Wednesday, 19 October 2016

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಪೋಕ್ಸೊ ಕಾಯ್ದೆಯಡಿ ಶಿಕ್ಷೆ

ಕೊಪ್ಪಳ ಅ. 19 (ಕರ್ನಾಟಕ ವಾರ್ತೆ): ಹೊಲದಲ್ಲಿ ಬಟ್ಟೆ ತೊಳೆದುಕೊಂಡು ಮನೆಗೆ ಹಿಂದಿರುಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೊ ಕಾಯ್ದೆಯಡಿ 07 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
     ಕುಷ್ಟಗಿ ತಾಲೂಕು ಅಡವಿಭಾವಿ ಗ್ರಾಮದ ಮಾಲಿಂಗಪ್ಪ ಕುಂಬಾರ ಎಂಬಾತನೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಶಿಕ್ಷೆಗೆ ಒಳಗಾದ ಆರೋಪಿ.
     ಕಳೆದ 2014 ರ ಡಿಸೆಂಬರ್ 21 ರಂದು ಸಂಜೆ ಅಪ್ರಾಪ್ತ ಬಾಲಕಿ ಅಡವಿಭಾವಿ ಗ್ರಾಮದ ಬಳಿಯ ಹೊಲದಲ್ಲಿ ಬಟ್ಟೆ ತೊಳೆದುಕೊಂಡು, ಮನೆಗೆ ಹಿಂದಿರುಗುತ್ತಿದ್ದಾಗ, ಆರೋಪಿ ಮಾಲಿಂಗಪ್ಪ ಕುಂಬಾರ, ಬಾಲಕಿಯನ್ನು ಗಿಡಗಳ ಮರೆಗೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ.  ಈ ಕುರಿತಂತೆ ಕುಷ್ಟಗಿಯ ಆಗಿನ ಸಿಪಿಐ ಆಗಿದ್ದ ಆರ್.ಎಸ್. ಉಜ್ನನಕೊಪ್ಪ ಅವರು ತನಿಖೆ ನಡೆಸಿದ್ದರು.  ನಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪ ಸಲ್ಲಿಸಲಾಯಿತು.  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ವಿಜಯಲಕ್ಷ್ಮಿ ಉಪನಾಳ ಅವರು, ಆರೋಪಿ ಮಾಲಿಂಗಪ್ಪ ಕುಂಬಾರಗೆ ಪೋಕ್ಸೊ ಕಾಯ್ದೆಯಡಿ 07 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 05 ಸಾವಿರ ರೂ. ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.  ಕೊಪ್ಪಳದ ವಿಶೇಷ ಸಾರ್ವಜನಿಕ ಅಭಿಯೋಜಕ (ಪೋಕ್ಸೊ) ಸಿ.ಎಸ್. ಮುಟಗಿ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.
Post a Comment