Saturday, 31 December 2016

ಮಾವು ಬೆಳೆಗೆ ಕಾಡುವ ಪ್ರಮುಖ ಕೀಟಗಳು : ನಿರ್ವಹಣೆಗೆ ರೈತರಿಗೆ ಸಲಹೆ


ಕೊಪ್ಪಳ ಡಿ. 31 (ಕರ್ನಾಟಕ ವಾರ್ತೆ): ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವು ಬೆಳೆಗೆ ಪ್ರಮುಖವಾಗಿ ಮಾವಿನ ಜಿಗಿ ಹುಳು, ಕಾಂಡ ಕೊರೆಯುವ ಹುಳು, ಹಿಟ್ಟು ತಿಗಣೆ ಮುಂತಾದ ಕೀಟಗಳು ಹೆಚ್ಚು ಕಾಡುತ್ತವೆ.  ಇಂತಹ ಕೀಟಗಳ ನಿರ್ವಹಣೆಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ರೈತರಿಗೆ ಸಲಹೆಗಳನ್ನು ನೀಡಿದೆ.

    ಮಾವು ಅನೇಕ ಔಷಧೀಯ ಗುಣಗಳನ್ನು ಸಹ ಹೊಂದಿದ್ದು, ಸಂಸ್ಕರಿತ ಮಾವಿನ ಹಣ್ಣಿನ ರಸ, ಜಾಮ್ ಮತ್ತು ಉಪ್ಪಿನಕಾಯಿ ಇವುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಣ್ಣು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ಹೊರ ದೇಶಗಳಿಗೆ ಅಧಿಕ ಪ್ರಮಾಣದಲ್ಲಿ ರಪ್ತು ಮಾಡಲಾಗುತ್ತಿದೆ.  ಈ ಬೆಳೆ ಲಾಭದಾಯಕವಾಗಬೇಕಾದರೆ ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಅತಿಮುಖ್ಯವಾಗಿ ಇದಕ್ಕೆ ಬರುವ ಕೀಟ ಆರ್ಥಿಕ ಇಳುವರಿಯ ಮೇಲೆ ಗಣನೀಯ ಪ್ರಭಾವ ಬೀರುವದರಿಂದ ಬೆಳೆಯನ್ನು ರಕ್ಷಿಸುವುದು ಅವಶ್ಯವಾಗಿದೆ.  ಮಾವಿಗೆ ಬರುವ ಪ್ರಮುಖ ಕೀಟಗಳು ಜಿಗಿಹುಳು, ಕಾಂಡಕೊರೆಯುವ ಹುಳು, ಓಟೆಮೂತಿ ಹುಳು, ಮತ್ತು ಇರಿಯೋಪಿಡ್ ನುಶಿ ಪ್ರಮುಖವಾದವುಗಳು.  ಈ ಕೀಟಗಳಿಂದ ಪಾರಾಗಲು ಕೈಗೊಳ್ಳಬಹುದಾದ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಸಲಹೆಗಳನ್ನು ನೀಡಲಾಗಿದೆ.

ಮಾವಿನ ಜಿಗಿ ಹುಳು :
*-***********ಮಾವಿನ ಹೂಗಳಿಗೆ ಅತಿ ಮಾರಕವಾಗಿ ಬೀಳುವ ಕೀಟಪಿಡುಗಳಲ್ಲಿ ಜಿಗಿ ಹುಳು ಪ್ರಮುಖವಾಗಿದೆ. ಜನವರಿ-ಫಬ್ರವರಿ ಅವಧಿಯಲ್ಲಿ ಮಾವಿನ ಮರಗಳಲ್ಲಿ ಚಿಗುರು ಮತ್ತು ಗೊಂಚಲಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ.  ಮಾವಿನ ಗಿಡದ ಕೆಳಗೆ ಹೋಗಿ ಸ್ವಲ್ಪ ಟೊಂಗೆ ಅಲುಗಾಡಿಸಿದಾಗ ಜುಂಯ್ ಅಂತ ನೂರಾರು ಜಿಗಿಹುಳುಗಳು ಕಣ್ಣಮುಂದೆ ಹಾರಾಡತೊಡಗುವವು.
    ಹೆಣ್ಣು ಕೀಟವು ಹೂ, ಕಾಂಡ ಅಥವಾ ಚಿಗುರಿನಲ್ಲಿ ಚಿಕ್ಕದಾಗಿ ಕೊರೆದು ಒಂದೊಂದಾಗಿ 100-200 ಮೊಟ್ಟೆಗಳನ್ನು ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಇಡಬಲ್ಲದು.  ಮೊಟ್ಟೆಯಿಂದ ಹೊರಬಂದ ಮರಿಕೀಟಗಳು 10-20 ದಿವಸಗಳಲ್ಲಿ ಪ್ರೌಢಾವಸ್ಥೆಯನ್ನು ತಲುಪುತ್ತವೆ.  ಮರಿ ಮತ್ತು ಪ್ರೌಢ ಕೀಟಗಳು ಹೂ ಮತ್ತು ಮೊಗ್ಗುಗಳಿಂದ ರಸವನ್ನು ಹೀರುತ್ತವೆ.  ಇದರಿಂದಾಗಿ, ಎಲೆ ಮತ್ತು ಹೂ ಗೊಂಚಲುಗಳ ಮೇಲೆ ಮಿರಿ ಮಿರಿ ಮಿಂಚುವ ಅಂಟಿನಂತಹ ಜಿಗುಟಾದ ರಸವು ಹರಡಿದ್ದು ಕಾಣಬಹುದಾಗಿದೆ. ಹೂ ಮತ್ತು ಸಣ್ಣ ಕಾಯಿ ಉದರುವ್ಯದು, ಇಡಿ ಹೂ ಗೊಂಚಲು ಬಾಡಿ ಒಣಗಿ ಬಿಡುವುದು.  ಈ ಕೀಟವು ಸಕ್ಕರೆಯಂತಹ ಪದಾರ್ಥ ವಿಸರ್ಜಿಸುವುದರಿಂದ ಶಿಲೀಂದ್ರಗಳ ಬೆಳವಣಿಗೆಗೆ ಪ್ರೋತ್ಸಾಹಿಸುತ್ತದೆ.  ಈ ಕಪ್ಪು ಶಿಲೀಂದ್ರವು ಎಲೆಗಳ ಮೇಲೆ ಹರಡುವುದರಿಂದ ಸಸ್ಯದ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯನ್ನುಂಟು ಮಾಡಿ ಹೂಗಳ ಬೆಳೆವಣಿಗೆ ಕುಂಠಿತಗೊಂಡು ಕಾಯಿಗಳು ಉದುರುತ್ತವೆ.  ಇದರ ನಿರ್ವಹಣೆಗೆ ರೈತರು, ತೋಟವನ್ನು ಸ್ವಚ್ಛವಾಗಿಡುವುದರ ಜೊತೆಗೆ ಮಾವಿನ ಗಿಡಗಳ ಮಧ್ಯೆ ಸರಿಯಾದ ಅಂತ ಕಾಪಾಡುವುದು. (9*9 ಮೀ. ಅಥವಾ 12* 12 ಮೀ ಅಂತರದಲ್ಲಿ ನಾಟಿ ಮಾಡಬೇಕು). ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹೂ ಬಿಡುವುದಕ್ಕಿಂತ ಮುಂಚೆ ಮತ್ತು ಕಾಯಿ ಕಟ್ಟಿದ ಕೂಡಲೆ ಗಿಡಗಳಿಗೆ 0.3 ಗ್ರಾಂ. ಥೈಮಿಥಾಕ್ಸಮ್ 25 ಡಬ್ಲೂ.ಡಿ.ಜೆ.. ಅಥವಾ 0.3 ಮಿ.ಲೀ. ಇಮಿಡಾಕ್ಲೋಪ್ರಿಡ್  17.8 ಎಸ್.ಎಲ್. ಪ್ರತಿ ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪರಣೆ ಮಾಡಬೇಕು.
