Friday, 30 December 2016

ಗ್ರಾಹಕರು ಸುಳ್ಳು ಜಾಹಿರಾತುಗಳಿಗೆ ಮೋಸಹೋಗಬಾರದು: ಏಕತಾ ಎಚ್. ಡಿ


ಕೊಪ್ಪಳ ಡಿ. 30 :(ಕರ್ನಾಟಕ ವಾರ್ತೆ): ಗ್ರಾಹಕರು ಟಿ.ವಿ. ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಬರುವ ಸುಳ್ಳು ಜಾಹೀರಾತುಗಳನ್ನು ನೋಡಿ ಅದರಲ್ಲಿ ತೋರಿಸುವ ವಸ್ತುಗಳನ್ನು ಕೊಂಡು ಮೋಸಹೋಗಬಾರದು, ಹಾಗೊಂದು ವೇಳೆ ಮೋಸಹೋದರೆ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಏಕತಾ ಎಚ್.ಡಿ ಹೇಳಿದರು.

    ಜಿಲ್ಲಾಡಳಿತ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

     ಜಿಲ್ಲೆಯ ಗ್ರಾಹಕರಿಗೆ ಗ್ರಾಹಕರ ರಕ್ಷಣಾ ಕಾಯ್ದೆ 1986 ರ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.  ಜಿಲ್ಲೆಯ ಬಹುತೇಕ ಜನರಿಗೆ ಗ್ರಾಹಕರ ವೇದಿಕೆ ಇರುವುದೇ ಗೊತ್ತಿಲ್ಲ, ಆದ್ದರಿಂದ ಈ ಕುರಿತು ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಿಬೇಕು.  ಗ್ರಾಹಕರು ಮೂಢನಂಬಿಕೆ ಹಾಗೂ ಇತರೆ ಜಾಹೀರಾತುಗಳಿಂದ ಮೊಸ ಹೋಗುವುದನ್ನು ತಡೆಯಬೇಕಿದೆ.  ಗ್ರಾಹಕರು ಖರೀದಿಸುವ ಯಾವುದೇ ವಸ್ತು ಅಥವಾ ಮನೆ, ನಿವೇಶನ ಖರೀದಿಯಲ್ಲಿ ಹಾಗೂ ಡಾಕ್ಟರ್‍ಗಳಿಂದ, ಮೆಡಿಕಲ್ ಸೇವೆಗಳಿಂದ ಮೋಸಕ್ಕೆ ಬಲಿಯಾಗಿದ್ದರೆ ಕೂಡಲೇ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದು. ಆದ್ದರಿಂದ ಪ್ರತಿಯೊಬ್ಬರೂ ಗ್ರಾಹಕರ ವೇದಿಕೆಯ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಏಕತಾ ಎಚ್.ಡಿ ಹೇಳಿದರು.
    ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಸಾವಿತ್ರಿ ಮುಜುಂದಾರ ಅವರು, ನಾವು ಗ್ರಾಹಕರ ವೇದಿಕೆಯ ಬಗ್ಗೆ ತಿಳಿದುಕೊಂಡಾಗಲೇ ಬೇರೆಯವರಿಗೆ ತಿಳಿಸಲು ಸಾದ್ಯ.  