Wednesday, 30 November 2016

ಗಂಗಾ ಕಲ್ಯಾಣ ಯೋಜನೆ: ಪ.ಜಾತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೊಪ್ಪಳ, ನ.30 (ಕರ್ನಾಟಕ ವಾರ್ತೆ):  ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2015-16 ಹಾಗೂ 2016-17 ನೇ ಸಾಲಿನ ಗಂಗಾ ಕಲ್ಯಾಣ ಏತ ನೀರಾವರಿ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದ್ದು, ಪ.ಜಾತಿಯ ಸಣ್ಣ ಹಾಗೂ ಅತಿ ಸಣ್ಣ ರೈತರಿಂದ (ಬೋವಿ ಜನಾಂಗ ಹೊರತು ಪಡಿಸಿ) ಅರ್ಜಿ ಆಹ್ವಾನಿಸಲಾಗಿದೆ.
    ಯೋಜನೆಯು ಗುಂಪು/ಸಾಮೂಹಿಕ ಯೋಜನೆಯಾಗಿದೆ.  ಸಣ್ಣ/ಅತಿ ಸಣ್ಣ ರೈತರ ಜಮೀನಿನ ಒಟ್ಟು ವಿಸ್ತೀರ್ಣ 5 ಎಕರೆವರೆಗೆ ಮಾತ್ರ.  ಜಮೀನಿಗೆ ಯಾವುದೇ ನೈಸರ್ಗಿಕ ಹಳ್ಳ-ಕೊಳ್ಳಗಳಿಂದ, ನಾಲೆಗಳಿಂದ/ ನದಿಗಳಿಂದ ನೀರಾವರಿ ಸೌಲಭ್ಯ ಇಲ್ಲದವರು ಅರ್ಹರಿರುತ್ತಾರೆ.  ಕನಿಷ್ಠ 3 ಫಲಾಪೇಕ್ಷಿಗಳ, ಕನಿಷ್ಟ 8 ಎಕ್ರೆ ಜಮೀನು ಇದ್ದರೆ ರೂ 4 ಲಕ್ಷದ ಯೋಜನೆಗೆ ಅರ್ಹರು.  ಕನಿಷ್ಟ 4 ಫಲಾಪೇಕ್ಷಿಗಳ, ಕನಿಷ್ಟ 15 ಎಕರೆ ಜಮೀನು ಇದ್ದರೆ ರೂ 6 ಲಕ್ಷದ ಯೋಜನೆಗೆ ಅರ್ಹರಿರುತ್ತಾರೆ.   ಸ್ವಾಭಾವಿಕಾಗಿ ಹರಿಯುವ ನದಿ/ಹಳ್ಳ/ಕೊಳ್ಳದಿಂದ ನೀರನ್ನು ಗರಿಷ್ಟ ದೂರ ಅಂದಾಜು 948 ಮೀಟರ್ ವರೆಗೆ ಹರಿಸಲಾಗುವುದು. ಉಳಿದ ದೂರವನ್ನು ಫಲಾಪೇಕ್ಷಿಗಳು ಗುಂಪಾಗಿ ಸ್ವತಃ ಭರಿಸಬೇಕು.
     ಅರ್ಜಿ ಸಲ್ಲಿಸುವವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ.  ಪ್ರಸಕ್ತ ಸಾಲಿನ ಜಮೀನಿನ ಪಹಣಿ ಪತ್ರ. ಪ್ರಸಕ್ತ ಸಾಲಿನ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ. ಸಂಬಂಧಿಸಿದ ಕಾರ್ಯಪಾಲಕ ಇಂಜಿನಿಯರ್‍ರಿಂದ ನೀರಿನ ಪರವಾನಗಿ ಹಾಗೂ ವಿದ್ಯುತ್ ಸರಬರಾಜು ಕಂಪನಿ ನೋಂದಣಿ/ಅನುಮತಿ ಪತ್ರ ಹಾಗೂ ಕಂದಾಯ ಇಲಾಖೆಯಿಂದ ಜಮೀನಿನ ನಕಾಶೆಯ ಗುರುತುಪಡಿಸಿದ ಗ್ರಾಮದ ಆರ್ ಎಸ್ ನಕಾಶೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪಡೆದಿರುವ ಪ್ರತ್ಯೇಕ ಕುಟುಂಬ ಪಡಿತರ ಚೀಟಿ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದು.
     ಅರ್ಜಿ ನಮೂನೆ ಹಾಗು ಹೆಚ್ಚಿನ ಮಾಹಿತಿಗಾಗಿ ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಕಚೇರಿ, ಜಿಲ್ಲಾಡಳಿತ ಭವನ, ಕೊಪ್ಪಳ, ದೂ.ಸಂ:08539-221176 ಇಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿದೇಶಿ ಉನ್ನತ ವ್ಯಾಸಂಗಕ್ಕಾಗಿ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಕೊಪ್ಪಳ, ನ.30 (ಕರ್ನಾಟಕ ವಾರ್ತೆ):  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೊಪ್ಪಳ ಇವರು ಪ್ರಸಕ್ತ ಸಾಲಿನ ಎನ್‍ಎಂಡಿಎಫ್‍ಸಿ ಅವಧಿ ಸಾಲ ಯೋಜನೆಯಡಿ  ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಸಾಲ ಸೌಲಭ್ಯಕ್ಕಾಗಿ ಅಲ್ಪ ಸಂಖ್ಯಾತರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯ, ನಗರ ಪ್ರದೇಶದ ಅಭ್ಯರ್ಥಿಗಳಿಗೆ ರೂ.103000 ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ.81000 ಒಳಗಿರಬೇಕು.  ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು 5 ವರ್ಷಗಳ ಅವಧಿಗೆ ಗರಿಷ್ಟ ರೂ.30 ಲಕ್ಷಗಳ ವರೆಗೆ, ಪುರುಷ ಅಭ್ಯರ್ಥಿಗಳಿಗೆ ಶೇ.8 ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶೇ.5 ರ ಬಡ್ಡಿದರಲ್ಲಿ ಸಾಲ ಒದಗಿಸಲಾಗುವುದು.
     ಆಯಾ ಕೋರ್ಸ್‍ಗಳಿಗೆ ಮೊದಲನೆ ವರ್ಷ ಮಂಜೂರಾದ ಸಾಲದ ಮೊಬಲಗು ಅಥವಾ ಕಾಲೇಜಿನವರು ಕ್ಲೇಂ ಮಾಡುವ ಶುಲ್ಕ ಯಾವುದು ಕಡಿಮೆಯೋ ಅದು ನಂತರದ ವರ್ಷಗಳಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುವುದು.
     ಯೋಜನೆಯಡಿ ವೃತ್ತಿ ಆಧಾರಿತ ಕೋರ್ಸ್/ಉನ್ನತ ವ್ಯಾಸಂಗ ಮಾಡಲಿಚ್ಛಿಸುವ ವಿದ್ಯಾರ್ಥಿಗಳ ಪೋಷಕರು ಸಾಲದ ಭದ್ರತೆಗಾಗಿ ಸ್ಥಿರಾಸ್ತಿಯನ್ನು ನಿಗಮಕ್ಕೆ ಅಡಮಾನ (ಹೈಪಾಥಿಕೆಷನ್) ಮಾಡಬೇಕು. ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೊಪ್ಪಳ ದೂ.ಸಂ; 08539-225008 ಇಲ್ಲಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಕ್ಷಗಾನ ಬಯಲಾಟ ಅಕಾಡೆಮಿ : ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಮತ್ತು ಘಟ್ಟದಕೋರೆ), ಮೂಡಲಪಾಯ ಯಕ್ಷಗಾನ, ಗೊಂಬೆಯಾಟ (ಸೂತ್ರದ ಮತ್ತು ತೊಗಲುಗೊಂಬೆ), ಶ್ರೀಕೃಷ್ಣಪಾರಿಜಾತ, ಸಣ್ಣಾಟ, ದೊಡ್ಡಾಟ ಇತ್ಯಾದಿ ಕಲಾ ಪ್ರಕಾರಗಳಿಗೆ ಸಂಬಂಧಿಸಿದ 2014 ಮತ್ತು 2015 ರಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಅರ್ಜಿ ಆಹ್ವಾನಿಸಿದೆ.
     2014 ನೇ ಸಾಲಿನಲ್ಲಿ ಪ್ರಕಟವಾಗಿ ಆಯ್ಕೆಯಾದ ಪುಸ್ತಕಕಕ್ಕೆ 5000 ರೂ. ಹಾಗೂ 2015 ನೇ ಸಾಲಿನಲ್ಲಿ ಪ್ರಕಟವಾಗಿ ಆಯ್ಕೆಯಾಗುವ ಪುಸ್ತಕಕ್ಕೆ ರೂ. 25000 ರೂ. ಗಳ ಬಹುಮಾನ ನೀಡಲಾಗುವುದು.  ಯಕ್ಷಗಾನ ಮತ್ತು ಬಯಲಾಟದ ವಿವಿಧ ಆಯಾಮಗಳ ಬಗ್ಗೆ (ಸಂಗೀತ, ಆಹಾರ್ಯ, ಅಭಿನಯ ಇತ್ಯಾದಿ) ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ.  ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು.  ಸಂಪಾದಿತ ಅಭಿನಂದನಾ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು ಮತ್ತು ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು.
     ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, ಎರಡನೆ ಮಹಡಿ, ಚಾಲುಕ್ಯ ವಿಭಾಗ, ಜೆಸಿ ರಸ್ತೆ, ಬೆಂಗಳೂರು-02, ಇವರಿಗೆ ಡಿಸೆಂಬರ್ 15 ರೊಳಗಾಗಿ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಸಲ್ಲಿಸಬೇಕು.  ಹೆಚ್ಚಿನ ವಿವರಗಳನ್ನು ದೂರವಾಣಿ ಸಂ: 080-22113146  ಇವರಿಂದ ಹಾಗೂ ಅರ್ಜಿ ನಮೂನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರದಲ್ಲೂ ಲಾಭದ ಘಮಲು : ದಾವಲಸಾಬ್ ಕೈ ಹಿಡಿದ ಸುಗಂಧರಾಜ


ಕೊಪ್ಪಳ, ನ.30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯ ಈ ವರ್ಷ ಬರದ ಬೇಗುದಿಗೆ ಸಿಲುಕಿದೆ.  ಒಂದೆಡೆ ಈರುಳ್ಳಿ ಬೆಳೆದ ರೈತರು ದರ ಕುಸಿತದ ಬಿರುಗಾಳಿಗೆ ಸಿಕ್ಕಿ ನಷ್ಟ ಅನುಭವಿಸುತ್ತಿದ್ದಾರೆ.  ಉಳಿದ ಕೃಷಿ ಬೆಳೆಗಳು ಮಳೆಯ ಕೊರತೆಯಿಂದ ಕೈಗೆ ಬಂದಿಲ್ಲ.  ಇವೆಲ್ಲ ಸಂಕಷ್ಟಗಳ ನಡುವೆಯೂ ಸ್ವಲ್ಪ ಜಮೀನಿನಲ್ಲಿಯೇ ಸುಗಂಧರಾಜ ಪುಷ್ಪ ಕೃಷಿಯನ್ನು ಕೈಗೊಂಡು ನಿತ್ಯ ಲಾಭಗಳಿಸುತ್ತ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದ ರೈತ ದಾವಲಸಾಬ್

     ತೋಟಗಾರಿಕೆ ಇಲಾಖೆಯ ವತಿಯಿಂದ ನೆರವು ಹಾಗೂ ತಂತ್ರಜ್ಞಾನ ಪಡೆದು, ಪುಷ್ಪಕೃಷಿಯನ್ನು ಯಶಸ್ವಿಯಾಗಿ ಕೈಗೊಂಡು ಉತ್ತಮ ಲಾಭ ಪಡೆಯುತ್ತಿರುವ ರೈತನ ಯಶೋಗಾಥೆಯ ವರದಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕೊಪ್ಪಳ ತಾಲೂಕು ಬೇಳೂರು ಗ್ರಾಮಕ್ಕೆ ವಿಶೇಷ ಮಾಧ್ಯಮ ಅಧ್ಯಯನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

     ಸಂಜೆಯ ಹೊತ್ತಿನಲ್ಲಿ ಸುವಾಸನೆಯ ಸುಗಂಧ ಬೀರುತ್ತ, ಮುಖ್ಯವಾಗಿ ಹೂಮಾಲೆಗಳಿಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಹೂವು ಸುಗಮಧರಾಜ.  ಈ ಹೂವಿಗೆ ಎಲ್ಲೆಡೆ ವ್ಯಾಪಕ ಬೇಡಿಕೆ ಇದೆ. ಸುಗಂಧರಾಜ ಹೂವಿನ ಬೆಳೆ ಸಾಮಾನ್ಯವಾಗಿ ಚಿತ್ರದುರ್ಗ, ದಾವಣಗೆರೆ, ತುಮಕೂರು ಹೀಗೆ ದಕ್ಷಿಣಕರ್ನಾಟಕದ ಜಿಲ್ಲೆಗಳಲ್ಲಿ ಬೆಳೆಯುವುದು ಹೆಚ್ಚು.  ಆದರೆ, ರೈತ ದಾವಲ್‍ಸಾಬ್, ಕೊಪ್ಪಳ ಜಿಲ್ಲೆಯಂತಹ ಬಿಸಿನ ನಾಡಿನಲ್ಲಿಯೂ ಈ ಹೂವನ್ನು ಬೆಳೆದು, ಯಶಸ್ವಿಯಾಗಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.  

     ಕಳೆದ ವರ್ಷ ಕೇವಲ ಅರ್ಧ ಎಕರೆಯಲ್ಲಿ ಶೃಂಗಾರ ತಳಿಯ ಸುಗಂಧರಾಜ ಬೆಳೆಯ ಗೆಡ್ಡೆಯನ್ನು ಭೂಮಿಗೆ ಬಿತ್ತಿದ ದಾವಲಸಾಬ, ಸತತ ಎಂಟು ತಿಂಗಳ ಕಾಲ ತಾಳ್ಮೆಯಿಂದ ಕಾಯ್ದು, ಇದೀಗ ನಿತ್ಯ ಉತ್ತಮ ಲಾಭ ಗಳಿಸುತ್ತಿದ್ದಾರೆ.  ಇದೀಗ ನಿತ್ಯ ಕನಿಷ್ಟ 15 ರಿಂದ 20 ಕೆ.ಜಿ. ಹೂ ಪಡೆಯುತ್ತಿದ್ದು, ಕೊಪ್ಪಳದ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ.  ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಹೂವಿಗೆ 50 ರಿಂದ 60 ರೂ. ದರ ಸಿಗುತ್ತಿದ್ದು, ನಿತ್ಯ ಕನಿಷ್ಟ ಎಂಟು ನೂರು ಗಳಿಂದ ಒಂದು ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ.  ಶ್ರಾವಣ ಮಾಸದಲ್ಲಿ, ಹಬ್ಬ ಹರಿದಿನಗಳಲ್ಲಿ, ಅಮವಾಸ್ಯೆ, ಹುಣ್ಣಿಮೆಯ ಹಿಂದಿನ ದಿನದಲ್ಲಿ ಪ್ರತಿ ಕೆ.ಜಿ. ಗೆ ಗರಿಷ್ಠ 150 ರೂ. ವರೆಗೂ ಲಭ್ಯವಾಗುತ್ತದೆ.  ಖರ್ಚು ವೆಚ್ಚ ಹೊರತುಪಡಿಸಿ ಅರ್ಧ ಎಕರೆಯಲ್ಲಿ, ವರ್ಷಕ್ಕೆ ಕನಿಷ್ಟ 2 ರಿಂದ 2.5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.  ಸುಗುಂಧರಾಜ ಹೂವಿನ ವಿಶೇಷತೆ ಎಂದರೆ, ಹೂವನ್ನು ಬಿಡಿಸಿದ ನಂತರವೂ, ಕನಿಷ್ಟ 03 ದಿನಗಳ ಕಾಲ ಬಾಡದೆ ಸುಗಂಧವನ್ನು ಸೂಸುತ್ತ ನಳನಳಿಸುತ್ತಿರುತ್ತದೆ. 
     ಪದವಿ ವ್ಯಾಸಂಗ ಪೂರ್ಣಗೊಂಡ ನಂತರ, ಸರ್ಕಾರಿ ಅಥವಾ ಖಾಸಗಿ ನೌಕರಿ ಮಾಡಬೇಕೋ, ಅಥವಾ ಸ್ವಯಂ ಉದ್ಯೋಗ ಮಾಡಬೇಕೊ ಎಂಬ ಜಿಜ್ಞಾಸೆಯಲ್ಲಿದ್ದ ತಾನು, ತೋಟಗಾರಿಕೆ ಇಲಾಖೆಯವರಿಂದ ಸಲಹೆ ಪಡೆದು, ಪುಷ್ಪಕೃಷಿಯಲ್ಲಿ ವಿಶೇಷವಾಗಿ ಸುಗಂಧರಾಜ ಬೆಳೆ ಬೆಳೆದು, ನಿತ್ಯ ಆದಾಯವನ್ನು ಗಳಿಸುತ್ತಾ ನೆಮ್ಮ ಕುಟುಂಬ ನೆಮ್ಮದಿಯ ಬದುಕು ಕಂಡುಕೊಂಡಿದ್ದೇನೆ.  ರೈತರು ಎಂತಹ ಪರಿಸ್ಥಿತಿಯಲ್ಲೂ ಆತ್ಮ ಸ್ಥೈರ್ಯ ಕಳೆದುಕೊಳ್ಳದೇ ಇಲಾಖೆ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಬೇಕು ಎನ್ನುತ್ತಾರೆ ರೈತ ದಾವಲಸಾಬ್ ಅವರು.
     ಸುಗಂಧರಾಜ ಪುಷ್ಪ ಕೃಷಿ ಅತ್ಯಂತ ಕಡಿಮೆ ವೆಚ್ಚದಾಯಕವಾಗಿದ್ದು, ಅರ್ಧ ಎಕರೆಗೆ ಕೇವಲ 20 ರಿಂದ 30 ಸಾವಿರ ರೂ. ವೆಚ್ಚವಾಗಿದೆ.  ಈ ಗಿಡಕ್ಕೆ ಕೀಟಬಾಧೆ, ರೋಗಬಾಧೆ ಕಾಡುವುದು ಬಹಳಷ್ಟು ಕಡಿಮೆ ಇರುವುದರಿಂದ, ಕೀಟನಾಶಕ ಬಳಕೆ, ಹೆಚ್ಚಿನ ಗೊಬ್ಬರ ಹಾಕುವ ಪ್ರಮೇಯವೂ ಇಲ್ಲ.  ಸುಗಂಧರಾಜ ಗಡ್ಡೆಯನ್ನು ಒಮ್ಮೆ ಹೊಲಕ್ಕೆ ಹಾಕಿ, ಉತ್ತಮ ನಿರ್ವಹಣೆ ಮಾಡಿದರೆ, ಕನಿಷ್ಟ 03 ರಿಂದ 05 ವರ್ಷಗಳವರೆಗೆ ಯಾವುದೂ ಹೆಚ್ಚಿನ ಖರ್ಚಿಲ್ಲದೆ, ನಿರಂತರ ಹೂವಿನ ಬೆಳೆ ಪಡೆಯಬಹುದು ಎನ್ನುತ್ತಾರೆ ಕೊಪ್ಪಳದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞ ವಾಮನಮೂರ್ತಿ ಅವರು.
     ತೋಟಗಾರಿಕೆ ಬೆಳೆ ವಿಸ್ತರಣೆ ಹಾಗು ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಇಲಾಖೆಯಿಂದ ಹಲವು ಯೋಜನೆಗಳು ಇಲಾಖೆಯಲ್ಲಿ ಲಭ್ಯವಿದೆ.   ತೊಟಗಾರಿಕೆ ಬೆಳೆಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಕೆ ಅತ್ಯಂತ ಉತ್ತಮ ವ್ಯವಸ್ಥೆಯಾಗಿದ್ದು, ಇದರಿಂದ ಮಿತ ನೀರಿನಲ್ಲಿ ಅಧಿಕ ಇಳುವರಿ ಹಾಗೂ ಲಾಭ ಪಡೆಯಲು ಸಾಧ್ಯವಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್‍ನಡಿ ಶೇ. 90 ರಷ್ಟು ಸಬ್ಸಿಡಿ ಇದೆ.  ರೈತರು ಇದರ ಸದುಪಯೋಗ ಪಡೆದು, ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ  ಕೃಷ್ಣ ಉಕ್ಕುಂದ ಅವರ ಸಲಹೆ.   ಬೇಳೂರು ಗ್ರಾಮದ ಇನ್ನೋರ್ವ ರೈತ ಸಣ್ಣ ಮಲ್ಲಪ್ಪ ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ.  ಈ ವರ್ಷ ಕಷ್ಟಪಟ್ಟು ಈರುಳ್ಳಿ ಬೆಳೆ ಬೆಳೆದೆ, ಆದರೆ ಬೆಲೆ ಕುಸಿತದಿಂದ ತೀವ್ರ ನಷ್ಟವಾಗಿದೆ.  ರೈತ ದಾವಲಸಾಬ್ ಸುಗಂಧರಾಜ ಪುಷ್ಪಕೃಷಿ ಮಾಡುತ್ತಿರುವುದನ್ನು ಗಮನಿಸಿದ್ದು, ಉತ್ತಮ ಆದಾಯ ಬರುತ್ತಿದೆ.  ನಾನೂ ಸಹ ಪುಷ್ಪಕೃಷಿ ಮಾಡಲು ನಿರ್ಧರಿಸಿದ್ದೇನೆ’.  ಸಣ್ಣ ರೈತರು ಸುಗಂಧರಾಜ, ಗುಲಾಬಿ, ಕನಕಾಂಬರ ನಂತಹ ಪುಷ್ಪ ಕೃಷಿ ಮಾಡಿದಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯವಿದೆ.
     ಹೆಚ್ಚಿನ ಮಾಹಿತಿಗೆ ಕೊಪ್ಪಳದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞ ವಾಮನಮೂರ್ತಿ- 9482672039 ಕ್ಕೆ ಸಂಪರ್ಕಿಸಬಹುದು.    

ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಡಿ. 02 ರಂದು ಮಧ್ಯಾಹ್ನ 12 ಗಂಟೆಗೆ ಬೆಳಗಾವಿಯಿಂದ ವಿಶೇಷ ವಿಮಾನದ ಮೂಲಕ ಹೊರಟು, ಮಧ್ಯಾಹ್ನ 12-45 ಗಂಟೆಗೆ ಕೊಪ್ಪಳ ಜಿಲ್ಲೆಯ ಬಸಾಪುರ ಬಳಿಯ ಎಮ್‍ಎಸ್‍ಪಿಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವರು.  ನಂತರ ಇದೇ ನಿಲ್ದಾಣದಿಂದ 12-50 ಗಂಟೆಗೆ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ಮೂಲಕ ರಾಯಚೂರಿಗೆ ತೆರಳುವರು.
     ಮುಖ್ಯಮಂತ್ರಿಗಳು ಅದೇ ದಿನದಂದು ಹೆಲಿಕಾಪ್ಟರ್ ಮೂಲಕ ಸಂಜೆ 4-15 ಗಂಟೆಗೆ ಕೊಪ್ಪಳ ಜಿಲ್ಲೆಯ ಬಸಾಪುರ ಎಮ್‍ಎಸ್‍ಪಿಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, 4-20 ಗಂಟೆಗೆ ವಿಶೇಷ ವಿಮಾನ ಮೂಲಕ ಬೆಳಗಾವಿಗೆ ಪ್ರಯಾಣ ಬೆಳೆಸುವರು.

Tuesday, 29 November 2016

ಡಿ.13 ರಿಂದ ಹಂಪಿ ವಿರುಪಾಕ್ಷೇಶ್ವರ ಫಲಪೂಜಾ ಮಹೋತ್ಸವ


ಕೊಪ್ಪಳ, ನ.29 (ಕರ್ನಾಟಕ ವಾರ್ತೆ):  ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ಕ್ಷೇತ್ರದ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ಫಲಾಪೂಜಾ ಮಹೋತ್ಸವ ಡಿ.13 ರಿಂದ ನಡೆಯಲಿದೆ.
     ಫಲಪೂಜಾ ಮಹೋತ್ಸವದ ಅಂಗವಾಗಿ ಡಿ.13 ರ ರಾತ್ರಿ 08.30 ಗಂಟೆಗೆ ಮನ್ಮುಖ ತೀರ್ಥದಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ ಹಾಗೂ ಡಿ.15  ರಂದು ರಾತ್ರಿ 10 ಗಂಟೆಗೆ ಶ್ರೀ ಚಕ್ರ ತೀರ್ಥ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವ ಜರುಗಲಿದೆ.  ಅಲ್ಲದೆ ಡಿ.13 ರಿಂದ 15 ರವರೆಗೆ ನಡೆಯುವ ಈ ಫಲಪೂಜಾ ಮಹೋತ್ಸವದಲ್ಲಿ  ವಿಜಯನಗರದ ಅರಸ ಶ್ರೀಕೃಷ್ಣದೇವರಾಯರು ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯವರಿಗೆ ಸಮರ್ಪಿಸಿದ ನವರತ್ನ ಖಚಿತವಾದ ಸುವರ್ಣಮುಖ ಕಮಲದೊಂದಿಗೆ ಅಲಂಕರಿಸಲಾಗುವುದು.  ಫಲಪೂಜಾ ನಂತರ   ಜಗದ್ಗುರುಗಳಿಂದ ಆಶೀರ್ವಚನ ನಡೆಯಲಿದೆ. ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಅನ್ನಸಂತರ್ಪಣೆ ಕಾರ್ಯ ಜರುಗಲಿದ್ದು, ದವಸ ಧಾನ್ಯಗಳನ್ನು ಕೊಡಲಿಚ್ಛಿಸುವ ಭಕ್ತಾದಿಗಳು ದೇವಸ್ಥಾನದ ಕಾರ್ಯಾಲಯದಲ್ಲಿ ನೀಡಿ ರಸೀದಿ ಪಡೆಯಬಹುದಾಗಿದೆ.
     ಭಕ್ತ ಮಹಾಶಯರು ತಮ್ಮ ಬಂಧು-ಮಿತ್ರರೊಡನೆ ಶ್ರೀ ಪುಣ್ಯಕ್ಷೇತ್ರಕ್ಕೆ ಆಗಮಿಸಿ, ಶ್ರೀ ವಿರೂಪಾಕ್ಷೇಶ್ವರ  ಸ್ವಾಮಿಯ ಸರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ಭುವನೇಶ್ವರಿ ಸಹಿತ ಶ್ರೀ ಪಂಪಾ ವಿರುಪಾಕ್ಷೇಶ್ವರ ಸ್ವಾಮಿಯ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಯಂ.ಹೆಚ್.ಪ್ರಕಾಶ್‍ರಾವ್ ತಿಳಿಸಿದ್ದಾರೆ. 

ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣದತ್ತ ಗಬ್ಬೂರು- ಜಿಪಂ ಸಿಇಓ ರಾಮಚಂದ್ರನ್

ಕೊಪ್ಪಳ, ನ.29 (ಕರ್ನಾಟಕ ವಾರ್ತೆ):  ಸ್ವಚ್ಛ ಭಾರತ್ ಯೋಜನೆಯಡಿ ತಾಲೂಕಿನ ಗುಳದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಬ್ಬೂರು ಗ್ರಾಮವು ಶೀಘ್ರ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಹೇಳಿದರು.

     ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸಲು  ಗುಳದಳ್ಳಿ ಗ್ರಾ.ಪಂ ವ್ಯಾಪ್ತಿಯ ಗಬ್ಬೂರು ಗ್ರಾಮದಲ್ಲಿ ಹೊಸಪೇಟೆ ಆಕಾಶವಾಣಿ ಕೇಂದ್ರವು ಮಂಗಳವಾರದಂದು ಭೇಟಿ ನೀಡಿ, ಬಯಲು ಶೌಚ ಮುಕ್ತ ಮಾಡುವ ಉದ್ದೇಶದಿಂದ ಗಬ್ಬೂರು ಗ್ರಾಮದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳೊಂದಿಗಿನ ವಿಚಾರ ವಿನಿಮಯವನ್ನು ಒಂದು ಗಂಟೆಗಿಂದ ಹೆಚ್ಚು ಕಾಲ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿತು.

     ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಜಿ.ಪಂ ಸಿಇಒ ಆರ್.ರಾಮಚಂದ್ರನ್ ಅವರು ಬಯಲು ಮಲ ವಿಸರ್ಜನೆಯಿಂದಾಗುವ ತೊಂದರೆಗಳ ಕುರಿತು ವಿವರಿಸಿದರು. ವೈಯಕ್ತಿಕ ಶೌಚಾಲಯ ಹೊಂದಿರದ ಮಕ್ಕಳು ತಮ್ಮ ಪಾಲಕರು, ಪೋಷಕರಿಗೆ ಶೌಚಾಲಯ ನಿರ್ಮಿಸುವಂತೆ ಪತ್ರ ಬರೆಯಬೇಕು ಎಂದು ಹೇಳಿದರು.  ನಂತರ ಆಕಾಶವಾಣಿಯ ನೇರ ಪ್ರಸಾರದಲ್ಲಿ ಮಾತನಾಡಿ ಗಬ್ಬೂರು ಗ್ರಾಮದಲ್ಲಿ ಪರಿಣಾಮಕಾರಿಯಾಗಿ ಫಾಲೋಅಪ್ ಕಾರ್ಯ ನಡೆಯುತ್ತಿದ್ದು, ತ್ವರಿತವಾಗಿ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಕ್ರಮವಹಿಸಲಾಗುತ್ತದೆ.  ಗ್ರಾಮದಲ್ಲಿ ಒಟ್ಟು 288 ಕುಟುಂಬಗಳಿದ್ದು, ಈಗಾಗಲೇ 254 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿವೆ. 14 ಕುಟುಂಬಗಳ ಶೌಚಾಲಯ ನಿರ್ಮಾಣ ಪ್ರಗತಿಯಲ್ಲಿದೆ,  ಬಾಕಿ ಉಳಿದ 20 ಕುಟುಂಬಗಳ ಶೌಚಾಲಯಗಳನ್ನು ಶೀಘ್ರದಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು. 

     ಇದಕ್ಕೂ ಮುನ್ನ ಬೆಳ್ಳಂಬೆಳಿಗ್ಗೆ ಜಿ.ಪಂ ಸಿಇಒ ಹಾಗೂ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಶೌಚಾಲಯ ಹಾಗೂ ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

     ಹೊಸಪೇಟೆ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅನುರಾಧ ಕಟ್ಟಿ, ಗ್ರಾ.ಪಂ ಸದಸ್ಯ ಹನುಮಂತಪ್ಪ ಕುರಿ, ಪಿಡಿಒ ಶಿವಬಸಪ್ಪ, ಸ್ವಚ್ಛ ಭಾರತ್ ಮಿಷನ್ ಸಮಾಲೋಚಕರು, ಶಾಲಾ ಶಿಕ್ಷಕರು, ಮಕ್ಕಳು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸ್ವ-ಸಹಾಯ ಸಂಘದ ಮಹಿಳೆಯರು, ಜಾಗೃತಿ ತಂಡದ ಸದಸ್ಯರಾದ ಕುಬೇರಪ್ಪ ಮಜ್ಜಿಗಿ, ಸಿದ್ದಪ್ಪ, ರಾಮಣ್ಣ, ಅಲಿಸಾಬ್,ಲಕ್ಷ್ಮಣ, ಮೇಲಪ್ಪ, ಗ್ರಾ.ಪಂ ಸಿಬ್ಬಂದಿಗಳು ಭಾಗವಹಿಸಿ ಆಕಾಶವಾಣಿ ಕಾರ್ಯಕ್ರಮದ ನೇರಪ್ರಸಾರದಲ್ಲಿ ತಮ್ಮ ಅನುಭವ ಹಂಚಿಕೊಂಡರು.

ಜಿಲ್ಲಾ ಮಟ್ಟದ ಅಂತರ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ : ಅರ್ಜಿ ಆಹ್ವಾನ

ಕೊಪ್ಪಳ, ನ.29 (ಕರ್ನಾಟಕ ವಾರ್ತೆ):  ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ, ಜಿಲ್ಲೆಯ ಕಾಲೇಜುಗಳಲ್ಲಿ ದೇಶೀಯ ಸಾಂಸ್ಕøತಿಕ ವಾತಾವರಣ ಪುನರ್ ಸ್ಥಾಪಿಸಲು ಜಿಲ್ಲಾ ಮಟ್ಟ, ವಿಭಾಗಮಟ್ಟ ಹಾಗೂ ರಾಜ್ಯ ಮಟ್ಟದ ಅಂತರ ಕಾಲೇಜುಗಳ ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು ಆಸಕ್ತ ಕಾಲೇಜು ಮುಖ್ಯಸ್ಥರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಕನ್ನಡ ಆಧುನಿಕ ರಂಗಭೂಮಿಗೆ 60 ಮತ್ತು 70 ರ ದಶಕದಲ್ಲಿ ಕಾಲೇಜು ರಂಗಭೂಮಿ ಮಹತ್ವದ ಕೊಡುಗೆ ನೀಡಿದೆ.  ಈ ದಶಕದಲ್ಲಿ ಕಾಲೇಜು ಆವರಣದಲ್ಲಿ ವೈಚಾರಿಕ ಪ್ರಜ್ಞೆ ಪ್ರಧಾನ ಸ್ಥಾನ ಪಡೆದಿತ್ತು. ವಿದ್ಯಾರ್ಥಿಗಳಲ್ಲಿ ಸಾಮುದಾಯಿಕ ಚಿಂತನೆ ಸಮಾಜಮುಖಿಯಾದ ಆಲೋಚನೆಗಳನ್ನು ಬಿತ್ತುವ ಕಾರ್ಯ ರಂಗಭೂಮಿಯಿಂದಲೇ ಆಗುತ್ತಿತ್ತು.  ಕಾಲೇಜು ಆವರಣದಲ್ಲಿ ಆರೋಗ್ಯಪೂರ್ಣವಾದ ಸಾಂಸ್ಕøತಿಕ ವಾತಾವರಣ ಸದಾ ನಳನಳಿಸುತ್ತು. ಈ ಸಂದರ್ಭದಲ್ಲಿ ಅನೇಕಾನೇಕ ರಂಗ ಪ್ರಯೋಗಗಳು ನಡೆದವು. ಇದರಿಂದಾಗಿ ರಂಗಭೂಮಿಯಲ್ಲಿ ಉತ್ತಮ ನಟರ ಪಡೆ, ಬಹುಮುಖ ಪ್ರತಿಭೆಯ ನಾಟಕಕಾರರ, ಕ್ರೀಯಾಶೀಲ ನಿರ್ದೇಶಕರು ಕಾಣಿಸಿಕೊಂಡು ಕನ್ನಡ ರಂಗಭೂಮಿಯನ್ನು ಉತ್ತುಂಗಕ್ಕೇರಿಸಿತ್ತು.  ಕನ್ನಡ ಆಧುನಿಕ ರಂಗಭೂಮಿಯ ಕೊಡುಗೆ ಅಪಾರವಾಗಿದ್ದು,  ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಕವಾಗಿದ್ದ ಪ್ರತಿಭೆಯ ಅನಾವರಣಕ್ಕರ ಕಾಲೇಜು ರಂಗಭೂಮಿ ಒಂದು ಉತ್ತಮ ವೇದಿಕೆಯಾಗಿತ್ತು.
     ಈ ಹಿನ್ನೆಲೆಯಲ್ಲಿ ರಾಜ್ಯದ ಕಾಲೇಜುಗಳಲ್ಲಿ ದೇಶಿಯ ಸಾಂಸ್ಕøತಿಕ ವಾತಾವರಣ ಪುನರ್ ಸ್ಥಾಪಿಸುವ ಉದ್ದೇಶದಿಂದ ಕಾಲೇಜುಗಳ ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ.
     ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಕಾಲೇಜು ಮುಖ್ಯಸ್ಥರು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಪ್ಪಳ ಇಲ್ಲಿ ಅರ್ಜಿ ನಮೂನೆ ಹಾಗೂ ಸಂಬಂಧಿಸಿದ ಮಾಹಿತಿ ಪಡೆದು ಡಿ.07 ರೊಳಗಾಗಿ ಸಲ್ಲಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.03 ರಂದು ಕೊಪ್ಪಳದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ

ಕೊಪ್ಪಳ, ನ.29 (ಕರ್ನಾಟಕ ವಾರ್ತೆ):  ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಹಾಗೂ ಕೊಪ್ಪಳ ಜಿಲ್ಲೆಯ ವಿವಿಧ ವಿಕಲಚೇತನರ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ  ಕಾರ್ಯಕ್ರಮ ಡಿ.03 ರಂದು ಬೆಳಿಗ್ಗೆ 10.30 ಗಂಟಗೆ ಕೊಪ್ಪಳದ ಸರಕಾರಿ ಬಾಲಕೀಯರ ಪ.ಪೂ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭ ಅಧ್ಯಕ್ಷತೆ ವಹಿಸುವರು.  ಜಿ.ಪಂ ಅಧ್ಯಕ್ಷ ನಾಗರಳ್ಳಿ ಶೇಖರಪ್ಪ ಬಸವರಡ್ಡೆಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್.ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಕೊಪ್ಪಳ ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ತ್ಯಾಗರಾಜನ್, ನಗರಸಭೆ ಪೌರಾಯುಕ್ತ ಪರಮೇಶ್ವರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
     ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದಿಂದ ಸಾರ್ವಜನಿಕ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ.  ನಂತರ 10.30 ಕ್ಕೆ ಕ್ರೀಡಾ ಕೂಟದ ಉದ್ಘಾಟನೆ ನಡೆಯಲಿದೆ.  ಸಂಜೆ 4.30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ಜಗದೀಶ ಟಿ.ಕೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್ ಕಲಾದಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರ ಪರಿಸ್ಥಿತಿಯಲ್ಲಿ ಎಲ್ಲ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತನ್ನಿ- ಸಿಇಓ ಆರ್. ರಾಮಚಂದ್ರನ್

ಕೊಪ್ಪಳ ನ. 29 (ಕರ್ನಾಟಕ ವಾರ್ತೆ); ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಎಲ್ಲ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವುದು ಸೂಕ್ತವಾಗಿದೆ.  ಈ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರದಂದು ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಕುರಿತಂತೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ತೀವ್ರ ಬರ ಪರಿಸ್ಥಿತಿ ಇದೆ.  ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೈತರು ಬೆಳೆ ಹಾನಿ ಅನುಭವಿಸಿದ್ದಾರೆ.  ಆದರೆ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಸಂಖ್ಯೆ ಬಹಳಷ್ಟು ಕಡಿಮೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದರೆ, ಮುಂಗಾರು ಹಂಗಾಮಿನ ವಿಮೆ ಪಡೆಯಲು ಅನುಕೂಲವಾಗುತ್ತಿತ್ತು.  ಇದೀಗ ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು, ಬೆಳೆ ಸಾಲ ಪಡೆಯುವ ರೈತರಷ್ಟೇ ಅಲ್ಲದೆ ಸಾಲ ಪಡೆಯದ ರೈತರೂ ಸಹ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆಗೆ ನೋಂದಾಯಿಸುವಂತಾಗಬೇಕು.  ಹಿಂಗಾರು ಹಂಗಾಮಿಗೆ ನೋಂದಾಯಿಸಲು ಡಿ. 31 ಕೊನೆಯ ದಿನಾಂಕವಾಗಿದೆ.  ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ರೈತ ಸಮುದಾಯಕ್ಕೆ ಇದರಿಂದ ಸಹಕಾರಿಯಾಗಲಿದೆ.  ಗ್ರಾಮೀಣ ಮಟ್ಟದಲ್ಲಿ ಬೆಳೆ ವಿಮೆ ಬಗ್ಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ಕಾರ್ಯ ಆಗಬೇಕು.  ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ಪ್ರಚಾರ ತೀವ್ರಗೊಳ್ಳಬೇಕು.  ಎಲ್ಲ ರೈತರು ಬೆಳೆ ವಿಮೆಗೆ ನೋಂದಾವಣೆ ಆಗಬೇಕು.  ಯೋಜನೆಯ ಲಾಭದ ಬಗ್ಗೆ ಬ್ಯಾಂಕ್‍ಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ರೈತರಲ್ಲಿ ಅರಿವು ಮೂಡಿಸಬೇಕು.  ಈ ದಿಸೆಯಲ್ಲಿ ಕೃಷಿ, ತೋಟಗಾರಿಕೆ ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಬಾಬುರಾವ್ ಉಪಸ್ಥಿತರಿದ್ದರು.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ : ಸಾರ್ವಜನಿಕ ಅಹವಾಲು ಸ್ವೀಕಾರ

ಕೊಪ್ಪಳ, ನ.29 (ಕರ್ನಾಟಕ ವಾರ್ತೆ):  ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಂಡರಗಿ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ಕೊಪ್ಪಳ ತಾಲೂಕಿನ ಕವಲೂರು ಹಾಗೂ ಗುಡಿಗೇರಿ ಗ್ರಾಮಗಳ ಜಮೀನು ಭೂಸ್ವಾಧೀನ ಪ್ರಕ್ರಿಯೆ ಕುರಿತಂತೆ ಬಾಧಿತಗೊಳ್ಳುವ ಕುಟುಂಬದ ಸದಸ್ಯರುಗಳ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಡಿ. 01 ರಂದು ಬೆಳಿಗ್ಗೆ 10 ಗಂಟೆಗೆ ಕವಲೂರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
     ತಾಲೂಕಿನ ಕವಲೂರು ಮತ್ತು ಗುಡಗೇರಿ ಗ್ರಾಮಗಳ ಜಮೀನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ  ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಕಾಯ್ದೆಯನ್ವಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ತಯಾರಿಸಲು ಸಾರ್ವಜನಿಕ ಅಹವಾಲು ಕಾರ್ಯಕ್ರಮ ಡಿ.01 ರಂದು ಬೆಳಿಗ್ಗೆ 10 ಗಂಟೆಗೆ ಕವಲೂರು ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ನಡೆಯಲಿದೆ.   ಪ್ರಸ್ತಾಪಿತ ಜಮೀನುಗಳ ಭೂಮಾಲಿಕರ  ಬಾದಿತಗೊಳ್ಳುವ ಕುಟುಂಬದ ಎಲ್ಲ ವಯಸ್ಕ ಸದಸ್ಯರು ಸಾರ್ವಜನಿಕ ಅಹವಾಲು ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಕ್ಲೇಮುಗಳು ಹಾಗೂ ಆಕ್ಷೇಪಣೆಗಳಿದ್ದಲ್ಲ್ಲಿ ಲಿಖಿತವಾಗಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 28 November 2016

ಆಕಾಶವಾಣಿಯ ಭಾಗ್ಯವಾಣಿ : ಬಡತನ ನಿರ್ಮೂಲನ ಕನಸು ಕಟ್ಟಿಕೊಂಡು ನಗರಕ್ಕ ಬರೋರ ಬದುಕು ಚಂದಾಗಿರಬೇಕು

ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಬಡತನ ಬರೀ ಹಳ್ಳಿಗಳಲ್ಲಿ ಮಾತ್ರವಲ್ಲ ಪ್ಯಾಟೆಲೂ ಐತಿ. ಎಲ್ಲ ರೀತಿಯ ಬದುಕನ್ನು ಸ್ವತಃ ಅನುಭವಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಗರಗಳ ಅಭಿವೃದ್ಧಿ ಜೊತೆಗೆ ಉದ್ಯೋಗ, ಶಿಕ್ಷಣ ಮತ್ತು ಉತ್ತಮ ಜೀವನದ ಕನಸು ಹೊತ್ತು ಬರುವವರ ಬದುಕು ಕೂಡಾ ಛಂದಾಗಿರಲಿ ಎನ್ನುವತ್ತ ಹೆಚ್ಚಿನ ಕಾಳಜಿ ವಹಿಸಿದ್ದಾರೆ.
     ರಾಜ್ಯ ಸರ್ಕಾರವು ನಗರವಾಸಿಗಳ ಒಟ್ಟಾರೆ ಬದುಕು ಉತ್ತಮ ಪಡಿಸಲು, ನೀರು, ರಸ್ತೆ ಮತ್ತು ಸಂಪರ್ಕ, ಉದ್ಯೋಗ ಸೃಷ್ಠಿ, ಮೂಲಭೂತ ಸೌಕರ್ಯಗಳನ್ನು ಮತ್ತು ಕೊಳಚೆ ಪ್ರದೇಶಗಳ ಪರಿವರ್ತನೆ ಮುಂತಾದವುಗಳಿಗಾಗಿ  ಸ್ಥಳಿಯ ಸಂಸ್ಥೆಗಳ ಜೊತೆ ನಗರಾಭಿವೃದ್ಧಿ ಪ್ರಾಧಿಕಾರಗಳ, ನಗರ ಬಡತನ ನಿರ್ಮೂಲನ ಘಟಕ ವ್ಯವಸ್ಥೆ ಮಾಡಿದೆ. ಕೇಂದ್ರ ಸರ್ಕಾರ, ವಿಶ್ವಬ್ಯಾಂಕ ಮತ್ತು ಏಶಿಯನ ಬ್ಯಾಂಕ ಮತ್ತು ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಅನುದಾನ ಒದಗಿಸಲು ಪ್ರದೇಶವಾರು ಹಣಕಾಸು ಸಂಸಂಸ್ಥೆಗಳನ್ನು ಸ್ಥಾಪಿಸಿದೆ.
     ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯ ಸರ್ಕಾರದ ಮಹತ್ವದ ಜನಹಿತÀ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನದ ಭಾಗ್ಯವಾಣಿ ಕೊನೆಯ ಕಂತಿನ ಸರಣಿಯಲ್ಲಿಂದು (ರವಿವಾರ ದಿ.27) ರಾಜ್ಯಾದ್ಯಂತ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ನಗರಾಭಿವೃದ್ಧಿ, ನಗರಬಡತನ ನಿರ್ಮೂಲನ ಮತ್ತು ರಾಜ್ಯಧಾನಿಯಲ್ಲಿನ ಸಾರ್ವಜನಿಕ ರೈಲು ಪ್ರಯಾಣದ ನಮ್ಮ ಮೆಟ್ರೋ ಕುರಿತ  ಮಾಹಿತಿ ಪ್ರಸಾರವಾಯಿತು.
     ಬೆಂಗಳೂರಿನ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪಸಿಂಗ್ ಖರೋಲ್ ಮಾತನಾಡಿ ಮೊದಲ ಹಂತದಲ್ಲಿ 42.3 ಕಿ.ಮಿ.ಉದ್ದದ ನಮ್ಮ ಮೆಟ್ರೋದ ಮೊದಲ ಸಾರ್ವಜನಿಕ ಯಾನ 2011ರ ಅಕ್ಟೋಬರ್‍ನಲ್ಲಿ ಆರಂಭಿಸಿತು.  ಇಂದು ನಿತ್ಯ 1.30 ಲಕ್ಷ ಜನರನ್ನು ಸಾಗಿಸುವÀ ಸುವ್ಯವಸ್ಥಿತ, ಪರಿಸರ ಸ್ನೇಹಿ ಮತ್ತು ಕ್ಷಿಪ್ರಗತಿಯ  ಸಾರ್ವಜನಿಕ ಬ್ರಹತ್ ಸಾರಿಗೆ ವ್ಯವಸ್ಥೆಯಾಗಿ ಬೆಳೆಯುತ್ತಿದೆ.  ರಸ್ತೆಗಳಲ್ಲಿನ ದಟ್ಟಣೆ ತಪ್ಪಿಸಲು, ವಾಯುಮಾಲಿನ್ಯ ನಿಯಂತ್ರಿಸಲು, ಸುರಕ್ಷತೆ, ಅಲ್ಪಾವಧಿಯಲ್ಲಿ ಇಚ್ಛಿತ ಸ್ಥಳ ಮುಟ್ಟಲು ಸಾರ್ವಜನಿಕರು ಇದನ್ನು ಹೆಚ್ಚು ಬಳಸಬೇಕು ಎಂದರು.
     ಸಧ್ಯ 202 ಕಿ.ಮಿ. ವ್ಯಾಪ್ತಿ, 67 ವಾರ್ಡು ಮತ್ತು 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹುಬ್ಬಳ್ಳಿ ಧಾರವಾಡ ಮಹಾನಗರಸಭೆಯ ಆಯುಕ್ತ ನಿವೃತ್ತ ಮೇಜರ ಸಿದ್ದಲಿಂಗಯ್ಯ ಹಿರೇಮಠ ಅವಳಿನಗರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮತ್ತು ಅನುದಾನದ ವಿವರಗಳನ್ನು ನೀಡಿದರು. ದೀನದಯಾಳ ಅಂತ್ಯೋದಯ ಯೋಜನೆಯಡಿ ನಗರಬಡಜನರ ಆರ್ಥಿಕ ಸಬಲೀಕರಣಕ್ಕೆ ಕೌಶಲ್ಯಾಭಿವೃದ್ಧಿ, ತರಬೇತಿ ಮತ್ತು ಬ್ಯಾಂಕುಗಳಿಂದ ಅಗತ್ಯದ ಹಣಕಾಸು ಸೌಲಭ್ಯ ಒದಗಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ನಗರವಾಸಿಗಳಿಗೆ ಒಟ್ಟಾರೆ 1146ಕೋಟಿ ರೂ. ವೆಚ್ಚದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಜಾರಿಗಳೊಳಿಸಲಾಗುತ್ತಿದೆ. ಮಲಪ್ರಭೆ ನದಿಯಿಂದ ನಿತ್ಯ 160ದಶಲಕ್ಷ ಲೀ ನೀರು ಸಾರ್ವಜನಿಕ ಪೂರೈಕೆಗೆ ಪಡೆಯಲಾಗುತ್ತಿದೆ. ಅಮೃತ ಐಒಜನೆಯಡಿ ಉತ್ತಮ ಒಳಚರಂಡಿ ಯೋಜನೆ ಜಾರಿಗೆ 160 ಕೋಟಿ ರೂ ಅನುದಾನ ನೀಡಲಾಗಿದೆ. ಕಸನಿರ್ವಹಣೆಗೆ ರಾಜ್ಯ ಸರ್ಕಾರ 125 ಕೋಟಿರೂ.ಗಳ ವಿಶೇಷ ಅನುದಾನ ನೀಡಿದೆ. ಇದಲ್ಲದೆ ಕೇಂದ್ರ ಸರ್ಕಾರದ ಸ್ಮಾರ್ಟಸಿಟಿ ಯೋಜನೆಯಡಿ ಲಭ್ಯವಾಗುವ 1600 ಕೋಟಿ ರೂ, ಒದಗಲಿದ್ದು ಮುಂದಿನ ಐದುವರ್ಷಗಳಲ್ಲಿ ಇಡೀ ವಿಶ್ವವೇ ಬೊಟ್ಟು ಮಾಡಿ ತೋರಿಸುವ ನಗರ ಪ್ರದೇಶವಾಗಿ ಅಭಿವೃದ್ಧಿ ಪಡಿಸುವ ಆಶಯ ವ್ಯಕ್ತಪಡಿಸಿದರು.
     ಹಟ್ಟಿ ಹರಟೆಯ ಪ್ರಮುಖ ಪಾತ್ರ ಹನುಮಕ್ಕ(ಡಾ.ವಿಜಯಾ ಹರಣ), ಮೊದಲ ಬಾರಿಗೆ ಹಟ್ಟಿಯಿಂದ ಬೆಂಗಳೂರಿಗೆ ಬಂದು ಬಯ್ಯಪ್ಪನಹಳ್ಳಿವರೆಗೆ ಭೂಮ್ಯಾಕಾಶ ಯಾನದ ನಮ್ಮ ಮೆಟ್ರೋ ರೈಲಿನಲ್ಲಿ ಹಟ್ಟಿ ಹರಟೆ ನಡೆಸಿದ್ದು ವಿಶೇಷವಾಗಿತ್ತು. ಇಂದು ಹಳ್ಳಿ ಮತ್ತು ನಗರಗಳ ಜೀವನ ಮೊದಲಿನಂತೆ ಒಮ್ಮುಖವಾಗಿರದೆ ಪರಸ್ಪರ ಅವಲಂಬನೆಯತ್ತ ಸಾಗಿರುವ, ರಾಜ್ಯ ಸರ್ಕಾರ ರಾಜ್ಯದ ಪ್ರಮುಖ 30 ನಗರಗಳ ಅಭಿವೃದ್ಧಿಗಾಗಿ ಪ್ರಾಧಿಕಾರಗಳ ಮತ್ತು ಪೌರಾಡಳಿತ ಇಲಾಖೆ ಮೂಲಕ ಹಲವಾರು ಯೋಜನೆ ಜಾರಿಗೊಳಿಸುತ್ತಿರುವುದು. ಅಮೃತ ಯೋಜನೆಯಡಿ 27 ನಗರಗಳಲ್ಲಿ ಒಳಚರಂಡಿ, ರಸ್ತೆ, ಬೀದಿದೀಪ ಸುಧಾರಣೆ ಜೊತೆಗೆ ಕೊಳಚೆ ನೀರು ಸಂಸ್ಕರಣೆಗೆ ಒತ್ತು ನೀಡಿರುವುದು. ಕೇಂದ್ರ ಸರ್ಕಾರ ಜೆಎನ್.ಆರ.ಯು.ಎಮ್, ಯೋಜನೆ, ನಗರ ವಸತಿ ಯೋಜನೆ, ಬಡವರಿಗೆ ಪರಿಶಿಷ್ಠರಿಗೆ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗವಕಾಶ, ಉದ್ದಿಮೆ ಆರಂಭಿಸಲು ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ನೀಡುವಿಕೆ, ರಾಜ್ಯದಲ್ಲಿ ಸುಮಾರ 40 ಸಾವಿರ ಬೀದಿ ವ್ಯಾಪಾರಸ್ಥರ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿರುವ, 10 ನಗರಗಳ 103 ಕೊಳಚೆ ಪ್ರದೇಶಗಳ ಜನರಿಗಾಗಿ 25 ಸಾವಿರ ಮನೆ ನಿರ್ಮಾಣ, ಹಳ್ಳಿ ಅಷ್ಟೇ ಅಲ್ಲ ನಗರಗಳಲ್ಲೂ ಸ್ವಚ್ಛತೆ ಹೆಚ್ಚಿನ ಗಮನ ಎಲ್ಲರೂ ನಿಡಬೇಕು ಎನ್ನುವ ಮಾಹಿತಿ ಮಾತುಗಳು ಮೂಡಿಬಂದವು.
    ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ಮಾಹಿತಿಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿನೂತನ ಕಾರ್ಯಕ್ರಮ 13 ಸರಣಿಗಳ ಭಾಗ್ಯವಾಣಿ-ಅಭಿವೃದ್ಧಿ ಯೋಜನೆಗಳೊಂದಿಗೆ ಅರ್ಥಪೂರ್ಣ ಪಯಣವನನ್ನು ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವಮೂರ್ತಿ  ರೂಪಿಸಿದ್ದರು.

