Thursday, 28 July 2016

ಉಪವಾಸ ಮಾಡಿ ಶೌಚಾಲಯ ಗಿಟ್ಟಿಸಿದ ಸ್ವಚ್ಛಾಗ್ರಹಿ ಮಲ್ಲಮ್ಮ

ಕೊಪ್ಪಳ ಜು. 28 (ಕರ್ನಾಟಕ ವಾರ್ತೆ): ಶೌಚಾಲಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿ, ನಾಡಿನಾದ್ಯತ ಎಲ್ಲರ ಗಮನಸೆಳೆದಿದ್ದ ಮಲ್ಲಮ್ಮಳ ಸತ್ಯಾಗ್ರಹಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಮಲ್ಲಳ ಬಯಕೆಯಂತೆ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
     ಗಂಗಾವತಿ ತಾಲೂಕಿನ ಡಣಾಪುರ ಗ್ರಾಮಕ್ಕೆ ಗುರುವಾರದಂದು ಭೇಟಿ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, 10 ನೇ ತರಗತಿ ವಿದ್ಯಾರ್ಥಿನಿ ಮಲ್ಲಮ್ಮಳ ಮನೆಗೆ ಭೇಟಿ ನೀಡಿ, ಪೂರ್ಣಗೊಂಡ ಶೌಚಾಲಯವನ್ನು ವೀಕ್ಷಿಸಿದರು.  ನಂತರ ಮಾತನಾಡಿದ ಅವರು, ಸತ್ಯಕ್ಕಾಗಿ ಹೋರಾಡುವವರು ಸತ್ಯಾಗ್ರಹಿ.  ಸ್ವಚ್ಛತೆಗಾಗಿ ಹೋರಾಡುವವರು ಸ್ವಚ್ಛಾಗ್ರಹಿ.  ಈ ದಿಸೆಯಲ್ಲಿ ಕೊಪ್ಪಳ ಜಿಲ್ಲೆಯ ಮಲ್ಲಮ್ಮ ನಿಜಕ್ಕೂ ಸ್ವಚ್ಛಾಗ್ರಹಿ ಎಂಬುದಾಗಿ ಮಲ್ಲಮ್ಮಳನ್ನು ಪ್ರಶಂಸಿದರು.  ಮಲ್ಲಮ್ಮಳ ಉಪವಾಸ ಸತ್ಯಾಗ್ರಹಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಇದೀಗ ಆಕೆಯ ಮನೆಯ ಮುಂದೆ ಶೌಚಾಲಯ ನಿರ್ಮಾಣ ಪೂರ್ಣಗೊಂಡಿದೆ.  ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗುವವರೆಗೂ, ಜಾಗೃತಿಗಾಗಿ ಗ್ರಾಮಗಳ ಭೇಟಿ ನಿರಂತರವಾಗಿರುತ್ತದೆ.  ಮಲ್ಲಮ್ಮ ವಿದ್ಯಾರ್ಥಿನಿ ಈ ನಾಡಿನ ಎಲ್ಲ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದು, ಪ್ರತಿ ಗ್ರಾಮದಲ್ಲೂ ಮಲ್ಲಮ್ಮನಂತೆ ಎಲ್ಲರೂ ತಮ್ಮ ಪಾಲಕರಿಗೆ ಶೌಚಾಲಯಕ್ಕಾಗಿ ಒತ್ತಾಯಿಸುವಂತಾಗಬೇಕು.  ಶಿಕ್ಷಕರ ಮಾತನ್ನು ಮಕ್ಕಳು ವೇದವಾಕ್ಯವೆಂಬಂತೆ ನಂಬುತ್ತಾರೆ.  ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ವೈಯಕ್ತಿಕ ಶೌಚಾಲಯಕ್ಕಾಗಿ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.
     ಶೌಚಾಲಯ ನಿರ್ಮಾಣ ಕುರಿತು ಪ್ರತಿಕ್ರಿಯಿಸಿದ ಮಲ್ಲಮ್ಮ, ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ಕೇವಲ ಒಂದು ವಾರದೊಳಗೆ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಶೌಚಾಲಯ ನಿರ್ಮಾಣಗೊಂಡಿದ್ದು, ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.  ಎಲ್ಲ ಕುಟುಂಬಗಳಿಗೂ ಕಡ್ಡಾಯವಾಗಿ ಶೌಚಾಲಯ ಇರಲೇಬೇಕು. ಇದು ಸ್ವಾಭಿಮಾನದ ಸಂಕೇತ ಎಂದರು.
     ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment