Monday, 24 October 2016

ಮನುಷ್ಯ ಮಾನಸಿಕವಾಗಿ ಸದೃಢನಾಗಿದ್ದರೆ ಮಾತ್ರ ದೈಹಿಕವಾಗಿ ಸದೃಢನಾಗಿರುತ್ತಾನೆ: ಡಾ. ಓಂಕಾರ

ಕೊಪ್ಪಳ, ಅ.24 (ಕರ್ನಾಟಕ ವಾರ್ತೆ): ಪ್ರತಿಯೊಬ್ಬ ಮನುಷ್ಯ ಮಾನಸಿಕವಾಗಿ ಸದÀೃಢನಾಗಿದ್ದರೆ ಮಾತ್ರ ದೈಹಿಕವಾಗಿ ಸದೃಢನಾಗಿರಲು ಸಾಧ್ಯ ಎಂದು ಮಾನಸಿಕ ತಜ್ಞ ಡಾ. ಕೃಷ್ಣ ಓಂಕಾರ ಹೇಳಿದರು.
        ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಸೋಮವಾರ ಕೊಪ್ಪಳ ಜಿಲ್ಲಾ ಕೋರ್ಟ್ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಸ್ವಸ್ಥ ರೋಗಿಗಳ ಕುರಿತು ಒಂದು ದಿನದ  ಕಾನೂನು ಕಾರ್ಯಾಕಾರದಲ್ಲಿ ಉಪನ್ಯಾಸಕರಾಗಿ ಭಾವವಹಿಸಿ ಅವರು ಮಾತನಾಡಿದರು.
     ಹಳ್ಳಿಗಳಲ್ಲಿ ಮಾನಸಿಕ ಅಸ್ವಸ್ಥತೆಯ ಕುರಿತು ಜಾಗೃತಿ ಮೂಡಿಸಬೇಕು. ಖಾಯಿಲೆಗೆ ತುತ್ತಾದವರನ್ನ ಗುಡಿ, ಚರ್ಚ್, ಮಸೀದಿಗೆ ಕರೆದೊಯ್ಯುವ ಬದಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಕೊಡಿಸಬೇಕು. ಮಾನಸಿಕ ಅಸ್ವಸ್ಥರಿಗೂ ಗೌರವಯುತವಾಗಿ ಚಿಕಿತ್ಸೆ ದೊರೆಯುವಂತಾಗಬೇಕು. ಮಾನಸಿಕ ಅಸ್ವಸ್ಥತೆಯನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಅವರೂ ಕೂಡ ಸಮಾಜದಲ್ಲಿ ಎಲ್ಲರಂತೆ ಜೀವನ ನಡೆಸುವರು. ಈಗಿನ ಒತ್ತಡದ ಜೀವನಶೈಲಿ ಹಾಗೂ ಆಹಾರ ಪದ್ದತಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದಲ್ಲದೆ ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತಿದೆ. ಈ ಖಾಯಿಲೆಯ ಕುರಿತು ಶಿಬಿರ ಹಾಗೂ ಆರೋಗ್ಯ ಕ್ಯಾಂಪ್‍ಗಳ ಮೂಲಕ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಡಾ. ಕೃಷ್ಣ ಓಂಕಾರ್ ಹೇಳಿದರು.
      ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಬಿ.ದಶರಥ ಅವರು ಮಾತನಾಡಿ, ಮಾನಸಿಕ ರೋಗವು ಇತರೆ ರೋಗಗಳಂತೆ ಗುಣಮುಖವಾಗಲು ಸಾಧ್ಯವಿರುವ ರೋಗವಾಗಿದೆ.  ಆದರೆ ಸಕಾಲಕ್ಕೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಭಾರತದಲ್ಲಿ ಮಾನಸಿಕ ಅಸ್ವಸ್ಥ ರೋಗಿಗಳಿಗೆ ಕಾನೂನಿನ ಪ್ರಕಾರ ಸೂಕ್ತ ನೆರವು ನೀಡಲಾಗುವುದು. ಹಾಗೂ ಅವರ ಹಕ್ಕುಗಳನ್ನು ಕಾಪಾಡಲು ಹಲವಾರು ಕಾಯಿದೆಗಳು ಜಾರಿಯಲ್ಲಿವೆ ಎಂದರು.
     ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್.ಉಪನಾಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ ಕನ್ನೂರು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ದಾನರಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ  ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಎಸ್.ಕೆ ದೇಸಾಯಿ, ಜಿಲ್ಲಾ ಸರ್ಕಾರಿ ವಕೀಲ ಆಸೀಫ್ ಅಲೀ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ ಪಾನಘಂಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ವಕೀಲರಾದ ನೇತ್ರಾ ಬಿ.ಪಾಟೀಲ್ ಮಾನಸಿಕ ಅಸ್ವಸ್ಥ ಮತ್ತು ವಿಕಲತೆ ಮನೋ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಗೂ ಬಂದಿಖಾನೆಯಲ್ಲಿ ಕಾನೂನು ನೆರವು ದೊರೆಯುವ ಕುರಿತು ಹಾಗೂ ವಕೀಲರಾದ ಶಿಲ್ಪಾ ಜಂತಕಲ್ ನಿರ್ಗತಿಯುಳ್ಳ ಅಲೆಮಾರಿ ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗೆ ಕಾನೂನು ಸೌಲಭ್ಯ ಕುರಿತು ವಿಶೇಷ ಉಪನ್ಯಾನ ನೀಡಿದರು.
Post a Comment