Saturday, 23 July 2016

ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ಶೋಷಣೆ ಎಸಗಿದ ಆರೋಪಿಗೆ 10 ವರ್ಷ ಕಾರಾಗೃಹ ಶಿಕ್ಷೆ

ಕೊಪ್ಪಳ ಜು. 23 (ಕರ್ನಾಟಕ ವಾರ್ತೆ): ಅಪ್ರಾಪ್ತ ಬಾಲಕಿಯನ್ನು (14 ವರ್ಷ) ಅಪಹರಿಸಿ, ಮದುವೆ ಮಾಡಿಕೊಂಡು, ಲೈಂಗಿಕ ಶೋಷಣೆ ಮಾಡಿದ ಆರೋಪಿಗೆ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೊ ಕಾಯ್ದೆಯಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಶನಿವಾರದಂದು ತೀರ್ಪು ನೀಡಿದೆ.
     ತಾಲೂಕಿನ ಕಾಸನಕಂಡಿ ಗ್ರಾಮದ ಬಸವರಾಜ ಎಂಬಾತನೇ ಪೋಕ್ಸೊ ಕಾಯ್ದೆಯಡಿ ಶಿಕ್ಷೆಗೆ ಗುರಿಯಾದ ಆರೋಪಿ.  ಆರೋಪಿಯು 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಲೈಂಗಿಕ ಶೋಷಣೆ ಎಸಗಿದ್ದಾನೆ.  ಕಳೆದ 2014 ರ ಅಕ್ಟೋಬರ್ 15 ರಂದು ಬಾಲಕಿಯನ್ನು ಅಪಹರಿಸಿಕೊಂಡು, ಬೆಂಗಳೂರಿಗೆ ಹೋಗಿ, ದೇವಾಲಯವೊಂದರಲ್ಲಿ ತಾಳಿ ಕಟ್ಟಿ ಮದುವೆ ಮಾಡಿಕೊಂಡು, ಬೆಂಗಳೂರಿನ ಬನಶಂಕರಿ ಏರಿಯಾದಲ್ಲಿ ಮನೆ ಮಾಡಿಕೊಂಡು ಇದ್ದು, ಬಾಲಕಿಯ ಮೇಲೆ ಲೈಂಗಿಕ ಶೋಷಣೆ ಎಸಗಿದಾನೆ.  ಬಾಲಕಿಯ ಅಪಹರಣ ಕುರಿತಂತೆ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್‍ಐ ಯರೇಸ್ವಾಮಿ ಮತುಲ್ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ಸತೀಶ್ ಪಾಟೀಲ್ ಅವರು ತನಿಖೆ ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಎಸ್ ಉಪನಾಳ ಅವರು, ಆರೋಪಿ ಬಸವರಾಜನಿಗೆ ಪೋಕ್ಸೊ ಕಾಯ್ದೆಯಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ.ಗಳ ದಂಡ ವಿಧಿಸಿ ಜು. 23 ರಂದು ತೀರ್ಪು ನೀಡಿದ್ದಾರೆ.
Post a Comment