Wednesday, 5 October 2016

ಮಲೇರಿಯಾ ನಿಯಂತ್ರಣಕ್ಕೆ ಕ್ವಾರಿ ಮಾಲೀಕರು ಸಹಕರಿಸಿ - ಐ.ಎಸ್. ಶಿರಹಟ್ಟಿ

ಕೊಪ್ಪಳ, ಅ.05 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮಲೇರಿಯಾ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಕ್ವಾರಿಗಳ ಮಾಲಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸಹಾಯಕ ಆಯುಕ್ತ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಹೇಳಿದರು.
     ರೋಗವಾಹಕಗಳ ಆಶ್ರಿತ ರೋಗಗಳ ಪರಾಮರ್ಶೆ, ನಿಯಂತ್ರಣದಲ್ಲಿ ಗಣಿ ಮಾಲೀಕರ ಪಾತ್ರ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳಲಾಗಿದ್ದ ಕೊಪ್ಪಳ ಜಿಲ್ಲೆಯ ಗಣಿ ಮಾಲೀಕರ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಕಲ್ಲು ಮತ್ತು ಗ್ರಾನೈಟ್ ಕ್ವಾರಿ ಮಾಲಕರು ಹಾಗೂ ಗಣಿ ಉದ್ಯಮ ನಡೆಸುವವರು ಕ್ವಾರಿಗಳಲ್ಲಿನ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.  ಹಾಗೂ ಕಾರ್ಮಿಕರಿಗೆ ನಿಯಮಿತವಾಗಿ  ಆರೋಗ್ಯ ತಪಾಸಣೆಯನ್ನು ಕಡ್ಡಾಯ ಮಾಡಿಸಬೇಕು.  ಕ್ವಾರಿಗಳಲ್ಲಿ ಫಾಗಿಂಗ್ ಮಾಡಿಸಬೇಕು.  ಕ್ವಾರಿಗಳಲ್ಲಿ ನೀರು ನಿಂತು, ಸೊಳ್ಳೆಗಳ ಉತ್ಪತ್ತಿ ತಾಣಗಳಾತ್ತಿವೆ.  ಮಲೇರಿಯಾ, ಚಿಕುನ್‍ಗುನ್ಯಾ, ಶಂಕಿತ ಡೆಂಗ್ಯು ಪ್ರಕರಣಗಳು ಹೆಚ್ಚಾಗಿ ಇಂತಹ ಪ್ರದೇಶಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿವೆ.  ಪ್ರಮುಖವಾಗಿ ಕುಷ್ಟಗಿ ತಾಲೂಕಿನಲ್ಲಿ ಮಲೇರಿಯಾ ಜ್ವರದ ಪ್ರಕರಣಗಳು ಹೆಚ್ಚು ಕಂಡುಬಂದಿದ್ದು,  ಆ ಭಾಗದ ಕ್ವಾರಿ ಮಾಲಿಕರು ಹೆಚ್ಚು ನಿಗಾವಹಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.  ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಗಳೊಂದಿಗೆ ಸಮನ್ವಯತೆಯಿಂದ ಸಹಕರಿಸಬೇಕು ಎಂದು ಸೂಚಿಸಿದರು.
     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ 238207 ರಕ್ತ ಪರೀಕ್ಷೆ ಮಾಡಿದ್ದು, ಈ ಪೈಕಿ 318 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಕುಷ್ಟಗಿ ತಾಲೂಕಿನಲ್ಲಿಯೇ 235 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈ ವರ್ಷ 17 ಸಂಶಯಾತ್ಮಕ ಮತ್ತು 05 ಖಚಿತ ಚಿಕುನ್‍ಗುನ್ಯಾ ಪ್ರಕರಣಗಳು.  133 ಸಂಶಯಾತ್ಮಕ ಮತ್ತು 26 ಖಚಿತ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.  ಕುಷ್ಟಗಿ ತಾಲೂಕಿನಲ್ಲಿ ಹೆಚ್ಚು ಕ್ವಾರಿಗಳಿರುವುದರಿಂದ ನೀರು ನಿಲ್ಲುವುದು ಸಾಮಾನ್ಯವಾಗಿದ್ದು, ರೋಗ ಹರಡುವಿಕೆಗೆ ಪ್ರಮುಖ ಕಾರಣವಾಗಿದೆ.  ಆದ್ದರಿಂದ ಕ್ವಾರಿ ಮಾಲೀಕರು ತಮ್ಮ ಕ್ವಾರಿಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ ಆರೋಗ್ಯ ಇಲಾಖೆಗೆ ಸಹಕರಿಸಬೇಕು ಎಂದರು.
ಜಿಲ್ಲಾ ಕೀಟಜನ್ಯ ರೋಗಗಳ ಸಲಹೆಗಾರ ರಮೇಶ್ ಕೆ, ಅವರು ಮಾತನಾಡಿ, ವಿಶ್ವದಾದ್ಯಂತ ಮಲೇರಿಯಾ ಮುಕ್ತ ರಾಷ್ಟ್ರವನ್ನಾಗಿಸುವ ಆಂದೋಲನ ಪ್ರಾರಂಭವಾಗಿದ್ದು, ದೇಶ ಹಾಗೂ ರಾಜ್ಯದಲ್ಲಿಯೂ ಮಲೇರಿಯಾ ತಡೆಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ.  ಕೊಪ್ಪಳ ಜಿಲ್ಲೆ ಒಂದು ಹೆಜ್ಜೆ ಮುಂದೆ ಇದ್ದು ಮಲೇರಿಯಾ ನಿರ್ಮೂಲನೆಗೆ ಅನೇಕ ಕ್ರಮಗಳನ್ನು ಕೈಗೊಂಡಿದೆ. 2020 ರೊಳಗಾಗಿ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಾಗಿದೆ ಎಂದರು. ಕ್ವಾರಿಗಳಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ, ನಿಂತ ನೀರಿದ್ದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಜೈವಿಕ ವಿಧಾನದಲ್ಲಿ ಸೊಳ್ಳೆಗಳ ನಿಯಂತ್ರಣ ಸಾಧ್ಯವಿದ್ದು, ಗಂಬೂಸಿಯಾ ಮತ್ತು ಗಪ್ಪಿ ಮೀನುಗಳನ್ನು ಕ್ವಾರಿಯಲ್ಲಿ ನಿಂತ ನೀರಿನಲ್ಲಿ ಬಿಟ್ಟಲ್ಲಿ, ಸೊಳ್ಳೆಗಳ ಲಾರ್ವಗಳು ನಿರ್ಮೂಲನೆಯಾಗಲಿವೆ.   ಆದ್ದರಿಂದ ಕ್ವಾರಿ ಮಾಲಿಕರು ತಮ್ಮ ತಮ್ಮ ಕ್ವಾರಿಗಳಲ್ಲಿ ಎಲ್ಲೆಲ್ಲಿ ನೀರು ನಿಲ್ಲುತ್ತವೆ ಎಂಬುದನ್ನು ಇಲಾಖೆಗೆ ಮಾಹಿತಿ ನೀಡಿದಲ್ಲಿ, ಮೀನುಗಳನ್ನು ಬಿಡಲು ಇಲಾಖೆ ಕ್ರಮ ಕೈಗೊಳ್ಳಲಿದೆ. ಚಾಲನೆಯಲ್ಲಿ ಇರದ ಕ್ವಾರಿಮಾಲಿಕರು ಕೂಡ ಇಲಾಖೆಗೆ ಮಾಹಿತಿ ನೀಡಿ ಸೊಳ್ಳೆಗಳ ನಿಯಂತ್ರಣಕ್ಕೆ ಸಹಕರಿಸಬೇಕು. ಕಾರ್ಮಿಕರ ಆರೋಗ್ಯ ತಪಾಸಣೆಗೆ ತಮ್ಮ ಕ್ವಾರಿಯಲ್ಲಿಯೇ ರಕ್ತ  ಪರೀಕ್ಷೆ ಮಾಡಿಸಲು ಒಬ್ಬರನ್ನು ನೇಮಿಸಬಹುದು ತಪಾಸಣೆಗೆ ಇಲಾಖೆಯಿಂದ ತರಬೇತಿ ನೀಡಲಾಗುವುದು.  ಕಾರ್ಮಿಕರಲ್ಲಿ ಜ್ವರ ಕಾಣಿಸಿಕೊಂಡರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಲಭ್ಯವಿದ್ದು ಜ್ವರ ಪೀಡಿತರನ್ನು ಅಲ್ಲಿಗೆ ಕರೆತರಬೇಕು. ಖಾಸಗಿ ಆಸ್ಪತ್ರಗಳಲ್ಲಿ ಮಲೇರಿಯಾ ಜ್ವರಕ್ಕೆ ತಾತ್ಕಾಲಿಕ ಚಿಕಿತ್ಸೆ ಮಾತ್ರ ಸಿಗಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಲೇರಿಯಾ ಜ್ವರಕ್ಕೆ ಸೂಕ್ತ ಚಿಕಿತ್ಸೆ ಸಿಗಲಿದೆ. ಆದ್ದರಿಂದ ಕ್ವಾರಿ ಮಾಲಿಕರುಗಳು ಮಲೇರಿಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
  ಡಾ. ವಿರುಪಾಕ್ಷರೆಡ್ಡಿ, ಡಾ. ಗೌರಿಶಂಕರ್, ಡಾ. ಪ್ರಕಾಶ್, ಡಾ.ಎಸ್‍ಕೆ. ದೇಸಾಯಿ, ಆನಂದ ಗೋಟೂರ, ಡಾ.ಎಂ.ಎಂ. ಕಟ್ಟಿಮನಿ ಹಾಗೂ ಜಿಲ್ಲೆಯ ಕ್ವಾರಿ ಮಾಲಿಕರು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Post a Comment