Wednesday, 27 July 2016

ತುಂಗಭದ್ರಾಕ್ಕೆ ಒಳಹರಿವು ಕುಸಿತ : ನಿಗದಿತ ಬೆಳೆ ಮಾತ್ರ ಬೆಳೆಯಲು ರೈತರಲ್ಲಿ ಮನವಿ

ಕೊಪ್ಪಳ ಜುಲೈ 27 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದ ಒಳಹರಿವು ಕ್ಷೀಣಿಸುತ್ತಿರುವುದರಿಂದ, ಮುಂಗಾರು ಹಂಗಾಮಿಗೆ ಲಭ್ಯವಾಗುವ ನೀರಿನಲ್ಲಿ ಕೊರತೆ ಉಂಟಾಗುವ ಸಾಧ್ಯತೆಗಳಿರುತ್ತವೆ.  ಆದ್ದರಿಂದ ಪ್ರಸಕ್ತ ಮುಂಗಾರು ಹಂಗಾಮಿಗೆ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯುವಂತೆ ಮುನಿರಾಬಾದ್, ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ರೈತ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಕಳೆದ ಜು. 18 ರಂದು ಬೆಂಗಳೂರಿನಲ್ಲಿ ಜರುಗಿದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯ ಕೈಗೊಂಡಂತೆ ಈಗಾಗಲೆ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗಿದೆ.  ಸಭೆಯಲ್ಲಿ ಕೈಗೊಂಡ ನಿರ್ಣಯ ಇಂತಿದೆ.  ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜು. 26 ರಿಂದ ನವೆಂಬರ್ 30 ರವರೆಗೆ ಸರಾಸರಿ 3200 ಕ್ಯೂಸೆಕ್‍ನಂತೆ.  ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಜು. 20 ರಿಂದ ನವೆಂಬರ್ 30 ರವರೆಗೆ ಸರಾಸರಿ 650 ಕ್ಯೂಸೆಕ್‍ನಂತೆ.  ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು. 20 ರಿಂದ ನವೆಂಬರ್ 30 ರವರೆಗೆ ಸರಾಸರಿ 1050 ಕ್ಯೂಸೆಕ್‍ನಂತೆ.  ರಾಯಬಸವಣ್ಣ ಕಾಲುವೆಗೆ ಜೂ. 01 ರಿಂದ ಡಿಸೆಂಬರ್ 10 ರವರೆಗೆ ಸರಾಸರಿ 152 ಕ್ಯೂಸೆಕ್‍ನಂತೆ ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. 26 ರಿಂದ ನವೆಂಬರ್ 30 ರವರೆಗೆ ಸರಾಸರಿ 16 ಕ್ಯೂಸೆಕ್‍ನಂತೆ.  ಅಥವಾ ಎಲ್ಲ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ ಎಂದು ನೀರಾವರಿ ಸಲಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
     ಆದರೆ ಜಲಾಶಯದ ಒಳಹರಿವು ಕ್ಷೀಣಿಸುತ್ತಿರುವುದರಿಂದ, ನೀರಿನ ಕೊರತೆ ಉಂಟಾಗುವ ಸಾಧ್ಯತೆಗಳಿದ್ದು, ರೈತಬಾಂಧವರು ಪ್ರಸಕ್ತ ಮುಂಗಾರು ಹಂಗಾಮಿಗೆ ಅಧಿಸೂಚಿತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯಬೇಕು.  ನಿಗದಿತ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಉಲ್ಲಂಘನೆ ಮಾಡಿದಲ್ಲಿ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment