Thursday, 6 October 2016

ಮೈತ್ರಿ ಕಾರ್ಯಕರ್ತರ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಅ.06 (ಕರ್ನಾಟಕ ವಾರ್ತೆ): ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕೊಪ್ಪಳ ಜಿಲ್ಲೆಯ ವಿದ್ಯಾವಂತ ಗ್ರಾಮೀಣ ನಿರುದ್ಯೋಗಿ ಯುವಕ/ಯುವತಿಯರಿಗೆ ಒಂದು ತಿಂಗಳ ಮೈತ್ರಿ ಕಾರ್ಯಕರ್ತರ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಗ್ರಾಮೀಣ ಪ್ರದೇಶದ ಎಸ್‍ಎಸ್‍ಎಲ್‍ಸಿ/ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದ ಯುವಕ/ಯುವತಿಯರು ಮೈತ್ರಿ ಕಾರ್ಯಕರ್ತರ ತರಬೇತಿ ಅಂದರೆ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮತ್ತು ಇತರೆ ಕಚೇರಿ ಕೆಲಸಗಳ ನಿರ್ವಹಣೆ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದು.
     ಜಿಲ್ಲೆಯಲ್ಲಿ ಒಟ್ಟು 68 ಮೈತ್ರಿ ಕೇಂದ್ರಗಳು ಮಂಜೂರಾಗಿದ್ದು, ಮೀಸಲಾತಿಯನ್ವಯ ತಾತ್ಕಾಲಿಕವಾಗಿ ಸ್ವಯಂ ಉದ್ಯೋಗ ಸೃಷ್ಠಿಯಾಗಿರುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರದ ಉದ್ಯೋಗವೆಂದು ಹಕ್ಕೊತ್ತಾಯ ಮಾಡುವಂತಿಲ್ಲ. ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲೆಯ ಆಯಾ ತಾಲೂಕಿಗೆ ಸಂಬಂಧಿಸಿದ ಇಲಾಖಾ ಸಹಾಯಕ ನಿರ್ದೇಶಕರು  ಅಥವಾ ಪಶು ಆಸ್ಪತ್ರೆಯಲ್ಲಿ ಪಡೆದು ಭರ್ತಿ ಮಾಡಿ ದಾಖಲಾತಿಗಳೊಂದಿಗೆ ಅ.15 ರೊಳಗಾಗಿ ಸಲ್ಲಿಸಬೇಕು.
     ಅರ್ಜಿ ಸಲ್ಲಿಸುವವರು ಕನಿಷ್ಟ 10 ನೇ ತರಗತಿ ಗರಿಷ್ಠ 10+2 ವಿದ್ಯಾರ್ಹತೆ ಪಡೆದಿರಬೇಕು. ವಯೋಮಿತಿ ಕನಿಷ್ಠ 18 ವರ್ಷ. ಗರಿಷ್ಠ ಸಾಮಾನ್ಯ-35, ಒಬಿಸಿ-38, ಪ.ಜಾತಿ/ಪ.ಪಂ-40 ವರ್ಷ ದೊಳಗಿರಬೇಕು. ವಾಸಸ್ಥಳ ದೃಢೀಕರಣಕ್ಕೆ ಚುನಾವಣೆ ಗುರುತಿನ ಚೀಟಿ, ಆಧಾರ ಕಾರ್ಡ್, ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮೈತ್ರಿ ಕೇಂದ್ರ ಹಾಗೂ ಮೈತ್ರಿ ಗ್ರಾಮದಲ್ಲಿ ವಾಸವಿರುವ ದೃಢೀಕರಣ ಪತ್ರ ಲಗತ್ತಿಸಬೇಕು.  ತರಬೇತಿ ಅವಧಿ 1 ತಿಂಗಳಾಗಿದ್ದು, ತರಬೇತಿ ವೇಳೆ ತಿಂಗಳಿಗೆ 1500 ರೂ ತರಬೇತಿ ಭತ್ಯೆ ನೀಡಲಾಗುವುದು. ತರಬೇತಿ ನಂತರ ಕ್ಷೇತ್ರ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಇವರನ್ನು  ಅಥವಾ ದೂರವಾಣಿ ಸಂ : 08539-221408 ಕ್ಕೆ ಸಂಪರ್ಕಿಸಬಹುದು ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment