Tuesday, 31 May 2016

ತಂಬಾಕು ಉತ್ಪನ್ನಗಳು ಅನಾರೋಗ್ಯಕ್ಕೆ ರಹದಾರಿ

            ಬಹುಪಾಲು ಜನರಿಗೆ ತಂಬಾಕು ಸೇವನೆಯಿಂದ ಅಪಾಯ ಎಂದು ತಿಳಿದಿದ್ದರೂ, ಅದು ಎಷ್ಟರ ಮಟ್ಟಿಗೆ ಹಾನಿಕಾರ ಮತ್ತು ಅದರ ಕಾರಣಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲವಾಗಿದೆ.  ಇದರಿಂದ ತಂಬಾಕು ಉತ್ಪನ್ನಗಳು ಜನರ ಅನಾರೋಗ್ಯಕ್ಕೆ ರಹದಾರಿಯಾಗಿ ಪರಿಣಮಿಸಿವೆ.
     ತಂಬಾಕು ಸಂಸ್ಥೆಗಳು ಆಕರ್ಷಕ ಪ್ರಚಾರದ ಮುಖಾಂತರ ಗ್ರಾಹಕರಿಗೆ ತಂಬಾಕು ಸೇವನೆಯಿಂದಾಗಿ ಆರೋಗ್ಯದ ಮೇಲಾಗುವ ಪರಿಣಾಮದ ಕಟು ವಾಸ್ತವವನ್ನು ಮುಚ್ಚಿಟ್ಟು ದಿಕ್ಕು ತಪ್ಪಿಸುತ್ತಿವೆ.  ತಂಬಾಕು ಸೇವನೆಯಿಂದ ಆಗುವ ಹಾನಿಗಳ ಬಗ್ಗೆ ಚಿತ್ರಗಳ ಸಹಿತ ಇರುವ ಎಚ್ಚರಿಕೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ತಂಬಾಕು ಸೇವನೆಯನ್ನು ತ್ಯಜಿಸುವ ಅಥವಾ ಕಡಿಮೆ ಮಾಡುವ ಮೂಲಕ ಅದು ಮನೋವೃತ್ತಿಯನ್ನು ಬದಲಾಯಿಸುವ ಪ್ರೇರಣಾ ಶಕ್ತಿಯನ್ನು ಹೊಂದಿವೆ.
     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾಲಯಗಳ ಸಚಿವಾಲಯವು 2008ರ ಮೇ.30 ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ ಹಾಗೂ ರಾಜ್ಯಾದ್ಯಂತ 2008 ರ ಅಕ್ಟೋಬರ್.02 ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರ ತಿಳುವಳಿಕೆಗಾಗಿ ಹೋಟೆಲ್, ರೆಸ್ಟೋರೆಂಟ್, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಚಿತ್ರಮಂದಿರಗಳಲ್ಲಿ ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಆವರಣ ಸೇರಿ ಶಾಲಾ ಕಾಲೇಜುಗಳ ಆವರಣ, ಸಾರ್ವಜನಿಕ ಗ್ರಂಥಾಲಯಗಳು ಮತ್ತು ಅಂಚೆ ಮತ್ತು ಆಡಳಿತ ಕಛೇರಿಗಳಲ್ಲಿ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕಾಯ್ದೆಯಡಿ ನಿರ್ಬಂಧನೆಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, 200 ರೂ. ದಂಡ ಹಾಗೂ ಜೈಲು ವಾಸ ವಿಧಿಸುವ ನಿಯಮವಿದೆ.
     ತಂಬಾಕು ಹಾಗೂ ಧೂಮಪಾನ ಸೇವನೆ ದುಷ್ಪರಿಣಾಮಗಳ ಸಂಕೇತವಾಗಿದ್ದು, ಇವುಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳು, ಮನುಷ್ಯನನ್ನು ಕ್ಯಾನ್ಸರ್ ರೋಗಕ್ಕೀಡು ಮಾಡುತ್ತವೆ. ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಜಾಗತೀಕವಾಗಿ ಪ್ರತಿವರ್ಷ 5.4 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಪ್ರತಿವರ್ಷ 08 ರಿಂದ 09 ಲಕ್ಷ ಭಾರತೀಯರು ತಂಬಾಕು ಸಂಬಂಧಿ ರೋಗಗಳ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ ವಿಶ್ವದಲ್ಲಿ ಅತಿ ಹೆಚ್ಚು ಸಂಖ್ಯೆಯ ಬಾಯಿ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಕಂಡು ಬಂದಿವೆ. ಈ ಬಾಯಿ ಕಾನ್ಸರ್ ಕಾರಣಗಳು  ಶೇ.90 ರಷ್ಟು ತಂಬಾಕು ಸೇವನೆಯಿಂದ ಹುಟ್ಟಿಕೊಳ್ಳುತ್ತವೆ. ಭಾರತವೊಂದರಲ್ಲಿಯೇ ಧೂಮಪಾನದ ಕಾರಣದಿಂದಾಗಿ ಪ್ರತಿವರ್ಷ 10 ಲಕ್ಷ ಜನ ಸಾವಿಗೀಡಾಗುತ್ತಿದ್ದು, ಇದರಲ್ಲಿ ಶೇಕಡಾ 70 ರಷ್ಟು ಜನ 30 ರಿಂದ 60 ವರ್ಷದೊಳಗಿನವರಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುವವರ ಪೈಕಿ ಶೇ.80 ರಷ್ಟು ಮಂದಿ ಗ್ರಾಮೀಣ ಭಾಗದವರು ಎಂಬುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ದೇಶದಲ್ಲಿ ಹೆಚ್.ಐ.ವಿ, ಮಲೇರಿಯಾ, ಕ್ಷಯರೋಗಗಳಿಂದ ಉಂಟಾಗುವ ಮರಣ ಪ್ರಮಾಣಕ್ಕಿಂತ ತಂಬಾಕು ಸೇವನೆಯಿಂದ ಉಂಟಾಗುವ ಆನಾರೋಗ್ಯದ ಕಾರಣವಾಗಿ ಬರುವ ಮರಣವು ಹೆಚ್ಚಾಗಿರುವುದು ವಿಪರ್ಯಾಸ. 
ತಂಬಾಕು ಸೇವನೆಯ ದುಷ್ಪರಿಣಾಮಗಳು : ತಂಬಾಕು ಸೇವನೆಯಿಂದ ಹೃದ್ರೋಗ, ಶ್ವಾಸಕೋಶದ ಖಾಯಿಲೆಗಳು, ದೀರ್ಘಕಾಲಿಕ ಶ್ವಾಸಕೋಶದ ಅಡಚಣೆಯ ಖಾಯಿಲೆ, ಕಡಿಮೆ ತೂಕದ ಮಗುವಿನ ಜನನ, ಮೆದುಳಿನ ಸಂಕೋಚನ, ಅಲ್ಜೈಮರ್ ಖಾಯಿಲೆ, ಕುರುಡುತನ, ನಾಳೀಯ ಬಾಹ್ಯಾವರ್ಣದ ಖಾಯಿಲೆ, ಬ್ರಾಂಕೈಟಿಸ್, ಇಂಫಿಸಿಮಾ, ಲಕ್ಷಾ(ಪಾಶ್ರ್ವವಾಯು), ನೆನಪಿ ಶಕ್ತಿ ಕುಂದುವುದು, ಜ್ಞಾನಗ್ರಹಣದ ಕಾರ್ಯಹೀನತೆಯಂತಹ ಖಾಯಿಲೆಗಳು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಸುವಿಕೆಯಿಂದ ಸಂಭವಿಸುತ್ತವೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರವು ತಂಬಾಕಿನ ನಿಯಂತ್ರಣಕ್ಕಾಗಿ ಸೀಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು (ಅಔಖಿPಂ) ಜಾರಿಗೆ ತಂದಿದೆ.  ಈ ಕಾಯ್ದೆಯನ್ವಯ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಯಾರೂ ಕೂಡ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡಬಾರದು. ತಂಬಾಕು ವಸ್ತುಗಳನ್ನು ಶಾಲಾ ಕಾಲೇಜುಗಳಿಂದ 100 ಅಡಿ ಅಂತರದಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ, ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಬಸ್ ನಿಲ್ದಾಣ, ಚಲನಚಿತ್ರ ಮಂದಿರಗಳು, ಆಸ್ಪತ್ರೆಗಳು ಮುಂತಾದ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
     ಇಂದಿನ ದಿನಮಾನಗಳಲ್ಲಿ ಮಕ್ಕಳು ತಮ್ಮ 14ನೇ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಪೋಷಕರು ಮೊದಲು ಮಕ್ಕಳನ್ನು ರಕ್ಷಿಸುವುದು ಅತೀ ಮುಖ್ಯವಾಗಿದೆ. ಮಕ್ಕಳು ತಂಬಾಕು ಉತ್ಪನ್ನಗಳೆಡೆಗೆ ಆಕರ್ಷಿತರಾಗದಂತೆ ಮಾಡಲು ಪೋಷಕರು ತಂಬಾಕಿನ ದುಷ್ಪರಿಣಾಮಗಳನ್ನು ಮಕ್ಕಳ ಜೊತೆ ಮುಕ್ತವಾಗಿ ಚರ್ಚಿಸಬೇಕು. ತಮ್ಮ ಮಕ್ಕಳ ಮುಂದೆ ನೇರವಾಗಿ ತಂಬಾಕು ಇತ್ಯಾದಿಗಳನ್ನು ಸೇವಿಸಬಾರದು. ಧೂಮಪಾನ ಹವ್ಯಾಸಿ ಸ್ನೇಹಿತರಿಂದ ತಮ್ಮ ಮಕ್ಕಳನ್ನು ದೂರವಿಡುವುದು ಇನ್ನೂ ಉತ್ತಮ.

                                                                              - ತುಕಾರಾಂರಾವ್ ಬಿ.ವಿ.
                                                                                 ಜಿಲ್ಲಾ ವಾರ್ತಾಧಿಕಾರಿ
                                                                                              ಕೊಪ್ಪಳ

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ಕೇಂದ್ರ ಪ್ರಾರಂಭ

ಕೊಪ್ಪಳ ಮೇ 31 ( ಕರ್ನಾಟಕ ವಾರ್ತೆ): ಇದೇ ಜೂ. 20 ರಿಂದ 27 ರವರೆಗೆ ಜರುಗುವ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ಪೂರಕವಾಗಲು ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ಕಲಿಕಾ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು, ಉತ್ತೀರ್ಣರಾಗುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮನವಿ ಮಾಡಿದ್ದಾರೆ.
     ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾಗಿದ್ದು, ಜಿಲ್ಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಲು ಸಾಧ್ಯವಾಗಿಲ್ಲ.  ಇಂತಹ ವಿದ್ಯಾರ್ಥಿಗಳಿಗೆ ಇದೇ ಜೂ. 20 ರಿಂದ 27 ರವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ.  ಈಗಾಗಲೆ ವಿದ್ಯಾರ್ಥಿಗಳು ಇದಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.  ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿಷಯವಾರು ಸಾಮಥ್ರ್ಯ ತುಂಬಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ಕಲಿಕಾ ಕೇಂದ್ರಗಳನ್ನು ತೆರೆದಿದೆ.  ಪೂರಕ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳು ಆಯಾ ಪ್ರೌಢಶಾಲೆಗಳಿಗೆ ತೆರಳಿ, ಕಲಿಕಾ ಕೇಂದ್ರದಲ್ಲಿ ಹಾಜರಾಗಬೇಕು.  ಪೂರಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ಪೂರಕವಾಗಲು ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ.  ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ವಿಷಯ ಶಿಕ್ಷಕರು, ನೊಂದಾಯಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿಯುವವರೆಗೆ ಕಲಿಕಾ ಕೇಂದ್ರದಲ್ಲೇ ಮಾಹಿತಿಯನ್ನು ನೀಡುವರು.  ಪೂರಕ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳು ವಿಶೇಷ ಕಲಿಕಾ ಕೇಂದ್ರದ ಸದುಪಯೋಗ ಪಡೆದುಕೊಂಡು ಉತ್ತೀರ್ಣರಾಗಬೇಕು.  ಎಲ್ಲ ಶಿಕ್ಷಕರು ಜಿಲ್ಲೆಯ ಪೂರಕ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ವಿವಿಧ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡು, ನಿಯಮಿತವಾಗಿ ವರದಿ ಸಲ್ಲಿಸಲು ಸಹ ಸೂಚನೆ ನೀಡಲಾಗಿದ್ದು, ಈ ಕುರಿತ ಕ್ರಿಯಾ ಯೋಜನೆಯನ್ನು ಜೂ. 01 ರೊಳಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲೆಯ ಎಲ್ಲ ಶಿಕ್ಷಕರಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪ್ರಾಪ್ತರಲ್ಲೂ ತಂಬಾಕು ಸೇವನೆ ಆತಂಕಕಾರಿ ಬೆಳವಣಿಗೆ : ವಿಜಯಲಕ್ಷ್ಮೀ ಎಸ್.ಉಪನಾಳ

ಕೊಪ್ಪಳ ಮೇ.31(ಕರ್ನಾಟಕ ವಾರ್ತೆ): ಅಪ್ರಾಪ್ತ ವಯಸ್ಸಿನ ಮಕ್ಕಳು ಇಂದು ಗುಟ್ಕಾ, ಸಿಗರೇಟ್ ಸೇವನೆಯಲ್ಲಿ ತೊಡಗಿಕೊಂಡಿರುವುದು ಆತಂಕಕಾರಿ ಬೆಳವಣಿಗೆ.  ಕಾನೂನು ಪಾಲನೆ ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸುವದರಿಂದ ಇದರ ನಿವಾರಣೆ ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್.ಉಪನಾಳ ಅವರು ಹೇಳಿದರು.
          ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ, ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಕೊಪ್ಪಳದ ಕೋರ್ಟ್ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ಮಕ್ಕಳು ತಂಬಾಕು ಸೇವನೆಯಲ್ಲಿ ತೊಡಗಿರುವುದಕ್ಕೆ ನಮ್ಮ ಸಮುದಾಯವೇ ಕಾರಣವಾಗುತ್ತ್ತಿದೆ,  ವಿದ್ಯಾವಂತರೂ ಕೂಡ ಎಲ್ಲೆಂದರಲ್ಲಿ ಸಿಗರೇಟ್ ಗುಟ್ಕಾ ಸೇವನೆ ಮಾಡುವುದು ಕೂಡ ಮಕ್ಕಳ ಮನಸ್ಸಿನ ಮೇಲೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಉಂಟುಮಾಡುತ್ತದೆ. ಇತ್ತೀಚೆಗೆ ಅಪ್ರಾಪ್ತರೂ ಸಹ ಸಿಗರೇಟ್, ಗುಟ್ಕಾಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯ.  ಬರೀ ಮೇ 31 ರಂದು ಒಂದೇ ದಿನ ನಾವು ತಂಬಾಕು ರಹಿತ ದಿನವನ್ನಾಚರಿಸಿದರೆ ಸಾಲದು. ವರ್ಷಪೂರ್ತಿ ಇದರ ಆಚರಣೆ ಮಾಡಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಿದೆ.  ಎಲ್ಲೆಂದರಲ್ಲಿ ಧೂಮಪಾನ ಮಾಡಬಾರದೆಂದು ಕಾನೂನು ರೂಪಿಸಲಾಗಿದ್ದರೂ ಸಹ ಕಾನೂನು ಉಲ್ಲಂಘನೆ ವ್ಯಾಪಕವಾಗಿದೆ.  ಈ ಕುರಿತು ಸಮುದಾಯದಲ್ಲಿ ವ್ಯಾಪಕವಾಗಿ ತಿಳುವಳಿಕೆ ಹಾಗೂ ಕಾನೂನು ಅರಿವು ಮೂಡಿಸಲು ಎಲ್ಲರೂ ಮುಂದಾಗಬೇಕಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಉಪನಾಳ ಅವರು ಹೇಳಿದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ. ಪಾನಘಂಟಿ ಮಾತನಾಡಿ, ದೂಮಪಾನ ಮಾಡಬಾರದು ಎಂದು ಬೋರ್ಡ್ ಹಾಕಿದರೂ ಸಹ, ವಿದ್ಯಾವಂತರೇ ಅದರ ಪಕ್ಕದಲ್ಲೇ ನಿಂತು ಧೂಮಪಾನ ಮಾಡಿ ಕಾನೂನನ್ನು ಉಲಂಘಿಸಿತ್ತಿದ್ದಾರೆ. ಸಮಾಜವನ್ನ ಜಾಗೃತಿಗೊಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.
     ಜಿಲ್ಲಾ ಸರ್ವೇಕ್ಷಣಾದಿಕಾರಿ ಡಾ. ಎಂ.ಎಂ ಕಟ್ಟಿಮನಿ ಅವರು ತಂಬಾಕು ಉತ್ಪನ್ನಗಳ ಅಧಿನಿಯಮ-2003 ರ ಕುರಿತು ಹಾಗೂ ಮದ್ಯ ಮತ್ತು ಮಾದಕ ವಸ್ತು ವ್ಯಸನಿಗಳ ಪುನರ್ವಸತಿ ಸಲಹೆಗಾರರ ಅಧ್ಯಕ್ಷ ಡಾ. ಹೆಚ್.ಎಸ್ ಶಿವಣ್ಣ ಅವರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾನ ನೀಡಿದರು.
     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಕಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರ, ಜಿಲ್ಲಾ ಸರಕಾರಿ ವಕೀಲ ಆಸೀಫ್ ಅಲೀ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಯು.ಎ. ಮಾಲೀಕೊಪ್ಪ, ವಕೀಲ ವಿ.ಎಂ ಭೂಸನೂರ ಮಠ, ತಾಲೂಕು ವೈದ್ಯಾಧಿಕಾರಿ ದಾನರೆಡ್ಡಿ, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೊಪ್ಪಳ-ಭಾಗ್ಯನಗರದಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳ ಜಪ್ತಿ


ಕೊಪ್ಪಳ ಮೇ. 31 (ಕರ್ನಾಟಕ ವಾರ್ತೆ): ಕೊಪ್ಪಳ ಮತ್ತು ಭಾಗ್ಯನಗರದಲ್ಲಿ ನಗರಸಭೆ ಮತ್ತು ಪಟ್ಟಣ ಪಂಚಾಯತಿ ಅಧಿಕಾರಿಗಳಿಂದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

     ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆ ಹಾಗೂ ಮಾರಾಟ ಮಾಡದಂತೆ ಈಗಾಗಲೆ ಸರ್ಕಾರ ನಿಷೇಧವನ್ನು ಜಾರಿ ಮಾಡಿದೆ.  ಕೊಪ್ಪಳ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಕೊಪ್ಪಳ ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ಕಾರ್ಯಾಚರಣೆ ನಡೆಸಿ, ಸುಮಾರು 625 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಲಾಗಿದೆ.  ಭಾಗ್ಯನಗರದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜುನಾಥ ಬೆಲ್ಲದ್ ಅವರ ನೇತೃತ್ವದಲ್ಲಿ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದ್ದು, ಸುಮಾರು 104 ಕೆ.ಜಿ.ಯಷ್ಟು ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಲಾಗಿದೆ.  ಕೊಪ್ಪಳ ನಗರಸಭೆ ಮತ್ತು ಭಾಗ್ಯನಗರ ಪಟ್ಟಣ ಪಂಚಾಯತಿ ಅಧಿಕಾರಿಗಳು ಅಂಗಡಿ ಮಾಲೀಕರುಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡುವ ಕಾರ್ಯಕ್ರಮವನ್ನು ಕಳೆದೆರಡು ದಿನಗಳಿಂದ ಕೈಗೊಳ್ಳಲಾಗುತ್ತಿದೆ ಎಂದು ಕೊಪ್ಪಳ ನಗರಸಭೆ ಮತ್ತು ಭಾಗ್ಯನಗರ ಪಟ್ಟಣ ಪಂಚಾಯತಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sunday, 29 May 2016

ಮೌಂಟ್ ಎವರೆಸ್ಟ್ ಏರಿದ ಕೊಪ್ಪಳದ ಐಎಫ್‍ಎಸ್ ಅಧಿಕಾರಿ ಪ್ರಭಾಕರನ್ ಅವರಿಗೆ ಕರ್ನಾಟಕ ಭವನದಿಂದ ಅಭಿನಂದನೆ

ಕೊಪ್ಪಳ ಮೇ 28 ( ಕರ್ನಾಟಕ ವಾರ್ತೆ):  ಮೌಂಟ್ ಎವರೆಸ್ಟ್ ಶಿಖರವೇರಿದ ರಾಷ್ಟ್ರದ  ಮೊದಲ ಐಎಫ್‍ಎಸ್ ಅಧಿಕಾರಿ ಎನ್ನುವ ಹೆಗ್ಗಳಿಗೆ ಪಾತ್ರವಾಗಿರುವ ಕೊಪ್ಪಳದ ಅರಣ್ಯ ಉಪಸಂರಕ್ಷಣಾಧಿಕಾರಿ ಎಸ್ ಪ್ರಭಾಕರನ್ ಅವರನ್ನು ನವದೆಹಲಿಯಲ್ಲಿರುವ ಕರ್ನಾಟಕ ಭವನದ ನಿವಾಸಿ ಆಯುಕ್ತ ಅತುಲ್ ಕುಮಾರ್ ತಿವಾರಿ ಅವರು ಅಭಿನಂದಿಸಿದರು.
ನಂತರ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಉಪ ಸಂಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ತಮಿಳುನಾಡಿನ ಪಿರುವಣ್ಣ ಮಲೈನ 2011 ರ ಬ್ಯಾಚಿನ  ಐಎಫ್‍ಎಸ್ ಅಧಿಕಾರಿ ಎಸ್. ಪ್ರಭಾಕರನ್ ಅವರು ಮೌಂಟ್ ಎವರೆಸ್ಟ್ ಶಿಖರವನ್ನೇರುವ ಮೂಲಕ  ರಾಜ್ಯ ಹಾಗು ರಾಷ್ಟ್ರಕ್ಕೆ ಕೀರ್ತಿ ತಂದು, ಯುವಕರಿಗೆ ಮಾದರಿಯಾಗಿದ್ದಾರೆ.  ಅವರು ಮತ್ತಷ್ಟು ಹೆಚ್ಚಿನ ಸಾಧನೆ ಮಾಡಲೆಂದು ಹಾರೈಸಿದರು. 
     ಕಳೆದ ವರ್ಷ ಮೌಂಟ್ ಎವರೆಸ್ಟ್  ಏರಲು ಪ್ರಯತ್ನಿಸಲಾಗಿದ್ದು,  ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ಸಾಧಿಸಲಾಗಲಿಲ್ಲ.  ಕಳೆದ ಏಪ್ರಿಲ್ 8 ರಂದು ಶಿಖರವನ್ನು   ಚೀನಾ ಭಾಗದ  ಉತ್ತರ ದಿಕ್ಕಿನ ಮೂಲಕ ಏರಲು   ಪ್ರಾಂರಂಭಿಸಿ ಮೇ 19 ರಂದು ಮಧ್ಯರಾತ್ರಿ ತಲುಪಲಾಯಿತು. ಮೇ 20 ರಂದು ಬೆಳಿಗ್ಗೆ 6.30 ಕ್ಕೆ ದಾಖಲೆಯಲ್ಲಿ ನಮೂದಿಸಲಾಯಿತು.  ಬುದ್ದಪೂರ್ಣಿಮೆಯ ಸಂದರ್ಭದಲ್ಲಿ ಸಾಧನೆಗೈದದ್ದು ಸಾರ್ಥಕವಾಯಿತು ಎಂದು ಪ್ರಭಾಕರನ್ ತಿಳಿಸಿದರು.  ಮೌಂಟ್ ಎವರೆಸ್ಟ್‍ನ   ಉತ್ತರ ಭಾಗ ಬಹಳ ಆಳವಿತ್ತು. ಅತೀ ಎತ್ತರ ಪ್ರದೇಶವಾಗಿದ್ದರಿಂದ ಆಮ್ಲಜನಕದ ತೊಂದರೆಯೂ ಆಗುತ್ತಿತ್ತು.  ಮೊದಲ ಬೇಸ್ ಕ್ಯಾಂಪ್ 5400 ಅಡಿ ಎತ್ತರದಲ್ಲಿದ್ದು, ಇಲ್ಲಿಗೆ ತಲುಪಲು ಆಮ್ಲ ಜನಕದ ಕೊರತೆ ಎದುರಾಗುವುದಿಲ್ಲ. ನಂತರ 6400 ಮೀಟರ್ ಎತ್ತರದಲ್ಲಿರುವ  ಅಡ್ವಾನ್ಸ್  ಕ್ಯಾಂಪ್,  ಕೃತಕ ಆಮ್ಲ ಜನಕದ ಸಹಾಯದಿಂದ  ತದನಂತರ 7100 ಮೀಟರ್ ಎತ್ತರದಲ್ಲಿರುವ   ನಾರ್ಥ್ ಕೊಲ್ ಕ್ಯಾಂಪ್, ಕೊನೆಯದಾಗಿ ಮೂರನೇ ಹಂತವಾಗಿ  8300 ಮೀಟರ್ ಎತ್ತರದಲ್ಲಿರುವ  ಕ್ಯಾಂಪ್ ಏರಿದ ನಂತರ ಕಡಿದಾಗಿರುವ ಶಿಖರದ ತುತ್ತ ತುದಿಯಾಗಿರುವ  8850 ಮೀಟರ್ ಎತ್ತರದ ಶಿಖರವನ್ನೇರಿ  ದಾಖಲೆ ಮಾಡಲಾಯಿತು ಎಂದರು. 
  ಹೈದ್ರಾಬಾದ್ ಮೂಲದ ಟ್ರಾನ್ಸ್ ಅಡ್ವೆನ್ಚರ್ ಕಂಪನಿಯು ಪ್ರಾಯೋಜಕತ್ವವನ್ನು ಹೊಂದಿತ್ತು.  ಕ್ಯಾಂಪ್ ನಲ್ಲಿ  ಊಟವೂ  ದೊರಕುತ್ತಿತ್ತು.  ಗಾಳಿ ಹೆಚ್ಚಿನ ಪ್ರಮಾಣದಲ್ಲಿ  ಬೀಸಿದಾಗ ಅಪಾಯವೂ ಇರುತ್ತಿತ್ತು ಅಲ್ಲದೇ   ಖಾಯಿಲೆಗೂ ಬೀಳುವ ಸಂಭಾವವೂ ಉಂಟಾಗುತ್ತಿತ್ತು. ಕಳೆದ 2 ವರ್ಷದಿಂದ ಶಿಖರವನ್ನೇರಲು ಪ್ರಯತ್ನಿಸಲಾಗಿದ್ದು,  ನಿರಂತರ  ರಾಕಿಂಗ್  ಮೂಲಕ ಈ ಸಾಧನೆಗೈಯಲು   ಅನುಕೂಲವಾಯಿತು. ಅದೃಷ್ಟವಶಾತ್  ಯಾವುದೇ ನ್ಯೂನತೆಯಾಗದಂತೆ  ತಮ್ಮೊಂದಿಗೆ ತಂಡದಲ್ಲಿದ್ದ  ಇಬ್ಬರು ಐಎಎಸ್ ಅಧಿಕಾರಿಗಳು ಹಾಗು ಇಬ್ಬರು ಐಪಿಎಸ್ ಅಧಿಕಾರಿಗಳು ಶಿಖರವನ್ನೇರಲು ಯಶಸ್ವಿಯಾದರು.  ಆರಂಭದಲ್ಲಿ ಅಂಜಿಕೆ ಇತ್ತು, ಆದರೆ ಈಗ  ಮತ್ತೊಮ್ಮೆ ಮೌಂಟ್ ಎವರೆಸ್ಟ್ ಅನ್ನು ದಕ್ಷಿಣ ಭಾಗದಿಂದ  ಏರುವ ಬಯಕೆ ಇದ್ದು, ಅವಕಾಶ ಒದಗಿದರೆ ಮತ್ತೊಮ್ಮೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಸಂದರ್ಭದಲ್ಲಿ ಕರ್ನಾಟಕ ಭವನದ ಉಪನಿವಾಸಿ ಆಯುಕ್ತರಾದ ಅನೀಸ್ ಕೆ ಜಾಯ್, ಶ್ರೀಕಾಂತ ರಾವ್, ಜಂಟಿ ನಿವಾಸಿ ಆಯುಕ್ತ ರಂಗಸ್ವಾಮಿ, ಸಹಾಯಕ ನಿವಾಸಿ ಆಯುಕ್ತ ಶೈಲೇಂದ್ರ ಸಿಂಗ್ , ನವದೆಹಲಿಯಲ್ಲಿರುವ ಕರ್ನಾಟಕ ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪಕಾ ಇಲಾಖೆ ವಾರ್ತಾಧಿಕಾರಿ ಹೆಚ್. ಶ್ರೀನಿವಾಸ ಉಪಸ್ಥಿತರಿದ್ದರು.

ವಿ.ಎಸ್. ಉಗ್ರಪ್ಪ ಅವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಮೇ.29 (ಕರ್ನಾಟಕ ವಾರ್ತೆ): ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರು ಆಗಿರುವ ವಿ.ಎಸ್. ಉಗ್ರಪ್ಪ ಅವರು ಜೂನ್ 01 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

     ವಿ.ಎಸ್. ಉಗ್ರಪ್ಪ ಅವರು ಜೂ. 01 ರಂದು ಬೆಳಿಗ್ಗೆ ಗದುಗಿನಿಂದ ಹೊರಟು, ಬೆ. 09 ಗಂಟೆಗೆ ಕುಷ್ಟಗಿ ತಾಲೂಕು ಹಾಬಲಕಟ್ಟಿ ಗ್ರಾಮಕ್ಕೆ ಆಗಮಿಸುವರು ನಂತರ ಬೋವಿ ಮತ್ತು ವಡ್ಡರ್ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ವಿಷಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ,  ನಂತರ ಕೊಪ್ಪಳಕ್ಕೆ ಆಗಮಿಸುವರು.  ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಿ, ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ಜೂ. 02 ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಜೂ. 01 ರಂದು ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಕುರಿತು ಪರಿಶೀಲನಾ ಸಭೆ

ಕೊಪ್ಪಳ ಮೇ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆದ ಶೋಷಣೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು, ಅಲ್ಲದೆ ಈ ಕುರಿತು ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೈಗೊಂಡ ಕ್ರಮಗಳ ಕುರಿತಂತೆ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯೂ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಸ್ತ್ರೀ ಶಕ್ತಿ ಹಾಗೂ ಮಹಿಳಾ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಪರಿಶೀಲನಾ ಸಭೆ ನಡೆಯಲಿದೆ.
      ಸಭೆಯ ಅಧ್ಯಕ್ಷತೆಯನ್ನು ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರು ಆಗಿರುವ ವಿ.ಎಸ್. ಉಗ್ರಪ್ಪ ಅವರು ವಹಿಸುವರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಅವರು ತಿಳಿಸಿದ್ದಾರೆ.

ಮೇ. 30 ರಂದು ಹುಲಿಗೆಮ್ಮ ದೇವಿ ಮಹಾರಥೋತ್ಸವ

ಕೊಪ್ಪಳ ಮೇ. 29 (ಕರ್ನಾಟಕ ವಾರ್ತೆ): ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ ಮೇ. 30 ರಂದು ಸಂಜೆ 5-30 ಗಂಟೆಗೆ ಹುಲಿಗಿಯಲ್ಲಿ ನೆರವೇರಲಿದೆ.
     ಹುಲಿಗೆಮ್ಮ ದೇವಿ ವಾರ್ಷಿಕ ಜಾತ್ರೆ ಅಂಗವಾಗಿ ಈಗಾಗಲೆ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಮೇ. 30 ರಂದು ಸಂಜೆ 5-30 ಗಂಟೆಗೆ ಹುಲಿಗೆಮ್ಮ ದೇವಿ ಮಹಾರಥೋತ್ಸವ ಜರುಗಲಿದೆ.  ಮೇ. 31 ರಂದು ಬಾಳಿಂಡಿಗೆ, ಕೊಂಡದ ಪೂಜಾ, ಗಂಗಾದೇವಿ ಪೂಜಾ, ಶ್ರೀ ದೇವಿಗೆ ಪ್ರಸಾದ ಕಟ್ಟುವುದು, ಬಾಳಿದಂಡಿಗೆ ಆರೋಹಣ ಕಾರ್ಯಕ್ರಮಗಳು ನೆರವೇರಲಿವೆ.  ಜೂ. 01 ರಂದು ಪಾಯಸ ಅಗ್ನಿಕುಂಡ, ಕೊಂಡದ ಪೂಜಾ, ಹಿಡಿದಕ್ಷಿಣೆ ವಿತರಣೆ, ಪಡಗದ ಪೂಜಾ, ಗಂಗಾದೇವಿ ಪೂಜಾ, ಶ್ರೀ ದೇವಿಗೆ ಪ್ರಸಾದ ಕಟ್ಟುವುದು ಹಾಗೂ ನಿವೇದನೆ.  ಜೂ. 02 ರಂದು ಬೆಳಿಗ್ಗೆ 6-30 ಗಂಟೆಗೆ ಅಗ್ನಿಕುಂಡ ಕಾರ್ಯಕ್ರಮ ನೆರವೇರಲಿದೆ.   ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ  ದೇವಿಯ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.  ಜಾತ್ರೆಗೆ ಆಗಮಿಸಲಿರುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು,  ವಿವಿಧ ಮಾರ್ಗಗಳಿಂದ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ದೇವಸ್ಥಾನ ಮತ್ತು ಗ್ರಾಮಪಂಚಾಯಿತಿ ವತಿಯಿಂದ ಸಿಸ್ಟನ್‍ಗಳು, ಕೊಳಾಯಿಗಳು, ಹಾಗೂ ಟ್ಯಾಂಕರುಗಳ ಮೂಲಕ, ಅರವಟಿಗೆಗಳ ಮೂಲಕ ವ್ಯವಸ್ಥೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.  
     ಹುಲಿಗೆಮ್ಮ ದೇವಿಗೆ ಸಲ್ಲಿಸುವ  ಬೆಳ್ಳಿ, ಬಂಗಾರ, ಕಾಣಿಕೆ ಹಾಗೂ ಮುಡುಪುಗಳನ್ನು   ದೇವಸ್ಥಾನದ ಕಚೇರಿಯಲ್ಲಿ ಕೊಟ್ಟು ರಶೀದಿ ಪಡೆಯಬೇಕು ಅಥವಾ ಹುಂಡಿಯಲ್ಲಿ ಹಾಕಬೇಕು. ರಶೀದಿ ಪಡೆಯದೇ ಕೊಡುವ ಕಾಣಿಕೆಗಳು ದೇವಿಯ ನಿಧಿಗೆ ಸೇರುವುದಿಲ್ಲ. ಉಚಿತ ಅನ್ನ ದಾಸೋಹಕ್ಕೆ ದವಸ ಧಾನ್ಯ ನೀಡಬಯಸುವ ಭಕ್ತಾದಿಗಳು ಗಣಕೀಕೃತ ಕೌಟರ್‍ನಲ್ಲಿ ನೀಡಿ ರಸೀದಿ ಪಡೆಯಬಹುದು.
      ಜಾತ್ರೆಯ ಸಂದರ್ಭದಲ್ಲಿ ಯಾವುದೇ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಮಹಾನಕ್ಷೆ ತಯಾರಿಸಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಭಕ್ತಾದಿಗಳು ಉದಾರವಾಗಿ ತನುಮನದಿಂದ ದೇಣಿಗೆ ನೀಡಲು ಕೋರಿದೆ.  ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಮುನಿರಾಬಾದ್ ರೇಲ್ವೆ ನಿಲ್ದಾಣದಲ್ಲಿ ಇಳಿಯಬೇಕು, ಕೊಪ್ಪಳ,  ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗುವುದು.  ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ  ಗ್ರಾಮದ ವತಿಯಿಂದ, ಸಹಕಾರಿ ಬ್ಯಾಂಕುಗಳು/ರಾಷ್ಟ್ರೀಕೃತ ಬ್ಯಾಂಕುಗಳು/ ಸ್ವಯಂಸೇವಕರು/ ಸಂಘಸಂಸ್ಥೆಗಳು/ ರಸ್ತೆ ಸಾರಿಗೆ ಸಂಸ್ಥೆಗಳು  ಸಹ  ಅರವಟಿಗೆ ವ್ಯವಸ್ಥೆ ಮಾಡಿ ಭಕ್ತರಿಗೆ ಕುಡಿಯುವ ನೀರು ಒದಗಿಸಲು ಮುಂದಾಗಬೇಕು ಎಂದು ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೊಪ್ಪಳದ ಕಿಮ್ಸ್ ಆಡಳಿತ ಕಚೇರಿ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಸ್ಥಳಾಂತರ

ಕೊಪ್ಪಳ ಮೇ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಆಡಳಿತ ಕಚೇರಿಯನ್ನು ಕೊಪ್ಪಳ-ಗಂಗಾವತಿ ರಸ್ತೆಯಲ್ಲಿರುವ ಮೆಡಿಕಲ್ ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
       ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕಿಮ್ಸ್) ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದ ಕಾರಣದಿಂದ ಕಿಮ್ಸ್ ಆಡಳಿತ ಕಚೇರಿಯನ್ನು ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು.  ಇದೀಗ ಕಚೇರಿಯನ್ನು ಕೊಪ್ಪಳ-ಗಂಗಾವತಿ ಮಾರ್ಗದಲ್ಲಿರುವ ಸ್ವಂತ ಕಟ್ಟಡದ ಕಾಲೇಜು ಆವರಣದಲ್ಲಿರುವ ಒಂದನೆ ಮಹಡಿಯಲ್ಲಿನ ಆಡಳಿತ ಕಚೇರಿಗೆ ಮೇ. 24 ರಿಂದ ಸ್ಥಳಾಂತರಿಸಲಾಗಿದ್ದು, ಕಿಮ್ಸ್ ಗೆ ಸಂಬಂಧಿತ ಪತ್ರ ವ್ಯವಹಾರವನ್ನು ನಿರ್ದೇಶಕರು, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಆಡಳಿತ ಕಚೇರಿ, ಮೊದಲನೆ ಮಹಡಿ, ಗಂಗಾವತಿ ರಸ್ತೆ ಕಾಲೇಜು ಆವರಣ, ಕೊಪ್ಪಳ ಇಲ್ಲಿನ ವಿಳಾಸಕ್ಕೆ ಸಲ್ಲಿಸುವಂತೆ ಕಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.

ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಕೀಟದ ಬಾಧೆ : ರೈತರಿಗೆ ಸಲಹೆಗಳು

ಕೊಪ್ಪಳ ಮೇ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆ ಹತ್ತಿಯನ್ನು ಬೆಳೆಯಲಾಗುತ್ತಿದ್ದು, ಬಿಸಿಲಿನ ತಾಪಕ್ಕೆ ಈಗಾಗಲೇ ತುತ್ತಾಗಿರುವ ಬೆಳೆಗೆ ಗುಲಾಬಿ ಕಾಯಿಕೊರಕ ಕೀಟದ ಬಾಧೆಯು ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕ ಕೀಟ ಬಾಧೆ ಪರಿಶೀಲನೆ ಕುರಿತಂತೆ ಡಾ. ಎಮ್.ಬಿ. ಪಾಟೀಲ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಹಾಗೂ ಡಾ. ಎ. ರಾಮದಾಸ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಇವರ ಸಹಯೋಗದೊಂದಿಗೆ, ಕೊಪ್ಪಳ ತಾಲ್ಲೂಕಿನ ಮಾದಿನೂರ, ನೆರೆಗಲ್, ಯತ್ನಟ್ಟಿ, ಹುಚ್ಚೇಶ್ವರ ಕ್ಯಾಂಪ್, ಕವಲೂರು, ಕಾಟ್ರಳ್ಳಿ ಗ್ರಾಮಗಳಲ್ಲಿ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕ ಸಮೀಕ್ಷೆ ಕೈಗೊಳ್ಳಲಾಗಿದ್ದು, ಗುಲಾಬಿ ಕಾಯಿಕೊರಕ ಪತಂಗಗಳು ಮೋಹಕ ಬಲೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.  ರೈತರು ಇದರ ನಿರ್ವಹಣೆಗಾಗಿ ಮೋಹಕ ಬಲೆಗಳನ್ನು ಬಳಸುವುದು ಮತ್ತು ಇದರೊಂದಿಗೆ ಆರ್ಥಿಕ ಹಾನಿಯ ಮಟ್ಟವನ್ನು ತಲುಪಿದೆ ಎಂದು ತಿಳಿದುಕೊಳ್ಳಲು ಪ್ರತಿ ಹೆಕ್ಟೇರಿಗೆ 5 ರಂತೆ ಲಿಂಗಾಕರ್ಷಕ ಬಲೆಗಳನ್ನು ನೆಡಬೇಕು.  20 ದಿನಗಳಿಗೊಮ್ಮೆ ಲೂರು ಗಳನ್ನು ಬದಲಿಸಬೇಕು, ಮೂರು ದಿನ ಸತತವಾಗಿ ಪ್ರತಿದಿನ 8 ಪತಂಗಗಳು ಮೋಹಕ ಬಲೆಗಳಲ್ಲಿ ಬಿದ್ದಿರುವುದು ಅಥವಾ ಅರವತ್ತು ಹೂಗಳಲ್ಲಿ ಆರು ಹೂಗಳು ಹಾನಿಯಾಗಿರುವುದು ಅಥವಾ 20 ಕಾಯಿಗಳಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಮರಿಹುಳುಗಳು ಇದ್ದರೆ ಆರ್ಥಿಕ ಹಾನಿಯ ಮಟ್ಟವನ್ನು ತಲುಪಿದೆ ಎಂದು ತಿಳಿದಾಗ, ಪೈರಿಥ್ರಾಯಿಡ್ ಕೀಟನಾಶಕಗಳಾದ 0.5 ಮಿ.ಲೀ. ಲ್ಯಾಮಡಾಸೈಲೋಥ್ರೀನ್ ಅಥವಾ 0.5 ಮಿ.ಲೀ. ಡೆಕಾಮೆತ್ರಿನ್ 2.8 ಇ.ಸಿ. ಅಥವಾ 0.5 ಮಿ.ಲೀ ಸೈಪರ್‍ಮೆಥ್ರಿನ್ 10 ಇ.ಸಿ. ಅಥವಾ 2 ಮಿ.ಲಿ. ಪ್ರೊಫೆನೋಫಾಸ್ 50ಇ.ಸಿ. ಅಥವಾ 1 ಗ್ರಾಂ ಥೈಯೋಡಿಕಾರ್ಬ್ 75 ಡಬ್ಲ್ಯೂ.ಪಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬಿತ್ತನೆಯಾದ 100 ದಿನಗಳ ನಂತರ ಅವಶ್ಯಕತೆಗನುಸಾರವಾಗಿ ಒಂದು ಅಥವಾ ಎರಡು ಸಲ ಮಾತ್ರ ಸಿಂಪಡಿಸಬೇಕು.  ಸರಿಯಾಗಿ ಎಲ್ಲಾ ಭಾಗಗಳಿಗೆ ಮುಟ್ಟುವಂತೆ ಸಿಂಪರಣೆಯನ್ನು ಮಾಡಬೇಕು.  ಪ್ರತಿ ಹೆಕ್ಟೇರಿಗೆ 1000-1250 ಲೀ ಸಿಂಪರಣಾ ದ್ರಾವಣ ಬೇಕಾಗುತ್ತದೆ.  ಈಗಾಗಲೇ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಹತ್ತಿ ಬೆಳೆದ ರೈತರಿಗೆ ಈ ಕೀಟದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ರೈತರ ಹೊಲಗಳಲ್ಲಿ ಮೋಹಕ ಬಲೆಗಳನ್ನು ಹಾಕಿಸಲಾಗಿದೆ.   ರೈತರು ನಿರ್ವಹಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ಹೆಚ್ಚಿನ ಮಾಹಿತಿಗೆ ಎಂ.ಬಿ. ಪಾಟೀಲ್, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ,  ಕೊಪ್ಪಳ ಮೊಬೈಲ್: 9480696319 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನೊಣಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ಕೋಳಿ ಫಾರಂ ಮಾಲೀಕರುಗಳಿಗೆ ಆರೋಗ್ಯ ಇಲಾಖೆ ಸೂಚನೆ

ಕೊಪ್ಪಳ ಮೇ. 29 (ಕರ್ನಾಟಕ ವಾರ್ತೆ): ಜಿಲ್ಲೆಯ ಕೆಲವೆಡೆ ನೊಣಗಳ ಹಾವಳಿ ಕಂಡುಬಂದಿದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯು ಕೋಳಿ ಫಾರಂಗಳ ಮಾಲೀಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
     ಕೊಪ್ಪಳ ತಾಲೂಕಿನ ಭೀಮನೂರಿನಲ್ಲಿ ನೊಣಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಂ.ಎಂ. ಕಟ್ಟಿಮನಿ ಅವರ ನೇತೃತ್ವದಲ್ಲಿ ಜಿಲ್ಲಾ ತ್ವರಿತ ಪ್ರತಿಕ್ರಿಯಾ ತಂಡ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಭೀಮನೂರು ಗ್ರಾಮಕ್ಕೆ ಮೇ. 25 ರಂದು ಭೇಟಿ ನೀಡಿ ಪರಿಶೀಲಿಸಿದೆ.  ಗ್ರಾಮದ ಸುಮಾರು 1 ಕಿ.ಮಿ. ಅಂತರದಲ್ಲಿ 2 ಕೋಳಿ ಸಾಗಾಣಿಕಾ ಕೇಂದ್ರ ಇರುವುದರಿಂದ ಕೋಳಿ ಸಾಗಾಣಿಕಾ ಕೇಂದ್ರದಲ್ಲಿ ನೊಣ ಹೆಚ್ಚಾಗಲು, ಪೌಲ್ಟ್ರಿ ಫಾರಂಗಳಲ್ಲಿಯ ಲಿಟ್ಟರ್ ಹಾಗೂ ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡದಿರುವುದು ಪ್ರಮುಖ ಕಾರಣವಾಗಿದ್ದು ಕಂಡುಬಂದಿದೆ.  ನೊಣಗಳು ಹೆಚ್ಚಾಗುವುದರಿಂದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗುವ ಕಾರಣದಿಂದ ಪೌಲ್ಟ್ರಿ ಫಾರಂ ಮಾಲೀಕರು ಕೆಲವು ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಸೂಚನೆ ನೀಡಲಾಗಿದೆ.  ಪೌಲ್ಟ್ರಿ ಫಾರಂ ತ್ಯಾಜ್ಯ ಮೇಲೆ ಮತ್ತು ತಿಪ್ಪೆಗುಂಡಿಗಳ ಮೇಲೆ ಹಾಗೂ ಗ್ರಾಮದಲ್ಲಿ ಡೆಲ್ಟಾಮೆಥರಿನ್ 2.8% ಇಸಿ ಅಥವಾ ಕ್ವಿನೋಲಫಾಸ್ 2.5% ಇಸಿ ನಂತರ ಅದನ್ನು ಆಳವಾಗಿ ಲಿಟ್ಟರ್ ತಳ ಮುಟ್ಟುವಂತೆ ಡ್ರೆಂಚ್ ಸಿಂಪರಣೆ ಮಾಡಬೆಕು.  ನಾಲ್ಕರಿಂದ ಎಂಟು ವಾರಗಳವರೆಗೆ ಪೌಲ್ಟ್ರಿಯ ಕೋಳಿಗಳ ಆಹಾರದಲ್ಲಿ ಲಾರ್ವಿಡೆಕ್ಸ್ ಅನ್ನು ಒಂದು ಟನ್ ಆಹಾರದಲ್ಲಿ 500 ಗ್ರಾಮ ನಂತೆ ಬೆರೆಸಿ ಪ್ರತಿ ದಿನ ಬಳಸಬೇಕು.  ಗ್ರಾಮಗಳಲ್ಲಿ ಹಾಗೂ ಸುತ್ತಮುತ್ತ ನೊಣಗಳ ಹಾವಳಿ ಕಡಿಮೆ ಆಗುವವರೆಗೆ ಹೆಚ್ಚಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕು.  ಇದರಿಂದ ನೊಣಗಳ ವಂಶಾಭಿವೃದ್ಧಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ.  ಸಂಶೋಧನಾ ತಂಡದವರ ಶಿಫಾರಸ್ಸಿನಂತೆ ನೊಣಗಳ ಜೀವನ ಚಕ್ರವನ್ನು ಅಡ್ಡಿಪಡಿಸಲು 2 ದಿನಗಳಿಗೊಮ್ಮೆ ಘನತ್ಯಾಜ್ಯವನ್ನು ವಿಲೇವಾರಿ ಮಾಡಲು ಪೌಲ್ಟ್ರಿ ಫಾರಂಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

Wednesday, 18 May 2016

ರಾಜ್ಯದಲ್ಲಿ ವಸತಿ ಭಾಗ್ಯ ಯೋಜನೆಯಡಿ ಪ್ರತಿ ವರ್ಷ 03 ಲಕ್ಷ ಮನೆಗಳ ನಿರ್ಮಾಣ- ಡಾ. ಜಿ. ಪರಮೇಶ್ವರ್


ಕೊಪ್ಪಳ ಮೇ. 18 (ಕರ್ನಾಟಕ ವಾರ್ತೆ): ಸೂರು ರಹಿತ ಬಡಜನರಿಗೆ ಸೂರು ಕಲ್ಪಿಸಲು ರಾಜ್ಯದಲ್ಲಿ ವಸತಿಭಾಗ್ಯ ಯೋಜನೆಯಡಿ ಪ್ರತಿ ವರ್ಷ 03 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.  

