Thursday, 20 October 2016

ಭೂ ಒಡೆತನ ಯೋಜನೆ ಫಲಾನುಭವಿಗಳ ಆಯ್ಕೆ ಪಟ್ಟಿ ಪ್ರಕಟ : ಆಕ್ಷೇಪಣೆ ಆಹ್ವಾನ

ಕೊಪ್ಪಳ, ಅ.20  (ಕರ್ನಾಟಕ ವಾರ್ತೆ): ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತೀಯ ಅಲ್ಪಸಂಖ್ಯಾತ ಭೂ ರಹಿತ ಕೃಷಿ ಕಾರ್ಮಿಕರಿಗೆ ಜಮೀನು ಒದಗಿಸಲು 139 ಫಲಾನುಭವಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಈ ಪಟ್ಟಿ ಕುರಿತು ದೂರು/ಅಹವಾಲುಗಳನ್ನು ಆಹ್ವಾನಿಸಲಾಗಿದೆ.
    ಮತೀಯ ಅಲ್ಪಸಂಖ್ಯಾತ ಭೂ ರಹಿತ ಕೃಷಿ ಕೂಲಿ ಕಾರ್ಮಿಕರಿಗೆ, ತಲಾ ಎರಡು ಎಕರೆ ಖುಷ್ಕಿ ಜಮೀನು ಅಥವಾ ಒಂದು ಎಕರೆ ತರಿ ಜಮೀನು ಒದಗಿಸಲು ಯೋಜನೆಯ ಘಟಕ ವೆಚ್ಚದ ಶೇ.50 ರಷ್ಟು ಸಹಾಯಧನ ಹಾಗೂ ಶೇ.50 ರಷ್ಟು ಮೊತ್ತವನ್ನು ಶೇ.6 ರ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ಭೂಮಿ ಒದಗಿಸಲಾಗುವುದು.
     ಭೂ ಒಡೆತನ ಯೋಜನೆ ಅನುಷ್ಠಾನ ಸಮಿತಿ ಸಭೆಯು ಈಗಾಗಲೇ ಹಲವಾರು ಸಭೆಗಳ ಮೂಲಕ ಭೂ ಮಾಲಿಕರ ಜಮೀನುಗಳನ್ನು ಖರೀದಿಸಲು ನೋಂದಣಿ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯೊಂದಿಗೆ ಚರ್ಚಿಸಿ, ಯೋಜನೆಯನ್ನು ಅನುಷ್ಠಾನಗೊಳಿಸಲು ಕೂಲಂಕಷವಾಗಿ ಪರಿಶೀಲಿಸಿ ಭೂ ಮಾಲಕರಿಂದ ಭೂಮಿ ಖರೀದಿಸಿದೆ.   ಮತೀಯ ಅಲ್ಪಸಂಖ್ಯಾತ ಭೂ ರಹಿತ ಕೃಷಿ ಕೂಲಿ ಕಾರ್ಮಿಕರಿಗೆ ಭೂಮಿ ಒದಗಿಸಲು ಫಲಾನುಭವಿಗಳನ್ನು ಚಿಲವಾಡಗಿ, ನರೆಗಲ್, ಓಜನಹಳ್ಳಿ, ಹುಚ್ಚೀರೇಶ್ವರ ಕ್ಯಾಂಪ್, ಬೆಟಗೇರಿ, ಬಿಸರಹಳ್ಳಿ, ಬೋಚನಹಳ್ಳಿ, ಕಂಪ್ಲಿ-ಅಳವಂಡಿ, ಬೆಳಗಟ್ಟಿ, ಬಹದ್ದೂರಬಂಡಿ, ಮತ್ತೂರು, ಹಂದ್ರಾಳ, ಹಲಗೇರಾ, ಮುದ್ದಾಬಳ್ಳಿ, ಗಿಣಿಗೇರಾ, ಗುಡ್ಲಾನೂರು, ಕಾತರಕಿ ಮತ್ತು ಹಾದರಮಗ್ಗಿ ಗ್ರಾಮಗಳಲ್ಲಿ ಗ್ರಾಮ ಸಭೆ ಮೂಲಕ ಒಟ್ಟು-139 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.  ಆಯ್ಕೆ ಪಟ್ಟಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಭವನ ಕೊಪ್ಪಳ ಇಲ್ಲಿ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತು ದೂರು/ಅಹವಾಲುಗಳಿದ್ದಲ್ಲಿ ನ.4 ರೊಳಗಾಗಿ ಸಲ್ಲಿಸಬಹುದು. ಅವಧಿ ಮೀರಿ ಬಂದ ದೂರು/ಅಹವಾಲುಗಳಿಗೆ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ದೂ.ಸಂ: 08539-225008 ಇಲ್ಲಿಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment