Thursday, 20 October 2016

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ವಿಶೇಷ ಬೋಧನೆ- ಸಿಇಓ ರಾಮಚಂದ್ರನ್ ಶ್ಲಾಘನೆ


ಕೊಪ್ಪಳ ಅ. 20 (ಕರ್ನಾಟಕ ವಾರ್ತೆ): ಕೊಪ್ಪಳದ ಬನ್ನಿಕಟ್ಟೆ     ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ 9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ದಸರಾ ರಜೆಯ ವಿಶೇಷ ಬೋಧನೆ ತರಗತಿಗಳಿಗೆ ಗುರುವಾರದಂದು ಆಕಸ್ಮಿಕ ಭೇಟಿ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹಾಗೂ ಶಿಕ್ಷಕರ ಬೋಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
      ಈ ಬಾರಿ ಕೊಪ್ಪಳದಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗದ 09 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ದಸರಾ ರಜೆಯಲ್ಲಿ ವಿಶೇಷ ಬೋಧನೆಗಾಗಿ ಕ್ರಮ ಕೈಗೊಳ್ಳಲಾಗಿತ್ತು.  ಅದರಂತೆ ಗುರುವಾರದಂದು ವಿಶೇಷ ಬೋಧನಾ ಕೇಂದ್ರಗಳಿಗೆ ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ರವರು ಬೇಟಿ ನೀಡಿ ತರಗತಿಗಳನ್ನು ಪರಿಶೀಲಿಸಿದರು.  10 ನೇ ತರಗತಿ ವಿಶೇಷ ಬೋಧನಾ ಕೇಂದ್ರ ಸಂದರ್ಶಿಸಿ ವಿದ್ಯಾರ್ಥಿಗಳಿಗೆ ರಸಾಯನಾ ಶಾಸ್ತ್ರದ ಬೋಧನೆಯು ಮಕ್ಕಳಿಗೆ ಪರಿಣಾಮಕಾರಿಯಾಗಿ ಮೂಡಿಬರುತ್ತಿದೆ. ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿರುವುದನ್ನು ಶ್ಲಾಘಿಸಿದರು. ತರುವಾಯ, 9 ನೇ ತರಗತಿಯಲ್ಲಿ ಇಂಗ್ಲೀಷ ವ್ಯಾಕರಣದ ಪಾಠ ಬೋಧನೆ ಮಾಡುತ್ತಿದ್ದ ತರಗತಿಗೆ ಬೇಟಿ ನೀಡಿ, ಪುನರಾವರ್ತನೆ ಹಾಗೂ ವ್ಯಾಕರಣದ ಮನನ ಮತ್ತು ವ್ಯಾಕರಣದ ಅವಶ್ಯಕತೆ ಕುರಿತು ವಿದ್ಯಾರ್ಥಿಗಳಿಗೆ ಖುದ್ದು ಮಾರ್ಗದರ್ಶನ ಮಾಡಿದರು.
              ಕಂಪ್ಯೂಟರ ವಿಭಾಗದಲ್ಲಿ ಪ್ರೊಜೆಕ್ಟರ ಮೂಲಕ ವಿಜ್ಞಾನಿಗಳ ಪರಿಚಯ ಮಾಡಿಕೊಡುವ ತರಗತಿ ಅವಲೋಕಿಸಿ, ವಿದ್ಯಾರ್ಥಿಗಳೊಂದಿಗೆ ಪ್ರಸಕ್ತ ವಿಷಯಗಳ ಕುರಿತು ಸಂವಾದ ನಡೆಸಿದರು.  ಅಲ್ಲದೆ ವಿದ್ಯಾರ್ಥಿಗಳಿಗೆ ಈ ತರಬೇತಿಯ ಅವಶ್ಯಕತೆ ಮತ್ತು ಮಹತ್ವ ತಿಳಿಸಿದರು. 
               ಈ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕ ( ಮುನಿರಾಬಾದ್ ಡಯಟ್) ಪರಮೇಶಪ್ಪ, ಜಿಲ್ಲಾ ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ) ಪರಸಪ್ಪ ಭಜಂತ್ರಿ , ಡಯಟ್ ಉಪನ್ಯಾಸಕ ಶಾಂತಪ್ಪ, ಸಮನ್ವಯ ಅಧಿಕಾರಿ ಶರಣಪ್ಪ ಗೌರಿಪುರ ಹಾಗೂ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.
Post a Comment