     ಜಿಲ್ಲಾಡಳಿತ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಯಲಬುರ್ಗಾದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಮಂಗಳವಾರದಂದು ತಾಲೂಕಿನ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ರಾಜ್ಯದಲ್ಲಿ ಐದು ವರ್ಷಗಳ ಒಳಗೆ ಸೂರು ರಹಿತ ಬಡಜನರಿಗೆ ಸೂರು ಕಲ್ಪಿಸಲು 09 ಲಕ್ಷ ಮನೆಗಳ ನಿರ್ಮಾಣ ಮಾಡುವುದಾಗಿ, ವಿಧಾನಸಭೆ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ, ಕಳೆದ ಮೂರು ವರ್ಷಗಳಲ್ಲಿ ಪ್ರತಿ ವರ್ಷ 03 ಲಕ್ಷ ಮನೆಗಳಂತೆ ಈವರೆಗೆ 09 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ.  ವಸತಿಭಾಗ್ಯ ಯೋಜನೆಯಡಿ ಉಳಿದೆರಡು ವರ್ಷಗಳಲ್ಲಿ ಇನ್ನೂ 06 ಲಕ್ಷ ಮನೆಗಳನ್ನು ನಿರ್ಮಿಸುವ ಮೂಲಕ ಜನರಿಗೆ ನೀಡಿದ ಆಶ್ವಾಸನೆಯನ್ನು ನಮ್ಮ ಸರ್ಕಾರ ಈಡೇರಿಸಲಿದೆ.  ಪ್ರತಿ ಮನೆಗೂ ಈ ಮೊದಲು ಕೇವಲ 75 ಸಾವಿರ ಮಾತ್ರ ಘಟಕ ವೆಚ್ಚವಾಗಿ ಸರ್ಕಾರ ನೀಡಲಾಗುತ್ತಿತ್ತು.  ಆದರೆ ನಮ್ಮ ಸರ್ಕಾರ ಪ್ರತಿ ಮನೆಯ ಘಟಕ ವೆಚ್ಚವನ್ನು 1. 5 ಲಕ್ಷ ರೂ.ಗಳಿಗೆ ಹೆಚ್ಚಿಸಿ, ಉತ್ತಮ ಮನೆ ನಿರ್ಮಿಸಿ ಕೊಡಲಾಗುತ್ತಿದೆ.  2013 ರಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಬಡ ಜನರಿಗಾಗಿಯೇ ಕೆಲಸ ಮಾಡಿದೆ.  ಹಸಿವು ಮುಕ್ತ ರಾಜ್ಯವನ್ನಾಗಿಸಲು ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ.  ಶಾಲೆಗಳಿಗೆ ತೆರಳಲು ಹಿಂಜರಿಯುತ್ತಿದ್ದ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಕ್ಷೀರಭಾಗ್ಯ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ ಭಾಗ್ಯ, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಧನ ನೀಡುತ್ತಿದೆ.  ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಸಾಲ ಪಡೆದು, ಸಾಲ ತೀರಿಸಲಾಗದೆ, ಸಂಕಷ್ಟಕ್ಕೆ ಸಿಲುಕಿದ್ದ ಜನರ ಸಾಲವನ್ನು ಮನ್ನಾ ಮಾಡಿದೆ.  ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದಲೂ ಸತತ ಬರ ಆವರಿಸುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಧನವನ್ನು 1 ಲಕ್ಷ ರೂ. ಗಳಿಂದ 05 ಲಕ್ಷಕ್ಕೆ ಹೆಚ್ಚಿಸಲಾಗಿದೆ.  ರೈತರಿಗೆ ಧೈರ್ಯ ತುಂಬಿ, ಉತ್ತಮ ಯೋಜನೆಗಳ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೃಷಿ ಭಾಗ್ಯ, ಪಶುಭಾಗ್ಯನಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ.  ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 1 ಲಕ್ಷ ಕೋಟಿ ರೂ. ಅಗತ್ಯವಿದ್ದು, ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗಾಗಿಯೇ ಈವರೆಗೆ 36 ಸಾವಿರ ಕೋಟಿ ರೂ. ಅನುದಾನ ಒದಗಿಸಿದೆ.  ಇನ್ನೆರಡು ವರ್ಷಗಳಲ್ಲಿ ರಾಜ್ಯದಲ್ಲಿ 4. 5 ಲಕ್ಷ ಎಕರೆ ಭೂಮಿಯನ್ನು ನೀರಾವರಿಗೆ ಒಳಪಡಿಸಲು ನಮ್ಮ ಸರ್ಕಾರ ಬದ್ಧತೆಯನ್ನು ತೋರಲಿದೆ.  ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿಗೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೊಳಿಸಲು 675 ಕೋಟಿ ರೂ. ಗಳ ಯೋಜನೆಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದೆ.  ಕೃಷ್ಣಾ ಬಿ ಸ್ಕೀಂ ನಡಿ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಯಲಬುರ್ಗಾ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಸರ್ವೆ ಕಾರ್ಯ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕೆ ಅಗತ್ಯವಿರುವ 4 ಸಾವಿರ ಕೋಟಿ ರೂ. ಅನುದಾನ ಒದಗಿಸಲು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ, ಅನುದಾನ ಬಿಡುಗಡೆಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು.  ಯಲಬುರ್ಗಾ ಪಟ್ಟಣಕ್ಕೆ ಈಗಾಗಲೆ ಅಗ್ನಿಶಾಮಕ ಠಾಣೆ ಮಂಜೂರು ಮಾಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಶೀಘ್ರ ಒದಗಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಿರೇಹಳ್ಳದಿಂದ ಯಲಬುರ್ಗಾ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ 18 ಕೋಟಿ ರೂ. ಗಳ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.  ಎಲ್ಲರ ಸಹಕಾರದೊಂದಿಗೆ ಯೋಜನೆಯನ್ನು ಇದೀಗ ಪೂರ್ಣಗೊಳಿಸಿದ್ದು, ಯಲಬುರ್ಗಾ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಶೀಘ್ರ ಪ್ರಾರಂಭಿಸಲಾಗುವುದು.  ಕೃಷ್ಣಾ ಬಿ ಸ್ಕೀಂ ನಡಿ ಯಲಬುರ್ಗಾ ಭಾಗಕ್ಕೆ ನೀರು ಒದಗಿಸಲು ಅನುಕೂಲವಾಗುವಂತೆ ಸರ್ವೆ ಕಾರ್ಯವನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಬರುವ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಈ ಕಾಮಗಾರಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.  ಯಲಬುರ್ಗಾ ತಾಲೂಕು ಒಂದರಲ್ಲಿಯೇ 1500 ಕೃಷಿ ಹೊಂಡ ನಿರ್ಮಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಶೀಘ್ರ ಪ್ರಾರಂಭಿಸಲಾಗುವುದು ಎಂದರು.
     ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಮಾತನಾಡಿ, ತಾವು ಅಧ್ಯಕ್ಷರಾದ ನಂತರ ಮಂಡಳಿಯಿಂದ 16 ಸಾವಿರ ಕೋಟಿ ರೂ. ಗಳ ಕಾಮಗಾರಿಗೆ ಕ್ರಿಯಾ ಯೋಜನೆ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ.  ಮುಖ್ಯಮಂತ್ರಿಗಳ ನಗರ ನೀರು ಭಾಗ್ಯ ಯೋಜನೆಯಡಿ ಎಲ್ಲ ಜಿಲ್ಲೆಗಳಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.  ಹಿರೇಹಳ್ಳದಿಂದ ಯಲಬುರ್ಗಾ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಯೋಜನೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 05 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಗಣ್ಯರಾದ ಬಸವರಾಜ ಹಿಟ್ನಾಳ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.  ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿರುವ ನಿಮಿತ್ಯ, ಸಮಾರಂಭದಲ್ಲಿ ಮಾಲಾರ್ಪಣೆ ಹಾಗೂ ಸನ್ಮಾನಕ್ಕೆ ನಿರ್ಬಂಧ ವಿಧಿಸಲಾಗಿತ್ತು. 
     ಹಿರೇಹಳ್ಳ ಜಲಾಶಯ ಮೂಲದಿಂದ ಯಲಬುರ್ಗಾ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯ ಉದ್ಘಾಟನೆ, ಯಲಬುರ್ಗಾ ಪಟ್ಟಣದಲ್ಲಿ ಡಾ. ಬಾಬು ಜಗಜೀವನರಾಂ ಹಾಗೂ ಡಿ. ದೇವರಾಜ ಅರಸು ಭವನ, ಕುಕನೂರು, ರಾಜೂರು ಮತ್ತು ತಳಬಾಳ ಗ್ರಾಮಗಳಲ್ಲಿ ಬುದ್ಧ ಬಸವ ಅಂಬೇಡ್ಕರ್ ಭವನಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ.  ಯಲಬುರ್ಗಾ ಪಟ್ಟಣದಲ್ಲಿ 2013-14 ನೇ ಸಾಲಿನ ಎಸ್‍ಎಫ್‍ಸಿ 3 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, 13 ನೇ ಹಣಕಾಸು ಮತ್ತು ಎಸ್‍ಎಫ್‍ಸಿ ಅನುದಾನದಡಿ 1. 40 ಕೋಟಿ ರೂ. ವೆಚ್ಚದಲ್ಲಿ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು.  2011-12 ನೇ ಸಾಲಿನ ಎಸ್‍ಎಫ್‍ಸಿ ಅನುದಾನದಡಿ 40 ಲಕ್ಷ ರೂ. ವೆಚ್ಚದಲ್ಲಿ ಹಳೆ ಪಟ್ಟಣ ಪಂಚಾಯತಿ ಮುಂಭಾಗದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ.  25 ಲಕ್ಷ ರೂ. ವೆಚ್ಚದಲ್ಲಿ 2009-10 ನೇ ಸಾಲಿನ ಸಿಎಂಎಸ್‍ಎಂಟಿಡಿಪಿ ಯೋಜನೆಯಡಿ ನಿರ್ಮಿಸಲಾದ ಸ್ತ್ರೀಶಕ್ತಿ ಭವನ ಉದ್ಘಾಟನೆ.  2015-16 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ 300 ಫಲಾನುಭವಿಗಳಿಗೆ ತಲಾ 2 ಲಕ್ಷ ರೂ. ಗಳಂತೆ ಮನೆ ನಿರ್ಮಾಣಕ್ಕೆ ಸಹಾಯಧನ ಮತ್ತು ಸಾಲ ಸೌಲಭ್ಯಕ್ಕಾಗಿ ಫಲಾನುಭವಿಗಳ ಆಯ್ಕೆ ಪಟ್ಟಿ ಬಿಡುಗಡೆ.  ಆಶ್ರಯ ಯೋಜನೆಯತಡಿ ಮನೆ ನಿರ್ಮಿಸಲು ಸಾಲ ಪಡೆದ ವಿವಿಧ ಫಲಾನುಭವಿಗಳ ಸಾಲ ಮನ್ನಾ ಮಾಡಿದ ಋಣಮುಕ್ತ ಪ್ರಮಾಣ ಪತ್ರ ವಿತರಣೆ ಜರುಗಿತು.

ಕೊಪ್ಪಳದಲ್ಲಿ ಹಸಿರು ಅಭಿಯಾನ : ಮೇ. 19 ರಂದು ಪೂರ್ವಭಾವಿ ಸಭೆ

ಕೊಪ್ಪಳ ಮೇ.18 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತವು ವಿವಿಧ ಇಲಾಖೆಗಳು ಹಾಗೂ ಜಿಲ್ಲೆಯ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೊಪ್ಪಳ ನಗರ ಮತ್ತು ತಾಲೂಕಿನ ವಿವಿಧ ಭಾಗಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಹಸಿರಾಗಿಸುವ ಅಭಿಯಾನವನ್ನು ಆಯೋಜಿಸಲು ಉದ್ದೇಶಿಸಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೇ. 19 ರಂದು ಮಧ್ಯಾಹ್ನ 12 ಗಂಟೆಗೆ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಈ ಸಭೆಗೆ ಕೊಪ್ಪಳ ನಗರ ಹಾಗೂ ತಾಲೂಕಿನ ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿ, ಕಾರ್ಯಕ್ರಮದ ಯಶಸ್ವಿಗೆ ಸಹಕಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಅವರು ಮನವಿ ಮಾಡಿದ್ದಾರೆ.

ನಾಲ್ಕನೆ ವರ್ಷದೆಡೆಗೆ-ಭರವಸೆಯ ನಡಿಗೆ ಕಿರುಹೊತ್ತಿಗೆ ಬಿಡುಗಡೆ


ಕೊಪ್ಪಳ ಮೇ. 18 (ಕರ್ನಾಟಕ ವಾರ್ತೆ): ಪ್ರಸಕ್ತ ಸರ್ಕಾರ ಕಳೆದ ಮೇ. 13 ಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾದ ಹಲವು ಅಭಿವೃದ್ಧಿಪರ ಯೋಜನೆಗಳ ಸಾಧನೆಗಳನ್ನು ಬಿಂಬಿಸುವ ‘ನಾಲ್ಕನೆ ವರ್ಷದೆಡೆಗೆ-ಭರವಸೆಯ ನಡಿಗೆ’ ಕಿರುಹೊತ್ತಿಗೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದ್ದು, ಕಿರುಹೊತ್ತಿಗೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರದಂದು ಬಿಡುಗಡೆ ಮಾಡಿದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿ.ಸಿ. ಚಂದ್ರಶೇಖರ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಉಪಸ್ಥಿತರಿದ್ದರು.

Tuesday, 17 May 2016

ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸ್ಸು ವಿಶೇಷ ಅಭಿವೃದ್ಧಿಯಡಿ ಈವರೆಗೆ ಕೊಪ್ಪಳ ಜಿಲ್ಲೆಗೆ 454 ಕೋಟಿ ಬಿಡುಗಡೆ- ವೆಂಕಟರಾವ್ ಘೋರ್ಪಡೆ


ಕೊಪ್ಪಳ ಮೇ.17 (ಕರ್ನಾಟಕ ವಾರ್ತೆ):  ಡಾ. ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ವಿಶೇಷ ಅಭಿವೃದ್ಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಕಳೆದ 08 ವರ್ಷಗಳಲ್ಲಿ  ಒಟ್ಟು 454 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಯೋಜನೆ ಅನುಷ್ಠಾನ ಕುರಿತಂತೆ ಸಂಬಂಧಪಟ್ಟ ಇಲಾಖೆಗಳು ಸಮಗ್ರ ವರದಿ ಸಲ್ಲಿಸಬೇಕು ಎಂದು ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸ್ಸುಗಳ ಅನುಷ್ಠಾನ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ವೆಂಕಟರಾವ್ ಘೋರ್ಪಡೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸ್ಸುಗಳ ಅನುಷ್ಠಾನ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಯಲ್ಲಿನ ನಾಲ್ಕೂ ತಾಲೂಕುಗಳು, ಡಾ. ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕುಗಳಾಗಿದ್ದು, 2007-08 ರಿಂದ 2014-15 ರವರೆಗೆ ಎಂಟು ವರ್ಷಗಳಲ್ಲಿ ಜಿಲ್ಲೆಯ 23 ಇಲಾಖೆಗಳಿಗೆ 454 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ 432 ಕೋಟಿ ರೂ. ವೆಚ್ಚ ಮಾಡಲಾಗಿದೆ.  ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನದ ಕುರಿತಂತೆ ಮೌಲ್ಯಮಾಪನ ಕೈಗೊಳ್ಳಲಾಗುತ್ತಿದ್ದು, ಸರ್ಕಾರಕ್ಕೆ ಮೌಲ್ಯಮಾಪನದ ವರದಿ ಸಲ್ಲಿಸಬೇಕಿದೆ.  ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ವಿಶೇಷ ಅಭಿವೃದ್ಧಿ ಯೋಜನೆ ಅನುದಾನ ಬಳಸಿಕೊಂಡು ಕೈಗೊಳ್ಳಲಾಗಿರುವ ಕಾಮಗಾರಿಗಳ ಸಮಗ್ರ ವಿವರವನ್ನು ಸಿದ್ಧಪಡಿಸಿ ಸಲ್ಲಿಸಬೇಕು.  ವರದಿಯಲ್ಲಿ ಕಟ್ಟಡ, ಆಸ್ತಿ ಇತರೆ ನಿರ್ಮಾಣಗಳು,  ಮೂಲಭೂತ ಸೌಲಭ್ಯಗಳ ನಿರ್ಮಾಣ ಕಾಮಗಾರಿಗಳು, ಫಲಾನುಭವಿ ಆಧಾರಿತ ಯೋಜನೆ ಅನುಷ್ಠಾನ, ಕುಡಿಯುವ ನೀರಿನ ಕಾಮಗಾರಿಗಳು.  ಹೀಗೆ ವಿಷಯವಾರು ವರದಿಯನ್ನು ತಯಾರಿಸಿ ಸಲ್ಲಿಸಬೇಕು.   ಡಾ. ಡಿ.ಎಂ. ನಂಜುಂಡಪ್ಪ ವರದಿಯನ್ವಯ ರಾಜ್ಯದಲ್ಲಿ ಒಟ್ಟು 114 ತಾಲೂಕುಗಳನ್ನು ಹಿಂದುಳಿದ ತಾಲೂಕುಗಳೆಂಬುದಾಗಿ ಗುರುತಿಸಲಾಗಿದೆ.  ಕಲಬುರ್ಗಿ ವಿಭಾಗದಲ್ಲಿ 28 ತಾಲೂಕುಗಳು, ಬೆಳಗಾವಿ- 31, ಬೆಂಗಳೂರು-33 ಹಾಗೂ ಮೈಸೂರು ವಿಭಾಗದಲ್ಲಿ 22 ತಾಲೂಕುಗಳಿವೆ.   ಹಿಂದುಳಿದ ಈ ತಾಲೂಕುಗಳ ಅಭಿವೃದ್ಧಿಗಾಗಿ ಈವರೆಗೆ 11224 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ.  ಕಲಬುರ್ಗಿ ವಿಭಾಗದ ಹಿಂದುಳಿದ ತಾಲೂಕುಗಳಿಗೆ 4475 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, 4173 ಕೋಟಿ ರೂ. ವೆಚ್ಚವಾಗಿದೆ.  ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿಗೆ 115 ಕೋಟಿ ಬಿಡುಗಡೆಯಾಗಿದ್ದು, ಅದೇ ರೀತಿ ಯಲಬುರ್ಗಾ ತಾಲೂಕಿಗೆ 124 ಕೋಟಿ, ಕೊಪ್ಪಳ ತಾಲೂಕಿಗೆ 159. 6 ಕೋಟಿ, ಗಂಗಾವತಿ ತಾಲೂಕಿಗೆ 53 ಕೋಟಿ ರೂ. ಬಿಡುಗಡೆಯಾಗಿದೆ.  ಆದರೆ ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಇಂಧನ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ವಸತಿ ಇಲಾಖೆಗಳಲ್ಲಿ ಅನುದಾನ ಸಂಪೂರ್ಣ ಬಳಕೆಯಾಗಿಲ್ಲ.   ವಿಶೇಷ ಅಭಿವೃದ್ಧಿ ಯೋಜನೆ ಅನುದಾನ ಬಳಸಿಕೊಂಡು, ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳು, ಕಟ್ಟಡ, ರಸ್ತೆ ಇತ್ಯಾದಿ ಸ್ಥಳಗಳಲ್ಲಿ ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸ್ಸು ಅನ್ವಯ ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೊಂಡ ಅಭಿವೃದ್ಧಿ ಕಾಮಗಾರಿ ಎಂಬುದಾಗಿ ಸ್ಪಷ್ಟವಾಗಿ ಪ್ರದರ್ಶನ ಫಲಕ ಅಳವಡಿಸಬೇಕು.  ವಿಶೇಷ ಅಭಿವೃದ್ಧಿ ಯೋಜನೆಯಡಿ ಈ ಸಾಲಿನ ಕ್ರಿಯಾ ಯೋಜನೆಯನ್ನು ಶೀಘ್ರ ಸಲ್ಲಿಸುವಂತೆ ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸ್ಸುಗಳ ಅನುಷ್ಠಾನ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ವೆಂಕಟರಾವ್ ಘೋರ್ಪಡೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಉಪಸ್ಥಿತರಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ವಿಶೇಷ ಅಭಿವೃದ್ಧಿ ಯೋಜನೆ ಸೇರಿದಂತೆ ಯಾವುದೇ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳಾಗಿ ಕೈಗೊಳ್ಳುವ ಕ್ರಿಯಾ ಯೋಜನೆಯನ್ನು ತಯಾರಿಸುವ ಮುನ್ನ ಆಯಾ ಕ್ಷೇತ್ರದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರೊಂದಿಗೆ ಚರ್ಚಿಸಿ, ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಉಪಕಾರ್ಯದರ್ಶಿ ಎನ್.ಕೆ. ತೊರವಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಎಸ್. ಹರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಜನಮನ ಸಂವಾದದಲ್ಲಿ ಕೊಪ್ಪಳ ಜಿಲ್ಲೆಯ ಫಲಾನುಭವಿಗಳ ಮನವಿಗೆ ಸಿಎಂ ಸ್ಪಂದನೆ


ಕೊಪ್ಪಳ ಮೇ. 16 (ಕರ್ನಾಟಕ ವಾರ್ತೆ): ಪ್ರಸಕ್ತ ಸರ್ಕಾರ ಕಳೆದ ಮೇ. 13 ಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬೆಂಗಳೂರಿನಲ್ಲಿ ಇತ್ತೀಚೆಗೆ ಸರ್ಕಾರಿ ಯೋಜನೆಗಳ ಕುರಿತು ಏರ್ಪಡಿಸಿದ ಜನಮನ- ಜನಾಭಿಪ್ರಾಯ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಫಲಾನುಭವಿಗಳು ವ್ಯಕ್ತಪಡಿಸಿದ ಅನಿಸಿಕೆ-ಅಭಿಪ್ರಾಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಂದಿಸಿ, ಮನವಿ ಈಡೇರಿಸುವ ಭರವಸೆ ನೀಡಿದರು.

     ಪ್ರಸಕ್ತ ಸರ್ಕಾರ ಕಳೆದ ಮೇ. 13 ಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ಹೆಬ್ಬಾಳದ ಜಿಕೆವಿಕೆಯಲ್ಲಿನ ಡಾ. ಬಾಬು ರಾಜೇಂದ್ರ ಪ್ರಸಾದ್ ಇಂಟರ್‍ನ್ಯಾಷನಲ್ ಕನ್ವೆನ್‍ಷನ್ ಸೆಂಟರ್ ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸರ್ಕಾರಿ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನ, ಕೃಷಿಭಾಗ್ಯ, ವಿದ್ಯಾಸಿರಿ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಜನಮನ-ಜನಾಭಿಪ್ರಾಯ ಸಮಾವೇಶವನ್ನು ಏರ್ಪಡಿಸಿತು.  ಮುಖ್ಯಮಂತ್ರಿಗಳು ಖುದ್ದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿ, ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆದುಕೊಳ್ಳಲು ಉತ್ಸುಕರಾಗಿ ಭಾಗವಹಿಸಿದ್ದರು.  ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯಿಂದ ಸಂಬಂಧಪಟ್ಟ ಇಲಾಖೆಗಳು ಆಯ್ಕೆಗೊಳಿಸಿದ 10 ಫಲಾನುಭವಿಗಳನ್ನು ಕರೆದುಕೊಂಡು ಹೋಗಲಾಯಿತು.  ಮುಖ್ಯಮಂತ್ರಿಗಳೊಂದಿಗೆ ನಡೆದ ಸಂವಾದದಲ್ಲಿ ಕೊಪ್ಪಳದ ವಿಶಾಲಾಕ್ಷಿ ವೀರೇಶ್ ಅವರು ಅನ್ನಭಾಗ್ಯ ಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಅನ್ನಭಾಗ್ಯ ಯೋಜನೆಯಿಂದ ಬಡವರು ಕನಿಷ್ಟ ಎರಡೊತ್ತು ಹೊಟ್ಟೆತುಂಬ ಊಟ ಮಾಡಲು ಸಾಧ್ಯವಾಗುತ್ತಿದೆ.  ಅಂಗವಿಕಲ ಮಗುವನ್ನು ಹೊಂದಿದ್ದರೂ, ತಾನೂ ಅನ್ನಭಾಗ್ಯ ಯೋಜನೆಯ ಕೃಪೆಯಿಂದ ಇಂದು ಮನೆಯ ಸಂಸಾರ ಸಾಗಿಸಲು ಯಾವುದೇ ತೊಂದರೆಯಾಗಿಲ್ಲ.  ಅನ್ನಭಾಗ್ಯ ಯೋಜನೆಯಡಿ ಸದ್ಯ ನೀಡುತ್ತಿರುವ ಆಹಾರಧಾನ್ಯದ ಪ್ರಮಾಣವನ್ನು ಹೆಚ್ಚಿಸುವಂತೆ ಮನವಿ ಮಾಡಿದರಲ್ಲದೆ, ಕೊಪ್ಪಳ ಜಿಲ್ಲೆಯು ಹಿಂದುಳಿದ ಜಿಲ್ಲೆಯಾಗಿದ್ದು, ಯಾವುದೇ ಯೋಜನೆಗಳಿರಲಿ, ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು.  ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ, ಗೋಧಿ ಪ್ರಮಾಣ ಹೆಚ್ಚಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.  ತಳಕಲ್‍ನ ತೋಟಯ್ಯ ಮಠದ ಅವರು ಕೃಷಿ ಭಾಗ್ಯ ಯೋಜನೆಯ ಕುರಿತು ಮಾತನಾಡಿ, ಕೃಷಿ ಹೊಂಡ ಯೋಜನೆಯು ಖುಷ್ಕಿ ಭಾಗದ ರೈತರಿಗೆ ವರದಾನವಾಗಿದೆ.  ಒಮ್ಮೆ ಕೃಷಿ ಹೊಂಡ ತುಂಬಿದರೆ ಸಾಕು, ಉತ್ತಮ ಬೆಳೆ ತೆಗೆದು, ಆರ್ಥಿಕ ಸಬಲತೆ ಕಾಣಲು ಸಾಧ್ಯವಾಗುತ್ತಿದೆ.  ಈ ಯೋಜನೆಯನ್ನು ಇನ್ನಷ್ಟು ಸುಧಾರಿಸಬೇಕಿದೆ ಎಂದು ಹೇಳಿದರು.  ಹಿರೇಸಿಂದೋಗಿಯ ಮಲ್ಲಪ್ಪ ಚನ್ನಾಳ ಅವರು ಸದ್ಯ ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ 04 ರೂ. ಪ್ರೋತ್ಸಾಹಧನ ನೀಡುತ್ತಿರುವುದು, ರೈತರಿಗೆ ಬಹಳಷ್ಟು ಸಹಕಾರಿಯಾಗಿದೆ.  ಅಲ್ಲದೆ ಹೈನುಗಾರಿಕೆ ವೃತ್ತಿ ವೃದ್ಧಿಸಿಕೊಳ್ಳಲು ಅತ್ಯಂತ ಅನುಕೂಲವಾಗಿದೆ.  ಜಾನುವಾರುಗಳಿಗೆ ನೀಡುವ ಪಶು ಆಹಾರದ ದರದಲ್ಲಿ ಗಣನೀಯ ಏರಿಕೆಯಾಗಿದ್ದು, ರೈತರಿಗೆ ಹೊರೆಯಾಗುತ್ತಿದೆ.  ಇದನ್ನು ಸರಿದೂಗಿಸುವಂತಾಗಲು ಪ್ರೋತ್ಸಾಹಧನವನ್ನು ಪ್ರತಿ ಲೀ. ಗೆ 06 ರೂ.ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.  ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಬರುವ ದಿನಗಳಲ್ಲಿ ಈ ಕುರಿತು ಗಂಭೀರ ಚಿಂತನೆ ನಡೆಸಲಾಗುವುದು ಎಂದರು.  ಗಂಗಾವತಿ ತಾಲೂಕು ಚಿಕ್ಕಜಂತಕಲ್ ಗ್ರಾಮದ ವಿರೇಶ್ ಅವರು ಮಾತನಾಡಿ, ವಿವಿಧ ಅಭಿವೃದ್ಧಿ ನಿಗಮಗಳಡಿ ಪಡೆದಂತಹ ಸಾಲವನ್ನು ಮರು ಪಾವತಿ ಮಾಡಲಾಗದೆ, ತೀವ್ರ ಸಂಕಷ್ಟ ಹಾಗೂ ಆತಂಕ ಎದುರಿಸುತ್ತಿದ್ದ ಫಲಾನುಭವಿಗಳಿಗೆ, ಸರ್ಕಾರ ಸಾಲ ಮನ್ನಾ ಮಾಡುವ ಮೂಲಕ, ಅವರ ಬದುಕಿಗೆ ಭರವಸೆಯ ಬೆಳಕು ಮೂಡುವಂತೆ ಮಾಡಿದೆ ಎಂಬುದಾಗಿ ಬಣ್ಣಿಸಿದರು.
     ಜನಮನ ಕಾರ್ಯಕ್ರಮದಲ್ಲಿ ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್, ವಾರ್ತಾ ಮತ್ತು ಮೂಲಭೂತ ಸೌಕರ್ಯ ಖಾತೆ ಸಚಿವ ರೋಷನ್ ಬೇಗ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಸೇರಿದಂತೆ ಹಲವು ಸಚಿವರುಗಳು, ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಕೊಪ್ಪಳ ನಗರದ ವಿವಿಧೆಡೆ ಕಾರ್ಮಿಕ ಇಲಾಖೆ ದಾಳಿ : ನಾಲ್ವರು ಬಾಲಕಾರ್ಮಿಕರ ಪತ್ತೆ

ಕೊಪ್ಪಳ ಮೇ. 17 (ಕರ್ನಾಟಕ ವಾರ್ತೆ): ಕಾರ್ಮಿಕ ಇಲಾಖೆ ಅಧಿಕಾರಿಗಳು, ಮಂಗಳವಾದಂದು ಕೊಪ್ಪಳ ನಗರದ ವಿವಿಧೆಡೆ ದಾಳಿ ನಡೆಸಿ, ನಾಲ್ವರು ಬಾಲಕಾರ್ಮಿಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಯಿತು.
     ಕೊಪ್ಪಳ ನಗರದ  ಹೋಟೆಲ್, ಗ್ಯಾರೇಜ್ ವಿವಿಧೆಡೆ ದಾಳಿ ನಡೆಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು ನಾಲ್ವರು ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ, ಆರೈಕೆ ಮತ್ತು ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿತು.  ಅಲ್ಲದೆ ಮಕ್ಕಳ ಮನೆಗಳಿಗೆ ತೆರಳಿ, ಮಕ್ಕಳನ್ನು ದುಡಿಮೆಗೆ ಹಚ್ಚುವುದು ಅಪರಾಧವಾಗಿದ್ದು, ಯಾವುದೇ ಕಾರಣಕ್ಕೂ ಮಕ್ಕಳನ್ನು ಕೆಲಸಕ್ಕೆ ಕಳುಹಿಸದಂತೆ ತಾಕೀತು ಮಾಡಲಾಯಿತು.  ದಾಳಿ ತಂಡದಲ್ಲಿ ಕಾರ್ಮಿಕ ನಿರೀಕ್ಷಕ ಬಸಯ್ಯ ಅಂಗಡಿ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಹಾಗೂ ಕ್ಷೇತ್ರಾಧಿಕಾರಿ ಮಾರುತಿ ನಾಯಕರ ಹಾಗೂ ವೀರಣ ವ್ಹಿ ಕುಂಬಾರ, ಹಾಗೂ ಮಕ್ಕಳ ಸಹಾಯವಾಣಿ-1098 ಸಿಬ್ಬಂದಿಯಾದ ಬಸವರಾಜ ಪಾಲ್ಗೊಂಡಿದ್ದರು ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.

ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಅರ್ಜಿ ಹಾಗೂ ನಾಮ ನಿರ್ದೇಶನ ಆಹ್ವಾನ

ಕೊಪ್ಪಳ ಮೇ.17 (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೊಡಮಾಡುವ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಹಾಗೂ ಪತ್ರಿಕಾ ಸಂಘಟನೆಗಳಿಂದ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.
    ಮುದ್ರಣ ಮತ್ತು ವಿದ್ಯುನ್ಮಾನ ಮಾದ್ಯಮದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪತ್ರಕರ್ತರನ್ನು 2014 ಹಾಗೂ 2015 ನೇ ದಿನದರ್ಶಿ ವರ್ಷಗಳ ತಲಾ ರೂ.50,000 ನಗದು ಒಳಗೊಂಡ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗಾಗಿ ಅರ್ಹ ಮತ್ತು ಆಸಕ್ತರು ಅರ್ಜಿ ಅಲ್ಲಿಸಬಹುದಾಗಿದೆ. ಹಾಗೂ ಪತ್ರಿಕಾ ಸಂಘಟನೆ ಮತ್ತು ಸಂಘ-ಸಂಸ್ಥೆಗಳಿಂದ ನಾಮ ನಿರ್ದೇಶನಗಳನ್ನು ಕೂಡ ಆಹ್ವಾನಿಸಿದೆ.
    ವಾರ್ತಾ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಪರಿಣಿತರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ಪ್ರಶಸ್ತಿಗೆ ಅರ್ಹ ಪತ್ರಕರ್ತರ ಆಯ್ಕೆ ಮಾಡಲಿದೆ. ಪ್ರಶಸ್ತಿಗೆ ನಾಮನಿರ್ದೇಶನ ಸಲ್ಲಿಸುವವರು ಮುದ್ರಣ ಮಾದ್ಯಮ ಮತ್ತು ವಿದ್ಯುನ್ಮಾನ ಮಾದ್ಯಮ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರಬೇಕು. ಅಲ್ಲದೆ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮಕ್ಕೆ ವಿಶೇಷ ಕೊಡುಗೆ ನೀಡಿರಬೇಕು.
ಅಭಿವೃದ್ಧಿ ಪ್ರಶಸ್ತಿ: ಅಭಿವೃದ್ಧಿಗೆ ರಾಜ್ಯದೆಲ್ಲೆಡೆ ಉತ್ತಮ ವಾತಾವರಣ ಕಲ್ಪಸಲು ಅನುವಾಗುವಂತೆ ಅಭಿವೃದ್ಧಿಗೆ ಪೂರಕವಾದ ಲೇಖನಗಳನ್ನು ಬರೆದು, ಅಭಿವೃದ್ಧಿ ಪ್ರಕ್ರಿಯೆಗೆ ಪುಷ್ಟಿ ನೀಡಿ ಸಮಾಜಕ್ಕೆ ಉಪಕರಿಸುವ ಪತ್ರಕರ್ತರಿಗೆ ರೂ.50,000 ನಗದು ಒಳಗೊಂಡ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
ಪರಿಸರ ಪ್ರಶಸ್ತಿ: ಪರಿಸರ ಸಂರಕ್ಷಣೆ ಕುರಿತು ಪೂರಕ ಲೇಖನಗಳನ್ನು ಬರೆದು ರಾಜ್ಯದಲ್ಲಿನ ಪರಿಸರ ಪ್ರಕೃತಿ ಹಾಗೂ ನಿಸರ್ಗದ ಸಮತೋಲನ ಕಾಯ್ದುಕೊಳ್ಳಲು ನೆರವಾಗಿರುವ ಪತ್ರಕರ್ತರಿಗೆ ರೂ.50,000 ನಗದು ಒಳಗೊಂಡ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
     ಮೊಬೈಲ್ ಸಂಖ್ಯೆ ಒಳಗೊಂಡಂತೆ ಸಂಪರ್ಕ ವಿಳಾಸ ಸ್ವ-ವಿವರ ಹಾಗೂ ಮಾಡಿರುವ ಸಾಧನೆಗಳ ವಿವರಗಳನ್ನು  ಮೇ.25 ರೊಳಗಾಗಿ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ಸಂ:17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ಇಲ್ಲಿಗೆ ಸಲ್ಲಿಸಬಹುದಾಗಿದೆ.
    ಅರ್ಜಿಯೊಂದಿಗೆ ತಮ್ಮ ವಿಶೇಷ ಸಾಧನೆ  ಸಮರ್ಥಿಸಲು ತಮ್ಮ ಪ್ರಕಟಿತ ವಿಷೇಶ ಲೇಖನಗಳು, ಲೇಖನ ಮಾಲೆಗಳ ಪತ್ರಿಕಾ ತುಣುಕುಗಳು ಅಥವಾ ಪ್ರಕಟಿತ ಪುಸ್ತಕಗಳ ಪ್ರತಿಗಳು, ಈಗಾಗಲೇ ಪಡೆದಿರುವ ಗೌರವಗಳ ದಾಖಲೆಗಳನ್ನೂ ಸಹ ಸಲ್ಲಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.

ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ ಮೇ.17 (ಕರ್ನಾಟಕ ವಾರ್ತೆ): ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ಇವರು ಮಹಿಳೆಯರಿಗಾಗಿ ಬ್ಯೂಟಿ ಪಾರ್ಲರ್, ಫ್ಯಾಶನ್ ಆಭರಣಗಳ ಹಾಗೂ ಬೇಸಿಕ್ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.
      ತರಬೇತಿಗಳು  ಮೇ ಹಾಗೂ ಜೂನ್ ತಿಂಗಳಲ್ಲಿ ಆರಂಭವಾಗಲಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.   ತರಬೇತಿ ವೇಳೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇದ್ದು ಆಸಕ್ತ 18 ರಿಂದ 45 ವರ್ಷದೊಳಗಿನ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
     ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ(ಉ.ಕ). ಈ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 08284-220807, 9483485489, 9482188780 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೇ.23 ರಂದು 6 ನೇ ತರಗತಿ ಪ್ರವೇಶಕ್ಕಾಗಿ ಕೌನ್ಸಿಲಿಂಗ್ *

ಕೊಪ್ಪಳ ಮೇ.17 (ಕರ್ನಾಟಕ ವಾರ್ತೆ): ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ  6ನೇ ತರಗತಿ ಪ್ರವೇಶಕ್ಕಾಗಿ ಖಾಲಿ ಇರುವ  ಸ್ಥಾನಗಳಿಗೆ ಮೇ.23 ರಂದು ಬೆಳಗ್ಗೆ 10 ಗಂಟೆಗೆ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಕೌನ್ಸಿಲಿಂಗ್ ಏರ್ಪಡಿಸಲಾಗಿದೆ.
    ಜಿಲ್ಲೆಯ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೊಳಪಡುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ 6 ನೇ ತರಗತಿ ಪ್ರವೇಶಕ್ಕೆ ಈಗಾಗಲೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಪ್ರವೇಶ ಪರೀಕ್ಷೆ ಏರ್ಪಡಿಸಿದ್ದು, ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಕೌನ್ಸಿಲಿಂಗ್ ಮುಖಾಂತರ ಮೇ.23 ರಂದು ಸೀಟು ಹಂಚಿಕೆ ಮಾಡಲಾಗುವುದು.
       ಕೌನ್ಸಿಲಿಂಗ್‍ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಈಗಾಗಲೆ ಸಂದರ್ಶನ ಪತ್ರ ಕಳುಹಿಸಲಾಗಿದ್ದು, ಸಂದರ್ಶನ ಪತ್ರದೊಂದಿಗೆ ಪ್ರವೇಶ ಪರೀಕ್ಷಾ ಗುರುತಿನ ಚೀಟಿ (ಹಾಲ್ ಟಿಕೆಟ್), ಮೂಲ ವರ್ಗಾವಣೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣ ಪತ್ರ (ಇದ್ದರೆ), ವಿಷೇಶ ವರ್ಗದ ಪ್ರಮಾಣ ಪತ್ರ( ಇದ್ದರೆ), ಅಲೆಮಾರಿ/ ಅರೆ ಅಲೆಮಾರಿ ಪ್ರಮಾಣ ಪತ್ರ(ಇದ್ದರೆ), 5ನೇ ತರಗತಿಯ ಮೂಲ ಅಂಕಪಟ್ಟಿ, ಮೇಲ್ಕಾಣಿಸಿದ ಮೂಲ ದಾಖಲೆಗಳು ಹಾಗೂ ದೃಢೀಕೃತ ಪತ್ರಗಳೊಂದಿಗೆ ಕೌನ್ಸಿಲಿಂಗ್‍ಗೆ ಹಾಜರಾಗಬೇಕು. 
    ಕೌನ್ಸಿಲಿಂಗ್‍ನಲ್ಲಿ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಸಂಬಂಧಪಟ್ಟ ಶಾಲೆಗಳಿಗೆ ಪ್ರವೇಶ ದಾಖಲಾತಿ ಮಾಡಲಾಗುತ್ತದೆ. ಕೌನ್ಸಿಲಿಂಗ್‍ಗೆ ಬರುವ ವೇಳೆ ಸಂಬಂಧಿಸಿದ ಶಾಲಾ ಮುಖ್ಯೋಪಾದ್ಯಾಯರಿಗೆ ಸಂದರ್ಶನ ಪತ್ರ ತೋರಿಸಿ ಶಾಲಾ ಮೂಲ ವರ್ಗಾವಣೆ ಪ್ರಮಾಣ ಪತ್ರ ಪಡೆದುಕೊಂಡು ಕೌನ್ಸಿಲಿಂಗೆ ಹಾಜರಾಗಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊರಾರ್ಜಿ ದೇಸಾಯಿ ಪ.ಪೂ. ವಸತಿ ವಿಜ್ಞಾನ ಕಾಲೇಜಿಗೆ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ಮೇ.17 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜಿನಲ್ಲಿ ಪ್ರಸಕ್ತ ಸಾಲಿಗೆ ಪ್ರಥಮ ಪಿಯುಸಿ ಪಿ.ಸಿ.ಎಂ.ಬಿ ಮತ್ತು  ಪಿ.ಸಿ.ಎಂ.ಸಿ ಸಂಯೋಜನೆ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಪ್ರಥಮ ಪಿಯುಸಿ ತರಗತಿಯ ಪಿ.ಸಿ.ಎಂ.ಬಿ ಮತ್ತು  ಪಿ.ಸಿ.ಎಂ.ಸಿ ಸಂಯೋಜನೆಗಳಿಗೆ ತಲಾ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 2015-16 ನೇ ಶೈಕ್ಷಣಿಕ ವರ್ಷ ಎಸ್‍ಎಸ್‍ಎಲ್‍ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಈ ಹಿಂದೆ ಪಾಸು ಮಾಡಿರುವ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ತರಗತಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
     ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗವುದು, ನಂತರ ಬೇರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.  ಜಿಲ್ಲಾ ಮಟ್ಟದಲ್ಲಿ ವಿಷಯ ಸಂಯೋಜನೆಗೆ ಎಸ್‍ಎಸ್‍ಎಲ್‍ಸಿ ಯಲ್ಲಿ ಗಣಿತ, ವಿಜ್ಞಾನ, ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ ಪ್ರವೇಶ ನೀಡಲಾಗುವುದು.
     ಮೀಸಲಾತಿಯನ್ವಯ ಪಿ.ಸಿ.ಎಂ.ಬಿ ಪ್ರವೇಶಕ್ಕಾಗಿ ಪ.ಜಾ-30, ಪ.ಪಂ-1, ಪ್ರ1-1, 2ಎ-4, 2ಬಿ-1, 3ಎ-2, 3ಬಿ-1 ಒಟ್ಟು 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.  ಪಿ.ಸಿ.ಎಂ.ಸಿ ತರಗತಿ ಪ್ರವೇಶಕ್ಕಾಗಿ ಪ.ಜಾ-30, ಪ.ಪಂ-1, ಪ್ರ1-1, 2ಎ-4, 2ಬಿ-1, 3ಎ-2, 3ಬಿ-1 ಒಟ್ಟು 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
      ನಿಗದಿತ ಅರ್ಜಿಗಳನ್ನು ಮೇ.17 ರಿಂದ ಕೊಪ್ಪಳ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಉಚಿತವಾಗಿ ಪಡೆದು ಭರ್ತಿ ಮಾಡಿ ಮೇ.27 ರೊಳಗಾಗಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು, ಹಿರೇಸಿಂದೋಗಿ (ಅಳವಂಡಿ ರಸ್ತೆ) ತಾ.ಜಿ. ಕೊಪ್ಪಳ ಇಲ್ಲಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೇ. 18 ರಂದು ಕೊಪ್ಪಳ ಜಿಲ್ಲೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ

ಕೊಪ್ಪಳ ಮೇ. 16 (ಕರ್ನಾಟಕ ವಾರ್ತೆ): ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಮೇ. 18 ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
     ಸಚಿವರು ಅಂದು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು, ಬೆ. 10 ಗಂಟೆಗೆ ಬಳ್ಳಾರಿ ಜಿಲ್ಲೆ ತೋರಣಗಲ್‍ಗೆ ಆಗಮಿಸುವರು.  ಬೆ. 11-15 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳುವರು.  ನಂತರ ಮಧ್ಯಾಹ್ನ 3 ಗಂಟೆಗೆ ಯಲಬುರ್ಗಾಕ್ಕೆ ತೆರಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಸಚಿವರು ಸಂಜೆ 5 ಗಂಟೆಗೆ ತೋರಣಗಲ್‍ಗೆ ತೆರಳಿ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಕೊಪ್ಪಳ ಜಿಲ್ಲೆಗೆ ಕೆರೆ ಸಂಜೀವಿನಿ ಯೋಜನೆ ಜಾರಿ- ಆರ್. ರಾಮಚಂದ್ರನ್

ಕೊಪ್ಪಳ ಮೇ. 16 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಗೆ ಕೆರೆಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದಾದ ಹಾಗೂ ರೈತರಿಗೆ ಉಪಯೋಗವಾಗುವ ‘ಕೆರೆ ಸಂಜೀವಿನಿ’ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಮನವಿ ಮಾಡಿಕೊಂಡಿದ್ದಾರೆ.
     ಪ್ರಸಕ್ತ ಸಾಲಿನಲ್ಲಿ ಬರ ಪರಿಹಾರ ಕಾರ್ಯಗಳನ್ನು ನಿಭಾಯಿಸಲು ಬರ ಪೀಡಿತ ತಾಲೂಕುಗಳಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸುವ ‘ಕೆರೆ ಸಂಜೀವಿನಿ’ ಯೋಜನೆಯನ್ನು ಜಿಲ್ಲೆಗೆ ಜಾರಿಗೊಳಿಸಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ ಕುಣಿಕೇರಿ ದೊಡ್ಡಕೆರೆ, ಹಾಲಹಳ್ಳಿ ಕೆರೆ, ಕಲಕೇರಿ ಕೆರೆ, ಹಿರೇಸೂಳಿಕೇರಿ ಕೆರೆ.  ಕುಷ್ಟಗಿ ತಾಲೂಕಿನಲ್ಲಿ ನಿಲೋಗಲ್ ಗ್ರಾ.ಪಂ.ನ ಅಚನೂರು ಮಲ್ಲಯ್ಯ ಕೆರೆ, ಯಲಬುಣಚಿ ಕೆರೆ ಮತ್ತು ಕ್ಯಾದಿಗುಪ್ಪ ಕೆರೆ.  ಗಂಗಾವತಿ ತಾಲೂಕಿನಲ್ಲಿ ಮುಕ್ಕುಂಪಾ ಮತ್ತು ವೆಂಕಟಗಿರಿ ಕೆರೆ.  ಯಲಬುರ್ಗಾ ತಾಲೂಕಿನಲ್ಲಿ ಬಿನ್ನಾಳ, ತಳಕಲ್, ಯರೇಹಂಚಿನಾಳ ಕೆರೆಗಳು ಮತ್ತು ಬನ್ನಿಕೊಪ್ಪ ಗ್ರಾ.ಪಂ.ನ ಮಾಳೆಕೊಪ್ಪ ಕೆರೆಗಳ ಹೂಳೆತ್ತಲು ಕೆರೆ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.  ಈ ಯೋಜನೆಯಡಿ ಜೆಸಿಬಿ ಗಳಿಂದ ತೆಗೆಯಲಾದ ಕೆರೆಗಳ ಹೂಳು ಮಣ್ಣನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಸಾಗಿಸಿ, ಜಮೀನುಗಳಿಗೆ ಉಪಯೋಗಿಸಿಕೊಳ್ಳಬಹುದು.  ಆದರೆ ತೆಗೆದುಕೊಂಡ ಮಣ್ಣನ್ನು ಪುನಃ ಕೆರೆಗೆ ಬಾರದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.  ಯೋಜನೆಯ ಹೊಣೆಯನ್ನು ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ವಹಿಸಿಕೊಡಲಾಗಿದೆ.  ಈ ಯೋಜನೆ ಅನುಷ್ಠಾನಕ್ಕಾಗಿ ಪ್ರತಿ ತಾಲೂಕಿಗೆ 50 ಲಕ್ಷ ರೂ. ಗಳಂತೆ ಜಿಲ್ಲೆಗೆ ಒಟ್ಟು 2 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.  ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕೆರೆ ವ್ಯಾಪ್ತಿಯಿರುವ ಗ್ರಾಮ ಪಂಚಾಯತಿ ಪಿಡಿಓ ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಕಾರ್ಮಿಕ ಪಿಂಚಣಿ ಆದೇಶ ವಿತರಣೆ

ಕೊಪ್ಪಳ ಮೇ. 16 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೊಪ್ಪಳ ಜಿಲ್ಲೆಯ ಕಾರ್ಮಿಕರಿಗೆ ಮಂಜೂರಾದ ಕಾರ್ಮಿಕ ಪಿಂಚಣಿ ಆದೇಶ ಪ್ರತಿಗಳನ್ನು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂಬಂಧಿಸಿದ 32 ಫಲಾನುಭವಿಗಳಿಗೆ ಇತ್ತೀಚೆಗೆ ವಿತರಣೆ ಮಾಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ವಿತರಣೆ ಮಾಡಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಫಲಾನುಭವಿಗಳಿಗೆ ಮನವಿ ಮಾಡಿದರು.  ಕೊಪ್ಪಳ ಕಾರ್ಮಿಕ ನಿರೀಕ್ಷಕ ಬಸಯ್ಯ ಅಂಗಡಿ ಅವರು ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ, ನೋಂದಣಿ ಮತ್ತು ನವೀಕರಣ ಕುರಿತಂತೆ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.  ಗಂಗಾವತಿ ಕಾರ್ಮಿಕ ನಿರೀಕ್ಷಕ ಶೇಖರಗೌಡ ಪಾಟೀಲ್, ಕಾರ್ಯ ನಿರ್ವಾಹಕ ಕೊಟ್ರೇಶ್ ಸೇರಿದಂತೆ ಜಿಲ್ಲೆಯ ವಿವಿಧ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ಮೇ.16 (ಕರ್ನಾಟಕ ವಾರ್ತೆ): ತಾಂತ್ರಿಕ ಶಿಕ್ಷಣ ಇಲಾಖೆ ಕೊಪ್ಪಳ, ಇವರಿಂದ ಪ್ರಸಕ್ತ ಸಾಲಿಗೆ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
      ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್  www.kea.kar.nic.in & www.dte.kar.nic.in ಇಲ್ಲಿ ಮೇ.30 ರೊಳಗಾಗಿ ಡೌನ್‍ಲೋಡ್ ಮಾಡಿಕೊಳ್ಳಬೇಕು.  ಅರ್ಜಿ ಶುಲ್ಕ ಸಾಮಾನ್ಯ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.100 ಹಾಗೂ ಎಸ್‍ಸಿ, ಎಸ್‍ಟಿ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.50 ಶುಲ್ಕ ನಿಗದಿಪಡಿಸಲಾಗಿದೆ.  ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಚಾಲ್ತಿ ಖಾತೆ ಸಂ:64097386381 ಅಥವಾ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ ನ ಯಾವುದೇ ಶಾಖೆಗಳಲ್ಲಿ ಖಾತೆ  ED-KEA-DCET-2016 Application fee collection account No-62417732180 ಇಲ್ಲಿಗೆ ಪಾವತಿಸಿ ಚಲನ್ ಹಾಗೂ ದೃಡೀಕೃತ ಎಲ್ಲಾ  ದಾಖಲಾತಿಗಳೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ಇಲ್ಲಿಗೆ ಭೇಟಿ ನೀಡಿ ಆನ್‍ಲೈನ್ ನಲ್ಲಿ ಮೇ.30 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು ತಾಂತ್ರಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬಾಲಕಾರ್ಮಿಕರ ಪತ್ತೆ ಕಾರ್ಯ ಚುರುಕುಗೊಳಿಸಿ: ಎಂ. ಕನಗವಲ್ಲಿ ಸೂಚನೆ

ಕೊಪ್ಪಳ ಮೇ.16 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ವ್ಯಾಪಕ ದಾಳಿ ಕೈಗೊಂಡು ಬಾಲಕಾರ್ಮಿಕರನ್ನು ಪತ್ತೆಮಾಡಿ, ಮಕ್ಕಳನ್ನು ರಕ್ಷಿಸುವ ಕಾರ್ಯವನ್ನು ಚುರುಕುಗೊಳಿಸಿ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಬಾಲಕಾರ್ಮಿಕರ ಪತ್ತೆ ಹಾಗೂ ರಕ್ಷಣೆ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯ ನಾಲ್ಕೂ ತಾಲೂಕಿನಲ್ಲಿ ತಹಸಿಲ್ದಾರ ಅಧ್ಯಕ್ಷತೆಯಲ್ಲಿ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆದು ಬಾಲಕಾರ್ಮಿಕರ ಪತ್ತೆ ಹಾಗೂ ರಕ್ಷಣೆಯ ಮಾಹಿತಿ ನೀಡಬೇಕು. ಯಾವ ಯಾವ ಮಕ್ಕಳು ಬಾಲ ಕಾರ್ಮಿಕರ ವ್ಯಾಪ್ತಿಯೊಳಗೆ ಬರುತ್ತಾರೆ ಎಂಬುದರ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶ ಹಾಗೂ ಮಾರ್ಗಸೂಚಿಯಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.  ಅಲ್ಲದೆ ಎಲ್ಲಾ ಅಂಕಿ ಅಂಶಗಳನ್ನ ಕಂಪ್ಯೂಟರ್‍ನಲ್ಲಿ ದಾಖಲೀಕರಿಸಿ, ಜಿಲ್ಲಾಧಿಕಾರಿಗಳ  ಕಛೇರಿಗೆ ಮಾಹಿತಿ ನೀಡಬೇಕು ಎಂದರು.
ಸಮೀಕ್ಷೆ ಚುರುಕುಗೊಳಿಸಿ: ಬಾಲಕಾರ್ಮಿಕರ ಪತ್ತೆಗಾಗಿ ಮೇ ತಿಂಗಳ ಒಳಗಾಗಿ ಉತ್ಸಾಹಿ ತಂಡಗಳನ್ನ ರಚಿಸಬೇಕು. ಜೂನ್ ಒಳಗಾಗಿ ನಾಲ್ಕೂ ತಾಲೂಕಿನ ಸಮೀಕ್ಷಾ ವರದಿಯನ್ನು ನೀಡಬೇಕು. ಸಮೀಕ್ಷಾ ಕಾರ್ಯಕ್ಕೆ ಆಯಾ ವಾರ್ಡ್ ಹಾಗೂ ಗ್ರಾ.ಪಂ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರನ್ನ ನೇಮಿಸಿಕೊಂಡು ಅವರಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಿ ಬಾಲಕಾರ್ಮಿಕರ ಸಮೀಕ್ಷೆ ಮಾಡುವಂತೆ ತಿಳಿಸಿದರು.  ನಗರಪ್ರದೇಶಗಳಲ್ಲಿ ಹೋಟೆಲ್, ಕಾರ್ಖಾನೆ, ಕೋಳಿಫಾರ್ಮ್ ಮುಂತಾದ ವಾಣಿಜ್ಯ ಕೆಲಸಗಳಲ್ಲಿ ಮಕ್ಕಳು ಹೆಚ್ಚು ಕಂಡುಬರುತ್ತಿದ್ದು ಪತ್ತೆ ಕಾರ್ಯ ಚುರುಕುಗೊಳಿಸಿ ಮಕ್ಕಳನ್ನ ರಕ್ಷಿಸುವ ಕಾರ್ಯ ಸಮರ್ಪಕವಾಗಿ ಕೈಗೊಳ್ಳಬೇಕು.    ಬಾಲಕಾರ್ಮಿಕ ಸಮೀಕ್ಷೆ ಅಥವಾ ದಾಳಿಯಲ್ಲಿ ಪತ್ತೆ ಮಾಡಲಾದ ಮಕ್ಕಳಿಗೆ ಶೀಘ್ರ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಪ್ರವೇಶ ನೀಡಬೇಕು  ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜನ ಜಾಗೃತಿ ಮೂಡಿಸಿ: ಬಾಲಕಾರ್ಮಿಕರ ಕುರಿತು ಬೀದಿನಾಟಕ, ಸಿನಿಮಾ ಮಂದಿರಗಳಲ್ಲಿ,   ಜಾಗೃತಿ ಮೂಡಿಸುವ ಗೋಡೆಬರಹ ಬರೆಯಿಸಲು ಹಾಗೂ ಸ್ಟಿಕ್ಕರ್ ಬಿತ್ತಿಪತ್ರಗಳ ಮೂಲಕ ಜನಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಮಾತನಾಡಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಲ್ಲಿ ಬಾಲಕಾರ್ಮಿಕ ಸಮೀಕ್ಷೆಗೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
   ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಅಧಿಕಾರಿ ರಮೇಶ ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ 90 ಗ್ರಾ.ಪಂ ವ್ಯಾಪ್ತಿಗಳಲ್ಲಿ ಸರ್ವೆಮಾಡಿ ಕೊಪ್ಪಳ-73, ಗಂಗಾವತಿ-64, ಯಲಬುರ್ಗಾ-97, ಕುಷ್ಟಗಿ-25 ಒಟ್ಟು 259 ಬಾಲಕಾರ್ಮಿಕರನ್ನು ಪತ್ತೆಮಾಡಲಾಗಿದ್ದು ಇನ್ನೂ ಉಳಿದ ಗ್ರಾ.ಪಂ ಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯವನ್ನ ಶೀಘ್ರ ಪ್ರಾರಂಭಿಸುವುದಾಗಿ ತಿಳಿಸಿದರು. ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
    ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ, ಜಿಲ್ಲಾ ಬಿಸಿಎಂ ಅಧಿಕಾರಿ ಬಿ.ಕಲ್ಲೇಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂಜುನಾಥ, ಯುನಿಸೆಫ್‍ನ ಹರೀಶ್ ಜೋಗಿ, ಕಾರ್ಮಿಕ  ನಿರೀಕ್ಷಕ ಬಸಯ್ಯ ಅಂಗಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಮೇ.18 ರಂದು ಬೇಸಿಗೆ ಶಿಬಿರ ಹಾಗೂ ಮಕ್ಕಳ ಮನ ಪರಿವರ್ತನಾ ಕಾರ್ಯಾಗಾರದ ಸಮಾರೋಪ

ಕೊಪ್ಪಳ ಮೇ.16 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,(ಮಕ್ಕಳ ಸುಧಾರಣಾ ಸಂಸ್ಥೆಗಳ ವಿಭಾಗ), ಬಾಲಭವನ ಕೊಪ್ಪಳ, ಬಾಲವಿಕಸ ಅಕಾಡೆಮಿ ಧಾರವಾಡ, ಮಕ್ಕಳ ಹಕ್ಕುಗಳ ಆಯೋಗ ಬೆಂಗಳೂರು, ಸಹಜ ಟ್ರಸ್ಟ್ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಧಾರಣಾ ಸಂಸ್ಥೆಯ ಮಕ್ಕಳಿಗಾಗಿ ಬೇಸಿಗೆ ಶಿಬಿರದ ಹಾಗೂ ಮಕ್ಕಳ ಮನ ಪರಿವರ್ತನಾ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ಮೇ.18 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಜರುಗಲಿದೆ.
    ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿದ್ಯ ವಹಿಸುವರು, ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು.  ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು.
    ಜಿ.ಪಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಜಿ.ಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಸಿದ್ದಪ್ಪ ನೀರಲೂಟಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷೆ ದಾಕ್ಷಾಯಿಣಿ ಬಸವರಾಜ್, ಬಾಲಭವನ ಅಧ್ಯಕ್ಷೆ ಭಾವನಾ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಅಮರ ಆಳ್ವ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಉಚಿತ ಕಾನೂನು ನೆರವು ಸಮಿತಿ ಅಧ್ಯಕ್ಷರಾದ ಬಿ.ದಶರಥ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ತ್ಯಾಗರಾಜನ್, ಮಕ್ಕಳ ಹಕ್ಕುಗಳ ಆಯೋಗದ ಉಪಾಧ್ಯಕ್ಷೆ ವನಿತಾ ತೊರವಿ, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಅಧ್ಯಕ್ಷ ಶೇಖರಗೌಡ ರಾಮತ್ನಾಳ, ನಗರಸಭೆ ಸದಸ್ಯೆ ವಿಜಯಾ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದ ಅಂಗವಾಗಿ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ಅವರು ರಚಿಸಿ,ನಿರ್ದೇಶಿಸಿದ ‘ಚಿಗುರಿದ ಕನಸುಗಳು’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Sunday, 15 May 2016

ಭಾಗ್ಯನಗರ ರೈಲ್ವೆಗೇಟ್ ಮೇಲ್ಸೇತುವೆ ಕಾಮಗಾರಿಗೆ ಸಚಿವ ಶಿವರಾಜ ತಂಗಡಗಿ ರಿಂದ ಭೂಮಿಪೂಜೆ


ಕೊಪ್ಪಳ ಮೇ. 15 (ಕರ್ನಾಟಕ ವಾರ್ತೆ): ಕೊಪ್ಪಳ-ಭಾಗ್ಯನಗರ ಮಾರ್ಗದಲ್ಲಿ ಬರುವ ರೈಲ್ವೆ ಗೇಟ್ ಸಂಖ್ಯೆ 62 ಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶೇ. 50: 50 ರ ಅನುದಾನ ಹಂಚಿಕೆ ಆಧಾರದಡಿ 20. 32 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಬೆಂಗಳೂರಿನಿಂದ ರಿಮೋಟ್ ಮೂಲಕ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಶಂಕುಸ್ಥಾಪನೆ ನೆರವೇರಿಸಿದರೆ, ಇತ್ತ ಭಾಗ್ಯನಗರ ರೈಲ್ವೆ ಗೇಟ್ ಬಳಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಭಾನುವಾರದಂದು ಚಾಲನೆ ನೀಡಿದರು.

      ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಶಿವರಾಜ ಎಸ್ ತಂಗಡಗಿ ಅವರು, ಬಹಳ ವರ್ಷಗಳ ಬಳಿಕ ಭಾಗ್ಯನಗರದ ಭಾಗ್ಯದ ಬಾಗಿಲು ತೆರೆಯುವ ಕಾಲ ಇದೀಗ ಕೂಡಿ ಬಂದಿದೆ.  ಅನೇಕ ಅಡ್ಡಿ ಆತಂಕಗಳನ್ನು ನಿವಾರಿಸಿ, ಸದ್ಯ ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗುತ್ತಿದೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಮೊದಲು ಶೇ. 75 : 25 ರ ಅನುಪಾತದಲ್ಲಿ ಹಲವು ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡುವ ವ್ಯವಸ್ಥೆ ಇತ್ತು.  ಆದರೆ ಇದೀಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಶೇ. 50 : 50 ರ ಅನುಪಾತದಲ್ಲಿ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.  ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಕೂಡ ಒಟ್ಟು ವೆಚ್ಚದ ಶೇ. 50 ರಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ.  ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಯ   ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅನುದಾನ ನೀಡಿಕೆಯಲ್ಲಿ ಆದ್ಯತೆ ನೀಡುತ್ತಿದ್ದಾರೆ.  ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎನ್ನುವ ಜನರ ಬೇಡಿಕೆಯನ್ನು ಇದೀಗ ಸರ್ಕಾರ ಈಡೇರಿಸುತ್ತಿದೆ.  ಈ ಮಾರ್ಗಗದಲ್ಲಿ ಅತಿ ಹೆಚ್ಚು ವಾಹನ ಸಂಚಾರ ದಟ್ಟಣೆ ಇತ್ತು.  ಆದರೆ ರೈಲ್ವೆ ಗೇಟ್ ಸಮಸ್ಯೆಯಿಂದಾಗಿ ರೋಗಿಗಳು ಪರದಾಡುವ ಹಾಗೂ ಹೆರಿಗೆ  ಸಂದರ್ಭದಲ್ಲಿ ಮಹಿಳೆಯರು ತೀವ್ರ ತೊಂದರೆ ಅನುಭವಿಸಿದ ಅನೇಕ ಪ್ರಕರಣಗಳು ಆಗಿ ಹೋಗಿವೆ.  ಇದೀಗ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ನಿರ್ಮಾಣವಾಗಲಿದ್ದು, ಸಾರ್ವಜನಿಕರಿಗೆ ರೈಲ್ವೆ ಗೇಟ್ ಸಮಸ್ಯೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ.  ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ 15 ತಿಂಗಳ ಕಾಲಾವಕಾಶ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರು ಹೆಚ್ಚಿನ ಆದ್ಯತೆ ನೀಡಬೇಕು.  ಕುಷ್ಟಗಿ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ನಿರ್ಮಾಣ ಮಾಡಲು ಈಗಾಗಲೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿನ ಹಲವು ಪ್ರಮುಖ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಎಲ್ಲ ಸಹಕಾರವನ್ನು ತಾವು ನೀಡುವುದಾಗಿ ಸಚಿವರು ಈ ಸಂದರ್ಭದಲ್ಲಿ ಹೇಳಿದರು.


     ಸಮಾರಂಭದಲ್ಲಿ ಭಾಗವಹಿಸಿದ್ದ ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಭಾಗ್ಯನಗರ ರೈಲ್ವೆ ಗೇಟ್ ಮೇಲ್ಸೇತುವೆ ಮಂಜೂರಾತಿ ವಿಚಾರದಲ್ಲಿ ಭಾಗ್ಯನಗರದ ಹೋರಾಟ ಸಮಿತಿಯ ಪಾತ್ರ ಬಹು ಮುಖ್ಯವಾಗಿದ್ದು, ಕಾಮಗಾರಿ ಪ್ರಾರಂಭದ ಶ್ರೇಯಸ್ಸು ಹೋರಾಟ ಸಮಿತಿಗೂ ಸಲ್ಲಬೇಕು.  ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೊಪ್ಪಳ ಶಾಸಕರ ಸಹಕಾರದಿಂದ ಕಾಮಗಾರಿಗೆ ಇಂದು ಚಾಲನೆ ದೊರೆತಿದೆ.  ಭಾಗ್ಯನಗರ ರೈಲ್ವೆ ಗೇಟ್‍ಗೆ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಯು 625 ಮೀ. ಉದ್ದ, 12 ಮೀ. ಅಗಲ ಮತ್ತು 6.5 ಎತ್ತರದ ಇರಲಿದೆ.  ಈಗಾಗಲೆ ಅಗತ್ಯ ಭೂಸ್ವಾಧಿನ ಪ್ರಕ್ರಿಯೆಗೆ ಬೇಕಿರುವ 3. 93 ಕೋಟಿ ರೂ. ಗಳ ಪೈಕಿ 2. 5 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ.  ಹೈದ್ರಾಬಾದ್‍ನ ಮುರಳಿ ಕೃಷ್ಣರಾವ್ ಅವರು ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದು, 15 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ.  ಭವಿಷ್ಯದ ದೃಷ್ಟಿಯಿಂದ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು.  ಅಲ್ಲದೆ ಹುಬ್ಬಳ್ಳಿ-ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 63 ಅನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ತಿಂಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಇದನ್ನು ಸಿಮೆಂಟ್ ರಸ್ತೆಯನ್ನಾಗಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.  ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಅಥವಾ ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಶ್ರಮಿಸೋಣ ಎಂದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದ್ರಿ, ಮಾಜಿ ಸಂಸದರುಗಳಾದ ಕೆ. ವಿರುಪಾಕ್ಷಪ್ಪ, ಶಿವರಾಮಗೌಡ, ಗಣ್ಯರಾದ ಶಿವಪ್ರಕಾಶ ಆನಂದ ಸ್ವಾಮೀಜಿ, ಸಿ.ವಿ. ಚಂದ್ರಶೇಖರ್, ವಿ.ಆರ್. ಪಾನಘಂಟಿ, ಕೃಷ್ಣ ಇಟ್ಟಂಗಿ, ಸರೋಜ ಬಾಕಳೆ, ಯಮನಪ್ಪ ಕಬ್ಬೇರ, ಶ್ರೀನಿವಾಸ ಗುಪ್ತಾ, ವಿರುಪಾಕ್ಷಪ್ಪ ಅಗಡಿ, ಮುತ್ತುರಾಜ ಕುಷ್ಟಗಿ, ಜಿ.ಪಂ. ಸದಸ್ಯ ರಾಜಶೇಖರ ಹಿಟ್ನಾಳ, ಗವಿಸಿದ್ದಪ್ಪ ಕರಡಿ ಮುಂತಾದವರು ಉಪಸ್ಥಿತರಿದ್ದರು.  ಬೆಂಗಳೂರಿನಲ್ಲಿ ನೈರುತ್ಯ ರೈಲ್ವೆ ವಿಭಾಗವು ಏರ್ಪಡಿಸಿದ್ದ ಕೊಪ್ಪಳ-ಭಾಗ್ಯನಗರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದ ನೇರ ಪ್ರಸಾರ ವೀಕ್ಷಣೆಯ ವ್ಯವಸ್ಥೆಯನ್ನು ಭಾಗ್ಯನಗರ ರೈಲ್ವೆ ಗೇಟ್ ಬಳಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿತ್ತು.

