Wednesday, 27 July 2016

ಜಿಲ್ಲಾ ಪಂಚಾಯತಿ ಅಧ್ಯಕ್ಷರಿಂದ ಗುನ್ನಾಳ ಗ್ರಾಮದಲ್ಲಿ ಶೌಚಾಲಯ ಜಾಗೃತಿ

ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಕೋಳೂರು ಗ್ರಾಮ ಪಂಚಾಯತಿ ಅಕ್ಟೋಬರ್ 02 ರ ಒಳಗಾಗಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತಿಯಾಗಿಸಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಸಹಕಾರ ಅಗತ್ಯವಿದೆ.  ಈ ನಿಟ್ಟಿನಲ್ಲಿ ಎಲ್ಲರೂ ವೈಯಕ್ತಿಕ ಶೌಚಾಲಯಗಳನ್ನು ತಪ್ಪದೆ ನಿರ್ಮಿಸಿಕೊಳ್ಳಬೇಕು ಎಂದು ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಮನವಿ ಮಾಡಿಕೊಂಡರು.
     ಕೋಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗುನ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಶೌಚಾಲಯಗಳ ಮಹತ್ವ ಕುರಿತಂತೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣದ ಆದೇಶ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
     ಕೋಳೂರು ಗ್ರಾಮ ಪಂಚಾಯತಿಯನ್ನು ಇದೇ ಅಕ್ಟೋಬರ್ 02 ರ ಒಳಗಾಗಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತಿಯಾಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕೆ ಪೂರಕವಾಗಿ ಗ್ರಾಮಸ್ಥರ ಸ್ಪಂದನೆಯು ಉತ್ತಮವಾಗಿದೆ.  ಇದೇ ಗುರಿಯನ್ನಿಟ್ಟುಕೊಂಡು ಆಗಸ್ಟ್ 01 ರವರೆಗೂ ಕೊಳೂರು ಗ್ರಾಮ ಪಂಚಾಯತಿಯಲ್ಲಿ ಆಗಸ್ಟ್ 01 ರವರೆಗೆ ನಿತ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರೂ ಸಹ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಿದ್ದಾರೆ ಎಂದು ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
     ಗುನ್ನಳ್ಳಿ ಗ್ರಾಮದಲ್ಲಿ 147 ಕುಟುಂಬಗಳಿದ್ದು, ಈಗಾಗಲೆ 82 ಕುಟುಂಬಗಳು ಶೌಚಾಲಯ ಹೊಂದಿವೆ.  ಉಳಿದ ಕುಟುಂಬಗಳು ಇದೀಗ ಶೌಚಾಲಯ ನಿರ್ಮಾಣಕ್ಕೆ ಕಾಮಗಾರಿ ಆದೇಶ ಪಡೆದುಕೊಂಡಿವೆ.
     ಕಾರ್ಯಕ್ರಮದಲ್ಲಿ ಗಣ್ಯರಾದ ಗಾಳೆಪ್ಪ ಪೂಜಾರ್,  ಗ್ರ್ರಾಮ ಪಂಚಾಯತಿ ಅಧ್ಯಕ್ಷೆ ಬಸಮ್ಮ ಹೆಚ್.ಪೂಜಾರ,  ಗ್ರಾ.ಪಂ ಉಪಾಧ್ಯಕ್ಷೆ ಶಿವಮ್ಮ ಎಸ್. ಭೂತಣ್ಣವರ, ಗ್ರಾ.ಪಂ ಸರ್ವ ಸದಸ್ಯರು, ಪಿಡಿಒ ವೈಜನಾಥ ಸಾರಂಗಮಠ, ಕಾರ್ಯದರ್ಶಿ ಮರಿಯಪ್ಪ ಮಡಿವಾಳರ, ಆರೋಗ್ಯ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯೋಪಾಧ್ಯಾಯರು, ಸಾರ್ವಜನಿಕರು, ಶಾಲಾ ಮಕ್ಕಳು, ಪಾಲ್ಗೊಂಡಿದ್ದರು.
Post a Comment