Wednesday, 27 July 2016

ವಿದ್ಯುತ್ ಕಳ್ಳತನ ಪ್ರಕರಣ : 3. 26 ಲಕ್ಷ ದಂಡ ವಿಧಿಸಿ ನ್ಯಾಯಾಲಯ ಆದೇಶ

ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಕಳೆದ ಆರು ವರ್ಷಗಳ ಹಿಂದೆ ಗಂಗಾವತಿ ತಾಲೂಕು ಜೀರಾಳ ಗ್ರಾಮದಲ್ಲಿ ದಾಖಲಾಗಿದ್ದ ವಿದ್ಯುತ್ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿಗೆ 3. 26 ಲಕ್ಷ ರೂ. ಗಳ ದಂಡ ಹಾಗೂ 06 ತಿಂಗಳ ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ಕೊಪ್ಪಳ ಜೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
     ಜೆಸ್ಕಾಂ ಜಾಗೃತ ದಳದ ವತಿಯಿಂದ ಕಳೆದ 2010 ರ ಮಾರ್ಚ್ 20 ರಲ್ಲಿ ಗಂಗಾವತಿ ತಾಲೂಕು ಜೀರಾಳ ಗ್ರಾಮದಲ್ಲಿನ ಕಾಂತಪ್ಪ ಜೀರಾಳ ಅವರ ಹಿಟ್ಟಿನ ಗಿರಣಿ ಭೇಟಿ ನೀಡಿ, ವಿದ್ಯುತ್ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸಿತ್ತು.  ಆರೋಪಿಯು ಹಿಟ್ಟಿನ ಗಿರಣಿಯನ್ನು ವಾಣಿಜ್ಯ ಉಪಯೋಗಕ್ಕೆ ಪೂರ್ವ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸರ್ವಿಸ್ ವೈರ್ ಮೂಲಕ ವಿದ್ಯುತ್ ಸಂಪರ್ಕವನ್ನು ನೇರವಾಗಿ ಪಡೆದಿರುವುದನ್ನು ಪತ್ತೆ ಹಚ್ಚಿದೆ.  ಅನಧಿಕೃತ ವಿದ್ಯುತ್ ಸಂಪರ್ಕದ ಕಾರಣಕ್ಕೆ ಸುಮಾರು 13428 ಯುನಿಟ್‍ನಷ್ಟು ವಿದ್ಯುತ್ ನಷ್ಟವಾಗಿದೆ.  ಇದರಿಂದ 108804 ರೂ. ಗಳ ವಿದ್ಯುತ್ ಮೊತ್ತ ಹಾಗೂ ಸರ್ಕಾರಕ್ಕೆ 40000 ರೂ. ಗಳ ಕಾಂಪೌಂಡ್ ಮೊತ್ತ ನಷ್ಟವಾಗಿದ್ದು, ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿತ್ತು.  ಜೆಸ್ಕಾಂ ಜಾಗೃತ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಎಂ. ನಾರಾಯಣಪ್ಪ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಶಿಕ್ಷೆಯ ದಂಡದ ಮೊತ್ತವನ್ನು ಮೂರು ಪಟ್ಟು ಹೆಚ್ಚುಗೊಳಿಸಿದ್ದು, 326412 ರೂ. ಗಳ ದಂಡ ಹಾಗೂ ಭಾರತೀಯ ವಿದ್ಯುತ್ ಕಾಯ್ದೆ 2003 ರ ಅಡಿ 06 ತಿಂಗಳ ಸಾದಾ ಸಜೆಯನ್ನು ವಿಧಿಸಿದೆ.  ದಂಡವನ್ನು 30 ದಿನಗಳ ಒಳಗಾಗಿ ಪಾವತಿಸದಿದ್ದಲ್ಲಿ, ಆರೋಪಿಯ ಆಸ್ತಿ ಜಪ್ತಿಗೆ ಆದೇಶ ನೀಡಿದೆ.  ನ್ಯಾಯಾಲಯ ಜು. 02 ರಂದು ತೀರ್ಪು ನೀಡಿದೆ.  ಸರ್ಕಾರಿ ಸಾರ್ವಜನಿಕ ಅಭಿಯೋಜಕ ಎಂ.ಬಿ. ಪಾಟೀಲ್ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.
Post a Comment