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ : ನ.30 ರಂದು ಗಂಗಾತಿಯಲ್ಲಿ ಕಾರ್ಯಗಾರ

ಕೊಪ್ಪಳ, ನ.28 (ಕರ್ನಾಟಕ ವಾರ್ತೆ):  ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ/ಅನುದಾನಿತ/ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾದ್ಯಾಯರ ಕಾರ್ಯಾಗಾರವನ್ನು ನ.30 ರಂದು ಬೆಳಿಗ್ಗೆ 10 ಗಂಟೆಗೆ  ಗಂಗಾವತಿಯ ಬಾಲಕರ ಸರಕಾರಿ ಪ.ಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದೆ.
     ಕಾರ್ಯಾಗಾರದಲ್ಲಿ ಪ್ರಸಕ್ತ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಉತ್ತಮ ಪಡಿಸಲು ಶಾಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ಹಾಗೂ ಹತ್ತನೇ ತರಗತಿಯ ಮೊದಲನೇ ಸಂಕಲನಾತ್ಮಕ ಮೌಲ್ಯಮಾಪನ ಫಲಿತಾಂಶ ವಿಶ್ಲೇಷಣೆ ಮಾಡಲಾಗುವುದು.   ಸಂಬಂಧಿಸಿದ ಎಲ್ಲಾ ಶಾಲಾ ಮುಖ್ಯೋಪಾದ್ಯಾಯರುಗಳು, ಫಲಿತಾಂಶ ಉತ್ತಮ ಪಡಿಸಲು ಕೈಗೊಂಡಿರುವ ಯೋಜನೆಗಳು ಹಾಗೂ ಇತರೆ ಮಾಹಿತಿಯೊಂದಿಗೆ ಕಾರ್ಯಾಗಾರದಲ್ಲಿ ಹಾಜರಾಗಬೇಕು.  ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆಯಾ ಬ್ಲಾಕಿನ ಎಸ್‍ಎಸ್‍ಎಲ್‍ಸಿ ನೋಡಲ್ ಅಧಿಕಾರಿಗಳು ಹಾಗೂ ಪ್ರೌಢಶಾಲಾ ಮುಖ್ಯೋಪಾದ್ಯಾಯರುಗಳು ಕಡ್ಡಾಯವಾಗಿ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆ

ಕೊಪ್ಪಳ, ನ.28 (ಕರ್ನಾಟಕ ವಾರ್ತೆ):  ಕೃಷಿ ಇಲಾಖೆಯಿಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯನ್ನು ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಅನುಷ್ಟಾನಗೊಳಿಸಲಾಗುತ್ತಿದ್ದು, ಪ್ರಸಕ್ತ ಹಿಂಗಾರು ಹಂಗಾಮಿಗೆ ವಿಮಾ ಕಂತು ಪಾವತಿಸಲು, ಡಿಸೆಂಬರ್ 31 ಕೊನೆಯ ದಿನ ಹಾಗೂ ಬೇಸಿಗೆ ಹಂಗಾಮಿಗೆ 2017 ಫೆಬ್ರವರಿ 28 ಕೊನೆಯ ದಿನವಾಗಿರುತ್ತದೆ.
     ಬೀಮಾ ಯೋಜನೆಯ ಹಿಂಗಾಗು ಹಾಗೂ ಬೇಸಿಗೆ ಹಂಗಾಮಿನ ವಿವರ ಇಂತಿದೆ.  ಗ್ರಾಮ ಪಂಚಾಯತ ಮಟ್ಟದಲ್ಲಿ ಅಧಿಸೂಚಿತ ಮುಖ್ಯ ಹಿಂಗಾರು ಬೆಳೆಗಳು,  ಗಂಗಾವತಿ ತಾಲೂಕು: ಕಡಲೆ (ಮಳೆ ಆಶ್ರಿತ). ಕೊಪ್ಪಳ ತಾಲೂಕು : ಜೋಳ (ಮ.ಆ), ಕಡಲೆ (ಮ.ಆ). ಕುಷ್ಟಗಿ ತಾಲೂಕು: ಕಡಲೆ (ಮ.ಆ). ಯಲಬುರ್ಗಾ ತಾಲೂಕು : ಜೋಳ (ಮ.ಆ), ಕಡಲೆ (ಮ.ಆ).  ಗಾ.ಪಂ ಮಟ್ಟದಲ್ಲಿ ಅಧಿಸೂಚಿತ ಮುಖ್ಯ ಬೇಸಿಗೆ ಬೆಳೆ ವಿವರ ಇಂತಿದೆ.  ಕೊಪ್ಪಳ ತಾಲೂಕಿಗೆ ನೆಲಗಡಲೆ (ಶೇಂಗಾ) (ನೀ).
      ಕೊಪ್ಪಳ ಜಿಲ್ಲೆಯಲ್ಲಿ ಹೋಬಳಿ ಮಟ್ಟದಲ್ಲಿ ಅಧಿಸೂಚಿತ ಹಿಂಗಾರು ಬೆಳೆಗಳ ವಿವರ ಇಂತಿದೆ.  ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀ), ಮುಸುಕಿನ ಜೋಳ(ಮ.ಆ), ಗೋಧಿ (ನೀ), ಗೋಧಿ (ಮ.ಆ), ಕಡಲೆ (ನೀ), ಸೂರ್ಯಕಾಂತಿ (ಮ.ಆ), ಕುಸುಮೆ (ಮ.ಆ).   ಹೋಬಳಿ ಮಟ್ಟದಲ್ಲಿ ಅಧಿಸೂಚಿತ ಬೇಸಿಗೆ ಬೆಳೆಗಳ ವಿವರ ಇಂತಿದೆ.  ಭತ್ತ (ನೀ), ನೆಲಗಡಲೆ(ಶೇಂಗಾ) (ನೀ), ಸೂರ್ಯಕಾಂತಿ (ನೀ).
     ವಿವಿಧ ಬೆಳೆಗಳಿಗೆ ನಿಗಧಿಪಡಿಸಲಾಗಿರುವ ವಿಮಾ ಕಂತಿನ ವಿವರ ಇಂತಿದೆ:  ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ್ ಗೆ (ಪ್ರಾರಂಭಿಕ ಇಳುವರಿಯ ಮೌಲ್ಯದವರೆಗೆ) 
ಹಿಂಗಾರು ಹಂಗಾಮು: ಜೋಳ- ಪ್ರತಿ ಹೆಕ್ಟೇರ್‍ಗೆ ನಿಗದಿಪಡಿಸಿದ ವಿಮಾ ಕಂತು ದರ ರೂ540.  ಜೋಳ ಮ.ಆ- ರೂ-465. ಮುಸುಕಿನ ಜೋಳ (ನೀ)-ರೂ-870. ಮುಸುಕಿನ ಜೋಳ (ಮ.ಆ)- ರೂ. 720. ಗೋಧಿ (ನೀ)- ರೂ. 241. 50. ಗೋಧಿ (ಮ.ಆ)- ರೂ. 166. 35. ಕಡಲೆ (ನೀ)- ರೂ. 187.50. ಕಡಲೆ (ಮ.ಆ)- ರೂ. 187.50. ಹುರುಳಿ (ಮ.ಆ)-ರೂ. 285. ಅಗಸೆ (ಮ.ಆ)- ರೂ. 450.  ಸೂರ್ಯಕಾಂತಿ(ನೀ)- ರೂ. 615. ಸೂರ್ಯಕಾಂತಿ (ಮ.ಆ)- ರೂ. 510.  ಕುಸುಮೆ (ಮ.ಆ) ವಿಮಾ ಕಂತು ರೂ-450.
ಬೇಸಿಗೆ ಹಂಗಾಮು: ಭತ್ತ (ನೀ) ವಿಮಾ ಕಂತು ರೂ-1230. ನೆಲಗಡಲೆ (ಶೇಂಗಾ) (ನೀ) ವಿಮಾ ಕಂತು ರೂ-825. ಸೂರ್ಯಕಾಂತಿ (ನೀ) ವಿಮಾ ಕಂತು ರೂ-615.
      ಹಿಂಗಾರು ಹಂಗಾಮಿಗೆ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮೆಗಾಗಿ ನೋಂದಾಯಿಸಲು ಡಿ. 31 ಕೊನೆಯ ದಿನವಾಗಿರುತ್ತದೆ.  ಬೇಸಿಗೆ ಹಂಗಾಮಿಗೆ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮೆಗಾಗಿ ನೋಂದಾಯಿಸಲು 2017 ರ ಫೆ. 28 ಕೊನೆಯ ದಿನವಾಗಿರುತ್ತದೆ.  ಹೆಚ್ಚಿನ ವಿವರವನ್ನು ಸಮೀಪದ ಕೃಷಿ/ ಕಂದಾಯ/ ಲೀಡ್‍ಬ್ಯಾಂಕ್ ಗಳಲ್ಲಿ ಸಂಪರ್ಕಿಸಿ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಗಿತಗೊಂಡ ಸಹಕಾರ ಸಂಘಗಳ ಸಮಾಪನೆ: ಆಕ್ಷೇಪಣೆ ಆಹ್ವಾನ

ಕೊಪ್ಪಳ, ನ.28 (ಕರ್ನಾಟಕ ವಾರ್ತೆ) : ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಲಯ ಕೊಪ್ಪಳ ಇವರು ಜಿಲ್ಲೆಯ ತಾಲೂಕು ಮಟ್ಟದ ಕಾರ್ಯವ್ಯಾಪ್ತಿ ಹೊಂದಿರುವ ಸುಮಾರು ವರ್ಷಗಳಿಂದ ಕಾರ್ಯ ಚಟುವಟಿಕೆ ನಿರ್ವಹಿಸದೆ ಸ್ಥಗಿತಗೊಂಡಿರುವ ಗಂಗಾವತಿಯ ಶ್ರೀ ಸಾಯಿ ಶಕ್ತಿ ಪತ್ತಿನ ಸಹಕಾರಿ ನಿಯಮಿತ, ಸಹಕಾರ ಸಂಘವನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಸಮಾಪನೆ ಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
         ಸಮಾಪನೆಗೊಳ್ಳಲಿರುವ ಈ ಸಹಕಾರ ಸಂಘಕ್ಕೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಒಂದು ವಾರದೊಳಗಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಾಲಯ ಕೊಪ್ಪಳ ಇಲ್ಲಿಗೆ ಸಲ್ಲಿಸಬಹುದು. ನಿಗದಿತ ಕಾಲಾವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಬಾರದೇ ಇದ್ದಲ್ಲಿ ಕಾನೂನು ರೀತ್ಯಾ ಸಮಾಪನೆ ಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂ. ಸಂ: 08539-221109 ಇಲ್ಲಿಗೆ ಸಂಪರ್ಕಿಸಬಹುದು ಎಂದು  ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಕಾಶವಾಣಿ ರಸಪ್ರಶ್ನೆ ಸ್ಪರ್ಧೆಗೆ ಆಹ್ವಾನ

ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಪ್ರತಿ ವರ್ಷದಂತೆ ಈ ವರ್ಷವೂ ಕೂಡ “ಸ್ವಾಮಿ ವಿವೇಕಾನಂದ ಜಯಂತಿ” ಯ ಅಂಗವಾಗಿ ರಾಜ್ಯ ಮಟ್ಟದ ಆಕಾಶವಾಣಿ ರಸಪ್ರಶ್ನೆ ಕಾರ್ಯಕ್ರಮವನ್ನು ಯುವಜನರಿಗಾಗಿ ಹಮ್ಮಿಕೊಳ್ಳಲಾಗಿದೆ. 16 ರಿಂದ 25ರ ವಯೋಮಿತಿಯಲ್ಲಿರುವ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಕಾಲೇಜು ವಿಧ್ಯಾರ್ಥಿಗಳು ಈ ರಸಪ್ರಶ್ನೆ  ಸ್ಪರ್ಧೆಯಲ್ಲಿ ಭಾಗವಹಿಸಬಹುದು. 
     ಪ್ರತೀ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಥಳೀಯ ಮಟ್ಟದಲ್ಲಿ ಆಯ್ಕೆಯಾದ ತಂಡ ರಾಜ್ಯಮಟ್ಟದಲ್ಲಿ ಹೊಸಪೇಟೆ ಆಕಾಶವಾಣಿ ಕೇಂದ್ರವನ್ನು ಪ್ರತಿನಿಧಿಸಲಿದೆ. ಸ್ಥಳೀಯ ಮಟ್ಟದ ಸ್ಪರ್ಧೆಯು ಡಿಸೆಂಬರ್ 23 ರಂದು 11 ಗಂಟೆಗೆ ಆಕಾಶವಾಣಿ ಹೊಸಪೇಟೆ ಕೇಂದ್ರದಲ್ಲಿ ಜರುಗಲಿದೆ.   ರಸ ಪ್ರಶ್ನೆ ಸ್ಪರ್ಧೆಯ ವಿಷಯ:- “ಸ್ವತಂತ್ರ ಭಾರತದ 70 ವರ್ಷಗಳು’’  ಪ್ರತೀ ಕಾಲೇಜಿನ ಪ್ರಾಂಶುಪಾಲರುಗಳು ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಸೂಚನಾ ಪತ್ರವನ್ನು ಇದೇ ಡಿಸೆಂಬರ್ 5 ರೊಳಗೆ ತಲುಪುವಂತೆ ಕೇಂದ್ರ ನಿರ್ದೇಶಕರು, ಆಕಾಶವಾಣಿ, ರಸಪ್ರಶ್ನೆ ಸ್ಪರ್ಧಾ ವಿಭಾಗ, ಹೊಸಪೇಟೆ -583 203. ಈ ವಿಳಾಸಕ್ಕೆ ಕಳುಹಿಸಲು ಪ್ರಕಟಣೆ ತಿಳಿಸಿದೆ.

ಜರ್ಮನ್ ಪ್ರಜೆಯ ಪಾಸ್‍ಪೋಟ್ ಸಹಿತ ಬ್ಯಾಗ್ ನಾಪತ್ತೆ : ಹುಡುಕಿಕೊಟ್ಟವರಿಗೆ ವಿಶೇಷ ಬಹುಮಾನ

ಕೊಪ್ಪಳ, ನ.28 (ಕರ್ನಾಟಕ ವಾರ್ತೆ) : ಜರ್ಮನ್ ದೇಶದ ಪ್ರಜೆ ಉಡೋ ಹೆಲ್ಮಟ್ ಲುಟ್ಜ್ ಎಂಬುವವರು ತಮ್ಮ ಪಾಸ್‍ಪೋರ್ಟ್, ವಿಸಾ, ನೋಟ್‍ಪ್ಯಾಡ್ ಹಾಗೂ ಭಾರತದ ಕರೆನ್ಸಿಯುಳ್ಳ ಬ್ಯಾಗ್ ಕಳೆದುಕೊಂಡಿದ್ದು, ಹುಡುಕಿ ಕೊಟ್ಟವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.
     ಜರ್ಮನ್ ಪ್ರಜೆ ಉಡೋ ಹೆಲ್ಮಟ್ ಲುಟ್ಜ್ ಅವರು ಅಂತರರಾಷ್ಟ್ರೀಯ ಪಾಸ್‍ಪೋರ್ಟ್, ವಿಸಾ, ನೋಟ್‍ಪ್ಯಾಡ್, ಹಾಗೂ ಭಾರತದ ಕರೆನ್ಸಿ ರೂ-3600 ಸೇರಿದಂತೆ ಇತರ ವಸ್ತುಗಳಿದ್ದ ಬ್ಯಾಗ್‍ನೊಂದಿಗೆ ಧಾರವಾಡ ದಿಂದ ಕೊಪ್ಪಳ ಮಾರ್ಗವಾಗಿ ಹಂಪಿಗೆ ಪ್ರಯಾಣಿಸುತ್ತಿದ್ದಾಗ ಗಿಣಿಗೇರಿಯಲ್ಲಿ ಬ್ಯಾಗ್ ಕಳೆದುಕೊಂಡಿದ್ದಾರೆ.   ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದೇಶಿ ಪ್ರಜೆಯ ವಸ್ತುಗಳ ಬ್ಯಾಗ್ ಯಾರಿಗಾದರು ಸಿಕ್ಕಿದ್ದಲ್ಲಿ ಅಥವಾ ಮಾಹಿತಿ ಇದ್ದಲ್ಲಿ ಕೂಡಲೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08539-221333, ಪಿಎಸ್‍ಐ ಕೊಪ್ಪಳ ಗ್ರಾಮೀಣ-9480803746 ಇಲ್ಲಿಗೆ ತಲುಪಿಸಬೇಕು.  ಬ್ಯಾಗ್ ತಲುಪಿಸಿದವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಆರಕ್ಷಕ ಉಪ-ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.30 ರಂದು ಕಲಬುರಗಿಯಲ್ಲಿ ಶಿಶಿಕ್ಷು ತರಬೇತಿ ಯೋಜನೆ ಕಾರ್ಯಾಗಾರ

ಕೊಪ್ಪಳ, ನ.28 (ಕರ್ನಾಟಕ ವಾರ್ತೆ) : ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ನ.30 ರಂದು ಕಲಬುರಗಿಯ ಎಂಎಸ್‍ಕೆ ಮಿಲ್ ರೋಡ್‍ನಲ್ಲಿರುವ ಸರ್ಕಾರಿ ಕೈಗಾರಿಕಾ ಸಂಸ್ಥೆ(ಮಹಿಳಾ) ಇಲ್ಲಿ ಬೆಳಿಗ್ಗೆ 10 ಗಂಟೆಗೆ ವಿಭಾಗ ಮಟ್ಟದ ಶಿಶಿಕ್ಷು ತರಬೇತಿ ಯೋಜನೆಯ ನ್ಯಾಷನಲ್ ಅಪ್ರೆಂಟಿಸ್ ಪ್ರಮೋಷನ್ ಸ್ಕೀಮ್ ಅನುಷ್ಟಾನಗೊಳಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
     ಉದ್ದಿಮೆದಾರರು, ಉದ್ಯಮಗಳು ಶಿಶಿಕ್ಷು ಆನ್‍ಲೈನ್ ನಲ್ಲಿ ನೋಂದಣಿ ಮಾಡುವಾಗ, ಆನ್‍ಲೈನ್ ನಲ್ಲಿ ಬರುವ ತೊಂದರೆಗಳನ್ನು ನಿವಾರಿಸಿಕೊಳ್ಳಲು ಹಾಗೂ ಎನ್‍ಎಪಿಎಸ್ ಅನುಷ್ಟಾನದಿಂದ ಉದ್ದಿಮೆದಾರರಿಗೆ ಸಿಗುವ ಸವಲತ್ತನ್ನು ನಿಯಮಾನುಸಾರ ಪಡೆಯುವ ಕುರಿತು ಕಾರ್ಯಾಗಾರದಲ್ಲಿ ಸಂಪೂರ್ಣ ವಿವರ ನೀಡಲಾಗುವುದು.
     ಕಲಬುರಗಿ ವಿಭಾಗದ ಎಲ್ಲಾ ಕಾರ್ಖಾನೆ/ಉದ್ದಿಮೆಗಳ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆಯಬಹುದು ಎಂದು ಕೊಪ್ಪಳ ಐಟಿಐ ಕಾಲೇಜಿನ ಪ್ರಾಚಾರ್ಯ ಗವಿಶಂಕರ್.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 26 November 2016

ಬೆಳೆ ವಿಮೆ ವ್ಯವಸ್ಥೆ ಬಗ್ಗೆ ರೈತರಿಗೆ ಭರವಸೆ ಮೂಡಿಸಬೇಕಿದೆ- ಡಾ. ಪ್ರಕಾಶ್ ಕಮ್ಮರಡಿ


ಕೊಪ್ಪಳ ನ. 26 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಬೆಳೆ ವಿಮೆ ಮಾಡಿಸಿಕೊಂಡ ರೈತರಿಗೆ ಅದರ ವಿಮಾ ಪರಿಹಾರ ಸಮರ್ಪಕವಾಗಿ ದೊರೆತಲ್ಲಿ ಮಾತ್ರ ಬೆಳೆ ವಿಮೆ ಬಗ್ಗೆ ರೈತರಿಗೆ ಭರವಸೆ ಮೂಡಲಿದೆ.  ಅಧಿಕಾರಿಗಳು ಈ ನಿಟ್ಟಿನಲ್ಲಿ ಶ್ರಮಿಸುವ ಅಗತ್ಯವಿದೆ ಎಂದು ರಾಜ್ಯ ಕೃಷಿ ಬೆಳೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಹೇಳಿದರು.

  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ರೈತರೊಂದಿಗೆ ಶನಿವಾರದಂದು ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದಲೂ ತೀವ್ರ ಬರ ಪರಿಸ್ಥಿತಿ ತಲೆದೋರಿದೆ.  ಬೆಳೆ ಹಾನಿಗೆ ಸರ್ಕಾರ ಕೊಡುವ ಪರಿಹಾರ, ರೈತರಿಗೆ ಕೇವಲ ಮುಂದಿನ ಬಿತ್ತನೆ ವ್ಯವಸ್ಥೆಗೆ ಕೊಡುವ ಸಹಾಯಧನ ಮಾತ್ರ ಆಗಲಿದ್ದು, ಬೆಳೆ ಹಾನಿಗೆ ಅವರಿಗೆ ಸಮರ್ಪಕ ಪರಿಹಾರ ದೊರೆಯಬೇಕೆಂದರೆ, ಬೆಳೆ ವಿಮೆ ಪರಿಹಾರ ರೈತರಿಗೆ ಸರಿಯಾಗಿ ದೊರೆಯಬೇಕು.  ಈ ಹಿಂದಿನ ಬೆಳೆ ವಿಮೆ ವ್ಯವಸ್ಥೆ ಬಗ್ಗೆ ರೈತರಿಗೆ ಭರವಸೆ ಇರಲಿಲ್ಲ.  ಇದೀಗ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಜಾರಿಗೆ ಬಂದಿದ್ದು, ಎಲ್ಲ ರೈತರು ಬೆಳೆ ವಿಮೆ ವ್ಯಾಪ್ತಿಗೆ ಬರುವಂತಾಗಬೇಕು.  ಆದಾಗ್ಯೂ ಬೆಳೆ ವಿಮೆ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡುವ ಕುರಿತು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ತೀವ್ರ ಚಿಂತನೆಗಳು ನಡೆದಿವೆ.   ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಕುರಿತು ಈಗಾಗಲೆ ಬೆಳೆ ಕಟಾವು ಸಮೀಕ್ಷೆ ನಡೆದಿದೆ.  ರಾಜ್ಯದಲ್ಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ಬೆಳೆ ವಿಮೆ ವ್ಯಾಪ್ತಿಗೆ ಹೆಚ್ಚಿನ ರೈತರು ಸೇರ್ಪಡೆಯಾಗಿಲ್ಲ.  ಹಿಂಗಾರು ಹಂಗಾಮಿಗೆ ಬೆಳೆ ವಿಮೆಗೆ ನೋಂದಾಯಿಸಲು ಡಿ. 31 ರವರೆಗೂ ಅವಕಾಶವಿದೆ.  ಎಲ್ಲ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವಂತಾಗಲು, ರೈತರಿಗೆ ನೂತನ ಬೆಳೆ ವಿಮೆ ವ್ಯವಸ್ಥೆ ಬಗ್ಗೆ ಮೊದಲು ಭರವಸೆ ಮೂಡಿಸಬೇಕಿದೆ.  ಜಿಲ್ಲೆಯಾದ್ಯಂತ ಆಂದೋಲನ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.  ರೈತ ಜಾಗೃತಿ ಕಾರ್ಯಕ್ರಮಗಳು ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ ಆಗಬೇಕು.  ಇದರ ನೇತೃತ್ವವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ವಹಿಸಲಿದ್ದು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತ ಪ್ರತಿನಿಧಿಗಳು, ವಿಮಾ ಕಂಪನಿಯೊಂದಿಗೆ ಸಭೆ ಕೈಗೊಂಡು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಅವರು ಹೇಳಿದರು.
ನೋಟು ಹಿಂಪಡೆದ ಪರಿಣಾಮದ ವರದಿ ನೀಡಿ : ಕೇಂದ್ರ ಸರ್ಕಾರವು 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದ ಪರಿಣಾಮ ನೇರವಾಗಿ ರೈತರ ಕೃಷಿ ಉತ್ಪನ್ನ ವಹಿವಾಟಿನ ಮೇಲೆ ಆಗಿದೆ.  ರೈತರು ಮಾರಾಟ ಮಾಡಲು ಬಯಸಿದರೂ, ಕೃಷಿ ಉತ್ಪನ್ನಗಳನ್ನು ಖರೀದಿಸುವ ವರ್ತಕರು, ಬೆಳೆ ಖರೀದಿಗೆ ಮುಂದಾಗುತ್ತಿಲ್ಲ.  ಇದರ ಪರಿಣಾಮವಾಗಿ ಉತ್ಪನ್ನಗಳ ಬೆಲೆ ಕುಸಿತವಾಗುತ್ತಿದೆ.  ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದೆ, ನಷ್ಟಕ್ಕೆ ಒಳಗಾಗುತ್ತಿದ್ದಾರೆ.  ಕೃಷಿ ಉತ್ಪನ್ನಗಳ ಖರೀದಿ ಹಾಗೂ ಬೆಲೆಯ ಮೇಲೆ ಆಗಿರುವ ಪರಿಣಾಮದ ಬಗ್ಗೆ ರೈತರು, ಎಪಿಎಂಸಿ ಅಧಿಕಾರಿಗಳು, ವರ್ತಕರು ಇವರೊಂದಿಗೆ ಸಮಾಲೋಚಿಸಿ, ಒಂದು ವಾರದೊಳಗಾಗಿ ವರದಿಯನ್ನು ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರಿಗೆ ಸೂಚನೆ ನೀಡಿದರು.  ಎಲ್ಲ ಜಿಲ್ಲೆಗಳಿಂದ ವರದಿಯನ್ನು ಪಡೆದು, ಇದರ ಆಧಾರದಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಅಗತ್ಯ ಪರಿಹಾರ ಕುರಿತು ಶಿಫಾರಸು ಸಲ್ಲಿಸಲಾಗುವುದು ಎಂದು ಡಾ. ಪ್ರಕಾಶ್ ಕಮ್ಮರಡಿ ಅವರು ಹೇಳಿದರು.
48787 ಹೆ. ಕೃಷಿಯಿಂದ ಕೈತಪ್ಪಿದೆ : ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಈಚೆಗೆ ಕೃಷಿ ಹಾಗೂ ತೋಟಗಾರಿಕೆ ಪ್ರದೇಶ, ಬೆಳೆ ಉತ್ಪಾದನೆ ಕುರಿತಂತೆ ಕೃಷಿ ಬೆಲೆ ಆಯೋಗವು ಪ್ರತಿ ಜಿಲ್ಲಾವಾರು ಹಾಗೂ ಬೆಳೆವಾರು, ರಾಜ್ಯ ಸರ್ಕಾರಕ್ಕೆ ಸಂಶೋಧನಾ ವರದಿಯನ್ನು ಕಳೆದ ತಿಂಗಳು ಸಲ್ಲಿಸಿದೆ.  ಇದರನ್ವಯ ಕಳೆದ 10 ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 48787 ಹೆ. ಭೂಮಿ ಕೃಷಿಯಿಂದ ಕೈತಪ್ಪಿ ಹೋಗಿದೆ.  5. 14 ಲಕ್ಷ ಹೆ. ಇದ್ದ ಕೃಷಿ ಭೂಮಿ ಇದೀಗ 4. 64 ಲಕ್ಷ ಹೆ. ಗೆ ಕುಸಿದಿದೆ.  ಕೆಲವು ಬೆಳೆಗಳು ವಿಸ್ತೀರ್ಣವನ್ನು ಹೆಚ್ಚಿಸಿಕೊಂಡಿದ್ದು, ಕೆಲವು ಇಳಿಕೆ ಕಂಡಿವೆ.  ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆ ವಿಸ್ತೀರ್ಣ ತೀವ್ರ ಕಡಿಮೆಯಾಗಿದ್ದು 64275 ಹೆ. ಇಳಿಕೆಯಾಗಿದೆ.  ಸಜ್ಜೆ- 43349 ಹೆ. ಕಡಿಮೆಯಾಗಿದೆ.  ಆದರೆ ಮೆಕ್ಕೆಜೋಳ 47606 ಹೆ. ಪ್ರದೇಶದಷ್ಟು ಏರಿಕೆಯಾಗಿದೆ.  9259 ಹೆ. ಕೃಷಿ ಭೂಮಿ ತೋಟಗಾರಿಕೆಗೆ ಬದಲಾಗಿದೆ.  ಜಿಲ್ಲೆಯಲ್ಲಿ ಈರುಳ್ಳಿ ಹಾಗೂ ಟೊಮ್ಯಾಟೊ ಬೆಳೆಗಳು ಹೆಚ್ಚು ಬೆಳೆಯಲಾಗುತ್ತಿದೆ.  ಜಿಲ್ಲೆಯಲ್ಲಿ ನಗರೀಕರಣ, ರಿಯಲ್ ಎಸ್ಟೇಟ್ ವ್ಯವಹಾರ, ಕೈಗಾರಿಕೆ ವಿಸ್ತೀರ್ಣ ಮುಂತಾದ ಕಾರಣಗಳಿಂದಾಗಿ ಒಟ್ಟಾರೆ 39527 ಹೆ. ಭೂಮಿ ರೈತರಿಂದ ಕೈತಪ್ಪಿ ಹೋಗಿದೆ.  ಇದರ ಪರಿಣಾಮದ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.   ಜಿಲ್ಲೆಯಲ್ಲಿನ ಹವಾಗುಣ, ಮಣ್ಣಿನ ಗುಣ, ನೀರಿನ ಪ್ರಮಾಣ ಇವುಗಳನ್ನು ಆಧರಿಸಿ ಪ್ರತಿ ಜಿಲ್ಲೆಗೂ ಬೆಳೆ ನೀತಿ ಜಾರಿಗೆ ಬರಬೇಕಿದೆ.  ಈ ನಿಟ್ಟಿನಲ್ಲಿ ತಜ್ಞರು, ಇಲಾಖಾ ಅಧಿಕಾರಿಗಳು, ರೈತರು ಇವರೊಂದಿಗೆ ಚರ್ಚೆ ನಡೆಸಿ, ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಡಾ. ಪ್ರಕಾಶ್ ಕಮ್ಮರಡಿ ಅವರು ಹೇಳಿದರು.
  ಸಭೆಯಲ್ಲಿ ಭಾಗವಹಿಸಿದ್ದ ಕೃಷಿಕ ಸಮಾಜದ ಶಿವಣ್ಣ ಮೂಲಿಮನಿ ಅವರು ಮಾತನಾಡಿ, ರೈತರು ಬೆಳೆ ವಿಮೆ ವ್ಯವಸ್ಥೆ ಹಾಗೂ ಪರಿಹಾರದ ಬಗ್ಗೆ ಭರವಸೆ ಕಳೆದುಕೊಂಡಿದ್ದಾರೆ.  ಬೆಳೆ ವಿಮೆ ಪರಿಹಾರವನ್ನು ಸಮರ್ಪಕವಾಗಿ ದೊರಕುವಂತೆ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ಹಾಗೂ ಭರವಸೆಯನ್ನು ತುಂಬುವ ಕೆಲಸ ಸರ್ಕಾರ ಮಾಡಬೇಕಿದೆ ಎಂದರು.
  ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ ಅಂಗಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂ. ಗೆ 624 ರಂತೆ ಈರುಳ್ಳಿ ಖರೀದಿ ಪ್ರಕ್ರಿಯೆ ನಡೆದಿದ್ದು, ಈವರೆಗೆ ಖರೀದಿ ಕೇಂದ್ರದಲ್ಲಿ 325 ರೈತರಿಂದ 15909 ಕ್ವಿಂ. ಈರುಳ್ಳಿ ಖರೀದಿಸಲಾಗಿದೆ.  ಖರೀದಿಸಿದ ದಿನದಂದೆ ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿಗಿಯ ನೋಂದಾಯಿತ ವರ್ತಕರಿಗೆ ರವಾನೆ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಶೇ. 60 ರಿಂದ 80 ರಷ್ಟು ಉತ್ಪನ್ನದ ಮೌಲ್ಯವನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಪಾವತಿಸಲಾಗಿದೆ ಎಂದರು.
  ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಸದಸ್ಯ ಹನುಮಗೌಡ ಬೆಳಗುರ್ಕಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ್, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರು ಪಾಲ್ಗೊಂಡಿದ್ದರು.

ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಮಹಿಳೆ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ ನ. 26 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಕೊಡಮಾಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ಆಪತ್ಕಾಲದಲ್ಲಿರುವ ವ್ಯಕ್ತಿಯ ಜೀವ ರಕ್ಷಿಸುವಲ್ಲಿ ಧೈರ್ಯ ಸಾಹಸ ಮೆರೆದ ಮಹಿಳೆಗೆ ನೀಡುವ ವೀರ ಮಹಿಳೆ ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ : ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಟ 05 ವರ್ಷಗಳ ಸೇವೆ ಸಲ್ಲಿಸಿರಬೇಕು.  ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಕ್ರಮಗಳ ಮತ್ತು ಇತರೆ ಕ್ಷೇತ್ರಗಳಾದ ಕ್ರೀಡಾ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲೂ ವ್ಯಕ್ತಿಗಳು ಕೈಗೊಂಡ ಕಾರ್ಯಕ್ರಮಗಳ ನಿರ್ವಹಣೆಯ ಗುಣಮಟ್ಟವನ್ನು ಆಧಾರವಾಗಿ ಪರಿಗಣಿಸಲಾಗುವುದು.  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ವೇತನ ಪಡೆಯುವ ವ್ಯಕ್ತಿಗಳು ಅರ್ಹರಲ್ಲ.  ಪ್ರಶಸ್ತಿಯನ್ನು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಥವಾ ಸರ್ಕಾರ ನಿಗದಿಪಡಿಸುವ ದಿನದಂದು ಪ್ರದಾನ ಮಾಡಲಾಗುವುದು.  
ವೀರ ಮಹಿಳೆ ಪ್ರಶಸ್ತಿ : ಈ ಪ್ರಶಸ್ತಿಯು ಒಬ್ಬ ಮಹಿಳೆಯು, ಆಪತ್ಕಾಲದಲ್ಲಿರುವ ಮತ್ತೋರ್ವ ವ್ಯಕ್ತಿಯ ಜೀವ ಕಾಪಾಡುವಲ್ಲಿ ಅಥವಾ ಪ್ರಾಣ ರಕ್ಷಿಸುವಲ್ಲಿ ತನ್ನ ಜೀವದ ಹಂಗನ್ನು ತೊರೆದು, ಸಮಯ ಪ್ರಜ್ಞೆಯಿಂದ ಧೈರ್ಯ, ಸಾಹಸದೊಂದಿಗೆ ಅಪಾಯದಲ್ಲಿರುವ ವ್ಯಕ್ತಿಯ ಜೀವ ಕಾಪಾಡುವಂತಹ ಕಾರ್ಯವನ್ನು ಮಾಡಿರುವ 18 ರಿಂದ 45 ವರ್ಷದೊಳಗಿನ ಮಹಿಳೆಯರು ಈ ಪ್ರಶಸ್ತಿಗೆ ಅರ್ಹರು.  ಕಳೆದ ವರ್ಷದ ಜ. 01 ರಿಂದ ಡಿ. 31 ರವರೆಗಿನ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.  ಪ್ರಶಸ್ತಿಗೆ ಸಂಬಂಧಿಸಿದ ಮಹಿಳೆಯ ತಂದೆ/ತಾಯಿ/ ಪೋಷಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಪ್ರಶಸ್ತಿಗೆ ಆಯ್ಕೆಯಾದ ಮಹಿಳೆಗೆ ರಾಜ್ಯದ ವತಿಯಿಂದ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
  ಅರ್ಜಿ ಸಲ್ಲಿಸಲು ಡಿ. 15 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 9 ನೇ ವಾರ್ಷಿಕ ಸಮ್ಮೇಳನ

ಕೊಪ್ಪಳ, ನ.26  (ಕರ್ನಾಟಕ ವಾರ್ತೆ):  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 9 ನೇ ವಾರ್ಷಿಕ ಸಮ್ಮೇಳನ ಡಿ.20 ಮತ್ತು 21 ರಂದು ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
  ಈ ಬಾರಿಯ ವಾರ್ಷಿಕ ಸಮ್ಮೆಳನ “ಇಪ್ಪತ್ತೊಂದನೇ ಶತಮಾನದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು” ಎಂಬ ಕೇಂದ್ರ ವಿಷಯದಡಿ ಜರುಗಲಿದೆ. ಸಮ್ಮೇಳನದ ತಾಂತ್ರಿಕ ಅಧಿವೇಶನದಲ್ಲಿ ಖ್ಯಾತ ವಿಜ್ಞಾನಿಗಳಿಂದ ಹಾಗೂ ಸಂಶೋಧಕರರಿಂದ ಉಪನ್ಯಾಸ ಏರ್ಪಡಿಸಲಾಗಿದೆ. 
  ಸಮ್ಮೇಳನದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ/ ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು/ಪ್ರಾಧ್ಯಾಪಕರು, ವಿಜ್ಞಾನಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಾಸಕ್ತರು ಒಳಗೊಂಡಂತೆ ಸುಮಾರು 1200 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಲ್ಲದೆ ಭೌತ ಮತ್ತು ಗಣಿತ ವಿಜ್ಞಾನ, ರಸಾಯನ ಮತ್ತು ಜೀವ ವಿಜ್ಞಾನ, ಇಂಜಿನಿಯರಿಂಗ್ ಹಾಗೂ ಅಂತರ್ ಶಾಸ್ತ್ರೀಯ ವಿಜ್ಞಾನಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಾತ್ಯಕ್ಞಿತೆಗಳನ್ನು ಸಹ ಮಂಡಿಸಲು ಅವಕಾಶ ಕಲ್ಪಸಲಾಗಿದೆ. 
  ತಜ್ಞರ ಸಮಿತಿ ಆಯ್ಕೆ ಮಾಡಿದ ಪ್ರತಿ ವಿಷಯದ ಎರಡು ಅತ್ಯುತ್ತಮ ಪ್ರಾತ್ಯಕ್ಷಿಕೆಗಳಿಗೆ ಬಹುಮಾನ ನೀಡಲಾಗುವುದು.  ಸಂಶೋಧನಾ ಪ್ರಾತ್ಯಕ್ಷಿಕೆಗಳ ಸಾರಾಂಶವನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್  kstaconfrence2016@gmail.com ಮೂಲಕ ಸಲ್ಲಿಸಬಹುದು. ನೋಂದಣಿಗೆ ನಿಗದಿಪಡಿಸಲಾಗಿದ್ದ ಅವಧಿಯನ್ನು ಡಿ.5 ರವರಗೆ ಹಾಗೂ ಸಮ್ಮೇಳನದ ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಡಿ.10 ರವರಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಅಕಾಡೆಮಿಯ ವೆಬ್‍ಸೈಟ್  http://www.kstacademy.org ಇಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಸೀಮೆಎಣ್ಣೆ ದರ ಪರಿಷ್ಕರಣೆ : ಪ್ರ.ಲೀ. ಗೆ 25 ರೂ ನಿಗದಿ.

ಕೊಪ್ಪಳ, ನ.25 (ಕರ್ನಾಟಕ ವಾರ್ತೆ):  ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲಾಗುತ್ತಿರುವ ಸಹಾಯಧನಯುಕ್ತ ಸೀಮೆಎಣ್ಣೆ ದರವನ್ನು ಪರಿಷ್ಕರಿಸಲಾಗಿದ್ದು, ಡಿಸೆಂಬರ್ ತಿಂಗಳಿನಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಸೀಮೆ ಎಣ್ಣೆ ದರವನ್ನು 25 ರೂ ನಿಗದಿಪಡಿಸಲಾಗಿದೆ.
ಸರ್ಕಾರದ ಆದೇಶದಂತೆ ಪ್ರತಿ ಲೀಟರ್ ಸೀಮೆಎಣ್ಣೆಗೆ ಈಗಿರುವ ದರ ಪ್ರತಿ ಲೀ. ಗೆ ರೂ.20 ರಿಂದ 25 ರೂ. ಗೆ ಪರಿಷ್ಕರಿಸಲಾಗಿದೆ.  ಆದೇಶದ ಪ್ರಕಾರ ಪರಿಷ್ಕøತ ದರ ಇದೆ ಡಿಸೆಂಬರ್ ತಿಂಗಳಿನಿಂದ ಜಾರಿಗೆ ಬರುತ್ತದೆ ಎಲ್ಲಾ ಅನಿಲ ರಹಿತ ಪಡಿತರ ಚೀಟಿದಾರರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಾರ್ಯಲಯ ಪ್ರಕಟಣೆಯಲ್ಲಿ ತಿಳಿಸಿದೆ.

ನ.27 ರಂದು ಕೊಪ್ಪಳದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಕೊಪ್ಪಳ, ನ.25 (ಕರ್ನಾಟಕ ವಾರ್ತೆ):  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನ.27 ರಂದು ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿವ್ಹಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಬಾಲ ನ್ಯಾಯ ಮಂಡಳಿ ಅಧ್ಯಕ್ಷರಾದ ಬಿ.ದಶರಥ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಅಧ್ಯಕ್ಷತೆ ವಹಿಸುವರು. ಸಿವ್ಹಿಲ್ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಎಸ್ ಕಲಾದಗಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ಜಿ ರಾಮತ್ನಾಳ, ಜಿಲ್ಲಾ ಸರ್ಕಾರಿ ವಕೀಲ ಅಸೀಫ್ ಅಲಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ ಪಾನಘಂಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಕೀಲ ಎಂ,ಹನುಮಂತರಾವ್ ಅವರು ಮಕ್ಕಳ ರಕ್ಷಣೆ ಮತ್ತು ಕಾನೂನುಗಳು ಕುರಿತು ವಿಶೇಷ ಉಪನ್ಯಾನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕಡಿಮೆ ನೀರಿಗೆ ಕಲ್ಲಂಗಡಿ ಬೆಳೆ ಲಾಭದಾಯಕ : ರೈತರಿಗೆ ಸಲಹೆಗಳು

ಕೊಪ್ಪಳ ನ. 26 (ಕರ್ನಾಟಕ ವಾರ್ತೆ): ಬರುವ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ವ್ಯಾಪಕ ಬೇಡಿಕೆ ಬರುವುದು ಸಹಜ.  ಬರ ಪರಸ್ಥಿತಿಯಲ್ಲಿ ಕಡಿಮೆ ನೀರು ಬಳಸಿ, ಬೆಳೆಯಬಹುದಾದ ಕಲ್ಲಂಗಡಿ ಹಣ್ಣು ಬೆಳೆಯಲು ಕೊಪ್ಪಳ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
    ಬರ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಅಲ್ಪಾವಧಿ ಬೆಳೆಗಳನ್ನು ಬೆಳೆದು ಲಾಭ ಮಾಡಿಕೊಳ್ಳಬಹುದಾಗಿದೆ.  ದೀರ್ಘಾವಧಿ ಬೆಳೆಗಳಿಗೆ ಹೆಚ್ಚು ನೀರಿನ ಅವಶ್ಯÀಕತೆ ಇರುವುದರಿಂದ ಇಂತಹ ಬರದಲ್ಲಿ ಒಳ್ಳೆ ಬೆಳೆ ನಿರೀಕ್ಷಿಸುವುದು ಕಷ್ಟ. ಋತುಮಾನಕ್ಕೆ ತಕ್ಕ ಬೆಳೆ ಬೆಳೆಯುವುದರಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ.
         ಕೊಳವೆ ಬಾವಿ ಅಥವಾ ಕೃಷಿ ಹೊಂಡ ಅಥವಾ ಇನ್ನಿತರೇ ನೀರಿನ ಮೂಲ  ಇರುವವರು ಈಗ ಅಲ್ಪಾವಧಿ  ಬೆಳೆಯಾದ ಕಲ್ಲಂಗಡಿ ಬೆಳೆದು ಬರುವ ಬೇಸಿಗೆಯಲ್ಲಿ ಒಳ್ಳೆಯ ಲಾಭ ಪಡೆಯಬಹುದಾಗಿದೆ. ಚಳಿಗಾಲದ ಬೆಳೆಯಾಗಿ ಕಲ್ಲಂಗಡಿ ಬೆಳೆ ಸೂಕ್ತವಾಗಿದ್ದು, ಮುಂದೆ ಬೇಸಿಗೆಯಲ್ಲೂ ನೀರಿನ ಅನುಕೂಲವಿದ್ದಲ್ಲಿ ಈ ಬೆಳೆ ಬೆಳೆಯಲು ಲಾಭದಾಯಕವಾಗಿದೆ.  ಹೆಚ್ಚಿನ ನೀರು ಬೇಡದ ರಕ್ಷಾಣಾತ್ಮಕವಾಗಿ ನೀರಾವರಿ ಬಯಸುವ  ಬೇಸಿಗೆಯಲ್ಲಿ ಬೇಡಿಕೆ  ಇರುವ  ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿಯಿಂದ ರೈತರಿಗೆ ಮಾಹಿತಿ ನೀಡಲಾಗಿದೆ.
         ಅಕ್ಟೋಬರ್ ತಿಂಗಳು ಈ ಬೆಳೆ ಆರಂಭಿಸಲು ಅತ್ಯಂತ ಸೂಕ್ತವಾಗಿದ್ದರೂ ನವೆಂಬರ್ ನಿಂದ ಫೆಬ್ರುವರಿವರೆಗೂ ನೀರಿನ ಲಭ್ಯತೆ ನೋಡಿಕೊಂಡು ಈ ಬೆಳೆಯನ್ನು ಆರಂಭಿಸಬಹುದು. ಹೆಚ್ಚಿನ ಜಮೀನು ಇರುವವರು ಈ ಬೆಳೆಯನ್ನು ಹಂತ - ಹಂತವಾಗಿ ಮತ್ತು  ವಿವಿಧ ತಳಿಗಳನ್ನು ಬೆಳೆದು  ಹೆಚ್ಚಿನ ಲಾಭ ಮಾಡಿಕೊಳ್ಳಬಹುದು. ಇತ್ತೀಚೆಗೆ ಕಲ್ಲಂಗಡಿ ಹಣ್ಣು ಎಲ್ಲ ಕಾಲದಲ್ಲೂ ಬೇಡಿಕೆ ಇರುವ ತರಕಾರಿ (ಕುಂಬಳ ಜಾತಿಗೆ ಸೇರಿದ)  ಬೆಳೆಯಾಗಿದೆ. ವಿದೇಶದಲ್ಲೂ ಈ ಹಣ್ಣಿಗೆ ಬೇಡಿಕೆ ಇದೆ .
ಪ್ರಮುಖ ತಳಿಗಳು:- 
1) ಶುಗರ ಬೇಬಿ : ಮಧ್ಯಮ ಗಾತ್ರದ 5-6 ಕಿ .ಗ್ರಾಂ. ತೂಕ ಹೊಂದಿರುವ ಕಡುಗೆಂಪು ತಿರುಳಿರುವ ರುಚಿಕರ ತಳಿ ಶುಗರ ಬೇಬಿ.  ಕೇವಲ 75-80 ದಿವಸದೊಳಗೆ ಕಟಾವಿಗೆ ಬರುತ್ತದೆ.
2) ಅರ್ಕಾಮಾಣಿಕ : ಅನೇಕ ರೋಗಗಳಿಗೆ  ನಿರೋಧಕ ಶಕ್ತಿ ಹೊಂದಿದ ದೀರ್ಘಾವಧಿ ಅಂದರೆ 110 ದಿನಗಳ ನಂತರ ಕಟಾವಿಗೆ ಬರುವ ಗೋಲಾಕಾರದ ತಳಿ ಅರ್ಕಾಮಾಣಿಕ.  ಇದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಉತ್ಪನ್ನವಾಗಿದೆ.
3) ಅರ್ಕಾ ಮಧುರ : ಬೀಜ ರಹಿತ ಮಧ್ಯಮ ಗಾತ್ರದ ಗೋಲಾಕಾರದ ಇನ್ನೊಂದು ತಳಿ ಅರ್ಕಾಮಧುರ.  ಇದು ದೀರ್ಘಾವಧಿ ತಳಿಯಾಗಿದ್ದು, ಎಲ್ಲಾ ಕಾಲದಲ್ಲೂ ಬೆಳೆಯಲು ಸೂಕ್ತವಾಗಿದೆ.  ಇದಲ್ಲದೇ, ವಿವಿಧ ಕಂಪನಿಗಳು ಉತ್ಪಾದಿಸಿದ ಅನೇಕ ಸಂಕರಣ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ. ಕೇವಲ 55-60 ದಿನದೊಳಗೆ ಕಟಾವಿಗೆ ಬರುವ ಹೆಚ್ಚು ತೂಕ ಹೊಂದಿದ ತಳಿಗಳು ಹೆಚ್ಚಿನ ಬೇಡಿಕೆ ಉಳ್ಳದ್ದಾಗಿವೆ ಅಲ್ಲದೇ, ರಫ್ತಿಗೂ ಯೋಗ್ಯವಾಗಿವೆ.
ಬೇಸಾಯ ಕ್ರಮಗಳು : ಒಂದು ಎಕರೆಗೆ ತಳಿಗಳನ್ನಾಧರಿಸಿ 150-200 ಗ್ರಾಂ. ವರೆಗೂ ಬೀಜ ಬೇಕಾಗುತ್ತದೆ. ಇತರೆ ತಳಿಗಳಾದಲ್ಲಿ 300-400 ಗ್ರಾಂ. ಬೀಜ ಎಕರೆಗೆ ಸಾಕಾಗುವುದು. ಸುಮಾರು 10 ಟನ್  ಕೊಟ್ಟಿಗೆ ಗೊಬ್ಬರ ಮಣ್ಣಿನಲ್ಲಿ 3-4 ವಾರಗಳ ಮೊದಲೇ ಮಿಶ್ರಮಾಡಿ 2.50 ಯಿಂದ 3.00 ಮೀಟರ್ ಸಾಲಿನಿಂದ ಸಾಲಿಗೆ ಅಂತರ ಬಿಟ್ಟು 1 ಮೀ. ಅಂತರದಲ್ಲಿ ಗುಣಿಗಳನ್ನು ಮಾಡಿ, ಹನಿ ನೀರಾವರಿ ಅಳವಡಿಸಿ, ಪ್ಲಾಸ್ಟಿಕ್ ಹೊದಿಕೆ ಹೊದಿಸಿ ನಾಟಿ ಮಾಡುವುದು ಆಧುನಿಕ ಪಧ್ಧತಿಯಾಗಿದೆ. ಇದರಿಂದಾಗಿ ಕಳೆಯ ನಿಯಂತ್ರಣವಾಗಿ ನೀರಿನ ಮಿತವಾದ ಬಳಕೆಯಿಂದ ಉತ್ತಮ ಗುಣಮಟ್ಟದ ಕಾಯಿಗಳನ್ನು ಪಡೆಯಬಹುದಾಗಿದೆ.  ಎಕರೆಗೆ 40 ಗ್ರಾಂ. ಸಾರ ಜನಕ 35 ಕಿ.ಗ್ರಾಂ. ರಂಜಕ 40 ಗ್ರಾಂ. ಪೋಟಾಷ ಗೊಬ್ಬರ ಶಿಫಾರಸು ಮಾಡಿದ್ದರೂ  ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರ ಕೊಡುವುದು ಸೂಕ್ತ.  ಲಘು ಪೋಷಕಾಂಶಗಳಾದ ಬೋರಾನ್, ಜಿಂಕ್ ಬಳಸುವುದು ಸೂಕ್ತ. ಹಣ್ಣು ಬಿಡುವ ಹಂತದಲ್ಲಿ ಎಕರೆಗೆ 10 ಕಿ.ಗ್ರಾಂ. ಸಿ.ಎ.ಎನ್. ಬಳಸುವುದರಿಂದ ಗುಣಮಟ್ಟದ ಕಾಯಿಗಳನ್ನು ಪಡೆಯಬಹುದುದಲ್ಲದೇ ಕಾಯಿಗಳು ಸೀಳದಂತೆ ಮಾಡುವುದು. ಆದರೆ ಯಾವುದೇ ಕಾರಣಕ್ಕೂ ಕಲ್ಲಂಗಡಿ ಬೆಳೆಗೆ ಗಂಧಕ ಅಥವಾ ಗಂಧಕಯುಕ್ತ ರಾಸಾಯನಿಕಗಳನ್ನು ಬಳಸಬಾರದು.
  ಬೀಜಗಳನ್ನು ಪ್ರೊಟ್ರೆನಲ್ಲಿ ನಾಟಿ ಮಾಡಿದ 14 ರಿಂದ 15 ದಿನಗಳಲ್ಲಿ, ಮುಖ್ಯ ಪ್ರದೇಶದಲ್ಲಿ ನಾಟಿಮಾಡಲು ಸಿದ್ದವಾಗುತ್ತವೆ. ನಾಟಿ ಮಾಡಿದ 22 ರಿಂದ 25 ದಿನಗಳಲ್ಲಿ ಕುಡಿ ಚಿವುಟಿದರೆÉ ಹೆಚ್ಚಿನ ಇಳುವರಿ ಪಡೆಯಬಹುವುದು.  ನೀರನ್ನು 4-6 ದಿನಗಳಿಗೊಮ್ಮೆ ಮಿತವಾಗಿ ಕೊಡಬೇಕು. ಪೂರ್ತಿಗಾತ್ರ ಬಂದಾಗ ಹಣ್ಣಿನ ಮೇಲೆ ಹಳದಿ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ ಮತ್ತು ಹಣ್ಣಿನ ಹತ್ತಿರದ ಮೀಸೆ(ಟೆಂಡ್ರಿಲ್.) ಒಣಗಿದಾಗ ಕಟಾವು ಮಾಡಬೇಕು. ಈ ಸಮಯದಲ್ಲಿ ಹಣ್ಣುಗಳನ್ನು ಬೆರಳಿನಿಂದ ಬಾರಿಸಿದಾಗ ಡಬ್ ಎನ್ನುವ ಶಬ್ದ ಬರುವುದು.
ಕೀಟ ಹಾಗೂ ರೋಗ ಬಾಧೆ ನಿಯಂತ್ರಣ : ಕುಂಬಳ ದುಂಬಿ, ಸಸ್ಯಹೇನು ಮತ್ತು ಎಲೆ ಸುರಂಗ ಕೀಟಗಳು ಎಲ್ಲಾ ಹಂತದಲ್ಲೂ ಕಲ್ಲಂಗಡಿ ಬೆಳೆಗೆ ಮಾರಕವಾಗಿವೆÉ. ಇಮಿಡಾಕ್ಲೋಪ್ರಿಡ್, ಅಸಿಫೇಟ್ ಅಲ್ಲದೇ  ಇಮಾಮೆಕ್ಟಿನ್ ಬೆಂಜೋಯೆಟ್ ಎಂಬ ಕೀಟ ನಾಶಕಗಳನ್ನು ತಜ್ಞರ ಸಲಹೆಯಂತೆ ಬಳಸಬೇಕು.  ಹಣ್ಣಿನ ನೊಣದ ಬಾಧೆ ಕಂಡುಬಂದಲ್ಲಿ ಎಕರೆಗೆ 4-6 ಮೋಹಕ ಬಲೆಗಳನ್ನು ಬಳಸಬೇಕು. ಇದಲ್ಲದೇ ಎಕರೆಗೆ 10 ಹಳದಿ ಬಣ್ಣದ ಮತ್ತು 10 ನೀಲಿ ಬಣ್ಣದ ಅಂಟು ಕಾರ್ಡುಗಳನ್ನು ಬಳಸಿದಲ್ಲಿ ಕೀಟಗಳ ನಿಯಂತ್ರಣ ಸುಲಭ.
        ಸೂರಗು  ರೋಗ ಬೆಳೆಯ ಎಲ್ಲ ಹಂತದಲ್ಲಿ ಬರುವ ರೋಗವಾದರೂ ಹೆಚ್ಚಿನ ಅಪಾಯಕಾರಿ ರೋಗಗಳೆಂದರೆ, ಬೂದು ತುಪ್ಪಟ ರೋಗ ಹಾಗೂ ಸುಳಿ ನಂಜುರೋಗ. ಸೊರಗು ರೋಗದಿಂದ ಹೆಚ್ಚಿನ ಹಾನಿಗೊಳಗಾದ ಬಳ್ಳಿಗಳನ್ನು ಕಿತ್ತು ಹಾಕಬೇಕು. ನಂತರ ಬಾವಿಸ್ಟಿನ್  2 ಗ್ರಾಂ. ನೀರಿಗೆ ಬೆರೆಸಿ ಡ್ರೆಂಚಿಂಗ್ ಮಾಡಬೇಕು. ನಂತರ ಬೂದು ತುಪ್ಪಟ ರೋಗದ ಹತೋಟಿಗೆ ರೀಡೋಮೀಲ್ 2 ಗ್ರಾಂ. ಅಥವಾ 2 ಗ್ರಾಂ. ಕ್ಲೋರೊಥ್ಯಾಲೋನಿಲ ಬಳಸಬಹುದು. ಸುಳಿ ನಂಜು ರೋಗಕ್ಕೆ ತುತ್ತಾದ ಬಳ್ಳಿಗಳನ್ನು ಕಿತ್ತು ಹಾಕಿ ನಾಶ ಪಡಿಸಬೇಕು  ಮತ್ತು ರೋಗ ಹರಡುವ ಕೀಟದ ನಿಯಂತ್ರಣಕ್ಕೆ ಫಿಪ್ರೊನಿಲ 1 ಗ್ರಾಂ. ಅಥವಾ ಥಯಾಮೆಥಾಕ್ಸಾಮ 0.25 ಗ್ರಾಂ. 1 ಲೀ. ನೀರಿಗೆ ಬೆರೆಸಿ  ಸಿಂಪರಿಸಬಹುದು.  ಚಳಿಗಾಲದಲ್ಲಿ ಬೂದಿ ರೋಗ ಕಂಡು ಬಂದಲ್ಲಿ ಡಿನೋಕ್ಯಾಪ ಸಿಂಪರಿಸಬೇಕು.
         ಈ ಎಲ್ಲಾ ಹತೋಟಿ ಕ್ರಮಗಳನ್ನು ಕೈಗೊಂಡಲ್ಲಿ ಮತ್ತು ಎಕರೆಗೆ ಒಂದು ಜೇನು ಪೆಟ್ಟಿಗೆ ಅಳವಡಿಸಿದಲ್ಲಿ ತಳಿ ಆಧರಿಸಿ 15-20 ಟನ್ ಇಳುವರಿಯನ್ನು ನಿರೀಕ್ಷಿಸ ಬಹುದಾಗಿದೆ.
         ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಾ ಕಛೇರಿಗಳನ್ನು ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Friday, 25 November 2016

ನ.26 ರಂದು ಎಸಿಬಿ ಯಿಂದ ಕುಷ್ಟಗಿಯಲ್ಲಿ ಕುಂದು ಕೊರತೆ ಹಾಗೂ ದೂರು ಸ್ವೀಕಾರ

ಕೊಪ್ಪಳ, ನ.25 (ಕರ್ನಾಟಕ ವಾರ್ತೆ):  ಕೊಪ್ಪಳ ಭ್ರಷ್ಟಾಚಾರ ನಿಗ್ರಹ ದಳ ಆರಕ್ಷಕ ಉಪಾಧೀಕ್ಷಕರು, ನ.26 ರಂದು ಕುಷ್ಟಗಿ ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರು ಸ್ವೀಕರಿಸಿ, ಅಹವಾಲು ಆಲಿಸಲಿದ್ದಾರೆ.
       ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಬಹುದು ಹಾಗೂ ಸರ್ಕಾರಿ ನËಕರರು ಲಂಚದ ಹಣಕ್ಕೆ ಬೇಡಿಕೆ ಹಾಗೂ ಅಕ್ರಮ ಸಂಪತ್ತು ಹೊಂದಿದ್ದಲ್ಲಿ ದೂರು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಪಿಡಬ್ಲೂಡಿ ಕ್ವಾಟ್ರಸ್ ನಂ-5, ಈಶ್ವರ ಗುಡಿ ಹಿಂದುಗಡೆ, ಕೊಪ್ಪಳ ದೂ.ಸಂ: 08539-221833, ಮೊ-9480806319, 9480806320 ಇಲ್ಲಿಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಎಸಿಬಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಭಿಮಾನಿ ಹಾಗೂ ಮೈಸೂರು ದಿಗಂತ ಪ್ರಶಸ್ತಿಗಾಗಿ ಪತ್ರಕರ್ತರಿಂದ ಅರ್ಜಿ ಆಹ್ವಾನ

