Thursday, 28 July 2016

ಕೃಷಿ ಯಂತ್ರಧಾರೆ ಮೂಲಕ 10 ಲಕ್ಷ ರೈತರನ್ನು ತಲುಪುವ ಉದ್ದೇಶವಿದೆ- ಕೃಷ್ಣ ಭೈರೇಗೌಡ


ಕೊಪ್ಪಳ ಜು. 28 (ಕರ್ನಾಟಕ ವಾರ್ತೆ): ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರದಾನವಾಗಿರುವ ಕೃಷಿ ಯಂತ್ರಧಾರೆ ಯೋಜನೆಯ ಮೂಲಕ ಕೃಷಿ ಇಲಾಖೆ, ಈ ವರ್ಷ ರಾಜ್ಯದ 10 ಲಕ್ಷ ರೈತರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

     ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ತಾಲೂಕಿನ ಹಿಟ್ನಾಳ್ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಉದ್ಘಾಟನೆ ಹಾಗೂ ಕೃಷಿ ಹೈಟೆಕ್ ಯಂತ್ರೋಪಕರಣಗಳ ಬೃಹತ್ ವಸ್ತು ಪ್ರದರ್ಶನದ ಉದ್ಘಾಟನೆ ಹಾಗೂ ಹಿಟ್ನಾಳ ಗ್ರಾಮ ಪಂಚಾಯತಿಯಲ್ಲಿ ಬಾಪೂಜಿ ಸೇವಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ರಾಜ್ಯಾದ್ಯಂತ ತಾವು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ರೈತರೊಂದಿಗೆ, ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ.  ಈ ಪೈಕಿ ಬಹುತೇಕ ರೈತರ ಸಮಸ್ಯೆ ಎಂದರೆ, ಯುವ ಪೀಳಿಗೆ ಕೃಷಿಯೇತರ ಕಸುಬಿನತ್ತ ಮುಖ ಮಾಡುತ್ತಿರುವುದರಿಂದ, ಕೃಷಿ ಕೂಲಿ ಕಾರ್ಮಿಕರ ಕೊರತೆಯಾಗುತ್ತಿದ್ದು, ಲಭ್ಯವಿರುವ ಕೂಲಿ ಕಾರ್ಮಿಕರ ವೆಚ್ಚ ಅಧಿಕವಾಗುತ್ತಿದ್ದು, ಕೃಷಿ ಚಟುವಟಿಕೆ ನಡೆಸಲು ತೊಂದರೆಯಾಗುತ್ತಿದೆ ಎಂಬುದಾಗಿತ್ತು.  ಕೃಷಿ ಸಚಿವರಾಗಿ, ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರಿತು, ಅತ್ಯಂತ ಕಡಿಮೆ ದರದಲ್ಲಿ ಎಲ್ಲ ರೈತರಿಗೂ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಸೇವೆ ನೀಡುವಂತಹ ಕೃಷಿ ಯಂತ್ರಧಾರೆ ಯೋಜನೆಯನ್ನು ಕಳೆದ ವರ್ಷ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ರೈತರು ಕೃಷಿ ಯಂತ್ರೋಪಕರಣಗಳಿಗೆ ಹೆಚ್ಚಿನ ಬಂಡವಾಳ ಹಾಕಿ, ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು, ಸರ್ಕಾರವೇ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ, ಅತ್ಯಲ್ಪ ದರದಲ್ಲಿ ಅಂದರೆ ಮಾರುಕಟ್ಟೆ ದರಕ್ಕಿಂತಲೂ ಶೇ. 30 ರಷ್ಟು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಲು ಈ ಯೋಜನೆ ಜಾರಿಗೊಳಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ 04 ಹೋಬಳಿಗಳಲ್ಲಿ ಕೇಂದ್ರ ತೆರೆದಿದ್ದರಿಂದ, 4 ಸಾವಿರ ರೈತರು ಇದರ ಪ್ರಯೋಜನ ಪಡೆದುಕೊಂಡರು. ಯೋಜನೆಯು ಅತ್ಯಂತ ಯಶಸ್ವಿದಾಯಕ ಹಾಗೂ ಜನಪ್ರಿಯವಾಗುತ್ತಿದ್ದು, ಈ ವರ್ಷ ಈಗಾಗಲೆ 3500 ರೈತರು ಇದರ ಪ್ರಯೋಜನ ಪಡೆದಿದ್ದಾರೆ.  ಈ ವರ್ಷ ರಾಜ್ಯದಲ್ಲಿ 315 ಹೊಸ ಕೇಂದ್ರಗಳನ್ನು ಮಂಜೂರು ಮಾಡಿದ್ದು, ಕೊಪ್ಪಳ ಜಿಲ್ಲೆಗೆ ಹೊಸದಾಗಿ 12 ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ.  ಪ್ರತಿ ಕೇಂದ್ರದಲ್ಲೂ 75 ಲಕ್ಷ ರೂ. ಮೊತ್ತದಂತೆ ಒಟ್ಟು 09 ಕೋಟಿ ರೂ. ಗಳ ವೆಚ್ಚದಲ್ಲಿ ಅತ್ಯಾಧುನಿಕ ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳನ್ನು ಇಡಲಾಗುವುದು.  