Friday, 29 July 2016

ಕೊಪ್ಪಳ ಜಿಲ್ಲೆ ದ್ರಾಕ್ಷಿ ಬೆಳೆಗೆ ಪೂರಕವಾದ ಮಣ್ಣು, ನೀರು, ವಾತಾವರಣ ಹೊಂದಿದೆ- ಜೆ.ಎಸ್. ಪ್ರಕಾಶ್


ಕೊಪ್ಪಳ ಜು. 29 (ಕರ್ನಾಟಕ ವಾರ್ತೆ): ದ್ರಾಕ್ಷಿ ಬೆಳೆ ರೈತರಿಗೆ ಹೆಚ್ಚು ಲಾಭದಾಯಕ ಬೆಳೆಯಾಗಿದ್ದು, ಕೊಪ್ಪಳ ಜಿಲ್ಲೆ ದ್ರಾಕ್ಷಿ ಬೆಳೆಯನ್ನು ಬೆಳೆಯಲು ಪೂರಕವಾದ ಮಣ್ಣು, ನೀರು ಮತ್ತು ವಾತಾವರಣ ಹೊಂದಿದೆ ಎಂದು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಜೆ.ಎಸ್. ಪ್ರಕಾಶ್ ಹೇಳಿದರು.

     ರಾಯಚೂರು ಕೃಷಿ ವಿಶ್ವವಿದ್ಯಾಲಯ, ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿಯ ಬಾಯರ್ ಕ್ರಾಪ್ ಸೈನ್ಸಸ್ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ದ್ರಾಕ್ಷಿ ಬೆಳೆ ವಿಚಾರಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ದ್ರಾಕ್ಷಿ ಬೆಳೆ, ರೈತರಿಗೆ ಅತ್ಯಂತ ಲಾಭದಾಯಕ ಕೃಷಿಯಾಗಿದೆ.  ದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯುವ ಪ್ರದೇಶ ವಿಸ್ತರಣೆ ವೇಗವಾಗಿ ಆಗುತ್ತಿದೆ.  ಆದರೆ ದ್ರಾಕ್ಷಿ ಬೆಳೆಗೆ ಪೂರಕವಾಗಿರುವ ಮಣ್ಣು, ನೀರು ಮತ್ತು ಹವಾಮಾನ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಪ್ರದೇಶ ವಿಸ್ತರಣೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.  ಬಿಜಾಪುರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಉತ್ತಮ ಗುಣಮಟ್ಟದ ದ್ರಾಕ್ಷಿ ಬೆಳೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.  ಬಿಜಾಪುರ ಜಿಲ್ಲೆಗಿಂತಲೂ ಕೊಪ್ಪಳ ಜಿಲ್ಲೆಯ ಮಣ್ಣು ಮತ್ತು ನೀರು ದ್ರಾಕ್ಷಿ ಬೆಳೆಗೆ ಹೆಚ್ಚು ಅನುಕೂಲಕರವಾಗಿದೆ.  ಆದರೂ ಇಲ್ಲಿನ ರೈತರು ದ್ರಾಕ್ಷಿ ಬೆಳೆಗೆ ಮುಂದಾಗದಿರುವುದು ನಿಜಕ್ಕೂ ಆಶ್ಚರ್ಯವನ್ನು ತಂದಿದೆ.  ಕರ್ನಾಟಕ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಾಂಗ್ಲಿ ಮುಂತಾದ ಪ್ರದೇಶಗಳಲ್ಲಿ ಅತ್ಯಲ್ಪ ಸೌಲಭ್ಯದ ನಡುವೆಯೂ ರೈತರು ಉತ್ತಮ ದ್ರಾಕ್ಷಿ ಇಳುವರಿ ಪಡೆದು ಲಾಭ ಕಂಡುಕೊಳ್ಳುತ್ತಿದ್ದಾರೆ.  ದ್ರಾಕ್ಷಿ ಬೆಳೆ ವೈಜ್ಞಾನಿಕ ರೀತಿಯಲ್ಲಿ ಸಿದ್ಧವಾಗಿರುವ ಮಾಡೆಲ್ ನಮ್ಮ ರಾಜ್ಯದಲ್ಲಿದೆ.  ಉತ್ಕøಷ್ಟ ಗುಣಮಟ್ಟದ ದ್ರಾಕ್ಷಿಯನ್ನು ನಮ್ಮ ರಾಜ್ಯದಲ್ಲಿಯೂ ಬೆಳೆಯಲಾಗುತ್ತಿದೆ.  ಇತರೆ ರಾಜ್ಯಗಳಿಗೆ ಹೋಲಿಸಿದಾಗ ಸಂಸ್ಕರಣೆ ಮತ್ತು ಮೌಲ್ಯವರ್ಧಕ ಅಂಶಗಳ ಬಗ್ಗೆ ನಮ್ಮ ರಾಜ್ಯದ ರೈತರಲ್ಲಿ ಮಾಹಿತಿಯ ಕೊರತೆ ಇದೆ.  ಉತ್ತಮ ಪರಿಶ್ರಮ ಹಾಕಿದರೆ, ಪ್ರತಿ ಎಕರೆಗೆ ಕನಿಷ್ಟ 06 ಲಕ್ಷ ರೂ. ನಿವ್ವಳ ಆದಾಯ ಪಡೆಯಲು ಸಾಧ್ಯವಿದೆ.  ಭಾರತ ದೇಶದಿಂದ ಬಾಂಗ್ಲಾ, ಚೀನಾ, ಪೆರು, ಚಿಲಿ, ಅರ್ಜೆಂಟಿನಾ ಸೇರಿದಂತೆ ಒಟ್ಟು 36 ರಾಷ್ಟ್ರಗಳಿಗೆ ಭಾರತ ದೇಶದಿಂದ ಉತ್ತಮ ಗುಣಮಟ್ಟದ ಒಣ ದ್ರಾಕ್ಷಿ ರಫ್ತಾಗುತ್ತಿದೆ.  ಕೆಲವು ಕಂಪನಿಗಳು ನಮ್ಮ ರೈತರಿಂದಲೇ ಖರೀದಿಸಿದ ದ್ರಾಕ್ಷಿಯನ್ನು ಮೌಲ್ಯವರ್ಧಕವನ್ನಾಗಿಸಿ, ವಿದೇಶಗಳಿಗೆ ರಫ್ತು ಮಾಡಿ ಅಧಿಕ ಲಾಭ ಗಳಿಸುತ್ತಿವೆ.  ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ದ್ರಾಕ್ಷಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.  ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಸರ್ಕಾರದ ವತಿಯಿಂದಲೂ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು, ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಡಾ. ಜೆ.ಎಸ್. ಪ್ರಕಾಶ್ ಅವರು ರೈತರಿಗೆ ಕರೆ ನೀಡಿದರು.
     ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ರಾಯಚೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್.ಕೆ. ಮೇಟಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಹಾಗೂ ಕೃಷಿಗೆ ಪೂರಕ ವಾತಾವರಣವಿದ್ದು, ನಿಸರ್ಗದ ಸಂಪತ್ತು ಹೇರಳವಾಗಿದೆ.  ಆದರೆ ಅದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಲಾಭ ಗಳಿಸುವಲ್ಲಿ ರೈತರು ವಿಫಲರಾಗುತ್ತಿದ್ದಾರೆ.  ಮಣ್ಣು ಹಾಗೂ ನೀರಿನ ಗುಣಧರ್ಮಕ್ಕೆ ಅನುಗುಣವಾಗಿ ರೈತರು ಬೆಳೆ ಬೆಳೆಯಬೇಕು.  ಸಮಗ್ರ ಕೃಷಿ ಯೋಜನೆಯಲ್ಲಿ ಯೋಜಿತ ರೀತಿಯಲ್ಲಿ ಕರ್ತವ್ಯ ನಿಷ್ಠೇಯಿಂದ ಬೆಳೆ ಬೆಳೆದರೆ ರೈತರಿಗೆ ನಷ್ಟವೆನ್ನುವ ಮಾತೇ ಇರುವುದಿಲ್ಲ ಎಂದರು.
     ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ತೋಟಗಾರಿಕೆಯಲ್ಲಿ ಅತ್ಯಂತ ಶ್ರೀಮಂತ ಜಿಲ್ಲೆ.  ಇಲ್ಲಿ ಉತ್ಕøಷ್ಟ ನೀರಿದೆ, ಭೂಮಿ ಇದೆ, ಯುವ ಶಕ್ತಿಯೂ ಇದೆ.   ಆದಾಯದ ಕೊರತೆಯಿದೆ, ಲೈಫ್ ಅನ್ನು ಎಂಜಾಯ್ ಮಾಡಲು ಆಗಲ್ಲ ಎನ್ನುವ ತಪ್ಪು ಮನೋಭಾವದಿಂದ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.  ರೈತರೂ ಸಹ ತಮ್ಮ ಮಕ್ಕಳ ಮನೋಸ್ಥೈರ್ಯ ಕುಗ್ಗಿಸುವಂತಹ ಮಾತುಗಳನ್ನಾಡಿ ಕೃಷಿಯ ಬಗ್ಗೆ ನಿರಾಸಕ್ತಿ ಮೂಡಿಸುತ್ತಿರುವುದು ಸರಿಯಲ್ಲ.  ಬ್ಯಾಂಕ್‍ಗಳು ಕೊಡುವ ಸಾಲವನ್ನು ರೈತರು ಸದ್ಬಳಕೆಗಾಗಿ ವಿನಿಯೋಗಿಸಿಕೊಳ್ಳಬೇಕು.  ರಸಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಕೊಟ್ಟಿಗೆ, ಎರೆಹುಳು ಗೊಬ್ಬರದ ಬಳಕೆ ಹೆಚ್ಚಿಸಿ, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ ಎಂದರು.
     ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ ಅವರು ಮಾತನಾಡಿ, ತಾವು ಅನೇಕ ವರ್ಷಗಳಿಂದ ದ್ರಾಕ್ಷಿ ಬೆಳೆ ಬೆಳೆಯುತ್ತಿದ್ದು, ನೈಸರ್ಗಿಕ ವಿಕೋಪದಿಂದ ಕೆಲವು ಬಾರಿ ನಷ್ಟ ಅನುಭವಿಸಲಾಗಿದೆಯೇ ಹೊರತು, ಬೆಳೆಯ ದರ ಅಥವಾ ವೈಪಲದ್ಯದಿಂದ ಈವರೆಗೂ ಯಾವುದೇ ನಷ್ಟವಾಗಿಲ್ಲ.  ಉತ್ತಮ ಲಾಭವನ್ನೇ ಪಡೆಯಲಾಗಿದೆ ಎಂದರು.
     ಕಾರ್ಯಕ್ರಮದಲ್ಲಿ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ. ಬಿ.ಎಂ. ಚಿತ್ತಾಪುರ, ಬಿಜಾಪುರ ಕೃಷಿ ವಿಜ್ಞಾನ ಕೇಂದ್ರದ ಡಾ. ವಸ್ತ್ರದ್, ಹೇಮರಾಜ್ ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ್ ಸ್ವಾಗತಿಸಿದರು.  ದ್ರಾಕ್ಷಿ ಬೆಳೆಯ ವಿಚಾರಸಂಕಿರಣದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಹಲವಾರು ರೈತರು ಆಸಕ್ತಿಯಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
Post a Comment