Saturday, 30 April 2016

ಜಿ.ಪಂ. ಅಧ್ಯಕ್ಷರಾಗಿ ಶೇಖರಪ್ಪ ನಾಗರಳ್ಳಿ, ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ನೀರಲೂಟಿ ಆಯ್ಕೆ


ಕೊಪ್ಪಳ ಏ. 30 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪಂಚಾಯತಿಯ ನೂತನ ಅಧ್ಯಕ್ಷರಾಗಿ  ಹಿರೇಸಿಂದೋಗಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯ ಶೇಖರಪ್ಪ ನಾಗರಳ್ಳಿ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕಮಾದಿನಾಳ-ವೆಂಕಟಗಿರಿ ಕ್ಷೇತ್ರದ ಜಿ.ಪಂ. ಸದಸ್ಯೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ ಅವರು ಆಯ್ಕೆಯಾಗಿದ್ದಾರೆ.

     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಶನಿವಾರದಂದು ನಡೆದ ಚುನಾವಣೆಯಲ್ಲಿ, ನೂತನ ಅಧ್ಯಕ್ಷರಾಗಿ ಶೇಖರಪ್ಪ ನಾಗರಳ್ಳಿ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ನೀರಲೂಟಿ  ಅವರು ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಘೋಷಿಸಿದರು.

       ಜಿಲ್ಲಾ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಶನಿವಾರದಂದು ಜಿ.ಪಂ. ಸಭಾಂಗಣದಲ್ಲಿ ಜರುಗಿತು.   ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು.  ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಶೇಖರಪ್ಪ ನಾಗರಳ್ಳಿ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹಿರೇಮನ್ನಾಪುರ ಕ್ಷೇತ್ರದ ಜಿ.ಪಂ. ಸದಸ್ಯ ಕೆ. ಮಹೇಶ್ ನಾಮಪತ್ರ ಸಲ್ಲಿಸಿದರು.  ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕೊರಡಕೇರಾ ಕ್ಷೇತ್ರದ ಜಿ.ಪಂ. ಸದಸ್ಯೆ ಜೈನರ್ ಶರಣಮ್ಮ ಸಂಗನಗೌಡ ಅವರು ನಾಮಪತ್ರ ಸಲ್ಲಿಸಿದರು.

     ಮಧ್ಯಾಹ್ನ 3 ಗಂಟೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡು, ನಾಮಪತ್ರ ಪರಿಶೀಲನೆ ನಡೆಸಿದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಘೋಷಿಸಿದರು.  ನಾಮಪತ್ರ ಹಿಂಪಡೆಯಲು 5 ನಿಮಿಷ ಕಾಲಾವಕಾಶ ಒದಗಿಸಲಾಯಿತು.  ಯಾರೂ ನಾಮಪತ್ರ ಹಿಂಪಡೆಯದಿದ್ದರಿಂದ, ಚುನಾವಣೆ ನಡೆಸಲಾಯಿತು.  ಒಟ್ಟು 29 ಸದಸ್ಯ ಬಲ ಹೊಂದಿರುವ ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ  ಜಿಲ್ಲಾ ಪಂಚಾಯತಿಯ ಎಲ್ಲ 29 ಸದಸ್ಯರು.  

     ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಶೇಖರಪ್ಪ ನಾಗರಳ್ಳಿ ಅವರ ಪರವಾಗಿ ಒಟ್ಟು 17 ಜನ ಸದಸ್ಯರು ತಮ್ಮ ಬೆಂಬಲ ವ್ಯಕ್ತಪಡಿಸಿದರು.  ಕೆ. ಮಹೇಶ್ ಅವರ ಪರವಾಗಿ 12 ಜನ ಸದಸ್ಯರು ಬೆಂಬಲಿಸಿದರು.  ಒಟ್ಟು 29 ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶೇಖರಪ್ಪ ನಾಗರಳ್ಳಿ ಅವರು 17-12 ಅಂತರದಲ್ಲಿ ಬಹುಮತ ಪಡೆದು, ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು.

     ಉಪಾಧ್ಯಕ್ಷ ಸ್ಥಾನದ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಲಕ್ಷ್ಮಮ್ಮ ನೀರಲೂಟಿ ಅವರ ಪರವಾಗಿ ಒಟ್ಟು 17 ಜನ ಸದಸ್ಯರು ತಮ್ಮ ಬೆಂಬಲ ವ್ಯಕ್ತಪಡಿಸಿದರು.  ಜೈನರ್ ಶರಣಮ್ಮ ಸಂಗನಗೌಡರ ಅವರ ಪರವಾಗಿ 12 ಜನ ಸದಸ್ಯರು ಬೆಂಬಲಿಸಿದರು.  ಒಟ್ಟು 29 ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಲಕ್ಷ್ಮಮ್ಮ ನೀರಲೂಟಿ ಅವರು 17-12 ಅಂತರದಲ್ಲಿ ಬಹುಮತ ಪಡೆದು, ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
     ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಎಲ್ಲ ಸದಸ್ಯರುಗಳು, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಉಪಸ್ಥಿತರಿದ್ದರು.
     ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೇಖರಪ್ಪ ನಾಗರಳ್ಳಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಹಾಗೂ ಜಾನುವಾರುಗಳಿಗೆ ಮೇವಿನ ತೊಂದರೆ ಆಗದಂತೆ ಮೊದಲ ಆದ್ಯತೆ ನೀಡಿ, ಬರ ಪರಿಸ್ಥಿತಿ ನಿರ್ವಹಣೆಗೆ ಮುಂದಾಗುವುದಾಗಿ ಭರವಸೆ ನೀಡಿದರು.  ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಗಣ್ಯರಾದ ಬಸವರಾಜ ಹಿಟ್ನಾಳ್, ಅಮರೇಗೌಡ ಬಯ್ಯಾಪುರ ಮುಂತಾದವರು ಜಿಲ್ಲಾ ಪಂಚಾಯತಿಯ ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಕೊಪ್ಪಳ ನಗರದಲ್ಲಿ ಕಾರ್ಮಿಕರಿಗೆ ಇಎಸ್‍ಐ ಆಸ್ಪತ್ರೆ ಸ್ಥಾಪನೆ : ಸಂಸದ ಕರಡಿ ಸಂಗಣ್ಣ ಮನವಿ

ಕೊಪ್ಪಳ ಏ. 30 (ಕರ್ನಾಟಕ ವಾರ್ತೆ) : ಕಾರ್ಮಿಕರ ಅನುಕೂಲಕ್ಕಾಗಿ ಕೊಪ್ಪಳ ನಗರದಲ್ಲಿ ಇಎಸ್‍ಐ ಆಸ್ಪತ್ರೆಯನ್ನು ಸ್ಥಾಪಿಸುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
     ನವದೆಹಲಿಯಲ್ಲಿ ಜರುಗುತ್ತಿರುವ ಲೋಕಸಭೆ ಅಧಿವೇಶನದಲ್ಲಿ ಈ ಕುರಿತಂತೆ ಪ್ರಸ್ತಾಪ ಮಾಡಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು, ಕೊಪ್ಪಳ ಜಿಲ್ಲೆಯಲ್ಲಿ ಉಕ್ಕು, ಭತ್ತ, ಕೈಮಗ್ಗ ಮತ್ತು ಗ್ರಾನೈಟ್ ಉದ್ಯಮಗಳಿಗೆ ಸಂಬಂಧಿಸಿದ ಕಾರ್ಖಾನೆಗಳು ಇವೆ.  ಇವುಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.  ಕಾರ್ಮಿಕರು ವೈದ್ಯೋಪಚಾರಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗುತ್ತಿರುವುದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಕಾರ್ಮಿಕರ ಹಿತದೃಷ್ಟಿಯಿಂದ ಕೊಪ್ಪಳ ನಗರದಲ್ಲಿ ಇಎಸ್‍ಐ ಆಸ್ಪತ್ರೆಯನ್ನು ಪ್ರಾರಂಭಿಸಬೇಕು.  ಹಾಗೂ ಉಳಿದ ಕಾರ್ಮಿಕರ ವಿಮಾ ನೋಂದಣಿಗಾಗಿ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಲೋಕಸಭೆ ಅಧಿವೇಶನದಲ್ಲಿ ಸಂಸದರು ಮನವಿ ಮಾಡಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಮೇ. 01 ರಂದು ಈಶಾನ್ಯದ ಐಸಿರಿ ಸರಣಿಯ 33 ನೇ ಸಂಚಿಕೆ ಪ್ರಸಾರ

ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 33 ನೇ ಸಂಚಿಕೆ ಮೇ. 01 ರಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 33 ನೇ  ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.   ಕಲಬುರಗಿಯ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಎಮ್.ಬಿ.ಬಿರಾದಾರ ಅವರಿಂದ ಸಂವಿಧಾನ ಮತ್ತು ಉತ್ತಮ ಆಡಳಿತದ ಕುರಿತು ವಿಚಾರಗಳ ಪ್ರಸ್ತಾಪ. ಸಿಇಟಿ ವಿದ್ಯಾರ್ಥಿಗಳ  ಪರೀಕ್ಷಾ ತಯಾರಿಗಾಗಿ ಕಲಬುರಗಿಯ ಶಿಕ್ಷಕರ ತರಬೇತಿ ಮಹಾವಿದ್ಯಾಲಯದ ಉಪನ್ಯಾಸಕ ರಾಮಕೃಷ್ಣ ಕುಲಕರ್ಣಿ ಅವರಿಂದ ಸಲಹೆ ಸೂಚನೆಗಳು.  ಕಲಬುರಗಿಯ ಚಿತ್ರಕಲಾವಿದ ಡಾ. ಮಲ್ಲಿಕಾರ್ಜುನ ಬಾಗೋಡಿಯವರ ಸಾಧನೆಯ ಪರಿಚಯ.  ಚಿತ್ತಾಪೂರ ತಾಲೂಕು ತೊನಸಳ್ಳಿ (ಟಿ) ಗ್ರಾಮದ ಸಮತಾ ಮಹಿಳಾ ಅಭಿವೃದ್ಧಿ ಸಂಘದ ಸದಸ್ಯರ ಸಾಂಘಿಕ ಶಕ್ತಿಯ ಪರಿಚಯ.  ದಿವ್ಯ ಸಂಪತ್ ಅವರು ಹಾಡಿರುವ ನುಲಿಯ ಚಂದಯ್ಯ ಅವರ ವಚನ.  ಊರು – ಟೂರಿನಲ್ಲಿ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕ ದರ್ಶನ.  ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.   ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಸಾಮಾನ್ಯ ಪ್ರವೇಶ ಹಾಗೂ ಸ್ಪಧಾತ್ಮಕ ಪರೀಕ್ಷೆ: ನಿಷೇದಾಜ್ಞೆ ಜಾರಿ

ಕೊಪ್ಪಳ ಏ.30(ಕರ್ನಾಟಕ ವಾರ್ತೆ):  ಜಿಲ್ಲೆಯಲ್ಲಿ ಮೇ.4 ರಿಂದ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)  ಹಾಗೂ ಫೀಲ್ಡ್ ಅಸಿಸ್ಟೆಂಟ್ ಟು ಫಿಷೇರಿಸ್ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ  ನಿಷೇದಾಜ್ಞೆ  ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಮೇ.4 ಮತ್ತು 5 ರಂದು ನಡೆಯುವ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬೆಳಗ್ಗೆ 10 ರಿಂದ ಮ.4 ಗಂಟೆಯವರೆಗೆ ಕೊಪ್ಪಳದ ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು, ಗವಿಸಿದ್ದೇಶ್ವರ ಪ.ಪೂ. ಕಾಲೇಜು ಹಾಗೂ ಬಸಮ್ಮ ಕಾತರಕಿ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ.  ಮೇ.6 ರಂದು ಬೆಳಗ್ಗೆ 10 ರಿಂದ ಮ.1 ಗಂಟೆವರೆಗೆ ಕೊಪ್ಪಳದ ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಗವಿಸಿದ್ದೇಶ್ವರ ಪ.ಪೂ. ಕಾಲೇಜಿನಲ್ಲಿ ನಡೆಯುವ ಫೀಲ್ಡ್ ಅಸಿಸ್ಟೆಂಟ್ ಟು ಫಿಷೇರಿಸ್ ಸ್ಪರ್ಧಾತ್ಮಕ ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಅನುಕೂಲವಾಗುವಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪರೀಕ್ಷಾ ವೇಳೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ  200 ಮೀಟರ್ ವ್ಯಾಪಿಯಲ್ಲ್ತಿ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ  200 ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಜಿರಾಕ್ಸ್, ಟೈಪಿಂಗ್ ನಿಷೇಧಿಸಲಾಗಿದೆ. ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು ಹಾಗೂ ನಿಯೋಜಿತ ಶಿಕ್ಷಕರು, ಜಾಗೃತ ದಳದರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪ್ರವೇಶ ನಿಷೇಧಿಸಿದೆ.
ನಕಲು ಮಾಡವ ಸಾಮಗ್ರಿಗಳನ್ನು ಹಾಗೂ ಹೊರಗಿನಿಂದ ನಕಲು ಬರೆದು ಪರೀಕ್ಷಾ ಕೇಂದ್ರಗಳಲ್ಲಿ ಪೂರೈಸುವುದನ್ನು ನಿರ್ಬಂಧಿಸಲಾಗಿದೆ. ಹಾಗೂ ಪರೀಕ್ಷಾ ಕೇಂದ್ರದ  200 ಮೀ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಫ್ಯಾಷನ್ ಆಭರಣ ತಯಾರಿಕೆ ತರಬೇತಿ: ಅರ್ಜಿ ಆಹ್ವಾನ

ಕೊಪ್ಪಳ ಏ.30 (ಕರ್ನಾಟಕ ವಾರ್ತೆ):  ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯಿಂದ ಮಹಿಳೆಯರಿಗಾಗಿ ಫ್ಯಾಷನ್ ಆಭರಣಗಳ ತಯಾರಿಕೆಗಾಗಿ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
    ಜೂನ್.26 ರಂದು ಆರಂಭವಾಗಿ 10 ದಿನಗಳವರೆಗೆ ತರಬೇತಿ ನಡೆಯಲಿದೆ. ತರಬೇತಿ ವೇಳೆ ಉಚಿತ ಊಟ ಹಾಗೂ ವಸತಿ ಕಲ್ಪಿಸಲಾಗಿದೆ. 18 ರಿಂದ 45 ವರ್ಷದೊಳಗಿನ ಅರ್ಹ ನಿರುದ್ಯೋಗಿ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
     ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೇಲಿ, ಹಳಿಯಾಳ ಇಲ್ಲಿಗೆ ಅಥವಾ ಹೆಚ್ಚಿನ ಮಾಹಿತಿಗೆ ದೂ.ಸಂ: 08284-220807, 9483485489, 9482188780 ಇಲ್ಲಿಗೆ ಸಂಪರ್ಕಿಸಬಹುದಾಗೆ ಎಂದು ಪ್ರಕಟಣೆ ತಿಳಿಸಿದೆ.

ದೂರದರ್ಶನ ಸ್ಟ್ರಿಂಜರ್ : ಅರ್ಜಿ ಆಹ್ವಾನ

ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ದೂರದರ್ಶನ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗದ ವತಿಯಿಂದ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಿಂಜರ್‍ಗಳಾಗಿ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
      ದೂರದರ್ಶನ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಿಂಜರ್‍ಗಳನ್ನು ನೇಮಿಸಲು ಅರ್ಜಿ ಆಹ್ವಾನಿಸಿದೆ. ಸುದ್ದಿ, ದೃಶ್ಯಾವಳಿ, ಚಿತ್ರೀಕರಣ ಹಾಗೂ ವರದಿಗಾರಿಕೆಯಲ್ಲಿ ಅನುಭವ ಮತ್ತು  ಪರಿಣತಿ ಅಗತ್ಯ. ಅರ್ಹತೆ ಮಾನದಂಡ ಹಾಗೂ ಅರ್ಜಿ ನಮೂನೆ ವಿವರಗಳನ್ನು ಜಾಲತಾಣ:  www.ddchandana.gov.in  ರಿಂದ ಪಡೆದುಕೊಳ್ಳಬಹುದು.  ಅರ್ಜಿ ಸಲ್ಲಿಸಲು ಮೇ. 13 ಕೊನೆಯ ದಿನಾಂಕವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬೇಸಿಗೆಯಲ್ಲಿ ಬಾಳೆ ಬೆಳೆ ನಿರ್ವಹಣೆ : ರೈತರಿಗೆ ಸಲಹೆಗಳು

ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ಬೇಸಿಗೆ ಸಂದರ್ಭದಲ್ಲಿ ಬಾಳೆ ಬೆಳೆ ನಿರ್ವಹಣೆ ಮಾಡುವ ಕುರಿತಂತೆ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
ಬಾಳೆ ಬೆಳೆ ಈಗ ವಿವಿಧ ಹಂತದಲ್ಲಿ ಇದ್ದು, ಕೆಲವು ನಾಟಿ ಮಾಡಿ 4 ರಿಂದ 6 ತಿಂಗಳಾಗಿದ್ದರೆ, ಇನ್ನೂ ಕೆಲವು ಕಡೆ ಗೊನೆ ಬಿಡುವ ಹಂತದಲ್ಲಿದೆ. ಕೆಲವು ಕಡೆ ಗೊನೆ ಹಾಕಿದ್ದು ಕಟಾವಿನ ಹಂತದಲ್ಲಿ ಇರುವುದು ಕಂಡು ಬಂದಿದೆ.  ಬೇಸಿಗೆಯಲ್ಲಿ ತಾಪಮಾನ ಹೆಚಾಗಿರುವುದರಿಂದ ಹೆಚ್ಚು ನೀರು ಬೇಡುವ ಬಾಳೆಯ ನಿರ್ವಹಣೆ ಅತ್ಯವಶ್ಯಕ.  ಮೊದಲನೆಯದಾಗಿ ಕಸ ಕಡ್ಡಿಗಳಿಂದ ಸ್ವಚ್ಛ್ಚವಾಗಿಡಬೇಕು. ಹನಿ ನೀರಾವರಿ ಮೂಲಕ ನೀರು ಹಾಯಿಸುವುದು ಸೂಕ್ತ. ಬಿಸಲಿನ ತಾಪ ಹೆಚ್ಚಾಗಿರುವುದರಿಂದ ಸಾವಯವ ಹೊದಿಕೆ ಅತೀ ಮುಖ್ಯ.  ಭತ್ತದ ಹುಲ್ಲು, ಇನ್ನಿತರೆ ಒಣಗಿದ ಹುಲ್ಲು, ರೌದಿ ಮುಂತಾದವುಗಳನ್ನು ಗಿಡದ ಬುಡಕ್ಕೆ ಹೊದಿಕೆ ಹಾಕಬೇಕು. ಇದೇ ಮುಂದೆ ಗೊಬ್ಬರವಾಗಿ ಪರಿವರ್ತಿತವಾಗುತ್ತದೆ. 
ರಸಾವರಿ ಮೂಲಕ ಶಿಫಾರಸ್ಸು ಮಾಡಿದ ಗೊಬ್ಬರಗಳನ್ನು ಕೊಡುವುದರಿಂದಾಗಿ ಗಿಡಗಳ ಪೋಷಣೆ ಚೆನ್ನಾಗಿ ಆಗುತ್ತದೆ. ಪೋಟಾಶ್ ಯುಕ್ತ ಗೊಬ್ಬರಗಳನ್ನು ಸಿಂಪರಣೆ ಮಾಡುವುದರ ಮೂಲಕ ತೇವಾಂಶ ಕೊರತೆ ನೀಗಿಸಬಹುದು. ಬಾಳೆ ಸ್ಪೇಷಲ್ ಗೊಬ್ಬರವನ್ನು 6 ನೇ ತಿಂಗಳಿನಿಂದ ಆರಂಭಿಸಿ ಪ್ರತಿ ತಿಂಗಳಿಗೊಮ್ಮೆ ಗೊನೆ ಬಿಡುವವರೆಗೂ ಬಳಕೆ ಮಾಡಬೇಕು.  ಈ ಸಮಯದಲ್ಲಿ ಬಿಸಿಲಿನ ತಾಪದಿಂದಾಗಿ ಸೊರಗು ರೋಗದ  ಬಾಧೆ ಕೂಡ ಕಂಡುಬಂದಿರುತ್ತದೆ.  ಇದರ ನಿಯಂತ್ರಣಕ್ಕಾಗಿ ಬಾವಿಸ್ಟಿನ್ 1 ಲೀಟರ್ ನೀರಿನಲ್ಲಿ 2-3 ಗ್ರಾಂ. ಬೆರೆಸಿ ಡ್ರೆಂಚಿಂಗ್ ಮಾಡಬೇಕು. ಒಣಗಿದ, ರೋಗಗ್ರಸ್ತ ಎಲೆಗಳನ್ನು ಕತ್ತರಿಸಿ ಸುಟ್ಟು ಹಾಕಬೇಕು. 8-10 ದಿನಗಳ ನಂತರ ಸೂಡೋಮೋನಾಸ್ ಎಂಬ ಜೈವಿಕ ಶಿಲೀಂದ್ರವನ್ನು 5-10 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಡ್ರೆಂಚಿಂಗ್ ಮಾಡಬೇಕು.
ಪ್ರತಿ ಸಾರಿ ಡ್ರೆಂಚಿಂಗ್ ಮಾಡಿದಾಗ 2-3 ದಿನ ನೀರು ಹಾಯಿಸುವುದನ್ನು ನಿಲ್ಲಿಸಬೇಕು. ಎಲೆ ಚುಕ್ಕೆ ರೋಗ ಕಂಡುಬಂದಲ್ಲಿ ಟಿಲ್ಟ ಎನ್ನುವ ಶಿಲೀಂದ್ರ ನಾಶಕವನ್ನು 1 ಮಿ.ಲೀ. ಬೆರೆಸಿ ಸಿಂಪಡಿಸಬೇಕು. ಸಿಂಪರಣೆ ಕೈಗೊಳ್ಳುವಾಗ ಅಂಟಿನ ಪದಾರ್ಥವನ್ನು ಕಡ್ಡಾಯವಾಗಿ ಬಳಸಬೇಕು.
ಗೊನೆ ಬಿಟ್ಟ ಗಿಡಗಳನ್ನು ಕಡ್ಡಾಯವಾಗಿ ಕೋಲಿನ ಆಸರೆ ನೀಡಬೇಕು.  ಈ ಹಂತದಲ್ಲಿ ಗೊನೆಯ ವಿರುದ್ಧ ದಿಕ್ಕಿನಲ್ಲಿ ಕತ್ತಿ ಆಕಾರದಲ್ಲಿ ಒಂದೇ ಗುನ್ನಿಯನ್ನು ಬೆಳೆಯಲು ಬಿಡಬೇಕು. ಗೊನೆ ಕತ್ತಿರಿಸಿದ ನಂತರ ತಾಯಿ ಗಿಡವನ್ನು ಹಂತ ಹಂತವಾಗಿ ಕಟಾವು ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಆಯಾ ತಾಲ್ಲೂಕಾ ಕಛೇರಿಗಳನ್ನಾಗಲಿ ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಕೊಪ್ಪಳದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಶ್ವಕರ್ಮ ಸಮುದಾಯದ ಅಭ್ಯರ್ಥಿಗಳಿಗೆ ವಿವಿಧ ಸೌಲಭ್ಯ: ಅರ್ಜಿ ಆಹ್ವಾನ

ಕೊಪ್ಪಳ ಏ.29 (ಕರ್ನಾಟಕ ವಾರ್ತೆ):  ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ರಾಷ್ಟ್ರೀಯ ಹಿಂದುಳಿದ ಹಣಕಾಸು ಮತ್ತು ಅಭಿವೃದ್ಧಿ ನಿಗಮದ  ಕಾರ್ಯಕ್ರಮದಡಿಯಲ್ಲಿ ವಿಶ್ವಕರ್ಮ ಸಮುದಾಯದ ಅಭ್ಯರ್ಥಿಗಳಿಗೆ ವಿವಿಧ ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಿದೆ.
    ಅವಧಿ ಸಾಲ ಕೃಷಿವಲಯ, ಸಣ್ಣ ವ್ಯಾಪಾರ, ಸೇವಾವಲಯ, ಸಾರಿಗೆ ವಲಯ. ಶೈಕ್ಷಣಿಕ ಸಾಲ (ದೇಶ ಅಥವಾ ವಿದೇಶದಲ್ಲಿ) ವ್ಯಾಸಂಗ, ನ್ಯೂಸ್ವರ್ಣಿಮಾ ಸಾಲ(ಮಹಿಳಾ ಯೋಜನೆ), ಶಿಲ್ಪಸಂಪದ, ಸ್ವಯಂ ಸಕ್ಷಮ ಸಾಲ, ಮೈಕ್ರೋ ಫೈನಾನ್ಸ್, ಕೃಷಿ ಸಂಪದ, ಮಹಿಳಾ ಸಮೃದ್ಧಿ ಯೋಜನೆ (ಮಹಿಳಾ ಸ್ವಸಹಾಯ ಗುಂಪುಗಳಿಗೆ ಮತ್ತು ವೈಯಕ್ತಿಕ ಸಾಲ).
    ಸಾಲ ಸೌಲಭ್ಯಪಡೆಯಲಿಚ್ಚಿಸುವ ಅಭ್ಯರ್ಥಿಗಳು ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ಸೇರಿರಬೇಕು. ಕುಟುಂಬದ ವರಮಾನ ಗ್ರಾಮೀಣ ಪ್ರದೇಶದವರು ರೂ.98 ಸಾವಿರ ಹಾಗೂ ಪಟ್ಟಣ ಪ್ರದೇಶ-ರೂ 1. 20 ಲಕ್ಷದೊಳಗಿರಬೇಕು. ವಯೋಮಿತಿ 18 ರಿಂದ 55 ವರ್ಷ ಹಾಗೂ ಶೈಕ್ಷಣಿಕ ಸಾಲಕ್ಕೆ ಕನಿಷ್ಠ 18 ಗರಿಷ್ಠ 32 ವರ್ಷ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ನಿಗಮದಿಂದ ಈಗಾಗಲೇ ಸೌಲಭ್ಯ ಪಡೆದಿದ್ದಲ್ಲಿ ಅಂತಹವರು ಅರ್ಜಿ ಸಲ್ಲಿಸುವಂತಿಲ್ಲ ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
    ನಿಗದಿತ ಅರ್ಜಿ ನಮೂನೆಯನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕ ಕಛೇರಿ ಅಥವಾ ಆಯಾ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿ ಕಛೇರಿಗಳಲ್ಲಿ ಮೇ.7 ರೊಳಗಾಗಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಯೊಂದಿಗೆ ಮೇ.13 ರೊಳಗಾಗಿ ಸಲ್ಲಿಸಬಹುದಾಗಿದೆ.
     ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ದೂರವಾಣಿ ಸಂ;08539-221847 ಕ್ಕೆ ಸಂಪರ್ಕಿಸಬಹುದು.  ನಿಗಮದ ವೆಬ್‍ಸೈಟ್  www.karnataka.gov.in/kvcdcl  ನಲ್ಲಿಯೂ ಮಾಹಿತಿ ಪಡೆಯಬಹುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಯೋಜನೆ: ಅರ್ಜಿ ಆಹ್ವಾನ

ಕೊಪ್ಪಳ ಏ.29 (ಕರ್ನಾಟಕ ವಾರ್ತೆ):  ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ ಅರಿವು  ಶೈಕ್ಷಣಿಕ ಸಾಲ ಯೋಜನೆಯಲ್ಲಿ, ಪ್ರಸಕ್ತ ಸಾಲಿಗೆ  ಸಿ.ಇ.ಟಿ ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಾಲ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಸಿಇಟಿ ಮೂಲಕ ಸೀಟು ಪಡೆದು ಬಿ.ಇ, ಎಂ.ಬಿ.ಬಿ.ಎಸ್,  ಬಿ.ಯು.ಎಂ.ಎಸ್,  ಬಿ.ಡಿ.ಎಸ್,  ಬಿ.ಎ.ಎಂ.ಎಸ್, ಬಿ.ಹೆಚ್.ಎಂ.ಎಸ್,  ಎಂ.ಸಿ.ಎ, ಎಂ.ಎಸ್(ಅಗ್ರಿ). ಮುಂತಾದ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ವಾರ್ಷಿಕ ಶೇ. ರೂ.2 ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ ರೂ.1 ಲಕ್ಷಗಳ ಸಾಲ ಮಂಜೂರು ಮಾಡಲಾಗುವುದು.
     ಪ್ರಸಕ್ತ ಸಾಲಿಗೆ ಸಾಲ ಪಡೆಯಬಯಸುವ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ (ವಿಶ್ವಕರ್ಮ ಮತ್ತು ಉಪ ಜಾತಿಗಳ ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ), ಪ್ರ-3ಎ ಮತ್ತು ಪ್ರ-3ಬಿ ಗೆ ಸೇರಿದ ವಿದ್ಯಾರ್ಥಿಗಳು ಸಿ.ಇ.ಟಿ ಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರುಮಾಡಿ ಸಿ.ಇ.ಟಿ ಗೆ ಜಮಾ ಮಾಡಲಾಗುವುದು.
    ಸಾಲ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ರೂ.3.5 ಲಕ್ಷ ಮೀರಿರಬಾರದು.  ಅರ್ಜಿಗಳನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿ ಅಥವಾ ನಿಗಮದ ವೆಬ್‍ಸೈಟ್ www.karnataka.gov.in/dbcdc ನಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಮೇ.20 ರೊಳಗಾಗಿ ನಿಗಮದ ಜಿಲ್ಲಾ ಕಛೇರಿಗೆ ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಮತ್ತು ಅಪೂರ್ಣ ದಾಖಲಾತಿಗಳೊಂದಿಗೆ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ:08539-221847 ಕ್ಕೆ ಸಂಪರ್ಕಿಸಬಹುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Friday, 29 April 2016

ಅಂಗನವಾಡಿಗೆ ಶೌಚಾಲಯ ಕಡ್ಡಾಯ, ಅಡ್ಡಿಗಳಿದ್ದಲ್ಲಿ ನಿವಾರಿಸಿ: ಉಮಾಶ್ರೀ ಸೂಚನೆ

ಕೊಪ್ಪಳ ಏ. 29 (ಕರ್ನಾಟಕ ವಾರ್ತೆ): ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಇರುವುದು ಕಡ್ಡಾಯವಾಗಿದ್ದು, ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಿಸಲು, ಯಾವುದೇ ಅಡ್ಡಿಗಳು ಬಂದಲ್ಲಿ, ಸ್ಥಳೀಯವಾಗಿ ಅದನ್ನು ನಿವಾರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಉಮಾಶ್ರೀ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ 1803 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.  ಈ ಪೈಕಿ 1105 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇದೆ.  ಇದುವರೆಗೂ 597 ಅಂಗನವಾಡಿ ಕೇಂದ್ರಗಳಿಗೆ ಮಾತ್ರ ಶೌಚಾಲಯ ಸೌಲಭ್ಯ ಇದೆ.  ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ಇರುವುದು ಕಡ್ಡಾಯವಾಗಿದೆ ಎಂದು ಸಚಿವರಾದ ಉಮಾಶ್ರೀ ಅವರು ಪ್ರಶ್ನಿಸಿದರು.  ಸಭೆಯಲ್ಲಿ ಉಪಸ್ಥಿತರಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪ್ರತಿಕ್ರಿಯಿಸಿ, ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಿಸಲು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳೇ ಅಡ್ಡಿಪಡಿಸುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ಇರುವುದು ಕಡ್ಡಾಯವಾಗಿದೆ.  ಈ ಕುರಿತು ಯಾವುದೇ ಜನಪ್ರತಿನಿಧಿಗಳು, ಅಥವಾ ವ್ಯಕ್ತಿಗಳು ಅಡ್ಡಿಪಡಿಸಿದಲ್ಲಿ, ತಮ್ಮ ಗಮನಕ್ಕೆ ತರಬೇಕು.  ಇಂತಹ ಸಮಸ್ಯೆಗಳು ಇರುವಂತಹ ಅಂಗನವಾಡಿ ಕೇಂದ್ರಗಳ ಪಟ್ಟಿಯನ್ನು ಒದಗಿಸುವಂತೆ ಸಿಡಿಪಿಓ ಗಳಿಗೆ ತಿಳಿಸಿದರು.  ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಇರುವುದು ಕಡ್ಡಾಯವಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳೀಯವಾಗಿ ಸಮಸ್ಯೆಯನ್ನು ಪರಿಹರಿಸುವಂತೆ ಸಚಿವರಾದ ಉಮಾಶ್ರೀ ಅವರು ಜಿ.ಪಂ. ಸಿಇಓ ಅವರಿಗೆ ಸೂಚನೆ ನೀಡಿದರು.
ತೀವ್ರ ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆ : ಜಿಲ್ಲೆಯಲ್ಲಿ 2013-14 ನೇ ಸಾಲಿನಲ್ಲಿ 3019 ಮಕ್ಕಳನ್ನು ತೀವ್ರ ಅಪೌಷ್ಠಿಕ ಮಕ್ಕಳೆಂದು ಗುರುತಿಸಿ, ಅಂತಹ ಮಕ್ಕಳ ಆರೋಗ್ಯ ಸುಧಾರಣೆಗಾಗಿ ವಿಶೇಷ ಪೂರಕ ಪೌಷ್ಠಿಕ ಆಹಾರ ನೀಡುವಂತಹ ಯೋಜನೆಯನ್ನು ಜಾರಿಗೊಳಿಸಲಾಗಿದೆ.  ಆದಾಗ್ಯೂ ತೀವ್ರ ಅಪೌಷ್ಠಿಕ ಮಕ್ಕಳ ಸಂಖ್ಯೆ 2014-15 ರಲ್ಲಿ 2285, 2016 ರ ಮಾರ್ಚ್ ತಿಂಗಳ ಅಂಕಿ-ಅಂಶದಂತೆ 1788 ಇದೆ.  ತೀವ್ರ ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಕಂಡಿಲ್ಲ.  ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಸಮರ್ಪಕವಾಗಿ ಜರುಗುತ್ತಿಲ್ಲ ಎಂಬ ದೂರುಗಳಿವೆ.  ಇದರ ಬಗ್ಗೆ ಇಲಾಖಾ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಎಲ್ಲ ಮಕ್ಕಳ ಆರೋಗ್ಯ ಸುಧಾರಣೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ : ಜಿಲ್ಲೆಯಲ್ಲಿ ನಿವೃತ್ತಿ ಮೂಲಕ ಅಥವಾ ಇತರೆ ಕಾರಣಗಳಿಂದ ತೆರವಾಗುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ, ನಿಗದಿತ ಅವಧಿಯೊಳಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡದ ಕ್ರಮಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನಿವೃತ್ತಿಯಿಂದ ಅಥವಾ ಇತರೆ ಕಾರಣಗಳಿಂದ ತೆರವಾಗುವ ಕನಿಷ್ಟ ಒಂದು ತಿಂಗಳ ಮುನ್ನವೇ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ, ತೆರವಾಗುವ ಹುದ್ದೆಗಳನ್ನು ತಕ್ಷಣವೇ ನೇಮಕ ಆದೇಶ ನೀಡುವಂತೆ ನಿಯಮವಿದೆ.  ಆದರೆ ಜಿಲ್ಲೆಯಲ್ಲಿ ಸಿಡಿಪಿಓ ಗಳು ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ.  ಹೀಗಾಗಿ ಜಿಲ್ಲೆಯಲ್ಲಿ ವಿವಿಧೆಡೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಉಳಿದು, ತೊಂದರೆಯಾಗುತ್ತಿದೆ.  ಜಿಲ್ಲೆಯ ಎಲ್ಲ ಸಿಡಿಪಿಓ ಅವರೊಂದಿಗೆ ಸಭೆ ಕರೆದು, ಅಂಗನವಾಡಿ ಕಾರ್ಯಕರ್ತೆಯರ ನಿವೃತ್ತಿ, ನೇಮಕ ಸೇರಿದಂತೆ ಇತರೆ ವಿಷಯಗಳು ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಅಂಗನವಾಡಿ ವಿದ್ಯುತ್ ಬಿಲ್ ಸಮಸ್ಯೆ : ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಈಗಾಗಲೆ ನೀರಿನ ವ್ಯವಸ್ಥೆಗಾಗಿ ಸಿಂಟೆಕ್ಸ್ ಟ್ಯಾಂಕ್‍ಗಳನ್ನು ಅಳವಡಿಸಿಸಲಾಗಿದೆ.  ಅಲ್ಲದೆ 896 ಅಂಗನವಾಡಿ ಕೇಂದ್ರಗಳಿಗೆ ಫ್ಯಾನ್ ಗಳನ್ನು ಅಳವಡಿಸಲಾಗಿದೆ.  ಆದರೆ 382 ಅಂಗನವಾಡಿ ಕೇಂದ್ರಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಕೆಲವು ಅಂಗನವಾಡಿ ಕೇಂದ್ರಗಳಲ್ಲಿ, ಗ್ರಾ.ಪಂ. ನವರು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು, ಜೆಸ್ಕಾಂ ನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಸಿಡಿಪಿಓ ಗಳು ಸಭೆಗೆ ಮಾಹಿತಿ ನೀಡಿದರು.  ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅಂಗನವಾಡಿ ಕೇಂದ್ರಗಳಿಗೆ ಸಂಬಂಧಿಸಿದ ವಿದ್ಯುತ್ ಬಿಲ್ ಪಾವತಿ ಮಾಡದಿರಲು ಕಾರಣಗಳೇನು, ಇದಕ್ಕೆ ಯಾರು ಹೊಣೆ ಎಂಬುದನ್ನು ಪರಿಶೀಲಿಸಿ, ಎಲ್ಲ ಅಂಗನವಾಡಿ ಕೇಂದ್ರಗಳಿಗೆ ತಪ್ಪದೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.  ವಿದ್ಯುತ್ ಬಿಲ್ ಅನ್ನು ಸಮರ್ಪಕವಾಗಿ ನಿಗದಿತ ಅವಧಿಯಲ್ಲಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು.  ಈ ಕುರಿತ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನಿಷ್ಠ ಪದ್ಧತಿಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ : ಜಿಲ್ಲೆಯಲ್ಲಿ ಬಾಲ್ಯವಿವಾಹ, ದೇವದಾಸಿ ಪದ್ಧತಿಯಂತಹ ಅನಿಷ್ಠ ಪದ್ಧತಿಗಳ ಸಂಪೂರ್ಣ ನಿರ್ಮೂಲನೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಇಲಾಖಾ ಅಧಿಕಾರಿಗಳು ಅಲ್ಲದೆ, ಸ್ತ್ರೀಶಕ್ತಿ ಗುಂಪುಗಳ ಮೇಲೆ ಗುರುತರವಾದ ಹೊಣೆಗಾರಿಕೆ ಇದೆ.  ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಇಂತಹ ಅನಿಷ್ಠ ಪದ್ಧತಿಗಳ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಅರಿವು ಮೂಡಿಸುವಲ್ಲಿ ನಿರತರಾಗಬೇಕು.  ಇಂತಹ ಕೆಟ್ಟ ಪದ್ಧತಿಗಳನ್ನು ಸಮಾಜದಿಂದ ಸಂಪೂರ್ಣ ನಿರ್ಮೂಲನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಚಿವರಾದ ಉಮಾಶ್ರೀ ಅವರು ಕರೆ ನೀಡಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಿ.ಎಂ. ವಿಜಯಶಂಕರ್, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ವಿಜಯಪ್ರಕಾಶ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ, ನಿರೂಪಣಾಧಿಕಾರಿ ಮಂಜುನಾಥ್, ಸೇರಿದಂತೆ ಹಲವು ಉಪಸ್ಥಿತರಿದ್ದರು.

ಕರ ಸಂಗ್ರಹಣೆಗೆ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡಬೇಕು- ಸಚಿವ ಖಮರುಲ್ ಇಸ್ಲಾಂ


ಕೊಪ್ಪಳ ಏ. 29 (ಕರ್ನಾಟಕ ವಾರ್ತೆ): ನಗರ ಸ್ಥಳೀಯ ಸಂಸ್ಥೆಗಳು, ಆಸ್ತಿ ಕರ, ನೀರಿನ ಕರ ಸೇರಿದಂತೆ ಇತರೆ ಕರಗಳ ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.  ಈ ಮೂಲಕ ನಗರಗಳ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಬೇಕು ಎಂದು ರಾಜ್ಯ ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
      ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
      ನಗರ ಸ್ಥಳೀಯ ಸಂಸ್ಥೆಗಳು ದೃಢವಾಗಬೇಕಾದರೆ ಮೊದಲು ಆದಾಯ ಮೂಲಗಳು ಗಟ್ಟಿಯಾಗಿರಬೇಕು, ಜಿಲ್ಲೆಯಲ್ಲಿ ಕರವಸೂಲಿ ಪ್ರಮಾಣ ತುಂಬಾ ಕಡಿಮೆಯಿದ್ದು ಕೂಡಲೇ ಕರ ವಸೂಲಿಗೆ ಕಠಿಣ ಜರುಗಿಸಿ ಜಾಹೀರಾತು, ನೀರಿನ ಹಾಗೂ ವಾಣಿಜ್ಯ ತೆರಿಗೆ ವಸೂಲಾತಿ ಮಾಡಲು ಸೂಕ್ತ ಕ್ರಮ ಜರುಗಿಸಬೇಕು.  ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗುವ ಪರಿಸ್ಥಿತಿ ತಲೆದೋರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.  ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಒದಗಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು.  ನೀರಿನ ಸೌಕರ್ಯ ಇಲ್ಲದ ವಾರ್ಡ್‍ಗಳಲ್ಲಿ ಬೋರ್‍ವೆಲ್ ಕೊರೆಯಿಸಿ ನೀರು ಒದಗಿಸಿ ಒಂದು ವೇಳೆ ನೀರು ಬೀಳದಿದ್ದರೆ ನೀರು ಇರುವಂತಹ ವಾರ್ಡ್‍ಗಳಿಂದ ನೀರಿನ ಅಭಾವವಿರುವ ವಾರ್ಡ್‍ಗಳಿಗೆ ನೀರು ಪೂರೈಸುವ ವ್ಯವಸ್ಥೆ ಕೈಗೊಳ್ಳಿ ದುರಸ್ಥಿಯಲ್ಲಿರುವ ಬೋರ್‍ವೆಲ್‍ಗಳನ್ನು ಸರಿ ಮಾಡಿ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಿ ಹಾಗೂ ಈಗಾಗಲೇ ಕೊರೆಯಿಸಿದ ಬೋರ್‍ವೆಲ್‍ಗಳಿಗೆ ಮೋಟರ್ ಅಳವಡಿಸಿ ಸಾರ್ವಜನಿಕರಿಗೆ ತ್ವರಿತವಾಗಿ ನೀರು ಒದಗಿಸಿಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
    ಬೇಸಿಗೆ ಹಾಗೂ ಬರದಿಂದಾಗಿ ಅಂತರ್‍ಜಲ ಕುಸಿದಿದ್ದು ಖಾಸಗಿ ಬೋರ್‍ವೆಲ್ ಮೂಲಕ ನೀರು ಪಡೆದು ಒದಗಿಸುವ ವ್ಯವಸ್ಥೆ ಕೈಗೊಳ್ಳಬೇಕು ತೀವ್ರ ನೀರಿನ ಸಮಸ್ಯೆ ಎದುರಿಸುವ ವಾರ್ಡ್‍ಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಿರೆಂದು ಹೇಳಿದರು.
     ಎಸ್‍ಎಫ್‍ಸಿ  ಅನುದಾನದಲ್ಲಿ ಪ.ಜಾತಿ ಹಾಗೂ ಪ.ಪಂಗಡದ ವಿಕಲಚೇನರಿಗೆ ತ್ರಿಚಕ್ರ ಮೋಟಾರು ವಾಹನ ಒದಗಿಸಲು ಸುಕ್ತ ಕ್ರಮ ಕೈಗೊಳ್ಳಬೇಕೆಂದು ಸಚಿವ ಖಮರುಲ್ ಇಸ್ಲಾಂ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
      ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರಮೇಶ್, ನಗರಸಭೆಗಳ ಪೌರಾಯುಕ್ತರು, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕುಡಿಯುವ ನೀರಿನ ದೂರುಗಳಿಗೆ ತಕ್ಷಣ ಸ್ಪಂದಿಸಲು- ಸಚಿವ ಎಚ್.ಕೆ. ಪಾಟೀಲ್ ತಾಕೀತುಕೊಪ್ಪಳ ಏ. 29 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿರುವ ಕುಡಿಯುವ ನೀರಿನ ಸಹಾಯವಾಣಿಗೆ ಬರುವಂತಹ ದೂರುಗಳಿಗೆ, ದೂರು ಸ್ವೀಕೃತಿಯಾದ 08 ಗಂಟೆಗಳ ಒಳಗಾಗಿ, ಸಮಸ್ಯೆ ಪರಿಹರಿಸಬೇಕು.  ಸಮಸ್ಯೆ ತೀವ್ರವಾಗಿದ್ದಲ್ಲಿ, ತಕ್ಷಣದಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಪ್ರಾರಂಭಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

     ಕಲಬುರಗಿ ವಿಭಾಗಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಬರಪೀಡಿತ ಪ್ರದೇಶಗಳ ಅಧ್ಯಯನ ಮತ್ತು ಬರ ನಿರ್ವಹಣೆಯ ಸಚಿವ ಸಂಪುಟ ಉಪ ಸಮಿತಿ, ಶುಕ್ರವಾರದಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ಜನರು ತೀವ್ರ ಆತಂಕಗೊಂಡಿದ್ದು, ನೀರಿನ ಸಮಸ್ಯೆಯನ್ನು ಎದುರಿಸುವ ಸ್ಥಿತಿ ತಲೆದೋರಿದೆ.  ಮಳೆಗಾಲ ಪ್ರಾರಂಭ ಆಗುವವರೆಗೂ, ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವುದು, ಜಿಲ್ಲಾ ಆಡಳಿತದ ಬದ್ಧತೆಯಾಗಿದೆ.  ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಅನುಕೂಲವಾಗುವಂತೆ ಈಗಾಗಲೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿಗಳನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಕೇಂದ್ರಗಳಿಗೆ ಬರುವ ದೂರುಗಳಿಗೆ, ದೂರು ಸ್ವೀಕೃತಿಯಾದ 08 ಗಂಟೆಯ ಒಳಗಾಗಿ, ಸ್ಪಂದಿಸುವ ಕಾರ್ಯ ಆಗಬೇಕು.  ಅಲ್ಲದೆ ಸಮಸ್ಯೆ ಪರಿಹರಿಸಬೇಕು.  ಯಾವುದೇ ಜಲಮೂಲದಿಂದ ನೀರು ಪೂರೈಕೆ ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ, ತಕ್ಷಣದಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಆಗಲೇಬೇಕು.   ಎಲ್ಲ ಗ್ರಾಮಗಳಿಗೂ 2017 ರ ಮಾರ್ಚ್ ಒಳಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಇದಕ್ಕಾಗಿ ಅಗತ್ಯ ಅನುದಾನವನ್ನು ಒದಗಿಸಲು ಜಿಲ್ಲೆಯ ಎಲ್ಲ ಶಾಸಕರೂ ಸಹ ಉತ್ಸುಕವಾಗಿದ್ದು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಶಾಸಕರುಗಳೊಂದಿಗೆ ಸಮಾಲೋಚಿಸಿ, ಯೋಜನೆ ಅನುಷ್ಠಾನಗೊಳಿಸಿದಲ್ಲಿ, ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿದಂತಾಗುತ್ತದೆ ಎಂದು ಸಚಿವರು ಸೂಚನೆ ನೀಡಿದರು. 
     ಸಭೆಯಲ್ಲಿ ಭಾಗವಹಿಸಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ ತಾಲೂಕಿನಲ್ಲಿ ಸದ್ಯ 105 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅಗತ್ಯವಿರುವ ಶೇ. 50 ರಷ್ಟು ಅನುದಾನವನ್ನು ತಾವು ಒದಗಿಸಲು ಸಿದ್ಧರಿದ್ದು, ತಕ್ಷಣದಿಂದಲೇ, ಉಳಿದ ಅನುದಾನವನ್ನು ಒದಗಿಸಿದಲ್ಲಿ ಜನರಿಗೆ ನೀರು ಪೂರೈಕೆಗೆ ಅನುಕೂಲವಾಗಲಿದೆ.  ಈ ನಿಟ್ಟಿನಲ್ಲಿ ಸಚಿವರು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
     ಉದ್ಯೋಗಖಾತ್ರಿ ಯೋಜನೆಯಡಿ ಬರೀ ಕೆರೆಗಳ ಹೂಳೆತ್ತುವುದು, ಸಾಮೂಹಿಕ ಕಾಮಗಾರಿಗಳಿಗೆ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವುದು ಅಷ್ಟೇ ಅಲ್ಲ.  ಈ ಯೋಜನೆಯಡಿ ದನದ ದೊಡ್ಡಿ ನಿರ್ಮಿಸಿಕೊಳ್ಳುವುದು, ಶೌಚಾಲಯ ನಿರ್ಮಾಣ ಸೇರಿದಂತೆ ಹಲವಾರು ವಯಕ್ತಿಕ ಕಾಮಗಾರಿಗಳಿಗೂ ಅವಕಾಶವಿದೆ.  ಇದರ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ನೀಡಿ, ಹೆಚ್ಚು, ಜನರಿಗೆ ಉದ್ಯೋಗ ಕಲ್ಪಿಸಬೇಕು.  ಉದ್ಯೋಗಖಾತ್ರಿ ಯೋಜನೆಯ ಬಗ್ಗೆ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ವಿಶ್ವಾಸಾರ್ಹತೆ ಮೂಡುವಂತೆ ಮಾಡಿ ಎಂದು ಸಚಿವರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು,  ಜಿಲ್ಲೆಯಲ್ಲಿ ಈ ವರ್ಷ ಈಗಾಗಲೆ 1. 4 ಲಕ್ಷ ಮಾನವ ದಿನಗಳನ್ನು ಸೃಜಿಸಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗಿದ್ದು, ನಿಗದಿತ ಅವಧಿಯೊಳಗೆ ಕೂಲಿ ಹಣ ಪಾವತಿಗೂ ಕ್ರಮ ಕೈಗೊಳ್ಳಲಾಗಿದೆ.  ಯೋಜನೆಯಡಿ ಈ ವರ್ಷ 11. 63 ಕೋಟಿ ರೂ. ವೆಚ್ಚವಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಮೇವು ಸಾಗಾಣಿಕೆ ವೆಚ್ಚ ಭರಿಸುವ ಬಗ್ಗೆ ಪರಿಶೀಲಿಸಿ : ಜಿಲ್ಲೆಯಲ್ಲಿ ಜಾನುವಾರುಗಳ ರಕ್ಷಣೆಗಾಗಿ ಈಗಾಗಲೆ 06 ಗೋಶಾಲೆಗಳನ್ನು ಪ್ರಾರಂಭಿಸಲಾಗಿದೆ.  ಅಗತ್ಯವಿರುವೆಡೆ ಗೋಶಾಲೆ ತೆರೆಯಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.  04 ಮೇವು ಬ್ಯಾಂಕ್‍ಗಳನ್ನು ಸ್ಥಾಪಿಸಿ, ಈವರೆಗೆ 75 ಟನ್ ಮೇವು ದಾಸ್ತಾನು ಮಾಡಿ, ಅಗತ್ಯಕ್ಕನುಗುಣವಾಗಿ ಗೋಶಾಲೆಗಳಿಗೆ ಮೇವು ಪೂರೈಸಲಾಗುತ್ತಿದೆ.  ಮೇವು ಬ್ಯಾಂಕ್‍ನಿಂದ ಕಡಿಮೆ ದರದಲ್ಲಿ ರೈತರಿಗೆ ಮೇವು ವಿತರಣೆಗೆ ಸಿದ್ಧವಿದ್ದರೂ, ಯಾವುದೇ ರೈತರು ಖರೀದಿಗೆ ಮುಂದಾಗಿಲ್ಲ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಮಿತಿಯ ಗಮನಕ್ಕೆ ತಂದರು.  ಇದಕ್ಕೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲರು, ರೈತರು ಸಮೀಪದ ತಮ್ಮ ಸಂಬಂಧಿಕರಿಂದ, ಅಥವಾ ಇತರೆ ಬಂಧುಗಳಿಂದ ಮೇವು ಪಡೆದುಕೊಂಡು ಹೋಗಲು ಬಯಸಿದಲ್ಲಿ, ಅಂತಹ ರೈತರಿಗೆ ಎಪಿಎಂಸಿ ಗಳ ಮೂಲಕ ಸಾಗಾಣಿಕೆಯ ವಾಹನದ ಡೀಸೆಲ್ ವೆಚ್ಚ ಭರಿಸಬಹುದಾಗಿದೆ.  ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯ ಸದಸ್ಯರುಗಳೂ ಆಗಿರುವ ರಾಜ್ಯ ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಖಮರುಲ್ ಇಸ್ಲಾಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
     ಸಭೆಯ ನಂತರ ಸಚಿವ ಸಂಪುಟ ಉಪ ಸಮಿತಿಯು ತಾಲೂಕಿನ ಲೇಬಗೇರಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿತು.  ಲೇಬಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆ ಇದ್ದು, ಕೂಡಲೆ ಪರಿಹರಿಸುವಂತೆ ಸಾರ್ವಜನಿಕರು ಸಚಿವರ ತಂಡಕ್ಕೆ ಒತ್ತಾಯಿಸಿದರು.  ಇದಕ್ಕೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲರು, ಶನಿವಾರದಿಂದಲೇ ಟ್ಯಾಂಕರ್ ಮೂಲಕ, ದಿನಕ್ಕೆ ಎರಡು ಟ್ರಿಪ್ ನಂತೆ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.  ಅಲ್ಲದೆ ಇಲ್ಲಿನ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಸಮರ್ಪಕವಾಗಿ ಜರುಗುತ್ತಿಲ್ಲ.  ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.  ಲೇಬಗೇರಿ ವ್ಯಾಪ್ತಿಯ ಗ್ರಾಮ ಲೆಕ್ಕಿಗ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ದೂರುಗಳು ಕೇಳಿ ಬಂದ ಕಾರಣ, ಗ್ರಾಮ ಲೆಕ್ಕಿಗರನ್ನು ಅಮಾನತುಗೊಳಿಸುವಂತೆ ಸಚಿವರು ಸೂಚಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಚಿವ ಸಂಪುಟ ಉಪ ಸಮಿತಿಯ ಸದಸ್ಯರುಗಳೂ ಆಗಿರುವ ರಾಜ್ಯ ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಖಮರುಲ್ ಇಸ್ಲಾಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಗ್ರಾಮ ಭೇಟಿಯಲ್ಲಿ ಪಾಲ್ಗೊಂಡಿದ್ದರು.

Thursday, 28 April 2016

ಉದ್ಯೋಗಖಾತ್ರಿಯಡಿ ಬಿಸರಳ್ಳಿ ಕೂಲಿಕಾರ್ಮಿಕರಿಂದ ಕೆರೆ ಅಭಿವೃದ್ಧಿ ಕಾಮಗಾರಿ


ಕೊಪ್ಪಳ ಏ. 28 (ಕರ್ನಾಟಕ ವಾರ್ತೆ): ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಬಿಸರಳ್ಳಿ ಗ್ರಾಮದ ಕೂಲಿಕಾರರು ನಿರ್ವಹಿಸಿದರು. ಕೆರೆ ಅಭಿವೃದ್ಧಿ ಕಾಮಗಾರಿಯ ಅಂದಾಜು ಮೊತ್ತ ರೂ.40.00 ಲಕ್ಷ ಇದ್ದು 260 ಕೂಲಿಕಾರರು ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್, ಕೊಪ್ಪಳದ ಜಿಲ್ಲಾ ಐ.ಇ.ಸಿ. ಸಂಯೋಜಕ ಶ್ರೀನಿವಾಸ ರವರು ರೋಜಗಾರ್ ದಿವಸವನ್ನು ಆಚರಿಸಿ ಕೂಲಿಕಾರರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಕುರಿತಾಗಿ ವಿವರಿಸಿದರು.
ತಾಲೂಕ ಪಂಚಾಯತ್ ಕಾರ್ಯಾಲಯ ಕೊಪ್ಪಳದ ಸಹಾಯಕ ಕಾರ್ಯದರ್ಶಿಗಳು, ತಾಲೂಕ ಸಾಮಾಜಿಕ ಪರಿಶೋಧನಾ ಸಂಯೋಜಕರು, ತಾಲೂಕ ಐ.ಇ.ಸಿ. ಸಂಯೋಜಕರು, ತಾಂತ್ರಿಕ ಸಹಾಯಕರು, ಸಂಬಂಧಿಸಿದ ಪಂಚಾಯತ್‍ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರ್ಶ ವಿದ್ಯಾಲಯ : ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಪ್ರಕಟ


ಕೊಪ್ಪಳ ಏ.28 (ಕರ್ನಾಟಕ ವಾರ್ತೆ): ಕೊಪ್ಪಳ ಸಮೀಪದ ಟಣಕನಕಲ್ ನಲ್ಲಿರುವ ಆದರ್ಶ ವಿದ್ಯಾಲಯ (RMSA) ದ 2016-17 ನೇ ಸಾಲಿನ 6ನೇ ತರಗತಿ(ಆಂಗ್ಲ ಮಾದ್ಯಮ-ರಾಜ್ಯ ಪಠ್ಯಕ್ರಮ) ಪ್ರವೇಶಕ್ಕಾಗಿ ಆಯ್ಕೆಯಾದ 80 ವಿದ್ಯಾರ್ಥಿಗಳ ಪಟ್ಟಿಯನ್ನು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಆದರ್ಶ ವಿದ್ಯಾಲಯ ಟಣಕನಕಲ್‍ನಲ್ಲಿ ಪ್ರಕಟಿಸಲಾಗಿದೆ.
      ಆಯ್ಕೆಯಾದ ವಿದ್ಯಾರ್ಥಿಗಳು ಮೂಲ ದಾಖಲೆಗಳೊಂದಿಗೆ ಪ್ರವೇಶ ಪಡೆಯಲು ಮೇ.29 ರಿಂದ ಜೂನ್ 10 ರೊಳಗಾಗಿ ಕಛೇರಿ ವೇಳೆಯಲ್ಲಿ ಆದರ್ಶ ವಿದ್ಯಾಲಯ, ಟಣಕನಕಲ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಇಲಾಖೆಯ ವೆಬ್‍ಸೈಟ್  www.schooleducation.kar.nic.in ನಲ್ಲೂ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆದರ್ಶ ವಿದ್ಯಾಲಯದ ಮುಖ್ಯಗುರು ಮಹಾಂತೇಶ ಕೆ. ಮೊ.9739909367 ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾತರಕಿ-ಬನ್ನಿಗೋಳ ಜಾಕ್‍ವೆಲ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ

ಕೊಪ್ಪಳ ಏ. 28 (ಕರ್ನಾಟಕ ವಾರ್ತೆ): ಕೊಪ್ಪಳ ನಗರಕ್ಕೆ ಬೇಸಿಗೆ ಅವಧಿಯಲ್ಲಿ ನೀರು ಸರಬರಾಜಿಗಾಗಿ ತುಂಗಭದ್ರಾ ನದಿಯಲ್ಲಿ ಕಾತರಕಿ ಜಾಕ್‍ವೆಲ್‍ನಿಂದ ಬನ್ನಿಗೋಳ ಜಾಕ್‍ವೆಲ್ ವರೆಗೆ ನೀರು ಸಂಗ್ರಹಿಸಲಾಗುತ್ತಿದ್ದು, ಈ ಪ್ರದೇಶದಲ್ಲಿ ಅಕ್ರಮವಾಗಿ ನೀರು ಬಳಕೆ ಮಾಡುವುದನ್ನು ನಿರ್ಬಂಧಿಸಲು ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
      ಕೊಪ್ಪಳ ನಗರಕ್ಕೆ ಬೇಸಿಗೆ ಅವಧಿಯಲ್ಲಿ ನೀರು ಪೂರೈಕೆ ಮಾಡುವ ಉದ್ದೇಶದಿಂದ ತುಂಗಭದ್ರಾ ನದಿಯಲ್ಲಿ ಕಾತರಕಿ ಜಾಕ್‍ವೆಲ್ ನಿಂದ ಬನ್ನಿಗೋಳ ಜಾಕ್‍ವೆಲ್ ವರೆಗೆ ನೀರು ಸಂಗ್ರಹಿಸಲಾಗುತ್ತಿದ್ದು, ಈ ಪ್ರದೇಶದಲ್ಲಿನ ಸಂಗ್ರಹಿತ ನೀರನ್ನು ಕುಡಿಯುವ ನೀರು ಬಳಕೆಯ ಉದ್ದೇಶಕ್ಕೆ ಹೊರತುಪಡಿಸಿ, ಬೇರೆ ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ.  ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಅಕ್ರಮವಾಗಿ ನೀರನ್ನು ಇತರೆ ಉದ್ದೇಶಕ್ಕೆ ಎತ್ತುವಳಿ ಮಾಡುವುದನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಪಂಪ್‍ಸೆಟ್ ಬಳಸಿ ಅಕ್ರಮವಾಗಿ ನೀರನ್ನು ಎತ್ತುವಳಿ ಮಾಡುವುದು ಕಂಡುಬಂದಲ್ಲಿ, ಪಂಪ್‍ಸೆಟ್ ಸೇರಿದಂತೆ ಎಲ್ಲ ಉಪಕರಣಗಳನ್ನು ಜಪ್ತಿಗೊಳಿಸಲು ಸಂಬಂಧಪಟ್ಟ ಗ್ರಾ.ಪಂ. ವ್ಯಾಪ್ತಿಯ ಪಿಡಿಓ, ಕಂದಾಯ ನಿರೀಕ್ಷಕರು ಜಪ್ತು ಮಾಡುವಂತೆ ಸೂಚನೆ ನೀಡಲಾಗಿದೆ.  ಅಲ್ಲದೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.  ಕೊಪ್ಪಳ ತಹಸಿಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ನಿಯಮಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆಯೂ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Wednesday, 27 April 2016

ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ


ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ತೀವ್ರ ಬರ ಪರಿಸ್ಥಿತಿ ತಲೆದೋರಿದೆ.  ಮಳೆಗಾಲ ಪ್ರಾರಂಭ ಆಗುವವರೆಗೂ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗಬೇಕು.  ಜಾನುವಾರುಗಳ ಹಿತರಕ್ಷಣೆಗೂ ಆದ್ಯತೆ ನೀಡಿ, ಅಗತ್ಯ ಇರುವ ಕಡೆಗಳಲ್ಲಿ ಗೋಶಾಲೆಯನ್ನು ಕೂಡಲೆ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾದ ಬರ ಪರಿಹಾರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದೆ.  ಜಿಲ್ಲೆಯಲ್ಲಿ ಈಗಾಗಲೆ 6 ಗೋಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಇನ್ನೂ ಕೆಲವೆಡೆ ಗೋಶಾಲೆಗಳನ್ನು ಪ್ರಾರಂಭಿಸುವಂತೆ ಶಾಸಕರುಗಳು ಒತ್ತಾಯಿಸಿದ್ದಾರೆ.  ಅಗತ್ಯವಿರುವ ಎಲ್ಲೆಡೆ ಗೋಶಾಲೆಗಳನ್ನು ಪ್ರಾರಂಭಿಸಿ, ಜಾನುವಾರುಗಳಿಗೆ ಸಮರ್ಪಕ ಮೇವು ಮತ್ತು ಕುಡಿಯುವ ನೀರು ಪೂರೈಸಬೇಕು.  ಅದೇ ರೀತಿ ಮೇವು ಸಂಗ್ರಹಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಿರುವುದರಿಂದ ಮೇವು ಬ್ಯಾಂಕ್ ಸ್ಥಾಪಿಸಿ ಮೇವು ದಾಸ್ತಾನು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 129510 ಹೆ. ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ 64. 44 ಕೋಟಿ ರೂ. ಇನ್‍ಪುಟ್ ಸಬ್ಸಿಡಿ ಬಿಡುಗಡೆ ಮಾಡಿತ್ತು.  ಈಗಾಗಲೆ 114015 ರೈತರಿಗೆ 46. 18 ಕೋಟಿ ರೂ. ಇನ್‍ಪುಟ್ ಸಬ್ಸಿಡಿ ಮೊತ್ತ ವಿತರಣೆ ಮಾಡಲಾಗಿದೆ.  ಹಿಂಗಾರು ಹಂಗಾಮಿನಲ್ಲೂ ಮಳೆ ವಿಫಲದ ಕಾರಣ 143989 ಹೆ. ನಷ್ಟು ಹೆಚ್ಚಿನ ಬೆಳೆ ಹಾನಿಯಾಗಿದೆ.  ರಾಜ್ಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಹಾನಿಯಾಗಿದ್ದು, 1416 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 723 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.  ಅನುದಾನ ಬಂದ ಕೂಡಲೆ ಹಿಂಗಾರು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪಾವತಿಸಲು ಕ್ರಮ ವಹಿಸಲಾಗುವುದು.  ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರು :  ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ 06 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, 11 ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು, ನೀರು ಸರಬರಾಜು ಮಾಡಲಾಗುತ್ತಿದೆ, ಮುಂಬರುವ ದಿನಗಳಲ್ಲಿ ಟ್ಯಾಂಕರ್ ಮೂಲಕ ಸಾಗಾಣಿಕೆ ಮಾಡಬಹುದಾದ ಒಟ್ಟು 104 ಗ್ರಾಮಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ ಎಲ್ಲ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಭೆಗೆ ವಿವರಣೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಜನ-ಜಾನುವಾರುಗಳಿಗೆ ನಿಗದಿತ ಪ್ರಮಾಣದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು ಎನ್ನುವುದು ಸರ್ಕಾರದ ನಿಲುವಾಗಿದೆ.  ಕುಡಿಯುವ ನೀರಿನ ವಿಷಯದಲ್ಲಿ ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ.  ಈಗಾಗಲೆ ಎಲ್ಲ ಜಿಲ್ಲೆಗಳಿಗೆ ತುರ್ತು ಕುಡಿಯುವ ನೀರು ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.  ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು.  ಮಳೆಗಾಲ ಪ್ರಾರಂಭವಾಗುವವರೆಗೂ ಸಮರ್ಪಕವಾಗಿ ನೀರು ಪೂರೈಸಿ,  ಜನ-ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ನೀರು ನೀಡಿ,  ಖಾಸಗಿ ಬೋರ್‍ವೆಲ್ ಮೂಲಕವಾದರೂ ಚಿಂತೆಯಿಲ್ಲ, ಅಂತಹವರಿಗೆ ಉದಾರವಾಗಿ ಹಣ ನೀಡಿ, ಟ್ಯಾಂಕರ್ ಮೂಲಕ ನೀರು ಪೂರೈಸುವಾಗಲೂ, ಜನಸಂಖ್ಯೆ ಆಧಾರವಾಗಿ ಟ್ರಿಪ್‍ಗಳ ಸಂಖ್ಯೆಯನ್ನು ಹೆಚ್ಚಿಸಿ ನೀರು ಪೂರೈಸಿ. ಕುಡಿಯುವ ನೀರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈಗಾಗಲೆ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿಗಳಿಗೆ ಬರುವ ದೂರುಗಳಿಗೆ ಕೂಡಲೆ ಸ್ಪಂದಿಸಿ, ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ವಿಷಯದಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ವಹಿಸಿದಲ್ಲಿ ಅಂತಹವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಗಳು ಎಚ್ಚರಿಕೆ ನೀಡಿದರು.
ಉದ್ಯೋಗ ನೀಡಿ :  ಜಿಲ್ಲೆಯಲ್ಲಿ ಸದ್ಯ ಬರ ಪರಿಸ್ಥಿತಿ ಇದ್ದು, ಕೂಲಿ ಕಾರ್ಮಿಕರಿಗೆ ಕೆಲಸದ ಅಗತ್ಯವಿದೆ.  ಜಿಲ್ಲೆಯಲ್ಲಿ ಈ ವರ್ಷ 24 ಲಕ್ಷ ಮಾನವ ದಿನಗಳನ್ನು ಸೃಜಿಸಿ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ.   ಬೇಸಿಗೆಯಲ್ಲಿ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗದ ಅಗತ್ಯತೆ ಇರುತ್ತದೆ.  ಮುಂದೆ ಮಳೆಗಾಲ ಪ್ರಾರಂಭವಾದಾಗ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸಕ್ಕೆ ಕೂಲಿ ಕಾರ್ಮಿಕರ ಬೇಡಿಕೆ ಕಡಿಮೆಯಾಗುತ್ತದೆ.  ಆದರೆ ಈವರೆಗೆ ಕೇವಲ 1. 03 ಲಕ್ಷ ಮಾನವ ದಿನಗಳನ್ನು ಮಾತ್ರ ಸೃಜಿಸಲಾಗಿದೆ.  ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ಸಾಧನೆ ಕಡಿಮೆ ಇದೆ.  ಈ ರೀತಿ ಆದಲ್ಲಿ ಈ ವರ್ಷ ಗುರಿ ಸಾಧನೆ ಕಷ್ಟಸಾಧ್ಯ.  ಜೂನ್ ತಿಂಗಳಿನಾಂತ್ಯದ ವೇಳೆಗೆ ಕನಿಷ್ಟ 3 ಲಕ್ಷ ಮಾನವ ದಿನಗಳನ್ನು ಸೃಜಿಸಿ, ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಬೇಕು.  ಪ್ರತಿ ವಾರಕ್ಕೊಮ್ಮೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು.  ಸಭೆಗೆ ಆಯಾ ಶಾಸಕರನ್ನೂ ಆಹ್ವಾನಿಸಬೇಕು.  ಈಗಾಗಲೆ ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತಿದ ಮಣ್ಣನ್ನು ಸಾಗಿಸಲು ಜೆಸಿಬಿ ಯಂತ್ರ ಬಳಸಲು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ತನಿಖೆಗೆ ಆದೇಶ : ಜಿಲ್ಲೆಯಲ್ಲಿ ಒಟ್ಟು 16 ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದ್ದು, ಈಗಾಗಲೆ 9 ಯೋಜನೆಗಳು ಪೂರ್ಣಗೊಂಡಿವೆ.  02 ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ.  ಉಳಿದ ಇನ್ನೂ 05 ಅನುಷ್ಠಾನಗೊಳ್ಳಬೇಕಿದೆ.  ಆದರೆ ಈಗಾಗಲೆ ಪೂರ್ಣಗೊಂಡಿರುವ ಹಾಗೂ ಪೂರ್ಣಗೊಳ್ಳಬೇಕಿರುವ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ.  ಹಲವು ಯೋಜನೆಗಳಲ್ಲಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಉದ್ದೇಶಿತ ಯೋಜನೆಯಂತೆ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತಿಲ್ಲ ಎಂದು ಯಲಬುರ್ಗಾ ಮತ್ತು ಕೊಪ್ಪಳ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಎಲ್ಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಸಮಗ್ರ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರಿಗೆ ಸೂಚನೆ ನೀಡಿದರು.
ಅಧಿಕಾರಿಗಳಿಗೆ ತಾಕೀತು :  ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಬರ ಪರಿಸ್ಥಿತಿ ನಿವಾರಣೆ ಆಗುವವರೆಗೂ, ಗ್ರಾಮಗಳಿಗೆ ಭೇಟಿ ನೀಡಬೇಕು.  ಅಲ್ಲಿನ ಜನರನ್ನು ಸಂಪರ್ಕಿಸಬೇಕು.  ಜನರೊಂದಿಗೆ ಸಮಾಲೋಚಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಕ್ರಮ ಕೈಗೊಳ್ಳಬೇಕು.  ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕು.  ನಿರ್ಲಕ್ಷ್ಯ, ಅಸಡ್ಡೆತನ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.
ಇಬ್ಬರು ಅಧಿಕಾರಿಗಳ ಅಮಾನತು : ಜಿಲ್ಲೆಯಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ನಡೆಸಿದ ಜಂಟಿ ಸಮೀಕ್ಷೆ ಸಮರ್ಪಕವಾಗಿಲ್ಲ, ಅಧಿಕಾರಿಗಳು ಖುದ್ದು ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಭಾಗವಹಿಸದ ಕಾರಣಕ್ಕೆ ಯಲಬುರ್ಗಾ ತಹಸಿಲ್ದಾರ್ ಶಿವಲಿಂಗಪ್ಪ ಪಟ್ಟದಕಲ್ ಹಾಗು ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ಅವರನ್ನು ಅಮಾನತುಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
     ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಸಂಸದ ಕರಡಿ ಸಂಗಣ್ಣ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‍ಮಟ್ಟು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಉಪಸ್ಥಿತರಿದ್ದರು.

ಬರ ಪರಿಶೀಲನೆಗೆ ಮೇ. 02 ರಿಂದ ಮತ್ತೆ ಪ್ರವಾಸ- ಮುಖ್ಯಮಂತ್ರಿ ಸಿದ್ದರಾಮಯ್ಯ


ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯೂ ಸೇರಿದಂತೆ ಉತ್ತರ ಕರ್ನಾಟಕದ ಒಟ್ಟು 11 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿ ನಿರ್ವಹಣೆ ಪರಿಶೀಲನೆ ನಡೆಸಲಾಗಿದೆ.   ಮೇ. 02 ರಂದು ಬಳ್ಳಾರಿ ಜಿಲ್ಲೆ, ಮೇ. 03 ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

     ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬನ್ನಿಕೊಪ್ಪ ಗ್ರಾಮದಲ್ಲಿ ಬರ ಪರಿಶೀಲನೆಗಾಗಿ ಬುಧವಾರದಂದು ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

     ರಾಜ್ಯದಲ್ಲಿ 42 ವರ್ಷಗಳ ನಂತರ ಭೀಕರ ಬರಗಾಲ ತಲೆದೋರಿದ್ದು, ಕಳೆದೆರಡು ವಾರಗಳಿಂದ ರಾಜ್ಯದ ಒಟ್ಟು 11 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಬರ ಪರಿಶೀಲನೆ ನಡೆಸಲಾಗಿದೆ.  1972-73 ರಲ್ಲಿ ಭೀಕರ ಬರಗಾಲ ಬಂದಿತ್ತು.  ಈಗ ಅಷ್ಟೇ ಭೀಕರ ಬರಗಾಲ ಬಂದಿದೆ.  ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದೆ.  ಉತ್ತರ ಕರ್ನಾಟಕದ 12 ಜಿಲ್ಲೆಗಳು ಮತ್ತು ಮುಂಬೈ ಕರ್ನಾಟಕ ಭಾಗದ 06 ಜಿಲ್ಲೆಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ.  ಮೇ. 02 ರಿಂದ ಮೂರನೆ ಹಂತದಲ್ಲಿ ಬರ ಪರಿಶೀಲನೆಗೆ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಮೇ. 02 ರಂದು ಬಳ್ಳಾರಿ, ಮೇ 03 ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ತೆರಳಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಲಾಗುವುದು.  ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.  ಜನ-ಜಾನುವಾರುಗಳಿಗೆ ಸಮರ್ಪಕ ನೀರು ಪೂರೈಕೆಗೆ ಸರ್ಕಾರ ಬದ್ಧವಾಗಿದೆ.  ರಾಜ್ಯದ 1500 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ.  ಜೂನ್ ನಲ್ಲಿ ಮಳೆ ಬರುವವರೆಗೂ ಸಮರ್ಪಕ ನೀರು ಪೂರೈಸಲು ಸರ್ಕಾರ ಸಿದ್ಧತೆಯನ್ನು ಮಾಡಿಕೊಂಡಿದೆ.  ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ 675 ಕೋಟಿ ರೂ. ಗಳ ಬೃಹತ್ ಯೋಜನೆಗೆ ಈಗಾಗಲೆ ಟೆಂಡರ್ ಕರೆಯಲಾಗಿದೆ.  ಯೋಜನೆ ಜಾರಿಯಾದಲ್ಲಿ ಎರಡೂ ತಾಲೂಕಿನ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುವುದಲ್ಲದೆ, ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.   ದನಕರುಗಳಿಗೆ ಮೇವು, ನೀರಿನ ತೊಂದರೆಯಾಗದಂತೆ ಅಗತ್ಯ ಇರುವ ಕಡೆಗಳಲ್ಲಿ ಗೋಶಾಲೆ ಹಾಗೂ ಮೇವು ಸಂಗ್ರಕ್ಕೆ ಮೇವು ಬ್ಯಾಂಕ್ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಕೆರೆಗಳು ಸಂಪೂರ್ಣ ಒಣಗಿದ್ದು, ಕೆರೆಗಳ ಹೂಳೆತ್ತಿಸಿದಲ್ಲಿ, ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಿದಂತಾಗುತ್ತದೆ.  ಅಲ್ಲದೆ ಕೆರೆಗಳ ಅಭಿವೃದ್ಧಿಯಾಗಿ ಮಳೆಗಾಲದಲ್ಲಿ ಉತ್ತಮ ನೀರು ಸಂಗ್ರಹವಾಗಲಿದೆ.  ಎಷ್ಟೇ ಹಣ ಖರ್ಚಾದರೂ ಚಿಂತೆಯಿಲ್ಲ, ಜನರಿಗೆ ಸಮರ್ಪಕ ಕುಡಿಯುವ ನೀರು ಕೊಡಬೇಕು.  ತಪ್ಪಿದಲ್ಲಿ ಆಯಾ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು.  ಅಧಿಕಾರಿಗಳು ಸಮರೋಪಾದಿಯಲ್ಲಿ ಬರ ಪರಿಸ್ಥಿತಿಯನ್ನು ನಿಭಾಯಿಸಬೇಕು.  ಮೇವು, ನೀರು, ಉದ್ಯೋಗ ಒದಗಿಸುವುದಲ್ಲದೆ, ಆಸ್ಪತ್ರೆಗಳಲ್ಲಿ ಅಗತ್ಯ ಜೀವ ರಕ್ಷಕ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.  ಬರ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ಸಾಕಷ್ಟು ಅನುದಾನವನ್ನು ಈಗಾಗಲೆ ಒದಗಿಸಿದೆ.  ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಸಿದ್ಧವಿದೆ.  ಬರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸುವ ಕಾರ್ಯ ಮಾಡುತ್ತಿದೆ.  ರಾಜ್ಯದ ಯಾವುದೇ ರೈತರು ಆತಂಕ ಪಡುವ ಅಗತ್ಯವಿಲ್ಲ.  ನಿಮ್ಮೊಂದಿಗೆ ನಮ್ಮ ಸರ್ಕಾರ ಇದೆ.  ನಿಮ್ಮ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆಯ ಮಾತುಗಳನ್ನಾಡಿದರು.
     ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಸಂಸದ ಕರಡಿ ಸಂಗಣ್ಣ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

     ಕಾರ್ಯಕ್ರಮದ ನಂತರ ಮುಖ್ಯಮಂತ್ರಿಗಳು ಬನ್ನಿಕೊಪ್ಪ ಗ್ರಾಮದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾಗಿರುವ ಕೃಷಿ ಹೊಂಡ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  ನಂತರ ಕವಲೂರು ಗ್ರಾಮದಲ್ಲಿನ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಡೆಸಿದರು.  ತರುವಾಯ ಅಳವಂಡಿಯಲ್ಲಿ ಪ್ರಾರಂಭಿಸಲಾಗಿರುವ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ರೈತರ ಸಮಸ್ಯೆಗಳನ್ನು ಆಲಿಸಿದರು.

ನಗರ ಸ್ಥಳೀಯ ಸಂಸ್ಥೆ ಚುನಾವಣೆ : ಫಲಿತಾಂಶ ಪ್ರಕಟ

ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ಕಾರಟಗಿ, ಕನಕಗಿರಿ, ಕುಕನೂರು ಮತ್ತು ತಾವರಗೇರಾ ನಗರ ಸ್ಥಳೀಯ ಸಂಸ್ಥೆಗಳಿಗೆ ಏ. 24 ರಂದು ಜರುಗಿದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.
     ಬುಧವಾರದಂದು ಆಯಾ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಜರುಗಿದ ಮತ ಎಣಿಕೆ ನಂತರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ.  ಕಾರಟಗಿ ಪುರಸಭೆಗೆ ಸಂಬಂಧಿಸಿದಂತೆ ಒಟ್ಟು 23 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್-12 ಸ್ಥಾನ ಗಳಿಸಿದ್ದು, ಬಿಜೆಪಿ-10 ಹಾಗೂ ಪಕ್ಷೇತರ-01 ಸ್ಥಾನ ಗಳಿಸಿದ್ದಾರೆ.  ಕನಕಗಿರಿ ಪಟ್ಟಣ ಪಂಚಾಯತಿಯ 17 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-09, ಬಿಜೆಪಿ-05 ಹಾಗೂ ಪಕ್ಷೇತರ-03 ಅಭ್ಯರ್ಥಿಗಳು ವಿಜೇತರಾಗಿದ್ದಾರೆ.  ಕುಕನೂರು ಪಟ್ಟಣ ಪಂಚಾಯತಿಯ 19 ಸದಸ್ಯ ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್-11, ಬಿಜೆಪಿ-08 ಸ್ಥಾನಗಳನ್ನು ಗಳಿಸಿವೆ.  ತಾವರಗೇರಾ ಪಟ್ಟಣ ಪಂಚಾಯತಿಯ 18 ಸದಸ್ಯ ಸ್ಥಾನಗಳ ಪೈಕಿ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು.  ಇಲ್ಲಿನ ಅಂತಿಮ ಫಲಿತಾಂಶ ಕಾಂಗ್ರೆಸ್-10, ಬಿಜೆಪಿ-07, ಪಕ್ಷೇತರ-01 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.  ಒಟ್ಟಾರೆಯಾಗಿ 04 ನಗರ ಸ್ಥಳೀಯ ಸಂಸ್ಥೆಗಳ 77 ಸ್ಥಾನಗಳಿಗೆ ಜರುಗಿದ ಪ್ರಸಕ್ತ ಚುನಾವಣೆಯಲ್ಲಿ  ಕಾಂಗ್ರೆಸ್-42, ಬಿಜೆಪಿ-30 ಹಾಗೂ ಪಕ್ಷೇತರ-05 ಅಭ್ಯರ್ಥಿಗಳು ವಿಜೇತರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರವೀಣಕುಮಾರ್ ಜಿ.ಎಲ್. ತಿಳಿಸಿದ್ದಾರೆ.

Tuesday, 26 April 2016

ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪರಿಷ್ಕøತ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಪರಿಶೀಲನೆಗಾಗಿ ಏ. 27 ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೊಪ್ಪಳ ಜಿಲ್ಲೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿಗಳ ಪರಿಷ್ಕøತ ಪ್ರವಾಸ ಕಾರ್ಯಕ್ರಮ ವಿವರ ಇಂತಿದೆ.
     ಮುಖ್ಯಮಂತ್ರಿಗಳು ಅಂದು ಗದಗ ಜಿಲ್ಲೆಯಲ್ಲಿನ ಬರ ಪರಿಶೀಲನೆ ಕಾರ್ಯಕ್ರಮದ ನಂತರ ಮಧ್ಯಾಹ್ನ 2.30 ಗಂಟೆಗೆ ಗದಗ ನಿಂದ ನಿರ್ಗಮಿಸುವರು.   ನಂತರ ಕೊಪ್ಪಳ ಜಿಲ್ಲೆಗೆ ಆಗಮಿಸಿ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು.  ಸಂಜೆ 4-30 ಗಂಟೆಗೆ ಕೊಪ್ಪಳ ನಗರಕ್ಕೆ ಆಗಮಿಸಿ, ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ   ಕೊಪ್ಪಳ ಜಿಲ್ಲಾ ಪರಿಶೀಲನಾ ಸಭೆ ನಡೆಸುವರು. ತರುವಾಯ ಸಂಜೆ 6-30 ಗಂಟೆಗೆ ಮುಖ್ಯಮಂತ್ರಿಗಳು ಬಳ್ಳಾರಿ ಜಿಲ್ಲೆ ತೋರಣಗಲ್ಲಿನ ಜಿಂದಾಲ್ ಏರ್‍ಸ್ಟ್ರಿಪ್‍ನಿಂದ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಸಚಿವ ಡಾ. ಖಮರುಲ್ ಇಸ್ಲಾಂ ಅವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ರಾಜ್ಯ ಪೌರಾಡಳಿತ, ಸಾರ್ವಜನಿಕ ಉದ್ದಿಮೆಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಡಾ. ಖಮರುಲ್ ಇಸ್ಲಾಂ ಅವರು ಏ. 28 ರಂದು ಯಾದಗಿರಿಯಿಂದ ಹೊರಟು ರಾತ್ರಿ 10-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಏ. 29 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಪೌರಾಡಳಿತ ಇಲಾಖಾ ಅಧಿಕಾರಿಗಳೊಂದಿಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ವ್ಯವಸ್ಥೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು.  ಮಧ್ಯಾಹ್ನ 3 ಗಂಟೆಗೆ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ಬರಪೀಡಿತ ಪ್ರದೇಶಗಳ ಅಧ್ಯಯನ ಮತ್ತು ಬರ ನಿರ್ವಹಣೆ ಪರಿಶೀಲನೆಗಾಗಿ ರಚಿಸಲಾಗಿರುವ ಸಂಪುಟ ಉಪ ಸಮಿತಿಯಿಂದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೈಗೊಳ್ಳಲಾಗುವ ಪ್ರಗತಿ ಪರಿಶಿಲನಾ ಸಭೆಯಲ್ಲಿ ಪಾಲ್ಗೊಳ್ಳುವರು.  ಸಚಿವರು ಅಂದು ಸಂಜೆ 7 ಗಂಟೆಗೆ ಬಳ್ಳಾರಿ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಸಚಿವ ಎಚ್.ಕೆ. ಪಾಟೀಲರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಏಪ್ರಿಲ್ 29 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಏ. 29 ರಂದು ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಮಧ್ಯಾಹ್ನ 03 ಗಂಟೆಗೆ ಬರ ಪ್ರದೇಶಗಳ ಅಧ್ಯಯನ ಮತ್ತು ಬರ ನಿರ್ವಹಣೆಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಭೆ ನಡೆಸುವರು.  ಸಚಿವರು ಸಂಜೆ 7 ಗಂಟೆಗೆ ಬಳ್ಳಾರಿ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ರಾಜ್ಯ ವೈದಕೀಯ ಶಿಕ್ಷಣ ಸಚಿವರು ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರು ಏ. 29 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ ಕಲಬುರಗಿಯಿಂದ ಹೊರಟು,  ಕೊಪ್ಪಳಕ್ಕೆ ಆಗಮಿಸುವರು.  ರಾಜ್ಯದಲ್ಲಿಯ ಬರಪೀಡಿತ ಪ್ರದೇಶಗಳ ಅಧ್ಯಯನ ಮತ್ತು ಬರ ನಿರ್ವಹಣೆಯ ಸಚಿವ ಸಂಪುಟ ಉಪ ಸಮಿತಿಯೊಂದಿಗೆ ಕೊಪ್ಪಳ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಹಾಗೂ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು.  ನಂತರ ಸಚಿವರು ಅದೇ ದಿನ ಕಲಬುರಗಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸಲು ಶೌಚಾಲಯ ಹೊಂದದಿರುವವರ ಸಮೀಕ್ಷೆ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯನ್ನು 2016-17 ನೇ ಸಾಲಿಗೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಉದ್ದೇಶಿಸಲಾಗಿದ್ದು, ಜಿಲ್ಲೆಯಲ್ಲಿ ವೈಯಕ್ತಿಕ ಶೌಚಾಲಯ ಹೊಂದಿದವರ ಹಾಗೂ ಹೊಂದಿಲ್ಲದಿರುವವರ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.
     ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 2016-17 ನೇ ಸಾಲಿಗಾಗಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ನಿರ್ಧರಿಸಿರುವುದರಿಂದ ಜಿಲ್ಲೆಯಲ್ಲಿ ವೈಯಕ್ತಿಕ ಶೌಚಾಲಯ ಹೊಂದಿದವರ ಹಾಗೂ ಹೊಂದಿಲ್ಲದವರ ಮಾಹಿತಿಯನ್ನು ಕ್ರೋಢೀಕರಿಸಬೇಕಾಗಿರುತ್ತದೆ.  ಕೊಪ್ಪಳ, ಕುಷ್ಟಗಿ, ಯಲಬುರ್ಗಾ ತಾಲೂಕುಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚಿಸಲಾಗಿರುವ ಮಹಿಳಾ ಒಕ್ಕೂಟದವರಿಂದ ಸಮೀಕ್ಷೆ ಕೈಗೊಳ್ಳಲಾಗುವುದು.  ಗಂಗಾವತಿ ತಾಲೂಕಿನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಕಾರ್ಯಕರ್ತೆಯರಿಂದ ಸಮೀಕ್ಷೆ ನಡೆಸಲಾಗುವುದು.  ಮೂರು ದಿನಗಳ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಿ ವೈಯಕ್ತಿಕ ಶೌಚಾಲಯ ಹೊಂದಿದವರ ಹಾಗೂ ಹೊಂದಿಲ್ಲದವರ ಸಮೀಕ್ಷಾ ವರದಿಯನ್ನು ಸಲ್ಲಿಸುವಂತೆ ಈಗಾಗಲೆ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಕೊಪ್ಪಳ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಉಮಾಶ್ರೀ ಅವರು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಏ.28 ರಂದು ರಾತ್ರಿ 10 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಏ. 29 ರಂದು ಬೆಳಿಗ್ಗೆ 9 ಗಂಟೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸುವರು.  ಮಧ್ಯಾಹ್ನ 3 ಗಂಟೆಗೆ  ರಾಜ್ಯದಲ್ಲಿಯ ಬರಪೀಡಿತ ಪ್ರದೇಶಗಳ ಅಧ್ಯಯನ ಮತ್ತು ಬರ ನಿರ್ವಹಣೆಯ ಸಚಿವ ಸಂಪುಟ ಉಪ ಸಮಿತಿಯೊಂದಿಗೆ ಕೊಪ್ಪಳ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಹಾಗೂ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು.  ಸಚಿವರು ರಾತ್ರಿ 7 ಗಂಟೆಗೆ ಬಳ್ಳಾರಿ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಏ. 27 ರಂದು ಬೆಳಿಗ್ಗೆ 11-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಮುಖ್ಯಮಂತ್ರಿಗಳೊಂದಿಗೆ ಕೊಪ್ಪಳ ಜಿಲ್ಲಾ ಬರಪೀಡಿತ ಪ್ರದೇಶಗಳ ಭೇಟಿ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು.  ಸಚಿವರು ಅಂದು ರಾತ್ರಿ 7 ಗಂಟೆಗೆ ಕಾರಟಗಿಗೆ ತೆರಳಿ ವಾಸ್ತವ್ಯ ಮಾಡುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಕೊಪ್ಪಳ : ಉದ್ಯೋಗಖಾತ್ರಿಯಡಿ ಕೆರೆ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ ನಿತ್ಯ ಸುಮಾರು 300 ರಿಂದ 500 ಜನ ಕೂಲಿಕಾರರು ಕೂಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕೊಪ್ಪಳ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.
     ಕೊಪ್ಪಳ ತಾಲೂಕಿನ ಅಳವಂಡಿ, ಕವಲೂರು, ವಣಬಳ್ಳಾರಿ, ಬಿಸರಳ್ಳಿ, ಹಿರೇಸಿಂಧೋಗಿ, ಬಹದ್ದೂರಬಂಡಿ, ಬೂದಗುಂಪಾ, ಹಾಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೆ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಉದ್ಯೋಗಖಾತ್ರಿ ಯೋಜನೆಯಡಿ ಪ್ರಾರಂಭಿಸಿದ್ದು,  ಇದರಲ್ಲಿ ನಿತ್ಯ ಸುಮಾರು 300 ರಿಂದ 500 ಜನ ಕೂಲಿಕಾರರು ಕೂಲಿ ಕೆಲಸ ನಿರ್ವಹಿಸುತ್ತಿದ್ದಾರೆ.  ಉಳಿದ ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಬೋರ್‍ವೆಲ್‍ಗಳಿಗೆ ಮರುಪೂರಣ ಘಟಕ ನಿರ್ಮಾಣ, ನಮ್ಮ ಹೊಲ ನಮ್ಮ ರಸ್ತೆ, ಸ್ಮಶಾನ ಅಭಿವೃದ್ಧಿ, ಆಟದ ಮೈದಾನ ಅಭಿವೃದ್ಧಿ, ವೈಯಕ್ತಿಕ ಕಾಮಗಾರಿಗಳಾದ ಎಸ್‍ಸಿ/ಎಸ್‍ಟಿ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಲ್ಲಿ ಸಸಿ ನೆಡುವುದು, ಕುರಿದೊಡ್ಡಿ, ದನದ ದೊಡ್ಡಿ ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ಕೂಲಿ ಕೆಲಸ ನಿರ್ವಹಿಸಲು ಬಯಸುವ ಕೂಲಿಕಾರರು ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಗೆ ಸಂಪರ್ಕಿಸಿ ನಮೂನೆ-6 ರಲ್ಲಿ ಅರ್ಜಿಯೊಂದಿಗೆ ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿ ಸಲ್ಲಿಸಬೇಕು ಎಂದು ಕೊಪ್ಪಳ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ. 4 ರಿಂದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಕೌನ್ಸಿಲಿಂಗ್

