Saturday, 27 February 2016

ಫೆ. 28 ರಂದು ಈಶಾನ್ಯದ ಐಸಿರಿ ಸರಣಿಯ 24 ನೇ ಸಂಚಿಕೆ ಪ್ರಸಾರ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 24 ನೇ ಸಂಚಿಕೆ ಫೆ. 28 ರಂದು ಬೆಳಿಗ್ಗೆ 9-55 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 24ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.    ಕಲಬುರಗಿಯ ನಿವೃತ್ತ ನ್ಯಾಯ ಮೂರ್ತಿಗಳಾಗಿರುವ ಎಂ.ಬಿ. ಬಿರಾದರ ಅವರಿಂದ ಜನತಾ ನ್ಯಾಯಾಲಯ ಕುರಿತು ಮಾಹಿತಿ.  ಕಲಬುರಗಿಯ ಶಿಕ್ಷಕರ ಕಾಲೇಜಿನ ಉಪನ್ಯಾಸಕರಾಗಿರುವ ರಾಮಕೃಷ್ಣ ಕುಲಕರ್ಣಿ ಅವರಿಂದ ಶಿಕ್ಷಕರಿಗೆ ಸಲಹೆ -ಸೂಚನೆ.  ಕಲಬುರಗಿ ತಾ. ನಂದೂರ (ಕೆ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ಸಹಾಯಕ ಶಿಕ್ಷಕರಾಗಿರುವ ಸಂತೋಷ ಕುಲಕರ್ಣಿ ಅವರಿಂದ ಎಸ.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸಲಹೆಗಳು.  ಬೀದರ ಜಿಲ್ಲೆ ಔರಾದ ತಾಲೂಕಿನ ಬಸವೇಶ್ವರ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರ ಸಾಧನೆಯ ಹಾದಿಯ ಪರಿಚಯ.  ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ರಾಯಚೂರಿನ ಅಲ್ತಾಫ ರಂಗಮಿತ್ರ ಅವರ ಸಾಧನೆಯ ಪರಿಚಯ.  ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕ ತಮ್ಮ ಗುರಿಯ ಮಾರೆಪ್ಪ ಮಾರೆಪ್ಪ ದಾಸರ ಅವರಿಂದ ಜನಪದ ಗೀತೆ.  ಊರು-ಟೂರಿನಲ್ಲಿ ಶಹಾಪೂರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳ ದರ್ಶನ.  ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.   ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಕೆನರಾ ಬ್ಯಾಂಕ್‍ನಿಂದ ಉಚಿತ ಶಿಲ್ಪಕಲಾ ಶಿಕ್ಷಣ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ಮರ ಮತ್ತು ಕಲ್ಲುಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ ವಿಭಾಗಗಳಲ್ಲಿ ಉಚಿತವಾಗಿ ತರಬೇತಿಯನ್ನು 1991ರಿಂದ ನೀಡುತ್ತಾ ಬಂದಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಸಮೀಪದಲ್ಲಿರುವ ಬಿಡದಿಯಲ್ಲಿ  ಈ ಕರಕುಶಲ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಈ ಸಂಸ್ಥೆ ಇದುವರೆಗೆ ಒಟ್ಟಾರೆ 750 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಲ್ಪಾಕಲಾ ಶಿಕ್ಷಣವನ್ನು ನೀಡಿದೆ. ಇದರಲ್ಲಿ ಶೇಖಡ 92 ರಷ್ಟು ವಿದ್ಯಾರ್ಥಿಗಳು ಲಾಭದಾಯಕ ಹುದ್ದೆಯಲ್ಲಿದ್ದಾರೆ. ಹಲವಾರು ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನವಾಗಿದ್ದಾರೆ.
     ಮರ ಮತ್ತು ಕಲ್ಲುಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ ತರಬೇತಿಯ ಅವಧಿಯು 18 ತಿಂಗಳಾಗಿದ್ದು, ಕುಂಭಕಲೆ (ಟೆರಾಕೋಟಾ) ವಿಭಾಗದ ತರಬೇತಿ ಅವಧಿಯು 6 ತಿಂಗಳಾಗಿರುತ್ತದೆ. ಅಭ್ಯರ್ಥಿಗಳು ಕನಿಷ್ಟ 7ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ವಯೋಮಿತಿ 18 ರಿಂದ 25 ವರ್ಷದೊಳಗಿರಬೇಕು. ತರಬೇತಿ ಅವಧಿಯಲ್ಲಿ ಊಟ, ವಸತಿ, ಸಮವಸ್ತ್ರ, ಕಂಪ್ಯೂಟರ್ ಶಿಕ್ಷಣ, ಉಪಕರಣಗಳು/ಕಚ್ಛಾಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು. ಆಭ್ಯರ್ಥಿಗಳಿಗೆ ತರಬೇತಿ ಅಂಗವಾಗಿ ಉಚಿತ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುವುದಲ್ಲದೆ, ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು.
      ತರಬೇತಿಗೆ ಸೇರಲಿಚ್ಛಿಸುವವರು ನೇರ ಸಂದರ್ಶನಕ್ಕೆ   ಮಾರ್ಚ್  10 ರಿಂದ ಮಾರ್ಚ್  14  ರೊಳಗೆ ಬೆಂಗಳೂರು ಸಮೀಪದ ಜೋಗರದೊಡ್ಡಿ (ಬಿಡದಿ ಹೋಬಳಿ, ರಾಮನಗರಜಿಲ್ಲೆ) ಯಲ್ಲಿರುವ ಕೆನರಾಬ್ಯಾಂಕ್ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಆಯ್ಕೆಯಾದ ಆಭ್ಯರ್ಥಿಗಳನ್ನು ಅದೇ ದಿನ ಸ್ಥಳದಲ್ಲೇ ತರಬೇತಿಗೆ ಹಾಜರಿಪಡಿಸಿಕೊಳ್ಳಲಾಗುವುದು.
     ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ನಿರ್ದೇಶಕ ವೆಂಕಟೇಶ ಶೇಷಾದ್ರಿ (ಮೊಬೈಲ್: 9900158885/9481739830) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹಿಟ್ನಾಳ ಗ್ರಾಮದ ಯುವತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹಿಟ್ನಾಳ ಗ್ರಾಮದ ಯುವತಿ ಮರ್ದಾನಬಿ (22) ತಂದೆ ರಾಜಾಸಾಬ ಆಡೂರ ಕಳೆದ 2015 ರ ಅಕ್ಟೋಬರ್ 11 ರಿಂದ ನಾಪತ್ತೆಯಾಗಿದ್ದು, ಯುವತಿಯ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪಿಎಸ್‍ಐ ಮನವಿ ಮಾಡಿದ್ದಾರೆ.
     ಹಿಟ್ನಾಳ ಗ್ರಾಮದ ಪೀರಾಸಾಬ್ ಎಂಬುವವರು ತಮ್ಮ ತಂಗಿ ಮರ್ದಾನಬಿ ಕಳೆದ 2015 ರ ಅಕ್ಟೋಬರ್ 11 ರಂದು ತಾನು ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೊಪ್ಪಳದ ಡಾ. ಕಲಾಲ ಅವರ ಆಸ್ಪತ್ರೆಗೆ ಕರ್ತವ್ಯಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು, ಮನೆಗೆ ಹಿಂದಿರುಗದೆ, ಕಾಣೆಯಾಗಿರುತ್ತಾಳೆ ಎಂದು ಮುನಿರಾಬಾದ್‍ನ ಪೊಲೀಸ್ ಠಾಣೆಗೆ ದೂರು ದಾಖಲಿಸಿರುತ್ತಾರೆ.  ಕಾಣೆಯಾಗಿರುವ ಯುವತಿಯ ಚಹರೆ ಗುರುತು ಇಂತಿದೆ.  ಯುವತಿ ಹೆಸರು- ಮರ್ದಾನಬಿ, ವಯಸ್ಸು 22, ಜಾತಿ-ಮುಸ್ಲಿಂ, ಎತ್ತರ- ಸುಮಾರು 5 ಅಡಿ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾಳೆ, ಕಾಣೆಯಾಗಿದ್ದಾಗ ಗುಲಾಬಿ ಬಣ್ಣದ ಹೂವಿನ ಡಿಸೈನ್‍ವುಳ್ಳ ಚೂಡಿದಾರ ಧರಿಸಿರುತ್ತಾಳೆ.  ಈ ಚಹರೆ ಗುರುತಿನ ಯುವತಿ ಕುರಿತು ಮಾಹಿತಿ ದೊರೆತಲ್ಲಿ, ಎಸ್‍ಪಿ, ಕೊಪ್ಪಳ-08539-230111, ಡಿವೈಎಸ್‍ಪಿ, ಕೊಪ್ಪಳ-08539-222433, ಸಿಪಿಐ ಕೊಪ್ಪಳ ಗ್ರಾಮೀಣ- 08539-221333 ಅಥವಾ ಪಿಎಸ್‍ಐ ಮುನಿರಾಬಾದ್- 08539-270333 ಕ್ಕೆ ಸಂಪರ್ಕಿಸಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹಿಟ್ನಾಳ ಗ್ರಾಮದ ಕಸ್ತೂರಿ (25) ಗಂಡ ಶಿವಪ್ಪ ಕಂಬಾರ ಎಂಬ ಮಹಿಳೆ ಕಳೆದ ಜನವರಿ 22 ರಿಂದ ಕಾಣೆಯಾಗಿದ್ದು, ಮಹಿಳೆಯ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪಿಎಸ್‍ಐ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
     ಹಿಟ್ನಾಳ ಗ್ರಾಮದ ಶಿವಪ್ಪ ಯಮನಪ್ಪ ಕಂಬಾರ ಅವರು ತಮ್ಮ ಪತ್ನಿ ಕಸ್ತೂರಿ (25) ಕಳೆದ ಜ. 22 ರಂದು ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.  ಇವರನ್ನು ಹುಡುಕಿಕೊಡುವಂತೆ ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.  ಕಾಣೆಯಾದ ಮಹಿಳೆಯ ಚಹರೆ ಗುರುತು ಇಂತಿದೆ.  ಹೆಸರು- ಕಸ್ತೂರಿ ಗಂಡ ಶಿವಪ್ಪ ಕಂಬಾರ, ವಯಸ್ಸು- 25 ವರ್ಷ, ಜಾತಿ- ಕುಂಬಾರ, ಎತ್ತರ- ಸುಮಾರು 5 ಅಡಿ, ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ, ತೆಲುಗು ಭಾಷ ಮಾತನಾಡುತ್ತಾರೆ.  ಈ ಚಹರೆ ಗುರುತಿನ ಯುವತಿ ಕುರಿತು ಮಾಹಿತಿ ದೊರೆತಲ್ಲಿ, ಎಸ್‍ಪಿ, ಕೊಪ್ಪಳ-08539-230111, ಡಿವೈಎಸ್‍ಪಿ, ಕೊಪ್ಪಳ-08539-222433, ಸಿಪಿಐ ಕೊಪ್ಪಳ ಗ್ರಾಮೀಣ- 08539-221333 ಅಥವಾ ಪಿಎಸ್‍ಐ ಮುನಿರಾಬಾದ್- 08539-270333 ಕ್ಕೆ ಸಂಪರ್ಕಿಸಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ಮೂಡಬಿದ್ರೆಯಲ್ಲಿ ಮಾ. 08 ರಿಂದ ರಾಜ್ಯ ಮಟ್ಟದ ಯುವಜನ ಮೇಳ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2014-15 ನೇ ಸಾಲಿನ ರಾಜ್ಯ ಮಟ್ಟದ ಯುವಜನ ಮೇಳವನ್ನು ಮಾ. 08 ರಿಂದ 10 ರವರೆಗೆ ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಆಯೋಜಿಸಲಾಗಿದೆ.
     ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಆಯ್ಕೆಯಾದ ಸ್ಪರ್ಧಾಳುಗಳು ಮಾ. 08 ರಂದು ಬೆಳಿಗ್ಗೆ 11 ಗಂಟೆಯೊಳಗೆ ಸಂಘಟಕರಲ್ಲಿ ತಮ್ಮ ಹೆಸರನ್ನು ಹೋಂದಾಯಿಸಿ, ಅಂದು ಸಂಜೆ 04 ಗಂಟೆಗೆ ಜರುಗುವ ಉದ್ಘಾಟನಾ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗಬೇಕು.  ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ವಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಲು ಅರ್ಹರು.  ಸ್ಪರ್ಧಾಳುಗಳಿಗೆ ಊಟೋಪಹಾರದ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆಯನ್ನು ಸಂಘಟಕರು ಮಾಡುವರು.  ಸ್ಪರ್ಧಾಳುಗಳಿಗೆ ಕೊಪ್ಪಳದಿಂದ ಮೂಡಬಿದ್ರೆಗೆ ಹೋಗಿ ಬರಲು ಸಾಮಾನ್ಯ ಬಸ್ ಪ್ರಯಾಣ ಭತ್ಯೆ ನೀಡಲಾಗುವುದು.  ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ, ಮೊ. ಸಂ: 9480886475 ಅಥವಾ 9482847320 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ರೈಲ್ವೆ ಬಜೆಟ್‍ನಲ್ಲಿ ಜಿಲ್ಲೆಗೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಅನುದಾನ- ಸಂಸದ ಸಂಗಣ್ಣ ಕರಡಿ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಯೋಜನೆಗಳಿಗೆ ಕಳೆದ ವರ್ಷಕ್ಕಿಂತ ಈ ವರ್ಷದ ರೈಲ್ವೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
     ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕಳೆದ ಫೆ. 25 ರಂದು ರೈಲ್ವೆ ಬಜೆಟ್ ಮಂಡಿಸಿದ್ದು, ಇದರಲ್ಲಿ ಮುನಿರಾಬಾದ್-ಮೆಹಬೂಬನಗರ ರೈಲ್ವೆ ಕಾಮಗಾರಿಗೆ ರೂ. 180 ಕೋಟಿ, ಗದಗ-ವಾಡಿ ರೈಲ್ವೆ ಯೋಜನೆಗೆ- ರೂ. 60 ಕೋಟಿ., ಹೊಸಪೇಟೆ-ಹರ್ಲಾಪುರ ಡಬ್ಲಿಂಗ್ ಕಾಮಗಾರಿಗೆ- ರೂ. 300 ಕೋಟಿ, ಭಾಗ್ಯನಗರ ರೈಲ್ವೆ ಗೇಟ್ ಸಂ: 62 ರ ಮೇಲ್ಸೇತುವೆ ಕಾಮಗಾರಿಗೆ- ರೂ. 17. 50 ಕೋಟಿ. ಹಾಗೂ ಕಿನ್ನಾಳ ರಸ್ತೆ ರೈಲ್ವೆ ಗೇಟ್‍ಸಂಖ್ಯೆ 64 ರ ಕೆಳ ಸೇತುವೆ ಕಾಮಗಾರಿಗೆ- ರೂ. 08 ಕೋಟಿ ಗಳ ಅನುದಾನವನ್ನು ಪ್ರಸಕ್ತ ರೈಲ್ವೆ ಬಜೆಟ್‍ನಲ್ಲಿ ಒದಗಿಸಲಾಗಿದೆ.  ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಲು ಅನುಕೂಲವಾಗುವಂತೆ ಕಳೆದ ವರ್ಷಕ್ಕಿಂತ, ಪ್ರಸಕ್ತ ವರ್ಷ ಹೆಚ್ಚಿನ ಅನುದಾನ ನೀಡಿದ್ದಕ್ಕಾಗಿ ಸಂಸದ ಸಂಗಣ್ಣ ಕರಡಿ ಅವರು ರೈಲ್ವೆ ಸಚಿವರನ್ನು ಅಭಿನಂದಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಮಕ್ಕಳ ಪಾಲನಾ ಮತ್ತು ರಕ್ಷಣಾ ಸಂಸ್ಥೆಗಳ ನೋಂದಣಿ ಕಡ್ಡಾಯ- ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೂಚನೆ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಬಾಲ ನ್ಯಾಯ ಕಾಯ್ದೆ-2000, ತಿದ್ದುಪಡಿ ಕಾಯ್ದೆ-2006 ರ ಅನ್ವಯ ಎಲ್ಲಾ ರೀತಿಯ ಮಕ್ಕಳ ಪಾಲನಾ ಮತ್ತು ರಕ್ಷಣಾ ಸಂಸ್ಥೆಗಳನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದ್ದಾರೆ.
     ಪಾಲನೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಅನಾಥಾಲಯಗಳು, ಆಶ್ರಯಧಾಮಗಳು, ತೆರೆದ ತಂಗುದಾಣಗಳು, ನಿರ್ಗತಿಕ ಮಕ್ಕಳ ಕುಟೀರ, ಬಾಲಕಾರ್ಮಿಕರಿಗಾಗಿ ನಡೆಸುತ್ತಿರುವ ಬ್ರಿಡ್ಜ್ ಶಾಲೆಗಳು, ವಿಶೇಷ ದತ್ತು ಕೇಂದ್ರಗಳು, ಉಜ್ವಲ ಕೇಂದ್ರಗಳು, ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಮಾನ್ಯತೆ ಪಡೆದ ವಸತಿಯುತ ಸಂಸ್ಥೆಗಳು, ಅರ್ಹ ಸಂಸ್ಥೆಗಳು (ಶೈಕ್ಷಣಿಕ ಸಂಸ್ಥೆಗಳ ವಸತಿ ಶಾಲೆಗಳನ್ನು ಹೊರತುಪಡಿಸಿ) ಎಲ್ಲ ರೀತಿಯ ಮಕ್ಕಳ ಪಾಲನಾ ಮತ್ತು ರಕ್ಷಣಾ ಸಂಸ್ಥೆಗಳನ್ನು ಬಾಲ ನ್ಯಾಯ ಕಾಯ್ದೆ-2000, ತಿದ್ದುಪಡಿ ಕಾಯ್ದೆ-2006 ರ ಅನ್ವಯ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.  ಆದರೆ ಈ ಕಾಯ್ದೆಯಡಿ ನೋಂದಣಿಯಾಗದೆ, ಮಕ್ಕಳಿಗಾಗಿ ಸಂಸ್ಥೆಗಳನ್ನು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.  ಸರ್ವೋಚ್ಛ ನ್ಯಾಯಾಲಯವು ‘ಬಜ್‍ಪನ್ ಬಚಾವೋ’ ಆಂದೋಲನದ ಅಂಗವಾಗಿ ಸಲ್ಲಿಸಿದ ರಿಟ್ ಅರ್ಜಿಗೆ ಸಂಬಂಧಿಸಿದಂತೆ, ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ, ಮಕ್ಕಳಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳು ಮಕ್ಕಳ ಕಲ್ಯಾಣ ಸಮಿತಿಯ ಮುಖಾಂತರ ಮಾತ್ರ ಮಕ್ಕಳನ್ನು ರಕ್ಷಣೆಗೆ ದಾಖಲು ಮಾಡಬೇಕಾಗಿರುತ್ತದೆ.  ನೇರವಾಗಿ ಪಡೆಯಲು ಅರ್ಹತೆ ಇರುವುದಿಲ್ಲ ಎಂದು ಈಗಾಗಲೆ ನ್ಯಾಯಾಲಯ ಸ್ಪಷ್ಟಪಡಿಸಿದೆ.  ಅಲ್ಲದೆ ಈ ರೀತಿಯ ಸಂಸ್ಥೆಗಳು ಬಾಲ ನ್ಯಾಯ (ಆರೈಕೆ ಮತ್ತು ಪೋಷಣೆ) ಕಾಯ್ದೆ 2000 ರಡಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕೆಂದು ಸ್ಪಷ್ಟವಾಗಿ ನಿರ್ದೇಶನ ನೀಡಿದೆ.  ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಬಾಲ ನ್ಯಾಯ ಕಾಯ್ದೆಯಡಿ ಇದುವರೆಗೂ ನೋಂದಣಿ ಮಾಡಿಸದೇ ಇರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕೂಡಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ನಿಗದಿತ ನಮೂನೆಯನ್ನು ಪಡೆದು ಒಂದು ತಿಂಗಳ ಒಳಗಾಗಿ ನೋಂದಣಿಗೆ ಪ್ರಸ್ತಾವನೆ ಸಲ್ಲಿಸಬೇಕು.  ಈಗಾಗಲೆ ಬಾಲ ನ್ಯಾಯ ಕಾಯ್ದೆಯಡಿ ನೋಂದಣಿಯಾಗಿದ್ದ ಸಂಸ್ಥೆಗಳ ನೋಂದಣಿ ಅವಧಿ ಮುಗಿದಿದ್ದಲ್ಲಿ, ಕೂಡಲೆ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.  ತಪ್ಪಿದಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 340 ರಡಿ ಅಕ್ರಮ ಬಂಧನವೆಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಅಲ್ಲದೆ ಸಂಸ್ಥೆಯನ್ನು ಯಾವುದೇ ಕಾಯ್ದೆಯಡಿ ನೋಂದಣಿಯಾಗಿದ್ದರೂ, ಅದನ್ನು ಹಿಂಪಡೆಯಲು ಅಥವಾ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು.  ಒಂದು ವೇಳೆ ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಹಾಗೂ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮಾ. 05 ರಂದು ಮುಧೋಳದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಗುರು ಪುಟ್ಟರಾಜ ಸಂಗೀತ ಹಾಗೂ ಸಾಂಸ್ಕøತಿಕ ಸಂಸ್ಥೆಯ ಸಹಯೋಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಮಾ. 05 ರಂದು ಸಂಜೆ 06 ಗಂಟೆಗೆ ಮುಧೋಳ ಸರ್ಕಾರಿ ಐಟಿಐ ಕಾಲೇಜು ವೇದಿಕೆಯಲ್ಲಿ ಜರುಗಲಿದೆ.
     ಜಿ.ಪಂ. ಸದಸ್ಯೆ ನೀಲಮ್ಮ ಅಡಿವೆಪ್ಪ ಭಾವಿಮನಿ ಉದ್ಘಾಟನೆ ನೆರವೇರಿಸುವರು.  ಗ್ರಾ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ತಳವಾರ ಅಧ್ಯಕ್ಷತೆ ವಹಿಸುವರು.  ತಾ.ಪಂ. ಸದಸ್ಯೆ ಹನಮಂತವ್ವ ಶರಣಪ್ಪ ಹಿರೇಮನಿ, ಗ್ರಾ.ಪಂ. ಉಪಾಧ್ಯಕ್ಷೆ ಯಲ್ಲವ್ವ ಶರಣಪ್ಪ ಹಿರೇಹಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  ಕಾರ್ಯಕ್ರಮದ ಅಂಗವಾಗಿ ವಿವಿಧ ಕಲಾವಿದರುಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಕಟಣೆ ತಿಳಿಸಿದೆ.

Friday, 26 February 2016

ಕ್ರೀಡಾ ಶಾಲೆಗೆ ಪ್ರವೇಶ : ಮಾ.01 ರಂದು ಆಯ್ಕೆ ಪ್ರಕ್ರಿಯೆ

ಕೊಪ್ಪಳ, ಫೆ.26 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ಮಾ.01 ರಂದು ಬೆಳಿಗ್ಗೆ 09 ಗಂಟೆಗೆ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
     ಈಗಾಗಲೇ ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಹಾಗೂ ವಿವಿಧ ತಾಲೂಕುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಇರುವ ವಿದ್ಯಾರ್ಥಿಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು 2005 ಜೂ.01 ರ ನಂತರ ಜನಿಸಿದವರಾಗಿರಬೇಕು ಮತ್ತು 2016 ಜೂ.01 ಕ್ಕೆ 11 ವರ್ಷ ಮೀರಿರಬಾರದು. ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2016-17 ನೇ ಸಾಲಿಗೆ 5ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು. ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡೆಗೆ ಆಯ್ಕೆ ಪ್ರಕ್ರಿಯೆ ಜರುಗಲಿದ್ದು, ಕನಿಷ್ಠ 145 ಸೆ.ಮೀ ಎತ್ತರ ಹೊಂದಿರಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : 08539-201400 ಅಥವಾ ತರಬೇತುದಾರರಾದ ಸುರೇಶ ಯಾದವ್ ಮೊ:990152733, ತಿಪ್ಪಣ್ಣ ಮಾಳಿ ಮೊ:8746933921 ಹಾಗೂ ಮಂಜುನಾಥ ಬಿ.ಇಂದರಗಿ ಮೊ:7795758059 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳದ ಸಹಾಯಕ ನಿರ್ದೇಶಕಿ ಡಾ||ಶಾರದಾ ನಿಂಬರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಕಲಾವಿದರ ಸಾಕ್ಷ್ಯಚಿತ್ರ : ಅರ್ಜಿ ಆಹ್ವಾನ

ಕೊಪ್ಪಳ ಫೆ. 26 (ಕರ್ನಾಟಕ ವಾರ್ತೆ): ಕರ್ನಾಟಕ ಜಾನಪದ ಅಕಾಡೆಮಿಯು 2015-16 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಟ್ಟ ಪಂಗಡದ ಹಿರಿಯ ಜಾನಪದ ಕಲಾವಿದರು, ಅಕಾಡೆಮಿ, ರಾಜ್ಯೋತ್ಸವ, ಜಾನಪದಶ್ರೀ ಪ್ರಶಸ್ತಿ ಪಡೆದಿರುವ ಜಾನಪದ ಕಲಾವಿದರ ಸಾಕ್ಷ್ಯಚಿತ್ರ (ಆತ್ಮ ಕಥನ) ನಿರ್ಮಾಣದ ಯೋಜನೆಯನ್ನು ಹಮ್ಮಿಕೊಂಡಿದೆ.
     ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ನಿರ್ದೇಶನ, ತಾಂತ್ರಿಕ ಪರಿಣಿತಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಂದ ತಮ್ಮ ಅನುಭವದ ಮಾಹಿತಿಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿಯನ್ನು ಸಲ್ಲಿಸಲು ಮಾ. 08 ಕೊನೆಯ ದಿನಾಂಕವಾಗಿರುತ್ತದೆ.  ಅರ್ಜಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಕರ್ನಾಟಕ ಜಾನಪದ ಅಕಾಡೆಮಿ ಕಚೇರಿಯಿಂದ ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗೆ ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-02, ದೂರವಾಣಿ ಸಂ: 080-22215509 ಕ್ಕೆ ಸಂಪರ್ಕಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 25 February 2016

ಕೊಪ್ಪಳ : ಕೇಂದ್ರ ಬರ ಅಧ್ಯಯನ ತಂಡದಿಂದ ಪರಿಶೀಲನೆ-ಬರ ತೀವ್ರತೆ ಮನವರಿಕೆ


ಕೊಪ್ಪಳ, ಫೆ. 25 (ಕರ್ನಾಟಕ ವಾರ್ತೆ): ಕೇಂದ್ರ ಇಂಧನ ಸಚಿವಾಲಯದ ಉಪ ಕಾರ್ಯದರ್ಶಿ ಕೆ.ಕೆ. ಮಿಶ್ರಾ ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಗುರುವಾರದಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಡೆಕೊಪ್ಪ, ಕಲಕೇರಿ, ವಣಗೇರಿ ಹಾಗೂ ಬರಪೀಡಿತ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತಲ್ಲದೆ, ರೈತರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡಿತು.

     ಕೇಂದ್ರ ಇಂಧನ ಸಚಿವಾಲಯದ ಉಪ ಕಾರ್ಯದರ್ಶಿ ಕೆ.ಕೆ. ಮಿಶ್ರಾ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಲಹೆಗಾರ ಡಾ. ಬ್ರಜೇಶ್ ಶ್ರೀವಾಸ್ತವ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಕೇಂದ್ರ ಹಣಕಾಸು ಸಚಿವಾಲಯದ (ವೆಚ್ಚ) ಎಸ್‍ಎಸ್‍ಓ ಅಧಿಕಾರಿ ಆರ್.ಬಿ. ಕೌಲ್  ಅವರನ್ನು ಒಳಗೊಂಡ ಕೇಂದ್ರ ಬರ ಅಧ್ಯಯನ ತಂಡ  ವಿವಿಧ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡಿತು.

      ಬರ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲು ಜಿಲ್ಲೆಗೆ ಆಗಮಿಸಿದ ಕೇಂದ್ರ ಅಧ್ಯಯನ ತಂಡ, ಮೊದಲಿಗೆ ಕುಷ್ಟಗಿ ತಾಲೂಕು ಕಲಕೇರಿ ಗ್ರಾಮದ ಬಳಿ ಸ್ಥಾಪಿಸಲಾಗಿರುವ ಮೇವು ನಿಧಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಸಂಗ್ರಹಿಸಲಾಗಿರುವ ಒಣ ಮೇವಿನ ಬಗ್ಗೆ ಹಾಗೂ ಕೆಲ ತಿಂಗಳುಗಳ ಹಿಂದೆ ಗೋಶಾಲೆ ಪ್ರಾರಂಭಿಸಿ ಮೇವು ವಿತರಣೆ ಮಾಡಿರುವ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು.  ನಂತರ ವಣಗೇರಿ ಗ್ರಾಮದ ಬಳಿಯ ಹೊಲವೊಂದಕ್ಕೆ ತೆರಳಿ ರೈತರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸುತು.  ಹಿಂಗಾರು ಮಳೆಯ ಕೊರತೆಯಿಂದ ಬೆಳೆ ಹಾನಿಯಾದ ಬಗ್ಗೆ, ಬೆಳೆಯ ಜೋಳ, ಸೂರ್ಯಕಾಂತಿ ಪೈರುಗಳನ್ನು ತೋರಿಸಿ, ಬರದ ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಮಳೆ ಕೊರತೆ ಸಂದರ್ಭದಲ್ಲಿ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಕೃಷಿ ಇಲಾಖೆ ರೈತರಿಗೆ ಮಾಹಿತಿ ನೀಡಿರುವ ಕುರಿತಂತೆಯೂ ರೈತರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
         ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಇಂಧನ ಸಚಿವಾಲಯದ ಉಪ ಕಾರ್ಯದರ್ಶಿ ಕೆ.ಕೆ. ಮಿಶ್ರಾ  ಅವರು, ಕೊಪ್ಪಳ ಜಿಲ್ಲೆಯ ಗ್ರಾಮಗಳಲ್ಲಿ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಗಮನಿಸಲಾಗಿದೆ.  ಮೇವಿನ ಕೊರತೆ, ಮಳೆಯ ಕೊರತೆಯಿಂದ ಬೆಳೆ ಹಾನಿ ಬಗ್ಗೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಮಾಹಿತಿ  ಪಡೆದುಕೊಳ್ಳಲಾಗಿದ್ದು, ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಬೆಳೆಗಳು ಹಾಳಾಗಿರುವುದು ಕಂಡುಬಂದಿದೆ.  ಜಿಲ್ಲೆಯ ಬರ ಪರಿಸ್ಥಿತಿ ಮನವರಿಕೆಯಾಗಿದ್ದು, ಸಂಗ್ರಹಿತ ವರದಿಯನ್ನು ಒಂದು ವಾರದ ಒಳಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
       ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣ್‍ಕುಮಾರ ಜಿ.ಎಲ್., ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ, ಜಂಟಿಕೃಷಿ ನಿರ್ದೇಶಕ ರಾಮದಾಸ್,  ಪಶುಸಂಗೋಪನೆ ಇಲಾಖೆ ಜಂಟಿನಿರ್ದೇಶಕ ಡಾ. ಹಲಗಪ್ಪ ಹಾಗೂ ಉಪನಿರ್ದೇಶಕ ಡಾ. ಜಯರಾಂ, ಅವರು ಕೇಂದ್ರ ಅಧ್ಯಯನ ತಂಡದೊಂದಿಗೆ ಉಪಸ್ಥಿತರಿದ್ದು, ಅಗತ್ಯ ಮಾಹಿತಿಯನ್ನು ಒದಗಿಸಿಕೊಟ್ಟರು.
     ಕೇಂದ್ರ ಬರ ಅಧ್ಯಯನ ತಂಡವು ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮಕ್ಕೆ ಭೇಟಿ ನೀಡಿತು. ಇಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಉದ್ಯೋಗಖಾತ್ರಿ ಯೋಜನೆ ಕುರಿತಂತೆ ಮಾಹಿತಿ ಪಡೆದುಕೊಂಡಿತು.  ನಂತರ ಕುಷ್ಟಗಿಯ ಸಕ್ರ್ಯೂಟ್‍ಹೌಸ್‍ನಲ್ಲಿ ಜಿಲ್ಲೆಯಲ್ಲಿ ಹಿಂಗಾರು ಮಳೆಯ ಕೊರತೆ, ಬೆಳೆ ಹಾನಿ ಹಾಗೂ ಜಿಲ್ಲೆಯ ಬರದ ತೀವ್ರತೆ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಸಮಗ್ರ ಮಾಹಿತಿಯನ್ನು ಬರ ಅಧ್ಯಯನ ತಂಡಕ್ಕೆ ಒದಗಿಸಲಾಯಿತು.

Wednesday, 24 February 2016

ವಸತಿ ನಿಲಯದ ವಿದ್ಯಾರ್ಥಿಗಳಿಗೆ ನಿರ್ಭಯ ಕೇಂದ್ರ ಕುರಿತು ಜಾಗೃತಿ


ಕೊಪ್ಪಳ ಫೆ. 24 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ದೌರ್ಜನ್ಯಕ್ಕೊಳಗಾದ ಮಹಿಳೆಯರ ಹಿತ ರಕ್ಷಣೆಗಾಗಿಯೇ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾರಂಭಿಸಿರುವ ಮಹಿಳಾ ವಿಶೇಷ ಚಿಕಿತ್ಸಾ ಘಟಕ (ನಿರ್ಭಯ ಕೇಂದ್ರ) ಕುರಿತು ಮಹಿಳಾ ವಸತಿ ನಿಲಯ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಿತು.
     ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಹಿತ ರಕ್ಷಣೆಗಾಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ (ನಿರ್ಭಯ ಕೇಂದ್ರ) ಪ್ರಾರಂಭಿಸಲಾಗಿದ್ದು, ಇದರ ಸಹಾಯವಾಣಿ ಕರೆ ಸಂಖ್ಯೆ 181 ಆಗಿರುತ್ತದೆ.  ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೊಪ್ಪಳದ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಠ ಪಂಗಡಗಳ ಮೆಟ್ರಿಕ್ ನಂತರದ ಸರಕಾರಿ ಬಾಲಕಿಯರ ವಸತಿ ನಿಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೈತ್ರಿ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯದಲ್ಲಿ ಹಮ್ಮಿಕೊಳ್ಳಲಾಯಿತು.
     ಈ ಕಾರ್ಯಕ್ರಮದಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಸಿಬ್ಬಂದಿಗಳು ಮತ್ತು ವಸತಿ ನಿಲಯದ ಸಿಬ್ಬಂದಿಗಳು ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಉದ್ದೇಶ ಮತ್ತು ದೊರೆಯುವ ಉಚಿತ ಸೇವೆಗಳ ಬಗ್ಗೆ  ಸಮಾಜ ಕಾರ್ಯಕರ್ತೆ ಹುಲಿಗೆಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು ನಂತರ ಸಮಾಲೋಚಕಿ ಶಿಲ್ಪಾ ಬಾರಕೇರ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸಮಸ್ಯೆಗಳ   ಕುರಿತು ಮಾತನಾಡಿದರು. ಕಾನೂನು ಸಲಹೆಗಾರರಾದ ಗೌರಮ್ಮ ದೇಸಾಯಿಯವರು ಕೌಟುಂಬಿಕ ದೌರ್ಜನ್ಯ, ವರದಕ್ಷಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಕಾಯ್ದೆಗಳು ಅಲ್ಲದೆ, ಪೋಕ್ಸೋ ಕಾನೂನಿನ ಕುರಿತು ಸಮಗ್ರ ವಿವರದೊಂದಿಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

ವಿಕಲಚೇತನರಿಗೆ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ, ಫೆ.23 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ಕಾರ್ಯಾಲಯದ ವತಿಯಿಂದ ಪ್ರಸಕ್ತ ಸಾಲಿನ ಶೇಕಡಾ 3% ರ ಯೋಜನೆಯ ಎಸ್.ಎಫ್.ಸಿ ಅನುದಾನದಲ್ಲಿ ವಿಕಲಚೇತನರಿಗಾಗಿ ಅಡುಗೆ ಅನಿಲ ಸಂಪರ್ಕ, ಶ್ರವಣ ಸಾಧನ ಹಾಗೂ ತ್ರಿಚಕ್ರ ಸೈಕಲ್ ಇವುಗಳನ್ನು ಒದಗಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಗಂಗಾವತಿ ನಗರ ಪ್ರದೇಶದ ನಿವಾಸಿಗಳಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಭರ್ತಿ ಮಾಡಿದ ಅರ್ಜಿಯೊಂದಿಗೆ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ ರೇಷನ್ ಕಾರ್ಡ್, ಐ.ಡಿ ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿಕಲಚೇತನದ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಮಾ.09 ರೊಳಗಾಗಿ ನಗರಸಭೆ ಕಛೇರಿ, ಗಂಗಾವತಿ ಇಲ್ಲಿಗೆ ಸಲ್ಲಿಸಬಹುದಾಗಿದೆ. ಅವಧಿ ಮೀರಿ ಬಂದಂತಹ ಅರ್ಜಿಗಳನ್ನು ಯಾವುದೇ ಹಿಂಬರಹ ನೀಡದೇ ತಿರಸ್ಕರಿಸಲಾಗುವುದು.   ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ನಗರಸಭೆ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತ ಸಿ.ಆರ್.ರಂಗಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.26 ರಂದು ದಾಳಿಂಬೆ ಬೆಳೆ ಕುರಿತು ಕಾರ್ಯಾಗಾರ

ಕೊಪ್ಪಳ, ಫೆ.23 (ಕರ್ನಾಟಕ ವಾರ್ತೆ): ತೋಟಗಾರಿಕೆ ಉಪನಿರ್ದೇಶಕರ ಕಛೇರಿ, ಜಿಲ್ಲಾ ಪಂಚಾಯತ್, ಕೊಪ್ಪಳ ಇವರ ವತಿಯಿಂದ ದಾಳಿಂಬೆ ಬೆಳೆಯ ಉತ್ತಮ ಬೇಸಾಯ ಕ್ರಮಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಫೆ.26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೃಷಿ ವಿಸ್ತರಣೆ ಶಿಕ್ಷಣ ಘಟಕದಲ್ಲಿ ಏರ್ಪಡಿಸಲಾಗಿದೆ.
     ಕಾರ್ಯಾಗಾರದಲ್ಲಿ ದಾಳಿಂಬೆ ಬೆಳೆಯ ಉತ್ತಮ ಬೇಸಾಯ ಕ್ರಮಗಳ ಕುರಿತು ಬೆಂಗಳೂರಿನ ಅಪ್ಪೆಡ ಸಂಸ್ಥೆ ಮತ್ತು ಸಿ.ಐ.ಐ ಸಂಸ್ಥೆಯವರು ಮಾಹಿತಿ ನೀಡಲಿದ್ದಾರೆ ಎಂದು ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಹಾಗೂ ತೋಟಗಾರಿಕೆ ಆದಾಯ ಉತ್ಪನ್ನ ಚಟುವಟಿಕೆಗಳ ತರಬೇತಿ

ಕೊಪ್ಪಳ ಫೆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸ್ತ್ರೀ ಶಕ್ತಿ ಮಹಿಳಾ ಸದಸ್ಯರಿಗೆ ಕೃಷಿ ಹಾಗೂ ತೋಟಗಾರಿಕಾ ಆಧಾರಿತ ಸಣ್ಣ ಆದಾಯ ಉತ್ಪನ್ನ ಚಟುವಟಿಕೆಗಳ ತರಬೇತಿಯನ್ನು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
      ತರಬೇತಿಯಲ್ಲಿ ವಿಷಯ ತಜ್ಞೆ ಕವಿತಾ ಉಳ್ಳಿಕಾಶಿಯವರು ಕೃಷಿ ಮತ್ತು ತೋಟಗಾರಿಕೆ ಬೆಳೆಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಬಗ್ಗೆ ಮಾಹಿತಿ ನೀಡಿ, ಟೊಮ್ಯಾಟೊ ಮತ್ತು ಮೆಣಸಿನಕಾಯಿ ಉತ್ಪನ್ನಗಳ ಮೌಲ್ಯವರ್ಧನೆಯ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ಮತ್ತು ಉದ್ಯಮಶೀಲತೆಯ ಬಗ್ಗೆÉ ವಿಷಯ ತಜ್ಞ ಡಾ. ಗಿರೀಶ್ ಮರಡ್ಡಿ ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 60 ಸ್ತ್ರೀ ಶಕ್ತಿ ಮಹಿಳಾ ಸದಸ್ಯರು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು.

ಭಾಗ್ಯನಗರ ಪ.ಪಂ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಪರಿಷ್ಕರಣೆ : ಆಕ್ಷೇಪಣೆ ಆಹ್ವಾನ

ಕೊಪ್ಪಳ ಫೆ. 24 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಪರಿಷ್ಕರಣೆ ಕಾರ್ಯದ ಅಂಗವಾಗಿ ಇತ್ತೀಚೆಗೆ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲಾಗಿರುವ ಭಾಗ್ಯನಗರದ ವ್ಯಾಪ್ತಿಯ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಪರಿಷ್ಕರಣೆ ಮಾಡಲಾಗುತ್ತಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರವನ್ನು 2016-17 ನೇ ಸಾಲಿಗೆ ಪರಿಷ್ಕರಿಸಲು ಕೇಂದ್ರೀಯ ಮೌಲ್ಯಮಾಪನ ಸಮಿತಿಯ ಉಪ ಸಮಿತಿಯು ಈಗಾಗಲೆ ಕಳೆದ 2010 ಅಕ್ಟೋಬರ್ 01 ರಂದು ಕೊಪ್ಪಳ ತಹಸಿಲ್ದಾರರ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಚರ್ಚಿಸಿ, ಪ್ರಸ್ತುತ ಚಾಲ್ತಿಯಲ್ಲಿರುವ ದರಗಳನ್ನು ಆಧಾರವಾಗಿಟ್ಟುಕೊಂಡು, ಪ್ರಸಕ್ತ ವಾಸ್ತವಿಕ ದರಗಳನ್ನು ಪರಿಶೀಲಿಸಿ, ಅವಶ್ಯವಿರುವ ಪ್ರದೇಶಗಳಿಗೆ ಮಾರ್ಗಸೂಚಿ ದರಪಟ್ಟಿ ಪರಿಷ್ಕರಿಸಲು ನಿರ್ಧಾರ ಕೈಗೊಳ್ಳಲಾಗಿತ್ತು.  ಸಮಿತಿಯು ಪುನಃ ಕಳೆದ ಜ. 27 ರಂದು ಸಭೆ ನಡೆಸಿ, ಚರ್ಚಿಸಿದ್ದು, ಭಾಗ್ಯನಗರ ಗ್ರಾಮ ಪಂಚಾಯತಿಯು, ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿರುವುದರಿಂದ, ಈ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮತ್ತು ಕಟ್ಟಡ ದರಗಳನ್ನು ಹೆಚ್ಚಿಸಲಾಗುತ್ತಿದೆ.  ಈ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಲಿಖಿತ ರೂಪದಲ್ಲಿ 15 ದಿನಗಳ ಒಳಗಾಗಿ ಸದಸ್ಯ ಕಾರ್ಯದರ್ಶಿ, ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯನಿರ್ಧಾರಣಾ ಉಪಸಮಿತಿ, ಹಾಗೂ ಉಪನೋಂದಣಾಧಿಕಾರಿಗಳು, ಕೊಪ್ಪಳ ಇವರಿಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಗಂಗಾವತಿ : ವಸತಿ ರಹಿತ ನಾಗರಿಕರ ಕ್ಷಿಪ್ರ ಸಮೀಕ್ಷೆ

ಕೊಪ್ಪಳ ಫೆ. 24 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ವಸತಿ ರಹಿತ ನಾಗರಿಕರನ್ನು ಗುರುತಿಸಿ, ಅಂತಹವರಿಗೆ ಪುನರ್ವಸತಿ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯಲ್ಲಿ ಫೆ. 26 ರವರೆಗೆ ವಸತಿ ರಹಿತ ನಾಗರಿಕರ ಕ್ಷಿಪ್ರ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತ ರಂಗಸ್ವಾಮಿ ಅವರು ತಿಳಿಸಿದ್ದಾರೆ.
     ನಗರದಲ್ಲಿ ರಾತ್ರಿ ವಸತಿ ರಹಿತರನ್ನು ಕ್ಷಿಪ್ರ ಸಮೀಕ್ಷೆಯ ಮೂಲಕ ಗುರುತಿಸಿ, ಅಂತಹವರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳಳುವಂತೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.  ಅಲ್ಲದೆ ಈ ರೀತಿ ಗುರುತಿಸಿದ ನಾಗರಿಕರ ಪೈಕಿ ಮಹಿಳೆಯರು, ಪುರುಷರು, ಅಂಗವಿಕಲರು, ಮಾನಸಿಕ ಅಸ್ವಸ್ಥ್ಯರಿಗೆ ಪ್ರತ್ಯೇಕವಾದ ಕೇಂದ್ರವನ್ನು ಸ್ಥಾಪಿಸಿ, ಮೂಲಭೂತ ಸೌಕರ್ಯದೊಂದಿಗೆ ನಿಯಮಾನುಸಾರ ವಸತಿ ಕಲ್ಪಿಸಿ, ಪುನರ್ವಸತಿ ಕೈಗೊಳ್ಳಲು ಸಹ ಸೂಚನೆ ನೀಡಲಾಗಿದೆ.  ಇಂತಹ ತಂಗುದಾಣಗಳಲ್ಲಿ ವಾಸಿಸುವ ನಾಗರಿಕರಿಗೆ ವಿವಿಧ ಇಲಾಖೆಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವನ್ನು ಒದಗಿಸಿ, ಸಮಾಜದ ಮುಖ್ಯ ವಾಹಿನಿಗೆ ತರುವುದು ಇದರ ಉದ್ದೇಶವಾಗಿದೆ.  ಇದಕ್ಕೆ ಸಂಬಂಧಿಸಿದಂತೆ ವಸತಿ ರಹಿತ ನಾಗರೀಕರನ್ನು ಗುರುತಿಸಲು, ಫೆ. 24 ರಿಂದ ಫೆ. 26 ರವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ 10 ಗಂಟೆಯಿಂದ  ಸಂಜೆ 04 ಗಂಟೆಯವರೆಗೆ ಮತ್ತು ರಾತ್ರಿ 08 ಗಂಟೆಯಿಂದ ತಡರಾತ್ರಿಯವರೆಗೆ ನಗರಸಭೆಯಿಂದ ಗಂಗಾವತಿ ನಗರ ವಾಪ್ತಿಯಲ್ಲಿ ಜಂಟಿ ಕ್ಷಿಪ್ರ ಸಮೀಕ್ಷೆ ಆಯೋಜಿಸಲಾಗಿದೆ.  ಗಂಗಾವತಿ ನಗರ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಆಸ್ಪತ್ರೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಕಂದಾಯ ಅಧಿಕಾರಿಗಳು, ನೈರ್ಮಲ್ಯ ನಿರೀಕ್ಷಕರು, ತಹಸಿಲ್ದಾರರ ಕಚೇರಿ ಪ್ರತಿನಿಧಿಗಳು, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ನಗರಸಭೆ, ಸರ್ಕಾರೇತರ ಸಂಘ/ಸಂಸ್ಥೆಗಳು, ವಸತಿ ರಹಿತ ನಾಗರೀಕರು, ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ನಗರದಲ್ಲಿ ಜಂಟಿ ಸಮೀಕ್ಷೆ ಕೈಗೊಂಡು ವಸತಿ ರಹಿತರಿಗೆ ಆಶ್ರಯ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾನಪದ ಕಲಾವಿದರ ಮಾಸಾಶನ ಸಂದರ್ಶನ ಮುಂದೂಡಿಕೆ

ಕೊಪ್ಪಳ ಫೆ. 24 (ಕರ್ನಾಟಕ ವಾರ್ತೆ): ಕರ್ನಾಟಕ ಜಾನಪದ ಅಕಾಡೆಮಿಯಿಂದ ಕಲಬುರಗಿ ವಿಭಾಗದ ಕಲಾವಿದರ ಮಾಸಾಶನ ಸಂಬಂಧ ರಾಯಚೂರಿನಲ್ಲಿ ಮಾ. 03 ರಂದು ನಡೆಸಲು ಉದ್ದೇಶಿಸಲಾಗಿದ್ದ ಸಂದರ್ಶನವನ್ನು ಮುಂದೂಡಲಾಗಿದೆ.
     ಕರ್ನಾಟಕ ಜಾನಪದ ಅಕಾಡೆಮಿಯಿಂದ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ರಂಗಮಂದಿರ ಹಿಂಭಾಗ, ಕನ್ನಡ ಭವನ, ಸ್ಟೇಷನ್ ರಸ್ತೆ, ರಾಯಚೂರು ಇಲ್ಲಿ ಕಲಬುರಗಿ ವಿಭಾಗದ ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಯ ಜಾನಪದ ಕಲಾವಿದರ ಮಾಸಾಶನ ಸಂದರ್ಶನ ಆಯೋಜಿಸಲಾಗಿತ್ತು.  ಅನಿವಾರ್ಯ ಕಾರಣಗಳಿಂದ ಮಾಸಾಶನ ಸಂದರ್ಶನ ದಿನಾಂಕವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ಸಂದರ್ಶನ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಹೆಚ್. ಶಿವರುದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 22 February 2016

ಪಲ್ಸ್ ಪೋಲಿಯೋ: ಮೊದಲ ದಿನ ಶೇ. 89. 08 ಸಾಧನೆ

ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಾದ್ಯಂತ ಫೆ. 21 ರಿಂದ ಕೈಗೊಳ್ಳಲಾಗಿರುವ ಎರಡನೆ ಹಂತದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮೊದಲ ದಿನ 1,73,812 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಶೇ. 89. 08 ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ತಿಳಿಸಿದ್ದಾರೆ.
     ಫೆ. 21 ರಿಂದ 24 ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಎರಡನೆ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ 1,95,121 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.  ಈಗಾಗಲೆ ಫೆ. 21 ರಂದು ಮೊದಲ ದಿನವೇ ನಗರ ಪ್ರದೇಶದ 25161 ಹಾಗೂ ಗ್ರಾಮೀಣ ಪ್ರದೇಶದ 148651 ಸೇರಿದಂತೆ ಒಟ್ಟು 1,73,812 ಮಕ್ಕಳಿಗೆ ಲಸಿಕಾ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವುದರ ಮೂಲಕ ನಗರ ಪ್ರದೇಶ- ಶೇ. 83. 22 ಹಾಗೂ ಗ್ರಾಮೀಣ ಪ್ರದೇಶ- ಶೇ. 90. 15, ಒಟ್ಟಾರೆ ಶೇ. 89. 08 ರಷ್ಟು ಸಾಧನೆ ಮಾಡಲಾಗಿದೆ.  
     ಫೆ. 22 ರಿಂದ 24 ರವರೆಗೆ ಮನೆ ಮನೆಗಳಿಗೆ ಭೇಟಿ ನೀಡಿ ಉಳಿಕೆ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು. ಬಸ್ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ಅಲ್ಲದೆ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಬೂತ್‍ಗಳನ್ನು ಸ್ಥಾಪಿಸಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ, ಮತ್ತೊಮ್ಮೆ ಫೆ. 21 ರಿಂದ 24 ರವರೆಗೆ ಜರುಗುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಬೇಕು. ಪಾಲಕರು ತಮ್ಮ 05 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜನಪದರ ಕಲೆ ಅನಾವರಣಗೊಳಿಸಿದ ಜನಪರ ಉತ್ಸವ


ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಜನಪದರಲ್ಲಿನ ಸಾಂಸ್ಕøತಿಕ ಕಲೆಯ ಶ್ರೀಮಂತಿಕೆ ಭಾನುವಾರದಂದು ಸಂಜೆ ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಜನಪರ ಉತ್ಸವದಲ್ಲಿ ಅನಾವರಣಗೊಂಡಿತು.

