Sunday, 17 July 2016

ಕಲಾಜಾಥಾ-ಸರ್ಕಾರಿ ಯೋಜನೆಗಳ ಪ್ರಚಾರಾಂದೋಲನಕ್ಕೆ ಸಚಿವ ಬಸವರಾಜ ರಾಯರಡ್ಡಿ ಚಾಲನೆ


ಕೊಪ್ಪಳ ಜು. 17 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿರುವ ‘ಕಲಾಜಾಥಾ’ ವಿಶೇಷ ಪ್ರಚಾರಾಂದೊಲನಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಭಾನುವಾರದಂದು ಕುಷ್ಟಗಿಯ ಸಕ್ರ್ಯೂಟ್ ಹೌಸ್ ಬಳಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು

     ನಂತರ ಮಾತನಾಡಿದ ಸಚಿವ ಬಸವರಾಜ ರಾಯರಡ್ಡಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ, ಮೈತ್ರಿ-ಮನಸ್ವಿನಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ಜನಸಾಮಾನ್ಯರ ಶ್ರೇಯೋಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಜಾರಿಗೊಳಿಸಿದೆ.  ಈ ಯೋಜನೆಗಳ ಬಗ್ಗೆ ಜಾನಪದ ಗೀತೆಗಳ ಮೂಲಕ ಹಾಗೂ ಬೀದಿನಾಟಕಗಳ ಮೂಲಕ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಕಲಾಜಾಥಾ- ವಿಶೇಷ ಪ್ರಚಾರಾಂದೋಲನ ಉತ್ತಮ ಪ್ರಯತ್ನವಾಗಿದೆ.   ಜನರ ಹಿತಕಾಯುವ ಸಲುವಾಗಿಯೇ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ, ಜನರು ಅರಿತುಕೊಂಡು, ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಗಳು ತಲುಪಿದಾಗಲೇ, ಯೋಜನೆ ಜಾರಿಯ ಉದ್ದೇಶ ಈಡೇರಲಿದೆ ಎಂದರು.

     ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರೂ ಸಹ ಕಲಾಜಾಥಾ ವಾಹನಕ್ಕೆ ಹಸಿರು ನಿಶಾನೆ ತೋರಿಸಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
     ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು, ಕಲಾಜಾಥಾ- ವಿಶೇಷ ಪ್ರಚಾರಾಂದೋಲನದ ಕುರಿತು ವಿವರಣೆ ನೀಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ವಿಶೇಷವಾಗಿ ಸಿದ್ಧಪಡಿಸಿರುವ ವಾಹನವನ್ನು ಬಳಸಿಕೊಂಡು, ಜೊತೆಗೆ ಬೀದಿನಾಟಕ ಕಲಾವಿದರ ಮೂಲಕ ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಜು. 18 ರಿಂದ ಆಗಸ್ಟ್ 06 ರವರೆಗೆ ಇಪ್ಪತ್ತು ದಿನಗಳ ಕಾಲ, ದಿನಕ್ಕೆ ಎರಡು ಗ್ರಾಮಗಳಂತೆ ಕಲಾಜಾಥಾ ಜಿಲ್ಲೆಯಾದ್ಯಂತ ಸಂಚರಿಸಿ, ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದೆ.  ಕಾರ್ಯಕ್ರಮದ ಅವಧಿಯಲ್ಲಿ ಪ್ರತಿದಿನ ಎರಡು ಗ್ರಾಮಗಳಲ್ಲಿ ಬೀದಿನಾಟಕಗಳ ಮೂಲಕ ಯೋಜನೆಗಳ ಪ್ರಚಾರ ನಡೆಯಲಿದೆ ಎಂದರು.
     ಇದೇ ಸಂದರ್ಭದಲ್ಲಿ ಚಿಕ್ಕಮ್ಯಾಗೇರಿಯ ರಂಗಚೇತನ ಸಾಂಸ್ಕøತಿಕ ಕಲಾತಂಡದವರು ಸರ್ಕಾರಿ ಯೋಜನೆಗಳ ಬಗ್ಗೆ ಪ್ರಸ್ತುತಪಡಿಸಿದ ಜಾನಪದ ಗೀತೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
     ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಕೊಪ್ಪಳ ಮಾಜಿ ಶಾಸಕ ಬಸವರಾಜ ಹಿಟ್ನಾಳ, ಪುರಸಭೆ ಅಧ್ಯಕ್ಷ ಕಲ್ಲೇಶ್ ತಾಳದ, ತಾ.ಪಂ. ಅಧ್ಯಕ್ಷೆ ಮಹಾಂತಮ್ಮ ಪೂಜಾರ್, ಜಿ.ಪಂ. ಸದಸ್ಯರುಗಳಾದ ಕೆ. ಮಹೇಶ್, ಹನುಮಗೌಡ ಪಾಟೀಲ್, ವಿಜಯನಾಯಕ್, ಗಣ್ಯರಾದ ಕೆ. ಶರಣಪ್ಪ ಸೇರಿದಂತೆ ಹಲವು ಗಣ್ಯಾತಿಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಲಾಜಾಥಾ ಕಾರ್ಯಕ್ರಮ ವಿವರ : ಜು. 18 ರಂದು ಕುಷ್ಟಗಿ ತಾಲೂಕಿನ ಕೊರಡಕೇರಾ, ಹಿರೇನಂದಿಹಾಳ, 19 ರಂದು ಬೆನಕನಾಳ, ತುಮರಿಕೊಪ್ಪ, 20 ರಂದು ನಿಲೋಗಲ್, ಬಿಳೇಕಲ್.  21 ರಂದು ಕ್ಯಾದಿಗುಪ್ಪಾ, ಮುದೇನೂರ.  22 ರಂದು ಕಿಲ್ಲಾರಹಟ್ಟಿ, ಸಂಗನಹಾಳ.  23 ರಂದು ಗಂಗಾವತಿ ತಾಲೂಕಿನ ಬಸರಿಹಾಳ, ಹಿರೇಖೇಡಾ.  24 ರಂದು ಕರಡೋಣ, ನವಲಿ.  25 ರಂದು ಮೈಲಾಪುರ, ಚೆಳ್ಳೂರು.  26 ರಂದು ಹುಳ್ಕಿಹಾಳ, ಬರಗೂರ.  27 ರಂದು ಡಣಾಪುರ, ಮುಸ್ಟೂರು.  28 ರಂದು ಚಿಕ್ಕಜಂತಕಲ್, ಆನೆಗುಂದಿ.  ಜು. 29 ರಂದು ಕೊಪ್ಪಳ ತಾಲೂಕು ಹೊಸಬಂಡಿಹರ್ಲಾಪುರ, ಹಿಟ್ನಾಳ.  30 ರಂದು ಬೇವಿನಹಳ್ಳಿ, ಗುಳದಳ್ಳಿ.  31 ರಂದು ಕಲ್ಲತಾವರಗೇರಾ, ಹಿರೇಬಗನಾಳ.  ಆಗಸ್ಟ್ 01 ರಂದು ಗೊಂಡಬಾಳ, ಬೋಚನಹಳ್ಳಿ.  02 ರಂದು ಬೆಟಗೇರಿ, ಹಲಗೇರಿ.  03 ರಂದು ಯಲಬುರ್ಗಾ ತಾಲೂಕು ಬೆಣಕಲ್, ಯರೇಹಂಚಿನಾಳ.  04 ರಂದು ಮಂಗಳೂರು, ಕುದರಿಮೋತಿ. 05 ರಂದು ಗುನ್ನಾಳ, ಚಿಕ್ಕಬೊಮ್ಮನಾಳ.  ಆಗಸ್ಟ 06 ರಂದು ಬೂದೂರ ಮತ್ತು ಗಾಣದಾಳ ಗ್ರಾಮಗಳಲ್ಲಿ ಕಲಾಜಾಥಾ ಪ್ರಚಾರಾಂದೋಲನ ನಡೆಯಲಿದೆ.
Post a Comment