Thursday, 31 March 2016

ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಆರ್ ರಾಮಚಂದ್ರನ್


ಕೊಪ್ಪಳ, ಮಾ.31 (ಕರ್ನಾಟಕ ವಾರ್ತೆ):  ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆ ಆರಂಭವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರು ಹಾಗೂ ಆಹಾರದಿಂದ ವಿವಿಧ ರೋಗಗಳು ಬರುವ ಸಂಭವವಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂಚ್ರನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ನಡೆಯುವ ಜಾತ್ರೆ, ಉರುಸು, ಊರ ಹಬ್ಬ ಆಚರಣೆಗಳಲ್ಲಿ ಕಲುಷಿತ ನೀರು ಆಹಾರ ಸೇವನೆಯಿಂದ ಕರುಳು ಬೇನೆ( ವಾಂತಿ ಭೇದಿ), ಕಾಲರಾ, ವಿಷಮಶೀತಜ್ವರ, ಕಾಮಾಲೆ(ಜಾಂಡಿಸ್) ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಸಾಮಾಜಿಕ ಅಥವಾ ಧಾರ್ಮಿಕ ಸಮಾರಂಭಗಳು ನಡೆಯುವ ಮುನ್ನ ಆಯಾ ತಾಲೂಕು ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ನಡೆಯುವ ಸಮನ್ವಯ ಸಮಿತಿ ಸಭೆಗಳಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಪ್ಪದೇ ಭಾಗವಹಿಸಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು, ಶುದ್ಧ ಸುರಕ್ಷಿತ(ಕ್ಲೋರಿನೇಷನ್ ಮಾಡಿದ) ನೀರು ಪೂರೈಸಲು ಮತ್ತು ಪರಿಸರ ನೈರ್ಮಲ್ಯ ಕಾಪಾಡಲು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.  ಗ್ರಾಮಪಂಚಾಯತಿ ಹಾಗೂ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳು ನೀರು ಸಂಗ್ರಹಿಸುವ ಟ್ಯಾಂಕುಗಳನ್ನು ಬ್ಲೀಚಿಂಗ್ ಪುಡಿಯಿಂದ ಸ್ವಚ್ಚಗೊಳಿಸಬೇಕು. ಕುಡಿವ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು ಹಾಗೂ ಸೋರುವಿಕೆಗಳನ್ನು ಗುರುತಿಸಿ ತಕ್ಷಣ ದುರಸ್ತಿಗೊಳಿಸಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಬೇಕು.  ಜಿಲ್ಲೆಯಲ್ಲಿ ಪೂರೈಸಲಾಗುವ ನೀರಿನ ಎಲ್ಲಾ ಮೂಲಗಳ ಮಾದರಿಗಳನ್ನು ಸಂಗ್ರಹಿಸಿ ಅಸುರಕ್ಷಿತ ಮೂಲಗಳನ್ನು ತಕ್ಷಣ ಕ್ಲೋರಿನೇಷನ್ ಮಾಡಿಸಬೇಕು ಹಾಗೂ ಟ್ಯಾಂಕರ್ ಮೂಲಕ ಪೂರೈಸುವ ನೀರನ್ನು ಸಹ ಕ್ಲೋರಿನೇಷನ್ ಮಾಡಿಸಬೇಕು. ಗುಣಮಟ್ಟದ ಬ್ಲೀಚಿಂಗ್ ಪೌಡರ್ ಶೇಖರಿಸಿಕೊಂಡು ಸೊಳ್ಳೆಗಳ ನಿಂಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.  ಜಾತ್ರೆ, ಸಮಾರಂಭ ನಡೆಯುವ ಸ್ಥಳದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಅಗತ್ಯ ಸಿಬ್ಬಂದಿ ನಿಯೋಜಿಸಿ ಔಷಧಿ ಪೂರೈಸಿ ಚಿಕಿತ್ಸಾ ಸೌಲಭ್ಯ ನೀಡುವುದು. ರಸ್ತೆ ಬದಿಯಲ್ಲಿ, ಹೋಟೆಲ್‍ಗಳಲ್ಲಿ ತಯಾರಿಸುವ ಆಹಾರ ಮತ್ತು ಸಿಹಿ ಪದಾರ್ಥಗಳ ಸುರಕ್ಷತೆ ಕಡೆ ಗಮನ ಹರಿಸಬೇಕು. ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡದಂತೆ, ವಯಕ್ತಿಕ ರಕ್ಷಣೆ, ಪರಿಸರ ನೈರ್ಮಲ್ಯದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು.  ವಸತಿ ನಿಲಯಗಳ ವಿದ್ಯಾರ್ಥಿಗಳಲ್ಲಿ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು, ಸೂಕ್ತ ಮಾದ್ಯಮಗಳ ಮೂಲಕ ಆರೋಗ್ಯ ಶಿಕ್ಷಣ ನೀಡಬೇಕು ಎಂದು ಜಿಪಂ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂಚ್ರನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಆರೋಗ್ಯ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ಹಲವು ಯೋಜನೆಗಳ ಕುರಿತು ಇದೇ ಸಂದರ್ಭದಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಯಿತು.
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ, ಡಾ. ಅಲಕಾನಂದ, ಡಾ.ರಮೇಶ ಮೂಲಿಮನಿ, ಡಾ. ದಾನರೆಡ್ಡಿ, ಜಿಲ್ಲಾ ಸರ್ಜನ್ ಡಾ. ಲೋಕೇಶ್ ಜಿಲ್ಲಾ ಆಯುಷ್ ಅಧಿಕಾರಿ ಬಸಪ್ಪ ವಾಲಿಕಾರ, ಡಾ. ಕಟ್ಟಿಮನಿ, ಡಾ. ವಿರುಪಾಕ್ಷಿರೆಡ್ಡಿ ಮಾದಿನೂರ ಹಾಗೂ ಹಲವು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಪ್ಪಳ : ವಸತಿ ರಹಿತ ಪರಿಶಿಷ್ಟರ ಪಟ್ಟಿ ಪ್ರಕಟ : ಅರ್ಜಿ ಸಲ್ಲಿಸಲು ಸೂಚನೆ

ಕೊಪ್ಪಳ, ಮಾ.31 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಸತಿ ಸೌಲಭ್ಯಕ್ಕಾಗಿ, 2011 ರಲ್ಲಿ ನಡೆಸಿದ ಸಮೀಕ್ಷಾ ಪಟ್ಟಿಯಲ್ಲಿ ಇರುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕೊಪ್ಪಳ ನಗರಸಭೆಯಿಂದ 2011 ನೇ ಸಾಲಿನಲ್ಲಿ ನಗರ ಪ್ರದೇಶದಲ್ಲಿ ನಡೆಸಿದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ವಸತಿ ರಹಿತರ ಸಮೀಕ್ಷೆಯ ಪಟ್ಟಿಗೆ, ವ್ಯವಸ್ಥಾಪಕ ನಿರ್ದೇಶಕರು ರಾಜೀವಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು ಇವರು ಇದೀಗ ಮಂಜೂರಾತಿ ನೀಡಿದ್ದಾರೆ.  ನಗರಸಭೆಯು 2011 ರಲ್ಲಿ ಸರ್ವೆ ಮಾಡಿ ಪ.ಜಾತಿ-381, ಪ.ಪಂ-185 ಒಟ್ಟು 566 ವಸತಿ ರಹಿತ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿ ಸಲ್ಲಿಸಿತ್ತು.  ವ್ಯವಸ್ಥಾಪಕ ನಿರ್ದೇಶಕರು ರಾ.ಗಾಂ.ಗ್ರಾ.ವ.ನಿ ನಿಯಮಿತ ಬೆಂಗಳೂರು ಇವರು ಈ ಬಾರಿ ಪ.ಜಾತಿ-51, ಪ.ಪಂ-37 ಒಟ್ಟು 88 ಫಲಾನುಭವಿಗಳ ಗುರಿ ನೀಡಿದ್ದು. ಅದರಣತೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ.  2011 ರಲ್ಲಿ ನಡೆಸಿದ ಸಮೀಕ್ಷಾ ಪಟ್ಟಿಯಂತೆ, ಫಲಾನುಭವಿಗಳ ವಿವರವನ್ನು  ನಗರಸಭೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿಯೊಂದಿಗೆ ಜಾಗೆಗೆ ಸಂಬಂಧಿಸಿದ ಚಾಲ್ತಿ ಸಾಲಿನ ಆಸ್ತಿಕರ ಪಾವತಿಸಿದ ರಸೀದಿ ಹಾಗೂ ನಮೂನೆ-3, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ಪಡಿತರ ಚೀಟಿ, ಚುನಾವಣಾ ಆಯೋಗದ ಗುರುತಿನ ಚೀಟಿ, ಮೂರು ಭಾವಚಿತ್ರಗಳು ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಲಗತ್ತಿಸಿ ನಗರಸಭೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಯುಕ್ತ ರಮೇಶ ಪಟ್ಟೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗ್ಯನಗರ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೀಘ್ರ ಆರಂಭ- ಸಂಸದ ಕರಡಿ ಸಂಗಣ್ಣ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಾಗಲಿದೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ.
     ಭಾಗ್ಯನಗರ ರೈಲ್ವೆ ಗೇಟ್ ಸಂಖ್ಯೆ-62 ಕ್ಕೆ ಮೇಲ್ಸೇತುವೆ ನಿರ್ಮಾಣಕ್ಕೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಇವರು 20. 32 ಕೋಟಿ ರೂ. ಗಳಿಗೆ ಹೈದ್ರಾಬಾದಿನ ಗುತ್ತಿಗೆದಾರ ಮುರಳಿ ಕೃಷ್ಣರಾವ್ ಅವರಿಗೆ ಕಾರ್ಯಾದೇಶ ನೀಡಿದ್ದು, ಕಾಮಗಾರಿ ಪೂರ್ಣಗೊಳಿಸಲು 15 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಮೇಲ್ದರ್ಜೆಗೇರಿಸಲಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ : ವೇಳಾ ಪಟ್ಟಿ ಪ್ರಕಟ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಗ್ರಾಮ ಪಂಚಾಯತಿಗಳಿಂದ ಪುರಸಭೆ, ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಚುನಾವಣೆ ನಡೆಸುವ ಪ್ರದೇಶ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.
     ಕೊಪ್ಪಳ ಜಿಲ್ಲೆಯ ಕಾರಟಗಿ ಪುರಸಭೆ- ವಾರ್ಡ್‍ಗಳ ಸಂಖ್ಯೆ- 23, ತಾವರಗೇರಾ ಪಟ್ಟಣ ಪಂಚಾಯತಿ- ವಾರ್ಡ್‍ಗಳ ಸಂಖ್ಯೆ 18, ಕುಕನೂರು ಪಟ್ಟಣ ಪಂಚಾಯತಿ- ವಾರ್ಡ್‍ಗಳ ಸಂಖ್ಯೆ- 19 ಹಾಗೂ ಕನಕಗಿರಿ ಪಟ್ಟಣ ಪಂಚಾಯತಿಯಲ್ಲಿ 17 ವಾರ್ಡ್‍ಗಳು ಇದ್ದು, ಇದೀಗ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ.  ವೇಳಾಪಟ್ಟಿಯನ್ವಯ ಏ. 05 ರಂದು ಚುನಾವಣಾ ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳು ಹೊರಡಿಸುವರು.  ನಾಮಪತ್ರ ಸಲ್ಲಿಸಲು ಏ. 12 ಕೊನೆಯ ದಿನಾಂಕವಾಗಿರುತ್ತದೆ.  ಏ. 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಏ. 15 ಕೊನೆಯ ದಿನಾಂಕವಾಗಿದ್ದು, ಮತದಾನದ ಅವಶ್ಯವಿದ್ದರೆ ಏ. 24 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ.  ಮತಗಳ ಎಣಿಕೆ ಏ. 27 ರಂದು ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ.  ಚುನಾವಣೆ ಪ್ರಕ್ರಿಯೆ ಏ. 27 ರ ಒಳಗಾಗಿ ಪೂರ್ಣಗೊಳ್ಳಲಿದೆ.
     ಚುನಾವಣೆ ನೀತಿ ಸಂಹಿತೆಯು ಮಾ. 31 ರಿಂದಲೇ ಜಾರಿಗೆ ಬರಲಿದ್ದು, ಏ. 27 ರವರೆಗೆ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಕವಿತಾರಾಣಿ ಆರ್. ಅವರು ತಿಳಿಸಿದ್ದಾರೆ.

ಕೃಷಿ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಅಖಿಲ ಭಾರತ ಪ್ರವೇಶ ಪರೀಕ್ಷೆ : ಅರ್ಜಿ ಆಹ್ವಾನ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಇಂಡಿಯಾ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ( ICAR) ನವದೆಹಲಿ ವತಿಯಿಂದ ದೇಶದ ವಿವಿಧ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅಗ್ರಿಕಲ್ಚರ್, ಹಾರ್ಟಿಕಲ್ಚರ್, ಫಾರೆಸ್ಟ್, ಅಗ್ರಿ ಮಾರ್ಕೆಟಿಂಗ್, ಗೃಹ ವಿಜ್ಞಾನ ವಿಷಯಗಳಲ್ಲಿ ಬಿಎಸ್‍ಸಿ, ಹಾಗೂ ಅಗ್ರಿ ಇಂಜಿನಿಯರಿಂಗ್, ಫುಡ್ ಟೆಕ್ನಾಲಜಿ ವಿಷಯಗಳಲ್ಲಿ ಬಿ.ಟೆಕ್. ಕೋರ್ಸ್ ವ್ಯಾಸಂಗಕ್ಕಾಗಿ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯನ್ನು ಕೈಗೊಳ್ಳಲಿದ್ದು, ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
     ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ ತಿಂಗಳ ಎರಡನೆ ವಾರದಲ್ಲಿ ಪ್ರಾರಂಭವಾಗಲಿದೆ.  ಅರ್ಜಿ ಸಲ್ಲಿಸಲು ಸಿಬಿಎಸ್‍ಸಿ ಪಠ್ಯಕ್ರಮ, ಪಿಸಿಬಿ, ಪಿಸಿಎಂ, ಪಿಸಿಎಂಬಿ, ಪಿಸಿಹೆಚ್, ಪಿಸಿಎ ವಿಷಯದಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಕನಿಷ್ಟ ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.  (ಪ.ಜಾತಿ, ಪ.ಪಂಗಡ, ವಿಕಲಚೇತನರಿಗೆ ಕನಿಷ್ಟ ಶೇ. 40).  ಪ್ರವೇಶ ಪರೀಕ್ಷೆ ಮೇ. 21 ರಂದು ನಡೆಯಲಿದೆ.  ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು  www.icar.org.in ವೆಬ್‍ಸೈಟ್ ವೀಕ್ಷಿಸಬಹುದು.  ಹೆಚ್ಚಿನ ವಿವರಗಳಿಗೆ ತೋಟಗಾರಿಕೆ ಕಾಲೇಜು, ಮುನಿರಾಬಾದ್, ದೂರವಾಣಿ ಸಂಖ್ಯೆ: 08539-270453,  ಸಂಪರ್ಕಿಸಬಹುದು ಎಂದು ಕಾಲೇಜಿನ ಡೀನ್ ಡಾ. ಕೆ.ಎನ್. ಕಟ್ಟಿಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 30 March 2016

ಭಾನಾಪುರದಲ್ಲಿ ಮೇಲ್ಸೇತುವೆ ಮಂಜೂರು : ಸಂಸದರಿಂದ ಅಭಿನಂದನೆ

ಕೊಪ್ಪಳ, ಮಾ.30 (ಕರ್ನಾಟಕ ವಾರ್ತೆ): ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾನಾಪೂರ-ಗೆದ್ದಿನಕೇರಿ ರಾಷ್ಟ್ರೀಯ ಹೆದ್ದಾರಿಗೆ ಭಾನಾಪೂರ ಗ್ರಾಮದಲ್ಲಿನ ರೇಲ್ವೇ ಗೇಟ್ ಸಂ.56/ಟಿ ಗೆ ನಾಲ್ಕು ಲೈನ್ ಮೇಲ್ಸೇತುವೆ ಕಾಮಗಾರಿಗೆ ಕೇಂದ್ರ ಸರ್ಕಾರ ರೂ. 56 ಕೋಟಿ ಮಂಜೂರು ಮಾಡಿದ್ದು, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅಭಿನಂದನೆ ಸಲ್ಲಿಸಿದ್ದಾರೆ.
     ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾನಾಪೂರ-ಗೆದ್ದಿನಕೇರಿ ರಾಷ್ಟ್ರೀಯ ಹೆದ್ದಾರಿಗೆ ಭಾನಾಪೂರ ಗ್ರಾಮದಲ್ಲಿನ ರೇಲ್ವೇ ಗೇಟ್ ಸಂ.56/ಟಿ ಗೆ ನಾಲ್ಕು ಲೈನ್ ಮೇಲ್ಸೇತುವೆ ಕಾಮಗಾರಿಯನ್ನು ರೂ.56 ಕೋಟಿ ರೂ.ಗೆ ಮಂಜೂರಾತಿ ನೀಡಿರುವುದಾಗಿ ಘೋಷಿಸಿದ್ದು, ಮೂರುತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.  ಮಹತ್ವದ ಕಾಮಗಾರಿಗೆ ಮಂಜೂರಾತಿ ನೀಡಿದ್ದಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಕರಡಿ ಸಂಗಣ್ಣ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪ್ರಥಮ ಭಾಷೆ ಪರೀಕ್ಷೆ : 17563 ವಿದ್ಯಾರ್ಥಿಗಳು ಹಾಜರು

ಕೊಪ್ಪಳ ಮಾ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಬುಧವಾರದಂದು ಜರುಗಿದ ಎಸ್‍ಎಸ್‍ಎಲ್‍ಸಿ ಪ್ರಥಮ ಭಾಷೆ ಕನ್ನಡ/ಇಂಗ್ಲೀಷ್ ವಿಷಯದ ಪರೀಕ್ಷೆಗೆ 17563 ವಿದ್ಯಾರ್ಥಿಗಳು ಹಾಜರಾಗಿದ್ದು, 789 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಜಿಲ್ಲೆಯಲ್ಲಿ ನಡೆದ ಎಸ್‍ಎಸ್‍ಎಲ್‍ಸಿ  ಪ್ರಥಮ ಭಾಷೆ ಕನ್ನಡ/ಇಂಗ್ಲೀಷ್ ವಿಷಯದ ಪರೀಕ್ಷೆಗೆ ದಾಖಲಾತಿಯಾಗಿದ್ದ 18352 ವಿದ್ಯಾರ್ಥಿಗಳ ಪೈಕಿ 17563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 789 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ  ಬುಧವಾರದಂದು ನಡೆದ ಪರೀಕ್ಷೆಯಲ್ಲಿ ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಹಕರಿಗೆ ಶುದ್ಧ ನೀರು ಕೊಡುವಂತೆ ಹೋಟೆಲ್ ಮಾಲೀಕರಿಗೆ ಸೂಚನೆ


ಕೊಪ್ಪಳ, ಮಾ.30 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಹೋಟೆಲ್, ಉದ್ದಿಮೆ, ವಾಣಿಜ್ಯ ಚಟುವಟಿಕೆ ನಡೆಸುವ ಮಾಲೀಕರು ಗ್ರಾಹಕರಿಗೆ ಕುಡಿಯಲು ಶುದ್ಧನೀರು ಕೊಡುವಂತೆ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ಸೂಚನೆ ನೀಡಿದ್ದಾರೆ.
ಶುದ್ಧ ನೀರು ನೀಡಿ : ಬೇಸಿಗೆಯಲ್ಲಿ ಆಹಾರದಿಂದ, ನೀರಿನಿಂದ ಸಾರ್ವಜನಿಕರಿಗೆ ರೋಗಗಳು ಹರಡುವ ಸಂಭವವಿದ್ದು  ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೊಳೆಯ ನೀರು, ಬೋರ್‍ವೆಲ್ ನೀರನ್ನು ನೇರವಾಗಿ ಕುಡಿಯಲು ನೀಡದೆ ಕಡ್ಡಾಯವಾಗಿ ಫಿಲ್ಟರ್ ನೀರನ್ನು ಒದಗಿಸಬೇಕು.
ಎಲ್ಲೆಂದರಲ್ಲಿ ಕಸ ಬಿಸಾಡದಿರಿ : ವಾಣಿಜ್ಯ ಚಟುವಟಿಕೆ ನಡೆಸುವಂತಹ ಎಲ್ಲಾ ಹೋಟೆಲ್, ಉದ್ದಿಮೆದಾರರು ಕಸವನ್ನು ಚರಂಡಿಯಲ್ಲಿ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಹಲವಾರು ಬಾರಿ ನೋಟಿಸ್ ನೀಡಲಾಗಿದ್ದರೂ ಸಹ ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ಕಂಡುಬಂದಿದೆ.  ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಸವನ್ನು ಮೂಲ ಹಂತದಲ್ಲಿ ಹಸಿ, ಒಣ ಕಸವನ್ನಾಗಿ ಬೇರ್ಪಡಿಸಿ, ನಗರಸಭೆ ವಾಹನಗಳಲ್ಲಿ ಹಾಕಬೇಕು. ಹೋಟೆಲ್ ಹಾಗೂ ಅಂಗಡಿಗಳ ಮುಂಭಾಗ ಅಥವಾ ಅಕ್ಕಪಕ್ಕದ ಚರಂಡಿಯಲ್ಲಿ ಬಿಸಾಡಿರುವುದು ಕಂಡುಬಂದಲ್ಲಿ ಅಂತಹವರಿಗೆ ದಂಡ ವಿಧಿಸಲಾಗುವುದು ಅಲ್ಲದೆ, ವಾಣಿಜ್ಯ ಪರವಾನಿಗೆಯನ್ನು ಸ್ಥಗಿತಗೊಳಿಸಲಾಗುವುದು.
ಸಕ್ಕಿಂಗ್ ಯಂತ್ರ ಬಳಸಿ : ಉದ್ದಿಮೆ ಹಾಗೂ ಮನೆಗಳಲ್ಲಿನ ಶೌಚಾಲಯ ಸ್ವಚ್ಛತೆಗೆ ಕಡ್ಡಾಯವಾಗಿ ಸಕ್ಕಿಂಗ್ ಮಷೀನ್ ಬಳಸಿ ಸ್ವಚ್ಛಗೊಳಿಸಬೇಕು. ಕಾರ್ಮಿಕರನ್ನು ಬಳಸಿ ಸ್ವಚ್ಛಗೊಳಿಸುವಂತಿಲ್ಲ.  ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ರೂಲ್ಸ್ ಪ್ರಕಾರ ಮಾನವ ಸಂಪನ್ಮೂಲದಿಂದ ಸ್ವಚ್ಛಗೊಳಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು ತಪ್ಪಿದಲ್ಲಿ ದಂಡನೆಗೆ ಗುರಿಪಡಿಸಲಾಗುವುದು.
ಉದ್ದಿಮೆ ನವೀಕರಿಸಿ : ನಗರದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ನಗರಸಭೆಯಿಂದ ಪ್ರತಿ ವರ್ಷ ಉದ್ದಿಮೆ ಪರವಾನಿಗೆ ಪಡೆದುಕೊಳ್ಳಬೇಕು ಹಾಗೂ ಪ್ರತಿ ವರ್ಷ ನವೀಕರಿಸಿಕೊಳ್ಳಬೇಕು. ತಪ್ಪಿದಲ್ಲಿ ಉದ್ದಿಮೆಯನ್ನು ಸ್ಥಗಿತಗೊಳಿಸಲು ಕ್ರಮ ಜರುಗಿಸಲಾಗುವುದು.
ಪ್ಲಾಸ್ಟಿಕ್ ನಿಷೇಧ : ಸರಕಾರ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದು ನಗರದಲ್ಲಿಯೂ ಕಡ್ಡಾಯವಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ. ವಾಣಿಜ್ಯ ಚಟುವಟಿಕೆ ನಡೆಸುವ ಅಂಗಡಿ, ಹೋಟೆಲ್, ಮುಂತಾದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್‍ಗ್ಲಾಸ್, ಮುಂತಾದ ವಸ್ತುಗಳ ಬಳಕೆ ಕಂಡುಬಂದಲ್ಲಿ ಸೂಕ್ತ ಕ್ರಮಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಇಓ ಅವರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ

ಕೊಪ್ಪಳ ಮಾ. 30 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಕೊಪ್ಪಳ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿಗಳ ಕುರಿತು ಪರಿಶೀಲನೆ ನಡೆಸಿದರು.
     ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು, ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಗವಿಸಿದ್ದೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲಾಗಿದ್ದು, ಪರೀಕ್ಷೆಗಳು ಶಿಸ್ತುಬದ್ಧವಾಗಿ ಜರುಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಲಾಗಿದ್ದು, ಸುಗಮವಾಗಿ ಪರೀಕ್ಷೆಗಳು ಜರುಗುತ್ತಿವೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.