ಕೊಪ್ಪಳ, ನ.25 (ಕರ್ನಾಟಕ ವಾರ್ತೆ):  ಕರ್ನಾಟಕ ಮಾದ್ಯಮ ಅಕಾಡೆಮಿಯಲ್ಲಿ ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆ ಮತ್ತು ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಗಳು ದತ್ತಿಯಾಗಿ ಸ್ಥಾಪಿಸಿರುವ ವಾರ್ಷಿಕ ಪ್ರಶಸ್ತಿಗಾಗಿ ನೀಡುವ ಅಭಿಮಾನಿ ಪ್ರಶಸ್ತಿ ಮತ್ತು ಮೈಸೂರು ದಿಗಂತ ಪ್ರಶಸ್ತಿಗಾಗಿ ಸಾಮಾಜಿಕ ಸಮಸ್ಯೆ ಹಾಗೂ ಮಾನವೀಯ ಸಮಸ್ಯೆ ಕುರಿತ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭಿಮಾನಿ ಪ್ರಕಾಶನ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆ ಕುರಿತು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ ವರದಿ ಬರೆದ ಪತ್ರಕರ್ತರಿಗೆ ಹಾಗೂ ಮೈಸೂರು ದಿಂಗತ ಪತ್ರಿಕಾ ಸಂಸ್ಥೆ ಮಾನವೀಯ ಸಮಸ್ಯೆ ಕುರಿತ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ ವರದಿ ಬರೆದ ಪತ್ರಕರ್ತರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ತಲಾ ಹತ್ತು ಸಾವಿರ ರೂ ನಗದು ಹಾಗೂ ಪ್ರಶಸ್ತಿ ನೀಡಲು ತಲಾ ಸಂಸ್ಥೆಗಳು 1 ಲಕ್ಷ ರೂ ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿದೆ.
        ಅರ್ಜಿ ಸಲ್ಲಿಸುವವರು 2016 ರ ಜನವರಿ ಪ್ರಾರಂಭದಿಂದ ನವಂಬರ್ ಅಂತ್ಯದವರೆಗೆ ಪ್ರಕಟವಾದ ಸಾಮಾಜಿಕ ಸಮಸ್ಯೆ ಪ್ರತಿಬಿಂಬಿಸುವ ಲೇಖನ-ವರದಿ ಅಭಿಮಾನಿ ಪ್ರಶಸ್ತಿ-2016 ಎಂದು ದಾಖಲಿಸಿ, ಹಾಗೂ ಇದೇ ಅವಧಿಯ ಮಾನವೀಯ ಸಮಸ್ಯೆ ಕುರಿತ ಪ್ರತಿಬಿಂಬಿಸುವ ಒಂದು ಲೇಖನ-ವರದಿ ಮೈಸೂರು ದಿಗಂತ ಪ್ರಶಸ್ತಿ-2016 ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.
ಕನ್ನಡ ದೈನಿಕ/ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ. ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರ ಲಗತ್ತಿಸಿ ಕಳುಹಿಸಬಹುದು. 
ಲೇಖನ ವರದಿಯನ್ನು ಡಿಸೆಂಬರ್ 26 ರೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಅಭಿಮಾನಿ ಪ್ರಶಸ್ತಿ-2016 ಹಾಗೂ ಮೈಸೂರು ದಿಗಂತ ಪ್ರಶಸ್ತಿ-2016 ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ ಡಾ. ಬಿ.ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಕಳುಹಿಸಬಹುದು ಎಂದು ಅಕಾಡೆಮಿಯ ಅಧ್ಯಕ್ಷ ಎಂ.ಸಿದ್ದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹುಲಿಗಿಯಲ್ಲಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆ

ಕೊಪ್ಪಳ, ನ.25 (ಕರ್ನಾಟಕ ವಾರ್ತೆ):  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದಾರ್ಮಿಕ ದತ್ತಿ ಇಲಾಖೆ, ಹುಲಿಗೆಮ್ಮದೇವಿ ದೇವಸ್ಥಾನ ಇವರುಗಳ ಸಂಯುಕ್ತಾಶ್ರಯದಲ್ಲಿ ಹುಲಿಗಿಯ ಹುಲಿಗೆಮ್ಮ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿರುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ  ಉದ್ಘಾಟನೆ ಗುರುವಾರ ನೆರವೇರಿತು.
  ಕೊಪ್ಪಳ ತಾ.ಪಂ ಅಧ್ಯಕ್ಷ ಕೆ.ಬಾಲಚಂದ್ರನ್ ಅವರು ಮೇಳದ ಉದ್ಘಾಟನೆ ನೆರವೇರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಅವರು ಪ್ರಾಸ್ತಾವಿಕ ಮಾತನಾಡಿ ನ.24 ರಿಂದ 27 ರವರಗೆ ನಡೆಯಲಿರುವ ಮಾರಾಟ ಮೇಳದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾರಾಟ ನಡೆಯಲಿದೆ.  ಮಹಿಳೆಯರಿಗೆ ನಿಗಮದ ವತಿಯಿಂದ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು. ಮಹಿಳೆಯರು ತಯಾರಿಸಿದ ಕೈಕುಸುರಿ ಕಲೆಗಳ ವಸ್ತುಗಳು, ಸಂಡಿಗೆ ಹಪ್ಪಳ, ಅಲಂಕಾರಿಕ ಆಭರಣ ಸಾಮಗ್ರಿಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುವುದು. ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಕೌಶಲ್ಯ ತರಬೇತಿ ನೀಡಿ ಮಹಿಳೆಯರನ್ನು ಉದ್ದಮಿಗಳನ್ನಾಗಿ ರೂಪಿಸಲಾಗಿದೆ ಎಂದು ಹೇಳಿದರು.
     ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಹಾಗೂ ಬೇರೆ ಜಿಲ್ಲೆಯ ಸ್ತ್ರೀಶಕ್ತಿ ಸಂಘದವರು ಮಹಿಳಾ ಉದ್ದಿಮೆದಾರರು ಉತ್ಪಾದಿಸಿದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮೇಳದ ವಿವಿಧ ಮಳಿಗೆಗಳಲ್ಲಿ ಇಲಾಖೆಯ ವಿವಿಧ ಯೋಜನೆಗಳಾದ ಸಾಂತ್ವನ, ಮಹಿಳಾ ವಿಶೇಷ ಚಿಕಿತ್ಸಾ ಘಟಕ (ನಿರ್ಭಯ  ಕೇಂದ್ರ) ಮಕ್ಕಳ ಸಹಾಯವಾಣಿ ಕೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಸಹಾಯವಾಣಿ ಕೇಂದ್ರಗಳನ್ನು ತೆರೆದು ಯೋಜನೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
  ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಸುಧಾ ಎಂ ಚಿದ್ರಿ, ಮಹಿಳಾ ಸ್ವಉದ್ಯೋಗ ಮಾರ್ಗದರ್ಶನ ಕೇಂದ್ರದ ಗೀತಾ ಎ.ಹಿರೇಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ, ಸುಲೋಚನ ಬನಸೂಡೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಪ್ರೇಮಲತಾ ಹಾಗೂ ಸದಸ್ಯೆ ಈರಮ್ಮ ಮಂಡಲಗೇರಿ ಹಾಗೂ ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗೂಂಡಾ ಕಾಯ್ದೆಯಡಿ ಇಬ್ಬರ ಬಂಧನಕ್ಕೆ ಜಿಲ್ಲಾಧಿಕಾರಿ ಆದೇಶ

ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ವರದಿಯ ಆಧಾರದ ಮೇಲೆ, ಗೂಂಡಾ ಕಾಯ್ದೆಯಡಿ ಇಬ್ಬರು ವ್ಯಕ್ತಿಗಳನ್ನು ಬಂಧಿಸುವಂತೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
  ಗಂಗಾವತಿ ತಾಲೂಕು ಸಿದ್ದಾಪುರ ಗ್ರಾಮದ ಈಶಪ್ಪ ಆರೇರ (45) ಹಾಗೂ ಸಂತೆ ಬಯಲು ಗ್ರಾಮದ ಶಂಕರ್ @ ಶಂಕರಲಿಂಗಪ್ಪ (34) ಎಂಬುವವರೆ ಗೂಂಡಾ ಕಾಯ್ದೆಯಡಿ ಬಂಧನದ ಆದೇಶಕ್ಕೆ ಒಳಗಾಗಿರುವವರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಈ ಇಬ್ಬರನ್ನು ಕಳ್ಳಭಟ್ಟಿ ವ್ಯವಹಾರಗಳ, ಮಾದಕವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ ಅನೈತಿಕ ವ್ಯವಹಾರ ಅಪರಾಧಿಗಳ ಮತ್ತು ಕೊಳಚೆ ಪ್ರದೇಶಗಳನ್ನು ಕಬಳಿಸುವವರ, ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ ಅಧಿನಿಯಮ 1985 ಕಲಂ 3(2) ರನ್ವಯ ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಕೋರಿ ಜಿಲ್ಲಾಧಿಕಾರಿಗಳಿಗೆ ಕಳೆದ ನ. 20 ರಂದು ವರದಿ ಸಲ್ಲಿಸಿದ್ದರು.  ಈ ವರದಿಯ ಆಧಾರದ ಮೇಲೆ ಇದೀಗ   ಈ ಇಬ್ಬರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರೌಢಶಾಲಾ ಸಹ ಶಿಕ್ಷಕರಿಂದ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ: ಜೇಷ್ಠತಾ ಪಟ್ಟಿ ಪ್ರಕಟ

ಕೊಪ್ಪಳ, ನ.25 (ಕರ್ನಾಟಕ ವಾರ್ತೆ):  ಸಾರ್ವಜನಿಕ ಶಿಕ್ಷಣ ಇಲಾಖೆಯು ಕಲಬುರಗಿ ವಿಭಾಗದ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರ ಹುದ್ದೆಯಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಪ್ರೌಢ ಶಾಲಾ ಸಹ ಶಿಕ್ಷಕರ ಸೇವಾ ವಿವರದ ಜೇಷ್ಠತಾ ಪಟ್ಟಿಯನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.
ಕಲಬುರಗಿ ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತಂತೆ ಪ್ರೌಢ ಶಾಲಾ ಸಹ ಶಿಕ್ಷಕರ ಮತ್ತು ತತ್ಸಮಾನ ವೃಂದದ ಸೇವಾ ವಿವರದ ಜೇಷ್ಠತಾ ಪಟ್ಟಿಯನ್ನು ಆಯ್ಕೆ ಪ್ರಾಧಿಕಾರಿಗಳು/ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಸಹ ನಿರ್ದೇಶಕರು (ಹೆ.ಪ್ರ) ಅಪರ ಆಯುಕ್ತ ಕಛೇರಿ ಕಲಬುರಗಿ ಇವರು ಇಲಾಖೆಯ ವೆಬ್‍ಸೈಟ್  www.cpigulbarga.kar.nic.in   ಇಲ್ಲಿ ಪ್ರಕಟಿಸಿದ್ದಾರೆ. ಜೇಷ್ಠತಾ ಪಟ್ಟಿಯಲ್ಲಿರುವ ಕೊಪ್ಪಳ ಜಿಲ್ಲೆಯ ಪ್ರೌಢಶಾಲಾ ಸಹ ಶಿಕ್ಷಕರು ತಮ್ಮ ಕೆಜಿಐಡಿ ಸಂಖ್ಯೆ, ಸೇವಾವಿವರ, ಜನ್ಮದಿನಾಂಕ, ಬೋಧÀನಾ ವಿಷಯ, ಡಿಎಲ್‍ಆರ್‍ಸಿ ರ್ಯಾಂಕ್ ಸಂಖ್ಯೆ ಹಾಗೂ ಜೇಷ್ಠತಾ ಪಟ್ಟಿಯಲ್ಲಿರುವ ಇನ್ನಿತರೆ ಮಾಹಿತಿಯನ್ನು ಪರಿಶೀಲಿಸಿ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ನ.26 ರೊಳಗಾಗಿ ಸಂಬಂಧಿಸಿದ ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ,ಕೊಪ್ಪಳ ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

Thursday, 24 November 2016

ನ. 26 ರಂದು ಸಂವಿಧಾನ ದಿನ ಆಚರಣೆ

ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಸರ್ಕಾರದ ಸೂಚನೆಯಂತೆ ನ. 26 ರಂದು ರಾಜ್ಯಾದ್ಯಂತ ಸಂವಿಧಾನ ದಿನ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಜಿಲ್ಲೆಯ ಎಲ್ಲ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿಗಳು ಸಂವಿಧಾನದಲ್ಲಿನ ಪ್ರಸ್ತಾವನೆ ಅಂಶವನ್ನು ಓದಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ತಿಳಿಸಿದ್ದಾರೆ.

ಕೊಪ್ಪಳ : ನ. 25 ರಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ

ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಸರ್ಕಾರದ ಆದೇಶದಂತೆ ನ. 25 ರಂದು ಸೈಂಟ್ ಟಿ.ಎಲ್. ವಾಸ್‍ವಾನಿ ಅವರ ಜನ್ಮದಿನದ ಪ್ರಯುಕ್ತ ಅಂದು ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ತಿಳಿಸಿದ್ದಾರೆ.
     ಸೈಂಟ್ ಟಿ.ಎಲ್. ವಾಸ್‍ವಾನಿ ಅವರ ಜನ್ಮ ದಿನದ ಅಂಗವಾಗಿ ನ. 25 ರಂದು ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳನ್ನು ತೆರೆಯುವಂತಿಲ್ಲ.  ಅಲ್ಲದೆ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕುಕನೂರು : ಎಲ್‍ಪಿಜಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ, ನ.24 (ಕರ್ನಾಟಕ ವಾರ್ತೆ):  ಕುಕನೂರು ಪಟ್ಟಣ ಪಾಂಚಾಯತಿಯಿಂದ ಪ್ರಸಕ್ತ ಸಾಲಿನ ಎಸ್‍ಎಫ್‍ಸಿ ಶೆ.24.10 ಯೋಜನೆಯಡಿ  ಪ.ಜಾತಿ ಹಾಗೂ ಪ.ಪಂಗಡದವರಿಗೆ ಹಾಗೂ ಶೇ.7.25 ರ ಅಡಿ ಇತರೆ ಬಡ ಜನರಿಗೆ ಹಾಗೂ ಶೇ.3 ರ ಅಡಿ ಅಂಗವಿಕಲ ಅಭ್ಯರ್ಥಿಗಳಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ಎಲ್‍ಪಿಜಿ  ಸಂಪರ್ಕ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳೊಂದಿಗೆ ಡಿ.8 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕುಕನೂರು ಪಟ್ಟಣ ಪಂಚಾಯತಿ ದೂ.ಸಂ: 08534-230845 ಇಲ್ಲಿ ಪಡೆಯಬಹುದು ಎಂದು ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಳು ಬೆಳೆಗಿದ ಬಾಳೆ : ವಿಶಿಷ್ಟ ವಿಧಾನದಿಂದ ಭರಪೂರ ಇಳುವರಿ


ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ತೋಟಗಾರಿಕೆಯಲ್ಲಿ ಹೆಸರು ಮಾಡಿದೆ. ಇಲ್ಲಿನ ಮಣ್ಣು ಮತ್ತು ವಾತಾವರಣ ತೋಟಗಾರಿಕೆ ಬೆಳೆಗಳಿಗೆ ಅತ್ಯಂತ ಸೂಕ್ತವಾಗಿದ್ದು, ತೋಟಗಾರಿಕೆ ಬೆಳೆಗಳಿಗೆ ಹೇಳಿ ಮಾಡಿಸಿದಂತಿದೆ. ಇಲಾಖೆಯ ಅನೇಕ ಯೋಜನೆಗಳು ಈ  ಭಾಗದ ರೈತರಿಗೆ  ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿವೆ. ಅಧಿಕಾರಿಗಳ ಸತತ ಪರಿಶ್ರಮದಿಂದಾಗಿ ಹೆಚ್ಚು ಹೆಚ್ಚು ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು  ಆರ್ಥಿಕ  ಸುಸ್ಥಿರತೆ ಹಾಗೂ ಸ್ವಾವಲಂಬನೆಯ ಬದುಕು ಸಾಗಿಸುವಂತಾಗಿದೆ. 

ಯತ್ನಟ್ಟಿ ಗ್ರಾಮದ ಪ್ರಗತಿ ಪರ ರೈತ ಮಹಿಳೆ ನೀಲಮ್ಮ ಲಿಂಗನಗೌಡ ಪಾಟೀಲ ಅವರು, ತಮ್ಮ ಸ್ವಲ್ಪೇ ಜಮೀನಿನಲ್ಲೇ ಮೆಕ್ಕೆ ಜೋಳ, ಕಬ್ಬು ಬೆಳೆಯುತ್ತಾ ಬಂದಿದ್ದರೂ ಕೃಷಿ ಅಷ್ಟೊಂದು ಲಾಭದಾಯಕ ಅನಿಸಿರಲಿಲ್ಲ.  ಆಳುಗಳ ಕೊರತೆಯಿಂದಾಗಿ ಕೃಷಿ ಮಾಡುವುದು ಕಷ್ಟದ ಕೆಲಸವಾಗಿತ್ತು. ಇವರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದಾಗ ಸಹಾಯಕ ತೋಟಗಾರಿಕೆ ಅಧಿಕಾರಿ ಪಾಲಾಕ್ಷಪ್ಪ ರವರ ಮಾರ್ಗದರ್ಶನದಲ್ಲಿ ಯತ್ನಟ್ಟಿ ಗ್ರಾಮದ ತಮ್ಮ 3 ಎಕರೆ ಜಮೀನಿನಲ್ಲಿ ಒಟ್ಟು 3000 ಬಾಳೆ ಸಸಿಗಳನ್ನು 2015 ರ ಡಿಸೆಂಬರ್‍ನಲ್ಲಿ ನಾಟಿ ಮಾಡಿದರು.  ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ವಾಮನ ಮೂರ್ತಿ ರವರಿಂದ ಸಮಗ್ರ ಮಾಹಿತಿ ಪಡೆದು, ನೀರು ಮತ್ತು ಪೋಷಕಾಂಶಗಳ ನಿರ್ವಹಣೆ ಮಾಡಿ ಬಾಳೆ ಬೆಳೆದಿದ್ದಾರೆ. ರೋಗ / ಕೀಟಗಳನ್ನು ತಜ್ಞರ ಸಲಹೆಯಂತೆ ಯಶಸ್ವಿಯಾಗಿ ನಿರ್ವಹಿಸಿದ ಬಾಳೆ ಬೆಳೆ ಸೆಪ್ಪಂಬರ್  ತಿಂಗಳಿನಿಂದಲೇ ಗೊನೆ ಹಾಕಿ ಉತ್ತಮ ಫಸಲು ನೀಡುತ್ತಲಿದೆ. 

ಬಂಚ್ ಟ್ರೀಟ್‍ಮೆಂಟ್ :  ಕಾಯಿಗಳ ಗಾತ್ರ ಹೆಚ್ಚಿಸಲು, ತೋಟಗಾರಿಕೆ ವಿಷಯ ತಜ್ಞರ ಸಲಹೆಯಂತೆ, ಬಾಳೆಗೊನೆ ಪೂರ್ತಿ ಕಾಯಿ ಬಿಟ್ಟ ನಂತರ, ಗಂಡು ಹೂ ಕತ್ತರಿಸಿ, ಕತ್ತರಿಸಿದ ಭಾಗವನ್ನು ಅರ್ಧ ಕಿ.ಗ್ರಾಂ ಸಗಣಿಯಲ್ಲಿ 10 ಗ್ರಾಂ. ಸೂಪರ ಫಾಸ್ಪೇಟ್ ಮತ್ತು 10 ಗ್ರಾಂ. ಪೊಟ್ಯಾಷ ಬೆರೆಸಿದ ಪ್ಲಾಸ್ಟಿಕ್ ಚೀಲದಲ್ಲಿ ಮುಣುಗಿಸಿ ಕಟ್ಟಿದ್ದಾರೆ.   ಬಂಚ ಟ್ರೀಟಮೆಂಟ್ ಎಂದು ಕರೆಯಲ್ಪಡುವ ಈ ವಿಧಾನದಿಂದ ಕಾಯಿಗಳ ಗಾತ್ರ ಉತ್ತಮವಾಗಿದೆ.  ಇದಕ್ಕಾಗಿ ಅವರು ಖರ್ಚು ಮಾಡಿದ್ದು ಪ್ರತಿ ಗೊನೆಗೆ ಕೇವಲ ಎರಡು ರೂಪಾಯಿ ಮಾತ್ರ. ಇದಲ್ಲದೇ,  ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಉತ್ಪಾದನೆಯಾದ ಬಾಳೆ ಸ್ಪೇಷಲನ್ನು 4 ರಿಂದ 5 ಬಾರಿ ಸಿಂಪಡಿಸಿದ್ದಾರೆ.  ಇದರಿಂದಾಗಿ ಪ್ರತಿ ಗೊನೆಯ ಸರಾಸರಿ ತೂಕ 26 ಕಿ.ಗ್ರಾಂ ಇದ್ದು,  ಮಾರುಕಟ್ಟೆಯಲ್ಲಿ ಸರಾಸರಿ ರೂ.10.50 ಗೆ / ಕಿ. ಗ್ರಾಂ. ಬೆಲೆ ದೊರೆತಿದೆ ಇದುವರೆಗೂ 25 ಟನ್‍ಗಳಷ್ಟು ಉತ್ಪನ್ನ ಮಾರಿದ್ದು , -ರೂ.2.50 ಲಕ್ಷಕ್ಕೂ ಹೆಚ್ಚಿನ ಆದಾಯ ಪಡೆದಿದ್ದಾರೆ. ಇನ್ನೂ 30 ಟನ್ ಗಳಿಗೂ ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
3 ಎಕರೆ ಬಾಳೆ ಬೆಳೆಯಲು ಭೂಮಿ ಸಿದ್ದತೆ, ಸಸಿಗಳ ಖರೀದಿ, ಫೋಷಕಾಂಶಗಳು ಹಾಗೂ ಸಸ್ಯ ಸಂರಕ್ಷಣೆಗಾಗಿ ಅಂದಾಜು ರೂ. 2.00 ಲಕ್ಷ ಖರ್ಚು ಮಾಡಿರುತ್ತಾರೆ. ಈಗ ಮರಿಗಳನ್ನು ಬೆಳೆಯಲು ಬಿಟ್ಟಿದ್ದು, “ಕೂಳೆ ಬೆಳೆಗೆ ಅರ್ಧದಷ್ಟು ಖರ್ಚು ಮಾಡಿದರೆ ಸಾಕು ನನಗೆ ಲಾಭದಾಯಕ ಬೆಳೆ ಬರುತ್ತದೆ. ಈ ರೀತಿ 3 ಬೆಳೆಗಳಿಂದ ನನ್ನ ಆದಾಯ 6 ಲಕ್ಷ ರೂ. ಗಳಿಗೂ ಹೆಚ್ಚಿಗೆ ಆಗುವ ನಿರೀಕ್ಷೆಯಲ್ಲಿದ್ದೇನೆ. ತೋಟಗಾರಿಕೆ ಇಲಾಖೆಯಿಂದ ನೀಡಿದ ಸಹಕಾರ ಹಾಗೂ ಕೃಷಿಯಲ್ಲಿ ತಮಗೆ ಎಲ್ಲ ರೀತಿಯಿಂದಲೂ ನೆರವಾದ ಪುತ್ರ ಪ್ರಕಾಶ ಗೌಡರ ಆಸಕ್ತಿಯಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ನೀಲಮ್ಮನವರು.
 ಇಲಾಖೆಯಿಂದ ಈ ರೈತರಿಗೆ ಪ್ರಧಾನ ಮಂತ್ರಿ  ಕೃಷಿ ಸಿಂಚಾಯಿ ಯೋಜನೆ ಅಡಿ ರೂ.35740 ಅನುದಾನ ದೊರಕಿದೆ.  ಇಲಾಖೆ ಯೋಜನೆಗಳ ಸದ್ಬಳಕೆ ಪಡೆದು, ತಜ್ಞರ ಸಲಹೆಯಂತೆ  ವೈಜ್ಞಾನಿಕವಾಗಿ ಬೇಸಾಯ ಮಾಡಿದಲ್ಲಿ ತೋಟಗಾರಿಕೆ ಬೆಳೆಗಳಿಂದ ಉತ್ತಮ ಲಾಭ ಪಡೆಯ ಬಹುದಾಗಿದೆ. ರೈತ ಮಹಿಳೆ ನೀಲಮ್ಮನÀವರು ಯೋಜನೆಗಳ ಸದ್ಬಳಕೆ ಮಾಡಿಕೊಂಡು ಬಾಳೆ ಬೆಳೆದು, ಮಾದರಿ ರೈತ ಮಹಿಳೆಯಾಗಿದ್ದಾರೆ. ಎನ್ನುತ್ತಾರೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ನಜೀರಾಹ್ಮದ್ ಸೋಂಪೂರ.  ರೈತ ಮಹಿಳೆಯಾಗಿ ಈ ಸಾಧನೆ ಮಾಡಿದ್ದಕ್ಕೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ರವರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ವಿಷಯ ತಜ್ಞರು-9482672039  ಇವರನ್ನು ಸಂಪರ್ಕಿಸ ಬಹುದು.

ಗಂಗಾವತಿ : ವಿವಿಧ ಮಾರ್ಗಗಳಿಗೆ ನಗರ ಸಾರಿಗೆ ಪ್ರಾರಂಭ

ಕೊಪ್ಪಳ, ನ.24 (ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ  ಸಂಸ್ಥೆ, ಕೊಪ್ಪಳ ವಿಭಾಗವು ಗಂಗಾವತಿ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಮಾರ್ಗಗಳಿಗೆ ನಗರ ಸಾರಿಗೆಯನ್ನು ನ.24 ರಿಂದ ಪ್ರಾರಂಭಿಸಿದೆ.
ನಗರ ಸಾರಿಗೆ ಪ್ರಾರಂಭವಾಗಿರುವ ಮಾರ್ಗ ವಿವರ ಇಂತಿದೆ: ಗಂಗಾವತಿ-ಸಿದ್ದಿಕೇರಿ-ಸಾಯಿ ಮಂದಿರದವರೆಗೆ.  ಮಾರ್ಗ- ಜಯನಗರ, ವಾಲ್ಮೀಕಿ ವೃತ್ತ, ತಾಲೂಕ ಸಾರ್ವಜನಿಕ ಆಸ್ಪತ್ರೆ, ಗಂಗಾವತಿ ಕೇಂದ್ರೀಯ ಬಸ್ ನಿಲ್ದಾಣ, ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪ, ಪಂಪಾ ವಿರುಪಾಕ್ಷೇಶ್ವರ ದೇವಸ್ಥಾನ, ಹಿರೇ ಜಂತಕಲ್, ತಾಲೂಕ ಆಫೀಸ್. ಹಾಗೂ ಗಂಗಾವತಿ-ಹೊಸಳ್ಳಿ ವರೆಗೆ ಮಾರ್ಗ ನೀಲಕಂಠೇಶ್ವರ ದೇವಸ್ಥಾನ, ಟೀಚರ್ಸ್ ಕಾಲೋನಿ ಮಾರ್ಗವಾಗಿ ಗಂಗಾವತಿ ನಗರದಲ್ಲಿ ನಗರ ಸಾರಿಗೆ ವಾಹನಗಳು ಸಂಚರಿಸಲಿವೆ.  ನ.24 ರಿಂದ ನಗರ ಸಾರಿಗೆ ವಾಹನಗಳ ಸಂಚಾರ ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ  ಈಕರಸಾ ಸಂಸ್ಥೆಯ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 23 November 2016

ಮಕ್ಕಳ ರಕ್ಷಣೆಗೆ ಗ್ರಾಮಲೆಕ್ಕಿಗರು ಬದ್ಧರಾಗಿ- ಡಿಸಿ ಎಂ.ಕನಗವಲ್ಲಿ

ಕೊಪ್ಪಳ, ನ.23 (ಕರ್ನಾಟಕ ವಾರ್ತೆ):  ಜಿಲ್ಲೆಯ ಪ್ರತಿ ಗ್ರಾಮ ಲೆಕ್ಕಿಗರು ಕಾನೂನು ಅರಿವು ಪಡೆದು, ಸ್ಥಳೀಯ ಮಟ್ಟದಲ್ಲಿ ಮಕ್ಕಳ ರಕ್ಷಣೆಗೆ  ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಗ್ರಾಮ ಲೆಕ್ಕಿಗರುಗಳಿಗೆ ಜಿಲ್ಲಾಧಿಕಾರಿ ಎಂ ಕನಗವಲ್ಲಿ ಅವರು ಸೂಚನೆ ನೀಡಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆಗಳ ಕುರಿತು  ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಮ್ಮಿಕೊಳ್ಳಲಾದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
     ಗ್ರಾಮ ಲೆಕ್ಕಿಗರು ಆಯಾ ಗ್ರಾಮದ ಮುಖ್ಯ ಅಧಿಕಾರಿಗಳಿದ್ದಂತೆ,  ಆಯಾ ಗ್ರಾಮದ ಸಂಪೂರ್ಣ ವಿವರವನ್ನು ಹೊಂದಿರಬೇಕು.  ಎಲ್ಲ ಕಾನೂನುಗಳ ಅರಿವನ್ನು ಸಹ ಗ್ರಾಮ ಲೆಕ್ಕಿಗರು ಹೊಂದಿರುವುದು ಅಗತ್ಯವಾಗಿದೆ.  ಜನಿಸಿದ ಪ್ರತಿ ಮಗುವಿನ ಜನನ ಪ್ರಮಾಣ ಪತ್ರ ಪಡೆಯುವುದು ಆ ಮಗುವಿನ ಪ್ರಥಮ ಹಕ್ಕು, ಗ್ರಾಮದ ಪ್ರತಿಯೊಬ್ಬ ಮಗುವು ಅದನ್ನು ಪಡೆಯುವಂತೆ ಹಾಗೂ ಅದರ ಪ್ರಯೋಜನದ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿ, ಗ್ರಾಮದ ಅಭಿವೃದ್ಧಿಯೊಂದಿಗೆ ಮಕ್ಕಳ ಸಂರಕ್ಷಣೆಗೆ ಗ್ರಾಮ ಲೆಕ್ಕಿಗರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು,  ಜನನ ಹಾಗೂ ಮರಣ ನೋಂದಣಿ ಮತ್ತು ಪ್ರಮಾಣ ಪತ್ರಗಳ ಮಹತ್ವ ಹಾಗೂ ಅವುಗಳ ಸರಿಯಾದ ಅಂಕಿ ಅಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.  ಯುನಿಸೆಫ್ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್ ಅವರು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಮಕ್ಕಳ ಹಕ್ಕುಗಳು, ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಕುರಿತು,  ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಅವರು, ಬಾಲ್ಯವಿವಾಹ ಹಾಗೂ ಮಕ್ಕಳ ನ್ಯಾಯ (ಘೋಷಣೆ ಮತ್ತು ರಕ್ಷಣೆ) ಕಾಯ್ದೆ ಕುರಿತು ತರಬೇತಿ ನೀಡಿದರು.
     ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್ ರಾಮಚಂದ್ರನ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಉದ್ಯೋಗ ಖಾತ್ರಿ ಚೀಟಿ ಪಡೆದ ಕುಟುಂಬದ ಸದಸ್ಯರ ದಾಖಲಾತಿ ಸಲ್ಲಿಸಲು ಸೂಚನೆ

