Monday, 17 October 2016

ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ- ಬಸವರಾಜ ರಾಯರಡ್ಡಿ


ಕೊಪ್ಪಳ ಅ. 17 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ, ಪರಿಹಾರ ಒದಗಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾದ ಜಿ.ಪಂ. ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಸಮರ್ಪಕ ಮಳೆ ಬಾರದ ಹಿನ್ನೆಲೆಯಲ್ಲಿ ಅಂತರ್ಜಲ ಕುಸಿತಗೊಂಡಿದೆ.  ಅಲ್ಲದೆ ಈ ಬಾರಿಯ ಮುಂಗಾರು ಮಳೆಯೂ ಕೊರತೆಯಾಗಿರುವುದರಿಂದ, ಶೀಘ್ರದಲ್ಲೇ ಕೆಲವೆಡೆ ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಸಾಧ್ಯತೆಗಳಿವೆ.  ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆ ಎದುರಿಸುವ ಸಮಸ್ಯಾತ್ಮಕ ಗ್ರಾಮಗಳಿಗೆ ಉನ್ನತ ಅಧಿಕಾರಿಗಳು ಖುದ್ದು ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಬೇಕು.  ಅಲ್ಲದೆ ಕುಡಿಯುವ ನೀರಿನ ತೊಂದರೆ ನಿವಾರಿಸಲು ಪರಿಹಾರ ಕಂಡುಕೊಂಡು, ಅನುಷ್ಠಾನಕ್ಕೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಕುಷ್ಟಗಿ ತಾಲೂಕಿನಲ್ಲಿ ಈಗಾಗಲೆ ಹಲವೆಡೆ ಕುಡಿಯುವ ನೀರಿನ ತೊಂದರೆ ಕಂಡುಬಂದಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನರಿಗೆ ಕುಡಿಯುವ ನೀರು ಒದಗಿಸಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸಚಿವರ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಂತಹ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ, ಸಮಸ್ಯೆ ಪರಿಹರಿಸಲು ಕೂಡಲೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರಿಗೆ ಸೂಚನೆ ನೀಡಿದರು.
ಕೊಪ್ಪಳ, ಕುಷ್ಟಗಿ ಬರ ಪೀಡಿತ : ಜಿಲ್ಲೆಯಲ್ಲಿ ಗಂಗಾವತಿ ಮತ್ತು ಯಲಬುರ್ಗಾ ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಈಗಾಗಲೆ ಸರ್ಕಾರ ಘೋಷಿಸಿದೆ.  ಸರ್ಕಾರದ ನಿಯಮ ಮತ್ತು ಮಾರ್ಗಸೂಚಿಯಂತೆ, ಇದೀಗ ಕೊಪ್ಪಳ ಮತ್ತು ಕುಷ್ಟಗಿ ತಾಲೂಕುಗಳನ್ನು ಕೂಡ ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.  ಜಿಲ್ಲಾಧಿಕಾರಿಗಳ ವರದಿಯ ಆಧಾರದಲ್ಲಿ, ಬರ ಪೀಡಿತ ಪ್ರದೇಶಗಳ ಪಟ್ಟಿಗೆ ಸದ್ಯದಲ್ಲೇ ಕೊಪ್ಪಳ ಮತ್ತು ಕುಷ್ಟಗಿ ತಾಲೂಕುಗಳೂ ಕೂಡ ಸೇರ್ಪಡೆಯಾಗಲಿವೆ.  ಇದರಿಂದಾಗಿ ಇಡೀ ಜಿಲ್ಲೆ ಬರ ಪೀಡಿತ ಪ್ರದೇಶವಾಗಿ ಘೋಷಣೆಯಾಗಲಿದೆ.  ಅಲ್ಲದೆ ಬರ ಪರಿಹಾರ ಕಾರ್ಯಗಳಿಗೆ ಸರ್ಕಾರ ಒತ್ತು ನೀಡಲಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ನಿರಂತರ ಜ್ಯೋತಿ ವ್ಯಾಪ್ತಿಗೆ ಸೇರಿಸಿ : ಇದುವರೆಗೂ ನಿರಂತರ ಜ್ಯೋತಿ ವ್ಯಾಪ್ತಿಯಲ್ಲಿ ಇಲ್ಲದ, ಜಿಲ್ಲೆಯಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ನಿರಂತರ ಜ್ಯೋತಿ ವ್ಯಾಪ್ತಿಗೆ ಸೇರಿಸಬೇಕು.  ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಯಾವುದೇ ಅಡೆತಡೆ ಇಲ್ಲದೆ ವಿದ್ಯುತ್ ಸಂಪರ್ಕ ಲಭ್ಯವಾಗಬೇಕು.  ಇಲ್ಲದಿದ್ದಲ್ಲಿ, ಬೇಸಿಗೆಯಲ್ಲಿ ತೀವ್ರ ತೊಂದರೆ ಎದುರಾಗುವ ಸಾಧ್ಯತೆಗಳಿವೆ.  ಆದ್ದರಿಂದ, ಇದುವರೆಗೂ ನಿರಂತರ ಜ್ಯೋತಿ ವ್ಯಾಪ್ತಿಯಲ್ಲಿ ಇಲ್ಲದ ಯೋಜನೆಗಳ ಸಮಗ್ರ ವರದಿ ತಯಾರಿಸಿ, ಇದಕ್ಕೆ ಅಗತ್ಯವಿರುವ ಅನುದಾನದ ಬಗ್ಗೆ ಪ್ರಸ್ತಾವನೆಯನ್ನು ಒದಗಿಸಿದಲ್ಲಿ, ಅನುದಾನ ಬಿಡುಗಡೆಗೆ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆಹಾನಿ ವರದಿ ಸಮರ್ಪಕವಾಗಿರಲಿ : ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ 2. 52 ಲಕ್ಷ ಹೆ. ಪ್ರದೇಶದ ಪೈಕಿ, ಸಕಾಲಿಕ ಮಳೆಯ ಕೊರತೆಯಿಂದಾಗಿ, ಈಗಾಗಲೆ 1. 49 ಲಕ್ಷ ಹೆ. ಬೆಳೆ ಹಾನಿಗೆ ಒಳಗಾಗಿದೆ.  ಹಿಂಗಾರು ಹಂಗಾಮಿಗೆ ಕಡಲೆ ಬೆಳೆ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ.  ಜಿಲ್ಲೆಯಲ್ಲಿ ಸದ್ಯ 350 ಕ್ವಿಂ. ಕಡಲೆ ಬಿತ್ತನೆ ಬೀಜ ದಾಸ್ತಾನಿದೆ.  ನವೆಂಬರ್ ಮೊದಲ ವಾರದಲ್ಲಿ ಮಳೆ ಬಿದ್ದರೂ, ರೈತರಿಗೆ ಅನುಕೂಲವಾಗಲಿದೆ.  ಹಿಂಗಾರು ಬೆಳೆ ಹಾನಿ ಸಮೀಕ್ಷೆಯನ್ನು ಈಗಾಗಲೆ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಅ. 31 ರ ಒಳಗಾಗಿ ಜಿಲ್ಲೆಯಲ್ಲಿನ ಬೆಳೆ ಹಾನಿ ಕುರಿತ ಸಮಗ್ರ ವರದಿ ಸಿದ್ಧವಾಗಲಿದೆ.  ಸರ್ವೆ ನಂ. ವಾರು, ಫಲಾನುಭವಿವಾರು, ಅಲ್ಲದೆ ಫಲಾನುಭವಿಗಳ ಬ್ಯಾಂಕ್ ಖಾತೆ ಸಂಖ್ಯೆ, ಜಮೀನಿನ ವಿಸ್ತೀರ್ಣ ಹೀಗೆ ಸಮಗ್ರ ವರದಿಯನ್ನು ಗಣಕೀಕರಣಗೊಳಿಸಿ ಸಲ್ಲಿಸಲಾಗುವುದು ಎಂದು ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅವರು ಸಭೆಗೆ ವಿವರಿಸಿದರು.  ಸಮೀಕ್ಷೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು, ಅಲ್ಲದೆ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮುನ್ನ, ಆಯಾ ಶಾಸಕರುಗಳ ಗಮನಕ್ಕೆ ತರಬೇಕು.  ಅರ್ಹ ಫಲಾನುಭವಿಯ ಹೆಸರು ಪಟ್ಟಿಯಲ್ಲಿ ಬಿಟ್ಟುಹೋಗಿದ್ದಲ್ಲಿ, ಅಂತಹವುಗಳನ್ನು ಸೇರಿಸಿ, ಕಳುಹಿಸಲು ಇದರಿಂದ ಅನುಕೂಲವಾಗಲಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಂಗಾಕಲ್ಯಾಣಕ್ಕೆ 3 ತಿಂಗಳೊಳಗೆ ವಿದ್ಯುತ್ ಒದಗಿಸಿ : ಜಿಲ್ಲೆಯಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಗಳಡಿ ಬಡವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆಯಿಸಲಾಗಿದೆ.  ಆದರೂ ಇನ್ನೂ ಹಲವಾರು ಫಲಾನುಭವಿಗಳ ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿ ಇದೆ ಎಂದು ಆಯಾ ನಿಗಮಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜೆಸ್ಕಾಂ ಕಾರ್ಯಪಾಲಕ ಅಭಿಯಂತರರು, ಗಂಗಾ ಕಲ್ಯಾಣ ಯೋಜನೆಗಳಲ್ಲಿ ಇದುವರೆಗೆ ಒಟ್ಟು 362 ಫಲಾನುಭವಿಗಳ ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿ ಇದೆ ಎಂದು ತಿಳಿಸಿದರು.  ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, 03 ತಿಂಗಳ ಒಳಗಾಗಿ ಎಲ್ಲ ಫಲಾನುಭವಿಗಳ ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಾಲಮಿತಿಯನ್ನು ನಿಗದಿಪಡಿಸಿ, ಪೂರ್ಣಗೊಳಿಸಬೇಕು.  ಮುಂದಿನ ಪ್ರಗತಿ ಪರಿಶೀಲನಾ ಸಭೆಯ ಒಳಗಾಗಿ ಬಾಕಿ ಯಾವುದೇ ಪ್ರಕರಣ ಇರಬಾರದು ಎಂದು ತಾಕೀತು ಮಾಡಿದರು.
      ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಡಾ. ಪ್ರವೀಣಕುಮಾರ್ ಜಿ.ಎಲ್., ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ತಾ.ಪಂ. ಅಧ್ಯಕ್ಷರು, ಜಿ.ಪಂ. ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Post a Comment