Sunday, 31 January 2016

ಎಲ್ಲ ಶಾಲೆಗಳು ಶೇ. 100 ಫಲಿತಾಂಶದ ಗುರಿ ಇಟ್ಟುಕೊಂಡು ಶ್ರಮಿಸಿ- ಎಂ. ಕನಗವಲ್ಲಿ


ಕೊಪ್ಪಳ ಜ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆಯುವ ಗುರಿಯನ್ನಿಟ್ಟುಕೊಂಡು, ಅದಕ್ಕೆ ತಕ್ಕಂತೆ ಕಾರ್ಯ ಚಟುವಟಿಕೆಗಳನ್ನು ರೂಪಿಸಿ, ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮುಖ್ಯೋಪಾಧ್ಯಾಯರಿಗೆ ಕರೆ ನೀಡಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಭಾನುವಾರದಂದು ಏರ್ಪಡಿಸಲಾದ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

        ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಶೈಕ್ಷಣಿಕ ಜೀವನದ ಮಹತ್ವದ ಮೈಲಿಗಲ್ಲಾಗಿದೆ.  ಕೊಪ್ಪಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶವನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡು, ನಿಗದಿತ ಗುರಿ ಸಾಧನೆಗೆ   ಪ್ರಾಮಾಣಿಕತೆಯಿಂದ ಶ್ರಮಿಸಬೇಕು.  ಈ ವರ್ಷ ಶೇ. 100 ರಷ್ಟು ಫಲಿತಾಂಶ ಪಡೆಯುವ ಶಾಲೆಗಳಿಗೆ ಸನ್ಮಾನ ದೊರೆತರೆ, ಶೇ. 40 ಕ್ಕಿಂತ ಕಡಿಮೆ ಫಲಿತಾಂಶ ಪಡೆಯುವ ಶಾಲಾ ಶಿಕ್ಷಕರಿಗೆ ಅಮಾನತು ಶಿಕ್ಷೆ ಕಾದಿದೆ.  ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಶಾಲಾ ಶಿಕ್ಷಕರು ಶ್ರಮ ವಹಿಸಿ, ತಮ್ಮ ತಮ್ಮ ಶಾಲಾ ಮಕ್ಕಳನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸೂಕ್ತ ರೀತಿಯಲ್ಲಿ ಸಿದ್ಧಗೊಳಿಸಿ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರೌಢಶಾಲಾ ಶಿಕ್ಷಕರಿಗೆ ನೇರ ಮಾತುಗಳಲ್ಲಿ ಖಡಕ್ ಸೂಚನೆ ನೀಡಿದರು. 

ಬೇರೆಡೆ ಸಾಧ್ಯವಾಗಿದ್ದು ಇಲ್ಲೇಕಿಲ್ಲ ? : ಜಿಲ್ಲೆಗೆ ಬಂದು ಅಧಿಕಾರ ಸ್ವೀಕರಿಸಿದ ದಿನವೇ, ಇಲ್ಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಮಾಣ ಹಾಗೂ ರಾಜ್ಯ ಮಟ್ಟದಲ್ಲಿ ಗಳಿಸಿದ ಸ್ಥಾನಮಾನದ ಮಾಹಿತಿ ಪಡೆದು, ತೀವ್ರ ಅಸಮಾಧಾನವಾಯಿತು.  ಉಡುಪಿ, ಚಿಕ್ಕೋಡಿ ಸೇರಿದಂತೆ ಹಲವು ಜಿಲ್ಲೆಗಳು ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯುತ್ತಿವೆ.  ಅಲ್ಲಿ ಸಾಧ್ಯವಾಗಿದ್ದು, ಇಲ್ಲೇಕೆ ಸಾಧ್ಯವಾಗುತ್ತಿಲ್ಲ.  ಇಲ್ಲಿನ ವಿದ್ಯಾರ್ಥಿಗಳಲ್ಲಿ ಬುದ್ದಿವಂತಿಕ್ ಇಲ್ಲವೇ?, ಕಲಿಕಾ ಸಾಮಥ್ರ್ಯ ಇಲ್ಲವೆ, ಅಥವಾ ಶಿಕ್ಷಕರೇ ಸರಿಯಾಗಿ ಬೋಧನೆ ಮಾಡುತ್ತಿಲ್ಲವೇ?, ಶಿಕ್ಷಕರು ತಮ್ಮ ಹೊಣೆಗಾರಿಕೆ ಮರೆತಿದ್ದಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚಿಸುವಂತಹ ಕಾರ್ಯಗಳನ್ನು ಶಿಕ್ಷಕರು ಮಾಡಬೇಕಿದೆ ಎಂದರು.

        ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಎಸ್‍ಎಸ್‍ಎಲ್‍ಸಿ ಫಲಿತಾಂಶವು ಆತನ ಆತ್ಮಸ್ಥೈರ್ಯ ಹೆಚ್ಚಿಸುವ ಮಹತ್ವದ ಘಟ್ಟವಾಗಿದೆ.  ತಂದೆ, ತಾಯಿಯ ನಂತರ ಗೌರವ ಸ್ಥಾನ ಇರುವುದು ಶಿಕ್ಷಕರಿಗೆ, ನವಭಾರತ ನಿರ್ಮಿಸುವ ಜವಾಬ್ದಾರಿ ಹೊಂದಿರುವವರು ಎಂದರೆ, ಶಿಕ್ಷಕರೆ.  ಎಲ್ಲ ವಿದ್ಯಾರ್ಥಿಗಳಿಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ರೀತಿಯಲ್ಲಿ ಆತ್ಮವಿಶ್ವಾಸ ಮೂಡಿಸಿ, ಸರ್ಕಾರಿ ಶಾಲಾ ಶಿಕ್ಷಕರು ಮೊದಲು ತಮ್ಮಲ್ಲಿನ ಕೀಳರಿಮೆಯನ್ನು ಬಿಡಿ.  ತಮಿಳುನಾಡಿನಲ್ಲಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಪಾಲಕರು ಪೈಪೋಟಿ ನಡೆಸುವ ಪರಿಸ್ಥಿತಿ ಇದೆ.  ಕಾರಣ ಅಲ್ಲಿನ ಶಿಕ್ಷಣ ಮತ್ತು ಶಿಕ್ಷಕರ ಗುಣಮಟ್ಟದ ಬಗ್ಗೆ ಪಾಲಕರಲ್ಲಿ ಅಪಾರವಾದ ವಿಶ್ವಾಸವಿದೆ.  ಇಲ್ಲಿಯೂ ಅಂತಹ ಪರಿಸ್ಥಿತಿ ನಿರ್ಮಾಣವಾಗುವಂತೆ ಶಿಕ್ಷಕರು ಮಾಡಬೇಕು.  ಶಿಕ್ಷಕರು ಕೊನೆಯ ಪಕ್ಷ ತಮ್ಮ ಆತ್ಮತೃಪ್ತಿಗೋಸ್ಕರವಾದರೂ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಎಂದು ಮನವಿ ಮಾಡಿದರು.
      ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ ಅವರು ಮಾತನಾಡಿ, ಸ್ಥಾನಮಾನದ ಗುರಿಗಿಂತ ಶೇಕಡಾವಾರು ಹೆಚ್ಚು ಫಲಿತಾಂಶ ಪಡೆಯುವತ್ತ ಗಮನ ನೀಡಬೇಕಿದೆ.  ಶೇಕಡಾವಾರು ಉತ್ತಮ ಫಲಿತಾಂಶ ಬಂದಲ್ಲಿ, ಉತ್ತಮ ಸ್ಥಾನಮಾನ ತಂತಾನೆ ದೊರೆಯುತ್ತದೆ.  ಉಡುಪಿ ಜಿಲ್ಲೆಯನ್ನು 16 ನೇ ಸ್ಥಾನದಿಂದ ಮೊದಲನೆ ಸ್ಥಾನಕ್ಕೆ ಕೊಂಡೊಯ್ಯಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.  ಕಳೆದ ವರ್ಷ ಉಡುಪಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಹೆಚ್ಚುವರಿ ಅವಧಿ ಶಾಲೆಗಳು ಕಾರ್ಯ ನಿರ್ವಹಿಸಿವೆ.  ಇದು ಉತ್ತಮ ಪರಿಣಾಮ ಬೀರಿತು ಎಂದರು.  ಅಲ್ಲದೆ ಇಲ್ಲಿನ ಶಿಕ್ಷಕರು ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ಸಿಕ್ಕಂತಹ ಉತ್ತಮ ಅವಕಾಶವಿದು ಎಂದು ಭಾವಿಸಿ, ತಮ್ಮ ಸಾಮಥ್ರ್ಯವನ್ನು ಸಾಬೀತುಗೊಳಿಸುವಂತೆ ಕರೆ ನೀಡಿದರು. 
     ಕಾರ್ಯಗಾರದ ಅಂಗವಾಗಿ ವಿವಿಧ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು, ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮ ಪಡಿಸಲು, ಸೂಕ್ತ ಮಾರ್ಗದರ್ಶನ ನೀಡಿದರು.
     ಇದಕ್ಕೂ ಪೂರ್ವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಿಡಿಪಿಐ ಶ್ಯಾಮಸುಂದರ್ ಅವರು, ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿದಂತೆ ಒಟ್ಟು 279 ಪ್ರೌಢಶಾಲೆಗಳಿವೆ.  2012-13 ರಲ್ಲಿ ಶೇ. 81. 93, 2013-14 ರಲ್ಲಿ ಶೇ. 85. 35 ಹಾಗೂ 2014-15 ರಲ್ಲಿ ಶೇ. 71. 91 ರಷ್ಟು ಫಲಿತಾಂಶ ಬಂದಿದೆ.  2014-15 ರಲ್ಲಿ ಒಟ್ಟು 24 ಶಾಲೆಗಳು ಮಾತ್ರ ಶೇ. 100 ಫಲಿತಾಂಶ ಪಡೆದರೆ, 21 ಶಾಲೆಗಳಲ್ಲಿ ಶೇ. 40 ಕ್ಕಿಂತ ಕಡಿಮೆ ಫಲಿತಾಂಶ ಬಂದಿವೆ ಎಂದರು.
     ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

Saturday, 30 January 2016

ಜೀವನದ ಭರವಸೆಯನ್ನು ಕಳೆದುಕೊಳ್ಳದಿರಿ- ಟಿ. ಕೊಟ್ರಪ್ಪ


ಕೊಪ್ಪಳ ಜ. 31 (ಕರ್ನಾಟಕ ವಾರ್ತೆ): ಹಿಂದಿನ ಪೂರ್ವಾಶ್ರಮದ ನೆನಪುಗಳನ್ನು, ಅಹಿತಕರ ಘಟನೆಗಳನ್ನು ಮೆಲುಕು ಹಾಕಿ ಖಿನ್ನತೆಗೆ ಒಳಗಾಗದೆ, ಧ್ಯಾನ, ಒಳ್ಳೆಯ ಚಿಂತನೆಗಳನ್ನು ಮಾಡುತ್ತ ನೆಮ್ಮದಿಯ ಬದುಕು ಸಾಗಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ವೃದ್ಧಾಶ್ರಮ ವಾಸಿಗಳಿಗೆ ಕರೆ ನೀಡಿದರು.
      ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆ ಹಾಗೂ ವಿದ್ಯಾನಂದ ಗುರುಕುಲ ಇವರ ಸಹಯೋಗದೊಂದಿಗೆ ಕುಕನೂರಿನ ವಿದ್ಯಾನಂದ ಗುರುಕುಲ ವೃದ್ಧಾಶ್ರಮದಲ್ಲಿ ಏರ್ಪಡಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಜೀವನದಲ್ಲಿ ಖಿನ್ನತೆಯಿಂದ ಹೊರಬಂದು, ಮಾನಸಿಕ ನೆಮ್ಮದಿ ಪಡೆಯಲು ಸಂಗೀತ ಬಹಳ ಅವಶ್ಯಕವಾಗಿದೆ.  ಇದಕ್ಕಾಗಿ ಇಲಾಖೆಯು, ಕುಟುಂಬ ಮತ್ತು ಸಮಾಜದಿಂದ ಪರಿತ್ಯಕ್ತರಾದ ವೃದ್ಧರಿಗಾಗಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.  ವೃದ್ಧಾಶ್ರಮವಾಸಿಗಳು, ಹಿಂದಿನ ಪೂರ್ವಾಶ್ರಮದ ನೆನಪುಗಳನ್ನು, ಅಹಿತಕರ ಘಟನೆಗಳನ್ನು ಮೆಲುಕು ಹಾಕುತ್ತಾ ಖಿನ್ನತೆಗೆ ಒಳಗಾಗದೆ, ಧ್ಯಾನ, ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಒಳ್ಳೆಯ ಚಿಂತನೆಗಳನ್ನು ಮಾಡುತ್ತ, ಜೀವನದ ಭರವಸೆಯನ್ನು ಕಳೆದುಕೊಳ್ಳದೆ ನೆಮ್ಮದಿಯಿಂದ ಬದುಕು ನಡೆಸಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ಹೇಳಿದರು.
     ವೃದ್ಧಾಶ್ರಮ ವಾಸಿಗಳಾದ ಚನ್ನಬಸಮ್ಮ ಬೇವಿನಮರದ ಮತ್ತು ಹನುಮಂತಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಜಿಲ್ಲಾ ಅಂಗವಿಕಲರ ಕಲ್ಯಣಾಧಿಕಾರಿ ಜಗದೀಶ್ ಕಾರ್ಯಕ್ರಮ ಕುರಿತು ಮಾತನಾಡಿದರು.  ನಿವೃತ್ತ ಶಿಕ್ಷಕ ಆರ್.ವಿ. ರಾಜೂರ್, ಗುರುಕುಲ ಸಂಸ್ಥೆಯ ಜಂಟಿ ಕಾರ್ಯದರ್ಶಿ ಜಿ.ವಿ. ಜಹಗೀರ್ದಾರ್ ಉಪಸ್ಥಿತರಿದ್ದರು.  ವೃದ್ಧಾಶ್ರಮದ ನಿವಾಸಿಗಳಾದ ಸುಧಾಬಾಯಿ ಪ್ರಾರ್ಥಿಸಿದರು,  ಪ್ರಾಂಶುಪಾಲ ಕೆ.ಆರ್. ಕುಲಕರ್ಣಿ ಸ್ವಾಗತಿಸಿದರು.
     ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗ್ಯನಗರದ ಅಂಧ ಕಲಾವಿದೆ ಚಂದ್ರಿಕಾ ಅವರು ಭಕ್ತಿಗೀತೆ, ಭಾವಗೀತೆ, ತತ್ವಪದ, ಜಾನಪದ ಗೀತೆಗಳನ್ನು ಹಾಡಿ, ವೃದ್ಧರನ್ನು ರಂಜಿಸಿದರು.  ರಾಮಚಂದ್ರಪ್ಪ ಉಪ್ಪಾರ್ ಹಾರ್ಮೋನಿಯಂನಲ್ಲಿ, ನಾಗರಾಜ ಶ್ಯಾವಿ-ಕೊಳಲು ವಾದನದಲ್ಲಿ, ಮಾರುತಿ ಬಿನ್ನಾಳ ಅವರು ತಬಲಾದಲ್ಲಿ ಹಾಗೂ ಪ್ರದೀಪ್ ತಾಳವಾದ್ಯದಲ್ಲಿ ಸಂಗೀತಕ್ಕೆ ಸಾಥ್ ನೀಡಿದರು.

ಹುತಾತ್ಮರ ಸ್ಮರಣಾರ್ಥ ಕೊಪ್ಪಳ ಜಿಲ್ಲಾಡಳಿತದಿಂದ ಮೌನಾಚರಣೆ


ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳ ಮೂಲಕ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ 02 ನಿಮಿಷಗಳ ಮೌನ ಆಚರಿಸಲಾಯಿತು. 

     ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ಜ. 30 ರ ದಿನವನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತವರ ಸ್ಮರಣೆ ಮಾಡುವ ದಿನವನ್ನಾಗಿ ಆಚರಿಸಲಾಗುತ್ತಿದೆ.  ಈ ಬಾರಿ ಸರ್ಕಾರದ ನಿರ್ದೇಶನದಂತೆ ಹುತಾತ್ಮರ ಸ್ಮರಣಾರ್ಥ ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಎರಡು ನಿಮಿಷಗಳ ಮೌನವನ್ನು ಆಚರಿಸಿ, ಹುತಾತ್ಮರಿಗೆ ಗೌರವ ಸಲ್ಲಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಜಿ.ಎಲ್. ಅವರು ಹೇಳಿದರು.

     ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಹುತಾತ್ಮರ ಸ್ಮರಣಾರ್ಥ ಎರಡು ನಿಮಿಷಗಳ ಮೌನವನ್ನು ಆಚರಿಸಿದರು.  ಇದಕ್ಕೂ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಪ್ರಿಯವಾಗಿದ್ದ ‘ಸುಮಿರನ ಕರಲೆ ಮೇರೆ ಮನ್’, ‘ವೈಷ್ಣವೊ ಜನತೋ ತೇನೇ ಕಹಿಯೇ’ ಹಾಗೂ ‘ರಘುಪತಿ ರಾಘವ ರಾಜಾರಾಂ’ ಭಜನಾಪದಗಳನ್ನು ಅಂಬಿಕಾ ಭಾಗ್ಯನಗರ ಅವರು ಹಾಡಿದರು.  ಇವರಿಗೆ ರಾಮಚಂದ್ರಪ್ಪ ಉಪ್ಪಾರ್- ಹಾರ್ಮೋನಿಯಂ ಹಾಗೂ ಮಾರುತಿ ಬಿನ್ನಾಳ- ತಬಲಾ ಸಾಥ್ ನೀಡಿದರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಮೌನಾಚರಣೆಯಲ್ಲಿ ಪಾಲ್ಗೊಂಡರು.

ಹೆಲ್ಮೆಟ್ ಕಡ್ಡಾಯವಾಗಿ ಧರಿಸಲು ಸಾರಿಗೆ ಇಲಾಖೆ ಸೂಚನೆ

 ಕೊಪ್ಪಳ, ಜ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲಾ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಫೆ.01 ರಿಂದ ಅನ್ವಯವಾಗುವಂತೆ ಕಡ್ಡಾಯವಾಗಿ ಶಿರಸ್ತ್ರಾಣ (ಹೆಲ್ಮೆಟ್) ವನ್ನು ಧರಿಸಿ ವಾಹನ ಚಲಾಯಿಸುವಂತೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್ ಅಹ್ಮದ್ ಪಾಶಾ ಸೂಚನೆ ನೀಡಿದ್ದಾರೆ.
       ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ  SARIE 80 SAEPA 2015, Bengalore Dated: 31-12-2015 : 31-12-2015 ರಲ್ಲಿ ಮೋಟಾರ ವಾಹನ ಕಾಯ್ದೆ 1988 ರ ಅಧಿನಿಯಮ 138, 129, 212 ರಲ್ಲಿನ ಪ್ರದವತ್ತಾದ ಅಧಿಕಾರದ ಮೇರೆಗೆ ಕರ್ನಾಟಕ ಮೋಟಾರ ವಾಹನ ನಿಯಮಾವಳಿ 230(1) ರಲ್ಲಿ ದ್ವಿಚಕ್ರ ಮೋಟಾರ ಸೈಕಲ್ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಶಿರಸ್ತ್ರಾಣ (ಹೆಲ್ಮೆಟ್) ಧರಿಸುವಂತೆ ಆದೇಶ ಹೊರಡಿಸಲಾಗಿದೆ.
      ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪ್ರದೇಶಗಳ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಫೆ.01 ರಿಂದ ಅನ್ವಯವಾಗುವಂತೆ ಕಡ್ಡಾಯವಾಗಿ ಹೆಲ್ಮೆಟ್‍ನ್ನು ಧರಿಸಿ ವಾಹನ ಚಲಾಯಿಸಬೇಕು. ಇಲ್ಲವಾದಲ್ಲಿ ಕಾನೂನುರಿತ್ಯಾ ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಕೆ : ಅವಧಿ ವಿಸ್ತರಣೆ

ಕೊಪ್ಪಳ, ಜ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣವನ್ನು ಅಳವಡಿಸಿಕೊಳ್ಳಲು ನೀಡಲಾಗಿದ್ದ ಕಾವಕಾಶವನ್ನು ಫೆ.15 ರವರೆಗೆ ವಿಸ್ತರಿಸಲಾಗಿದೆ.
     ಜಿಲ್ಲೆಯ ಎಲ್ಲ ಮರಳು ಸಾಕಾಣಿಕೆದಾರರು ತಮ್ಮ ಮರಳು ಸಾಗಾಣಿಕೆ ವಾಹನಗಳಿಗೆ ಕಡ್ಡಾಯವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಜಿ.ಪಿ.ಎಸ್ ಉಪಕರಣವನ್ನು ಅಳವಡಿಸಿಕೊಳ್ಳಲು ಈ ಹಿಂದೆ ಜ.31 ರವರೆಗೆ ನೀಡಲಾಗಿದ್ದ ಗಡುವನ್ನು ಫೆ.15 ರವರೆಗೆ ವಿಸ್ತರಿಸಲಾಗಿದೆ. ಮರಳು ಸಾಗಾಣಿಕೆದಾರರು  ಒಂದು ವೇಳೆ ನಿಗದಿಪಡಿಸಿದ ಅವಧಿಯೊಳಗಾಗಿ ತಮ್ಮ ವಾಹನಗಳಿಗೆ ಜಿ.ಪಿ.ಎಸ್ ಉಪಕರಣವನ್ನು ಅಳವಡಿಸಿಕೊಳ್ಳದೇ ಇದ್ದಲ್ಲಿ, ಅಂತಹ ವಾಹನಗಳಿಗೆ ಮರಳು ಸಾಗಾಣಿಕೆಯ ಪರ್ಮಿಟ್ ನೀಡಲಾಗುವುದಿಲ್ಲ ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು, ಜಲಸಾರಿಗೆ ವಿಭಾಗ, ಕೊಪ್ಪಳದ ಕಾರ್ಯನಿರ್ವಾಹಕ ಇಂಜಿನೀಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಶೋಧನಾ ಅಧ್ಯಯನಕ್ಕಾಗಿ ಫೆಲೋಷಿಪ್ : ಅರ್ಜಿ ಆಹ್ವಾನ