     ನಗರದ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ವಿಶೇಷ ಘಟಕ ಯೋಜನೆಯಡಿ ಹಮ್ಮಿಕೊಂಡಿದ್ದ ಜನಪರ ಉತ್ಸವ ನೋಡುಗರನ್ನು ರಂಜಿಸಿತಲ್ಲದೆ, ಕೊಪ್ಪಳ ಜಿಲ್ಲೆಯ ಜನಪದರ ಕಲೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು.  ಯಲಬುರ್ಗಾ ತಾಲೂಕು ಬಿನ್ನಾಳ ಗ್ರಾಮದ ಯಮನೂರಪ್ಪ ಭಜಂತ್ರಿ ಮತ್ತು ತಂಡ ನಡೆಸಿಕೊಟ್ಟ ಹಲಗೆ ವಾದನ, ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರಾರಂಭಕ್ಕೆ ಭರ್ಜರಿ ಪ್ರಾರಂಭವನ್ನು ನೀಡಿತು.  ಹಲಗೆಯ ವಾದನಕ್ಕೆ ಪ್ರೇಕ್ಷಕರು ಕುಳಿತಲ್ಲಿಯೇ ತಲೆದೂಗಿದರು.  ಇದಕ್ಕೂ ಮುನ್ನ ಜರುಗಿದ ಜನಪರ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು, ವಿಶೇಷ ಘಟಕ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಅನುಷ್ಠಾನಗೊಂಡಿರುವ ‘ಜನಪರ ಉತ್ಸವ’ ಸಹಕಾರಿಯಾಗಿದೆ.  ಕೊಪ್ಪಳ ಜಿಲ್ಲೆ ಸಾಂಸ್ಕøತಿಕವಾಗಿ ಬಲಿಷ್ಠವಾಗಿದ್ದು, ಅದರಲ್ಲೂ ಜಾನಪದ ಕಲೆಗಳಿಗೆ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ.  ಹಿರಿಯ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪ್ರಕಾರಗಳ ಕಲೆಯಹಲ್ಲಿ ಸಾಧನೆಗೈದು, ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಹಾಗೂ ವಿವಿಧ ಅಕಾಡೆಮಿಗಳ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.


     ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಆಕಳವಾಡಿಯವರು ಮಾತನಾಡಿ, ರಾಜ್ಯ ಸರ್ಕಾರ ವಿವಿಧ ಕಲಾ ಪ್ರಕಾರಗಳ ಕಲೆಗಳ ಪ್ರದರ್ಶನಕ್ಕೆ ವೇದಿಕೆಗಳನ್ನು ರಚಿಸಿ, ಅವಕಾಶ ಮಾಡಿರುವುದು ಹಾಗೂ ವಿವಿಧ ಯೋಜನೆಗಳ ಮೂಲಕ ಆರ್ಥಿಕ ಸಹಾಯ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
     ಪ್ರಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಯಲಬುರ್ಗಾದ ಮಾರೆಪ್ಪ ಮಾರೆಪ್ಪ ದಾಸರ್ ಕಾರ್ಯಕ್ರಮ ಉದ್ಘಾಟಿಸಿ, ತತ್ವಪದಗಳನ್ನು ಹಾಡಿ ರಂಜಿಸಿದರು.  ಕಲಾವಿದರುಗಳಾದ ಹನುಮಂತಕುಮಾರ ಮುಧೋಳ, ಎಸ್.ಎಸ್.ಹಿರೇಮಠ, ಶರಣಪ್ಪ ವಡಿಗೇರಿ, ಶಂಕರ ಬಿನ್ನಾಳ, ಪಾರವ್ವ ಲಮಾಣಿ, ಯಮನೂರಪ್ಪ ಭಜಂತ್ರಿ, ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಮತ್ತಿತರರು ಉಪಸ್ಥಿತರಿದ್ದರು.
     ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಹಂಚಿನಾಳದ ದೇವಪ್ಪ ಭಜಂತ್ರಿ ತಂಡದಿಂದ ಕಣಿ ಹಲಗೆ ವಾದನ, ಕನಕಗಿರಿಯ ಬಸವರಾಜ ದಾಲ್‍ಪಟ್ ತಂಡದಿಂದ ಮೋಜಿನ ಗೊಂಬೆಗಳು ಕಾರ್ಯಕ್ರಮಗಳು ಆಕರ್ಷಕವಾಗಿದ್ದವು.    ಕುದರಿಮೋತಿಯ ಹನುಮಂತರಾವ್ ಮುಧೋಳ್‍ರಿಂದ ಕೊಳಲು ವಾದನಕ್ಕೆ ಪ್ರೇಕ್ಷಕರು ತನ್ಮಯರಾದರು. ವಿರುಪಾಕ್ಷಪ್ಪ ಅವರಿಂದ ಸುಡುಗಾಡು ಸಿದ್ದರ ಕೈಚಳಕ, ಪ್ರೇಕ್ಷಕರನ್ನು ಚಕಿತಗೊಳಿಸಿದವು.  ಇಟಗಿಯ ಪಾರವ್ವ ಲಚ್ಚಪ್ಪ ಲಮಾಣಿ ತಂಡದಿಂದ ಲಂಬಾಣಿ ನೃತ್ಯ, ಮರಿಯಪ್ಪ ಚಾಮಲಾಪುರ ಅವರಿಂದ ಜಾನಪದ ಗೀತೆಗಳು, ಶಂಕರ ಬಿನ್ನಾಳ ರಿಂದ ಹಾರ್ಮೋನಿಯಂ ಸೋಲೋ, ಭಾಗ್ಯನಗರದ ಪಾಂಡುರಂಗ ಮ್ಯಾಗಳಮನಿ ರಿಂದ ನೃತ್ಯ ಪ್ರದರ್ಶನ, ಕೊಪ್ಪಳದ ಬಸವರಾಜ ಮಾಲಗಿತ್ತಿ ತಂಡದಿಂದ ಸಮೂಹ ನೃತ್ಯ, ಕವಲೂರಿನ ದೊಡ್ಡನಿಂಗಪ್ಪ ಸುಂಕಣ್ಣನವರ್‍ರಿಂದ ರಂಗಗೀತೆಗಳು, ಬೆಣಕಲ್‍ನ ನೀಲವ್ವ ಮತ್ತು ತಂಡದಿಂದ ಸಂಪ್ರದಾಯ ಪದಗಳು, ಮಾರುತಿ ಬಿನ್ನಾಳರಿಂದ ಸುಗಮ ಸಂಗೀತ, ಬಿಜಕಲ್‍ನ ಅಕ್ಕಮಹಾದೇವಿ ಚನ್ನದಾಸರ ಅವರಿಂದ ಜಾನಪದ ಸಂಗೀತ ಹಾಗೂ ಪಟ್ಟಲಚಿಂತಿಯ ಯಮನೂರಪ್ಪ ಭಜಂತ್ರಿ ಅವರಿಂದ ವಚನ ಸಂಗೀತ ಕಾರ್ಯಕ್ರಮಗಳು ಜರುಗಿದವು.

ಫೆ.24 ರಿಂದ ಎರಡು ದಿನಗಳ ರಸ್ತೆ ಸಂಚಾರ ಸಮೀಕ್ಷೆ

ಕೊಪ್ಪಳ, ಫೆ.22 (ಕರ್ನಾಟಕ ವಾರ್ತೆ): ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೊಪ್ಪಳ ಇವರ ವತಿಯಿಂದ 2016ನೇ ಸಾಲಿನಲ್ಲಿ ಫೆ.24 ರ ಬೆಳಿಗ್ಗೆ 06 ಗಂಟೆಯಿಂದ ಫೆ.26 ರ ಬೆಳಿಗ್ಗೆ 06 ಗಂಟೆಯವರೆಗೆ ಸತತವಾಗಿ ಎರಡು ದಿನಗಳ ಕಾಲ ರಸ್ತೆ ಸಂಚಾರದ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. 
     ಕೊಪ್ಪಳ ಜಿಲ್ಲೆಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಪ್ರತಿ ವರ್ಷಕ್ಕೊಮ್ಮೆ ಎರಡು ದಿನಗಳವರೆಗೆ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯರಸ್ತೆಗಳ ಮೇಲೆ ವಾಹನ ಸಂಚಾರ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ ರಸ್ತೆಗಳ ಅಗಲಳತೆ ನಿರ್ಧರಿಸಲು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ. ಪ್ರಸ್ತುತ ವರ್ಷದಲ್ಲಿ ಫೆ.24 ರ ಬೆಳಿಗ್ಗೆ 06 ಗಂಟೆಯಿಂದ ಫೆ.26 ರ ಬೆಳಿಗ್ಗೆ 06 ಗಂಟೆಯವರೆಗೆ ಒಟ್ಟು ಎರಡು ದಿನಗಳ 48 ಗಂಟೆಗಳ ಕಾಲ ರಸ್ತೆ ಸಂಚಾರದ ಸಮೀಕ್ಷೆ ಕಾರ್ಯವನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಸಮೀಕ್ಷೆ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ. ಸಮೀಕ್ಷಾ ಕೇಂದ್ರಗಳಿರುವಲ್ಲಿ ‘ವಾಹನಗಳ ರಸ್ತೆ ಸಂಚಾರ ಸಮೀಕ್ಷೆ ಕೇಂದ್ರವಿದೆ, ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ’ ಎಂದು ಸೂಚನಾ ಫಲಕಗಳನ್ನು ತೂಗು ಬಿಡಲಾಗಿರುತ್ತದೆ. ಅಂತಹ ಸ್ಥಳಗಳಲ್ಲಿ ಎಲ್ಲಾ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಿಸುವ ಮೂಲಕ ಸಮೀಕ್ಷೆ ಕಾರ್ಯಕ್ಕೆ ಸಹಕರಿಸುವಂತೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೊಪ್ಪಳದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.23 ರಿಂದ ಪಂಚದಿನದ ಸಾಲ ವಸೂಲು ಆಂದೋಲನ

ಕೊಪ್ಪಳ, ಫೆ.22 (ಕರ್ನಾಟಕ ವಾರ್ತೆ): ಕೊಪ್ಪಳದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಫೆ.23 ರಿಂದ 27 ರವರೆಗೆ ಪಂಚದಿನದ ಸಾಲ ವಸೂಲು ಆಂದೋಲನ ಹಮ್ಮಿಕೊಂಡಿದೆ.
     ನಿಗಮದ ವಿವಿಧ ಯೊಜನೆಗಳಡಿ ಸಾಲ ಪಡೆದಿರುವ ಫಲಾನುಭವಿಗಳು ತಾವು ಪಡೆದ ಸಾಲವನ್ನು ಕಂತುಗಳನ್ವಯ, ಮರುಪಾವತಿ ಮಾಡದೇ ಇರುವುದರಿಂದ ನಿಗಮದ ಮರುಪಾವತಿ ಪ್ರಗತಿ ತೀವ್ರ ಕುಂಠಿತವಾಗಿದೆ. ಮರುಪಾವತಿಯಲ್ಲಿ ಪ್ರಗತಿ ಸಾಧಿಸುವ ಸಲುವಾಗಿ ನಿಗಮದ ವತಿಯಿಂದ ಫೆ.23 ರಿಂದ 27 ರವರೆಗೆ ಪಂಚದಿನದ ಸಾಲ ವಸೂಲು ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಿಗಮದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆದ ಫಲಾನುಭವಿಗಳು ಆಂದೋಲನದ ಅವಧಿಯಲ್ಲಿ ಕಂತುಗಳ ಪ್ರಕಾರ ಸಾಲ ಮರುಪಾವತಿ ಮಾಡಿ, ನಿಗಮವು ಇತರೆ ಬಡವರಿಗೆ ಸಾಲ ನೀಡುವಂತಾಗಲು ಸಹಕರಿಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ). ಕೊಪ್ಪಳದ ಜಿಲ್ಲಾ ವ್ಯವಸ್ಥಾಪಕ ಕೆ.ಎಂ.ಗುಂಡಪ್ಪ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. 

ಮತ ಎಣಿಕಾ ಕೇಂದ್ರದಲ್ಲಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿಷೇಧ- ಎಂ. ಕನಗವಲ್ಲಿ ಸೂಚನೆ

ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕಾ ಕಾರ್ಯ ಫೆ. 23 ರಂದು ಬೆಳಿಗ್ಗೆ 08 ಗಂಟೆಗೆ ಆಯಾ ತಾಲೂಕು ಕೇಂದ್ರದಲ್ಲಿ ಪ್ರಾರಂಭವಾಗಲಿದ್ದು, ಮತ ಎಣಿಕಾ ಕೇಂದ್ರಕ್ಕೆ ಅನಗತ್ಯ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆಯಾ ತಾಲೂಕು ಚುನಾವಣಾದಿಕಾರಿಗಳಾದ ತಹಸಿಲ್ದಾರರಿಗೆ ಸೂಚನೆ ನೀಡಿದ್ದಾರೆ.
     ಮತಗಳ ಎಣಿಕಾ ಕಾರ್ಯವನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತ ರೀತಿಯಲ್ಲಿ ಜರುಗಿಸಬೇಕಾಗಿದ್ದು, ಮತ ಎಣಿಕಾ ಕೇಂದ್ರಕ್ಕೆ ಅನಾವಶ್ಯಕ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿರುತ್ತದೆ.  ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ 03 ಟೇಬಲ್‍ಗಳಿರುವುದರಿಂದ ಆ ಕ್ಷೇತ್ರದ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್ ಮತ್ತು 03 ಜನ ಎಣಿಕಾ ಏಜೆಂಟ್‍ಗಳು ಒಟ್ಟಾರೆ ಒಂದು ಕ್ಷೇತ್ರಕ್ಕೆ 1+3 ಜನ ಮಾತ್ರ ಉಪಸ್ಥಿತರಿರಬೇಕು.  ತಾಲೂಕು ಪಂಚಾಯತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ 01 ಟೇಬಲ್ ಮಾತ್ರ ಇರುವುದರಿಂದ, ಆ ಕ್ಷೇತ್ರದ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್ ಅಥವಾ ಪೊಲಿಂಗ್ ಏಜೆಂಟ್ ಮಾತ್ರ ಅಂದರೆ ಒಬ್ಬರು ಮಾತ್ರ ಉಪಸ್ಥಿತರಿರಬೇಕು. 
     ಎಣಿಕಾ ಕೊಠಡಿಗಳಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಮತ್ತು ಅನೇಕ ಜನರ ಉಪಸ್ಥಿತಿಯು ಅನಾವಶ್ಯಕ ಗೊಂದಲಕ್ಕೆ ಮತ್ತು ಮತ ಎಣಿಕಾ ಕಾರ್ಯಕ್ಕೆ ಅಡ್ಡಿಯಾಗಲಿದ್ದು, ಮೇಲೆ ತಿಳಿಸಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಗೊಂದಲ ರಹಿತ ಮತ ಎಣಿಕಾ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಆಯಾ ತಹಸಿಲ್ದಾರರಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ : ಫೆ. 23 ರಂದು ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜು

ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕೆ ಕಾರ್ಯ ಫೆ. 23 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಮತದಾನ : ಫೆ. 20 ರಂದು ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪುರುಷ-394622, ಮಹಿಳೆ- 389518, ಒಟ್ಟು- 784140 ಮತದಾರರ ಪೈಕಿ, ಪುರುಷ- 282210, ಮಹಿಳೆ- 272433, ಒಟ್ಟು- 554643 ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ. 70. 73 ರಷ್ಟು ಮತದಾನವಾಗಿದೆ.  ಕಳೆದ 2010 ರಲ್ಲಿ ಜರುಗಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಶೇ. 66. 28 ರಷ್ಟು ಮತದಾನವಾಗಿತ್ತು.  ಈ ಬಾರಿ ಶೇ. 70. 73 ರಷ್ಟು ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ. 4. 45 ರಷ್ಟು ಮತದಾನ ಹೆಚ್ಚಳವಾಗಿದೆ.  ಕರ್ನಾಟಕ ರಾಜ್ಯ ಪಂಚಾಯತಿ ರಾಜ್ ಕಾಯ್ದೆಗೆ ಮತದಾನ ಕಡ್ಡಾಯದ ತಿದ್ದುಪಡಿ ಹಾಗೂ ಮತದಾನದ ಮಹತ್ವದ ಬಗ್ಗೆ ಮತದಾರ ಜಾಗೃತರಾಗಿರುವ ಸಾಧ್ಯತೆ ಕಾರಣವಾಗಿರಬಹುದಾಗಿದೆ.
     ಕೊಪ್ಪಳ ತಾಲೂಕಿನಲ್ಲಿ ಪುರುಷ- 104380, ಮಹಿಳೆ-102311, ಒಟ್ಟು- 206691 ಮತದಾರರ ಪೈಕಿ ಪುರುಷ- 78842, ಮಹಿಳೆ- 74413, ಒಟ್ಟು- 153255, ಶೇ. 74.15 ರಷ್ಟು ಅತಿ ಹೆಚ್ಚು ಮತದಾನವಾಗಿದೆ.  ಗಂಗಾವತಿ ತಾಲೂಕಿನಲ್ಲಿ ಪುರುಷ- 108944, ಮಹಿಳೆ-111205, ಒಟ್ಟು- 220149 ಮತದಾರರ ಪೈಕಿ ಪುರುಷ- 79339, ಮಹಿಳೆ- 78536, ಒಟ್ಟು- 157875, ಶೇ. 71.71 ರಷ್ಟು ಮತದಾನವಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ಪುರುಷ- 87758, ಮಹಿಳೆ-84889, ಒಟ್ಟು- 172647 ಮತದಾರರ ಪೈಕಿ ಪುರುಷ- 61527, ಮಹಿಳೆ- 58843, ಒಟ್ಟು- 120370, ಶೇ. 69.72 ರಷ್ಟು ಮತದಾನವಾಗಿದೆ.  ಕುಷ್ಟಗಿ ತಾಲೂಕಿನಲ್ಲಿ ಪುರುಷ- 93540, ಮಹಿಳೆ-91113, ಒಟ್ಟು- 184653 ಮತದಾರರ ಪೈಕಿ ಪುರುಷ- 62502, ಮಹಿಳೆ- 60641, ಒಟ್ಟು- 123143, ಶೇ. 66.69 ರಷ್ಟು ಅತಿ ಕಡಿಮೆ ಮತದಾನವಾಗಿದೆ.
ಮತ ಎಣಿಕಾ ಕೇಂದ್ರಗಳ ವಿವರ : ಕುಷ್ಟಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳದಲ್ಲಿ ಎಸ್.ಎಫ್.ಎಸ್ ಪ್ರೌಢಶಾಲೆ, ಗಂಗಾವತಿಯಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಯಲಬುರ್ಗಾದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಳ ಎಣಿಕೆ ಕಾರ್ಯ ಫೆ. 23 ರಂದು ಬೆಳಿಗ್ಗೆ 08 ಗಂಟೆಯಿಂದ ಪ್ರಾರಂಭವಾಗಲಿದೆ.   
ಜಿಲ್ಲಾ ಪಂಚಾಯತಿ ಮತ ಎಣಿಕೆ : ಜಿಲ್ಲಾ ಪಂಚಾಯತಿಯ ಒಟ್ಟು 29 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 196 ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.
     ಕುಷ್ಟಗಿ ತಾಲೂಕಿನಲ್ಲಿ ಜಿಲ್ಲಾ ಪಂಚಾಯತಿಯ 07 ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.  ಇಲ್ಲಿ 02 ಕೊಠಡಿಗಳಲ್ಲಿ ಜಿ.ಪಂ. 07 ಕ್ಷೇತ್ರಗಳ ಮತ ಎಣಿಕೆ ಜರುಗಲಿದ್ದು, 21 ಟೇಬಲ್‍ಗಳನ್ನು ಇರಿಸಲಾಗಿದೆ.  ಎಣಿಕೆ ಮೇಲ್ವಿಚಾರಕರು-24, ಎಣಿಕೆ ಸಹಾಯಕರು-24 ಸೇರಿದಂತೆ 48 ಸಿಬ್ಬಂದಿ ಕಾರ್ಯ ನಿರ್ವಹಿಸುವರು.  ಅದೇ ರೀತಿ ಕೊಪ್ಪಳ ತಾಲೂಕಿನಲ್ಲಿ ಜಿಲ್ಲಾ ಪಂಚಾಯತಿಯ 08 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಎಸ್.ಎಫ್.ಎಸ್ ಪ್ರೌಢಶಾಲೆಯ 02 ಕೊಠಡಿಗಳಲ್ಲಿ ಜರುಗಲಿದ್ದು, 24 ಟೇಬಲ್ ವ್ಯವಸ್ಥೆ ಮಾಡಲಾಗಿದೆ.  ಎಣಿಕೆ ಮೇಲ್ವಿಚಾರಕರು-27, ಎಣಿಕೆ ಸಹಾಯಕರು-27 ಸೇರಿದಂತೆ 54 ಸಿಬ್ಬಂದಿ ಕಾರ್ಯ ನಿರ್ವಹಿಸುವರು.  ಗಂಗಾವತಿ ತಾಲೂಕಿನಲ್ಲಿ ಜಿ.ಪಂ.ನ 08 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, 24 ಟೇಬಲ್ ವ್ಯವಸ್ಥೆ ಮಾಡಲಾಗಿದೆ.  ಎಣಿಕೆ ಮೇಲ್ವಿಚಾರಕರು-27, ಎಣಿಕೆ ಸಹಾಯಕರು-27 ಸೇರಿದಂತೆ 54 ಸಿಬ್ಬಂದಿ ಕಾರ್ಯ ನಿರ್ವಹಿಸುವರು.  ಯಲಬುರ್ಗಾ ತಾಲೂಕಿನಲ್ಲಿ ಜಿಲ್ಲಾ ಪಂಚಾಯತಿಯ 06 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಲಿದ್ದು, 18 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ.  ಎಣಿಕೆ ಮೇಲ್ವಿಚಾರಕರು-20, ಎಣಿಕೆ ಸಹಾಯಕರು-20 ಸೇರಿದಂತೆ 40 ಸಿಬ್ಬಂದಿ ಕಾರ್ಯ ನಿರ್ವಹಿಸುವರು. 
ತಾಲೂಕಾ ಪಂಚಾಯತಿ ಮತ ಎಣಿಕೆ : ಜಿಲ್ಲೆಯ ನಾಲ್ಕು ತಾಲೂಕಾ ಪಂಚಾಯತಿಯ ಒಟ್ಟು 109 ಕ್ಷೇತ್ರಗಳ ಮತ ಎಣಿಕೆಯು 16 ಕೊಠಡಿಗಳ 109 ಟೇಬಲ್‍ಗಳಲ್ಲಿ ನಡೆಯಲಿದ್ದು, 121 ಜನ ಎಣಿಕೆ ಮೇಲ್ವಿಚಾರಕರು ಹಾಗೂ 121 ಎಣಿಕೆ ಸಹಾಯಕರು ಸೇರಿದಂತೆ ಒಟ್ಟು 242 ಸಿಬ್ಬಂದಿ ಪಾಲ್ಗೊಳ್ಳುವರು.
       ಕುಷ್ಟಗಿ ತಾಲೂಕಿನ 25 ಕ್ಷೇತ್ರಗಳ ಮತ ಎಣಿಕೆಯು 04 ಕೊಠಡಿಗಳಲ್ಲಿ 25 ಟೇಬಲ್‍ಗಳಲ್ಲಿ ನಡೆಯಲಿದೆ. ತಲಾ 28 ಜನ ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು 56 ಸಿಬ್ಬಂದಿ ಪಾಲ್ಗೊಳ್ಳುವರು.  ಕೊಪ್ಪಳ ತಾಲೂಕಿನ 29 ಕ್ಷೇತ್ರಗಳ ಮತ ಎಣಿಕೆಯು 04 ಕೊಠಡಿಗಳಲ್ಲಿ 29 ಟೇಬಲ್‍ಗಳಲ್ಲಿ ನಡೆಯಲಿದೆ. ತಲಾ 32 ಜನ ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು 64 ಸಿಬ್ಬಂದಿ ಭಾಗವಹಿಸುವರು.   ಗಂಗಾವತಿ ತಾಲೂಕಿನ 31 ಕ್ಷೇತ್ರಗಳ ಮತ ಎಣಿಕೆಯು 04 ಕೊಠಡಿಗಳಲ್ಲಿ 31 ಟೇಬಲ್‍ಗಳಲ್ಲಿ ನಡೆಯಲಿದೆ. ತಲಾ 34 ಜನ ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು 68 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಯಲಬುರ್ಗಾ ತಾಲೂಕಿನ 24 ಕ್ಷೇತ್ರಗಳ ಮತ ಎಣಿಕೆಯು 04 ಕೊಠಡಿಗಳಲ್ಲಿ 24 ಟೇಬಲ್‍ಗಳಲ್ಲಿ ನಡೆಯಲಿದೆ. ತಲಾ 27 ಜನ ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರು ಸೇರಿದಂತೆ 54 ಸಿಬ್ಬಂದಿಗಳನ್ನು ನೇಮಿಸಲಾಗಿದೆ.
     ಮತ ಎಣಿಕಾ ದಿನದಂದು ಪ್ರತಿ ತಾಲೂಕಿಗೆ ಒಬ್ಬ ವಿಡಿಯೋಗ್ರಾಫರ್ ನೇಮಿಸಿ, ಚುನಾವಣಾ ಸಂಬಂಧ ಮುಖ್ಯ ಘಟನೆಗಳನ್ನು ಚಿತ್ರೀಕರಿಸಲು ನೇಮಿಸಲಾಗಿದೆ.
ಭದ್ರತಾ ವ್ಯವಸ್ಥೆ : ಫೆ. 23 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಜರುಗುವ ಮತ ಎಣಿಕಾ ಕಾರ್ಯ ಸುಗಮವಾಗಿ ನಡೆಯಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದೆ.  ಪ್ರತಿಯೊಂದು ಮತ ಎಣಿಕೆ ಕೇಂದ್ರಕ್ಕೆ 01 ಸಿಪಿಐ, 15 ಜನ ಪಿಎಸ್‍ಐ/ಎಎಸ್‍ಐ, ಹಾಗೂ 100 ಜನ ಹೆಚ್‍ಸಿ/ಪಿಸಿ, 75- ಗೃಹರಕ್ಷಕದಳದ ಸಿಬ್ಬಂದಿಯನ್ನು ಅಲ್ಲದೆ 02 ಡಿಎಆರ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.  ಪ್ರತಿ ಎರಡು ಮತ ಎಣಿಕಾ ಕೇಂದ್ರಕ್ಕೆ 01 ಡಿವೈಎಸ್‍ಪಿ ಅವರನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.  ಒಟ್ಟಾರೆ ಜಿಲ್ಲೆಯಲ್ಲಿ 02- ಡಿವೈಎಸ್‍ಪಿ, 06-ಪಿಎಸ್‍ಐ/ಸಿಪಿಐ, 400-ಹೆಚ್‍ಸಿ/ಪಿಸಿ, 300- ಗೃಹರಕ್ಷಕದಳ ಸಿಬ್ಬಂದಿ ಹಾಗೂ 08-ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ತಿಳಿಸಿದ್ದಾರೆ.
     ಒಟ್ಟಾರೆ ಫೆ. 23 ರಂದು ತಾಲೂಕು ಕೇಂದ್ರಗಳಲ್ಲಿ ಮತಗಳ ಎಣಿಕಾ ಕಾರ್ಯ ಸುಗಮವಾಗಿ ನಡೆಸಲು ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ, ಎಲ್ಲ ರಾಜಕೀಯ ಪಕ್ಷದವರು, ಅಭ್ಯರ್ಥಿಗಳು, ಏಜೆಂಟರು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಮನವಿ ಮಾಡಿಕೊಂಡಿದ್ದಾರೆ.