ಕಾಂಡಕೊರೆಯುವ ಹುಳು :
**************ಈ ಕೀಟವು ಬಲಿಷ್ಠವಾಗಿದ್ದು, ಕಾಲು ಮತ್ತು ಕುಡಿಮೀಶೆಗಳು ಉದ್ದವಾvರುತ್ತವೆ.  ದೇಹದ ಬಣ್ಣವು ಹಳದಿ ಮಿಶ್ರಿತ ಕಂದು ಬಣ್ಣವಿದ್ದು, ರೆಕ್ಕೆಗಳ ಮೇಲೆ ನಸು ಹಳದಿ ಛಾಯೆಯ ಬಿಳಿ ಬಣ್ಣದ ಅವ್ಯವಸ್ಥಿತ ಚುಕ್ಕೆಗಳಿರುತ್ತವೆ.  ಈ ಕೀಟವು ಒಣಗಿದ ಗೆಣ್ಣುಗಳ ತೊಗಟೆಯಡಿಯಲ್ಲಿ ಮೊಟ್ಟೆ ಇಡುತ್ತದೆ. ಮರಿಗಳು ಕಾಂಡ ಅಥವಾ ಗೆನ್ಣುಗಳನ್ನು ಕೊರೆದು ಉದ್ದವಾದ ಸುರಂಗ ಮಾಡುತ್ತವೆ.  ಕೀಟಬಾಧೆಯಿಂದ ದುಂಬಿಯ ಮರಿಗಳು ಕಾಂಡ ಮತ್ತು ರೆಂಬೆಗಳನ್ನು ಕೊರೆಯುವುದರಿಂದ ರೆಂಬೆಗಳು ಒಣಗುತ್ತವೆ ಮತ್ತು ಕೆಲವು ವೇಳೆ ಬಾಧೆ ಅಧಿಕವಾಗಿದ್ದಾಗ ಗಿಡಗಳೇ ಒಣಗಿಹೋಗುತ್ತವೆ.  ಹಾನಿಗೀಡಾದ ಮರದ ಕೆಳಗೆ ಪುಡಿ ಉದುರಿರುತ್ತದೆ.  ಕೆಲವೊಮ್ಮೆ ಹಾನಿಗೀಡಾದ ರಂಧ್ರಗಳಿಂದ ಅಂಟು ಅಂಟಾದ ವಸ್ತು ಸ್ರವಿಸುತ್ತವೆ.  ಈ ಕೀಟದ ನಿರ್ವಹಣೆಗೆ ರೈತರು, ಮೊದಲ ಹಂತದಲ್ಲಿ ಹಾನಿಗೊಳಗಾದ ಮರದ ಭಾಗವನ್ನು ಕತ್ತರಿಸಬೇಕು.  ಮರದ ಬುಡಗಳ ಸುತ್ತಲು 5-10 ಗ್ರಾಂ ಕಾರ್ಭೋಫ್ಯೂರಾನ್ ಅಥವಾ ಫ್ಲೋರೇಟ್ ಹರಳನ್ನು ಹಾಕಬೇಕು.  ಡೈಕ್ಲೋರಾವಾಸ್ 76 ಇ.ಸಿ. ಕೀಟನಾಶಕವನ್ನು ಬಾದೆಗೊಳಗಾದ ಕಾಂಡದ ರಂದ್ರಗಳಲ್ಲಿ 5-10 ಮಿ.ಲೀ. ಸಿರೀಂಜ್ ಸಹಾಯದಿಂದ ರಂದ್ರಗಳಲ್ಲಿ ಹಾಕಿ ಹಸಿ ಮಣ್ಣಿನಿಂದ ಮುಚ್ಚಬೇಕು.
     ಹೆಚ್ಚಿನ ಮಾಹಿತಿಯನ್ನು ಶ್ವೇತಾ, ವಿಷಯ ತಜ್ಞರು, ಕೀಟಶಾಸ್ತ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ (08539-220305 ಹಾಗೂ ಮೊಬೈಲ್ 8971398374) ಕ್ಕೆ ಸಂಪರ್ಕಿಸಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಕಟಣೆ ತಿಳಿಸಿದೆ.
Post a Comment