Wednesday, 20 July 2016

ಬಯಲು ಬಹಿರ್ದೆಸೆಗೆ ಹೋಗುವ ಜನರ ಮನಸ್ಥಿತಿ ಬದಲಾಗಬೇಕು- ಡಾ. ಅಜಯ್ ಸಿನ್ಹಾಕೊಪ್ಪಳ ಜು. 20 (ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲ ಶೇ. 100 ರಷ್ಟು ಕುಟುಂಬಗಳು ಶೌಚಾಲಯವನ್ನು ನಿರ್ಮಿಸಿ, ಬಳಸಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗಲಿದೆ.  ಈ ನಿಟ್ಟಿನಲ್ಲಿ ಬಯಲು ಬಹಿರ್ದೆಸೆಗೆ ಹೋಗುವ ಜನರ ಮನಸ್ಥಿತಿ ಇನ್ನಾದರೂ ಬದಲಾಗಬೇಕಿದೆ ಎಂದು ದೆಹಲಿಯ ಫೀಡ್‍ಬ್ಯಾಕ್ ಫೌಂಡೇಷನ್‍ನ  ಸಂಪನ್ಮೂಲ ವ್ಯಕ್ತಿ ಡಾ. ಅಜಯ್ ಸಿನ್ಹಾ ಅವರು ಹೇಳಿದರು.

     ಪ್ರಚೋದಾತ್ಮಕ ವಿಧಾನದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲು ಸಮುದಾಯ ಮುಂದಾಳತ್ವದಲ್ಲಿ ಕೈಗೊಳ್ಳಬೇಕಾದ ಯೋಜನೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಪಂಚಾಯತಿಯು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಯುನಿಸೆಫ್ ಹಾಗೂ ಫೀಡ್‍ಬ್ಯಾಕ್ ಫೌಂಡೇಷನ್‍ನ ಸಹಯೋಗದಲ್ಲಿ ನಗರದ ಬಿ.ಎಸ್. ಪವಾರ್ ಹೋಟೆಲ್ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಮಾಲೋಚನೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸುಮಾರು 8 ರಿಂದ 09 ಲಕ್ಷ ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿದೆ.  ಇದರಲ್ಲಿ ಕನಿಷ್ಟ ಶೇ. 60 ರಿಂದ 70 ರಷ್ಟು ಜನಸಂಖ್ಯೆ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದು, ಶೇ. 30 ರಿಂದ 40 ರಷ್ಟು ಜನ ಮಾತ್ರ ಶೌಚಾಲಯವನ್ನು ಹೊಂದಿದ್ದಾರೆ.  ಶೌಚಾಲಯವನ್ನು ಹೊಂದಿರುವ ಶೇ. 40 ರಷ್ಟು ಜನರೂ ಸಹ ಆರೋಗ್ಯ ದೃಷ್ಟಿಯಿಂದ ಸುರಕ್ಷಿತರಾಗಲು ಸಾಧ್ಯವಾಗುತ್ತಿಲ್ಲ.  ಇದಕ್ಕೆ ಕಾರಣ ಶೇ. 60 ರಷ್ಟು ಜನ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದು, ಇದರಿಂದಾಗಿ ನೊಣಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಅನಾರೋಗ್ಯ ಶೌಚಾಲಯ ಹೊಂದಿದವರನ್ನೂ ಕಾಡುತ್ತಿದೆ.  ದೇಶದಲ್ಲಿ ಬಯಲು ಮಲವಿಸರ್ಜನೆಯ ಕಾರಣದಿಂದಾಗಿ ಬರುವ ಡಯೇರಿಯಾ, ಅಪೌಷ್ಠಿಕತೆ ಸೇರಿದಂತೆ ವಿವಿಧ ರೋಗಗಳಿಂದ ನಿಮಿಷಕ್ಕೊಂದು ಮಗು ಸಾವನ್ನಪ್ಪುತ್ತಿದೆ ಎಂಬುದಾಗಿ ಆರೋಗ್ಯ ಸಂಸ್ಥೆಗಳು ವರದಿ ನೀಡಿವೆ.  ಅಂದರೆ ಬಯಲು ಮಲವಿಸರ್ಜನೆ ಮಾಡುವವರು ಅಷ್ಟೊಂದು ಬೃಹತ್ ಪ್ರಮಾಣದ ಮಕ್ಕಳು ಸಾಯಲು ಕಾರಣಕರ್ತರಾಗುತ್ತಿದ್ದಾರೆ.  ಮಲದ ಮೇಲೆ ಕುಳಿತುಕೊಳ್ಳುವ ಒಂದು ನೊಣ ಕನಿಷ್ಟ 06 ಮಿ.ಗ್ರಾಂ. ನಷ್ಟು ಮಲವನ್ನು ತನ್ನ ಕಾಲುಗಳಲ್ಲಿ ಹೊತ್ತು ತರುತ್ತದೆ.  ಇದರಲ್ಲಿ ಕೋಟ್ಯಾಂತರ ರೋಗಕಾರಕ ಬ್ಯಾಕ್ಟೀರಿಯಾಗಳಿರುತ್ತವೆ.  ಜನರು ಸೇವಿಸುವ ಆಹಾರ ಪದಾರ್ಥಗಳ ಮೇಲೆ ಕುಳಿತುಕೊಳ್ಳುವ ನೊಣ ಅಥವಾ ಇತರೆ ಕೀಟಗಳು, ಮಲವನ್ನು ಪುನಃ ಆಹಾರದ ಮೇಲೆ ಬೀಳಿಸುತ್ತವೆ.  ಜನರು ತಮಗರಿವಿಲ್ಲದಂತೆಯೇ ತಮ್ಮ ಆಹಾರದ ಜೊತೆಗೆ ಮಲದ ಅಂಶವನ್ನೂ ಸಹ ಸೇವಿಸುತ್ತಿದ್ದಾರೆ.  ಕೊಪ್ಪಳ ಜಿಲ್ಲೆಯೊಂದರಲ್ಲೇ ಸುಮಾರು 175 ಟನ್ ನಷ್ಟು ಮಲ, ಬಯಲಿನಲ್ಲಿ ವಿಸರ್ಜನೆಯಾಗುತ್ತಿದ್ದು, ತಿಂಗಳಿಗೆ ಸುಮಾರು 7250 ಟನ್ ಮಲ ಬಯಲಿನಲ್ಲಿಯೇ ವಿಸರ್ಜನೆಯಾಗುತ್ತಿದೆ.  ಪರಿಸ್ಥಿತಿ ಇಷ್ಟೊಂದು ಕೆಟ್ಟದ್ದಾಗಿರುವಾಗ, ಜಿಲ್ಲೆ ಆರೋಗ್ಯಪೂರ್ಣವಾಗಿರಲು ಹೇಗೆ ಸಾಧ್ಯ.  ಮಕ್ಕಳು ಹಾಗೂ ವಯಸ್ಕರಲ್ಲಿ ಶೇ. 80 ರಷ್ಟು ಆರೋಗ್ಯ ಸಮಸ್ಯೆಗಳು, ಶೇ. 50 ರಷ್ಟು ಅಪೌಷ್ಠಿಕತೆ, ಶೇ. 30 ರಷ್ಟು ಬೆಳವಣಿಗೆ ಕುಂಠಿತ ಹಾಗೂ ಪರಿಸರದ ಅಸಮತೋಲನಕ್ಕೆ ಬಯಲು ಬಹಿರ್ದೆಸೆ ಕಾರಣವಾಗುತ್ತಿದೆ ಎಂದು ಡಾ. ಅಜಯ್ ಸಿನ್ಹಾ ಬಯಲು ಬಹಿರ್ದೆಸೆಯ ದುಷ್ಪರಿಣಾಮಗಳ ಕುರಿತು ಎಳೆ ಎಳೆಯಾಗಿ ಕಾರ್ಯಗಾರದಲ್ಲಿ ಬಿಡಿಸಿಟ್ಟರು.

     ಇದಕ್ಕೆ ಪರಿಹಾರೋಪಾಗಳ ಬಗ್ಗೆ ವಿವರಿಸಿದ ಅಜಯ್ ಸಿನ್ಹಾ ಅವರು, ಶೇ. 100 ರಷ್ಟು ಕುಟುಂಬಗಳು ಶೌಚಾಲಯವನ್ನು ಹೊಂದಿ, ಅದನ್ನು ಬಳಸಿದಾಗ ಮಾತ್ರ ಜಿಲ್ಲೆ ಆರೋಗ್ಯಪೂರ್ಣವಾಗಲಿದೆ.  ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಕ್ರಾಂತಿಕಾರಿ ಬೆಳವಣಿಗೆಗಳು ಇಡೀ ದೇಶದ ಗಮನ ಸೆಳೆದಿದೆ.  ರಾಜಸ್ಥಾನದ ಬಿಕನೇರ್‍ನಲ್ಲಿ ಜನರು ನೀರಿಗಾಗಿ ಸುಮಾರು 03 ಕಿ.ಮೀ. ನಷ್ಟು ದೂರದಿಂದ ತರುವ ಪರಿಸ್ಥಿತಿ ಇದೆ.  ಆದರೂ ಇಲ್ಲಿ ಶೇ. 100 ರಷ್ಟು ಶೌಚಾಲಯ ನಿರ್ಮಾಣ ಸಾಧ್ಯವಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿಯೂ ಜನರಲ್ಲಿನ ಮನಸ್ಥಿತಿ ಇದೀಗ ಬದಲಾಗುವ ಹಂತಕ್ಕೆ ಬಂದು ನಿಂತಿದೆ.  ಶೌಚಾಲಯದ ಮಹತ್ವ ಹಾಗೂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ, ಸಿಬ್ಬಂದಿಗಳು ಜನರಲ್ಲಿ ನೀಡುತ್ತಿರುವ ಜಾಗೃತಿ, ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಚೋದನಾತ್ಮಕವಾಗಿ ಬೆಳೆಯಬೇಕು.  ಎಲ್ಲ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮನಸ್ಸು ಮಾಡಿದಲ್ಲಿ ಕೇವಲ 90 ದಿನಗಳ ಒಳಗಾಗಿ ಕೊಪ್ಪಳ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಸಾಧ್ಯವಿದೆ ಎಂದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಸಹ ಜನರು ಬೆಳಿಗ್ಗೆ ಹಾಗೂ ರಾತ್ರಿ ರಸ್ತೆಯ ಇಕ್ಕೆಲಗಳಲ್ಲಿ ಮಲವಿಸರ್ಜನೆಗೆ ಕುಳಿತುಕೊಳ್ಳುವುದು ಕಂಡುಬರುತ್ತಿದೆ.  ಒಂದೆಡೆ ಭಾರತ ದೇಶ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ ಎನ್ನುತ್ತಿದ್ದಾರೆ.  ಇನ್ನಾದರೂ ಗ್ರಾಮೀಣ ಭಾರತ ಬದಲಾಗಬೇಕಿದೆ.  ಎಲ್ಲ ಕುಟುಂಬಗಳೂ ಶೌಚಾಲಯ ಹೊಂದಿದಾಗ ಮಾತ್ರ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಎನ್ನಲು ಸಾಧ್ಯ ಎಂದರು.
     ಯುನಿಸೆಫ್‍ನ ಅಧಿಕಾರಿ ಕೃಷ್ಣನ್, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು. 
Post a Comment