Saturday, 23 July 2016

ಶ್ರೀರಾಮನಗರ : ಪರಿಶಿಷ್ಟರ ಕಾಲೋನಿಯಲ್ಲಿ ಗ್ರಾ.ಪಂ. ಸದಸ್ಯರಿಂದ ಶೌಚಾಲಯ ಜಾಗೃತಿ

ಕೊಪ್ಪಳ ಜು. 23 (ಕರ್ನಾಟಕ ವಾರ್ತೆ): ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ   ಸಾರ್ವಜನಿಕರು ಶೌಚಾಲಯ ಕಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತರಾಗುತ್ತಿದ್ದು, ಪಂಚಾಯತಿಯ ಪರಿಶಿಷ್ಟ ಜಾತಿಯ ಸದಸ್ಯರು ಸಹ ಇದೀಗ ಜಾಗೃತಿ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ.
     ‘ನಿಮ್ಮ ಕಾಲಿಗೆ ನಮಸ್ಕರಿಸುತ್ತೀನಿ- ದಯಮಾಡಿ ಶೌಚಾಲಯ ಕಟ್ಟಿಸಿಕೊಳ್ಳಿ, ಬಯಲು ಶೌಚಕ್ಕೆ ಹೋಗಬೇಡಿ’ ಎಂಬುದಾಗಿ  ಬಯಲು ಶೌಚಕ್ಕೆ ತೆರಳುತ್ತಿದ್ದ ಸಾರ್ವಜನಿಕರಿಗೆ, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ಕರಟೂರಿ ಅವರು ಮನವಿ ಮಾಡಿಕೊಂಡ ಪ್ರಕರಣದಿಂದ ಗಂಗಾವತಿ ತಾಲೂಕು ಶ್ರೀರಾಮನಗರ ಗ್ರಾಮ ಪಂಚಾಯತಿ ರಾಜ್ಯದ ಗಮನ ಸೆಳೆದಿತ್ತು.  ಇದೀಗ, ಇದೇ ಶ್ರೀರಾಮನಗರ ಗ್ರಾಮದ ಪರಿಶಿಷ್ಟ ಜಾತಿಯ ಗ್ರಾಮ ಪಂಚಾಯತಿ ಸದಸ್ಯರು ಶೌಚಾಲಯ ಕ್ರಾಂತಿಗೆ ಕೈಜೋಡಿಸಿದ್ದು,  ಗ್ರಾ.ಪಂ. ಸದಸ್ಯರುಗಳು ಶನಿವಾರದಂದು ಗ್ರಾಮದ ಪರಿಶಿಷ್ಟರ ಕಾಲೋನಿಗಳಲ್ಲಿ ಸಂಚರಿಸಿ, ಬಯಲು ಬಹಿರ್ದೆಸೆಗೆ ಅಂತ್ಯ ಹಾಡಬೇಕು, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪರಿಶಿಷ್ಟರಿಗೆ ಶೌಚಾಲಯ ಕಟ್ಟಿಸಿಕೊಳ್ಳಲು 15 ಸಾವಿರ ರೂ. ಸಹಾಯಧನ ಸರ್ಕಾರದಿಂದ ದೊರೆಯುತ್ತಿದ್ದು, ಎಲ್ಲ ಕುಟುಂಬಗಳು ತಪ್ಪದೆ ವಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಬೇಕು ಎಂಬುದಾಗಿ ಮನೆ, ಮನೆಗೆ ತೆರಳಿ ಮನವಿಯನ್ನು ಮಾಡಿಕೊಂಡಿದ್ದಾರೆ.
     ಗ್ರಾ.ಪಂ. ಸದಸ್ಯರುಗಳಾದ ಹುಸೇನಮ್ಮ ಅನುಸೂಯ, ಕರೇಪ್ಪ ಲಕ್ಷ್ಮಪ್ಪ ಅವರ ನೇತೃತ್ವದಲ್ಲಿ ಗ್ರಾಮದ ಪರಿಶಿಷ್ಟರ ಕಾಲೋನಿಗಳಲ್ಲಿ ಶೌಚಾಲಯ ಜಾಗೃತಿ ಕಾರ್ಯಕ್ರಮ ನೆರವೇರಿತು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಗ್ರಾ.ಪಂ. ಸದಸ್ಯರುಗಳ ಶೌಚಾಲಯ ನಿರ್ಮಾಣದ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Post a Comment