Monday, 17 October 2016

ವಿಶ್ವವಿದ್ಯಾಲಯಗಳು ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು- ಬಸವರಾಜ ರಾಯರಡ್ಡಿ


ಕೊಪ್ಪಳ ಅ. 17 (ಕರ್ನಾಟಕ ವಾರ್ತೆ) : ರಾಜ್ಯದಲ್ಲಿನ ಎಲ್ಲ ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು.  ಹೆಚ್ಚು, ಹೆಚ್ಚು ಯುವಕರು ಉನ್ನತ ಶಿಕ್ಷಣ ಪಡೆದಾಗ ಮಾತ್ರ ದೇಶದ ಅಭಿವೃದ್ಧಿಗೆ ವೇಗ ದೊರೆಯಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಆಶಯ ವ್ಯಕ್ತಪಡಿಸಿದರು.
 
     ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇದರ ವ್ಯಾಪ್ತಿಯಲಿ,್ಲ ಕೊಪ್ಪಳ ನಗರದ ಹಳೆ ಜಿಲ್ಲಾ ಆಸ್ಪತ್ರೆ ಕಟ್ಟಡದ ಆವರಣದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 
     ರಾಜ್ಯದಲ್ಲಿ ಉನ್ನತ ವ್ಯಾಸಂಗಕ್ಕೆ ದಾಖಲಾಗುವ ಯುವ ಜನರ ಸಂಖ್ಯೆ ಕಡಿಮೆ ಇದೆ.  ಅದರಲ್ಲೂ ಮುಖ್ಯವಾಗಿ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಇದರ ಪ್ರಮಾಣ ಬಹಳಷ್ಟು ಕಡಿಮೆ ಇದೆ.  ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೊಡುವ ಹೊಸ ಯುಗ ರಾಜ್ಯದಲ್ಲಿ ಆರಂಭವಾಗಬೇಕಿದೆ.  ಕೊಪ್ಪಳದಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾಗಬೇಕು ಎನ್ನುವ ಬಹುದಿನಗಳ ಕನಸು, ಇದೀಗ ನನಸಾಗಿದೆ.  ಮೊದಲ ವರ್ಷದಲ್ಲಿಯೇ ಸುಮಾರು 350 ವಿದ್ಯಾರ್ಥಿಗಳು ದಾಖಲಾಗಿದ್ದು, ಸಂತಸವನ್ನು ತಂದಿದೆ.  ಈ ವರ್ಷ ಒಟ್ಟು 06 ವಿಭಾಗದ ವ್ಯಾಸಂಗಕ್ಕೆ ಅವಕಾಶ ಒದಗಿಸಲಾಗಿದ್ದು, ಮುಂದಿನ ವರ್ಷದಿಂದ ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ವಿಜ್ಞಾನ ವಿಭಾಗದ ವ್ಯಾಸಂಗ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಕೊಪ್ಪಳ ಸ್ನಾತಕೋತ್ತರ ಕೇಂದ್ರಕ್ಕೆ ಸದ್ಯ ನಗರದ ಹಳೆ ಆಸ್ಪತ್ರೆ ಕಟ್ಟಡದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು,  ಸ್ವಂತ ಕಟ್ಟಡಕ್ಕಾಗಿ ಈಗಾಗಲೆ ಕೊಪ್ಪಳದಲ್ಲಿ 50 ಎಕರೆ ಜಮೀನು ಗುರುತಿಸಲಾಗಿದೆ.  ಸ್ನಾತಕೋತ್ತರ ಕೇಂದ್ರವನ್ನು ವಸತಿ ಸಹಿತ ಮಾದರಿ ಸ್ನಾತಕೋತ್ತರ ಕೇಂದ್ರವನ್ನಾಗಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಮೊದಲ ಹಂತವಾಗಿ, ಇನ್ನೆರಡು ದಿನಗಳಲ್ಲಿ 05 ಕೋಟಿ ರೂ. ಗಳ ಅನುದಾನವನ್ನು ಸಹ ಬಿಡುಗಡೆ ಮಾಡಲಾಗುವುದು.  ಬರುವ ವರ್ಷದಿಂದ ಗಂಗಾವತಿ ಮತ್ತು ಯಲಬುರ್ಗಾದಲ್ಲಿಯೂ ಹೊಸದಾಗಿ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಲಾಗುವುದು.  ನಂತರದ ದಿನಗಳಲ್ಲಿ ಕುಷ್ಟಗಿಯಲ್ಲಿಯೂ ಪ್ರಾರಂಭಿಸಲು ಅಗತ್ಯ ಕ್ರಮ ವಹಿಸಲಾಗುವುದು.  ಬಳ್ಳಾರಿಯ ವಿವಿ ಪ್ರಾರಂಭವಾಗಿ 05 ವರ್ಷ ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಬಹಳಷ್ಟು ಸುಧಾರಣೆ ಆಗಿದೆ.  ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 104 ಕಾಲೇಜುಗಳಿದ್ದು, ಕೊಪ್ಪಳ ಸೇರಿದಂತೆ ಎರಡು ಸ್ನಾತಕೋತ್ತರ ಕೇಂದ್ರಗಳು ವಿವಿ ವ್ಯಾಪ್ತಿಯಲ್ಲಿದೆ.  ರಾಜ್ಯದಲ್ಲಿ ಒಟ್ಟು 53 ವಿಶ್ವವಿದ್ಯಾಲಯಗಳಿದ್ದು, 22 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  ವಿಶ್ವವಿದ್ಯಾಲಯಗಳ ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳ ನಿರ್ಮಾಣವಷ್ಟೇ ಅಲ್ಲ.  ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌರ್ಕರ್ಯಗಳನ್ನು ಒದಗಿಸುವುದೇ ನಿಜವಾದ ಅಭಿವೃದ್ಧಿ ಎಂದ ಸಚಿವರು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ನೀಡಿದರು.
ಹೈ-ಕ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ : ರಾಜ್ಯದ ಇತರೆ ಪ್ರದೇಶಕ್ಕೆ ಹೋಲಿಸಿದಾಗ, ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಪ್ರಮಾಣ ಅತ್ಯಲ್ಪವಿದೆ.  ಈ ಹಿನ್ನೆಲೆಯಲ್ಲಿ ಈ ಭಾಗ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ.  ಇದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರಿಂದ ವರದಿಯನ್ನು ಪಡೆಯಲಾಗಿದ್ದು, ಹೈ-ಕ ಪ್ರದೇಶದ ಉನ್ನತ ಶಿಕ್ಷಣ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಅನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ.  ರಾಜ್ಯದಲ್ಲಿ ಸುಮಾರು 300 ವಸತಿ ಸಹಿತ ಉನ್ನತ ಶಿಕ್ಷಣ ಕಾಲೇಜುಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ.  ಇದಕ್ಕಾಗಿ ವಿಶ್ವಬ್ಯಾಂಕ್ ನೆರವು ಪಡೆಯಲು ನಿರ್ಧರಿಸಿದ್ದು, ಈ ಕಾರ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರ ಅಗತ್ಯವಾಗಿದೆ.  ಧಾರವಾಡದಲ್ಲಿ ಹೊಸದಾಗಿ ಪ್ರಾರಂಭಿಸಿರುವ ಐಐಟಿ ಕಾಲೇಜಿಗೆ ರಾಜ್ಯದ ಕೇವಲ 07 ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ.  ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಸೀಟುಗಳನ್ನು ಮೀಸಲಾತಿ ಒದಗಿಸುವಂತೆ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.  ಕಾಲೇಜಿಗಾಗಿ ರಾಜ್ಯ ಸರ್ಕಾರ ಭೂಮಿ, ಕಟ್ಟಡ ಸೇರಿದಂತೆ ಎಲ್ಲ ಸವಲತ್ತುಗಳನ್ನು ನೀಡುತ್ತಿದೆ.  ರಾಜ್ಯದ ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ವ್ಯಾಸಂಗಕ್ಕೆ ಅವಕಾಶ ದೊರೆಯುವ ಹಾಗಾದಲ್ಲಿ, ಐಐಟಿ ಕಾಲೇಜಿನಿಂದ ರಾಜ್ಯಕ್ಕೆ ಪ್ರಯೋಜನವಾದರೂ ಏನು.  ಈ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಮೀಸಲಾತಿ ಒದಗಿಸಬೇಕು ಎನ್ನುವ ಬೇಡಿಕೆಯ ಈಡೇರಿಕೆಗೆ ಎಲ್ಲ ಜನಪ್ರತಿನಿಧಿಗಳು ಪ್ರಾಮಾಣಿಕ ಯತ್ನ ಮಾಡುವುದು ಅಗತ್ಯವಾಗಿದೆ ಎಂದು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಪ್ರತಿಭಾ ಪಲಾಯನ ಸರಿಯಲ್ಲ : ನಮ್ಮ ದೇಶದ ಎಲ್ಲ ಸೌಲಭ್ಯಗಳನ್ನು ಪಡೆದು, ಉನ್ನತ ವ್ಯಾಸಂಗ ಪಡೆಯುವ ವಿದ್ಯಾರ್ಥಿಗಳು, ವೈಯಕ್ತಿನ ಜೀವನದ ಸುಧಾರಣೆಗಾಗಿ ಅಥವಾ ಆರ್ಥಿಕ ಸುಧಾರಣೆಗಾಗಿ ಬೇರೆ, ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ, ಆದರೆ ದೇಶಕ್ಕಾಗಿ ತಮ್ಮ ಕೊಡುಗೆ ನೀಡುವವರ ಸಂಖ್ಯೆ ಅತ್ಯಲ್ಪವಿದೆ.  