Thursday, 12 May 2016

ಕೊಪ್ಪಳ ಜಿಲ್ಲೆಯ ಎಪಿಎಂಸಿ ಗಳ ಚುನಾವಣೆ ಮುಂದೂಡಿಕೆ

ಕೊಪ್ಪಳ ಮೇ. 12 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿನ ಗಂಗಾವತಿ, ಕಾರಟಗಿಯ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇó ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಚುನಾವಣೆಯನ್ನು ಮುಂದೂಡಿ ಕೃಷಿ ಮಾರಾಟ ಇಲಾಖೆ ಹೆಚ್ಚುವರಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
     ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದೆ.  ಅಲ್ಲದೆ 2016-17 ನೇ ಸಾಲಿನ ಬಜೆಟ್ ಭಾಷಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆಡಳಿತದಲ್ಲಿ ಪ್ರಸ್ತುತ ಇರುವ ಒಂದು ಮಹಿಳಾ ಪ್ರಾತಿನಿಧ್ಯ ಸ್ಥಾನವನ್ನು ಮೂರು ಸ್ಥಾನಗಳಿಗೆ ಹೆಚ್ಚಿಸಲು ಘೋಷಣೆ ಮಾಡಲಾಗಿದೆ.  ಈ ಕುರಿತಂತೆ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾವನೆ ಚಾಲನೆಯಲ್ಲಿ ಇರುವುದರಿಂದ, 2016 ನೇ ಸಾಲಿನಲ್ಲಿ ಅಧಿಕಾರಾವಧಿ ಮುಕ್ತಾಯಗೊಳ್ಳಲಿರುವ ಹಾಗೂ ಈಗಾಗಲೆ ಅಧಿಕಾರ ಅವಧಿ ಮುಕ್ತಾಯಗೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ನಡೆಸುವ ಚುನಾವಣೆಯನ್ನು ಮುಂದೂಡುವಂತೆ ಸರ್ಕಾರದಿಂದ ನಿರ್ದೇಶನ ಬಂದ ಕಾರಣ, ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿನ ಗಂಗಾವತಿ, ಕಾರಟಗಿಯ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇó ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಚುನಾವಣೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಹೆಚ್ಚುವರಿ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

ಯಲಬುರ್ಗಾ : ಸ್ವಚ್ಛ ಭಾರತ ಮಿಷನ್ ರೇಟಿಂಗ್‍ನಲ್ಲಿ ಸಾರ್ವಜನಿಕ ಆಸ್ಪತ್ರೆ ಪ್ರಥಮ

ಕೊಪ್ಪಳ ಮೇ. 12 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಯಲಬುರ್ಗಾ ಪಟ್ಟಣದ ಸರ್ಕಾರಿ ಕಟ್ಟಡಗಳಿಗೆ ಸಂಬಂಧಿಸಿದಂತೆ ನಡೆಸಿದ ಸ್ವಚ್ಛತಾ ರೇಟಿಂಗ್‍ನಲ್ಲಿ ಯಲಬುರ್ಗಾದ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಪ್ರಥಮ ಸ್ಥಾನ ಪಡೆದಿದೆ.
       ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವಿಷಯಾಧಾರಿತ ಸ್ವಚ್ಛತಾ ಆಂದೋಲನಗಳನ್ನು ಯಲಬುರ್ಗಾ ಪಟ್ಟಣದ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಕಳೆದ ಮಾರ್ಚ:01 ರಿಂದ ಮಾರ್ಚ-15ರ ವರೆಗೆ ಸರ್ಕಾರಿ ಕಚೇರಿಗಳು, ಕಟ್ಟಡಗಳಲ್ಲಿ ಉತ್ತಮವಾಗಿ ಸ್ವಚ್ಛಗೊಂಡಿರುವ ಸರ್ಕಾರಿ ಕಟ್ಟಡಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ. ಅದರಂತೆ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಕಟ್ಟಡ- ಪ್ರಥಮ ಸ್ಥಾನ,    ಪಟ್ಟಣ ಪಂಚಾಯತ ಕಚೇರಿ ಕಟ್ಟಡ- ದ್ವಿತೀಯ ಸ್ಥಾನ ಹಾಗೂ ತಾಲೂಕಾ ಪಂಚಾಯತ ಕಚೇರಿ ಕಟ್ಟಡ ರೇಟಿಂಗ್‍ನಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾದರಿ ಇಂಗುಗುಂಡಿ ನಿರ್ಮಿಸಿಕೊಳ್ಳಿ : ಆರ್ ರಾಮಚಂದ್ರನ್ ಮನವಿ

ಕೊಪ್ಪಳ ಮೇ.12 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಮೂಲಭೂತ ಸೌಕರ್ಯ ಕಾರ್ಯಕ್ರಮದಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗೆ ಮಾದರಿ ಇಂಗುಗುಂಡಿ ಕಾಮಗಾರಿಯನ್ನು ಅನುಷ್ಟಾನಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ಗ್ರಾಮೀಣ ಭಾಗದ ನೋಂದಾಯಿತ ಕೂಲಿಕಾರ್ಮಿಕರು ಇಂಗುಗುಂಡಿ ಕಾಮಗಾರಿ ನಿರ್ಮಿಸಿಕೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಮನವಿ ಮಾಡಿದ್ದಾರೆ.
    ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಮೂಲಭೂತ ಸೌಕರ್ಯದಡಿ ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆ ಮಾಡಲು ಇಂಗು ಗುಂಡಿ ಕಾಮಗಾರಿಯನ್ನು ಅನುಷ್ಟಾನಗೊಳಿಸಲು ಇದೀಗ ಅವಕಾಶ ಕಲ್ಪಿಸಲಾಗಿದೆ.  ಗ್ರಾಮೀಣ ಭಾಗದ ನೊಂದಾಯಿತ ಕೂಲಿ ಕಾರ್ಮಿಕರು ಇಂಗು ಗುಂಡಿ ಕಾಮಗಾರಿಯನ್ನು ನಿರ್ಮಿಸಿಕೊಳ್ಳಬಹುದಾಗಿದೆ.
    ಇಂಗು ಗುಂಡಿಯನ್ನು ಸ್ಥಳೀಯ ಸ್ಥಿತಿಗತಿಗೆ ಅನುಗುಣವಾಗಿ ರೂ.10200 ಹಾಗೂ ರೂ.14000 ಗಳ ಅಂದಾಜು ಮೊತ್ತ ಸಿದ್ದಪಡಿಸಲಾಗಿದ್ದು ಈ ಕಾಮಗಾರಿಗೆ ಗುತ್ತಿಗೆದಾರರು ಮತ್ತು ಯಂತ್ರಗಳನ್ನು ಬಳಸಿಕೊಳ್ಳಲು ನಿಷೇಧಿಸಲಾಗಿದೆ. ಗ್ರಾಮೀಣ ಭಾಗದ ಎಲ್ಲಾ ಜನರು ಆಂದೋಲನ ಮಾದರಿಯಲ್ಲಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಇಂಗುಗುಂಡಿ ಕಾಮಗಾರಿ ಕುರಿತು ಮಾಹಿತಿ ಪಡೆದು ಕಾಮಗಾರಿಯನ್ನು ನಿರ್ಮಿಸಿಕೊಳ್ಳಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮೇ.21 ರಿಂದ ಉಡುಪಿಯಲ್ಲಿ ರಾಜ್ಯ ಮಟ್ಟದ ಯುವಜನ ಮೇಳ

ಕೊಪ್ಪಳ ಮೇ.12 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2015-16 ನೇ ಸಾಲಿನ ರಾಜ್ಯ ಮಟ್ಟದ ಯುವಜನ ಮೇಳವನ್ನು ಮೇ.21 ರಿಂದ ಉಡುಪಿಯ ಜಿಲ್ಲಾ ಪುರಭವನದಲ್ಲಿ   ಆಯೋಜಿಸಲಾಗಿದೆ.
    ರಾಜ್ಯ ಮಟ್ಟದ ಯುವಜನಮೇಳವು ಈ ಬಾರಿ ಉಡುಪಿಯ ಜಿಲ್ಲಾ ಪುರಭವನದಲ್ಲಿ ಮೇ.21 ರಿಂದ 23 ರವರೆಗೆ ನಡೆಸಲಾಗುತ್ತಿದ್ದು,  ವಿಭಾಗ ಮಟ್ಟದ ಯುವಜನ ಮೇಳದಲ್ಲಿ ವಿಜೇತರಾದ ಸ್ಪರ್ಧಾಳುಗಳು ಮೇ.21 ರಂದು ಮಧ್ಯಾಹ್ನ 12 ಗಂಟೆಗೆಯೊಳಗಾಗಿ ಉಡಪಿ ಜಲ್ಲೆಯ ಜಿಲ್ಲಾ ಪುರಭವನಕ್ಕೆ ತೆರಳಿ ಸಂಘಟಕರಲ್ಲಿ ತಮ್ಮ ಹೆಸರು ನೊಂದಾಯಿಸಿ ಸಂಜೆ 5 ಗಂಟೆಗೆ ಜರುಗುವ ಉದ್ಘಾಟನಾ ಸಮಾರಂಭದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು.  ವಿಭಾಗ ಮಟ್ಟದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದ ಯುವಜನಮೇಳದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
    ಸ್ಪರ್ದಾಳುಗಳು 15 ರಿಂದ 35 ವರ್ಷದೊಳಗಿನವರಾಗಿದ್ದು ವಯಸ್ಸಿನ ದೃಡೀಕರಣ ಪ್ರಮಾಣ ಪತ್ರದೊಂದಿಗೆ ಸ್ಪರ್ಧೆಗೆ ತೆರಳಬೇಕು. ವಸತಿಗಾಗಿ ಹಾಸಿಗೆ ಹೊದಿಕೆ ಮತ್ತು ರೂಮ್ ಬೀಗದ ಕೀಗಳನ್ನು ತೆಗೆದುಕೊಂಡು ಹೋಗಬೇಕು.
    ಊಟ ಉಪಹಾರ ಹಾಗೂ ವಸತಿ ವ್ಯವಸ್ಥೆಯನ್ನು ಸಂಘಟಕರು ಮಾಡಿರುತ್ತಾರೆ.  ಕೊಪ್ಪಳ ಜಿಲ್ಲಾ ಕೇಂದ್ರದಿಂದ ಉಡುಪಿ ಜಿಲ್ಲೆ ಯುವಜನ ಮೇಳ ನಡೆಯುವ ಸ್ಥಳದವರೆಗೆ ಸಾಮಾನ್ಯ ಬಸ್ ಪ್ರಯಾಣ ಭತ್ಯೆಯನ್ನು ಒದಗಿಸಲಾಗುವುದು ಹೆಚ್ಚಿನ ಮಾಹಿತಿಗೆ ಕಛೇರಿ ದೂ ಸಂ: 08539-201400 ಗೆ ಸಂಪಕಿಸಬಹುದಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಲ್ವರು ಬಾಲಕಾರ್ಮಿಕರ ರಕ್ಷಣೆ

ಕೊಪ್ಪಳ ಮೇ.12 (ಕರ್ನಾಟಕ ವಾರ್ತೆ): ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸಂಘದ ತಂಡದಿಂದ ಕೊಪ್ಪಳ ತಾಲೂಕಿನ ರುದ್ರಾಪೂರ ಗ್ರಾಮದ ಶ್ರೀಕೃಷ್ಣದೇವರಾಯ ಹ್ಯಾಚರಿಸ್ ಪ್ರೈ.ಲಿ. ಕೋಳಿ ಫಾರಂವೊಂದರಲ್ಲಿ ನಾಲ್ವರು ಬಾಲಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಿಸಲಾಗಿದೆ.
     ಕೋಳಿ ಫಾರಂನಲ್ಲಿ ಕೆಲಸದಲ್ಲಿ ತೊಡಗಿದ್ದ  ನಾಲ್ವರು ಮಕ್ಕಳನ್ನು  ಪತ್ತೆ ಮಾಡಿ ರಕ್ಷಿಸಲಾಗಿದೆ. ಆರೈಕೆ ಮತ್ತು ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ,  ನಂತರ ಪಾಲಕರಿಗೆ ಮಕ್ಕಳನ್ನು ಕೆಲಕ್ಕೆ ಕಳುಹಿಸಬಾರದು ಎಂದು ತಿಳುವಳಿಕೆ ನೀಡಿ ಅವರ ಮನೆಗೆ ಕಳುಹಿಸಲಾಯಿತು.
ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಸಿಬ್ಬಂದಿ, ಕ್ಷೇತ್ರಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಸಿಬ್ಬಂದಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಬಾಲಕಾರ್ಮಿಕರ ರಕ್ಷಣಾ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ.19 ರಿಂದ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ವೇಳಾ ಪಟ್ಟಿ ಪ್ರಕಟ

ಕೊಪ್ಪಳ ಮೇ.12 (ಕರ್ನಾಟಕ ವಾರ್ತೆ): ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
    ಪ್ರಥಮ ಪಿಯುಸಿ ಪೂರಕ ಪರೀಕ್ಷೆಗಳು ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕು ಕೇಂದ್ರಗಳಲ್ಲಿ ಮೇ.19 ರಿಂದ ಮೇ.31 ರವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12. 15 ಗಂಟೆಯವರೆಗೆ ನಡೆಯಲಿದೆ.  ಪರೀಕ್ಷಾ ಕೇಂದ್ರಗಳಾದ ಬಾಲಕರ ಸರಕಾರಿ ಪ.ಪೂ ಕಾಲೇಜು,ಕುಷ್ಟಗಿ. ಬಾಲಕರ ಸರಕಾರಿ ಪ.ಪೂ ಕಾಲೇಜು, ಗಂಗಾವತಿ. ಸರಕಾರಿ ಪ.ಪೂ ಕಾಲೇಜು, ಯಲಬುರ್ಗಾ. ಮತ್ತು ಬಾಲಕರ ಸರಕಾರಿ ಪ.ಪೂ ಕಾಲೇಜು, ಕೊಪ್ಪಳ ಇಲ್ಲಿ ಪೂರಕ ಪರೀಕ್ಷೆಗಳು ನಡೆಯಲಿವೆ.  ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಅರೇಬಿಕ್, ಫ್ರೆಂಚ್ ಭಾಷೆಯ ಪರೀಕ್ಷೆ ನಡೆಯಲಿವೆ. ಮೇ.20 ರಂದು ಇಂಗ್ಲಿಷ್. ಮೇ.21 ರಂದು ಇತಿಹಾಸ, ಭೂಗರ್ಭಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕವಿಜ್ಞಾನ. ಮೇ.23 ತರ್ಕಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಗಣಿತ, ಶಿಕ್ಷಣ. ಮೇ.24 ರಂದು ಅರ್ಥಶಾಸ್ತ್ರ. ಮೇ.25 ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಮನ:ಶಾಸ್ತ್ರ, ಭೌತಶಾಸ್ತ್ರ. ಮೇ.26 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹವಿಜ್ಞಾನ. ಮೇ.27 ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ, ಬೇಸಿಕ್ ಮ್ಯಾಥ್ಸ್. ಮೇ.28 ರಂದು ಹಿಂದಿ, ಸಂಸ್ಕøತ. ಮೇ.30 ರಂದು ಸಮಾಜಶಾಸ್ತ್ರ, ರಸಾಯನಶಾಸ್ತ್ರ. ಮೇ.31 ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ.13 ರಂದು ಕೊಪ್ಪಳದಲ್ಲಿ ಜವಳಿ ಆಧಾರಿತ ಉದ್ಯಮಶೀಲತಾ ಅಭಿವೃದ್ಧಿ ಕಾಯಾಗಾರ

ಕೊಪ್ಪಳ ಮೇ.12 (ಕರ್ನಾಟಕ ವಾರ್ತೆ): ಕೈಮಗ್ಗ ಮತ್ತು ಜವಳಿ ಇಲಾಖೆ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತ್ ಇವರುಗಳ ಸಹಯೋಗದಲ್ಲಿ ಒಂದು ದಿನದ ಜವಳಿ ಆಧಾರಿತ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಾಗಾರ ಮೇ.13 ರಂದು ಬೆಳಗ್ಗೆ 11 ಗಂಟೆಗೆ ಕೊಪ್ಪಳದ ಕೃಷಿ ವಿಷ್ತರಣಾ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿದೆ.
    ಜಿಪಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು. ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಪಿ.ಎಂ ಸಾಲಿಮಠ, ಕೈಮಗ್ಗ ಮತ್ತು ಜವಳಿ ಇಲಾಖೆ ಬಳ್ಳಾರಿ ಉತ್ತರ ವಲಯ ಜಂಟಿ ನಿರ್ದೇಶಕ ಶ್ರೀಧರ ನಾಯಕ, ಬಳ್ಳಾರಿ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಕೆ.ಭೀಮಪ್ಪ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೂರ್ಯಪ್ರಕಾಶ ರಾವ್  ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಮೇ.30 ರಂದು ಶ್ರೀ ಹುಲಿಗೆಮ್ಮ ದೇವಿ ಮಹಾ ರಥೋತ್ಸವ


ಕೊಪ್ಪಳ ಮೇ.12:(ಕರ್ನಾಟಕ ವಾರ್ತೆ): ದಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿಯ ಮಹಾರಥೋತ್ಸವ ಮೇ.30 ರಂದು ಸಂಜೆ 5-30 ಗಂಟೆಗೆ ನೆರವೇರಲಿದೆ.
    ಹುಲಿಗೆಮ್ಮ ದೇವಿ ಜಾತ್ರೆ  ಅಂಗವಾಗಿ ಮೇ.22 ರಿಂದ ಜೂನ್.02 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಮೇ.22 ರಂದು ಕಂಕಣಧಾರಣೆ,  29  ರಂದು ಸಂಜೆ 7.00 ಗಂಟೆಗೆ ಉತ್ಸವ,  30 ರಂದು  ಅಕ್ಕಿಪಡಿ  ಹಾಗೂ  ಅಂದು  ಸಂಜೆ  5-30 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. ಮೇ. 31 ರಂದು ಬಾಳಿದಂಡಿಗೆ,  ಸಂಜೆ 8 ಗಂಟೆಗೆ  ಕೊಂಡದ ಪೂಜಾ, ಬೆಳಗಿನ ಜಾವ 3.30 ಗಂಟೆಗೆ ಗಂಗಾದೇವಿ ಪೂಜಾ, 4 ಗಂಟೆಗೆ ದೇವಿಗೆ ಪ್ರಸಾದ ಕಟ್ಟುವುದು,  ಹಾಗೂ 4.30 ಕ್ಕೆ ಬಾಳಿದಂಡಿಗೆ ಆರೋಹಣ. ಜೂ.1  ರಂದು ಪಾಯಸ ಅಗ್ನಿಕುಂಡ, ಸಂಜೆ 8 ಗಂಟೆಗೆ ಕೊಂಡದ ಪೂಜಾ, ರಾ. 9 ಗಂಟೆಗೆ ಹಿಡಿದಕ್ಷಿಣೆ ವಿತರಣೆ, 9.30 ಕ್ಕೆ  ಪಡಗದ ಪೂಜಾ, ಬೆಳಗಿನ ಜಾವ 4 ಗಂಟೆಗೆ ಗಂಗಾದೇವಿ ಪೂಜಾ, 4.30 ಕ್ಕೆ ದೇವಿಗೆ ಪ್ರಸಾದ ಕಟ್ಟುವುದು, 5.30 ಕ್ಕೆ ದೇವಿಗೆ ಪ್ರಸಾದ ನಿವೇದನೆ ಕಾರ್ಯಕ್ರಮ ಹಾಗೂ ಜೂ.2 ರಂದು ಬೆಳಗ್ಗೆ 6.30 ಗಂಟೆಗೆ ಅಗ್ನಿಕುಂಡ ನಡೆಯಲಿವೆ. ಮೇಲಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ  ದೇವಿಯ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ. 
     ಹುಲಿಗೆಮ್ಮ ದೇವಿಗೆ ಸಲ್ಲಿಸುವ  ಬೆಳ್ಳಿ, ಬಂಗಾರ, ಕಾಣಿಕೆ ಹಾಗೂ ಮುಡುಪುಗಳನ್ನು   ದೇವಸ್ಥಾನದ ಕಚೇರಿಯಲ್ಲಿ ಕೊಟ್ಟು ರಶೀದಿ ಪಡೆಯಬೇಕು ಅಥವಾ ಹುಂಡಿಯಲ್ಲಿ ಹಾಕಬೇಕು. ರಶೀದಿ ಪಡೆಯದೇ ಕೊಡುವ ಕಾಣಿಕೆಗಳು ದೇವಿಯ ನಿಧಿಗೆ ಸೇರುವುದಿಲ್ಲ. ಉಚಿತ ಅನ್ನ ದಾಸೋಹಕ್ಕೆ ದವಸ ಧಾನ್ಯ ನೀಡಬಯಸುವ ಭಕ್ತಾದಿಗಳು ಗಣಕೀಕೃತ ಕೌಟರ್‍ನಲ್ಲಿ ನೀಡಿ ರಸೀದಿ ಪಡೆಯಬಹುದು.
      ಜಾತ್ರೆಯ ಸಂದರ್ಭದಲ್ಲಿ ಯಾವುದೇ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಮಹಾನಕ್ಷೆ ತಯಾರಿಸಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಭಕ್ತಾದಿಗಳು ಉದಾರವಾಗಿ ತನುಮನದಿಂದ ದೇಣಿಗೆ ನೀಡಲು ಕೋರಿದೆ.  ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಮುನಿರಾಬಾದ್ ರೇಲ್ವೆ ನಿಲ್ದಾಣದಲ್ಲಿ ಇಳಿಯಬೇಕು, ಕೊಪ್ಪಳ,  ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗುವುದು ಎಂದು ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 11 May 2016

ಸ್ವಚ್ಛತೆ ಕಾಯ್ದುಕೊಳ್ಳುವಂತೆ ಕೋಳಿ ಫಾರಂ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ


ಕೊಪ್ಪಳ ಮೇ. 11 (ಕರ್ನಾಟಕ ವಾರ್ತೆ): ಹಕ್ಕಿ ಜ್ವರ ಬಾರದಂತೆ ಎಚ್ಚರಿಕೆ ವಹಿಸಲು ಮುಂಜಾಗ್ರತಾ ಕ್ರಮವಾಗಿ ಕೋಳಿ ಫಾರಂ ಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವಂತೆ ಹಾಗೂ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್ ಅವರು ಎಲ್ಲ ಕೋಳಿ ಫಾರಂ ಮಾಲೀಕರುಗಳಿಗೆ ಸೂಚನೆ ನೀಡಿದರು.