ಒಳನಾಡು ಮೀಒಳನಾಡು ಮೀನುಗಾರಿಕೆ ತರಬೇತಿ : ಪುರುಷರಿಂದ ಅರ್ಜಿ ಆಹ್ವಾನ

ಕೊಪ್ಪಳ, ಫೆ.22 (ಕರ್ನಾಟಕ ವಾರ್ತೆ) : ಶಿವಮೊಗ್ಗ ಜಿಲ್ಲೆಯ ಮೀನುಗಾರಿಕೆ ತರಬೇತಿ ಕೆಂದ್ರದ ವತಿಯಿಂದ ಒಳನಾಡು ಮೀನುಗಾರಿಕೆ ಕುರಿತು ತರಬೇತಿ ನೀಡಲಾಗುತ್ತಿದ್ದು, ಆಸಕ್ತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಶಿವಮೊಗ್ಗ ಜಿಲ್ಲೆ ಬಿ.ಆರ್. ಪ್ರಾಜೆಕ್ಟ್‍ನಲ್ಲಿರುವ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ಮಾ.02 ರಿಂದ ಪ್ರಾರಂಭವಾಗಲಿರುವ ಈ ತರಬೇತಿಯು 01 ತಿಂಗಳ ಅವಧಿಯದ್ದಾಗಿದೆ. ತರಬೇತಿಗೆ ಸುಮಾರು 25 ಗ್ರಾಮೀಣ ಅಥವಾ ನಗರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ಮೀನುಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಮೀನು ಸಾಕಾಣಿಕೆ, ಬಲೆಗಳನ್ನು ಹೆಣೆಯುವುದು, ದುರಸ್ತಿ ಮಾಡುವುದು, ಹರಿಗೋಲು ನಡೆಸುವುದು, ಮೀನು ಹಿಡಿಯುವುದು, ಅಲಂಕಾರಿಕ ಮೀನುಮರಿ ಉತ್ಪಾದನೆ, ಪಾಲನೆ ಇತ್ತೀಚಿನ ಬೆಳವಣಿಗೆಗಳು ಮುಂತಾದ ವಿಷಯಗಳ ಕುರಿತು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಪ್ರತಿ ಅಭ್ಯರ್ಥಿಗೆ ಮಾಸಿಕ ರೂ.2,000 ಗಳ ಶಿಷ್ಯವೇತನ ನೀಡಲಾಗುವುದು. 
     ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. 10ನೇ ತರಗತಿವರೆಗೆ (ಪಾಸ್ ಅಥವಾ ಫೇಲ್) ಓದಿರಬೇಕು. ಬೀದರ್, ಗುಲ್ಬರ್ಗಾ, ಯಾದಗಿರಿ, ಚಿತ್ರದುರ್ಗ, ರಾಯಚೂರು, ಧಾರವಾಡ, ಬಿಜಾಪೂರ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಗದಗ, ಕೊಪ್ಪಳ, ದಾವಣಗೆರೆ, ಹಾವೇರಿ, ಶಿವಮೊಗ್ಗ ಚಿಕ್ಕಮಗಳೂರು, ಬಾಗಲಕೋಟೆ ಜಿಲ್ಲೆಗೆ ಸೇರಿದವರಾಗಿರಬೇಕು. ತರಬೇತಿ ಅವಧಿಯಲ್ಲಿ ಇಲಾಖೆಯು ನೀಡುವ ವಸತಿ ಗೃಹದಲ್ಲಿ ತಂಗಬೇಕು. ಮೀನುಗಾರಿಕೆ ವೃತ್ತಿ ನಡೆಸುತ್ತಿರುವವರು, ಮೀನುಗಾರರ ಸಹಕಾರ ಸಂಘದ ಸದಸ್ಯರು, ಇತ್ಯಾದಿ ಸಂಘಗಳ ಸದಸ್ಯರಿಗೆ ಆದ್ಯತೆ ನೀಡಲಾಗುವುದು. ಸಂದರ್ಶನಕ್ಕೆ ಅಭ್ಯರ್ಥಿಯು ಸ್ವಂತ ಖರ್ಚಿನಲ್ಲಿ ಭಾಗವಹಿಸಬೇಕು. 
     ನಿಗದಿತ ಅರ್ಜಿ ನಮೂನೆಯನ್ನು ಅಂಚೆ ಮೂಲಕ ಪಡೆಯಲಿಚ್ಛಿಸುವವರು ಕೋರಿಕೆ ಪತ್ರದೊಂದಿಗೆ 9*4 ಅಳತೆಯ ಸ್ವ-ವಿಳಾಸ ಬರೆದ ಕವರಿನೊಂದಿಗೆ 5 ರೂ.ಗಳ ಅಂಚೆ ಸ್ಟಾಂಪ್ ಅಂಟಿಸಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇ-1), ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್. ಪ್ರಾಜೆಕ್ಟ್, ತಾ|| ಭದ್ರಾವತಿ, ಶಿವಮೊಗ್ಗ ಜಿಲ್ಲೆ ಇವರಿಗೆ ಕಳುಹಿಸಿ ಪಡೆಯಬಹುದು. ಕೈಯಲ್ಲಿ ಬರೆದ ಅಥವಾ ಬೆರಳಚ್ಚು ಮಾಡಿದ ಅರ್ಜಿ ನಮೂನೆಗಳನ್ನು ಪರಿಗಣಿಸಲಾಗುವುದಿಲ್ಲ. ಭರ್ತಿ ಮಾಡಿದ ಅರ್ಜಿಯನ್ನು ಮಾ.01 ರೊಳಗಾಗಿ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾ, ತಾಲೂಕಾ ಮಟ್ಟದ ಮೀನುಗಾರಿಕೆ ಕಛೇರಿಗಳು, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಗಳ ಕಛೇರಿ, ನೋಟಿಸ್ ಬೋರ್ಡ್‍ಗಳನ್ನು ವೀಕ್ಷಿಸಬಹುದಾಗಿದೆ ಅಥವಾ ಆಯಾ ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದ ಮೀನುಗಾರಿಕೆ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್.ಪ್ರಾಜೆಕ್ಟ್‍ನ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 

ಮದ್ಯ, ಮಾದಕಗಳ ಕುರಿತು ಜಾಗೃತಿ : ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಕೊಪ್ಪಳ, ಫೆ.22 (ಕರ್ನಾಟಕ ವಾರ್ತೆ): ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರ ವತಿಯಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ತಡೆಗಟ್ಟುವಲ್ಲಿ ಶ್ರಮಿಸಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕುಡಿತ ಮತ್ತು ಮಾದಕ ವಸ್ತುಗಳ ಸೆವನೆಗಳಿಗೆ ಒಳಗಾಗಿರುವವರಿಗೆ ಅದರ ಕುರಿತು ತಿಳುವಳಿಕೆ ನೀಡಿ, ಅವುಗಳನ್ನು ತಡೆಗಟ್ಟುವಲ್ಲಿ ಸ್ವಯಂ ಆಗಿ ಸೇವೆ ಸಲ್ಲಿಸಿ, ವ್ಯಸನಿಗಳನ್ನು ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಮುಕ್ತ ಮಾಡುವಲ್ಲಿ ಯಶಸ್ವಿಯಾಗಿರುವಂತಹ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಅರ್ಜಿಯನ್ನು ಸಂಬಂಧಪಟ್ಟ ಮೂಲ ದಾಖಲಾತಿಗಳೊಂದಿಗೆ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರಿಗೆ ಫೆ.26 ರೊಳಗಾಗಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್  www.socialjustice.nic.in ಗೆ ಭೇಟಿ ನೀಡಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳದ ಉಪನಿರ್ದೇಶಕ ಬಿ.ಕಲ್ಲೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 20 February 2016

ಫೆ. 21 ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಎಲ್ಲ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ- ಡಾ. ಶ್ರೀಕಾಂತ್ ಬಾಸೂರ ಮನವಿ

ಕೊಪ್ಪಳ ಫೆ. 20 (ಕರ್ನಾಟಕ ವಾರ್ತೆ)- ಜಿಲ್ಲೆಯಲ್ಲಿ ಫೆ. 21 ರಿಂದ 24 ರವರೆಗೆ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಎರಡನೆ ಹಂತದ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಮನವಿ ಮಾಡಿಕೊಂಡಿದ್ದಾರೆ.
     ಜಿಲ್ಲೆಯಲ್ಲಿ  ಫೆ. 21 ರಿಂದ 24 ರವರೆಗೆ 04 ದಿನಗಳ ಕಾಲ 05 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಜಿಲ್ಲೆಯ 1,95,121  ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.  ಆ ಪೈಕಿ 164885 ಮಕ್ಕಳು ಗ್ರಾಮಾಂತರ ಪ್ರದೇಶದವರಾಗಿದ್ದು, 30236 ಮಕ್ಕಳು ನಗರ ಪ್ರದೇಶದವರಾಗಿದ್ದಾರೆ.  ಮಕ್ಕಳಿಗೆ ಪೋಲಿಯೋ ಹನಿ ನೀಡುವ ಸಲುವಾಗಿ ಒಟ್ಟು 293157  ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.  ಈ ಪೈಕಿ ಗ್ರಾಮೀಣ ಪ್ರದೇಶದ 246559 ಮನೆಗಳು ಹಾಗೂ ನಗರ ಮತ್ತು ಪಟ್ಟಣ ಪ್ರದೇಶದ 49598 ಮನೆಗಳ ಭೇಟಿಗೆ ಗುರಿ ಹೊಂದಲಾಗಿದೆ.  ಫೆ. 21 ರಂದು  ಬೂತ್ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಒಟ್ಟು  923 ತಂಡಗಳನ್ನು ರಚಿಸಲಾಗಿದ್ದು, 1846 ಲಸಿಕಾ ಕಾರ್ಯಕರ್ತರು ಹಾಗೂ 185 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.  ಫೆ. 22 ರಿಂದ 24 ರವರೆಗೆ ಮನೆ ಮನೆಗಳಿಗೆ ಭೇಟಿ ನೀಡಿ ಉಳಿಕೆ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು. ಬಸ್ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ಅಲ್ಲದೆ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಬೂತ್‍ಗಳನ್ನು ಸ್ಥಾಪಿಸಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ, ಮತ್ತೊಮ್ಮೆ ಫೆ. 21 ರಿಂದ 24 ರವರೆಗೆ ಜರುಗುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಬೇಕು. ಪಾಲಕರು ತಮ್ಮ 05 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು.  ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಲಯನ್ಸ್, ರೋಟರಿ, ಇನ್ನರ್ ವ್ಹೀಲ್ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಟೊಮ್ಯೋಟೊ ಬೆಳೆಗೆ ಸೂಜಿ ಹುಳುವಿನ ಬಾಧೆ : ನಿರ್ವಹಣೆಗೆ ಸಲಹೆ

ಕೊಪ್ಪಳ ಫೆ. 20 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಕೋಳೂರು, ಕಾಟ್ರಳ್ಳಿ, ಹಾಲಹಳ್ಳಿ, ಗಬ್ಬೂರು, ಕಲತಾವರೆಗೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಟೊಮ್ಯಾಟೋ ಬೆಳೆಗೆ ಸೂಜಿ ಹುಳುವಿನ ಬಾಧೆ (ಪಿನ್ ವರ್ಮ್) ಕಂಡುಬಂದಿದ್ದು ಶೇ. 50 ರಿಂದ 100 ರಷ್ಟು ಹಾನಿಗೊಳಗಾಗುತ್ತಿದೆ.  ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಸೂಜಿ ಹುಳುವಿನ ಕೀಟವು ಪತಂಗ ಜಾತಿಯ ಗೆಲಿಚಿಡೆ ಎಂಬ ಗುಂಪಿಗೆ ಸೇರಿದ್ದು ಇದನ್ನು ಟುಟ ಅಬ್ಸಲೂಟ ಎಂದು ಕರೆಯುತ್ತಾರೆ. ಇದರ ಜೀವನಚಕ್ರವು 24 ರಿಂದ 28 ದಿನಗಳಾಗಿದ್ದು ಒಂದು ಪತಂಗವು ದಿನಕ್ಕೆ 300 ಮೊಟ್ಟೆಗಳನ್ನಿಡುತ್ತದೆ.
ಬಾಧೆಯ ಲಕ್ಷಣಗಳು : ಮೊಟ್ಟೆಯೊಡೆದು ಹೊರಬಂದ ಮರಿಹುಳುಗಳು ಎಲೆ ಮತ್ತು ಕಾಯಿಗಳ ಹಸಿರು ಭಾಗವನ್ನು ತಿನ್ನುವುದರಿಂದ ಎಲೆಗಳು ಅಲ್ಲಲ್ಲಿ ಸುಟ್ಟಂತೆ ಕಾಣುತ್ತವೆ ಮತ್ತು ಒಣಗಿ ಹೋಗುತ್ತವೆ.  ಕಾಯಿಗಳ ಮೇಲೆ ಸಣ್ಣ ಸಣ್ಣ ರಂದ್ರಗಳು ಉಂಟಾಗಿ ಕಾಯಿಂದ ರಸ ಸೋರಲು ಶುರುವಾಗುತ್ತದೆ. ಕೀಡೆಗಳು ಹಾನಿ ಮಾಡಿದ ಜಾಗದಲ್ಲಿ ರೋಗಾಣುಗಳು ಆಕ್ರಮಣ ಮಾಡಿ ಕಾಯಿ ಮತ್ತು ಹಣ್ಣುಗಳು ಕೊಳೆಯಲು ಶುರುವಾಗುತ್ತವೆ. ತೀವ್ರವಾಗಿ ಹಾನಿಯಾದ ಹಣ್ಣುಗಳ ಪ್ರಮಾಣ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ನಿರ್ವಹಣೆ ಕೈಗೊಳ್ಳದಿದ್ದಲ್ಲಿ ಶೇ.100 ರಷ್ಟು ಹಾನಿಗೊಳಗಾಗುತ್ತದೆ.
ನಿರ್ವಹಣಾ ಕ್ರಮಗಳು : ಸೂಜಿ ಹುಳುವಿನ ಬಾಧೆ ನಿರ್ವಹಣೆಗಾಗಿ ಒಂದು ಬೆಳೆಯಿಂದ ಇನ್ನೊಂದು ಬೆಳೆಗೆ ಕನಿಷ್ಟ 6 ವಾರಗಳ ಅಂತರವಿರಬೇಕು.  ಉಳುಮೆ ಮಾಡಿದ ನಂತರ ಪ್ಲಾಸ್ಟಿಕ್ ಪೇಪರಿನಿಂದ ಹೊದಿಕೆ ಹಾಕಿ ಬಿಸಿಲಿನ ಶಾಖಕ್ಕೆ ಮಣ್ಣಲ್ಲಿರುವ ಕೋಶಗಳನ್ನು ಸಾಯುವಂತೆ ಮಾಡಬೇಕು.  ಕಳೆ ಕಸ ಇರದಂತೆ ಕಿತ್ತು ನಾಶಪಡಿಸಬೇಕು.  ನಾಟಿ ಮಾಡುವ ಪೂರ್ವದಲ್ಲಿ ಅಂಟು ಬಲೆಗಳನ್ನು ಹೊಲದಲ್ಲಿ ಅಳವಡಿಸಬೇಕು. ಬೆಳೆಯನ್ನು ಪರಿಶೀಲಿಸಿ ಮೊದಲಿನ ಕೀಡೆಯ ಲಕ್ಷಣಗಳನ್ನು ಗಮನಿಸಬೇಕು.  ಟುಟ ಅಬ್ಸಲೂಟ ಮೋಹಕ ಬಲೆಗಳನ್ನು ಎಕರೆಗೆ 10 ರಂತೆ ಅಳವಡಿಸಿ ಲ್ಯೂರ್‍ಗಳನ್ನು ಪ್ರತೀ 20 ದಿನಗಳಿಗೊಮ್ಮೆ ಬದಲಾಯಿಸುದರಿಂದ ಈ ಕೀಡೆಯ ನಿರ್ವಹಣೆ ಪರಿಣಾಮಕಾರಿಯಾಗಿರುತ್ತದೆ.  ಒಂದೇ ಗುಂಪಿಗೆ ಸೇರಿದ ಕೀಟನಾಶಕಗಳನ್ನು ಪದೇ ಪದೇ ಸಿಂಪಡಿಸಬಾರದು.
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯತಜ್ಞರಾದ ರೋಹಿತ್ ಕೆ.ಎ (9845194328) ಅವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ (9480696319) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 19 February 2016

ಫೆ. 21 ರಂದು ಕೊಪ್ಪಳದಲ್ಲಿ ‘ಜನಪರ’ ಉತ್ಸವ

ಕೊಪ್ಪಳ,ಫೆ.19 (ಕ.ವಾ.) : ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ವಿಶೇಷ ಘಟಕ ಯೋಜನೆಯಡಿ ‘ಜನಪರ’ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮವನ್ನು ಫೆ. 21 ರಂದು ಸಂಜೆ 04 ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಿದೆ.
     ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಜನಪರ ಉತ್ಸವದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ್ ಪಾಟೀಲ್ ಇಟಗಿ, ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು.
     ಜನಪರ ಉತ್ಸವದ ಅಂಗವಾಗಿ ಸಂಜೆ 04 ಗಂಟೆಯಿಂದ ಬಿನ್ನಾಳದ ಯಮನೂರಪ್ಪ ಭಜಂತ್ರಿ ತಂಡದಿಂದ ಹಲಗೆ ವಾದನ, ಹಂಚಿನಾಳದ ದೇವಪ್ಪ ಭಜಂತ್ರಿ ತಂಡದಿಂದ ಕಣಿ ಹಲಗೆ ವಾದನ, ಕನಕಗಿರಿಯ ಬಸವರಾಜ ದಾಲ್‍ಪಟ್ ತಂಡದಿಂದ ಮೋಜಿನ ಗೊಂಬೆಗಳು ಕಾರ್ಯಕ್ರಮ ಜರುಗಲಿವೆ.  ಸಂಜೆ 5 ಗಂಟೆಯಿಂದ ಕುದರಿಮೋತಿಯ ಹನುಮಂತರಾವ್ ಮುಧೋಳ್‍ರಿಂದ ಕೊಳಲು ವಾದನ, ಮಾರೆಪ್ಪ ಮಾರೆಪ್ಪ ದಾಸರ್ ಅವರಿಂದ ತತ್ವಪದಗಳು, ವಿರುಪಾಕ್ಷಪ್ಪ ಅವರಿಂದ ಸುಡುಗಾಡು ಸಿದ್ದರ ಕೈಚಳಕ, ಇಟಗಿಯ ಪಾರವ್ವ ಲಚ್ಚಪ್ಪ ಲಮಾಣಿ ತಂಡದಿಂದ ಲಂಬಾಣಿ ನೃತ್ಯ, ಮರಿಯಪ್ಪ ಚಾಮಲಾಪುರ ಅವರಿಂದ ಜಾನಪದ ಗೀತೆಗಳು, ಶಂಕರ ಬಿನ್ನಾಳ ರಿಂದ ಹಾರ್ಮೋನಿಯಂ ಸೋಲೋ, ಲಕ್ಷ್ಮವ್ವ ಆಡೂರು ಅವರಿಂದ ಗೀಗೀ ಪದಗಳು, ಭಾಗ್ಯನಗರದ ಪಾಂಡುರಂಗ ಮ್ಯಾಗಳಮನಿ ರಿಂದ ನೃತ್ಯ ಪ್ರದರ್ಶನ, ಕೊಪ್ಪಳದ ಬಸವರಾಜ ಮಾಲಗಿತ್ತಿ ತಂಡದಿಂದ ಸಮೂಹ ನೃತ್ಯ, ಕವಲೂರಿನ ದೊಡ್ಡನಿಂಗಪ್ಪ ಸುಂಕಣ್ಣನವರ್‍ರಿಂದ ರಂಗಗೀತೆಗಳು, ಬೆಣಕಲ್‍ನ ನೀಲವ್ವ ಮತ್ತು ತಂಡದಿಂದ ಸಂಪ್ರದಾಯ ಪದಗಳು, ಮಾರುತಿ ಬಿನ್ನಾಳರಿಂದ ಸುಗಮ ಸಂಗೀತ, ಬಿಜಕಲ್‍ನ ಅಕ್ಕಮಹಾದೇವಿ ಚನ್ನದಾಸರ ಅವರಿಂದ ಜಾನಪದ ಸಂಗೀತ ಹಾಗೂ ಪಟ್ಟಲಚಿಂತಿಯ ಯಮನೂರಪ್ಪ ಭಜಂತ್ರಿ ಅವರಿಂದ ವಚನ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ತಿಳಿಸಿದ್ದಾರೆ.