ಗಂಗಾವತಿ ನಗರಸಭೆ ಉಪ ಚುನಾವಣೆಗೆ ಅಧಿಸೂಚನೆ ಪ್ರಕಟ

ಕೊಪ್ಪಳ ಮಾ. 30 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿನ ವಾರ್ಡ್ ಸಂಖ್ಯೆ 17 ರ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆಸಲು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
     ಅಧಿಸೂಚನೆ ಅನ್ವಯ ಗಂಗಾವತಿ ನಗರಸಭೆ ವಾರ್ಡ್ ಸಂಖ್ಯೆ 17 ರ ಸದಸ್ಯ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ನಾಮಪತ್ರ ಸಲ್ಲಿಸಲು ಏ. 06 ಕೊನೆಯ ದಿನಾಂಕವಾಗಿರುತ್ತದೆ.  ಏ. 07 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಏ. 09 ಕೊನೆಯ ದಿನವಾಗಿರುತ್ತದೆ.  ಮತದಾನದ ಅವಶ್ಯವಿದ್ದಲ್ಲಿ ಏ. 17 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ.  ಮತ ಎಣಿಕೆ ಏ. 20 ರಂದು ಜರುಗಲಿದ್ದು, ಏ. 20 ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.  ನಗರಸಭೆ ವಾರ್ಡ್ ಸಂಖ್ಯೆ 17 ರ ವ್ಯಾಪ್ತಿಯಲ್ಲಿ ಏ. 20 ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊಪ್ಪಳ ನಗರ : ಸ್ವಚ್ಛತಾ ರೇಟಿಂಗ್‍ನಲ್ಲಿ ಎಸ್‍ಪಿ ಕಚೇರಿ ಪ್ರಥಮ

ಕೊಪ್ಪಳ ಮಾ. 30 (ಕರ್ನಾಟಕ ವಾರ್ತೆ): ಕೊಪ್ಪಳ ನಗರದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸರ್ಕಾರಿ ಕಚೇರಿಗಳು ಹಾಗೂ ಕಟ್ಟಡಗಳಿಗೆ ನಡೆಸಿದ ಸ್ವಚ್ಛತಾ ರೇಟಿಂಗ್‍ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪ್ರಥಮ ಸ್ಥಾನ ಪಡೆದಿದೆ.
     ಸ್ವಚ್ಛ ಭಾರತ ಮಿಷನ್‍ದಡಿ ವಿಷಯಾಧಾರಿತ ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಕಳೆದ ಮಾ. 01 ರಿಂದ 15 ರವರೆಗೆ ಸರ್ಕಾರಿ ಕಚೇರಿಗಳು, ಕಟ್ಟಡಗಳಲ್ಲಿ ಉತ್ತಮವಾಗಿ ಸ್ವಚ್ಛಗೊಂಡಿರುವ ಸರ್ಕಾರಿ ಕಟ್ಟಡಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ.  ಸ್ವಚ್ಛತಾ ರೇಟಿಂಗ್‍ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ- ಪ್ರಥಮ, ಜಿಲ್ಲಾಡಳಿತ ಭವನ- ದ್ವಿತೀಯ ಹಾಗೂ ಕೊಪ್ಪಳ ನಗರಸಭೆ ಕಚೇರಿ- ತೃತೀಯ ಸ್ಥಾನ ಪಡೆದುಕೊಂಡಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಲಿಗಿ ಘನ ತ್ಯಾಜ್ಯ ವಿಲೇವಾರಿ ಘಟಕ ರಾಜ್ಯಕ್ಕೆ ಮಾದರಿ- ಸಂಸದ ಕರಡಿ ಸಂಗಣ್ಣ ಶ್ಲಾಘನೆ


ಕೊಪ್ಪಳ ಮಾ. 30 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹುಲಿಗಿ ಗ್ರಾಮದ ಬಳಿ ಕಾರ್ಯ ನಿರ್ವಹಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕವು ಇಡೀ ರಾಜ್ಯಕ್ಕೆ ಮಾದರಿ ಘಟಕವಾಗಲಿದೆ ಎಂದು ಸಂಸದ ಕರಡಿ ಸಂಗಣ್ಣ ಶ್ಲಾಘಿಸಿದರು.

     ಹುಲಿಗಿ ಗ್ರಾಮದ ಬಳಿ ಸ್ಥಾಪಿಸಲಾಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬುಧವಾರದಂದು ಭೇಟಿ ನೀಡಿದ ಸಂಸದ ಕರಡಿ ಸಂಗಣ್ಣ ಅವರು, ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿಯದೇ ಗಂಭೀರ ಸಮಸ್ಯೆಯ ವಿಷಯವಾಗಿದೆ.  ಆದರೆ ಹುಲಿಗಿ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಸದ್ದಿಲ್ಲದೆ ಗ್ರಾಮೀಣ ಭಾಗದ ಕಸ ನಿರ್ವಹಣೆಗೆ ಪಣ ತೊಟ್ಟು ನಿಂತಿದೆ.  ಇಲ್ಲಿನ ಕಸ ಸಂಗ್ರಹಣೆ, ವಿಲೇವಾರಿ ವ್ಯವಸ್ಥೆ, ಎರೆಹುಳು ಘಟಕ, ಸ್ಕ್ರೀನರ್ ಯಂತ್ರ, ಶ್ರೆಡ್ಡರ್ ಯಂತ್ರಗಳನ್ನು ವೀಕ್ಷಿಸಿ, ಅವುಗಳ ಕಾರ್ಯನಿರ್ವಹಣೆಗೆ ತೃಪ್ತಿ ವ್ಯಕ್ತಪಡಿಸಿದರು.  ಇಲ್ಲಿನ ಘಟಕವು ಇಡೀ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಗ್ರಾಮೀಣ ಭಾಗದ ಕಸ ವಿಲೇವಾರಿಗೆ ಶ್ರಮಿಸುತ್ತಿದ್ದು, ಇಂತಹ ಘಟಕವನ್ನು ಎಲ್ಲ ಗ್ರಾ.ಪಂ. ಗಳಿಗೆ ವಿಸ್ತರಿಸುವ ಮೂಲಕ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

     ಜಿ.ಪಂ. ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ ಮಾತನಾಡಿ, ಈ ಘಟಕದಿಂದ 9 ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಗಳಿಂದ ಪ್ರತಿ ನಿತ್ಯ 10 ಟನ್ ಘನ ಕಸವನ್ನು ಟ್ರ್ಯಾಕ್ಟರ್‍ಗಳ ಮೂಲಕ ಸಂಗ್ರಹಿಸಿ, ಕಸದಲ್ಲಿನ ಪ್ಲಾಸ್ಟಿಕ್-ಗಾಜು, ಇತರೆ ಕೊಳೆಯಾದ ಪದಾರ್ಥಗಳನ್ನು ವಿಂಗಡಿಸಿ, ಕೊಳೆಯುವ ಪದಾರ್ಥಗಳಿಂದ ಎರೆಗೊಬ್ಬರ ಮಾಡಿ, ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದರು.

     ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮಾತನಾಢಿ, ಇಂತಹ ಘಟಕವು ಪ್ರಸಕ್ತ ದಿನಮಾನದಲ್ಲಿ ಅತ್ಯಂತ ಅವಶ್ಯಕವಾಗಿದ್ದು, ಗ್ರಾಮೀಣ ಭಾಗದಲ್ಲಿ ಇನ್ನೂ ಹೆಚ್ಚು ಕಸ ವಿಲೇವಾರಿಯ ಬಗ್ಗೆ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.  ಕಸದಿಂದ ಎರೆಹುಳು ಗೊಬ್ಬರ ಮಾಡುವುದರಿಂದ, ರೈತರಿಗೆ ಕಡಿಮೆ ದರದಲ್ಲಿ ಸಾವಯವ ಗೊಬ್ಬರ ದೊರೆಯುವುದರ ಜೊತೆಗೆ ಗ್ರಾಮಗಳ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಸಾಧ್ಯವಾಗಲಿದೆ ಎಂದರು.
     ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಗಣ್ಯರಾದ ಚಂದ್ರಶೇಖರ್, ಹುಲಿಗಿ ಮತ್ತು ಹೊಸಳ್ಳಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಗ್ರಾಮಗಳ ಮುಖಂಡರು, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ನಟರಾಜ ಉಪಸ್ಥಿತರಿದ್ದರು.

Saturday, 26 March 2016

ದಲಿತರು ಸರ್ಕಾರಿ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಿ- ಬಸಣ್ಣ ಕೆ. ಚಲವಾದಿ


ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಶ್ರೇಯೋಭಿವೃದ್ಧಿಗಾಗಿಯೇ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡಿಸಿಕೊಂಡು, ಆರ್ಥಿಕ ಸ್ವಾವಲಂಬನೆ ಹೊಂದುವಂತೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಬಸಣ್ಣ ಕೆ. ಚಲವಾದಿ ಅವರು ಮನವಿ ಮಾಡಿಕೊಂಡರು.

     ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗಿನ ಕುಂದುಕೊರತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದೆ.  ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಸರ್ಕಾರದ ಶ್ರಮ ಸಾರ್ಥಕವೆನಿಸುತ್ತಿದೆ.  ದಲಿತರ ಕುಂದುಕೊರತೆಗಳ ಬಗ್ಗೆ, ಪರಿಶಿಷ್ಟ ಜಾತಿ ಮತ್ತು ವರ್ಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ಹಾಗೂ ಪರಿಣಾಮಕಾರಿ ಅನುಷ್ಠಾನದಲ್ಲಿ ಇರಬಹುದಾದ ತೊಡಕುಗಳು ಹಾಗೂ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪ್ರತಿ ಜಿಲ್ಲೆಯಲ್ಲೂ ಸಭೆಗಳನ್ನು ನಡೆಸಿ, ವರದಿ ಸಂಗ್ರಹಿಸಲಾಗುತ್ತಿದೆ.  ಕುಂದುಕೊರತೆಗಳ ಸಭೆಯಲ್ಲಿ ಸಲ್ಲಿಸಲಾಗುವ ದೂರುಗಳು ಹಾಗೂ ಅಭಿಪ್ರಾಯಗಳನ್ನು ಪರಿಶೀಲಿಸಿ, ಆಯೋಗವು ನ್ಯಾಯಾಲಯದ ರೀತಿ ಕಾರ್ಯ ನಿರ್ವಹಿಸುತ್ತಿದೆ.  ಅಲ್ಲದೆ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಸಹ ಸಲ್ಲಿಸುತ್ತಿದೆ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಸಮುದಾಯದವರ ಹಕ್ಕುಗಳಿಗೆ ಚ್ಯುತಿ ಉಂಟಾದಲ್ಲಿ, ನೇರವಾಗಿ ಆಯೋಗಕ್ಕೆ ದೂರು ಸಲ್ಲಿಸಲು ಅವಕಾಶವಿದೆ.  ಆಯೋಗದಲ್ಲಿ ಸ್ವೀಕರಿಸಲಾದ ಪ್ರಕರಣಗಳಿಗೆ ಆಯೋಗದಿಂದಲೇ ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಪರಿಶಿಷ್ಟರು ವಿವಿಧ ಇಲಾಖೆಗಳಲ್ಲಿ ದೊರೆಯುವ ಸರ್ಕಾರಿ ಸವಲತ್ತುಗಳನ್ನು ಪಡೆದು, ಆರ್ಥಿಕವಾಗಿ ಸಬಲರಾಗಬೇಕು.  ಅಷ್ಟೇ ಅಲ್ಲ ಶೈಕ್ಷಣಿಕವಾಗಿಯೂ ಸಹ ಅಭಿವೃದ್ಧಿಯಾಗಬೇಕು ಎಂದು ಆಯೋಗದ ಅಧ್ಯಕ್ಷ ಬಸಣ್ಣ ಕೆ. ಚಲವಾದಿ ಅವರು ಕರೆ ನೀಡಿದರು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ವಿವಿಧ ಯೋಜನೆಗಳಡಿ ಕೈಗೊಳ್ಳಲಾಗುವ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ ತರುವ ಬಗ್ಗೆ ಸರ್ಕಾರದಲ್ಲಿ ಚಿಂತನೆ ನಡೆದಿದೆ.  ಈ ಕುರಿತು ಸರ್ಕಾರ ಶೀಘ್ರದಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಸರ್ಕಾರ ಈ ವರ್ಷ 22 ಸಾವಿರ ಕೋಟಿ ಅನುದಾನವನ್ನು ಖರ್ಚು ಮಾಡಲಿದೆ.  ಪರಿಶಿಷ್ಟರ ಅಭಿವೃಧ್ಧಿಗಾಗಿ ನಿಗಮದ ಮೂಲಕ ದೊರೆಯುವ ಸೌಲಭ್ಯಗಳಲ್ಲಿ ನಿಗದಿ ಮಾಡುತ್ತಿರುವ ಗುರಿಯ ಪ್ರಮಾಣ ಕಡಿಮೆ ಇದ್ದು, ಇದನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
     ಕುಂದುಕೊರತೆ ಪರಿಶೀಲನಾ ಸಭೆಯಲ್ಲಿ ಆಯೋಗದ ಅಧ್ಯಕ್ಷರಿಗೆ ಪ್ರಮುಖವಾಗಿ ಸಲ್ಲಿಕೆಯಾದ ಮನವಿಗಳ ವಿವರ ಇಂತಿದೆ.  ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಸೌಲಭ್ಯಗಳ ಆಯ್ಕೆ ತ್ವರಿತವಾಗಿ ಆಗಬೇಕು.  ಭೂಒಡೆತನ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಭೂಮಿ ಹಂಚಿಕೆ ಮಾಡಬೇಕು. ಒಳ ಮೀಸಲಾತಿ ಜಾರಿಗೆ ಬರಬೇಕು.  ಮತ್ತು ಸದಾಶಿವ ಆಯೋಗದ ವರದಿ ಜಾರಿಗೆ ಕ್ರಮವಾಗಬೇಕು.  ಮೂರು ತಿಂಗಳಿಗೊಮ್ಮೆ ಪ.ಜಾತಿ/ಪ.ವರ್ಗದವರ ಕುಂದುಕೊರತೆ ಸಭೆಯನ್ನು ಪೊಲೀಸ್ ಇಲಾಖೆ ಆಯೋಜಿಸಬೇಕು.  ಆದರೆ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಆಗಿಲ್ಲ.  ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಗೆ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ.  ಜಿಲ್ಲೆಯಲ್ಲಿ ಅಸ್ಪøಷ್ಯತೆ ನಿವಾರಣೆ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು.  ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ತ್ವರಿತವಾಗಿ ಆಗಬೇಕು.  ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿ ವಿವಿಧ ಇಲಾಖೆಗಳಲ್ಲಿ ಅನುದಾನ ನಿಗದಿತ ಕಾಲಮಿತಿಯೊಳಗೆ ಖರ್ಚಾಗಬೇಕು.  ಪರಿಶಿಷ್ಟ ಫಲಾನುಭವಿಗಳಿಗೆ ಸವಲತ್ತು ಸಕಾಲದಲ್ಲಿ ದೊರೆಯಬೇಕು.  ಪೌರಕಾರ್ಮಿಕರಿಗೆ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತೆ ಕಾರ್ಯ ಮಾಡುವ ಸಿಬ್ಬಂದಿಗಳಿಗೆ ಸೂಕ್ತ ಸುರಕ್ಷತಾ ಪರಿಕರಗಳನ್ನು ವಿತರಿಸಬೇಕು.  ಪರಿಶಿಷ್ಟರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂದಿತು.
     ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಉಪಸ್ಥಿತರಿದ್ದರು.  ಸಭೆಯಲ್ಲಿ ಹಲವು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ, ಕುಂದುಕೊರತೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ಆಯೋಗದ ಅಧ್ಯಕ್ಷರಿಗೆ ಸಲ್ಲಿಸಿದರು.

ಪರಿಶಿಷ್ಟರಿಗೆ ಸಲ್ಲಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಿ- ಬಸಣ್ಣ ಕೆ. ಚಲವಾದಿ


ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ವಿವಿಧ ಇಲಾಖೆಗಳಡಿ ದೊರೆಯಬೇಕಾಗಿರುವ ಸೌಲಭ್ಯ, ಸವಲತ್ತುಗಳನ್ನು ತಲುಪಿಸುವಲ್ಲಿ ವಿನಾಕಾರಣ ವಿಳಂಬ ಮಾಡದೆ, ತ್ವರಿತವಾಗಿ ತಲುಪಿಸುವಂತೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಬಸಣ್ಣ ಕೆ. ಚಲವಾದಿ ಅವರು ಸೂಚನೆ ನೀಡಿದರು.

     ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಮೀಸಲಾಗಿರುವ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಸರ್ಕಾರದ ಸುಮಾರು 33 ಇಲಾಖೆಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರಿಗಾಗಿ ವಿಶೇಷ ಘಟಕ ಯೋಜನೆ ಹಾಗೂ ಪರಿಶಿಷ್ಟ ವರ್ಗದ ಸಮುದಾಯದವರಿಗಾಗಿ ಗಿರಿಜನ ಉಪಯೋಜನೆಯಡಿ ಅನುದಾನವನ್ನು ಮೀಸಲಿರಿಸಿ, ಅನೇಕ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ಪರಿಶಿಷ್ಟರಿಗಾಗಿಯೇ ಮೀಸಲಾಗಿರುವ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡದಿದ್ದಲ್ಲಿ, ಅಥವಾ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿದಲ್ಲಿ, ಅದು ಅಪರಾಧವೆಂಬುದಾಗಿ ಕಾಯ್ದೆ ರೂಪಿಸಲಾಗಿದೆ.  ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗಾಗಿ ಇರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯಾ ಇಲಾಖೆಗಳ ಹಮ್ಮಿಕೊಳ್ಳಬೇಕು ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ವಿವಿಧ ಅಭಿವೃದ್ಧಿ ಇಲಾಖೆಗಳಿಂದ ಮುಂದಿನ ತಿಂಗಳು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.  ಈ ಕಾರ್ಯಕ್ರಮದಲ್ಲಿ ಪರಿಶಿಷ್ಟರಿಗಾಗಿಯೇ ಇರುವ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಮಗ್ರ ವಿವರವನ್ನು ಒದಗಿಸುವ ಕಾರ್ಯ ಮಾಡಲಾಗುವುದು ಎಂದರು.
ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರ ವಿತರಿಸಿ : ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಥವಾ ಚರಂಡಿ ಸ್ವಚ್ಛತೆ ಕಾರ್ಯ ಕೈಗೊಳ್ಳುವ ಕಾರ್ಮಿಕರಿಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಕೈಗವಸು, ಶೂ, ಮಾಸ್ಕ್ ಮುಂತಾದ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ವಿತರಿಸಬೇಕು.  ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಅಷ್ಟೇ ಅಲ್ಲದೆ ಗ್ರಾಮ ಪಂಚಾಯತಿಗಳಲ್ಲೂ  ಈ ಕಾರ್ಯವನ್ನು ತಪ್ಪದೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭೂ ಒಡೆತನ ಯೋಜನೆ ಅನುಷ್ಠಾನಕ್ಕೆ ತನ್ನಿ : ಕೊಪ್ಪಳ ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಭೂ ರಹಿತ ಫಲಾನುಭವಿಗಳಿಗೆ ಭೂಮಿ ವಿತರಿಸುವ ಯೋಜನೆ ಕಳೆದ ಮೂರು ವರ್ಷಗಳಿಂದ ಅನುಷ್ಠಾನವಾಗಿಲ್ಲ.  ಕೂಡಲೆ ಭೂಮಿ ಖರೀದಿಸಿ, ಅರ್ಹ ಫಲಾನುಭವಿಗಳಿಗೆ ಭೂಮಿ ವಿತರಿಸುವ ಕಾರ್ಯ ತ್ವರಿತವಾಗಿ ಕೈಗೊಳ್ಳುವಂತೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು. 
ಆಯುಷ್ ಅಧಿಕಾರಿಗಳಿಗೆ ನೋಟಿಸ್ : ಆಯುಷ್ ಇಲಾಖೆಯಲ್ಲಿ  ಎಸ್‍ಸಿಪಿ ಯೋಜನೆಯಡಿ 2. 26 ಲಕ್ಷ ರೂ. ಮತ್ತು ಟಿಎಸ್‍ಪಿ ಯೋಜನೆಯಡಿ 1. 27 ಲಕ್ಷ ರೂ. ಗಳ ವೆಚ್ಚವಾಗಿದೆ ಎಂಬುದಾಗಿ ವರದಿಯಲ್ಲಿ ತಿಳಿಸಿದ್ದು, ವಿವರಣೆ ನೀಡುವಂತೆ ಆಯೋಗದ ಅಧ್ಯಕ್ಷರು ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ತಿಳಿಸಿದರು.  ವೆಚ್ಚದ ವಿವರವನ್ನು ಸಮರ್ಪಕವಾಗಿ ಒದಗಿಸದ ಕಾರಣಕ್ಕೆ ಜಿಲ್ಲಾ ಆಯುಷ್ ಅಧಿಕಾರಿ ಬಸಪ್ಪ ವಾಲಿಕಾರ್ ಅವರಿಗೆ ನೋಟಿಸ್ ನೀಡಿ, ವಿವರಣೆ ಪಡೆಯುವಂತೆ ಆಯೋಗದ ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸುಳ್ಳು ಜಾತಿ ಪ್ರಮಾಣಪತ್ರಗಳ ಬಗ್ಗೆ ನಿಗಾ ವಹಿಸಿ : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದವರೆಂದು ಸುಳ್ಳು ಮಾಹಿತಿ ನೀಡಿ, ಜಾತಿ ಪ್ರಮಾಣ ಪತ್ರಗಳನ್ನು ಪಡೆಯುವ ಪ್ರಕರಣಗಳ ಬಗ್ಗೆ ತಹಸಿಲ್ದಾರರು ತೀವ್ರ ನಿಗಾ ವಹಿಸಬೇಕು.  ಇದರಿಂದಾಗಿ ಅರ್ಹರ ಸವಲತ್ತುಗಳನ್ನು ಅನರ್ಹರು ಕಿತ್ತುಕೊಂಡಂತಾಗಲಿದೆ.   ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಆಯೋಗದ ಅಧ್ಯಕ್ಷರು ತಹಸಿಲ್ದಾರರಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ವ್ಯಾಪ್ತಿ ಪ್ರದೇಶದಲ್ಲಿ ನಿಷೇದಾಜ್ಞೆ ಜಾರಿ

