಚಿಕಿತ್ಸೆಯನ್ನು ಪಡೆಯಲು ಅವಕಾಶವಿದೆ.  ಪಾಲಿಸಿದಾರ 2015 ರ ಡಿ. 22 ರಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ 99907 ರೂ. ವೆಚ್ಚದಲ್ಲಿ ಡಿಜೆ ಸ್ಟೆಂಟ್ ರಿಮೂವಲ್ ಚಿಕಿತ್ಸೆ ಪಡೆದು, ವಿಮಾ ಕಂಪನಿಗೆ ಚಿಕಿತ್ಸಾ ವೆಚ್ಚ ಭರಿಸಲು ಕ್ಲೇಮ್ ಸಲ್ಲಿಸಿದರು.  ಆದರೆ ಕಂಪನಿಯು ಪಾಲಿಸಿ ಪಡೆದ ಮೊದಲನೆ ವರ್ಷದೊಳಗಾಗಿ ಚಿಕಿತ್ಸೆ ಪಡೆದಿರುವುದರಿಂದ, ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದು ಕ್ಲೇಮ್ ಅನ್ನು ನಿರಾಕರಿಸಿದರು.  ಈ ಹಿನ್ನೆಲೆಯಲ್ಲಿ ಪಾಲಿಸಿದಾರ ಶರಣಯ್ಯ ಸ್ವಾಮಿ ಅವರು ಕೊಪ್ಪಳದ ಗ್ರಾಹಕರ ವೇದಿಕೆಯ ಮೊರೆ ಹೋಗಿ ಕಂಪನಿಯ ವಿರುದ್ಧ ದೂರು ದಾಖಲಿಸಿದರು.  ಗ್ರಾಹಕರ ವೇದಿಕೆಗೆ ಹಾಜರಾದ ವಿಮಾ ಕಂಪನಿಯವರು, ಡಿ.ಜೆ ಸ್ಟೆಂಟ್ ರೀಮೊವಲ್‍ಗಾಗಿ ಚಿಕಿತ್ಸೆಯನ್ನು ಮೆಡಿಕ್ಲೇಮ್ ವಿಮೆ ಪಡೆದ ಮೊದಲನೇ ವರ್ಷದೊಳಗಾಗಿ ಪಡೆದಿರುವುದರಿಂದ ಪಾಲಸಿಯ ನಿಯಮಗಳಿಗನುಸಾರವಾ ಪಾಲಸಿದಾರನ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲವೆಂದು ವಾದಿಸಿದರು.  ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಏಕತಾ ಹೆಚ್.ಡಿ ಹಾಗೂ ಮಹಿಳಾ ಸದಸ್ಯರಾದ ಸುಜಾತಾ ಅಕ್ಕಸಾಲಿ ಅವರು, ವಾದ ಮತ್ತು ಪ್ರತಿವಾದಗಳನ್ನು ಆಲಿಸಿ, ವಿಮಾ ಕಂಪನಿಯವರು ಪಾಲಸಿದಾರನು 2014ನೇ ವರ್ಷದಿಂದಲೂ ನಿರಂತರವಾಗಿ ಆರೋಗ್ಯವಿಮೆಗಾಗಿ ವಿಮಾ ಕಂತನ್ನು ಪಾವತಿಸಿ ಆರೋಗ್ಯ ವಿಮೆಯನ್ನು ಪಡೆಯುತ್ತಿದ್ದು, ಅವರು ಚಿಕಿತ್ಸೆ ಪಡೆದಿದ್ದು ಡಿಸೆಂಬರ್-2015 ರಲ್ಲಿ ಆದ್ದರಿಂದ ಪಾಲಸಿಯ ಮೊದಲನೇ ವರ್ಷದಲ್ಲಿ ಚಿಕಿತ್ಸೆ ಪಡೆದಂತಾಗುವುದಿಲ್ಲವೆಂದು ಮತ್ತು ಪಾಲಸಿಯ ನಿಯಮವು ಈ ಕ್ಲೇಮ್‍ಗೆ ಅನ್ವಯವಾಗುವುದಿಲ್ಲವೆಂದು ಪರಿಗಣಿಸಿ, ಪಾಲಸಿಯ ಕ್ಲೇಮ್‍ನ್ನು ತಿರಸ್ಕರಿಸಿರುವುದು ಸರಿಯಲ್ಲವೆಂದು ನಿರ್ಧರಿಸಿದರು.  