ಕುಷ್ಟಗಿ ತಾಲೂಕಿನಲ್ಲಿ ಎಂಸಿಸಿ ತಂಡ ದಾಳಿ : ಅನಧಿಕೃತ ಮದ್ಯ ವಶ

ಕೊಪ್ಪಳ ಫೆ. 19 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕು ದೋಟಿಹಾಳ-ಮುದೆನೂರ ರಸ್ತೆಯಲ್ಲಿ ಬರುವ ಮೇಗೂರು ಗ್ರಾಮದ ಬಳಿಯ ಹೊಲದಲ್ಲಿ ವಿತರಣೆಗಾಗಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಸುಮಾರು 12. 25 ಲೀ. ಮದ್ಯವನ್ನು ಚುನಾವಣಾ ಎಂಸಿಸಿ ತಂಡ ವಶಪಡಿಸಿ, ಅಬಕಾರಿ ಇಲಾಖೆ ವಶಕ್ಕೆ ಒಪ್ಪಿಸಿದ ಘಟನೆ ಶುಕ್ರವಾರದಂದು ನಡೆದಿದೆ.
      ದೋಟಿಹಾಳ-ಮುದೆನೂರ ರಸ್ತೆಯಲ್ಲಿ ಬರುವ ಮೇಗೂರು ಗ್ರಾಮದ ಬಳಿಯ ಹೊಲದಲ್ಲಿ ಮದ್ಯದ ಬಾಟಲಿಯ ಬಾಕ್ಸ್‍ಗಳನ್ನು ಅನಧಿಕೃತವಾಗಿ ದಾಸ್ತಾನು ಇರಿಸಿಕೊಂಡು, ವ್ಯಕ್ತಿಗಳಿಗೆ ವಿತರಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರ ನೇತೃತ್ವದ ಕುಷ್ಟಗಿ ತಾಲೂಕು ಎಂಸಿಸಿ ತಂಡ, ಸ್ಥಳಕ್ಕೆ ಭೇಟಿ ನೀಡಿ, 12. 25 ಲೀ. ಮದ್ಯವನ್ನು ವಶಪಡಿಸಿಕೊಂಡಿದ್ದು, ಎಂಸಿಸಿ ತಂಡ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ, ಆರೋಪಿ ಪರಾರಿಯಾಗಿದ್ದಾನೆ.  ವಶಪಡಿಸಿಕೊಂಡ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ.  ಎಂಸಿಸಿ ತಂಡದ ಸೆಕ್ಟರ್ ಅಧಿಕಾರಿ ರಾಘವೇಂದ್ರ, ಅಬಕಾರಿ ನಿರೀಕ್ಷಕ ಗುರುಪಾದಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಬಿ. ಕಲ್ಲೇಶ್ ತಿಳಿಸಿದ್ದಾರೆ.

ಫೆ. 21 ರಂದು ಈಶಾನ್ಯದ ಐಸಿರಿ ಸರಣಿಯ 23 ನೇ ಸಂಚಿಕೆ ಪ್ರಸಾರ

ಕೊಪ್ಪಳ ಫೆ. 19 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 23 ನೇ ಸಂಚಿಕೆ ಫೆ. 21 ರಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 23ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.   ಕಲಬುರಗಿಯ ನಿವೃತ್ತ ನ್ಯಾಯ ಮೂರ್ತಿಗಳಾಗಿರುವ ಎಂ.ಬಿ. ಬಿರಾದರ ಅವರಿಂದ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳುವ ಬಗ್ಗೆ ಕುರಿತು ಸಲಹೆ.  ಕಲಬುರಗಿಯ ಶಿಕ್ಷಕರ ಕಾಲೇಜಿನ ಉಪನ್ಯಾಸಕರಾಗಿರುವ ರಾಮಕೃಷ್ಣ ಕುಲಕರ್ಣಿ ಅವರಿಂದ ಶಿಕ್ಷಕರಿಗೆ ಸಲಹೆಗಳು.  ಆಳಂದ ತಾ. ಸುಂಟನೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿರುವ ಮಳಯ್ಯ ಹಿರೇಮಠ ಅವರಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಇಂಗ್ಲೀಷ ಪದ್ಯಗಳ ಕುರಿತು ಮಾರ್ಗಸೂಚಿ.  ಕಲಬುರಗಿ ತಾ. ಕುಮಸಿ ಗ್ರಾಮದ ರಮಾಬಾಯಿ ಮಹಿಳಾ ಸ್ವಸಹಾಯ ಸಂಘದ ಸಾಧನೆಯ ಹಾದಿ.  ರಾಯಚೂರಿನ ಕಲಾವಿದ ದಾದಾಪೀರ ಮಂಜರ್ಲಾ ಅವರ ಸಾಧನೆಯ ಪರಿಚಯ.  ಊರು-ಟೂರಿನಲ್ಲಿ ಸುರಪೂರ ತಾಲೂಕಿನ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಒಂದು ಸುತ್ತು.  ಕಲಬುರಗಿಯ ಕಲಾವಿದ ರಾಘವೇಂದ್ರ ಬಡಶೇಷಿ ಅವರಿಂದ ಹಾಡು ಮೂಡಿಬರಲಿವೆ.  ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.   ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

Thursday, 18 February 2016

ಜಿಲ್ಲಾ ಹಾಗೂ ತಾಲೂಕಾ ಪಂಚಾಯತಿ ಚುನಾವಣೆ : ಫೆ. 20 ರ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತ ಸನ್ನದ್ಧ

ಕೊಪ್ಪಳ ಫೆ. 18 (ಕರ್ನಾಟಕ ವಾರ್ತೆ): ಪ್ರಸಕ್ತ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ ನಿಮಿತ್ಯ ಫೆ. 20 ರಂದು ಮತದಾನ ಪ್ರಕ್ರಿಯೆ ಕೈಗೊಳ್ಳಲು ಕೊಪ್ಪಳ ಜಿಲ್ಲಾಡಳಿತ ಸನ್ನದ್ಧವಾಗಿದೆ.

ಜಿಲ್ಲಾ ಪಂಚಾಯತ್ :  ಕೊಪ್ಪಳ ಜಿಲ್ಲಾ ಪಂಚಾಯತ್‍ನ ಕುಷ್ಟಗಿ ತಾಲೂಕಿನ 07 ಕ್ಷೇತ್ರಗಳಲ್ಲಿ ಹಾಗೂ ಕೊಪ್ಪಳ ತಾಲೂಕಿನ 08 ಕ್ಷೇತ್ರಗಳಲ್ಲಿ ತಲಾ 31 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಗಂಗಾವತಿ ತಾಲೂಕಿನ 08 ಕ್ಷೇತ್ರಗಳಲ್ಲಿ 29 ಹಾಗೂ ಯಲಬುರ್ಗಾ ತಾಲೂಕಿನ 06 ಕ್ಷೇತ್ರಗಳಲ್ಲಿ 26 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟಾರೆ   ಜಿಲ್ಲಾ ಪಂಚಾಯತ್‍ನ 29 ಕ್ಷೇತ್ರಗಳಿಗೆ 117 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣೆ ಕಣದಲ್ಲಿದ್ದಾರೆ.

ತಾಲೂಕಾ ಪಂಚಾಯತ್ :  ತಾಲೂಕಾ ಪಂಚಾಯತ್ ಚುನಾವಣೆಗಳಿಗೆ ಸಂಬಂಧಿಸಿದಂತೆ ಕುಷ್ಟಗಿ ತಾಲೂಕಾ ಪಂಚಾಯತ್‍ನ 25 ಕ್ಷೇತ್ರಗಳಿಗೆ 81 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕೊಪ್ಪಳ ತಾಲೂಕಾ ಪಂಚಾಯತ್ 29 ಕ್ಷೇತ್ರಗಳಿಗೆ 95, ಗಂಗಾವತಿ ತಾಲೂಕಿನ 31 ಕ್ಷೇತ್ರಗಳಿಗೆ 104 ಹಾಗೂ ಯಲಬುರ್ಗಾ ತಾಲೂಕಾ ಪಂಚಾಯತ್‍ನ 24 ಕ್ಷೇತ್ರಗಳಿಗೆ 67 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ನಾಲ್ಕೂ ತಾಲೂಕಾ ಪಂಚಾಯತ್‍ನ ಒಟ್ಟು 109 ಕ್ಷೇತ್ರಗಳಲ್ಲಿ ಅಂತಿಮವಾಗಿ 347 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದಿದ್ದಾರೆ.
ಮತದಾರರು : ಜಿಲ್ಲಾ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 3,94,281-ಪುರುಷ ಹಾಗೂ  3,89,059-ಮಹಿಳಾ ಮತದಾರರು ಸೇರಿದಂತೆ ಒಟ್ಟು 7,83,340 ಮತದಾರರಿದ್ದಾರೆ.
     ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿ ಪುರುಷ-93,336, ಮಹಿಳೆ-90,925 ಸೇರಿದಂತೆ ಒಟ್ಟು 1,84,261 ಮತದಾರರು, ಕೊಪ್ಪಳ ತಾಲೂಕಿನಲ್ಲಿ ಪುರುಷ-1,04,295, ಮಹಿಳೆ-1,02,110 ಸೇರಿದಂತೆ ಒಟ್ಟು 2,06405 ಮತದಾರರು, ಗಂಗಾವತಿ ತಾಲೂಕಿನಲ್ಲಿ ಪುರುಷ-1,08,937, ಮಹಿಳೆ-1,11,202 ಸೇರಿದಂತೆ ಒಟ್ಟು 2,20,139 ಮತದಾರರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಪುರುಷ-87,713 ಮತ್ತು ಮಹಿಳೆ-84,822 ಸೇರಿದಂತೆ ಒಟ್ಟು 1,72,535 ಮತದಾರರು ಇದ್ದಾರೆ.
ಸೂಕ್ಷ್ಮ, ಅತಿಸೂಕ್ಷ್ಮ ಮತದಾನ ಕೇಂದ್ರಗಳು: ಜಿಲ್ಲೆಯಲ್ಲಿ ಅತೀ ಸೂಕ್ಷ್ಮ-198, ಸೂಕ್ಷ್ಮ-237, ಸಾಮಾನ್ಯ-511 ಸೇರಿದಂತೆ ಒಟ್ಟು 946 ಮತದಾನ ಕೇಂದ್ರಗಳಿವೆ.
      ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿ ಅತೀಸೂಕ್ಷ್ಮ-46, ಸೂಕ್ಷ್ಮ-52 ಮತ್ತು ಸಾಮಾನ್ಯ-120 ಸೇರಿದಂತೆ ಒಟ್ಟು-218. ಕೊಪ್ಪಳ ತಾಲೂಕಿನಲ್ಲಿ ಅತೀಸೂಕ್ಷ್ಮ-50, ಸೂಕ್ಷ್ಮ-61 ಮತ್ತು ಸಾಮಾನ್ಯ-133, ಒಟ್ಟು-244.  ಗಂಗಾವತಿ ತಾಲೂಕಿನಲ್ಲಿ ಅತೀಸೂಕ್ಷ್ಮ-57, ಸೂಕ್ಷ್ಮ-66 ಮತ್ತು ಸಾಮಾನ್ಯ-148, ಒಟ್ಟು-271 ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಅತೀಸೂಕ್ಷ್ಮ-45, ಸೂಕ್ಷ್ಮ-58 ಮತ್ತು ಸಾಮಾನ್ಯ-110 ಸೇರಿದಂತೆ ಒಟ್ಟು-213 ಮತದಾನ ಕೇಂದ್ರಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ/ ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಅಂತಹ ಮತಗಟ್ಟೆಗಳಿಗೆ ಮತದಾನದ ದಿನದಂದು ಸೂಕ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಹಾಗೂ ವಿಡಿಯೋ ಚಿತ್ರೀಕರಣ ಮಾಡಲು ವಿಡಿಯೋಗ್ರಾಫರ್‍ಗಳನ್ನು ನೇಮಕ ಮಾಡಲಾಗಿದೆ.
ಮತಗಟ್ಟೆ ಸಿಬ್ಬಂದಿ : ಜಿಲ್ಲೆಯಲ್ಲಿರುವ ಒಟ್ಟು 946 ಮತಗಟ್ಟೆಗಳಿಗೆ 1041 ತಲಾ ಪಿಆರ್‍ಓ, ಎಪಿಆರ್‍ಒ, ಪಿಒ-01, ಪಿಒ-02 ಹಾಗೂ ಗ್ರೂಪ್-ಡಿ-946 ಸೇರಿದಂತೆ ಒಟ್ಟು 6151 ಜನ ಮತಗಟ್ಟೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
     ಈ ಪೈಕಿ ಕುಷ್ಟಗಿ ತಾಲೂಕಿನ 218 ಮತಗಟ್ಟೆಗಳಿಗೆ 240 ತಲಾ ಪಿಆರ್‍ಓ, ಎಪಿಆರ್‍ಒ, ಪಿಒ-01, ಪಿಒ-02 ಹಾಗೂ ಗ್ರೂಪ್‍ಡಿ-218 ಸೇರಿದಂತೆ ಒಟ್ಟು 1418. ಕೊಪ್ಪಳ ತಾಲೂಕಿನ 244 ಮತಗಟ್ಟೆಗಳಿಗೆ 268 ತಲಾ ಪಿಆರ್‍ಓ, ಎಪಿಆರ್‍ಒ, ಪಿಒ-01, ಪಿಒ-02 ಹಾಗೂ ಗ್ರೂಪ್-ಡಿ-244 ಸೇರಿದಂತೆ ಒಟ್ಟು 1584. ಗಂಗಾವತಿ ತಾಲೂಕಿನ 271 ಮತಗಟ್ಟೆಗಳಿಗೆ 298 ತಲಾ ಪಿಆರ್‍ಓ, ಎಪಿಆರ್‍ಒ, ಪಿಒ-01, ಪಿಒ-02 ಹಾಗೂ ಗ್ರೂಪ್-ಡಿ-271 ಸೇರಿದಂತೆ ಒಟ್ಟು 1761 ಹಾಗೂ ಯಲಬುರ್ಗಾ ತಾಲೂಕಿನ 213 ಮತಗಟ್ಟೆಗಳಿಗೆ 235 ತಲಾ ಪಿಆರ್‍ಓ, ಎಪಿಆರ್‍ಒ, ಪಿಒ-01, ಪಿಒ-02 ಹಾಗೂ ಗ್ರೂಪ್-ಡಿ-213 ಸೇರಿದಂತೆ ಒಟ್ಟು 1388 ಜನ ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
339 ವಾಹನಗಳ ಬಳಕೆ: ಮತಗಟ್ಟೆ ಸಿಬ್ಬಂದಿಗಳ ಪ್ರಯಾಣಕ್ಕಾಗಿ ಜಿಲ್ಲೆಯಲ್ಲಿ 125 ಕೆಎಸ್‍ಆರ್‍ಟಿಸಿ ಬಸ್, 79 ಕ್ರೂಸರ್, 135 ಸರ್ಕಾರಿ ಜೀಪು ಸೇರಿದಂತೆ ಒಟ್ಟು 339 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
     ಈ ಪೈಕಿ ಗಂಗಾವತಿ ತಾಲೂಕಿನಲ್ಲಿ 34 ಕೆಎಸ್‍ಆರ್‍ಟಿಸಿ ಬಸ್, 24 ಕ್ರೂಸರ್, 35 ಸರ್ಕಾರಿ ಜೀಪುಗಳು, ಒಟ್ಟು 93 ವಾಹನಗಳು. ಕೊಪ್ಪಳ ತಾಲೂಕಿನಲ್ಲಿ 34 ಬಸ್, 20 ಕ್ರೂಸರ್, 38 ಸರ್ಕಾರಿ ಜೀಪು, ಒಟ್ಟು 92 ವಾಹನಗಳು. ಕುಷ್ಟಗಿ ತಾಲೂಕಿನಲ್ಲಿ 27 ಬಸ್, 21 ಕ್ರೂಸರ್, 36 ಸರ್ಕಾರಿ ಜೀಪು, ಒಟ್ಟು 84 ವಾಹನಗಳು ಹಾಗೂ ಯಲಬುರ್ಗಾ ತಾಲೂಕಿನಲ್ಲಿ 30 ಬಸ್, 14 ಕ್ರೂಸರ್, 26 ಸರ್ಕಾರಿ ಜೀಪು ಸೇರಿದಂತೆ ಒಟ್ಟು 70 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ..
2080 ವಿದ್ಯುನ್ಮಾನ ಮತಯಂತ್ರ ಬಳಕೆ : ಜಿಲ್ಲಾ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 946 ಮತಗಟ್ಟೆಗಳಿದ್ದು, ಜಿಲ್ಲಾ ಪಂಚಾಯತಿ ಮತದಾನಕ್ಕೆ 01 ಮತ್ತು ತಾಲೂಕಾ ಪಂಚಾಯತಿ ಮತದಾನಕ್ಕೆ 01 ರಂತೆ ಪ್ರತಿ ಮತಗಟ್ಟೆಗೆ ತಲಾ ಎರಡು ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು.  ಇದರನ್ವಯ 946 ಮತಗಟ್ಟೆಗಳಿಗೆ 1892 ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. 188 ಹೆಚ್ಚುವರಿ ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ.
     ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿರುವ 218 ಮತಗಟ್ಟೆಗಳಿಗೆ 436 ವಿದ್ಯುನ್ಮಾನ ಮತಯಂತ್ರಗಳು,  44 ಕಾಯ್ದಿರಿಸಿದ ಮತಯಂತ್ರಗಳು. ಕೊಪ್ಪಳ ತಾಲೂಕಿನಲ್ಲಿ 244 ಮತಗಟ್ಟೆಗಳಿಗೆ 488, ಕಾಯ್ದಿರಿಸಿದ್ದು 48 ಮತಯಂತ್ರಗಳು.  ಗಂಗಾವತಿ ತಾಲೂಕಿನಲ್ಲಿ 271 ಮತಗಟ್ಟೆಗಳಿಗೆ 542, ಕಾಯ್ದಿರಿಸಿದ್ದು 54 ಮತಯಂತ್ರಗಳು. ಯಲಬುರ್ಗಾ ತಾಲೂಕಿನಲ್ಲಿ 213 ಮತಗಟ್ಟೆಗಳಿಗೆ 426 ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, 44 ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ.
ಮಸ್ಟರಿಂಗ್, ಡಿ-ಮಸ್ಟರಿಂಗ್ ಸ್ಥಳ : ಜಿಲ್ಲಾ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದ ಮಸ್ಟರಿಂಗ್, ಡಿ-ಮಸ್ಟರಿಂಗ್ ಕಾರ್ಯಗಳಿಗೆ ಸ್ಥಳ ನಿಗದಿಪಡಿಸಲಾಗಿದೆ.  ಕುಷ್ಟಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳದಲ್ಲಿ ಎಸ್.ಎಫ್.ಎಸ್ ಪ್ರೌಢಶಾಲೆ, ಗಂಗಾವತಿಯಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಯಲಬುರ್ಗಾದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ನಡೆಯಲಿದೆ.
     ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶಾಂತಿಯುತ ಚುನಾವಣೆಗೆ ಎಲ್ಲ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ಚುನಾವಣೆಗೆ ಸಾರಿಗೆ ಬಸ್‍ಗಳ ನಿಯೋಜನೆ : ಬಸ್ ಸಂಚಾರದಲ್ಲಿ ವ್ಯತ್ಯಯ

ಕೊಪ್ಪಳ ಫೆ. 18 (ಕರ್ನಾಟಕ ವಾರ್ತೆ): ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ 125 ಬಸ್‍ಗಳನ್ನು ನೀಡಲಾಗಿದ್ದು, ಫೆ. 19 ಮತ್ತು 20 ರಂದು ಎರಡು ದಿನಗಳ ಕಾಲ ಸಾಮಾನ್ಯ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುತ್ತದೆ.  ಪ್ರಯಾಣಿಕರು ಸಹಕರಿಸಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿದ್ದಾರೆ.
     ಚುನಾವಣಾ ಕಾರ್ಯಕ್ಕೆ ಕೊಪ್ಪಳ ವಿಭಾಗದಿಂದ 125 ಬಸ್‍ಗಳನ್ನು ನೀಡಲಾಗಿದ್ದು, ಫೆ. 19 ರಿಂದ 20 ರವರೆಗೆ ಸಾಮಾನ್ಯ ಸಾರಿಗೆ ಕಾರ್ಯಾಚರಣೆಗಳನ್ನು ರದ್ದುಗೊಳಿಸಲಾಗಿದ್ದು, ಬಸ್ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗಲಿದೆ.  ಪ್ರಯಾಣಿಕರು ಸಾರಿಗೆ ಸಂಸ್ಥೆಯೊಂದಿಗೆ ಸಹಕರಿಸಬೇಕು.  ಫೆ. 21 ರಿಂದ ಎಂದಿನಂತೆ ಎಲ್ಲಾ ಸಾರಿಗೆಗಳು ಕಾರ್ಯಾಚರಣೆ ಮಾಡಲಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ : ಸಮೀಕ್ಷಾ ವರದಿ ಪ್ರಕಟಣೆ ಮತ್ತು ಪ್ರಸಾರ ನಿಷೇಧ

ಕೊಪ್ಪಳ ಫೆ. 18 (ಕ.ವಾ): ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ ನಿಮಿತ್ಯವಾಗಿ ಮತದಾನ ಪ್ರಕ್ರಿಯೆ ಫೆ. 20 ರಂದು ಬೆಳಿಗ್ಗೆ 07 ಗಂಟೆಗೆ ಆರಂಭವಾಗುವ ಹಿನ್ನೆಲೆಯಲ್ಲಿ ಫೆ. 18 ರ ಬೆಳಿಗ್ಗೆ 07 ಗಂಟೆಯಿಂದ ಫೆ. 20 ರ ಸಂಜೆ 5-30 ಗಂಟೆಯವರೆಗೂ ಚುನಾವಣಾ ಪೂರ್ವ ಸಮೀಕ್ಷೆ ಅಥವಾ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಯಾವುದೇ ಜನಾಭಿಪ್ರಾಯ ಅಥವಾ ಫಲಿತಾಂಶಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟ ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
     ಚುನಾವಣಾ ಪೂರ್ವದಲ್ಲಿ ಚುನಾವಣೆಗೆ ಸಂಬಂಧಿತ ಸಮೀಕ್ಷಾ ವರದಿ, ಜನಾಭಿಪ್ರಾಯ, ಫಲಿತಾಂಶ ಕುರಿತಂತೆ ಯಾವುದೇ ಮಾಧ್ಯಮಗಳ ಮೂಲಕ ಪ್ರಕಟಗೊಳ್ಳುವ ವರದಿಗಳು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ.  ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸಬೇಕಾಗಿರುವುದರಿಂದ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ ನಿಮಿತ್ಯವಾಗಿ ಮತದಾನ ಪ್ರಕ್ರಿಯೆ ಫೆ. 20 ರಂದು ಬೆಳಿಗ್ಗೆ 07 ಗಂಟೆಗೆ ಆರಂಭವಾಗುವ ಹಿನ್ನೆಲೆಯಲ್ಲಿ ಫೆ. 18 ರ ಬೆಳಿಗ್ಗೆ 07 ಗಂಟೆಯಿಂದ ಫೆ. 20 ರ ಸಂಜೆ 5-30 ಗಂಟೆಯವರೆಗೂ ಚುನಾವಣಾ ಪೂರ್ವ ಸಮೀಕ್ಷೆ ಅಥವಾ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಯಾವುದೇ ಜನಾಭಿಪ್ರಾಯ ಅಥವಾ ಫಲಿತಾಂಶಗಳ ಬಗ್ಗೆ ಪತ್ರಿಕೆ, ಟಿ.ವಿ., ಕೇಬಲ್ ನೆಟ್‍ವರ್ಕ್, ರೇಡಿಯೋ, ಎಸ್‍ಎಂಎಸ್, ವಾಟ್ಸಪ್, ಕರಪತ್ರ, ಪೋಸ್ಟರ್ ಅಥವಾ ಇನ್ನಾವುದೇ ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ನಿಷೇಧಿಸಿ ಆದೇಶ ಹೊರಡಿಸಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆರ್.ಚಂದ್ರಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಆನೆಗೊಂದಿ ಬಳಿ ಎಂಸಿಸಿ ತಂಡ ದಾಳಿ : ಅನಧಿಕೃತ ಮದ್ಯ ವಶ

ಕೊಪ್ಪಳ ಫೆ. 18 (ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕು ಆನೆಗೊಂದಿ-ತಳವಾರಘಟ್ಟ ರಸ್ತೆಯ ಪಕ್ಕದಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿ, ಮಾರಾಟ ಮಾಡುತ್ತಿದ್ದ ಸುಮಾರು 15. 660 ಲೀ. ಮದ್ಯವನ್ನು ಚುನಾವಣಾ ಎಂಸಿಸಿ ತಂಡ ಗುರುವಾರ ವಶಪಡಿಸಿ, ಅಬಕಾರಿ ಇಲಾಖೆ ವಶಕ್ಕೆ ಒಪ್ಪಿಸಿದ ಘಟನೆ ಗುರುವಾರದಂದು ನಡೆದಿದೆ.
     ಆನೆಗೊಂದಿ-ತಳವಾರಘಟ್ಟ ರಸ್ತೆ ಮಾರ್ಗದ ಪಕ್ಕದಲ್ಲಿ ಅನಧಿಕೃತವಾಗಿ ದಾಸ್ತಾನು ಇರಿಸಿಕೊಂಡು, ವ್ಯಕ್ತಿಗಳಿಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅವರ ನೇತೃತ್ವದ ಗಂಗಾವತಿ ತಾಲೂಕು ಎಂಸಿಸಿ ತಂಡ, ಸ್ಥಳಕ್ಕೆ ಭೇಟಿ ನೀಡಿ, 15. 660 ಲೀ. ಮದ್ಯವನ್ನು ವಶಪಡಿಸಿಕೊಂಡಿದ್ದು, ಎಂಸಿಸಿ ತಂಡ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ, ಆರೋಪಿ ಪರಾರಿಯಾಗಿದ್ದಾನೆ.  ವಶಪಡಿಸಿಕೊಂಡ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ.  ಎಂಸಿಸಿ ತಂಡದ ಸೆಕ್ಟರ್ ಅಧಿಕಾರಿ ಅನಿಲಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ತಿಳಿಸಿದ್ದಾರೆ.

ಮತಗಟ್ಟೆಯೊಳಗೆ ಮೊಬೈಲ್ ತರುವಂತಿಲ್ಲ

ಕೊಪ್ಪಳ ಫೆ. 18 (ಕ.ವಾ): ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮತಗಟ್ಟೆಯೊಳಗೆ ಮೊಬೈಲ್  ತರುವುದನ್ನು ನಿಷೇಧಿಸಲಾಗಿದೆ.
     ಚುನಾವಣೆ ಹಿನ್ನೆಲೆಯಲ್ಲಿ ಫೆ. 20 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದ್ದು, ಯಾವುದೇ ಮತದಾರರು, ಏಜೆಂಟರು ಮತಗಟ್ಟೆಯೊಳಗೆ ಮೊಬೈಲ್‍ನೊಂದಿಗೆ ಪ್ರವೇಶ ಮಾಡುವಂತಿಲ್ಲ.  ಒಂದು ವೇಳೆ ಯಾರಾದರೂ ಮೊಬೈಲ್ ಸಹಿತ ಮತಗಟ್ಟೆಯೊಳಗೆ ಪ್ರವೇಶ ಮಾಡಿದ್ದು ಕಂಡು ಬಂದಲ್ಲಿ, ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಭಾರತ ಹುಣ್ಣಿಮೆ ದಿನದಂದು ಹುಲಿಗೆಮ್ಮ ದೇವಾಲಯದಲ್ಲಿ ವಿಶೇಷ ಪೂಜೆ

ಕೊಪ್ಪಳ ಫೆ. 18 (ಕರ್ನಾಟಕ ವಾರ್ತೆ): ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕು ಹುಲಿಗಿಯ ಹುಲಿಗೆಮ್ಮ ದೇವಾಲಯದಲ್ಲಿ ಫೆ. 22 ರ ಭಾರತ ಹುಣ್ಣಿಮೆ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ತಿಳಿಸಿದ್ದಾರೆ.
      ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಫೆ. 22 ಸೋಮವಾರ ಭಾರತ ಹುಣ್ಣಿಮೆ ನಿಮಿತ್ಯ, ಅಂದು ರಾತ್ರಿ 9.00 ಗಂಟೆಗೆ ಶ್ರೀ ಗಂಗಾದೇವಿಯವರಿಗೆ ಪೂಜೆ, ರಾತ್ರಿ 9.30ಕ್ಕೆ ಶ್ರೀ ಕ್ಷೇತ್ರಪಾಲ ಅಜ್ಜಪ್ಪ ದೇವರಿಗೆ ಗುಗ್ಗರಿ ಮುಟಿಗಿ ಪೂಜೆ, ರಾತ್ರಿ 9.45ಕ್ಕೆ ಶ್ರೀ ಮಾತಂಗಿ ದೇವಿಯವರಿಗೆ ಕ್ಷೀರ ಸಮರ್ಪಣೆ, ರಾತ್ರಿ 10.00ಕ್ಕೆ ಪೂಜಾರರಿಗೆ ಗುಗ್ಗರಿ ಮುಟಿಗಿ ಉಡಿ ತುಂಬುವುದು. ನಂತರ ಭಕ್ತಾಧಿಗಳಿಗೆ ಗುಗ್ಗರಿ ಮುಟಿಗಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತವೆ.     ಈ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು.  ಫೆ. 23 ಮಂಗಳವಾರದಂದು  ದೇವಸ್ಥಾನದಲ್ಲಿ ಭಕ್ತಾದಿಗಳ ವಾಹನಗಳಿಗೆ ಪೂಜೆ ಮಾಡಲಾಗುವುದಿಲ್ಲ.  ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ ದೇವಿಯ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ. ಆದ್ದರಿಂದ ಭಕ್ತರು ಸಹಕರಿಸಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Wednesday, 17 February 2016

ಮತ ಚಲಾವಣೆಯೇ ಪ್ರಜಾಪ್ರಭುತ್ವದ ಉಳಿವಿನ ಮಂತ್ರ- ಎಂ. ಕನಗವಲ್ಲಿ

ಕೊಪ್ಪಳ ಫೆ. 17 (ಕರ್ನಾಟಕ ವಾರ್ತೆ): ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ   ಪ್ರತಿಯೊಬ್ಬ ಮತದಾರ, ತನ್ನ ಹಕ್ಕು ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ದೊರಕಿದಂತೆ.  ಈ ನಿಟ್ಟಿನಲ್ಲಿ ಫೆ. 20 ರಂದು ಜರುಗಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
      ಪ್ರಸಕ್ತ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಮತದಾರರು ಮತದಾನ ಮಾಡುವುದು ಕಡ್ಡಾಯವಾಗಿದ್ದು, ಯಾವುದೇ ಅಭ್ಯರ್ಥಿಯ ಪರ ಮತ ನೀಡಲು ಬಯಸಿದ್ದ ಪಕ್ಷದಲ್ಲಿ ‘ನೋಟಾ’ ಕ್ಕೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.      ಮತದಾನ ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆ. ಯಾವುದೇ ಸರ್ಕಾರ ಅಥವಾ ಸ್ಥಳೀಯ ಆಡಳಿತ ರಚನೆಗೆ ಚುನಾವಣೆ ಪ್ರಕ್ರಿಯೆ ಪ್ರಮುಖವಾಗಿದ್ದು, ಅರ್ಹ ಮತದಾರ, ಅದನ್ನು ಚಲಾಯಿಸುವ ಮೂಲಕ ತನ್ನ ಕರ್ತವ್ಯ ನಿರ್ವಹಿಸಬೇಕಿದೆ.  ಪ್ರತಿಯೊಂದು ಮತವೂ ಅತ್ಯಂತ ಮಹತ್ವದ್ದಾಗಿದ್ದು, ನಮ್ಮ ಒಂದು ಮತದಿಂದ ಯಾವುದೇ ಪರಿಣಾಮ ಸಾಧ್ಯವಿಲ್ಲ ಎಂಬ ಮತದಾರರ ನಿರ್ಲಕ್ಷ್ಯ ಮನೋಭಾವ ಬದಲಾಗಬೇಕಿದೆ. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದು ಆದ್ಯ ಕರ್ತವ್ಯ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ದೇಶದ ಪ್ರತಿಯೊಬ್ಬ ನಾಗರಿಕ ತಪ್ಪದೇ ಮತದಾನ ಮಾಡಬೇಕು.   ಪ್ರತಿಯೊಬ್ಬ ಮತದಾರನು ನಿರ್ಭಯದಿಂದ ಮತ ಚಲಾಯಿಸಬೇಕು.  ಜಾತಿ, ಹಣ, ಮತ್ತಿತರ ಆಮಿಷಗಳಿಗೆ ಬಲಿಯಾಗದೇ ಮತ ಚಲಾಯಿಸುತ್ತೇವೆ ಎಂದು ಪ್ರಮಾಣ ಮಾಡಬೇಕು.  ಶೇಕಡವಾರು ಮತದಾನ ಹೆಚ್ಚಾಗುವಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು.
     ಕರ್ನಾಟಕ ಪಂಚಾಯತಿ ರಾಜ್ ಅಧಿನಿಯಮ 1993 ರ ಪ್ರಕರಣ 125 ಮತ್ತು 164 ಕ್ಕೆ ಸಂಬಂಧಿಸಿದಂತೆ ಮತದಾನ ಕಡ್ಡಾಯವಾಗಿರುವುದರಿಂದ, ಪ್ರಸಕ್ತ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಪಂಚಾಯತಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಯು ಮತದಾನ ಮಾಡುವುದು ಕಡ್ಡಾಯವಾಗಿರುತ್ತದೆ.  ಒಂದು ವೇಳೆ ಮತದಾರ ಯಾವುದೇ ಅಭ್ಯರ್ಥಿಯ ಪರವಾಗಿ ಮತ ನೀಡಲು ಬಯಸದಿದ್ದ ಪಕ್ಷದಲ್ಲಿ ತನ್ನ ಮತವನ್ನು ಯಾವುದೇ ಅಭ್ಯರ್ಥಿಯ ಪರವಾಗಿ ನೀಡದೆ, ವಿದ್ಯುನ್ಮಾನ ಮತಯಂತ್ರದ ಕೊನೆಯ ಅಂಕಣದಲ್ಲಿ ನಮೂದಿಸಿರುವ  ‘None of the Above’ (NOTA) ಅಥವಾ ‘ಮೇಲ್ಕಂಡ ಯಾರೂ ಅಲ್ಲ (ಮೇ ಯಾ ಅ) ಗುಂಡಿಯನ್ನು ಒತ್ತುವ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.   ಪ್ರಸಕ್ತ ಚುನಾವಣೆಯಲ್ಲಿ ಎಲ್ಲ ಮತದಾರರು ನಿಯಮಾನುಸಾರ ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಫೆ.22 ರಿಂದ ಕೊಪ್ಪಳ ಕ್ರೀಡಾಶಾಲೆ ಆಯ್ಕೆ ಪ್ರಕ್ರಿಯೆ

ಕೊಪ್ಪಳ, ಫೆ.17 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ವತಿಯಿಂದ 2016-17ನೇ ಸಾಲಿನ ಕೊಪ್ಪಳ ಜಿಲ್ಲಾ ಕ್ರೀಡಾ ಶಾಲೆಯ ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯು ಫೆ.22 ರಿಂದ ಆರಂಭಗೊಳ್ಳಲಿದೆ.
     ಆಯ್ಕೆ ಪ್ರಕ್ರಿಯೆಯು ಫೆ.25 ರವರೆಗೆ ಜಿಲ್ಲೆಯ ನಾಲ್ಕು ತಾಲೂಕುಗಳ ಆಯಾ ತಾಲೂಕಾ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಫೆ.22 ರಂದು ಗಂಗಾವತಿ ತಾಲೂಕಾ ಕ್ರೀಡಾಂಗಣದಲ್ಲಿ, ಫೆ.23 ರಂದು ಯಲಬುರ್ಗಾ ಕ್ರೀಡಾಂಗಣದಲ್ಲಿ, ಫೆ.24 ರಂದು ಕುಷ್ಟಗಿ ತಾಲೂಕು ಕ್ರೀಡಾಂಗಣ ಹಾಗೂ ಫೆ.25 ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 09 ಗಂಟೆಗೆ ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆ ಜರುಗಲಿದೆ.  ಪ್ರಸಕ್ತ ಸಾಲಿನಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಹಾಗೂ 2016-17 ನೇ ಸಾಲಿಗೆ 5ನೇ ತರಗತಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು (ಕಡ್ಡಾಯವಾಗಿ 4ನೇ ತರಗತಿ ಉತ್ತೀರ್ಣರಾಗಿರಬೇಕು) ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆಥ್ಲೆಟಿಕ್ಸ್ ಮತ್ತು ವಾಲಿಬಾಲ್ ಕ್ರೀಡೆಗೆ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಆಯ್ಕೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ತಮ್ಮ ಶಾಲೆಯಿಂದ ಜನ್ಮದಿನಾಂಕದ ದೃಢೀಕರಣ, ವ್ಯಾಸಂಗ ಮಾಡುತ್ತಿರುವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. 2005ರ ಜೂ.01 ರ ನಂತರ ಜನಿಸಿದರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಒಂದು ವೇಳೆ ತಾಲೂಕಾಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದ ಪಕ್ಷಲದಲ್ಲಿ ನೇರವಾಗಿ ಮಾ.01 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುವ ಜಿಲ್ಲಾಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಒಬ್ಬ ವಿದ್ಯಾರ್ಥಿ ಒಂದು ತಾಲೂಕಿನಲ್ಲಿ ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
      ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : 08539-201400 ಅಥವಾ ಇಲಾಖೆಯ ತರಬೇತುದಾರ ಸುರೇಶ ಯಾದವ್ ಮೊ: 9538812141, ತಿಪ್ಪಣ್ಣ ಮಾಳಿ 8746933921 ಅಥವಾ ಮಂಜು ಬಿ.ಇಂದರಗಿ ಮೊ: 7795758059 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಸಾಪ ಚುನಾವಣೆ : ಫೆ.28 ರಂದು ಮತದಾನ, 11 ಮತಗಟ್ಟೆಗಳು

ಕೊಪ್ಪಳ, ಫೆ.17 (ಕರ್ನಾಟಕ ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಫೆ.28 ರಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಜಿಲ್ಲೆಯ 11 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ.
     ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಈ ಚುನಾವಣೆಯಲ್ಲಿ ಅಂತಿಮವಾಗಿ ಅಜಮೀರ ನಂದಾಪುರ, ಗವಿಸಿದ್ದಪ್ಪ ಶೇಖರಪ್ಪ ಗೋನಾಳ, ಸಿ.ಹೆಚ್. ನಾರಿಹಾಳ, ರಾಜಶೇಖರ ಅಂಗಡಿ, ಶಿವಾನಂದ ವಿ.ಮೇಟಿ ಸೇರಿದಂತೆ ಒಟ್ಟು ಐದು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತಗಟ್ಟೆಗಳ ವಿವರ :  ಕೊಪ್ಪಳ ತಾಲೂಕಿನಲ್ಲಿ ತಹಶೀಲ್ದಾರ ಕಛೇರಿ ಕೊಪ್ಪಳ, ಅಳವಂಡಿ ಗ್ರಾಮ ಪಂಚಾಯತ್ ಕಛೇರಿ, ಕುಷ್ಟಗಿ ತಾಲೂಕಿನಲ್ಲಿ ತಹಶೀಲ್ದಾರ ಕಛೇರಿ ಕುಷ್ಟಗಿ, ಗಂಗಾವತಿ ತಾಲೂಕಿನಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಗಂಗಾವತಿ, ಗ್ರಾಮ ಪಂಚಾಯತ್ ಕಛೇರಿ ಮರಳಿ, ಗ್ರಾಮ ಪಂಚಾಯತ್ ಕಛೇರಿ ವೆಂಕಟಗಿರಿ, ಗ್ರಾಮ ಪಂಚಾಯತ್ ಕಛೇರಿ ಸಿದ್ದಾಪೂರ, ಪುರಸಭೆ ಕಛೇರಿ ಕಾರಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ತಹಶೀಲ್ದಾರ ಕಾರ್ಯಾಲಯ, ಯಲಬುರ್ಗಾ. ನಾಡಕಛೇರಿ ಮಂಗಳೂರು, ಪಟ್ಟಣ ಪಂಚಾಯತ್ ಕಛೇರಿ ಕುಕನೂರು ಸೇರಿದಂತೆ ಕೊಪ್ಪಳ ಜಿಲ್ಲಾದ್ಯಾಂತ ಒಟ್ಟು 11 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 
     ಮತದಾನ ಮುಗಿದ ಬಳಿಕ ಅದೇ ದಿನ ಸಂಜೆ 04 ಗಂಟೆಯ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ.  ಸಂಬಂಧಪಟ್ಟ ಮತದಾರರು ತಪ್ಪದೇ ಮತ ಚಲಾಯಿಸಿ, ಕೊಪ್ಪಳ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆಗೊಳಿಸಲು ಸಹಕರಿಸುವಂತೆ ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಚುನಾವಣಾಧಿಕಾರಿಗಳಾದ ಕೊಪ್ಪಳ ತಹಶೀಲ್ದಾರ ಪುಟ್ಟರಾಮಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. 20 ರಂದು ಮತದಾನ : ಸಾರ್ವತ್ರಿಕ ರಜೆ ಘೋಷಣೆ

ಕೊಪ್ಪಳ ಫೆ. 17 (ಕರ್ನಾಟಕ ವಾರ್ತೆ): ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಫೆ. 20 ರಂದು ಮತದಾನ ನಡೆಯಲಿದ್ದು, ಮತದಾನ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಪ್ರದೇಶಗಳನ್ನು ಹೊರತುಪಡಿಸಿ, ಕೇವಲ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಕಾರ್ಖಾನೆ, ಕೈಗಾರಿಕಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ) ಸೀಮಿತಗೊಳಿಸಿ ಸರ್ಕಾರವು ಫೆ. 20 ರಂದು ವೇತನ ಸಹಿತ ಸಾರ್ವತ್ರಿಕ ರಜೆ ಘೋಷಿಸಿದೆ.  ಈ ರಜೆಯು ತುರ್ತು ಸೇವೆಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Tuesday, 16 February 2016

ಮಾ. 05 ರಂದು ವಚನಕಾರರು, ಮಾ. 11 ರಂದು ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ


ಕೊಪ್ಪಳ ಫೆ. 16 (ಕರ್ನಾಟಕ ವಾರ್ತೆ):  ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆ ನಿಮಿತ್ಯ ಫೆ. 19 ರಂದು ನಡೆಯಬೇಕಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಮಾ. 11 ರಂದು ಹಾಗೂ ಫೆ. 20 ರಂದು ನಡೆಯಬೇಕಿದ್ದ ಕವಿ ಸರ್ವಜ್ಞ ಮತ್ತು ದಲಿತ ವಚನಕಾರರ ಜಯಂತಿಯನ್ನು ಮಾ. 05 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.
     ಛತ್ರಪತಿ ಶಿವಾಜಿ ಮಹಾರಾಜರು, ಕವಿ ಸರ್ವಜ್ಞ ಹಾಗೂ ದಲಿತ ವಚನಕಾರರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಭಾರತದಲ್ಲಿ ಸ್ವರಾಜ್ಯದ ಕಲ್ಪನೆಯನ್ನು ಹುಟ್ಟುಹಾಕಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆ. 19 ರಂದು ಸರ್ಕಾರಿ ಕಾರ್ಯಕ್ರಮವನ್ನು ಆಚರಿಸಬೇಕಾಗಿದೆ. ಅದೇ ರೀತಿ ತ್ರಿಪದಿ ಕವಿ ಸರ್ವಜ್ಞ ಹಾಗೂ ದಲಿತ ವಚನಕಾರರ ಜಯಂತಿಯನ್ನು ಫೆ. 20 ರಂದು ಆಚರಿಸಬೇಕಿದೆ.  ಆದರೆ ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆ ಜಿಲ್ಲೆಯಲ್ಲಿ ಜರುಗುತ್ತಿದ್ದು, ಫೆ. 19 ರಂದು ಚುನಾವಣೆಯ ಮಸ್ಟರಿಂಗ್ ಕಾರ್ಯ ನಡೆಯಲಿದೆ.  ಅಲ್ಲದೆ ಫೆ. 20 ರಂದು ಚುನಾವಣೆ ನಿಮಿತ್ಯ ಜಿಲ್ಲೆಯಾದ್ಯಂತ ಮತದಾನ ನಡೆಯಲಿದೆ.  ಎಲ್ಲ ಅಧಿಕಾರಿ, ಸಿಬ್ಬಂದಿಗಳು ಸದ್ಯ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು, ಮಹನೀಯರ ಜಯಂತಿ ಆಚರಣೆಯಲ್ಲಿ ಅಧಿಕಾರಿ, ಸಿಬ್ಬಂದಿಗಳನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.   ಮಹನೀಯರ ತತ್ವ ಸಂದೇಶಗಳನ್ನು ಹಾಗೂ ಅವರ ಸಾಧನೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು ಹಾಗೂ ಅರಿವು ಮೂಡಿಸುವುದೇ ಜಯಂತಿ ಆಚರಣೆಯ ಉದ್ದೇಶವಾಗಿದೆ.  ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ತೊಡಗಿಕೊಳ್ಳುವುದು ಅವಶ್ಯವಾಗಿರುವುದರಿಂದ, ಸಮಾಜದ ಮುಖಂಡರು ಹಾಗೂ ಗಣ್ಯರ ಸಲಹೆಯಂತೆ ಮಹನೀಯರ ಜಯಂತಿಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ತಿಳಿಸಿದರು.
ಕವಿ ಸರ್ವಜ್ಞ ಹಾಗೂ ದಲಿತ ವಚನಕಾರರ ಜಯಂತಿ : ತ್ರಿಪದಿ ಕವಿ ಸರ್ವಜ್ಞ ಹಾಗೂ ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರ ಜಯಂತಿಯನ್ನು ಫೆ. 20 ರ ಬದಲಿಗೆ ಮಾ. 05 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುವುದು.  ಎಲ್ಲ ಮಹನೀಯರ ವಚನಗಳ ಮಹತ್ವವನ್ನು ವಿದ್ಯಾರ್ಥಿ ಸಮುದಾಯಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗುವುದು.  ಜಯಂತಿ ಆಚರಣೆ ನಿಮಿತ್ಯ ಮಾ. 05 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಗವಿಮಠ ಆವರಣದಿಂದ ಮಹನೀಯರ ಭಾವಚಿತ್ರದೊಂದಿಗೆ ಮೆರವಣಿಗೆಯು ಪ್ರಾರಂಭವಾಗಲಿದೆ.  ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ.  ವೇದಿಕೆ ಸಮಾರಂಭವು ಅಂದು ಸಂಜೆ 04 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗುವುದು.  ಸಮಾರಂಭದಲ್ಲಿ ವಚನಕಾರರ ಕುರಿತು ವಿಶೇಷ ಉಪನ್ಯಾಸ ಹಾಗೂ ವಚನಗಾಯನ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ತಂಡಕ್ಕೆ ಸಮಾರಂಭದಲ್ಲಿ ಸಮೂಹ ವಚನಗಾಯನಕ್ಕೆ ಅವಕಾಶ ಕಲ್ಪಿಸಿ, ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು.
ಛತ್ರಪತಿ ಶಿವಾಜಿ ಜಯಂತಿ : ಭಾರತದಲ್ಲಿ ಸ್ವರಾಜ್ಯದ ಕಲ್ಪನೆಯನ್ನು ಹುಟ್ಟುಹಾಕಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯನ್ನು ಫೆ. 19 ರ ಬದಲಿಗೆ ಮಾ. 11 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗುವುದು.  ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಸಮಾರಂಭ ಜರುಗಲಿದ್ದು, ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನಡೆಯಲಿದ್ದು, ಶಿವಾಜಿ ಅವರ ಕುರಿತು ಕಿರು ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.    ಜಯಂತಿ ಅಂಗವಾಗಿ ಅಂದು ಸಂಜೆ 04 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದೊಂದಿಗೆ ಮೆರವಣಿಗೆ ಸಾಹಿತ್ಯ ಭವನದಿಂದ ಹೊರಟು, ನಗರದ ತುಳಜಾ ಭವಾನಿ ದೇವಸ್ಥಾನದವರೆಗೆ ಸಾಗಿಬರಲಿದೆ.  ಮೆರವಣಿಗೆಯಲ್ಲಿ ವಿಶೇಷ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ತಿಳಿಸಿದರು.
     ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ, ಹೆಚ್.ಎಸ್. ಪಾಟೀಲ್, ಅಲ್ಲಮಪ್ರಭು ಬೆಟ್ಟದೂರ, ಗಣ್ಯರಾದ ಮಾರುತಿ ನಿಕ್ಕಂ, ಡಾ. ಜ್ಞಾನಸುಂದರ್, ಶಿವಾನಂದ ಹೊದ್ಲೂರ್ ಮುಂತಾದವರು ಭಾಗವಹಸಿ, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಮಾಹಿತಿ ನೀಡಲು ಮನವಿ