     ಹಕ್ಕಿ ಜ್ವರ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ರಾಜ್ಯದ ವಿವಿಧೆಡೆ ಹಕ್ಕಿಜ್ವರ ಪ್ರಕರಣಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದೆ.  ಆದರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣ ಕಂಡುಬಂದಿಲ್ಲ.  ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ.  ಸಮಾಧಾನದ ವಿಷಯವೆಂದರೆ, ಹಕ್ಕಿ ಜ್ವರವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.  ಆದಾಗ್ಯೂ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.  ಜಿಲ್ಲೆಯಲ್ಲಿ ಮೊಟ್ಟೆ ಕೋಳಿ ಫಾರಂಗಳು 27 ಇದ್ದು, ಇಲ್ಲಿ ಸುಮಾರು 42 ಲಕ್ಷ ಕೋಳಿಗಳಿವೆ.  ಅದೇ ರೀತಿ ಮಾಂಸದ ಕೋಳಿ ಫಾರಂಗಳು 32 ಇದ್ದು, ಇಲ್ಲಿ 1. 8 ಲಕ್ಷ ಕೋಳಿಗಳಿವೆ.  ಜಿಲ್ಲೆಯಲ್ಲಿ ಇದುವರೆಗೂ ಹಕ್ಕಿ ಜ್ವರದ ಪ್ರಕರಣ ಕಂಡುಬಂದಿಲ್ಲವಾದ್ದರಿಂದ ಸಾರ್ವಜನಿಕರಾಗಲಿ, ಕೋಳಿ ಫಾರಂ ಮಾಲೀಕರುಗಳಾಗಲಿ ಆತಂಕ ಪಡುವ ಅಗತ್ಯವಿಲ್ಲ.  ಆದರೆ ಸಾರ್ವಜನಿಕರು ಅಲ್ಲದೆ ಕೋಳಿ ಫಾರಂ ಮಾಲೀಕರು ಕೆಲವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಮುಖ್ಯವಾಗಿ ಕೋಳಿ ಫಾರಂಗಳಲ್ಲಿ ಹಾಗೂ ಸುತ್ತಮುತ್ತಲು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು.  ಫಾರಂಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಅಗತ್ಯವಾಗಿರುವ ಕೈಗವಸುಗಳು, ಮಾಸ್ಕ್‍ಗಳು, ಶೂ ಗಳಂತಹ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು.  ಹಕ್ಕಿ ಜ್ವರ ಪ್ರಕರಣಗಳು ಬೀದರ್ ಜಿಲ್ಲೆಯಲ್ಲಿ ಕಂಡುಬಂದಿರುವುದರಿಂದ, ಬೀದರ್, ಗುಲಬರ್ಗಾ ಜಿಲ್ಲೆಗಳಿಂದ ಕೊಪ್ಪಳ ಜಿಲ್ಲೆಗೆ ಕೋಳಿ ಮರಿಗಳು ಹಾಗೂ ಕೋಳಿ ಮೊಟ್ಟೆಗಳ ಸಾಗಾಣಿಕೆಯ ಬಗ್ಗೆ ತೀವ್ರ ನಿಗಾ ವಹಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 
     ಜಿಲ್ಲೆಯಲ್ಲಿ ಹಕ್ಕಿ ಜ್ವರದ ಯಾವುದೇ ಪ್ರಕರಣಗಳು ಕಂಡು ಬರದಿದ್ದರೂ, ಮುಂಜಾಗ್ರತಾ ಕ್ರಮವಾಗಿ ಕೊಪ್ಪಳದ ಜಿಲ್ಲಾಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳಿಗಾಗಿಯೇ ಪ್ರತ್ಯೇಕ ಚಿಕಿತ್ಸಾ ವಾರ್ಡ್ ವ್ಯವಸ್ಥೆಗೊಳಿಸಿ ಇಟ್ಟುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲೆಯ ಕೆಲವೆಡೆ ಮುಂಗಾರು ಪೂರ್ವ ಮಳೆ ಆಗುತ್ತಿದ್ದು, ಹವಾಮಾನ ವೈಪರಿತ್ಯದಿಂದಲೂ ಜನರಿಗೆ ಶೀತ ಜ್ವರ ಬರುವ ಸಾಧ್ಯತೆಗಳು ಇರುತ್ತವೆ.  ಆದರೆ ಸಾರ್ವಜನಿಕರು, ಹಕ್ಕಿ ಜ್ವರ ಎಂಬ ತಪ್ಪು ಕಲ್ಪನೆಯಿಂದ ಆತಂಕ ಪಡದೆ, ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 
     ಸಭೆಯಲ್ಲಿ ಭಾಗವಹಿಸಿ ಹಕ್ಕಿ ಜ್ವರ ಕುರಿತಂತೆ ವಿವರಣೆ ನೀಡಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಜಯರಾಂ ಅವರು, ಜಿಲ್ಲೆಯಲ್ಲಿ ಹಲವು ಕೋಳಿ ಫಾರಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಕೋಳಿ ಫಾರಂಗಳಲ್ಲಿ ಪ್ರಕರಣ ಕಂಡುಬಂದಿಲ್ಲ.  ಆದಗ್ಯೂ ಕೋಳಿ ಫಾರಂಗಳ ಮಾಲೀಕರು ಮುಂಜಾಗ್ರತಾ ವಹಿಸುವುದು ಸೂಕ್ತ.  ಹಕ್ಕಿಜ್ವರವು ಕೋಳಿಗಳಲ್ಲಿ ಎವಿಯನ್-ಇನ್-ಫ್ಲೂ-ಎಂಜಾ ಎಂಬ ವೈರಸ್‍ನಿಂದ ಬರುತ್ತದೆ.  ಹಕ್ಕಿ ಜ್ವರಕ್ಕೆ ಸಾಮಾನ್ಯವಾಗಿ ಮನುಷ್ಯರು, ಹಂದಿ, ಕೋತಿಗಳು ತುತ್ತಾಗುವುದು ಕಂಡುಬಂದಿದೆ.  ವ್ಯಕ್ತಿಯಿಂದ ವ್ಯಕ್ತಿಗೆ ಈ ರೋಗ ಹರಡುವುದಿಲ್ಲ.  ಕೋಳಿ ಫಾರಂಗಳಲ್ಲಿ ಹಠಾತ್ತನೆ ಹೆಚ್ಚು ಕೋಳಿಗಳು ಸಾವನ್ನಪ್ಪುವುದು, ಕೋಳಿಗಳಲ್ಲಿ ಕಣ್ಣು, ಮೂಗು ಬಾಯಿಯಿಂದ ನೀರು ಜೊಲ್ಲು ಸುರಿಯುವುದು, ಕೋಳಿಗಳ ಮೊಣಕಾಲು, ಪಾದ ನೀಲಿ ಬಣ್ಣಕ್ಕೆ ತಿರುಗಿರುವುದು ಇಂತಹ ಲಕ್ಷಣಗಳು ಕಂಡುಬಂದಲ್ಲಿ, ಕೂಡಲೆ ಪಶು ವೈದ್ಯ ಇಲಾಖೆಯನ್ನು ಸಂಪರ್ಕಿಸಬೇಕು.  ನಾಟಿ ಕೋಳಿಗಳಲ್ಲಿ ಒಂದು ವೇಳೆ ಇಂತಹ ಲಕ್ಷಣ ಕಂಡುಬಂದಲ್ಲಿ ಸಾಕಣೆದಾರರು ಪಶು ವೈದ್ಯರನ್ನು ಸಂಪರ್ಕಿಸಬೇಕು.  ಹಕ್ಕಿ ಜ್ವರವು ಮನುಷ್ಯರಲ್ಲಿ, ಸರಿಯಾಗಿ ಬೇಯಿಸದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯಿಂದ ಬರುವ ಸಾಧ್ಯತೆ ಹೆಚ್ಚು.  ಅಲ್ಲದೆ ಸೂಕ್ತ ಆರೋಗ್ಯ ರಕ್ಷಕ ಕವಚಗಳನ್ನು ಧರಿಸದೆ, ರೋಗ ಪೀಡಿತ ಕೋಳಿ ಮತ್ತು ಕಲುಷಿತ ಸಲಕರಣೆಗಳ ಸಂಪರ್ಕದಿಂದಲೂ ಬರುತ್ತದೆ.  ಒಟ್ಟಾರೆ ಎಲ್ಲ ಕೋಳಿ ಫಾರಂಗಳ ಮಾಲೀಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು.
     ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ಎಂ.ಎಂ. ಕಟ್ಟಿಮನಿ ಅವರು, ಹಕ್ಕಿ ಜ್ವರದ ರೋಗ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಣೆ ನೀಡಿ, ಸದ್ಯ ಜಿಲ್ಲೆಯಲ್ಲಿ ಇದಕ್ಕೆ ಸಂಬಂಧಿಸಿದ ಟ್ಯಾಮಿಫ್ಲೂ ಮತ್ತು ರಿಲಿಂಜ್ ಔಷಧ ದಾಸ್ತಾನು ಇರಿಸಲಾಗಿದೆ.  ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.
     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಸೇರಿದಂತೆ ವಿವಿಧ ತಾಲೂಕುಗಳ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಕೋಳಿ ಫಾರಂಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನ


ಕೊಪ್ಪಳ, ಮೇ.10 (ಕರ್ನಾಟಕ ವಾರ್ತೆ) : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ದಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಸಾಲ ಯೋಜನೆಗಳ ಸೌಲಭ್ಯಗಳಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 
ರಾಜ್ಯ ಸರಕಾರದ ಯೋಜನೆಯಡಿ: ಚೈತನ್ಯ ಸಬ್ಸಿಡಿ ಕಂ ಸಾಫ್ಟ್‍ಲೋನ್ ಯೋಜನೆಯಡಿ ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ, ವ್ಯಾಪಾರ, ಸಾರಿಗೆ ಕೈಗಾರಿಕೆ,  ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಸಾಲ ಸೌಲಭ್ಯ.  ಅರಿವು-ಶೈಕ್ಷಣಿಕ ನೇರ ಸಾಲ ಯೋಜನೆಯಡಿ ಸಿಇಟಿ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ.  ಡಿ.ದೇವರಾಜ ಅರಸು ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಡಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸಾಲ ಸೌಲಭ್ಯ.  ಕಿರುಸಾಲ ಸೌಲಭ್ಯ ಯೋಜನೆಯಡಿ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರ ಚಟುವಟಿಕೆಗೆ ಸಾಲ ಸೌಲಭ್ಯ. ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕಸುಬುದಾರರಿಗೆ ಸಾಲ ಸೌಲಭ್ಯದ ಯೋಜನೆಯಡಿ ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿ ಅಥವಾ ವೃತ್ತಿ ಕಸುಬುದಾರರಿಗೆ ವೃತ್ತಿಯ ಅಭಿವೃದ್ಧಿಗಾಗಿ ಸಾಲ ಸೌಲಭ್ಯ.  ಗಂಗಾ-ಕಲ್ಯಾಣ ಯೋಜನೆಯಡಿ  ವೈಯಕ್ತಿಕ ಕೊಳವೆ ಬಾವಿ ಯೋಜನೆ ಹಾಗೂ ಸಾಮೂಹಿಕ ನೀರಾವರಿ ಯೋಜನೆಯಡಿ ಕೊಳವೆ ಬಾವಿ  ಕೊರೆಯಿಸಿ ಪಂಪ್‍ಸೆಟ್ಟು ಮತ್ತು ಉಪಕರಣ ಒದಗಿಸಿ ನೀರಾವರಿ ಸೌಲಭ್ಯಕ್ಕಾಗಿ ಸಾಲ ಸೌಲಭ್ಯ.  ಸಾಂಪ್ರದಾಯಿಕ ವೃತ್ತಿಗಳಿಗೆ ( ಮಡಿವಾಳ, ಸವಿತ ಸಮಾಜ, ಕುಂಬಾರ, ತಿಗಳ ಸಮಾಜ)  ಆರ್ಥಿಕ ನೆರವು ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ಹಾಗೂ ಗಂಗಾ ಕಲ್ಯಾಣ ನೀರಾವರಿಗಾಗಿ ಸಾಲ ಸೌಲಭ್ಯ. ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಆರ್ಥಿಕ ನೆರವು ಯೋಜನೆಯಡಿ ಸ್ವಯಂ ಉದ್ಯೋಗ ಸಾಲ ಸೌಲಭ್ಯ, ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ, ಅರಿವು-ಶೈಕ್ಷಣಿಕ ಸಾಲ ಯೋಜನೆ ಸೌಲಭ್ಯ ಒದಗಿಸಲಾಗುವುದು.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಾಲ ಯೋಜನೆಗಳು: ಅವಧಿಸಾಲ  ಯೋಜನೆಯಲ್ಲಿ ಕೃಷಿ ವಲಯ, ಸಣ್ಣ ವ್ಯಾಪಾರ, ಸೇವಾ ವಲಯ, ಸಾರಿಗೆ ವಲಯದಲ್ಲಿ ಆಟೋರಿಕ್ಷಾ/ಗೂಡ್ಸ್ ಆಟೋರಿಕ್ಷಾ, ನ್ಯೂ ಸ್ವರ್ಣಿಮಾ, ಮೈಕ್ರೋ ಫೈನಾನ್ಸ್ ವಲಯಗಳಲ್ಲಿ ಹಿಂದುಳಿದ ವರ್ಗಗಳ ಅಭ್ಯಥಿಗಳಿಗೆ ಸ್ವಯಂ ಉದ್ಯೋಗಳಿಗೆ ಸಾಲ ಸೌಲಭ್ಯ, ಹಿದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲಯೋಜನೆಯಡಿ ಇಂಜಿನಿಯರಿಂಗ್, ಮೆಡಿಕಲ್, ವೆಟಿರ್ನರಿ, ಕಾನೂನು, ಐ.ಸಿ.ಡಬ್ಲೂ.ಎ, ಸಿ.ಎ, ಹೋಟೆಲ್ ಮ್ಯಾನೇಜ್‍ಮೆಂಟ್, ಇತ್ಯಾದಿ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥಿಗಳಿಗೆ ಸಾಲ ಸೌಲಭ್ಯ, ಮಹಿಳಾ ಸಮೃದ್ಧಿ ಹಾಗೂ ( ಎಸ್‍ಹೆಚ್‍ಜಿ ಗಳ ಮೂಲಕ ಮಹಿಳೆಯರಿಗಾಗಿ) ಮಹಿಳಾ ಸ್ವ ಸಹಾಯ ಗುಂಪುಗಳು/ಸ್ತ್ರೀ ಶಕ್ತಿ ಗುಂಪುಗಳು, ಸ್ವ ಶಕ್ತಿ ಗುಂಪುಗಳಿಗೆ ಮೈಕ್ರೋ ಫೈನಾನ್ಸ್ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲಾಗುವುದು.
     ಅರ್ಜಿ ಸಲ್ಲಿಸಲು ಅಭ್ಯಥಿಗಳು ಹಿಂದುಳಿದ ವರ್ಗಗಳ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಮತ್ತು 3ಬಿ ಗೆ ಸೇರಿದವರಾಗಿರಬೇಕು( ವಿಶ್ವ ಕರ್ಮ ಮತ್ತು ಅದರ ಉಪ ಸಮುದಾಯಗಳನ್ನು  ಮತ್ತು ಮತಿಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ)  ರಾಜ್ಯ ಸರಕಾರದ ಯೋಜನೆಗಳಿಗೆ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರ ರೂ.40,000 ಹಾಗೂ ಪಟ್ಟಣ ಪ್ರದೇಶದವರ ರೂ.55,000 ದೊಳಗಿರಬೇಕು,  ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ.98 ಸಾವಿರ ಹಾಗೂ ಪಟ್ಟಣ ಪ್ರದೇಶದವರಿಗೆ 1.20,000 ದೊಳಗಿರಬೇಕು, ವಯೋಮಿತಿ 18 ರಿಂದ 55 ವರ್ಷ ನಿಗದಿಪಡಿಸಲಾಗಿದೆ.
      ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಅಥವಾ ನಿಗಮದ ವೆಬ್‍ಸೈಟ್   www.karnataka.gov.in/dbcdc   ನಲ್ಲಿ  ಮೇ.25 ರೊಳಗಾಗಿ ಪಡೆದು ಭರ್ತಿ ಮಾಡಿ ಜೂನ್ 16 ರೊಳಗಾಗಿ ಸಲ್ಲಿಸಬಹುದಾಗಿದೆ.  ನಿಗದಿದ ಅವದಿಯ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ಉಚಿತ ತರಬೇತಿ ಶಿಬಿರ : ಹೆಸರು ನೋಂದಣಿಗೆ ಸೂಚನೆ

ಕೊಪ್ಪಳ, ಮೇ.10 (ಕರ್ನಾಟಕ ವಾರ್ತೆ) : ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಬಾಗಲಕೋಟೆ ಇವರು ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ಕುರಿತು ಎರಡು ದಿನದಳ ಉಚಿತ ತರಬೇತಿ ಏರ್ಪಡಿಸಿದ್ದು ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ.
     ಶಿಬಿರದಲ್ಲಿ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಸಂಸ್ಕರಣಾ ಕ್ರಮಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುವುದು.
        ಶಿಬಿರವು ಇದೇ ಮೇ ತಿಂಗಳಲ್ಲಿ ಆರಂಭವಾಗಲಿದ್ದು ತರಬೇತಿ ವೇಳೆ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಸಲಾಗುವುದು,  ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಮೇ.21 ರೊಳಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ.ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್ ಬಾಗಲಕೋಟ-587103 ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ ಹೆಚ್ಚಿನ ಮಾಹಿತಿಗೆ ಮೊ: 9482630790 ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಳು ಸಾಗಾಣಿಕೆ ವಾಹನಗಳಿಗೆ ಜಿಪಿಆರ್‍ಎಸ್ ಸಾಧನ ಅಳವಡಿಕೆ ಕಡ್ಡಾಯ

ಕೊಪ್ಪಳ ಮೇ.11 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮರಳು ಸಾಗಾಣಿಕೆ ಮಾಡುವ ವಾಹನಗಳಲ್ಲಿ ಕಡ್ಡಾಯವಾಗಿ ಜಿಪಿಆರ್‍ಎಸ್ ಸಾಧನ ಅಳವಡಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಸೂಚನೆ ನೀಡಿದ್ದಾರೆ.
     ಕೊಪ್ಪಳ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮರಳು ನಿಕ್ಷೇಪ ಪ್ರದೇಶಗಳಿಂದ ಮರಳು ತೆಗೆಯುವುದನ್ನು ಮತ್ತು ಸಾಗಾಣಿಕೆ ಮಾಡುವುದನ್ನು ನಿಯಂತ್ರಿಸಲು ಮರಳು ಸಾಗಾಣಿಕೆ ಮಾಡುವ ವಾಹನಗಳಿಗೆ ಕಾನೂನಿನ್ವಯ ಜಿಪಿಆರ್‍ಎಸ್ ಸಾಧನ ಅಳಿವಡಿಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ನಿರ್ಣಯಿಸಿದೆ.  ಇನ್ನು ಮುಂದೆ ಜಿಪಿಆರ್‍ಎಸ್ ಉಪಕರಣ ಅಳವಡಿಸದೆ ಇರುವ ವಾಹನಗಳಿಗೆ ಮರಳು ಪರ್ಮಿಟ್ ನೀಡಲಾಗುವುದಿಲ್ಲ.  ಜಿಪಿಆರ್‍ಎಸ್ ಉಪಕರಣವನ್ನು ಅಳವಡಿಸುವ ಲಾರಿ/ಟಿಪ್ಪರ್‍ಗಳ ಮರಳು ಸಾಗಿಸುವ ಸಾಮಥ್ರ್ಯವು 5. 00 ಘ.ಮೀ. ಮೀರದಂತೆ ಇರುವುದು ಕಡ್ಡಾಯವಾಗಿರುತ್ತದೆ.
    ಜಿಪಿಆರ್‍ಎಸ್ ಸಾಧನವನ್ನು ಅಳವಡಿಸಲು ಹಾಗೂ ತಂತ್ರಾಂಶವನ್ನು ಒದಗಿಸಲು ಬೆಂಗಳೂರಿನ ಟೆಲಿಮೆಟಿಕ್ಸ್4ಯು ಸರ್ವಿಸೆಸ್ ಪ್ರೈ.ಲಿ ಸಂಸ್ಥೆಗೆ ವಹಿಸಲಾಗಿದ್ದು, ಮರಳು ಸಾಗಾಣಿಕೆ ಮಾಡಲಿಚ್ಚಿಸುವ ವಾಹನಗಳ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಈ ಸಾಧನವನ್ನ ಅಳವಡಿಸಿಕೊಳ್ಳಬೇಕು.  ಸಾಧನ ಅಳವಡಿಸಲು ಸಂಸ್ಥೆಯ ಸಿಬ್ಬಂದಿಗಳು ಆಯಾ ತಾಲೂಕಿನ ಲೋಕೋಪಯೋಗಿ ಇಲಾಖೆ ಉಪ ವಿಭಾಗ ಕಛೇರಿಯಲ್ಲಿ ಲಭ್ಯರಿದ್ದು ಕೊಪ್ಪಳ ತಾಲೂಕಿನ ಮರಳು ಸಾಗಾಣಿಕೆದಾರರು ಪ್ರಕಾಶ ಮೊ:9742388479, ಗಂಗಾವತಿ-ಕಾಶೀಮ್ ಮೊ: 9611720220, ಕುಷ್ಟಗಿ-ಖಲಂದರ್ 7204813386, ಯಲಬುರ್ಗಾ-ವೀರೇಶ ಮೊ:9964003308 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕೊಪ್ಪಳ ವಿಭಾದ ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ.13 ರಂದು ಕೊಪ್ಪಳದಲ್ಲಿ ಭಗೀರಥ ಜಯಂತಿ


ಕೊಪ್ಪಳ ಮೇ.11 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದ ವತಿಯಿಂದ ಮಹರ್ಷಿ ಭಗೀರಥ ರ ಜಯಂತಿ ಮೇ.13 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಆಚರಣೆಗೊಳ್ಳಲಿದೆ.
     ಭಗೀರಥ ಜಯಂತಿ ಆಚರಣೆಯ ಅಂಗವಾಗಿ ಅಂದು ಬೆಳಿಗ್ಗೆ 8 ಗಂಟೆಗೆ ಕೊಪ್ಪಳದ ಸಿರಸಪ್ಪಯ್ಯ ಮಠ ದಿಂದ ಭಗೀರಥರ ಭಾವಚಿತ್ರದ ಮೆರವಣಿಗೆಗೆ ಚಾಲನೆ ದೊರೆಯಲಿದೆ.  ಮೆರವಣಿಗೆಯು ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬರಲಿದೆ.  ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ವೇದಿಕೆ ಸಮಾರಂಭ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭ ಅಧ್ಯಕ್ಷತೆ ವಹಿಸುವರು. ಜಿ.ಪಂ ಅಧ್ಯಕ್ಷ ಶೇಖರಪ್ಪ ಬಿ.ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ್ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  ಉಪನ್ಯಾಸಕ ಮಲ್ಲಪ್ಪ ಹೊಸೂರ ಅವರು ಭಗೀರಥರ ಕುರಿತು ವಿಶೇಷ ಉಪನ್ಯಾಸ ನೀಡುವರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ : ಮೀಸಲಾತಿ ಪ್ರಕಟ

ಕೊಪ್ಪಳ ಮೇ.11 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕುಗಳ ಪ್ರಾದೇಶಿಕ ಕೃಷಿಕ ಚುನಾವಣಾ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸಿ  ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಕೊಪ್ಪಳ ತಾಲೂಕು: ಕವಲೂರು-ಪರಿಶಿಷ್ಟ ಪಂಗಡ, ಅಳವಂಡಿ-ಸಾಮಾನ್ಯ, ಬೆಟಗೇರಿ-ಸಾಮಾನ್ಯ, ಹಿರೇಸಿಂದೋಗಿ-ಹಿಂದುಳಿದ ವರ್ಗ-ಬ, ಕೊಪ್ಪಳ-ಹಿಂದುಳಿದ ವರ್ಗ-ಅ, ಕಿನ್ನಾಳ-ಸಾಮಾನ್ಯ, ಇರಕಲ್ಲಗಡ-ಮಹಿಳೆ, ಇಂದರಗಿ-ಸಾಮಾನ್ಯ, ಹಿಟ್ನಾಳ-ಸಾಮಾನ್ಯ, ಗಿಣಿಗೇರಾ- ಪರಿಶಿಷ್ಟ ಜಾತಿ, ಮುದ್ದಾಬಳ್ಳಿ-ಸಾಮಾನ್ಯ.
ಕುಷ್ಟಗಿ ತಾಲೂಕು: ಹನುಮನಾಳ -ಹಿಂದುಳಿದ ವರ್ಗ-ಅ, ಯರಗೇರಾ-ಹಿಂದುಳಿದ ವರ್ಗ-ಬ, ಹೊಲಗೇರಾ-ಪರಿಶಿಷ್ಟ ಜಾತಿ, ಹನುಮಸಾಗರ-ಸಾಮಾನ್ಯ, ಚಳಿಗೇರಾ-ಪರಿಶಿಷ್ಟ ಪಂಗಡ, ದೋಟಿಹಾಳ-ಸಾಮಾನ್ಯ, ಮುದೇನೂರು-ಸಾಮಾನ್ಯ, ಕುಷ್ಟಗಿ-ಮಹಿಳೆ, ಹಿರೇಮನ್ನಾಪುರ-ಸಾಮಾನ್ಯ, ಜುಮ್ಲಾಪುರ-ಸಾಮಾನ್ಯ, ತಾವರಗೇರಾ-ಸಾಮಾನ್ಯ.
ಯಲಬುರ್ಗಾ ತಾಲೂಕು: ಮುಧೋಳ-ಸಾಮಾನ್ಯ, ಯಲಬುರ್ಗಾ-ಸಾಮಾನ್ಯ, ಬಂಡಿ-ಹಿಂದುಳಿದ ವರ್ಗ-ಅ, ಚಿಕ್ಕ ಮ್ಯಾಗೇರಿ-ಸಾಮಾನ್ಯ, ಮಂಗಳೂರು-ಸಾಮಾನ್ಯ, ಬೇವೂರ-ಮಹಿಳೆ, ಹಿರೇವಂಕಲಕುಂಟಾ-ಪರಿಶಿಷ್ಟ ಜಾತಿ, ಕುಕನೂರ-ಸಾಮಾನ್ಯ, ತಳಕಲ್ಲ-ಹಿಂದುಳಿದ ವರ್ಗ-ಬ, ಇಟಗಿ-ಪರಿಶಿಷ್ಟ ಪಂಗಡ, ಸಿದ್ನೆಕೊಪ್ಪ-ಸಾಮಾನ್ಯ.
     ಜಿಲ್ಲೆಯ ವಿವಿಧ ಕೃಷಿ ಮಾರುಕಟ್ಟೆ ಸಮಿತಿ ಕೃಷಿಕರ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯನ್ನು ಈಗಾಗಲೆ ನಿಗದಿಪಡಿಸಲಾಗಿದ್ದು, ಇದೀಗ ಮೀಸಲಾತಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Tuesday, 10 May 2016

ಸಾಮಾಜಿಕ ವ್ಯವಸ್ಥೆಗೆ ಕ್ರಾಂತಿಕಾರಿ ಬದಲಾವಣೆ ತಂದವರು ಬಸವಣ್ಣನವರು- ಡಾ. ಎಸ್.ಎಂ. ಜಾಮದಾರ್


ಕೊಪ್ಪಳ, ಮೇ.10 (ಕರ್ನಾಟಕ ವಾರ್ತೆ) : ಜಾತಿ ಪದ್ಧತಿಯನ್ನು ವಿರೋಧಿಸಿ, ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಶ್ರಮಿಸಿದವರು ಜಗಜ್ಯೋತಿ ಬಸವಣ್ಣನವರು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್.ಎಂ. ಜಾಮದಾರ್ ಅವರು ಹೇಳಿದರು.

     ಜಿಲ್ಲಾಡಳಿತ ಹಾಗೂ ಬಸವೇಶ್ವರ ಜಯಂತ್ಯೋತ್ಸವ ಸಮಿತಿ ಸಹಯೋಗದಲ್ಲಿ ನಗರದ ಗವಿಮಠ ಆವರಣದಲ್ಲಿ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಬಸವೇಶ್ವರರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು 2001 ರಲ್ಲಿ ಮಹಾರಾಷ್ಟ್ರ ಸರ್ಕಾರ ಆದೇಶ ಜಾರಿಗೊಳಿಸಿತು.  ಕರ್ನಾಟಕದಲ್ಲಿ ಬಸವ ಜಯಂತಿಯನ್ನು 2002 ರಿಂದ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ.  9 ಶತಮಾನಗಳ ಹಿಂದೆ ಬಸವಣ್ಣನವರು ಹುಟ್ಟಿದಾಗ ನಮ್ಮ ನಾಡಿನ ಸಮಾಜದ ಚಿತ್ರಣ ಬೇರೆಯೇ ಆಗಿತ್ತು.  ಹಲವು ಮೂಢನಂಬಿಕೆಗಳು, ಜಾತಿ ಪದ್ಧತಿಗಳು ತೀವ್ರವಾಗಿತ್ತು.  ಬಸವಣ್ಣನವರ ಸಾಮಾಜಿಕ ಕ್ರಾಂತಿಯ ನಂತರದ ದಿನಗಳಲ್ಲಿ, ಅಂದರೆ ಐತಿಹಾಸಿಕ ಭಾರತದ ಸಮಾಜಕ್ಕೂ ಈಗಿನ ಸಮಾಜಕ್ಕೂ ಹೋಲಿಸಿದಾಗ ಊಹಿಸಲೂ ಸಾಧ್ಯವಾಗದಷ್ಟು ಬದಲಾವಣೆ ಆಗಿದೆ.  ಇದಕ್ಕೆ ಪ್ರಮುಖ ಕಾರಣವೆಂದರೆ ಬಸವಣ್ಣನವರು ಎಂದರೆ ಅತಿಶಯೋಕ್ತಿ ಆಗಲಾರದು.  ಕ್ರಿ.ಶ. 1165 ರಲ್ಲಿ ಬಸವಣ್ಣನವರ ಅಂತ್ಯವಾದ ನಂತರ, ಸಾಮಾಜಿಕ ಕ್ರಾಂತಿಯ ಅಂತ್ಯವೂ ಆಯಿತು ಎನ್ನಬಹುದಾಗಿದೆ.   ಜಾತಿ, ಧರ್ಮಗಳು, ಮೂಢನಂಬಿಕೆಗಳ ವಿರೋಧಗಳಂತಹ ವಿಷಯಗಳಲ್ಲಿ ಬಸವಣ್ಣನವರು ಮಾಡಿದಂತಹ ಕ್ರಾಂತಿಯನ್ನು ಇದುವರೆಗೂ ಯಾರೂ ಮಾಡಲು ಸಾಧ್ಯವಾಗಿಲ್ಲ.  ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ತತ್ವವನ್ನೇ ಜಗತ್ತಿನಲ್ಲಿ ಕಮ್ಯುನಿಷ್ಟರು ಅನುಸರಿಸಿದರು.  ಸಮಾಜದಲ್ಲಿನ ಸಮಾನತೆಯನ್ನು ಭಕ್ತಿಯಿಂದ ತರಬೇಕೆ ಹೊರತು ರಕ್ತಕ್ರಾಂತಿಯಿಂದಲ್ಲ ಎನ್ನುವುದು ಬಸವಣ್ಣನವರ ತತ್ವ ಮತ್ತು ಉದ್ದೇಶವಾಗಿತ್ತು.  ಜಾತೀಯತೆಯನ್ನು ತೊಡೆದುಹಾಕಬೇಕೆ ಹೊರತು, ಅದನ್ನು ಇನ್ನಷ್ಟು ಬೆಳೆಸುವುದು ಸರಿಯಲ್ಲ.  ಮನುಷ್ಯ ಮನುಷ್ಯನ್ನಾಗಿ ನೋಡಬೇಕೆ ಹೊರತು, ಜಾತಿಯಿಂದಲ್ಲ.  ಜಾತೀಯತೆ ಸಮಾಜವನ್ನು ಒಡೆಯುತ್ತದೆಯೇ ಹೊರತು ಒಂದುಗೂಡಿಸುವುದಿಲ್ಲ.  ಆದರೆ ಇಂದಿನ ದಿನಮಾನಗಳಲ್ಲಿ ಜಾತೀಯತೆಯನ್ನು ಹೆಚ್ಚಿಸುವಂತಹ ಕಾರ್ಯಗಳೇ ನಡೆಯುತ್ತಿದ್ದು, ನಿಜಕ್ಕೂ ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಡಾ. ಎಸ್.ಎಂ. ಜಾಮದಾರ್ ಅವರು ಹೇಳಿದರು.

     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಬಸವಣ್ಣನವರ ತತ್ವ ಸಂದೇಶಗಳು ಸರ್ವಕಾಲಕ್ಕೂ ಸಲ್ಲುತ್ತವೆ.  ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಸವಣ್ಣನವರನ್ನು ಗೌರವಿಸಿದಂತೆ,  ಗಾಳಿ, ಬೆಳಕಿನಂತಹ ಪ್ರಕೃತಿಯಲ್ಲಿ ಜಾತಿ, ಧರ್ಮಗಳಿಗೆ ಅವಕಾಶವಿಲ್ಲ.  ಆದರೆ ಮನುಷ್ಯ ಜಾತಿ ಪದ್ಧತಿಯನ್ನು ಹೆಚ್ಚಿಸುವ ಮೂಲಕ ಪ್ರಕೃತಿಗೆ ಅಗೌರವ ತೋರುವುದು ಸರಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
     ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.  ಬಸವಾನಂದ ಸ್ವಾಮಿಗಳು ಹಾಗೂ ಶಾರದಾ ಬಸವರಾಜ ಅದರಸಿ ಅವರು ಕಾರ್ಯಕ್ರಮದ ಅಂಗವಾಗಿ ಮಾತನಾಡಿದರು.  ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ ಉಪಸ್ಥಿತರಿದ್ದರು.  ಬಸವೇಶ್ವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಸ್ವಾಗತಿಸಿದರು.  ಅನುಶ್ರೀ ಶೆಟ್ಟರ್ ಹಾಗೂ ವರ್ಷಿಣಿ ಸಂಕ್ಲಾಪುರ ಸಂಗಡಿಗರು ವಚನಗಾಯನ ಪ್ರಸ್ತುತಪಡಿಸಿದರು. ಕೊಪ್ಪಳದ ಮೂವರು ಸಾಧಕರಿಗೆ ಬಸವೇಶ್ವರ ಜಯಂತ್ಯುತ್ಸವ ಸಮಿತಿಯಿಂದ ಬಸವ ಕಾರುಣ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ವಿವಿಧ ಸಾಂಸ್ಕøತಿಕ ಕಲಾತಂಡದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಹಕ್ಕಿ ಜ್ವರ ಕುರಿತು ಜನರು ಆತಂಕಪಡುವ ಅಗತ್ಯವಿಲ್ಲ- ಡಾ. ಶ್ರೀಕಾಂತ್ ಬಾಸೂರ


ಕೊಪ್ಪಳ ಮೇ. 10 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹಕ್ಕಿಜ್ವರ (ಹೆಚ್5 ಎನ್1) ನಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ರೋಗ ಹರಡದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು,  ಈ ಕುರಿತು ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ತಿಳಿಸಿದ್ದಾರೆ.
     ರಾಜ್ಯದ ವಿವಿಧೆಡೆ ಹಕ್ಕಿಜ್ವರ ಪ್ರಕರಣಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದೆ.  ಆದರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣ ಕಂಡುಬಂದಿಲ್ಲ.  ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ.  ಆದಾಗ್ಯೂ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದ ಔಷಧ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.
ಆತಂಕ ಭಯ ಬೇಡ : ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5 ಎನ್1 ವೈರಸ್‍ನಿಂದ ಹರಡುವ ಸಾಂಕ್ರಾಮಿಕ ಖಾಯಿಲೆ ಆಗಿದ್ದು, ಇದು ಟರ್ಕಿಕೋಳಿ, ಗಿನಿಕೋಳಿ, ಬಾತುಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆ.  ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗೆ ಇದು ಹರಡುತ್ತದೆ.  ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ರೋಗ ಹರಡಲು ಕಾರಣ : ರೋಗಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೆ ತಿನ್ನುವುದರಿಂದ, ಸೋಂಕು ಇರುವ ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ, ಕೋಳಿಗಳ ಹಿಕ್ಕೆಗಳು ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು, ಕಲುಷಿತಗೊಂಡ ನೀರು ಸೇವನೆಯಿಂದ, ಕೆಲವು ಸಂದರ್ಭಗಳಲ್ಲಿ ಗಾಳಿ ಮೂಲಕವೂ ಮನುಷ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ.
ರೋಗ ಲಕ್ಷಣಗಳು : ಹಕ್ಕಿಜ್ವರದ ಲಕ್ಷಣಗಳೆಂದರೆ, ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ತೀವ್ರ ನೋವು, ಆಯಾಸ ಕಾಣಿಸಿಕೊಳ್ಳುವುದು.  ಕೆಲವೊಮ್ಮೆ ವಾಂತಿ ಮತ್ತು ಭೇದಿ ಆಗಬಹುದು, ಉಸಿರಾಟದಲ್ಲಿ ತೊಂದರೆ ಕಾಣಿಸುವುದು.
ಮುನ್ನೆಚ್ಚರಿಕೆ ಕ್ರಮಗಳು : ಹಕ್ಕಿಜ್ವರ ಪೀಡಿತ ಪ್ರದೇಶಗಳಲ್ಲಿ ನಾಗರಿಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಹಕ್ಕಿಜ್ವರದ ಸೋಂಕು ಹರಡದಂತೆ ತಡೆಯಬಹುದಾಗಿದೆ.  ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತುಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಬೇಕು.  ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಸೋಂಕಿತ ಹಕ್ಕಿಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು.  ಹಕ್ಕಿಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು.  ಹಕ್ಕಿ ಜ್ವರ ಹರಡಿರುವ ಫಾರಂನ ವಾತಾವರಣದ ಸಂಪರ್ಕಕ್ಕೆ ಬಂದಲ್ಲಿ, ತಕ್ಷಣ ತಮ್ಮ ಕೈಕಾಲು ಮತ್ತು ಮುಖವನ್ನು ತೊಳೆದುಕೊಂಡು ಬಟ್ಟೆಯನ್ನು ಬದಲಾಯಿಸಿಕೊಳ್ಳಬೇಕು.  ಅಲ್ಲದೆ ಮುಂದಿನ ನಾಲ್ಕು ದಿನಗಳವರೆಗೆ ತಮ್ಮ ದಏಹದ ಉಷ್ಣಾಂಶದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದು.  ಒಂದು ವೇಳೆ ಜ್ವರದ ಲಕ್ಷಣ ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.  ಸೋಂಕಿರುವ ಪ್ರದೇಶದಲ್ಲಿ ಯಾವುದೇ ವಸ್ತುವನ್ನು ಮುಟ್ಟಿದಾಗ ಯಾವಾಗಲೂ ಕೈಗೊಳನ್ನು ಸೋಪಿನಿಂದ ತೊಳೆಯಬೇಕು.
     ಹಕ್ಕಿ ಜ್ವರ ಕುರಿತಂತೆ ಪಶುಸಂಗೋಪನೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೆಲವು ಕೋಳಿ ಫಾರಂಗಳಿಗೆ ಭೇಟಿ ನೀಡಿ ಪರಿಶಿಲಿಸಲಾಗಿದ್ದು, ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ.12 ರಂದು ಕುಷ್ಟಗಿ ತಾಲೂಕಾ ಪಂಚಾಯತಿ ತ್ರೈಮಾಸಿಕ ಕೆಡಿಪಿ ಸಭೆ

ಕೊಪ್ಪಳ ಮೇ.07:(ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕಾ ಪಂಚಾಯತಿ ತ್ರೈಮಾಸಿಕ ಕೆಡಿಪಿ ಪ್ರಗತಿಪರಿಶೀಲನಾ ಸಭೆ ಮೇ. 12 ರಂದು ಬೆಳಿಗ್ಗೆ 10 ಗಂಟೆಗೆ ಕುಷ್ಟಗಿಯ ಸಕ್ರ್ಯೂಟ್ ಹೌಸ್‍ನಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಕುಷ್ಟಗಿ ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್ ಅವರು ವಹಿಸುವರು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

Sunday, 8 May 2016

ಕೊಪ್ಪಳ ಜೆಪಿ ಮಾರುಕಟ್ಟೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ- ಶಿವರಾಜ ತಂಗಡಗಿ


ಕೊಪ್ಪಳ, ಮೇ.8 (ಕರ್ನಾಟಕ ವಾರ್ತೆ) : ಕೊಪ್ಪಳ ನಗರದಲ್ಲಿ ನಿರ್ಮಾಣವಾಗಲಿರುವ ಜೆಪಿ ಮಾರುಕಟ್ಟೆ ಕಾಮಗಾರಿಯನ್ನು ನಿಗದಿತ 18 ತಿಂಗಳ ಒಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಬಳಕೆಗೆ ಅನುವು ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

     ಕೊಪ್ಪಳ ನಗರಸಭೆಯಿಂದ ನಗರೋತ್ಥಾನ ಯೋಜನೆಯಡಿ ಅಂದಾಜು ರೂ. 4 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸಲಾಗುತ್ತಿರುವ ಜೆ.ಪಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಭಾನುವಾರದಂದು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.


     ಕೊಪ್ಪಳ ನಗರದಲ್ಲಿ ಜೆಪಿ ಮಾರುಕಟ್ಟೆ ಪುನರ್ ನಿರ್ಮಾಣವಾಗಬೇಕು ಎನ್ನುವುದು ಸಾರ್ವಜನಿಕರ ಮತ್ತು ವಿವಿಧ ವ್ಯಾಪಾರಸ್ಥರ ಬಹುದಿನಗಳ ಬೇಡಿಕೆಯಾಗಿತ್ತು.  ಜೆಪಿ ಮಾರುಕಟ್ಟೆ ನಿರ್ಮಾಣ ಈ ಹಿಂದಿನ ಸರ್ಕಾರ ಇರುವಾಗಲೆ ಪ್ರಾರಂಭವಾಗಬೇಕಿತ್ತು.  ಆದರೆ ಯೋಜನೆಗೆ ಕೆಲ ಮಾರ್ಪಾಡು ಮಾಡಬೇಕಿದ್ದರಿಂದ ನೆನೆಗುದಿಗೆ ಬಿದ್ದಿತ್ತು.   ಕಲಬುರಗಿಯಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಪರಿಷ್ಕøತ ಯೋಜನೆಗೆ ಅನುಮೋದನೆ ದೊರೆತು, ಹೆಚ್ಚುವರಿ ಅನುದಾನ ಒದಗಿಸಲಾಗಿದೆ.  ಇದೀಗ 04 ಕೋಟಿ ರೂ. ವೆಚ್ಚದಲ್ಲಿ ಜೆಪಿ ಮಾರುಕಟ್ಟೆ ಸುಸಜ್ಜಿತವಾಗಿ ನಿರ್ಮಾಣವಾಗಲಿದೆ.  ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಮಿತಿಯನ್ನು ಗುತ್ತಿಗೆದಾರರಿಗೆ ನಿಗದಿಪಡಿಸಲಾಗಿದೆ.  ಆದರೆ ಗುತ್ತಿಗೆದಾರರು 12 ತಿಂಗಳುಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.  ಒಟ್ಟಾರೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಂಡು ಜನರ ಬಳಕೆಗೆ ಅರ್ಪಣೆಯಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದು ಸಚಿವರು ಹೇಳಿದರು.


     ಕೊಪ್ಪಳ ನಗರದ ಹುಲಿಕೆರೆ ಅತ್ಯಂತ ಮಹತ್ವದ ಕೆರೆಯಾಗಿದ್ದು, ಹುಲಿಕೆರೆಯಲ್ಲಿನ ಹೂಳು ತೆಗೆಸಿ, ಅಭಿವೃದ್ಧಿಪಡಿಸುವುದು ಹಾಗೂ ಈ ಕೆರೆಗೆ ತುಂಗಭದ್ರಾ ನದಿ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.  ಯೋಜನೆಯ ಡಿಪಿಆರ್ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಈಗಾಗಲೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಅಷ್ಟೇ ಅಲ್ಲದೆ ಕೊಪ್ಪಳ ತಾಲೂಕಿನ ಕೆರೆಗಳು ಹಾಗೂ ಯಲಬುರ್ಗಾ ತಾಲೂಕಿನ ಭಾಗಶಃ ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಲು ಸಹ ಚಿಂತನೆ ನಡೆಸಲಾಗಿದೆ.  ಈಗಾಗಲೆ ಗಂಗಾವತಿ ತಾಲೂಕಿನಲ್ಲಿ ಹಲವು ಕೆರೆಗಳಿಗೆ ನದಿ ನೀರು ತುಂಬಿಸುವ ಕಾಮಗಾರಿ ಈಗಾಗಲೆ ಪೂರ್ಣಗೊಳ್ಳುವ ಹಂತ ತಲುಪಿದ್ದು, ಕೆರೆ ತುಂಬಿಸುವಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ.  ಇಂತಹ ಯೋಜನೆಗಳು ಬರ ಪರಿಸ್ಥಿತಿ ನಿರ್ವಹಣೆಗೆ ಹಾಗೂ ಅಂತರ್ಜಲ ಸುಧಾರಣೆಗೆ ಉತ್ತಮ ಯೋಜನೆಗಳಾಗಿವೆ.  ಪ್ರಸಕ್ತ ಬರ ಪರಿಸ್ಥಿತಿಯನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ.  ಬರ ನಿರ್ವಹಣೆ ನಿಟ್ಟಿನಲ್ಲಿ ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಮೂರ್ನಾಲ್ಕು ಬಾರಿ ಸಭೆಯನ್ನು ಜರುಗಿಸಿ, ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಕುರಿತು ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ.  ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಿಗೆ ಅಗತ್ಯ ಸಹಕಾರವನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.
     ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಕೇಂದ್ರ ಪುರಸ್ಕøತ ಹೌಸಿಂಗ್ ಫಾರ್ ಆಲ್ ಅಭಿಯಾನದ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯಡಿ ನಗರ ಪ್ರದೇಶದ ಕಡು ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಲು ಸಬ್ಸಿಡಿ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಲಾಗಿದ್ದು, ಇಂತಹ ಯೋಜನೆಗಳ ಸದುಪಯೋಗವನ್ನು ಬಡವರು ಪಡೆದುಕೊಳ್ಳಬೇಕು.  ರಾಷ್ಟ್ರೀಯ ಹೆದ್ದಾರಿ 63 ಅನ್ನು 1300 ಕೋಟಿ ರೂ. ವೆಚ್ಚದಲ್ಲಿ ಚತುಷ್ಪತ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.  ಜಿಲ್ಲೆಯ ಪ್ರಮುಖ ರಸ್ತೆಗಳನ್ನು ರಾಷ್ಟ್ರೀಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು, ರಾಜ್ಯ ಸರ್ಕಾರದಿಂದ ಡಿಪಿಆರ್ ತಯಾರಿಸಿ, ಪ್ರಸ್ತಾವನೆ ಸಲ್ಲಿಸಿದಲ್ಲಿ, ಯೋಜನೆಯ ಜಾರಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ನಗರದಲ್ಲಿ ಜೆಪಿ ಮಾರುಕಟ್ಟೆ ನಿರ್ಮಾಣವಾಗಬೇಕು ಎನ್ನುವ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಕಾಲ ಇದೀಗ ಬಂದಿದೆ.  ಜೆಪಿ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ 107 ಮಳಿಗೆಗಳು ಹಾಗೂ ಮೊದಲನೆ ಅಂತಸ್ತಿನಲ್ಲಿ 29 ಮಳಿಗೆಗಳು ನಿರ್ಮಾಣವಾಗಲಿವೆ.  18 ತಿಂಗಳ ಒಳಗಾಗಿ ಸುಸಜ್ಜಿತ ಮಾರುಕಟ್ಟೆ ಲೋಕಾರ್ಪಣೆಯಾಗಲಿದೆ.  ಕೊಪ್ಪಳ ನಗರದ ಸಾಲಾರ್‍ಜಂಗ್ ರಸ್ತೆ ಹಾಗೂ ಸಿಂಪಿಲಿಂಗಣ್ಣ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು.  ಅಲ್ಲದೆ ನಗರದ ಎಲ್ಲ ವಾರ್ಡ್‍ಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲು ಆದ್ಯತೆ ನೀಡಲಾಗುವುದು ಎಂದರು.
    ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದ್ರಿ, ಎಪಿಎಂಸಿ ಅಧ್ಯಕ್ಷ ಹನುಮರೆಡ್ಡಿ ಹಂಗನಕಟ್ಟಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಾವಲಿ, ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ, ಜಿ.ಪಂ. ಸದಸ್ಯರುಗಳಾದ ರಾಜಶೇಖರ ಹಿಟ್ನಾಳ್, ಗೂಳಪ್ಪ ಹಲಗೇರಿ, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಸೇರಿದಂತೆ ನಗರಸಭೆಯ ಹಲವು ಸದಸ್ಯರುಗಳು ಭಾಗವಹಿಸಿದ್ದರು.  ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಸ್ವಾಗತಿಸಿದರು, ಪೌರಾಯುಕ್ತ ರಮೇಶ್ ಪಟ್ಟೇದಾರ ವಂದಿಸಿದರು, ಸಿ.ವಿ. ಜಡಿಯವರ್ ನಿರೂಪಿಸಿದರು.
    ಕಾರ್ಯಕ್ರಮಕ್ಕೂ ಮುನ್ನ ಪ್ರವಾಸೋದ್ಯಮ ಇಲಾಖೆಯ ಅನುದಾನದಡಿ 80 ಲಕ್ಷ ರೂ. ವೆಚ್ಚದಲ್ಲಿ ಗಡಿಯಾರಕಂಬ-ಗೌರಿಅಂಗಳ ಸಿಸಿ ರಸ್ತೆ ಕಾಮಗಾರಿಗೆ ಗಡಿಯಾರ ಕಂಬದ ಬಳಿ ಭೂಮಿ ಪೂಜೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಿದರು.   ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.