Monday, 3 October 2016

ಆಕಾಶವಾಣಿಯಲ್ಲಿ ಭಾಗ್ಯವಾಣಿ: ಕ್ಷೀರಧಾರೆ - ರೈತಮಹಿಳೆಯರ ಆಪತ್ಕಾಲಿನ ಧನ, ಯುವಜನರಿಗೆ ಉದ್ಯೋಗಕ್ಕೆ ಅವಕಾಶ


ಕೊಪ್ಪಳ ಅ. 03 (ಕರ್ನಾಟಕ ವಾರ್ತೆ): ದಿನಬೆಳಗಾದರೆ ಮನೆಗೆ ಬರುವ ಹಾಲು ಕೊಡುವವರೊಂದಿಗೆ ಇದು ನೀರಲ್ಲಿ ಹಾಲೋ, ಹಾಲಲ್ಲಿ ನಿರೋ ಎಂದೋ ಅಥವಾ ಅಂಗಡಿಗೆ ಹೋಗಿ ನಂದಿನಿ ಹಾಲಿನ ಪ್ಯಾಕೆಟ ಕೊಡಿ ಎನ್ನದೇ ದಿನ ಆರಂಭವಾಗುವದಿಲ್ಲ. ಆದರೆ ಹಾಲೋತ್ಪಾದನೆ ಅಷ್ಟು ಸರಳವಾಗಿಯೂ ಇಲ್ಲ. ಹೈನುಗಾರಿಕೆ ರೈತ ಕುಟುಂಬಗಳಿಗೆ ಆರ್ಥಿಕವಾಗಿ ಪ್ರಮುಖ ಆದಾಯದ ಉಪ ಕಸುಬಾಗಿದೆ. ಇವರುಗಳ ಆರ್ಥಿಕ ಉನ್ನತಿಯತ್ತ ದೃಢ ಹೆಜ್ಜೆ ಇಟ್ಟಿರುವ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ಪ್ರತಿ ಲೀ ಹಾಲಿಗೆ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 2 ರಿಂದ 4 ರೂ.ಗೆ ಇಮ್ಮಡಿಗೊಳಿಸಿದರು. ಇದರಿಂದ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಹಾಲಿನ ಉತ್ಪಾದನೆ ಶೇ.14 ರಷ್ಟು ಹೆಚ್ಚಳವಾಗಿದ್ದು ದೇಶಕ್ಕೆ ಹತ್ತನೆ ಸ್ಥಾನದಲ್ಲಿದೆ. 2013-14ರಲ್ಲಿ 7.10 ಲಕ್ಷ ಹೈನುಗಾರರಿಗೆ 735 ಕೋಟಿ ರೂ. ಪೋತ್ಸಾಹ ಧನ ನೀಡಲಾಗಿದೆ. 2015-16 ಇದು 1,015 ಕೋಟಿ ರೂಪಾಯಿಯಾಗಿದ್ದು ಹೈನುಗಾರರ ಸಂಖ್ಯೆ 8.16 ಲಕ್ಷವಾಗಿರುವುದು ಗಮನಾರ್ಹ. ಹಾಲು ಸಂಗ್ರಹಣೆಯಲ್ಲಿ ದೇಶದ ಎರಡನೇ ದೊಡ್ಡ ರಾಜ್ಯವಾಗಿರುವ ಕರ್ನಾಟಕದಲ್ಲಿ ಹೈನುಗಾರರ ವೃತ್ತಿ ಸಮಸ್ಯಗಳ  ಪರಿಹಾರದತ್ತ ಕೂಡಾ ಹೆಚ್ಚಿನ ಗಮನ ನೀಡಿರುವ ರಾಜ್ಯ ಸರ್ಕಾರ, ಜಾನುವಾರುಗಳ ಉತ್ಪಾದನೆ ಹೆಚ್ಚಳಕ್ಕೆ, ಅವುಗಳ ಆರೋಗ್ಯ ಸಂರಕ್ಷಣೆ ಮತ್ತು ಅವುಗಳ ಅಕಾಲಿಕ ನಷ್ಟದಿಂದ ಹೈನುಗಾರರು ಪಾರಾಗಲು ಶೇ.70ರಷ್ಟು ಒಟ್ಟಾರೆ 21.40 ಕೋಟಿ ರೂ ಸಹಾಯಧನ ಒದಗಿಸಿ ರಾಸುಗಳ ಜೀವವಿಮೆ ಸೌಲಭ್ಯ ಒದಗಿಸಿದೆ.
     ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯ ಸರ್ಕಾರದ ಮಹತ್ವದ ಜನಹಿತ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಭಾಗ್ಯವಾಣಿ ಸರಣಿ ಕಾರ್ಯಕ್ರಮದಲ್ಲಿ ಭಾನುವಾರದಂದು ರಾಜ್ಯಾದ್ಯಂತ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಹೈನುಗಾರರಿಗೆ ಆರ್ಥಿಕ ಚೈತನ್ಯ ವೃದ್ಧಿಸುವ ಕ್ಷೀರಧಾರೆ ಯೋಜನೆ ಮಾಹಿತಿ ಪ್ರಸಾರವಾಯಿತು.
     ಪಶುಸಂಗೋಪನೆ ಇಲಾಖೆಯ ಅಪರ ನಿರ್ದೇಶಕ ಡಾ ಆರ್.ಕೆ. ಚೆಲುವಯ್ಯ ಕ್ಷೀರಧಾರೆಯ ಬಗ್ಗೆ ಮಾಹಿತಿ ನೀಡಿದರು.  ರಾಜ್ಯದಲ್ಲಿನ 14 ಹಾಲು ಶೇಖರಣೆ ಒಕ್ಕೂಟ ಸಂಘಟನೆಗಳ ಹಾಲು ಸಹಕಾರಿ ಸಂಘಗಳ ಸದಸ್ಯರಾಗಿರುವ ರೈತರು, ಕೃಷಿಕಾರ್ಮಿಕರು,  ಮಹಿಳೆಯರು ಸಂಘಕ್ಕೆ ಪೂರೈಸುವ ಪ್ರತಿ ಲೀ.ಹಾಲಿಗೆ 4 ರೂ ಹೆಚ್ಚುವರಿ ಪ್ರೋತ್ಸಾಹ ಧನವನ್ನು ಎರಡು-ಮೂರು ತಿಂಗಳ ಒಟ್ಟಾರೆ ಹಣವನ್ನು ಅವರ ಬ್ಯಾಂಕ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಪ್ರತಿ ಲೀ. ಹಾಲಿನ ಉತ್ಪಾದನೆ ವೆಚ್ಚ 22 ರೂ. ಆಗಿದ್ದು ಸಂಘಗಳು 23 ರೂ. ದರದಲ್ಲಿ ಖರೀದಿಸುತ್ತವೆ. ಆ ಹಿನ್ನೆಲೆಯಲ್ಲಿ 2007 ರಲ್ಲಿ 2 ರೂ. ಇದ್ದ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 2013 ರಿಂದ 4 ರೂ.ಗಳಾಗಿರುವುದು, ಹೈನುಗಾರರ ಲಾಭ ಹೆಚ್ಚಳವಾಗಿದ್ದಲ್ಲದೇ, ಹೆಚ್ಚು ಜನ ಹೈನುಗಾರಿಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಇದರ ಜೊತೆಗೆ ಪಶುಭಾಗ್ಯ ಯೋಜನೆಯಡಿ ಪರಿಶಿಷ್ಟರಿಗೆ ಶೇ 60 ಹಾಗೂ ಇತರರಿಗೆ ಶೇ. 25 ರ ಸಹಾಯಧನದಲ್ಲಿ ಹಾಲು ನೀಡುವ ರಾಸುಗಳ ಖರೀದಿಗೆ ರಾಜ್ಯ ಸರ್ಕಾರ ಅನುಕೂಲ ಕಲ್ಪಿಸಿದೆ ಎಂದರು.  ಅವರ ಅಭಿಪ್ರಾಯಕ್ಕೆ ಕ್ಷೀರಧಾರೆ ಯೋಜನೆಯಿಂದ ಹಾಲು ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಉಳಿತಾಯದ ಮೊತ್ತ ಕಾಣುತ್ತಿರುವ ಮಂಡ್ಯ ಜಿಲ್ಲೆ ಕೆ.ಆರ್.ಪೇಟ ಕೆಂಚಳ್ಳಿಯ ಲಕ್ಷ್ಮೀ ದೇವಮ್ಮ ಮೈಸೂರು ತಾಲೂಕಿನ ಲಕ್ಷ್ಮೀಪುರದ ಎಲ್.ಎಚ್.ವೆಂಕಟೇಶ ಅವರ ಕೃತಜ್ಞತಾ ನುಡಿಗಳೇ ಸಾಕ್ಷಿ.
     ಭಾಗ್ಯವಾಣಿಯ  ಹಟ್ಟಿ ಹರಟೆಯಲ್ಲಿ ರಾಜ್ಯದ ದಕ್ಷಿಣ ಭಾಗದ ರೈತರಿಗೆ ಈಗಿನ ಅನಾವೃಷ್ಟಿ ಹಿನ್ನಲೆಯಲ್ಲಿ ಕೆ.ಎಮ್.ಎಫ್. ಪ್ರತಿ ಲೀ.ಗೆ ಇನ್ನೂ ಒಂದು ರೂ, ಹೆಚ್ಚುವರಿ ಪ್ರೋತ್ಸಾಹಧನ ನೀಡುವ, ಹೆಣ್ಣುಮಕ್ಕಳು ಪಶುಭಾಗ್ಯ ಮತ್ತು ಕ್ಷೀರಧಾರೆ ಯೋಜನೆಗಳ ಮೂಲಕ ಆರ್ಥಿಕವಾಗಿ ಸಬಲರಾಗುವ ಅವಕಾಶ ಕುರಿತು, ದೇಶದ ಪ್ರತಿಷ್ಠಿತ ಅಮುಲ್ ಸಂಸ್ಥೆ ಸ್ಥಾಪನೆಯಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿ ವಹಿಸಿದ ಪಾತ್ರ ಮತ್ತು  ಮಹಾತ್ಮಾ ಗಾಂಧೀಜಿ ಜನ್ಮದಿನಾಚರಣೆ ಹಬ್ಬವಾಗಿ ಹಟ್ಟಿಗಳಲ್ಲಿ ಆಚರಿಸುತ್ತಿರುವ ಮಾಹಿತಿ ಇತ್ತು.  ರೈತರಿಗೆ ಹಾಲೆಂದರೆ ಹರಿವ ಗಂಗೆ, ಕರೆವ ತುಂಗೆ, ಹಾಲಿನಿಂದ ಹೊಸ ಬಾಳಿನ ಸೃಷ್ಟಿಯಾಗಿ ಬದುಕು ಕಟ್ಟಲು ಸಾಧ್ಯವಾಗಿದೆ... ಎನ್ನುವ ಕಪಿ¯ ಶ್ರೀಧರ ರವರ ಹಾಡು ಕಾರ್ಯಕ್ರಮದ ಆಸಕ್ತಿ ಹೆಚ್ಚಿಸಿದವು.  ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ್‍ಮೂರ್ತಿ ನಿರ್ಮಿಸಿ ಜಯಣ್ಣನ ಪಾತ್ರ ನಿರ್ವಹಿಸಿದರು.
       ಭಾಗ್ಯವಾಣಿಯಲ್ಲಿ ಬರುವ ಭಾನುವಾರ ಅಕ್ಟೋಬರ್ 9 ರಂದು ರಾತ್ರಿ 7 ರಿಂದ 7-30 ಗಂಟೆಯವರೆಗೆ ಓದುವ ಕನಸಿಗೆ ನೆರವು ನೀಡುವ ‘ವಿದ್ಯಾಸಿರಿ’ ಕುರಿತು ಮಾಹಿತಿ ಪ್ರಸಾರವಾಗಲಿದೆ.
Post a Comment