ಕೊಪ್ಪಳ ಫೆ. 16 (ಕರ್ನಾಟಕ ವಾರ್ತೆ): ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ, ಸಾರ್ವಜನಿಕರು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದ್ದಾರೆ.
     ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟಿನಿಟ್ಟಾಗಿ ಅನುಷ್ಠಾನಗೊಳಿಸಲು ತಾಲೂಕುವಾರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ.  ಕೊಪ್ಪಳ ತಾಲೂಕಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್- 9980807199 ಅವರನ್ನು ನೇಮಿಸಲಾಗಿದೆ.  ಗಂಗಾವತಿ ತಾಲೂಕು : ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್- 7259005610.  ಕುಷ್ಟಗಿ ತಾಲೂಕು : ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಲ್ಲೇಶ್- 9481099256.  ಯಲಬುರ್ಗಾ ತಾಲೂಕಿಗೆ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಮುನಿಯಪ್ಪ- 9448634079.
     ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ, ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ದೂರವಾಣಿ ಅಥವಾ ವಾಟ್ಸ್ ಅಪ್ ಮುಖಾಂತರ ಗಮನಕ್ಕೆ ತಂದು, ಚುನಾವಣೆಯನ್ನು ಮುಕ್ತ, ಶಾಂತ ರೀತಿಯಿಂದ ಹಾಗೂ ನಿಸ್ಪಕ್ಷಪಾತವಾಗಿ ಕೈಗೊಳ್ಳಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಚುನಾವಣೆ : ಬಹಿರಂಗ ಪ್ರಚಾರಾವಧಿ ಮುಗಿದ ಬಳಿಕ ಸಭೆ, ಮೆರವಣಿಗೆಗೆ ನಿರ್ಬಂಧ

ಕೊಪ್ಪಳ, ಫೆ.15 (ಕರ್ನಾಟಕ ವಾರ್ತೆ): ಜಿಲ್ಲಾ ಮತ್ತು ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಬಹಿರಂಗ ಪ್ರಚಾರದ ಸಮಯ ಮುಕ್ತಾಯಗೊಂಡ ನಂತರ, ಅಂದರೆ ಫೆ. 18 ರ ಬೆಳಿಗ್ಗೆ 07 ಗಂಟೆಯ ಬಳಿಕ ಯಾವುದೇ ಸಭೆ, ಮೆರವಣಿಗೆ ನಡೆಸುವುದನ್ನು ನಿರ್ಬಂಧಿಸಿ, ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆರ್.ಚಂದ್ರಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
       ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಚುನಾವಣೆ ನಿಮಿತ್ಯ ಫೆ.20 ರಂದು ಮತದಾನ ಜರುಗಲಿದ್ದು, ಚುನಾವಣಾ ಬಹಿರಂಗ ಪ್ರಚಾರದ ಸಮಯ ಮುಕ್ತಾಯವಾದ ನಂತರ, ಕರ್ನಾಟಕ ಪಂಚಾಯತ್‍ರಾಜ್ ಅಧಿನಿಯಮ, 1993 ರ ಪ್ರಕರಣ 35 ರಂತೆ ಮತದಾನವು ಪ್ರಾರಂಭವಾಗುವ ಸಮಯಕ್ಕೆ ಮುಂಚೆ 48 ಗಂಟೆಯೊಳಗೆ ಮತ್ತು ಮತದಾನ ನಡೆಯುವ ದಿನದಂದು  ಯಾವುದೇ ಸಾರ್ವಜನಿಕ ಸಭೆ, ಮೆರವಣಿಗೆಯನ್ನು ನಡೆಸುವಂತಿಲ್ಲ ಹಾಗೂ ಪ್ರಕರಣ 26 ರಂತೆ ಯಾವುದೇ ವ್ಯಕ್ತಿಯು ಮತದಾನ ನಡೆಯುವ ದಿನದಂದು ಮತದಾನ ಕೇಂದ್ರವನ್ನೊಳಗೊಂಡಂತೆ ಮತದಾನ ಕೇಂದ್ರದಿಂದ ನೂರು ಮೀಟರುಗಳ ಅಂತರದೊಳಗೆ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮತಗಳಿಗಾಗಿ ಪ್ರಚಾರ ಮಾಡುವುದು, ಯಾವುದೇ ಮತದಾರರ ಮತವನ್ನು ಕೋರುವುದು, ಯಾವುದೇ ನಿರ್ದಿಷ್ಟ ಅಭ್ಯರ್ಥಿಗಳಿಗೆ ಮತ ನೀಡುವಂತೆ ಅಥವಾ ನೀಡದಂತೆ ಯಾವುದೇ ಮತದಾರನ ಮನವೊಲಿಸಲು ಯತ್ನಿಸುವುದು, ಯಾವುದೇ ನೋಟೀಸು (ಚುನಾವಣೆಗೆ ಸಂಬಂಧಿಸಿದ ಅಧಿಕೃತ ನೋಟೀಸಿನ ಹೊರತು) ಅಥವಾ ಚಿಹ್ನೆಯನ್ನು ಪ್ರದರ್ಶಿಸುವುದು ಇತ್ಯಾದಿ ಕಾರ್ಯಗಳನ್ನು ಮಾಡುವಂತಿಲ್ಲ.
     ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಬೆಂಬಲಕ್ಕಾಗಿ ಪಂಚಾಯತಿ ವ್ಯಾಪ್ತಿಯ ಹೊರಗಿನಿಂದ ಚುನಾವಣಾ ಪ್ರಚಾರಕ್ಕಾಗಿ ತಾರಾ ಪ್ರಚಾರಕರು ಮತ್ತು ಇತರೆ ವ್ಯಕ್ತಿಗಳನ್ನು ಕರೆಯಿಸಿಕೊಂಡಿದ್ದಲ್ಲಿ ಅಂತಹ ವ್ಯಕ್ತಿಗಳು, ಮತದಾನ ಪ್ರಾರಂಭವಾಗುವ 48 ಗಂಟೆಗಳ ಮುಂಚೆ, ಅಂದರೆ, ಫೆ.18 ರ ಬೆಳಿಗ್ಗೆ 07 ಗಂಟೆಗೆ ಮುಕ್ತಾಯಗೊಳ್ಳುವ ಚುನಾವಣಾ ಬಹಿರಂಗ ಪ್ರಚಾರ ಸಮಯದ ನಂತರ, ಆ ಪಂಚಾಯತಿ ವ್ಯಾಪ್ತಿಯಲ್ಲಿ ಇರುವಂತಿಲ್ಲ. 
     ಫೆ.18 ರ ಸಂಜೆ 06 ಗಂಟೆಯ ನಂತರ ಮತದಾರರಲ್ಲದ ಬೆಂಬಲಿಗರು, ರಾಜಕೀಯ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು, ಪಕ್ಷದ ಕಾರ್ಯಕರ್ತರು, ಮೆರವಣಿಗೆ ಕಾರ್ಯ ನಿರ್ವಹಿಸುವವರು, ಪ್ರಚಾರ ಕಾರ್ಯ ನಿರ್ವಹಿಸುವವರು ಇತ್ಯಾದಿ ಆ ಪಂಚಾಯತಿ ವ್ಯಾಪ್ತಿಯಲ್ಲಿ ತಮ್ಮ ವಾಸ್ತವ್ಯ ಮುಂದುವರೆಸುವಂತಿಲ್ಲ.  ತಾಲೂಕಾ ಮತ್ತು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪ, ಸಮುದಾಯ ಭವನ, ಪ್ರವಾಸಿಗರ ವಸತಿ ಗೃಹಗಳಲ್ಲಿ ಮತ್ತು ಪ್ರವಾಸ ಮಂದಿರದಲ್ಲಿ ಆ ಪಂಚಾಯತಿ ವ್ಯಾಪ್ತಿಗೆ ಒಳಪಡದ ವ್ಯಕ್ತಿಗಳ ಇರುವಿಕೆಯ ಬಗ್ಗೆ ಪರಿಶೀಲಿಸಿ ನಿಗಾವಹಿಸಲಾಗುವುದು. ಪಂಚಾಯತಿ ವ್ಯಾಪ್ತಿಯ ಗಡಿಯಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ ವಾಹನಗಳು ಹಾಗೂ ಜನರ ಸಂಚಾರದ ಮೇಲೆ ನಿಗಾ ವಹಿಸಲಾಗುವುದು. ಯಾವುದೇ ರೀತಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆರ್.ಚಂದ್ರಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಬಹಿರಂಗ ಪ್ರಚಾರಾವಧಿ ಮುಗಿದ ಬಳಿಕ ಜಾಹೀರಾತು ಪ್ರಸಾರಕ್ಕೆ ನಿಷೇಧ

ಕೊಪ್ಪಳ, ಫೆ.15 (ಕರ್ನಾಟಕ ವಾರ್ತೆ): ಜಿಲ್ಲಾ ಮತ್ತು ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಬಹಿರಂಗ ಪ್ರಚಾರ ಫೆ. 18 ರಂದು ಬೆಳಿಗ್ಗೆ 07 ಗಂಟೆಗೆ ಮುಕ್ತಾಯವಾಗಲಿದ್ದು, ಇದರ ಬಳಿಕ ಪತ್ರಿಕೆ, ಟಿ.ವಿ., ರೇಡಿಯೋ ಸೇರಿದಂತೆ ಯಾವುದೇ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವುದನ್ನು ನಿಷೇಧಿಸಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆರ್.ಚಂದ್ರಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
       ಜಿಲ್ಲಾ ಮತ್ತು ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಿಗೆ  ಫೆ.20 ರಂದು ಮತದಾನ ನಡೆಯಲಿದ್ದು, ಚುನಾವಣಾ ಬಹಿರಂಗ ಪ್ರಚಾರವು ಮತದಾನ ಪ್ರಾರಂಭವಾಗುವ 48 ಗಂಟೆಗಳ ಮುಂಚೆ ಅಂದರೆ, ಫೆ.18 ರಂದು ಬೆಳಿಗ್ಗೆ 07 ಗಂಟೆಗೆ ಮುಕ್ತಾಯಗೊಳ್ಳಲಿದೆ. ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಈ ಸಂಬಂಧ ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಯಾರೇ ಇತರರು ಚುನಾವಣಾ ಪ್ರಚಾರದ ಸಮಯದ ನಂತರ ಯಾವುದೇ ವಿಧದಲ್ಲಿ ಬಹಿರಂಗ ಚುನಾವಣೆ ಪ್ರಚಾರ ನಡೆಸುವಂತಿಲ್ಲ.   ರಾಜ್ಯ ಚುನಾವಣಾ ಆಯೊಗವು ಸಂವಿಧಾನದ ಅನುಚ್ಛೇದ 243 ಕೆ ರನ್ವಯ ಮತದಾನ ಪ್ರಾರಂಭಕ್ಕೆ ನಿಗದಿಪಡಿಸಿದ ಸಮಯದ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಯಾರೇ ಆಗಲಿ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ.
     ಈ ಆದೇಶದನ್ವಯ, ಮತದಾನ ಪ್ರಾರಂಭಕ್ಕೆ ನಿಗದಿಪಡಿಸಿರುವ ಸಮಯದ ಹಿಂದಿನ 48 ಗಂಟೆಗಳ ಅವಧಿಯಲ್ಲಿ  ಯಾವುದೇ ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಯಾರೇ ಆಗಲಿ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕ ಸಭೆ, ಸಮಾರಂಭ, ಮೆರವಣಿಗೆ ಇತ್ಯಾದಿಗಳನ್ನು ನಡೆಸುವಂತಿಲ್ಲ. ಮತದಾರರಿಗೆ ಮೊಬೈಲ್‍ನಲ್ಲಿ ಎಸ್.ಎಂ.ಎಸ್, ಎಂ.ಎಂ.ಎಸ್, ವಾಟ್ಸಪ್, ಎಫ್.ಎಂ ರೇಡಿಯೋ, ಟಿ.ವಿ ಚಾನೆಲ್ ಇನ್ನಿತರೆ ದೃಶ್ಯ, ಶ್ರವಣ ಮತ್ತು ಪತ್ರಿಕೆಗಳು ಇತ್ಯಾದಿ ಮೂಲಕ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಮತದಾರರಿಗೆ ವಿಡಿಯೋ ಕ್ಲಿಪ್ಪಿಂಗ್ಸ್ ಪ್ರದರ್ಶಿಸುವಂತಿಲ್ಲ. ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ.  ಮೇಲ್ಕಂಡ ಅಂಶಗಳ ಉಲ್ಲಂಘನೆಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 ರ ಪ್ರಕರಣ 126 ಹಾಗೂ ಭಾರತೀಯ ದಂಡ ಸಂಹಿತೆಯ ಪ್ರಕರಣ 171 ರಡಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆರ್.ಚಂದ್ರಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಯಲಬುರ್ಗಾ : ವಿವಿಧ ಪರವಾನಿಗೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ

ಕೊಪ್ಪಳ, ಫೆ.15 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಪಟ್ಟಣ ಪಂಚಾಯತ್ ಕಾರ್ಯಾಲಯ, ಯಲಬುರ್ಗಾ ಇವರ ಪೌರ ಸುಧಾರಣಾ ಕೋಶದ ವತಿಯಿಂದ ನಾಲ್ಕು ಆನ್‍ಲೈನ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ, ಆನ್‍ಲೈನ್‍ಗೊಳಿಸಲಾಗಿದ್ದು, ಕಾರ್ಯಾಲಯದ ವ್ಯಾಪ್ತಿಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಖ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
     ಪೌರ ಸುಧಾರಣಾ ಕೋಶದ ವತಿಯಿಂದ ಕಟ್ಟಡ ಪರವಾನಿಗೆ, ಉದ್ದಿಮೆ ಪರವಾನಿಗೆ, ಜನಹಿತ ಹಾಗೂ ಜಲನಿಧಿ ಎಂಬ ನಾಲ್ಕು ಸಾಫ್ಟ್‍ವೇರ್‍ಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಮೇಲ್ಕಾಣಿಸಿದ ನಾಲ್ಕು ಯೋಜನೆಗಳಿಗೆ ಸಂಬಂಧಿಸಿದಂತೆ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸಂಬಂಧಿಸಿದ ಅರ್ಜಿಗಳನ್ನು ನೇರವಾಗಿ ಆನ್‍ಲೈನ್ ಮೂಲಕ ಸಲ್ಲಿಸಲು ಅವಕಾಶವಿದೆ.  ಈ ಕೆಳಕಾಣಿಸಿದ ವೆಬ್‍ಸೈಟ್‍ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಿದ ಬಳಿಕ, ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಯ ಸ್ಥಿತಿಯು ಸ್ವಯಂಚಾಲಿತವಾಗಿ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ರವಾನೆಯಾಗುತ್ತದೆ ಹಾಗೂ ಅರ್ಜಿಯ ಹಂತವನ್ನು ಮೊಬೈಲ್‍ನಲ್ಲಿಯೇ ವೀಕ್ಷಿಸಿಕೊಳ್ಳಬಹುದಾಗಿದೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿವರ ಈ ಕೆಳಗಿನಿಂತಿದೆ :
ಕಟ್ಟಡ ಪರವಾನಿಗೆಗಾಗಿ ಕೋರುವ ಅರ್ಜಿಗಳನ್ನು  http://www.mrc.gov.in/BPA/welcome.htm  ನಲ್ಲಿ. ಉದ್ದಿಮೆ ಪರವಾನಿಗೆಗೆ ಕೋರುವ ಅರ್ಜಿಗಳನ್ನು  http://www.mrc.gov.in/TradeLicense/login ನಲ್ಲಿ, ಚರಂಡಿ ಸ್ವಚ್ಛತೆ, ನೀರು ಸರಬರಾಜು, ವಿದ್ಯುತ್ ದೀಪ ದುರಸ್ತಿ ಇನ್ನಿತರೆ ದೂರುಗಳ ಕುರಿತ ಜನಹಿತ ಅರ್ಜಿಗಳನ್ನು   http://www.mrc.gov.in/janahita/login ನಲ್ಲಿ ಹಾಗೂ ಕುಡಿಯುವ ನೀರಿನ ನಳ ಸಂಪರ್ಕ, ಯು.ಜಿ.ಡಿ ಕನೆಕ್ಷನ್‍ಗೆ ಸಂಬಂಧಿಸಿದ ಅರ್ಜಿಗಳನ್ನು http://www.mrc.gov.in/jalanidhi/login ವೆಬ್‍ಸೈಟ್‍ನಲ್ಲಿ ದಾಖಲಿಸಬಹುದಾಗಿದೆ. 
     ಯಲಬುರ್ಗಾ ಪಟ್ಟಣದ ಸಮಸ್ತ ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಿ, ಈ ತಂತ್ರಾಂಶಗಳ ಸದುಪಯೋಗ ಪಡೆದುಕೊಳ್ಳುವಂತೆ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Monday, 15 February 2016

ಚುನಾವಣೆ : ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ

ಕೊಪ್ಪಳ, ಫೆ.15 (ಕರ್ನಾಟಕ ವಾರ್ತೆ): ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಫೆ. 20 ರಂದು ಮತದಾನ ನಡೆಯಲಿದ್ದು, ಫೆ.23 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಪ್ರಕಾರ ಕೊಪ್ಪಳ ಜಿಲ್ಲೆಯ ಎಲ್ಲ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳನ್ನೊಳಗೊಂಡಂತೆ, ಮತದಾನದ ನಿಮಿತ್ಯ ಫೆ.18 ರ ರಾತ್ರಿ 12 ಗಂಟೆಯಿಂದ ಫೆ.20 ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ನಿಮಿತ್ಯ ಫೆ.22 ರ ರಾತ್ರಿ 10 ಗಂಟೆಯಿಂದ ಫೆ.23 ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ವೈನ್ ಶಾಪ್, ಬಾರ್, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
     ಈ ಸಂಬಂಧ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ. ಅಲ್ಲದೆ, ಆದೇಶವನ್ನು ಜಾರಿಗೆ ತರುವಲ್ಲಿ ನಿರ್ಲಕ್ಷ್ಯತನ ತೋರಿದವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಛತ್ರಪತಿ ಶಿವಾಜಿ ಹಾಗು ವಚನಕಾರರ ಜಯಂತಿ : ಫೆ. 16 ರಂದು ಪೂರ್ವಭಾವಿ ಸಭೆ

ಕೊಪ್ಪಳ, ಫೆ.15 (ಕರ್ನಾಟಕ ವಾರ್ತೆ): ಛತ್ರಪತಿ ಶಿವಾಜಿ ಮಹಾರಾಜರು, ಕವಿ ಸರ್ವಜ್ಞ ಹಾಗೂ ದಲಿತ ವಚನಕಾರರ ಜಯಂತಿಯನ್ನು ಆಚರಿಸುವುದಕ್ಕೆ ಸಂಬಂಧಿಸಿದಂತೆ ಫೆ. 16 ರಂದು ಬೆಳಿಗ್ಗೆ 11-30 ಗಂಟೆಗೆ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
     ಪೂರ್ವಭಾವಿ ಸಭೆಗೆ ಎಲ್ಲ ಸಮಾಜದ ಮುಖಂಡರು, ಗಣ್ಯರು, ಸಾರ್ವಜನಿಕರು ಆಗಮಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಸ್ತಕ ಬಹುಮಾನ : ಜಾನಪದ ಕೃತಿಗಳ ಆಹ್ವಾನ

ಕೊಪ್ಪಳ, ಫೆ.15 (ಕರ್ನಾಟಕ ವಾರ್ತೆ): ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ 2015ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿಗಳನ್ನು ಆಹ್ವಾನಿಸಲಾಗಿದೆ.
     ಯೋಜನೆಯಡಿ 2015ರ ಜ.01 ರಿಂದ ಡಿ.31 ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ ಕನಿಷ್ಠ 150 ಪುಟಗಳ ಮಿತಿಯಲ್ಲಿರುವ, ಜಾನಪದ ಗದ್ಯ, ಪದ್ಯ ವಿಚಾರ-ವಿಮರ್ಶೆ, ಸಂಶೋಧನೆ ಹಾಗೂ ಸಂಕೀರ್ಣ ಈ ನಾಲ್ಕು ಪ್ರಕಾರ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡಲಾಗುವುದು. ಕೃತಿಗಳನ್ನು ಸಲ್ಲಿಸಲಿಚ್ಛಿಸುವ ಲೇಖಕರು/ ಪ್ರಕಾಶಕರು/ ಸಂಪಾದಕರು ಜಾನಪದಕ್ಕೆ ಸಂಬಂಧಿಸಿದ ನಾಲ್ಕು ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಫೆ.29 ರೊಳಗೆ ಖುದ್ದಾಗಿ, ಕೋರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ: 080-22215509 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಹೆಚ್. ಶಿವರುದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡದವರಿಗೆ ಫೆಲೋಷಿಪ್ : ಅರ್ಜಿ ಆಹ್ವಾನ

ಕೊಪ್ಪಳ, ಫೆ.15 (ಕರ್ನಾಟಕ ವಾರ್ತೆ): ಕರ್ನಾಟಕ ಜಾನಪದ ಅಕಾಡೆಮಿ ಇವರ ವತಿಯಿಂದ ಜಾನಪದ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಅಥವಾ ಅಧ್ಯಯನ ಮಾಡುವ ಸಲುವಾಗಿ ಪರಿಶಿಷ್ಟ ಪಂಗಡದ ಕಲಾವಿದರೂ ಸೇರಿದಂತೆ ಆಸಕ್ತರಿಗೆ ಫೆಲೋಷಿಪ್ ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಒಟ್ಟು 10 ಫೆಲೋಷಿಪ್‍ಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅಧ್ಯಯನದ ಅವಧಿಯು ಎಂಟು ತಿಂಗಳಾಗಿದ್ದು, ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿಯೆ ಸಂದರ್ಶನಕ್ಕೆ ಬರಬೇಕು. ಆಯ್ಕೆಯಾದ ತಲಾ ಅಭ್ಯರ್ಥಿಗಳಿಗೆ 70,000 ರೂ.ಗಳ ಸಂಶೋಧನಾ ನೆರವನ್ನು 3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಅಕಾಡೆಮಿ ಸೂಚಿಸುವ ಜನಪದ ಕಾವ್ಯ ಮೀಮಾಂಸೆಯ ಪ್ರಾಥಮಿಕ ಕಲ್ಪನೆಗಳು, ಕೊರಗರ ಡೋಲು ಕುಣಿತ, ಕಾಡ್ಯಾನಾಟ/ಪಾಣಾರಾಟ/ನಾಗಮಂಡಲ, ಮೊಹರಂ ಪದಗಳು, ಜಾನಪದ ಮತ್ತು ರಾಷ್ಟ್ರೀಯವಾದ-ಸಂಬಂಧ ಸ್ವರೂಪ, ಸೋಲಿಗರ ಆಚರಣೆ ಜಗತ್ತು, ಜೇನು ಕುರುಬರು ಹಬ್ಬದಾಚರಣೆಗಳು, ಯೆರವರ ಪದಗಳು, ಹಸಲರ ಪದಗಳು, ಸಿದ್ಧಿ ಆಚರಣೆಗಳು ವಿಷಯಗಳ ಬಗ್ಗೆ ಅಧ್ಯಯನ ಮಾಡಲಿಚ್ಛಿಸುವವರು ತಮ್ಮ ವಿವರಗಳನ್ನು ಫೆ.25 ರೊಳಗಾಗಿ ಅಕಾಡೆಮಿಗೆ ಕಳುಹಿಸಿಕೊಡಬಹುದಾಗಿದೆ. ಸಂಶೋಧಕರು ಯೋಜನೆಯ ಕೊನೆಗೆ ಸುಮಾರು 100 ರಿಂದ 150 ಪುಟಗಳ ಡಿ.ಟಿ.ಪಿ ಮಾಡಿದ ಹಸ್ತಪ್ರತಿಯನ್ನು ಹಾಗೂ ಇದಕ್ಕೆ ಸಂಬಂಧಿಸಿದ ವಿಷಯಗಳನ್ನು ಸಿ.ಡಿ ಗೆ ಅಳವಡಿಸಿ, ಅಕಾಡೆಮಿಗೆ ಒಪ್ಪಿಸಬೇಕು. ನಂತರ ಪರಿಶೀಲಿಸಿ ಅಕಾಡೆಮಿಯಿಂದ ಪುಸ್ತಕ ಪ್ರಕಟಣೆ ಮಾಡಲಾಗುವುದು.
     ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002, ದೂರವಾಣಿ ಸಂಖ್ಯೆ: 22215509 ಇವರನ್ನು ಸಂಪರ್ಕಿಸಬಹುದಾಗಿದ್ದು, ಅರ್ಜಿಗಳನ್ನು ಖುದ್ದಾಗಿ ಅಂಚೆ ಮೂಲಕವೂ ಪಡೆಯಬಹುದಾಗಿದೆ ಅಥವಾ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಿಂದಲೂ ಸಹ ಪಡೆಯಬಹುದಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಹೆಚ್.ಶಿವರುದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಿವು ಯೋಜನೆಯ ಲಾಭ ಪಡೆಯಲು ಸಿಇಓ ರಾಮಚಂದ್ರನ್ ಕರೆ


ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುವ ಅರಿವು ಯೋಜನೆಯು  ಅಲ್ಪಸಂಖ್ಯಾತರ ಮಕ್ಕಳಿಗೆ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ವರದಾನವಾಗಿದ್ದು, ವಿದ್ಯಾರ್ಥಿಗಳು ಈ ಯೋಜನೆ ಲಾಭ ಪಡೆಯುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಕರೆ ನೀಡಿದರು.

     ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಅರಿವು ಯೋಜನೆಯ ಬಗ್ಗೆ ಅಲ್ಪಸಂಖ್ಯಾತರ ಸಮುದಾಯಕ್ಕೆ ಜಾಗೃತಿ ಮೂಡಿಸಲು ನಗರದ ಹಿಂದಿ ಬಿ.ಇಡಿ ಕಾಲೇಜಿನಲ್ಲಿ ಸೋಮವಾರದಂದು ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಅರಿವು ಯೋಜನೆಯು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವ  ಯೋಜನೆ ಇದು.  ಸಿಇಟಿ ಪರೀಕ್ಷೆ ಮೂಲಕ ಮುಂದಿನ ವೃತ್ತಿ ಆಧಾರಿತ ಕೋರ್ಸಗಳಿಗೆ ದಾಖಲಾತಿ ಪಡೆಯಲು ವಿದ್ಯಾರ್ಥಿಗಳಿಗೆ ಅರಿವು  ಯೋಜನೆಯು ಬಹಳಷ್ಟು ಸಹಕಾರಿಯಾಗಿದೆ.  ಇದೊಂದು ಶೈಕ್ಷಣಿಕ ನೇರ ಸಾಲ ಯೋಜನೆಯಾಗಿದ್ದು, ಈ ಯೋಜನೆಯ ಸರಿಯಾದ ಲಾಭ ಪಡೆದುಕೊಳ್ಳಬೇಕು ಎಂದು  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ .ಆರ್ ಅವರು ಕರೆ ನೀಡಿದರು.  

     ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕೀರ್ ಹುಸೇನ್ ಕುಕನೂರ, ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ ಇರುವ   ಇರುವ ನಾನಾ ಯೋಜನೆಗಳ ಕುರಿತು ವಿವರ ನೀಡಿದರು.  ಅಲ್ಲದೆ ಅರಿವು ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಈ ಯೋಜನೆ ವಿದ್ಯಾರ್ಥಿಗಳಿಗೆ ಎಷ್ಟು ಲಾಭದಾಯಕ ಎನ್ನುವುದರ ಕುರಿತು ಮಾಹಿತಿ ನೀಡಿದರು.
      ವೇದಿಕೆಯ ಮೇಲೆ ಮುಪ್ತಿ ಮಹ್ಮದ್ ನಜೀರ್ ಅಹ್ಮದ್ ಖಾದ್ರಿ, ರಿವರೆಂಡ್ ಪಾದರ್ ಅಬ್ರಹಾಂ, ಕ್ರಿಶ್ಚಿಯನ್ ಪರಿಷತ್ ರಾಜ್ಯ ಸದಸ್ಯ ಆನಂದ ಪಾಸ್ಟರ್, ಡಾ.ಕೆ.ಬಿ. ಬ್ಯಾಳಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಎ.ಎಚ್. ಬಳ್ಳಾರಿ ವಹಿಸಿಕೊಂಡಿದ್ದರು.   ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು. ನಂತರ  ಸಂವಾದ ಕಾರ್ಯಕ್ರಮ ನಡೆಯಿತು.

ಫೆ. 16 ರಂದು ಆಕಾಶವಾಣಿಯಲ್ಲಿ ಹಾಡುಕೋಗಿಲೆ

ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ): ಆಕಾಶವಾಣಿ ಹೊಸಪೇಟೆ ಕೇಂದ್ರವು ಪ್ರಸಾರ ಮಾಡುತ್ತಿರುವ ಕಿರ್ಲೋಸ್ಕರ್ ಫೆರಸ್ ಹಾಡುಕೋಗಿಲೆ ಕಾರ್ಯಕ್ರಮ ಅಂತಿಮ ಸ್ಪರ್ಧೆ ಶ್ರೋತೃಗಳ ಸಮ್ಮುಖದಲ್ಲಿ ಫೆ. 16 ರಂದು ಹೊಸಪೇಟೆಯ ತಾಲೂಕು ಕ್ರೀಡಾಂಗಣದಲ್ಲಿರುವ ನಗರಸಭಾ ಭವನದಲ್ಲಿ ನಡೆಯಲಿದೆ.
     ಕಾರ್ಯಕ್ರಮದ ಅಂಗವಾಗಿ ಒಂಭತ್ತು ಸ್ಪರ್ಧಿಗಳು ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಲಿದ್ದಾರೆ ಎಂದು ಹೊಸಪೇಟೆ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥೆ ಡಾ|| ಅನುರಾಧಕಟ್ಟಿ ತಿಳಿಸಿದ್ದಾರೆ.

ಸಾಂಸ್ಕøತಿಕ ಅಭಿರುಚಿ ಹೊಂದಲು ಯುವಕರಿಗೆ ಕರೆ


ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ): ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಸಂಗೀತ, ಸಾಹಿತ್ಯ, ಲಲಿತಕಲೆ, ನಾಟಕ ಮುಂತಾದ ಸೃಜನಾತ್ಮಕ ಕಲೆಗಳ ಬಗ್ಗೆ ಅಭಿರುಚಿ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲೆಯ ಹಿರಿಯ ಸಾಹಿತಿ ರಂ.ರಾ. ನಿಡಗುಂದಿ ಅವರು ಕರೆ ನೀಡಿದರು.

     ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಕುಕನೂರು ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯ ಭೀಮಸೇನ ದೇಸಾಯಿ ಸ್ಮಾರಕ ಸಮುದಾಯ ಭವನದಲ್ಲಿ ಸೋಮವಾರದಂದು ಆಯೋಜಿಸಿದ್ದ ಯುವ ಸೌರಭ- ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಇಂದಿನ ಯುವಪೀಳಿಗೆಯಲ್ಲಿ ಸದಭಿರುಚಿಯ ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ.  ಕೆಲವರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ವಯಕ್ತಿಕ ಹಾಗೂ ಈ ದೇಶದ ಭವಿಷ್ಯ ಹಾಳು ಮಾಡುತ್ತಿದ್ದಾರೆ.  ಸಂಗೀತ, ಸಾಹಿತ್ಯ, ಲಲಿತಕಲೆ, ನಾಟಕ ಮುಂತಾದ ಸೃಜನಾತ್ಮಕ ಕಲೆಗಳ ಬಗ್ಗೆ ಅಭಿರುಚಿಯನ್ನು ಮೈಗೂಡಿಸಿಕೊಂಡಲ್ಲಿ, ವಯಕ್ತಿಕ ಬದುಕಿನ ಜೊತೆಗೆ ದೇಶದ ಭವಿಷ್ಯವೂ ಉಜ್ವಲವಾಗಲು ಸಾಧ್ಯ ಎಂದು ರಂ.ರಾ. ನಿಡಗುಂದಿ ಅವರು ಹೇಳಿದರು.

     ವಿದ್ಯಾನಂದ ಗುರುಕುಲ ಪ.ಪೂ. ಕಾಲೇಜು ಪ್ರಾಂಶುಪಾಲ ಕೆ.ಆರ್. ಕುಲಕರ್ಣಿ ಅವರು ಮಾತನಾಡಿ, ಯುವಕರು ದೇಶದ ಬೆನ್ನೆಲುಬಾಗಿದ್ದು, ಯುವ ಪೀಳಿಗೆಯು ನಕಾರಾತ್ಮಕ ವಿಚಾರಗಳನ್ನು ಬಿಟ್ಟು, ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು.  ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗದೆ, ದೇಶೀಯ ಸಂಸ್ಕøತಿಯತ್ತ ಒಲವನ್ನು ಬೆಳೆಸಿಕೊಳ್ಳಬೇಕು.  ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಸ್ತುತ್ಯರ್ಹವಾಗಿದೆ ಎಂದರು.

     ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ರಂಗ ಕಲಾವಿದ ಬಾಬಣ್ಣ ಕಲ್ಮನಿ ಅವರು  ಕಲೆ, ಸಂಸ್ಕøತಿ ಹಿರಿಮೆಯ ಬಗ್ಗೆ ಮಾತನಾಡಿ, ನಾಟಕ ಕ್ಷೇತ್ರದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  ವಿದ್ಯಾನಂದ ಗುರುಕುಲ ಪದವಿ ಕಾಲೇಜು ಪ್ರಾಂಶುಪಾಲರಾದ ರೂಪಾ ದೇಸಾಯಿ ಉಪಸ್ಥಿತರಿದ್ದರು.

     ನಂತರ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹನುಮಸಾಗರದ ಕಸ್ತೂರಬಾ ವಸತಿ ಶಾಲೆಯ ಲಕ್ಷ್ಮೀಬಾಯಿ ಚವ್ಹಾಣ ಮತ್ತು ತಂಡದಿಂದ ‘ಡೊಳ್ಳು ಕುಣಿತ’, ಬಳ್ಳಾರಿಯ ಅಂಜಲಿ ಮತ್ತು ತಂಡ ನಡೆಸಿಕೊಟ್ಟ ‘ಹಕ್ಕಿ-ಪಿಕ್ಕಿ’ ಜಾನಪದ ಬುಡಕಟ್ಟು ನೃತ್ಯ ವೀಕ್ಷಕರನ್ನು ಜಾನಪದ ಲೋಕಕ್ಕೆ ಕೊಂಡೊಯ್ದ ಅನುಭವ ನೀಡಿತು.  ಹನುಮಸಾಗರದ ಪೂಜಾ ಕುಲಕರ್ಣಿ ಅವರಿಂದ ಸುಗಮ ಸಂಗೀತ, ಗಂಗಾವತಿಯ ವಿದ್ಯಾಶ್ರೀ ಸಾಲಿಮಠ ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಬಹದ್ದೂರಬಂಡಿಯ ಮೆಹಬೂಬ ಕಿಲ್ಲೇದಾರರಿಂದ ಜಾನಪದ ಗೀತೆಗಳು, ಕಾರಟಗಿಯ ಅರ್ಪಿತ ಚಿನಿವಾಲರ್ ತಂಡದಿಂದ ಸಮೂಹ ನೃತ್ಯ ಜನರನ್ನು ಆಕರ್ಷಿಸಿತು.  ಭಾಗ್ಯನಗರದ ನಾಗರಾಜ ಶ್ಯಾವಿ ರಿಂದ ಹಿಂದೂಸ್ತಾನಿ ವಾದ್ಯ ಸಂಗೀತದಲ್ಲಿ ಕೊಳಲು ವಾದನ ಮಾಡಿದರು.  ಹೊಸಗೇರಿಯ ದೇವಪ್ಪ ಹೊಸಗೇರಪ್ಪ ಕುರುಬರ ರಿಂದ ಕಥಾ ಕೀರ್ತನೆ, ವಿದ್ಯಾನಂದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಎ.ಪಿ. ಮುಧೋಳ ಅವರ ರಚನೆ ಮತ್ತು ನಿರ್ದೇಶನದಲ್ಲಿ ಕುಕನೂರಿನ ಜ್ಯೋತಿ ಆನಂದ ಮುಂಡಾಸದ ಮತ್ತು ತಂಡದಿಂದ ‘ಹಲಗಲಿ ಶೂರರು’ ನಾಟಕ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಯಿತು.

Friday, 12 February 2016

ಫೆ.15 ರಂದು ಬೇವೂರಿನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ

ಕೊಪ್ಪಳ, ಫೆ.12 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ವತಿಯಿಂದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮವನ್ನು ಫೆ.15 ರಂದು ಬೆಳಿಗ್ಗೆ 9.30 ಗಂಟೆಗೆ ಯಲಬುರ್ಗಾ ತಾಲೂಕು ಬೇವೂರು ಗ್ರಾಮದ ಶ್ರೀ ಕೂಡಲಸಂಗಮೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮೈದಾನದಲ್ಲಿ ಏರ್ಪಡಿಸಲಾಗಿದೆ.
     ಕಾರ್ಯಕ್ರಮಕ್ಕೆ ಜಿಲ್ಲೆಯ ನಾಲ್ಕೂ ತಾಲೂಕುಗಳಾದ ಕೊಪ್ಪಳ, ಕುಷ್ಟಗಿ, ಗಂಗಾವತಿ ಹಾಗೂ  ಯಲಬುರ್ಗಾ ತಾಲ್ಲೂಕು ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ, ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ 15 ರಿಂದ 35 ವರ್ಷದೊಳಗಿನ ವಯೋಮಿತಿ ಹೊಂದಿರುವ ಯುವಕ ಯುವತಿಯರು ಮಾತ್ರ ಭಾಗವಹಿಸಬಹುದಾಗಿದೆ. ಭಾಗವಹಿಸುವ ಸ್ಪರ್ಧಾಳುಗಳು ಎಂದಿನಂತೆ ತಮ್ಮ ವೇಷ ಭೂಷಣ, ವಾದ್ಯ ಮೇಳಗಳೊಂದಿಗೆ ಅಂದು ಬೆಳಿಗ್ಗೆ 9.00 ಗಂಟೆಯೊಳಗೆ ಸಂಘಟಕರಲ್ಲಿ ವರದಿ ಮಾಡಿಕೊಂಡು, ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ತಾಲ್ಲೂಕು ಮಟ್ಟದ ವಿಜೇತರಿಗೆ ಆಯಾ ತಾಲ್ಲೂಕು ಕೇಂದ್ರ ಸ್ಥಾನದಿಂದ ಬೇವೂರು ಗ್ರಾಮಕ್ಕೆ ಬಂದು ಹೋಗುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು.  
ಸ್ಪರ್ಧೆಗಳ ವಿವರ: ಭಾವಗೀತೆ, ಜಾನಪದಗೀತೆ, ರಂಗಗೀತೆ, ಜಾನಪದನೃತ್ಯ, ಗೀಗೀಪದಗಳು, ಲಾವಣಿ, ಕೋಲಾಟ, ಭಜನೆ, ಜೋಳ-ರಾಗಿ ಬೀಸುವ ಪದ, ಸೋಬಾನಪದಗಳು, ಏಕಪಾತ್ರಾಭಿನಯ, ವೀರಗಾಸೆ ಪುರವಂತಿಕೆ, ಡೊಳ್ಳುಕುಣಿತ, ದೊಡ್ಡಾಟ, ಸಣ್ಣಾಟ, ಚರ್ಮವಾದ್ಯ ಮೇಳ, ಯಕ್ಷಗಾನ ಸೇರಿದಂತೆ ಒಟ್ಟು 17 ಸ್ಪರ್ಧೆಗಳನ್ನು ನಡೆಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಘಟಕರಾದ ದ್ಯಾಮಣ್ಣ ಗೊಂದಿ, ಮೊ: 9741742731 ಅಥವಾ ಕಛೇರಿ ದೂರವಾಣಿ ಸಂಖ್ಯೆ: 08539-201400ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಿವು ಸಾಲ ಯೋಜನೆ : ಫೆ.15 ರಂದು ಜಾಗೃತಿ ಕಾರ್ಯಕ್ರಮ

ಕೊಪ್ಪಳ, ಫೆ.12 (ಕರ್ನಾಟಕ ವಾರ್ತೆ): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ಸಾಲ ಯೋಜನೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಫೆ.15 ರಂದು ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳ ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಹಿಂದಿ ಬಿ.ಎಡ್ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
     ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2016-17ನೇ ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಸಿ.ಇ.ಟಿ ಮೂಲಕ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಬಯಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ನಿಗಮದ ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳು ಹಾಗೂ ಅಲ್ಪಸಂಖ್ಯಾತರ ಮುಖಂಡರುಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  2ನೇ ಪಿ.ಯು.ಸಿ (ಪಿ.ಸಿ.ಎಮ್.ಬಿ) ವ್ಯಾಸಂಗ ಮಾಡುತ್ತಿದ್ದು, ಸಿ.ಇ.ಟಿ ಮೂಲಕ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಬಯಸುವ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳು ಅರಿವು ಶೈಕ್ಷಣಿಕ ಸಾಲದ ಸದುಪಯೋಗ ಪಡೆದುಕೊಳ್ಳಲು ಜಾಗೃತಿ ಮೂಡಿಸಲಾಗುವುದು. ಯೋಜನೆಯ ನಿಗದಿತ ಅರ್ಜಿಗಳನ್ನು ಸಹ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದ್ದು, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕೊಪ್ಪಳದ ಜಿಲ್ಲಾ ವ್ಯವಸ್ಥಾಪಕ ಝಾಕೀರ ಹುಸೇನ ಕುಕನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.24 ರಿಂದ ಎರಡು ದಿನಗಳ ರಸ್ತೆ ಸಂಚಾರ ಸಮೀಕ್ಷೆ

ಕೊಪ್ಪಳ, ಫೆ.12 (ಕರ್ನಾಟಕ ವಾರ್ತೆ): ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ಫೆ.24 ರ ಬೆಳಿಗ್ಗೆ 06 ಗಂಟೆಯಿಂದ ಫೆ.26 ರ ಬೆಳಿಗ್ಗೆ 06 ಗಂಟೆಯವರೆಗೆ ಎರಡು ದಿನಗಳ ಕಾಲ ರಸ್ತೆ ಸಂಚಾರದ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. 
       ರಾಜ್ಯದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಪ್ರತಿ ವರ್ಷಕ್ಕೊಮ್ಮೆ ಎರಡು ದಿನಗಳವರೆಗೆ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯರಸ್ತೆಗಳ ಮೇಲೆ ವಾಹನ ಸಂಚಾರ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ ರಸ್ತೆಗಳ ಅಗಲಳತೆ ನಿರ್ಧರಿಸಲು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ.
     ಪ್ರಸ್ತುತ ವರ್ಷದಲ್ಲಿ ಫೆ.24 ರ ಬೆಳಿಗ್ಗೆ 06 ಗಂಟೆಯಿಂದ ಫೆ.26 ರ ಬೆಳಿಗ್ಗೆ 06 ಗಂಟೆಯವರೆಗೆ ಒಟ್ಟು ಎರಡು ದಿನಗಳ 48 ಗಂಟೆಗಳ ಕಾಲ ರಸ್ತೆ ಸಂಚಾರದ ಸಮೀಕ್ಷೆ ಕಾರ್ಯವನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಸಮೀಕ್ಷೆ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ. ಸಮೀಕ್ಷಾ ಕೇಂದ್ರಗಳಿರುವಲ್ಲಿ ‘ವಾಹನಗಳ ರಸ್ತೆ ಸಂಚಾರ ಸಮೀಕ್ಷೆ ಕೇಂದ್ರವಿದೆ, ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ’ ಎಂದು ಸೂಚನಾ ಫಲಕಗಳನ್ನು ತೂಗು ಬಿಡಲಾಗಿರುತ್ತದೆ. ಅಂತಹ ಸ್ಥಳಗಳಲ್ಲಿ ಎಲ್ಲಾ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಿಸುವ ಮೂಲಕ ಸಮೀಕ್ಷೆ ಕಾರ್ಯಕ್ಕೆ ಸಹಕರಿಸುವಂತೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಬಳ್ಳಾರಿ ವೃತ್ತದ ಅಧೀಕ್ಷಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. 14 ರಂದು ಈಶಾನ್ಯದ ಐಸಿರಿ ಸರಣಿಯ 22 ನೇ ಸಂಚಿಕೆ ಪ್ರಸಾರ

ಕೊಪ್ಪಳ ಫೆ. 12 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 22 ನೇ ಸಂಚಿಕೆ ಫೆ. 14 ರಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 22ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.    ಕಲಬುರಗಿಯ ನ್ಯಾಯ ಮೂರ್ತಿಗಳಾಗಿರುವ ಎಂ.ಬಿ. ಬಿರಾದರ ಅವರಿಂದ ಕಾನೂನು –ಧರ್ಮ-ನ್ಯಾಯ ಈ ಕುರಿತು ಒಂದು ಅವಲೋಕನ.  ಕಲಬುರಗಿಯ ಶಿಕ್ಷಕರ ಕಾಲೇಜಿನ ಉಪನ್ಯಾಸಕರಾಗಿರುವ ರಾಮಕೃಷ್ಣ ಕುಲಕರ್ಣಿ ಅವರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಕಲಿಸುವ ವಿಧಾನಗಳ ಬಗೆಗೆ ಮಾಹಿತಿ.  ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಇಂಗ್ಲೀಷ ಪಾಠಗಳ ಸಿದ್ಧತೆ ಕುರಿತು, ನೆಲೋಗಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾಗಿರುವ ದೇವೇಂದ್ರಪ್ಪ ಗುಂಡಾಪೂರ ಅವರಿಂದ ಸಲಹೆ-ಸೂಚನೆಗಳು.  ಕಲಬುರಗಿ ತಾಲೂಕು ಕುಮಸಿ ಗ್ರಾಮದ ಸ್ತ್ರೀಶಕ್ತಿ ಅಕ್ಕಮಹಾದೇವಿ ಮಹಿಳಾ ಸ್ವಸಹಾಯ ಸಂಘದ ಸಾಧನೆಯ ಹಾದಿ.  ಅಂತರರಾಷ್ಟ್ರೀಯ ಖ್ಯಾತಿಯ ರಾಯಚೂರಿನ ನರಸಿಂಹಲು ವಡವಾಟಿ ಅವರ ಸಾಧನೆಯ ಪರಿಚಯ.  ರಾಯಚೂರಿನ ಹಿರಿಯ ಕಲಾವಿದ ಅಂಬಯ್ಯ ನೂಲಿಯವರಿಂದ ಭಕ್ತಿಗೀತೆ.  ಊರು-ಟೂರಿನಲ್ಲಿ ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಿಗೊಂದು ಸುತ್ತು.  ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.   ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಪ್ರತಿಭೆಗಳಿಗಿಲ್ಲಿ ಕೊರತೆ ಇಲ್ಲ, ಪ್ರೋತ್ಸಾಹ ಬೇಕಿದೆ- ಉಮೇಶ್ ಪೂಜಾರ್


ಕೊಪ್ಪಳ ಫೆ. 12 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆ ಇಲ್ಲ, ಆದರೆ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಅಭಿಪ್ರಾಯಪಟ್ಟರು.

     ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕಿನ ಹನುಮನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾದಂದು ಹಮ್ಮಿಕೊಂಡಿದ್ದ ‘ಚಿಗುರು’ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಕೊಪ್ಪಳ ಜಿಲ್ಲೆಯ ಮಕ್ಕಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ.  ಆದರೆ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ.  ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಲ್ಲಿ ಸಾಂಸ್ಕøತಿಕ ಆಸಕ್ತಿ ಮೂಡಿಸಿದರೆ, ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ.  ಕಲೆ, ಸಂಸ್ಕøತಿ, ಸಂಗೀತ, ಸಾಹಿತ್ಯ ಕಏತ್ರಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಯು ಸಮಾಜಕ್ಕೆ ಮಾರಕವಾಗದೆ, ಪೂರಕವಾಗುತ್ತಾನೆ.  ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತವೆ ಎಂದರು.

     ಹನುಮಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಶಶಿಧರ ಜೀರಿಗೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಶಿಕ್ಷಣ ಸಂಯೋಜಕ ಎಸ್.ಪಿ. ಶ್ರೀನಿವಾಸ್, ಶಿಕ್ಷಕರುಗಳಾದ ಫಲೀರಪ್ಪ ಕಿಡದಾಳ, ರಮೇಶ್, ಗವಿಸಿದ್ದಪ್ಪ, ಮಹಾಂತೇಶ್ ಉಪಸ್ಥಿತರಿದ್ದರು.  

     ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  ಶಿಕ್ಷಕ ಪ್ರಾಣೇಶ್ ಪೂಜಾರ್ ಕಾರ್ಯಕ್ರಮ ನಿರ್ವಹಿಸಿದರು.  ನಂತರ ನಡೆದ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಹನುಮಸಾಗರದ ಪೂಜಾ ಸುಗಮ ಸಂಗೀತದಡಿ ಭಾವಗೀತೆ, ಭಕ್ತಿ ಗೀತೆಗಳನ್ನು ಹಾಡಿದರು.  ಭಾಗ್ಯನಗರದ ಅಶ್ವಿನಿ ಪೂಜಾರ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಿದರು.  ಕೊಪ್ಪಳದ ರಿಷಿಕೇಶ ಮರೇಗೌಡ್ರು ಕೊಳಲು ವಾದನ, ಕಾರಟಗಿಯ ರಿತಿಕಾ ಅರಳಿ ಮತ್ತು ತಂಡದವರು ಸಮೂಹ ನೃತ್ಯ, ಹಳೇ ಬಂಡಿಹರ್ಲಾಪುರದ ಸಿದ್ದಮ್ಮ ಮತ್ತು ತಂಡದವರಿಂದ ಜಾನಪದ ಗೀತೆಗಳು, ಭಾಗ್ಯನಗರದ ದೀಕ್ಷಾ ಹೆಗಡೆ ಮತ್ತು ತಂಡದಿಂದ ಭರತನಾಟ್ಯ ಪ್ರದರ್ಶಿಸಿದರು.  ಕಿರಣಕುಮಾರ್ ರಿಂದ ಏಕಪಾತ್ರಾಭಿನಯ, ಹನುಮಹಳ್ಳಿಯ ಅಜಯಕುಮಾರ ಮತ್ತು ತಂಡದವರು ಶಿಕ್ಷಕ ಪ್ರಾಣೇಶ್ ಪೂಜಾರ್ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ವೀರರಾಣಿ ಕಿತ್ತೂರು ಚೆನ್ನಮ್ಮ’ ಐತಿಹಾಸಿಕ ನಾಟಕವು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.