Saturday, 1 October 2016

ಹಿರಿಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕøತಿ : ವಿಜಯಲಕ್ಷ್ಮಿ ಉಪನಾಳ


ಕೊಪ್ಪಳ, ಅ.01 (ಕರ್ನಾಟಕ ವಾರ್ತೆ) : ಪ್ರಸ್ತುತ ದಿನಮಾನಗಳಲ್ಲಿ ಹಿರಿಯ ನಾಗರೀಕರನ್ನು ಕಡೆಗಣಿಸಲಾಗುತ್ತಿದೆ.  ಹಿರಿಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕøತಿಯಾಗಿದ್ದು, ಇದು ನಮ್ಮ ನಮ್ಮ ಮನೆಗಳಿಂದಲೇ ಪ್ರಾರಂಭವಾಗಬೇಕು ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಎಸ್ ಉಪನಾಳ ಅವರು ಅಭಿಪ್ರಾಯಪಟ್ಟರು.

     ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾ ನಿರತ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ವೃದ್ಧಾಪ್ಯವೆಂಬುದು ಶಾಪವಲ್ಲ, ಬಾಲ್ಯ, ಯೌವ್ವನದಂತೆಯೇ ಅದೂ ಕೂಡ ಬದುಕಿನ ಘಟ್ಟ.  ಹಿರಿಯ ನಾಗರೀಕರ ಜೀವನದ ಬಹುಕಾಲದ ಅನುಭವವನ್ನು ಕಿರಿಯರು ಪಡೆದುಕೊಳ್ಳಬೇಕು.  ವಿಭಕ್ತ ಕುಟುಂಬ ವ್ಯವಸ್ಥೆಗಳಿಂದಾಗಿ ಹಿರಿಯ ನಾಗರೀಕರ ಬದುಕು ಸಮಸ್ಯೆಗೊಳಗಾಗಿದೆ.  ಅವರಿಗೆ ದೊರಕಬೇಕಾದ ಗೌರವ, ಪ್ರೀತಿ ಸಿಗುತ್ತಿಲ್ಲ.  ಪತಿ-ಪತ್ನಿಯರಿಬ್ಬರಿಗೂ ಹಿರಿಯರು ಭಾರವೆನಿಸುತ್ತಿದ್ದಾರೆ.  ಸರ್ಕಾರ ಹಿರಿಯ ನಾಗರೀಕರನ್ನು ಸಬಲೀಕರಣಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿದ್ದು, ವೃದ್ಧಾಶ್ರಮ, ಸಾರಿಗೆಯಲ್ಲಿ ರಿಯಾಯಿತಿ, ಮಾಶಾಸನ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ. ಅಲ್ಲದೆ ಕೇಂದ್ರ ಸರ್ಕಾರವು ನಿಸ್ಸಹಾಯಕ ಹಿರಿಯ ನಾಗರೀಕರಿಗೆ ಕಾನೂನಿನ ವ್ಯಾಪ್ತಿಯಲ್ಲಿ ನ್ಯಾಯ ಒದಗಿಸಲು 2007 ರಲ್ಲಿ ಹಿರಿಯ ನಾಗರೀಕರ ರಕ್ಷಣಾ ಕಾಯ್ದೆ ಅಧಿನಿಯಮವನ್ನು ಜಾರಿಗೆ ತಂದಿದೆ.  ಹಿರಿಯ ನಾಗರೀಕರು ಕಾನೂನಿನ ನೆರವು ಸೌಲಭ್ಯ ಪಡೆದುಕೊಳ್ಳಬೇಕು.  ಹಿರಿಯರಿಗೆ ಗೌರವ ಕೊಡುವ ಪ್ರಕ್ರಿಯೆ ನಮ್ಮ ಮನೆಗಳಿಂದಲೇ ಮೊದಲಾಗಬೇಕು.  ಹಾಗಾದಾಗ ಮಾತ್ರ ಹಿರಿಯ ನಾಗರೀಕರ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಎಸ್ ಉಪನಾಳ ಅವರು ಹೇಳಿದರು.

     ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ವಿ.ಎಂ. ಭೂಸನೂರಮಠ ಅವರು, ಹಿಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಹಾಗೂ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಸಮಾಜದಲ್ಲಿ ಇಂದು ಬಹಳಷ್ಟು ವಿಭಕ್ತ ಕುಟುಂಬಗಳಿರುವುದರಿಂದ ಮಾನವೀಯ ಮೌಲ್ಯ, ಅನುಕಂಪ ಕಡಿಮೆಯಾಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸಹಾಯಕರಾದ ತಂದೆ ತಾಯಿಗಳು ಇಂದು ಆತಂಕದಲ್ಲಿ ದಿನ ದೂಡುವಂತಾಗಿದೆ. ಅವರಿಗೆ ತಮ್ಮ ಮಕ್ಕಳಿಂದ ಮನೆಯಲ್ಲಿ ದೊರಕುತ್ತಿದ್ದ ಗೌರವ, ಪ್ರೀತಿ, ಆದರ, ಆಹಾರ, ವಸತಿ ಇತ್ಯಾದಿ ಮೂಲಭೂತ ಸೌಕರ್ಯಗಳು ಕಡಿಮೆಯಾಗುತ್ತಿವೆ. ಇದರಿಂದ ಸಾಕಷ್ಟು ನೋವನುಭವಿಸುವ ಆ ಹಿರಿ ಜೀವಗಳು ಮನೆ ತೊರೆದು, ವೃದ್ಧಾಶ್ರಮ ಸೇರುತ್ತಿವೆ. ಸಾಮಾಜಿಕ ವ್ಯವಸ್ಥೆ ಬುಡಮೇಲಾಗಿರುವುದರಿಂದ ಇಂದು ಹಿರಿಯರಿಗೆ ರಕ್ಷಣೆ ಇಲ್ಲವಾಗಿದೆ. ಮಕ್ಕಳನ್ನು ಹೆತ್ತು, ಹೊತ್ತು, ಬೆಳೆಸಿ, ದೊಡ್ಡವರನ್ನಾಗಿ ಮಾಡಿದ ಹಿರಿಯ ನಾಗರೀಕರನ್ನು ಅಲಕ್ಷಿಸುವುದು, ಹಿಂಸಿಸುವುದು, ಪೀಡಿಸುವುದು ಅಮಾನವೀಯವಾಗಿದೆ. ಕೆಲವೊಂದು ಸಂದರ್ಭದಲ್ಲಿ ತಮ್ಮ ಪೋಷಕರ ಅಂತ್ಯ ಸಂಸ್ಕಾರಕ್ಕೂ ಮಕ್ಕಳು ಬಾರದಿರುವುದು ಇಂದಿನ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಮುಪ್ಪು ನಿಶ್ಚಿತವಾಗಿದ್ದು, ತಾರುಣ್ಯದಲ್ಲಿರುವ ಇಂದಿನ ಮಕ್ಕಳು ಬಡತನವಿರಲಿ, ಸಿರಿತನವಿರಲಿ ಜನ್ಮ ಕೊಟ್ಟಂತಹ ತಮ್ಮ ತಂದೆ ತಾಯಿಯನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಬೇಕು.  ತಮ್ಮ ಶಾರೀರಿಕ ಹಾಗೂ ಮಾನಸಿಕ ಮೌಲ್ಯಗಳ ರಕ್ಷಣೆಗಾಗಿ ವೃದ್ಧಾಶ್ರಮಗಳನ್ನು ಸೇರುತ್ತಿರುವುದು ಹೆಚ್ಚಾಗುತ್ತಿದೆ. ಇದು ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಲು ಕಾರಣಾವಾಗಿದ್ದು, ಸಾಮಾಜಿಕ ದೃಷ್ಠಿಯಿಂದ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು  ವಿ.ಎಂ. ಭೂಸನೂರಮಠ ಅಭಿಪ್ರಾಯಪಟ್ಟರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಗದೀಶ್ ಅವರು, ಇಲಾಖೆ ವತಿಯಿಂದ ಪ್ರಸ್ತುತ ಸಾಲಿನಲ್ಲಿ ಹಿರಿಯ ನಾಗರಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಜನಸಂಖ್ಯೆಯ ಶೇಕಡಾ 7 ರಷ್ಟು ಹಿರಿಯ ನಾಗರಿಕರಿರುವುದಾಗಿ ಅಂದಾಜಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 97,294 ಹಿರಿಯ ನಾಗರಿಕರಿದ್ದಾರೆ. ಇಲಾಖೆಯಿಂದ ಇದುವರೆಗೂ 33,649 ಹಿರಿಯ ನಾಗರಿಕರಿಗೆ ಗುರುತಿನ ಚೀಟಿಗಳನ್ನು ಸ್ವಯ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದಲ್ಲಿ ಕುಕನೂರಿನ ವಿದ್ಯಾನಂದ ಗುರುಕುಲ ವೃದ್ಧಾಶ್ರಮ ಹಾಗೂ ಭಾಗ್ಯನಗರದ ಮೈತ್ರಿ ವೃದ್ಧಾಶ್ರಮ ಎಂಬ ಎರಡು ವೃದ್ಧಾಶ್ರಮಗಳನ್ನು ನಡೆಸಲಾಗುತ್ತಿದ್ದು, ಸುಮಾರು 50 ಜನ ವೃದ್ಧರು ಇದರ ಸದುಪಯೋಗ ಪಡೆಯುತ್ತಿದ್ದಾರೆ.  ಅಲ್ಲದೇ ಹಿರಿಯ ನಾಗರೀಕರಿಗೆ ಬಸ್ ಪ್ರಯಾಣ ದರದಲ್ಲಿ ಶೇಕಡಾ 25 ರಷ್ಟು ರಿಯಾಯಿತಿ ಸೌಲಭ್ಯ ನೀಡಲಾಗಿದೆ. ಜಿಲ್ಲೆಯಲ್ಲಿ 75,605 ಜನರು ಸರ್ಕಾರದ ವಿವಿಧ ಯೋಜನೆಯಡಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ. ಹಿರಿಯ ನಾಗರೀಕರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲು ಜಿಲ್ಲೆಯಲ್ಲಿ 2014ನೇ ಆಗಸ್ಟ್ ತಿಂಗಳಿನಿಂದ 1090 ಟೋಲ್ ಫ್ರೀ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
     ಹಿರಿಯ ನಾಗರೀಕರಾದ ಚಂದ್ರಾಮಪ್ಪ ಕಣಕಾಲ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ, ಜೆಎಂಎಫ್‍ಸಿ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಉಪಸ್ಥಿತರಿದ್ದರು.  ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ ಹಿರಿಯ ನಾಗರೀಕರನ್ನು ಹಾಗೂ  ಸನ್ಮಾನಿಸಲಾಯಿತು.   ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾ ನಿರತ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹಿರಿಯ ನಾಗರಿಕರು ಉಪಸ್ಥಿತರಿದ್ದರು. 
 
Post a Comment