ಕೊಪ್ಪಳ ಏ.26(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಮೇ.4 ಹಾಗೂ ಮೇ.5 ರಂದು ಎರಡು ದಿನಗಳ ಕಾಲ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಕೌನ್ಸಿಲಿಂಗ್ ಏರ್ಪಡಿಸಲಾಗಿದೆ.
ವಸತಿ ಶಾಲೆಗಳ ಪ್ರವೇಶಕ್ಕೆ ಏರ್ಪಡಿಸಲಾಗಿದ್ದ ಪ್ರವೇಶ ಪರೀಕ್ಷೆಯಲ್ಲಿ ವಿವಿಧ ಪ್ರವರ್ಗವಾರು ಬಾಲಕ ಮತ್ತು ಬಾಲಕಿಯರು ಪಡೆದಂತಹ ಅಂಕಗಳಲ್ಲಿ ಕಟ್ ಆಫ್ ಅಂಕಗಳನ್ನು ಸಂಬಂಧಿಸಿದ ವಸತಿ ಶಾಲೆಗಳ ಸೂಚನಾ ಫಲಕದಲ್ಲಿ ಈಗಾಗಲೆ ಪ್ರಕಟಿಸಲಾಗಿದೆ.
     ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಗೆ ಮೇ.4 ಮತ್ತು 5 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಕೌನ್ಸಿಲಿಂಗ್ ನಡೆಸಲಾಗುವುದು. ಕೌನ್ಸಲಿಂಗ್‍ಗೆ  ಹಾಜರಾಗಲು ಆಯ್ಕೆಯಾದ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಈಗಾಗಲೇ ಸಂದರ್ಶನ ಪತ್ರ ಕಳುಹಿಸಲಾಗಿದ್ದು, ಸಂದರ್ಶನ ಪತ್ರ ತಲುಪದೇ ಇರುವ ವಿದ್ಯಾರ್ಥಿಗಳು ಕಟ್‍ಆಫ್ ಮಾಕ್ರ್ಸ್ ಹೊಂದಿದ್ದಲ್ಲಿ, ಕೌನ್ಸಲಿಂಗ್ ನಡೆಯುವ ದಿನದಂದು ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08539-220138 ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ ಏ.26(ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಸವಿತಾ ಸಮಾಜದ ವಿದ್ಯಾರ್ಥಿಗಳಿಗಾಗಿ ಪ್ರಸಕ್ತ ಸಾಲಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳ ತರಬೇತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
    ತರಬೇತಿ ಅವಧಿ 4 ವರ್ಷಗಳ ಅವಧಿಯದಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ತರಬೇತಿ ನೀಡಲಾಗುವುದು.   ಹಿಂದುಳಿದ ವರ್ಗಗಳ ಪ್ರವರ್ಗ-2ಎ ರಲ್ಲಿ ಬರುವ ಸವಿತಾ ಸಮಾಜ ಅಥವಾ ಅದರ ಉಪಜಾತಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.  ವಯೋಮಿತಿ 10 ರಿಂದ 15 ವರ್ಷದೊಳಗಿರಬೇಕು.  ವಾರ್ಷಿಕ ಆದಾಯ ರೂ.2 ಲಕ್ಷ ಮೀರಿರಬಾರದು.
     ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇದ್ದು, ವಸತಿಯೇತರ ವಿದ್ಯಾರ್ಥಿಗಳಿಗೂ ಅವಕಾಶವಿರುತ್ತದೆ. ವಿದ್ಯಾರ್ಥಿಗಳಿಗೆ ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಒದಗಿಸಲಾಗುವುದು.  ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಜಮಖಾನ, ಹೊದಿಕೆ ಇತ್ಯಾದಿಗಳನ್ನು ಒದಗಿಸಲಾಗುವುದು. ಆಯ್ಕೆಯಾದ ಪ್ರತಿ ವಿದ್ಯಾರ್ಥಿಗಳಿಗೆ ರೂ.500 ರಂತೆ ಮಾಸಿಕ ಭತ್ಯೆ ನೀಡಲಾಗುವುದು.  ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಮೂಲಕ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳ ತರಬೇತಿ ನೀಡಲಾಗುವುದು.
     ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಪಡದು ಭರ್ತಿ ಮಾಡಿ, ಮೇ.16 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ www.backwardclasses.kar.nic.in ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 25 April 2016

ಅಧಿಕಾರಿಗಳು ವಾರಕ್ಕೆರಡು ಬಾರಿ ಗ್ರಾಮಗಳಿಗೆ ಭೇಟಿ ನೀಡುವುದು ಕಡ್ಡಾಯ- ಶಿವರಾಜ ತಂಗಡಗಿ


ಕೊಪ್ಪಳ ಏ. 25 (ಕರ್ನಾಟಕ ವಾರ್ತೆ): ಬೇಸಿಗೆ ಮುಗಿಯುವವರೆಗೂ ತಹಸಿಲ್ದಾರ್, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಸೇರಿದಂತೆ ಮೂರೂ ಅಧಿಕಾರಿಗಳು ಆಯಾ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಕನಿಷ್ಟ ವಾರಕ್ಕೆರಡು ಬಾರಿ ಭೇಟಿ ನೀಡಿ, ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ, ಉದ್ಯೋಗಖಾತ್ರಿಯಡಿ ಕೆಲಸದ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಬರ ಪರಿಹಾರ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಂಡುಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.  ಗ್ರಾಮಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ, ಸಾರ್ವಜನಿಕರೊಂದಿಗೆ ಸಮಾಲೋಚಿಸಿ, ವಾಸ್ತವತೆಯನ್ನು ತಿಳಿದುಕೊಳ್ಳಬೇಕು.  ಇಲ್ಲದಿದ್ದಲ್ಲಿ, ಸಮಸ್ಯೆಗಳನ್ನು ಅರಿಯಲು ಸಾಧ್ಯವಿಲ್ಲ.  ಆದ್ದರಿಂದ ಬೇಸಿಗೆ ಮುಗಿಯುವವರೆಗೂ ತಹಸಿಲ್ದಾರ್, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಸೇರಿದಂತೆ ಮೂರೂ ಅಧಿಕಾರಿಗಳು ಆಯಾ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಕನಿಷ್ಟ ವಾರಕ್ಕೆರಡು ಬಾರಿ ಭೇಟಿ ನೀಡಿ, ಆ ಗ್ರಾಮದಲ್ಲಿನ ಕುಡಿಯುವ ನೀರು ಪೂರೈಕೆಯ ಮೂಲಗಳ ಸ್ಥಿತಿ-ಗತಿ, ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ, ಉದ್ಯೋಗಖಾತ್ರಿಯಡಿ ಕಾರ್ಮಿಕರಿಗೆ ಕೆಲಸ ಒದಗಿಸುವುದು, ಅಲ್ಲದೆ ಸಕಾಲದಲ್ಲಿ ಹಣ ಪಾವತಿ ಮಾಡುವುದು, ಇತ್ಯಾದಿ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಬೇಕು.  ತೀವ್ರ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳಿಗೆ ಕೇವಲ ಬೋರ್‍ವೆಲ್ ಕೊರೆಯಿಸಿದ ಮಾತ್ರಕ್ಕೆ ಸಮಸ್ಯೆ ಪರಿಹರಿಸಿದಂತೆ ಆಗುವುದಿಲ್ಲ.  ಆ ಬೋರ್‍ವೆಲ್ ನೀರು ಜನರಿಗೆ ತಲುಪುವಂತೆ ಮಾಡಿದಾಗ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯ.  ಗ್ರಾಮ ಪಂಚಾಯತಿ ಪಿಡಿಒ ಗಳು ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತಾಗಬೇಕು ಎಂದು ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಸಂಖ್ಯೆ ಆಧಾರದಲ್ಲಿ ಟ್ಯಾಂಕರ್ ಪೂರೈಸಿ : ಜಿಲ್ಲೆಯ ತೀವ್ರ ಸಮಸ್ಯಾತ್ಮಕ ಗ್ರಾಮಗಳಿಗೆ ಸಮಸ್ಯೆ ಪರಿಹರಿಸುವವರೆಗೂ ತಕ್ಷಣದಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು.  ಸದ್ಯ ಜಿಲ್ಲೆಯಲ್ಲಿ ಯಲಬುರ್ಗಾ ತಾಲೂಕಿನ ಬಿನ್ನಾಳ, ಬೆಣಕಲ್, ಕುಷ್ಟಗಿ ತಾಲೂಕಿನ ರಂಗಾಪುರ, ಬೊಮ್ಮನಾಳ, ಗಂಗಾವತಿ ತಾಲೂಕಿನ ಹೊಸಗುಡ್ಡ, ಕೊಪ್ಪಳ ತಾಲೂಕಿನ ಇಂದಿರಾನಗರ ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.  ಆಯಾ ಗ್ರಾಮದ ಜನಸಂಖ್ಯೆ ಆಧಾರದ ಮೇಲೆ ಟ್ಯಾಂಕರ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು.  ಅಲ್ಲದೆ ಅಂತಹ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆದ್ಯತೆ ಮೇರೆಗೆ ಪ್ರಾರಂಭಿಸಬೇಕು.  ಶುದ್ಧ ಕುಡಿಯುವ ನೀರು ಘಟಕದಿಂದ ಪೂರೈಸಲಾಗುವ ನೀರನ್ನು ಕುಡಿದರೆ ಬಾಯಿ ಹುಣ್ಣು ಆಗುತ್ತದೆ ಎಂಬ ತಪ್ಪು ಕಲ್ಪನೆ ಗ್ರಾಮೀಣ ಜನರಲ್ಲಿ ಮನೆ ಮಾಡಿದೆ.  ಆದರೆ ವಾಸ್ತವವಾಗಿ ಶುದ್ಧ ಕುಡಿಯುವ ನೀರು ಘಟಕದ ಮೂಲಕ ಒಳ್ಳೆಯ ಶುದ್ಧ ನೀರು ಪೂರೈಕೆ ಆಗುತ್ತದೆ.  ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೋಶಾಲೆಗಳನ್ನು ಕೂಡಲೆ ಪ್ರಾರಂಭಿಸಿ : ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು, ಕೊಪ್ಪಳ ತಾಲೂಕು ಅಳವಂಡಿ, ಗಂಗಾವತಿ ತಾಲೂಕು ಕನಕಗಿರಿ, ಹುಲಿಹೈದರ್, ಕುಷ್ಟಗಿ ತಾಲೂಕಿನ ಕಲಕೇರಿಯಲ್ಲಿ ಗೋಶಾಲೆಗಳನ್ನು ಈಗಾಗಲೆ ಪ್ರಾರಂಭಿಸಿದ್ದು, ಗೋಶಾಲೆಗಳಲ್ಲಿ ಸದ್ಯ 730 ಜಾನುವಾರುಗಳು ಇವೆ.  ಅಲ್ಲದೆ ತಾವರಗೇರಾ, ತಲ್ಲೂರು, ಅಳವಂಡಿ, ಹುಲಿಹೈದರ್‍ನ ಗೋಶಾಲೆಗಳಿಗೆ ಮೇವು ಕತ್ತರಿಸುವ ಯಂತ್ರ ಪೂರೈಕೆ ಮಾಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಜಯರಾಂ ಅವರು ತಿಳಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಲಬುರ್ಗಾ ತಾಲೂಕು ಚಿಕ್ಕೊಪ್ಪ, ಕೊಪ್ಪಳ ತಾಲೂಕು ಇರಕಲ್ಲಗಡ, ಕುಷ್ಟಗಿ ತಾಲೂಕು ತಾವರಗೇರಾ, ಹನುಮನಾಳದಲ್ಲಿ ಕೂಡಲೆ ಗೋಶಾಲೆ ಪ್ರಾರಂಭಿಸಬೇಕು.  ಮುಖ್ಯಮಂತ್ರಿಗಳು ಏ. 27 ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಿ ಬರ ಪರಿಶೀಲನೆ ನಡೆಸಲಿದ್ದು, ಮುಖ್ಯಮಂತ್ರಿಗಳ ಓಲೈಕೆಗಾಗಿಯೇ ಜಾನುವಾರುಗಳನ್ನು ಕರೆತಂದು, ಮತ್ತೆ ಕರೆದುಕೊಂಡು ಹೋಗುವಂತಹ ಕ್ರಮವನ್ನು ಯಾವುದೇ ಅಧಿಕಾರಿಗಳು ಮಾಡಬಾರದು.  ಮುಖ್ಯಮಂತ್ರಿಗಳಿಗೆ ಬರದ ವಾಸ್ತವತೆ ಮತ್ತು ಪರಿಹಾರ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರು : ಯಲಬುರ್ಗಾ ತಾಲೂಕಿನ ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಕೂಡಲೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು.  ಕೊಪ್ಪಳ ನಗರಕ್ಕೆ ನೀರು ಪೂರೈಸಲು ಕಾತರಕಿ ಬಳಿಯ ತುಂಗಭದ್ರಾ ಹಿನ್ನೀರಿನ ಬಳಿ 11 ಬೋರ್‍ವೆಲ್‍ಗಳನ್ನು ಕೊರೆಯಿಸಿದ ಮಾದರಿಯಲ್ಲಿ,  ಹಿರೇಹಳ್ಳ ಹಿನ್ನೀರಿನ ಬಳಿ, ಅಗತ್ಯ ಬೋರ್‍ವೆಲ್‍ಗಳನ್ನು ಕೊರೆಯಿಸಿ, ಈ ಭಾಗದ ಸಮಸ್ಯಾತ್ಮಕ ಗ್ರಾಮಗಳಿಗೆ ನೀರು ಪೂರೈಕೆ ಮಾಡಬೇಕು.  ಜೂನ್ ಅಂತ್ಯದವರೆಗೂ ನೀರು ಪೂರೈಕೆ ಆಗುವ ರೀತಿ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು.  ಕುಷ್ಟಗಿ ತಾಲೂಕು ತಾವರಗೇರಾದ ಬಸವಣ್ಣ ಕ್ಯಾಂಪ್, ಹನುಮಸಾಗರ, ನಿಲೋಗಲ್, ಕೊಪ್ಪಳ ತಾಲೂಕು ಬಹದ್ದೂರಬಂಡಿ, ಕವಲೂರು, ಗಂಗಾವತಿ ತಾಲೂಕಿನ ಜಮಾಪುರ ನಲ್ಲಿ ನೀರಿನ ಸಮಸ್ಯೆ ಇರುವುದಾಗಿ ಗಮನಕ್ಕೆ ಬಂದಿದ್ದು, ಕೂಡಲೆ ಅಲ್ಲಿ ನೀರು ಪೂರೈಸಬೇಕು.  ಕುಡಿಯುವ ನೀರು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯಿಂದ ಸರ್ಕಾರ ವಿನಾಯಿತಿ ನೀಡಿದ್ದು, ಟೆಂಡರ್ ಪ್ರಕ್ರಿಯೆಗೆ ಕಾಯದೆ, ಕೂಡಲೆ ಕಾಮಗಾರಿ ಪ್ರಾರಂಭಿಸಿ, ಜನರಿಗೆ ನೀರು ಒದಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯೋಗಖಾತ್ರಿಯಡಿ ಕೆಲಸ ನೀಡಿ : ಸದ್ಯ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಕಾರ್ಮಿಕರಿಗೆ ಉದ್ಯೋಗದ ಅವಶ್ಯಕತೆ ಹೆಚ್ಚಾಗಿದೆ.  ಜಿಲ್ಲೆಯ ಯಾವುದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಲಿ ಕೆಲಸ ನೀಡಲಿಲ್ಲ ಎಂಬ ದೂರುಗಳು ಬಾರದಂತೆ, ಕೆರೆ ಹೂಳೆತ್ತುವುದು, ಕಾಲುವೆ ಹೂಳೆತ್ತುವುದು ಇಂತಹ ಸಾಮೂಹಿಕ ಉದ್ಯೋಗ ಒದಗುವ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ನೀಡಬೇಕು.  ಮತ್ತು ಕಾರ್ಮಿಕರಿಗೆ ಸಕಾಲಕ್ಕೆ ಹಣ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ. ಕಾರ್ಯನಿವಾಹಕ ಅಧಿಕಾರಿಗಳು, ತಹಸಿಲ್ದಾರರು ಭಾಗವಹಿಸಿದ್ದರು.