ಕೊಪ್ಪಳ, ಜ.30 (ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಸಂಶೋಧನಾ ಅಧ್ಯಯನಕ್ಕಾಗಿ ಫೆಲೋಷಿಪ್ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಅಕಾಡೆಮಿ ವ್ಯಾಪ್ತಿಗೊಳಪಡುವ ಯಕ್ಷಗಾನ ಬಯಲಾಟದ ಕಲಾ ಪ್ರಕಾರಗಳಾದ ಬಯಲಾಟ (ಮೂಡಲಾಪಯ, ಯಕ್ಷಗಾನ, ದೊಡ್ಡಾಟ, ಕೇಳಿಕೆ, ಘಟ್ಟದಕೋರೆ, ಯಕ್ಷಗಾನ ಇತ್ಯಾದಿ), ಸಣ್ಣಾಟ (ಸಂಗ್ಯಾ-ಬಾಳ್ಯಾ, ರಾಧಾನಾಟ, ಕಡ್ಲೀಮಟ್ಟಿ ಸ್ಟೇಷನ್ ಮಾಸ್ಟರ್ ಇತ್ಯಾದಿ), ಸೂತ್ರದ ಗೊಂಬೆಯಾಟ, ತೊಗಲುಗೊಂಬೆಯಾಟ, ಯಕ್ಷಗಾನ (ತೆಂಕುತಿಟ್ಟು, ಬಡಗುತಿಟ್ಟು, ತಾಳಮದ್ದಳೆ), ಶ್ರೀಕೃಷ್ಣಪಾರಿಜಾತ ಇತ್ಯಾದಿಗಳ ಬಗ್ಗೆ ಒಂದು ವರ್ಷ ಕಾಲ ಅಧ್ಯಯನ ಮಾಡಿ ಪ್ರಬಂಧ ಮಂಡಿಸುವವರಿಗೆ ಫೆಲೋಷಿಪ್ ನೀಡಲಾಗುತ್ತದೆ. ಈ ಸಂಶೋಧನಾ ಕಾರ್ಯಕ್ಕಾಗಿ ಒಬ್ಬ ಸಂಶೋಧನಾ ಅಭ್ಯರ್ಥಿಗೆ 01 ಲಕ್ಷ ರೂ. ಒದಗಿಸಲಾಗುತ್ತದೆ. ಪರಿಶಿಷ್ಟ ವರ್ಗ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ, ಕನ್ನಡ ಎಂ.ಎ (ಜಾನಪದ, ಸಮಾಜ ವಿಜ್ಞಾನ, ಮಹಿಳಾ ಅಧ್ಯಯನ, ಸಾಹಿತ್ಯ, ಚರಿತ್ರೆಮಾನವಶಾಸ್ತ್ರ ಇತ್ಯಾದಿ) ವ್ಯಾಸಂಗ ಮಾಡಿರುವವರು ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ತಾವು ಆಯ್ಕೆ ಮಾಡಿಕೊಳ್ಳುವ ಅಧ್ಯಯನದ ವಿಷಯದ ಬಗ್ಗೆ ನಾಲ್ಕು ಪುಟಗಳ ಸಾರಾಂಶ ಹಾಗೂ ತಮ್ಮ ಸಾಧನೆಯ ಕಿರುಪರಿಚಯ ಹಾಗೂ ಜಾತಿ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, 2ನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-2 ಇವರಿಗೆ ಅಥವಾ ಇಮೇಲ್ ವಿಳಾಸ  kybabangalore@gmail.com ಗೆ ಫೆ.25 ರೊಳಗಾಗಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Friday, 29 January 2016

ಹುತಾತ್ಮರ ಸ್ಮರಣಾರ್ಥ ಜ. 30 ರಂದು ಮೌನಾಚರಣೆ

ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಜ. 30 ರಂದು ಬೆಳಿಗ್ಗೆ 10-15 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಮೌನಾಚರಣೆ ಹಮ್ಮಿಕೊಳ್ಳಲಾಗಿದೆ.  ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ತಿಳಿಸಿದ್ದಾರೆ.

ಪ್ರೋತ್ಸಾಹಧನ ಮಂಜೂರು : ಫೆ.05 ರಿಂದ ದಾಖಲಾತಿ ಪರಿಶೀಲನೆ

ಕೊಪ್ಪಳ, ಜ.29 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಥಮ ಪ್ರಯತ್ನದಲ್ಲಿಯೇ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರೋತ್ಸಾಹಧನಕ್ಕೆ ಸಂಬಂಧಪಟ್ಟಂತೆ ಫೆ.05 ಮತ್ತು 06 ರಂದು ಅರ್ಜಿದಾರರ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ.
     ಪ್ರಸಕ್ತ ಸಾಲಿನಲ್ಲಿ ಪಿ.ಯು.ಸಿ-2, ಪದವಿ ಅಂತಿಮ, ಸ್ನಾತಕೋತ್ತರ ಮತ್ತು ಕೃಷಿ, ಎಂಜಿನಿಯರಿಂಗ್, ಮೆಡಿಸಿನ್, ವೆಟರ್ನರಿ, ಪದವಿಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಪ್ರಸಕ್ತ ಸಾಲಿನಲ್ಲಿ ಮಂಜೂರಿ ಮಾಡಬೇಕಾಗಿರುವುದರಿಂದ ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರು ಕೆಳಕಾಣಿಸಿದ ಸಂಬಂಧಿಸಿದ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಕಛೇರಿಗಳಲ್ಲಿ ಕೆಳಕಾಣಿಸಿದ ದಿನಾಂಕಗಳಂದು ಪರಿಶೀಲನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಕೊಪ್ಪಳ ತಾಲೂಕಿನ ಅಭ್ಯರ್ಥಿಗಳು ಫೆ.05 ರಂದು ಬೆಳಿಗ್ಗೆ 11 ಗಂಟೆಗೆ, ಗಂಗಾವತಿ ತಾಲೂಕಿನ ಅಭ್ಯರ್ಥಿಗಳು ಅದೇ ದಿನ ಮದ್ಯಾಹ್ನ 03.00 ಗಂಟೆಗೆ, ಕುಷ್ಟಗಿ ತಾಲೂಕಿನ ಅಭ್ಯರ್ಥಿಗಳು ಫೆ.06 ರಂದು ಬೆಳಿಗ್ಗೆ 11 ಗಂಟೆಗೆ, ಯಲಬುರ್ಗಾ ತಾಲೂಕಿನ ಅಭ್ಯರ್ಥಿಗಳು ಅದೇ ದಿನ ಮದ್ಯಾಹ್ನ 03.00 ಗಂಟೆಗೆ ಆಯಾ ತಾಲೂಕುಗಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಗಳಲ್ಲಿ ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಕಲ್ಲೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಕನೂರು ವೃದ್ಧಾಶ್ರಮದಲ್ಲಿ ಜ. 30 ರಂದು ಸಾಂಸ್ಕøತಿಕ ಕಾರ್ಯಕ್ರಮ

ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜ. 30 ರಂದು ಸಂಜೆ 04 ಗಂಟೆಗೆ ಕುಕನೂರಿನ ವಿದ್ಯಾನಂದ ಗುರುಕುಲ ವೃದ್ಧಾಶ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.
     ಕಾರ್ಯಕ್ರಮದ ಅಂಗವಾಗಿ ಅಂದು ವಿದ್ಯಾನಂದ ಗುರುಕುಲ ವೃದ್ಧಾಶ್ರಮದಲ್ಲಿ ಭಾಗ್ಯನಗರದ ಎ. ಚಂದ್ರಕಾ ಮತ್ತು ತಂಡದಿಂದ ಭಕ್ತಿ ಗೀತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ತಿಳಿಸಿದ್ದಾರೆ.

ಕೊಪ್ಪಳ : ಅಡುಗೆ ಅನಿಲ ಸಂಪರ್ಕಕ್ಕೆ ಅರ್ಜಿ ಆಹ್ವಾನ

ಕೊಪ್ಪಳ, ಜ.29 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಅನುದಾನದಡಿಯ ಶೇಕಡಾ 24.10 ಯೋಜನೆಯಡಿ ನಗರ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿ ಕೊಪ್ಪಳ ನಗರ ಪ್ರದೇಶದ ವಾಸಿಯಾಗಿರುವ ಪರಿಶಿಷ್ಟ ಜಾತಿಯ 23 ಹಾಗೂ ಪರಿಶಿಷ್ಟ ಪಂಗಡದ 25 ಜನರಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತ್ತದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಭರ್ತಿ ಮಾಡಿದ ಅರ್ಜಿಯೊಂದಿಗೆ ಚಾಲ್ತಿ ಸಾಲಿನ ಆಸ್ತಿ ತೆರಿಗೆ ನಮೂನೆ-3 (ಅರ್ಜಿ ಹಾಕುವವರ ಹೆಸರಿನಲ್ಲಿರತಕ್ಕದ್ದು, ಬಾಡಿಗೆ ಮನೆಯಾಗಿದ್ದಲ್ಲಿ ಮಾಲೀಕರಿಂದ 20 ರೂ.ಗಳ ಛಾಪಾ ಕಾಗದದ ಮೇಲೆ ನೋಟ್ರಿಯೊಂದಿಗೆ ಒಪ್ಪಿಗೆ ಪತ್ರ), ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಆದಾರ್ ಮತ್ತು ರೇಷನ್ ಕಾರ್ಡ್, 20 ರೂ.ಗಳ ಛಾಪಾ ಕಾಗದ, 03 ಫೋಟೋ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಚಾಲ್ತಿ ವಿದ್ಯುತ್ ಪಾವತಿ ರಸೀದಿ ಇತ್ಯಾದಿ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಲಗತ್ತಿಸಿ, ದ್ವಿಪ್ರತಿಯೊಂದಿಗೆ ಫೆ.15 ರೊಳಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಅವಧಿ ಮೀರಿ ಬಂದಂತಹ ಅರ್ಜಿಗಳನ್ನು ಯಾವುದೇ ಹಿಂಬರಹ ನೀಡದೆ ತಿರಸ್ಕರಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯ, ಕೊಪ್ಪಳ, ದೂರವಾಣಿ ಸಂಖ್ಯೆ: 08539-230192 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಟಾಫ್ ನರ್ಸಸ್ ಸ್ಪರ್ಧಾತ್ಮಕ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಕೊಪ್ಪಳ, ಜ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಜ.30 ಹಾಗೂ 31 ರಂದು 06 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಸ್ಟಾಫ್ ನರ್ಸಸ್ ಸ್ಪರ್ಧಾತ್ಮಕ ಪರೀಕ್ಷೆ ಸುಗಮ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಜಿಲ್ಲೆಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಪ್ಪಳ ಪರೀಕ್ಷಾ ಕೇಂದ್ರದಲ್ಲಿ ಜ.30 ರಂದು ಮಧ್ಯಾಹ್ನ 02.30 ರಿಂದ 04.30 ಗಂಟೆಯವರೆಗೆ ಹಾಗೂ ಜ.31 ರಂದು ಬೆಳಿಗ್ಗೆ 10.30 ರಿಂದ 12.30 ಗಂಟೆಯವರೆಗೆ ಹಾಗೂ ಅದೇ ದಿನ ಮಧ್ಯಾಹ್ನ 02.30 ರಿಂದ 04.30 ಗಂಟೆಯವರೆಗೆ. ಉಳಿದಂತೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ, ಸರ್ಕಾರಿ ಪದವಿ ಪೂರ್ವ ಕಾಲೇಜು ಭಾಗ್ಯನಗರ, ಬಿ.ಎನ್.ಆರ್.ಕೆ ಪದವಿ ಪೂರ್ವ ಕಾಲೇಜು ಕೊಪ್ಪಳ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಕೊಪ್ಪಳ ಮತ್ತು ಎಸ್.ಎಫ್.ಎಸ್ ಆಂಗ್ಲ ಮಾಧ್ಯಮ ಶಾಲೆ ಕೊಪ್ಪಳದ ಪರೀಕ್ಷಾ ಕೇಂದ್ರಗಳಲ್ಲಿ ಜ.31 ರಂದು ಮಧ್ಯಾಹ್ನ 02.30 ರಿಂದ 04.30 ಗಂಟೆಯವರೆಗೆ ಸ್ಟಾಫ್ ನರ್ಸಸ್ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ  06 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಸಿ.ಆರ್.ಪಿ.ಸಿ 1973 ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ನಿಷೇಧಾಜ್ಞೆಯನ್ವಯ, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್‍ಟಿಡಿ, ಮೊಬೈಲ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.  ಅಲ್ಲದೆ ಈ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಸಹ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಭೂಮಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಕೊಪ್ಪಳ, ಜ.29 (ಕರ್ನಾಟಕ ವಾರ್ತೆ): ಭೂಮಾಪಕರ ಮತ್ತು ಅಂಗವಿಕಲರಿಗೆ ಮೀಸಲಿರಿಸಿದ ಬ್ಯಾಕಲಾಗ್ ಭೂಮಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಜ.31 ಹಾಗೂ ಫೆ.01 ರಂದು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಜ.31 ರಂದು ಬೆಳಿಗ್ಗೆ 10.30 ರಿಂದ 01.30 ರವರೆಗೆ, ಅದೇ ದಿನ ಮಧ್ಯಾಹ್ನ 02.30 ರಿಂದ 05.30 ಗಂಟೆಯವರೆಗೆ ಹಾಗೂ ಫೆ.01 ರಂದು ಬೆಳಿಗ್ಗೆ 10.30 ರಿಂದ ಮದ್ಯಾಹ್ನ 01.30 ಗಂಟೆಯವರೆಗೆ ಈ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳು ಸುಸೂತ್ರ ಮತ್ತು ದೋಷ ರಹಿತವಾಗಿ ನಡೆಸಲು ಅನುಕೂಲವಾಗುವಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಜ.31 ರಂದು ಪರೀಕ್ಷಾ ಅವಧಿಯಲ್ಲಿ  ಸಿ.ಆರ್.ಪಿ.ಸಿ 1973 ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.   ನಿಷೇಧಾಜ್ಞೆಯನ್ವಯ, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್‍ಟಿಡಿ, ಮೊಬೈಲ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.  ಅಲ್ಲದೆ ಈ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಸಹ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

9ನೇ ತರಗತಿ ಪ್ರವೇಶ ಪರೀಕ್ಷೆ : ಅರ್ಜಿ ಆಹ್ವಾನ

ಕೊಪ್ಪಳ, ಜ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಕನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ 9ನೇ ತರಗತಿಗಾಗಿ ಪ್ರವೇಶ ಪರೀಕ್ಷೆ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ನಿಗದಿತ ಅರ್ಜಿ ನಮೂನೆಯನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರಲ್ಲಿ ಪಡೆಯಬಹುದಾಗಿದೆ.  ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಶಾಲಾ ಮುಖ್ಯೋಪಾಧ್ಯಾಯರ ಮುಖಾಂತರ ಜವಾಹರ ನವೋದಯ ವಿದ್ಯಾಲಯ ಕುಕನೂರಿನ ಪ್ರಾಚಾರ್ಯರಿಗೆ ಫೆ.29 ರೊಳಗಾಗಿ ಸಲ್ಲಿಸಿ, ಸ್ವೀಕೃತಿ ಪಡೆಯಬಹುದಾಗಿದೆ. ಪ್ರವೇಶ ಪರೀಕ್ಷೆಯು ಏ.24 ರಂದು  ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಕುಕನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆಯಲಿದೆ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08534-239444 ನ್ನು ಸಂಪರ್ಕಿಸಬಹುದಾಗಿದೆ ಎಂದು ಜವಾಹರ ನವೋದಯ ವಿದ್ಯಾಲಯ, ಕುಕನೂರಿನ ಪ್ರಾಚಾರ್ಯ ಬಿ.ಎನ್.ಟಿ. ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜ. 31 ರಂದು ಈಶಾನ್ಯದ ಐಸಿರಿ ಸರಣಿಯ 20 ನೇ ಸಂಚಿಕೆ ಪ್ರಸಾರ

ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 20 ನೇ ಸಂಚಿಕೆ ಜ. 31 ರಂದು ಬೆಳಿಗ್ಗೆ 9-55 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 20ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.   ನಿವೃತ್ತ ನ್ಯಾಯ ಮೂರ್ತಿಗಳಾದ ಎಂ.ಬಿ ಬಿರಾದರ ಅವರಿಂದ ಪರಿಸ್ಥಿತಿಯ ಪೀಡಿತರಿಗೆ ಇರುವ ಕಾನೂನು ಸೇವೆಗಳ ಕುರಿತು ಮಾಹಿತಿ.  ಸುರಪುರ ತಾ. ಕಕ್ಕೇರಾದ, ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಸಹ ಶಿಕ್ಷಕರಾಗಿರುವ ಬಸಯ್ಯ ಸ್ವಾಮಿ ಅವರಿಂದ S.S.ಐ.ಅ. ಕನ್ನಡ ವಿಷಯದ ಬಗ್ಗೆ ಸಲಹೆ-ಸೂಚನೆ.  ಬಳ್ಳಾರಿ ಜಿ. ಹೊಸಪೇಟೆ ತಾ. ಮರಿಯಮ್ಮನ ಹಳ್ಳಿಯ ರಂಗಭೂಮಿ ಕಲಾವಿದೆ ಡಾ.ಕೆ. ನಾಗರತ್ನಮ್ಮ ಅವರ ಸಾಧನೆ. ಪರಿಣಿತಾ ಮಹಿಳಾ ಗುಂಪಿನ ಸದಸ್ಯರಿಂದ ಅಲ್ಲದ ಔಷಧೀಯ ಉಪಯೋಗಗಳು, ಕಲ್ಪನಾ ಚಾವ್ಲಾ ಹಾಗೂ ಕಡಲೆಬೇಳೆ ವಡಾ, ಗೋಧಿ ಹಿಟ್ಟಿನ ಹಲ್ವಾ ಕುರಿತು ಮಾಹಿತಿ.  ಊರು-ಟೂರಿನಲ್ಲಿ ಕಲಬುರಗಿ ಸುತ್ತು-ಮುತ್ತಲ  ಪ್ರೇಕ್ಷಣೀಯ ಸ್ಥಳಗಳ ಪರಿಚಯ.  ಕಲಬುರಗಿಯ ಛಾಯಾ ಭರತನೂರ ಅವರಿಂದ ಭಾವಗೀತೆ.  ಇವುಗಳ ಜೊತೆಗೆ. ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್, ನುಡಿಮುತ್ತು, ನಗೆಹನಿ ಮೂಡಿ ಬರಲಿವೆ.  ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

Thursday, 28 January 2016

ಗವಿಮಠ ಜಾತ್ರೆಯಲ್ಲಿ ಕಾನೂನು ಅರಿವು : ಲೋಕ ಅದಾಲತ್ ಬಗ್ಗೆ ಜಾಗೃತಿ


ಕೊಪ್ಪಳ ಜ. 28 (ಕರ್ನಾಟಕ ವಾರ್ತೆ) : ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಆವರಣದಲ್ಲಿ ಲೋಕ ಅದಾಲತ್ ಹಾಗೂ ಕಾನೂನಿನ ಅರಿವು ಕುರಿತು ಸಾರ್ವಜನಿಕರಿಗೆ ಅರಿವು ಮ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಲ್ಲ ತಾಲೂಕು ಕಾನೂನು ಸೇವಾ ಸಮಿತಿಗಳಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪ್ರತಿ ಎರಡನೆ ಶನಿವಾರ ಮಾಸಿಕ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ತಿಳಿಸಿದ್ದಾರೆ.
     ಪ್ರಸಕ್ತ ವರ್ಷದ ಪ್ರತಿ ಎರಡನೆ ಶನಿವಾರದಂದು ಮಾಸಿಕ ಲೋಕ ಅದಾಲತ್ ಅನ್ನು ಆಯೋಜಿಸಲಾಗುತ್ತಿದೆ.  2016 ರ ಫೆ. 13 ರಂದು ಬ್ಯಾಂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳು, ಮಾರ್ಚ್ 12 ರಂದು ಸಿವಿಲ್ ಮತ್ತು ಕಂದಾಯ ಪ್ರಕರಣಗಳು, ಏಪ್ರಿಲ್ 09 ರಂದು ಕಾರ್ಮಿಕ ಮತ್ತು ಕೌಟುಂಬಿಕ ಪ್ರಕರಣಗಳು, ಮೇ 14 / ಜೂನ್ 11 ರಂದು ಮೋಟಾರು ವಾಹನ ಅಪಘಾತ ಪ್ರಕರಣಗಳು, ಜುಲೈ 09 ರಂದು ವಿದ್ಯುತ್, ನೀರು, ದೂರವಾಣಿ, ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳು, ಆಗಸ್ಟ್ 13 ರಂದು ಬ್ಯಾಂಕ್‍ಗೆ ಸಂಬಂಧಿಸಿದ ಪ್ರಕರಣಗಳು, ಸೆಪ್ಟಂಬರ್ 10 ರಂದು ಕ್ರಿಮಿನಲ್ ಪ್ರಕರಣಗಳು, ಅಕ್ಟೋಬರ್ 08 ರಂದು ಟ್ರಾಫಿಕ್, ಮುನಿಸಿಪಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕ ಅದಾಲತ್ ಜರುಗಲಿದೆ.  ಗವಿಸಿದ್ದೇಶ್ವರ ಜಾತ್ರೆಗೆ ಲಕ್ಷಾಂತರ ಜನರು ಸುಮಾರು ಹದಿನೈದು ದಿನಗಳ ಕಾಲ ಆಗಮಿಸಲಿದ್ದು, ಈ ಅವಕಾಶವನ್ನು ಬಳಸಿಕೊಂಡು, ಕಾನೂನಿನ ಅರಿವು ಹಾಗೂ ಲೋಕ ಅದಾಲತ್ ಬಗ್ಗೆ ಹೆಚ್ಚಿನ ಜನರನ್ನು ತಲುಪುವಂತೆ ಮಾಡುವ ನಿಟ್ಟಿನಲ್ಲಿ, ಕಾನೂನು ಸೇವಾ ಪ್ರಾಧಿಕಾರವು ಜಾತ್ರಾ ಆವರಣದಲ್ಲಿ ಮಳಿಗೆಯನ್ನು ತೆರೆದಿದೆ.  ಈ ಮಳಿಗೆಯಲ್ಲಿ ಲೋಕ ಅದಾಲತ್‍ಗೆ ಸಂಬಂಧಿಸಿದ ವೇಳಾಪಟ್ಟಿ ಹಾಗೂ ಲೋಕ ಅದಾಲತ್‍ನಿಂದ ಕಕ್ಷಿದಾರರಿಗೆ ಆಗುವ ಅನುಕೂಲಗಳ ಬಗ್ಗೆ ಬ್ಯಾನರ್ ಪ್ರದರ್ಶಿಸಲಾಗುತ್ತಿದೆ.  ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ‘ಜನ ಸಾಮಾನ್ಯರಿಗೆ ಕಾನೂನಿನ ಮಾಹಿತಿ’ ಎನ್ನುವ ಪುಸ್ತಕ ಹಾಗೂ ಕಾನೂನಿಗೆ ಸಂಬಂಧಿತ ಕರಪತ್ರಗಳು, ಮಡಿಕೆ ಪತ್ರಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ಲೋಕ ಅದಾಲತ್‍ಗಳ ಮೂಲಕ ಸೌಹಾರ್ದಯುತವಾಗಿ ಪ್ರಕರಣವು ಇತ್ಯರ್ಥಗೊಳ್ಳುವುದರಿಂದ ಬಾಂಧವ್ಯವು ಉಳಿದು ವಿವಾದವು ಇತ್ಯರ್ಥಗೊಳ್ಳಲಿದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ವಿಲೇವಾರಿಗಾಗಿ ಇದೊಂದು ವಿಶೇಷ ಅವಕಾಶವಾಗಿದ್ದು, ಸಾರ್ವಜನಿಕರು  ಸದುಪಯೋಗಪಡಿಸಿಕೊಳ್ಳುವಂತೆ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇದರ ಜೊತೆಗೆ ಕೈ ಜೋಡಿಸಿದ್ದು, ಮಕ್ಕಳ ಪೌಷ್ಠಿಕ ಆಹಾರ, ಗರ್ಭಿಣಿಯರು ಸೇವಿಸಬೇಕಾದ ಪೌಷ್ಠಿಕ ಆಹಾರಗಳ ಬಗ್ಗೆ ಮಳಿಗೆಯಲ್ಲಿ ಕರಪತ್ರಗಳು, ಮಡಿಕೆ ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಿದ್ದಾರೆ.  ಈ ಮೂಲಕ ಹೆಚ್ಚು ಜನರನ್ನು ಇಲಾಖೆ ತಲುಪಲು ಉತ್ತಮ ಸದಾವಕಾಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತಿ ಚುನಾವಣೆ : ಚುನಾವಣಾಧಿಕಾರಿಗಳ ನೇಮಕ