ಯುನಿಟೆಡ್ ಇಂಡಿಯಾ ಇನ್ಸುರೆನ್ಸ್ ಕೊ. ಲಿ. ಇವರಿಂದ ನಿರ್ಲಕ್ಷ್ಯತನ ಹಾಗೂ ಸೇವಾ ನ್ಯೂನತೆ ಉಂಟಾಗಿದೆಯಂದು ತೀರ್ಮಾನಿಸಿ, ಪಾಲಿಸಿದಾರರಿಗೆ ಚಿಕಿತ್ಸಾ ವೆಚ್ಚದ ಮೊತ್ತ ರೂ. 99,065, ಮಾನಸಿಕ ವ್ಯಥೆಗೆ ರೂ. 10,000 ಮತ್ತು ದೂರಿನ ಖರ್ಚು ರೂ. 1500 /-ನ್ನು ಒಂದು ತಿಂಗಳ ಒಳಗಾಗಿ ಪಾವತಿಸಬೇಕು.  ತಪ್ಪಿದಲ್ಲಿ ವಿಮಾ ಕಂಪನಿಯವರು ಈ ಹಣದ ಮೊತ್ತದ ಮೇಲೆ ದೂರು ದಾಖಲಾದ ದಿನದಿಂದ 9% ಬಡ್ಡಿಯೊಂದಿಗೆ ಪಾವತಿಸುವಂತೆ ತೀರ್ಪು ನೀಡಿದ್ದಾರೆ.

Friday, 15 December 2017

ಕನಕಗಿರಿ, ಕಾರಟಗಿ ಹಾಗೂ ಕುಕನೂರು ಹೊಸ ತಾಲೂಕು ಜ. 01 ರಿಂದ ಕಾರ್ಯಾರಂಭ : ಸಿದ್ದರಾಮಯ್ಯ


ಕೊಪ್ಪಳ ಡಿ. 15 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕನಕಗಿರಿ, ಕಾರಟಗಿ ಮತ್ತು ಕುಕನೂರು ಮೂರು ಹೊಸ ತಾಲೂಕುಗಳನ್ನಾಗಿ ರಚಿಸಲಾಗಿದ್ದು ನೂತನ ತಾಲೂಕುಗಳು 2018 ರ ಜನೇವರಿ, 01 ರಿಂದ ಅನುಷ್ಠಾನಕ್ಕೆ ಬರಲಿವೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೇಳಿದರು.

    ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಸೊಮವಾರದಂದು ಕನಕಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದ ಕೊಪ್ಪಳ ಜಿಲ್ಲೆಯ ಪ್ರಗತಿ ಮಾಹಿತಿ ಕಿರುಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 


    ಕನಕಗಿರಿಯ ಲಕ್ಷ್ಮೀ ಕೆರೆ ಸೇರಿದಂತೆ ಒಟ್ಟು 8 ಕೆರೆಗಳನ್ನು ತುಂಬಿಸಲು 140 ಕೋಟಿ ರೂ. ಗಳನ್ನು ನೀಡಲಾಗಿದೆ.  ಈ ಪೈಕಿ ಈಗಾಗಲೆ 07 ಕೆರೆಗಳನ್ನು ತುಂಬಿಸಲಾಗಿದ್ದು, ಕೆರೆ ತುಂಬಿಸುವ ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನಮ್ಮ ಸರ್ಕಾರ ಕೈಗೊಂಡಿತ್ತು.  ಇದೀಗ ಕೆರೆ ತುಂಬಿಸುವ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು, ಇದೇ ಮಾದರಿಯನ್ನು ರಾಜ್ಯದ ಹಲವೆಡೆ ವಿಸ್ತರಿಸಲಾಗುತ್ತಿದೆ.  ಕೆರೆ ತುಂಬಿಸುವ ಯೋಜನೆಯಿಂದ ಈ ಭಾಗದ ರೈತರು, ಜನರು ಸಂತಸಗೊಂಡಿದ್ದಾರೆ.  ಆನೆಗುಂದಿ ಮತ್ತು ಕನಕಗಿರಿ ಉತ್ಸವಗಳನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಕಳೆದ ಬಾರಿ ತಲೆದೋರಿದ ಭೀಕರ ಬರದ ಹಿನ್ನಲೆಯಲ್ಲಿ ನಿಲ್ಲಿಸಲಾಗಿತ್ತು.  ಈ ವರ್ಷ ಉತ್ತಮ ಮಳೆ-ಬೆಳೆ ಆಗಿರುವುದರಿಂದ, ಪುನಃ ಆನೆಗುಂದಿ ಮತ್ತು ಕನಕಗಿರಿ ಉತ್ಸವಗಳನ್ನು ಸರ್ಕಾರದದಿಂದಲೇ ಆಚರಿಸಲಾಗುವುದು.  ಕೃಷ್ಣ ಬಿ-ಸ್ಕೀಂ-3ನೇ ಹಂತದ ಏತ ನೀರಾವರಿ ಯೋಜನೆ ಕೊಪ್ಪಳ, ಬಾಗಲಕೋಟೆ, ಗದಗ ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾಗಿದೆ.  ಈ ಯೋಜನೆಯನ್ನು ಜಾರಿಗೊಳಿಸಲು ಪುನರ್ವಸತಿ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಲು 51 ಸಾವಿರ ಕೋಟಿ ರೂ. ಬೇಕು.  ಈಗಾಗಲೇ ಜಮೀನುಗಳನ್ನು ಭೂಸ್ವಾಧಿನ ಪಡಿಸಿಕೊಳ್ಳಲಾಗುತ್ತಿದೆ.  2396 ಕೋಟಿ ರೂ. ಗಳನ್ನು ಈ ಯೋಜನೆಗೆ ನೀಡಲಾಗುವುದು.  ಅಲ್ಲದೆ ಶೀಘ್ರ ಕಾಮಗಾರಿಗೆ ಚಾಲನೆ ನೀಡುವ ಕಾರ್ಯ ಕೈಗೊಳ್ಳಲಾಗುವುದು.  ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಶೂಭಾಗ್ಯ, ಪಶುಭಾಗ್ಯ, ಕೃಷಿಭಾಗ್ಯ, ಕೃಷಿಹೊಂಡ, ಶಾದಿಭಾಗ್ಯ, ಸಾಲಮನ್ನಾ, ಮಾತೃಪೂರ್ಣ, ಅನಿಲಭಾಗ್ಯ ಇತ್ಯಾದಿ ನೂರಾರು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇವೆ.  ಕ್ಷೀರಭಾಗ್ಯದಿಂದ ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದ್ದರಿಂದ ಶಾಲಾ ಮಕ್ಕಳಿಗೆ ವಾರಕ್ಕೆ 05 ದಿನ ಉಚಿತವಾಗಿ ಹಾಲು ವಿತರಿಸಲಾಗುತ್ತಿದೆ.  ಉತ್ಪಾದಕರಿಗೆ ಪ್ರತಿ ಲೀಟರ್‍ಗೆ 5 ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ.  ಸಾಲಮನ್ನಾ ಯೋಜನೆಯಲ್ಲಿ ಸಹಕಾರ ಬ್ಯಾಂಕ್‍ಗಳಲ್ಲಿ ತೆಗೆದುಕೊಂಡ ರೈತರ 50 ಸಾವಿರವರೆಗಿನ ರಾಜ್ಯದಲ್ಲಿ ಒಟ್ಟು 8165 ಕೋಟಿ ರೂ. ಗಳನ್ನು ಮನ್ನಾ ಮಾಡಲಾಗಿದೆ.  ಹಾಗೂ ರೈತರಿಗೆ ಬಡ್ಡಿ ರಹಿತವಾಗಿ 3 ಲಕ್ಷಗಳ ವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದೆ. 
    ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಈವರೆಗೆ ಎಸ್.ಟಿ.ಪಿ/ ಟಿ.ಎಸ್.ಪಿ ಯೋಜನೆಯಡಿ 86 ಸಾವಿರ ಕೋಟಿ ರೂ. ಗಳನ್ನು ಖರ್ಚು ಮಾಡಲಾಗಿದೆ.  ಈ ವರ್ಷವೂ ಸಹ ಹೆಚ್ಚಿನ ಅನುದಾನವನ್ನು ನೀಡಲಾಗುವುದು.  ತುಂಗಭದ್ರಾ ಜಲಾಶಯದಿಂದ ಈ ಭಾಗದ ರೈತರಿಗೆ ಎರಡನೆ ಬೆಳೆಗೆ ನೀರು ಲಭ್ಯವಿಲ್ಲ ಎನ್ನಲಾಗುತ್ತಿದೆ.  ಇದಕ್ಕಾಗಿ ಅಗತ್ಯವಿರುವ ನೀರು ಪಡೆಯುವ ಸಲುವಾಗಿ ತೆಲಂಗಾಣ ಮುಖ್ಯಮಂತ್ರಿಗಳ ಮನ ಒಲಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡಲಿದ್ದು ಅದಕ್ಕಾಗಿ ಅಗತ್ಯವಿದ್ದಲ್ಲಿ ನಿಯೋಗವೊಂದನ್ನು ಕಳುಹಿಸುವುದಾಗಿ ಮುಖ್ಯಮಂತ್ರಿಗಳು ನುಡಿದರು
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, “ಸರ್ವರಿಗೂ ಸಮ ಬಾಳು, ಸಮ ಪಾಲು” ಎಂಬುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ.  ಅನ್ನಭಾಗ್ಯ ಯೋಜನೆಯಲ್ಲಿ 4 ಕೋಟಿ 70 ಲಕ್ಷ ಜನರಿಗೆ ಪ್ರತಿ ಒಬ್ಬರಿಗೆ 7 ಕೆ.ಜಿ. ಯಂತೆ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ.  ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಂತಹ ವ್ಯವಸ್ಥೆ ಇಲ್ಲ.  ರಾಜ್ಯ ಸರ್ಕಾರವು ಸಾಲ ಮನ್ನಾ, ಕೃಷಿ ಹೊಂಡ, ಕೆರೆ ತುಂಬಿಸುವ ಯೋಜನೆ, ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ರೈv Àಪರ ಸರ್ಕಾರ ನಮ್ಮದು ಎಂದರು.
    ಸಮಾರಂಭದ ಅಧ್ಯಕ್ಷೆತೆಯನ್ನು ಕನಕಗಿರಿ ಶಾಸಕ ಶಿವರಾಜ ತಂಗಡಗಿ ಅವರು ವಹಿಸಿದ್ದರು.  ಶಾಸಕರುಗಳಾದ ಇಕ್ಬಾಲ್ ಅನ್ಸಾರಿ, ಕೆ. ರಾಘವೇಂದ್ರ ಹಿಟ್ನಾಳ, ಹಂಪನಗೌಡ ಬಾದರ್ಲಿ, ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದಶಿಗಳಾದ ಉಮಾ ಮಹಾದೇವನ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಡಿ. 27 ರಂದು ಕೊಪ್ಪಳದಲ್ಲಿ ಸಾರಿಗೆ ಅದಾಲತ್


ಕೊಪ್ಪಳ ಡಿ. 15 (ಕರ್ನಾಟಕ ವಾರ್ತೆ): ಪ್ರಾದೇಶಿಕ ಸಾರಿಗೆ ಕಛೇರಿ ಕೊಪ್ಪಳ ವತಿಯಿಂದ ಸಾರ್ವಜನಿಕ ಕುಂದು ಕೊರತೆಗಳ ಆಹವಾಲು ಸ್ವೀಕರಿಸಲು “ಸಾರಿಗೆ ಅದಾಲತ್” ಕಾರ್ಯಕ್ರಮವನ್ನು ಡಿ. 27 ರಂದು ಮಧ್ಯಾಹ್ನ 4 ಗಂಟೆಗೆ ಕೊಪ್ಪಳದ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಆಯೋಜಿಸಲಾಗಿದೆ.   
      ಸಾರ್ವಜನಿಕ ಕುಂದು ಕೊರತೆಗಳ ಆಹವಾಲು ಸ್ವೀಕರಿಸಲು ಡಿ. 27 ರಂದು ಮಧ್ಯಾಹ್ನ 4 ಗಂಟೆಗೆ “ಸಾರಿಗೆ ಅದಾಲತ್” ಪ್ರಾದೇಶಿಕ ಸಾರಿಗೆ ಕಛೇರಿ ಕೊಪ್ಪಳ ವತಿಯಿಂದ ನಡೆಸಲು ತೀರ್ಮಾನಿಸಲಾಗಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಕುಂದು ಕೊರತೆಗಳ ಆಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜೀವ ರಕ್ಷಕ ಪ್ರಶಸ್ತಿ : ಅರ್ಜಿ ಆಹ್ವಾನ


ಕೊಪ್ಪಳ ಡಿ. 15 (ಕರ್ನಾಟಕ ವಾರ್ತೆ): ಕೊಪ್ಪಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಪಘಾತದ ಸಂದರ್ಭದಲ್ಲಿ ಗಾಯಾಳುವಿಗೆ ನೆರವು ನೀಡಿದವರಿಗೆ ಮುಖ್ಯಮಂತ್ರಿಗಳ ಸಾಂತ್ವನ ಹರೀಶ ಯೋಜನೆಯಡಿ ಜೀವ ರಕ್ಷಕ ಪ್ರಶಸ್ತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.   
