Saturday, 30 July 2016

ಗ್ರಾಮ ಲೆಕ್ಕಿಗರು ಕೇಂದ್ರಸ್ಥಾನದಲ್ಲಿ ವಾಸ ಮಾಡುವುದು ಕಡ್ಡಾಯ- ಕಂದಾಯ ಸಚಿವ ಕಾಗೋಡು ತಿಮ್ಮಪ್ಪ


ಕೊಪ್ಪಳ ಜು. 30 (ಕರ್ನಾಟಕ ವಾರ್ತೆ) : ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರ ಕರ್ತವ್ಯ ಪ್ರಮುಖವಾಗಿದ್ದು, ಸಾರ್ವಜನಿಕರ ಸೇವೆಗೆ ಸದಾ ಲಭ್ಯರಿರುವ ಸಲುವಾಗಿ ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸ ಮಾಡಲೇಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಹೇಳಿದರು.
 
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
     ಕಂದಾಯ ಇಲಾಖೆಯು ಪ್ರತಿಯೊಂದು ಇಲಾಖೆಗೆ ಸಂಪರ್ಕ ಕಲ್ಪಿಸುವ ಮಹತ್ವದ ಇಲಾಖೆಯಾಗಿದ್ದು, ಅದರಲ್ಲಿ ಗ್ರಾಮ ಲೆಕ್ಕಿಗರ ಪಾತ್ರ ಹೆಚ್ಚಾಗಿರುತ್ತದೆ.  ಸಾರ್ವಜನಿಕರು, ರೈತರು, ಕಂದಾಯ ಇಲಾಖೆಗೆ ಸಂಬಂಧಿಸಿದ ಬಹುತೇಕ ಕೆಲಸಗಳಿಗೆ ಗ್ರಾಮ ಲೆಕ್ಕಿಗರ ಸೇವೆ ಪಡೆಯಬೇಕಾಗುತ್ತದೆ.  ಆದರೆ ಗ್ರಾಮ ಲೆಕ್ಕಿಗರು ಸಂಬಂಧಪಟ್ಟ ಕೇಂದ್ರ ಸ್ಥಾನದಲ್ಲಿ ಲಭ್ಯರಿರುವುದಿಲ್ಲ ಎನ್ನುವ ದೂರು ರಾಜ್ಯಾದ್ಯಂತ ಕೇಳಿಬರುತ್ತಿದೆ.  ಈ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸವಿರಬೇಕು.  ಹಾಗೂ ನಿಗದಿಪಡಿಸಿದ ಕಚೇರಿಯಲ್ಲಿ ಕಚೇರಿವೇಳೆಯಲ್ಲಿ ಸಾರ್ವಜನಿಕರಿಗೆ ಲಭ್ಯರಿರಬೇಕು.  ಕೇಂದ್ರ ಸ್ಥಾನ ಬಿಡುವ ಮುನ್ನ ಕಡ್ಡಾಯವಾಗಿ ಆಯಾ ತಹಸಿಲ್ದಾರರಿಂದ ಪೂರ್ವಾನುಮತಿ ಪಡೆಯಬೇಕು ಎನ್ನುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.  ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಗ್ರಾಮಗಳಿಗೆ ಹಾಗೂ ಗ್ರಾಮ ಲೆಕ್ಕಿಗರ ನಿಗದಿತ ಕಚೇರಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.  ಕೇಂದ್ರಸ್ಥಾನದಲ್ಲಿ ವಾಸವಿರದ ಹಾಗೂ ಕಚೇರಿ ವೇಳೆಯಲ್ಲಿ ಲಭ್ಯರಿರದ ಗ್ರಾಮ ಲೆಕ್ಕಿಗರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಾಪೂಜಿ ಸೇವಾ ಕೇಂದ್ರ ಎಲ್ಲ ಗ್ರಾ.ಪಂ.ಗಳಿಗೆ ವಿಸ್ತರಣೆ : ರೈತರು ಪಹಣಿ ಪತ್ರಗಳಿಗೆ ತಾಲೂಕು ಮತ್ತು ಹೋಬಳಿ ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಗ್ರಾಮ ಪಂಚಾಯತಿ ಕೇಂದ್ರದಲ್ಲೇ ಲಭ್ಯವಾಗುವಂತೆ ಮಾಡಲು, ಮೊದಲ ಹಂತದಲ್ಲಿ ರಾಜ್ಯದ 2000 ಗ್ರಾಮ ಪಂಚಾಯತಿಗಳಲ್ಲಿ ಪಹಣಿ ಪತ್ರವೂ ಸೇರಿದಂತೆ ವಿವಿಧ ಬಗೆಯ 100 ಸೇವೆಗಳನ್ನು ಒದಗಿಸಲು ಪಂಚಾಯತಿ 100- ಬಾಪೂಜಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೆ 76 ಗ್ರಾಮ ಪಂಚಾಯತಿಗಳಲ್ಲಿ ಮೊದಲ ಹಂತದಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.  ಪಹಣಿ ಪತ್ರಿಕೆಗಳು ಆಯಾ ಗ್ರಾಮ ಪಂಚಾಯತಿಗಳಲ್ಲಿಯೇ ಸುಲಭವಾಗಿ ಲಭ್ಯವಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಎಲ್ಲ ಗ್ರಾಮ ಪಂಚಾಯತಿಗಳಿಗೂ ಬ್ರಾಡ್‍ಬ್ಯಾಂಡ್ ಸೌಲಭ್ಯ ಕಲ್ಪಿಸಿ, ಎಲ್ಲ ಗ್ರಾ.ಪಂ. ಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಹೇಳಿದರು.
ಹೆಚ್ಚಿನ ದರದಲ್ಲಿ ಗೊಬ್ಬರ ಮಾರುವವರ ವಿರುದ್ಧ ಕ್ರಮ ಜರುಗಿಸಿ : ಪ್ರಸಕ್ತ ಹಂಗಾಮಿಗೆ ರೈತರಿಗೆ ಯಾವುದೇ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗಬಾರದು ಎಂದು ಸೂಚನೆ ನೀಡಿದ ಸಚಿವರು, ರಸಗೊಬ್ಬರಗಳ ಬೆಲೆಯನ್ನು ಈಗಾಗಲೆ ಸರ್ಕಾರ ಪರಿಷ್ಕರಿಸಿದ್ದು, ರಸಗೊಬ್ಬರಗಳ ದರಗಳನ್ನು ಕಡಿಮೆ ಮಾಡಲಾಗಿದೆ.  ಆದಾಗ್ಯೂ ಮಾರಾಟಗಾರರು ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದೆ.  ಕೃಷಿ ಇಲಾಖೆ ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಪರಿಶೀಲಿಸಿ, ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಂಕೆವನ-ಪರಿಷ್ಕøತ ಪ್ರಸ್ತಾವನೆ ಸಲ್ಲಿಸಿ : ಜಿಲ್ಲೆಯ ಯಲಬುರ್ಗಾ ಮತ್ತು ಕೊಪ್ಪಳ ತಾಲೂಕಿನಲ್ಲಿ ಜಿಂಕೆಗಳ ಹಾವಳಿಯಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.  ಸುಮಾರು 8 ರಿಂದ 10 ಸಾವಿರ ಜಿಂಕೆಗಳು ಈ ಭಾಗದಲ್ಲಿ ಇರುವುದರಿಂದ, ರೈತರು ಬೆಳೆ ಪಡೆಯಲು ಸಾಧ್ಯವಾಗುತ್ತಿಲ್ಲ.  ಈ ನಿಟ್ಟಿನಲ್ಲಿ ಜಿಂಕೆವನ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಕಂದಾಯ ಸಚಿವರ ಗಮನ ಸೆಳೆದರು.  ಈ ಕುರಿತು ವಿವರಣೆ ನೀಡಿದ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು, ಕಳೆದ 2008 ರಲ್ಲಿ ಜಿಂಕೆ ವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.  ಜಿಂಕೆಗಳು ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ಕನಿಷ್ಟ 3 ರಿಂದ 4 ಸಾವಿರ ಎಕರೆ ಜಮೀನು ಜಿಂಕೆ ವನಕ್ಕೆ ಬೇಕಾಗುತ್ತದೆ.  ಆದರೆ ನಂತರದ ದಿನಗಳಲ್ಲಿ ಇಲಾಖೆಯಿಂದ ಜಿಂಕೆವನ ಕಾರ್ಯಸಾಧುವಲ್ಲ ಎಂಬ ಕಾರಣ ನೀಡಿ ಪ್ರಸ್ತಾವನೆಯನ್ನು ಇಲಾಖೆಯು ತಿರಸ್ಕರಿಸಿದೆ ಎಂದರು.  ಇದಕ್ಕೆ ಸ್ಪಂದಿಸಿದ ಕಂದಾಯ ಸಚಿವರು, ಜಿಂಕೆ ಹಾವಳಿಯಿಂದ ರೈತರಿಗೆ ನಷ್ಟವಾಗದ ರೀತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ಯೋಜನೆಯನ್ನು ಮರು ರೂಪಿಸಿ, ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಶೀಘ್ರ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಹಾರ ಮೊತ್ತ ರೈತರಿಗೆ ಶೀಘ್ರ ಪಾವತಿಸಿ : ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದ್ದರಿಂದ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಮೊತ್ತವನ್ನು ನೀಡಲು ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ.  ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ 114015 ರೈತರಿಗೆ 46. 18 ಕೋಟಿ ರೂ. ಪಾವತಿಸಲಾಗಿದ್ದು, ಇನ್ನೂ 62122 ರೈತರಿಗೆ ವಿತರಿಸುವುದು ಬಾಕಿ ಇದೆ.  ರೈತರ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿ ಇಲ್ಲದಿರುವುದು, ರೈತರು ಮೃತಪಟ್ಟಿರುವುದು, ಜಮೀನು ಜಂಟಿ ಖಾತೆಯಲ್ಲಿರುವುದು, ಬ್ಯಾಂಕ್ ಖಾತೆಗಳ ಸಂಖ್ಯೆ ಹಾಗೂ ಕೋಡ್‍ಗಳನ್ನು ತಪ್ಪಾಗಿ ನೀಡಿರುವುದು ಹೀಗೆ ಹಲವು ಕಾರಣಗಳಿಂದ ಸುಮಾರು 9 ಕೋಟಿ ರೂ. ರೈತರಿಗೆ ಪಾವತಿಸಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಸಭೆಗೆ ವಿವರಣೆ ನೀಡಿದರು.  ಚಾಲ್ತಿಯಲ್ಲಿ ಇಲ್ಲದ ರೈತರ ಖಾತೆಗಳನ್ನು 48 ಗಂಟೆಗಳ ಒಳಗಾಗಿ ಚಾಲ್ತಿಗೊಳಿಸಲು ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸಚಿವರು ಲೀಡ್‍ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು.   ಪರಿಹಾರ ಹಣವನ್ನು ವಿಳಂಬ ಮಾಡದೆ ಕೂಡಲೆ ಪಾವತಿಸಲು ಅಗತ್ಯ ಕ್ರಮ ಜರುಗಿಸಬೇಕು.  ಅಲ್ಲದೆ ಪರಿಹಾರ ಹಣ ಪಾವತಿಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು, ರೈತರಿಗೆ ನೇರವಾಗಿ ಪರಿಹಾರ ಹಣ ಪಾವತಿ ಮಾಡಲು ಸಾಧ್ಯವೇ ಎಂಬುದನ್ನು ಆಗಸ್ಟ್ 05 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
      ಸರ್ಕಾರದ ಜಮೀನು ಲಭ್ಯವಿರುವ ಕಡೆಗಳಲ್ಲಿ ಶಾಲಾ-ಕಾಲೇಜು, ಅಂಗನವಾಡಿ, ವಸತಿ ನಿಲಯ, ವಸತಿ ಶಾಲಾ ಕಟ್ಟಡಗಳಿಗೆ ಮಂಜೂರು ಮಾಡಬೇಕು. ವಿಲೇವಾರಿಯಾಗದೆ ಬಾಕಿ ಉಳಿದಿರುವ ಬಗರ ಹುಕುಂ ಸಾಗುವಳಿಯ ಎಲ್ಲ ಅರ್ಜಿಗಳನ್ನು ಪ್ರತಿ ತಿಂಗಳು ಪ್ರತ್ಯೇಕ ಸಭೆ ನಡೆಸಿ, ಶೀಘ್ರ ಇತ್ಯರ್ಥ ಮಾಡಬೇಕು ಎಂದು ಕಟ್ಟಿನಿಟ್ಟಿನ ಸೂಚನೆ ನೀಡಿದ ಸಚಿವರು,  ಸರ್ಕಾರದ ಆಲೋಚನೆ ಮತ್ತು ನಡವಳಿಕೆಗೆ ಅನುಗುಣವಾಗಿ ತಾಲೂಕಿನ ಜನರ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಹಶೀಲ್ದಾರರು ಪಾರದರ್ಶಕ ಆಡಳಿತ ನೀಡಬೇಕೆಂದು ಕಂದಾಯ ಸಚಿವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
     ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಬಳ್ಳಾರಿ ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರಚೊಪ್ರಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸಿಲ್ದಾರರು ಭಾಗವಹಿಸಿದ್ದರು.
Post a Comment