ಕೊಪ್ಪಳ, ಜ.28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ 29 ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.  
     ಕುಷ್ಟಗಿ ತಾಲೂಕಿನಲ್ಲಿ ಹನಮನಾಳ, ಹನಮಸಾಗರ, ಚಳಗೇರಾ, ಕೊರಡಕೇರಾ, ಹಿರೇಮನ್ನಾಪುರ, ಯರಗೇರಾ ಮತ್ತು ಮೆಣೇಧಾಳ ಕ್ಷೇತ್ರಗಳಿದ್ದು, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೊಪ್ಪಳ ಇವರನ್ನು ಚುನಾವಣಾಧಿಕಾರಿಯನ್ನಾಗಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಕುಷ್ಟಗಿ ಇವರನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
     ಕೊಪ್ಪಳ ತಾಲೂಕಿನಲ್ಲಿ ಅಳವಂಡಿ, ಹಿರೇಸಿಂಧೋಗಿ, ಲೇಬಗೇರಿ, ಇರಕಲ್ಲಗಡಾ, ಬಂಡಿಹರ್ಲಾಪುರ, ಹಿಟ್ನಾಳ, ಗಿಣಗೇರಾ, ಗೊಂಡಬಾಳ ಕ್ಷೇತ್ರಗಳಿದ್ದು ಚುನಾವಣಾಧಿಕಾರಿ-ಉಪವಿಭಾಗಾಧಿಕಾರಿಗಳು, ಕೊಪ್ಪಳ ಹಾಗೂ ಸಹಾಯಕ ಚುನಾವಣಾಧಿಕಾರಿ-ಗ್ರೇಡ್-2 ತಹಶೀಲ್ದಾರ, ಕೊಪ್ಪಳ ಇವರನ್ನು ನೇಮಿಸಲಾಗಿದೆ.
     ಗಂಗಾವತಿ ತಾಲೂಕಿನಲ್ಲಿ ಆನೇಗುಂದಿ, ಮರಳಿ, ಸಿದ್ದಾಪುರ, ಹೇರೂರು, ಹುಲಿಹೈದರ್, ನವಲಿ, ಯರಡೋಣಾ, ಚಿಕ್ಕಮಾದಿನಾಳ-ವೆಂಕಟಗಿರಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ಚುನಾವಣಾಧಿಕಾರಿ-ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಕೊಪ್ಪಳ ಹಾಗೂ ಸಹಾಯಕ ಚುನಾವಣಾಧಿಕಾರಿ-ಸಹಾಯಕ ಕೃಷಿ ನಿರ್ದೇಶಕರು, ಗಂಗಾವತಿ ಇವರನ್ನು ನೇಮಿಸಲಾಗಿದೆ.
     ಯಲಬುರ್ಗಾ ತಾಲೂಕಿನಲ್ಲಿ ಹಿರೇವಂಕಲಕುಂಟಾ, ಚಿಕ್ಕಮ್ಯಾಗೇರಿ, ಮಂಗಳೂರ, ತಳಕಲ್ಲ, ಇಟಗಿ ಮತ್ತು ಮುಧೋಳ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ಚುನಾವಣಾಧಿಕಾರಿ- ಉಪನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಪ್ಪಳ ಹಾಗೂ ಸಹಾಯಕ ಚುನಾವಣಾಧಿಕಾರಿ-ಕ್ಷೇತ್ರ ಶಿಕ್ಷಣಾಧಿಕಾರಿಗಳು, ಯಲಬುರ್ಗಾ ಇವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಕೃಷಿಕರಿಗೆ ರಾಜ್ಯ ಮಟ್ಟದ ತರಬೇತಿ ಶಿಬಿರ

ಕೊಪ್ಪಳ, ಜ.28 (ಕರ್ನಾಟಕ ವಾರ್ತೆ): ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟ ಇವರ ವತಿಯಿಂದ ತರಕಾರಿ, ಪುಷ್ಪ ಬೆಳೆಗಳ ಮತ್ತು ಸಂರಕ್ಷಿತ ಬೇಸಾಯ (ಗ್ರೀನ್‍ಹೌಸ್) ಕ್ರಮಗಳ ಬಗ್ಗೆ ಮೂರು ದಿನಗಳ ರಾಜ್ಯ ಮಟ್ಟದ ತರಬೇತಿ ಶಿಬಿರವನ್ನು ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ.
      ವಿವಿಧ ತರಕಾರಿ ಮತ್ತು ಪುಷ್ಪ ಬೆಳೆಗಳಲ್ಲಿ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಕೊಯ್ಲೋತ್ತರ ಹಾಗೂ ಸಂಸ್ಕರಣಾ ಕ್ರಮಗಳು, ಮಾರುಕಟ್ಟೆ ವಿಧಾನಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಫೆ.15 ರೊಳಗಾಗಿ ಕೇಂದ್ರದಲ್ಲಿ ನೊಂದಾಯಿಸಬಹುದು. 
      ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟ-587103, ಮೊಬೈಲ್: 9482630790 ಇವರನ್ನು ಸಂಪರ್ಕಿಸಬಹುದು ಎಂದು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ಹೆಚ್.ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕಾ ಪಂಚಾಯತಿ ಚುನಾವಣೆ : ಚುನಾವಣಾಧಿಕಾರಿಗಳ ನೇಮಕ

ಕೊಪ್ಪಳ, ಜ.28 (ಕರ್ನಾಟಕ ವಾರ್ತೆ): ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ನಾಲ್ಕೂ ತಾಲೂಕುಗಳ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ   ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಯಲಬುರ್ಗಾ ತಾಲೂಕಿನ  ತಾ.ಪಂ. ಕ್ಷೇತ್ರ ಸಂಖ್ಯೆ 01 ರಿಂದ 12 ರವರೆಗೆ ಅಂದರೆ, ಗಾಣಧಾಳ, ತಾಳಕೇರಿ, ಹಿರೇವಂಕಲಕುಂಟಾ, ಮಾಟಲದಿನ್ನಿ, ಹಿರೇಅರಳಿಹಳ್ಳಿ, ಗೆದಿಗೇರಿ, ಮುರಡಿ, ವಜ್ರಬಂಡಿ, ಬಂಡಿ, ಹಿರೇಮ್ಯಾಗೇರಿ, ಮುಧೋಳ, ಕರಮುಡಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ತಹಶೀಲ್ದಾರರು, ಯಲಬುರ್ಗಾ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ದೈಹಿಕ ಶಿಕ್ಷಣಾಧಿಕಾರಿಗಳು, ಯಲಬುರ್ಗಾ ಇವರನ್ನು ನೇಮಿಸಲಾಗಿದೆ. ತಾ.ಪಂ. ಕ್ಷೇತ್ರ ಸಂಖ್ಯೆ 13 ರಿಂದ 24 ರವರೆಗೆ ಅಂದರೆ, ಮಂಗಳೂರು, ಬೇವೂರು, ಕುದ್ರಿಮೋತಿ, ಹಿರೇಬಿಡನಾಳ, ಇಟಗಿ, ರಾಜೂರ, ಬಳಿಗೇರಿ, ಶಿರೂರ, ಯರೇಹಂಚಿನಾಳ, ತಳಕಲ್, ಬನ್ನಿಕೊಪ್ಪ, ಬೆಣಕಲ್ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಯಲಬುರ್ಗಾ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಹಾಯಕ ನಿರ್ದೇಶಕರು, ನರೇಗಾ ಯೋಜನೆ, ತಾಲೂಕಾ ಪಂಚಾಯತ್, ಯಲಬುರ್ಗಾ ಇವರನ್ನು ನೇಮಿಸಲಾಗಿದೆ.
ಗಂಗಾವತಿ ತಾಲೂಕಿನ ತಾ.ಪಂ. ಕ್ಷೇತ್ರ ಸಂಖ್ಯೆ 01 ರಿಂದ 16 ರವರೆಗೆ ಅಂದರೆ, ಆನೇಗುಂದಿ, ಸಂಗಾಪೂರ, ಬಸಾಪಟ್ಟಣ, ಚಿಕ್ಕಜಂತಕಲ್, ಜಂಗಮರಕಲ್ಗುಡಿ, ಶ್ರೀರಾಮನಗರ, ಹೊಸಕೇರಾ, ಮುಸ್ಟೂರ, ಈಳಿಗನೂರು, ಉಳೇನೂರು, ಸಿದ್ದಾಪುರ, ಗುಂಡೂರು, ಬೂದಗುಂಪಾ, ಯರಡೋಣಾ, ಚಳ್ಳೂರ, ವಡ್ಡರಹಟ್ಟಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ತಹಶೀಲ್ದಾರರು, ಗಂಗಾವತಿ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಹಾಯಕ ಅಭಿಯಂತರರು, ಸ.ಕಾ.ನಿ.ಅ ಕಾರ್ಯಾಲಯ, ಜಿಲ್ಲಾ ಪಂಚಾಯತ್ ಉಪವಿಭಾಗ, ಗಂಗಾವತಿ ಇವರನ್ನು ನೇಮಿಸಲಾಗಿದೆ.  ತಾ.ಪಂ. ಕ್ಷೇತ್ರ ಸಂಖ್ಯೆ 17 ರಿಂದ 31 ರವರೆಗಿನ ಅಂದರೆ, ಹೇರೂರ, ಹಣವಾಳ, ಕೆಸರಟ್ಟಿ, ವೆಂಕಟಗಿರಿ, ಹಿರೇಬೆಣಕಲ್, ಚಿಕ್ಕಮಾದಿನಾಳ, ಆಗೋಲಿ, ಸುಳೇಕಲ್, ಹಿರೇಖೇಡಾ, ಹುಲಿಹೈದರ, ಗೌರಿಪುರ, ನವಲಿ, ಬೇವಿನಾಳ, ಮೈಲಾಪುರ ಮತ್ತು ಜೀರ್ಹಾಳ ಕಲ್ಗುಡಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗಂಗಾವತಿ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಗಂಗಾವತಿ ಇವರನ್ನು ನೇಮಿಸಲಾಗಿದೆ.
ಕುಷ್ಟಗಿ ತಾಲೂಕಿನ ತಾ.ಪಂ. ಕ್ಷೇತ್ರ ಸಂಖ್ಯೆ 01 ರಿಂದ 13 ರವರೆಗಿನ ಅಂದರೆ, ನಿಲೋಗಲ್ಲ, ತುಗ್ಗಲದೋಣಿ, ಹನುಮನಾಳ, ಮಾಲಗಿತ್ತಿ, ಹನುಮಸಾಗರ, ಕಬ್ಬರಗಿ, ಕಾಟಾಪುರ, ಹೂಲಗೇರಾ, ಕುಂಭಳಾವತಿ, ಬೆನಕನಾಳ, ಯರಗೇರಾ, ಅಡವಿಭಾವಿ ಮತ್ತು ಚಳಗೇರ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ತಹಶೀಲ್ದಾರರು, ಕುಷ್ಟಗಿ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಪತಹಶೀಲ್ದಾರರು, ನಾಡ ಕಾರ್ಯಾಲಯ, ಹನುಮಸಾಗರ ಇವರನ್ನು ನೇಮಿಸಲಾಗಿದೆ. ತಾ.ಪಂ. ಕ್ಷೇತ್ರ ಸಂಖ್ಯೆ 14 ರಿಂದ 25 ರವರೆಗೆ ಅಂದರೆ, ಕ್ಯಾದಿಗುಪ್ಪ, ಬಿಜಕಲ್ಲ, ಕಂದಕೂರು, ತಳುವಗೇರ, ಕೊರಡಕೇರ, ಹಿರೇಮನ್ನಾಪುರ, ಮುದೇನೂರು, ದೋಟಿಹಾಳ, ಜುಮಲಾಪುರ, ಹುಲಿಯಾಪುರ, ಕಳಮಳ್ಳಿ ಮತ್ತು ಮೆಣೇದಾಳ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಷ್ಟಗಿ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಷ್ಟಗಿ ಇವರನ್ನು ನೇಮಿಸಲಾಗಿದೆ.
ಕೊಪ್ಪಳ ತಾಲೂಕಿನ ತಾ.ಪಂ. ಕ್ಷೇತ್ರ ಸಂಖ್ಯೆ 01 ರಿಂದ 15 ರವರೆಗೆ ಅಂದರೆ, ಕವಲೂರು, ಅಳವಂಡಿ, ಬೋಚನಹಳ್ಳಿ, ಮತ್ತೂರ, ಬೆಟಗೇರಿ, ಕಾತರಕಿ ಗುಡ್ಲಾನೂರ, ಬಿಸರಳ್ಳಿ, ಹಿರೇಸಿಂಧೋಗಿ ಹಲಗೇರಾ, ಚಿಲವಾಡಗಿ, ಕಿನ್ನಾಳ, ಲೇಬಗೇರಾ, ಇಡಕಲ್ಲಗಡಾ, ಚಿಕ್ಕಬೊಮ್ಮನಾಳ ಮತ್ತು ವಣಬಳ್ಳಾರಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ತಹಶೀಲ್ದಾರರು, ಕೊಪ್ಪಳ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಪತಹಶೀಲ್ದಾರರು, ನಾಡ ಕಾರ್ಯಾಲಯ, ಇರಕಲ್ಲಗಡಾ ಇವರನ್ನು ನೇಮಿಸಲಾಗಿದೆ. ತಾ.ಪಂ. ಕ್ಷೇತ್ರ ಸಂಖ್ಯೆ 16 ರಿಂದ 29 ರವರೆಗಿನ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ಬಂಡಿಹರ್ಲಾಪುರ, ಅಗಳಕೇರಾ, ಹುಲಗಿ, ಹಿಟ್ನಾಳ, ಹೊಸಳ್ಳಿ, ಮುನಿರಾಬಾದ್ ಯೋಜನಾ ಗ್ರಾಮ, ಗಿಣೀಗೇರಾ, ತಾವರಗೇರಾ, ಕೂಕನಪಳ್ಳಿ, ಬೂದಗುಂಪಾ, ಕರ್ಕಿಹಳ್ಳಿ, ಕುಣಿಕೇರಿ, ಮುದ್ದಾಬಳ್ಳಿ ಮತ್ತು ಬಹದ್ದೂರಬಂಡಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಕೊಪ್ಪಳ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಪತಹಶೀಲ್ದಾರರು, ನಾಡ ಕಾರ್ಯಾಲಯ, ಅಳವಂಡಿ ಇವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು  ಆದೇಶದಲ್ಲಿ ತಿಳಿಸಿದ್ದಾರೆ.

ಭಾರತೀಯ ವಾಯುಪಡೆಗೆ ನೇಮಕಾತಿ ರ್ಯಾಲಿ

ಕೊಪ್ಪಳ ಜ. 28 (ಕರ್ನಾಟಕ ವಾರ್ತೆ) : ಭಾರತೀಯ ವಾಯುಪಡೆಯಲ್ಲಿ ‘ವೈ’ ಗುಂಪಿನ ಏರ್‍ಮೆನ್ (ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್,ಐ.ಎ.ಎಫ್ (ಪೊಲೀಸ್) ಮತ್ತು ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳ ಭರ್ತಿಗಾಗಿ ಫೆ. 17 ರಂದು ಚಾಮುಂಡಿ ವಿಹಾರ್ ಕ್ರೀಡಾಂಗಣ, ನಜರಬಾದ್, ಮೈಸೂರು ಇಲ್ಲಿ ನೇರ ನೇಮಕಕ್ಕಾಗಿ ರ್ಯಾಲಿ ಆಯೋಜಿಸಲಾಗಿದೆ. 
     ಕರ್ನಾಟಕ ರಾಜ್ಯದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ರ್ಯಾಲಿಯಲ್ಲಿ ಭಾಗವಹಿಸಲು ಅರ್ಹರು.  ಅಭ್ಯರ್ಥಿಗಳು ದಿನಾಂಕ: 1-8-1996 ರಿಂದ 30-11-1999 ರ ಅವಧಿಯಲ್ಲಿ ಜನಿಸಿದವರಾಗಿರಬೇಕು.
ವಿದ್ಯಾರ್ಹತೆ:  ‘ವೈ’  ಗುಂಪಿನ ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್, ಐ.ಐ.ಎಫ್ (ಪೊಲೀಸ್) ಹುದ್ದೆಗಳಿಗೆ ಯಾವುದೇ ವಿಷಯಗಳಲ್ಲಿ 10 + 2 ಅಥವಾ ದ್ವಿತೀಯ ಪಿ.ಯು.ಸಿ.ಯಲ್ಲಿ ಸರಾಸರಿ ಕನಿಷ್ಟ ಶೇ  50 ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಪಡೆದಿರಬೇಕು. ಅಥವಾ ಸಿ.ಬಿ.ಎಸ್.ಇ/ರಾಜ್ಯ ಶಿಕ್ಷಣ ಮಂಡಳಿ /ಪರಿಷತ್‍ನಿಂದ ಅಂಗೀಕೃತವಾದ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್‍ನಿಂದ 10+2 ಕ್ಕೆ ತತ್ಸಮಾನ ಎಂದು ಪರಿಗಣಿಸಲ್ಪಟ್ಟಿರುವ ಎರಡು ವರ್ಷಗಳ ವೃತ್ತಿಪರ ಶಿಕ್ಷಣದಲ್ಲಿ ಸರಾಸರಿ ಶೇ 50 ಅಂಕಗಳಿಸಿ ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಗಳಿಸಿರಬೇಕು.  ವೃತ್ತಿಪರ ಶಿಕ್ಷಣದಲ್ಲಿ ಇಂಗ್ಲೀಷ್ ಭಾಷೆ ಇಲ್ಲದಿದ್ದಲ್ಲಿ ಇಂಡರ್‍ಮೀಡಿಯೆಟ್/ ಮೆಟ್ರಿಕುಲೇಷನ್‍ನ ಇಂಗ್ಲೀಷ್ ವಿಷಯದಲ್ಲಿ ಶೇ 50 ಅಂಕ ಗಳಿಸಿರಬೇಕು.
    ‘ವೈ’ ಗುಂಪಿನ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ 10+2 ಅಥವಾ ದ್ವಿತೀಯ ಪಿ.ಯು.ಸಿ. ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಆಂಗ್ಲ ಭಾಷೆ ವಿಷಯಗಳನ್ನು ಹೊಂದಿದ್ದು, ಸರಾಸರಿ ಶೇ 50 ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಪಡೆದಿರಬೇಕು.
    ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯ ಮೂಲ ಅಂಕ ಪಟ್ಟಿಗಳು, ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ 4 ಸೆಟ್ ಜೆರಾಕ್ಸ್ ಪ್ರತಿಗಳು ಹಾಗೂ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 7 ಭಾವಚಿತ್ರಗಳೊಂದಿಗೆ ದಿನಾಂಕ: 17-2-2016 ರಂದು ಬೆಳಿಗ್ಗೆ ಚಾಮುಂಡಿ ವಿಹಾರ ಕ್ರೀಡಾಂಗಣ, ನಜಿರಬಾದ್, ಮೈಸೂರು ಇಲ್ಲಿ ಹಾಜರಾಗುವುದು.  ಅರ್ಹತಾ ನಿಬಂಧನೆಗಳು, ವೈದ್ಯಕೀಯ ವಾಯುದಳದ ವೆಬ್‍ಸೈಟ್  www.airmenselection.gov.in  ಗೆ ಭೇಟಿ ನೀಡಿ ಅಥವಾ, 7 ಏರ್‍ಮೆನ್ ಸೆಲೆಕ್ಷನ್ ಸೆಂಟರ್, ನಂ. 01, ಕಬ್ಬನ್ ರಸ್ತೆ, ಬೆಂಗಳೂರು-01  ಈ ಕಚೇರಿಯನ್ನು ದೂರವಾಣಿ ಸಂಖ್ಯೆ 080-25592100, ಇ-ಮೇಲ್ ವಿಳಾಸ ಮೂಲಕ ಸಂಪರ್ಕಿಸಿ ಅಭ್ಯರ್ಥಿಗಳು ಹತ್ತಿರದ ಉದ್ಯೋಗ ವಿನಿಯಮ ಕೇಂದ್ರವನ್ನು ಸಹ ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.

Wednesday, 27 January 2016

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ : ಜ.31 ರಂದು ಕಾಯಾಗಾರ

ಕೊಪ್ಪಳ, ಜ.27 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಹಂತದ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರವನ್ನು ಜ.31 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
     2016ರ ಮಾರ್ಚ್/ಏಪ್ರಿಲ್ ನಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಇದುವರೆಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಉತ್ತಮಪಡಿಸಲು ತಮ್ಮ ತಮ್ಮ ಶಾಲೆಗಳಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತ ಮಾಹಿತಿಯೊಂದಿಗೆ ಕಾರ್ಯಾಗಾರದಲ್ಲಿ ಖುದ್ದಾಗಿ ಮತ್ತು ಕಡ್ಡಾಯವಾಗಿ ಹಾಜರಾಗಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ವಿಷಯ ಪರಿವೀಕ್ಷಕರು, ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆಯಾ ಬ್ಲಾಕಿನ ಎಸ್.ಎಸ್.ಎಲ್.ಸಿ ನೋಡೆಲ್ ಅಧಿಕಾರಿಗಳು ಸಹ ಈ ಕಾರ್ಯಾಗಾರದಲ್ಲಿ ಹಾಜರಾಗುವಂತೆ ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ. ಶ್ಯಾಮಸುಂದರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಿತಿಮೀರಿದ ಬಡ್ಡಿ ವ್ಯವಹಾರ ತಡೆಗೆ ಗ್ರಾ.ಪಂ. ಮಟ್ಟದಲ್ಲಿ ಸಮಿತಿ ರಚನೆ- ಎಂ. ಕನಗವಲ್ಲಿ ಸೂಚನೆ

ಕೊಪ್ಪಳ ಜ. 27 (ಕರ್ನಾಟಕ ವಾರ್ತೆ) : ಜಿಲ್ಲೆಯ ಗ್ರಾಮೀಣ ಮಟ್ಟದಲ್ಲಿ ಮಿತಿ ಮೀರಿದ ಬಡ್ಡಿ ವ್ಯವಹಾರ, ಅನಧಿಕೃತವಾಗಿ ಲೇವಾದೇವಿ ಹಾಗೂ ಚೀಟಿ ವ್ಯವಹಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಹಕಾರ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚಿಸಲು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆ, ಪಾನ್ ಬ್ರೋಕರ್ಸ್ ಕಾಯ್ದೆ, ಚಿಟ್ ಫಂಡ್ ಕಾಯ್ದೆ ಹಾಗೂ ಮಿತಿ ಮೀರಿದ ಬಡ್ಡಿ ನಿಷೇಧ ಕಾಯ್ದೆಗಳ ಪಾಲನೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಈಗಾಗಲೆ ರಾಜ್ಯದಲ್ಲಿ ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆ, ಪಾನ್ ಬ್ರೋಕರ್ಸ್ ಕಾಯ್ದೆ, ಚಿಟ್ ಫಂಡ್ ಕಾಯ್ದೆ ಹಾಗೂ ಮಿತಿ ಮೀರಿದ ಬಡ್ಡಿ ನಿಷೇಧ ಕಾಯ್ದೆಗಳ ಪಾಲನೆ ಕುರಿತು ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ಮತ್ತು ವಿಭಾಗೀಯ ಮಟ್ಟದ ಸಮಿತಿಗಳು ರಚನೆಯಾಗಿರುತ್ತವೆ.  ಸಹಕಾರ ಇಲಾಖೆಯು ಈಗಾಗಲೆ ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಸಹಕಾರ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಿದೆ.  ಇದರನ್ವಯ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಯಾ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ, ಆಯಾ ವ್ಯಾಪ್ತಿಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹಾಘೂ ಪಂಚಾಯತಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡ ತ್ರಿ ಸದಸ್ಯ ಸಮಿತಿಯನ್ನು ಕೂಡಲೆ ರಚಿಸಬೇಕು.  ಮಿತಿ ಮೀರಿದ ಬಡ್ಡಿ ವ್ಯವಹಾರ, ಅನಧಿಕೃತವಾಗಿ ಲೇವಾದೇವಿ ಹಾಗೂ ಚೀಟಿ ವ್ಯವಹಾರ ನಡೆಸಲಾಗುತ್ತಿರುವ ಬಗ್ಗೆ ಸಾರ್ವಜನಿಕರು ತ್ರಿ ಸದಸ್ಯ ಸಮಿತಿಯ ಸದಸ್ಯರ ಗಮನಕ್ಕೆ ತರಬೇಕಾಗುತ್ತದೆ.  ಪ್ರತಿ ಗ್ರಾಮ ಪಂಚಾಯತಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ದೂರು ಪೆಟ್ಟಿಗೆ ಇಡಲು ಅಗತ್ಯ ಕ್ರಮ ಜರುಗಿಸಬೇಕು.  ಪ್ರತಿ ಏಳು ದಿನಕ್ಕೊಮ್ಮೆ ದೂರು ಪೆಟ್ಟಿಗೆಯನ್ನು ತೆರೆದು, ಮಿತಿ ಮೀರಿದ ಬಡ್ಡಿ ವ್ಯವಹಾರ, ಅನಧಿಕೃತ ಲೇವಾದೇವಿ ಹಾಗೂ ಚೀಟಿ ವ್ಯವಹಾರ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಬರುವ ದೂರುಗಳನ್ನು ತ್ರಿ ಸದಸ್ಯ ಸಮಿತಿಯ ಸದಸ್ಯರ ಗಮನಕ್ಕೆ ತರಬೇಕು.  ಈ ಸಮಿತಿಯು ಅಂತಹ ದೂರುಗಳ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಉಪಸ್ಥಿತರಿದ್ದ ಸಹಕಾರ ಸಂಘಗಳ ಉಪನಿಬಂಧಕ ಡಾ. ಉಮೇಶ್ ಅವರು ಮಾತನಾಡಿ, ಈಗಾಗಲೆ ತಮ್ಮ ಕಚೇರಿ ಹಾಗೂ ಸಹಾಯಕ ನಿಬಂಧಕರ ಕಚೇರಿಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಡಲಾಗಿದ್ದು, ಈವರೆಗೆ ಒಟ್ಟು 68 ದೂರುಗಳು ಬಂದಿವೆ.  ಈ ಪೈಕಿ 04 ದೂರುಗಳಿಗೆ ಎಫ್.ಐ.ಆರ್. ದಾಖಲಾಗಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ದೂರು ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ, ಎಪ್.ಐ.ಆರ್. ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ಪಶುಸಂಗೋಪನೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Monday, 25 January 2016

ಫಲಪುಷ್ಪ ಪ್ರದರ್ಶನ- ಗವಿಸಿದ್ದೇಶ್ವರ ರಥ ಪ್ರಮುಖ ಆಕರ್ಷಣೆ


ಕೊಪ್ಪಳ ಜ. 26 (ಕರ್ನಾಟಕ ವಾರ್ತೆ) : ಈ ಬಾರಿಯ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ತೋಟಗಾರಿಕೆ ಇಲಾಖೆಯು ಗವಿಮಠ ಜಾತ್ರಾ ಆವರಣದಲ್ಲಿ ಆಯೋಜಿಸಿರುವ ವಿಶೇಷ ಫಲ-ಪುಷ್ಪ ಪ್ರದರ್ಶನದಲ್ಲಿ ಗುಲಾಬಿ ಹೂ, ಚೆಂಡು ಹೂ ಸೇರಿದಂತೆ ಆಕರ್ಷಕ ವರ್ಣಮಯ ಹೂಗಳನ್ನು ಬಳಸಿ ನಿರ್ಮಿಸಲಾಗಿರುವ ಗವಿಸಿದ್ದೇಶ್ವರ ರಥದ ಮಾದರಿ ಪ್ರಮುಖ ಆಕರ್ಷಣೆಯಾಗಿದೆ.

     ತೋಟಗಾರಿಕೆ ಇಲಾಖೆಯು ಪ್ರತಿ ವರ್ಷ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಫಲ-ಪುಷ್ಪ ಪ್ರದರ್ಶನವನ್ನು ಗವಿಮಠದ ಜಾತ್ರಾ ಆವರಣದಲ್ಲಿ ಆಯೋಜಿಸುತ್ತಿದೆ.  ಈ ವರ್ಷ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.  ಫಲ-ಪುಷ್ಪ ಪ್ರದರ್ಶನದಲ್ಲಿ ಗುಲಾಬಿ ಮತ್ತು ಚೆಂಡು ಹೂ ಸೇರಿದಂತೆ ವಿವಿಧ ಹೂಗಳಿಂದ ನಿರ್ಮಿಸಿರುವ ಗವಿಸಿದ್ದೇಶ್ವರ ರಥೋತ್ಸವ ಎಲ್ಲರನ್ನು ಆಕರ್ಷಿಸುತ್ತಿದೆ.  ಅದರ ಜೊತೆಗೆ ವಿಶಿಷ್ಟ ಹೂಗಳಿಂದ ನಿರ್ಮಿಸಿರುವ ಗವಿಮಠದ ಸ್ವಾಗತ ಕಮಾನಿನ ಮಾದರಿಯಂತೂ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.  ವಿವಿಧ ಪುಷ್ಪಗಳಿಂದ ಗವಿಮಠದ ಸ್ವಾಗತ ಕಮಾನು ಹಾಗೂ ಗವಿಸಿದ್ದೇಶ್ವರ ರಥ ನಿರ್ಮಿಸಲು ಸುಮಾರು 20 ಸಾವಿರ ಕೆಂಪು ಗುಲಾಬಿ ಹೂಗಳನ್ನು ಬಳಸಲಾಗಿದ್ದು, ಅದರ ಜೊತೆಗೆ ಸುಮಾರು 3 ಕ್ವಿಂಟಾಲ್‍ನಷ್ಟು ಚೆಂಡು ಹೂಗಳನ್ನು ಬಳಸಿಕೊಳ್ಳಲಾಗಿದೆ.  

     ಫಲ-ಪುಷ್ಪ ಪ್ರದರ್ಶನದಲ್ಲಿ  ವಿವಿಧ ಬಗೆಯ ಆಕರ್ಷಕ ಹೂವುಗಳನ್ನು ಬಳಸಿಕೊಳ್ಳಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಲಿಲಿಯಂಸ್, ಜರ್ಬೆರಾ, ಕಾರ್ನೆಷಿಯನ್, ಗ್ಲಾಡಿಯೋಲಸ್, ಆಂಥೋರಿಯಂಸ್, ಸಿತಾಳೆ ಹೂ ಮುಂತಾದ ವಿವಿಧ ಬಣ್ಣ ಬಣ್ಣದ ಹೂಗಳನ್ನು ಬಳಸಿ ಅಲಂಕರಿಸಲಾಗಿದೆ. 

     ಶಿವಮೊಗ್ಗ ಜಿಲ್ಲೆಯ ಹರೀಶ್ ಅವರು ತರಕಾರಿ ಕೆತ್ತನೆ ಹಾಗೂ ವಿವಿಧ ಗಣ್ಯರು, ಮಹನೀಯರ ಭಾವಚಿತ್ರವನ್ನು ಕಲ್ಲಂಗಡಿ ಹಣ್ಣಿನಲ್ಲಿ ಅನಾವರಣಗೊಳಿಸಿದ್ದು, ಸ್ವಾಮಿ ವಿವೇಕಾನಂದರು, ಸುಭಾಶ್‍ಚಂದ್ರ ಭೋಸ್, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ್ದಾರೆ. ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ, ಕೊಪ್ಪಳದ ಕೋಟೆ, ಅಶೋಕ ಸ್ತಂಭ ಹಾಗೂ ಗವಿಸಿದ್ದೇಶ್ವರ ರಥದ ಮಾದರಿ ಹಾಗೂ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರ ಭಾವಚಿತ್ರವನ್ನು ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಲಾಗಿದೆ.
     ಫಲ-ಪುಷ್ಪ ಪ್ರದರ್ಶನದಲ್ಲಿ ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವ ತೂಗು ಉದ್ಯಾನ, ವರ್ಟಿಕಲ್ ಗಾರ್ಡನ್ ಪದ್ಧತಿಯನ್ನು ಆಕರ್ಷಕ ರೀತಿಯಲ್ಲಿ ಪರಿಚಯಿಸಲಾಗಿದೆ.  
     ಈ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಸುಮಾರು 02 ಸಾವಿರ ಅಲಂಕಾರಿಕ ಸಸ್ಯಗಳು ಹಾಗೂ 03 ಸಾವಿರ ಹೂವಿನ ಕುಂಡಗಳನ್ನು ಬಳಸಲಾಗಿದ್ದು, ಪುಷ್ಪದಿಂದ ರಚಿಸಿದ ವಿವಿಧ ವಿನ್ಯಾಸದ ರಂಗೋಲಿಗಳು.  ಅಲಂಕಾರಿಕ ಸಸ್ಯ ಕುಂಡಗಳ ಜೋಡಣೆ. ಮನಸೂರೆಗೊಳ್ಳುವ ಪುಷ್ಪಾಲಂಕೃತವಾದ ವಿವಿಧ ಕೃತಕ ಮಾದರಿಗಳು.  ಜಿಲ್ಲೆಯ ನಾನಾ ಭಾಗದ ರೈತರು ಬೆಳೆದ ಮಾದರಿ ಹಣ್ಣು ಮತ್ತು ತರಕಾರಿ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳ ಪ್ರದರ್ಶನ.  ಔಷಧಿ ಸಸ್ಯಗಳ ಪ್ರದರ್ಶನ ಮತ್ತು ಮಾಹಿತಿ.  ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ  ವಿವಿಧ ಯೋಜನೆಗಳ ಬಗ್ಗೆ ಫ್ಲೆಕ್ಸ್‍ಗಳ ಮೂಲಕ ಮಾಹಿತಿ ನೀಡಲಾಗುವುದು.  ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ದುರ್ಗಾ ಪ್ರಸಾದ್, ಹನುಮೇಶ್ ನಾಯಕ್ ಹಾಗೂ ತರಬೇತಿಕೇಂದ್ರದ ವಿದ್ಯಾರ್ಥಿಗಳು  ಫಲ-ಪುಷ್ಪ ಪ್ರದರ್ಶನವನ್ನು ಆಕರ್ಷಕವಾಗಿ ರಚಿಸುವಲ್ಲಿ ಶ್ರಮ ವಹಿಸಿದ್ದಾರೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ಅವರು.

ಉತ್ತಮ ಸೇವೆ ಸಲ್ಲಿಸಿದವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ


ಕೊಪ್ಪಳ ಜ. 26 (ಕ.ವಾ) : ಸರ್ಕಾರಿ ಸೇವೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ರಾಜ್ಯ ಸರ್ಕಾರಿ ಅಧಿಕಾರಿ, ನೌಕರರಿಗೆ ಸರ್ಕಾರದ ವತಿಯಿಂದ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ಕೊಪ್ಪಳ ಜಿಲ್ಲೆಯ ಆರು ಅಧಿಕಾರಿ, ಸಿಬ್ಬಂದಿಗಳಿಗೆ ರಾಜ್ಯ ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಪ್ರದಾನ ಮಾಡಿದರು.
     ಸರ್ಕಾರಿ ಸೇವೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಜಿಲ್ಲಾ ಮಟ್ಟದಲ್ಲಿಯೂ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದೆ.  ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ, ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಸ್. ರೆಡ್ಡಿ ಕೊಂಡಮಡಗುಲಾ, ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್.ಎಂ. ಶೆಟ್ಟಿ, ಆನೆಗೊಂದಿ ಪಿಡಿಓ ಸುರೇಶ ಚಲವಾದಿ, ಬೂದಗುಂಪಾ ಗ್ರಾಮ ಲೆಕ್ಕಿಗ ಈಶ್ವರಪ್ಪ ಹಾಗೂ ಆರೋಗ್ಯ ಇಲಾಖೆ ವಾಹನ ಚಾಲಕ ಸುಲ್ತಾನ್ ಮಹಮ್ಮದ್ ಅವರು ಈ ವರ್ಷದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ 67ನೇ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ : ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವವರನ್ನು ಸನ್ಮಾನಿಸಲಾಯಿತು.  ಕ್ರೀಡಾ ಕ್ಷೇತ್ರದಲ್ಲಿ ಗಂಗಾವತಿಯ ಸಾಧಿಕ್ ನವಾಜ್.  ಶಿಕ್ಷಣ ಕ್ಷೇತ್ರದಲ್ಲಿ ಕುಕನೂರಿನ ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ ಗಾಯಿತ್ರಿ ಕುಲಕರ್ಣಿ ಹಾಗೂ ಸಂಸ್ಕøತಿ ಕ್ಷೇತ್ರದಲ್ಲಿ ಕೊಪ್ಪಳದ ಹಿರಿಯ ಜಾನಪದ ಕಲಾವಿದ ಗೊಂದಲಿಗರ ಹನುಮಂತಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ, ವಿಧಾನಪರಿಷತ್ ಸದಸ್ಯ ಅಮರನಾಥ ಪಾಟೀಲ್,  ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ್ ಜುಮ್ಮನ್ನವರ್, ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

ಯುವ ಜನತೆ ಪ್ರಜಾಪ್ರಭುತ್ವದ ಕರ್ತವ್ಯ ನಿಭಾಯಿಸಿ- ಡಾ. ತ್ಯಾಗರಾಜನ್


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಭಾರತ ದೇಶ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಮತದಾನದ ಹಕ್ಕು ಪಡೆಯುವ ಯುವ ಜನತೆ, ಪ್ರಜಾಪ್ರಭುತ್ವದ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಕರೆ ನೀಡಿದರು.

     ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಯುವಕರಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಬರಬೇಕು.  ಅರ್ಹ ಯುವಜನತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು.  ಚುನಾವಣೆ ಸಂದರ್ಭದಲ್ಲಿ ಎಲ್ಲ ಮತದಾರರು ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಯುವ ಜನತೆ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಯುವ ಮತದಾರರಿಗೆ ಕರೆ ನೀಡಿದರು.
     ಸಮಾರಂಭದಲ್ಲಿ ನೂತನ ಯುವ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿದ ಕೂಡಲೆ, ಯುವ ಮತದಾರರು ಮಹತ್ವದ ಜವಾಬ್ದಾರಿ ಪಡೆದಿದ್ದೇವೆ ಎನ್ನುವುದನ್ನು ಮರೆಯಬಾರದು.  ಭಾರತ ಚುನಾವಣಾ ಆಯೋಗ, ದೇಶದ ಮತದಾರರು ಹಾಗೂ ಯುವಕರಲ್ಲಿ ಮತದಾನದ ಮಹತ್ವದ ಬಗ್ಗೆ ಮತದಾರರ ದಿನಾಚರಣೆ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ ಎಂದರು.
      ವಿಶೇಷ ಉಪನ್ಯಾಸ ನೀಡಿದ ಕೊಪ್ಪಳ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರಭುರಾಜ್ ನಾಯಕ್ ಅವರು, ಭಾರತ ದೇಶ ಅತ್ಯಂತ ಹೆಚ್ಚು ಯುವ ಮತದಾರರನ್ನು ಹೊಂದಿರುವ ದೇಶವಾಗಿದೆ. ಮಾಧ್ಯಮಗಳೂ ಸಹ ರಾಜಕೀಯ ಸಮಾಜೀಕರಣಗೊಳಿಸಲು ಶ್ರಮಿಸಿದಲ್ಲಿ ಪ್ರಜಾಪ್ರಭುತ್ವಕ್ಕೆ ಹೆಚ್ಚು ಬಲ ಸಿಗಲಿದೆ ಎಂದರು.
     ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪ ವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ತಹಸಿಲ್ದಾರ್ ಪುಟ್ಟರಾಮಯ್ಯ ಉಪಸ್ಥಿತರಿದ್ದರು, ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.  ನೂತನವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಯುವ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು.

ಗವಿಸಿದ್ದೇಶ್ವರ ಜಾತ್ರೆ : ಜ. 26 ರಿಂದ ವಿಶೇಷ ಫಲ ಪುಷ್ಪ ಪ್ರದರ್ಶನ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಕೊಪ್ಪಳ ನಗರದಲ್ಲಿ ಜರುಗುವ  ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಆವರಣದಲ್ಲಿ ತೋಟಗಾರಿಕೆ ಇಲಾಖೆ (ಜಿ.ಪಂ) ಕೊಪ್ಪಳ ವತಿಯಿಂದ ವಿಶೇಷ ಫಲ ಪುಷ್ಟ ಪ್ರದರ್ಶನವನ್ನು ಜ. 26 ರಿಂದ 28 ರವರೆಗೆ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ.
      ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಫಲ ಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಫಲ ಪುಷ್ಪ ಪ್ರದರ್ಶನದ ವಿಶೇಷತೆಗಳೆಂದೆರೆ,  ಪುಷ್ಪಾಲಂಕೃತ  ಶ್ರೀ ಗವಿಸಿದ್ದೇಶ್ವರ ರಥ, ಅಲ್ಲದೆ ಪುಷ್ಪಾಲಂಕೃತ  ಶ್ರೀ ಗವಿಸಿದ್ದೇಶ್ವರ ಮಹಾದ್ವಾರ. ಪುಷ್ಪಾಲಂಕೃತ  ಶ್ರೀ ಶಿವಶಾಂತವೀರ ಸ್ವಾಮಿಗಳು ಉಪಯೋಗಿಸಿದ ಬಂಡಿ. ವರ್ಟಿಕಲ್ ಗಾರ್ಡನ್.  ವಿವಿಧ ತರಕಾರಿ ಕೆತ್ತನೆಗಳು.  ಪುಷ್ಪದಿಂದ ರಚಿಸಿದ ವಿವಿಧ ವಿನ್ಯಾಸದ ರಂಗೋಲಿಗಳು.  ಅಲಂಕಾರಿಕ ಸಸ್ಯ ಕುಂಡಗಳ ಜೋಡಣೆ. ಮನಸೂರೆಗೊಳ್ಳುವ ಪುಷ್ಪಾಲಂಕೃತವಾದ ವಿವಿಧ ಕೃತಕ ಮಾದರಿಗಳು.  ಜಿಲ್ಲೆಯ ನಾನಾ ಭಾಗದ ರೈತರು ಬೆಳೆದ ಮಾದರಿ ಹಣ್ಣು ಮತ್ತು ತರಕಾರಿ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳ ಪ್ರದರ್ಶನ.  ಔಷಧಿ ಸಸ್ಯಗಳ ಪ್ರದರ್ಶನ ಮತ್ತು ಮಾಹಿತಿ.  ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ  ವಿವಿಧ ಯೋಜನೆಗಳ ಬಗ್ಗೆ ಫ್ಲೆಕ್ಸ್‍ಗಳ ಮೂಲಕ ಮಾಹಿತಿ. ವಿದ್ಯಾರ್ಥಿಗಳಿಂದ ರಚಿತವಾದ ವಿವಿಧ ಮಾದರಿಗಳ ಪ್ರದರ್ಶನ ಇರಲಿದೆ. 
     ಇದರ ಜೊತೆಗೆ ಇಲಾಖೆಯ ವಿವಿಧ ಯೋಜನೆಗಳನ್ನು ಬಿಂಬಿಸುವ ಮಾಹಿತಿಗಳನ್ನು ಇಲ್ಲಿ ಒದಗಿಸಲಾಗುವುದು.  ಈ ವಿಶೇಷ ಫಲ ಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ರೈತ ಬಾಂಧವರು ಭೇಟಿ ನೀಡಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರಾದ ಶ್ರೀ ಶಶಿಕಾಂತ ಕೋಟಿಮನಿ ರವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಗವಿಸಿದ್ದೇಶ್ವರ ಜಾತ್ರೆ : ಪಾರ್ಕಿಂಗ್ ವ್ಯವಸ್ಥೆ ಹಾಗೂ ಮಾರ್ಗ ಬದಲಾವಣೆ