    ಕರ್ನಾಟಕ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮುಖಾಂತರ ಅಪಘಾತದ ಸಂದರ್ಭದಲ್ಲಿ ಗಾಯಾಳುವಿಗೆ ನೆರವು ನೀಡಿದವರಿಗೆ “ಜೀವ ರಕ್ಷಕ ಪ್ರಶಸ್ತಿ” ನೀಡಲಾಗುತ್ತಿದೆ.  ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಮುಖ್ಯಮಂತ್ರಿಗಳ ಸಾಂತ್ವನ ಹರೀಶ ಯೋಜನೆಯಡಿ ರಾಜ್ಯದಲ್ಲಿ ಸಂಭವಿಸುವ ರಸ್ತೆ ಅಪಘಾತದ ಗಾಯಾಳುವಿಗೆ 48 ಗಂಟೆಗಳವರೆಗೆ ಗರಿಷ್ಠ 25,000/- ರೂ. ಗಳವರೆಗೆ ಎಲ್ಲಾ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ.  ಅಪಘಾತದಂತಹ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದ ಚಿಕಿತ್ಸೆ ಹಾಗೂ ಜೀವ ಉಳಿಸಲು ನೆರವಾಗುವವರಿಗೆ ಜೀವ ರಕ್ಷಕ ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಲಾಗುವುದು.  
    ಅರ್ಜಿ ಸಲ್ಲಿಸಲು ಡಿ. 31 ಕೊನೆಯ ದಿನವಾಗಿದ್ದು, ಅರ್ಜಿಗಳಿಗಾಗಿ ಜಿಲ್ಲಾ ಸಂಯೋಜಕರು ಹಾಗೂ ಆರೋಗ್ಯ ಮಿತ್ರರು, ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕ ಆಸ್ಪತ್ರೆಗಳಲ್ಲಿ ಸಂಪರ್ಕಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ ಕೊಪ್ಪಳ – 7760999114, 7619649168, 7760999098, ಗಂಗಾವತಿ – 7760999100, ಯಲಬುರ್ಗಾ – 7760999103, ಹಾಗೂ ಕುಷ್ಟಗಿ – 7760999095, 7760999105 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 19 ರಿಂದ ಕಸಾಪ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆ


ಕೊಪ್ಪಳ ಡಿ. 15 (ಕರ್ನಾಟಕ ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸಕ್ತ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ಡಿ. 19, 20 ಮತ್ತು 31 ರಂದು ಒಟ್ಟು ಮೂರು ದಿನಗಳ ಕಾಲ ರಾಜ್ಯದ 18 ಕೇಂದ್ರಗಳಲ್ಲಿ ನಡೆಯಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ರಾಜಶೇಖರ ಹತಗುಂದಿ ಅವರು ತಿಳಿಸಿದ್ದಾರೆ. 
       ಪರೀಕ್ಷಾ ಪ್ರವೇಶ ಪತ್ರಗಳನ್ನು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ.  ಡಿ. 23 ರ ನಂತರವೂ ಪ್ರವೇಶಪತ್ರ ತಲುಪದಿರುವ ಬಗ್ಗೆ ಅಭ್ಯರ್ಥಿಗಳು, ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ಇವರಲ್ಲಿ ವಿಚಾರಿಸಬಹುದು.  ಪ್ರವೇಶ ಪತ್ರ ತಲುಪದಿದ್ದಲ್ಲಿ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಹುದು.  ಪರೀಕ್ಷಾ ಕೇಂದ್ರದ ವಿಳಾಸವನ್ನು ದೂರವಾಣಿ ಸಂಖ್ಯೆ 080-2662354 ಕ್ಕೆ ಸಂಪರ್ಕಿಸಿ ಪಡೆಯಬಹುದಾಗಿದೆ.  ಅಥವಾ ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತರ್ಜಾಲ ತಾಣ  www.kasapa.in ಮೂಲಕ ಸಹ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.