ಗ್ರಾಹಕರ ವೇದಿಕೆಯ ಮೂಲಕ ವಸ್ತು ಅಥವಾ ಸೇವೆಯಲ್ಲಿನ ಕೊರತೆ, ನ್ಯೂನತೆಯನ್ನು ನಿವಾರಿಸಿಕೊಳ್ಳಬಹುದು. ಯಾವುದೇ ಒಂದು ದೇಶ ಆರ್ಥಿಕವಾಗಿ ಕುಂಠಿತಗೊಳ್ಳುತ್ತಿದೆ ಎಂದಾದರೆ ಅಲ್ಲಿ ಕಾನೂನುಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ  1986 ರಲ್ಲಿ ಭಾರತದಲ್ಲಿ ಗ್ರಾಹಕರ ವೇದಿಕೆ ವ್ಯವಸ್ಥೆ ಜಾರಿಗೆ ತರಲಾಯಿತು. ಗ್ರಾಹಕರು ಯಾವುದೇ ಇಲಾಖೆ ಅಥವಾ ಸಂಸ್ಥೆಗಳಲ್ಲಿ ಸೇವಾ ನ್ಯೂನತೆಗೆ ಒಳಗಾಗಿದ್ದರೆ ಈ ಕುರಿತು ಗ್ರಾಹಕರ ವೇದಿಕೆಯ ಮೂಲಕ ನ್ಯಾಯ ಪಡೆಯಬಹುದು.  ಒಂದು ಲಕ್ಷದ ಪರಿಹಾರದ ದೂರುಗಳಿಗೆ ರೂ.100 ಶುಲ್ಕ, ಒಂದು ಲಕ್ಷದಿಂದ 5 ಲಕ್ಷದ ವರೆಗಿನ ಪರಿಹಾರದ ದೂರಿಗೆ ರೂ.200, 5 ಲಕ್ಷದಿಂದ 10 ಲಕ್ಷದವರೆಗಿನ ಪರಿಹಾರದ ದೂರಿಗೆ ರೂ.400, 10 ಲಕ್ಷದಿಂದ 20 ಲಕ್ಷದ ಪರಿಹಾರದ ದೂರಿಗೆ ರೂ.500, ಹೀಗೆ 5 ಸಾವಿರ ರೂ ಶುಲ್ಕದ ವರೆಗಿನ ದೂರುಗಳಿಗೆ ವಾದ ಮಂಡಿಸಲು ವಕೀಲರ ಅಗತ್ಯ ಇರುವುದಿಲ್ಲ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಿದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಸಿ.ಡಿ ಗೀತಾ, ಈ ಬಾರಿಯ ಗ್ರಾಹಕರ ದಿನಾಚರಣೆಯನ್ನು ‘ಗ್ರಾಹಕರ ವ್ಯಜ್ಯಗಳ ತ್ವರಿತ ಪರಿಹಾರಕ್ಕಾಗಿ ಪರ್ಯಾಯ ವ್ಯಾಜ್ಯ ನಿವಾರಣಾ ವ್ಯವಸ್ಥೆ’ ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಾರುಕಟ್ಟೆ ನಿಂತಿರುವುದೇ ಗ್ರಾಹಕರಿಂದ. ವಸ್ತು ಅಥವಾ ಸೇವೆ ಪಡೆದುಕೊಳ್ಳಲು ಗ್ರಾಹಕ ಹಣ ನೀಡುತ್ತಾನೆ, ಅದೇ ರೀತಿ ಅಂಗಡಿಕಾರ ಗ್ರಾಹಕನಿಗೂ ಸರಿಯಾದ ಸೇವೆಯನ್ನು ಒದಗಿಸಬೇಕು.  ಗ್ರಾಹಕರು ಮೋಸಕ್ಕೆ ಒಳಗಾದರೆ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಹುದು ಎಂದು ಹೇಳಿದರು.
     ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯೆ ಸುಜಾತಾ ಅಕ್ಕಸಾಲಿ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಅಮೃತಾ ಚವ್ಹಾಣ, ಗ್ರಾಹಕರ ವೇದಿಕೆ ಸಹಾಯಕ ರಿಜಿಸ್ಟ್ರಾರ್ ಅಮರ್‍ದೀಪ್, ರಾಘವೇಂದ್ರ ಕುಲಕರ್ಣಿ sಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.  ಸರ್ಕಾರಿ ಪ್ರಥಮ ದಜೆ ಕಾಲೇಜಿನ ಉಪ ಪ್ರಾಚಾರ್ಯೆ ಭಾಗ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
Post a Comment