Tuesday, 18 October 2016

ಆಕಾಶವಾಣಿಯಲ್ಲಿ ಭಾಗ್ಯವಾಣಿ : ಕ್ಷೀರಭಾಗ್ಯ ದೈವರೂಪಿ ಮಕ್ಕಳಿಗೆ ಅಮೃತ ಸಮಾನ ಹಾಲು


ಕೊಪ್ಪಳ ಅ. 18 (ಕರ್ನಾಟಕ ವಾರ್ತೆ): ಮಕ್ಕಳಲ್ಲಿನ ಅಪೌಷ್ಠಿಕತೆ ದೂರಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗುತ್ತಿರುವ ಹಾಲು, ಮಕ್ಕಳ ಪಾಲಿಗೆ ವರದಾನವಾಗಿದ್ದು, ಈ ಕುರಿತಂತೆ ಆಕಾಶವಾಣಿಯಲ್ಲಿ ಭಾಗ್ಯವಾಣಿ ಸರಣಿಯಡಿ ಭಾನುವಾರದಂದು ಪ್ರಸಾರಗೊಂಡಿತು.
     ಕುಟುಂಬದ ಬಡತನ ಎಷ್ಟು ವಿಚಿತ್ರ ಅಂದ್ರೆ ಮನೇಲಿ ಹಸು ಇದ್ದರೂ ಮಕ್ಕಳಿಗೆ ಹಾಲು ಕೊಡದೆ, ಮಾರಾಟ ಮಾಡುವ ಅನಿವಾರ್ಯತೆ. ಎಷ್ಟೋ ಮಕ್ಕಳು ಹಾಲನ್ನೇ ಕಂಡಿರದ ಪರಿಸ್ಥಿತಿ. ಇದರೊಂದಿಗೆ ಸದೃಢ ಸಮಾಜದ ಭವಿಷ್ಯವಾಗಿರುವ ಮಕ್ಕಳ ಅಪೌಷ್ಠಿಕತೆ ತಡೆಯಲು ರಾಜ್ಯ ಸರ್ಕಾರ 2013ರ ಅಗಸ್ಟದಿಂದ ವಾರದಲ್ಲಿ ಮೂರು ದಿನ 150 ಎಂ.ಎಲ್. ಹಾಲನ್ನು 1 ರಿಂದ 10ನೇ ತರಗತಿಯ 1.04 ಕೋಟಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಸದ್ಯ ವಾರ್ಷಿಕ ಸುಮಾರು 850 ಕೋಟಿ ರೂ. ವೆಚ್ಚದ ಈ ಕಾರ್ಯಕ್ರಮವನ್ನು ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ದಿಯ ಪ್ರಮುಖ ಯೋಜನೆಯಾಗಿ ಪರಿಗಣಿಸಿ ವಾರಕ್ಕೆ ಆರು ದಿನ ಹಾಲು ವಿತರಿಸಲು ಉದ್ದೇಶಿಸಲಾಗಿದೆ ಎನ್ನುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನದಾಳದ ಮಾತು ಕ್ಷೀರಭಾಗ್ಯ ಯೋಜನೆಯ ಜೀವಾಳವು ಹೌದು.
     ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯ ಸರ್ಕಾರದ ಮಹತ್ವದ ಜನಹಿತ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನದ ಭಾಗ್ಯವಾಣಿ ಸರಣಿಯಲ್ಲಿ ಕಳೆದ ಭಾನುವಾರದಂದು ರಾಜ್ಯಾದ್ಯಂತ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಬಡವ ಶ್ರೀಮಂತರೆನ್ನದೇ ರಾಜ್ಯದ ಶಾಲಾ ವಿದ್ಯಾರ್ಥಿಗಳ ಪೌಷ್ಠಿಕಾಂಶ ಹೆಚ್ಚಿಸಿ ವಿದ್ಯಾಭ್ಯಾಸ, ಆಟಪಾಟಕ್ಕೆ ಚೈತನ್ಯ ನೀಡುತ್ತಿರುವ ಕ್ಷೀರಭಾಗ್ಯ ಯೋಜನೆ ಮಾಹಿತಿ ಪ್ರಸಾರವಾಯಿತು.
     ಆಕಾಶವಾಣಿಯ ಭಾಗ್ಯವಾಣಿಯ ನಿರ್ಮಾಣದ ತಂಡ ಈ ಬಾರಿ ಬಾಗಲಕೋಟೆಗೆ ಆಗಮಿಸಿ ಜಿಲ್ಲೆಯ ರನ್ನನ ಮುಧೋಳ ತಾಲೂಕಿನ ಮಳಲಿ ಸರ್ಕಾರಿ ಪ್ರೌಢಶಾಲೆಯ ಕ್ಷೀರಭಾಗ್ಯ ಫಲಾನುಭವಿ ವಿದ್ಯಾರ್ಥಿಗಳ ಪ್ರತ್ಯಕ್ಷ ಅನುಭವ ದಾಖಲಿಸಿದ್ದು ವಿಶೇಷವಾಗಿತ್ತು.