Saturday, 23 April 2016

ಕೊಪ್ಪಳ ಜಿಲ್ಲೆ : ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಅಂತಿಮ ಅಧಿಸೂಚನೆ

ಕೊಪ್ಪಳ ಏ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ, ಗಂಗಾವತಿ ಮತ್ತು ಕೊಪ್ಪಳ ತಾಲೂಕಾ ಪಂಚಾಯತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿಯ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
     ಅಂತಿಮ ಅಧಿಸೂಚನೆ ಅನ್ವಯ ಗಂಗಾವತಿ ತಾಲೂಕಾ ಪಂಚಾಯತಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ.  ಕೊಪ್ಪಳ ತಾ.ಪಂ. ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಸಾಮಾನ್ಯ (ಮಹಿಳೆ).  ಕುಷ್ಟಗಿ ತಾಲೂಕಾ ಪಂಚಾಯತಿ ಅಧ್ಯಕ್ಷ- ಪರಿಶಿಷ್ಟ ಜಾತಿ (ಮಹಿಳೆ), ಉಪಾಧ್ಯಕ್ಷ- ಸಾಮಾನ್ಯ.  ಯಲಬುರ್ಗಾ ತಾಲೂಕಾ ಪಂಚಾಯತಿ ಅಧ್ಯಕ್ಷ ಸ್ಥಾನ- ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನ- ಹಿಂದುಳಿದ ವರ್ಗ(ಬ) ಕ್ಕೆ ಮೀಸಲಿರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕುಕನೂರು : ಬಿರು ಬಿಸಿಲಿನ ನಡುವೆಯೂ ತುರುಸಿನ ಮತದಾನ


ಕೊಪ್ಪಳ ಏ. 24 (ಕರ್ನಾಟಕ ವಾರ್ತೆ): ಬಿರು ಬಿಸಿಲಿನ ನಡುವೆಯೂ ಕುಕನೂರು ಪಟ್ಟಣ ಪಂಚಾಯತಿಯ ವಿವಿಧ ವಾರ್ಡುಗಳಲ್ಲಿ ತುರುಸಿನ ಮತದಾನ ನಡೆಯುವುದು ಕಂಡುಬಂದಿತು.
     ಗ್ರಾಮ ಪಂಚಾಯತಿಯಾಗಿದ್ದ ಕುಕನೂರಿಗೆ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರುವ ಅವಕಾಶ ಬಂದಿದ್ದರಿಂದ, ಇದೇ ಮೊದಲ ಬಾರಿಗೆ ಕುಕನೂರು ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರದಂದು ನಡೆಯಿತು.  ನೂತನವಾಗಿ ಮೇಲ್ದರ್ಜೆಗೇರಿರುವ ಕುಕನೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 19 ವಾರ್ಡ್‍ಗಳಿದ್ದು, ಪಟ್ಟಣ ಪಂಚಾಯತಿಗೆ ನೂತನ ಸದಸ್ಯರನ್ನು ಮೊದಲ ಬಾರಿಗೆ ಆಯ್ಕೆ ಮಾಡುವ ಅವಕಾಶ ಮತದಾರರಿಗೆ ಲಭಿಸಿದೆ.  ಪಟ್ಟಣದ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೂ ಉತ್ತಮ ಮತದಾನ ಪ್ರಮಾಣ ದಾಖಲಾಯಿತು.  ಮಧ್ಯಾಹ್ನದ ನಂತರ ತೀವ್ರ ಬಿಸಿಲು ಇರುವುದನ್ನು ಗಮನದಲ್ಲಿರಿಸಿಕೊಂಡ, ಮತದಾರರು, ಮತದಾನ ಪ್ರಾರಂಭವಾದ ಬೆಳಿಗ್ಗೆ 07 ಗಂಟೆಯಿಂದಲೇ ಮತದಾನ ನಡೆಸಲು ಮುಂದಾಗಿದ್ದು ಕಂಡುಬಂತು.  ವಾರ್ಡ್ ಸಂಖ್ಯೆ 04, 06, 10, 14, 15, ಮತ್ತು 16 ರಲ್ಲಿ ಬೆಳಿಗ್ಗೆಯೇ ಉತ್ತಮ ಮತದಾನ ಕಂಡುಬಂದಿತು.  ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೂ, ಬಿರು ಬಿಸಿಲಿನ ನಡುವೆಯೂ ಮತದಾರರು ತುರುಸಿನ ಮತದಾನ ನಡೆಸಿದ್ದು, ಕಂಡುಬಂದಿತು.  ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.   ಯಲಬುರ್ಗಾ ತಾಲೂಕು ಚುನಾವಣಾಧಿಕಾರಿಯೂ ಆಗಿರುವ ತಹಸಿಲ್ದಾರ್ ಪಟ್ಟದಕಲ್ ಹಾಗೂ ಕುಕನೂರು ಪಟ್ಟಣ ಪಂಚಾಯತಿಯ ಚುನಾವಣಾಧಿಕಾರಿಯಾಗಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಅವರು, ಪಟ್ಟಣದ  ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಸುಗಮ ಮತದಾನ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರು.  ಮತಗಳ ಎಣಿಕೆ ಕಾರ್ಯ ಏ. 27 ರಂದು ಯಲಬುರ್ಗಾ ತಾಲೂಕು ತಹಸಿಲ್ದಾರರ ಕಾರ್ಯಾಲಯದಲ್ಲಿ ನಡೆಯಲಿದೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆ : ಮದ್ಯಪಾನ ನಿಷೇಧ ಜಾರಿ

ಕೊಪ್ಪಳ ಏ. 23 (ಕರ್ನಾಟಕ ವಾರ್ತೆ): ನಗರ ಸ್ಥಳೀಯ ಸಂಸ್ಥೆಗಳಾಗಿ ಉನ್ನತೀಕರಿಸಿರುವ ಕಾರಟಗಿ ಪುರಸಭೆ, ಕನಕಗಿರಿ, ತಾವರಗೇರಾ ಮತ್ತು ಕುಕನೂರು ಪಟ್ಟಣ ಪಂಚಾಯತಿಗಳಿಗೆ ಏ. 24 ರಂದು ಚುನಾವಣೆ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಆದೇಶ ಹೊರಡಿಸಿದ್ದಾರೆ.
     ಚುನಾವಣೆ ಮತದಾನ ನಿಮಿತ್ಯ ಏ. 23 ರ ಬೆಳಿಗ್ಗೆ 7 ಗಂಟೆಯಿಂದ ಏ. 24 ರಂದು ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ಅಂಗವಾಗಿ ಏ. 27 ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಗಂಗಾವತಿ, ಯಲಬುರ್ಗಾ, ಕುಷ್ಟಗಿ ತಾಲೂಕು ಕೇಂದ್ರಗಳು ಸೇರಿದಂತೆ ಕಾರಟಗಿ, ಕನಕಗಿರಿ, ಕುಕನೂರು ಮತ್ತು ತಾವರಗೇರಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

97 ವರ್ಷದ ಕಳಕಪ್ಪ ಪುರ್ತಗೇರಿ ಅವರಿಂದ ನೇತ್ರದಾನ : ಸಾವಿನಲ್ಲೂ ಸಾರ್ಥಕತೆ

ಕೊಪ್ಪಳ ಏ. 23 (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕು ಮುಧೋಳ ಗ್ರಾಮದ 97 ವರ್ಷದ ನಿವೃತ್ತ ಶಿಕ್ಷಕ ಕಳಕಪ್ಪ ಪುರ್ತಗೇರಿ ಅವರು ತಮ್ಮ ನೇತ್ರದಾನ ಮಾಡುವ ಮೂಲಕ ಮರಣಾನಂತರವೂ ಸಾರ್ಥಕತೆಯನ್ನು ಮೆರೆದಿದ್ದಾರೆ.
     ಭಾಗ್ಯನಗರ ನಿವಾಸಿಗಳಾಗಿದ್ದ ಕಳಕಪ್ಪ ಕರಿಸಿದ್ದಪ್ಪ ಪುರ್ತಗೇರಿ ಅವರು 97 ವರ್ಷ ವಯೋವೃದ್ಧರಾದರೂ ಕೂಡ ತಮ್ಮ ನೇತ್ರದಾನ ಮಾಡುವ ಮೂಲಕ ಮರಣಾನಂತರವೂ ಕಣ್ಣಿಲ್ಲದ ಎರಡು ಜೀವಗಳಿಗೆ ದೃಷ್ಟಿಯನ್ನು ಒದಗಿಸಿ ಸಾರ್ಥಕತೆ ಮೆರೆದಿದ್ದಾರೆ.  ಕಳಕಪ್ಪ ಅವರು ಕೊಪ್ಪಳದ ಲಯನ್ಸ್‍ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರದಾನದ ಒಪ್ಪಿಗೆ ಪತ್ರವನ್ನು ಈ ಹಿಂದೆಯೇ ನೀಡಿದ್ದರು.  ಕಳೆದ ಏ. 20 ರಂದು ಕಳಕಪ್ಪ ಅವರು ಮೃತಪಟ್ಟ ಹಿನ್ನೆಲೆಯಲ್ಲಿ, ದಿವಂಗತರ ಇಚ್ಛೆಯಂತೆ ಅವರ ಮಕ್ಕಳು, ಕಳಕಪ್ಪ ಅವರ ಎರಡೂ ಕಣ್ಣುಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಮನೋ ವೈದ್ಯ ಕೃಷ್ಣ ವಿ ಓಂಕಾರ್ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿಯ ಎಮ್.ಎಮ್. ಜೋಷಿ ಆಸ್ಪತ್ರೆಗೆ ದಾನ ಮಾಡಿದ್ದಾರೆ.  ಇದರಿಂದಾಗಿ ಕಣ್ಣಿಲ್ಲದ ಎರಡು ಜೀವಗಳಿಗೆ ದೃಷ್ಟಿ ಒದಗಿಸುವ ಸಾರ್ಥಕತೆಯನ್ನು ಮೆರೆದಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಲೋಕೇಶ್ ತಿಳಿಸಿದ್ದಾರೆ.

ಕಲ್ಲತಾವರಗೇರಾ: ಪಂಚಾಯತ್ ರಾಜ್ ದಿವಸ್ ಆಚರಣೆ

ಕೊಪ್ಪಳ ಏ.23 (ಕರ್ನಾಟಕ ವಾರ್ತೆ): ತಾಲೂಕಿನ ಕಲ್ಲತಾವರಗೇರ ಗ್ರಾಮ ಪಂಚಾಯತಿಯಲ್ಲಿ ಇತ್ತೀಚೆಗೆ ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನದಡಿಯಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ ಮಾಡಲಾಯಿತು.
     ಮಾ.21 ರಂದು ಕಲ್ಲತಾವರಗೇರಾ ಗ್ರಾಮದಲ್ಲಿ ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನದಡಿಯಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ ಅಂಗವಾಗಿ ಅಂದು ಗ್ರಾಮದಲ್ಲಿ ಮೇಣದಬತ್ತಿ ಬೇಳಗಿಸುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರೊಂದಿಗೆ ಅಭಿಯಾನದ ಘೋಷಣೆಗಳೊಂದಿಗೆ ಜಾಗೃತಿ ಜಾಥಾ ನಡೆಸಲಾಯಿತು.
     ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಪ್ರಸ್ತುತ ಬರಗಾಲ ಇರುವುದರಿಂದ ಎಲ್ಲರೂ ಉದ್ಯೋಗಖಾತ್ರಿ ಯೋಜನೆಯಡಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕು ಎಂದರು.  ದಿನ ಒಂದಕ್ಕೆ ರೂ.224 ಕೂಲಿ ನಿಗದಿಪಡಿಸಲಾಗಿದ್ದು ಯಾವುದೇ ಕಾರಣಕ್ಕೂ ಗುಳೆ ಹೋಗದೇ ಸ್ಥಳೀಯವಾಗಿಯೇ ಕೆರೆ ಅಭಿವೃದ್ಧಿ, ಆಟದ ಮೈದಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಚೆಕ್ ಡ್ಯಾಂ ನಿರ್ಮಾಣದಂತಹ ಕಾಮಗಾರಿಗಳಲ್ಲಿ ಕೆಲಸ ಪಡೆದು ಆರ್ಥಿಕ ಸದೃಢರಾಗುಂತೆ ತಿಳಿಸಿ, ಕೂಲಿ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.  ಒಂದು ವೇಳೆ ಕೂಲಿ ಹಣ ಜಮಾವಣೆ ಆಗದಿದ್ದಲ್ಲಿ ಪ್ರತಿ ತಿಂಗಳ 2ನೇ ಗುರುವಾದಂದು ನಡೆಯುವ ರೋಜಗಾರ ಸಭೆಯಲ್ಲಿ ಭಾಗವಹಿಸಿ ಕುಂದು-ಕೊರತೆಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಜಮೀನು ರಹಿತ ರೈತರು ವೈಯಕ್ತಿಕ ಕಾಮಗಾರಿಗಳಾದ ದನದ ದೊಡ್ಡಿ, ಕುರಿದೊಡ್ಡಿ ನಿರ್ಮಾಣ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
     ನಂತರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ದೊರೆಯುವ ಸೌಲಭ್ಯ ಕುರಿತ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ವೈಯಕ್ತಿಕ ಶೌಚಾಲಯ ನಿರ್ಮಣಕ್ಕೆ ಪ್ರತಿ ಕುಟುಂಬಕ್ಕೆ ರೂ.12,000 ಹಾಗೂ ಪ.ಜಾ/ಪ.ಪಂ ಕುಟುಂಬಗಳಿಗೆ ರೂ.15,000 ಸಹಾಯಧನ ನಿಗದಿ ಮಾಡಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಂಡು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣ ಮಾಡಲು ಪಣತೊಡಬೇಕೆಂದು ಕರೆ ನೀಡಲಾಯಿತು.
     ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಬಂಡೆಪ್ಪ ಕತ್ತಿ, ಗ್ರಾ.ಪಂ ಸದಸ್ಯರುಗಳಾದ ಅಂಬಣ್ಣ ಮಾದಾಪುರ, ಹಾಲಸ್ವಾಮಿ, ಫಕೀರಪ್ಪ ಕೋರಿ, ಮಾರುತಿ ತಳವಾರ, ತಾಲೂಕ ಎಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶರಣಯ್ಯ ಸಸಿಮಠ, ಕಾರ್ಯದರ್ಶಿ ಸೊಲಬಪ್ಪ ಕಳ್ಳಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ಮಕ್ಕಳ ಹಿತಕ್ಕಾಗಿ ಸರ್ಕಾರ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ- ಕೆ. ರಾಘವೇಂದ್ರ ಹಿಟ್ನಾಳ್


ಕೊಪ್ಪಳ ಏ. 23 (ಕರ್ನಾಟಕ ವಾರ್ತೆ): ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಶಾಲಾ ಮಕ್ಕಳ ಹಿತಕಾಯಲು ಅಕ್ಷರದಾಸೋಹ, ಉಚಿತ ಪುಸ್ತಕ, ಸಮವಸ್ತ್ರ, ಶೂಭಾಗ್ಯ ನಂತಹ ದೂರದೃಷ್ಟಿಯ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ-1098 ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಆಯೋಜಿಸಲಾಗಿದ್ದ ‘ಶಾಲೆ ಕಡೆ ನನ್ನ ನಡೆ’ ವಿಶೇಷ ಜನಾಂದೋಲನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶೈಕ್ಷಣಿಕ ಮುಖ್ಯ ವಾಹಿನಿಗೆ ಸೇರಿಸುವ ಉದ್ದೇಶದಿಂದ ಶಾಲೆ ಕಡೆ ನನ್ನ ನಡೆ ಎನ್ನುವ ವಿನೂತನ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶಿಷ್ಟ ಪ್ರಯೋಗವಾಗಿದೆ.  ಈಗಾಗಲೆ ಸರ್ಕಾರವು ಶಿಕ್ಷಣ ಇಲಾಖೆ ಮುಖಾಂತರ ಶಾಲೆ ಬಿಟ್ಟ ಮಕ್ಕಳಿಗಾಗಿ ‘ಬಾ ಮರಳಿ ಶಾಲೆಗೆ’, ‘ಶಾಲೆಗಾಗಿ ನಾವು-ನೀವು’ ‘ನಲಿ-ಕಲಿ’ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮಕ್ಕಳ ಶಾಲಾ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತಮ ಪಡಿಸಲು ಯೋಜನೆ ರೂಪಿಸಲಾಗಿದ್ದರೂ, ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಗಣನೀಯವಾಗಿದೆ.  ಸರ್ಕಾರ ಉಚಿತ ಶಿಕ್ಷಣ, ಕಡ್ಡಾಯ ಶಿಕ್ಷಣ, ಅಕ್ಷರ ದಾಸೋಹ, ಉಚಿತ ಪಠ್ಯಪುಸ್ತಕ ವಿತರಣೆ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯೂ ಸೇರಿದಂತೆ ಇತ್ತೀಚೆಗೆ ಶೂ-ಭಾಗ್ಯವನ್ನು ಕೂಡ ಜಾರಿಗೊಳಿಸಿದೆ.  ಅದರ ಜೊತೆಗೆ ಬರಪೀಡಿತ ಪ್ರದೇಶದಲ್ಲಿನ ಮಕ್ಕಳ ಹಿತದೃಷ್ಟಿಯಿಂದ ಬೇಸಿಗೆ ರಜೆ ಅವಧಿಯಲ್ಲಿಯೂ ಬಿಸಿಯೂಟ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.  ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಮಾತನಾಡಿ, ಮಕ್ಕಳು ಶಾಲೆಯಿಂದ ಹೊರಗುಳಿಯಲು ಪ್ರಮುಖ ಕಾರಣಗಳು, ಸಮಸ್ಯೆಗಳು  ಎಂಬುದನ್ನು ಗುರುತಿಸಿದಲ್ಲಿ ಮಾತ್ರ ಯೋಜನೆಯ ಸಮರ್ಪಕ ಅನುಷ್ಠಾನ ಸಾಧ್ಯ.  ಈ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಆತ್ಮಸಾಕ್ಷಿಯಿಂದ ಕೂಡಿರಬೇಕು.  ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಚಾಲನೆ ನೀಡಿರುವ ಶಾಲೆ ಕಡೆ-ನನ್ನ ನಡೆ ಜನಾಂದೋಲನ ಯಶಸ್ವಿಗೊಂಡು, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲಿಸುವ ಹಾಗೂ ಹಾಜರಾತಿಯನ್ನು ಉತ್ತಮಪಡಿಸುವ ಕೆಲಸವಾಗಬೇಕು ಎಂದರು.
     ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ರಾಮತ್ನಾಳ ಮಾತನಾಡಿ, ರಾಜ್ಯ, ಜಿಲ್ಲಾ, ತಾಲೂಕು ಮತ್ತು ಪಂಚಾಯತಿ ಮಟ್ಟದ ಸಮಿತಿಗಳು, ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚಿಕೊಂಡು ಮೇ. 28 ರವರೆಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುವುದು.  ಮೇ. 29 ರೊಳಗೆ ಎಲ್ಲಾ ಮಕ್ಕಳನ್ನು ಮುಖ್ಯ ವಾಹಿನಿಗೆ ಸೇರಿಸುವ ಕಾರ್ಯ ಆಗಬೇಕಾಗಿದೆ.  ಜೂ. 12 ರಂದು ನಡೆಯುವ ಬಾಲಕಾರ್ಮಿಕ ನಿರ್ಮೂಲನಾ ದಿನಾಚರಣೆಯಂದು, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆ ಎಂದು ಘೋಷಿಸುವಂತಾಗಲು ಎಲ್ಲರು ಪ್ರಯತ್ನಿಸೋಣ ಎಂದು ಕರೆ ನೀಡಿದರು.
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹನುಮಂತಪ್ಪ ಬಿಜಕಲ್, ಸಿಡಿಪಿಓ ಮಂದಾಕಿನಿ, ಯುನಿಸೆಫ್ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಮುಂತಾದವರು ಉಪಸ್ಥಿತರಿದ್ದರು.  ಮುನಿರಾಜ್ ಸ್ವಾಗತಿಸಿದರು, ಮಕ್ಕಳ ಸಹಾಯವಾಣಿಯ ಶರಣಪ್ಪ ವಂದಿಸಿದರು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮಹಾಲಿಂಗಪ್ಪ ನಿರೂಪಸಿದರು. 
     ಕಾರ್ಯಕ್ರಮಕ್ಕೂ ಮುನ್ನ ವಿವಿಧ ಇಲಾಖೆಗಳು, ಆಟೋ ಚಾಲಕರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ನಗರದ ಗವಿಮಠ ಆವರಣದಲ್ಲಿ ಚಾಲನೆ ನೀಡಿದರು.  ಜಾಗೃತಿ ಜಾಥಾ ಗವಿಮಠ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಸಾಹಿತ್ಯ ಭವನ ಮಾರ್ಗದಲ್ಲಿ ಸಂಚರಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು.  ನಗರದ ನೂರಾರು ಆಟೋಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಜೀವಂತ ಪ್ರಮಾಣಪತ್ರ ಸಲ್ಲಿಸಲು ಸೂಚನೆ

ಕೊಪ್ಪಳ ಏ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮಾಸಾಶನ ಪಡೆಯುತ್ತಿರುವ ಕಲಾವಿದರು, ಸಾಹಿತಿಗಳು ಆಯಾ ತಾಲೂಕು ತಹಸಿಲ್ದಾರರಿಂದ ಜೀವಂತ ಪ್ರಮಾಣ ಪತ್ರವನ್ನು ಪಡೆದು, ಮಾಸಾಶನ ಪಡೆಯುತ್ತಿರುವ ಆಯಾ ಖಜಾನೆ ಇಲಾಖೆ ಕಚೇರಿಗೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸೂಚನೆ ನೀಡಿದೆ. 
     ಮಾಸಾಶನ ಪಡೆಯುತ್ತಿರುವ ಕಲಾವಿದರು, ಸಾಹಿತಿಗಳು ತಮ್ಮ ಜೀವಂತ ಪ್ರಮಾಣಪತ್ರವನ್ನು ಸಂಬಂಧಪಟ್ಟ ಖಜಾನೆ ಅಧಿಕಾರಿಗಳಿಗೆ ಏ. 25 ರೊಳಗಾಗಿ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ, ಏ. 23 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಏ. 24 ರಂದು ಬೆಳಿಗ್ಗೆ 10-25 ಗಂಟೆಗೆ ಗಂಗಾವತಿ ತಾಲೂಕು ಶ್ರೀರಾಮನಗರಕ್ಕೆ ಆಗಮಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸುವರು.  ಸಂಜೆ 6 ಗಂಟೆಗೆ ಕಾರಟಗಿಗೆ ತೆರಳಿ ವಾಸ್ತವ್ಯ ಮಾಡುವರು.  ಏ. 25 ರಂದು ಮಧ್ಯಾಹ್ನ 12 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಜಿಲ್ಲೆಯಲ್ಲಿನ ಕುಡಿಯುವ ನೀರು ಹಾಗೂ ಬರ ಪರಿಹಾರ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು.  ಸಚಿವರು ಸಂಜೆ 5 ಗಂಟೆಗೆ ಕಾರಟಗಿಗೆ ತೆರಳಿ ವಾಸ್ತವ್ಯ ಮಾಡುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Friday, 22 April 2016

ಅಗತ್ಯ ಕಂಡುಬಂದಲ್ಲಿ ಖಾಸಗಿ ಬೋರ್‍ವೆಲ್‍ಗಳಿಂದ ನೀರು ಪೂರೈಸಲು ಡಿ.ಸಿ. ಕನಗವಲ್ಲಿ ಸೂಚನೆ

ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ನೀರಿನ ಕೊರತೆ ಕಂಡುಬರುವ ಗ್ರಾಮಗಳಲ್ಲಿ, ಅಗತ್ಯ ಕಂಡುಬಂದಲ್ಲಿ, ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು, ಜನರಿಗೆ ಸಮರ್ಪಕ ನೀರು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಬರ ಪರಿಸ್ಥಿತಿ ಪರಿಶೀಲನೆ ಸಂಬಂಧ ಕುಷ್ಟಗಿ ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಬೇಸಿಗೆ ತಿಂಗಳುಗಳಾದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡುಬರುವ ಸಾಧ್ಯತೆ ಇರುತ್ತದೆ.  ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳ ಕುಡಿಯುವ ನೀರಿನ ಮೂಲಗಳಾದ ಬೋರ್‍ವೆಲ್‍ಗಳು, ಕಿರು ಕುಡಿಯುವ ನೀರಿನ ಘಟಕಗಳು ಸೇರಿದಂತೆ ಖಾಸಗಿ ಬೋರ್‍ವೆಲ್‍ಗಳ ಬಗ್ಗೆಯೂ ಮಾಹಿತಿ ತಯಾರಿಸಿ ಇಟ್ಟುಕೊಳ್ಳಬೇಕು.  ಸರ್ಕಾರಿ ಬೋರ್‍ವೆಲ್‍ಗಳಲ್ಲಿ ಜಲಮೂಲ ಕಡಿಮೆಯಾದಲ್ಲಿ ಖಾಸಗಿ ವ್ಯಕ್ತಿಗಳಿಂದ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ನೀರು ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಈ ರೀತಿ ಪಡೆದ ಬೋರ್‍ವೆಲ್‍ಗಳಿಗೆ ಬಾಡಿಗೆ ಹಣ ಪಾವತಿಸಲು ಜಿಲ್ಲಾಡಳಿತದಲ್ಲಿ ಸಾಕಷ್ಟು ಅನುದಾನ ಲಭ್ಯವಿದೆ.  ಈ ಅನುದಾನದಿಂದ ಸಕಾಲದಲ್ಲಿ ಬಾಡಿಗೆ ಪಾವತಿಸಬಹುದಾಗಿದೆ.  ಕೊಳವೆ ಬಾವಿಗಳಿಂದ ಬಾಡಿಗೆ ಪಡೆದ ಖಾಸಗಿ ವ್ಯಕ್ತಿಗಳಿಗೆ ನಿಯಮಿತವಾಗಿ ಪ್ರತಿ ತಿಂಗಳು ಹಣ ನೀಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ವ್ಯಕ್ತಿಗಳು ನೀರು ನೀಡಲು ಮುಂದೆ ಬರುತ್ತಾರೆ. ಮುಂಬರುವ ದಿನಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಗ್ರಾಮಗಳನ್ನು ಗುರುತಿಸಿ, ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪವಿಭಾಗದ ಎಇಇ ಅವರು, ತಾಲೂಕಿನ ರಂಗಾಪುರ ಮತ್ತು ಬೊಮ್ಮನಾಳ ಗ್ರಾಮಗಳಲ್ಲಿ  ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕುಷ್ಟಗಿ ತಾಲೂಕಿನಲ್ಲಿ ಜಾಗೀರಗುಡದೂರ, ಬಿಜಕಲ್ಲ, ಲಿಂಗದಹಳ್ಳಿ, ಹಿರೇಬನ್ನಿಗೋಳ, ಚಳಗೇರಾ, ಕ್ಯಾದಿಗುಪ್ಪಾ, ಯರಗೇರಾ, ಬಿಳೇಕಲ್ಲ ಗ್ರಾಮ ಪಂಚಾಯತಿಗಳಲ್ಲಿ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಗಳಿಂದ ನೀರು ಪಡೆದು ವಿತರಿಸಲಾಗುತ್ತಿದೆ ಮತ್ತು ಹನಮಸಾಗರಗ್ರಾಮ ಪಂಚಾಯತಿಯವರುತಮ್ಮ ಸ್ವಂತ ಅನುದಾನದಲ್ಲಿ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಯ ನೀರು ಪಡೆದು ವಿತರಿಸುತ್ತಿದ್ದಾರೆ ಎಂದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿ, ಹೆಚ್ಚು, ಮಾನವದಿನಗಳನ್ನು ಸೃಜಿಸಿ, ಕೆಲಸ ಕೇಳುವ ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಕೆಲಸ ನೀಡಬೇಕು.  ಎಲ್ಲ ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಕುಡಿಯುವ ನೀರಿನ ಸಮಸ್ಯೆ ಮತ್ತು ಉದ್ಯೋಗಖಾತ್ರಿ ಯೋಜನೆ ಅನುಷ್ಠಾನದ ಬಗ್ಗೆ ತೀವ್ರ ಎಚ್ಚರಿಕೆ ವಹಿಸಿ ಕಾರ್ಯ ನಿರ್ವಹಿಸಬೇಕು.  ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಪಿಡಿಓ ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಎನ್.ಕೆ. ತೊರವಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಮಾನೆ, ತಹಸಿಲ್ದಾರ್ ವೇದವ್ಯಾಸ ಮುತಾಲಿಕ್, ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಭಾಗವಹಿಸಿದ್ದರು.

ಯಲಬುರ್ಗಾ: ನಿವೇಶನ ರಹಿತರ ಸಮೀಕ್ಷೆಗೆ ಸಹಕರಿಸಲು ಮನವಿ

ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯತಿ ಕಾರ್ಯಾಲಯದ ವತಿಯಿಂದ ನಿವೇಶನ ರಹಿತ ಮತ್ತು ವಸತಿ ರಹಿತರ ಸಮೀಕ್ಷೆಯನ್ನು ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಮುಖ್ಯಾಧಿಕಾರಿ ನಾಗೇಶ್ ಮನವಿ ಮಾಡಿದ್ದಾರೆ.
     2010-11 ನೇ ಸಾಲಿನಲ್ಲಿ ಆಶ್ರಯ ಯೋಜನೆಯಡಿ 5 ಎಕರೆ 32 ಗುಂಎ ಜಮೀನನ್ನು ಖರೀದಿಸಲಾಗಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಗಾಗಿ ಭೂಮಿ ಪರಿವರ್ತಿಸಿಕೊಂಡು ಜಿ+1 ಮನೆ ನಿರ್ಮಾಣ ಮಾಡಿ ಫಲಾನುಭವಿಗಳ ಆಯ್ಕೆಗಾಗಿ ಈ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು.  ಆದರೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಲ್ಲಿ ಬಹಳಷ್ಟು ಗೊಂದಲ ಉಂಟಾಗಿದ್ದರಿಂದ, ಯಲಬುರ್ಗಾ ಪಟ್ಟಣ ಆಶ್ರಯ ಸಮಿತಿಯ ಅಧ್ಯಕ್ಷರೂ ಆಗಿರುವ ಯಲಬುರ್ಗಾ ಶಾಸಕರು, ಈ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು, ಇಲಾಖೆಯಿಂದಲೇ ಪುನಃ ನಿವೇಶನ ರಹಿತರ ಸಮೀಕ್ಷೆ ಮಾಡಿ, ನಿವೇಶನ ರಹಿತರ ಮತ್ತು ವಸತಿ ರಹಿತರ ಪಟ್ಟಿಯನ್ನು ಸಿದ್ಧಪಡಿಸಿ ಏ. 27 ರೊಳಗಾಗಿ ಸಲ್ಲಿಸುವಂತೆ ಸೂಚನೆ ನೀಡಿರುತ್ತಾರೆ.  ಈ ಹಿನ್ನೆಲೆಯಲ್ಲಿ ಯಲಬುರ್ಗಾ ಪಟ್ಟಣ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಅರ್ಹ ನಿವೇಶನ ರಹಿತ ಮತ್ತು ವಸತಿ ರಹಿತ ಫಲಾನುಭವಿಗಳನ್ನು ಗುರುತಿಸುವಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮುಖ್ಯಾಧಿಕಾರಿ ನಾಗೇಶ್ ಮನವಿ ಮಾಡಿದ್ದಾರೆ.

ಯುವಕ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ ಏ.22 (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕಿನ ತಿಪ್ಪರಸನಾಳ ಗ್ರಾಮದ ಈರಣ್ಣ ತಂ.ಭರಮಪ್ಪ (27) ಎಂಬ ಯುವಕ ಕಾಣೆಯಾಗಿದ್ದು, ಯವಕನ ಪತ್ತೆಗೆ ಸಹಕರಿಸುವಂತೆ  ಕುಕನೂರು ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
     ಈರಣ್ಣ ಎಂಬ ಯುವಕ ವೃತ್ತಿಯಿಂದ ಡ್ರೈವರ್ ಆಗಿದ್ದು  ಕಳೆದ 2015 ರ ಜೂ.13 ರಂದು ಮನೆಯಿಂದ ಹೋಗಿದ್ದು ವಾಪಸ್ ಬಂದಿರುವುದಿಲ.್ಲ  ಸಂಬಂಧಿಕರ ಊರುಗಳಲ್ಲಿ ವಿಚಾರಿಸಿದರೂ ಈತನ ಪತ್ತೆ ಆಗಿರುವುದಿಲ್ಲ. ಕಾಣೆಯಾದ ಯುವಕನ ಚಹರೆ ವಿವರ ಇಂತಿದೆ: ಹೆಸರು ಈರಣ್ಣ ತಂ. ಭರಮಪ್ಪ(27), ಜಾತಿ-ವಾಲ್ಮೀಕಿ, ಉದ್ಯೋಗ-ಡ್ರೈವರ್, ಎತ್ತರ 5.4 ಅಡಿ, ಸಾದಾರನ ಮೈಕಟ್ಟು, ಸಾದಾಗೆಂಪು ಮೈಬಣ್ಣ, ದುಂಡುಮುಖ, ತಲೆಯಲ್ಲಿ 2 ಇಂಚು ಕಪ್ಪು ಕೂದಲು, ಬಲಗೈಯಲ್ಲಿ ವಿಜಯ ಎಂದು ಹಚ್ಚೆ ಹಾಕಿಸಿಕೊಂಡ ಗುರುತು ಇದೆ, ಹಸಿರು ಬಣ್ಣದ ಟೀ-ಶರ್ಟ್ ಕಪ್ಪು ಬಣ್ಣದ ಪ್ಯಾಂಟು ಧರಿಸಿದ್ದಾನೆ.  ಕನ್ನಡ ಭಾಷೆ ಮಾತನಾಡುತ್ತಾನೆ.  ಈ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಪ್ಪಳ-08539-230111, ಡಿಎಸ್‍ಪಿ, ಕೊಪ್ಪಳ-08539-230432, ಸಿಪಿಐ ಯಲಬುರ್ಗಾ ವೃತ್ತರವರ ಕಛೇರಿ -08534-220133 ಅಥವಾ ಕುಕನೂರು ಪೊಲೀಸ್ ಠಾಣೆ 08534-230438, 9480803750 ಗೆ  ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸಂಸ್ಥೆ ಚುನಾವಣೆ : ಬಹಿರಂಗ ಪ್ರಚಾರ ಅವಧಿ ನಂತರ ಸಭೆ ಸಮಾರಂಭಕ್ಕೆ ನಿರ್ಬಂಧ

ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕಾರಟಗಿ ಪುರಸಭೆ, ಕುಕನೂರು, ತಾವರಗೇರಾ ಮತ್ತು ಕನಕಗಿರಿ ಪಟ್ಟಣ ಪಂಚಾಯತಿ ಚುನಾವಣೆಗಾಗಿ ಮತದಾನ ಏ. 24 ರಂದು ಜರುಗಲಿದ್ದು, ಬಹಿರಂಗ ಪ್ರಚಾರ ಅವಧಿ ಮುಕ್ತಾಯವಾದ ನಂತರ ಯಾವುದೇ ಪ್ರಚಾರ ಸಭೆ, ಸಮಾರಂಭ ನಡೆಸುವುದಕ್ಕೆ ನಿರ್ಬಂಧ ವಿಧಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
     ಮತದಾನ ಪ್ರಾರಂಭಕ್ಕೆ ನಿಗದಿಪಡಿಸಿದ ಸಮಯದ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷವಾಗಲಿ ಅಥವಾ ಅಭ್ಯರ್ಥಿಗಳಾಗಲಿ ಅಥವಾ ಅವರ ಪರವಾಗಿ ಅವರ ಬೆಂಬಲಿಗರಾಗಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿತ ಸಾರ್ವಜನಿಕ ಸಭೆ ಮತ್ತು ಸಮಾರಂಭ ಏರ್ಪಡಿಸುವಂತಿಲ್ಲ.  ಮತದಾರರಿಗೆ ಮೊಬೈಲ್ ಮೂಲಕ ಎಸ್‍ಎಂಎಸ್ ಸಂದೇಶ ಕಳುಹಿಸುವಂತಿಲ್ಲ.  ರೇಡಿಯೋ, ಟಿ.ವಿ., ಕೇಬಲ್ ಚಾನಲ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವಂತಿಲ್ಲ.  ಮತದಾರರಿಗೆ ವಿಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸುವಂತಿಲ್ಲ.  ಅಲ್ಲದೆ ದಿನಪತ್ರಿಕೆಗಳಲ್ಲಿ ಜಾಹೀರಾತು ಹೊರಡಿಸುವಂತಿಲ್ಲ.  ಈ ಕ್ರಮಗಳನ್ನು ಉಲ್ಲಂಘಿಸಿದವರು ಕಾಯ್ದೆ ಮತ್ತು ಕಾನೂನಿನ ಪ್ರಕಾರ ಶಿಕ್ಷಾರ್ಹರಾಗುತ್ತಾರೆ ಎಂದು ರಾಜ್ಯ ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಿದೆ.

ಕಾರ್ಖಾನೆ ಅಪಘಾತಗಳಿಂದ ಬಾಧಿತರಿಗೆ ಪರಿಹಾರಕ್ಕೆ ಅವಕಾಶ : ವಿವರ ಸಲ್ಲಿಸಲು ಸೂಚನೆ

ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಕಾರ್ಖಾನೆಗಳಿಂದ ಸಂಭವಿಸುವಂತಹ ಅಪಘಾತಗಳಿಂದ ಬಾಧಿತರಾದವರಿಗೆ ಕೇಂದ್ರ ಸರ್ಕಾರದ ಪರಿಸರ ಪರಿಹಾರ ನಿಧಿಯಡಿ (ಇಟಿviಡಿoಟಿmeಟಿಣಚಿಟ ಖeಟieಜಿ ಈuಟಿಜ –ಇಖಈ) ಪರಿಹಾರ ಒದಗಿಸಲು ಅವಕಾಶವಿದ್ದು, ಜಿಲ್ಲೆಯಲ್ಲಿ ಕಾರ್ಖಾನೆಗಳಿಂದ ಸಂಭವಿಸಿದ ಅಪಘಾತಗಳಿಂದ ಬಾಧಿತ ಸಾರ್ವಜನಿಕರುಗಳ ವಿವರವನ್ನು ಕೂಡಲೆ ಒದಗಿಸುವಂತೆ ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
     ಅಪಾಯಕಾರಿ ಕಾರ್ಖಾನೆಗಳ ನೌಕರರು ಮತ್ತು ಬಾಧಿತ ಸಾರ್ವಜನಿಕರಿಗೆ ಕೂಡಲೆ ಪರಿಹಾರ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರದ ಪರಿಸರ ಪರಿಹಾರ ನಿಧಿಯಡಿ 572 ಕೋಟಿ ರೂ. ಗಳು ಲಭ್ಯವಿರುವುದಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.  ಈ ಅನುದಾನವನ್ನು ಕಾರ್ಖಾನೆಗಳಿಂದ ಸಂಭವಿಸುವಂತಹ ಅಪಘಾತಗಳಿಂದ ಬಾಧಿತರಾದವರಿಗೆ ಕೂಡಲೆ ಪರಿಹಾರ ಕಲ್ಪಿಸಿ, ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರಾಜ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಕಾರ್ಯದರ್ಶಿಗಳು ಕೂಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುತ್ತಾರೆ.  ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಖಾನೆಗಳಿಂದ ಸಂಭವಿಸಿದಂತಹ ಅಪಘಾತಗಳಿಂದ ಬಾಧಿತ ಸಾರ್ವಜನಿಕರ ಮಾಹಿತಿಯನ್ನು ಕೂಡಲೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಹಾಯಕ ಆಯುಕ್ತರು, ಜಿಲ್ಲಾ ಪರಿಸರ ಅಧಿಕಾರಿಗಳು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಅಲ್ಲದೆ ತಾಲೂಕು ತಹಸಿಲ್ದಾರರುಗಳಿಗೆ ತಿಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ತಿಳಿಸಿದ್ದಾರೆ.

ಮಹಿಳೆ ಹಾಗೂ ಮಕ್ಕಳ ಬಗ್ಗೆ ಪಾಲಕರು ಕಾಳಜಿ ವಹಿಸಿ-ಕವಿತಾ ಎಸ್ ಉಂಡೋಡಿ


ಕೊಪ್ಪಳ ಏ.22 (ಕರ್ನಾಟಕ ವಾರ್ತೆ): ಐಶಾರಮಿ ಜಗತ್ತಿನಲ್ಲಿಂದು ಹೆಣ್ಣುಮಕ್ಕಳನ್ನು ಮದುವೆಯ ನೆಪದಲ್ಲಿ ದುರ್ಬಳಕೆ ಮಾಡಿಕೊಳ್ಳುವ ಆತಂಕವಿದ್ದು ಪಾಲಕರು ತುಂಬಾ ಎಚ್ಚರದಿಂದ ಇರಬೇಕಾದ ಅಗತ್ಯವಿದೆ ಎಂದು ಕೊಪ್ಪಳದ ಕಿರಿಯ ಸಿವಿಲ್ ನ್ಯಾಯಾಧೀಶರಾದ ಕವಿತಾ ಶಿವರಾಯ ಉಂಡೋಡಿ ಹೇಳಿದರು.

     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ರಕ್ಷಣಾ ಯೋಜನೆ ಯುನಿಸೆಫ್, ದೇವದಾಸಿ ಪುನರ್ವಸತಿ ಯೋಜನೆ, ಹಾಗೂ ಕೌಟುಂಬಿಕ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕೋರ್ಟ್ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಹಾಗೂ ಮಾಜಿ ದೇವದಾಸಿ ಮಹಿಳೆಯರಿಗಾಗಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾನೂನು ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಮದುವೆ ಮಾಡಿಕೊಂಡು ದುಡ್ಡಿನ ಆಸೆಗೆ ಯುವತಿಯರನ್ನು ಹೊರ ದೇಶಗಳಿಗೆ ಸಾಗಿಸುವುದರ ಬಗ್ಗೆ ಮಾಧ್ಯಮಗಲ್ಲಿ ನೋಡುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಮದುವೆ ಮಾಡುವಾಗ ತುಂಬಾ ಜಾಗರೂಕತೆಯಿಂದ ಇರಬೇಕು ವಧು-ವರರ ಪೂರ್ವಾಪರ ತಿಳಿದುಕೊಂಡು ಮದುವೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಮನುಷ್ಯ ಇಂದು ದುಡ್ಡು ಮಾಡುವುದಕ್ಕೆ ಮಕ್ಕಳ ಕಳ್ಳಸಾಗಾಣೆಯಂತಹ ಕೀಳು ಮಟ್ಟಕ್ಕೆ ಇಳಿಯುತ್ತಿರುವುದು.  ಚಾಕಲೇಟ್ ಕೊಡಿಸುವ ಆಸೆ ತೋರಿಸಿ ಮಕ್ಕಳನ್ನ ಕರೆದೊಯ್ದು ಲೈಂಗಿಕ ಶೋಷಣೆ ಎಸಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.  ನಿಮ್ಮ ಮನೆ ಹಾಗೂ ಓಣಿಗಳಲ್ಲಿ ಅಪರಿಚಿತ  ವ್ಯಕ್ತಿಗಳನ್ನ ಕಂಡರೆ ಕೂಡಲೆ ಪೊಲೀಸ್‍ಗೆ ಮಾಹಿತಿ ನೀಡುವುದಲ್ಲದೆ, ನೆರೆಹೊರೆಯವರ ಸಹಾಯ ಪಡೆದು ವಿಚಾರಿಸಿ ಎಚ್ಚರದಿಂದಿರಬೇಕು. ದೇವದಾಸಿ ಮಹಿಳೆಯರಿಗಾಗಿ ಸರಕಾರ ಹಲವಾರು ಯೋಜನೆಗಳನ್ನ ತಂದಿದೆ ದೇವದಾಸಿ ಮಹಿಳೆಯರು ಅದರ ಸದುಪಯೋಗ ಪಡೆದುಕೊಂಡು ಸ್ವಾವಲಂಬನೆಯಿಂದ ಬದುಕನ್ನ ಸಾಗಿಸಬೇಕು ಎಂದು ಕಿರಿಯ ಸಿವಿಲ್ ನ್ಯಾಯಾಧೀಶರಾದ ಕವಿತಾ ಶಿವರಾಯ ಉಂಡೋಡಿ ಅವರು ಹೇಳಿದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ.ಪಾನಘಂಟಿ ಸಾಗಾಣಿಕೆಗೆ ಶೋಷಿತರಾದ ಮಹಿಳೆ ಮತ್ತು ಮಕ್ಕಳು ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಡುವುದನ್ನು ತಡೆಯುವ ಯೋಜನೆಯ ಬಗ್ಗೆ ಕಾನೂನು ಸಲಹೆಗಳನ್ನು ತಿಳಿದುಕೊಂಡು ತಮ್ಮ ಗ್ರಾಮಗಳಲ್ಲಿ ಎಲ್ಲರಿಗೂ ತಿಳಿಸಿ ಅವರಲ್ಲಿಯೂ ಜಾಗೃತಿ ಮೂಡಿಸಿ ಸಮಾಜದ ಪರಿವರ್ತನೆಗೆ ಕೈಜೋಡಿಸಬೇಕೆಂದರು.
     ನಂತರ ಮಹಿಳೆ ಮತ್ತು ಮಕ್ಕಳ ಮಾರಾಟ ಸಾಗಾಣಿಕೆ ತಡೆ ಕುರಿತು, ಹೆಣ್ಣು ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು, ದೇವದಾಸಿ ಪುನರ್ವಸತಿ ಸೌಕರ್ಯಗಳ ಕುರಿತು, ಮತ್ತು ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಕೌಟುಂಬಿಕ ಸಲಹೆ ಕುರಿತು ವಿಷೇಶ ಉಪನ್ಯಾನ ನೀಡಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಕಾರ್ಯಕ್ರಮ ಉದ್ಘಾಟಿಸಿದರು.  ಜಿಲ್ಲಾ ಸರ್ಕಾರಿ ವಕೀಲ ಆಸೀಫ್‍ಅಲೀ,  ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಯು.ಎ.ಮಾಳೆಕೊಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಸುಧಾ.ಎಂ.ಚಿದ್ರಿ, ವಿ.ಎಂಭೂಸನೂರಮಠ, ಯುನಿಸೆಪ್‍ನ ಶಿವರಾಂ, ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಲೈಂಗಿಕ ಕಾರ್ಯಕರ್ತೆಯರು ಹಾಗೂ ಮಾಜಿ ದೇವದಾಸಿ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿಗಳಿಂದ ಏ. 27 ರಂದು ಕೊಪ್ಪಳ ಜಿಲ್ಲೆ ಬರ ಪರಿಶೀಲನೆ

ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಪರಿಶೀಲನೆಗಾಗಿ ಏ. 27 ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೊಪ್ಪಳ ಜಿಲ್ಲೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮುಖ್ಯಮಂತ್ರಿಗಳು ಅಂದು ಗದಗ ಜಿಲ್ಲೆಯಲ್ಲಿನ ಬರ ಪರಿಶೀಲನೆ ಕಾರ್ಯಕ್ರಮದ ನಂತರ ಮಧ್ಯಾಹ್ನ 1 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ಮಧ್ಯಾಹ್ನ 2-30 ಗಂಟೆಗೆ ಕೊಪ್ಪಳ ಜಿಲ್ಲಾ ಪರಿಶೀಲನಾ ಸಭೆ ನಡೆಸುವರು.  ನಂತರ ಕೊಪ್ಪಳ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು.  ತರುವಾಯ ಸಂಜೆ 6-30 ಗಂಟೆಗೆ ಮುಖ್ಯಮಂತ್ರಿಗಳು ಬಳ್ಳಾರಿ ಜಿಲ್ಲೆ ತೋರಣಗಲ್ಲಿನ ಜಿಂದಾಲ್ ಏರ್‍ಸ್ಟ್ರಿಪ್‍ನಿಂದ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಏ. 23 ರಂದು ಕೊಪ್ಪಳದಲ್ಲಿ ‘ಶಾಲೆ ಕಡೆ ನನ್ನ ನಡೆ’ ಜನಾಂದೋಲನ ಕಾರ್ಯಕ್ರಮ

ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಪುನಃ ಶೈಕ್ಷಣಿಕ ಮುಖ್ಯ ವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಶಾಲೆ ಕಡೆ ನನ್ನ ನಡೆ ಜನಾಂದೋಲನ ಕಾರ್ಯಕ್ರಮ ಏ. 23 ರಂದು ಕೊಪ್ಪಳದಲ್ಲಿ ನಡೆಯಲಿದೆ.
     ಕಾರ್ಯಕ್ರಮದ ಅಂಗವಾಗಿ ಜನಾಂದೋಲನ ಜಾಥಾ ಅಂದು ಬೆಳಿಗ್ಗೆ 08 ಗಂಟೆಗೆ ನಗರದ ಗವಿಮಠ ಆವರಣದಿಂದ ಹೊರಟು ಗಡಿಯಾರ ಕಂಬ, ಜವಾಹರ ರಸ್ತೆ ಮಾರ್ಗವಾಗಿ ಸಾಹಿತ್ಯ ಭವನ ತಲುಪಲಿದೆ.  ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಕಾರ್ಯಕ್ರಮ ಉದ್ಘಾಟಿಸುವರು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಕಲಕೇರಿ ಗೋಶಾಲೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕು ಕಲಕೇರಿ ಸಸ್ಯಪಾಲನಾ ಕ್ಷೇತ್ರದಲ್ಲಿ ಪ್ರಾರಂಭಿಸಲಾಗಿರುವ ಗೋಶಾಲೆಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
     ಕಲಕೇರಿಯಲ್ಲಿ ಈಗಾಗಲೆ ಮೇವು ಬ್ಯಾಂಕ್ ಸ್ಥಾಪಿಸಲಾಗಿದ್ದು, ಜಾನುವಾರುಗಳಿಗೆ ಅಗತ್ಯವಿರುವ ಮೇವನ್ನು ದಾಸ್ತಾನು ಮಾಡಲಾಗಿದೆ.  ಕಲಕೇರಿಯಲ್ಲಿ ಪ್ರಾರಂಭಿಸಲಾಗಿರುವ ಗೋಶಾಲೆಯಲ್ಲಿ ಜಾನುವಾರುಗಳಿಗೆ ಅಗತ್ಯ ಮೇವು, ನೀರು, ನೆರಳಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಂಡಿರುವ ಕುರಿತು ಪರಿಶೀಲನೆ ನಡೆಸಿದರು.   ಕುಷ್ಟಗಿ ತಹಸಿಲ್ದಾರ್ ವೇದವ್ಯಾಸ ಮುತಾಲಿಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Thursday, 21 April 2016

ಬಾಲ್ಯ ವಿವಾಹ ನಿಷೇಧ : ಸಾಮೂಹಿಕ ವಿವಾಹ ಆಯೋಜಕರಿಗೆ ಸೂಚನೆ

ಕೊಪ್ಪಳ ಏ. 21 (ಕರ್ನಾಟಕ ವಾರ್ತೆ): ಬರುವ ಮೇ ತಿಂಗಳ 09 ರಂದು ಅಕ್ಷಯ ತೃತೀಯ ಇರುವುದರಿಂದ ಅಂದು, ಹೆಚ್ಚಿನ ಸಂಖ್ಯೆಯಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ವಿವಾಹಗಳು ನಡೆಯುವುದರಿಂದ, ಬಾಲ್ಯ ವಿವಾಹಗಳೂ ಕೂಡ ನಡೆಯುವ ಸಾಧ್ಯತೆ ಇರುತ್ತದೆ.  ಬಾಲ್ಯ ವಿವಾಹ ನಡೆಸುವುದು ಹಾಗೂ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುವುದರಿಂದ, ವಿವಾಹ ಆಯೋಜಕರು, ಸಾಮೂಹಿಕ ವಿವಾಹಗಳ ಆಯೋಜಕರು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು.  ಅಲ್ಲದೆ ನಿಯಮಗಳ ಪಾಲನೆ ಮಾಡಬೇಕು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಸೂಚನೆ ನೀಡಿದ್ದಾರೆ.
     ಮೇ. 09 ರ ಅಕ್ಷಯ ತೃತೀಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ವೈಯಕ್ತಿಕ ವಿವಾಹಗಳು ಮತ್ತು ಸಾಮೂಹಿಕ ವಿವಾಹಗಳು ನಡೆಯುವುದು ಸಾಮಾನ್ಯ.  ಈ ದಿನದಂದು ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿದ್ದು, ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.  ಹಲವು ಅಧಿಕಾರಿಗಳನ್ನು ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಎಂಬುದಾಗಿ ನೇಮಿಸಿದೆ.  ಸಾಮೂಹಿಕ ವಿವಾಹದ ಸಂದರ್ಭದಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ಹಲವು ನಿಯಮಗಳನ್ನು ರೂಪಿಸಲಾಗಿದೆ.  ಸಾಮೂಹಿಕ ವಿವಾಹಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯಗೊಳ್ಳುತ್ತಿದ್ದು, ಇದು ವಿವಾಹದ ಹೆಸರಿನಲ್ಲಿ ದುಂದುವೆಚ್ಚಗಳ ಮೇಲೆ ಕಡಿವಾಣ ಹಾಕುವುದರೊಂದಿಗೆ ಸರಳ ವಿವಾಹಗಳಿಗೆ ಪ್ರೋತ್ಸಾಹ ಮಾಡುತ್ತವೆ.  ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮಗಳನ್ನು ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ದೇವಸ್ಥಾನಗಳು, ಟ್ರಸ್ಟ್‍ಗಳು ಇತ್ಯಾದಿ ಸಂಘಸಂಸ್ಥೆಗಳು ಆಯೋಜಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.  ಸಾಮೂಹಿಕ ವಿವಾಹಗಳಲ್ಲಿ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ತಡೆಗಟ್ಟುವ ದೃಷ್ಟಿಯಿಂದ ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. 
ಸಾಮೂಹಿಕ ವಿವಾಹ ಆಯೋಜಕರಿಗೆ ಸೂಚನೆ : ಸಾಮೂಹಿಕ ವಿವಾಹಗಳ ಆಯೋಜಿಸುವ ಖಾಸಗಿ ಟ್ರಸ್ಟ್‍ಗಳು, ಸಂಘಗಳು, ಸೊಸೈಟಿಗಳು ಮತ್ತು ಖಾಸಗಿ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಸಂಸ್ಥೆಗಳನ್ನು ಜಿಲ್ಲಾ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು.  ನೋಂದಾಯಿಸಿದವರು, ಪ್ರತಿ 5 ವರ್ಷಕ್ಕೊಮ್ಮೆ ನವೀಕರಿಸಬೇಕು.  ಸಾಮೂಹಿಕ ವಿವಾಹ ಆಯೋಜಿಸಲು ಕಡ್ಡಾಯವಾಗಿ ತಹಸಿಲ್ದಾರರಿಂದ ಅನುಮತಿ ಪಡೆದುಕೊಳ್ಳಬೇಕು.  ಅನುಮತಿ ಪಡೆದುಕೊಳ್ಳಲು ವಧು-ವರರ ಭಾವಚಿತ್ರ, ವಯಸ್ಸಿನ ದೃಢೀಕರಣ ಪತ್ರ, ವಾಸಸ್ಥಳ, ಪಡಿತರಚೀಟಿ, ಚುನಾವಣಾ ಗುರುತಿನ ಚೀಟಿ, ತಂದೆ ತಾಯಿ/ಪೋಷಕರಿಂದ ವಧು-ವರರ ವಿವಾಹಯೋಗ್ಯ ವಯಸ್ಸಾಗಿದೆ ಎಂಬ ದೃಢೀಕರಣ ಪತ್ರ ಹಾಗೂ ವಧು-ವರರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.   ಸಾಮೂಹಿಕ ವಿವಾಹ ಆಯೋಜಕರು ವಿವಾಹ ನಡೆಯುವ ಸ್ಥಳದಲ್ಲಿ ಬಾಲ್ಯ ವಿವಾಹ ನಿಷೇಧಕ್ಕೊಳಪಟ್ಟಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂಬ ಪ್ರಚಾರ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.  ಶಿಶು ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಕಡ್ಡಾಯವಾಗಿ ಸಾರ್ವಜನಿಕ ವಿವಾಹ ನಡೆಯುವ ಸ್ಥಳದಲ್ಲಿ ಹಾಜರಿದ್ದು, ಬಾಲ್ಯ ವಿವಾಹ ನಡೆಯದಂತೆ ನೋಡಿಕೊಳ್ಳಬೇಕು.  ವಿವಾಹದ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಕಡ್ಡಾಯವಾಗಿರುತ್ತದೆ.
ಬಾಲ್ಯ ವಿವಾಹ ನಿಷೇಧಾಧಿಕಾರಿಗಳು : ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳು, ಡಿಡಿಪಿಐ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕಾರ್ಮಿಕ ಅಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ಬಿಸಿಎಂ. ಇಲಾಖೆ ಜಿಲ್ಲಾ ಅಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ.  ತಾಲೂಕು ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಕ್ಷಣಾಧಿಕಾರಿ, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ.  ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಓ, ವ್ಯಾಪ್ತಿಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್.  ಗ್ರಾಮ ಮಟ್ಟದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಕಂದಾಯ ನಿರೀಕ್ಷಕರು.  ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಶಾಲಾ ಮುಖ್ಯ ಶಿಕ್ಷಕರು.  ಕಂದಾಯ ನಿರೀಕ್ಷಕರು. ಆರೋಗ್ಯ ನಿರೀಕ್ಷಕರು.  ಕಾರ್ಮಿಕ ನಿರೀಕ್ಷಕರು.  ಪೊಲೀಸ್ ಇನ್ಸ್‍ಪೆಕ್ಟರ್‍ಗಳು ಬಾಲ್ಯ ವಿವಾಹ ನಿಷೇಧಾಧಿಕಾರಿಗಳೆಂದು ಸರ್ಕಾರ ನೇಮಿಸಿದೆ.
     ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಸಾರ್ವಜನಿಕರು, ಸಾಮೂಹಿಕ ವಿವಾಹ ಆಯೋಜಕರು ಬಾಲ್ಯ ವಿವಾಹ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕೊಪ್ಪಳ : ಏ. 30 ರಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಕೊಪ್ಪಳ ಏ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕಾಗಿ ಏ. 30 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಲಬುರಗಿ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ತಿಳಿಸಿದ್ದಾರೆ.
     ಕರ್ನಾಟಕ ರಾಜ್ಯ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವಾಲಯದ ಅಧಿಸೂಚನೆಯಂತೆ ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ-ಅ(ಮಹಿಳೆ) ಗೆ ಮೀಸಲಿರಿಸಲಾಗಿದೆ.  ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಚುನಾವಣೆಯನ್ನು ಏ. 30 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಡೆಸಲಾಗುವುದು.  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರವನ್ನು, ಪ್ರಾದೇಶಿಕ ಆಯುಕ್ತರಿಂದ ನಾಮನಿರ್ದೇಶಿತರಾದ ಜಿ.ಪಂ. ಉಪಕಾರ್ಯದರ್ಶಿಗಳಿಗೆ ಏ. 30 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯೊಳಗೆ ಸಲ್ಲಿಸಬಹುದು ಎಂದು ಕಲಬುರಗಿ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 23 ರಂದು ‘ಶಾಲೆ ಕಡೆ ನನ್ನ ನಡೆ’ ಆಂದೋಲನಕ್ಕೆ ಚಾಲನೆ -ಕೆ. ನಾಗರತ್ನ

ಕೊಪ್ಪಳ ಏ.21 (ಕರ್ನಾಟಕ ವಾರ್ತೆ): ಶಾಲೆಗೆ ಹೋಗದ ಮತ್ತು ಶಾಲೆಯಿಂದ ಹೊರಗುಳಿದ ಜಿಲ್ಲೆಯ ಎಲ್ಲಾ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ ‘ಶಾಲೆ ಕಡೆ ನನ್ನ ನಡೆ’ ಶಿಕ್ಷಣ ನನ್ನ ಮೂಲಭೂತ ಹಕ್ಕು ಎಂಬ ವಿನೂತನ ಜನಾಂದೋಲನ ಕಾರ್ಯಕ್ರಮಕ್ಕೆ ಏ.23 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಚಾಲನೆ ದೊರೆಯಲಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ ಅವರು ಹೇಳಿದರು.
      ಮಕ್ಕಳ ಶಿಕ್ಷಣ ಹಕ್ಕು ಜಾರಿಗಾಗಿ ‘ಶಾಲೆ ಕಡೆ ನನ್ನ ನಡೆ’ ಶಿಕ್ಷಣ ನನ್ನ ಮೂಲಭೂತ ಹಕ್ಕು ಜಾಗೃತಿ ಕಾರ್ಯಕ್ರಮದ ಅಂಗವಾಗಿ ಕೊಪ್ಪಳದ ಕೋರ್ಟ್ ಸಭಾಂಗಣದಲ್ಲಿ ಬುಧವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಶಾಲೆಗೆ ಹೋಗದ ಮತ್ತು ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ನಿಟ್ಟಿನಲ್ಲಿ  ‘ಶಾಲೆ ಕಡೆ ನನ್ನ ನಡೆ’ ಶಿಕ್ಷಣ ನನ್ನ ಮೂಲಭೂತ ಹಕ್ಕು ಎಂಬ ವಿನೂತನ ಜನಾಂದೋಲನ ಕಾರ್ಯಕ್ರಮವನ್ನು ಏ. 23 ರಂದು ಆಯೋಜಿಸಲಾಗುತ್ತಿದೆ.  ಎಲ್ಲಾ ಇಲಾಖೆ ಅಧಿಕಾರಿಗಳು, ನೋಡಲ್ ಸ್ವಯಂ ಸೇವಾ ಸಂಸ್ಥೆ ಮತ್ತು ಸಮುದಾಯ ಸಂಘಟನೆ ಪ್ರತಿನಿಧಿಗಳು ಪರಿಣಾಮಕಾರಿಯಾಗಿ ಅನುಷ್ಠನ ಗೊಳಿಸಬೇಕು.  ತಾಯಂದಿರು ಹೆಚ್ಚು ವಿದ್ಯಾವಂತರಾದಂತೆಲ್ಲಾ  ಮಕ್ಕಳು ಶಾಲೆಯಿಂದ ಹೊರಗುಳಿಯುವ ಪ್ರಮಾಣ ಕಡಿಮೆಯಾಗುತ್ತದೆ.  ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು.    ತಾಯಿಯೇ ಮೊದಲ ಗುರು ಎನ್ನುವಂತೆ ತಾಯಿ ಮೊದಲು ವಿದ್ಯಾವಂತಳಾದರೆ ಮಕ್ಕಳನ್ನು ಶಾಲೆಯಿಂದ ಹೊರಗುಳಿಯಲು ಬಿಡುವುದಿಲ್ಲ.  ಆಗ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಸಹಜವಾಗಿ ಕಡಿಮೆಯಾಗಲಿದೆ.  ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ಈ ಕಾರ್ಯವನ್ನ ಮನಃಪೂರ್ವಕವಾಗಿ ನಿರ್ವಹಿಸಿದಾಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ ಅವರು ಹೇಳಿದರು.
     ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ರಾಮತ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿ  ರಾಜ್ಯ ಸರಕಾರ ಏ.23 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಕಾಲದಲ್ಲಿ ಮಕ್ಕಳ ಶಿಕ್ಷಣ ಹಕ್ಕು ಜಾರಿಗಾಗಿ ‘ಶಾಲೆ ಕಡೆ ನನ್ನ ನಡೆ’ ಶಿಕ್ಷಣ ನನ್ನ ಮೂಲಭೂತ ಹಕ್ಕು ಎಂಬ ಘೋಷವಾಕ್ಯ ದೊಂದಿಗೆ ಬೃಹತ್ ಜಾಗೃತಿ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ    ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಏ.1 ರಂದು ಈ ಆಂದೋಲನದ ಲೋಗೋ ಹಾಗೂ ಘೊಷವಾಕ್ಯ ಬಿಡುಗಡೆ ಮಾಡುವುದರೊಂದಿಗೆ ಉದ್ಘಾಟಿಸಿ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದಲ್ಲಿ ಚಾಲನೆ ನೀಡಿದ್ದಾರೆ.  ಶಾಲೆಯಿಂದ ಹೊರಗುಳಿದ ಮಕ್ಕಳನ್ನ ಮುಖ್ಯವಾಹಿನಿಗೆ ಕರೆತರುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು ಈ ಜನಾಂದೋಲನಕ್ಕೆ ಎಲ್ಲ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಸಹರಿಸಬೇಕಿದೆ ಎಂದರು.
     ಜಿಲ್ಲೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯಲು ಪ್ರಮುಖ ಕಾರಣಗಳೇನು ಹಾಗೂ  ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನ ಪುನಃ ಶಾಲೆಗೆಳಿಗೆ ಕರೆತರಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
     ಹಿರಿಯ ಸಿವಿಲ್ ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ದಶರಥ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಗದೀಶ, sಸರ್ವೊದಯ ಸಂಸ್ಥೆಯ ಶರಣಪ್ಪ, ವಕೀಲ ಜಯರಾಜ, ಗಣ್ಯರಾದ ಡಾ.ಜ್ಞಾನಸುಂದರ್, ಮೈಲಪ್ಪ ಬಿಸರಳ್ಳಿ, ಲಕ್ಷ್ಮಣ, ಮಕ್ಕಳ ರಕ್ಷಣಾ ಸಂಸ್ಥೆ ಸದಸ್ಯರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ ಏ.21 (ಕರ್ನಾಟಕ ವಾರ್ತೆ): ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಯುವಕರಿಗೆ ಮಲ್ಟಿ ಫೋನ್ ಸರ್ವಿಸಿಂಗ್(ಮೊಬೈಲ್ ರಿಪೇರಿ) ಉಚಿತ ತರಬೇತಿಗಾಗಿ ಆಸಕ್ತ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿ ಅವಧಿ 30 ದಿನಗಳಾಗಿದ್ದು ಉಚಿತ ಊಟ ಮತ್ತು ವಸತಿ ವ್ಯವಸ್ತೆ ಇರುತ್ತದೆ, ಆಸಕ್ತರು ಅರ್ಜಿ ಸಲ್ಲಿಸಲು ಕನಿಷ್ಠ 10 ನೇ ತರಗತಿ ಪಾಸಾಗಿರಬೇಕು, ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು, ಕೊಪ್ಪಳ ಜಿಲ್ಲೆಯವರಾಗಿರಬೇಕು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಅರ್ಜಿ ಸ್ವಿಕರಿಸಲು ಏ.29 ಕೊನೆಯ ದಿನ.  ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಏ.30 ರಂದು ಬೆಳಗ್ಗೆ 10.30 ಗಂಟೆಗೆ ಸಂದರ್ಶನ ಇರುತ್ತದೆ.  ಮೇ.2 ರಿಂದ ತರಬೇತಿ ಪ್ರಾರಂಭಗೊಳ್ಳಲಿದ್ದು, ಅರ್ಜಿಯನ್ನು  ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ ಕೊಪ್ಪಳ ಇವರಿಂದ ಪಡೆದು, ಏ. 29 ರೊಳಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ದೂ.ಸಂ:08539-231038 ಇಲ್ಲಿಗೆ ಸಂಪರ್ಕಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.