ಕೊಪ್ಪಳ, ಮಾ.26 (ಕರ್ನಾಟಕ ವಾರ್ತೆ): ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಆರಂಭದಿಂದ 74 ಕಿ.ಮೀ ವ್ಯಾಪ್ತಿಯವರೆಗೆ (ವಿತರಣಾ ಕಾಲುವೆ 1 ರಿಂದ 34 ರವರೆಗೆ) ಎಡ ಹಾಗೂ ಬಲ ದಡದ 100 ಮೀ ಅಂತರದ ವ್ಯಾಪ್ತಿಯ ಪ್ರದೇಶದಲ್ಲಿ ಮಾ.25 ರಿಂದ ಏ.6 ರ ವರೆಗೆ  ನಿಷೇಧಾಜ್ಞೆ ಜಾರಿಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಗಂಗಾವತಿ, ಕಾರಟಗಿ, ಸಿಂಧನೂರು, ಸಿರವಾರ, ಮಾನ್ವಿ, ರಾಯಚೂರು ಹಾಗೂ ಇತರೆ ಗ್ರಾಮಗಳು ತುಂಗಭದ್ರಾ ಎಡದಂಡೆ ಕಾಲುವೆಯ ನೀರನ್ನು ಕುಡಿಯುವ ನೀರಿಗಾಗಿ ಅವಲಂಬಿಸಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ, ಕಾಲುವೆಗೆ ಮಾ. 25 ರಿಂದ ಏ. 06 ರವರೆಗೆ ನೀರು ಹರಿಸಲಾಗುತ್ತಿದ್ದು, ನೀರು ಪೋಲಾಗದಂತೆ ತಡೆಯಲು ಹಾಗೂ ಅನಧಿಕೃತವಾಗಿ ನೀರು ಪಡೆದು ನೀರಾವರಿ ಕೈಗೊಳ್ಳುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಆರಂಭದಿಂದ 74 ಕಿ.ಮೀ ವ್ಯಾಪ್ತಿಯವರೆಗೆ (ವಿತರಣಾ ಕಾಲುವೆ 1 ರಿಂದ 34 ರವರೆಗೆ) ಎಡ ಹಾಗೂ ಬಲ ದಡದ 100 ಮೀ ಅಂತರದ ವ್ಯಾಪ್ತಿಯ ಪ್ರದೇಶದಲ್ಲಿ ಮಾ.25 ರಿಂದ ಏ.6 ರ ವರೆಗೆ  ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
     ನಿರ್ಭಂಧಿತ ಪ್ರದೇಶದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ನಿಯೋಜಿಸಲ್ಪಟ್ಟ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಎಡದಂಡೆ ಮುಖ್ಯ ಕಾಲುವೆಯ ಆರಂಭದಿಂದ 74 ಕಿ.ಮೀ (ವಿತರಣಾ ಕಾಲುವೆ 1 ರಿಂದ 34) ರ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ಪಂಪ್ ಸೆಟ್‍ಗಳ ಮೂಲಕ ಅನಧಿಕೃತವಾಗಿ ನೀರನ್ನ ಎತ್ತುವಳಿ  ಮಾಡುವುದನ್ನ ನಿಷೇಧಿಸಲಾಗಿದ್ದು,  ಅಂತಹ ಪಂಪ್ ಸೆಟ್‍ಗಳನ್ನ ಕಾರ್ಯನಿರ್ವಾಹಕ ಅಭಿಯಂತರರು ಕ.ನೀ.ನಿ.ನಿ.ನಂ-2, ಕಾಲುವೆ ವಿಭಾಗ, ವಡ್ಡರಹಟ್ಟಿ ಗಂಗಾವತಿ ಅಥವಾ ಸದರಿಯವರಿಂದ ಅಧಿಕಾರ ನೀಡಲ್ಪಟ್ಟ ಸಿಬ್ಬಂದಿಯವರು ಜಪ್ತಿ ಮಾಡುವರು. ಈ ಪ್ರದೇಶಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಷೇಧಿತ ಪ್ರದೇಶದ ಸುತ್ತ ಮುತ್ತ ಸಾರ್ವಜನಿಕರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶವು ಮದುವೆ, ಶವಸಂಸ್ಕಾರ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲವೆಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ನಿಷ್ಕ್ರಿಯ ಸಹಕಾರ ಸಂಘಗಳ ಸಮಾಪನೆಗೆ ಕ್ರಮ : ಆಕ್ಷೇಪಣೆಗಳಿಗೆ ಆಹ್ವಾನ

ಕೊಪ್ಪಳ, ಮಾ.26 (ಕರ್ನಾಟಕ ವಾರ್ತೆ):  ಜಿಲ್ಲೆಯ ತಾಲುಕು ಮಟ್ಟದ ವಿವಿಧ ಸಹಕಾರ ಸಂಘಗಳು ಸುಮಾರು ವರ್ಷಗಳಿಂದ ಕಾರ್ಯ ಚಟುವಟಿಕೆ ನಡೆಸದೇ ಇದ್ದು ಅಂತಹ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲು ಸಹಕಾರ ಇಲಾಖೆಯು ಕ್ರಮ ಕೈಗೊಳ್ಳಲಿದ್ದು, ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
       ಯಲಬುರ್ಗಾದ ಹರಿಜನ ಗಿರಿಜನ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಗಂಗಾವತಿಯ ತಾಲೂಕ ಗ್ರಾಮೋದ್ಯೋಗ ಸಹಕಾರ ಸಂಘ.  ಈ ಸಂಘಗಳು ಸುಮಾರು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದು ಸಹಕಾರ ಸಂಘಗಳ ಕಾಯ್ದೆ 1959 ಕಲಂ 72 ರ ಅಡಿಯಲ್ಲಿ ಈ ಸಹಕಾರಗಳನ್ನು ಕಾನೂನು ರೀತ್ಯಾ ಸಮಾಪನೆಗೊಳಿಸಲು ಸಹಕಾರ ಇಲಾಖೆ ಉದ್ದೇಶಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಒಂದು ವಾರದೊಳಗಾಗಿ, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಕೊಪ್ಪಳ ಅಥವಾ ದೂರವಾಣಿ ಸಂ-08539-221109 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ನಿಗದಿತ ಕಾಲಾವಧಿಯೊಳಗೆ ಆಕ್ಷೇಪಣೆಗಳು ಬಾರದಿದ್ದಲ್ಲಿ  ಕಾನೂನು ರೀತ್ಯಾ ಸಮಾಪನೆಗೊಳಿಸಲಾಗುವುದು, ಎಂದು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 23 March 2016

ರಾಜ್ಯ ಅನುಸೂಚಿತ ಜಾತಿ, ಬುಡಕಟ್ಟು ಆಯೋಗ ಅಧ್ಯಕ್ಷರಿಂದ ಕುಂದುಕೊರತೆ ಸಭೆ

ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಬಸಣ್ಣ ಕೆ. ಚಲವಾದಿ ಅವರು ಮಾ. 26 ರಂದು ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಕುಂದುಕೊರತೆಯ ಬಗ್ಗೆ ಸಭೆ ನಡೆಸಲಿದ್ದಾರೆ.
     ಆಯೋಗದ ಅಧ್ಯಕ್ಷರು ಅದೇ ದಿನ ಮಧ್ಯಾಹ್ನ 2-30 ಗಂಟೆಗೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅನುಷ್ಠಾನದ ಕುರಿತು, ಅಸ್ಪøಷ್ಯತೆ, ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರ, ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಶೇ. 22. 75 ಹಾಗೂ ಶೇ. 18 ರ ಮೀಸಲಾತಿ ಅನುದಾನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸುವರು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಮಾ. 30 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಮಾ. 30 ರಿಂದ ಏಪ್ರಿಲ್ 13 ರವರೆಗೆ ಜಿಲ್ಲೆಯ 64 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಆದೇಶ ಹೊರಡಿಸಿದ್ದಾರೆ.
     ನಿಷೇಧಾಜ್ಞೆ ಅನ್ವಯ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ಎಸ್‍ಟಿಡಿ, ಮೊಬೈಲ್, ಜೆರಾಕ್ಸ್, ಟೈಪಿಂಗ್ ಬಳಕೆ ನಿಷೇಧಿಸಲಾಗಿದೆ.  ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರ ಹೊಂದಿರುವ ವಿದ್ಯಾರ್ಥಿಗಳು, ನಿಯೋಜಿತ ಅಧಿಕಾರಿ, ಸಿಬ್ಬಂದಿಗಳನ್ನು ಹೊರತುಪಡಿಸಿ, ಯಾರೂ ಪರವಾನಿಗೆ ಇಲ್ಲದೆ ಪ್ರವೇಶಿಸುವಂತಿಲ್ಲ.  ನಿಷೇಧಿತ ವಲಯದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಮಾ. 27 ರಂದು ಈಶಾನ್ಯದ ಐಸಿರಿ ಸರಣಿಯ 28 ನೇ ಸಂಚಿಕೆ ಪ್ರಸಾರ

ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 28 ನೇ ಸಂಚಿಕೆ ಮಾ. 27 ರಂದು ಬೆಳಿಗ್ಗೆ 9-54 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 28 ನೇ  ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.  ಕಲಬುರಗಿಯ ನಿವೃತ್ತ ನ್ಯಾಯ ಮೂರ್ತಿಗಳಾಗಿರುವ ಎಮ್.ಬಿ. ಬಿರಾದಾರ ಅವರಿಂದ ಉತ್ತರ ಪತ್ರಿಕೆಗಳ ಮರು ಮೌಲ್ಯ ಮಾಪನ ಕುರಿತು ಒಂದು ಜಿಜ್ಞಾಸೆ.  ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಚಿತ್ತಾಪೂರ ತಾ. ಶೆಳ್ಳಗಿಯ ಸರ್ಕಾರಿ ಪ್ರೌಢ ಶಾಲೆಯ ಸಹಾಯಕ  ಶಿಕ್ಷಕ ರಾಜಕುಮಾರ ಪಾಟೀಲ ಅವರಿಂದ ಸಮಾಜ ವಿಜ್ಞಾನ ಕುರಿತು ಸಲಹೆ.  ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಹೇಗೆ ಗಮನಕೊಡಬೇಕು ಎಂಬುದರ ಬಗ್ಗೆ ಕಲಬುರಗಿಯ ಡಾ. ಅರುಂಧತಿ ಪಾಟೀಲ ಅವರಿಂದ ಆರೋಗ್ಯ ಸಲಹೆ.  ಕಲಬುರಗಿಯ ಚಿತ್ರ ಕಲಾವಿದ ಡಾ. ಸುಬ್ಬಯ್ಯ ಎಂ. ನೀಲಾ ಅವರ ಸಾಧನೆಯ ಪರಿಚಯ.  ಪರಿಣಿತ ಮಹಿಳೆಯರಿಂದ ಮಕ್ಕಳಿಗೆ ಸಂಸ್ಕಾರ ಕೊಡುವ ಕುರಿತು ಮತ್ತು ದಹಿ ವಡಾ ತಯಾರಿಸುವ ಕುರಿತು ಮಾಹಿತಿ.  ಊರು – ಟೂರಿನಲ್ಲಿ ಭಾಲ್ಕಿ ತಾಲೂಕಿನ ಪ್ರೇಕ್ಷಣಿಯ ಸ್ಥಳಗಳ ದರ್ಶನ.  ಕಲಬುರಗಿಯ ತಾಲೂಕಿನ ಡೊಂಗರಗಾಂವ ಗ್ರಾಮದ ಶ್ರೀಮಂತ ಕಾಂಬಳೆ ಹಾಗೂ ಸಂಗಡಿಗರಿಂದ ಭಜನೆ ಪದ.
     ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.   ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

Tuesday, 22 March 2016

ನೀರು ಪ್ರಕೃತಿಯ ಅಮೂಲ್ಯ ಕೊಡುಗೆ, ಪೋಲು ಮಾಡದಿರಿ : ಕೆ. ನಾಗರತ್ನ


ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ನೀರು ಈ ಭೂಮಿಗೆ ಪ್ರಕೃತಿದತ್ತವಾಗಿ ಬಂದ ಅಮೂಲ್ಯವಾದ ಕೊಡುಗೆ, ನೀರನ್ನು ವ್ಯರ್ಥವಾಗಿ ಪೋಲು ಮಾಡದೆ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ   ಕೆ. ನಾಗರತ್ನ ಅವರು ಹೇಳಿದರು. 

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಗರಸಭೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳದ ಸಾಹಿತ್ಯ ಭವನದಲ್ಲಿ  ಮಂಗಳವಾರದಂದು ಏರ್ಪಡಿಸಲಾಗಿದ್ದ ವಿಶ್ವ ನೀರು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

     ನೀರು ವಿಶಿಷ್ಟವಾದ ವಸ್ತು, ಜೀವಜಲ ಎನ್ನುತ್ತೇವೆ. ಮನುಷ್ಯ ಕೇವಲ ನೀರನ್ನು ಮಾತ್ರ ಸೇವಿಸಿ 21 ದಿನಗಳ ವರೆಗೂ ಬದುಕಬಲ್ಲ. ಹೀಗಿರುವಾಗ ನೀರಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ.  ಅರಬ್ ದೇಶಗಳಲ್ಲಿ ಏನೆಲ್ಲಾ ಐಷಾರಾಮಿ ವಸ್ತುಗಳು ಸಿಗುತ್ತದೆ. ಆದರೆ ನೀರನ್ನು ಹಣ ಕೊಟ್ಟು ಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ನೀರು ಧಾರಾಳವಾಗಿ ದೊರೆಯುತ್ತದೆ ಆದರೆ ಅದನ್ನ ತುಂಬಾ ಪೋಲು ಮಾಡುತ್ತೇವೆ. ಇದು ಹೀಗೇ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ  ನೀರನ್ನು ಹೆಚ್ಚು ಹಣ ಕೊಟ್ಟು ಕೊಳ್ಳುವ ಸ್ಥಿತಿ ಬಂದರೂ ಬರಬಹುದಾಗಿದೆ. ಆದ್ದರಿಂದ ನೀರನ್ನು ಮಿತವಾಗಿ ಬಳಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ ಅವರು ಹೇಳಿದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ. ಪಾನಘಂಟಿ ಮಾತನಾಡಿ, ಪ್ರತಿಯೊಬ್ಬರೂ ನೀರಿನ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳಬೇಕಿದೆ. ನೀರಿನ ಮಿತ ಬಳಕೆಯ ಕುರಿತು ನಿರಂತರ ಜಾಗೃತಿ ಮೂಡಿಸಬೇಕು. ನೀರು ಜೀವಜಲವಾಗಿದ್ದು ಇದರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ನೀರು ಸಂರಕ್ಷಣಾ ಜಾಗೃತಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.
      ಅಪರ ಜಿಲ್ಲಾಧಿಕಾರಿ ಪ್ರವೀಣಕುಮಾರ  ಜಿ.ಎಲ್. ಮಾತನಾಡಿ ಮಾನವ ವೈಜ್ಞಾನಿಕವಾಗಿ  ಚಂದ್ರಗ್ರಹ, ಮಂಗಳ ಗ್ರಹಕ್ಕೆ ಸಲೀಸಾಗಿ ಹೋಗಿಬರುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಆದರೆ ನೀರನ್ನ ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಇದು ದೇವರು ಕೊಟ್ಟ ಕಾಣಿಕೆ ಇದನ್ನ ದೇವರು ಮಾತ್ರ ಸೃಷ್ಟಿ ಮಾಡಲು ಸಾಧ್ಯ, ಆದ್ದರಿಂದ ದೇವರು ಕೊಟ್ಟ ಈ ಅಮೂಲ್ಯವಾದ ನೀರನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ಮಾನವನ ಭವಿಷ್ಯ ನೀರಿನ ಮೇಲೆ ಅವಲಂಬಿತವಾಗಿದೆ. ಇಸ್ರೇಲ್, ಆಸ್ಟ್ರೇಲಿಯಾ ನಂತಹ ದೇಶಗಳಲ್ಲಿ ಮಳೆ ಬಂದರೆ ಅದೇ ಪುಣ್ಯ. ಹೀಗಿದ್ದೂ ಕೂಡ ಆ ದೇಶಗಳು ನೀರನ್ನು ಸಂರಕ್ಷಣೆ ಮಾಡಿಕೊಂಡು ಅಭಿವೃದ್ಧಿ ಹೊಂದುತ್ತಿವೆ. ನಮ್ಮಲ್ಲಿ ಪ್ರತಿ ಮನೆ, ಪ್ರತಿ ಗದ್ದೆಗಳಲ್ಲಿ ನೀರನ್ನ ಪೋಲುಮಾಡುತ್ತೇವೆ ಇದೇ ರೀತಿ ಮುಂದುವರೆದರೆ ಮುಂದೆ ದೊಡ್ಡ ಸಮಸ್ಯೆಯಾಗಲಿದ್ದು ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಂಡು ನೀರಿನ ಸಂರಕ್ಷಣೆ ಮಾಡಬೇಕಾಗಿದೆ ಎಂದರು.
    ನಗರಸಭೆ ಪೌರಾಯುಕ್ತ ರಮೇಶ.ಎಂ.ಪಟ್ಟೇದಾರ ಪ್ರಾಸ್ತಾವಿಕವಾಗಿ ಮಾತನಾಡಿ ನೀರು ಅಮೂಲ್ಯವಾದದ್ದು ಪ್ರಕೃತಿ ನಮಗೆ ನೀಡಿದ ವರ ಆದ್ದರಿಂದ ಹಬ್ಬ-ಹರಿದಿನ ಜಯಂತಿಗಳ ಆಚರಣೆಗಳಂತೆಯೇ ವಿಶ್ವ ನೀರಿನ ದಿನಾಚರಣೆ ಮಾಡಲಾಗುತ್ತದೆ. ಮುಖ ಕೈಕಾಲು ತೊಳೆಯುವಾಗ, ಸ್ನಾನ, ಶವರ್ ಉಪಯೋಗಿಸುವಾಗ, ಮನೆ ಕಟ್ಟಿಸುವಾಗ, ವಾಹನ ತೊಳೆಯುವಾಗ, ಮನೆ ತೊಳೆಯುವಾಗ ಹಾಗೂ ದಿನನಿತ್ಯ ಮನೆಗಳಲ್ಲಿ ನೀರು ಬಳಸುವಾಗ ಮಿತವಾಗಿ ಬಳಸಬೇಕು, ಸಾರ್ವಜನಿಕವಾಗಿ ನೀರು ಪೋಲಾಗುತ್ತಿರುವಾಗ ನೋಡಿದರೂ ಅದು ನಮಗೆ ಸಂಬಂಧಿಸಿದ್ದಲ್ಲ ಎಂದು ಸುಮ್ಮನಿರದೆ ಸಂಬಂಧಿಸಿದವರ ಗಮನಕ್ಕೆ ತಂದು ನೀರು ಸಂರಕ್ಷಣೆಗೆ ಕೈಜೋಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯಗಿದ್ದು. ಪ್ರತಿಯೊಬ್ಬರೂ ನೀರಿನ ಸಂರಕ್ಷಣೆ ಹಾಗೂ ಮಿತವ್ಯಯದ ಬಗ್ಗೆ ತಿಳಿದು ನಗರಸಭೆಯೊಂದಿಗೆ ಕೈಜೋಡಿಸಬೇಕಿದೆ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
     ಜಿಲ್ಲಾ ಸರ್ಕಾರಿ ವಕೀಲ ಅಸೀಫ್ ಅಲೀ ಮಾತನಾಡಿದರು. ವಿಜಯ ನಗರ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯೆ ಸಾವಿತ್ರಿ ಮುಜುಂದಾರ ವಿಶೇಷ ಉಪನ್ಯಾನ ನೀಡಿದರು.  ಸಸಿಗಳಿಗೆ ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ ಬನ್ನಿಕೊಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಾವಲಿ ಬನ್ನಿಕೊಪ್ಪ, ನಗರಸಭೆ ಸದಸ್ಯ ಪ್ರಾಣೇಶ ಮಾದಿನೂರ, ಒಳಚರಂಡಿ ವಿಭಾಗ ಸ.ಕಾ ಅಭಿಯಂತರ  ಎ.ಪಿ. ರೆಡ್ಡಿ, ಸ.ಕಾ. ಅಭಿಯಂತರ ಆರ್.ಕೃಷ್ಣ, ನಗರಸಭೆ ಅಧಿಕಾರಿಗಳು ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. ನಗರಸಭೆ ಸಿಂಬಂದಿ ಶಾರದಾ ಪ್ರಾರ್ಥಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆನ್‍ಲೈನ್ ವ್ಯವಸ್ಥೆ ಜಾರಿ : ಜಿಲ್ಲೆಯಾದ್ಯಂತ ರೈತ ಜಾಗೃತಿ


ಕೊಪ್ಪಳ ಮಾ. 22 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರ ದೇಶದಲ್ಲಿಯೇ ಮಾದರಿಯಾದ ಕೃಷಿ ಉತ್ಪನ್ನಗಳ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿದ್ದು, ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೃಷಿ ಮಾರಾಟ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸಹಯೋಗದೊಂದಿಗೆ ರೈತ ಜಾಗೃತಿ ಕಾರ್ಯಕ್ರಮವನ್ನು ಮಾ. 21 ರಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ರೈತರು ಏನು ಮಾಡಬೇಕು ? : ರಾಜ್ಯ ಸರ್ಕಾರ 2013 ರಲ್ಲಿ ಹೊಸ ಕೃಷಿ ಮಾರಾಟ ನೀತಿಯನ್ನು ರೂಪಿಸಿ ಆನ್‍ಲೈನ್ ಪದ್ಧತಿಯಲ್ಲಿಯೇ ಮಾರುಕಟ್ಟೆ ಒದಗಿಸಲು ಮುಂದಾಗಿತು.  ರಾಜ್ಯದ ಎಲ್ಲಾ ಎಪಿಎಂಸಿಗಳಲ್ಲಿ ಈ ಆನ್‍ಲೈನ್ ಮಾರುಕಟ್ಟೆ ಒದಗಿಸಲಾಗುತ್ತಿದ್ದು, ಇದರಿಂದ ರೈತರಿಗಾಗುವ ಅನುಕೂಲತೆಗಳು ಬಹಳಷ್ಟಿವೆ.  ರೈತರು ಮೊದಲು ತಮ್ಮ ಹತ್ತಿರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಮ್ಮ ಹೆಸರು, ಬ್ಯಾಂಕ್ ಖಾತೆ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಲಾಗುತ್ತದೆ. 
ನೂತನ ವ್ಯವಸ್ಥೆ ಹೇಗೆ ? : ರೈತರು ಕೃಷಿ ಹುಟ್ಟುವಳಿಗಳನ್ನು ಮಾರಾಟಕ್ಕಾಗಿ ತಂದಾಗ ಮಾರುಕಟ್ಟೆ ಒಳಗೆ ಪ್ರವೇಶ ಮಾಡುತ್ತಿದ್ದಂತೆ ಉತ್ಪನ್ನಗಳ ಗುಣ ವಿಶ್ಲೇಷಣೆಗಾಗಿ ಮಾದರಿಯನ್ನು ತೆಗೆದು ಕಳುಹಿಸಿಕೊಟ್ಟು ಇದಕ್ಕೆ ಲಾಟ್ ಸಂಖ್ಯೆ ನೀಡಲಾಗುತ್ತದೆ.  ಮಾರಾಟಕ್ಕೆ ದಲಾಲರ ಅಂಗಡಿಗೆ ಹೋದಾಗ ಅಲ್ಲಿ ಆನ್‍ಲೈನ್‍ನಲ್ಲಿ ಖರೀದಿದಾರರು ಪರಿಶೀಲನೆ ನಡೆಸಿ, ಸ್ಥಳೀಯ ಖರೀದಿದಾರರು, ಹೊರ ರಾಜ್ಯದ ಮತ್ತು ಇತರೆ ಕಡೆಯಿಂದ ಆನ್‍ಲೈನ್‍ನಲ್ಲಿ ಖರೀದಿ ಮಾಡುವರು.  ನಂತರ ಸಂಬಂಧಿಸಿದ ರೈತರ ಮೊಬೈಲ್‍ಗೆ ಲಾಟ್‍ಗೆ ಎಷ್ಟು ಬೆಲೆ ನಿಗದಿಯಾಗಿದೆ ಎಂದು ಎಸ್‍ಎಂಎಸ್ ಸಂದೇಶ ಮೂಲಕ ತಿಳಿಸಲಾಗುತ್ತದೆ.  ಅಲ್ಲದೆ ಎಪಿಎಂಸಿ ನಲ್ಲಿಯೂ ಪ್ರದರ್ಶನ ಪರದೆಯ ಮೇಲೆ ಪ್ರದರ್ಶಿತವಾಗುತ್ತದೆ.  ಬಿಡ್ಡಿಂಗ್ ಒಪ್ಪಿಗೆಯಾದಲ್ಲಿ ಮಾತ್ರ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು.  ಇಲ್ಲದಿದ್ದಲ್ಲಿ ನಿರಾಕರಿಸಬಹುದು.  ಒಪ್ಪಿಗೆ ನೀಡಿದಲ್ಲಿ ಮಾತ್ರ ಉತ್ಪನ್ನದ ತೂಕ ಮಾಡಿ ವಿದ್ಯುನ್ಮಾನ ತೂಕದ ರಸೀದಿ ನೀಡಲಾಗುತ್ತದೆ.  ನಂತರ ರೈತರಿಗೆ ನೇರವಾಗಿ ಎಪಿಎಂಸಿ ಮೂಲಕ ಅವರ ಖಾತೆಗೆ ಬಿಲ್ ಮೊತ್ತದ ಹಣ ವರ್ಗಾವಣೆಯಾಗುತ್ತದೆ.  ಇದರ ಖಾತರಿ ಮಾಡಲು ರೈತ ಖಾತೆದಾರರ ಮೊಬೈಲ್‍ಗೆ ಹಣ ಜಮೆ ಆಗಿರುವ ಬಗ್ಗೆ ಎಸ್‍ಎಂಎಸ್ ಸಂದೇಶ ಬರುತ್ತದೆ.  ನಂತರ ಖರೀದಿದಾರರಿಗೆ ವಸ್ತುಗಳ ಸಾಗಾಣಿಕೆಗೆ ಆನ್‍ಲೈನ್ ಪರ್ಮಿಟ್ ನೀಡಲಾಗುತ್ತದೆ.  ಇದಲ್ಲದೆ ಉತ್ತಮ ಧಾರಣೆ ಸಿಕ್ಕಾಗ ಮಾರಾಟ ಮಾಡಲು ಅನುಕೂಲವಾಗಲು ರೈತರಿಗೆ ಉಗ್ರಾಣ ಆಧಾರಿತ ಮಾರಾಟ ವ್ಯವಸ್ಥೆ ಜಾರಿಗೆ ತರಲಾಗಿದೆ.  ರೈತರು ಮಾರುಕಟ್ಟೆ ಧಾರಣೆಯ ಮಾಹಿತಿ ಅರಿತು ಮಾರುಕಟ್ಟೆ ಉತ್ಪನ್ನಗಳನ್ನು ತರಬೇಕಾಗುತ್ತದೆ.  ಮಾರಾಟದ ವೇಳೆ ಬೆಲೆಯಲ್ಲಿ ಏರಿಳಿತವಾದಲ್ಲಿ ಉಗ್ರಾಣದಲ್ಲಿ ಉತ್ಪನ್ನಗಳನ್ನು ಇಡುವ ಮೂಲಕ ಉತ್ತಮ ಧಾರಣೆ ಬಂದಾಗ ಮಾರಾಟ ಮಾಡಬಹುದು.  ಮಾರಾಟ ಮಾಡಿದ ಮೊತ್ತದಲ್ಲಿ ಮುಂಗಡವಾಗಿ ಬ್ಯಾಂಕ್‍ನಿಂದ ಪಡೆದ ಸಾಲವನ್ನು ಪಾವತಿಸಿ ಉಳಿದ ಮೊತ್ತವನ್ನು ರೈತರ ಖಾತೆಗೆ ಆನ್‍ಲೈನ್‍ನಲ್ಲಿ ಜಮಾ ಮಾಡಲಾಗುತ್ತದೆ.  ಇದೆಲ್ಲವೂ ಸಹ ಮೊಬೈಲ್ ಮೂಲಕ ಸಂಬಂಧಿಸಿದ ರೈತರಿಗೆ ಸಂದೇಶ ತಲುಪುತ್ತಿರುತ್ತದೆ.
ರೈತರಿಗೆ ಉಪಯೋಗ : ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯಿಂದ ಸ್ಪರ್ಧೆ ಹೆಚ್ಚಳವಾಗಿ ರೈತರಿಗೆ ಸ್ಪರ್ಧಾತ್ಮಕ ದರ ಸಿಗುವ ಮೂಲಕ ಉತ್ತಮ ಬೆಲೆ ಸಿಗುತ್ತದೆ.  ಆನ್‍ಲೈನ್‍ನಲ್ಲಿ ಖರೀದಿ ಮಾಡಲು ಉತ್ಪನ್ನಗಳ ಮಾದರಿ ತೆಗೆದು ವಿಶ್ಲೇಷಣೆ ಮಾಡುವುದರಿಂದ ಹೊರ ರಾಜ್ಯಗಳಿಂದ ಆನ್‍ಲೈನ್‍ನಲ್ಲಿ ಖರೀದಿಸುವವರಿಗೆ ಗುಣಮಟ್ಟದ ಖಾತರಿ ಸಿಗುತ್ತದೆ.   ಅವರು ದೂರದಲ್ಲಿಯೇ ಕುಳಿತು ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ.  ರೈತರಿಗೆ ನೆರವಾಗಿ, ಖರೀದಿದಾರರಿಗೂ ಸರಳವಾಗಿ ಖರೀದಿಗೆ ಅವಕಾಶ ಕಲ್ಪಿಸುವುದೇ ವಿದ್ಯುನ್ಮಾನ ಮಾರುಕಟ್ಟೆ ವೇದಿಕೆಯ ಉದ್ದೇಶವಾಗಿದೆ.  ಸ್ಪಷ್ಟ, ಪಾರದರ್ಶಕವಾದ ವಿಧಾನ ಇದಾಗಿದ್ದು, ಇದರ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ 17 ದಿನಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ.
     ಇನ್ನಾದರೂ ರೈತರು ಜಾಗೃತರಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಗಮನಿಸಿ, ಇಂದೇ ಎಪಿಎಂಸಿ ಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸುವಂತೆ ಕೃಷಿ ಮಾರಾಟ ಇಲಾಖೆ ರೈತರಲ್ಲಿ ಮನವಿ ಮಾಡಿದೆ.

ಹಣ್ಣು ಬೆಳೆಗಳ ಉಚಿತ ತರಬೇತಿ ಶಿಬಿರ

ಕೊಪ್ಪಳ ಮಾ. 22 (ಕರ್ನಾಟಕ ವಾರ್ತೆ): ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ ವಿವಿಧ ಹಣ್ಣು ಬೆಳೆಗಳ ಕೃಷಿ ಪದ್ಧತಿ ಕುರಿತು ಉಚಿತ ತರಬೇತಿ ಶಿಬಿರ ಆಯೋಜಿಸಿದೆ.
     ಮಾವು, ಬಾಳೆ, ಪಪ್ಪಾಯ, ಪೇರು ಮತ್ತು ಚಿಕ್ಕು (ಸಪೋಟ) ಹಣ್ಣು ಬೆಳೆಗಳ ಬಗ್ಗೆ ಮೂರು ದಿನಗಳ ತರಬೇತಿ ಶಿಬಿರವನ್ನು ಬರುವ ಏಪ್ರಿಲ್ ತಿಂಗಳಿನಲ್ಲಿ ಏರ್ಪಡಿಸಿದೆ.   ಹಣ್ಣು ಬೆಳೆಗಳ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಸಂಸ್ಕರಣಾ ಕ್ರಮಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಉಚಿತವಾಗಿ ತರಬೇತಿ ನೀಡಲಾಗುವುದು.  ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. 
     ಆಸಕ್ತ ರೈತರು ಸ್ವ-ಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ, ಇವರಿಗೆ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು.  ಹೆಚ್ಚಿನ ವಿವರಗಳಿಗೆ ಮೊ. 9482630790 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹೋಳಿ ಹಬ್ಬ : ಮದ್ಯಪಾನ ನಿಷೇಧ ಜಾರಿ

ಕೊಪ್ಪಳ ಮಾ. 22 (ಕರ್ನಾಟಕ ವಾರ್ತೆ): ಹೋಳಿ ಹಬ್ಬವನ್ನು ಜಿಲ್ಲೆಯಲ್ಲಿ ಮಾ. 22 ರಿಂದ 24 ರವರೆಗೆ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಶಾಂತಿ ಸುವ್ಯವಸ್ಥೆ ಹಾಗೂ ಕಾನೂನು ಪಾಲನೆ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮದ್ಯ ಮಾರಾಟ ಮತ್ತು ಮದ್ಯಪಾನ ನಿಷೇಧ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಹೋಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಕೊಪ್ಪಳ ನಗರ ಹಾಗು ಕೊಪ್ಪಳ ತಾಲೂಕಿನಾದ್ಯಂತ ಮಾ. 22 ರಂದು ರಾತ್ರಿ 08 ಗಂಟೆಯಿಂದ ಮಾ. 24 ರಂದು ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.  ಗಂಗಾವತಿ ನಗರ, ಮತ್ತು ಗಂಗಾವತಿ ತಾಲೂಕು.  ಯಲಬುರ್ಗಾ ಪಟ್ಟಣ ಮತ್ತು ಯಲಬುರ್ಗಾ ತಾಲೂಕು ಹಾಗೂ ಕುಷ್ಟಗಿ ಪಟ್ಟಣ ಮತ್ತು ಕುಷ್ಟಗಿ ತಾಲೂಕಿನಾದ್ಯಂತ ಮಾ. 23 ರಂದು ರಾತ್ರಿ 8 ಗಂಟೆಯಿಂದ ಮಾ. 25 ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ವಿಶ್ವ ಅರಣ್ಯ ದಿನಾಚರಣೆ


ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ಕೊಪ್ಪಳದ ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಜಂಟಿಯಾಗಿ ವಿಶ್ವ ಅರಣ್ಯ ದಿನಾಚರಣೆಯನ್ನು ಸೋಮವಾರದಂದು ಕೊಪ್ಪಳದಲ್ಲಿ ಆಚರಿಸಲಾಯಿತು.

     ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.  ಅರಣ್ಯಗಳು ಮತ್ತು ನೀರು ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿ ವಿಶ್ವ ಅರಣ್ಯ ದಿನಾಚರಣೆ ಆಚರಿಸಲಾಗಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್. ಪ್ರಭಾಕರನ್ ಹಾಗೂ ಸಿ.ಡಿ. ಬೋರ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜಿಲ್ಲಾಡಳಿತ ಭವನದ ಆವರಣ ಹಾಗೂ ನೂತನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಲವು ಸಸಿಗಳನ್ನು ನೆಡಲಾಯಿತು.  
 
ಅಲ್ಲದೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಅರಣ್ಯ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಉಚಿತ ಎಲ್‍ಪಿಜಿ ಗ್ಯಾಸ್ ಸ್ಟೋವ್‍ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.  ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಂದ ರಕ್ತ ದಾನ ನಡೆಯಿತು.

ಖಾಸಗಿ ಕಾಲೇಜುಗಳಿಗೆ ಹೊಸ ವಿಷಯ ಮಂಜೂರಾತಿ : ಅರ್ಜಿ ಆಹ್ವಾನ

ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 2016-17 ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿಗೆ ಹೊಸ ವಿಷಯ, ಸಂಯೋಜನೆ, ವಿಭಾಗಗಳ ಮಂಜೂರಾತಿಗಾಗಿ ಅರ್ಹ ಕಾಲೇಜುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
     ಮಂಜೂರಾತಿ ಪಡೆಯಲಿಚ್ಚಿಸುವ ಕಾಲೇಜುಗಳು ತಮ್ಮ ಅರ್ಜಿಯನ್ನು ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಕೊಪ್ಪಳ ಇಲ್ಲಿಗೆ ಮಾ.30 ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ದತ್ತಿನಿಧಿ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2015 ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
     ಮಲ್ಲಿಕಾ ದತ್ತಿ ಪ್ರಶಸ್ತಿಯಡಿ ಅತ್ಯುತ್ತಮ ಲೇಖಕಿಯರ ಕೃತಿಗೆ ರೂ.500 ಬಹುಮಾನ ನೀಡಲಾಗುವುದು. ಅಂತರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ ಪ್ರಶಸ್ತಿಯಡಿ ಮಹಿಳೆಯರ ಅತ್ಯುತ್ತಮ ಕೃತಿಗೆ ರೂ.500 ಬಹುಮಾನ. ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿಯಡಿ ಲೇಖಕಿ ಒಬ್ಬರ ಕೃತಿಗೆ ರೂ.500 ಬಹುಮಾನ. ಲಿಂ.ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿಯಡಿ (ಮಹಿಳೆಯರನ್ನು ಕುರಿತು ಅಥವಾ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚಿತವಾದ ಕೃತಿ) ಗೆ ರೂ.500 ಬಹುಮಾನ.   ನೀಲಗಂಗಾ ದತ್ತಿ ಪ್ರಶಸ್ತಿಯಡಿ ಮಹಿಳೆಯರ ಪ್ರಬಂಧ, ಕವನ, ಕಾವ್ಯ ಮತ್ತು ಸಮಕಾಲೀನ ಮೌಲಿಕ ವಿಚಾರವುಳ್ಳ ಗ್ರಂಥಕ್ಕೆ ರೂ.500 ಬಹುಮಾನ.  ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ ಪ್ರಶಸ್ತಿಯಡಿ ಅತ್ಯುತ್ತಮ ಕಾದಂಬರಿಗೆ ರೂ.500 ಬಹುಮಾನ.  ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿಯಡಿ ಉದಯೋನ್ಮುಖ ಮಹಿಳಾ ಬರಹಗಾರರ ಅತ್ಯುತ್ತಮ ಕೃತಿಗೆ ರೂ.250 ಬಹುಮಾನ.  ದಿ|| ಗೌರಮ್ಮ ಹಾರ್ನಹಳ್ಳಿ ಕೆ.ಮಂಜಪ್ಪ ದತ್ತಿ ಪ್ರಶಸ್ತಿಯಡಿ ಯಾವುದೇ ಪ್ರಕಾರದ ಕೃತಿಗೆ ರೂ.1000 ಬಹುಮಾನ. ದಿ|| ಎಚ್.ಕರಿಯಣ್ಣ ದತ್ತಿ ಪ್ರಶಸ್ತಿಯಡಿ ಮಕ್ಕಳ ಪುಸ್ತಕಕ್ಕೆ ರೂ.500 ಬಹುಮಾನ. ಈ ಮೇಲಿನ ದತ್ತಿ ಸ್ಪರ್ಧೆಗೆ ಮಹಿಳೆಯರು ಬರೆದ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು. 
            ಡಾ|| ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿಯಡಿ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಕೃತಿಗೆ ರೂ.500 ಬಹುಮಾನ. ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ ಪ್ರಶಸಿಯಡಿ ಹರಿದಾಸ ಸಾಹಿತ್ಯ ಕೃತಿಗೆ ರೂ.250 ಬಹುಮಾನ.  ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿಯಡಿ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ) ಮಕ್ಕಳ ಪುಸ್ತಕಕ್ಕೆ ರೂ.250 ಬಹುಮಾನ. ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿಯಡಿ ಉದಯೋನ್ಮುಖ ಬರಹಗಾರರ ಅತ್ಯುತ್ತಮ ಚೊಚ್ಚಲ ಪದ್ಯಕೃತಿಗೆ ರೂ.500 ಬಹುಮಾನ.  ರತ್ನಾವರ್ಣಿ-ಮುದ್ದಣ್ಣ-ಅನಾಮಿಕ ದತ್ತಿ ಪ್ರಶಸ್ತಿಯಡಿ ಗದ್ಯಕೃತಿ ಹಾಗೂ ಪದ್ಯಕೃತಿಗೆ ತಲಾ ರೂ.500 ಬಹುಮಾನ. ಪಿ.ಶಾಂತಿಲಾಲ್ ದತ್ತಿ ಪ್ರಶಸ್ತಿಯಡಿ ಜೈನ ಸಾಹಿತ್ಯ ಪ್ರಕಾರದ ಕನ್ನಡ ಪುಸ್ತಕಕ್ಕೆ ರೂ.500 ಬಹುಮಾನ. ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿಯಡಿ ಜಾನಪದ ಸಾಹಿತ್ಯ ಕೃತಿಗೆ ರೂ.500 ಬಹುಮಾನ.    ಜಯಲಕ್ಷ್ಮಮ್ಮ ಬಿ.ಎಸ್.ಸಣ್ಣಯ್ಯ ದತ್ತಿ ಪ್ರಶಸ್ತಿಯಡಿ ಪ್ರಾಚೀನ ಸಂಪಾದಿತ ಕೃತಿಗೆ ರೂ.1000 ಬಹುಮಾನ. ಕುಂಬಾಸ ದತ್ತಿ ಪ್ರಶಸ್ತಿಯಡಿ ಕನ್ನಡ ಹಾಸ್ಯ ಸಾಹಿತ್ಯ ಕೃತಿಗೆ ರೂ.500 ಬಹುಮಾನ. ಪ್ರೋ. ಡಿ.ಸಿ.ಅನಂತಸ್ವಾಮಿ ದತ್ತಿ ಪ್ರಶಸ್ತಿಯಡಿ ಚೊಚ್ಚಲ ಕವನ ಸಂಕಲನಕ್ಕೆ ರೂ.500 ಬಹುಮಾನ. ಜಿ.ಆರ್. ರೇವಯ್ಯ ದತ್ತಿ ಪ್ರಶಸ್ತಿಯಡಿ ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ರೂ.1000 ಬಹುಮಾನ. ‘ಸಿಸು’ ಸಂಗಮೇಶ ದತ್ತಿ ಪ್ರಶಸ್ತಿಯಡಿ ಮಕ್ಕಳ ಸಾಹಿತ್ಯ ಕೃತಿಗೆ ರೂ.500 ಬಹುಮಾನ. ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿಯಡಿ ಉತ್ತಮ ಸಾಹಿತ್ಯ ಕೃತಿಗೆ ರೂ.500 ಬಹುಮಾನ (ರಾಯಚೂರು ಜಿಲ್ಲೆಯ ಬರಹಗರರಿಗೆ ಮಾತ್ರ). ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿಯಡಿ ಸಣ್ಣಕಥಾ ಸಂಕಲನ ಕೃತಿಗೆ ರೂ.500 ಬಹುಮಾನ. ಡಾ.ಆರ್.ಜೆ. ಗಲಗಲಿ ದತ್ತಿ ಪ್ರಶಸ್ತಿಯಡಿ ಕವನ ಸಂಕಲನಕ್ಕೆ ರೂ.1000 ಬಹುಮಾನ. ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ ಜೈನ ದತ್ತಿ ಪ್ರಶಸ್ತಿಯಡಿ ಜೈನ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗೆ ರೂ.2500 ಬಹುಮಾನ.
       ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಗಳು ಅತ್ಯುತ್ತಮ ಕಾದಂಬರಿಗಾಗಿ ರೂ.5000, ಸಣ್ಣಕಥಾ ಸಂಕಲನಕೃತಿ ರೂ.3000, ಮಕ್ಕಳ ಸಾಹಿತ್ಯ ಕೃತಿಗಾಗಿ ರೂ.2000, ಅನುವಾದಿತ ಕೃತಿ/ಲೇಖನ ಕೃತಿಗಾಗಿ ರೂ.2000 ಬಹುಮಾನ,  ದಿ.ಡಿ.ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ರೂ.5000 ಬಹುಮಾನ, ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿಯಡಿ ನಾಟಕ ಪ್ರಕಾರದ ಕೃತಿಗೆ ರೂ.1000 ಬಹುಮಾನ. ಡಾ.ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ ಪ್ರಶಸ್ತಿಯಡಿ ಮನೋವಿಜ್ಞಾನ ಸಾಹಿತ್ಯ ಕೃತಿಗೆ ರೂ.5000 ಬಹುಮಾನ.  ನಾ.ಕು. ಗಣೇಶ್ ದತ್ತಿ ಪ್ರಶಸ್ತಿಯಡಿ ಪ್ರಥಮ ಕವನ ಸಂಕಲನಕ್ಕೆ ರೂ.1000 ಬಹುಮಾನ.  ಬೀಳಗಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸವಿನೆನಪು ದತ್ತಿ ಪ್ರಶಸ್ತಿಯಡಿ ರೂ.5000 ಬಹುಮಾನ, ಬಿಸಲೇರಿ ಜಯಣ್ಣ ಮತ್ತು ಬ್ರದರ್ಸ್ ದತ್ತಿ ಪ್ರಶಸ್ತಿಯಡಿ ವಿಜ್ಞಾನ ತಂತ್ರಜ್ಞಾನ ಪ್ರಕಾರಗಳ   ವೈದ್ಯಕೀಯ ಶಾಸ್ತ್ರ/ಯಂತ್ರಶಾಸ್ತ್ರ/ವಿದ್ಯುನ್ಮಾನ ಶಾಸ್ತ್ರಗಳು ಕನ್ನಡದಲ್ಲಿ ರಚಿತವಾದ ಕೃತಿಗಳಿಗೆ ರೂ.10000 ಬಹುಮಾನ. ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿನಿಧಿ ಪ್ರಶಸ್ತಿಯಡಿ ಮಕ್ಕಳ ಸಾಹಿತ್ಯ ಗದ್ಯ ಪ್ರಕಾರದ ಕತೆಗೆ ರೂ.2000 ಬಹುಮಾನ. ಪಳಕಳ ಸೀತಾರಾಮಭಟ್ಟ ದತ್ತಿನಿಧಿ ಪ್ರಶಸ್ತಿಯಡಿ ಮಕ್ಕಳ ಸಾಹಿತ್ಯ ಕೃತಿಗೆ ರೂ.2000 ಬಹುಮಾನ ಇರುತ್ತದೆ.
        ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-560018 ದೂ. 080-26612991, 26623584 ಇಲ್ಲಿಗೆ. ಏ 30 ರೊಳಗಾಗಿ ಕಳುಹಿಸಬೇಕು. ಒಂದಕ್ಕಿಂತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗಿರುತ್ತದೆ. ಪಿಎಚ್‍ಡಿ ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಭಾಗವಹಿಸುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು, ಹೆಚ್ಚಿನ ವಿವರಗಳಿಗೆ ಸ್ವ-ವಿಳಾಸದ ಸ್ಟಾಂಪ್ ಹಚ್ಚಿದ ಲಕೋಟೆ ಇಟ್ಟು ಪತ್ರ ಕಳುಹಿಸಬೇಕು. ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 21 March 2016