ಕೊಪ್ಪಳ, ನ.23 (ಕರ್ನಾಟಕ ವಾರ್ತೆ):  ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಪಡೆದ ಕುಟುಂಬದ ಎಲ್ಲಾ ಸದಸ್ಯರ ಅಗತ್ಯ ದಾಖಲಾತಿಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸುವಂತೆ ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೂಚನೆ ನೀಡಿದ್ದಾರೆ.
     ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಪಡೆದ ಕುಟುಂಬಗಳ ಪ್ರತಿ ವರ್ಷ ನವೀಕರಣ ಮಾಡುವುದು ಕಡ್ಡಾಯವಾಗಿದ್ದು, ಮರಣ ಹೊಂದಿದವರ ಉದ್ಯೋಗ ಚೀಟಿ ರದ್ದುಪಡಿಸುವದು ಹಾಗೂ ಹೊಸದಾಗಿ ಸೇರಿಸಬೇಕಾದ ಸದಸ್ಯರ ಮಾಹಿತಿಯನ್ನು ಸಂಬಂಧಪಟ್ಟ ಕುಟುಂಬಗಳು ನೀಡಬೇಕು.
     ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಡಂಗುರ ಸಾರುವ ಮೂಲಕ ಈ ಕುರಿತು ಪ್ರಚಾರ ಮಾಡಲಾಗಿದ್ದರೂ, ಇನ್ನೂ ದಾಖಲಾತಿ ಸಲ್ಲಿಸಬೇಕಾದ ಕುಟುಂಬಗಳು ಬಹಳಷ್ಟು ಬಾಕಿ ಉಳಿದಿವೆ. ದಾಖಲಾತಿ ಸಲ್ಲಿಸದಿರುವುದರಿಂದಾಗಿ ನವೀಕರಣ ಕಾರ್ಯವನ್ನು ಮುಕ್ತಾಯಗೊಳಿಸಲು ತೊಂದರೆಯಾಗಿದೆ.  ಉದ್ಯೋಗ ಚೀಟಿ ಹೊಂದಿದ ಕುಟುಂಬದ ಸದಸ್ಯರು, ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ತೆರಳಿ, ತಮ್ಮ ಕುಟುಂಬದ ಸದಸ್ಯರುಗಳ ಆಧಾರ ಕಾರ್ಡ್, ವೈಯಕ್ತಿಕ ಬ್ಯಾಂಕ್ ಖಾತೆ ಹಾಗೂ 2 ಭಾವಚಿತ್ರಗಳನ್ನು ನ.26 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ತಾ.ಪಂ   ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪೊಲೀಸ್ ವಿರುದ್ಧ ದೂರಿದ್ದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸಿ

ಕೊಪ್ಪಳ, ನ. 23  (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ ಕಾಯ್ದೆ 2012 ರ ತಿದ್ದುಪಡಿ ಪ್ರಕಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ದೂರುಗಳ ವಿಚಾರಣೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದೂರು ಪ್ರಾಧಿಕಾರಗಳನ್ನು ರಚಿಸಿದ್ದು, ಜಿಲ್ಲೆಯ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ಧ ದೂರುಗಳಿದ್ದಲ್ಲಿ, ಸಾರ್ವಜನಿಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜ್ ತಿಳಿಸಿದ್ದಾರೆ.
    ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿಎಸ್‍ಪಿ ಮತ್ತು ಅದಕ್ಕಿಂತ ಕೆಳದರ್ಜೆ ಅಧಿಕಾರಿ/ಸಿಬ್ಬಂದಿಗಳ ವಿರುದ್ಧದ ಆರೋಪ ಅಂದರೆ ಯಾವುದೇ ಸಾರ್ವಜನಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ, ಪೊಲೀಸ್ ವಶದಲ್ಲಿದ್ದಾಗ ಮರಣ, ಐಪಿಸಿ ಸೆಕ್ಷನ್-320 ರಲ್ಲಿ ತಿಳಿಸಲಾದಂತಹ ಗಂಭೀರ ಗಾಯ, ಮಾನಭಂಗ, ಅಥವಾ ಮಾನಭಂಗಕ್ಕೆ ಯತ್ನ ಅಥವಾ ಕಾನೂನು ಪ್ರಕಾರವಲ್ಲದ ಬಂಧನ ಇಲ್ಲವೇ ವಶದಲ್ಲಿರಿಸಿಕೊಳ್ಳುವುದು, ಇತರ ಗಂಭೀರ ದುರ್ನಡತೆ ದೂರುಗಳ ವಿಚಾರಣೆ ಮಾಡಲಿದೆ.
    ಪೊಲೀಸ್ ಉಪಾಧೀಕ್ಷರು ಮತ್ತು ಅದಕ್ಕಿಂತ ಕೆಳ ಹಂತದ ಅಧಿಕಾರಿ/ಸಿಬ್ಬಂಧಿಗಳ ವಿರುದ್ದದ ದೂರುಗಳನ್ನು, ಸಾರ್ವಜನಿಕರು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ, ಜಿಲ್ಲಾ ಪೊಲೀಸ್ ಅಧೀಕ್ಷಕರವರ ಕಛೇರಿ, ಅಶೋಕ ಸರ್ಕಲ್, ಕೊಪ್ಪಳ, ದೂರವಾಣಿ-08539-230111 ಇಲ್ಲಿಗೆ ಸಲ್ಲಿಸಬಹುದು.
     ಡಿಎಸ್‍ಪಿ ಹುದ್ದೆಯ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳ ವಿರುದ್ದದ ದೂರುಗಳನ್ನು ಅಧ್ಯಕ್ಷರು, ರಾಜ್ಯ ಪೊಲೀಸ್ ದೂರು ಪ್ರಾಧಿಕಾರ, ಕೊಠಡಿ ಸಂ.36, ನೆಲಮಹಡಿ, ವಿಕಾಸ ಸೌಧ, ಬೆಂಗಳೂರು-01, ದೂರವಾಣಿ- 080-22386063 ಅಥವಾ 22034220 ಇಲ್ಲಿಗೆ ಸಲ್ಲಿಸಬಹುದಾಗಿದೆ.   
     ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗಾಗಿ ವೆಬ್‍ಸೈಟ್ ಪ್ರಾರಂಭಿಸಿದೆ  www.karnataka.gov.in/spcablr@ ಸಾರ್ವಜಿನಿಕರು ವೀಕ್ಷಿಸಬಹುದು. ಹಾಗೂ ಕೊಪ್ಪಳ ಪೊಲೀಸ್ ದೂರು ಪ್ರಾಧಿಕಾರದ ಇ-ಮೇಲ್  dpcakpl@karnataka.gov.in  ಮೂಲಕ ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಗಮದಿಂದ ನೀಡುವ ಸಾಲ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ- ವಿ.ಎನ್. ಗಿರಿಮಲ್ಲಪ್ಪ

ಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಸ್ವ-ಸಹಾಯ ಸಂಘಗಳಿಗೆ ನಿಗಮದಿಂದ ನೀಡುವ ಸಹಾಯಧನ ಮತ್ತು ಸಾಲ ಸೌಲಭ್ಯವನ್ನು ಸರಿಯಾಗಿ ಬಳಸಿಕೊಂಡು, ಮಹಿಳೆಯರು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್. ಗಿರಿಮಲ್ಲಪ್ಪ ಅವರು ಹೇಳಿದರು.
     ಕೊಪ್ಪಳ ನಗರದ ದೇವರಾಜ ಅರಸ್ ಕಾಲೋನಿಯಲ್ಲಿನ ಮಾಬು ಸುಬಾನಿ ಮಹಿಳಾ ಸ್ವ-ಸಹಾಯ ಸಂಘಕ್ಕೆ ಬುಧವಾರದಂದು ಭೇಟಿ ನೀಡಿ ಅವರು ಮಾತನಾಡಿದರು.
     ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನಿಗಮವು ಸಾಲ ಸೌಲಭ್ಯವನ್ನು ಒದಗಿಸುತ್ತಿದೆ.  ಸಂಘದ ಎಲ್ಲ ಮಹಿಳಾ ಸದಸ್ಯರುಗಳು ಈ ಸಹಾಯಧನ ಮತ್ತು ಸಾಲವನ್ನು ಬಳಸಿಕೊಂಡು, ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ನಿಗಮದ ಅಧ್ಯಕ್ಷ ವಿ.ಎನ್. ಗಿರಿಮಲ್ಲಪ್ಪ ಅವರು ಹೇಳಿದರು.  ನಂತರ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ನಿಗಮದ ಜಿಲ್ಲಾ ಕಚೇರಿಗೆ ಭೇಟಿ ನೀಡಿ, ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.  ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳನ್ನು ಸ್ವೀಕರಿಸಿದರು.  ಸಮಾಜದ ಮುಖಂಡರುಗಳ ಜತೆ ಚರ್ಚೆ ನಡೆಸಿದ ನಂತರ, ನಿಗಮದ ವಿವಿಧ ಯೋಜನೆಗಳ ಘಟಕಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡುಗೆ ಸಹಾಯಕರ ಹಾಗೂ ಕಾವಲುಗಾರರ ಹುದ್ದೆಗೆ ಅರ್ಜಿ: ನ.30 ರವರೆಗೆ ಅವಧಿ ವಿಸ್ತರಣೆ

ಕೊಪ್ಪಳ, ನ.23 (ಕರ್ನಾಟಕ ವಾರ್ತೆ):  ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಅಡುಗೆ ಸಹಾಯಕರು ಹಾಗೂ ಕಾವಲುಗಾರರ ಹುದ್ದೆಗಳಿಗೆ ಆನ್‍ಲೈನ್ ಮೂಲಕ  ಅರ್ಜಿ ಸಲ್ಲಿಸುವ ಅವಧಿಯನ್ನು ನ.30 ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಅರ್ಜಿ ಸಲ್ಲಿಕೆಗೆ ನ.19 ಕೊನೆಯ ದಿನವನ್ನಾಗಿ ನಿಗದಿಪಡಿಸಲಾಗಿತ್ತು, ಇದೀಗ ನ.30 ರವರೆಗೆ ಅವಧಿ ವಿಸ್ತರಿಸಲಾಗಿದೆ.  ಪರಿಷ್ಕøತ ವೇಳಾಪಟ್ಟಿಯನ್ವಯ ದಾಖಲಾತಿ ಪರಿಶೀಲನೆ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಡಿ. 08 ರಿಂದ 22 ರವರೆಗೆ ನಡೆಯಲಿದ್ದು, ತಾತ್ಕಾಲಿಕ ನೇಮಕಾತಿ ಪಟ್ಟಿ ಡಿ. 30 ರಂದು ಪ್ರಕಟಗೊಳ್ಳಲಿದೆ.  ಆಕ್ಷೇಪಣೆ ಸಲ್ಲಿಸಲು 2017 ರ ಜ. 01 ಕೊನೆಯ ದಿನವಾಗಿದ್ದು, ಆಕ್ಷೇಪಣೆಗಳಿಗೆ ಸೂಕ್ತ ಸಮಜಾಯಿಷಿ ನೀಡಲು ಜ. 13 ಕೊನೆಯ ದಿನಾಂಕವಾಗಿರುತ್ತದೆ.  ಅಂತಿಮ ನೇಮಕಾತಿ ಪಟ್ಟಿ ಜ. 16 ರಂದು ಪ್ರಕಟಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಹಪೂರ ಗ್ರಾಮಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಸಿಇಒ ಆರ್.ರಾಮಚಂದ್ರನ್

ಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಬೇವಿನಹಳ್ಳಿ ಗ್ರಾಮ ಪಂಚಾಯತಿಯ ಶಹಾಪೂರ ಗ್ರಾಮಕ್ಕೆ ಜಿಲ್ಲಾ ಪಂಚಾಯತಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಬುಧವಾರದಂದು ಅನೀರಿಕ್ಷಿತ ಭೇಟಿ ನೀಡಿ, ಶೌಚಾಲಯ ನಿರ್ಮಾಣ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಮುದಾಯ ಆಧಾರಿತ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮದ ನಿಮಿತ್ಯ ಕೊಪ್ಪಳ ತಾಲೂಕಿನ ಆಯ್ದ 20 ಗ್ರಾಮ ಪಂಚಾಯತಿಗಳನ್ನು ಬಯಲು ಬರ್ಹಿದೆಸೆ ಮುಕ್ತ ಮಾಡಲು ನಿರ್ಧರಿಸಿದ್ದು, ಪ್ರತಿದಿನ ಈ ಗ್ರಾಮ ಪಂಚಾಯತಿಗಳಲ್ಲಿ ಜಾಗೃತಿ ತಂಡದಿಂದ ಪರಿವೀಕ್ಷಣೆ ಮಾಡಲಾಗುತ್ತಿದೆ.  ಈ ದಿಸೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಶಹಾಪುರ ಗ್ರಾಮಕ್ಕೆ ಭೆಟಿ ನೀಡಿ, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳೊಂದಿಗೆ ಶೌಚಾಲಯ ಜಾಗೃತಿ ಕುರಿತಂತೆ ಸಮಾಲೋಚನೆ ನಡೆಸಿದರು.  ಬಯಲು ಬಹಿರ್ದೆಸೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
 ಬೇವಿನಹಳ್ಳಿ ಗ್ರಾ.ಪಂ. ಪಿಡಿಓ ಗೀತಾ ಕುಮಾರಿ ಅವರು, ಮಾತನಾಡಿ, ಶೌಚಾಲಯ ಹೊಂದಿರುವ ಕುರಿತು ಗ್ರಾಮ ಪಂಚಾಯತಿ ವತಿಯಿಂದ ಸಾರ್ವಜನಿಕರ ಪಡಿತರ ಚೀಟಿಯ ಮೇಲೆ ಮೊಹರನ್ನು ಹಾಕಲಾಗುತ್ತಿದೆ.  ಮೊಹರು ಇರುವ ಪಡಿತರ ಚೀಟಿಗೆ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.  ಈ ವಿನೂತನ ಕ್ರಮದಿಂದ ಶೌಚಾಲಯ ಹೊಂದದೇ ಇರುವವರು, ಶೌಚಾಲಯ ನಿರ್ಮಿಸಿಕೊಳ್ಳಲು ಹಾಗೂ ಪಡಿತರ ಚೀಟಿಯ ಮೇಲೆ ಮೊಹರು ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ವಿವರಣೆ ನೀಡಿದರು.
 ತಾಲೂಕಾ ಪಂಚಾಯತಿ ಕಾರ್ಯನಿವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ,  ಜಿಲ್ಲಾ ಪಂಚಾಯತ್ ಸಮಾಲೋಕರಾದ ಬಸಮ್ಮ ಹುಡೇದ್, ಮತ್ತು ಮಂಜುಳಾ ಬಡಿಗೇರ್, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಬೆಳಗಿನ ಜಾವ 05 ಗಂಟೆ ಸುಮಾರಿಗೆ ಗ್ರಾಮದ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಂಡರು.

ಕಾರಟಗಿ: ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ನ.22 (ಕರ್ನಾಟಕ ವಾರ್ತೆ):  ಕಾರಟಗಿ ಪುರಸಭೆಯಿಂದ ಪ್ರಸಕ್ತ ಸಾಲಿನ ಎಸ್‍ಎಫ್‍ಸಿ ಶೆ.24.10 ರ ಯೋಜನೆಯಡಿ  ಪ.ಜಾತಿ ಹಾಗೂ ಪ.ಪಂಗಡದವರಿಗೆ ವ್ಯಕ್ತಿ ಸಂಬಂಧಿತ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳು ವಿದ್ಯಾರ್ಥಿ ಪ್ರೋತ್ಸಾಹಧನ, ಅಡುಗೆ ಅನಿಲ ಸಿಲೆಂಡರ್ ಮತ್ತು ಒಲೆ ಇತ್ಯಾದಿ, ರಾಜ್ಯ/ರಾಷ್ಟ್ರೀಯ ಮಟ್ಟದ ಕ್ರೀಡೆ/ಕಲೆ/ಸಾಂಸ್ಕøತಿಕ ಹಾಗೂ ಇತರೆ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಶಸ್ತ್ರ ಚಿಕಿತ್ಸೆಗಾಗಿ ಧನಸಹಾಯ ಹಾಗೂ ಎಲ್‍ಎಲ್‍ಬಿ ಪದವಿ ವೃತ್ತಿ ಪ್ರಾರಂಭಿಸಲು ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿ ಪ್ರೋತ್ಸಾಹಧನ ಸೌಲಭ್ಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ರೂ-3000, ಐಟಿಐ ಇತರೆ ವೃತ್ತಿಪರ ವಿದ್ಯಾರ್ಥಿಗಳಿಗೆ ರೂ-3000. ಪಿಯುಸಿ, ಉದ್ಯೋಗ ಆಧಾರಿತ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ-4500.  ಬಿಎ, ಬಿಕಾಂ, ಮತ್ತು ಬಿಎಸ್ಸಿ ಇತರೆ ಪದವಿಗೆ ರೂ-4500. ಎಂಎ/ ಎಂಎಸ್‍ಸಿ/ಎಂ.ಕಾಂ/ ಇತರೆ ಸ್ನಾತಕೋತ್ತರ ಪದವಿಗಳಿಗೆ ರೂ-15000 ಪ್ರೋತ್ಸಾಹಧನ ನೀಡಲಾಗುವುದು.   ರಾಜ್ಯ/ರಾಷ್ಟ್ರೀಯ ಮಟ್ಟದ ಕ್ರೀಡೆ/ಕಲೆ/ಸಾಂಸ್ಕøತಿಕ ಹಾಗೂ ಇತರೆ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ  ಅಂತರಾಷ್ಟ್ರೀಯ ಮಟ್ಟ ರೂ-75,000. ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವವರಿಗೆ ರೂ-50,000. ರಾಜ್ಯ ಮಟ್ಟದಲ್ಲಿ ಭಾಗವಹಿಸುವವರಿಗೆ ರೂ-25,000. ಜಿಲ್ಲಾ ಮಟ್ಟ ರೂ-10,000. ತಾಲೂಕು ಮಟ್ಟದಲ್ಲಿ ಭಾಗವಹಿಸುವವರಿಗೆ ರೂ-5000 ಪ್ರೋತ್ಸಾಹಧನ ನೀಡಲಾಗುವುದು.
ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ  ಲಗತ್ತಿಸಬೇಕಾದ ದಾಖಲಾತಿ ಕುರಿತು ಹೆಚ್ಚಿನ ಮಾಹಿತಿಯನ್ನು   ಕಾರಟಗಿ ಪುರಸಭೆ ಕಾರ್ಯಾಲಯ ದೂ.ಸಂ:08533-274232 ಇಲ್ಲಿ  ಪಡೆಯಬಹುದು ಎಂದು ಕಾರಟಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 22 November 2016

ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಅತಿಯಾದ ಒತ್ತಡ ಪ್ರಮುಖ ಕಾರಣ- ಮೀರಾ ಸಕ್ಸೇನಾ

ಕೊಪ್ಪಳ ನ. 22 (ಕರ್ನಾಟಕ ವಾರ್ತೆ): ವಿಶ್ರಾಂತಿ ರಹಿತ ಕರ್ತವ್ಯ ಹಾಗೂ ಅತಿಯಾದ ಒತ್ತಡದಲ್ಲಿ ಸೇವೆ ಸಲ್ಲಿಸುವ ಪರಿಸ್ಥಿತಿ, ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರಮುಖ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಮೀರಾ. ಸಿ. ಸಕ್ಸೇನಾ ಅವರು ಅಭಿಪ್ರಾಯಪಟ್ಟರು.
     ಪೊಲೀಸ್ ಇಲಾಖೆ, ಗ್ಲೋಬಲ್ ಕನ್ಸನ್ ಇಂಡಿಯಾ, ಅಕಾಡಮಿ ಆಫ್ ಗಾಂಧಿಯನ್ ಸ್ಟಡೀಸ್, ಕೇರ್, ವನಮಿತ್ರ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರದಂದು ಪೊಲೀಸ್ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಮಾನವ ಹಕ್ಕು, ಲಿಂಗತ್ವ ಸಮಾನತೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಕಾನೂನು ಅರಿವು ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರ ಮಾತನಾಡಿದರು.
     ಎರಡನೆ ಮಹಾಯುದ್ಧದ ನಂತರ ವಿಶ್ವಸಂಸ್ಥೆಯ ಆಶಯದಂತೆ ಮಾನವ ಹಕ್ಕುಗಳನ್ನು ರಕ್ಷಿಸಲು ಭಾರತದಲ್ಲಿ 1993 ರಲ್ಲಿಯೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಸ್ತಿತ್ವಕ್ಕೆ ಬಂದಿದೆ.  ಕರ್ನಾಟಕ ರಾಜ್ಯದಲ್ಲಿ 2007 ರಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ರಚನೆಯಾಗಿದ್ದು, ದೇಶದ ಇನ್ನೂ ಕೆಲವು ರಾಜ್ಯಗಳಲ್ಲಿ ಇದು ಅಸ್ತಿತ್ವಕ್ಕೆ ಬಂದಿಲ್ಲ.  ನಾಗರೀಕರ ಮೇಲೆ ವಿನಾಕಾರಣ ನಡೆಯುವ ದೌರ್ಜನ್ಯ ಹಾಗೂ ಯಾವುದೇ ವ್ಯಕ್ತಿ ಗೌರವಯುತ ಜೀವನ ನಡೆಸುವ ಹಕ್ಕಿನ ಉಲ್ಲಂಘನೆಯನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ.  ಆದರೆ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಪೊಲೀಸ್ ಇಲಾಖೆಯ ಮೇಲೆಯೇ ಬರುತ್ತವೆ.  ನಮ್ಮನ್ನು ನೋಡಿದರೆ ಜನ ಹೆದರಬೇಕು ಎನ್ನುವ ಮನೋಭಾವ ಕೆಲ ಪೊಲೀಸರಲ್ಲಿ ಇದೆ.  ಠಾಣೆಯಲ್ಲಿ ಅನಗತ್ಯ ದೌರ್ಜನ್ಯ, ವಿಚಾರಣೆ ನೆಪದಲ್ಲಿ ವ್ಯಕ್ತಿಗಳಿಗೆ ಕಿರುಕುಳ, ಹಲ್ಲೆ, ಲಾಕಪ್ ಡೆತ್‍ನಂತಹ ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ಹೆಚ್ಚು ವರದಿಯಾಗುತ್ತವೆ.  ಕಳ್ಳತನ, ದರೋಡೆ, ಕೊಲೆ ಮುಂತಾದ ದೂರುಗಳ ಬಗ್ಗೆ ಸಾರ್ವಜನಿಕರು, ಸಮಾಜ, ಜನಪ್ರತಿನಿಧಿಗಳು, ಮಾಧ್ಯಮ, ಸರ್ಕಾರ ಹೀಗೆ ಎಲ್ಲೆಡೆಯಿಂದ ಪೊಲೀಸರ ಮೇಲೆ ಒತ್ತಡ ಬರುವುದು ಸಹಜ.  ಪ್ರಕರಣಗಳಿಗೆ ಸಂಬಂಧಿಸಿದಂತೆ ಅವಸರದಲ್ಲಿ ಫಲಿತಾಂಶ ನೀಡುವ ಧಾವಂತದಲ್ಲಿ ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುವಾಗ ಕೆಲವೊಮ್ಮೆ ತಪ್ಪುಗಳು ಕೂಡ ಆಗುತ್ತವೆ.  ಹೀಗೆ ಒತ್ತಡದಲ್ಲಿ ತಪ್ಪೆಸಗಿದರೂ, ಅದರ ಹೊಣೆಯನ್ನು ಪೊಲೀಸರೇ ಹೊರಬೇಕಾಗುತ್ತದೆ.  ಆದರೆ, ‘ಬನ್ನಿ, ಕುಳಿತುಕೊಳ್ಳಿ, ಟೀ ಕುಡಿಯಿರಿ, ನೀವು ನಿಜವಾಗಲೂ ಕಳ್ಳತನ ಮಾಡಿದ್ದೀರಾ ? ಎನ್ನುವ ವಿಚಾರಣೆ ಶೈಲಿಗೆ ಕಳ್ಳರಿಂದ ಸತ್ಯಾಂಶ ಬರಿಸಲು ಸಾಧ್ಯವಿಲ್ಲ.  ಆದರೆ ಪೊಲೀಸರು ಪರಿಸ್ಥಿತಿ ಕೈಮೀರಿ ಹೋಗದಂತೆ ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ.  ಮಾನವ ಹಕ್ಕುಗಳು, ಪೊಲೀಸರ ಕರ್ತವ್ಯ ಕುರಿತಂತೆ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಗ ಆಯೋಜಿಸುತ್ತಿದೆ.  ಹೊಸ ಕಾನೂನುಗಳು, ಹಾಗೂ ಕಾಲ ಕಾಲಕ್ಕೆ ಆಗುವ ತಿದ್ದುಪಡಿಗಳ ಬಗ್ಗೆ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ ಸಮರ್ಪಕವಾಗಿ ದೊರೆಯುವ ವ್ಯವಸ್ಥೆ ಆಗಬೇಕು.  ಯಾವುದೇ ವ್ಯಕ್ತಿಯನ್ನು ಯಾತಕ್ಕಾಗಿ ಹಾಗೂ ಎಲ್ಲಿಗೆ ಆತನನ್ನು ವಿಚಾರಣೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ಆ ವ್ಯಕ್ತಿಗೆ ಹಾಗೂ ಆತನ ಕುಟುಂಬಕ್ಕಿದೆ.  ಆದರೆ, ಪೊಲೀಸ್ ವ್ಯವಸ್ಥೆಯಲ್ಲಿ ನಡೆಯುತ್ತಿರುವುದೇ ಬೇರೆ.  ಮಧ್ಯರಾತ್ರಿ ಬಂದು, ಹೇಳದೆ, ಕೇಳದೆ, ಕುಟುಂಬದವರಿಗೂ ಮಾಹಿತಿ ನೀಡದೆ ಅಪಹರಣ ಶೈಲಿಯಲ್ಲಿ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗುವುದು ಸರಿಯಲ್ಲ.  ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿವೆ.  ಆದರೆ ಪೊಲೀಸರು ನ್ಯಾಯ ಕೊಡಿಸುವ ಬದಲು ರಾಜಿ ಸಂಧಾನದ ಮೊರೆ ಹೋಗುವುದು ಸರಿಯಲ್ಲ.  ಸಿವಿಲ್ ಪ್ರಕರಣಗಳು, ಕಾರ್ಮಿಕ, ಕೌಟುಂಬಿಕ ಹೀಗೆ ಪ್ರತಿಯೊಂದು ವಿಷಯಗಳ ಬಗ್ಗೆ ವಿಚಾರಣೆ ನಡೆಸಲು ಪ್ರತ್ಯೇಕ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಅವರು ಹೇಳಿದರು.
ಸಹಾಯವಾಣಿ ಸ್ಥಾಪನೆ : ಜೀತದಾಳು, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ದೇವದಾಸಿ ಪದ್ಧತಿಗಳು, ಕೆಲವೆಡೆ ರಾಜಾರೋಷವಾಗಿ ನಡೆದರೆ, ಕೆಲವೆಡೆ ಕದ್ದುಮುಚ್ಚಿ ಈಗಲೂ ಚಾಲ್ತಿಯಲ್ಲಿದೆ ಎನ್ನುವ ದೂರುಗಳಿವೆ.  ಉತ್ತರ ಕರ್ನಾಟಕದಲ್ಲಿ ಈ ಪ್ರಕರಣಗಳು ಹೆಚ್ಚು.  ಇವೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪ್ತಿಗೆ ಬರುತ್ತವೆ.  ಇದೀಗ ರಾಜ್ಯ ಮಾನವ ಹಕ್ಕುಗಳ ಆಯೋಗವು, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲು ಸಹಾಯವಾಣಿಯನ್ನು ಸ್ಥಾಪಿಸಿದ್ದು, 1800-4252-3333 ಸಂಖ್ಯೆಗೆ ಕರೆಮಾಡಿ, ತಿಳಿಸಬಹುದಾಗಿದೆ.  ದೂರವಾಣಿ ಕರೆ ಮಾಡಿದವರ ವಿವರವನ್ನು ಗೌಪ್ಯವಾಗಿರಿಸಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಅವರು ಹೇಳಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಮಾತನಾಡಿ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಯನ್ನು ಸಮರ್ಪಕವಾಗಿ ಮಾಡಿದರೆ ಮಾನವ ಹಕ್ಕಿಗೆ ಗೌರವ ನೀಡಿದಂತೆ.  ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದರು.
     ಕಾರ್ಯಗಾರದ ಅಂಗವಾಗಿ ಕೇರ್ ಸಂಸ್ಥೆಯ ಮನೋಹರ ರಂಗನಾಥ್- ಮಾನವ ಹಕ್ಕು ಮತ್ತು ಕಾಯ್ದೆ, ಶಾಸನಗಳು ಕುರಿತು.  ಗ್ಲೋಬಲ್ ಕನ್ಸರ್ನ್ ಇಂಡಿಯಾ ಸಂಸ್ಥೆಯ ಬೃಂದಾ ಅಡಿಗೆ- ಲಿಂಗತ್ವ ಸಮಾನತೆ.  ವನಮಿತ್ರ ಸಂಸ್ಥೆಯ ಸುರೇಶ್ ಕುಮಾರ್- ಮಾನವ ಮತ್ತು ಪರಿಸರ ಹಕ್ಕು ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮೇವು ಸುಟ್ಟುಹಾಕದಿರಿ, ಶೇಖರಿಸಿಡಿ ಅಥವಾ ಮಾರಾಟ ಮಾಡಿ : ರೈತರಲ್ಲಿ ಪಶುಪಾಲನಾ ಇಲಾಖೆ ಮನವಿ

ಕೊಪ್ಪಳ, ನ.22 (ಕರ್ನಾಟಕ ವಾರ್ತೆ):  ಜಿಲ್ಲೆಯಲ್ಲಿ ಸತತ ಬರದಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಯಿರುವುದರಿಂದ ರೈತರು ಭತ್ತ ಮತ್ತು ಇತರೆ ಬೆಳೆಗಳಿಂದ ಬರುವ ಮೇವನ್ನು ಸುಟ್ಟು ಹಾಕಬಾರದು.  ದಾಸ್ತಾನು ಮಾಡಿ ಇಡಿ ಅಥವಾ ಸರ್ಕಾರಕ್ಕೆ ಮಾರಾಟ ಮಾಡಿ ಎಂದು ಪಶುಪಾಲನಾ ಇಲಾಖೆ ರೈತರಲ್ಲಿ ಮನವಿ ಮಾಡಿದೆ.
ಕೊಪ್ಪಳ ಜಿಲ್ಲೆಯ 4 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದು, ಭತ್ತ ಮತ್ತು ಇತರೆ ಬೆಳೆಗಳಿಂದ ಬರುವ ಮೇವನ್ನು ಸುಟ್ಟು ಹಾಕದೇ ಬಣವೆ ಹಾಕಿಕೊಂಡು ಶೇಖರಿಸಿಟ್ಟು ಅತವಾ ಸುರುಳಿ ಸುತ್ತಿ ಕಟ್ಟಿ ಹಾಕಿಕೊಳ್ಳಬೇಕು,  ಅವಶ್ಯಕತೆ ಕಂಡು ಬರುವ ಸಂದರ್ಭದಲ್ಲಿ ರೈತರು ಸರ್ಕಾರಕ್ಕೆ ಮಾರಾಟ ಮಾಡಬಹುದು.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಮೇವು ಮಾರಾಟ ಅಥವಾ ಸಾಗಾಣಿಕೆಯನ್ನು ಜಿಲ್ಲಾಡಳಿತ ಈಗಾಗಲೆ ನಿರ್ಬಂಧಿಸಿದ್ದು, ರೈತರು ಜಿಲ್ಲಾ ಆಡಳಿತದೊಂದಿಗೆ ಸಹಕರಿಸಬೇಕು.  ಮೇವು ಹೊಂದಿರುವ ರೈತರು ಆಯಾ ತಾಲೂಕಿನ ತಹಸೀಲ್ದಾರರು ಅಥವಾ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸ್ಥಗಿತಗೊಂಡ ಸಹಕಾರ ಸಂಘಗಳ ಸಮಾಪನೆ: ಆಕ್ಷೇಪಣೆಗೆ ಆಹ್ವಾನ

ಕೊಪ್ಪಳ, ನ.22 (ಕರ್ನಾಟಕ ವಾರ್ತೆ) : ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಲಯ ಕೊಪ್ಪಳ ಇವರು ಜಿಲ್ಲೆಯಲ್ಲಿರುವ ತಾಲೂಕು ಮಟ್ಟಕ್ಕಿಂತ ಕಡಿಮೆ ಕಾರ್ಯವ್ಯಾಪ್ತಿ ಹೊಂದಿರುವ, ಸುಮಾರು ವರ್ಷಗಳಿಂದ ತಮ್ಮ ಕಾರ್ಯ ಚಟುವಟಿಕೆ ನಿರ್ವಹಿಸದೆ ಸ್ಥಗಿತಗೊಂಡಿರುವ ವಿವಿಧ ಸಹಕಾರ ಸಂಘಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಸಮಾಪನೆ ಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಸಮಾಪನೆಗೊಳ್ಳಲಿರುವ ಸಹಕಾರ ಸಂಘಗಳ ವಿವರ ಇಂತಿದೆ. ಕೊಪ್ಪಳ ನಗರದ ನಂದಿನಗರದ ನಂದೀಶ ವಿವಿಧೋದ್ದೇಶ ಸಹಕಾರ ಸಂಘ. ಕೊಪ್ಪಳ ತಾಲೂಕಿನ ಭಾಗ್ಯನಗರದ ಶ್ರೀ ಮೈಲಾರಲಿಂಗೇಶ್ವರ ವಿವಿಧೋದ್ದೇಶ ಸಹಕಾರ ಸಂಘ. ಕುಷ್ಟಗಿ ತಾಲೂಕಿನ ಮೂಗನೂರು ಹಾಲು ಉತ್ಪಾದಕರ ಸಹಕಾರ ಸಂಘ. ಗಂಗಾವತಿ ತಾಲೂಕಿನ ಬರಗೂರು ಹಾಲು ಉತ್ಪಾದಕರ ಸಹಕಾರ ಸಂಘ.     ಸಮಾಪನೆಗೊಳ್ಳಲಿರುವ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಒಂದು ವಾರದೊಳಗಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಾಲಯ ಕೊಪ್ಪಳ ಇಲ್ಲಿಗೆ ಸಲ್ಲಿಸಬಹುದು. ನಿಗದಿತ ಕಾಲಾವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಬಾರದೇ ಇದ್ದಲ್ಲಿ ಕಾನೂನು ರೀತ್ಯಾ ಸಮಾಪನೆಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂ. ಸಂ: 08539-221109 ಇಲ್ಲಿಗೆ ಸಂಪರ್ಕಿಸಬಹುದು ಎಂದು  ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಲೋಶಿಪ್‍ಗಾಗಿ ಅರ್ಜಿ: ಅವಧಿ ವಿಸ್ತರಣೆ

ಕೊಪ್ಪಳ, ನ.22 (ಕರ್ನಾಟಕ ವಾರ್ತೆ) : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಸಂಗೀತ ನೃತ್ಯಾದಿ ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ/ಅಧ್ಯಯನ ಮಾಡಲು ಪ್ರಸಕ್ತ ಸಾಲಿನ ವಿಷೇಶ ಘಟಕ ಯೋಜನೆಯಡಿ ಪ.ಜಾತಿ ಹಾಗೂ ಪ.ಪಂಗಡ ಪರಿಣಿತ ಕಲಾವಿದರು/ತಜ್ಞರಿಂದ ಸಂಶೋಧನೆಗಾಗಿ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಸಾಕಷ್ಟು ಅರ್ಜಿಗಳು ಬಾರದೇ ಇರುವುದರಿಂದ ಅರ್ಜಿ ಸಲ್ಲಿಕೆ ಅವದಿಧಿಯನ್ನು ನ.25  ರ ವರೆಗೆ ವಿಸ್ತರಿಸಲಾಗಿದೆ.
      ಅರ್ಜಿ ಸಲ್ಲಿಸುವವರು ಯಾವುದಾದರು ಪದವೀಧರರಾಗಿರಬೇಕು, ವಯೋಮಿತಿ 45 ವರ್ಷದೊಳಗಿರಬೇಕು. ಸಂಶೋಧನೆ/ಅಧ್ಯಯನ ನಡೆಸುವ ವಿಷಯದ ಬಗ್ಗೆ ಸುಮಾರು 5-6 ಪುಟಗಳ ಸಾರಲೇಖವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅಧ್ಯಯನದ ಅವಧಿ 6 ತಿಂಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ 1 ಲಕ್ಷ ರೂ ಸಂಶೋಧನಾ ನೆರವು ನೀಡಲಾಗುವುದು. ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ. ನಿಗದಿತ ಅರ್ಜಿ ನಮೂನೆ ಹಾಗೂ ಸೂಚನೆಯ ಪ್ರತಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದು ಅಥವಾ ಅಂಚೆ ಮೂಲಕ ಅರ್ಜಿ ಪಡೆಯಲು 10 ರೂ ಗಳ ಸ್ಟಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2 ನೇ ಮಹಡಿ, ಜೆಸಿ ರಸ್ತೆ, ಬೆಂಗಳೂರು-560002 ಇಲ್ಲಿಗೆ ಕಳುಹಿಸಿ ಪಡೆಯಬಹುದು. ಅಥವಾ ಅಕಾಡೆಮಿಯ ಇ-ಮೇಲೆ  karnatakasangeeta@gmail.com ಮೂಲಕ ಪಡೆದು ಭರ್ತಿ ಮಾಡಿ ನ.25 ರೊಳಗಾಗಿ ಕಳುಹಿಸಬಹುದು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ರಿಜಿಸ್ಟ್ರಾರ್ ಬನಶಂಕರಿ ವಿ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರಟಗಿ ಪುರಸಭೆಯಿಂದ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ, ನ.22 (ಕರ್ನಾಟಕ ವಾರ್ತೆ):  ಕಾರಟಗಿ ಪುರಸಭೆಯಿಂದ ಪ್ರಸಕ್ತ ಸಾಲಿನ ಎಸ್‍ಎಫ್‍ಸಿ ಶೆ.7.25 ರ ಯೋಜನೆಯಡಿ ಇತರೆ ಬಡಜನರಿಗೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ವಿದ್ಯಾರ್ಥಿ ಪ್ರೋತ್ಸಾಹಧನ, ಅಡುಗೆ ಅನಿಲ ಸಿಲೆಂಡರ್ ಮತ್ತು ಇಲೆ ಇತ್ಯಾದಿ, ಎಲ್‍ಎಲ್‍ಬಿ ಪದವಿ ವೃತ್ತಿ ಪ್ರಾರಂಭಿಸಲು ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿ ಪ್ರೋತ್ಸಾಹಧನ ಸೌಲಭ್ಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ರೂ-3000, ಐಟಿಐ ಇತರೆ ವೃತ್ತಿಪರ ವಿದ್ಯಾರ್ಥಿಗಳಿಗೆ ರೂ-3000 ಹಾಗೂ ಪಿಯುಸಿ, ಉದ್ಯೋಗ ಆಧಾರಿತ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ-4500, ಪ್ಯಾರಾ ಮೆಡಿಕಲ್ ಕೋರ್ಸ್/ಡಿಪ್ಲೋಮಾ/ಡಿಇಎಇ/ಸಿಪಿಇಡಿ/ಇತ್ರೆ ತಾಂತ್ರಿಕ ರೂ-4500, ಪದವಿ ತರಗತಿ ರೂ-6000, ಬಿಇಡಿ/ಬಿಪಿಇಡಿ/ಇತರೆ ಡಿಪ್ಲೋಮಾ ರೂ-6000, ಎಂಎ/ಎಂಎಸ್‍ಸಿ/ಎಂಕಾಂ/ಎಂಎಸ್‍ಡಬ್ಲೂ/ಎಂಸಿಎ ರೂ-15000. ಎಂಇಡಿ/ಎಂಪಿಇಡಿ ರೂ-9000, ಎಂಬಿಬಿಎಸ್/ಬಿಡಿಎಸ್/ಎಂಟೆಕ್/ಎಂಎಸ್/ಎಚಿಡಿ/ಎಂಇ ರೂ-25000. ಪಿಎಚ್‍ಡಿ/ಪೋಸ್ಟ್ ಡಾಕ್ಟರೇಟ್ ರೂ-30000 ಇತರೆ ಯಾವುದೇ ಸ್ನಾತಕೋತ್ತರ ಪದವಿ ರೂ-10000 ಸಹಾಯಧನ ನೀಡಲಾಗುವುದು.
ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿ ಸಲ್ಲಿಸುವವರು ಅಂಗವಿಕಲ ಪ್ರಮಾಣ ಪತ್ರ, ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಹಿಂದಿನ ತರಗತಿಯ ಅಂಕ ಪಟ್ಟಿ, ಪ್ರಸ್ತುತ ಪ್ರಮಾಣ ಪತ್ರ, ಶಾಲೆ/ ಕಾಲೇಜಿನ ಸಂಪೂರ್ಣ ವಿಳಾಸ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಎಲ್ಲಾ ದಾಖಲಾತಿಗಳು ಸಲ್ಲಿಸಬೇಕು.
ಅಡುಗೆ ಅನಿಲ ಸಂಪರ್ಕ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವವರು  ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಅರ್ಜಿ ದಾರರ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಎಲ್‍ಎಲ್‍ಬಿ ಪದವಿ ವೃತ್ತಿ ಪ್ರಾರಂಭಿಸಲು ಅರ್ಜಿ ದಾರರು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಪೋಟೋ, ವಿದ್ಯಾರ್ಹತೆ ದಾಖಲಾತಿ ಹಾಗೂ ನೋಂದಣಿಗೆ ಸಂಬಂಧಿಸಿದಂತೆ ದಾಖಲೆ, ಎಲ್‍ಎಲ್‍ಬಿ ಪದವಿ ಪಡೆದ ಕುರಿತು ಪ್ರಮಾಣ ಪತ್ರ ದೃಢೀಕರಿಸಿ ಸಲ್ಲಿಸಬೇಕು.  ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದೆ.  ಹೆಚ್ಚಿನ ಮಾಹಿತಿಯನ್ನು ಕಾರಟಗಿ ಪುರಸಭೆ ಕಾರ್ಯಾಲಯ ದೂ.ಸಂ:08533-274232 ಇಲ್ಲಿ  ಪಡೆಯಬಹುದು ಎಂದು ಕಾರಟಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವ್ಯಾಸೆಕ್ಟೋಮಿ (ಪುರುಷರ ಸಂತಾನ ಹರಣ) ಪಾಕ್ಷಿಕ ಆಚರಣೆ

ಕೊಪ್ಪಳ, ನ.22 (ಕರ್ನಾಟಕ ವಾರ್ತೆ):  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ‘ಪರಿವಾರ ನಿಯೋಜನೆಗೆ ಸಜ್ಜಾಗಿರಿ, ಪುರುಷರು ಈಗ ಸಕ್ರಿಯ ಪಾಲುದಾರರಾಗಿರಿ’ ಎಂಬ ಘೋಷವಾಕ್ಯದೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ನ.21 ರಿಂದ ಡಿ.4 ರವರಗೆ ವ್ಯಾಸೆಕ್ಟೋಮಿ (ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆ) ಪಾಕ್ಷಿಕ ಆಚರಣೆ ಹಮ್ಮಿಕೊಂಡಿದೆ.
ಪಾಕ್ಷಿಕ ಆಚರಣೆ ಅಂಗವಾಗಿ ಆರೋಗ್ಯ ಇಲಾಖೆಯು ನ.21 ರಿಂದ 27 ರವರೆಗೆ ಜಿಲ್ಲೆಯಲ್ಲಿ ವ್ಯಾಸೆಕ್ಟೊಮಿ ಪಾಕ್ಷೀಕದ ಕುರಿತು ಪ್ರಚಾರ ಮಾಡಲಾಗುವುದು.  ನ.28 ರಿಂದ ಡಿ.4 ರ ವರೆಗೆ ವ್ಯಾಸೆಕ್ಟೋಮಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು.
ವ್ಯಾಸೆಕ್ಟೋಮಿ (ಎನ್‍ಎಸ್‍ವಿ) ಶಸ್ತ್ರಚಿಕಿತ್ಸೆಯ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವ್ಯಾಸೆಕ್ಟೋಮಿ ಶಸ್ತ್ರಚಿಕಿತ್ಸೆ ಪುರುಷರ ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಒಂದು ವಿಧಾನವಾಗಿದೆ.  ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವುದರಿಂದ, ಪುರುಷರಲ್ಲಿ ಲೈಂಗಿಕ ಸಾಮಥ್ರ್ಯ ಕಡಿಮೆಯಾಗುವುದಿಲ್ಲ ಮತ್ತು ಪುರುಷತ್ವಕ್ಕೆ ಯಾವುದೇ ಹಾನಿ ಇರುವುದಿಲ್ಲ.  ಈ ಶಸ್ತ್ರಚಿಕಿತ್ಸೆಯಲ್ಲಿ ಗಾಯ, ಹೊಲಿಗೆ ಇರುವುದಿಲ್ಲ. ಚಿಕಿತ್ಸಾ ವಿಧಾನಕ್ಕೆ ಕೇವಲ 5 ರಿಂದ 10 ನಿಮಿಷಗಳು ಮಾತ್ರ ಸಾಕು. ಚಿಕಿತ್ಸೆಯಾದ 30 ನಿಮಿಷಗಳ ಬಳಿಕ ಮನೆಗೆ ತೆರಳಬಹುದು. ಹಾಗೂ ಯಾವುದೇ ರೀತಿಯ ದೈಹಿಕ ನಿಶ್ಯಕ್ತಿ ಉಂಟಾಗುವುದಿಲ್ಲ. ಇನ್ನುಮುಂದೆ ತಮಗೆ ಮಕ್ಕಳು ಬೇಡವೆಂದು ನಿರ್ಧರಿಸಿದವರು ಅಥವಾ ಶಾಶ್ವತ ಸಂತಾನ ನಿರೋದ ಚಿಕಿತ್ಸೆ ವಿಧಾನವನ್ನು ಅನುಸರಿಸಲು ಬಯಸುವವರು ಈ ಚಿಕಿತ್ಸೆ ಮಾಡಿಸಿಕೊಳ್ಳಬಹುದು.  ಕೆಲಸ ಕಷ್ಟಕರವಾಗಿರದಿದ್ದಲ್ಲಿ, ಚಿಕಿತ್ಸೆಯಾದ 48 ಗಂಟೆಯ ನಂತರ ಕೆಲಸಕ್ಕೆ ಮರಳಬಹುದು. ದೈಹಿಕ ಶ್ರಮದ ಕೆಲಸವಾದರೆ ಕಡೇಪಕ್ಷ 48 ಗಂಟೆಯ ನಂತರ ಕೆಲಸಕ್ಕೆ ಮರಳಬಹುದು. ವ್ಯಾಸೆಕ್ಟೋಮಿ ಶಸ್ತ್ರ ಚಿಕಿತ್ಸೆ ನಂತರ ಕೆಲವು ಸಕ್ರಿಯ ವೀರ್ಯಾಣುಗಳು ವೀರ್ಯ ನಾಳಗಳಲ್ಲಿ ಉಳಿದಿರುತ್ತವೆ ಹಾಗೂ ಎನ್‍ಎಸ್‍ವಿ ಚಿಕಿತ್ಸೆಯಾದ 3 ತಿಂಗಳವರೆಗೂ ಜೀವಂತವಾಗಿರುತ್ತವೆ. ದಂಪತಿಗಳು ಇತರೆ ಸಂತಾನ ನಿರೋದಕಗಳನ್ನು (ನಿರೋಧ ಬಳಕೆ)  ಕಡ್ಡಾಯವಾಗಿ ಕಡೇ ಪಕ್ಷ ಚಿಕಿತ್ಸೆಯಾದ ಮೂರು ತಿಂಗಳವರೆಗೆ ಅಥವಾ ವೀರ್ಯಾಣುಗಳು ಇಲ್ಲ ಎಂಬುದನ್ನು ವೀರ್ಯ ವಿಶ್ಲೇಷಣಾ ಪರೀಕ್ಷೆಯಿಂದ ಖಚಿತ ಪಡಿಸಿಕೊಳ್ಳಬೇಕು.  ಚಿಕಿತ್ಸೆ ಯಶಸ್ವಿಯಾಗಿರುವ ಕುರಿತು ಚಿಕಿತ್ಸೆಯಾದ 3 ತಿಂಗಳ ನಂತರ ವೀರ್ಯ ವಿಶ್ಲೇಷಣಾ ಪರೀಕ್ಷೆ ಮಾಡಿಸಿಕೊಳ್ಳಬೇಕು.
     ವ್ಯಾಸೆಕ್ಟೋಮಿ ಶಸ್ತ್ರ ಚಿಕಿತ್ಸೆಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆ ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬಹುದು.
ಎನ್‍ಎಸ್‍ವಿ ಪಾಕ್ಷೀಕ ಶಿಬಿರದ ವೇಳಾ ಪಟ್ಟಿ ಇಂತಿದೆ: ನ.28 ರಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕರು ಡಾ.ಲಕ್ಷೀನಾರಾಯಣ ಮೊ-9448954173, ಅದೇದಿನ ಸ.ಆ.ಕೇಂದ್ರ ಹಿರೇಸಿಂದೋಗಿಯಲ್ಲಿ,  ನ.29 ರಂದು ಸ.ಆ.ಕೇಂದ್ರ ಮುನಿರಾಬಾದ,  ನ.30 ರಂದು ಸಾ.ಆ ಕುಷ್ಟಗಿ, ಡಿ.1 ಹಾಗೂ 4 ರಂದು ಸಾ.ಆ.ಗಂಗಾವತಿ,  ಡಿ.2 ರಂದು ಸಾ.ಆ. ಯಲಬುರ್ಗಾ, ಡಿ.3 ರಂದು ಸ.ಆ.ಕೇಂದ್ರ ಕುಕನೂರು ನಿಗದಿಪಡಿಸಲಾಗಿರುವ ದಿನಗಳಂದು ಶಸ್ತ್ರ ಚಿಕಿತ್ಸೆಯನ್ನು  ಡಾ. ಎಸ್‍ಬಿ ದಾನರೆಡ್ಡಿ-9449843173 ಹಾಗೂ ಡಾ.ಪ್ರವೀಣ ಕುಮಾರ-8277498039 ನಡೆಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.26 ರಂದು ಲೇಬಗೇರಿಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ

ಕೊಪ್ಪಳ, ನ.22 (ಕರ್ನಾಟಕ ವಾರ್ತೆ):  ಲೇಬಗೇರಿ ಗ್ರಾಮ ಪಂಚಾಯತ್ ಕಾರ್ಯಾಲಯದಿಂದ ನ.26 ರಂದು ಬೆಳಿಗ್ಗೆ 11 ಗಂಟೆಗೆ ಲೇಬಗೇರಿಯ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಜರುಗಲಿದೆ.
ಗ್ರಾಮ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ಲೇಬಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Monday, 21 November 2016

ತಾಯಿ ಮತ್ತು ಶಿಶು ಮರಣ ತಡೆಗಟ್ಟಲು ಕಾರ್ಯಕ್ರಮ ರೂಪಿಸಿ- ಎಂ. ಕನಗವಲ್ಲಿ

ಕೊಪ್ಪಳ, ನ.21 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣವನ್ನು ಕಡಿಮೆಗೊಳಿಸಲು ಸೂಕ್ತ ಕಾರ್ಯಕ್ರಮಗಳನ್ನು ರೂಪಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಯಿ ಮರಣ ಮತ್ತು ಶಿಶು ಮರಣ ಪರಿವೀಕ್ಷಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಏಪ್ರಿಲ್ ನಿಂದ ಅಕ್ಟೋಬರ್ ತಿಂಗಳವರೆಗಿನ ಅವಧಿಯಲ್ಲಿ 12 ಗರ್ಭಿಣಿ/ತಾಯಂದಿರ ಮರಣ ಹಾಗೂ 284 ಶಿಶು ಮರಣ ಪ್ರಕರಣಗಳು ಸಂಭವಿಸಿವೆ.  ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಪೂರೈಸುವುದು ಹಾಗೂ ಆಸ್ಪತ್ರೆಗಳಲ್ಲಿಯೇ ಹೆರಿಗೆ ಆಗುವಂತೆ ಕ್ರಮ ಕೈಗೊಳ್ಳುವುದು,  ಈ ಎರಡು ವಿಷಯಗಳು ತಾಯಿ ಮತ್ತು ಶಿಶು ಮರಣ ಪ್ರಕರಣಗಳನ್ನು ತಡೆಗಟ್ಟಲು ಪ್ರಮುಖ ಪಾತ್ರ ವಹಿಸುತ್ತವೆ.  ಈ ದಿಸೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಮನ್ವಯತೆಯಿಂದ ಸರ್ಕಾರದ ಯೋಜನೆಯನ್ನು ಸಕಾಲಿಕವಾಗಿ ತಲುಪಿಸಬೇಕು.  ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣಗಳು ಸಂಭವಿಸದಂತೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ, ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲೆಯ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕನಂದಾ ಅವರು ಸಭೆಗೆ ವಿವರಣೆ ನೀಡಿ, ಪ್ರಸಕ್ತ ಏಪ್ರಿಲ್-16 ರಿಂದ ಅಕ್ಟೋಬರ್ ವರೆಗೆ ಜಿಲ್ಲೆಯಲ್ಲಿ 15185 ಹೆರಿಗೆಗಳಾಗಿದ್ದು, ಈ ಪೈಕಿ 440 ಮನೆ ಹೆರಿಗೆ ಮತ್ತು 14745 (ಶೇ. 97) ರಷ್ಟು ಸಾಂಸ್ಥಿಕ ಹೆರಿಗೆಗಳಾಗಿವೆ.  ಗರ್ಭಿಣಿ ಮತ್ತು ತಾಯಂದಿರ ಮರಣಗಳು 12 ಆಗಿದ್ದು, ತಾಯಿ ಮರಣದ ದರ ಎಂಎಂಆರ್ 97. 82 ಆಗಿದೆ.  ಶಿಶು ಮರಣಗಳು 284 ಆಗಿದ್ದು, ಜಿಲ್ಲೆಯ ಶಿಶು ಮರಣದ ಪ್ರಮಾಣ ಐಎಂಆರ್ 18. 95 ರಷ್ಟು ಆಗಿದೆ ಎಂದರು.
     ಜಿಲ್ಲೆಯಲ್ಲಿ ಸಂಭವಿಸಿದ ಮೂರು ತಾಯಿ ಮರಣ ಹಾಗೂ ನಾಲ್ಕು ಶಿಶು ಮರಣಗಳ ವಿವರವನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಕೂಲಂಕಷವಾಗಿ ಪರಿವೀಕ್ಷಿಸಿ, ಪ್ರಕರಣಗಳ ಸಂಪೂರ್ಣ ಮಾಹಿತಿ ಪಡೆದುಕೊಂಡರು.
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಎಲ್ಲ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಶಿಶು ಮತ್ತು ತಾಯಿ ಮರಣ ಸಂಭವಿಸಿದ ಪ್ರಕರಣಕ್ಕೆ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಸಂಬಂಧಿಕರು ಪಾಲ್ಗೊಂಡಿದ್ದರು.

