Wednesday, 20 July 2016

ಬಯಲು ಶೌಚ ಮುಕ್ತಿಗೆ ಪಣ : ಶೌಚಾಲಯ ನಿರ್ಮಾಣ ಜಾಗೃತಿಯೇ ತಾ.ಪಂ ಸದಸ್ಯ ಮಹಮ್ಮದ್ ರಫಿ ಅವರ ನಿತ್ಯ ಕಾಯಕ


ಕೊಪ್ಪಳ, ಜು.20 (ಕರ್ನಾಟಕ ವಾರ್ತೆ) : ತಾನು ಪ್ರತಿನಿಧಿಸುವ ಕ್ಷೇತ್ರವನ್ನು ಸಂಪೂರ್ಣ ಬಯಲು ಶೌಚ ಮುಕ್ತವನ್ನಾಗಿಸಲು ಪಣ ತೊಟ್ಟಿರುವ ಗಂಗಾವತಿ ತಾಲೂಕಿನ ಶ್ರೀರಾಮನಗರ ಕ್ಷೇತ್ರದ ತಾಲೂಕು ಪಂಚಾಯತಿ ಸದಸ್ಯ ಮಹಮ್ಮದ್ ರಫಿ ಅವರು ಹತ್ತು ಜನರ ತಂಡವನ್ನು ರಚಿಸಿಕೊಂಡು, ನಿತ್ಯ ತಮ್ಮ ಕ್ಷೇತ್ರದಲ್ಲಿ ಶೌಚಾಲಯ ನಿರ್ಮಾಣ ವಿಷಯದಲ್ಲಿ ಜಾಗೃತಿ ಮೂಡಿಸುತ್ತಿದ್ದು, ಉಳಿದವರಿಗೆ ಮಾದರಿಯಾಗಿದ್ದಾರೆ. 
 
    ತಾ.ಪಂ ಸದಸ್ಯ ಮಹಮ್ಮದ್ ರಫಿ ಅವರು ತಮ್ಮದೇ ಆದ ಒಂದು ತಂಡವನ್ನು ರಚಿಸಿಕೊಂಡು ಬಯಲು ಶೌಚ ಮುಕ್ತ ಕ್ಷೇತ್ರವನ್ನಾಗಿಸಲು ಹಗಲು ಇರುಳು ಶ್ರಮಿಸುತ್ತಿದ್ದಾರೆ. 10 ಜನರನ್ನೊಳಗೊಂಡ ತಂಡ ಮಹಮ್ಮದ್ ರಫಿ ಅವರ ಮುಂದಾಳತ್ವದಲ್ಲಿ  ಪ್ರತಿದಿನ ಬೆಳಗ್ಗ 5 ಗಂಟೆಗೆ ಜಾಗೃತಿ ಅಭಿಯಾನ ಆರಂಭಿಸುತ್ತದೆ.  ಬಯಲು ಶೌಚಕ್ಕೆ ಹೋಗುವವರನ್ನು ತಡೆದು ಸ್ವಚ್ಛತೆಯ ಬಗ್ಗೆ ಮತ್ತು ಗ್ರಾಮದ ನೈರ್ಮಲ್ಯದ ಬಗ್ಗೆ ಮಾಹಿತಿ ನೀಡುವುದರ ಜೊತೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ.  ಶೌಚಾಲಯ ನಿರ್ಮಾಣಕ್ಕೆ ಮುಂದಾದ ಬಡವರಿಗೆ ಶೌಚಾಲಯ ನಿರ್ಮಾಣಕ್ಕೆ ಬೇಕಾಗುವ ಸ್ವತಃ ತಾವೇ ಸಾಮಗ್ರಿಗಳನ್ನು ಕೊಡಿಸಿ ಶೌಚಾಲಯ ನಿರ್ಮಿಸಿ ಕೊಡುತ್ತಿರುವುದು ವಿಶೇಷ.
 
    ಕೆಲ ದಿನಗಳ ಹಿಂದೆ ಶ್ರೀರಾಮನಗರದ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಕರಟೂರಿ ಅವರೂ ಕೂಡ ಬಯಲು ಶೌಚಕ್ಕೆ ಹೊರಟವರನ್ನು ತಡೆದು ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳುವಂತೆ ಕಾಲಿಗೆ ನಮಸ್ಕರಿಸಿ ಮನವಿ ಮಾಡಿಕೊಂಡಿದ್ದರು. ಹಾಗೇ ಶೌಚಾಲಯ ಕಟ್ಟಿಕೊಳ್ಳಲು ಮುಂದಾದವರಿಗೆ ಶೌಚಾಲಯದ ಫ್ಯಾನ್ ಉಚಿತವಾಗಿ ವಿತರಿಸಿ ಎಲ್ಲರ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.  ಮಹಮ್ಮದ್ ರಫಿ ಅವರು, ಬಡವರಿಗೆ ಶೌಚಾಲಯ ಕಟ್ಟಿಸಲು, ಗ್ರಾಮದ ಕೆಲ ಶ್ರೀಮಂತರಿಂದ ತಾತ್ಕಾಲಿಕವಾಗಿ ಪ್ರೋತ್ಸಾಹ ಧನ ಸಂಗ್ರಹಿಸಿ ಶೌಚಾಲಯ ನಿರ್ಮಿಸಿ, ನಂತರ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಬರುವ ಸಹಾಯಧನವನ್ನ ಮರುಪಾವತಿ ಮಾಡುವ ಆಲೋಚನೆ ಮಾಡಿದ್ದಾರೆ.
     ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗಂಗಾವತಿ ತಾಲೂಕನ್ನು ಅಕ್ಟೋಬರ್-2 ರೊಳಗಾಗಿ ಬಯಲು ಬಹಿರ್ದೆಸೆ ಮುಕ್ತ ಮಾಡಲು ತಾ.ಪಂ ಸದಸ್ಯ ಮಹಮ್ಮದ್ ರಫಿ ಅವರ ತಂಡ ಪಟ ತೊಟ್ಟಿದ್ದು, ಈ ನಿಟ್ಟಿನಲ್ಲಿ ಮನೆ-ಮನೆ ಭೇಟಿ ನೀಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಲ್ಲಿ ವಿನಂತಿಸಿಕೊಳ್ಳುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.  ಹಲವರು ಇವರ ಜಾಗೃತಿ ಅಭಿಯಾನದಿಂದ ಪ್ರೇರೇಪಣೆಗೊಂಡು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುತ್ತಿದ್ದು, ಇವರ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
     ಇವರಂತೆಯೇ ಉಳಿದ ಜನಪ್ರತಿನಿಧಿಗಳು ಬಯಲು ಶೌಚ ಮುಕ್ತ ಅಭಿಯಾನ ಜಾಗೃತಿ ಕೈಗೊಂಡಲ್ಲಿ ಕೊಪ್ಪಳ ಜಿಲ್ಲೆ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿಯೇ ಮೊದಲ ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಲಿದೆ ಎನ್ನುತ್ತಾರೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು.
Post a Comment