Tuesday, 26 July 2016

ಜಿಲ್ಲೆಯ 76 ಗ್ರಾ.ಪಂ. ಗಳಲ್ಲಿ ಪಹಣಿ ಸೇರಿದಂತೆ 100 ಸೇವೆಗಳು ಲಭ್ಯ- ಬಸವರಾಜ ರಾಯರಡ್ಡಿ


ಕೊಪ್ಪಳ ಜು. 26 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯತಿಗಳ ಮುಖಾಂತರ ಕಂದಾಯ ಇಲಾಖೆಗೆ ಸಂಬಂಧಿಸಿದ 40 ಸೇವೆಗಳು ಹಾಗೂ ವಿವಿಧ ಸೇವೆಗಳನ್ನೊಳಗೊಂಡಂತೆ ಒಟ್ಟು 100 ವಿವಿಧ ಸೇವೆಗಳನ್ನು ಒದಗಿಸುವ ಬಾಪೂಜಿ ಸೇವಾ ಕೇಂದ್ರಗಳನ್ನು ಜಿಲ್ಲೆಯ 76 ಗ್ರಾಮ ಪಂಚಾಯತಿಗಳಲ್ಲಿಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಬಾಪೂಜಿ ಸೇವಾ ಕೇಂದ್ರದ ಉದ್ಘಾಟನೆ ಹಾಗೂ ನವೀಕರಣಗೊಂಡ ಸರ್ಕಾರಿ ಮಾಧರಿಯ ಹಿ.ಪ್ರಾ.ಶಾಲೆ ಕಟ್ಟಡ ಉದ್ಘಾಟನೆ, ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಕಟ್ಟಡ ಶಂಕುಸ್ಥಾಪನೆ ಹಾಗೂ ಆರ್.ಎಂ.ಎಸ್.ಎ. ಬಾಲಕಿಯರ ವಸತಿ ನಿಲಯ ಕಟ್ಟಡ ಉದ್ಘಾಟನೆ ನೆರವೇರಿಸಿದ ನಂತರ, ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರದಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಗ್ರಾಮ ಪಂಚಾಯತಿಗಳ ಮುಖಾಂತರ ಪಹಣಿ ವಿತರಿಸಲು ಸರ್ಕಾರ ಅನುಮೋದನೆ ನೀಡಿದ್ದು, ಜಿಲ್ಲೆಯ 76 ಗ್ರಾಮ ಪಂಚಾಯತಿಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು, ಈ ಗ್ರಾಮ ಪಂಚಾಯತಿಗಳಲ್ಲಿ ಪಹಣಿ ವಿತರಣೆ ಸೇರಿದಂತೆ, ಕಂದಾಯ ಇಲಾಖೆಗೆ ಸಂಬಂಧಿಸಿದ 40 ಬಗೆಯ ಸೇವೆಗಳ ಅರ್ಜಿಗಳನ್ನು ಸ್ವೀಕರಿಸಲು ಬಾಪೂಜೀ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.  ಸಾರ್ವಜನಿಕರು ವಿವಿಧ ಸೇವೆಗಳಿಗೆ ನಾಡಕಚೇರಿ ಹಾಗೂ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಇಂತಹ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ಇನ್ನು ಮುಂದೆ ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಈ ಸೇವೆಗಳನ್ನು ಪಡೆಯಬಹುದಾಗಿದೆ.  ಕೇವಲ 10 ರೂ. ಗಳನ್ನು ಪಾವತಿಸಿ ಗ್ರಾಮ ಪಂಚಾಯತಿಯಲ್ಲಿನ ಬಾಪೂಜಿ ಸೇವಾ ಕೇಂದ್ರದಲ್ಲಿ ಪಹಣಿ ಪತ್ರಿಕೆಯನ್ನು ಪಡೆಯಬಹುದು.  ಅಲ್ಲದೆ ಜಾತಿ, ಆದಾಯ ಪ್ರಮಾಣಪತ್ರ, ಸಣ್ಣ ಅತಿಸಣ್ಣ ಹಿಡುವಳಿದಾರರ ಪತ್ರ, ವಿವಿಧ ಪಿಂಚಣಿ ಮಂಜೂರಾತಿ ಅರ್ಜಿ ಹೀಗೆ ಕಂದಾಯ ಇಲಾಖೆಗೆ ಸಂಬಂಧಿಸಿದ 40 ಸೇವೆಗಳು, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸೇವೆಗಳು, ಫಲಾನುಭವಿ ಸಂಬಂಧಿತ ಸೇವೆಗಳು, ವ್ಯಾಪಾರ ಪರವಾನಗಿ ಸಂಬಂಧಿತ ಸೇವೆಗಳು, ನಿರ್ವಹಣೆ ಸಂಬಂಧಿತ ಸೇವೆಗಳು, ತೆರಿಗೆ ಪಾವತಿ, ವಿದ್ಯುತ್ ಬಿಲ್ ಪಾವತಿ, ಬಸ್, ರೈಲುಗಳ ಟಿಕೆಟ್ ಬುಕಿಂಗ್ ಮುಂತಾದ ಸೇವೆಯನ್ನೂ ಸಹ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಪಡೆಯಬಹುದಾಗಿದೆ.  ಸಾರ್ವಜನಿಕರು ಇಂತಹ ಸರಳೀಕೃತ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
     ಜನಸಾಮಾನ್ಯರ ಹಿತಕಾಯಲು ಸರ್ಕಾರ ಉಚಿತ ಅಕ್ಕಿ, ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಹಾಲು ವಿತರಣೆ, ಮಧ್ಯಾಹ್ನದ ಬಿಸಿಯೂಟ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.  ಯಾವುದೇ ಯೋಜನೆಗಳನ್ನು ರೂಪಿಸುವಾಗ ಜನಸಂಖ್ಯೆಯ ಆಧಾರದಲ್ಲಿ ನಾವು ಸಿದ್ಧಪಡಿಸಬೇಕಾಗುತ್ತದೆ.  ದೇಶದಲ್ಲಿ ಜನಸಂಖ್ಯೆಯ ಹೆಚ್ಚಳ ತೀವ್ರವಾಗಿದ್ದು, ಪ್ರತಿ ವರ್ಷ ದೇಶದ ಜನಸಂಖ್ಯೆಗೆ ಕನಿಷ್ಟ 02 ಕೋಟಿ ಜನಸಂಖ್ಯೆ ಸೇರ್ಪಡೆಯಾಗುತ್ತಿದೆ.  ಇದರಿಂದ ಯೋಜನೆಗಳ ಅನುಷ್ಠಾನದಲ್ಲಿ ತೊಂದರೆಯಾಗುತ್ತಿರುವುದು ವಾಸ್ತವವಾಗಿದೆ ಎಂದು ಸಚಿವರು ಹೇಳಿದರು.

     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂದು ಹೇಳಲಾಗುವ ಯಲಬುರ್ಗಾ ತಾಲೂಕಿನಲ್ಲಿ ತಳಕಲ್ ಗ್ರಾಮದ ಅಭಿವೃದ್ಧಿಯು ಇತರೆ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು.

     ಜಿ.ಪಂ. ಮುಖ್ಯ ಕಾರ್ಯನಿವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಸವರಾಜ ರಾಯರಡ್ಡಿ ಅವರು ವ್ಯಾಸಂಗ ಮಾಡಿರುವ ತಳಕಲ್ ಗ್ರಾಮದ ಶಾಲೆಯನ್ನು ಇದೀಗ ನವೀಕರಿಸಿ, ವಿದ್ಯಾರ್ಜನೆಗೆ ಒದಗಿಸಿರುವುದು ಸಂತಸ ತಂದಿದೆ.  ತಳಕಲ್ ಗ್ರಾಮವನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಗ್ರಾಮದಲ್ಲಿಯೂ ಸಹ ಅನೇಕ ಕುಟುಂಬಗಳು ಶೌಚಾಲಯ ರಹಿತವಾಗಿದ್ದು, ಎಲ್ಲ ಕುಟುಂಬಗಳು ತಪ್ಪದೆ ಶೌಚಾಲಯ ಕಟ್ಟಿಸಿ, ಬಳಸುವಂತಾಗಬೇಕು.  ಇಲ್ಲಿನ ಎಲ್ಲ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಶೌಚಾಲಯ ಕಟ್ಟಿಸಲು ಒತ್ತಾಯಿಸುವಂತೆ ಮನವಿ ಮಾಡಿದರು.
     ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು.  ಜಿ.ಪಂ. ಸದಸ್ಯ ಹನುಮಂತಗೌಡ ಪಾಟೀಲ್, ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ದ್ಯಾಮಪ್ಪ ಗೌಡ್ರ, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ತಾ.ಪಂ. ಸದಸ್ಯ ಶಿವಕುಮಾರ ಆದಾಪುರ, ಗ್ರಾ.ಪಂ. ಉಪಾಧ್ಯಕ್ಷ ತಿಮ್ಮಣ್ಣ ಚೌಡಿ, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಡಿಡಿಪಿಐ ಶ್ಯಾಮಸುಂದರ್ ಸೇರಿದಂತೆ ತಳಕಲ್ ಗ್ರಾಮದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
Post a Comment