ಆಕಾಶವಾಣಿಯ ಭಾಗ್ಯವಾಣಿ: ಇಂಧನ, ಸೌರ ವಿದ್ಯುತ್, ಸೌರ ವಿದ್ಯುತ್ ಉತ್ಪಾದನೆಯಿಂದ ಗಳಿಕೆ ಸ್ವಾವಲಂಬನೆಗೆ ವಿಫುಲಾವಕಾಶ

ಕೊಪ್ಪಳ ನ. 21 (ಕರ್ನಾಟಕ ವಾರ್ತೆ): ಮನೆಯ ಛಾವಣಿ ಮೇಲೆ ಕಳೆದ 18 ತಿಂಗಳ ಹಿಂದೆ 3 ಕಿ.ವ್ಯಾಟ ಶಕ್ತಿಯ ಸೌರಫಲಕ ಅಳವಡಿಸಿ ಎಲ್ಲ ಕಾಲದಲ್ಲೂ ಕನಿಷ್ಠ ದಿನಕ್ಕೆ ಸರಾಸರಿ 12 ಯುನಿಟ ವಿದ್ಯತ್ ಉತ್ಪಾದಿಸಿ ಅದರಲ್ಲಿ 6 ಯುನಿಟ ಮನೆ ಬಳಕೆಗೆ ಹಾಗೂ ಇನ್ನುಳಿದ 6 ಯುನಿಟ ಚೆಸ್ಕಾಂ ಕಂಪೆನಿಗೆ ತಲಾ ಯುನಿಟಗೆ 9.50 ರೂಗಳಂತೆ ಸರಾಸರಿ ದಿನಕ್ಕೆ 54 ರೂ ಮೈಸೂರಿನ ಶ್ರೀರಾಮಪುರದ ನಿವಾಸಿ ಎಂ.ಆರ್.ಸುರೇಶ ಗಳಿಸುತ್ತಿರುವುದು ಸ್ವ ಕಾರ್ಯದ ಜೊತೆಗೆ ಸೇವಾ ಕಾರ್ಯಕ್ಕೆ ಉತ್ತಮ ಉದಾಹರಣೆ.
     ನಾಡಿನ ಜನತೆ, ವಿಶೇಷವಾಗಿ ರೈತರು ತಮ್ಮ ಮನೆ, ಹೊಲ ಗದ್ದೆಗಳಲ್ಲಿ ಸೌರಫಲಕಗಳನ್ನು ಹಾಕಿ ಗಳಿಕೆ ಜೊತೆ ವಿದ್ಯುತ ಸ್ವಾವಲಂಬನೆ ಅಲ್ಲದೇ ರಾಜ್ಯವೂ ಕೂಡಾ ಈ ಕ್ಷೇತ್ರದಲ್ಲಿ ಸ್ವಾಲಂಬನೆ ಸಾಧಿಸಲು ಮುಂದಾಗಬೇಕು ಎನ್ನುವುದು ಅವರ ಕಳಕಳಿ ರಾಜ್ಯ ಸರ್ಕಾರದ 2014-21ರ ಸೌರನೀತಿಯ ಉದ್ದೇಶ ಕೂಡಾ ಆಗಿದೆ. ಅನಿಯಮಿತ ಮಳೆಯಿಂದ ಸಂಕಷ್ಟಕ್ಕೆ ಪದೇ ಪದೇ ಒಳಗಾಗುತ್ತಿರುವ ರೈತರು ತಮ್ಮ ವ್ಯಾಪ್ತಿಯ ವಿದ್ಯುತ ಕಂಪನಿಗಳಲ್ಲಿ ಈ ಕುರಿತು ಮಾಹಿತಿ ಪಡೆದು ಸೌರವಿದ್ಯುತ ಉತ್ಪಾದನೆಗೆ ಮುಂದಾದಲ್ಲಿ ರಾಜ್ಯ ಹಸಿರು, ಹಾಲು ಕ್ಷೇತ್ರಗಳಂತೆ ವಿದ್ಯುತ್ ಉತ್ಪಾದನೆಯಲ್ಲಿ ಕೂಡಾ ಕ್ರಾಂತಿಯನ್ನುಂಟು ಮಾಡಬಹುದಾಗಿದೆ.
     ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯ ಸರ್ಕಾರದ ಮಹತ್ವದ ಜನಹಿತÀ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನದ ಭಾಗ್ಯವಾಣಿ ಸರಣಿಯಲ್ಲಿಂದು (ರವಿವಾರ ದಿ.20) ರಾಜ್ಯಾದ್ಯಂತ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಇಂಧನ, ಸೌರ ವಿದ್ಯುತ್, ನಗರ ಜ್ಯೋತಿ, ಜೈವಿಕ ಇಂಧನ, ಭಾಗ್ಯಜ್ಯೋತಿ ಕುರಿತ  ಮಾಹಿತಿ ಪ್ರಸಾರವಾಯಿತು.
     ಮಂಗಳೂರಿನ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಮಾತನಾಡಿ ರಾಜ್ಯದಲ್ಲಿ 1970ರಿಂದ ಸಾರ್ವಜನಿಕ ವಿದ್ಯುತ ಪೂರೈಕೆ ಆರಂಭಗೊಳಿಸಲಾಗಿತ್ತು ಎಂದು ನೆನಪಿಸಿಕೊಂಡರು. ಈಗ ತಮ್ಮ ಕಂಪನಿ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಮೆಸ್ಕಾಂ ಮತ್ತು ಸರ್ಕಾರಿ ಕಟ್ಟಡಗಳ ಮೇಲ್ಛಾವಣಿಗಳನ್ನು ಬಳಸಿಕೊಂಡು ಸೌರಫಲಕ ಅಳವಡಿಸಿ ವಿದ್ಯುತ ಉತ್ಪಾದನೆ ಮಾಡಲು ರಾಜ್ಯ ಸರ್ಕಾರ 10 ಕೋಟಿ ರೂ. ಸಹಾಯಧನ ನೀಡಿದೆ.  ಮೆಸ್ಕಾಂ ಕುಡಿಯುವ ನೀರು ಘಟಕಗಳಿಗೆ ಅಲ್ಲದೆ ರಾಜ್ಯ ಸರ್ಕಾರದಿಂದ ಭಾಗ್ಯಜ್ಯೋತಿಯ ಎರಡು ಲಕ್ಷ ಫಲಾನುಭವಿಗಳಿಗೆ ಉಚಿತ ವಿದ್ಯುತ ಪೂರೈಕೆಗೆ ವಾರ್ಷಿಕ 9 ಕೋಟಿ ರೂ. ಮತ್ತು ನಾಲ್ಕು ನಿಗಮಗಳಿಂದ ಪ್ರತಿ ವರ್ಷ ಸರಾಸರಿ ಒಂದು ಸಾವಿರ ಪರಿಶಿಷ್ಠ, ಹಿಂದುಳಿದ , ವಗ ರೈತರಿಗೆ ಮತ್ತು ಈಗಾಗಲೇ ಸಕ್ರಮಗೊಳಿಸಿದ 8 ಸಾವಿರ ಜೊತೆಗೆ  ಇನ್ನೂ 15 ಸಾವಿರ ರೈತರ ಪಂಪಸೆಟ್ ಗಳ ಸಕ್ರಮಕ್ಕೆ ಕ್ರಮ ಜರುಗಿಸಲಾಗಿದ್ದು ರೈತರಿಗೆ ಪಂಪಸೆಟಗಳಿಗೆ ಉಚಿತ ವಿದ್ಯುತ ನೀಡಲು 450 ಕೋಟಿ ರೂ.ಗಳ ಸಹಾಯಧನವನ್ನು ರಾಜ್ಯಸರ್ಕಾರ ಮೆಸ್ಕಾಂ ಗೆ ನೀಡುತ್ತಿದೆ. ವಿದ್ಯುತ ಉಳಿತಾಯಕ್ಕಾಗಿ ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಎಲ್.ಇ.ಡಿ ಬಲ್ಬ ನೀಡಲಾಗುತ್ತಿದ್ದು ಮಲೆನಾಡು ಪ್ರದೇಶ ಇರುವದರಿಂದ ವಿದ್ಯುತ ಸೌಲಭ್ಯ ಒದಗಿಸಲು ಸಾಧ್ಯವಾಗದಿರುವ ಪ್ರದೇಶಗಳ ಸುಮಾರು 6,500 ಫಲಾನುಭವಿಗಳಿಗೆ ಸೌರ ಲ್ಯಾಂಟರ್ನಗಳನ್ನು ಒದಗಿಸಲಾಗಿದೆ. ಗುಣಮಟ್ಟದ ವಿದ್ಯುತ ನೀಡಲು ಮತ್ತು ದೂರುಗಳ ಪರಿಹಾರಕ್ಕಾಗಿ ವಿಧಾನಸಭಾ ಕ್ಷೇತ್ರಗಳ ಮತ್ತು ತಾಲೂಕಾ ಮಟ್ಟದ ವಿದ್ಯುತ ಗ್ರಾಹಕರ ಸ¯ಹಾ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ವರ್ಗದ ಗ್ರಾಹಕರ ಸಮಸ್ಯೆ ನಿವಾರನೆಗೆ ನಿಯಮಿತ ದೂರುನಿವಾರಣಾ ಸಭೆ ಜರುಗಿಸಲಾಗುತ್ತಿದ್ದು ಗ್ರಾಹಕ ಮತ್ತು ತಂತ್ರಜ್ಞಾನ ಸ್ನೇಹಿ ವ್ಯವಸ್ಥೆಗಳ ಮೂಲಕ ಬಿಲ್ಲು ಪಾವತಿ ಸರಳಗೊಳಿಸಲಾಗಿದೆ ಎಂದು ಚಿಕ್ಕನಂಜಪ್ಪ ಮಾಹಿತಿ ನೀಡಿದರು.
     ಹಟ್ಟಿ ಹರಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡಜನರು ಕತ್ತಲೆಯಿಂದ ಬೆಳಕಿನ ಜೀವನಕ್ಕೆ ಬರಲಿ ಎಂದು ಭಾಗ್ಯಜ್ಯೋತಿ, ವಿದ್ಯುತಬಾಕಿ ಮನ್ನಾ ಮಾಡಿ ಅವರೆಲ್ಲರಿಗೂ ಉಚಿತ ವಿದ್ಯುತ ನೀಡಲು ಕ್ರಮ ಜರುಗಿಸಿದೆ. ರೈತರ ಪಂಪಸೆಟಗೆ ಉಚಿತ ವಿದ್ಯುತ ಜೊತೆಗೆ ಈಗ ಸೌರ ಪಂಪಸೆಟ ಹಾಕಿಕೊಳ್ಳಲು ವಿಶೇಷ ಸಹಾಯಧನ ನೀಡಲಾಗುತ್ತಿದ್ದು ಈಗಾಗಲೇ ಸಾವಿರ ರೈತರಿಗೆ ಈ ಸೌಲಭ್ಯ ಒದಗಿಸಿರುವ ಕುರಿತು. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ 5000 ಎಕರೆ ಪ್ರದೇಶದಲ್ಲಿ 2 ಮೆ.ವ್ಯಾ. ಸೌರವಿದ್ಯತ ಉತ್ಪದನೆಗೆ ಘಟಕ ಸ್ಥಾಪಿಸುತ್ತಿರುವ. ಊಳಿಸುವ ವಿದ್ಯತ್ ಉತ್ಪಾದನೆಗೆ ಸಮ ಎನ್ನುವ  ಉದ್ದೇಶದಿಂದ ನಗರ, ಕುಟೀರ ಜ್ಯೋತಿ ಯೋಜನೆಗಳಡಿ ವಿದ್ಯುತ ಉಳಿತಾಯಕ್ಕಾಗಿ ನೀಡಿರುವ ಎಲ್.ಇ.ಡಿ. ಬಲ್ಬ ಉಪಯೋಗಿಸಿ ವಿದ್ಯತ ಉಳಿಸಿ ಎಂಬ  ಸಂದೇಶ ಕೂಡಾ ಮೂಡಿ ಬಂತು. ಇದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಸಂಸ್ಥೆಯ ಮಾಜಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಅವರು ರೈತರು ಕೃಷಿ ಬೆಳೆಗಳ ಜೊತೆ ಹೊಂಗೆ, ಬೇವು, ಹಿಪ್ಪೆ, ಜತ್ರೋಪ ಮರಗಳನ್ನು ಬೆಳೆಸಿ ಸ್ವಂತ ಉಪಯೋಗಕ್ಕೆ ಮತ್ತು ಆರ್ಥಿಕ ಸಾಮಥ್ರ್ಯ ವೃದ್ಧಿಗೆ  ಜೈವಿಕ ಇಂಧನ ಮತ್ತು ಹಿಂಡಿಯನ್ನು ಗೊಬ್ಬರವಾಗಿ ಬಳಸಬಹುದಾಗಿದ್ದು ಕೃಷಿ ತಾಜ್ಯವನ್ನು ಸುಡುವುದಕ್ಕೆ ಬದಲಾಗಿ ವಿದ್ಯುತ ಉತ್ಪಾದನೆಗೆ ಬಳಸುವ ತಂತ್ರಜ್ಞಾನ ಅಳವಡಿಕೆಗೆ ಸಲಹೆ ಮಾಡಿದರು.
     ಭಾಗ್ಯವಾಣಿಯಲ್ಲಿ ಬರುವ ಭಾನುವಾರ ದಿ. 27 ರಂದು  ರಾತ್ರಿ 7 ರಿಂದ 7-30 ಗಂಟೆಯವರೆಗೆ ನಗರಾಭಿವೃದ್ಧಿ-ನಗರ ಬಡತನ ನಿರ್ಮೂಲನ ಹಾಗೂ ನಮ್ಮ ಮೆಟ್ರೋ ಕಾರ್ಯಕ್ರಮ ಯೋಜನೆಗಳ ಕುರಿತ ಮಾಹಿತಿ ಪ್ರಸಾರವಾಗಲಿದೆ.

ಬಯಲು ಶೌಚ ಮುಕ್ತ ಗ್ರಾಮವಾಗಿಸಲು ವಿನೂತನ ಯತ್ನ : ಮಹಮ್ಮದ ನಗರ ಗ್ರಾಮದಲ್ಲಿ ಶೌಚಾಲಯ ಸಂಪರ್ಕ ಕೇಂದ್ರ ಪ್ರಾರಂಭ

ಕೊಪ್ಪಳ ನ. 21 (ಕರ್ನಾಟಕ ವಾರ್ತೆ): ಎಲ್ಲ ಕುಟುಂಬಗಳು ತಪ್ಪದೆ ಶೌಚಾಲಯ ನಿರ್ಮಿಸಿಕೊಳ್ಳುವಂತಾಗಲು ಜನರ ಮನವೊಲಿಸುವ ಕಾರ್ಯತಂತ್ರವನ್ನು ಈಗಾಗಲೆ ಎಲ್ಲೆಡೆ ಅನುಸರಿಸಲಾಗುತ್ತಿದೆ.  ಆದರೆ ಕೊಪ್ಪಳ ತಾಲೂಕು ಶಿವಪುರ ಗ್ರಾಮ ಪಂಚಾಯತಿಯು ಮಹಮ್ಮದ ನಗರ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿಸಲು ಶೌಚಾಲಯ ಸಂಪರ್ಕ ಕೇಂದ್ರವನ್ನು ಸ್ಥಾಪಿಸುವ ಮೂಲಕ ವಿನೂತನ ಯತ್ನಕ್ಕೆ ಕೈ ಹಾಕಿದೆ.
     ಶೌಚಾಲಯ ಸಂಪರ್ಕ ಕೇಂದ್ರ ಕೊಪ್ಪಳ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಅನುಸರಿಸುತ್ತಿರುವ ವಿನೂತನ ಯತ್ನ.  ಇದುವರೆಗೂ ವಯಕ್ತಿಕ ಶೌಚಾಲಯ ಹೊಂದಿಲ್ಲದಿರುವ ಕುಟುಂಬದವರು ಈ ಶೌಚಾಲಯ ಸಂಪರ್ಕ ಕೇಂದ್ರಕ್ಕೆ ಹೋಗಿ, ಅಲ್ಲಿನ ಅಧಿಕಾರಿ/ಸಿಬ್ಬಂದಿಗಳನ್ನು ಭೇಟಿ ಮಾಡಿದರೆ ಸಾಕು, ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೊಡುವ ಸೌಲಭ್ಯ, ಸಂಪೂರ್ಣ ಮಾಹಿತಿ, ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಪಡೆಯುವುದು, ಅಗತ್ಯ ದಾಖಲೀಕರಣ, ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ನೀಡುವುದು, ಅಲ್ಲದೆ ಸಹಾಯಧನ ಪಾವತಿ ಹೀಗೆ ಎಲ್ಲ ಸೌಲಭ್ಯವನ್ನು ಇದೇ ಕೇಂದ್ರದಲ್ಲಿ ಫಲಾನುಭವಿಗಳಿಗೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಶಿವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಮ್ಮದ ನಗರದ ಶಾಲೆ ಆವರಣದಲ್ಲಿ ‘ಶೌಚಾಲಯ ಸಂಪರ್ಕ ಕೇಂದ್ರ’ ವನ್ನು ಪ್ರಾರಂಭಿಸಲಾಗಿದೆ.
     ಕಳೆದ ನ. 19 ರಂದು ಜರುಗಿದ ವಿಶ್ವ ಶೌಚಾಲಯ ದಿನಾಚರಣೆಯ ದಿನದಂದು ಶೌಚಾಲಯ ಸಂಪರ್ಕ ಕೇಂದ್ರಕ್ಕೆ ಚಾಲನೆಯನ್ನು ನೀಡಲಾಗಿದೆ.  ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು, ಮಹಮ್ಮದ ನಗರದಲ್ಲಿ ಪ್ರಾಯೋಗಿಕವಾಗಿ ಶೌಚಾಲಯ ಸಂಪರ್ಕ ಕೇಂದ್ರವನ್ನು ಪ್ರಾರಂಭಿಸಿರುವ ಶಿವಪುರ ಗ್ರಾಮ ಪಂಚಾಯತಿಯ ಯತ್ನ ಶ್ಲಾಘನೀಯವಾಗಿದೆ.  ಮಹಮ್ಮದ ನಗರ ಗ್ರಾಮವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಲಾಗಿದ್ದು, ಇದಕ್ಕೆ ಗ್ರಾಮದ ಎಲ್ಲ ಸಾರ್ವಜನಿಕರು ಸ್ಪಂದಿಸಬೇಕು.  ಶೌಚಾಲಯ ಸಂಪರ್ಕ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
     ಶಿವಪುರ ಗ್ರಾಮ ಪಂಚಾಯತಿಯ ಪಿಡಿಓ ವಾಗೀಶ್ ಕೆ. ಅವರು ಶೌಚಾಲಯ ಸಂಪರ್ಕ ಕೇಂದ್ರವು ಮಹಮ್ಮದ ನಗರದ ಶಾಲಾ ಆವರಣದಲ್ಲಿ ಡಿ. 05 ರವರೆಗೆ ಕಾರ್ಯ ನಿರ್ವಹಿಸಲಿದೆ.  ಶೌಚಾಲಯ ಈ ಕೇಂದ್ರದಲ್ಲಿ ಶೌಚಾಲಯಕ್ಕೆ ಸಂಬಂಧಿಸಿದಂತೆ ಅರ್ಜಿ ಪಡೆಯುವುದು, ಕಾರ್ಯಾದೇಶ ನೀಡುವುದು, ದಾಖಲೀಕರಣ, ಮಾಹಿತಿ ಹಾಗೂ ವಿಳಂಬಕ್ಕೆ ಅವಕಾಶ ನೀಡದೆ, ಫಲಾನುಭವಿಗಳಿಗೆ ಸಹಾಯಧನ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.  ಅಲ್ಲದೆ ಶೌಚಾಲಯ ಸಂಪರ್ಕ ಕೇಂದ್ರದಲ್ಲಿ ಪಿಡಿಓ, ಕಾರ್ಯದರ್ಶಿ, ಕರವಸೂಲಿಗಾರರು ಹಾಗೂ ಗ್ರಾ.ಪಂ. ನ ಇತರೆ ಸಿಬ್ಬಂದಿಗಳು ಗ್ರಾಮದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.  ಮಹಮ್ಮದನಗರ ಗ್ರಾಮವನ್ನು ಡಿ. 05 ರೊಳಗೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸುವ ಗುರಿ ಹೊಂದಲಾಗಿದ್ದು, ಇದಕ್ಕೆ ಎಲ್ಲ ಗ್ರಾಮಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿ, ಈ ಮಹತ್ವದ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.   ಕಾರ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿ,
     ವೆಂಕಟೇಶ್ ಕಂಪಸಾಗರ ಅವರು ಮಾತನಾಡಿ, ಬಯಲಿಗೆ ಶೌಚಕ್ಕೆ ಹೋಗುವುದರಿಂದ, ರೋಗ ರುಜಿನಗಳು ಹರಡುತ್ತವೆ.  ನಮಗೆ ನಾವೇ ತೊಂದರೆಯನ್ನು ತಂದುಕೊಳ್ಳುತ್ತಿದ್ದೇವೆ.  ಆರೋಗ್ಯ ಪೂರ್ಣ ಗ್ರಾಮ ನಿರ್ಮಾಣವಾಗಿಸಲು, ಎಲ್ಲರೂ ತಪ್ಪದೆ ಶೌಚಾಲಯ ನಿರ್ಮಿಸಿಕೊಂಡು ಬಳಸಬೇಕು ಎಂದರು.

Saturday, 19 November 2016

ಸಂಶೋಧನಾ ಅಧ್ಯಯನಕ್ಕಾಗಿ ( ಫೆಲೋಶಿಪ್) ಅರ್ಜಿ ಆಹ್ವಾನ

ಕೊಪ್ಪಳ, ನ.19 (ಕರ್ನಾಟಕ ವಾರ್ತೆ):  ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಪ್ರಸಕ್ತ ಸಾಲಿನ ಗಿರಿಜನ ಉಪಯೋಜನೆಯಡಿ ಪ.ಪಂಗಡ ಅಭ್ಯರ್ಥಿಗಳಿಗೆ ಅಕಾಡೆಮಿ ವ್ಯಾಪ್ತಿಗೊಳಪಡುವ ಯಕ್ಷಗಾನ ಮತ್ತು ಬಯಲಾಟ ಕ್ಷೇತ್ರಗಳಲ್ಲಿ 6 ತಿಂಗಳ ಕಾಲ ಸಂಶೋಧನಾ ಅಧ್ಯಯನ ಮಾಡಿ ಪ್ರಬಂಧ ಮಂಡಿಸುವವರಿಗಾಗಿ ಫೆಲೋಶಿಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ಯೋಜನೆಯಡಿ ಒಬ್ಬ ಸಂಶೋಧನಾ ಅಭ್ಯರ್ಥಿಗೆ 1 ಲಕ್ಷ ರೂ ನೀಡಲಾಗುವುದು. ಅಭ್ಯರ್ಥಿಯು ಪ.ಜಾತಿಯವರಾಗಿರಬೇಕು. ವಯೋಮಿತಿ 45 ವರ್ಷ ಮೀರಿರಬಾರದು.   ಕಲಾಪ್ರಕಾರಗಳು: ಬಯಲಾಟ (ಮೂಡಲಪಾಯ ಯಕ್ಷಗಾನ, ದೊಡ್ಡಾಟ, ಕೇಳಿಕೆ, ಘಟ್ಟದಕೋರೆ ಯಕ್ಷಗಾನ ಇತ್ಯಾದಿ). ಸಣ್ಣಾಟ (ಸಂಗ್ಯಾ-ಬಾಳ್ಯಾ, ರಾಧಾನಾಟ, ಕಡ್ಲಿಮಟ್ಟಿ ಸ್ಟೇಷನ್ ಮಾಸ್ಟರ್ ಇತ್ಯಾದಿ). ಸೂತ್ರದಗೊಂಬೆಯಾಟ, ತೊಗಲುಗೊಂಬೆಯಾಟ, ಯಕ್ಷಗಾನ (ತೆಂಕುತಿಟ್ಟು, ಬಡಗುತಿಟ್ಟು, ತಾಳಮದ್ದಳೆ). ಶ್ರೀಕೃಷ್ಣಪಾರಿಜಾತ.   ಈ ಕಲಾಪ್ರಕಾರಗಳ ಬಗ್ಗೆ ಆಸಕ್ತಿ ಇರುವ ಕನ್ನಡ ಭಾಷಾ ವಿಜ್ಞಾನ, ಜಾನಪದ, ಸಮಾಜವಿಜ್ಞಾನ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಹಿಳಾ ಅಧ್ಯಯನ, ಇತಿಹಾಸ, ಮಾನವಶಾಸ್ತ್ರ, ಪತ್ರಿಕೋದ್ಯಮ, ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ, ಇಂಗ್ಲಿಷ್, ಹಿಂದಿ ಇತ್ಯಾದಿ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆಯ್ಕೆಮಾಡಿಕೊಳ್ಳುವ ಅಧ್ಯಯನದ ವಿಷಯದ ಕುರಿತು ನಾಲ್ಕು ಪುಟಗಳ ಸಾರಲೇಖ (ಸಾರಾಂಶ) ಹಾಗೂ ತಮ್ಮ ಸಾಧನೆಯ ಕುರಿತು ಕಿರುಪರಿಚಯ ಹಾಗೂ ಜಾತಿ ಪ್ರಮಾಣಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.
     ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆದು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, 2ನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-2 ಇವರಿಗೆ ಅಂಚೆ ಮೂಲಕ ಅಥವಾ  kybabangalore@gmail.com ಇಲ್ಲಿಗೆ ಇ-ಮೇಲ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನ.26 ಕೊನೆಯದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಶ್ವ ಶೌಚಾಲಯ ದಿನಾಚರಣೆ : ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಶೌಚಾಲಯ ವಿಶೇಷ ಜಾಗೃತಿ


ಕೊಪ್ಪಳ ನ. 19 (ಕರ್ನಾಟಕ ವಾರ್ತೆ): ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಶನಿವಾರದಂದು ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಶೌಚಾಲಯದ ಮಹತ್ವ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

     ತಾಲೂಕಿನ ಬಿಸರಳ್ಳಿ ಗ್ರಾಮಕ್ಕೆ ಶನಿವಾರದಂದು ಬೆಳ್ಳಂಬೆಳಿಗ್ಗೆ ತೆರಳಿದ ಜಿ.ಪಂ. ಅಧ್ಯಕ್ಷರು, ಶೌಚಾಲಯ ಜಾಗೃತಿ ಕುರಿತಂತೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.  ನಂತರ ಮಾತನಾಡಿದ ಅವರು, ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ಪ.ಜಾತಿ ಮತ್ತು ಪ.ಪಂಗಡದವರಿಗೆ 15 ಸಾವಿರ ಹಾಗೂ ಇತರರಿಗೆ 12 ಸಾವಿರ ರೂ. ಗಳ ಸಹಾಯಧನ ನೀಡುತ್ತಿದೆ.  ಬಯಲು ಬಹಿರ್ದೆಸೆಗೆ ಹೋಗುವುದು ಒಂದು ಅನಿಷ್ಠ ಪದ್ಧತಿಯಾಗಿದ್ದು, ಜನರಿಗೆ ಬರುವ ರೋಗಗಳ ಪೈಕಿ ಶೇ. 80 ರಷ್ಟು ರೋಗಗಳು ಬಯಲು ಬಹಿರ್ದೆಸೆಯ ಕಾರಣದಿಂದಲೇ ಬರುತ್ತದೆ.  ಶೌಚಾಲಯ ಹೊಂದದೇ ಇರುವವರು, ಸರ್ಕಾರ ನೀಡುವ ಸಹಾಯಧನ ಬಳಸಿಕೊಂಡು, ಶೌಚಾಲಯ ನಿರ್ಮಿಸಿಕೊಂಡು, ಅದನ್ನು ಬಳಸಬೇಕು.  ಎಲ್ಲರೂ ವಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳದ ಹೊರತು, ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಿಲ್ಲ.  ಗ್ರಾಮೀಣ ಪ್ರದೇಶಗಳಲ್ಲಿರುವ ಜನಪ್ರತಿನಿಧಿಗಳು, ಅಧಿಕಾರಿಗಳು, ಹಾಗೂ ಪ್ರಜ್ಞಾವಂತರು, ಶೌಚಾಲಯದ ಮಹತ್ವ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಿ, ಕೊಪ್ಪಳ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಕರೆ ನೀಡಿದರು.

     ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಈ ಸಂದರ್ಭದಲ್ಲಿ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡಿ, ಶೌಚಾಲಯ ಹೊಂದದೇ ಇರುವ ಕುಟುಂಬಗಳ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯವರ ಮನವೊಲಿಸಿ, ಅವರಿಗೆ ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಬೇಕು.  ಶಾಲೆಯಲ್ಲಿಯೂ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ, ಶಾಲೆಯ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದರು.
     ಗ್ರಾಮದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು, ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತಿ ಜಾಥಾ ಮೂಲಕ ಗ್ರಾಮದ ಪ್ರತಿಯೊಂದು ಓಣಿಗೆ ತೆರಳಿ, ಶೌಚಾಲಯ ರಹಿತ ಕುಟುಂಬಗಳ ಮನವೊಲಿಸುವ ಕಾರ್ಯ ಮಾಡಿದರು.  ಅಲ್ಲದೆ ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.  ಪ್ರಸಕ್ತ ಡಿಸೆಂಬರ್ ತಿಂಗಳ ಒಳಗಾಗಿ ಬಿಸರಳ್ಳಿ ಗ್ರಾಮ ಪಂಚಾಯತಿಯನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತಿಯನ್ನಾಗಿ ನಿರ್ಮಿಸಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕು ಎಂದರು.
     ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮವ್ವ ಗವಿಯಪ್ಪ ವಾಲ್ಮೀಕಿ, ಗ್ರಾ.ಪಂ. ಉಪಾಧ್ಯಕ್ಷ ಷಣ್ಮುಖರಡ್ಡಿ ಕಿನ್ನಾಳ ಸೇರಿದಂತೆ ಗ್ರಾ.ಪಂ. ಸರ್ವ ಸದಸ್ಯರು, ಸ್ವಸಹಾಯ ಸಂಘದ ಮಹಿಳಾ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪಿಡಿಓ, ಸಾರ್ವಜನಿಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.