Sunday, 2 October 2016

ಮಹಾತ್ಮ ಗಾಂಧೀಜಿಯವರ ತತ್ವಗಳು ಇಡೀ ವಿಶ್ವಕ್ಕೆ ಪ್ರಸ್ತುತ- ಬಸವರಾಜ ರಾಯರಡ್ಡಿ


ಕೊಪ್ಪಳ, ಅ.02 (ಕರ್ನಾಟಕ ವಾರ್ತೆ) : ಸತ್ಯ, ಅಹಿಂಸೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡ ಮಹಾತ್ಮ ಗಾಂಧೀಜಿಯವರ ತತ್ವಗಳು ಕೇವಲ ಭಾರತ ದೇಶಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ಪ್ರಸ್ತುತ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ 148 ನೇ ಜಯಂತಿ ಹಾಗೂ ವಿಚಾರಗೋಷ್ಠಿಯನ್ನು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

     ಮಹಾತ್ಮ ಗಾಂಧೀಜಿಯವರು ಶರಣರ ತತ್ವಗಳನ್ನು ತಾತ್ವಿಕವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸತ್ಯ ಅಹಿಂಸೆಯ ಮಾರ್ಗವನ್ನೇ ಸ್ವಾತಂತ್ರ್ಯ ಚಳುವಳಿಗೆ ಅನುಸರಿಸಿದ ರೀತಿ, ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಮಾಡಿತು.  ಈ ಮೂಲಕ ಗಾಂಧೀಜಿಯವರು ವಿಶ್ವಮಾನ್ಯ ವ್ಯಕ್ತಿಗಳಾದರು.  ಗಾಂಧೀಜಿಯವರು ಭಾರತ ದೇಶಕ್ಕೆ ಮಾತ್ರ ನಾಯಕರಲ್ಲ, ವಿಶ್ವ ಕಂಡ ಅಧ್ಭುತ ಶಕ್ತಿ.  ಸಾಮಾನ್ಯ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಗಾಂಧೀಜಿಯವರಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣ ದೊರಕಿತು.  ವಕೀಲರಾಗಬೇಕೆಂಬ ಆಸೆಯಿಂದ ಇಂಗ್ಲೇಂಡ್‍ಗೆ ತೆರಳಿ ಬ್ಯಾರಿಸ್ಟರ್ ಆಫ್ ಲಾ ಪದವಿಯನ್ನು ಪಡೆದುಕೊಂಡರು.  ವಕೀಲಿ ವೃತ್ತಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಅವರು, ಒಮ್ಮೆ ರೈಲಿನಲ್ಲಿ ಮೊದಲನೆ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ, ವರ್ಣಬೇಧ ನೀತಿ ಅನುಸರಿಸುತ್ತಿದ್ದ ಅಲ್ಲಿನ ಆಡಳಿತ, ರೈಲಿನಿಂದ ಕೆಳಗಿಳಿಸಿ ಅಪಮಾನ ಮಾಡಿತು.  ಇದು ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲು ಕಾರಣವಾಯಿತು.  ಅಲ್ಲದೆ ಮಾನವ ವಿರೋಧಿ ವರ್ಣಬೇಧ ನೀತಿಯ ವಿರುದ್ಧ ಹೋರಾಟಕ್ಕೆ ನಾಂದಿಯಾಯಿತು.  ಮಾನವ ಹಕ್ಕುಗಳಿಗೆ ಸಂಘಟನೆ ಮಾಡುವ ನಿರ್ಧಾರವನ್ನು ಅವರು ಕೈಗೊಂಡರು.  ತಮಗಾದ ಅಪಮಾನ ವಿರುದ್ಧ ಅಲ್ಲಿನ ನ್ಯಾಯಾಲಯದಲ್ಲಿ ವಾದಿಸಿ, ಕೊನೆಗೂ ಜಯ ಸಾಧಿಸಿದರು.  ನಂತರ ವಕೀಲ ವೃತ್ತಿಗೆ ತಿಲಾಂಜಲಿ ಹೇಳಿ, ಭಾರತಕ್ಕೆ ಆಗಮಿಸಿದ ಗಾಂಧೀಜಿಯವರು, ಇಲ್ಲಿನ ಅಸ್ಪøಷ್ಯತೆ, ಜಾತಿಭೇದ, ಲಿಂಗಭೇದ, ಅನಕ್ಷರತೆಯನ್ನು ನೋಡಿಯೇ, ಸ್ವಾತಂತ್ರ್ಯ ಚಳುವಳಿಗೆ ಧುಮುಕುವ ಅಚಲ ನಿರ್ಧಾರ ಕೈಗೊಂಡರು.  ಸತ್ಯ, ಅಹಿಂಸೆಯ ಮಾರ್ಗವನ್ನೇ ಸ್ವಾತಂತ್ರ್ಯ ಚಳುವಳಿಗೆ ಅನುಸರಿಸಿದರು.  ಹಿಂಸೆಗೆ ಹಿಂಸೆ ಉತ್ತರವಲ್ಲ ಎನ್ನುವ ಸಿದ್ಧಾಂತ ಅವರದಾಗಿತ್ತು.  ಸ್ವಾತಂತ್ರ್ಯಕ್ಕಾಗಿ ಜನಶಕ್ತಿಯನ್ನು ಕಟ್ಟಿದರು, ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಧರಣಿ ಸತ್ಯಾಗ್ರಹಗಳನ್ನು ಚಳುವಳಿಗಾಗಿ ಬಳಸಿಕೊಂಡು ವಿಶ್ವದ ಜನಮನವನ್ನು ಗೆದ್ದರು.  ಅವರು ದೇಶದ ಸ್ವಾತಂತ್ರ್ಯ ಹಾಗೂ ಮಾನವ ವಿರೋಧಿ ನೀತಿಯನ್ನು ವಿರೋಧಿಸಿ ಕೈಗೊಂಡ ಉಪ್ಪಿನ ಸತ್ಯಾಗ್ರಹ, ದಂಡಿ ಯಾತ್ರೆ ಹಾಗೂ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಚಳುವಳಿಗಳು ಹೆಚ್ಚು ಪರಿಣಾಮ ಬೀರಿದವು.  ಸ್ವಾತಂತ್ರ್ಯ ಕಾಲದಲ್ಲಿ ಹಿಂದೂ-ಮುಸ್ಲಿಂ ರನ್ನು ಎತ್ತಿಕಟ್ಟಿ, ದೇಶ ಒಡೆಯುವ ಕೆಲಸಕ್ಕೆ ಬ್ರಿಟೀಷರು ಕಾರಣರಾದರು.  ಬ್ರಿಟೀಷರ ಕುಮ್ಮಕ್ಕಿನಿಂದ, ಮತೀಯ ವಾದಿಗಳಿಂದ ದೇಶ ಒಡೆಯಿತೇ ಹೊರತು ಗಾಂಧೀಜಿಯವರಿಂದ ಅಲ್ಲ.  ಗ್ರಾಮ ಸ್ವರಾಜ್ಯ ಹಾಗೂ ಶಿಕ್ಷಣ ಇವು ಗಾಂಧೀಜಿಯವರ ಪ್ರಮುಖ ಆದ್ಯತಾ ವಿಚಾರಗಳಾಗಿದ್ದವು.  ಈ ವಿಚಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿಯಾಗಲು ಸಾಧ್ಯ.  ಇಂದು ಭಾರತದ ಮಾಜಿ ಪ್ರಧಾನಿ ದಿವಂಗತ ಲಾಲ್‍ಬಹದ್ದೂರ ಶಾಸ್ತ್ರಿ ಅವರ ಜನ್ಮದಿನವೂ ಆಗಿದ್ದು, ಇವರೂ ಸಹ ಅಪ್ಪಟ ಗಾಂಧಿ ವಾದಿಗಳು.  ಇವರ ಜೈಜವಾನ್-ಜೈಕಿಸಾನ್ ಘೋಷಣೆ ಇಂದಿಗೂ ಜನಮಾನಸಲ್ಲಿ ಅಚ್ಚಳಿಯದೇ ಉಳಿದಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಭಾನಾಪುರ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಕ್ರಮ : ಅಸ್ಪøಷ್ಯತೆಯ ನಿವಾರಣೆಗೆ ಸಕ್ರಿಯವಾಗಿ ತೊಡಗಿಸಿಕೊಂಡವರು ಗಾಂಧೀಜಿಯವರು.  ಈ ಕಾರ್ಯ ನಿಮಿತ್ತ ಕೈಗೊಂಡ ಪ್ರವಾಸದ ಸಂದರ್ಭದಲ್ಲಿ 1934 ರ ಮಾರ್ಚ್ 03 ರಂದು ಕೊಪ್ಪಳ ಜಿಲ್ಲೆ ಭಾನಾಪುರದ ರೈಲ್ವೆ ನಿಲ್ದಾಣದಲ್ಲಿ ಕೆಲ ಕಾಲ ತಂಗಿ, ಜನರಿಗೆ ತಮ್ಮ ಸಂದೇಶವನ್ನು ನೀಡಿದ್ದರು.  ಈ ಹಿನ್ನೆಲೆಯಲ್ಲಿ ಭಾನಾಪುರ ರೈಲ್ವೆ ನಿಲ್ದಾಣವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿ, ಅಲ್ಲಿ ಗಾಂಧೀಜಿಯವರ ಪುತ್ಥಳಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗುವುದು.  ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಹಕಾರವನ್ನು ನಮ್ಮ ಸರ್ಕಾರ ಒದಗಿಸಲಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕಿರುಹೊತ್ತಿಗೆಗಳ ಬಿಡುಗಡೆ : ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗಿರುವ ‘ನಮ್ಮ ಗ್ರಾಮ ನಮ್ಮ ಯೋಜನೆ, ಬಾಪೂಜಿ ಸೇವಾ ಕೇಂದ್ರ, ನಮ್ಮ ಗಾಂಧಿ ತಾತ, ನನ್ನ ಜೀವನವೇ ನನ್ನ ಸಂದೇಶ ಪುಸ್ತಕಗಳ ಜೊತೆಗೆ ಅಕ್ಟೋಬರ್ ಮಾಹೆಯ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಸಂಚಿಕೆಯ ಗಾಂಧೀಜಿ ವಿಶೇಷಾಂಕಗಳನ್ನು ಸಚಿವ ಬಸವರಾಜ ರಾಯರಡ್ಡಿ ಅವರು ಸೇರಿದಂತೆ ಎಲ್ಲ ಗಣ್ಯಮಾನ್ಯರಿಂದ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.  ಅಲ್ಲದೆ ಕಿರುಹೊತ್ತಿಗೆಗಳನ್ನು ಎಲ್ಲ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಿರುಚಿತ್ರ ಪ್ರದರ್ಶನ : ಮಹಾತ್ಮಾಗಾಂಧೀಜಿಯವರ ಆತ್ಮ ಚರಿತ್ರೆ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನ್ನಡ ಅವತರಣಿಕೆಯಲ್ಲಿ ಹೊರತಂದಿರುವ 27 ನಿಮಿಷಗಳ ಅವಧಿಯ ಸಾಕ್ಷ್ಮ ಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. 
     ಗಾಂಧೀಜಿಯವರ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದ ನಗರದ ಗವಿಸಿದ್ದೇಶ್ವರ ಮಹಾ ವಿದ್ಯಾಲಯದ ಉಪನ್ಯಾಸಕ ಶರಣಬಸಪ್ಪ ಬಿಳಿಎಲಿ ಅವರು, ಗಾಂಧೀಜಿಯವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಮಾರ್ಗಗಳೇ ಅವರಿಗೆ ಅಪಾರ ಜನಬೆಂಬಲ ದೊರೆಯಲು ಕಾರಣವಾಯಿತು.  ಗುಡಿ ಕೈಗಾರಿಕೆ, ಸ್ವಚ್ಛತೆಗೆ ಆದ್ಯತೆ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
     ಸಮಾರಂಭದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿ.ಪಂ. ಸದಸ್ಯ ಹನಮಂತಗೌಡ ಚಂಡೂರ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ ಉಪಸ್ಥಿತರಿದ್ದು ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದರು.
         ಇದಕ್ಕೂ ಪೂರ್ವದಲ್ಲಿ ಭಾಗ್ಯನಗರದ ಕು. ಅಂಬಿಕಾ ಮತ್ತು ಸಂಗಡಿಗರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ರಘುಪತಿ ರಾಘವ ರಾಜಾರಾಂ, ಸುಮರನಕರಲೆ, ವೈಷ್ಣವಜನತೋ ಗೀತ ಗಾಯನ ನಡೆಸಿಕೊಟ್ಟರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.
Post a Comment