Monday, 3 October 2016

ಯಲಬುರ್ಗಾ : ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಸೂಚನೆ

ಕೊಪ್ಪಳ ಅ. 03 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಮಿಷನ್‍ನಡಿ ಯಲಬುರ್ಗಾ ಪಟ್ಟಣವನ್ನು ಬಯಲು ಬಹಿರ್ದೆಸೆ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಇದುವರೆಗೂ ಶೌಚಾಲಯ ಹೊಂದದೇ ಇರುವ ಕುಟುಂಬಗಳು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಯಲಬುರ್ಗಾ ಪಟ್ಟಣ ಪಂಚಾಯತಿ ಸೂಚನೆ ನೀಡಿದೆ.
     ಯಲಬುರ್ಗಾ ಪಟ್ಟಣವನ್ನು ಬಯಲು ಬಹಿರ್ದೆಸೆ ಮುಕ್ತ ಪಟ್ಟಣವನ್ನಾಗಿಸಲು  ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.  ಅಕ್ಟೋಬರ್-2016ರ ಅಂತ್ಯದೊಳಗಾಗಿ ಯಲಬುರ್ಗಾ ಪಟ್ಟಣವನ್ನು ಬಯಲು ಶೌಚ ಮುಕ್ತ ಪಟ್ಟಣವನ್ನಾಗಿ ಘೋಷಿಸಲು ಉದ್ದೇಶಿಸಲಾಗಿದ್ದು,  ಈ ನಿಟ್ಟಿನಲ್ಲಿ  ಪಟ್ಟಣದ ವ್ಯಾಪ್ತಿಯಲ್ಲಿ ವೈಯಕ್ತಿಯ ಶೌಚಾಲಯಗಳನ್ನು ನಿರ್ಮಿಸಲು ಜಾಗವಿರುವ ಎಲ್ಲಾ ಮನೆಗಳು ವೈಯಕ್ತಿಕ ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳಲು ತಿಳಿಸಲಾಗಿದೆ. ಇದಕ್ಕಾಗಿ ಸ್ವಚ್ಛ ಭಾರತ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ರೂ.5333/-ಗಳನ್ನು ನೀಡಲಾಗುತ್ತದೆ. ಕಾರಣ ಶೌಚಾಲಯ ಇಲ್ಲದೇ ಇರುವವರು ಶೀಘ್ರವಾಗಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿ ವೈಯಕ್ತಿಕ ಶೌಚಾಲಯಗಳನ್ನು (ತಮ್ಮ ಸ್ವಂತ ಜಾಗೆಯಲ್ಲಿ) ನಿರ್ಮಿಸಿಕೊಳ್ಳಲು ತಿಳಿಸಲಾಗಿದೆ. ಅಲ್ಲದೇ ಶೌಚಾಲಯ ಹೊಂದಿದವರು ಶೌಚಾಲಯಗಳನ್ನು ಬಳಸಲು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಬಯಲು ಶೌಚ ಪದ್ದತಿಯಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ದ ಜುಲ್ಮಾನೆ (ದಂಡವನ್ನು) ವಿಧಿಸಲಾಗುತ್ತದೆ ಮತ್ತು ಅಂತಹ ಕುಟುಂಬಗಳಿಗೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಒದಗಿಸುವುದಿಲ್ಲಾ.
ಪಟ್ಟಣವನ್ನು ಬಯಲು ಶೌಚ ಮುಕ್ತ ಪಟ್ಟಣದವೆಂದು ಘೋಷಿಸಲು ಪ್ರತಿಯೊಬ್ಬರು ಶೌಚಾಲಯಗಳನ್ನು ನಿರ್ಮಿಸಿಕೊಂಡು ಶೌಚಾಲಯಗಳನ್ನು ಉಪಯೋಗಿಸಬೇಕು ಎಂದು ಮುಖ್ಯಾಧಿಕಾರಿ ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment