Saturday, 1 October 2016

ಕೊಪ್ಪಳ : ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸಚಿವ ಬಸವರಾಜ ರಾಯರಡ್ಡಿ ಸೂಚನೆ


ಕೊಪ್ಪಳ ಅ. 01 (ಕರ್ನಾಟಕ ವಾರ್ತೆ): ಕೊಪ್ಪಳ ನಗರದ ಪ್ರಮುಖ ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದಂತೆ ತ್ಯಾಜ್ಯ ಪ್ಲಾಸ್ಟಿಕ್ ಮತ್ತು ಕಸ ತುಂಬಿಕೊಂಡಿದೆ.  ಅಲ್ಲದೆ ಅಲ್ಲಲ್ಲಿ ಒತ್ತುವರಿಯಾಗಿರುವುದು ಕಂಡುಬಂದಿದ್ದು, ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ನಗರಸಭೆ ಕೂಡಲೆ ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಸೂಚನೆ ನೀಡಿದರು.
 
     ಸೆ. 30 ರಂದು ಕೊಪ್ಪಳ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಶನಿವಾರದಂದು ಭೇಟಿ ನೀಡಿ, ಪರಿಶೀಲನೆ ನಡೆಸಿ, ನಂತರ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
 
     ನಗರದಲ್ಲಿ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಯಿಂದಾಗಿ ಕೊಪ್ಪಳ ನಗರದ ಕೆಲವು ಪ್ರದೇಶಗಳು ಜಲಾವೃತಗೊಂಡು, ಸಾರ್ವಜನಿಕರ ಮನೆ ಹಾಗೂ ವ್ಯಾಪಾರಿ ಮಳಿಗೆಗಳಿಗೆ ಮಳೆ ನೀರು ನುಗ್ಗಿದ್ದರಿಂದ, ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾದರು.  ಕೊಪ್ಪಳ ನಗರದ ಕಾಳಿದಾಸ ನಗರ, ಕುವೆಂಪು ನಗರ, ನಿರ್ಮಿತಿ ಕೇಂದ್ರ ಪ್ರದೇಶ, ಸೈಲಾನ್‍ಪುರ, ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಅಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಚರಂಡಿಗಳನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದರು.  ಕೆಲವು ಪ್ರದೇಶಗಳಲ್ಲಿ ಚರಂಡಿಗಳ ಮೇಲೆ ಶೌಚಾಲಯ ಹಾಗೂ ಇತರೆ ಕಟ್ಟಡ ಕಾರ್ಯಗಳಿಗೆ ಒತ್ತುವರಿ ಮಾಡಿರುವುದರಿಂದ, ಮಳೆ ನೀರು ಸರಾಗವಾಗಿ ಹರಿಯದೆ, ರಸ್ತೆಯಲ್ಲಿಯೇ ಹರಿದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನುಗ್ಗಿದೆ.  ಇಂತಹವುಗಳನ್ನು ನಗರಸಭೆಯವರು ಕೂಡಲೆ ತೆರವುಗೊಳಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಸೂಚನೆ ನೀಡಿದರು.  
 
     ಮಳೆಯಿಂದ ಮನೆಗಳು ಹಾನಿಯಾಗಿದ್ದಲ್ಲಿ, ಪ್ರಕೃತಿ ವಿಕೋಪ ಪರಿಹಾರ ಮಾರ್ಗಸೂಚಿಗಳಡಿ ಪರಿಹಾರ ಒದಗಿಸಲಾಗುವುದು.  ಮನೆಗಳನ್ನು ಕಳೆದುಕೊಂಡವರಿಗೆ ಸರ್ಕಾರದ ವಸತಿ ಯೋಜನೆಗಳಡಿ ಮನೆ ಮಂಜೂರಾತಿಗೆ ಆದ್ಯತೆ ನೀಡಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
 
     ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊಪ್ಪಳ ನಗರದಲ್ಲಿ ಶುಕ್ರವಾರದಂದು ಸುಮಾರು 100 ಮಿ.ಮೀ. ನಷ್ಟು ಮಳೆಯಾಗಿದೆ.  ನಗರದಲ್ಲಿ ವಾರ್ಷಿಕ ವಾಡಿಕೆ ಮಳೆ 500 ಮಿ.ಮೀ. ಇದೆ.  ಆದರೆ ಒಂದೇ ದಿನ ಸುಮಾರು 100 ಮಿ.ಮೀ. ನಷ್ಟು ಮಳೆಯಾಗಿರುವುದರಿಂದ, ಸಹಜವಾಗಿ ಪ್ರವಾಹ ಪರಿಸ್ಥಿತಿ ಕಂಡುಬಂದಿದೆ.  ಶೇ. 75 ರಷ್ಟು ಜನವಸತಿ ಪ್ರದೇಶಗಳಲ್ಲಿ ಮಾತ್ರ ಚರಂಡಿ ವ್ಯವಸ್ಥೆ ಇದೆ.  ನಗರಸಭೆಯವರು ಚರಂಡಿಗಳನ್ನು ಮೊದಲು ಸ್ವಚ್ಛಗೊಳಿಸಬೇಕು.  ನಗರದ ಪ್ರಮುಖ ರಾಜಕಾಲುವೆಯಲ್ಲಿ ಕೆಲವರು ಒತ್ತುವರಿ ಮಾಡಿದ್ದರೆ, ಇನ್ನು ಕೆಲವರು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ.  ಈ ಒತ್ತುವರಿಯನ್ನು ತೆರವುಗೊಳಿಸಲೇಬೇಕಾಗಿದೆ.  ಎಷ್ಟೇ ಪ್ರಭಾವಶಾಲಿ ವ್ಯಕ್ತಿಗಳಿದ್ದರೂ, ಒತ್ತುವರಿ ತೆರವುಗೊಳಿಸಲು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ.  ರಾಜಕಾಲುವೆಯನ್ನು ಸ್ವಚ್ಛಗೊಳಿಸಿ, ನವೀಕರಣಗೊಳಿಸಲು 05 ಕೋಟಿ ರೂ.ಗಳಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ.  ರಾಜಕಾಲುವೆ ಸ್ವಚ್ಛಗೊಳಿಸಲು ಹಾಗೂ ಒತ್ತುವರಿ ತೆರವುಗೊಳಿಸಲು ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.  ಕೊಪ್ಪಳ ನಗರದಲ್ಲಿ ಮಾತ್ರ ಹೆಚ್ಚು ಮಳೆಯಾಗಿದ್ದು, ಗ್ರಾಮೀಣ ಭಾಗಕ್ಕೆ ಮಳೆಯಾಗಿಲ್ಲ.  ಮನೆ ಬಿದ್ದಿದ್ದಲ್ಲಿ ಸರ್ಕಾರದಿಂದ ಪರಿಹಾರ ನೀಡಲಾಗುವುದು.  ಮನೆ ಕಳೆದುಕೊಂಡವರಿಗೆ ಹೊಸ ಮನೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು.  ಈ ಕುರಿತು ಸಮೀಕ್ಷಾ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರ ಪ್ರದೇಶದಲ್ಲಿ ರಸ್ತೆಗಳು ಬಹಳಷ್ಟು ಹಾಳಾಗಿವೆ.  ರಸ್ತೆಗಳ ಸುಧಾರಣೆಗೆ ಸುಮಾರು 25 ಕೋಟಿ ರೂ. ಅನುದಾನ ಬೇಕಾಗುತ್ತದೆ.  ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು.  ಕೊಪ್ಪಳ ನಗರದ ಒಳಚರಂಡಿ ಕಾಮಗಾರಿ ನಿಗದಿತ ಕಾಲಮಿತಿಯಲ್ಲಿ ಆಗದಿರುವುದರಿಂದ, ನಗರದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.  ತ್ವರಿತವಾಗಿ ಮುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
 
     ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment