Friday, 28 October 2016

ಮಧುಮೇಹಕ್ಕೆ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆ ಲಭ್ಯ : ಡಾ.ಯಮನಪ್ಪ ಶಿರವಾರ

ಕೊಪ್ಪಳ, ಅ.28 (ಕರ್ನಾಟಕ ವಾರ್ತೆ):  ಮಧುಮೇಹ ಖಾಯಿಲೆಗೆ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆ ಲಭಿಸುತ್ತಿದ್ದು, ಮಧುಮೇಹಿ ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯುರ್ವೇದ ವೈದ್ಯಾಧಿಕಾರಿ ಡಾ. ಯಮನಪ್ಪ ಜೆ. ಶಿರವಾರ ಹೇಳಿದರು.
      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಸರಕಾರಿ ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಮಧುಮೇಹ ಇಂದು ಜಾಗತಿಕ ಸಮಸ್ಯೆಯಾಗಿದ್ದು ಇದನ್ನು ನಿಯಂತ್ರಣದಲ್ಲಿ ಇಡಲು ಆಯುರ್ವೇದಲ್ಲಿ ಹಲವಾರು ಪರಿಹಾರ ಮಾರ್ಗಗಳು ಇವೆ. ಮನೆಯಲ್ಲಿ ನಾವು ದಿನ ನಿತ್ಯ ಬಳಸುವ ಹಲವಾರು ಪದಾರ್ಥಗಳಿಂದ ಮಧುಮೇಹ ನಿಯಂತ್ರಣದಲ್ಲಿಡಬಹುದು. ಕರಿಬೇವು ಹಾಗೂ ಅಮೃತ ಬಳ್ಳಿಯಂತಹ ಎಲೆಗಳು ತುಂಬಾ ಪರಿಣಾಮಕಾರಿಯಾಗಿ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿವೆ. ಅಲ್ಲದೇ ಯೋಗದಿಂದಲೂ ಕೂಡ ಮಧುಮೇಹವನ್ನ ನಿಯಂತ್ರಣದಲ್ಲಿಡಬಹುದಾಗಿದೆ ಎಂದು ಹೇಳಿದರು.
     ಡಾ.ಗುರುರಾಜ ಉಮಚಗಿ ಮಾತನಾಡಿ ಕೇಂದ್ರ ಸರ್ಕಾರ ಧನ್ವಂತರಿ ದಿನಾಚರಣೆಯನ್ನು ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನಾಗಿ ಮಾಡಿ ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಆಯುರ್ವೇದವು ಭಾರತದ ಪುರಾತನ ಪಾರಂಪರಿಕ ಕೊಡುಗೆಯಾಗಿದ್ದು ಇದರ ಮಹತ್ವ ಇಡೀ ದೇಶಕ್ಕೆ ತಿಳಿಸಲು ಈ ದಿನಾಚರಣೆ ತುಂಬಾ ಉಪಯುಕ್ತವಾಗಲಿದೆ ಎಂದು ಹೇಳಿದರು.
     ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಸಪ್ಪ ವಾಲಿಕಾರ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಕವಿತಾ ಎಚ್,ಎಸ್, ಗಣ್ಯರಾದ ಶಿವಾನಂದ ಹೊದ್ಲೂರ ಉಪಸ್ಥಿತರಿದ್ದರು. ಎಚ್. ಆರ್. ನಿಂಗಾಪೂರ ಸ್ವಾಗತಿಸಿದರು,  ರಾಜಶೇಖರ ನಾರಿನಾಳ ನಿರೂಪಿಸಿ, ವಂದಿಸಿದರು.
Post a Comment