Tuesday, 19 July 2016

ಗ್ರಾಮೀಣರಿಗೆ ಗುಣಮಟ್ಟದ ಸ್ವಯಂ ಉದ್ಯೋಗ ತರಬೇತಿ ದೊರೆಯಲಿ- ರವಿ ಬಸರಿಹಳ್ಳಿ

ಕೊಪ್ಪಳ ಜು. 19 (ಕರ್ನಾಟಕ ವಾರ್ತೆ): ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್‍ನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಈಗಾಗಲೆ ಗ್ರಾಮೀಣರಿಗೆ ಹಲವು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇನ್ನಷ್ಟು ಗುಣಮಟ್ಟದ ಉದ್ಯೋಗ ತರಬೇತಿ ದೊರೆಯುವಂತಾಗಬೇಕು.  ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಹೇಳಿದರು.
     ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಕೊಪ್ಪಳ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ (ಆರ್‍ಸೆಟಿ) ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳದ ಸ್ಟೇಟ್ ಬ್ಯಾಂಕ್ ಹೈದ್ರಾಬಾದ್‍ನ ಆರ್‍ಸೆಟಿ ಸಂಸ್ಥೆಯು ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳಿಗೆ ಹಲವು ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಆಯೋಜಿಸುತ್ತಿದೆ.  ಹೈನುಗಾರಿಕೆ, ಟೇಲರಿಂಗ್, ಮೊಬೈಲ್ ರಿಪೇರಿ, ಸಣ್ಣ-ಪುಟ್ಟ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಹತ್ತು ಹಲವು ಬಗೆಯ ಸ್ವಯಂ ಉದ್ಯೋಗ ಆಧಾರಿತ ತರಬೇತಿಗಳು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರಿಗೆ ಅತ್ಯಂತ ಉಪಯುಕ್ತವಾಗಿವೆ.  ಈ ನಿಟ್ಟಿನಲ್ಲಿ ಇನ್ನೂ ಹೆಚ್ಚು ಗುಣಮಟ್ಟದ ತರಬೇತಿಯನ್ನು ಸಂಸ್ಥೆ ವತಿಯಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ದೊರೆಯುವಂತಾಗಬೇಕು.  ಇದಕ್ಕಾಗಿ ತರಬೇತಿ ಸಂಸ್ಥೆಯಲ್ಲಿ ಹೆಚ್ಚಿನ ಸವಲತ್ತುಗಳು ಅಭ್ಯರ್ಥಿಗಳಿಗೆ ದೊರೆಯಬೇಕು ಎಂದು ರವಿ ಬಸರಿಹಳ್ಳಿ ಅವರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಆರ್‍ಸೆಟಿ ಸಂಸ್ಥೆಯ ನಿರ್ದೇಶಕ ಸಂಜೀವ್ ಕಾಮಗಿರಿ ಅವರು, ತರಬೇತಿ ಸಂಸ್ಥೆಯಲ್ಲಿ ಕಳೆದ 2015-16 ನೇ ಸಾಲಿನಲ್ಲಿ ಒಟ್ಟಾರೆ 37 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, 927 ಅಭ್ಯರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ.  ಈ ವರ್ಷ 20 ತರಬೇತಿಗಳನ್ನು ಹಮ್ಮಿಕೊಂಡಿದ್ದು, 607 ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ.  ತರಬೇತಿ ಸಂಸ್ಥೆಯಲ್ಲಿ ಇದುವರೆಗೂ ಒಟ್ಟಾರೆ 284 ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 10200 ಅಭ್ಯರ್ಥಿಗಳು ತರಬೇತಿ ಪಡೆದುಕೊಂಡು, ಸ್ವಯಂ ಉದ್ಯೋಗ ರೂಪಿಸಿಕೊಂಡಿದ್ದಾರೆ.  2013-14 ನೇ ಸಾಲಿನಿಂದ 2015-16 ಸಾಲಿನವರೆಗಿನ ತರಬೇತಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ವತಿಯಿಂದ 21. 62 ಲಕ್ಷ ರೂ. ಅನುದಾನ ಬಿಡುಗಡೆಯಾಗಬೇಕಾಗಿದೆ.  ತರಬೇತಿ ಸಂಸ್ಥೆಯಲ್ಲಿ ಸದ್ಯ ಅಭ್ಯರ್ಥಿಗಳ ತರಬೇತಿ, ವಾಸ್ತವ್ಯಕ್ಕೆ ಸ್ಥಳಾವಕಾಶ ಕಡಿಮೆ ಇದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಈಗಾಗಲೆ ಕೇಂದ್ರ ಸರ್ಕಾರ 01 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.  ಆದರೆ ಸ್ಥಳ ಖರೀದಿಗೆ ಅನುದಾನ ಲಭ್ಯವಿಲ್ಲದಿರುವುದರಿಂದ, ಸರ್ಕಾರಿ ಜಾಗ ಪಡೆಯಲು ಈಗಾಗಲೆ ಜಿಲ್ಲಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಲಾಗಿದೆ ಎಂದರು.  ಇದಕ್ಕೆ ಉತ್ತರಿಸಿದ ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು, ತರಬೇತಿಗೆ ಸಂಬಂಧಿಸಿದಂತೆ ಬಾಕಿ ಅನುದಾನವನ್ನು ಆದ್ಯತೆ ಮೇರೆಗೆ ಶೀಘ್ರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.  ಕಟ್ಟಡಕ್ಕೆ ಸೂಕ್ತ ಸ್ಥಳವನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
     ಸಭೆಯಲ್ಲಿ ಉಪಸ್ಥಿತರಿದ್ದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿ ಡಾ. ಎಂ.ಬಿ. ಪಾಟೀಲ್ ಅವರು ಮಾತನಾಡಿ, ತರಬೇತಿ ಸಂಸ್ಥೆಯಲ್ಲಿ ಅಭ್ಯರ್ಥಿಗಳಿಗೆ ಕೃಷಿ, ಹೈನುಗಾರಿಕೆಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳಲ್ಲಿ, ವಿಸ್ತರಣಾ ಶಿಕ್ಷಣ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
     ಸಭೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧಿಕಾರಿ ಪಿ.ಕೆ. ಡೊಂಗ್ರಿ, ಸರ್ಕಾರಿ ಪಾಲಿಟೆಕ್ನಿಕ್‍ನ ವಾದಿರಾಜ ಮಠದ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕ ಜಿ.ಬಿ. ಬಿರಾದಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ಎಸ್.ಎಂ. ಚೌಹಾಣ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕೈಮಗ್ಗ ಮತ್ತು ಜವಳಿ ಇಲಾಖೆಯ ರಾಮಚಂದ್ರರಾವ್ ಕುಲಕರ್ಣಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಶ್ರೀಕಾಂತ ಬೆದವಟ್ಟಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.
Post a Comment