Monday, 24 October 2016

ಆದರ್ಶ ವಿವಾಹ ಯೋಜನೆ ಸದುಪಯೋಗಪಡಿಸಿಕೊಳ್ಳಿ- ಎಂ.ಕನಗವಲ್ಲಿ

ಕೊಪ್ಪಳ, ಅ.24  (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ಸರಳ ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸಲು ಪ್ರತಿ ವಿವಾಹಕ್ಕೆ 2 ವರ್ಷದ ಠೇವಣಿ ರೂಪದಲ್ಲಿ, ವಿವಾಹವಾದ ಜೋಡಿಯ ಹೆಸರಿನಲ್ಲಿ 10 ಸಾವಿರ ರೂ.ಗಳ ನಿಶ್ಚಿತ ಠೇವಣಿ ಇಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುವಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದ್ದಾರೆ.
     ಆದರ್ಶ ವಿವಾಹ ಯೋಜನೆಯಡಿ ಜಿಲ್ಲೆಯಲ್ಲಿ ಕೊಪ್ಪಳ ತಾಲೂಕಿನಲ್ಲಿ-18, ಯಲಬುರ್ಗಾ-93, ಕುಷ್ಟಗಿ-153 ಹಾಗೂ ಗಂಗಾವತಿ ತಾಲೂಕಿನಲ್ಲಿ 174 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 664 ಜೋಡಿ ಫಲಾನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. 
     ಆದರ್ಶ ವಿವಾಹ ಯೋಜನೆಗೆ ಅರ್ಜಿ ಸಲ್ಲಿಸಲು ಗ್ರಾಮಾಂತರ ಮತ್ತು ಹೋಬಳಿ ಮಟ್ಟದಲ್ಲಿ ಏರ್ಪಡಿಸುವ ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 10 ಜೋಡಿ ಹಾಗೂ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 25 ಜೋಡಿಗಳ ವಿವಾಹ ಇರಬೇಕು.  ಸಾಮೂಹಿಕ ವಿವಾಹ ಆಯೋಜಿಸುವ ಖಾಸಗಿ ಟ್ರಸ್ಟ್, ಸಂಘ, ಸಂಸ್ಥೆ ಮತ್ತು ಖಾಸಗಿ ವ್ಯಕ್ತಿಗಳು ಹಾಗೂ ಇತರರು ಜಿಲ್ಲಾ ನೋಂದಣಿ ಕಚೇರಿಯಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು.  ಸಾಮೂಹಿಕ ವಿವಾಹಗಳನ್ನು ಆಯೋಜಿಸಲು ವಿವಾಹ ಸ್ಥಳದ ಸಂಬಂಧಿಸಿದ ತಹಸಿಲ್ದಾರರಿಂದ ಅನುಮತಿ ಪಡೆಯಬೇಕು.   ಇಂತಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಜೋಡಿಯಲ್ಲಿ ವಧುವಿನ ಹೆಸರಲ್ಲಿ 10 ಸಾವಿರ ರೂ. ಗಳನ್ನು 2 ವರ್ಷಗಳ ನಿಶ್ಚಿತ ಠೇವಣಿಯಲ್ಲಿ ಇಡಲಾಗುವುದು. ಅಂತರ್‍ಜಾತಿ ವಿವಾಹಗಳಿಗೆ ಯೋಜನೆಯಡಿ ಅವಕಾಶವಿದ್ದು, ಎರಡು ಪ್ರೋತ್ಸಾಹ ಧನಗಳನ್ನು ಒಟ್ಟಿಗೆ ನೀಡಲಾಗುವುದು. ಸಾಮೂಹಿಕ ವಿವಾಹಗಳ ಸಂಘಟನಾಕಾರರಿಗೆ ಪ್ರತಿ ಜೋಡಿಗೆ ರೂ.100 ರಂತೆ ಪ್ರೋತ್ಸಾಹಧನ ನೀಡಲಾಗುವುದು.  ವಿವಾಹಕ್ಕೆ ಸರ್ಕಾರದ ಕಾನೂನಿನನ್ವಯ ಅರ್ಹವಾದ ವಯಸ್ಸಿನವರಾಗಿದ್ದು (ಕನಿಷ್ಠ ವಯೋಮಿತಿ) ಈ ಮೊದಲೇ ಮದುವೆಯಾಗಿ, ಜೀವಂತ ಪತಿ ಅಥವಾ ಪತ್ನಿ ಇರಬಾರದು. ಪ್ರೋತ್ಸಾಹಧನ ಪಡೆಯಲು ವಿವಾಹ ನೋಂದಣಿ ಮಾಡಿಸುವುದು ಕಡ್ಡಾಯ.  ಪ್ರತಿ ಅರ್ಜಿಯ ಜೊತೆ ಅಗತ್ಯ ಪ್ರಮಾಣ ಪತ್ರ, ವಿವಾಹದ ಭಾವಚಿತ್ರದ ಪಾಸಿಟಿವ್ ನೆಗೆಟಿವ್ ಮುಂತಾದವುಗಳನ್ನು ಲಗತ್ತಿಸಬೇಕು.  ವಿವಾಹ ಮುಗಿದ 6 ತಿಂಗಳೊಳಗಾಗಿ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಬೇಕು.
     ಆದರ್ಶ ವಿವಾಹ ಯೋಜನೆಗೆ ಅರ್ಜಿ ಸಲ್ಲಿಸಲು ವಯಸ್ಸಿನ ಪ್ರಮಾಣ ಪತ್ರ, ವಿವಾಹ ಪ್ರಮಾಣ ಪತ್ರ, ಸಂಘಟನಾಕಾರರ ಪ್ರಮಾಣ ಪತ್ರ ಲಗತ್ತಿಸಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment