Thursday, 21 July 2016

ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಲು ಗ್ರಾಮಗಳಿಗೆ ನಿರಂತರ ಭೇಟಿ- ಆರ್. ರಾಮಚಂದ್ರನ್


ಕೊಪ್ಪಳ ಜು. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯನ್ನು ಇದೇ ವರ್ಷ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮಗಳಿಗೆ ನಿರಂತರ ಭೇಟಿ ನೀಡುವುದಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಹೇಳಿದರು.

     ಶೌಚಾಲಯ ನಿರ್ಮಾಣದ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಅವರೊಂದಿಗೆ ಅಧಿಕಾರಿಗಳನ್ನೊಳಗೊಂಡ ತಂಡ ಗಂಗಾವತಿ ತಾಲೂಕಿನ ಚಿಕ್ಕಮಾದಿನಾಳ  ಗ್ರಾಮಕ್ಕೆ ಬೆಳಗ್ಗೆ 5.30 ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ ಅವರು ಈ ವಿಷಯ ತಿಳಿಸಿದರು.

     ಸ್ವಚ್ಛ ಭಾರತ ಮಿಷನ್‍ನಡಿ ಜಿಲ್ಲೆಯನ್ನು ಇದೇ ವರ್ಷಾಂತ್ಯದೊಳಗೆ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯನ್ನು ಹೊಂದಿದ್ದು, ಸಾರ್ವಜನಿಕರ ಸಹಕಾರ ಪಡೆಯುವ ಸಲುವಾಗಿ ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಶಾಲಾ ವಿದ್ಯಾರ್ಥಿಗಳು ಉತ್ತಮ ಆರೋಗ್ಯವಂತರಾಗಲು ಶುಚಿತ್ವವನ್ನು ಕಾಪಾಡುವುದರ ಜೊತೆಗೆ ಪೌಷ್ಠಿಕ ಆಹಾರ ಸೇವಿಸಬೇಕು.  ಶುಚಿತ್ವಕ್ಕೆ ಶೌಚಾಲಯ ಅತ್ಯಗತ್ಯ.  ಜಿಲ್ಲೆಯ ಮಕ್ಕಳಲ್ಲಿ ಪ್ರಮುಖ ಕಾಡುತ್ತಿರುವ ಅಪೌಷ್ಠಿಕತೆಗೆ  ಬಯಲು ಬಹಿರ್ದೆಸೆ ಪ್ರಮುಖ ಕಾರಣವಾಗಿದೆ.  ವೈಯಕ್ತಿಕ ಶೌಚಾಲಯ ನಿರ್ಮಾಣದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಹೇಳಿ ಶೌಚಾಲಯ ನಿರ್ಮಿಸಿಕೊಂಡು ಬಳಕೆ ಮಾಡುವಂತೆ ಹೇಳಿದರು. ಡಣಾಪುರ ಗ್ರಾಮದ ವಿದ್ಯಾರ್ಥಿ ಮಲ್ಲಮ್ಮಳ ಶೌಚಾಲಯಕ್ಕಾಗಿ ಉಪವಾಸದ ಹೋರಾಟದ ನಿದರ್ಶನವನ್ನು ನೀಡುತ್ತಾ ಪ್ರತಿಯೊಬ್ಬರು ಮಲ್ಲಮ್ಮಳಂತೆ ದಿಟ್ಟತನದಿಂದ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು. ಸಾರ್ವಜನಿಕರು ಬೆಲೆ ಬಾಳುವ ವಸ್ತುಗಳು, ಒಡವೆ ವಸ್ತ್ರಗಳು, ಮೋಟಾರು ವಾಹನಗಳ ಖರೀದಿಗೆ ದುಬಾರಿ ಹಣ ಖರ್ಚು ಮಾಡುತ್ತೀರಿ, ಆದರೆ ರೂ.12000/- ರಿಂದ ರೂ.15000/- ಶೌಚಾಲಯ ನಿರ್ಮಾಣಕ್ಕೆ ಹಣ ಇಲ್ಲ ಎಂದು ಸಬೂಬು ಹೇಳುವುದು ಸರಿಯಲ್ಲ.  ಇನ್ನಾದರೂ ಪ್ರತಿಯೊಂದು ಕುಟುಂಬವೂ ತಪ್ಪದೆ ಶೌಚಾಲಯ ನಿರ್ಮಿಸಿಕೊಳ್ಳಲೇಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಅವರು ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಎಲ್ಲ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳುವಂತಾಗಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗಂಗಾವತಿ ತಾಲೂಕು ಪಂಚಾಯತ್ ಅಧ್ಯಕ್ಷ ಬಸವಂತಗೌಡ್ರ ರಾಮನಗೌಡ್ರ ಪಾಟೀಲ ಅವರು ಮಾತನಾಡಿ,  ನಮ್ಮ ಆರೋಗ್ಯದ ಮತ್ತು ಮಹಿಳೆಯರ ಸ್ವಾಭಿಮಾನದ ಕುರಿತು ಗ್ರಾಮದ ಜನರು ಬೆಂಬಲ ನೀಡಬೇಕು. ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಯಿಸುವುದಾಗಿ ಘೋಷಿಸಿದರು.
  ಗಂಗಾವತಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೆಂಕೋಬಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಮತ್ತು ಶಾಲಾ ಮಕ್ಕಳು ಅಭಿಯಾನದಲ್ಲಿ ಭಾಗಿಯಾಗಿದ್ದರು.   ಇದೇ ಸಂದರ್ಭದಲ್ಲಿ ಹಲವು ಕುಟುಂಬಗಳಿಗೆ ಶೌಚಾಲಯ ನಿರ್ಮಾಣದ ಕಾರ್ಯಾದೇಶ ಪತ್ರ ವಿತರಿಸಲಾಯಿತು.  ನಂತರ ಶಾಲಾ  ಮಕ್ಕಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಚ್ಛ ಭಾರತ ಮಿಷನ್ ಘೋಷಣೆಗಳೊಂದಿಗೆ ಜಾಥಾ ಕಾರ್ಯಕ್ರಮ ಏರ್ಪಡಿಸಲಾಯಿತು.  ತರುವಾಯ 5  ತಂಡಗಳನ್ನು ರಚಿಸಿ ಚಿಕ್ಕಮಾದಿನಾಳ ಗ್ರಾಮದ ಎಲ್ಲ ಮನೆ-ಮನೆಗೆ ಭೇಟಿ ನೀಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರ ಮನವೊಲಿಸಲಾಯಿತು.
Post a Comment