ಕೊಪ್ಪಳ ಜ.25(ಕರ್ನಾಟಕವಾರ್ತೆ): ಶ್ರೀ ಗವಿಸಿದ್ದೇಶ್ವರನ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಜಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗಾಗಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಮಾರ್ಗ ಬದಲಾವಣೆಗಳನ್ನು ಮಾಡಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಪಾರ್ಕಿಂಗ ವ್ಯವಸ್ಥೆ : ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಕುಷ್ಟಗಿ ರಸ್ತೆ ರೈಲ್ವೇ ಗೇಟ್ ಕಡೆಯಿಂದ ಬರುವ ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಕುಷ್ಟಗಿ ರಸ್ತೆಯಲ್ಲಿರುವ ತಾಲೇಡಾ ಹೋಂಡಾ ಶೋ ರೂಂ ಎದುರು.  ಎಸ್‍ಎಫ್‍ಎಸ್ ಶಾಲೆ ಕಡೆಯಿಂದ ಆಗಮಿಸುವ ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಶ್ರೀ ಮಲಿಯಮ್ಮ ಗುಡಿಯ ಹಿಂದುಗಡೆ ಖಾಲಿ ಸ್ಥಳದಲ್ಲಿ.  ಕುವೆಂಪು ನಗರ ಕಡೆಯಿಂದ ಬರುವ ಮೋಟಾರ್ ಸೈಕಲ್, ಟಾಂಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ   ಪಾಂಡುರಂಗ ಗುಡಿಯ ಹಿಂದೆ ಮತ್ತು ಹೂವಿನಾಳ ರಸ್ತೆ ಗುಡ್ಡದ ಬದಿಗೆ ಖಾಲಿ ಸ್ಥಳದಲ್ಲಿ.  ಗಡಿಯಾರ ಕಂಭ ಕಡೆಯಿಂದ ಬರುವ ಮೋಟಾರ್ ಸೈಕಲ್, ಟಾಂಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಆಯುರ್ವೇದಿಕ್ ಕಾಲೇಜು ಪಕ್ಕದ ಖಾಲಿ ಜಾಗೆ ಹಳೆ ಜಾತ್ರೆ ಆವರಣ.  ಬಸವೇಶ್ವರ ವೃತ್ತದ ಕಡೆಯಿಂದ ಬರುವ ವಿಐಪಿ ವಾಹನಗಳಿಗೆ ಗವಿಮಠ ರಸ್ತೆಯಲ್ಲಿ ಬಿಬಿಎಂ ಕಾಲೇಜ್ ಆವರಣದಲ್ಲಿ. ಬಸವೇಶ್ವರ ವೃತ್ತದ ಕಡೆಯಿಂದ ಬರುವ ಎತ್ತಿನಬಂಡಿಗಳಿಗೆ ಗವಿಮಠ ರಸ್ತೆಯಲ್ಲಿ ಬಿಬಿಎಂ ಕಾಲೇಜ್ ಪಕ್ಕದಲ್ಲಿ ಅರಣ್ಯ ಇಲಾಖೆ ಖಾಲಿ ಸ್ಥಳದಲ್ಲಿ.  ಬಸವೇಶ್ವರ ವೃತ್ತದ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಭಾರತ ಗ್ಯಾಸ್ ಕಚೇರಿ ಎದುರುಗಡೆ ಗವಿಮಠ ರಸ್ತೆ,  ಗವಿಶ್ರೀ ನಗರ 3ನೇ ಕ್ರಾಸ್ ರಸ್ತೆ ಮಾರ್ಗ.  ಅಶೋಕ ಸರ್ಕಲ್ ಕಡೆಯಿಂದ ಬರುವ ಆಟೋ, ಲಾರಿ, ಟ್ರ್ಯಾಕ್ಟರ್, ಟಾಂಟಾಂ, ಎತ್ತಿನಬಂಡಿಗಳಿಗೆ ಬಿ.ಎಸ್ ಪವಾರ ಎದುರುಗಡೆ ಕೆಇಬಿ ಗ್ರಿಡ್ ಮಾರ್ಗವಾಗಿ ಮಲಿಯಮ್ಮ ದೇವಸ್ಥಾನ.  ಕೊಪ್ಪಳ ಇತರೆ ಕಡೆಯಿಂದ ಬರುವ ಮೋಟಾರ್ ಸೈಕಲ್, ಕಾರ್‍ಗಳಿಗೆ ಎಪಿಎಂಸಿ 1,2,3,4,5 ನೇ ಗೇಟ್ ಮುಖಾಂತರ ಎಪಿಎಂಸಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಭಾರಿ ವಾಹನಗಳ ಮಾರ್ಗ ಬದಲಾವಣೆ ವ್ಯವಸ್ಥೆ : ಜಾತ್ರೆಯ ಅಂಗವಾಗಿ ಜ.26 ರಂದು ಬೆಳಿಗ್ಗೆ 11 ಗಂಟೆಯಿಂದ  ರಾ. 10 ಗಂಟೆಯವರೆಗೆ ಜಾತ್ರೆಗೆ ಬರುವ ವಾಹನಗಳು ಮತ್ತು ಸಾರ್ವಜನಿಕ ಬಸ್‍ಗಳನ್ನು ಹೊರತುಪಡಿಸಿ ಬೇರೆಲ್ಲಾ ಭಾರಿ ವಾಹನಗಳನ್ನು ಗಿಣಿಗೇರಾ ಕ್ರಾಸ್‍ದಿಂದ ಕರ್ಕಿಹಳ್ಳಿ ಕ್ರಾಸ್, ಹಿರೇಬಗನಾಳ, ಹ್ಯಾಟಿ, ಚಿಕ್ಕಸಿಂದೋಗಿ, ಹಲಗೇರಿ ಕ್ರಾಸ್ ಮುಖಾಂತರ ರಾ.ಹೆ-63 ಮುಖಾಂತರ ಕುಕನೂರು, ಗದಗ ಕಡೆಗೆ ಹೋಗಬಹುದಾಗಿದೆ. 
     ಅದೇ ರೀತಿ ಹಲಗೇರಿ ಕ್ರಾಸ್‍ದಿಂದ ಸಿಂದೋಗಿ, ಗೊಂಡಬಾಳ, ಹ್ಯಾಟಿ, ಕರ್ಕಿಹಳ್ಳಿ, ಗಿಣಿಗೇರಾ ಮುಖಾಂತರವಾಗಿ ಗಂಗಾವತಿ-ಹೊಸಪೇಟೆ ಮಾರ್ಗವಾಗಿ ಹಾಗೂ ಜ. 27 ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 12 ರವರೆಗೆ ಜಾತ್ರೆಗೆ ಬರುವ ವಾಹನಗಳು ಮತ್ತು ಸಾರ್ವಜನಿಕ ಬಸ್‍ಗಳನ್ನು ಹೊರತುಪಡಿಸಿ ಬೇರೆಲ್ಲಾ ಭಾರಿ ವಾಹನಗಳನ್ನು ಗಿಣಿಗೇರಾ ಕ್ರಾಸ್‍ದಿಂದ ಕರ್ಕಿಹಳ್ಳಿ ಕ್ರಾಸ್, ಹಿರೇಬಗನಾಳ, ಹ್ಯಾಟಿ, ಚಿಕ್ಕಸಿಂದೋಗಿ, ಹಲಗೇರಿ ಕ್ರಾಸ್ ಮುಖಾಂತರ ರಾ.ಹೆ-63 ಮುಖಾಂತರ ಕುಕನೂರು, ಗದಗ ಕಡೆಗೆ ಹೋಗಬಹುದಾಗಿದೆ.   ಈ ಆದೇಶವು ಜ. 26 ರಿಂದ 28 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದೆ

ಗಂಗಾವತಿಯಲ್ಲಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ, ಕೊಪ್ಪಳ,  ಶ್ರೀಗುರು ಚನ್ನಮಲ್ಲಿಕಾರ್ಜುನ ಸಂಸ್ಥೆಯವರÀ ಸಂಯುಕ್ತ ಆಶ್ರಯದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ವಸ್ತು ಪ್ರದರ್ಶನ ಹಾಗೂ ಮಾರಾಟ  ಮೇಳ ಗಂಗಾವತಿಯ ಶ್ರೀ ಗುರು ಚನ್ನಬಸವ ಶಿವಯೋಗಿಗಳ ಜಾತ್ರೆ ಸಂದರ್ಭದಲ್ಲಿ ಆಯೋಜಿಸಲಾಯಿತು.
     ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಿ.ಪಿ ವಸಂತಪ್ರೇಮ ಉದ್ಘಾಟಿಸಿ ಮಹಿಳೆಯರಿಗೆ ಮಹಿಳಾ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ತಯಾರಿಸಿದ ಕೈಕಸುತಿ ಕಲೆಗಳ ವಸ್ತುಗಳ ಸಂಡಿಗೆ, ಹಪ್ಪಳ, ಅಲಂಕಾರಿಕ ಆಭರಣ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತದೆ. ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಕೌಶಲ್ಯ ತರಬೇತಿ ನೀಡಿ ಮಹಿಳೆಯರನ್ನು ಉದ್ಯಮಿಗಳನ್ನಾಗಿ ರೂಪಿಸಲಾಗುತ್ತಿದೆ ಎಂದರು.
     ನಿಗಮದ ಅಭಿವೃದ್ಧಿ ನಿರೀಕ್ಷಕಿ ಸುಧಾ ಎಂ. ಚಿದ್ರಿ, ಮಹಿಳಾ ಸ್ವ-ಉದ್ಯೋಗ ಮಾರ್ಗದರ್ಶನ ಕೇಂದ್ರದ ಗೀತಾ ಎ. ಹಿರೇಮನಿ, ಶಿಶು ಅಭಿವೃದ್ಧಿ ಯೋಜನೆ ಗಂಗಾವತಿಯ ಎಲ್ಲಾ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಜ. 26 ರಿಂದ 28 ರವರೆಗೆ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಜ. 26 ರಂದು ಬೆಳಿಗ್ಗೆ ಕಾರಟಗಿಯಿಂದ ಹೊರಟು 8-45 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುವ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ 2 ಗಂಟೆಗೆ ಕಾರಟಗಿಗೆ ತೆರಳಿ ವಾಸ್ತವ್ಯ ಮಾಡುವರು.  ಸಚಿವರು ಜ. 27 ಮತ್ತು 28 ರಂದು ಕಾರಟಗಿಯಲ್ಲಿ ವಾಸ್ತವ್ಯ ಮಾಡುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಮದ್ಯ, ಮಾದಕಗಳ ವ್ಯಸನದಿಂದ ಕಿರಿಯರ ಮರಣ ಪ್ರಮಾಣ ಹೆಚ್ಚಳ : ಬಸವರಾಜ


ಕೊಪ್ಪಳ, ಜ.25 (ಕರ್ನಾಟಕ ವಾರ್ತೆ): ರೋಗಗಳ ಭಂಡಾರವಾಗಿರುವ ಮದ್ಯ, ಮಾದಕಗಳ ವ್ಯಸನದಿಂದಾಗಿ ಇಂದು ದೇಶದಲ್ಲಿ ಕಿರಿಯರ ಮರಣ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದು ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು, ಮುನಿರಾಬಾದ್‍ನ ಪ್ರಾಚಾರ್ಯ ಬಸವರಾಜ ಅವರು ಹೇಳಿದರು. 

     ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ, ಸರ್ವೋದಯ (ಜಿಲ್ಲಾ ಮಕ್ಕಳ ಸಹಾಯವಾಣಿ 1098) ಸಂಸ್ಥೆ ಹಾಗೂ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು, ಮುನಿರಾಬಾದ್ ಇವರುಗಳ ಸಂಯುಕ್ತಾಶ್ರಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮುನಿರಾಬಾದಿನ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಇಂದಿನ ಯುವ ಜನತೆ ಬಹಳ ಕುತೂಹಲ ಹೊಂದಿದ್ದು, ಮಾದಕಗಳ ಕಂಪನಿಗಳು ಅಬ್ಬರದ ಪ್ರಚಾರದ ಮೂಲಕ ಯುವ ಜನತೆಯನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ.  ದೇಶದ ಎಷ್ಟೋ ಹಳ್ಳಿಗಳಲ್ಲಿ ಮದ್ಯ ಮಾದಕಗಳು ಸುಲಭವಾಗಿ ದೊರೆಯುತ್ತಿವೆ. ಮೋಜಿನ ಪದಾರ್ಥಗಳಾಗಿರುವ ಮದ್ಯ, ಮಾದಕ ಇತ್ಯಾದಿಗಳ ವ್ಯಸನಮುಕ್ತ ಯುವ ಜನತೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ಆದರ್ಶ ಮೈಗೂಡಿಸಿಕೊಂಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ.  ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ  ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಮದ್ಯ ಮತ್ತು ಮಾದಕಗಳ ವ್ಯಸನದಿಂದ ಮಾನವನಲ್ಲಿ ಮೃಗೀಯತೆ : ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಗುಳಗಣ್ಣನವರ್ ಎಮ್.ಎಸ್.ಡಬ್ಲ್ಯೂ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ್ ಸಜ್ಜನ್ ಮಾತನಾಡಿ, ಮಾನವನ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡುವ ಮದ್ಯ, ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನಲ್ಲಿ ಮೃಗೀಯತೆ ಮನೆ ಮಾಡುತ್ತಿದೆ. ವ್ಯಸನಿಗಳು ಮಾದಕಗಳನ್ನು ಪಡೆಯಲು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ವ್ಯಸನಗಳಿಂದ ಮಾನವನ ಜ್ಞಾಪಕ ಶಕ್ತಿ ಕುಂದುತ್ತದೆ, ಅಸಹಜ ವಯಸ್ಸಾಗುವಿಕೆ, ಏಕಾಗ್ರತೆ, ವಿಶ್ಲೇಷಣಾ ಶಕ್ತಿ, ಯೋಚನಾ ಶಕ್ತಿ, ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ತೊದಲುವಿಕೆ, ಅತಿಯಾದ ಉಸಿರಾಟ, ಅಧಿಕ ರಕ್ತದ ಒತ್ತಡ, ಸೋಮಾರಿತನ, ನಿಶ್ಯಕ್ತಿ, ನಿದ್ರಾಹೀನತೆ ಸೇರಿದಂತೆ ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತದೆ. ಪ್ರಪಂಚದ ಎಲ್ಲ ಪ್ರಾಣಿಗಳು ಕೂಡಾ ಈ ಆಧುನಿಕ ಯುಗಕ್ಕೆ ಹೊಂದಿಕೊಂಡು ಚುರುಕುಗೊಳ್ಳುತ್ತಿವೆ ಆದರೆ, ಬುದ್ಧಿಜೀವಿ ಎನಿಸಿಕೊಂಡಿರುವ ಮನುಷ್ಯ ಮಾತ್ರ ಮದ್ಯ ಮತ್ತು ಮಾದಕ ವಸ್ತುಗಳ ಮೇಲೆ ಅವಲಂಬಿತನಾಗಿ ಮೂರ್ಖನೆನಿಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.


ಮಕ್ಕಳ ಸಹಾಯವಾಣಿ 1098 ಕುರಿತು ಮಾಹಿತಿ: ಸರ್ವೋದಯ (ಜಿಲ್ಲಾ ಮಕ್ಕಳ ಸಹಾಯವಾಣಿ 1098) ಸಂಸ್ಥೆಯ ಶಾಂತಕುಮಾರ ಮಾತನಾಡಿ, ಸಂಕಷ್ಠದಲ್ಲಿರುವ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ನ್ನು ಆರಂಭಿಸಲಾಗಿದೆ.  ಸಂಕಷ್ಠದಲ್ಲಿರುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದಾಗಿದ್ದು,  ಈ ಕಾಯ್ದೆಯಡಿ 18 ವರ್ಷದೊಳಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಕಿರುಕುಳ ನೀಡುವುದು ಸಹ ದೌರ್ಜನ್ಯವೆಂದು ಪರಿಗಣಿಸಿ ಪ್ರಕರಣ ದಾಖಲಿಸಬಹುದಾಗಿದೆ. ಈ ಕಾಯ್ದೆಯಡಿ ಪ್ರಕರಣ ದಾಖಲಾದಲ್ಲಿ ಅದು ವಿಚಾರಣಾರ್ಹ ಮತ್ತು ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ, ಇಂತಹ ಅಪರಾಧಗಳಿಗೆ 7 ವರ್ಷ ಜೀವಾವಧಿ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು. 
     ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ.ಅವಿನಾಶ, ಕಾಲೇಜಿನ ಉಪನ್ಯಾಸಕಾರದ ಯರ್ರಿಸ್ವಾಮಿ, ಮಲ್ಲಿಕಾರ್ಜುನ ಬಿದರಕುಂದಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Saturday, 23 January 2016

ವೃದ್ಧಾಶ್ರಮದಲ್ಲಿ ಸಂಗೀತ ಕಾರ್ಯಕ್ರಮ : ನೊಂದ ಮನಸುಗಳಿಗೆ ಸಮಾಧಾನ


ಕೊಪ್ಪಳ ಜ. 23 (ಕರ್ನಾಟಕ ವಾರ್ತೆ): ನೊಂದ ಮನಸುಗಳಿಗೆ ಕೊಂಚ ಮಟ್ಟಿಗೆ ಸಮಾಧಾನ ನೀಡುವಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ.  ವೃದ್ಧಾಶ್ರಮಗಳಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಯತ್ನ ಪ್ರಶಂಸಾರ್ಹವಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಅಭಿಪ್ರಾಯಪಟ್ಟರು.
     ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕೊಪ್ಪಳದ ಮೈತ್ರಿ ವೃದ್ಧಾಶ್ರಮದ ಸಹಯೋಗದೊಂದಿಗೆ ಶನಿವಾರದಂದು ಮೈತ್ರಿ ವೃದ್ಧಾಶ್ರಮದಲ್ಲಿ ಏರ್ಪಡಿಸಿದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಕುಟುಂಬದಿಂದ, ಮನೆಗಳಿಂದ ಹಲವು ಕಾರಣಗಳಿಗಾಗಿ ಪರಿತ್ಯಕ್ತರಾದ ವೃದ್ಧರು ಜೀವನದಲ್ಲಿ ಆತ್ಮ ವಿಶ್ವಾಸವನ್ನು ಹೊಂದಿ, ಚಟುವಟಿಕೆಯಿಂದ ಬಾಳಬೇಕಾಗಿದೆ.  ಇದಕ್ಕಾಗಿ ಸಂಗೀತದ ಮೂಲಕ ಅವರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದರು.
     ವೃದ್ಧಾಶ್ರಮದ ವೃದ್ಧರಾದ ಮಲ್ಲಮ್ಮ ಹಾಗೂ ಪ್ರಶಾಂತಯ್ಯ ಅವರು ಸಂಗೀತ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಪ್ರಾಸ್ತಾವಿಕ ಮಾತನಾಡಿದರು.  ವೃದ್ಧಾಶ್ರಮದ ಮೇಲ್ವಿಚಾರಕ ಅಶೋಕ ದರಿಯಪ್ಪನವರ, ಸಮಾಜ ಕಾರ್ಯಕರ್ತ ಕರಕಪ್ಪ ಮೇಟಿ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
     ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕುಕನೂರಿನ ಹಿರಿಯ ಕಲಾವಿದ ಕೃಷ್ಣಪ್ಪ ಭಜಂತ್ರಿ ತತ್ವಪದಗಳನ್ನು ಹಾಡಿ ವೃದ್ಧರ ಮನಸ್ಸಂತೋಷಪಡಿಸಿದರು.  ರವಿಕುಮಾರ್ ಮೆಣೆದಾಳ ತಬಲಾ ಸಾಥ್ ನೀಡಿದರು.

ಜ. 26 ರಂದು ಕೊಪ್ಪಳದಲ್ಲಿ ಗಣರಾಜ್ಯೋತ್ಸವ ಸಮಾರಂಭ

ಕೊಪ್ಪಳ ಜ. 23 (ಕರ್ನಾಟಕ ವಾರ್ತೆ): ಭಾರತದ 67 ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭ ಕೊಪ್ಪಳದಲ್ಲಿ ಜ. 26 ರಂದು ಬೆಳಿಗ್ಗೆ 09 ಗಂಟೆಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.


     ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್‍ಸಿಸಿ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್, ಗೃಹ ರಕ್ಷಕ ದಳಗಳಿಂದ ಪಥ ಸಂಚಲನ ಮತ್ತು ಗೌರವ ರಕ್ಷೆ ಸ್ವೀಕಾರ ನಡೆಯಲಿದೆ.  ಅಲ್ಲದೆ ಅತ್ಯುತ್ತಮ ಸೇವೆ ಸಲ್ಲಿಸಿದ ಸರ್ಕಾರಿ ಅಧಿಕಾರಿ, ನೌಕರರಿಗೆ ಸರ್ವೋತ್ತಮ ಪ್ರಶಸ್ತಿ, ಶಾಲಾ ಮಕ್ಕಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಜರುಗಲಿದೆ.

ಜಿಲ್ಲಾ ಯುವ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಜ.23 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕ್ರೀಡೆ, ಸಾಂಸ್ಕøತಿಕ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಯುವ ಜನರಿಗೆ ಹಾಗೂ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ ಜಿಲ್ಲಾ ಯುವ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವ ಯುವಕ ಯುವತಿಯರು 15 ರಿಂದ 35 ವರ್ಷದೊಳಗಿನ ವಯೋಮಿತಿಯನ್ನು ಹೊಂದಿರಬೇಕು. ಸಂಘಗಳು ಇಲಾಖೆಯಲ್ಲಿ ನೊಂದಾವಣಿಯಾಗಿರಬೇಕು ಮತ್ತು ಸಂಘದ ಸದಸ್ಯರಾಗಿರಬೇಕು.  ಪ್ರಸಕ್ತ ಸಾಲಿನಲ್ಲಿ ಯುವಜನ ಸೇವೆ, ಕ್ರೀಡೆ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸಿದ್ದನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುವುದು. ಯಾವುದೇ ಒಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ತಮ್ಮ ಹಾಗೂ ಸಂಘದ ಬಗ್ಗೆ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗದಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಪ್ಪಳ ಇವರಿಂದ ಪ್ರಮಾಣ ಪತ್ರ ಪಡೆದು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಪರಿಸರ ಸಂರಕ್ಷಣೆ, ಅರಣ್ಯೀಕರಣ, ಗ್ರಾಮ ನೈರ್ಮಲೀಕರಣ, ಕೊಳಚೆ ನಿರ್ಮೂಲನೆ, ಸಾರ್ವಜನಿಕ ಸ್ವತ್ತುಗಳ ರಕ್ಷಣೆ, ಪ್ರತಿಭಾನ್ವಿತ ಕ್ರೀಡಾಪಟುಗಳ ಶೋಧನೆ, ಆರೋಗ್ಯ ಕಾರ್ಯಕ್ರಮಗಳು, ವಯಸ್ಕರ ಶಿಕ್ಷಣ, ಕಲೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಬಗ್ಗೆ ದಾಖಲೆಗಳನ್ನು ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು.
     ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಕಛೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08539-201400 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ||ಶಾರದಾ ನಿಂಬರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 24 ರಂದು ಈಶಾನ್ಯದ ಐಸಿರಿ ಸರಣಿಯ 19 ನೇ ಸಂಚಿಕೆ ಪ್ರಸಾರ

ಕೊಪ್ಪಳ ಜ. 23 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 19 ನೇ ಸಂಚಿಕೆ ಜ. 24 ರಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 19ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.   ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾಗಿರುವ ಎನ್.ಬಿ. ಪಾಟೀಲ ಅವರಿಂದ ವ್ಯಕ್ತಿತ್ವ ನಿರ್ಮಾಣದಲ್ಲಿ  ಸ್ವ ಅರಿವು ಮಾಡಿಸಿಕೊಳ್ಳುವ ಬಗೆ ಕುರಿತು ಪಾಠ.  ನಿವೃತ್ತ ನ್ಯಾಯ ಮೂರ್ತಿ ಎಂ.ಬಿ ಬಿರಾದರ ಅವರಿಂದ ‘ಕಾನೂನು ಅರಿವು ಸೇವಾ ಸೌಲಭ್ಯ’ ಕುರಿತು ಮಾಹಿತಿ.  ಕಲಬುರಗಿಯ ಯುವ ವಿಕಲ ಚೇತನ ಪ್ರತಿಭೆ ರಶ್ಮಿ ಸುಂದರೇಶ ಔರಸಂಗ ಅವರ ಪ್ರತಿಭೆಯ ಅನಾವರಣ. ಆಳಂದ ತಾಲುಕಾ ನರೋಣಾ ಗ್ರಾಮದ ಈರವ್ವ ಆಯಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯಿಯರ ಸ್ವಾವಲಂಬನೆಯ ಹಾದಿ.  ಕಲಬುರಗಿಯ ಕಲಾವಿದೆ ಲಕ್ಷ್ಮೀ ಶಂಕರ ಜೋಶಿಯವರಿಂದ ಪುರಂದರ ದಾಸರ ಕೃತಿ. ಊರು-ಟೂರಿನಲ್ಲಿ ಯಾದಗಿರಿಯ  ಪ್ರೇಕ್ಷಣಿಯ ಸ್ಥಳಗಳಿಗೆ ಒಂದು ಸುತ್ತು.  ಇವುಗಳ ಜೊತೆಗೆ. ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್, ನುಡಿಮುತ್ತು , ನಗೆಹನಿ ಮೂಡಿ ಬರಲಿವೆ.
      ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ : ಜ. 27 ರಿಂದ ಕೌನ್ಸಲಿಂಗ್

ಕೊಪ್ಪಳ ಜ. 23 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸ್ಥಳ ಆಯ್ಕೆಗಾಗಿ ಜ. 27 ಮತ್ತು 28 ರಂದು ಎರಡು ದಿನಗಳ ಕಾಲ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಕೌನ್ಸಲಿಂಗ್ ಏರ್ಪಡಿಸಲಾಗಿದೆ.
     ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕುರಿತಂತೆ ಅಂತಿಮ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖಾ ವೆಬ್‍ಸೈಟ್  www.schooleducation.kar.nic.in ನಲ್ಲಿ ಈಗಾಗಲೆ ಪ್ರಕಟಿಸಲಾಗಿದೆ.  ಅಭ್ಯರ್ಥಿಗಳು ವೆಬ್‍ಸೈಟ್‍ನಲ್ಲಿ ತಿಳಿಸಿರುವಂತೆ ಅಗತ್ಯ ದಾಖಲೆಗಳೊಂದಿಗೆ ಜ. 27 ಮತ್ತು 28 ರಂದು ಬೆಳಿಗ್ಗೆ 10 ಗಂಟೆಯಿಂದ ಕೊಪ್ಪಳ ಡಿಡಿಪಿಐ ಕಚೇರಿಯಲ್ಲಿ ನಡೆಯುವ ಸ್ಥಳ ಆಯ್ಕೆ  ಕೌನ್ಸಲಿಂಗ್‍ಗೆ ಹಾಜರಾಗಬೇಕು. 
     ಜ. 27 ರಂದು 01 ರಿಂದ 05 ನೇ ತರಗತಿ ಕೌನ್ಸಲಿಂಗ್ ನಡೆಯಲಿದೆ.  ಹಾಗೂ 6 ರಿಂದ 8 ನೇ ತರಗತಿ ಕೌನ್ಸಿಲಿಂಗ್ (ಆಂಗ್ಲಭಾಷೆ ಅಭ್ಯರ್ಥಿಗಳಿಗೆ ಮಾತ್ರ).  ಜ. 28 ರಂದು 6 ರಿಂದ 8 ನೇ ತರಗತಿ ಕೌನ್ಸಲಿಂಗ್‍ಗೆ (ಕನ್ನಡ ಸಾಮಾನ್ಯ ಅಭ್ಯರ್ಥಿಗಳಿಗೆ ಮಾತ್ರ)  ಹಾಜರಾಗುವಂತೆ ಸೂಚನೆ ನೀಡಲಾಗಿದೆ.  ಕೌನ್ಸಲಿಂಗ್‍ಗೆ ಹಾಜರಾಗುವ ಸಂದರ್ಭದಲ್ಲಿ ನೇಮಕಾತಿಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳು, ಜೊತೆಗೆ ಎಲ್ಲಾ ದಾಖಲೆಗಳ ಎರಡು ಸೆಟ್ ಜೆರಾಕ್ಸ್ ಪ್ರತಿ ಹಾಗೂ ಪಾಸ್‍ಪೋರ್ಟ್ ಅಳತೆಯ 05 ಇತ್ತೀಚಿನ ಭಾವಚಿತ್ರಗಳೊಂದಿಗೆ ಹಾಜರಾಗಬೇಕು ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೆಹಲಿ ಗಣರಾಜ್ಯೋತ್ಸವ: ಈ ಬಾರಿ `ಕೊಡಗಿನ ಕಾಫಿ' ಸ್ತಬ್ಧಚಿತ್ರ


ಕೊಪ್ಪಳ, ಜ. 23 (ಕರ್ನಾಟಕ ವಾರ್ತೆ) - ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ `ಕೊಡಗು: ಕಾಫಿಯ ನಾಡು' ಸ್ತಬ್ಧಚಿತ್ರವು ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಿಂದ ತಾಲೀಮು ನಡೆಸಲಾಗುತ್ತಿದೆ.  ಕಳೆದೆರಡು ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರ ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪ್ರದರ್ಶನಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

     `ವಾರ್ತಾ ಇಲಾಖೆಯು ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಪರವಾಗಿ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಳ್ಳುತ್ತದೆ. ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ವಾರ್ತಾ ಇಲಾಖೆಯು ಕಳೆದ ಆರು ವರ್ಷಗಳಿಂದ ಸತತವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ.

     2016ರ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವಕ್ಕಾಗಿ ಇಲಾಖೆಯು  ಕೊಡುಗು; ಕಾಫಿಯ ನಾಡು,  ಸಾವಿರ ಕಂಬದ ಬಸದಿ, 18ನೇ ಶತಮಾನದ ಮೈಸೂರು ದಸರಾ ಆಚರಣೆ,  ಹಂಪಿ : ವಿಶ್ವದ ಅತೀ ದೊಡ್ಡ ಬಯಲು ವಸ್ತುಸಂಗ್ರಹಾಲಯ ಮತ್ತು    ಕರ್ನಾಟಕದ ಜಾನಪದ ಕಲೆಗಳು ಎಂಬ ಐದು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಲಾಗಿತ್ತು. ಇದರಲ್ಲಿ ಆಯ್ಕೆಯಾಗಿದ್ದು ಕೊಡಗು ಕಾಫಿಯ ನಾಡು. ಇದಕ್ಕೂ ಮೊದಲು ಕಳೆದ ಐದು ವರ್ಷಗಳಿಂದಲೂ ಕೊಡಗು ; ಕಾಫಿಯ ಬೀಡು ಎನ್ನುವ ವಿಷಯವನ್ನು ಕಳುಹಿಸುತ್ತಿದ್ದೆವು. ಈ ಬಾರಿ ಕಾಫಿಯು ಆಯ್ಕೆಯಾಗಿದೆ ಎನ್ನುತ್ತಾರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು.
     ಹೆಸರಾಂತ ಬರಹಗಾರ ಡಾ. ಎಚ್. ಎಲ್. ನಾಗೇಗೌಡರ ಅವರ `ಬೆಟ್ಟದಿಂದ ಬಟ್ಟಲಿಗೆ' ಕೃತಿಯಿಂದ ಪ್ರೇರಣೆ ಪಡೆದುಕೊಂಡು ಈ ಸ್ಥಬ್ತಚಿತ್ರಕ್ಕೆ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಈಗ ಅದು ವಾಸ್ತವಾಗಿ ಪ್ರದರ್ಶನಗೊಳ್ಳುತ್ತಿದೆ. ಬರಹಗಾರದ ಡಾ. ಎಚ್. ಎಲ್. ನಾಗೇಗೌಡರ ಜನ್ಮ ಶತಮಾನ ವರ್ಷವೂ ಆಗಿರುವ ಈ ವರ್ಷವೇ `ರಾಜಪಥ'ದಲ್ಲಿ `ಕಾಫಿ' ಮೆರವಣಿಗೆ ಹೊರಟಿರುವುದು ಸಹಜವಾಗಿ ಸಂತಸ ತಂದಿದೆ.
     ವಿಷಯ ಆಯ್ಕೆ ಮೊದಲ ಹಂತ ದಾಟಿದ ಬಳಿಕ, ಸ್ತಬ್ಧಚಿತ್ರದ ಮಾದರಿ (ಕೀ ಮಾಡೆಲ್) ಮತ್ತು ಸಂಗೀತದ ಹಂತವನ್ನು ದಾಟಬೇಕಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಯುವ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರ ಸಂಗೀತವನ್ನು ಹಾಗೆಯೇ ಉಳಿಸಿಕೊಂಡಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಈ ಬಾರಿ ರಾಜ್ಯವು ಪ್ರಶಸ್ತಿಯನ್ನು ನಿರೀಕ್ಷಿಸುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ತಿಳಿಸಿದ್ದಾರೆ.
ಸ್ತಬ್ಥಚಿತ್ರದಲ್ಲಿ ಏನಿರಲಿದೆ: ಕಾಫಿ ಬೀಜ ಸಂಸ್ಕರಣೆಗೊಂಡು ಕಾಫಿ ಪುಡಿಯಾಗಿ ಕಾಫಿಯಾಗಿ ಬಟ್ಟಲಿಗೆ ಬರುವ ವಿವಿಧ ಹಂತಗಳನ್ನು ಈ ಟ್ಯಾಬ್ಲೋದಲ್ಲಿ ತೋರಿಸಲಾಗಿದೆ. ಪ್ರಧಾನ ಭಾಗದಲ್ಲಿ ಕಾಫಿ ತೋಟದಲ್ಲಿ ಕಾಫೀ ಹಣ್ಣು ಕೀಳುತ್ತಿರುವ ಮಹಿಳೆ ಇದ್ದಾರೆ. ಕಾಫಿ ಕಪ್ನಲ್ಲಿ ವಿಶ್ವಕ್ಕೇ ಕಾಫಿ ಸ್ವಾದವನ್ನು ಪಸರಿಸುವಂತೆ ಬಿಂಬಿಸಲಾಗಿದೆ. ಹಾಗೆಯೇ, ಕಾಫಿ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ ಎನ್ನುವುದನ್ನು ಪ್ರತಿಬಿಂಬಿಸಲಾಗಿದೆ. ಕಾಫಿ ಹಣ್ಣುಗಳನ್ನು ಹಸನಗೊಳಿಸುತ್ತಿರುವ ಮತ್ತು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಹಂತಗಳನ್ನು ತೋರಿಸಲಾಗಿದೆ. ವಾಹನದ ಮುಂಭಾಗದಲ್ಲಿ ಫಿಲ್ಟರ್ ಕಾಫಿಯ ತಯಾರಿಸುವ ಪರಿಕರಗಳನ್ನು ಇಡಲಾಗಿದೆ. ಕಾಫಿ ಬೀಜಗಳ ರಾಶಿಯ ನಡುವೆ ಇರುವ ಲೋಟಕ್ಕೆ ಬಟ್ಟಲಿನಿಂದ ಕಾಫಿಯನ್ನು ಸುರಿಯಲಾಗುತ್ತಿದೆ. ಫೀಲ್ಟರ್ ಕಾಫಿ ತಯಾರಿಸುವ ಪಾತ್ರಗಳು ಸಕ್ಕರೆ ಬಟ್ಟಲುಗಳು ಸಹ ಪ್ರಧಾನವಾಗಿ ಕಂಡುಬರುತ್ತಿದೆ. ಸ್ತಬ್ಧಚಿತ್ರದ ಮೇಲು ಭಾಗದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವಿವಿಧ ಹಂತಗಳನ್ನು ಪರೀಶೀಲಿಸುವ `ಕಾಫಿ ತೋಟದ ಮಾಲೀಕರಾಗಿ' ಕೊಡಗಿನ ಕುರಿಕಾದ ಗಣಪತಿ ಕವಿತಾ ಮತ್ತು ಸಿ.ಎಂ. ಸಚ್ಚಿ ಮತ್ತು ಕೆ. ಸೋಮಯ್ಯ ಹಾಗೂ ನೇವಿ ಚಾರ್ಲೇ ಅವರುಗಳು `ಮೇಲ್ವಿಚಾರಣೆ' ನಡೆಸಲಿದ್ದಾರೆ.
ತೀವ್ರ ಪೈಪೋಟಿ : ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸ್ಥಬ್ಧಚಿತ್ರದೊಂದಿಗೆ ಭಾಗವಹಿಸುವುದು ಪ್ರತಿ ರಾಜ್ಯಕ್ಕೂ ಹೆಮ್ಮೆಯ ಮತ್ತು ಪ್ರತಿಷ್ಠೆಯ ಸಂಕೇತ. ಹಿಂದೆ ಎಲ್ಲಾ ರಾಜ್ಯಗಳಿಗೂ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶವಿತ್ತು. ಭದ್ರತೆ ಮತ್ತು ಗಣರಾಜ್ಯೋತ್ಸವದ ಅವಧಿಯಲ್ಲಿ ಮಾಡಿದ ಇಳಿಕೆಯಿಂದಾಗಿ ಸ್ತಬ್ಧಚಿತ್ರಕ್ಕಾಗಿ ಪ್ರತಿನಿಧಿಸುವ ರಾಜ್ಯಗಳ ಸಂಖ್ಯೆಯನ್ನು 14ಕ್ಕೆ ಇಳಿಸಲಾಗಿದೆ. ಇದು ತೀವ್ರ ಪೈಪೋಟಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಗುಣಮಟ್ಟಕ್ಕೆ, ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು ಸತತವಾಗಿ ಆರನೇ ಬಾರಿಗೆ ಆಯ್ಕೆಯಾಗಿದೆ. ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ರಾಜ್ಯವು ಸತತವಾಗಿ ಆರನೇ ಬಾರಿ ಆಯ್ಕೆಗೊಂಡಿರುವುದು ಅಭಿಮಾನದ ಸಂಗತಿ.
ಪ್ರಶಸ್ತಿಗಳ ಸರಮಾಲೆ: 2015ರಲ್ಲಿ ರಾಜ್ಯವು ಚನ್ನಪಟ್ಟದ ಗೊಂಬೆಗಳನ್ನು ಪ್ರದರ್ಶಿಸಿತ್ತು. ಇದಕ್ಕೆ ತೃತ್ತೀಯ ಪ್ರಶಸ್ತಿ ದೊರೆತಿತ್ತು. 2014ರಲ್ಲಿ 'ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್' ಸ್ತಬ್ಧಚಿತ್ರದೊಂದಿಗೆ ರಾಜ್ಯವು ಭಾಗವಹಿಸಿತ್ತು. 2013ರಲ್ಲಿ ಕಿನ್ನಾಳ ಕಲೆಯ ಸ್ತಬ್ಧಚಿತ್ರ ಪ್ರದರ್ಶನಗೊಂಡಿತ್ತು. 2012ರ ಗಣರಾಜ್ಯೋತ್ಸವದಲ್ಲಿ ದಕ್ಷಿಣ ಕನ್ನಡ ಭೂತಾರಾಧನೆಯ ಸ್ತಬ್ಧಚಿತ್ರಕ್ಕೆ ತೃತೀಯ ಪ್ರಶಸ್ತಿ ದೊರೆತಿತ್ತು. 2011ರಲ್ಲಿ ಬೀದರ್‍ನ ಪಾರಂಪರಿಕ ಕಲೆಯಾದ `ಬಿದರಿ' ಸ್ತಬ್ಧಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ದೊರೆತಿತ್ತು. 2006ರಲ್ಲಿ ಕರ್ನಾಟಕದಲ್ಲಿ ನಡೆಯಲಿದ್ದ ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸ್ತಬ್ಧ ಚಿತ್ರಕ್ಕೆ ಪ್ರಥಮ ಪ್ರಶಸ್ತಿ ದೊರೆತಿತ್ತು. 2008ರಲ್ಲಿ ಹೊಯ್ಸಳ ಕಲೆಯ ಸ್ಥಬ್ತಚಿತ್ರವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಅಲ್ಲದೆ, ಇದಕ್ಕಾಗಿ ಅತ್ಯುತ್ತಮ ನಿರೂಪಣೆ ಮತ್ತು ಅತ್ಯುತ್ತಮ ಫ್ಯಾಬ್ರಿಕೇಷನ್‍ಗಾಗಿ ಪ್ರಶಸ್ತಿ ಪಡೆದುಕೊಂಡಿತ್ತು. ಒಂದೇ ಸ್ಥಬ್ತಚಿತ್ರಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದಂತಹ ಅಪರೂಪದ ಸಾಧನೆಯನ್ನು ನಮ್ಮ ರಾಜ್ಯವು ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿ. 
     ಕಳೆದೆರಡು ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕಿನ್ನಾಳ ಕಲೆಯ ಸ್ತಬ್ಧಚಿತ್ರ ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪ್ರದರ್ಶನಗೊಂಡು, ಇಡೀ ರಾಷ್ಟ್ರದ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

                                                                                                                                 - ಕರ್ನಾಟಕ ವಾರ್ತೆ

ಅನಿಷ್ಠ ಪದ್ಧತಿಗಳ ವಿರುದ್ಧ ಪ್ರತಿ ವರ್ಷ ಜಾಗೃತಿ ಕಾರ್ಯಕ್ರಮ- ಗವಿಸಿದ್ದೇಶ್ವರ ಸ್ವಾಮೀಜಿ


ಕೊಪ್ಪಳ, ಜ.23 (ಕರ್ನಾಟಕ ವಾರ್ತೆ): ಸಮಾಜದಲ್ಲಿ ಬೇರೂರಿರುವ ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಪ್ರತಿ ವರ್ಷ ಗವಿಮಠದ ವತಿಯಿಂದ ಗವಿಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಹೇಳಿದರು.

     ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠದ ವತಿಯಿಂದ ಜಿಲ್ಲಾಡಳಿತ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ, ವಿವಿಧ ಇಲಾಖೆಗಳು ಹಾಗೂ ಹಲವು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶನಿವಾರದಂದು ಕೊಪ್ಪಳ ನಗರದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಜಾಗೃತಿ ನಡಿಗೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

     ಬಾಲ್ಯ ವಿವಾಹ ಪದ್ಧತಿಯಂತಹ ಅನಿಷ್ಠ ಪದ್ಧತಿ ವಿರುದ್ಧ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜಾಗೃತಿ ನಡಿಗೆ ಜರುಗಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.  ಈ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ದೊರೆತಿರುವುದು ಸಂತಸ ತಂದಿದೆ.  ಎಲ್ಲರಿಂದಲೂ ದೊರೆತ ಬೆಂಬಲದಿಂದ ತಾವು ಪ್ರೇರೇಪಿತರಾಗಿದ್ದು, ಇನ್ನು ಮುಂದೆ ಪ್ರತಿ ವರ್ಷ ಗವಿಸಿದ್ದೇಶ್ವರ ಜಾತ್ರಾ ಸಂದರ್ಭದಲ್ಲಿ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಬೃಹತ್ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.  ದೇಶದಲ್ಲಿನ ಎಲ್ಲ ಅನಿಷ್ಠ ಪದ್ಧತಿಗಳನ್ನು ತೊಡೆದುಹಾಕಲು ಕೊಪ್ಪಳ ಜಿಲ್ಲೆಯೇ ವೇದಿಕೆಯಾಗಲಿ.  ಬಾಲ್ಯ ವಿವಾಹವು ಸಮಾಜದಲ್ಲಿ ಬೇರೂರಿರುವ ಅತ್ಯಂತ ಕೆಟ್ಟ ಪದ್ಧತಿಯಾಗಿದ್ದು, ಈಗಾಗಲೆ ಇದನ್ನು ಶಿಕ್ಷಾರ್ಹ ಅಪರಾಧವೆಂದು ಕಾನೂನು ರೂಪಿಸಲಾಗಿದೆ.  ಬಾಲ್ಯ ವಿವಾಹದಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಅವರ ಬೆಳವಣಿಗೆ ಹಾಗೂ ಮನಸ್ಸಿನ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ.  ಈ ಅನಿಷ್ಠ ಪದ್ದತಿಯ ನಿರ್ಮೂಲನೆಗಾಗಿಯೇ ಇಂದು ಜಾಗೃತಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಇದಕ್ಕೆ ದೊರೆತಿರುವ ಬೆಂಬಲ ಹಾಗೂ ಸ್ಪಂದನೆಯನ್ನು ಗಮನಿಸಿದ್ದು, ಇನ್ನು ಮುಂದೆ ಪ್ರತಿ ವರ್ಷ ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.  ಬಾಲ್ಯ ವಿವಾಹವನ್ನು ವಿರೋಧಿಸಿ, ಇಂದು ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರುತ್ತಿರುವ ಕೊಪ್ಪಳ ಜಿಲ್ಲೆಯ ರುಕ್ಮಿಣಿ ರಾಥೋಡ್ ವಿದ್ಯಾರ್ಥಿನಿಯನ್ನು ಮಾದರಿಯಾಗಿಟ್ಟುಕೊಂಡು, ಬಾಲ್ಯ ವಿವಾಹವನ್ನು ಎಲ್ಲರೂ ವಿರೋಧಿಸುವಂತಹ ಮನೋಭಾವ ಬೆಳೆಸಿಕೊಳ್ಳಬೇಕು.  ಅಷ್ಟೇ ಅಲ್ಲ ತಂದೆ, ತಾಯಿಯರಿಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕು.  ಇಂದಿನ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ, ಏನೆಲ್ಲಾ ಸಾಧಿಸಲು ಸಾಧ್ಯವಿದೆ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

     ನಗರದ ಬನ್ನಿಕಟ್ಟೆ ಬಳಿಯ ಗೌರಿಶಂಕರ ದೇವಸ್ಥಾನದ ಬಳಿಯಿಂದ ಬೆಳಿಗ್ಗೆ ಪ್ರಾರಂಭವಾದ ಜಾಗೃತಿ ನಡೆಗೆ ಗವಿಸಿದ್ದೇಶ್ವರ ಸ್ವಾಮಿಗಳು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಈಗಿನ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪಿಡುಗುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಇದೆ.  ಆ ಅರಿವನ್ನು ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ತಂದೆ, ತಾಯಿಗಳಿಗೆ ತಲುಪಿಸುವ ಜವಾಬ್ದಾರಿ ಅವರ ಮೇಲಿದೆ ಎಂದರು.

     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಮಾತನಾಡಿ, ಬಾಲ್ಯ ವಿವಾಹ ವಿರುದ್ಧ ಏರ್ಪಡಿಸಲಾಗಿರುವ ಜಾಗೃತಿ ನಡಿಗೆ ಪ್ರಶಂಸನೀಯವಾಗಿದ್ದು, ಈ ಜಾಗೃತಿ ಸಂದೇಶ ಕೊಪ್ಪಳ ಜಿಲ್ಲೆ ಅಷ್ಟೇ ಅಲ್ಲ, ರಾಜ್ಯ ಮತ್ತು ದೇಶಾದ್ಯಂತ ತಲುಪುವಂತಾಗಬೇಕು.  ಇದಕ್ಕೆ ಕೊಪ್ಪಳವೇ ಸ್ಫೂರ್ತಿಯಾಗಲಿ ಎಂದರು.

     ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್ ಅವರು ಮತನಾಡಿ, ಎಲ್ಲ ವಿದ್ಯಾರ್ಥಿಗಳು ಬಾಲ್ಯ ವಿವಾಹವನ್ನು ವಿರೋಧಿಸುವುದು ಮಾತ್ರವಲ್ಲದೆ, ಇಂತಹ ಪ್ರಕರಣ ನಡೆಯುವ ಬಗ್ಗೆ ಮಾಹಿತಿ ಸಿಕ್ಕಲಿ, ಮಕ್ಕಳ ಸಹಾಯವಾಣಿ 1098 ಕ್ಕೆ ಉಚಿತ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಬಾಲ್ಯ ವಿವಾಹವನ್ನು ತಪ್ಪಿಸಲು ಸಹಕರಿಸಬೇಕು ಎಂದರು.

     ಬಾಲ್ಯ ವಿವಾಹ ನಿರ್ಮೂಲನೆಗಾಗಿ ಆಯೋಜಿಸಲಾಗಿದ್ದ ಬೃಹತ್ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ನಗರದ ಹಲವಾರು ಶಾಲಾ ಕಾಲೇಜುಗಳ ಸುಮಾರು 7000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಬಾಲ್ಯ ವಿವಾಹಕ್ಕೆ ಧಿಕ್ಕಾರ, ಬಾಲ್ಯ ವಿವಾಹ ಬೇಡವೆ ಬೇಡ ಮುಂತಾದ ಘೋಷಣೆಗಳನ್ನು ಹಾಕುತ್ತಾ ವಿದ್ಯಾರ್ಥಿಗಳು ಜಾಥಾದಲ್ಲಿ ಸಾಗಿದರು.  ನಗರದ ಗೌರಿಶಂಕರ ದೇವಸ್ಥಾನದ ಬಳಿಯಿಂದ ಪ್ರಾರಂಭಗೊಂಡ ಜಾಗೃತಿ ಜಾಥಾ, ರಾಷ್ಟ್ರೀಯ ಹೆದ್ದಾರಿ, ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಭ, ಗವಿಮಠ ರಸ್ತೆ ಮೂಲಕ ಗವಿಮಠ ಆವರಣವದವರೆಗೆ ಸಾಗಿ ಬಂದಿತು.  ಯುನಿಸೆಫ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಜಾಥಾಕ್ಕೆ ಸಹಕಾರ ನೀಡಿದವು.

ವಿದ್ಯಾರ್ಥಿಗಳಿಗೆ ಪ್ರತಿಭಾ ವೇತನ : ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ

ಕೊಪ್ಪಳ ಜ. 23 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಪ್ರತಿಭಾ ವೇತನ ಮಂಜೂರಾತಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಿದೆ.
     ಪ್ರಸಕ್ತ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿ/ವೃತ್ತಿಪರ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ಸರಾಸರಿ ಶೇ. 70 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ವೇತನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.  ಅರ್ಜಿ ಸಲ್ಲಿಸಲು ಫೆ. 06 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್‍ಸೈಟ್  www.backwardclasses.kar.nic.in ಕ್ಕೆ ಸಂಪರ್ಕಿಸಬಹುದಾಗಿದೆ.  ಫಲಾನುಭವಿಗಳನ್ನು ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 22 January 2016

ಹೊಯ್ಸಳ, ಕೆಳದಿ ಚೆನ್ನಮ್ಮ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಜ.22 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹೊಯ್ಸಳ, ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಕಲೆ, ಕ್ರೀಡೆ, ಶಿಕ್ಷಣ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿಯಲ್ಲಿನ ಮಾರ್ಗಸೂಚಿಗಳ ಪ್ರಕಾರ ಅಸಾಧಾರಣ ಸಾಧನೆ ಮಾಡಿರುವ 4 ರಿಂದ 15 ವರ್ಷದೊಳಗಿನ (1999ರ ಆಗಸ್ಟ್.01 ಹಾಗೂ ನಂತರ ಹುಟ್ಟಿದ) ಮಕ್ಕಳನ್ನು 2015ನೇ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.  ಪ್ರಶಸ್ತಿ ವಿಜೇತ ಮಗುವಿಗೆ ರೂ.10,000/- ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರಶಸ್ತಿಗೆ ಅರ್ಜಿ ಸಲ್ಲಿಸಲಿಚ್ಛಿಸುವ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಕಲೆ, ಕ್ರೀಡೆ, ಶಿಕ್ಷಣ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಅಸಾಧಾರಣ ಎಂದು ಗುರುತಿಸಲು ಅವರ ಸಾಧನೆ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು ಅಥವಾ ಸಂಬಂಧಪಟ್ಟ ಕ್ಷೇತ್ರದ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಜ.27 ರೊಳಗಾಗಿ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಿ.ವಸಂತಪ್ರೇಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಚೆ ಕಛೇರಿಯಲ್ಲಿ ತಿರುಪತಿ ನೇರ ದರ್ಶನ ಟಿಕೇಟ್

ಕೊಪ್ಪಳ, ಜ.22 (ಕರ್ನಾಟಕ ವಾರ್ತೆ): ಕೊಪ್ಪಳ ಮುಖ್ಯ ಅಂಚೆ ಕಛೇರಿಯಲ್ಲಿ ಜ.01 ರಿಂದ ತಿರುಪತಿ ದೇವಸ್ಥಾನದ ವಿಶೇಷ ನೇರದರ್ಶನ ಟಿಕೇಟ್ ಪಡೆಯುವ ಸೌಲಭ್ಯವನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಗದಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲ್ಯ ವಿವಾಹ ತಡೆ ಮ್ಯಾರಥಾನ್ : ಆಕಾಶವಾಣಿಯಲ್ಲಿ ನೇರ ಪ್ರಸಾರ

ಕೊಪ್ಪಳ ಜ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಡಳಿತ, ಸಂಸ್ಥಾನ ಗವಿಮಠ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ ಹಾಗೂ ವಿವಿಧ ಇಲಾಖೆಗಳ ಮತ್ತು ಸಂಘ, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜ. 23 ಶನಿವಾರದಂದು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿರುವ, ಬಾಲ್ಯ ವಿವಾಹ ತಡೆ ಜಾಗೃತಿ ನಡಿಗೆಯ ವೀಕ್ಷಕ ವಿವರಣೆಯ ನೇರ ಪ್ರಸಾರವನ್ನು ಹೊಸಪೇಟೆ ಆಕಾಶವಾಣಿ ಕೇಂದ್ರವು ಶನಿವಾರ ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ಬಿತ್ತರಿಸಲಿದೆ ಎಂದು ಹೊಸಪೇಟೆ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಡಾ|| ಅನುರಾಧಕಟ್ಟಿ ತಿಳಿಸಿದ್ದಾರೆ.

ಪ್ರಸವಪೂರ್ವ ಲಿಂಗಪತ್ತೆ ನಿಷೇಧ ಕಾಯ್ದೆ : ಜ. 23 ರಂದು ಕೊಪ್ಪಳದಲ್ಲಿ ಕಾರ್ಯಗಾರ

ಕೊಪ್ಪಳ ಜ. 22 (ಕರ್ನಾಟಕ ವಾರ್ತೆ): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ತಂತ್ರ ನಿಷೇಧ ಕಾಯ್ದೆ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಜ. 23 ರಂದು ಮಧ್ಯಾಹ್ನ 3 ಗಂಟೆಗೆ ಹಳೆ ಜಿಲ್ಲಾಸ್ಪತ್ರೆ ಆವರಣದ ಡಿಹೆಚ್‍ಓ ಸಭಾಂಗಣದಲ್ಲಿ ಏರ್ಪಡಿಸಿದೆ.
     ಪಿಸಿ ಅಂಡ್ ಪಿಎನ್‍ಡಿಟಿ ಕಾಯ್ದೆಯಡಿ ನೋಂದಾಯಿತ ಹೆರಿಗೆ ತಜ್ಞರು, ಕ್ಷ-ಕಿರಣ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಫಿಸಿಷಿಯನ್ ಸೇರಿದಂತೆ ಎಲ್ಲ ನೋಂದಾಯಿತ ಖಾಸಗಿ ಮತ್ತು ಸರ್ಕಾರಿ ವೈದ್ಯರು, ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ಅವರು ತಿಳಿಸಿದ್ದಾರೆ.

ರಾಯಚೂರು: ಸಾವಯವ ಕೃಷಿ, ತೋಟಗಾರಿಕೆ ಮತ್ತು ಮತ್ಸ್ಯಮೇಳ

ಕೊಪ್ಪಳ ಜ. 22 (ಕರ್ನಾಟಕ ವಾರ್ತೆ): ರಾಯಚೂರು ಕೃಷಿ ವಿಶ್ವವಿದ್ಯಾಲಯವು ಹೈದರಾಬಾದ-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ,  ಕೃಷಿ ಮತ್ತು ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ರಾಯಚೂರು ಆವರಣದಲ್ಲಿ ಜ. 30 ರಿಂದ ಫೆ. 01 ರವರೆಗೆ ಮೂರು ದಿನಗಳ ಕಾಲ ‘ಸಾವಯವ ಕೃಷಿ, ತೋಟಗಾರಿಕೆ ಮತ್ತು ಮತ್ಸ್ಯಮೇಳ’ವನ್ನು ಹಮ್ಮಿಕೊಂಡಿದೆ.
      ಸ್ವಾವಲಂಬಿ ಕೃಷಿ-ಸ್ವಾಭಿಮಾನದ ಕೃಷಿ ಎಂಬ ಶೀರ್ಷಿಕೆಯಡಿಯಲ್ಲಿ ಮೂರು ದಿನಗಳವರೆಗೆ ಆಯೋಜಿಸಲಾಗುತ್ತಿರುವ ಈ ಮೇಳದಲ್ಲಿ ಸಾವಯವ ಕೃಷಿ ಸಂಬಂಧಿತ ಎರೆಗೊಬ್ಬರ ಉತ್ಪಾದನೆ, ಜೈವಿಕ ತಂತ್ರಜ್ಞಾನ ಉತ್ಪಾದಕಗಳು, ಸಮಗ್ರ ಕೃಷಿ ಪದ್ಧತಿ, ಜಲಾನಯನ ಅಭಿವೃದ್ಧಿ ತಂತ್ರಜ್ಞಾನ, ಫಲ-ಪುಷ್ಪ ಪ್ರದರ್ಶನ, ಜಾನುವಾರು ಪ್ರದರ್ಶನ ಮತ್ತು ಮತ್ಸ್ಯಮೇಳಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಪ್ರದರ್ಶಿಸಿ, ಆಸಕ್ತ ರೈತರು ಹಾಗೂ ಸಾರ್ವಜನಿಕರಿಗೆ ಬೇಕಾದ ಮಾಹಿತಿ ನೀಡಲಾಗುವುದು. ಅಲ್ಲದೇ, ರೈತರ ಆತ್ಮ ಸ್ಥೈರ್ಯ ತುಂಬಲು ಕೃಷಿ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳನ್ನು ಈ ಮೇಳದಲ್ಲಿ ರೈತ ಬಾಂಧವರಿಗೆ ತಿಳಿಯಪಡಿಸಲಾಗುವುದು.
 ಕೃಷಿ ಮೇಳದಲ್ಲಿ ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಬೃಹತ್ ಪ್ರಮಾಣದಲ್ಲಿ “ಮತ್ಸ್ಯಮೇಳ”ವನ್ನೂ ಸಹ ಏರ್ಪಡಿಸಲಾಗುತ್ತಿದೆ. ಇದರಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಅನೇಕ ಸಂಸ್ಥೆಗಳು ಭಾಗಿಯಾಗಿ ಮತ್ಸ್ಯಮೇಳಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಪ್ರದರ್ಶಿಸಿ, ಆಸಕ್ತ ರೈತರು ಹಾಗೂ ಸಾರ್ವಜನಿಕರಿಗೆ ಬೇಕಾದ ಮಾಹಿತಿ ನೀಡಲಾಗುವುದು. ಕೃಷಿ ಮೇಳದ ಪ್ರತಿ ದಿನ ಮಧ್ಯಾಹ್ನ ‘ರೈತರಿಂದ ರೈತರಿಗಾಗಿ’ ಎಂಬ ಕಾರ್ಯಕ್ರಮದಡಿ ಈ ಭಾಗದ ಆಯ್ದ ಪ್ರಗತಿಪರ ರೈತರಿಂದ ವಿವಿಧ ಕೃಷಿ ವಿಷಯಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ಅಲ್ಲದೇ, ಎಲ್ಲ ರೈತರಿಗೆ ಕೃಷಿ ವಿಜ್ಞಾನಿಗಳ ಜೊತೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಡಲಾಗುವುದು.  
 ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಡಿ ಬರುವ 6 ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ ಒಬ್ಬರಂತೆ ಶ್ರೇಷ್ಠ ಸಾವಯವ ಕೃಷಿಕ/ ಶ್ರೇಷ್ಠ ಸಾವಯವ ಕೃಷಿ ಮಹಿಳೆ ಮತ್ತು ಶ್ರೇಷ್ಠ ಮೀನು ಕೃಷಿಕ/ ಶ್ರೇಷ್ಠ ಮೀನು ಕೃಷಿ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು.  ಕೃಷಿ ಪ್ರದರ್ಶನವನ್ನು 200 ಸುಸಜ್ಜಿತ ಮಳಿಗೆಗಳಲ್ಲಿ ಏರ್ಪಡಿಸಲಾಗುತ್ತಿರುವ ಈ ಕೃಷಿ ಮೇಳದಲ್ಲಿ ಒಂದು ಲಕ್ಷಕ್ಕೂ ಅಧಿಕ ರೈತರು ಭಾಗವಹಿಸುವ ನಿರೀಕ್ಷೆಯಿದೆ.  ಹೆಚ್ಚಿನ ಮಾಹಿತಿಗಾಗಿ ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವ ವಿದ್ಯಾಲಯ, ರಾಯಚೂರು, 08532-220440 / 220189 / 220274 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Thursday, 21 January 2016

ಬಾಲ್ಯ ವಿವಾಹ ನಿರ್ಮೂಲನೆ : ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟ

ಕೊಪ್ಪಳ ಜ. 21 (ಕರ್ನಾಟಕ ವಾರ್ತೆ): ಬಾಲ್ಯ ವಿವಾಹ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಯುನಿಸೆಫ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಬುಧವಾರದಂದು ಏರ್ಪಡಿಸಲಾದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
     ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ ಇಂತಿದೆ.  ಪ್ರೌಢಶಾಲಾ ವಿಭಾಗದಲ್ಲಿ ಕುಷ್ಟಗಿಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಸರೋಜ ಎಂ.ಜಿ.. ಪದವಿಪೂರ್ವ ವಿಭಾಗದಲ್ಲಿ ಬೇವೂರಿನ ಸರ್ಕಾರಿ ಪ.ಪೂ. ಕಾಲೇಜು ವಿದ್ಯಾರ್ಥಿ ಲಿಂಗಪ್ಪ ಎಂ. ಗೊಲ್ಲರ್ ಹಾಗೂ ಪದವಿ ಕಾಲೇಜು ವಿಭಾಗದಲ್ಲಿ ದದೇಗಲ್‍ನ ಎಂ.ಎಸ್.ಡಬ್ಲ್ಯೂ ಕಾಲೇಜಿನ ಶ್ರೀಧರ ಅವರು ಸಂಬಂಧಪಟ್ಟ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.  ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಬಾಲ್ಯ ವಿವಾಹ ನಿರ್ಮೂಲನೆ ನಿಟ್ಟಿಯಲ್ಲಿ ಗವಿಮಠ, ಜಿಲ್ಲಾಡಳಿತ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ ಮತ್ತು ವಾರಿಯರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.  ಶಾಲಾ, ಕಾಲೇಜು ಹಂತದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಿ, ಅತ್ಯುತ್ತಮ ಪ್ರಬಂಧ ಸ್ಪರ್ಧೆ ಬರೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಜಿಲ್ಲಾ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ನಡೆಸಲಾಯಿತು.  ಜಿಲ್ಲೆಯ ವಿವಿಧ ಪ್ರೌಢಶಾಲೆ, ಕಾಲೇಜುಗಳಿಂದ 128 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.  ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜ. 28 ರಂದು ಗವಿಸಿದ್ದೇಶ್ವರ ಜಾತ್ರೆಯ ಕೈಲಾಸ ಮಂಟಪದಲ್ಲಿ ಜರುಗುವ ಚಿಂತನಗೋಷ್ಠಿಯಲ್ಲಿ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಬಾಲ್ಯ ವಿವಾಹ ನಿರ್ಮೂಲನಾ ಸಮಿತಿ ಅಧ್ಯಕ್ಷರೂ ಆಗಿರುವ ಶಿವರಾಜ ಪಾಟೀಲರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಯುನಿಸೆಫ್‍ನ ಸಂಯೋಜಕ ಹರೀಶ್ ಜೋಗಿ ತಿಳಿಸಿದ್ದಾರೆ.

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆ ಮಾಧ್ಯಮ ಕೇಂದ್ರ ಉದ್ಘಾಟನೆ

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಎಸ್.ಜಿ. ಕಾಲೇಜಿನಲ್ಲಿ ಪ್ರಾರಂಭಿಸಲಾಗಿರುವ ಮಾಧ್ಯಮ ಕೇಂದ್ರದ ಉದ್ಘಾಟನೆಯನ್ನು ಗುರುವಾರದಂದು ನೆರವೇರಿಸಲಾಯಿತು.

ವಚನಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದವರು ಅಂಬಿಗರ ಚೌಡಯ್ಯ – ಡಾ. ಎಸ್. ಶಿವಾನಂದ


ಕೊಪ್ಪಳ ಜ.21(ಕರ್ನಾಟಕ ವಾರ್ತೆ): ವಚನಗಳ ಮೂಲಕ ಸಮಾಜದಲ್ಲಿ ಮನೆಮಾಡಿದ್ದ ಕೆಟ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಹೊಸಪೇಟೆ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಅವರು ಹೇಳಿದರು.

     ಜಿಲ್ಲಾಡಳಿತ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

     ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದವರು ಅಂಬಿಗರ ಚೌಡಯ್ಯ ಅವರು.  ವಚನಗಳ ಮೂಲಕ ಸಮಾಜದ ಲೋಪದೋಷಗಳ ಕುರಿತು ತೀಕ್ಷ್ಣ ಮಾತುಗಳ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು.  ಕಾಯಕ ನಿಷ್ಠೆಯನ್ನು ಎಲ್ಲ ವರ್ಗದವರು ಸಮನಾಗಿ ಗೌರವಿಸಬೇಕು  ಎಂಬ ತತ್ವವನ್ನು ತಮ್ಮ ವಚನಗಳಲ್ಲಿ ಬಿಂಬಿಸುವ ಮೂಲಕ ವಿಶ್ವ ಸಾಹಿತ್ಯ ಲೋಕಕ್ಕೆ ಹೊಂಬೆಳಕನ್ನು ಮೂಡಿಸಿದರು.  ಇವರ ವಚನಗಳಲ್ಲಿ ನಿಜ ಶರಣರ ಗಂಭೀರತೆಯ ಜೊತೆಗೆ ಸಮಾಜ ಸುಧಾರಣೆಯ ತೀಕ್ಷ್ಣತೆ ತುಂಬಿಕೊಂಡಿದೆ.  ಹಸಿದವನಿಗೆ ಆಹಾರ ನೀಡದಿದ್ದಲ್ಲಿ ಆ ಹರ ಎಂದಿಗೂ ಒಪ್ಪುವುದಿಲ್ಲ, ದೇಹವೇ ದೇಗುಲವಾಗಿರುವುದರಿಂದ, ದೇವಾಲಯಗಳಲ್ಲಿ ದೇವರನ್ನು ಹುಡುಕುವುದರಲ್ಲಿ ಅರ್ಥವಿಲ್ಲ, ತೀರ್ಥಯಾತ್ರೆಗಳ ಮೂಲಕ ದೇವರನ್ನು ಕಾಣಲು ಸಾಧ್ಯವಿಲ್ಲ, ತನ್ನನ್ನು ತಾನು ತಿಳಿದುಕೊಂಡಾಗ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ.  ಸಂಸಾರದ ಸಾಗರವನ್ನು ದಾಟಲು, ಚಂಚಲವಾದ ಮನಸ್ಸನ್ನು, ದೇವರೆಡೆಗೆ ತಿರುಗಿಸಿ, ಕಾಯಕ ನಿಷ್ಠೆಯನ್ನು ತೋರಿಸಬೇಕು ಎಂದು ಅಂಬಿಗರ ಚೌಡಯ್ಯನವರು ತಮ್ಮ ವಚನಗಳಲ್ಲಿ ಸಂದೇಶವನ್ನು ನೀಡಿದ್ದಾರೆ.  ಗಂಗಾಮತ ಸಮುದಾಯದವರು ಸಾಮಾಜಿಕ ಸಂಘಟಿತರಾಗಬೇಕು.  ತಮ್ಮಲ್ಲಿನ ದುಶ್ಚಟಗಳನ್ನು, ದುವ್ರ್ಯಸನಗಳನ್ನು ತೊರೆದಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ.  ಅಂಬಿಗರ ಚೌಡಯ್ಯನವರ ವಚನಗಳಲ್ಲಿನ ತತ್ವ ಸಂದೇಶಗಳನ್ನು ಮನನ ಮಾಡಿಕೊಂಡಾಗ ಮಾತ್ರ ಇಂತಹ ಜನ್ಮ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಡಾ. ಎಸ್. ಶಿವಾನಂದ ಅವರು ಹೇಳಿದರು.

     ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ,  ಗಣ್ಯರಾದ ಯಮನಪ್ಪ ಕಬ್ಬೇರ, ನಗರಸಭೆಯ ವಿವಿಧ ಸದಸ್ಯರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು.  ಎಸ್‍ಎಸ್‍ಎಲ್‍ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಕೊಪ್ಪಳದ ಅಂಬಿಗರ ಚೌಡಯ್ಯ ಯುವಕ ಸಂಘದ ವತಿಯಿಂದ ಸಾಹಿತ್ಯ ಭವನ ಬಳಿ ರಕ್ತದಾನ ಶಿಬಿರ ಆಯೋಜಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.  ರಕ್ತದಾನ ಮಾಡಿದ ಯುವಕರಿಗೆ ಪ್ರಮಾಣಪತ್ರ ವಿತರಿಸಲಾಯಿತು.

     ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು.  ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಹೆಚ್ಚು ಆಕರ್ಷಕಗೊಳಿಸಿದವು.

ವರ್ಷಾಂತ್ಯದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ದಿನಾಂಕ ನಿಗದಿ

ಕೊಪ್ಪಳ ಜ. 21 (ಕ.ವಾ) : ಪ್ರಸಕ್ತ ಸಾಲಿನ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಇದರನ್ವಯ ವರ್ಷಾಂತ್ಯದ ಬಿಲ್ಲುಗಳನ್ನು ನಿಗದಿತ ಅವಧಿಯೊಳಗಾಗಿ ಖಜಾನೆಗೆ ಸಲ್ಲಿಸುವಂತೆ ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ ವಿ. ಹಳ್ಯಾಳ ಅವರು ಸೂಚನೆ ನೀಡಿದ್ದಾರೆ.
      ಸರ್ಕಾರದ ಆದೇಶದನ್ವಯ ಇಎಪಿ, ಕೇಂದ್ರ ಪುರಸ್ಕøತ ಹಾಗೂ ಕೇಂದ್ರ ಯೋಜನೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅನುದಾನ ಬಿಡುಗಡೆ ಆದೇಶಗಳನ್ನು  ಫೆ. 16 ಒಳಗಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹೊರಡಿಸಬೇಕು.  ಅಲ್ಲದೆ ಬಜೆಟ್ ಅಪ್ ಲೋಡಿಂಗ್ ಮತ್ತು ಬಿಲ್ಲುಗಳನ್ನು ಮಾ. 16 ರೊಳಗಾಗಿ ಸಲ್ಲಿಸಬೇಕು.  ದಿ: 31-01-2016 ರ ಹಾಗೂ ಅದಕ್ಕೂ ಮುಂಚಿತ ಅವಧಿಯ ಎಲ್ಲಾ ಪ್ರಯಾಣದ ಬಿಲ್ಲುಗಳು ಹಾಗೂ  ಎಲ್ಲಾ ಸಾದಿಲ್ವಾರು ಬಿಲ್ಲುಗಳನ್ನು ಫೆ. 29 ರ ಒಳಗಾಗಿ ಖಜಾನೆಗೆ ಸಲ್ಲಿಸಬೇಕು.  ದಿ: 31-01-2016 ರ ನಂತರ ಭರಿಸಿದ ವೆಚ್ಚಗಳಿಗೆ ಸಂಬಂಧಿಸಿದ ಎಲ್ಲಾ ಸಾದಿಲ್ವಾರು / ಪ್ರಯಾಣ ಭತ್ಯೆ ಬಿಲ್ಲುಗಳು ಹಾಗೂ ಇತರೆ ಅನುದಾನಿತ ಬಿಲ್ಲುಗಳು, ಯಾವುದೇ ಅವಧಿಯ ವಿದ್ಯುಚ್ಛಕ್ತಿ, ದೂರವಾಣಿ ಹಾಗೂ ಕಟ್ಟಡ ಬಾಡಿಗೆಗೆ ಸಂಬಂಧಿಸಿದ ಬಿಲ್ಲುಗಳನ್ನು ಮಾರ್ಚ್ 16 ರ ಒಳಗಾಗಿ ಖಜಾನೆಗೆ ಸಲ್ಲಿಸಬೇಕು.  ಮಾರ್ಚ್ 2016 ರ ಒಳಗೆ ಪಾವತಿಸಲ್ಪಡುವ ಅನುದಾನಿತ ವೇತನ ಬಿಲ್ಲು ಹಾಗೂ ಇತರೆ ಅನುದಾನಿತ ಬಿಲ್ಲುಗಳು.  ವೇತನ ಬಾಕಿ, ಹಬ್ಬದ ಮುಂಗಡ ಮುಂತಾದ ಬಿಲ್‍ಗಳನ್ನು ಮಾ. 24 ರೊಳಗೆ ಸಲ್ಲಿಸಬೇಕು.  ಎಲ್ಲಾ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು (ಎ.ಸಿ. ಬಿಲ್ಲು), ಇ.ಎ.ಪಿ. ಕೇಂದ್ರ ಪುರಸ್ಕøತ ಹಾಗೂ ಕೇಂದ್ರ ಯೋಜನೆ ಬಿಲ್ಲುಗಳನ್ನು ಮಾ. 30 ರ ಒಳಗಾಗಿ ಖಜಾನೆಗೆ ಸಲ್ಲಿಸಬೇಕು.  ಏಪ್ರಿಲ್‍ನಲ್ಲಿ ಪಾವತಿಸಲಾಗುವ ಮಾರ್ಚ್ ತಿಂಗಳ ವೇತನ ಹಾಗೂ ಅನುದಾನಿತ ವೇತನ ಬಿಲ್ಲುಗಳನ್ನು  ಮಾ. 16 ರಿಂದ ಮಾ. 21 ರೊಳಗೆ ಅಥವಾ ಏಪ್ರಿಲ್ 02 ರ ನಂತರ ಖಜಾನೆಗೆ ಸಲ್ಲಿಸಬೇಕು.   ಮಾ. 31 ರ ಮಧ್ಯಾಹ್ನ 2-30 ರ ನಂತರ ಯಾವುದೇ ಬಿಲ್ಲುಗಳನ್ನು ಖಜಾನೆಯಲ್ಲಿ ಸ್ವೀಕರಿಸಲಾಗುವುದಿಲ್ಲ.  ಎಲ್ಲಾ ಖಜಾನೆಗಳಲ್ಲಿ ಲೆಕ್ಕಗಳನ್ನು ಅಂತಿಮಗೊಳಿಸಲು ಅನುಕೂಲವಾಗುವಂತೆ ಏ. 01 ರ ದಿನವನ್ನು ವ್ಯವಹಾರ ರಹಿತ ದಿನವನ್ನಾಗಿ ಘೋಷಿಸಲಾಗಿದೆ.  ನಿಗದಿತ ದಿನಾಂಕಗಳ ನಂತರ ಬರುವ ಯಾವುದೇ ಬಿಲ್ಲುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು  ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ ವಿ ಹಳ್ಯಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಲ್ಸ್ ಪೋಲಿಯೋ ಕಾರ್ಯಕ್ರಮ : ಜಿಲ್ಲೆಯಲ್ಲಿ ಶೇ. 100. 80 ರಷ್ಟು ಸಾಧನೆ

ಕೊಪ್ಪಳ ಜ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಜ. 17 ರಿಂದ 20 ರವರೆಗೆ ಜರುಗಿದ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಡಿ ಐದು ವರ್ಷದೊಳಗಿನ 1,96,681 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಶೇ. 100. 80 ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ಅವರು ತಿಳಿಸಿದ್ದಾರೆ.
     ಈ ಬಾರಿಯ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 195121 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.  ಆದರೆ 1,96,681 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ.  ಜ. 17 ರಂದು ಲಸಿಕಾ ಕೇಂದ್ರದಲ್ಲಿ 1. 66 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ.  ಜ. 18 ರಿಂದ 20 ರವರೆಗೆ ಮನೆ, ಮನೆ ಭೇಟಿ ನೀಡುವುದು, ಅಲ್ಲದೆ ಇಟ್ಟಂಗಿ ಭಟ್ಟಿ, ಕೈಗಾರಿಕಾ ಪ್ರದೇಶಗಳು, ಸ್ಲಂ ಪ್ರದೇಶಗಳು, ಕಟ್ಟಡ ನಿರ್ಮಾಣ ಸ್ಥಳಗಳಿಗೂ ಸಹ ಸಂಚಾರಿ ಘಟಕಗಳ ಮೂಲಕ ಭೇಟಿ ನೀಡಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಮೊದಲನೆ ಸುತ್ತಿನ ಲಸಿಕಾ ಕಾರ್ಯಕ್ರಮದಡಿ ಕೊಪ್ಪಳ ತಾಲೂಕಿನ 54,244 ಮಕ್ಕಳು, ಗಂಗಾವತಿ- 67320, ಕುಷ್ಟಗಿ-39892 ಮತ್ತು ಯಲಬುರ್ಗಾ ತಾಲೂಕಿನಲ್ಲಿ 35225 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ.  ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಸಂಘ ಸಂಸ್ಥೆಗಳು ಎಲ್ಲರಿಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Wednesday, 20 January 2016

ವಿವಿಧ ಧಾರ್ಮಿಕ ಸ್ಥಳಗಳಿಗೆ ವಿಶೇಷ ಸಾರಿಗೆ ಸೌಲಭ್ಯ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ):  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಿಂದ ವಿವಿಧ ಧಾರ್ಮಿಕ ಸ್ಥಳಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಈ ವಿಶೇಷ ಸಾರಿಗೆ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿದ್ದಾರೆ.
     ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಶ್ರೀ ಅಂಬಾಮಠದಲ್ಲಿ ಜ.23 ರಿಂದ ಜ.27 ರವರೆಗೆ ಜರುಗುವ ಶ್ರೀ ಅಂಬಾದೇವಿ ಜಾತ್ರೆಯ ನಿಮಿತ್ಯ ಕೊಪ್ಪಳ ಹಾಗೂ ಗಂಗಾವತಿ ಬಸ್ ನಿಲ್ದಾಣದಿಂದ. ಜ.24 ರಂದು ಬನದ ಹುಣ್ಣಿಮೆಯ ನಿಮಿತ್ಯ ಶ್ರೀಕ್ಷೇತ್ರ ಹುಲಿಗಿಗೆ ಕೊಪ್ಪಳ ಹಾಗೂ ಗಂಗಾವತಿ ಬಸ್ ನಿಲ್ದಾಣಗಳಿಂದ ಹಾಗೂ ಜ.26 ರಂದು ಕೊಪ್ಪಳದಲ್ಲಿ ಜರುಗಲಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ನಿಮಿತ್ಯ ಭಕ್ತಾದಿಗಳ ಅನುಕೂಲಕ್ಕಾಗಿ ಗಂಗಾವತಿ, ಕುಕನೂರ, ಯಲಬುರ್ಗಾ, ಕುಷ್ಟಗಿ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರು ಈ ವಿಶೇಷ ವಾಹನಗಳ ಕಾರ್ಯಾಚರಣೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಿ.ಪಂ ಮತ್ತು ತಾ.ಪಂ ಸಾರ್ವತ್ರಿಕ ಚುನಾವಣೆ : ಮಾದರಿ ನೀತಿ ಸಂಹಿತೆ ಜಾರಿ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತಿ ಹಾಗೂ ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಅನುಸರಿಸರಿಸಬೇಕಾದ ಮಾದರಿ ಸದಾಚಾರ ಸಂಹಿತೆಯ ವಿವರವನ್ನು ಪ್ರಕಟಿಸಿದೆ.
       ಇದರನ್ವಯ ಚುನಾವಣೆ ಘೋಷಣೆಯಾದ ಜ.18 ರಿಂದ ಚುನಾವಣಾ ಪ್ರಕ್ರಿಯೆಯು ಮುಕ್ತಾಯಗೊಳ್ಳುವ ಫೆ.24 ರವರೆಗೆ ಸದಾಚಾರ ಸಂಹಿತೆಯು ಜಾರಿಯಲ್ಲಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿರುವ ಆದರೆ ಚುನಾವಣೆ ನಡೆಯದೇ ಇರುವ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಗೆ ನೀತಿ ಸಂಹಿತೆ ಅನ್ವಯವಾಗುತ್ತದೆ.  ಉಳಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ನೀತಿ ಸಂಹಿತೆಯು ಅನ್ವಯವಾಗುವುದಿಲ್ಲ. ಚುನಾವಣೆ ಪೂರ್ವದಲ್ಲಿ ಪ್ರಾರಂಭಿಸಿರುವ ಕಾಮಗಾರಿಗಳನ್ನು ಮುಂದುವರೆಸಲು ಹಾಗೂ ಬಿಲ್ಲುಗಳ ಹಣ ಪಾವತಿ ಮಾಡಲು ನೀತಿ ಸಂಹಿತೆಯು ಅಡ್ಡಿ ಇರುವುದಿಲ್ಲ. ಆದರೆ ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವಂತಿಲ್ಲ. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಯಾವುದೇ ಪರಿಶೀಲನಾ ಸಭೆ ನಡೆಸುವಂತಿಲ್ಲ. ಬರಪೀಡಿತ ಪ್ರದೇಶದಲ್ಲಿ ಕುಡಿಯುವ ನೀರನ್ನು ಅಥವಾ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಿ ಅನುಷ್ಠಾನಗೊಳಿಸಲು ನೀತಿ ಸಂಹಿತೆ ಅಡ್ಡಿ ಇರುವುದಿಲ್ಲ. ಆದರೆ ಅಂತಹ ಯೋಜನೆಯ ಅನುಷ್ಠಾನವನ್ನು ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರುಗಳ ಉಪಸ್ಥಿತಿಯಲ್ಲಿ ನಡೆಸುವುದು ನಿಷೇಧಿಸಲಾಗಿದೆ.
     ನೆರೆ ಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಯಾವುದೇ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ನೆರೆ ಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಯಾವುದೇ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ.
     ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದು ಯಾವುದೇ ಸಾಂಸ್ಕøತಿಕ ಹಾಗೂ ಧಾರ್ಮಿಕ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ಅಡ್ಡಿ ಇಲ್ಲ. ಆದರೆ ನೀತಿ ಸಂಹಿತೆಗೆ ಭಾದಕವಾಗುವ ರೀತಿಯಲ್ಲಿ ಮತದಾರರ ಮೇಲೆ ಪರಿಣಾಮ ಬೀರುವಂತಹ ಯಾವುದೇ ಘೋಷಣೆ, ಹೇಳಿಕೆ ಅಥವಾ ಆಶ್ವಾಸನೆ ಇತ್ಯಾದಿಗಳನ್ನು ಮಾಡುವಂತಿಲ್ಲ. ನೇಮಕಾತಿ ನಿಯಮಗಳನ್ವಯ ಯಾವುದೇ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದರೆ ಅದನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ. ಆದರೆ ಯಾವುದೇ ನೇಮಕಾತಿಯನ್ನು ಪ್ರಾರಂಭಿಸಲು ಅಧಿಸೂಚಿಸುವುದಾಗಲೀ ಅಥವಾ ಜಾರಿಯಲ್ಲಿರುವ ನೇಮಕಾತಿ ಪ್ರಕ್ರಿಯೆ ಅಂತಿಮಗೊಳಿಸಿ ನೇಮಕಾತಿ ಪಟ್ಟಿಯನ್ನು ಪ್ರಕಟಗೊಳಿಸಬಾರದು. ಯಾವುದೇ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಅವಕಾಶವಿರುವುದಿಲ್ಲ. ಆದರೆ ಯಾವುದಾದರೂ ತುರ್ತು ಸೇವೆಗೆ ನೇಮಕಾತಿ ಅವಶ್ಯವಿದ್ದಲ್ಲಿ ಆಯೋಗದ ಅನುಮೋದನೆ ಪಡೆದು ನೇಮಕಾತಿ ಮಾಡಬಹುದು. ಯಾವುದೇ ಇಲಾಖೆಯಲ್ಲಿ ಸಾಮಾನ್ಯ ಮುಂಬಡ್ತಿಯನ್ನು ನೀಡುವುದು ಅತೀ ಅವಶ್ಯವಿದ್ದಲ್ಲಿ ಆಯೋಗದ ಅನುಮತಿ ಪಡೆದು ಮಾಡಬಹುದಾಗಿದೆ.
     ಸರ್ಕಾರಿ ನೌಕರರನ್ನು ಆಯೋಗದ ಅನುಮತಿ ಇಲ್ಲದೇ ವರ್ಗಾವಣೆ ಮಾಡುವಂತಿಲ್ಲ. ಆದರೆ ಒಂದು ವೇಳೆ ಹುದ್ದೆಗಳು ಖಾಲಿ ಇದ್ದಲ್ಲಿ ಹಾಗೂ ಯಾವುದೇ ಸರ್ಕಾರಿ ನೌಕರರು ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದಲ್ಲಿ ಅಂತಹ ನೌಕರರನ್ನು ಖಾಲಿ ಇರುವ ಹುದ್ದೆಗಳಿಗೆ ಆಯೋಗದ ಅನುಮತಿಯೊಂದಿಗೆ ಮಾಡಬಹುದಾಗಿದೆ. ಆದರೆ ಒಂದು ನೇಮಕಾತಿಗಾಗಿ ಹಲವು ಬದಲಾವಣೆಯನ್ನು ಮಾಡುವುದನ್ನು ನಿಷೇಧಿಸಲಾಗಿದೆ.
     ಪಡಿತರ ಚೀಟಿ ವಿತರಣೆ ಅಥವಾ ಇತರೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಭೆಗಳನ್ನು ಸಚಿವರು, ಶಾಸಕರು, ಅಧಿಕಾರಿಗಳು ನಡೆಸುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ.  ಮಂತ್ರಿಗಳು ಮತ್ತು ಶಾಸಕರು ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತದಾರರನ್ನು ಪ್ರಭಾವಿಸುವಂತಹ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಮಂತ್ರಿಗಳು, ಶಾಸಕರು ಇನ್ನಾವುದೇ ಅಧಿಕಾರೇತರ ಸದಸ್ಯರು, ನಿಗಮ ಮತ್ತು ಮಂಡಳಿ ಅಧ್ಯಕ್ಷರುಗಳಿಗೆ ಒದಗಿಸಿರುವ ಸರ್ಕಾರಿ ವಾಹನಗಳನ್ನು ಚುನಾವಣೆ ಸಂಬಂಧದ ಸಭೆ, ಸಮಾರಂಭ, ಪ್ರಚಾರಕ್ಕಾಗಿ ಬಳಸಿಕೊಂಡಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ವಿಧಾನ ಮಂಡಲ ಮತ್ತು ಸಂಸತ್ ಸದಸ್ಯರುಗಳಿಗೆ ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕಾ ಮಟ್ಟದಲ್ಲಿ ಅವರ ಸಾಮಾನ್ಯ ಕರ್ತವ್ಯ ನಿರ್ವಹಣೆಗೆ ಒದಗಿಸಲಾಗಿರುವ ಸರ್ಕಾರಿ ವಾಹನವನ್ನು ಜಿಲ್ಲಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಚುನಾವಣಾ ಪ್ರಚಾರ ಅಥವಾ ಚುನಾವಣಾ ಸಂಬಂಧದ ಕಾರ್ಯಗಳಿಗೆ ಬಳಸಿದಲ್ಲಿ ಅದನ್ನು ತಕ್ಷಣ ವಶಕ್ಕೆ ಪಡೆದುಕೊಳ್ಳಬಹುದು.
     ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಒದಗಿಸಲಾಗಿರುವ ಸರ್ಕಾರಿ ವಾಹನಗಳನ್ನು ಚುನಾವಣಾ ಪ್ರಾರಂಭದಿಂದ ಮುಕ್ತಾಯದವರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಶದಲ್ಲಿ ಇರತಕ್ಕದ್ದು. ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಸರ್ಕಾರಿ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ರಾಜಕೀಯ ಮುಖಂಡರ ಭಾವಚಿತ್ರಗಳನ್ನೊಳಗೊಂಡ ಭಿತ್ತಿಪತ್ರ, ಬ್ಯಾನರ್, ಕಟೌಟ್, ಬೋರ್ಡ್ ಇತ್ಯಾದಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವಂತಿಲ್ಲ. ನೀತಿ ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಅವುಗಳನ್ನು ಸಂಬಂಧಪಟ್ಟ ಪ್ರಾಧಿಕಾರಿಗಳು ತೆರವುಗೊಳಿಸಬೇಕು. ಸದಾಚಾರ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸರ್ಕಾರಿ ವಾಹನಗಳ ಮೇಲೆ ರಾಜಕೀಯ ಮುಖಂಡರ, ನಾಯಕರ ಭಾವಚಿತ್ರಗಳನ್ನು, ಭಿತ್ತಿಪತ್ರಗಳನ್ನು, ಪೋಸ್ಟರ್‍ಗಳನ್ನು, ಕಟೌಟ್‍ಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.  ಅಲ್ಲದೆ ನೀತಿ ಸಂಹಿತೆಯ ಕಟ್ಟುನಿಟ್ಟಾದ ಪಾಲನೆಗಾಗಿ ಅವಶ್ಯವೆನಿಸಿದಲ್ಲಿ ರಾಜ್ಯ ಚುನಾವಣಾ ಆಯೊಗವು ಆದೇಶಗಳನ್ನು, ನಿರ್ದೇಶಗಳನ್ನು ಮತ್ತು ಸೂಚನೆಗಳನ್ನು ಹೊರಡಿಸುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳಾದ ಆರ್.ಚಂದ್ರಶೇಖರ ಅವರು ಹೊರಡಿಸಿರುವ ಮಾದರಿ ಸದಾಚಾರ ಸಂಹಿತೆಯ ವಿವರಗಳಲ್ಲಿ ತಿಳಿಸಲಾಗಿದೆ.