ಮಾ. 22 ರಂದು ಕೊಪ್ಪಳ ನಗರಸಭೆ ವತಿಯಿಂದ ವಿಶ್ವ ನೀರು ದಿನಾಚರಣೆ

ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವತಿಯಿಂದ ವಿಶ್ವ ನೀರು ದಿನಾಚರಣೆ ಮಾ. 22 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಕೆ. ನಾಗರತ್ನ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ, ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ ಬನ್ನಿಕೊಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಾವಲಿ ಬನ್ನಿಕೊಪ್ಪ ಅತಿಥಿಗಳಾಗಿ ಭಾಗವಹಿಸುವರು.  ವಿಜಯನಗರ ವಿವಿ ಸಿಂಡಿಕೇಟ್ ಸದಸ್ಯೆ ಸಾವಿತ್ರಿ ಮುಜುಂದಾರ್ ಅವರು ವಿಶೇಷ ಉಪನ್ಯಾಸ ನೀಡುವರು ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ತಿಳಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ರೈತರು ಜಾಗೃತರಾಗಿ- ಎಂ. ಕನಗವಲ್ಲಿ ಮನವಿ


ಕೊಪ್ಪಳ, ಮಾ.21 (ಕರ್ನಾಟಕ ವಾರ್ತೆ) : ಕಷ್ಟ ಪಟ್ಟು ಬೆಳೆ ಬೆಳೆದ ರೈತರಿಗೆ ದೊರೆಯಬೇಕಾದ ಲಾಭಾಂಶ ಅನ್ಯರ ಪಾಲಾಗುವುದನ್ನು ತಪ್ಪಿಸಿ, ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳನ್ನು ರೈತರು ಮಾರಾಟ ಮಾಡಿ, ಆರ್ಥಿಕ ಸದೃಢರಾಗಬೇಕು.  ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಇನ್ನಾದರೂ ರೈತರು ಜಾಗೃತರಾಗಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ರೈತರಲ್ಲಿ ಮನವಿ ಮಾಡಿಕೊಂಡರು.

     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೃಷಿ ಮಾರಾಟ ಇಲಾಖೆಯ ಸಹಯೋಗದಲ್ಲಿ ಕೃಷಿ ಉತ್ಪನ್ನಗಳ ಆನ್‍ಲೈನ್ ಟೆಂಡರ್ ಮತ್ತು ವಹಿವಾಟಿನ ಕುರಿತು ಜಿಲ್ಲೆಯಾದ್ಯಂತ ಆಯೋಜಿಸಲಾಗಿರುವ ರೈತ ಶಿಕ್ಷಣ ಕಾರ್ಯಕ್ರಮ ಮತ್ತು ವಿಶೇಷ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಸೋಮವಾರದಂದು ಕೊಪ್ಪಳ ಎಪಿಎಂಸಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

     ಗ್ರಾಮೀಣ ಪ್ರದೇಶಗಳಲ್ಲಿ ರೈತರು ಕಷ್ಟಪಟ್ಟು ದುಡಿದ ಬೆಳೆಗೆ ಸೂಕ್ತ ದರ ದೊರೆತು, ರೈತರಿಗೇ ಅದರ ಲಾಭ ಸಿಗುವಂತಾಗಬೇಕು.  ರೈತರ ಹತ್ತಿರಕ್ಕೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಕೊಂಡೊಯ್ಯಲು ಹಾಗೂ ಪಾರದರ್ಶಕ ವಯವಸ್ಥೆಯಲ್ಲಿ ಸರಳವಾಗಿ ಉತ್ಪನ್ನಗಳನ್ನು ಮಾರಾಟ ಮಾಡಿ, ರೈತರು ಸ್ಪರ್ಧಾತ್ಮಕ ಬೆಲೆ ಪಡೆಯಲು ಅನುಕೂಲವಾಗುವಂತೆ ಕರ್ನಾಟಕ ಸಕಾರ ದೇಶದಲ್ಲಿಯೇ ಪ್ರಥಮವಾಗಿ ಕರ್ನಾಟಕ ಕೃಷಿ ಮಾರಾಟ ನೀತಿಯನ್ನು ಹೊಸ ಚಿಂತನೆಗಳೊಂದಿಗೆ ಜಾರಿಗೆ ತಂದಿದೆ.  ಇದಕ್ಕಾಗಿ ಆನ್‍ಲೈನ್ ಮಾರಾಟ ವೇದಿಕೆಯ ಮೂಲಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯವಸ್ಥೇ ಮಾಡಲಾಗುತ್ತದೆ.  ರೈತರು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಹೆಚ್ಚು ಸಮಯವನ್ನು ಕಳೆಯದೆ, ಮಾರುಕಟ್ಟೆಯಲ್ಲಿ ಸಮಸ್ಯೆಗಳನ್ನು ಎದುರಿಸದೆ, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಉತ್ಪನ್ನಗಳ ಮಾರಾಟದ ಮೌಲ್ಯ ವರ್ಗಾವಣೆಯಾಗುವಂತೆ ವ್ಯವಸ್ಥೇ ಕಲ್ಪಿಸಲಾಗುತ್ತಿದೆ.  ಈ ನಿಟ್ಟಿನಲ್ಲಿ ರೈತರು ನೂತನ ವ್ಯವಸ್ಥೆ ಬಗ್ಗೆ ಜಾಗೃತರಾಗಿ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು.  ರೈತರ ಶ್ರಮದ ಪ್ರತಿಫಲ, ಸಂಬಂಧಿಸಿದ ರೈತರಿಗೇ ಲಭಿಸುವಂತಾಗಬೇಕು.  ರೈತರು ಇನ್ನಾದರೂ ಜಾಗೃತರಾಗಬೇಕು.  ಕೃಷಿ ಮಾರಾಟ ಇಲಾಖೆ ಜಾರಿಗೊಳಿಸಿರುವ ಕೃಷಿ ಉತ್ಪನ್ನಗಳ ಆನ್‍ಲೈನ್ ಟೆಂಡರ್ ಮತ್ತು ವಹಿವಾಟಿನ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯಾದ್ಯಂತ ವಿಶೇಷ ಪ್ರಚಾರಾಂದೋಲನ ಹಮ್ಮಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನೊಳಗೊಂಡ ವಿಶೇಷ ವಾಹನವನ್ನು ಇಲಾಖೆ ಸಿದ್ಧಪಡಿಸಿ, ಮಾ. 21 ರಿಂದ ಏಪ್ರಿಲ್ 06 ರವರೆಗೆ ಹದಿನೇಳು ದಿನಗಳ ಕಾಲ ಪ್ರತಿ ದಿನ ಮೂರು ಗ್ರಾಮಗಳಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ಮಾಹಿತಿ ಬಿತ್ತರಿಸಲಿದೆ.  ರೈತರು ಇದರ ಸದುಪಯೋಗ ಪಡೆದುಕೊಂಡು ಜಾಗೃತರಾಗುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಮನವಿ ಮಾಡಿದರು.
ಜಾಗೃತಿ ಅಭಿಯಾನ ಎಲ್ಲೆಲ್ಲಿ : ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮಾತನಾಡಿ, ರೈತ ಜಾಗೃತಿ ಅಭಿಯಾನದ ವಾಹನವು ಮಾ. 21 ರಿಂದ ಏಪ್ರಿಲ್ 06 ರವರೆಗೆ ಹದಿನೇಳು ದಿನಗಳ ಕಾಲ ಪ್ರತಿ ದಿನ ಮೂರು ಗ್ರಾಮಗಳಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ಮಾಹಿತಿ ಬಿತ್ತರಿಸಲಿದೆ.  ಕೊಪ್ಪಳ ತಾಲೂಕಿನಲ್ಲಿ ಮಾ. 21 ರಂದು ಗಿಣಿಗೇರಾ, ಇಂದರಗಿ, ಕುಕನಪಳ್ಳಿ.  ಮಾ. 22 ರಂದು ಕಿನ್ನಾಳ, ಲೇಬಗೇರಿ, ಕಾಮನೂರು.  ಮಾ. 23 ರಂದು ಭೀಮನೂರ, ಇರಕಲ್ಲಗಡ, ಹಾಸಗಲ್.  ಮಾ. 24 ರಂದು ಹಲಗೇರಿ, ಮತ್ತೂರು, ಅಳವಂಡಿ.  ಮಾ. 25 ಂದು ಕುಣಿಕೇರಿ, ಲಾಚನಕೇರಿ, ಹೊಸಳ್ಳಿ.  ಮಾ. 26 ರಂದು ಮುದ್ದಾಬಳ್ಳಿ, ಗೊಂಡಬಾಳ, ಹಿರೇಸಿಂದೋಗಿ.  ಮಾ. 27 ರಂದು ಅಗಳಕೇರಾ, ಶಿವಪುರ, ಹುಲಿಗಿ.  ಗಂಗಾವತಿ ತಾಲೂಕಿನಲ್ಲಿ ಮಾ. 28 ರಂದು ಗಂಗಾವತಿ, ವೆಂಕಟಗಿರಿ, ಮರಳಿ.  ಮಾ. 29 ರಂದು ಶ್ರೀರಾಮನಗರ, ಸಿದ್ದಾಪುರ, ಕಾರಟಗಿ.  ಮಾ. 30 ರಂದು ನವಲಿ, ಹುಲಿಹೈದರ್, ಕನಕಗಿರಿ.  ಕುಷ್ಟಗಿ ತಾಲೂಕಿನಲ್ಲಿ ಮಾ. 31 ರಂದು ಹಿರೇವಂಕಲಕುಂಟಾ, ಗುನ್ನಾಳ, ಬೇವೂರು.  ಏ. 01 ರಂದು ಕುಷ್ಟಗಿ, ತಳುವಗೇರಾ, ಅಡವಿಭಾವಿ.  ಏ. 02 ರಂದು ಹನುಮಸಾಗರ, ಯರಗೇರಾ, ಬೆನಕನಾಳ.  ಯಲಬುರ್ಗಾ ತಾಲೂಕಿನಲ್ಲಿ ಏ. 03 ರಂದು ಬಂಡಿ, ಹಿರೇಮ್ಯಾಗೇರಿ, ಮುಧೋಳ.  ಏ. 04 ರಂದು ಯಲಬುರ್ಗಾ, ವಜ್ರಬಂಡಿ, ಮಂಗಳೂರು.  ಏ. 05 ರಂದು ಶಿರೂರು, ಬಳಗೇರಿ, ಕುಕನೂರು.  ಏ. 06 ರಂದು ಇಟಗಿ, ಬನ್ನಿಕೊಪ್ಪ, ತಳಕಲ್ ಗ್ರಾಮಗಳಲ್ಲಿ ಜಾಗೃತಿ ವಾಹನ ಸಂಚರಿಸಿ, ಮಾಹಿತಿ ಬಿತ್ತರಿಸಲಿದೆ ಎಂದರು.
     ಕೊಪ್ಪಳ ಎಪಿಎಂಸಿ ಕಾರ್ಯದರ್ಶಿ ಮರಿಬಸಪ್ಪ ಸಜ್ಜನ್ ಕೃಷಿ ಉತ್ಪನ್ನಗಳ ಆನ್‍ಲೈನ್ ಟೆಂಡರ್ ಮತ್ತು ವಹಿವಾಟಿನ ಕುರಿತು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.  ಎಪಿಎಂಸಿ ಅಧ್ಯಕ್ಷ ಹನುಮರಡ್ಡಿ ತಿಮ್ಮರಡ್ಡಿ ಹಂಗನಕಟ್ಟಿ ವಂದಿಸಿ, ರೈತ ಜಾಗೃತಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
     ಕೊಪ್ಪಳ ಎಪಿಎಂಸಿ ಉಪಾಧ್ಯಕ್ಷ ಮಾಯಪ್ಪ ಶಿವಪ್ಪ ಗುಗ್ರಿ, ಸಮಿತಿ ಸದಸ್ಯರುಗಳಾದ ಗವಿಸಿದ್ದಪ್ಪ ಮುದಗಲ್, ಶಿವಲಿಂಗಪ್ಪ ತಿಪ್ಪವ್ವನವರ, ಗಂಗಮ್ಮ ಕಲಾದಗಿ, ಶರಣಪ್ಪ ಸಜ್ಜನ, ಫಕೀರಯ್ಯ ಹಿರೇಮಠ, ನೀಲಪ್ಪ ಮೇಟಿ, ಮಲ್ಲಿಕಾರ್ಜುನಗೌಡ ಪಾಟೀಲ, ಜಯಪ್ಪ ಕಂಚಿ, ಕಮಲಚಂದ ಜಾಂಗಡಾ, ಶೇಖರಪ್ಪ ನಾಗರಳ್ಳಿ, ಡಿ. ಮಲ್ಲಪ್ಪ ಯಲ್ಲಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಜೃಂಭಣೆಯಿಂದ ಜಗಜೀವನರಾಮ್, ಅಂಬೇಡ್ಕರ್ ಜಯಂತಿ ಆಚರಣೆ- ಎಂ. ಕನಗವಲ್ಲಿ


ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ) : ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಈ ಬಾರಿ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಬಾಬು ಜಗಜೀವನರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.
     ಬಾಬು ಜಗಜೀವನರಾಮ್ ಅವರ 109 ನೇ ಜನ್ಮದಿನಾಚರಣೆಯನ್ನು ಏಪ್ರಿಲ್ 05 ರಂದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮದಿನಾಚರಣೆಯನ್ನು ಏ. 14 ರಂದು ಎಲ್ಲ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುವುದು.  
ಬಾಬು ಜಗಜೀವನರಾಂ ಜಯಂತಿ : ಏ. 05 ರಂದು ಬೆಳಿಗ್ಗೆ 7-30 ಗಂಟೆಗೆ ನಗರದ ತಹಸಿಲ್ದಾರರ ಕಚೇರಿ ಆವರಣದಿಂದ ಬಾಬು ಜಗಜೀವನರಾಂ ಅವರ ಭಾವಚಿತ್ರ ಸಹಿತ ಮೆರವಣಿಗೆಯನ್ನು ಪ್ರಾರಂಭಿಸಲಾಗುವುದು.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜಾಂಜ್ ಮೇಳ ಮುಂತಾದ ಜಾನಪದ ತಂಡಗಳು ಪಾಲ್ಗೊಳ್ಳಲಿವೆ. ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗುವುದು. ಬಾಬು ಜಗಜೀವನರಾಂ ಅವರ ಕುರಿತು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗುವುದು. 
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ : ಈ ಬಾರಿ ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆ ಇರುವುದರಿಂದ, ಜಯಂತಿ ಅಂಗವಾಗಿ ಏ. 14 ರಂದು ಬೆಳಿಗ್ಗೆ 7-30 ಗಂಟೆಗೆ ನಗರದ ತಹಸಿಲ್ದಾರರ ಕಚೇರಿ ಆವರಣದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಸಹಿತ ಅದ್ಧೂರಿ ಮೆರವಣಿಗೆ ಪ್ರಾರಂಭವಾಗಲಿದೆ.  ಮೆರವಣಿಗೆಯಲ್ಲಿ ಹಲವು ಕಲಾ ತಂಡಗಳು ಪಾಲ್ಗೊಂಡು, ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ. ಅಂದು  ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ವೇದಿಕೆ ಸಮಾರಂಭ ಜರುಗಲಿದ್ದು, ಡಾ. ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗುವುದು.
       ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಉಭಯ ಮಹನೀಯರ ಜನ್ಮದಿನಾಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವಂತೆ ಸೂಚಿಸಲಾಗುವುದು.  ಅದೇ ರೀತಿ ಎಲ್ಲ ಗ್ರಾ.ಪಂ. ಮಟ್ಟದ ಜನಪ್ರತಿನಿಧಿಗಳು ಜಿಲ್ಲಾ ಹಾಗೂ ತಾಲೂಕು ಸಮಾರಂಭಗಳಲ್ಲಿ ಭಾಗವಹಿಸಲು ವ್ಯವಸ್ಥೆಗೊಳಿಸಲಾಗುವುದು.  ಮಹನೀಯರುಗಳ ಜನ್ಮದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು. ಸಮಾಜದ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕರೆ ನೀಡಿದರು.
      ಉಭಯ ಮಹನೀಯರ ಜಯಂತಿಯ ಅಂಗವಾಗಿ ಆಯಾ ದಿನಗಳಂದು ನಗರದ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಕೈಗೊಳ್ಳಬೇಕು.  ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮೆರವಣಿಗೆ ಸಾಗಿ ಬರುವ ದಾರಿಯಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು.  ಮೆರವಣಿಗೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ಕಾರ್ಯಕ್ರಮಗಳ ಯಶಸ್ವಿಗೆ ವಹಿಸಲಾಗಿರುವ ಜವಾಬ್ದಾರಿಯನ್ನು ಆಯಾ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕೊಪ್ಪಳ ನಗರದಲ್ಲಿ ಬಾಬು ಜಗಜೀವನರಾಮ್ ಭವನ, ಅಂಬೇಡ್ಕರ್ ಭವನ ಹಾಗೂ ವಾಲ್ಮೀಕಿ ಭವನ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಕರಡಿ ಸಂಗಣ್ಣ ಸೇರಿದಂತೆ ವಿವಿಧ ಮುಖಂಡರುಗಳು ಒತ್ತಾಯಿಸಿದರು.  
       ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶ ಹಾಗೂ ಮಹತ್ವವನ್ನು ಬಿಂಬಿಸುವ ಕಿರು ಹೊತ್ತಿಗೆಗಳನ್ನು ಕಾರ್ಯಕ್ರಮದ ಸಂದರ್ಭದಲ್ಲಿ ವಿತರಿಸುವಂತೆ  ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
       ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ, ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಸಂದರ್ಭದಲ್ಲಿ ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
     ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್, ಸಮಾಜದ ಮುಖಂಡರುಗಳಾದ ಗವಿಸಿದ್ದಪ್ಪ ಕಂದಾರಿ, ಡಾ. ಜ್ಞಾನಸುಂದರ್, ಭರಮಪ್ಪ ಬೆಲ್ಲದ, ಸಿದ್ದೇಶ್ ಪೂಜಾರ್, ಯಲ್ಲಪ್ಪ ಬಳಗಾನೂರ, ಗಾಳೆಪ್ಪ ದೊಡ್ಡಮನಿ, ಹಾಲೇಶ್ ಕಂದಾರಿ, ಸಿದ್ದಪ್ಪ ಕಿಡದಾಳ, ಕಾಶಪ್ಪ ಅಳ್ಳಳ್ಳಿ, ಓಬಳೇಶ್, ಪ್ರಭುರಾಜ ಕಿಡದಾಳ, ಶಿವಾನಂದ ಹೊದ್ಲೂರ್, ಮಂಜುನಾಥ ಗೊಂಡಬಾಳ, ಸೇರಿದಂತೆ ಹಲವಾರು ಗಣ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಶ್ರದ್ಧಾ ಭಕ್ತಿಯಿಂದ ದೇವರದಾಸಿಮಯ್ಯ ಜಯಂತಿ ಆಚರಣೆ- ಪ್ರವೀಣಕುಮಾರ್


ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ) : ಆದ್ಯ ವಚನಕಾರ ದೇವರದಾಸಿಮಯ್ಯ ಅವರ ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಏ. 12 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.  

       ದೇವರದಾಸಿಮಯ್ಯ ಅವರ ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
      ದೇವರದಾಸಿಮಯ್ಯ ಜಯಂತಿ ಉತ್ಸವವನ್ನು  ಏ. 12 ರಂದು ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದಲ್ಲಿ ಶ್ರದ್ಧಾ ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು.  ಕಾರ್ಯಕ್ರಮ.  ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 8-30 ಗಂಟೆಗೆ ನಗರದ ಗವಿಮಠ ಆವರಣದಿಂದ ದೇವರದಾಸಿಮಯ್ಯ ನವರ ಭಾವಚಿತ್ರ ಮೆರವಣಿಗೆ ಹೊರಡಲಿದ್ದು, ಮೆರವಣಿಗೆಯು ಗವಿಮಠ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬರಲಿದೆ.   ಮೆರವಣಿಗೆಯಲ್ಲಿ ಹಲವು ಜಾನಪದ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.    ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಸಮಾರಂಭ ಜರುಗಲಿದ್ದು, ಸಮಾರಂಭದಲ್ಲಿ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ದೇವರ ದಾಸಿಮಯ್ಯ ಅವರ ಕುರಿತು ವಿಶೇಷ ಉಪನ್ಯಾಸ ನೀಡುವರು.  ಜಯಂತಿ ಆಚರಣೆಯಲ್ಲಿ ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.  ಮೆರವಣಿಗೆ ಹಾಗೂ ಸಮಾರಂಭದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಪಾಲ್ಗೊಳ್ಳಬೇಕು.  ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ, ಮೆರವಣಿಗೆ ಸಾಗಿ ಬರುವ ರಸ್ತೆಯನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.
     ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಕರಡಿ ಸಂಗಣ್ಣ ಅವರು, ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರು.
        ಸಭೆಯಲ್ಲಿ ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸೇರಿದಂತೆ  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು,  ನೇಕಾರರ ಒಕ್ಕೂಟದ ಅಧ್ಯಕ್ಷ ಕೆ. ಕಾಳಪ್ಪ ಸೇರಿದಂತೆ ಸಮಾಜದ ಮುಖಂಡರಾದ  ನಾಗರಾಜ ಬಳ್ಳಾರಿ, ರಮೇಶ್ ಹ್ಯಾಟಿ,  ಲಕ್ಷ್ಮಣ ಚಳಮರದ, ವೀರಣ್ಣ, ರವಿ ಬುಡ್ಡೋಡಿ ಕಿನ್ನಾಳ, ನೀಲಕಂಠಪ್ಪ ಮೈಲಿ ಗಣ್ಯರಾದ ಡಾ. ಜ್ಞಾನಸುಂದರ್, ಶಿವಾನಂದ ಹೊದ್ಲೂರು, ಮಂಜುನಾಥ ಗೊಂಡಬಾಳ, ಭರಮಪ್ಪ ಬೆಲ್ಲದ, ಗವಿಸಿದ್ದಪ್ಪ ಕಂದಾರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Saturday, 19 March 2016

ಕುಡಿಯುವ ನೀರು ಸಂಗ್ರಹಿತ ಜಾಕ್‍ವೆಲ್ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ

ಕೊಪ್ಪಳ ಮಾ. 19 (ಕರ್ನಾಟಕ ವಾರ್ತೆ): ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾತರಕಿ ಜಾಕ್‍ವೆಲ್ ಹಾಗೂ ನೀಲೋಗಿಪುರ ಜಾಕ್‍ವೆಲ್ ಬಳಿ ಸಂಗ್ರಹಿಸಲಾಗಿರುವ ನೀರನ್ನು ಕೃಷಿ ಹಾಗೂ ಇತರೆ ಯಾವುದೇ ಉದ್ದೇಶಕ್ಕಾಗಿಯೂ ಎತ್ತುವಳಿ ಮಾಡದಂತೆ, ಜಾಕ್‍ವೆಲ್ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಕಾತರಕಿ ಜಾಕ್‍ವೆಲ್ : ತುಂಗಭದ್ರಾ ನದಿ ವ್ಯಾಪ್ತಿಯ ಕಾತರಕಿ ಜಾಕ್‍ವೆಲ್‍ನಿಂದ ಬನ್ನಿಗೋಳ ಜಾಕ್‍ವೆಲ್ ಹತ್ತಿರದ ವರೆಗಿನ ಪ್ರದೇಶದಲ್ಲಿ ನೀರನ್ನು ಸಂಗ್ರಹಿಸಲಾಗಿರುವ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಆದೇಶ ಹೊರಡಿಸಲಾಗಿದೆ.  ಅದರನ್ವಯ ಯಾವುದೇ ವ್ಯಕ್ತಿ ಈ ಪ್ರದೇಶದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಲಾಗಿರುವ ನೀರನ್ನು ಬೇರೆ ಯಾವುದೇ ಉದ್ದೇಶಕ್ಕೆ ನೇರವಾಗಿ ಅಥವಾ ಪಂಪ್‍ಸೆಟ್ ಬಳಸಿ ನೀರನ್ನು ಎತ್ತುವಳಿ ಮಾಡುವಂತಿಲ್ಲ.  ನಿಷೇಧಿತ ಪ್ರದೇಶದಲ್ಲಿ ಈಜು, ಇನ್ನಿತರೆ ವಿಹಾರ ಅಥವಾ ಜಲಕ್ರೀಡೆಗಳಂತಹ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  ಅಲ್ಲದೆ ನಿಷೇಧಿತ ವಲಯದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಸಹ ನಿಷೇಧಿಸಿದೆ.  ಕುಡಿಯುವ ನೀರಿನ ಉದ್ದೇಶವನ್ನು ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಪಂಪ್‍ಸೆಟ್ ಮೂಲಕ ನೀರು ಹರಿಸುವುದು ಕಂಡುಬಂದಲ್ಲಿ, ಕೊಪ್ಪಳ ನಗರಸಭೆ ಪೌರಾಯುಕ್ತರು, ಕಾತರಕಿ ಗ್ರಾಮ ಪಂಚಾಯತಿ ಪಿಡಿಓ/ಕಾರ್ಯದರ್ಶಿ ಅಥವಾ ಈ ವ್ಯಾಪ್ತಿಯ ಕಂದಾಯ ನಿರೀಕ್ಷಕರು ಅಂತಹ ಪಂಪ್‍ಸೆಟ್‍ಗಳನ್ನು ಜಪ್ತಿ ಮಾಡುವರು.  ಗ್ರಾಮೀಣ ನೀರು ಸರಬರಾಜು ಇಲಾಖೆ ಕೊಪ್ಪಳದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೊಪ್ಪಳ ತಹಸಿಲ್ದಾರರು ಹಾಗೂ ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ನಿಷೇಧಾಜ್ಞೆ ಜಾರಿ ಆದೇಶ ಪರಿಣಾಮಕಾರಿಯಾಗು ಅನುಷ್ಠಾನವಾಗುತ್ತಿರುವ ಬಗ್ಗೆ ಮೇಲ್ವಿಚಾರಣೆ ನಡೆಸಲಿದ್ದಾರೆ.  ನಿಷೇಧಿತ ವಲಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.  ಒಂದು ವೇಳೆ ಈ ಆದೇಶವನ್ನು ಯಾರೇ ಉಲ್ಲಂಘಿಸಿದರೂ ಅಂತಹವರ ವಿರುದ್ಧ ಗ್ರಾ.ಪಂ. ಪಿಡಿಓ/ಕಾರ್ಯದರ್ಶಿ ಅಥವಾ ಕಂದಾಯ ನಿರೀಕ್ಷಕರು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ನಿಲೋಗಿಪುರ ಜಾಕ್‍ವೆಲ್ : ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಬೋಚನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನಿಲೋಗಿಪುರ ಗ್ರಾಮದ ತುಂಗಭದ್ರಾ ನದಿಯ ಬಳಿ ಅಳವಡಿಸಲಾಗಿರುವ ಜಾಕ್‍ವೆಲ್ ಬಳಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಸಂಗ್ರಹಿಸಲಾಗಿದ್ದು, ನಿಲೋಗಿಪುರ ಜಾಕ್‍ವೆಲ್ ಹತ್ತಿರ ಸಂಗ್ರಹಿಸಲಾಗಿರುವ ನೀರಿನ ಸುತ್ತಮುತ್ತಲ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಆದೇಶ ಹೊರಡಿಸಲಾಗಿದೆ.  ಅದರನ್ವಯ ಯಾವುದೇ ವ್ಯಕ್ತಿ ಈ ಪ್ರದೇಶದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಲಾಗಿರುವ ನೀರನ್ನು ಬೇರೆ ಯಾವುದೇ ಉದ್ದೇಶಕ್ಕೆ ನೇರವಾಗಿ ಅಥವಾ ಪಂಪ್‍ಸೆಟ್ ಬಳಸಿ ನೀರನ್ನು ಎತ್ತುವಳಿ ಮಾಡುವಂತಿಲ್ಲ.  ನಿಷೇಧಿತ ಪ್ರದೇಶದಲ್ಲಿ ಈಜು, ಇನ್ನಿತರೆ ವಿಹಾರ ಅಥವಾ ಜಲಕ್ರೀಡೆಗಳಂತಹ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  ಅಲ್ಲದೆ ನಿಷೇಧಿತ ವಲಯದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಸಹ ನಿಷೇಧಿಸಿದೆ.  ಕುಡಿಯುವ ನೀರಿನ ಉದ್ದೇಶವನ್ನು ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಪಂಪ್‍ಸೆಟ್ ಮೂಲಕ ನೀರು ಹರಿಸುವುದು ಕಂಡುಬಂದಲ್ಲಿ, ಗ್ರಾಮೀಣ ನೀರು ಸರಬರಾಜು ಇಲಾಖೆಯ ವಿಭಾಗೀಯ ಅಧಿಕಾರಿ, ಸಂಬಂಧಪಟ್ಟ ಗ್ರಾಮ ಪಂಚಾಯತಿ ಪಿಡಿಓ/ಕಾರ್ಯದರ್ಶಿ ಅಥವಾ ಈ ವ್ಯಾಪ್ತಿಯ ಕಂದಾಯ ನಿರೀಕ್ಷಕರು ಅಂತಹ ಪಂಪ್‍ಸೆಟ್‍ಗಳನ್ನು ಜಪ್ತಿ ಮಾಡುವರು.  ಗ್ರಾಮೀಣ ನೀರು ಸರಬರಾಜು ಇಲಾಖೆ ಕೊಪ್ಪಳ ಹಾಗೂ ಯಲಬುರ್ಗಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೊಪ್ಪಳ, ಯಲಬುರ್ಗಾ ತಹಸಿಲ್ದಾರರು ಹಾಗೂ ಕೊಪ್ಪಳ ಮತ್ತು ಯಲಬುರ್ಗಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ನಿಷೇಧಾಜ್ಞೆ ಜಾರಿ ಆದೇಶ ಪರಿಣಾಮಕಾರಿಯಾಗು ಅನುಷ್ಠಾನವಾಗುತ್ತಿರುವ ಬಗ್ಗೆ ಮೇಲ್ವಿಚಾರಣೆ ನಡೆಸಲಿದ್ದಾರೆ.  ನಿಷೇಧಿತ ವಲಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.  ಒಂದು ವೇಳೆ ಈ ಆದೇಶವನ್ನು ಯಾರೇ ಉಲ್ಲಂಘಿಸಿದರೂ ಅಂತಹವರ ವಿರುದ್ಧ ಗ್ರಾ.ಪಂ. ಪಿಡಿಓ/ಕಾರ್ಯದರ್ಶಿ ಅಥವಾ ಕಂದಾಯ ನಿರೀಕ್ಷಕರು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಹೋಳಿ ಹಬ್ಬ : ಗಂಗಾವತಿಯಲ್ಲಿ ಬನಾಯೇಂಗೆ ಮಂದಿರ್ ಹಾಡು ನಿಷೇಧ

ಕೊಪ್ಪಳ ಮಾ. 19 (ಕರ್ನಾಟಕ ವಾರ್ತೆ): ಹೋಳಿ ಹಬ್ಬದ ಸಂದರ್ಭದಲ್ಲಿ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಮಾ. 23 ಮತ್ತು 24 ರಂದು ಗಂಗಾವತಿ ನಗರದಲ್ಲಿ ಬನಾಯೇಂಗೆ ಮಂದಿರ್ ಹಾಡನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಮಾ. 23 ರಂದು ಕಾಮದಹನ ಮತ್ತು ಮಾ. 24 ರಂದು ಹೋಳಿ ಹಬ್ಬದ ಅಂಗವಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾ. 23 ರಂದು ಬೆಳಿಗ್ಗೆ 6 ಗಂಟೆಯಿಂದ ಮಾ. 24 ರ ಮಧ್ಯರಾತ್ರಿ 12 ಗಂಟೆಯವರೆಗೆ ಬನಾಯೇಂಗೆ ಮಂದಿರ್ ಎಂಬ ಹಾಡನ್ನು ಯಾರೂ ಸಾರ್ವಜನಿಕವಾಗಿ ಹಾಡದಂತೆ ಹಾಗೂ ಆಡಿಯೋ ಅಥವಾ ವಿಡಿಯೋ ರೂಪದಲ್ಲಿ ಬಿತ್ತರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಆದೇಶದಲ್ಲಿ ತಿಳಿಸಿದ್ದಾರೆ.

ಮಹಿಳೆಯರು ಶೈಕ್ಷಣಿಕ ಮತ್ತು ಆರ್ಥಿಕ ಸ್ವಾವಲಂಬಿಗಳಾಗಿ- ಡಾ. ಪ್ರವೀಣಕುಮಾರ್


ಕೊಪ್ಪಳ, ಮಾ.19 (ಕರ್ನಾಟಕ ವಾರ್ತೆ): ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಹಾಗೂ ಪ್ರಗತಿಪರ ಮಹಿಳಾ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಮಹಿಳಾ ಸಬಲೀಕರಣದ ಧ್ಯೇಯೋದ್ದೇಶವನ್ನಿಟ್ಟುಕೊಂಡು, ಮಹಿಳೆಯರನ್ನು ಸಬಲರನ್ನಾಗಿಸಲು ಪೂರಕ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ.  ಆದರೆ ನಿರೀಕ್ಷಿತ ಮಟ್ಟದಲ್ಲಿ ಮಹಿಳೆಯರು ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳುತ್ತಿಲ್ಲ.  ಸಾಮಾಜಿಕ ನ್ಯಾಯದ ಅನುಷ್ಠಾನದಲ್ಲಿ ಮಹಿಳೆಯರ ಪಾತ್ರದ ಬಗ್ಗೆಯೂ ವಿಮರ್ಶೆ ನಡೆಯಬೇಕಾದ ಅಗತ್ಯವಿದೆ.  ತಾಯಿ, ತಂಗಿಯರು, ಹೆಣ್ಣು ಮಕ್ಕಳನ್ನು ವಯಕ್ತಿಕ ಸಂಬಂಧಗಳಲ್ಲಿ ಮಾತ್ರ ಪ್ರೀತಿಸುತ್ತೇವೆ.  ಆದರೆ, ಅವರ ಆಸೆ, ಆಕಾಂಕ್ಷೆಗಳಿಗೆ ಕುಟುಂಬದಲ್ಲಿ ಮನ್ನಣೆ ದೊರೆಯುತ್ತಿಲ್ಲ.  ಸಮಾಜದ ಶೇ. 50 ರಷ್ಟು ಜನಸಂಖ್ಯೆಯಷ್ಟು ಇರುವ ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಅವಕಾಶಗಳು ದೊರೆಯುತ್ತಿಲ್ಲ.  ಅವರ ಶಕ್ತಿ ಸಾಮಥ್ರ್ಯಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಬಳಕೆ ಆಗುತ್ತಿಲ್ಲ.  ಈ ರೀತಿ ಅವಕಾಶಗಳಿಂದ ವಂಚಿತರಾದರೆ, ಸಮಾಜದ ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯ ?.  ಐತಿಹಾಸಿಕ, ಧಾರ್ಮಿಕ ಹಾಗೂ ಸಂಸ್ಕøತಿಯಲ್ಲಿ ಮಹಿಳೆಯರನ್ನು ಪೂಜ್ಯತಾ ಭಾವದಿಂದ ನೋಡುವ ಪರಿಕಲ್ಪನೆ ಬೆಳೆದುಬಂದಿದೆ.  ಆದರೆ ಸಮಾಜದಲ್ಲಿ ಅವರಿಗೆ ಸಿಗಬೇಕಾದ ಗೌರವ, ಅವಕಾಶಗಳು ದೊರೆಯುತ್ತಿಲ್ಲ.  ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಷ್ಟೇ ಅಲ್ಲ, ಸಬಲರೂ ಆಗಬೇಕಿದೆ.  ಹೆಣ್ಣು ಮಕ್ಕಳನ್ನು 18 ವರ್ಷ ಅಲ್ಲ, ಕನಿಷ್ಟ 21 ವರ್ಷದವರೆಗೂ ಮದುವೆ ಮಾಡಬೇಡಿ, ಅವರನ್ನು ಚೆನ್ನಾಗಿ ಓದಿಸಿ, ಅವರು ಇಚ್ಛಿಸುವ ವಿಷಯದಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿ, ಪ್ರೋತ್ಸಾಹಿಸಿ.  ಮಹಿಳೆಯರನ್ನು ಪೂಜ್ಯತಾ ಭಾವದಿಂದ ನೋಡುವುದಷ್ಟೇ ಅಲ್ಲ, ಧನ್ಯತಾ ಭಾವವೂ ಮೂಡುವಂತೆ ಮಾಡುವ ಅಗತ್ಯವಿದೆ.  ಮಹಿಳೆಯರ ಶ್ರೇಯೋಭಿವೃದ್ಧಿಗಾಗಿಯೇ ಸರ್ಕಾರ ರೂಪಿಸಿ, ಜಾರಿಗೊಳಿಸುವ ಯೋಜನೆಗಳ ಸದುಪಯೋಗ ಪಡೆದುಕೊಂಡು, ಮಹಿಳೆಯರು ಸ್ವಾವಲಂಬಿಗಳಾಗಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಕರೆ ನೀಡಿದರು.

     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು ಮಾತನಾಡಿ, ಭಾರತ ದೇಶದಲ್ಲಿ ಮಹಿಳೆಯರಿಗೆ ಇರುವ ಗೌರವ, ಜಗತ್ತಿನ ಬೇರ್ಯಾವುದೇ ದೇಶದಲ್ಲಿ ಇಲ್ಲ.  ಆದರೂ, ದೇಶದಲ್ಲಿ ಕೆಲ ದುಷ್ಕರ್ಮಿಗಳು ಮಹಿಳೆಯರ ಮೇಲೆ ನಡೆಸುವ ಕುಕೃತ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತವೆ.  ಹೆಣ್ಣು ಸಮಾಜದ ಕಣ್ಣು ಎನ್ನುವ ಮಾತಿದೆ.  ಹೆಣ್ಣು ಭ್ರೂಣ ಹತ್ಯೆ ಯಾರೂ ಮಾಡಬೇಡಿ.  ಎಲ್ಲರೂ ಸಹ ಇದನ್ನು ತಡೆಗಟ್ಟಲು ಶ್ರಮಿಸಬೇಕಿದೆ.  ಈ ನಾಡಿನಲ್ಲಿ ಮೂಢನಂಬಿಕೆಗಳಿಂದಲೂ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಮಹಿಳಾ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

     ಕಾರ್ಯಕ್ರಮದ ಅಂಗವಾಗಿ ಬ್ರಹ್ಮಕುಮಾರಿ ಯೋಗಿನಿ ಅವರು, ಪ್ರಸ್ತುತ ವಿದ್ಯಮಾನದಲ್ಲಿ ಮಹಿಳಾ ಸಂಘರ್ಷ ಮತ್ತು ಮನಶಾಂತಿ ಕುರಿತು ಮತ್ತು ಲಲಿತಾ ಅಂಗಡಿಯವರು ಮಹಿಳಾ ಸಬಲೀಕರಣ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.  ರಾಜ್ಯ ವಕೀಲರ ಪರಿಷತ್ ಸದಸ್ಯೆ ಸಂಧ್ಯಾ ಮಾದಿನೂರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ, ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಅವರು ಸ್ವಾಗತಿಸಿದರು.  ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಹಿಳೆಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯಮಂತ್ರಿಗಳ ಸಾಂತ್ವನ-ಹರೀಶ್ ಯೋಜನೆ : ಆಸ್ಪತ್ರೆಗಳ ನೋಂದಣಿಗೆ ಸೂಚನೆ

ಕೊಪ್ಪಳ ಮಾ. 19 (ಕರ್ನಾಟಕ ವಾರ್ತೆ): ರಸ್ತೆ ಅಪಘಾತದ ಗಾಯಾಳುಗಳಿಗೆ ತ್ವರಿತವಾಗಿ ಚಿಕಿತ್ಸೆ ದೊರೆಯುವಂತಾಗಲು ಸರ್ಕಾರ ಇತ್ತೀಚೆಗಷ್ಟೇ ಜಾರಿಗೆ ತಂದಿರುವ ‘ಮುಖ್ಯಮಂತ್ರಿಗಳ ಸಾಂತ್ವನ- ಹರೀಶ್’ ಯೋಜನೆಯಡಿ ಆಸ್ಪತ್ರೆಗಳ ನೋಂದಣಿ ಪ್ರಾರಂಭವಾಗಿದ್ದು, ಅರ್ಹ ಆಸ್ಪತ್ರೆಗಳು ಈ ಯೋಜನೆಯಡಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಕಾರ್ಯಕಾರಿ ನಿರ್ದೇಶಕ ಡಾ. ಪಿ. ಬೋರೇಗೌಡ ಮನವಿ ಮಾಡಿಕೊಂಡಿದ್ದಾರೆ.
     ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಆಗಬಹುದಾದ ವಿಳಂಬ,  ತತ್‍ಕ್ಷಣದಲ್ಲಿ ಗಾಯಾಳುಗಳ ನೆರವಿಗೆ ಯಾರು ಮುಂದೆ ಬಾರದಿರುವುದು,  ಚಿಕಿತ್ಸೆಯ ವೆಚ್ಚ ಭರಿಸಲು ಸಮಸ್ಯೆ, ಕಾನೂನಿನ ತೊಡಕುಗಳು ಮುಂತಾದ ಕಾರಣಗಳಿಂದಾಗಿ ಅಪಘಾತದ ಗಾಯಾಳುಗಳಿಗೆ ಸರಿಯಾದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾಗದೆ ಅಪಘಾತ ಸಾವುಗಳ ಸಂಖ್ಯೆ ಅಧಿಕಗೊಳ್ಳುತಿವೆ. ಇಂತಹ ಅಪಘಾತದ ಸಂದರ್ಭದಲ್ಲಿ ಸೂಕ್ತ ಸಹಾಯ ಹಾಗೂ ತತ್ ಕ್ಷಣದ ಚಿಕಿತ್ಸೆ ಲಭ್ಯವಾದಲ್ಲಿ ಬಹಳಷ್ಟು ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ.
     ಈ ಎಲ್ಲ ಅಂಶಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸರ್ಕಾರ, ಅಪಘಾತಕ್ಕೊಳಗಾದ ಗಾಯಾಳುಗಳಿಗೆ ತತ್‍ಕ್ಷಣದ ತುರ್ತು ಚಿಕಿತ್ಸೆ ನೀಡಲು ಹಾಗೂ ಈ ಮೂಲಕ ಅಸಂಖ್ಯಾತ ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಲು,  ‘ಮುಖ್ಯಮಂತ್ರಿಗಳ ಸಾಂತ್ವನ-ಹರೀಶ್’ ಎಂಬ  ಯೋಜನೆಯನ್ನು ಜಾರಿಗೆ ತಂದಿದೆ.
     ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಿಗೆ ರಸ್ತೆ ಅಪಘಾತಕ್ಕೆ ಒಳಗಾದ ಯಾವುದೇ ವ್ಯಕ್ತಿ/ಗಾಯಾಳುಗಳಿಗೆ ತುರ್ತಾಗಿ ಪ್ರಥಮ ಆಧ್ಯತೆಯ ಮೇಲೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದು  ಈ ಯೋಜನೆಯ ಮುಖ್ಯ ಉದ್ಧೇಶವಾಗಿರುತ್ತದೆ. ಅಪಘಾತಕ್ಕೊಳಗಾದ ವ್ಯಕ್ತಿಯ ಜೀವವನ್ನು ರಕ್ಷಿಸಲು/ಉಳಿಸಲು ಮೊದಲ 48 ಗಂಟೆಗಳ ಅವಧಿಗೆ ರೂ.25000/-ಗಳ ವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. 
     ರಸ್ತೆ ಅಪಘಾತದ ಗಾಯಾಳುಗಳಿಗೆ ತುರ್ತು ಚಿಕಿತ್ಸೆಯನ್ನು ಒದಗಿಸಲು ಅನುಕೂಲವಾಗುವಂತೆ ರಾಜ್ಯಾಧ್ಯಂತ ಅರ್ಹ ಆಸ್ಪತ್ರೆಗಳು/ಟ್ರಾಮ ಕೇಂದ್ರಗಳನ್ನು ಗುರುತಿಸಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ರಸ್ತೆ ಅಪಘಾತದ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುವ ಸೌಲಭ್ಯಗಳನ್ನು ಹೊಂದಿರುವ ಆಸಕ್ತ ಆಸ್ಪತ್ರೆಗಳು/ಟ್ರಾಮ ಕೇಂದ್ರಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನೊಂದಿಗೆ (Registration) ನೋಂದಾಯಿಸಿಕೊಳ್ಳಬಹುದಾಗಿದೆ.
     ಆಸ್ಪತ್ರೆಗಳ ನೋಂದಾವಣೆ ( Registration) ಕುರಿತ ಮಾಹಿತಿಗಾಗಿ ವೆಬ್‍ಸೈಟ್: www.mss.kar.nic.in, , ಟೋಲ್‍ಫ್ರೀ ಸಂಖ್ಯೆ 1800 425 8330 ಅಥವಾ 7259037902 ನ್ನು ಸಂಪರ್ಕಿಸಬಹುದಾಗಿದೆ.
     ನಗರ-ಪಟ್ಟಣಗಳು, ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳು ಹಾಗೂ ಹೆದ್ದಾರಿಗಳಿಗೆ ಸಮೀಪದಲ್ಲಿರುವ ಅರ್ಹ ಆಸ್ಪತ್ರೆಗಳು/ಟ್ರಾಮ ಕೇಂದ್ರಗಳು ಏಪ್ರಿಲ್ 23 ರೊಳಗೆ ‘ಮುಖ್ಯ ಮಂತ್ರಿಗಳ ಸಾಂತ್ವನ-ಹರೀಶ್ ಯೋಜನೆಗೆ ಆನ್‍ಲೈನ್ ಮೂಲಕ www.mss.kar.nic.in, ನೋಂದಾವಣೆ  ಮಾಡಿಕೊಳ್ಳುವಂತೆ  ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಕಾರ್ಯಕಾರಿ ನಿರ್ದೇಶಕ ಡಾ. ಪಿ. ಬೋರೇಗೌಡ ಪ್ರಕಟಣೆಯಲ್ಲಿ ಕೋರಿದ್ದಾರೆ.

ದೇವರ ದಾಸಿಮಯ್ಯ ಜಯಂತಿ : ಮಾ. 21 ರಂದು ಪೂರ್ವಭಾವಿ ಸಭೆ

ಕೊಪ್ಪಳ ಮಾ. 19 (ಕರ್ನಾಟಕ ವಾರ್ತೆ) : ಆದ್ಯ ವಚನಕಾರ ದೇವರ ದಾಸಿಮಯ್ಯ ನವರ ಜಯಂತಿಯನ್ನು ಏ. 12 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಸಂಬಂಧ ಸಿದ್ಧತೆಗಳನ್ನು ಕೈಗೊರ್ಳಳಲು ಪೂರ್ವಭಾವಿ ಸಭೆ ಮಾ. 21 ರಂದು ಸಂಜೆ 4-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಭೆಗೆ ಜಿಲ್ಲಾ ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಮನವಿ ಮಾಡಿದ್ದಾರೆ.

Friday, 18 March 2016

ಆದರ್ಶ ವಿದ್ಯಾಲಯ: ಮಾ.20 ರಂದು ಪ್ರವೇಶ ಪರೀಕ್ಷೆ

ಕೊಪ್ಪಳ, ಮಾ.18 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯದ(ಆರ್‍ಎಂಎಸ್‍ಎ) 2016-17ನೇ ಶೈಕ್ಷಣಿಕ ಸಾಲಿನ 6 ನೇ ತರಗತಿ (ಆಂಗ್ಲ ಮಾಧ್ಯಮ- ರಾಜ್ಯ ಪಠ್ಯಕ್ರಮ) ಪ್ರವೇಶಾತಿಗೆ  ಮಾ.20 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.
     ಪ್ರವೇಶ ಪರೀಕ್ಷೆಯು ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾ. 20 ರಂದು ಬೆ.10.30 ರಿಂದ ಮ.12.30 ರವರೆಗೆ ನಡೆಯಲಿದೆ. ಈಗಾಗಲೇ 757 ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ನೀಡಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ಪರೀಕ್ಷೆಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ಮುಖ್ಯಗುರು ಮಹಾಂತೇಶ.ಕೆ-9739909367 ಇವರನ್ನು ಸಂಪರ್ಕಿಸಬಹುದಾಗಿದೆ, ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಧೀಶರ ಹುದ್ದೆ : ಪರೀಕ್ಷಾಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಮಾ.18 (ಕರ್ನಾಟಕ ವಾರ್ತೆ): ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸಿವಿಲ್ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಗಾಗಿ ಪ್ರಿಲಿಮನರಿ ಹಾಗೂ ಮುಖ್ಯ ಪರೀಕ್ಷೆಗಳ ಪರಿಕ್ಷಾಪೂರ್ವ   ತರಬೇತಿಗೆ ಅರ್ಜಿ ಆಹ್ವಾನಿಸಿದೆ.
     ನ್ಯಾಯಾಂಗ ಇಲಾಖೆಯು ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇಮಕಾತಿಗಳಿಗೆ ಅರ್ಜಿ ಆಹ್ವಾನಿಸಿದ್ದು, ಈಗಾಗಲೆ ಅರ್ಜಿ ಸಲ್ಲಿಸಿರುವಂತಹ ಅಲ್ಪಸಂಖ್ಯಾತ  ಅಭ್ಯರ್ಥಿಗಳಿಗೆ ಪ್ರಿಲಿಮನರಿ ಮತ್ತು ಮುಖ್ಯ ಪರೀಕ್ಷೆಗೆ ಪರಿಕ್ಷಾಪೂರ್ವ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು  www.gokdom.kar.nic.in ಈ ಜಾಲತಾಣದಲ್ಲಿ ಮಾ.21 ರೊಳಗಾಗಿ  ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ತಿಳಿಸಿದ್ದಾರೆ.

ಜಗಜೀವನರಾಂ, ಅಂಬೇಡ್ಕರ್ ಜಯಂತಿ : ಮಾ.21 ರಂದು ಪೂರ್ವಭಾವಿ ಸಭೆ

ಕೊಪ್ಪಳ, ಮಾ.18 (ಕರ್ನಾಟಕ ವಾರ್ತೆ): ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ರವರ 109 ನೇ ಜಯಂತಿಯನ್ನು ಏಪ್ರಿಲ್ 05 ರಂದು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 125 ನೇ ಜಯಂತಿಯನ್ನು ಏ. 14 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಸಂಬಂಧ ಪೂರ್ವಭಾವಿ ಸಭೆ ಮಾ. 21 ರಂದು ಸಂಜೆ 4.00 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.
      ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸುವರು.  ಪೂರ್ವಭಾವಿ ಸಭೆಗೆ ಜಿಲ್ಲಾ ಮಟ್ಟದ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಾ. 20 ರಂದು ಈಶಾನ್ಯದ ಐಸಿರಿ ಸರಣಿಯ 27 ನೇ ಸಂಚಿಕೆ ಪ್ರಸಾರ

ಕೊಪ್ಪಳ ಮಾ. 18 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 27 ನೇ ಸಂಚಿಕೆ ಮಾ. 20 ರಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 27 ನೇ  ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.  ನಿವೃತ್ತ ನ್ಯಾಯ ಮೂರ್ತಿಗಳಾಗಿರುವ ಎಮ್.ಬಿ.ಬಿರಾದಾರ ಅವರಿಂದ ರಿಟ್ ಅರ್ಜಿ ಕುರಿತು ಇನ್ನಷ್ಟು ಮಾಹಿತಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಜೇವರ್ಗಿ ತಾ. ನೆಲೋಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿರುವ ದೇವೇಂದ್ರಪ್ಪಾ, ಗುಂಡಾಪೂರ ಅವರಿಂದ ಇಂಗ್ಲಿಷ್  ವ್ಯಾಕರಣ ಹಾಗೂ ಶಬ್ದ ಸಂಗ್ರಹ ಕುರಿತು ಸಲಹೆ.  ಅಲ್ಲದೆ ಕಲಬುರಗಿಯ ವಿಜಯ ನಗರ ಕಾಲನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿರುವ ವಿಶ್ವನಾಥ ಕಟ್ಟೀಮನಿ ಅವರಿಂದ ಗಣಿತ ಪಠ್ಯದ ಕುರಿತು ಕೆಲವು ಮಹತ್ವದ ಮಾತುಗಳು.  ರಾಯಚೂರ ಜಿಲ್ಲೆಯ ಗಬ್ಬೂರಿನ ರಾಜ್ಯೋತ್ಸವ ಪುರಸ್ಕøತ ರಂಗಭೂಮಿ ಕಲಾವಿದ ಸಂಜೀವಪ್ಪಾ ಅವರೊಡನೆ ನಡೆಸಿದ ಸಂದರ್ಶನ. ಪರಿಣಿತ ಗುಂಪಿನ ಮಹಿಳೆಯರಿಂದ ಸೋರೆಕಾಯಿಯ ಸೌಂದರ್ಯ ವರ್ಧಕ ಗುಣಗಳು, ಮೆಂತೆ ಪಲ್ಲೆ ಪರೋಟಾ, ಕರದಂಟು ಮಾಡುವ ವಿಧಾನಗಳ ಬಗ್ಗೆ ಅಲ್ಲದೆ ಚಲನಚಿತ್ರ ಕಲಾವಿದೆ ವೈಶಾಲಿ ಕಾಸರ ವಳ್ಳಿಯವರ ಕುರಿತು ಮಾತು-ಕತೆ.  ಊರು – ಟೂರಿನಲ್ಲಿ ಕೊಪ್ಪಳ ಜಿಲ್ಲೆಯ ಕೆಲವು ಪ್ರೇಕ್ಷಣೀಯ ಸ್ಥಳಗಳ ಕುರಿತು ಒಂದು ನುಡಿ ದರ್ಶನ.  ಕಲಬುರಗಿಯ  ತಿಪ್ಪಣ್ಣಾ ಬುಳ್ಳಾ ಹಾಗೂ ಸಂಗಡಿಗರಿಂದ ಹೋಳಿ ಹಬ್ಬದ ಹಾಡುಗಳು.
     ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.   ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಗುಳೆ ಹೋಗದೆ, ಉದ್ಯೋಗಖಾತ್ರಿಯಡಿ ಕೆಲಸ ಪಡೆಯಲು ಜಿ.ಪಂ ಸಿಇಒ ಮನವಿ

ಕೊಪ್ಪಳ, ಮಾ.18 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವಾರು ಕಾಮಗಾರಿಗಳಿದ್ದು, ಯಾರೂ ಗುಳೆ ಹೋಗದೆ, ಸ್ಥಳೀಯವಾಗಿಯೇ ಕೆಲಸ ಮಾಡಬಹುದು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
      ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ, ಉದ್ಯೋಗಖಾತ್ರಿ ಯೋಜನೆಯಡಿ ಕಾಮಗಾರಿ ಆದೇಶ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.
      ಈ ಬಾರಿ ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಿರುವದರಿಂದ ಬೆಳೆಗೆ ಅನಾನುಕೂಲವಿದೆ.  ರೈತರು ಸಂಕಷ್ಟದಲ್ಲಿದ್ದಾರೆ.   ಆದರೆ ಯಾರೂ ದುಡಿಯುವ ಸಲುವಾಗಿ ಗುಳೆ ಹೋಗುವ ಅಗತ್ಯವಿಲ್ಲ.  ಈಗಾಗಲೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು ಇಲ್ಲಿಯೇ ಕೆಲಸ ನಿರ್ವಹಿಸಬಹುದಾಗಿದೆ. ವೈಯಕ್ತಿಕ ಕಾಮಗಾರಿಗಳಾದ ದನದದೊಡ್ಡಿ, ಕುರಿ ದೊಡ್ಡಿ, ಮನೆಗೆ ಬಚ್ಚಲು ನೀರು ಇಂಗು ಗುಂಡಿ, ವಸತಿ ಯೋಜನೆಯಡಿ ಮನೆ ನಿರ್ಮಾಣ ಮುಂತಾದ ಕಾಮಗರಿಗಳನ್ನು ನಿರ್ವಹಿಸಲು ಈ ಯೋಜನೆಯಲ್ಲಿ ಅವಕಾಶವಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.  ಅಲ್ಲದೆ  ಗ್ರಾಮೀಣ ಅಭಿವೃದ್ಧಿಗಾಗಿ ಸರಕಾರ ವಿವಿಧ ಯೋಜನೆ ಜಾರಿಗೆ ತಂದಿದ್ದು ಇದರ ಸದುಪಯೋಗಕ್ಕೆ ಗ್ರಾಮಸ್ಥರ ಸಹಕಾರವೂ ಅಗತ್ಯವಿದೆ. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡಬೇಕೆಂದು ಗ್ರಾಮಸ್ಥರಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮನವಿ ಮಾಡಿದರು.
     ನಂತರ ಹಟ್ಟಿ ಗ್ರಾಮದಲ್ಲಿ, ಜಾಬ್‍ಕಾರ್ಡ್ ಹೊಂದಿದ ಕುಟುಂಬದ ಮನೆ ಮನೆಗೆ ಭೇಟಿ ನೀಡಿ ಕಾಮಗಾರಿಗಳ ಆದೇಶವನ್ನು ಫಲಾನುಭವಿಗಳಿಗೆ ವಿತರಿಸಿದ ಅವರು, ಹಟ್ಟಿ ಗ್ರಾಮವೊಂದರಲ್ಲೇ ದನದ ದೊಡ್ಡಿ ನಿರ್ಮಾಣದ 52 ಕಾಮಗಾರಿಗಳು, ಕುರಿದೊಡ್ಡಿ- 43, ಇಂಗು ಗುಂಡಿ- 440, ವಸತಿ ಯೋಜನೆ-86 ಸೇರಿದಂತೆ ಒಟ್ಟು 621 ವಿವಿಧ ಕಾಮಗಾರಿಗಳ ಆದೇಶವನ್ನು ವಯಕ್ತಿಕ ಫಲಾನುಭವಿಗಳಿಗೆ ವಿತರಿಸಿದರು.
     ಜಿ.ಪಂ. ಉಪ ಕಾರ್ಯದರ್ಶಿ ಎನ್.ಕೆ. ತೊರವಿ, ಜಿ.ಪಂ. ಸದಸ್ಯೆ ರತ್ನವ್ವ ಭರಮಪ್ಪ ನಗರ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಸದಸ್ಯರು, ಅಲ್ಲದೆ ಹಟ್ಟಿ ಹಾಗೂ ಅಳವಂಡಿ ಹೋಬಳಿಗೆ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Wednesday, 16 March 2016

ಮಹಿಳೆಯರಿಗೆ ಟೇಲರಿಂಗ್ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ ಮಾ. 16 (ಕರ್ನಾಟಕ ವಾರ್ತೆ) : ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ 21 ದಿನಗಳ ಅವಧಿಯ ಡ್ರೆಸ್ ಡಿಸೈನಿಂಗ್  (Dress desigining for Women) ಟೇಲರಿಂಗ್ ತರಬೇತಿಯನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯವನ್ನು ಉಚಿತವಾಗಿ ನೀಡಲಾಗುವುದು.  ಅರ್ಜಿ ಸಲ್ಲಿಸಲು ಮಾ. 28 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾ. 29 ರಂದು ಬೆಳಿಗ್ಗೆ 10-30 ಗಂಟೆಗೆ ಸಂದರ್ಶನ ನಡೆಸಲಾಗುವುದು.  ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯೊಳಗಿರಬೇಕು, ಕನಿಷ್ಟ 07 ನೇ ತರಗತಿ ಉತ್ತೀರ್ಣರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅರ್ಜಿಯನ್ನು ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ಇವರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ 08539-231038 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕನಕಾಚಲಪತಿ ದೇವಸ್ಥಾನ ವಾರ್ಷಿಕ ಜಾತ್ರೆ : ಮಾ. 17 ರಂದು ಪೂರ್ವಭಾವಿ ಸಭೆ

ಕೊಪ್ಪಳ ಮಾ. 16 (ಕರ್ನಾಟಕ ವಾರ್ತೆ) : ಗಂಗಾವತಿ ತಾಲೂಕು ಕನಕಗಿರಿಯ ಪ್ರಸಿದ್ಧ ಶ್ರೀ ಕನಕಾಚಲಪತಿ ದೇವಾಲಯದ ವಾರ್ಷಿಕ ಜಾತ್ರೆ ಇದೇ ಮಾ. 30 ರಂದು ಜರುಗಲಿದ್ದು, ಈ ಕುರಿತು ಸಿದ್ಧತೆಗಳನ್ನು ಕೈಗೊಳ್ಳುವ ಸಂಬಂಧ ಪೂರ್ವಭಾವಿ ಸಭೆ ಮಾ. 17 ರಂದು ಬೆಳಿಗ್ಗೆ 10-30 ಗಂಟೆಗೆ ಕನಕಗಿರಿಯ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಜರುಗಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸುವರು.  ಸಭೆಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಕಳೆದ ವರ್ಷದ ಜಾತ್ರೆ ಸಂದರ್ಭದಲ್ಲಿ ಒದಗಿಸಲಾದ ಸೌಲಭ್ಯಗಳ ಮಾಹಿತಿಯೊಂದಿಗೆ ಖುದ್ದು ಭಾಗವಹಿಸುವಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಪರೀಕ್ಷಾ ಫಲಿತಾಂಶ ಪ್ರಕಟ

ಕೊಪ್ಪಳ, ಮಾ.16 (ಕರ್ನಾಟಕ ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಡೆಸಲಾದ ಪ್ರಸಕ್ತ ಸಾಲಿನ ಕನ್ನಡ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ.
     ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಫಲಿತಾಂಶದ ಪಟ್ಟಿಯನ್ನು ಕಳುಹಿಸಿದೆ. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಫಲಕದಲ್ಲಿ ಪ್ರಕಟಿಸಿದ್ದು,
www.kasapa.in  ಅಂತರ್ಜಾಲದಲ್ಲಿಯೂ ಸಹ ಫಲಿತಾಂಶ ಲಭ್ಯವಿದೆ. ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಸಂಬಂಧಪಟ್ಟವರಿಗೆ ಶೀಘ್ರದಲ್ಲಿ ಕಳುಹಿಸಲಾಗುವುದು, ಅಂಕಪಟ್ಟಿಗಳು ತಲುಪಿದ ಒಂದು ತಿಂಗಳೊಳಗೆ ಮರು ಎಣಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ. ರಾಜಶೇಖರ ಹತಗುಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ವಿರುದ್ಧ ದೂರು ಸಲ್ಲಿಸಲು ದೂರು ಪ್ರಾಧಿಕಾರ ರಚನೆ- ಡಾ. ತ್ಯಾಗರಾಜನ್

ಕೊಪ್ಪಳ, ಮಾ.16 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ ಕಾಯ್ದೆ 2012 ರ ತಿದುಪಡಿ ಪ್ರಕಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ದೂರುಗಳ ವಿಚಾರಣೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದೂರು ಪ್ರಾಧಿಕಾರಗಳನ್ನು ರಚಿಸಿದ್ದು, ಜಿಲ್ಲೆಯ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ಧ ದೂರುಗಳಿದ್ದಲ್ಲಿ, ಸಾರ್ವಜನಿಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜ್ ತಿಳಿಸಿದ್ದಾರೆ.
    ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿವೈಎಸ್‍ಪಿ ಮತ್ತು ಅದಕ್ಕಿಂತ ಕೆಳದರ್ಜೆ ಅಧಿಕಾರಿ/ಸಿಬ್ಬಂದಿಗಳ ವಿರುದ್ಧದ ಆರೋಪ ಅಂದರೆ ಯಾವುದೇ ಸಾರ್ವಜನಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ, ಪೊಲೀಸ್ ವಶದಲ್ಲಿದ್ದಾಗ ಮರಣ, ಐಪಿಸಿ ಸೆಕ್ಷನ್-320 ರಲ್ಲಿ ತಿಳಿಸಲಾದಂತಹ ಗಂಭೀರ ಗಾಯ, ಮಾನಭಂಗ, ಅಥವಾ ಮಾನಭಂಗಕ್ಕೆ ಯತ್ನ ಅಥವಾ ಕಾನೂನು ಪ್ರಕಾರವಲ್ಲದ ಬಂಧನ ಇಲ್ಲವೇ ವಶದಲ್ಲಿರಿಸಿಕೊಳ್ಳುವುದು, ಇತರ ಗಂಭೀರ ದುರ್ನಡತೆ ದೂರುಗಳ ವಿಚಾರಣೆ ಮಾಡಲಿದೆ.
    ಪೊಲೀಸ್ ಉಪಾಧೀಕ್ಷರು ಮತ್ತು ಅದಕ್ಕಿಂತ ಕೆಳ ಹಂತದ ಅಧಿಕಾರಿ/ಸಿಬ್ಬಂಧಿಗಳ ವಿರುದ್ದದ ದೂರುಗಳನ್ನು, ಸಾರ್ವಜನಿಕರು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ, ಜಿಲ್ಲಾ ಪೊಲೀಸ್ ಅಧೀಕ್ಷಕರವರ ಕಛೇರಿ, ಅಶೋಕ ಸರ್ಕಲ್, ಕೊಪ್ಪಳ, ದೂರವಾಣಿ-08539-230111 ಇಲ್ಲಿಗೆ ಸಲ್ಲಿಸಬಹುದು.
     ಡಿವೈಎಸ್‍ಪಿ ಹುದ್ದೆಯ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳ ವಿರುದ್ದದ ದೂರುಗಳನ್ನು ಅಧ್ಯಕ್ಷರು, ರಾಜ್ಯ ಪೊಲೀಸ್ ದೂರು ಪ್ರಾಧಿಕಾರ, ಕೊಠಡಿ ಸಂ.36, ನೆಲಮಹಡಿ, ವಿಕಾಸ ಸೌಧ, ಬೆಂಗಳೂರು-01, ದೂರವಾಣಿ- 080-22386063 ಅಥವಾ 22034220 ಇಲ್ಲಿದೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲ್ಮಲ-ಶಿಗ್ಗಾಂವ್ ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಣ: ಸಂಸದರಿಂದ ಅಭಿನಂದನೆ

ಕೊಪ್ಪಳ, ಮಾ.16 (ಕರ್ನಾಟಕ ವಾರ್ತೆ): ಪ್ರಸ್ತುತ ರಾಜ್ಯ ಹೆದ್ದಾರಿಯಾಗಿರುವ ಕಲ್ಮಲ-ಶಿಗ್ಗಾಂವ್ ಮಾರ್ಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಿದ್ದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಸಂಸದ ಕರಡಿ ಸಂಗಣ್ಣ ಅವರು ಅಭಿನಂದನೆ ಸಲ್ಲಿಸಿದ್ದಾರೆ.
     ಕಲ್ಮಲ-ಶಿಗ್ಗಾಂವ್ ರಾಜ್ಯ ಹೆದ್ದಾರಿ 23 ನ್ನು ಕೊಪ್ಪಳದಿಂದ ಶಿಗ್ಗಾಂವ್ ವರೆಗೆ ಮಾತ್ರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಿ ಈ ಹಿಂದೆ ಆದೇಶಿಸಲಾಗಿತ್ತು, ಆದರೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ ಗಡ್ಕರಿ ಅವರನ್ನು ಭೇಟಿಯಾಗಿ, ಮೊದಲಿನ ಬೇಡಿಕೆಯಂತೆ ಕಲ್ಮಲದಿಂದ ಶಿಗ್ಗಾಂವ್ ವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ಮನವಿ ಮಾಡಿದ್ದರು.
     ಸಂಸದರ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಕಲ್ಮಲ ದಿಂದ ಶಿಗ್ಗಾಂವ್ ವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಿ ಆದೇಶಿಸಿದ್ದಾರೆ.
      ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಕೇಂದ್ರ ಸಚಿವ ನಿತೀನ್ ಗಡ್ಕರಿಯವರನ್ನು ಖುದ್ದು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಬೆಳಗಾವಿ ಸಂಸದ ಸುರೇಶ್ ಅಂಗಡಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಕೊಪ್ಪಳ ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

Tuesday, 15 March 2016

ಸಮಾಜದ ಹಾದಿತಪ್ಪಿಸುವ ಸಂಘಟನೆಗಳಿಂದ ಯುವಕರು ದೂರವಿರಿ- ಶಿವರಾಜ ತಂಗಡಗಿ

ಕೊಪ್ಪಳ ಮಾ. 15 (ಕರ್ನಾಟಕ ವಾರ್ತೆ): ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವನ್ನಿಟ್ಟುಕೊಂಡು ಯುವ ಜನತೆ ಸೃಜನಾತ್ಮಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು.  ಆದರೆ ಸಮಾಜದ ಹಾದಿ ತಪ್ಪಿಸುವ ಸಂಘಟನೆಗಳಿಂದ ಯುವಕರು ದೂರವಿರುವುದು ಒಳಿತು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ಕರೆ ನೀಡಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಗಂಗಾವತಿ ತಾಲೂಕು ಕನಕಗಿರಿಯ ಎಪಿಎಂಸಿ ಸಮುದಾಯ ಭವನದಲ್ಲಿ ಮಂಗಳವಾರದಂದು ಆಯೋಜಿಸಲಾಗಿದ್ದ ಎರಡು ದಿನಗಳ ಕಲಬುರಗಿ ವಿಭಾಗ ಮಟ್ಟದ ಯುವಜನ ಮೇಳವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
     ಯುವಕರು ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದು, ಕಂಪ್ಯೂಟರ್, ವಿಡಿಯೋ ಗೇಮ್‍ನಂತಹ ಚಟುವಟಿಕೆಗಳಲ್ಲಿ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.  ಈ ಹಿಂದೆ ಕ್ರೀಡೆ, ಗ್ರಾಮೀಣ ಸ್ಪರ್ಧೆಗಳು ಎಂದರೆ ಯುವಕರು ತಂಡೋಪತಂಡವಾಗಿ ಒಂದೆಡೆ ಸೇರಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು.  ಆದರೆ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ.  ಗುಟಕಾ, ತಂಬಾಕು, ಮದ್ಯಪಾನದಂತಹ ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ.  ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು.   ಈ ಹಿಂದೆ ಯುವಕರು ವ್ಯಾಯಾಮ ಮಾಡಲು ಹಾಗೂ ತಾಲೀಮು ನಡೆಸಲು ಇದ್ದಂತಹ ಗರಡಿ ಮನೆಗಳು ಕಾಣೆಯಾಗಿವೆ.  ಆದರು ಈ ಭಾಗದಲ್ಲಿ ಗರಡಿ ಮನೆ ಪ್ರಾರಂಭಕ್ಕೆ ಮಂಜೂರಾತಿ ದೊರೆತಿದ್ದು, ಶೀಘ್ರ ಕಾರ್ಯಾರಂಭ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು, ಹೆಚ್ಚು ಯುವ ಸಂಘಟನೆಗಳು ರಚನೆಗೊಂಡು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.  ಆದರೆ ಸಮಾಜದ ಹಾದಿ ತಪ್ಪಿಸುವ ಸಂಘಟನೆಗಳಿಂದ ದೂರವಿರಬೇಕು.  ಈ ಭಾಗದಲ್ಲಿ ಮಹಿಳಾ ಸಂಘಗಳು ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು, ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.  ಗ್ರಾಮೀಣ ಪ್ರದೇಶದಲ್ಲಿಯೂ ಯುವಜನ ಮೇಳದಂತಹ ಸಾಂಸ್ಕøತಿಕ ಚಟುವಟಿಕೆಗಳ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದಲೇ, ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿದ್ದ ವಿಭಾಗ ಮಟ್ಟದ ಯುವಜ ಮೇಳವನ್ನು, ಈ ಬಾರಿ ಕನಕಗಿರಿಯಲ್ಲಿ ಹಮ್ಮಿಕೊಳ್ಳಲಾಗಿದೆ.  ಗಂಗಾವತಿ ತಾಲೂಕಿನ ಕನಕಗಿರಿ ಮತ್ತು ಕಾರಟಗಿಯಲ್ಲಿ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲು ಈಗಾಗಲೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.  ಈ ಬಾರಿಯ ಬಜೆಟ್‍ನಲ್ಲಿ ಇದಕ್ಕೆ ಅನುದಾನ ದೊರೆಯುವ ವಿಶ್ವಾಸವಿದೆ.  ಕ್ಷೇತ್ರದಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಗಾಗಲೆ ಈಡೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕಾರ್ಯಕ್ರಮಗಳನ್ನು ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಅವರು, ಇಲಾಖೆಯು ಕೇವಲ ಆಟೋಟದ ಚಟುವಟಿಕೆಗೆ ಮಾತ್ರವಲ್ಲದೆ, ಸಾಂಸ್ಕøತಿಕ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ.  ತಾಲೂಕು ಮಟ್ಟದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಮಲ್ಟಿ ಜಿಮ್ ಸ್ಥಾಪಿಸಲು ಈಗಾಗಲೆ ಕ್ರಮ ಜರುಗಿಸಲಾಗಿದೆ.  ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ಆಯೋಜಿಸಲಾಗುವುದು ಎಂದರು.  ರಾಮಮೂರ್ತಿ ನವಲಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ ಅಮರೇಶ್ ಗೋನಾಳ, ಲಕ್ಷ್ಮಮ್ಮ ಸಿದ್ದಪ್ಪ ನಿರಲೂಟಿ, ತಾ.ಪಂ. ಸದಸ್ಯರುಗಳಾದ ಬಸನಗೌಡ, ವಿರುಪಾಕ್ಷಗೌಡ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಸೇರಿದಂತೆ ಗಣ್ಯರಾದ ಶ್ರೀನಿವಾಸ ರೆಡ್ಡಿ, ಶ್ರೀನಿವಾಸ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.

ಕೆರೆ ತುಂಬಿಸುವ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣ- ಶಿವರಾಜ ಎಸ್ ತಂಗಡಗಿ

ಕೊಪ್ಪಳ ಮಾ. 15 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 08 ಕೆರೆಗಳಿಗೆ ತುಂಗಭದ್ರಾ ನೀರನ್ನು ತುಂಬಿಸುವ 141 ಕೋಟಿ ರೂ. ಯೋಜನೆಯಡಿ ಬರುವ ಮೇ ತಿಂಗಳಾಂತ್ಯದ ವೇಳೆಗೆ ಲಕ್ಷ್ಮೀದೇವಿ ಕೆರೆ ಮತ್ತು ಕಾಟಾಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮೇ ಅಂತ್ಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
     ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕಲಬುರಗಿ ವಿಭಾಗ ಮಟ್ಟದ ಯುವಜನ ಮೇಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಪದೇ ಪದೇ ಬರಗಾಲಕ್ಕೆ ತುತ್ತಾಗುವ ಈ ಭಾಗದಲ್ಲಿ ಅಂತರ್ಜಲ ತೀವ್ರ ಕುಸಿತವಾಗುತ್ತಿದೆ.  ಬೇಸಿಗೆಯಲ್ಲಂತೂ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದು, ಕುಡಿಯುವ ನೀರಿಗೆ ತೀವ್ರ ತೊಂದರೆಯಾಗುತ್ತಿದೆ.  ಇದರ ನಿವಾರಣೆಗಾಗಿ ತುಂಗಭದ್ರಾ ನೀರನ್ನು ಕೆರೆಗಳಿಗೆ ತುಂಬಿಸುವ 141 ಕೋಟಿ ರೂ. ಗಳ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಈಗಾಗಲೆ ಸಾಕಷ್ಟು ಕಾಮಗಾರಿ ಪೂರ್ಣಗೊಂಡಿದೆ.  ಈ ಪೈಕಿ ಬರುವ ಮೇ ಅಂತ್ಯದೊಳಗೆ ಲಕ್ಷ್ಮೀದೇವಿ ಕೆರೆ ಮತ್ತು ಕಾಟಾಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪೂರ್ಣಗೊಂಡು, ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು.  ಬರುವ ಮಳೆಗಾಲಕ್ಕೆ ನೀರು ತುಂಬಿಸುವುದು ಶತಸಿದ್ಧವಾಗಿದ್ದು, ಕೆರೆಗಳು ತುಂಬಿದಲ್ಲಿ, ಅಂತರ್ಜಲ ಮಟ್ಟ ಏರಿಕೆಯಾಗಲಿದೆ.  ಜನರಿಗೆ ಕುಡಿಯುವ ನೀರಿನ ಬವಣೆಯೂ ತಪ್ಪಲಿದೆ ಎಂದರು.
ಕನಕಗಿರಿ ಉತ್ಸವ ಇಲ್ಲ : ರಾಜ್ಯದಲ್ಲಿ ಸದ್ಯ ಬರ ಪರಿಸ್ಥಿತಿ ತಲೆದೋರಿದ್ದು, ಇಂತಹ ಸಂದರ್ಭದಲ್ಲಿ ಉತ್ಸವವನ್ನು ಆಚರಿಸುವುದು ಸಮಂಜಸವಲ್ಲವಾದ್ದರಿಂದ ಈ ಬಾರಿ ಕನಕಗಿರಿ ಉತ್ಸವ ಆಚರಿಸುವುದಿಲ್ಲ.  ರಾಜ್ಯದಲ್ಲಿ ಉತ್ತಮ ಮಳೆಯಾಗಿ, ರೈತರು ಸಂತೃಪ್ತಿಯಿಂದ ಇದ್ದಾಗ ಉತ್ಸವಗಳ ಆಚರಣೆಗೆ ಅರ್ಥ ಬರುತ್ತದೆ ಎಂದು ಸಚಿವ ಶಿವರಾಜ ಎಸ್. ತಂಗಡಗಿ ಅವರು ಹೇಳಿದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ ಅಮರೇಶ್ ಗೋನಾಳ, ಲಕ್ಷ್ಮಮ್ಮ ಸಿದ್ದಪ್ಪ ನಿರಲೂಟಿ, ತಾ.ಪಂ. ಸದಸ್ಯರುಗಳಾದ ಬಸನಗೌಡ, ವಿರುಪಾಕ್ಷಗೌಡ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ, ಸೇರಿದಂತೆ ಗಣ್ಯರಾದ ಶ್ರೀನಿವಾಸ ರೆಡ್ಡಿ, ಶ್ರೀನಿವಾಸ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.

ನಗರ, ಪಟ್ಟಣಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಿ- ವಿನಯಕುಮಾರ್ ಸೊರಕೆ


ಕೊಪ್ಪಳ ಮಾ. 15 (ಕರ್ನಾಟಕ ವಾರ್ತೆ) : ಕೊಪ್ಪಳ ನಗರವೂ ಸೇರಿದಂತೆ ಜಿಲ್ಲೆಯ ಯಾವುದೇ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ನಗರಾಭಿವೃದ್ಧಿ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಬೇಸಿಗೆಯಲ್ಲಿ ಕುಡಿಯುವ ನೀರಿನ ಸ್ಥಿತಿಗತಿ ಹಾಗೂ ಇಲಾಖೆಯ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ.  ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು.  ಈ ಕುರಿತು ಕ್ರಿಯಾ ಯೋಜನೆ ರೂಪಿಸಿ, ಇಲಾಖೆಗೆ ಸಲ್ಲಿಸಿದಲ್ಲಿ, ಕೂಡಲೆ ಅನುಮೋದನೆ ನೀಡಿ, ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು.  ಕೊಪ್ಪಳ ನಗರದಲ್ಲಿ ಸದ್ಯ 4-5 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.  ಮಳೆಯ ಕೊರತೆಯಿಂದ ತುಂಗಭದ್ರಾ ನದಿಯಲ್ಲಿ ನೀರು ಕಡಿಮೆಯಾಗಿದ್ದು, ಪ್ರಸಕ್ತ ಸಾಲಿನ ಎಸ್‍ಎಫ್‍ಸಿ ಅನುದಾನದಲ್ಲಿ 27. 08 ಲಕ್ಷ ರೂ. ಗಳಲ್ಲಿ ನದಿಯ ದಂಡೆಯಲ್ಲಿ ಬೋರ್‍ವೆಲ್‍ಗಳನ್ನು ಕೊರೆಯಿಸಿ, ಪೈಪ್‍ಲೈನ್ ಮೂಲಕ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.  ನಗರ ನೀರು ಸರಬರಾಜು ಮಂಡಳಿಯಿಂದ ಕೊಪ್ಪಳಕ್ಕೆ ನೀರು ಸರಬರಾಜು ಮಾಡುವ 54. 07 ಕೋಟಿ ರೂ. ಗಳ ಯೋಜನೆಯ ಕಾಮಗಾರಿ ಪೂರ್ಣಗೊಂಡಲ್ಲಿ, ನಗರದ ನೀರು ಪೂರೈಕೆ ತೊಂದರೆ ಶಾಶ್ವತವಾಗಿ ಪರಿಹಾರವಾಗಲಿದೆ.  ಈ ದಿಸೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮವನ್ನು ಅಧಿಕಾರಿಗಳು ತ್ವರಿತವಾಗಿ ಕೈಗೊಳ್ಳಬೇಕು.  ಕುಷ್ಟಗಿ ಪಟ್ಟಣದಲ್ಲಿ ಸದ್ಯ 3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಸದ್ಯ ಎಸ್‍ಎಫ್‍ಸಿ ಅನುದಾನದಲ್ಲಿ 10 ಬೋರ್‍ವೆಲ್‍ಗಳಿಗೆ ತ್ವರಿತವಾಗಿ ಮೋಟಾರ್ ಅಳವಡಿಸಿ, ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಕೊಪ್ಪಳ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಅವರು, ಬೇಸಿಗೆಯಲ್ಲಿ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ.  ಕೊಪ್ಪಳ ನಗರಸಭೆಗೆ 25 ಲಕ್ಷ ರೂ., ಗಂಗಾವತಿ- 30 ಲಕ್ಷ, ಕುಷ್ಟಗಿ- 25 ಲಕ್ಷ, ಯಲಬುರ್ಗಾ- 35 ಲಕ್ಷ ಅಲ್ಲದೆ ಮೇಲ್ದರ್ಜೆಗೇರಿಸಲಾಗಿರುವ ಕಾರಟಗಿ ಪುರಸಭೆಗೆ 20 ಲಕ್ಷ ರೂ., ಕನಕಗಿರಿ- 10 ಲಕ್ಷ, ತಾವರಗೇರಾ- 15 ಲಕ್ಷ, ಕುಕನೂರು- 10 ಲಕ್ಷ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯಿತಿಗೆ 12. 83 ಲಕ್ಷ ರೂ. ಗಳ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.  ಪ್ರಸ್ತಾವನೆಯ ಬೇಡಿಕೆಯಂತೆ ಅಗತ್ಯ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.
     ಕೊಪ್ಪಳ ಹಾಗೂ ಗಂಗಾವತಿ ನಗರಸಭೆಯಲ್ಲಿ ಒಳಚರಂಡಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ನಾನಾ ಕಾರಣಗಳಿಂದ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿಯನ್ನು ಪದೇ ಪದೇ ವಿಸ್ತರಿಸಲಾಗುತ್ತಿರುವುದು ಕಂಡುಬಂದಿದೆ.  ಅರೆಬರೆ ಕಾಮಗಾರಿಯಿಂದಾಗಿ ನಗರವಾಸಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.  ರಾಜ್ಯಾದ್ಯಂತ ಇಂತಹದೇ ಸಮಸ್ಯೆ ಎದುರಿಸಲಾಗುತ್ತಿದ್ದು, ಈ ಕುರಿತು ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವ ಸಲುವಾಗಿ ಐಎಎಸ್ ಅಧಿಕಾರಿ ಪೊನ್ನುರಾಜ್ ಅವರನ್ನು ನೇಮಿಸಲಾಗಿದೆ.  ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಅವರು ಪರಿಶೀಲಿಸುತ್ತಿದ್ದು, ಕೊಪ್ಪಳ ಜಿಲ್ಲೆಗೂ ಶೀಘ್ರ ಭೇಟಿ ನೀಡಿ, ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ಸಚಿವರು ಹೇಳಿದರು.
     ತೆರಿಗೆ ಸಂಗ್ರಹದಲ್ಲಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳು ಬಹಳಷ್ಟು ಹಿಂದೆ ಉಳಿದಿವೆ.  ತೆರಿಗೆ ಸಂಗ್ರಹದಲ್ಲಿ ಪ್ರಗತಿ ಸಾಧಿಸದಿದ್ದರೆ, ಸ್ಥಳೀಯ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಲಿವೆ.  ಇನ್ನಾದರೂ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
     ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣಗಳಲ್ಲಿ ಜಾರಿಗೊಳಿಸಲಾಗಿರುವ ಎರಡು ಹಂತಗಳ ನಗರೋತ್ಥಾನ ಯೋಜನೆ ಕಾಮಗಾರಿಗಳೂ ಸಹ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.  ಕೊಪ್ಪಳ ನಗರದಲ್ಲಿ 219 ಕಾಮಗಾರಿಗಳ ಪೈಕಿ 140 ಕಾಮಗಾರಿಗಳು ಪೂರ್ಣಗೊಂಡಿವೆ.  ಗಂಗಾವತಿಯಲ್ಲಿ 237 ಕಾಮಗಾರಿಗಳ ಪೈಕಿ 133, ಕುಷ್ಟಗಿಯಲ್ಲಿ 46 ಕಾಮಗಾರಿಗಳ ಪೈಕಿ 29, ಯಲಬುರ್ಗಾದಲ್ಲಿ 37 ಕಾಮಗಾರಿಗಳ ಪೈಕಿ 16 ಮಾತ್ರ ಪೂರ್ಣಗೊಂಡಿವೆ.  ನಗರೋತ್ಥಾನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸದಿದ್ದಲ್ಲಿ, ಮೂರನೆ ಹಂತದ ನಗರೋತ್ಥಾನ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ.  ಈ ನಿಟ್ಟಿನಲ್ಲಿ ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ನಗರಸಭೆ, ಪುರಸಭೆಗಳೂ ಸೇರಿದಂತೆ ಇತ್ತೀಚೆಗೆ ಮೇಲ್ದರ್ಜೆಗೇರಿಸಲಾಗಿರುವ ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಇಂಜಿನಿಯರ್‍ಗಳು ಇಲ್ಲದಿರುವುದರಿಂದ, ಯೋಜನೆಗಳ ಅನುಷ್ಠಾನದಲ್ಲಿ ತೀವ್ರ ತೊಂದರೆಯಾಗುತ್ತಿದೆ.  ಸದ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತಿ ರಾಜ್ ಇಲಾಖೆಗಳ ಜೂನಿಯರ್ ಇಂಜಿನಿರ್‍ಗಳನ್ನು ನಿಯೋಜನೆ ಮೇಲೆ ವಾರದಲ್ಲಿ ಒಮ್ಮೆ ಪಟ್ಟಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ.  ಕನಿಷ್ಟ ಪಕ್ಷ ಹೊರಗುತ್ತಿಗೆ ಆಧಾರದಲ್ಲಿ ಇಂಜಿನಿಯರ್‍ಗಳನ್ನು ನೇಮಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದಲ್ಲಿ, ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
     ಸಭೆಯಲ್ಲಿ ಸಂಸದೀಯ ಕಾರ್ಯದರ್ಶಿ ಡಾ. ಮಕ್ಬೂಲ್ ಭಾಗವಾನ್, ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರ, ನಗರ ನೀರು ಸರಬರಾಜು ಮಂಡಳಿ ಮುಖ್ಯ ಅಭಿಯಂತರ ಕೃಷ್ಣಮೂರ್ತಿ, ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಗಂಗಾವತಿ ನಗರಸಭೆ ಪೌರಾಯುಕ್ತ ರಂಗಸ್ವಾಮಿ ಸೇರಿದಂತೆ ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.