Thursday, 28 July 2016

ಬಯಲು ಶೌಚಕ್ಕೆ ಹೊರಟಿದ್ದವರ ತಡೆದು ಬುದ್ದಿ ಹೇಳಿದ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ

ಕೊಪ್ಪಳ ಜು. 28 (ಕರ್ನಾಟಕ ವಾರ್ತೆ): ತಾಲೂಕಿನ ಹೊರತಟ್ನಾಳ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಬಯಲು ಬಹಿರ್ದೆಸೆಗೆ ಹೊರಟಿದ್ದ ಗ್ರಾಮಸ್ಥರನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ತಡೆದು, ವಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಬುದ್ದಿವಾದ ಹೇಳಿದರು.
     ಕೋಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಶೌಚಾಲಯ ಜಾಗೃತಿ ಅಭಿಯಾನವನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಹಮ್ಮಿಕೊಂಡಿದ್ದು, ನಿತ್ಯ ಬೆಳಿಗ್ಗೆ ಒಂದೊಂದು ಗ್ರಾಮಗಳಿಗೆ ಭೇಟಿ ನೀಡಿ, ಸಾರ್ವಜನಿಕರಲ್ಲಿ ಶೌಚಾಲಯ ಕುರಿತಂತೆ ಅರಿವು ಮೂಡಿಸುತ್ತಿದ್ದಾರೆ.  ಅಲ್ಲದೆ ಶೌಚಾಲಯ ನಿರ್ಮಾಣ ಕಾಮಗಾರಿಗೆ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವಿತರಿಸುವ ಕಾರ್ಯಕ್ರಮವನ್ನೂ ಜಾರಿಗೊಳಿಸುತ್ತಿದ್ದಾರೆ.  ಅದರಂತೆ ಹೊರತಟ್ನಾಳ ಗ್ರಾಮದಲ್ಲಿ ಗುರುವಾರದಂದು ಭೇಟಿ ನೀಡಿದ ಜಿ.ಪಂ. ಅಧ್ಯಕ್ಷರು, ಬಯಲು ಬಹಿರ್ದೆಸೆಗೆ ತೆರಳುತ್ತಿದ್ದ ಗ್ರಾಮಸ್ಥರನ್ನು ತಡೆದು, ಎಲ್ಲರ ಆರೋಗ್ಯ ದೃಷ್ಟಿಯಿಂದ ತಪ್ಪದೆ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಬುದ್ದಿವಾದ ಹೇಳಿದರು.
     ಹೊರತಟ್ನಾಳ ಗ್ರಾಮದಲ್ಲಿ ಒಟ್ಟು 177ಕುಟುಂಬಗಳಿದ್ದು ಅದರಲ್ಲಿ ಈಗಾಗಲೇ 84ಕುಟುಂಬಗಳು ಶೌಚಾಲಯ ಹೊಂದಿದ್ದು ಉಳಿದ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅವರಿಂದ ಅರ್ಜಿ ಸ್ವೀಕರಿಸಿದ್ದು ಕಾಮಗಾರಿ ಆದೇಶ ನೀಡಲಾಗಿದೆ.  ಗ್ರಾ.ಪಂ. ಅರ್ಧಯಕ್ಷೆ ಬಸಮ್ಮ ಹೆಚ್. ಪೂಜಾರ್, ಉಪಾಧ್ಯಕ್ಷೆ ಶಿವಮ್ಮ ಭೂತಣ್ಣವರ, ಪಿಡಿಓ ವೈಜನಾಥ ಸಾರಂಗಮಠ, ಕಾರ್ಯದರ್ಶಿ ಮರಿಯಪ್ಪ ಮಡಿವಾಳ, ಗಾಳೆಪ್ಪ ಪೂಜಾರ್ ಸೇರಿದಂತೆ ಹಲವರು ಜಿ.ಪಂ. ಅಧ್ಯಕ್ಷರೊಂದಿಗೆ ತೆರಳಿ ಜಾಗೃತಿ ಮೂಡಿಸಿದರು.
Post a Comment