ಆದರೆ, ಚೀನಾ, ಜಪಾನ್, ಕೋರಿಯಾ ದಂತಹ ದೇಶಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ.  ಇಲ್ಲಿನ ವಿದ್ಯಾರ್ಥಿಗಳು ಬೇರೆ ದೇಶಗಳಿಗೆ ಹೋದರೂ, ಸ್ವದೇಶಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಾರೆ.  ನಮ್ಮ ದೇಶದ ವಿದ್ಯಾರ್ಥಿಗಳ ಮನಸ್ಥಿತಿಯೂ ಬದಲಾಗಬೇಕು.  ವಿದ್ಯಾವಂತರು ದೇಶದ ಅಭಿವೃದ್ಧಿಗೆ, ಸುಧಾರಣೆಗೆ ತಮ್ಮದೇ ಆದ ಮಹತ್ತರ ಕೊಡುಗೆಯನ್ನು ನೀಡುವಂತಾಗಬೇಕು.  ಅಂದಾಗ ಮಾತ್ರ ದೇಶಭಕ್ತಿ ಅಥವಾ ದೇಶಪ್ರೇಮಕ್ಕೆ ನಿಜವಾದ ಅರ್ಥ ಬರಲು ಸಾಧ್ಯ ಎಂದು ಸಚಿವ ಬಸವರಾಜ ರಾಯರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
     ಕಾರ್ಯಕ್ರಮ ಕುರಿತು ಮಾತನಾಡಿದ ಸಂಸದ ಕರಡಿ ಸಂಗಣ್ಣ ಅವರು, ಭಾರತ ದೇಶ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿದೆ.  ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು 100 ಹೊಸ ಕಾಲೇಜು ಪ್ರಾರಂಭಿಸುವ ಗುರಿಯನ್ನು ಹಾಕಿಕೊಂಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.  ಸ್ನಾತಕೊತ್ತರ ಕೇಂದ್ರ ಪ್ರಾರಂಭಿಸುವ ಮೂಲಕ ಇಲ್ಲಿನ ಜನರ ಬೇಡಿಕೆಗೆ ಸ್ಪಂದಿಸಿದ್ದಕ್ಕಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಅಭಿನಂದನೆಗೆ ಅರ್ಹರಾಗಿದ್ದಾರೆ.  ಹೊಸ ಸ್ನಾತಕೋತ್ತರ ಕೇಂದ್ರ ಪ್ರಾರಂಭಿಸಲು ಶ್ರಮ ವಹಿಸಿದಂತೆ, ಇಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಕ್ಕೂ ಹೆಚ್ಚಿನ ಗಮನ ನೀಡಲಿ ಎಂದು ಮನವಿ ಮಾಡಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಈ ಭಾಗದ ಶಿಕ್ಷಣದ ಅಭಿವೃದ್ಧಿಗೆ ಹೊಸದಾಗಿ ಪ್ರಾರಂಭಿಸಲಾಗಿರುವ ಸ್ನಾತಕೋತ್ತರ ಕೇಂದ್ರವು ಪೂರಕವಾಗಲಿದೆ.  ಮುಂದಿನ ವರ್ಷದಿಂದ ಈ ಕೇಂದ್ರದಲ್ಲಿ ವಿಜ್ಞಾನ ವಿಭಾಗವನ್ನೂ ಪ್ರಾರಂಭಿಸುವಂತೆ ಮನವಿ ಸಲ್ಲಿಸಿದರು.
     ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯ ಅಮರನಾಥ ಪಾಟೀಲ್, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ ಎಂ.ಎಸ್. ಸುಭಾಷ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ವಿವಿ ಕುಲಸಚಿವ (ಮೌಲ್ಯಮಾಪನ) ಎಲ್.ಆರ್. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.  ವಿವಿ ಕುಲಸಚಿವ ಟಿ.ಎಂ. ಭಾಸ್ಕರ್ ಸ್ವಾಗತಿಸಿದರು.  ಕೊಪ್ಪಳ ಸ್ನಾತಕೋತ್ತರ ಕೇಂದ್ರ ವಿಶೇಷಾಧಿಕಾರಿ ಡಾ. ಮನೋಜ್ ಡೊಳ್ಳಿ ವಂದಿಸಿದರು.
Post a Comment