Sunday, 2 October 2016

ನಮ್ಮ ಗ್ರಾಮ-ನಮ್ಮ ಯೋಜನೆ ಅಭಿಯಾನಕ್ಕೆ ಸಚಿವ ಬಸವರಾಜ ರಾಯರಡ್ಡಿ ಚಾಲನೆ


ಕೊಪ್ಪಳ ಅ. 02 (ಕರ್ನಾಟಕ ವಾರ್ತೆ):  ಗ್ರಾಮಗಳ ಸ್ವರಾಜ್ಯ ಪರಿಪೂರ್ಣ ಸ್ವರಾಜ್ಯಕ್ಕೆ ರಹದಾರಿ, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎನ್ನುವ ಗಾಂಧೀಜಿಯವರ ತತ್ವದಂತೆ, ಪಂಚಾಯತಿಗಳಲ್ಲಿ ಒಂದೇ ಸೂರಿನಡಿ ನೂರು ವಿವಿಧ ಸೇವೆಗಳು ಲಭಿಸುವಂತಾದ ಬಾಪೂಜಿ ಸೇವಾ ಕೇಂದ್ರಗಳ ಪ್ರಾರಂಭ ಹಾಗೂ ಗ್ರಾಮಗಳ ಅಭಿವೃದ್ಧಿ ಕುರಿತಂತೆ ಗ್ರಾಮೀಣ ಜನರಲ್ಲಿ ಜನಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ “ ನಮ್ಮ ಗ್ರಾಮ-ನಮ್ಮ ಯೋಜನೆ”   ವಿಶೇಷ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಜಿಲ್ಲಾ ಪಂಚಾಯತಿ ಆವರಣದಲ್ಲಿ ವಿಶೇಷ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಭಾನುವಾರದಂದು ಚಾಲನೆ ನೀಡಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ವಿಶೇಷ ಅಭಿಯಾನವನ್ನು ಆಯೋಜಿಸಿದೆ.  ನಮ್ಮ ಗ್ರಾಮ-ನಮ್ಮ ಯೋಜನೆ ಅಭಿಯಾನಕ್ಕಾಗಿ ವಾರ್ತಾ ಇಲಾಖೆಯು ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ.   20 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಈ ಅಭಿಯಾನದಲ್ಲಿ ಪ್ರತಿ ದಿನ 02 ಗ್ರಾಮಗಳಲ್ಲಿ ವಿಶೇಷ ವಾಹನವು ಸಂಚರಿಸಲಿದ್ದು, ಜನಜಾಗೃತಿಗಾಗಿ ಬೀದಿನಾಟಕ, ಜಾನಪದ ಸಂಗೀತ, ವಸ್ತುಪ್ರದರ್ಶನಗಳ, ಕಿರು ಚಿತ್ರ ಪ್ರದರ್ಶನದ ಮೂಲಕ ಜನ ಜಾಗೃತಿ ಮೂಡಿಸಲಾಗುವುದು,  ಅಲ್ಲದೆ ಈ ಕುರಿತಂತೆ ಕರಪತ್ರ/ಮಡಿಕೆ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಮಾಹಿತಿ ನೀಡಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿ.ಪಂ. ಸದಸ್ಯ ಹನುಮಂತಗೌಡ ಚಂಡೂರ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಅಭಿಯಾನದ ಯಶಸ್ವಿಗೆ ಶುಭ ಹಾರೈಸಿದರು.
Post a Comment