ಶೀಘ್ರ ಜಿಲ್ಲೆಯ ಎಲ್ಲ 12 ಕೇಂದ್ರಗಳೂ ಸೇವೆಯನ್ನು ಪ್ರಾರಂಭಿಸಲಿವೆ.  ಮಹಿಂದ್ರಾ & ಮಹಿಂದ್ರಾ ಕಂಪನಿಗೆ ಹೊಸ 12 ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗಿದೆ.  ಕೃಷಿ ಯಂತ್ರಧಾರೆ ಯೋಜನೆಯ ಮೂಲಕ ರಾಜ್ಯದ 10 ಲಕ್ಷ ರೈತರನ್ನು ತಲುಪುವ ಉದ್ದೇಶವನ್ನು ಇಲಾಖೆ ಹೊಂದಿದ್ದು, ಬರುವ ವರ್ಷದಲ್ಲಿ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲೂ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ರೈತರಿಗೆ ವರದಾನವಾದ ಕೃಷಿಹೊಂಡ : ಒಣಭೂಮಿ ಮತ್ತು ಖುಷ್ಕಿ ಪ್ರದೇಶದ ರೈತರ ಬದುಕು ಮಳೆಯನ್ನೇ ಆಶ್ರಯಿಸಿದ್ದು, ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಬರ ಎದುರಿಸುವ ಸ್ಥಿತಿ.  ಇದನ್ನು ತಪ್ಪಿಸುವ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂದಾಗುತ್ತಿದ್ದಾರೆ.  ಒಮ್ಮೆ ಕೃಷಿ ಹೊಂಡ ತುಂಬಿತೆಂದರೆ, ಕನಿಷ್ಟ 6-7 ಎಕರೆ ಜಮೀನಿನ ಬೆಳೆಯನ್ನು ಉಳಿಸಿಕೊಂಡು, ಆರ್ಥಿಕ ಲಾಭ ಪಡೆಯಬಹುದು.  ರೈತ ಸ್ವಾವಲಂಬಿಗಳಾದರೆ,  ಸ್ವಾಭಿಮಾನಿಯೂ ಆಗುತ್ತಾನೆ.  ಜಿಲ್ಲೆಯಲ್ಲಿ ಈಗಾಗಲೆ 3 ಸಾವಿರ ಕೃಷಿ ಹೊಂಡಗಳು ನಿರ್ಮಾಣವಾಗಿವೆ.  ಈ ವರ್ಷ ಇನ್ನಷ್ಟು ಹೆಚ್ಚಿನ ಕೃಷಿ ಹೊಂಡ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ಎಲ್ಲ ರೈತರಿಗೆ ಮಣ್ಣು ಆರೋಗ್ಯ ಚೀಟಿ : ರೈತರು ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಗೊಬ್ಬರ ಬಳಸಬೇಕಾಗುತ್ತದೆ.  ಆದರೆ, ರೈತರು, ಕಡಿಮೆ ದರದಲ್ಲಿ ಸಿಗುವ ಗೊಬ್ಬರವನ್ನು ಹೆಚ್ಚು, ಹೆಚ್ಚು ಬಳಸುವುದರಿಂದ ಭೂಮಿಯ ಫಲವತ್ತತೆ ಹಾಳಾಗುವುದಲ್ಲದೆ, ಆರ್ಥಿಕವಾಗಿಯೂ ನಷ್ಟ ಅನುಭವಿಸುತ್ತಾರೆ.  ಇದಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಣ್ಣು ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿದ್ದು, ಈಗಾಗಲೆ ರಾಜ್ಯದಲ್ಲಿ 10 ಲಕ್ಷ ಮಣ್ಣಿನ ಮಾದರಿಯನ್ನು ಸಂಗ್ರಹಿಸಲಾಗಿದೆ.  ಇನ್ನೆರಡು ವರ್ಷದೊಳಗೆ ರಾಜ್ಯದ ಎಲ್ಲ ರೈತರಿಗೆ   ತಮ್ಮ ಜಮೀನಿನ ಮಣ್ಣು ಆರೋಗ್ಯ ಚೀಟಿಯನ್ನು ಉಚಿತವಾಗಿ ನೀಡುವ ಗುರಿಯನ್ನು ಹೊಂದಲಾಗಿದೆ.  ಯಾವ ಮಣ್ಣಿಗೆ, ಯಾವ ಮತ್ತು ಎಷ್ಟು ಪ್ರಮಾಣದ ಗೊಬ್ಬರ ಹಾಕಬೇಕು ಎನ್ನುವುದನ್ನು ಈ ಮಣ್ಣು ಆರೋಗ್ಯ ಚೀಟಿ ತೋರಿಸುತ್ತದೆ.  ಈ ಕಾರ್ಡಿನ ಆಧಾರದ ಮೇಲೆ ರೈತರು ತಮ್ಮ ಜಮೀನಿಗೆ ಗೊಬ್ಬರ ಹಾಕುವುದನ್ನು ನಿರ್ಧರಿಸಬಹುದಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ರೈತರ ದುಡಿಮೆಗೆ ಶಕ್ತಿ ತುಂಬುವ ಕಾರ್ಯ ಕೃಷಿ ಯಂತ್ರಧಾರೆ ಯೋಜನೆಯಿಂದ ಆಗುತ್ತಿದೆ.  ಕೃಷಿ ಭಾಗ್ಯ ಯೋಜನೆಯಂತಹ ರೈತೋಪಯೋಗಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕೃಷಿ ಸಚಿವರು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿದ್ದಾರೆ ಎಂದರು.

     ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಅವರು ಮಾತನಾಡಿ, ದೇಶದ ಆಧಾಯ ಪ್ರಮಾಣವು ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದು, ರೈತರ ಮುಖಾಂತರ ಆದಾಯ ತರುವಂತಹ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕಿದೆ.  ಆಹಾರಭದ್ರತೆ ಹಾಗೂ ಹಸಿವುಮುಕ್ತ ದೇಶ ನಿರ್ಮಾಣಕ್ಕಾಗಿ ಕೃಷಿ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ.  ಹೊಸ ತಂತ್ರಜ್ಞಾನ ಹಾಗೂ ಸುಧಾರಿತ ಕೃಷಿ ಪದ್ಧತಿಗಳನ್ನು ಅನುಸರಿಸಿ, ಹೆಚ್ಚಿನ ಆಹಾರ ಉತ್ಪಾದನೆ ಮಾಡುವುದು ಈಗಿನ ಪರಿಸ್ಥಿತಿಗೆ ಅನಿವಾರ್ಯವಾಗಿದೆ.  ಈ ನಿಟ್ಟಿನಲ್ಲಿ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಕಡಿಮೆ ದರದಲ್ಲಿ ಲಭ್ಯವಾಗುವಂತೆ ಸರ್ಕಾರ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.

     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಗ್ರಾ.ಪಂ. ಅಧ್ಯಕ್ಷ ಧರ್ಮರಾಜರಾವ್, ಜಿ.ಪಂ. ಸದಸ್ಯೆ ಬೀನಾ ಗೌಸ್, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಟ್ರಿಂಗೋ ಕಂ. ಲಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದಕುಮಾರ, ಉಪಸ್ಥಿತರಿದ್ದರು.  ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಸ್ವಾಗತಿಸಿದರು, ಕೃಷಿ ಇಲಾಖೆ ಅಧಿಕಾರಿ ವೀರಣ್ಣ ಕಮತರ್ ನಿರೂಪಿಸಿ ವಂದಿಸಿದರು.
     ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು, ಭತ್ತದ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಯಂತ್ರವನ್ನು ಚಾಲನೆಗೊಳಿಸಿ, ಖುದ್ದು, ಪ್ರಾತ್ಯಕ್ಷಿಕೆ ನಡೆಸಿದರು.  ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು ಸಚಿವರಿಗೆ ಸಾಥ್ ನೀಡಿದರು.
Post a Comment