     ವಿದ್ಯಾರ್ಥಿನಿ ಲಕ್ಷ್ಮೀ ಕುಂಬಾರ ಮಾತನಾಡಿ ಹಾಲನ್ನೇ ನೋಡಿರದ, ರಕ್ತಹೀನತೆ ಮತ್ತು ಅಪೌಷ್ಠಿಕತೆಯೇ ಜೀವನವಾಗಿದ್ದ ಬಹುತೇಕ ಸಾಮಾನ್ಯವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದ ಕ್ಷೀರಭಾಗ್ಯ ದೇವರಸಮಾನ ಮಕ್ಕಳಿಗೆ ಅಮೃತ ಸಮಾನ ಹಾಲು ವಿತರಣೆ ಮಾಡುತ್ತಿರುವುದು ಅತ್ಯಂತ ಖುಷಿ ತರುವಂತಹದ್ದು. ಕೆ.ಎಂ.ಎಫ್. ಸಾರ್ವಜನಿಕ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ರಾಜ್ಯ 54,804 ಶಾಲೆಗಳ 65 ಲಕ್ಷ,  64 ಸಾವಿರ ಅಂಗನವಾಡಿಗಳ 39 ಲಕ್ಷ ಮಕ್ಕಳಿಗೆ ತಲಾ 4.49 ರೂ. ವೆಚ್ಚದಲ್ಲಿ ಪೌಷ್ಠಿಕತೆ ಹೆಚ್ಚಿಸಲು ಪರಿಪೂರ್ಣ ಆಹಾರವಾದ ಹಾಲು ವಿತರಣೆ ಮಾಡುತ್ತಿರುವುದಕ್ಕೆ ಈ ಎಲ್ಲ ವಿದ್ಯಾರ್ಥಿಗಳ ಸಮುದಾಯದಿಂದ ಶ್ರೀ ಸಿದ್ದರಾಮಯ್ಯನವರಿಗೆ ಥ್ಯಾಂಕ್ಸ್ ಎಂದಿದ್ದು ವಿಶೇಷ. ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಬಿ.ಹಿರೇಮಠ ಮಾತನಾಡಿ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರಕ್ಕೆ ಮೂರುದಿನ ಹಾಲು ವಿತರಿಸಲಾಗುತ್ತಿರುವ ಬಾಗಲಕೋಟೆ ಜಿಲ್ಲೆಯಲ್ಲಿ 35,541 ಪರಿಶಿಷ್ಠರು ಸೇರಿದಂತೆ ಒಟ್ಟು 2,87,450 ಮಕ್ಕಳು ಕ್ಷೀರಭಾಗ್ಯದ ಸೌಲಭ್ಯ ಪಡೆಯತ್ತಿದ್ದಾರೆ. ಇದರಿಂದ ಶಾಲೆಯ ಮಕ್ಕಳ ಹಾಜರಾತಿ ಹೆಚ್ಚಳವಾಗಿದ್ದು ಅಪೌಷ್ಠಿಕತೆ ಸಂಖ್ಯೆಯಲ್ಲಿ ಗವiನಾರ್ಹ ಇಳಿಕೆಯಾಗಿದೆ. ಆಟಪಾಟದಲ್ಲಿ ಮೊದಲಿಗಿಂತಲೂ ಹೆಚ್ಚಿನ ಆಸಕ್ತಿ ಮಕ್ಕಳಲ್ಲಿ ಕಂಡುಬರುತ್ತಿದೆ ಎಂದರು.
      ಭಾಗ್ಯವಾಣಿ ಸರಣಿ ಕಾರ್ಯಕ್ರಮ ನಿರ್ಮಿಸುತ್ತಿರುವ  ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ್‍ಮೂರ್ತಿ ಅವರು ಶಾಲೆಯ ವಿದ್ಯಾರ್ಥಿಗಳಾದ ನೇತ್ರಾ, ದೀಪಾ ಕುಂಬಾರ, ಮಯೂಶಾ ಭಟ್ಟರ, ಅಭಿಷೇಕ ಕುಂಬಾರ, ಮುತ್ತಪ್ಪ ಕಾಂಬಳೆ, ದಿನೇಶ ಕಮತಗಿ ಅವರೊಂದಿಗೆ ಕ್ಷೀರಭಾಗ್ಯದಿಂದ ಆಗಿರುವ ಬದಲಾವಣೆ ಅದರ ಪರಿಣಾಮಗಳ ಕುರಿತು ಮಾತನಾಡಿದಾಗ ಮೂಡಿಬಂದದ್ದು ಕ್ಷೀರಭಾಗ್ಯಕ್ಕೆ ವಂದನೆ ರಾಜ್ಯ ಸರ್ಕಾರ ಮತ್ತು  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ.
     ಭಾಗ್ಯ ವಾಣಿಯ  ಹಟ್ಟಿ ಹರಟೆಯಲ್ಲಿ ಕ್ಷೀರಭಾಗ್ಯದಿಂದಾಗಿ ಹೈಕ್ಳು ಹಾಲು ಕುಡಿದ್ರೆ ನನ್ನ ಹೊಟ್ಟೆ ತಂಪಾಯ್ತದೆ ಎನ್ನುವ ಹನುಮಕ್ಕನ ಮಾತು ಬಹುಷ 1.04 ಕೋಟಿ ಮಕ್ಕಳ ತಾಯಂದಿರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನದ ಭಾವನೆಯೂ ಆಗಿರಲು ಸಾಕು. ಅದಕ್ಕೆ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಹಾಡು ಪೂರಕವಾಗಿತ್ತು. ಭಾಗ್ಯವಾಣಿಯಲ್ಲಿ ಬರುವ ಭಾನುವಾರ ದಿ. 23 ರಂದು ರಾತ್ರಿ 7 ರಿಂದ 7-30 ಗಂಟೆಯವರೆಗೆ  ತಳ ಸಮುದಾಯ ಏಳಿಗೆ-ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗಾಗಿ ನೆರವು, ಯೋಜನೆಗಳ  ಮಾಹಿತಿ ಪ್ರಸಾರವಾಗಲಿದೆ.
Post a Comment