Monday, 18 July 2016

ಜಿಪಂ ಸಿಇಓ ರಾಮಚಂದ್ರನ್ ಯತ್ನದ ಫಲ : ಕೂಲಿಯಿಂದ ಶಾಲೆಗೆ ದಾಖಲಾದ ಬಾಲಕ ಮೌಲಾಹುಸೇನ್ಕೊಪ್ಪಳ ಜು. 16 (ಕರ್ನಾಟಕ ವಾರ್ತೆ): ಕೈಯಲ್ಲಿ ಪೆನ್ನು ಪುಸ್ತಕ ಹಿಡಿದು ಶಾಲೆಗೆ ಹೋಗಿ ತನ್ನ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ 15 ವರ್ಷದ ಬಾಲಕ, ಗಿಡ ಬೆಳೆಸುವ ನರ್ಸರಿಯಲ್ಲಿ ತಂದೆಗೆ ನೆರವು ನೀಡುತ್ತ ಕೂಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಕೊನೆಗೂ ಆ ಬಾಲಕನ ಹಾಗೂ ಆತನ ತಂದೆಯ ಮನವೊಲಿಸಿ, ಬಾಲಕನನ್ನು ಖುದ್ದಾಗಿ ತಾವೇ  ಕರೆದುಕೊಂಡುಹೋಗಿ  ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
      ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ವಿಶೇಷ ದಾಖಲಾತಿ ಆಂದೋಲನ ಕೈಗೊಳ್ಳಲ ಶಾಲೆ ಕಡೆ ನನ್ನ ನಡೆ- ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಆಂದೋಲನ ಕಾರ್ಯಕ್ರಮವನ್ನು ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಆಯೋಜಿಸಲಾಯಿತು.  ಈ ದಿಸೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರ ಕ್ರಮ ಅನುಕರಣೀಯವಾಗಿದೆ.
 
      ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರ ಜೊತೆಗೂಡಿ, ಉದ್ಯೋಗಖಾತ್ರಿ ಯೋಜನೆಯ ಅನುಷ್ಠಾನದ ಪರಿಶೀಲನೆ ನಡೆಸುವ ಕಾರ್ಯಕ್ರಮವನ್ನು ಜು. 15 ರಂದು ಗಂಗಾವತಿ ತಾಲೂಕಿನಲ್ಲಿ ಹಮ್ಮಿಕೊಂಡಿದ್ದರು.  ವಡ್ಡರಹಟ್ಟಿ ಕ್ಯಾಂಪ್ ಬಳಿಯ ಅರಣ್ಯ ಇಲಾಖೆ ನರ್ಸರಿಯಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದ 15 ವರ್ಷದ ಬಾಲಕ ಮೌಲಾಹುಸೇನ್ ಸಿಇಓ ಅವರ ಕಣ್ಣಿಗೆ ಬಿದ್ದಿದ್ದಾನೆ.  ಆತನೊಂದಿಗೆ ಮಾತಿಗಿಳಿದಾಗ, ಶಾಲಾ  ಶಿಕ್ಷಣವನ್ನು 05 ನೇ ತರಗತಿಗೇ ಇತಿಶ್ರೀ ಹಾಡಿ, ತನ್ನ ತಂದೆಯೊಂದಿಗೆ ದುಡಿಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.  ಮೌಲಾಹುಸೇನ್ 01 ಮತ್ತು 02 ನೇ ತರಗತಿಯನ್ನು ಮುನಿರಾಬಾದಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ 03 ರಿಂದ 05 ನೇ ತರಗತಿ ವರೆಗಿನ ಶಿಕ್ಷಣವನ್ನು ಗಂಗಾವತಿ ತಾಲೂಕಿನ ಬಂಡ್ರಾಳ ಗ್ರಾಮದ ಸರ್ಕಾರಿ ಉರ್ದು ಹಿ.ಪ್ರಾಥಮಿಕ ಶಾಲೆಯಲ್ಲಿ ಮಾಡಿದ್ದಾನೆ.  ನಂತರ ಶಾಲೆಗೆ ಗುಡ್‍ಬೈ ಹೇಳಿ ಗಂಗಾವತಿಯ ಮದರಸಾ ಒಂದರಲ್ಲಿ ಆತನನ್ನು ಸೇರಿಸಲಾಗಿದೆ.  ಸಾಮಾನ್ಯವಾಗಿ ಮದರಸಾದಲ್ಲಿನ ವಿದ್ಯಾರ್ಥಿಗಳೂ ಕೂಡ ಶಾಲಾ ಶಿಕ್ಷಣಕ್ಕೆ ದಾಖಲಿಸುವುದು ವಾಡಿಕೆ.  ಆತರೆ, ಈ ಬಾಲಕ ಅದು ಹೇಗೋ ಶಾಲಾ ದಾಖಲಾತಿಯಿಂದ ವಂಚಿತನಾಗಿ, ಸುಮಾರು 03-04 ವರ್ಷ ಶಾಲೆಗೆ ದೂರವಾಗಿದ್ದಾನೆ.  ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಜಿ.ಪಂ. ಸಿಇಓ ರಾಮಚಂದ್ರನ್ ಅವರು,  ಶಿಕ್ಷಣದ ಮಹತ್ವ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಆತನ ಶಿಕ್ಷಣ ಮುಂದುವರಿಯುವುದು ಸೂಕ್ತ ಎಂಬುದರ ಬಗ್ಗೆ ಅದೇ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಆತನ ತಂದೆಯ ಮನವೊಲಿಸಿದ್ದಾರೆ.  ಬಾಲಕ ಮೌಲಾಹುಸೇನ್‍ಗೆ ಕೆಲಹೊತ್ತು ಸಲಹೆ ನೀಡಿ, ಅವನು ಶಾಲೆಗೆ ಹೋಗಲು ಪ್ರೇರೇಪಣೆ ನೀಡಿದ್ದಾರೆ.  ಬಾಲಕನೂ ಕೂಡ ತಾನು ಶಾಲೆಗೆ ಹೋಗಿ ಉತ್ತಮ ಶಿಕ್ಷಣ ಪಡೆಯಲು ಉತ್ಸುಕನಾಗಿದ್ದಾನೆ.  ಕೂಡಲೆ ಸಿಇಓ ಅವರು, ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬಿಆರ್‍ಸಿ ಅವರನ್ನು ಕರೆಯಿಸಿಕೊಂಡು, ತಾವೇ ಖುದ್ದಾಗಿ ಗಂಗಾವತಿಯ ಇಸ್ಲಾಂಪುರದ ಉರ್ದು ಶಾಲೆಗೆ ಕರೆದುಕೊಂಡು ಹೋಗಿ ದಾಖಲಾತಿ ಮಾಡಿಸಿದ್ದಾರೆ.  ಅಲ್ಲದೆ ಮೂರ್ನಾಲ್ಕು ವರ್ಷಗಳಿಂದ ಶಾಲೆಗೆ ತೆರಳಿರುವ ಬಾಲಕನಿಗೆ ಒಂದು ವರ್ಷ ಅವಧಿಯ ಬ್ರಿಡ್ಜ್ ಕೋರ್ಸ್ ಸೇತುಬಂಧದ ಮೂಲಕ ಸಾಮಾನ್ಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಕ್ಕೆ ತಕ್ಕಂತೆ, ಆ ಬಾಲಕನನ್ನು ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಉರ್ದು ಶಾಲೆಗೆ ದಾಖಲಿಸಿರುವ ಆತನಿಗೆ ಸಮವಸ್ತ್ರ, ಪಠ್ಯಪುಸ್ತಕಗಳು, ಶೂ-ಸಾಕ್ಸ್ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವಂತೆಯೂ ಸೂಚನೆ ನೀಡಿದರು.
     ಕೂಲಿ ಕೆಲಸದಲ್ಲಿ ತನ್ನ ಭವಿಷ್ಯವನ್ನು ಕಂಡುಕೊಳ್ಳಲು ಹೊರಟಿದ್ದ ಬಾಲಕನನ್ನು ರಕ್ಷಿಸಿ, ಮರಳಿ ಶಾಲೆಗೆ ದಾಖಲಿಸುವ ಮೂಲಕ ಬಾಲಕ ತನ್ನ ಭವ್ಯ ಭವಿಷ್ಯವನ್ನು ಶಿಕ್ಷಣದ ಮೂಲಕ ರೂಪಿಸಿಕೊಳ್ಳಲು ಜಿ.ಪಂ. ಸಿಇಓ ರಾಮಚಂದ್ರನ್ ಅವರು ನೆರವಾಗಿದ್ದು ಪ್ರಶಂಸನೀಯ. 
     ಜಿಲ್ಲೆಯಲ್ಲಿ 05 ರಿಂದ 15 ವರ್ಷದೊಳಿಗಿನ ಅದೆಷ್ಟೋ ಮಕ್ಕಳು ಬಡತನ, ಜಾಗೃತಿಯ ಕೊರತೆ ಹೀಗೆ ಹಲವಾರು ಕಾರಣಗಳಿಗಾಗಿ ಶಾಲೆಯಿಂದ ಹೊರಗುಳಿದು, ರಸ್ತೆ ಕಾಮಗಾರಿಗಳು, ಹೋಟೆಲ್, ರಸ್ತೆ ಬದಿ ವ್ಯಾಪಾರ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುತ್ತಿರುವ ಸಾಧ್ಯತೆಗಳಿವೆ.  ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.  14 ವರ್ಷದೊಳಗಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕೆಂದು ಕಾಯ್ದೆಯಾಗಿದೆ.  ಇನ್ನು ಶಿಕ್ಷಕರು, ಅಧಿಕಾರಿಗಳು ಮಾತ್ರವಲ್ಲದೆ ಪಾಲಕರು ಸಹ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ತಪ್ಪದೆ ಶಾಲೆಗೆ ದಾಖಲಿಸಿ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಮುಂದಾಗಬೇಕು.  ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಯಾರಿಗೇ ಮಾಹಿತಿ ದೊರೆತರೂ, ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ತಿಳಿಸಿ, ಆ ಮಗುವಿನ ಶಿಕ್ಷಣಕ್ಕೆ ಸಹಕರಿಸಿ ಎನ್ನುತ್ತಾರೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು.
Post a Comment