Wednesday, 27 July 2016

ಹಣ್ಣುಗಳನ್ನು ಮಾಗಿಸಲು ಅಪಾಯಕಾರಿ ರಾಸಾಯನಿಕ ಬಳಸದಂತೆ ತೋಟಗಾರಿಕೆ ಇಲಾಖೆ ಸೂಚನೆ

ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಹಣ್ಣುಗಳನ್ನು ಪಕ್ವಗೊಳಿಸಲು ಅಪಾಯಕಾರಿ ರಾಸಾಯನಿಕಗಳನ್ನು ಬಳಸದಂತೆ ತೋಟಗಾರಿಕೆ ಇಲಾಖೆಯು ಹಣ್ಣು ಮಾರಾಟಗಾರರಿಗೆ ಸೂಚನೆ ನೀಡಿದೆ.  
ಹಣ್ಣುಗಳು  ಸಹಜವಾಗಿ ಮಾಗಿ ಪಕ್ವವಾಗುತ್ತವೆ.  ಇದರಲ್ಲಿ ಕೆಲವು ಗಿಡದಲ್ಲಿಯೇ ಹಣ್ಣಾಗುತ್ತವೆ , ಉದಾಹರಣೆಗೆ ದ್ರಾಕ್ಷಿ, ದಾಳಿಂಬೆ, ಮುಂತಾದವು.  ಇನ್ನೂ ಕೆಲವು ಹಣ್ಣುಗಳು ಕಟಾವಿನ ನಂತರ ಪಕ್ವವಾಗುತ್ತವೆ.  ಹಣ್ಣುಗಳಲ್ಲಿ ನೈಸರ್ಗಿಕವಾಗಿ ಇಥಲಿನ್ ಎನ್ನುವ ಅನಿಲ ಅವುಗಳನ್ನು ಮಾಗಿಸುತ್ತದೆ. ಉದಾ;  ಮಾವು, ಬಾಳೆ, ಸಪೋಟ ಮುಂತಾದವು. ಈ ಹಣ್ಣುಗಳು ಕಟಾವಿನ ಹಲವಾರು ದಿನಗಳ ನಂತರ ಹಣ್ಣಾಗುತ್ತವೆ.  ಬೇಗ ಹಣ್ಣು ಮಾಡಲು ರಾಸಾಯನಿಕಗಳನ್ನು ಬಳಸಾಗುತ್ತದೆ. ಹಣ್ಣು ಮಾಗುವ ಕೊಠಡಿ (ಫ್ರುಟ್ ರೈಪನಿಂಗ ಚೇಂಬರ್) ನಲ್ಲಿ ಇಥಲೀನ್ ಅನಿಲ ಬಿಡುಗಡೆ ಮಾಡಿ ಹಣ್ಣುಗಳನ್ನು ಪಕ್ವಗೊಳಿಸಲಾಗುತ್ತದೆ. ಇದಕ್ಕೆ 3 ರಿಂದ 4 ದಿನಗಳು ಬೇಕಾಗಬಹುದು. ಇದರಿಂದ ಆರೋಗ್ಯಕ್ಕೆ ಹಾನಿ ಇಲ್ಲ. ಆದರೆ ಕೆಲ ಹಣ್ಣಿನ ವ್ಯಾಪಾರಿಗಳು ಆಕರ್ಷಕ ಬಣ್ಣ ತರಿಸಲು  ಹಾಗೂ ಬೇಗ ಹಣ್ಣು ಮಾಡಲು (72 ಗಂಟೆಯ ಒಳಗೆ) ಕ್ಯಾಲ್ಸಿಯಂ ಕಾರ್ಬೈಡ್ ನಂತಹ ಅಪಾಯಕಾರಿ ರಾಸಾಯನಿಕಗಳನ್ನು  ಉಪಯೋಗಿಸುತ್ತಿದ್ದಾರೆ.  ಇದರಿಂದ ಬಿಡುಗಡೆ ಆಗುವ ಅರ್ಸೆನಿಕ್ ಹೈಡ್ರೈಡ್ ಮತ್ತು ರಂಜಕದ ಹೈಡ್ರೈಡ್ ಅಪಾಯಕಾರಿ ಅನಿಲಗಳಿಂದಾಗಿ  ಹೃದಯ ಸಂಬಂಧಿ ಮತ್ತು ಕ್ಯಾನ್ಸರ ರೋಗ ಹರಡುವ ಸಾಧ್ಯತೆ ಇದೆ. ಅಲ್ಲದೆ ಕ್ಯಾಲ್ಸಿಯಮ್ ಕಾರ್ಬೈಡ್ ಬಳಕೆ ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಹಣ್ಣಿನ ವ್ಯಾಪಾರಸ್ಥರು ಹಣ್ಣುಗಳನ್ನು ಮಾಗಿಸಲು ಯಾವ ಕಾರಣಕ್ಕೂ ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕವನ್ನು ಬಳಸಬಾರದು. ಹಾಗೇನಾದರೂ ಬಳಸಿದ್ದು ಕಂಡುಬಂದಲ್ಲಿ  ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶವಿರುತ್ತದೆ. ಗ್ರಾಹಕರು ಕೂಡ ಜಾಗ್ರತರಾಗಲು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.) ಕೊಪ್ಪಳ ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಕೊಪ್ಪಳ ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Post a Comment