Saturday, 31 December 2016

ಕೊಪ್ಪಳ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ಡಿ.31 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಕೊಪ್ಪಳ ನಗರ ಹಾಗೂ ತಾಲೂಕಿನಲ್ಲಿನ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
     ವಿವಿಧ ಕಾರಣಗಳಿಂದ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ 04 ಹುದ್ದೆ ಹಾಗೂ ಅಂಗನವಾಡಿ ಸಹಾಯಕಿಯರ 11 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಯ ಸ್ಥಳ ಹಾಗೂ ಮೀಸಲಾತಿ ವಿವರ ಇಂತಿದೆ : ಮುನಿರಾಬಾದ ಆರ್‍ಎಸ್(ಇತರೆ), ಕವಳಿ (ಪ.ಜಾತಿ), ಬಿ.ಹೊಸಳ್ಳಿ (ಇತರೆ), ಗೊಂಡಬಾಳ (ಇತರೆ) ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
ಅಂಗನವಾಡಿ ಸಹಾಯಕಿಯರ ಹುದ್ದೆ ಸ್ಥಳ ಹಾಗೂ ಮೀಸಲಾತಿ ವಿವರ ಇಂತಿದೆ : ಕೆಂಚನಡೋಣಿ 1ನೇ ಕೇಂದ್ರ-(ಪ.ಜಾತಿ), ಚಿಕ್ಕಬೊಮ್ಮನಾಳ 2ನೇ ಕೇಂದ್ರ-(ಪ.ಪಂಗಡ), ಕಲಕೇರಿ 2ನೇ ಕೇಂದ್ರ-(ಪ.ಜಾತಿ), ಹಿಟ್ನಾಳ 6ನೇ ಕೇಂದ್ರ-(ಇತರೆ), ಚುಕ್ಕನಕಲ್ಲ 2ನೇ ಕೇಂದ್ರ-(ಇತರೆ), ಅಳವಂಡಿ 9ನೇ ಕೇಂದ್ರ-(ಇತರೆ), ಗೊಂಡಬಾಳ 2ನೇ ಕೇಂದ್ರ-(ಇತರೆ), ಬಿ.ಹೊಸಳ್ಳಿ 3ನೇ ಕೇಂದ್ರ-(ಇತರೆ), ಕೊಪ್ಪಳ ನಗರಸಭೆ ವ್ಯಾಪ್ತಿಯ ನಿರ್ಮಿತಿ ಕೇಂದ್ರ ಬಳಿಯ 2ನೇ ಕೇಂದ್ರ-(ಅಲ್ಪಸಂಖ್ಯಾತರ), ನಗರಸಭೆ ವ್ಯಾಪ್ತಿಯ ಇಂದ್ರಕೀಲ ನಗರ 1ನೇ ಕೇಂದ್ರ-(ಇತರೆ), ಹಂದ್ರಾಳ 1ನೇ ಕೇಂದ್ರ-(ಇತರೆ) ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
     ನಿಗದಿತ ಅರ್ಜಿ ನಮೂನೆಯನ್ನು ಕೊಪ್ಪಳದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿ, 2017 ರ ಜನೇವರಿ.27 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಲಯ ಕೊಪ್ಪಳ ದೂ.ಸಂ :08539-230205 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಯುವ ಕ್ರೀಡಾ ಮಿತ್ರ ಯೋಜನೆಗೆ ಅರ್ಜಿ ಆಹ್ವಾನ

ಕೊಪ್ಪಳ ಡಿ. 31 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿನ ರಾಜ್ಯ ಯುವ ನೀತಿ ಅನುಷ್ಠಾನದಡಿ ಯುವ ಕ್ರೀಡಾ ಮಿತ್ರ ಯೋಜನೆಗಾಗಿ ಕ್ರಿಯಾಶೀಲವಾಗಿರುವ ಯುವಕ/ಯುವತಿ ಸಂಘಗಳಿಂದ ಅರ್ಜಿ ಆಹ್ವಾನಿಸಿದೆ.
     ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದ ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಕ್ರೀಡಾಶಾಲೆ/ ಕ್ರೀಡಾ ನಿಲಯಗಳಿಗೆ ಕಳುಹಿಸಿಕೊಟ್ಟ ಸಂಘಗಳಿಗೆ ಪ್ರೋತ್ಸಾಹಧನವಾಗಿ ರೂ. 25 ಸಾವಿರ ರೂ. ಮಂಜೂರು ಮಾಡಲಾಗುವುದು.  ಆಸಕ್ತ ಮತ್ತು ಅರ್ಹ ಯುವಕ/ ಯುವತಿ ಕ್ರೀಡಾ ಸಂಸ್ಥೆಗಳು ಅಥವಾ ರಾಜ್ಯ / ರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳನ್ನು ಹೊಂದಿರುವ ಸಂಘಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿಗದಿತ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜ. 10 ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ, ದೂರವಾಣಿ ಸಂ : 08539-201400 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಜ.01 ರಿಂದ ಗಿಣಿಗೇರಾದಲ್ಲಿ ಹಂಪಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ

ಕೊಪ್ಪಳ, ಡಿ.31 (ಕರ್ನಾಟಕ ವಾರ್ತೆ):  ಕೊಪ್ಪಳ ತಾಲೂಕಿನ ಗಿಣಿಗೇರಾದಲ್ಲಿ ಹಂಪಿ ಎಕ್ಸ್‍ಪ್ರೆಸ್ ರೈಲು 2017 ರ ಜ.1 ರಿಂದ ನಿಲುಗಡೆಯಾಗಲಿದೆ.
     ಗಿಣಿಗೇರಾ ಗ್ರಾಮವು ಕೈಗಾರಿಕಾ ವಲಯದ ಪ್ರದೇಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ವಿವಿಧ ನಗರಗಳಿಗೆ ಪ್ರಯಾಣ ಬೆಳೆಸುತ್ತಾರೆ.  ಆದ್ದರಿಂದ ಗಿಣಿಗೇರಾ ರೈಲು ನಿಲ್ದಾಣದಲ್ಲಿ ಹಂಪಿ ಎಕ್ಸ್‍ಪ್ರೆಸ್ ರೈಲನ್ನು ನಿಲುಗಡೆ ಮಾಡುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಕೇಂದ್ರ ರೈಲ್ವೆ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.  ಇದೀಗ ಅವರ ಮನವಿಗೆ ಸ್ಪಂದನೆ ದೊರೆತಿದ್ದು,   ಜ.1 ರಿಂದ ಹಂಪಿ ಎಕ್ಸ್‍ಪ್ರೆಸ್ ಗಾಡಿ ಸಂಖ್ಯೆ:16591/16592 ಗಿಣಿಗೇರಾದಲ್ಲಿ ನಿಲುಗಡೆಯಾಗಲಿದೆ.  ಈ ಕುರಿತು ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳು ಸಂಸದರಿಗೆ ಪತ್ರದ ಮೂಲಕ ತಿಳಿಸಿದ್ದು, ಗಿಣಿಗೇರಾದಲ್ಲಿ ರೈಲು ನಿಲುಗಡೆಗೆ ಸಹಕರಿಸಿದ ರೈಲ್ವೆ ಮಂತ್ರಿಗಳಿಗೆ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಸದ ಕರಡಿ ಸಂಗಣ್ಣ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಮಾವು ಬೆಳೆಗೆ ಕಾಡುವ ಪ್ರಮುಖ ಕೀಟಗಳು : ನಿರ್ವಹಣೆಗೆ ರೈತರಿಗೆ ಸಲಹೆ


ಕೊಪ್ಪಳ ಡಿ. 31 (ಕರ್ನಾಟಕ ವಾರ್ತೆ): ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವು ಬೆಳೆಗೆ ಪ್ರಮುಖವಾಗಿ ಮಾವಿನ ಜಿಗಿ ಹುಳು, ಕಾಂಡ ಕೊರೆಯುವ ಹುಳು, ಹಿಟ್ಟು ತಿಗಣೆ ಮುಂತಾದ ಕೀಟಗಳು ಹೆಚ್ಚು ಕಾಡುತ್ತವೆ.  ಇಂತಹ ಕೀಟಗಳ ನಿರ್ವಹಣೆಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ರೈತರಿಗೆ ಸಲಹೆಗಳನ್ನು ನೀಡಿದೆ.

    ಮಾವು ಅನೇಕ ಔಷಧೀಯ ಗುಣಗಳನ್ನು ಸಹ ಹೊಂದಿದ್ದು, ಸಂಸ್ಕರಿತ ಮಾವಿನ ಹಣ್ಣಿನ ರಸ, ಜಾಮ್ ಮತ್ತು ಉಪ್ಪಿನಕಾಯಿ ಇವುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಣ್ಣು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ಹೊರ ದೇಶಗಳಿಗೆ ಅಧಿಕ ಪ್ರಮಾಣದಲ್ಲಿ ರಪ್ತು ಮಾಡಲಾಗುತ್ತಿದೆ.  ಈ ಬೆಳೆ ಲಾಭದಾಯಕವಾಗಬೇಕಾದರೆ ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಅತಿಮುಖ್ಯವಾಗಿ ಇದಕ್ಕೆ ಬರುವ ಕೀಟ ಆರ್ಥಿಕ ಇಳುವರಿಯ ಮೇಲೆ ಗಣನೀಯ ಪ್ರಭಾವ ಬೀರುವದರಿಂದ ಬೆಳೆಯನ್ನು ರಕ್ಷಿಸುವುದು ಅವಶ್ಯವಾಗಿದೆ.  ಮಾವಿಗೆ ಬರುವ ಪ್ರಮುಖ ಕೀಟಗಳು ಜಿಗಿಹುಳು, ಕಾಂಡಕೊರೆಯುವ ಹುಳು, ಓಟೆಮೂತಿ ಹುಳು, ಮತ್ತು ಇರಿಯೋಪಿಡ್ ನುಶಿ ಪ್ರಮುಖವಾದವುಗಳು.  ಈ ಕೀಟಗಳಿಂದ ಪಾರಾಗಲು ಕೈಗೊಳ್ಳಬಹುದಾದ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಸಲಹೆಗಳನ್ನು ನೀಡಲಾಗಿದೆ.

ಮಾವಿನ ಜಿಗಿ ಹುಳು :
*-***********ಮಾವಿನ ಹೂಗಳಿಗೆ ಅತಿ ಮಾರಕವಾಗಿ ಬೀಳುವ ಕೀಟಪಿಡುಗಳಲ್ಲಿ ಜಿಗಿ ಹುಳು ಪ್ರಮುಖವಾಗಿದೆ. ಜನವರಿ-ಫಬ್ರವರಿ ಅವಧಿಯಲ್ಲಿ ಮಾವಿನ ಮರಗಳಲ್ಲಿ ಚಿಗುರು ಮತ್ತು ಗೊಂಚಲಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ.  ಮಾವಿನ ಗಿಡದ ಕೆಳಗೆ ಹೋಗಿ ಸ್ವಲ್ಪ ಟೊಂಗೆ ಅಲುಗಾಡಿಸಿದಾಗ ಜುಂಯ್ ಅಂತ ನೂರಾರು ಜಿಗಿಹುಳುಗಳು ಕಣ್ಣಮುಂದೆ ಹಾರಾಡತೊಡಗುವವು.
    ಹೆಣ್ಣು ಕೀಟವು ಹೂ, ಕಾಂಡ ಅಥವಾ ಚಿಗುರಿನಲ್ಲಿ ಚಿಕ್ಕದಾಗಿ ಕೊರೆದು ಒಂದೊಂದಾಗಿ 100-200 ಮೊಟ್ಟೆಗಳನ್ನು ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಇಡಬಲ್ಲದು.  ಮೊಟ್ಟೆಯಿಂದ ಹೊರಬಂದ ಮರಿಕೀಟಗಳು 10-20 ದಿವಸಗಳಲ್ಲಿ ಪ್ರೌಢಾವಸ್ಥೆಯನ್ನು ತಲುಪುತ್ತವೆ.  ಮರಿ ಮತ್ತು ಪ್ರೌಢ ಕೀಟಗಳು ಹೂ ಮತ್ತು ಮೊಗ್ಗುಗಳಿಂದ ರಸವನ್ನು ಹೀರುತ್ತವೆ.  ಇದರಿಂದಾಗಿ, ಎಲೆ ಮತ್ತು ಹೂ ಗೊಂಚಲುಗಳ ಮೇಲೆ ಮಿರಿ ಮಿರಿ ಮಿಂಚುವ ಅಂಟಿನಂತಹ ಜಿಗುಟಾದ ರಸವು ಹರಡಿದ್ದು ಕಾಣಬಹುದಾಗಿದೆ. ಹೂ ಮತ್ತು ಸಣ್ಣ ಕಾಯಿ ಉದರುವ್ಯದು, ಇಡಿ ಹೂ ಗೊಂಚಲು ಬಾಡಿ ಒಣಗಿ ಬಿಡುವುದು.  ಈ ಕೀಟವು ಸಕ್ಕರೆಯಂತಹ ಪದಾರ್ಥ ವಿಸರ್ಜಿಸುವುದರಿಂದ ಶಿಲೀಂದ್ರಗಳ ಬೆಳವಣಿಗೆಗೆ ಪ್ರೋತ್ಸಾಹಿಸುತ್ತದೆ.  ಈ ಕಪ್ಪು ಶಿಲೀಂದ್ರವು ಎಲೆಗಳ ಮೇಲೆ ಹರಡುವುದರಿಂದ ಸಸ್ಯದ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯನ್ನುಂಟು ಮಾಡಿ ಹೂಗಳ ಬೆಳೆವಣಿಗೆ ಕುಂಠಿತಗೊಂಡು ಕಾಯಿಗಳು ಉದುರುತ್ತವೆ.  ಇದರ ನಿರ್ವಹಣೆಗೆ ರೈತರು, ತೋಟವನ್ನು ಸ್ವಚ್ಛವಾಗಿಡುವುದರ ಜೊತೆಗೆ ಮಾವಿನ ಗಿಡಗಳ ಮಧ್ಯೆ ಸರಿಯಾದ ಅಂತ ಕಾಪಾಡುವುದು. (9*9 ಮೀ. ಅಥವಾ 12* 12 ಮೀ ಅಂತರದಲ್ಲಿ ನಾಟಿ ಮಾಡಬೇಕು). ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹೂ ಬಿಡುವುದಕ್ಕಿಂತ ಮುಂಚೆ ಮತ್ತು ಕಾಯಿ ಕಟ್ಟಿದ ಕೂಡಲೆ ಗಿಡಗಳಿಗೆ 0.3 ಗ್ರಾಂ. ಥೈಮಿಥಾಕ್ಸಮ್ 25 ಡಬ್ಲೂ.ಡಿ.ಜೆ.. ಅಥವಾ 0.3 ಮಿ.ಲೀ. ಇಮಿಡಾಕ್ಲೋಪ್ರಿಡ್  17.8 ಎಸ್.ಎಲ್. ಪ್ರತಿ ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪರಣೆ ಮಾಡಬೇಕು.
ಕಾಂಡಕೊರೆಯುವ ಹುಳು :
**************ಈ ಕೀಟವು ಬಲಿಷ್ಠವಾಗಿದ್ದು, ಕಾಲು ಮತ್ತು ಕುಡಿಮೀಶೆಗಳು ಉದ್ದವಾvರುತ್ತವೆ.  ದೇಹದ ಬಣ್ಣವು ಹಳದಿ ಮಿಶ್ರಿತ ಕಂದು ಬಣ್ಣವಿದ್ದು, ರೆಕ್ಕೆಗಳ ಮೇಲೆ ನಸು ಹಳದಿ ಛಾಯೆಯ ಬಿಳಿ ಬಣ್ಣದ ಅವ್ಯವಸ್ಥಿತ ಚುಕ್ಕೆಗಳಿರುತ್ತವೆ.  ಈ ಕೀಟವು ಒಣಗಿದ ಗೆಣ್ಣುಗಳ ತೊಗಟೆಯಡಿಯಲ್ಲಿ ಮೊಟ್ಟೆ ಇಡುತ್ತದೆ. ಮರಿಗಳು ಕಾಂಡ ಅಥವಾ ಗೆನ್ಣುಗಳನ್ನು ಕೊರೆದು ಉದ್ದವಾದ ಸುರಂಗ ಮಾಡುತ್ತವೆ.  ಕೀಟಬಾಧೆಯಿಂದ ದುಂಬಿಯ ಮರಿಗಳು ಕಾಂಡ ಮತ್ತು ರೆಂಬೆಗಳನ್ನು ಕೊರೆಯುವುದರಿಂದ ರೆಂಬೆಗಳು ಒಣಗುತ್ತವೆ ಮತ್ತು ಕೆಲವು ವೇಳೆ ಬಾಧೆ ಅಧಿಕವಾಗಿದ್ದಾಗ ಗಿಡಗಳೇ ಒಣಗಿಹೋಗುತ್ತವೆ.  ಹಾನಿಗೀಡಾದ ಮರದ ಕೆಳಗೆ ಪುಡಿ ಉದುರಿರುತ್ತದೆ.  ಕೆಲವೊಮ್ಮೆ ಹಾನಿಗೀಡಾದ ರಂಧ್ರಗಳಿಂದ ಅಂಟು ಅಂಟಾದ ವಸ್ತು ಸ್ರವಿಸುತ್ತವೆ.  ಈ ಕೀಟದ ನಿರ್ವಹಣೆಗೆ ರೈತರು, ಮೊದಲ ಹಂತದಲ್ಲಿ ಹಾನಿಗೊಳಗಾದ ಮರದ ಭಾಗವನ್ನು ಕತ್ತರಿಸಬೇಕು.  ಮರದ ಬುಡಗಳ ಸುತ್ತಲು 5-10 ಗ್ರಾಂ ಕಾರ್ಭೋಫ್ಯೂರಾನ್ ಅಥವಾ ಫ್ಲೋರೇಟ್ ಹರಳನ್ನು ಹಾಕಬೇಕು.  ಡೈಕ್ಲೋರಾವಾಸ್ 76 ಇ.ಸಿ. ಕೀಟನಾಶಕವನ್ನು ಬಾದೆಗೊಳಗಾದ ಕಾಂಡದ ರಂದ್ರಗಳಲ್ಲಿ 5-10 ಮಿ.ಲೀ. ಸಿರೀಂಜ್ ಸಹಾಯದಿಂದ ರಂದ್ರಗಳಲ್ಲಿ ಹಾಕಿ ಹಸಿ ಮಣ್ಣಿನಿಂದ ಮುಚ್ಚಬೇಕು.
     ಹೆಚ್ಚಿನ ಮಾಹಿತಿಯನ್ನು ಶ್ವೇತಾ, ವಿಷಯ ತಜ್ಞರು, ಕೀಟಶಾಸ್ತ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ (08539-220305 ಹಾಗೂ ಮೊಬೈಲ್ 8971398374) ಕ್ಕೆ ಸಂಪರ್ಕಿಸಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಕಟಣೆ ತಿಳಿಸಿದೆ.

ಚಿಕ್ಕಜಂತಕಲ್‍ನಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಡಿ. 31 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಶುಕ್ರವಾರದಂದು ಆಯೋಜಿಸಲಾಯಿತು.

      ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಅವರು ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳ ರಕ್ಷಣೆಗಾಗಿ ಸರ್ಕಾರವು  ಹಲವಾರು ಕಾನೂನು ಮತ್ತು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ಸಹ ಒಂದಾಗಿದೆ. ಸದರಿ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿಯು ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸ್ಥಾಪಿಸಲಾಗಿದ್ದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಅನಾಥ ನಿರ್ಗತೀಕ ಮಕ್ಕಳ ಆರೈಕೆ ಮತ್ತು ಪೋಷಣೆಗಾಗಿ  ಪ್ರಾಯೋಜಕತ್ವ ಹಾಗೂ ಎಚ್.ಐ.ವ್ಹಿ ಸೊಂಕೀತ ಮತ್ತು ಬಾಧಿತ ಮಕ್ಕಳ ಆರೈಕೆ ಮತ್ತು ಪೋಷಣೆಗಾಗಿ ವಿಶೇಷ ಪಾಲನಾ ಯೋಜನೆಯನ್ನು ಜಾರಿಗೊಳಿಸಿದ್ದು.  ಜಿಲ್ಲೆಯಲ್ಲಿನ  ಮಕ್ಕಳಿಗೆ ಹಾಗೂ ಜಿಲ್ಲೆಯಲ್ಲಿ ಗುರುತಿಸಿದ ತೀವ್ರ ಸಂಕಷ್ಠದಲ್ಲಿರುವ ಎಚ್.ಐ.ವಿ ಭಾದಿತ ಹಾಗೂ ಸೋಂಕಿತ  ಮಕ್ಕಳಿಗೆ ಆರೈಕೆ ಮತ್ತು ಪೋಷಣೆಗಾಗಿ ಸದರಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿ ಮಕ್ಕಳಿಗೆ ಮಾಸಿಕ ರೂ. 650/- ಅಥವಾ ರೂ. 750/-ರಂತೆ ಮಕ್ಕಳ ಖಾತೆಗೆ ಅನುದಾನವನ್ನು ಬಿಡುಗಡೆಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 955 ಮಕ್ಕಳನ್ನು ಗುರುತಿಸಿ ಅನುದಾವನ್ನು ಬಿಡುಗಡೆ ಮಾಡಲಾಗಿದೆ. ಸಾಂಸ್ಥಿಕ ಸೇವೆಗಾಗಿ ಚಿಂದಿ ಆಯುವ, ಬೀಕ್ಷೆ ಬೇಡುವ ಹಾಗೂ ಬೀದಿ ಮಕ್ಕಳಿಗಾಗಿ ತೆರೆದ ತಂಗುದಾಣವನ್ನು ಆರಂಭಿಸಲಾಗಿದೆ. ಈ ರೀತಿಯ ಮಕ್ಕಳು ಕಂಡುಬಂದಲ್ಲಿ ನೇರವಾಗಿ ಸಂಸ್ಥೆಗೆ ಅಥವಾ ಹತ್ತೀರದ ಪೊಲೀಸ್ ಠಾಣೆಗೆ ಹಾಜರಪಡಿಸಬಹುದಾಗಿದೆ ಅಥವಾ ಮಕ್ಕಳ ಸಹಾಯವಾಣಿ -1098ಕ್ಕೆ ಕರೆಯನ್ನು ಮಾಡಿ ಮಾಹಿತಿಯ್ನು ನೀಡಬಹುದಾಗಿದೆ.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನಾಥ ನೀರ್ಗತಿಕ ಮಕ್ಕಳಿಗಾಗಿ ಜಿಲ್ಲೆಯಲ್ಲಿ ಒಟ್ಟು 4 ನಿರ್ಗತಿಕ ಮಕ್ಕಳ ಕುಟೀರಗಳನ್ನು ಆರಂಭಿಸಿದೆ ಮತ್ತು ಮಾನಸಿಕ ವಿಕಲಚೇತನ ಮಕ್ಕಳಿಗಾಗಿ ಗಂಗಾವತಿ ದಾಸನಾಳ ಮತ್ತು ಲಯನ್ಸ್ ಸಂಸ್ಥೆಯಲ್ಲಿ ವಸತಿ ಸಹಿತ ಶಿಕ್ಷಣ ಕೇಂದ್ರಗಳನ್ನು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಅಲ್ಲಿಯು ಸಹ ಈ ರೀತಿಯ ಮಕ್ಕಳನ್ನು ದಾಖಲಿಬಹುದಾಗಿದೆ ಎಂದು ರೋಹಿಣಿ ಅವರು ಹೇಳಿದರು.
ಪಿಡಿಒ ರವೀಂದ್ರ ಅವರು ಗ್ರಾಮ ಪಂಚಾಯತ್‍ನಿಂದ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಗಾಗಿ ಕಳೆದ 3 ವರ್ಷಗಳಿಂದ “ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲಾಗಿದೆ.  18 ವರ್ಷದೊಳಗಿನ ಮಕ್ಕಳನ್ನು ಯಾರಾದರು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಹಾಗೂ ಗದ್ದೆಗಳ ಕೆಲಸಕ್ಕೆ ನೇಮಿಸಿಕೊಂಡಲ್ಲಿಯು ಸಹ ನಿರ್ದಾಕ್ಷಿಣ್ಯವಾಗಿ ಅತಂಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸಟೇಬಲ್ ಮಾದೇವಿ, ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌಜನ್ಯಕ್ಕೆ  ಸಂಬಂಧಿಸಿದಂತೆ ಸಭೆಯಲ್ಲಿ ಲೈಂಗಿಕ ದೌಜನ್ಯದಿಂದ ಮಕ್ಕಳ ಸಂರಕ್ಷಣೆ ಕಾಯ್ದೆ(PಔಅSಔ) ಬಗ್ಗೆ ಮಾಹಿತಿ ನೀಡಿದರು ಹಾಗೂ ಇತ್ತಿಚೀನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕ ಹೆಚ್ಚಾಗುತ್ತಿದ್ದು, ಪ್ರಾಥಮಿಕವಾಗಿ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹೆಚ್ಚಿನ ಜವಾಬ್ದಾರಿ ಮೂಲತಃ ಕುಟುಂಬದ್ದು ಎಂದು  ತಿಳಿಸಿದರು. ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ಕಛೇರಿಯಲ್ಲಿ  ಸ್ಥಾಪಿಸಲಾಗಿದೆ. ಅಲ್ಲದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಿಸಿದ್ದು, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಹಾಜರಪಡಿಸಬಹುದಾಗಿದೆ ಎಂದು ತಿಳಿಸಿದರು.
 ಮಕ್ಕಳ ಸಹಾಯವಾಣಿ-1098 ಸಂಯೋಜಕರಾದ ಶ್ರೀ ಶರಣಪ್ಪ ಸಿಂಗನಾಳರವರು ಸಂಕಷ್ಠಕೊಳಗಾದ ಮಕ್ಕಳ ರಕ್ಷಣೆಗಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣೆಯನ್ನು ಆರಂಭಿಸಿದ್ದು, 1098 ದೂರವಾಣಿಗೆ ಕರೆ ಮಾಡಿ, ಸಂಕಷ್ಠಕೊಳಗಾದ ಮಕ್ಕಳ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಲು ಕೋರಿದರು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
        ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಜಂತಕಲ್ಲ ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕನಗೌಡ್ರ ಮುಖ್ಯ ಅತಿಥಿಗಳಾಗಿ   ಲಕ್ಷ್ಮೀ ಹುಲಗಪ್ಪರವರು, ಅತಿಥಿಗಳಾಗಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಆಗಮಿಸಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಸ್ವಾಗತಿಸಿ ನಿರೂಪಿಸಿದರು.  ಯಮುನಮ್ಮ ವಂದಿಸಿದರು.

Friday, 30 December 2016

ವಿಕಲಚೇತನರ ಬಸ್ ಪಾಸ್ ನವೀಕರಣ: ಅವಧಿ ವಿಸ್ತರಣೆ

ಕೊಪ್ಪಳ ಡಿ. 30 :(ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೊಪ್ಪಳ ವಿಭಾಗವು ವಿಕಲಚೇತನರಿಗೆ 2016 ನೇ ಸಾಲಿನಲ್ಲಿ ನೀಡಿರುವ ರಿಯಾಯಿತಿ ದರದ ಬಸ್ ಪಾಸ್‍ಗಳ ನವೀಕರಣ ಅವಧಿಯನ್ನು ಫೆ.28 ರವರೆಗೆ ವಿಸ್ತರಿಸಿದೆ.
    2016 ನೇ ಸಾಲಿನಲ್ಲಿ ವಿತರಿಸಲಾಗಿರುವ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್‍ಗಳನ್ನು 2017 ರ ಫೆ.28 ರವರೆಗೆ ಪ್ರಯಾಣಿಸಲು ಅನುಮತಿಸಲಾಗಿದೆ.  ವಿಕಲಚೇತನರಿಗೆ 2016 ರ ಡಿ.31 ರವರೆಗೆ ಮಾನ್ಯತೆ ಇರುವ ಬಸ್‍ಪಾಸ್‍ಗಳನ್ನು ವಿತರಿಸಲಾಗಿತ್ತು. ನವೀಕರಣಕ್ಕೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ, ಇದೀಗ ಬಸ್‍ಪಾಸ್ ನವೀಕರಿಸಿಕೊಳ್ಳಲು ಫೆ.28 ರವರೆಗೆ ಅವಧಿ ವಿಸ್ತರಿಸಲಾಗಿದೆ.  ನವೀಕರಣ ಅಭ್ಯರ್ಥಿಗಳು ರೂ.660  ಗಳನ್ನು ನಗದು ರೂಪದಲ್ಲಿ (ಡಿ.ಡಿ.ಅವಶ್ಯವಿರುವುದಿಲ್ಲ) ಪಾವತಿಸಿ ಹಾಗೂ ಪಾಸ್‍ಗಳನ್ನು ನವೀಕರಿಸಿಕೊಳ್ಳಲು ಗುರುತಿನ ಚೀಟಿ ಪಡೆದಿರುವ ಇಲಾಖೆಯಿಂದ, ಗುರುತಿನ ಚೀಟಿ ನೀಡಿರುವ ಕುರಿತು ದೃಢೀಕರಣ ಪಡೆದು, ದಾಖಲೆಗಳನ್ನು ಕಡ್ಡಾಯವಾಗಿ ನೀಡಿ, ಜ.1 ರಿಂದ ಪಾಸ್‍ಗಳನ್ನು ನವೀಕರಿಸಿಕೊಳ್ಳಬಹುದು ಎಂದು ಈ.ಕ.ರ.ಸಾ.ಸಂಸ್ಥೆ, ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಹಕರು ಸುಳ್ಳು ಜಾಹಿರಾತುಗಳಿಗೆ ಮೋಸಹೋಗಬಾರದು: ಏಕತಾ ಎಚ್. ಡಿ


ಕೊಪ್ಪಳ ಡಿ. 30 :(ಕರ್ನಾಟಕ ವಾರ್ತೆ): ಗ್ರಾಹಕರು ಟಿ.ವಿ. ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಬರುವ ಸುಳ್ಳು ಜಾಹೀರಾತುಗಳನ್ನು ನೋಡಿ ಅದರಲ್ಲಿ ತೋರಿಸುವ ವಸ್ತುಗಳನ್ನು ಕೊಂಡು ಮೋಸಹೋಗಬಾರದು, ಹಾಗೊಂದು ವೇಳೆ ಮೋಸಹೋದರೆ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಏಕತಾ ಎಚ್.ಡಿ ಹೇಳಿದರು.

    ಜಿಲ್ಲಾಡಳಿತ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

     ಜಿಲ್ಲೆಯ ಗ್ರಾಹಕರಿಗೆ ಗ್ರಾಹಕರ ರಕ್ಷಣಾ ಕಾಯ್ದೆ 1986 ರ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.  ಜಿಲ್ಲೆಯ ಬಹುತೇಕ ಜನರಿಗೆ ಗ್ರಾಹಕರ ವೇದಿಕೆ ಇರುವುದೇ ಗೊತ್ತಿಲ್ಲ, ಆದ್ದರಿಂದ ಈ ಕುರಿತು ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಿಬೇಕು.  ಗ್ರಾಹಕರು ಮೂಢನಂಬಿಕೆ ಹಾಗೂ ಇತರೆ ಜಾಹೀರಾತುಗಳಿಂದ ಮೊಸ ಹೋಗುವುದನ್ನು ತಡೆಯಬೇಕಿದೆ.  ಗ್ರಾಹಕರು ಖರೀದಿಸುವ ಯಾವುದೇ ವಸ್ತು ಅಥವಾ ಮನೆ, ನಿವೇಶನ ಖರೀದಿಯಲ್ಲಿ ಹಾಗೂ ಡಾಕ್ಟರ್‍ಗಳಿಂದ, ಮೆಡಿಕಲ್ ಸೇವೆಗಳಿಂದ ಮೋಸಕ್ಕೆ ಬಲಿಯಾಗಿದ್ದರೆ ಕೂಡಲೇ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದು. ಆದ್ದರಿಂದ ಪ್ರತಿಯೊಬ್ಬರೂ ಗ್ರಾಹಕರ ವೇದಿಕೆಯ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಏಕತಾ ಎಚ್.ಡಿ ಹೇಳಿದರು.
    ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಸಾವಿತ್ರಿ ಮುಜುಂದಾರ ಅವರು, ನಾವು ಗ್ರಾಹಕರ ವೇದಿಕೆಯ ಬಗ್ಗೆ ತಿಳಿದುಕೊಂಡಾಗಲೇ ಬೇರೆಯವರಿಗೆ ತಿಳಿಸಲು ಸಾದ್ಯ.  ಗ್ರಾಹಕರ ವೇದಿಕೆಯ ಮೂಲಕ ವಸ್ತು ಅಥವಾ ಸೇವೆಯಲ್ಲಿನ ಕೊರತೆ, ನ್ಯೂನತೆಯನ್ನು ನಿವಾರಿಸಿಕೊಳ್ಳಬಹುದು. ಯಾವುದೇ ಒಂದು ದೇಶ ಆರ್ಥಿಕವಾಗಿ ಕುಂಠಿತಗೊಳ್ಳುತ್ತಿದೆ ಎಂದಾದರೆ ಅಲ್ಲಿ ಕಾನೂನುಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ  1986 ರಲ್ಲಿ ಭಾರತದಲ್ಲಿ ಗ್ರಾಹಕರ ವೇದಿಕೆ ವ್ಯವಸ್ಥೆ ಜಾರಿಗೆ ತರಲಾಯಿತು. ಗ್ರಾಹಕರು ಯಾವುದೇ ಇಲಾಖೆ ಅಥವಾ ಸಂಸ್ಥೆಗಳಲ್ಲಿ ಸೇವಾ ನ್ಯೂನತೆಗೆ ಒಳಗಾಗಿದ್ದರೆ ಈ ಕುರಿತು ಗ್ರಾಹಕರ ವೇದಿಕೆಯ ಮೂಲಕ ನ್ಯಾಯ ಪಡೆಯಬಹುದು.  ಒಂದು ಲಕ್ಷದ ಪರಿಹಾರದ ದೂರುಗಳಿಗೆ ರೂ.100 ಶುಲ್ಕ, ಒಂದು ಲಕ್ಷದಿಂದ 5 ಲಕ್ಷದ ವರೆಗಿನ ಪರಿಹಾರದ ದೂರಿಗೆ ರೂ.200, 5 ಲಕ್ಷದಿಂದ 10 ಲಕ್ಷದವರೆಗಿನ ಪರಿಹಾರದ ದೂರಿಗೆ ರೂ.400, 10 ಲಕ್ಷದಿಂದ 20 ಲಕ್ಷದ ಪರಿಹಾರದ ದೂರಿಗೆ ರೂ.500, ಹೀಗೆ 5 ಸಾವಿರ ರೂ ಶುಲ್ಕದ ವರೆಗಿನ ದೂರುಗಳಿಗೆ ವಾದ ಮಂಡಿಸಲು ವಕೀಲರ ಅಗತ್ಯ ಇರುವುದಿಲ್ಲ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಿದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಸಿ.ಡಿ ಗೀತಾ, ಈ ಬಾರಿಯ ಗ್ರಾಹಕರ ದಿನಾಚರಣೆಯನ್ನು ‘ಗ್ರಾಹಕರ ವ್ಯಜ್ಯಗಳ ತ್ವರಿತ ಪರಿಹಾರಕ್ಕಾಗಿ ಪರ್ಯಾಯ ವ್ಯಾಜ್ಯ ನಿವಾರಣಾ ವ್ಯವಸ್ಥೆ’ ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಾರುಕಟ್ಟೆ ನಿಂತಿರುವುದೇ ಗ್ರಾಹಕರಿಂದ. ವಸ್ತು ಅಥವಾ ಸೇವೆ ಪಡೆದುಕೊಳ್ಳಲು ಗ್ರಾಹಕ ಹಣ ನೀಡುತ್ತಾನೆ, ಅದೇ ರೀತಿ ಅಂಗಡಿಕಾರ ಗ್ರಾಹಕನಿಗೂ ಸರಿಯಾದ ಸೇವೆಯನ್ನು ಒದಗಿಸಬೇಕು.  ಗ್ರಾಹಕರು ಮೋಸಕ್ಕೆ ಒಳಗಾದರೆ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಹುದು ಎಂದು ಹೇಳಿದರು.
     ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯೆ ಸುಜಾತಾ ಅಕ್ಕಸಾಲಿ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಅಮೃತಾ ಚವ್ಹಾಣ, ಗ್ರಾಹಕರ ವೇದಿಕೆ ಸಹಾಯಕ ರಿಜಿಸ್ಟ್ರಾರ್ ಅಮರ್‍ದೀಪ್, ರಾಘವೇಂದ್ರ ಕುಲಕರ್ಣಿ sಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.  ಸರ್ಕಾರಿ ಪ್ರಥಮ ದಜೆ ಕಾಲೇಜಿನ ಉಪ ಪ್ರಾಚಾರ್ಯೆ ಭಾಗ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

ಮಾಹಿತಿ ಹಕ್ಕು ಕಾಯ್ದೆಯಡಿ ಕ್ರೋಢೀಕರಿಸಿ ಮಾಹಿತಿ ಕೊಡುವ ಅಗತ್ಯವಿಲ್ಲ- ಡಾ. ಸುಚೇತನ ಸ್ವರೂಪ

ಕೊಪ್ಪಳ ಡಿ. 30 (ಕರ್ನಾಟಕ ವಾರ್ತೆ): ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ ವಿವಿಧ ಮಾಹಿತಿಗಳನ್ನು ಹಲವು ಪ್ರಾಧಿಕಾರಗಳಿಂದ ಪಡೆದು, ಕ್ರೋಢೀಕರಿಸಿ ಕೊಡುವ ಅಗತ್ಯವಿಲ್ಲ ಎಂದು ರಾಜ್ಯ ಕರ್ನಾಟಕ ಮಾಹಿತಿ ಆಯೋಗದ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ಸ್ಪಷ್ಟಪಡಿಸಿದರು.

     ಕರ್ನಾಟಕ ಮಾಹಿತಿ ಆಯೋಗದ ವತಿಯಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಗಳ ಜೊತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಸರ್ಕಾರಿ ಕಚೇರಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಉದ್ದೇಶಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ.  ಅರ್ಜಿದಾರರು ಹಾಗೂ ಮಾಹಿತಿ ಅಧಿಕಾರಿಗಳಲ್ಲಿ ಕಾಯ್ದೆಯ ಬಗ್ಗೆ ಇನ್ನೂ ಕೆಲವು ಗೊಂದಲಗಳಿದ್ದು, ಇದರಿಂದಾಗಿ ಆಯೋಗದಲ್ಲಿ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ.  ಚಿಕ್ಕಬಳ್ಳಾಪುರ, ಬಳ್ಳಾರಿ, ಬೀದರ್, ಕಲಬುರಗಿ ಮುಂತಾದ ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚು ಇವೆ.  ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿ ಜಾರಿಗೆ ತಂದ ಕಾಯ್ದೆ ಇದಾಗಿರುವುದರಿಂದ, ಕಾಯ್ದೆಯಲ್ಲಿ ಯಾವುದೇ ತಿದ್ದುಪಡಿ ತರುವುದು ಆಯೋಗದ ವ್ಯಾಪ್ತಿಗೆ ಬರುವುದಿಲ್ಲ.  ಸರ್ಕಾರಿ ಕಚೇರಿಗಳಲ್ಲಿ ಒಂದೆಡೆ ಕೆಲಸದ ಒತ್ತಡ ಹೆಚ್ಚುತ್ತಿದೆ, ಇನ್ನೊಂದೆಡೆ ಸಿಬ್ಬಂದಿ ಕೊರತೆಯೂ ಇದೆ.  ಇದರ ನಡುವೆಯೂ ಕೆಲಸ ಸಮರ್ಪಕವಾಗಿ ಆಗಬೇಕಿದೆ.  ಇಲಾಖೆಗಳ ಮೇಲ್ಮಟ್ಟದ ಕಚೇರಿಗಳಲ್ಲಿ ಅರ್ಜಿಗಳಿಗೆ ಮಾಹಿತಿ ವರ್ಗಾವಣೆ ಮಾಡುತ್ತಿಲ್ಲ, ಬದಲಿಗೆ ಜವಾಬ್ದಾರಿಯನ್ನು ಕೆಳ ಹಂತದ ಕಚೇರಿಗಳಿಗೆ ವರ್ಗಾಯಿಸುತ್ತಿರುವುದು ಸಮಂಜಸ ಕ್ರಮವಲ್ಲ.  ಅರ್ಜಿದಾರರು ಇಡೀ ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೋರಿದಾಗ, ನಿಯಮ 6(3) ರಡಿ ವರ್ಗಾಯಿಸುವುದು ಕಂಡುಬರುತ್ತಿದ್ದು, ಆದರೆ ಇದು ಸರಿಯಾದ ಕ್ರಮವಲ್ಲ.  ನಿಯಮದಡಿ, ಅರ್ಜಿಯನ್ನು ಒಂದಕ್ಕಿಂತ ಹೆಚ್ಚಿನ ಪ್ರಾಧಿಕಾರಗಳಿಗೆ ನಿಯಮ 6(3) ರಡಿ ವರ್ಗಾಯಿಸುವಂತಿಲ್ಲ.  ಅರ್ಜಿದಾರರು ಸಂಬಂಧಿಸಿದ ಪ್ರಾಧಿಕಾರಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೆ ಹೊರತು, ಒಂದೇ ಪ್ರಾಧಿಕಾರದವರು, ಮಾಹಿತಿಯನ್ನು ಕ್ರೋಢೀಕರಿಸಿ ಕೊಡುವಂತಿಲ್ಲ.  ಕಚೇರಿಯಲ್ಲಿನ ಮಾಹಿತಿಯನ್ನು ಯಥಾವತ್ತಾಗಿ ಕೊಡಬೇಕೆ ಹೊರತು, ಹೊಸದಾಗಿ ಸೃಷ್ಟಿಮಾಡಿ, ಅಥವಾ ಸಂಗ್ರಹಿಸಿ ಕೊಡುವ ಅಗತ್ಯವಿಲ್ಲ. ಬೇರೆ ಯಾವುದೋ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಕೋರಿ ಇನ್ಯಾವುದೋ ಇಲಾಖೆಯ ಕಚೇರಿಗೆ ಅರ್ಜಿ ಕೊಡುವುದು ಸಹ ಕಂಡುಬರುತ್ತಿದ್ದು, ಇದೂ ಸಹ ಸರಿಯಾದ ಕ್ರಮವಲ್ಲ.  ಸರ್ಕಾರಿ ನೌಕರರ ಸೇವಾ ಪುಸ್ತಕದಲ್ಲಿನ ಮಾಹಿತಿ, ನೌಕರರ ಚರ ಮತ್ತು ಸ್ಥಿರಾಸ್ತಿ ವಿವರ ಅಥವಾ ಜಾತಿ ಪ್ರಮಾಣಪತ್ರ, ವ್ಯಾಸಂಗ ಪ್ರಮಾಣ ಪತ್ರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೊಡುವಂತಿಲ್ಲ ಎಂದು  ಸುಪ್ರಿಂಕೋರ್ಟ್ ಈಗಾಗಲೆ ಸ್ಪಷ್ಟಪಡಿಸಿದೆ.  ಆದರೂ ಇಂತಹ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಕಂಡುಬರುತ್ತಿದೆ.  ಮಾಹಿತಿ ಹಕ್ಕು ಕಾಯ್ದೆಯು ಸಾರ್ವಜನಿಕ ಹಿತಾಸಕ್ತಿಗಾಗಿ ಜಾರಿಗೊಂಡ ಉತ್ತಮ ಕಾಯ್ದೆಯಾಗಿದ್ದು, ಕೆಲವರಿಗೆ ಇದೇ ಜೀವನಕ್ಕೆ ಮಾರ್ಗೋಪಾಯವಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.  ಇರುವ ವ್ಯವಸ್ಥೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸುಧಾರಿಸಬೇಕಿದೆ.  ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕಾಯ್ದೆಯನ್ನು ಸರಿಯಾಗಿ ತಿಳಿದುಕೊಂಡು, ಅರ್ಜಿದಾರರನ್ನು ಅನಗತ್ಯವಾಗಿ ಅಲೆದಾಡಿಸದೆ, ಲಭ್ಯವಿರುವ ಮಾಹಿತಿಯನ್ನು ನಿಗದಿತ ಕಾಲಮಿತಿಯೊಳಗೆ ಒದಗಿಸಿದರೆ, ಅಧಿಕಾರಿ/ಸಿಬ್ಬಂದಿಗಳು ತೊಂದರೆಗೆ ಒಳಗಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ಹೇಳಿದರು.
     ಸಂವಾದ ಕಾರ್ಯಕ್ರಮಕ್ಕೂ ಪೂರ್ವದಲ್ಲಿ, ಆಯೋಗದ ವತಿಯಿಂದ ನೋಟೀಸ್ ಜಾರಿಯಾದ, ಕೊಪ್ಪಳ ಜಿಲ್ಲೆಗೆ ಸಂಬಂಧಿತ ಇಲಾಖಾ ಪ್ರಕರಣಗಳ ವಿಚಾರಣೆಯನ್ನು, ಆಯಾ ಅಧಿಕಾರಿಗಳು-ಅರ್ಜಿದಾರರ ಸಮಕ್ಷಮ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ನಡೆಸಿದರು.  ಒಟ್ಟು 52 ಪ್ರಕರಣಗಳ ವಿಚಾರಣೆ ನಡೆದು, 26 ಅರ್ಜಿಗಳು ಇದೇ ಸಂದರ್ಭದಲ್ಲಿ ವಿಲೇವಾರಿಗೊಂಡವು.
     ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಪಾಲ್ಗೊಂಡಿದ್ದರು.

Thursday, 29 December 2016

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ 'ವಿಶ್ವ ಮಾನವ ಕುವೆಂಪು' ಕಿರುಹೊತ್ತಿಗೆ ಬಿಡುಗಡೆ

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾದ ವಿಶ್ವ ಮಾನವ ದಿನ ಆಚರಣೆ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ 'ವಿಶ್ವ ಮಾನವ ಕುವೆಂಪು' ಕಿರುಹೊತ್ತಿಗೆ ಹಾಗೂ ಜಿಲ್ಲಾಡಳಿತ ವತಿಯಿಂದ ಪ್ರಕಟಿಸಿದ ವಿಶೇಷ ಕ್ಯಾಲೆಂಡರ್‍ ಅನ್ನು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಬಿಡುಗಡೆಗೊಳಿಸಿದರು. ಕುವೆಂಪು ಅವರ ಜನ್ಮದಿನದ ಕಾರ್ಯಕ್ರಮಕ್ಕೆ ‘ವಿಶ್ವ ಮಾನವ ಕುವೆಂಪು’ ಕಿರುಹೊತ್ತಿಗೆಯನ್ನು ಸಕಾಲದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿ, ಒದಗಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಗಣ್ಯರಾದ ವಿಠ್ಠಪ್ಪ ಗೋರಂಟ್ಲಿ, ಶಿವಾನಂದ ಹೊದ್ಲೂರ, ಮಹಾಂತೇಶ್ ಮಲ್ಲನಗೌಡರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಉಪಸ್ಥಿತರಿದ್ದರು.

ಕುವೆಂಪುರವರು ಶ್ರೇಷ್ಠ ಸಮಾಜ ಕಟ್ಟಲು ಶ್ರಮಿಸಿದ ಸಾಂಸ್ಕøತಿಕ ನಾಯಕರು- ಡಾ. ರಹಮತ್ ತರೀಕರೆ


ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ) : ಕುವೆಂಪು ಅವರು ಕೇವಲ ಶ್ರೇಷ್ಠ ಸಾಹಿತ್ಯ ರಚನೆ ಅಷ್ಟೇ ಅಲ್ಲ ಶ್ರೇಷ್ಠ ಸಮಾಜ ಕಟ್ಟಲು ಶ್ರಮಿಸಿದ ಸಾಂಸ್ಕøತಿಕ ನಾಯಕರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಬಣ್ಣಿಸಿದರು.

     ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಗುರುವಾರದಂದು ಏರ್ಪಡಿಸಲಾದ ವಿಶ್ವ ಮಾನವ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

     ಕುವೆಂಪು ಮತ್ತು ಕಾರಂತರು, ಈ ನಾಡಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬಹುದಾದ ಶ್ರೇಷ್ಠ ಸಾಹಿತಿಗಳಲ್ಲಿ ಪ್ರಮುಖರು.  ಕುವೆಂಪು ಅವರನ್ನು ಬರೀ ಗದ್ಯ, ಸಾಹಿತ್ಯಕ್ಕಷ್ಟೇ ಲೇಖಕರೆಂದು ಅವರನ್ನು ಗುರುತಿಸಲು ಸಾಧ್ಯವಿಲ್ಲ.  ಏಕೆಂದರೆ, ಇವರು ಈ ನಾಡು, ಮತ್ತು ಶ್ರೇಷ್ಠ ಸಮಾಜವನ್ನು ಕಟ್ಟಲು ಶ್ರಮಿಸಿದ ಶ್ರೇಷ್ಠ ಸಾಂಸ್ಕøತಿಕ ನಾಯಕರು.  ಕುವೆಂಪು ಅವರು ಬರೀ ಪದ್ಯ, ಗದ್ಯ, ಸಾಹಿತ್ಯವನ್ನು ಬರೆದುಕೊಂಡು ನೆಮ್ಮದಿಯಿಂದ ಇರಬಹುದಿತ್ತು.   ಶ್ರೇಷ್ಠ ನಾಡು ಯಾವ ರೀತಿ ಇರಬೇಕು ಎನ್ನುದನ್ನು ತಮ್ಮ ಸಾಹಿತ್ಯದಲ್ಲಿಯೂ ಬಿಂಬಿಸಿದರು.  ಸ್ವಾತಂತ್ರ್ಯಾ ನಂತರದ ಗಣರಾಜ್ಯದಲ್ಲಿ ಭಾರತೀಯರು, ಕನ್ನಡಿಗರು ಹೇಗೆ ಇರಬೇಕು ಎಂದು ಬರವಣಿಗೆ ಮೂಲಕ ಸಜ್ಜುಗೊಳಿಸಲು ಮುಂದಾಗಿದ್ದು ವಿಶೇಷ.  ಕುವೆಂಪು ಅವರು ಹುಟ್ಟಿದ ಸ್ಥಳವನ್ನು ಬಹುತೇಕರು ಕುಪ್ಪಳ್ಳಿ ಎಂಬುದಾಗಿ ಉಚ್ಛರಿಸುತ್ತಾರೆ.  ಆದರೆ ಕುಪ್ಪಳಿ ಎಂಬುದು ಸರಿಯಾದ ಪದವಾಗಿದೆ.  ಹುಟ್ಟುವ ಎಲ್ಲರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ.  ಆದರೆ ಬೆಳೆದಂತೆಲ್ಲ ಅಲ್ಪ ಮಾನವರಾಗುತ್ತಾರೆ.  ಅಂತಹವರನ್ನು ವಿಶ್ವ ಮಾನವರನ್ನಾಗಿ ಮಾಡುವುದೇ ಸಾಹಿತ್ಯದ ಕರ್ತವ್ಯವಾಗಬೇಕು ಎಂಬುದು ಕುವೆಂಪು ಅವರ ಶ್ರೇಷ್ಠ ನುಡಿಯಾಗಿತ್ತು.  ಕರ್ನಾಟಕ ರಾಜ್ಯದಲ್ಲಿ ನಾಡಗೀತೆಯಾಗಿ ಅಳವಡಿಸಿಕೊಳ್ಳಲಾಗಿರುವ ‘ಭಾರತ ಜನನಿಯ ತನುಜಾತೆ’ ಎಂಬ ಹಾಡನ್ನು ಕುವೆಂಪು ಅವರು ರಚಿಸಿದ್ದು, ಈ ಹಾಡು ಇಡೀ ಭಾರತದ ಪರಿಕಲ್ಪನೆಯನ್ನು ಮುಂದಿಡುತ್ತದೆ.  ಕುವೆಂಪು ಅವರು ಭಾರತವನ್ನು ಹಲವು ಮರಗಳಿರುವ ಉದ್ಯಾನ ಎಂದು ಕಲ್ಪಿಸಿಕೊಳ್ಳುತ್ತಾರೆ.   ಅವರು ರಚಿಸಿರುವ ‘ಮಲೆಗಳಲ್ಲಿ ಮದುಮಗಳು’ ಈ ನಾಡಿನ ಶ್ರೇಷ್ಠ ಕೃತಿ.  ಒಂದು ವೇಳೆ ಇದೇ ಕೃತಿ ಇಂಗ್ಲಿಷ್ ಭಾಷೆಯಲ್ಲಿ ಇದ್ದಿದ್ದರೆ ಈ ಕೃತಿಗೆ ವಿಶ್ವ ಮಾನ್ಯವಾಗಿರುವ ನೋಬೆಲ್ ಪ್ರಶಸ್ತಿಯೇ ದೊರಕುತ್ತಿತ್ತು.  ಕುವೆಂಪು ಅವರು, ಇಂಗ್ಲೀಷ್ ಭಾಷೆಯನ್ನು ಕಲಿಕೆಯ ಭಾಷೆಯನ್ನಾಗಿ ಸ್ವೀಕರಿಸಿದರೇ ಹೊರತು, ಕನ್ನಡ ಭಾಷೆಯನ್ನು ಮಾತ್ರ ಅಭಿವ್ಯಕ್ತಿಯ ಭಾಷೆಯನ್ನಾಗಿಸಿಕೊಂಡರು.  ಮನಸ್ಸನ್ನು ನಿಯಂತ್ರಿಸಲು ಹಲವಾರು ಅಂಕುಶಗಳಿವೆ.  ಆದರೆ ಮಾನವರು ಆತ್ಮ ಶುದ್ಧಿಗಾಗಿ ನಿರಂಕುಶಮತಿಗಳಾಗಬೇಕು ಎಂದು ಕರೆ ನೀಡಿದವರು ಕುವೆಂಪು ಅವರು ಎಂದು ಡಾ. ರಹಮತ್ ತರೀಕರೆ ಅವರು ಹೇಳಿದರು.

     ಕಾರ್ಯಕ್ರಮದ ಉದ್ಘಾಟನೆ ಹಾಗೂ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ‘ವಿಶ್ವ ಮಾನವ ಕುವೆಂಪು’ ಕಿರುಹೊತ್ತಿಗೆ ಹಾಗೂ ಜಿಲ್ಲಾಡಳಿತದಿಂದ ಪ್ರಕಟಿಸಿರುವ ಕ್ಯಾಲೆಂಡರ್  ಬಿಡುಗಡೆ ನೆರವೇರಿಸಿ ಮಾತನಾಡಿದ ಸಂಸದ ಕರಡಿ ಸಂಗಣ್ಣ ಅವರು, ಕುವೆಂಪು ಅವರು 20 ನೇ ಶತಮಾನದ ಅಗ್ರಮಾನ್ಯ ಕವಿಶ್ರೇಷ್ಠರು, ಅವರು ತಮ್ಮ ಸಾಧನೆಯಿಂದ ಜಗತ್ತಿನಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಎಲ್ಲರನ್ನೂ ಪ್ರೀತಿಸಬೇಕು ಎನ್ನುವುದು ಅವರ ಆಶಯವಾಗಿದ್ದು, ಅವರ ಪ್ರತಿಯೊಂದು ಸಾಹಿತ್ಯಕ್ಕೂ ಆಳವಾದ ಅರ್ಥವಿದೆ.  ಚುಟುಕು ಸಾಹಿತ್ಯಕ್ಕೂ ಅವರು ಸೈ ಎನಿಸಿಕೊಂಡಿದ್ದರು.  ಮಕ್ಕಳು ಕುವೆಂಪು ಅವರ ಸಾಹಿತ್ಯವನ್ನು ಓದಬೇಕು.  ಅವರ ಸಾಹಿತ್ಯವನ್ನು ಆದರ್ಶವಾಗಿಸಿಕೊಳ್ಳಬೇಕು.  ಕುವೆಂಪು ಅವರ ಜನ್ಮದಿನದ ಕಾರ್ಯಕ್ರಮಕ್ಕೆ ‘ವಿಶ್ವ ಮಾನವ ಕುವೆಂಪು’ ಕಿರುಹೊತ್ತಿಗೆಯನ್ನು ಸಕಾಲದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿ, ಒದಗಿಸಿರುವುದು ಶ್ಲಾಘನೀಯವಾಗಿದೆ ಎಂದರು.

     ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಗಣ್ಯರಾದ ವಿಠ್ಠಪ್ಪ ಗೋರಂಟ್ಲಿ, ಶಿವಾನಂದ ಹೊದ್ಲೂರ, ಮಹಾಂತೇಶ್ ಮಲ್ಲನಗೌಡರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿ, ವಂದಿಸಿದರು.  ಸಿ.ವಿ. ಜಡಿಯವರ್ ನಿರೂಪಿಸಿದರು.  ಸದಾಶಿವ ಪಾಟೀಲ್ ತಂಡದವರು ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿದರು.

     ಕುವೆಂಪು ಅವರು,  ವಿಶ್ವ ಮಾನವರಾಗಲು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ವ ಪ್ರಣಾಳಿಕೆಯಡಿ ಸಾರಿರುವ ಸಪ್ತಸೂತ್ರಗಳನ್ನು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ಇದೇ ಸಂದರ್ಭದಲ್ಲಿ ವಾಚಿಸಿದರು.

     ಕುವೆಂಪು ಅವರು ರಚಿಸಿರುವ ವಿಶ್ವ ಮಾನವ ಗೀತೆ ‘ಓ ನನ್ನ ಚೇತನ ಆಗು ನೀ ಅನಿಕೇತನ’ ಹಾಡಿಗೆ ಭಾಗ್ಯನಗರದ ದೀಕ್ಷಾ ತಂಡದ ಮಕ್ಕಳು ನೃತ್ಯ ರೂಪಕದ ಮೂಲಕ ಎಲ್ಲರ ಗಮನ ಸೆಳೆದರು.  ರಾಮಚಂದ್ರಪ್ಪ ಉಪ್ಪಾರ ಅವರ ತಂಡವು ಕುವೆಂಪು ಅವರು ರಚಿಸಿರುವ ಹಲವು ಗೀತೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿತು.

ಜಿಲ್ಲೆಯ ವಕ್ಫ್ ಸಂಸ್ಥೆಗಳಿಗೆ ನಾಮಫಲಕ ಅಳವಡಿಸಲು ಸೂಚನೆ

ಕೊಪ್ಪಳ ಡಿ. 29 :(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳಿಗೆ ನಾಮಫಲಕ ಅಳವಡಿಸುವಂತೆ ಆದೇಶಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿರುವ ಎಲ್ಲ ವಕ್ಫ್ ಸಂಸ್ಥೆಗಳ ಮೇಲೆ ನಾಮಫಲಕ ಅಳವಡಿಸುವಂತೆ ಸಂಸ್ಥೆಗಳ ಅಧ್ಯಕ್ಷರು ಹಾಗೂ ಮುತುವಲ್ಲಿಗಳಿಗೆ ಸೂಚನೆ ನೀಡಲಾಗಿದೆ.
    ಸರಕಾರದ ಆದೇಶದಂತೆ ವಕ್ಫ್ ಸಂಸ್ಥೆಯ ಹೆಸರು ಮತ್ತು ವಕ್ಫ್ ಸಂಸ್ಥೆ ಎಂದು ನಮೂದಿಸಿದ ನಾಮಫಲಕವನ್ನು ಸಂಸ್ಥೆಗಳ ಮೇಲೆ ಅಳವಡಿಸಬೇಕು.  ಹಾಗೂ ನಾಮಫಲಕದಲ್ಲಿ ‘ವಕ್ಫ್ ಆಸ್ತಿಯು ಗೇಜೆಟ್ ಮತ್ತು 1995 ರ ವಕ್ಫ್ ಕಾಯ್ದೆಯ ಕಲಂ 36 ರಂತೆ ನೋಂದಣಿಯಾದ ವಕ್ಫ್ ಸಂಸ್ಥೆಯಾಗಿದ್ದು, ಯಾರೊಬ್ಬರೂ ಈ ವಕ್ಫ್ ಸಂಸ್ಥೆಗಳ ಆಡಳಿತ ಮತ್ತು ಇನ್ನಿತರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಎಲ್ಲಾ ವಕ್ಫ್ (ಧಾರ್ಮಿಕ ಹಾಗೂ ಸಾಮಾಜಿಕ) ಸಂಸ್ಥೆಗಳಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು ಇವರು ಸಕ್ಷಮ ಪ್ರಾಧಿಕಾರಿಗಳಾಗಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ’ ಎಂಬುದಾಗಿ   ನಮೂದಿಸುವಂತೆ ಸೂಚನೆ ನೀಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಷ್ಟಗಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ಡಿ.29 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಕುಷ್ಟಗಿ ಪುರಸಭೆ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
     ವಿವಿಧ ಕಾರಣಗಳಿಂದ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆಯರ 07 ಹುದ್ದೆ ಹಾಗೂ ಅಂಗನವಾಡಿ ಸಹಾಯಕಿಯರ 16 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
      ಅಂಗನವಾಡಿ ಕಾರ್ಯಕರ್ತೆ ಹುದ್ದೆಯ ಸ್ಥಳ ಹಾಗೂ ಮೀಸಲಾತಿ ವಿವರ ಇಂತಿದೆ : ಟಕ್ಕಳಕಿ 1ನೇ ಕೇಂದ್ರ(ಇತರೆ), ಶಿರಗುಂಪಿ 2ನೇ ಕೇಂದ್ರ(ಇತರೆ), ಹಡಗಲಿ(ಇತರೆ), ಹಿರೇತೆಮ್ಮಿನಾಳ 2ನೇ ಕೇಂದ್ರ(ಇತರೆ), ಟಕ್ಕಳಕಿ 2ನೇ ಕೇಂದ್ರ(ಇತರೆ), ತುಮರಿಕೊಪ್ಪ 3ನೇ ಕೇಂದ್ರ(ಪ.ಪಂಗಡ), ಅಮರಾಪೂರ ತಾಂಡಾ(ಪ.ಜಾತಿ) ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
     ಅಂಗನವಾಡಿ ಸಹಾಯಕಿಯರ ಹುದ್ದೆ ಸ್ಥಳ ಹಾಗೂ ಮೀಸಲಾತಿ ವಿವರ ಇಂತಿದೆ : ಕುಷ್ಟಗಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.2 ರ 20 ನೇ ಕೇಂದ್ರ -(ಇತರೆ), ಹೂಲಗೇರಾ ತಾಂಡಾ (ಪ.ಜಾತಿ), ಬಳೂಟಗಿ 1 ನೇ ಕೇಂದ್ರ-(ಇತರೆ), ಕೆ.ಬೋದೂರು 1ನೇ ಕೇಂದ್ರ-(ಇತರೆ), ಅಮರಾಪೂರ 2ನೇ ಕೇಂದ್ರ-(ಇತರೆ), ಶಿರಗುಂಪಿ 2ನೇ ಕೇಂದ್ರ-(ಇತರೆ), ಹಿರೇಮೂಕರ್ತಿನಾಳ 2ನೇ ಕೇಂದ್ರ-(ಇತರೆ), ಹಿರೇತೆಮ್ಮಿನಾಳ 2ನೇ ಕೇಂದ್ರ-(ಇತರೆ), ಹಿರೇಮನ್ನಾಪೂರ 7ನೇ ಕೇಂದ್ರ-(ಪ.ಪಂಗಡ), ಟಕ್ಕಳಕಿ 2ನೇ ಕೇಂದ್ರ-(ಇತರೆ), ಗೊರೆಬಿಹಾಳ 2ನೇ ಕೇಂದ್ರ-(ಪ.ಪಂಗಡ), ವಿರುಪಾಪೂರ 2ನೇ ಕೇಂದ್ರ-(ಇತರೆ), ಗಂಗನಾಳ 1ನೇ ಕೇಂದ್ರ-(ಪ.ಪಂಗಡ), ಯರಗೇರಾ 2ನೇ ಕೇಂದ್ರ-(ಪ.ಪಂಗಡ), ಹುಲಿಯಾಪೂರ 3ನೇ ಕೇಂದ್ರ-(ಮುಸ್ಲಿಂ), ಹನುಮನಾಳ 3ನೇ ಕೇಂದ್ರ-(ಪ.ಪಂಗಡ) ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
     ನಿಗದಿತ ಅರ್ಜಿ ನಮೂನೆಯನ್ನು ಶಿಶು ಅಭಿವೃದ್ಧಿಯೋಜನಾಧಿಕಾರಿಗಳ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿ 2017 ರ ಜನೇವರಿ.26 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಲಯ ಕುಷ್ಟಗಿ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಜಿಮ್ ಸಲಕರಣೆ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ ಡಿ.29 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸಕ್ತ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಕ್ರೀಯಾಶೀಲ ಸಂಘ ಸಂಸ್ಥೆಗಳಿಗೆ ಜಿಮ್ ಸಲಕರಣೆ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
     ಪ್ರಸಕ್ತ ಸಾಲಿನ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡದ ಸಂಘ ಸಂಸ್ಥೆಗಳು ಜಿಮ್ ಸ್ಥಾಪಿಸಲು ರೂ.2 ಲಕ್ಷಗಳ ಜಿಮ್ ಸಲಕರಣೆ ಒದಗಿಸಲಾಗುವುದು. ರಾಜ್ಯ/ ರಾಷ್ಟ್ರ/ ಅಂತರರಾಷ್ಟ್ರೀಯ ಮಟ್ಟದ ನಿರುದ್ಯೋಗಿ ಕ್ರೀಡಾಪಟುಗಳು ಹಾಗೂ ಸಂಘ ಸಂಸ್ಥೆಗಳು ಇದರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು.
     ಮಾರ್ಗಸೂಚಿ ಮತ್ತು ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರಲ್ಲಿ ಪಡೆದು ಭರ್ತಿ ಮಾಡಿ, ಜಿಮ್ ಸ್ಥಾಪಿಸುವ ಕುರಿತ ಸಂಪೂರ್ಣ ದಾಖಲೆಗಳೊಂದಿಗೆ 3 ಪ್ರತಿಯಲ್ಲಿ ಅರ್ಜಿ ಸಲ್ಲಿಸಬಹುದು.   ಅರ್ಜಿ ಸಲ್ಲಿಸಲು ಜ.10 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ :08539-201400 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಡಿ. 30 ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ) : ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕೊಪ್ಪಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಡಿ. 30 ರಂದು ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.
     ಈ ಬಾರಿಯ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ‘ಗ್ರಾಹಕರ ವ್ಯಾಜ್ಯಗಳ ತ್ವರಿತ ಪರಿಹಾರಕ್ಕಾಗಿ ಪರ್ಯಾಯ ವ್ಯಾಜ್ಯ ನಿವಾರಣಾ ವ್ಯವಸ್ಥೆ’ ಎನ್ನುವ ಘೋಷವಾಕ್ಯದಡಿ ಆಚರಿಸಲಾಗುತ್ತಿದೆ.  ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ನೆರವೇರಿಸುವರು.  ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ಏಕತಾ ಹೆಚ್.ಡಿ. ಅವರು ಅಧ್ಯಕ್ಷತೆ ವಹಿಸುವರು.  ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಜಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.  ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯರುಗಳಾದ ರವಿರಾಜ ಕುಲಕರ್ಣಿ, ಸುಜಾತಾ ಅಕ್ಕಸಾಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ತಿಮ್ಮಾರೆಡ್ಡಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.  ನ್ಯಾಯವಾದಿ ಸಾವಿತ್ರಿ ಮುಜುಮದಾರ ಮತ್ತು ರಾಘವೇಂದ್ರ ಕುಲಕರ್ಣಿ ಅವರು ವಿಶೇಷ ಉಪನ್ಯಾಸ ನೀಡುವರು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ.

Wednesday, 28 December 2016

ಬೆಳೆ ವಿಮೆ ನೊಂದಣಿಗೆ ಬರುವ ರೈತರ ನೆರವಿಗಾಗಿ ಬ್ಯಾಂಕ್‍ಗಳಲ್ಲಿ ಸಿಬ್ಬಂದಿ ನಿಯೋಜನೆ- ಡಿ.ಸಿ. ಕನಗವಲ್ಲಿ

ಕೊಪ್ಪಳ ಡಿ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಯೋಜನೆಗಾಗಿ ಎಲ್ಲ ರೈತರನ್ನು ನೋಂದಾಯಿಸಲು ಆಂದೋಲನವನ್ನು ಪ್ರಾರಂಭಿಸಲಾಗಿದ್ದು, ಬೆಳೆ ವಿಮೆ ನೋಂದಣಿಗೆ ಬರುವ ರೈತರ ನೆರವಿಗಾಗಿ ಬ್ಯಾಂಕ್‍ಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಈ ಸಿಬ್ಬಂದಿಗಳು ರೈತರಿಗೆ ಬೆಳೆ ವಿಮೆ ನೋಂದಣಿಗಾಗಿ ಫಾರಂ ತುಂಬುವುದರಿಂದ ಹಿಡಿದು, ದಾಖಲೆಗಳ ಸಲ್ಲಿಕೆಯಂತಹ ಎಲ್ಲ ರೀತಿಯ ನೆರವು ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಪ್ರಸಕ್ತ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ನೋಂದಣಿಯ ಪ್ರಗತಿ ಪರಿಶೀಲನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ.  ಈಗಾಗಲೆ ಹಿಂಗಾರು ಮಳೆ ವಿಫಲವಾಗಿದ್ದು, ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ನೋಂದಾಯಿಸಲು ಡಿ. 31 ಕೊನೆಯ ದಿನಾಂಕವಾಗಿದೆ.  ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ & ಪಂಚಾಯತ್ ರಾಜ್ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಬ್ಯಾಂಕಿನ ಅಧಿಕಾರಿಗಳು, ಉಳಿದಿರುವ ಕೆಲವೇ ದಿನಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಿ ಹಿಂಗಾರು ಹಂಗಾಮಿನ ಎಲ್ಲ ರೈತರು ಬೆಳೆ ವಿಮೆ ವ್ಯಾಪ್ತಿಯಡಿ ಬರುವಂತಾಗಬೇಕು.  ಇದಕ್ಕಾಗಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ರೈತರ ನೆರವಿಗೆ ಬ್ಯಾಂಕ್‍ಗಳಲ್ಲಿ ಸಿಬ್ಬಂದಿ ನಿಯೋಜನೆ :
******************ಬೆಳೆ ವಿಮೆ ನೋಂದಣಿಗಾಗಿ ಬ್ಯಾಂಕ್‍ಗೆ ಆಗಮಿಸುವ ರೈತರಿಗೆ, ಸರ್ಕಾರದ ವತಿಯಿಂದ ನೆರವಿನ ಹಸ್ತ ಚಾಚಲು ಜಿಲ್ಲಾಡಳಿತ ಮುಂದಾಗಿದೆ.  ಬ್ಯಾಂಕ್‍ಗಳ ಮುಂದೆ ಕೃಷಿ, ತೋಟಗಾರಿಕೆ ಅಥವಾ ಕಂದಾಯ ಇಲಾಖೆ ಅಧಿಕಾರಿಗಳು/ ಸಿಬ್ಬಂದಿಗಳು ಹಾಜರಿರಬೇಕು.  ರೈತರಿಗೆ ಬೆಳೆ ವಿಮೆ ನೋಂದಣಿ ಫಾರಂ ಭರ್ತಿ ಮಾಡುವುದರಿಂದ ಮೊದಲುಗೊಂಡು, ವಿಮಾ ಕಂತು ತುಂಬಲು ಸಹಾಯ, ದಾಖಲೆಗಳನ್ನು ಸಿದ್ಧಪಡಿಸುವುದು ಸೇರಿದಂತೆ ಎಲ್ಲ ನೆರವನ್ನು ಈ ಅಧಿಕಾರಿ, ಸಿಬ್ಬಂದಿಗಳೇ ನೀಡಬೇಕು.  ಬ್ಯಾಂಕ್ ಅಧಿಕಾರಿಗಳು ಯಾವುದೇ ರೈತರನ್ನು ಹಿಂದಕ್ಕೆ ಕಳುಹಿಸುವಂತಿಲ್ಲ, ಬದಲಾಗಿ, ಅವರೇ ರೈತರಿಗೆ ನೋಂದಣಿಗಾಗಿ ನೆರವನ್ನು ನೀಡಬೇಕು.  ದಾಖಲೆಗಳ ಎಂಟ್ರಿಗಾಗಿ ಬ್ಯಾಂಕ್‍ಗಳಿಗೆ ನೆರವಾಗಲು ತಾತ್ಕಾಲಿಕವಾಗಿ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್‍ಗಳನ್ನು ನಿಯೋಜಿಸಲಾಗುವುದು.  ಬ್ಯಾಂಕಿನ ವ್ಯಸ್ಥಾಪಕರು / ಸಿಬ್ಬಂದಿಗಳು ತಮ್ಮ ಬ್ಯಾಂಕ್‍ಗಳಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಿ ರೈತರು ನೊಂದಾಯಿಸಿಕೊಳ್ಳಲು ಅನುವು ಮಾಡಿಕೊಡಬೇಕು ಹಾಗೂ ಯಾವುದೇ ಕಾರಣಕ್ಕೂ ರೈತರನ್ನು ವಾಪಾಸು ಕಳುಹಿಸಬಾರದು ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‍ಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಾಕೀತು ಮಾಡಿದರು.
ಗ್ರಾಮಗಳಲ್ಲಿ ಡಂಗುರ ಹಾಕಿಸಿ :
*************ರೈತರು ಬೆಳೆ ವಿಮೆಗೆ ಡಿ. 31 ರ ಒಳಗಾಗಿ ಬ್ಯಾಂಕ್‍ಗಳಿಗೆ ತೆರಳಿ, ನೋಂದಣಿ ಮಾಡುವುದರ ಬಗ್ಗೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾದಿಕಾರಿಗಳು, ಪಿಡಿಓ ಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಡಿ. 30 ರ ರಾತ್ರಿವರೆಗೂ ನಿತ್ಯ ಡಂಗುರ ಹಾಕಿಸಬೇಕು.  ರೈತರಲ್ಲಿ ಬೆಳೆ ವಿಮೆ ಯೋಜನೆಯ ಅರಿವು ಮೂಡಿಸಬೇಕು.  ಅಲ್ಲದೆ ರೈತರು ತಮ್ಮ ಖಾತೆ ಹೊಂದಿರುವ ಬ್ಯಾಂಕ್‍ಗಳಿಗೆ ತೆರಳಿ ಬೆಳೆ ವಿಮಾ ಕಂತು ತುಂಬಿಸಲು ಪ್ರೇರೇಪಣೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
ನಿತ್ಯ ವರದಿ ಸಲ್ಲಿಸಿ :
**********ಹಿಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ಡಿ. 31 ಕೊನೆಯ ದಿನಾಂಕವಾಗಿದ್ದು, ಈ ಅವಧಿಯಲ್ಲಿ, ತಮ್ಮ ತಮ್ಮ ಗ್ರಾಮ, ತಾಲೂಕು ವ್ಯಾಪ್ತಿಯಲ್ಲಿ ಎಷ್ಟು ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರಲಾಗಿದೆ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ನಿತ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು.  ತಹಸಿಲ್ದಾರರು ಮತ್ತು ಸಹಾಯಕ ಕೃಷಿ ನಿರ್ದೇಶಕರು, ಆಯಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್‍ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ರೈತರು ಯಾವುದೇ ತೊಂದರೆ ಇಲ್ಲದೆ ವಿಮಾ ಕಂತು ಪಾವತಿಸುವ ವ್ಯವಸ್ಥೆಯ ಕುರಿತು ಮೇಲುಸ್ತುವಾರಿ ನೋಡಿಕೊಳ್ಳಬೇಕು.  ಅಲ್ಲದೆ ಆಯಾ ದಿನದಲ್ಲಿ ನೋಂದಾಯಿಸಲಾದ ಅರ್ಜಿಗಳ ಸಂಖ್ಯೆಯನ್ನು ಎಸ್‍ಎಂಎಸ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಹಸಿಲ್ದಾರರು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಬಾಬುರಾವ್, ಸೇರಿದಂತೆ ಎಲ್ಲ ತಾಲೂಕುಗಳ ತಹಸಿಲ್ದಾರರು, ಸಹಾಯಕ ಕೃಷಿ ನಿರ್ದೇಶಕರುಗಳು, ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬ್ಯಾಂಕ್‍ಗಳಿಗೆ ಜಿಲ್ಲಾಧಿಕಾರಿ ಭೇಟಿ : ಬೆಳೆ ವಿಮೆ ನೋಂದಣಿ ಪ್ರಗತಿ ಪರಿಶೀಲನೆ


ಕೊಪ್ಪಳ ಡಿ. 28 (ಕರ್ನಾಟಕ ವಾರ್ತೆ): ಪ್ರಸಕ್ತ ವರ್ಷದ ಹಿಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂತು ತುಂಬುವ ರೈತರ ನೆರವಿಗಾಗಿ ಬ್ಯಾಂಕ್‍ಗಳಿಗೆ ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಬುಧವಾರದಂದು ಹಲವು ಗ್ರಾಮಗಳ ಬ್ಯಾಂಕ್‍ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
 
     ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂತು ತುಂಬಲು ಡಿ. 31 ಕೊನೆಯ ದಿನವಾಗಿದ್ದು, ಎಲ್ಲ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರಲು ಜಿಲ್ಲಾಡಳಿತ ಹಲವು ಕಸರತ್ತು ನಡೆಸಿದೆ.  ಆಂದೋಲನ ಮಾದರಿಯಲ್ಲಿ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವ ಉದ್ದೇಶದಿಂದ, ಬ್ಯಾಂಕ್‍ಗಳಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಸಿಬ್ಬಂದಿಗಳನ್ನು ಬ್ಯಾಂಕ್‍ಗಳಲ್ಲಿ ಹಾಜರಿದ್ದು, ರೈತರಿಗೆ ನೆರವು ನೀಡುವಂತೆ ನೋಡಿಕೊಂಡಿದೆ.  ಈ ಕುರಿತಂತೆ ಜಿಲ್ಲಾಧಿಕಾರಿಗಳು ತಾಲೂಕಿನ ಕವಲೂರು, ಹಲಗೇರಿ ಮುಂತಾದ ಗ್ರಾಮಗಳ ಬ್ಯಾಂಕ್‍ಗಳಿಗೆ ಬುಧವಾರದಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.  ಬ್ಯಾಂಕ್‍ಗಳಲ್ಲಿ ಉಪಸ್ಥಿತರಿದ್ದ ರೈತರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು, ಬೆಳೆ ವಿಮೆ ಕುರಿತಂತೆ ಮಾಹಿತಿ ನೀಡಿದರು.  ಅಲ್ಲದೆ ರೈತರಿಗೆ ಸಮರ್ಪಕ ಮಾಹಿತಿ ನೀಡಿ, ನೆರವು ಒದಗಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.  ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಸುಮಾರು 50 ಸಾವಿರ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, ಈಗಾಗಲೆ ಸುಮಾರು 24 ಸಾವಿರ ರೈತರು ಬೆಳೆ ವಿಮೆಗಾಗಿ ನೋಂದಾಯಿಸಿದ್ದಾರೆ.  ಉಳಿದ ಅವಧಿಯೊಳಗಾಗಿ ಎಲ್ಲ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ಬರುವಂತೆ ಮಾಡುವ ಗುರಿಯನ್ನು ಹೊಂದಿರುವ ಜಿಲ್ಲಾಡಳಿತ, ಇದಕ್ಕಾಗಿ ಹಲವು ಕ್ರಮಗಳಿಗೆ ಮುಂದಾಗಿದೆ.  ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಈ ಆಂದೋಲನಕ್ಕೆ ಜಿಲ್ಲಾಡಳಿತ ಹಾಗೂ ಬ್ಯಾಂಕ್‍ಗಳ ಕೈಜೋಡಿಸಿರುವುದು ವಿಶೇಷ.

ನಗದು ರಹಿತ ವ್ಯವಹಾರ ಕುರಿತು ಅರಿವು ಮೂಡಿಸಿ : ಡಿಸಿ ಕನಗವಲ್ಲಿ ಸೂಚನೆ

ಕೊಪ್ಪಳ ಡಿ. 28 (ಕರ್ನಾಟಕ ವಾರ್ತೆ): ದೇಶದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ, ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಈ ಕುರಿತು ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ನಗದು ರಹಿತ ವ್ಯವಹಾರಕ್ಕೆ ಲಭ್ಯವಿರುವ ವಿವಿಧ ವಿಧಾನಗಳ ಬಗ್ಗೆ ತರಬೇತಿ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
     ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಪೋತ್ಸಾಹ ನೀಡುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ 33 ಡಿಜಿಟಲ್ ನೆಮ್ಮದಿ ಸೇವಾ ಕೇಂದ್ರಗಳಿದ್ದು, ಸಿ.ಎಸ್.ಸಿ. ಕೇಂದ್ರದ ಪ್ರತಿನಿಧಿಗಳು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳಲ್ಲಿ ನಗದು ರಹಿತ ವಹಿವಾಟಿಗೆ ಲಭ್ಯವಿರುವ ವಿಧಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.  ಹಣವನ್ನು ಇ-ವಾಲೆಟ್, ಆಧಾರ ಎನ್‍ಬೆಲ್ ಪೇಮೆಂಟ್ , ಎಟಿಎಂ ಕ್ರೇಡಿಟ್, ಡೆಬಿಟ್ ಕಾರ್ಡ ಮೂಲಕ, ಯು.ಪಿ.ಐ, ಕ್ಯೂಆರ್ ಕೋಡ ಬಳಸಿ ವಹಿವಾಟು  ನಡೆಸಬಹುದು, ಇವೆಲ್ಲದರ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ನಗದು ರಹಿತ ವ್ಯವಹಾರ ಪ್ರೋತ್ಸಾಹಿಸಲು ಸಿ.ಎಸ್.ಸಿ ಕೇಂದ್ರಗಳು ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಜಿಲ್ಲೆಯಲ್ಲಿ ಗ್ರಾಮವನ್ನು ಸಂಪೂರ್ಣ ನಗದು ರಹಿತ ವ್ಯವಹಾರ ಗ್ರಾಮವನ್ನಾಗಿ ಮಾಡುವ ಸಿಎಸ್‍ಸಿ ಕೇಂದ್ರದ ಪ್ರತಿನಿಧಿಗಳಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು ಎಂದರು.
     ಕಾರ್ಯಗಾರದಲ್ಲಿ ಜಿಲ್ಲಾ ಎನ್‍ಐಸಿ ಅಧಿಕಾರಿ ಈರಣ್ಣ, ಸಹಾಯಕ ಎನ್‍ಐಸಿ ಅಧಿಕಾರಿ ಬಸವರಾಜ್, ಸಿಎಸ್‍ಸಿ ಕೇಂದ್ರದ ವ್ಯವಸ್ಥಾಪಕರುಗಳಾದ ಮಂಜುನಾಥ ಹಿರೇಮಠ, ಶಿವಶೇಖರಗೌಡ ಪಾಟೀಲ್, ರವಿ ಜೆ.ಡಿ., ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕ್‍ಗಳ ಅಧಿಕಾರಿಗಳು, ಸಿಎಸ್‍ಸಿ ಕೇಂದ್ರದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಡಿ. 30 ರಿಂದ ಕ್ರೀಡಾಶಾಲೆಗೆ ಆಯ್ಕೆ ಪ್ರಕ್ರಿಯೆ

ಕೊಪ್ಪಳ ಡಿ.28 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಯ ಕ್ರೀಡಾ ವಸತಿ ಶಾಲೆಗಳಿಗೆ 2017-18 ನೇ ಸಾಲಿಗಾಗಿ ಆಯ್ಕೆ ಪ್ರಕ್ರಿಯೆ ಡಿ.30 ರಿಂದ ಆರಂಭಗೊಳ್ಳಲಿದೆ.
    ಡಿ.30 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ತಾಲೂಕಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.   ಡಿ.31 ರಂದು ಗಂಗಾವತಿ ಮತ್ತು ಕುಷ್ಟಗಿಯಲ್ಲಿ ಆಯಾ ತಾಲೂಕ ಕ್ರೀಡಾಂಗಣದಲ್ಲಿ.  ಹಾಗೂ ಜ.01 ರಂದು ಯಲಬುರ್ಗಾ ತಾಲೂಕ ಕ್ರೀಡಾಂಗಣದಲ್ಲಿ ಆಯಾ ದಿನದಂದು ಬೆ. 09 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.  ಜ.3 ರಂದು ಬೆಳಿಗ್ಗೆ 9 ಗಂಟೆಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.
     ಅಥ್ಲೆಟಿಕ್ಸ್ ಮತ್ತು ವಾಲಿಬಾಲ್ ಕ್ರೀಡೆಗೆ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಭಾಗವಹಿಸುವ ಅಭ್ಯರ್ಥಿಗಳ ವಯೋಮಿತಿ 2017 ರ ಜೂ.01 ಕ್ಕೆ 11 ವರ್ಷ ಮೀರಿರಬಾರದು. 5 ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು (ಕಡ್ಡಾಯವಾಗಿ 4ನೇ ತರಗತಿ ಪಾಸಾಗಿರಬೇಕು). ಹಾಗೂ ಕಿರಿಯರ ವಿಭಾಗದಲ್ಲಿ ಪ್ರವೇಶ ಬಯಸುವ ಬಾಲಕ/ಬಾಲಕಿಯರ ವಯೋಮಿತಿ 2017 ರ ಜೂ.01 ಕ್ಕೆ 14 ವರ್ಷ ಮೀರಿರಬಾರದು ಹಾಗೂ 8ನೇ ತರಗತಿಗೆ ಸೇರಲು ಅರ್ಹತೆ ಹೊಂದಿರಬೇಕು.
      ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ಕ್ರೀಡಾಧಿಕಾರಿ ರಂಗಸ್ವಾಮಿ ಮೊ-7411755523, ಕುಷ್ಟಗಿ ಸಹಾಯಕ ಕ್ರೀಡಾಧಿಕಾರಿ ಮಹಾಂತೇಶ ಮೊ-9945501033, ಯಲಬುರ್ಗಾ ಸಹಾಯಕ ಕ್ರೀಡಾಧಿಕಾರಿ ಹನುಮಂತಪ್ಪ ವಗ್ಯಾನವರ್ ಮೊ-8970288857, ವಾಲಿಬಾಲ್ ತರಬೇತುದಾರ ಸುರೇಶ ಯಾದವ್ ಮೊ-9901527333, ಅಥ್ಲೆಟಿಕ್ಸ್ ತರಬೇತುದಾರ ತಿಪ್ಪಣ್ಣ ಎಸ್.ಮಾಳಿ-8746933921 ಅಥವಾ ಹನುಮೇಶ ಪೂಜಾರ-8095936395 ಇವರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 27 December 2016

ಡಿ.29 ರಂದು ಕೊಪ್ಪಳದಲ್ಲಿ ವಿಶ್ವ ಮಾನವ ದಿನಾಚರಣೆ


ಕೊಪ್ಪಳ ಡಿ. 27 :(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವ ಮಾನವ ದಿನಾಚರಣೆ  ಕಾರ್ಯಕ್ರಮವನ್ನು ಡಿ.29 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.


     ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸುವರು. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ನಾಗರಳ್ಳಿ ಶೇಖರಪ್ಪ ಬಸವರಡ್ಡೆಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.   ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಡಾ. ರಹಮತ್ ತರೀಕೆರೆ ಅವರು ಕಾರ್ಯಕ್ರಮ ಅಂಗವಾಗಿ ವಿಶೇಷ ಉಪನ್ಯಾಸ ನೀಡುವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಳೇನೂರು ದ್ಯಾಮವ್ವದೇವಿ ಜಾತ್ರೆ : ಪ್ರಾಣಿ ಬಲಿ ನಿಷೇಧ

ಕೊಪ್ಪಳ ಡಿ. 27 :(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಉಳೇನೂರು ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವವು ಡಿ.28 ಮತ್ತು 29 ರಂದು ಎರಡು ದಿನಗಳ ಕಾಲ ನಡೆಯಲಿದ್ದು, ದೇವಸ್ಥಾನದ ಆವರಣದೊಳಗೆ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಕರ್ನಾಟಕ ಪ್ರಾಣಿ ನಿಷೇಧ ಕಾಯ್ದೆ ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳ ಪ್ರಕಾರ ದೇವಸ್ಥಾನಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನೀಡುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಡಿ.28 ಮತ್ತು 29 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಉಳೇನೂರು ಗ್ರಾಮದ ದೇವಸ್ಥಾನದ ಆವರಣದಲ್ಲಿ ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದ ಜಮೀನುಗಳಲ್ಲಿ ಭಕ್ತಾದಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನಗದು ರಹಿತ ವಹಿವಾಟು ತರಬೇತಿ


ಕೊಪ್ಪಳ ಡಿ. 27 (ಕರ್ನಾಟಕ ವಾರ್ತೆ): ಪ್ರಸ್ತುತ ವಿದ್ಯಮಾನದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ನಗದು ರಹಿತ ವಹಿವಾಟು ವ್ಯವಸ್ಥೆ ಕುರಿತಂತೆ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಅಲ್ಲದೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು.

     ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐದುನೂರು ಮತ್ತು ಸಾವಿರ ಮುಖಬೆಲೆಯ ನೋಟು ರದ್ದುಪಡಿಸಿದ ನಂತರ ನಗದು ರಹಿತ ವಹಿವಾಟು ಹೆಚ್ಚಿನ ಆದ್ಯತೆ ನೀಡಿದ್ದಾರೆ.  ನಗದು ರಹಿತ ವ್ಯವಹಾರ ಹೆಚ್ಚು ಪಾರದರ್ಶಕವಾಗಿದ್ದು , ಯಾವುದೇ ಚಿಲ್ಲರೆ ನೋಟಿನ ಸವiಸ್ಯೆ ಇರಲ್ಲ. ಹಣವನ್ನು ಇ-ವಾಲೇಟ್, ಆಧಾರ ಪೇಮೆಂಟ್ ಸರ್ವಿಸ್, ಎಟಿಎಂ ಕ್ರೇಡಿಟ್/ಡೆಬಿಟ್ ಕಾರ್ಡ,ಯುಪಿಐ ಮತ್ತು ಕ್ಯೂ.ಆರ್ ಕೋಡ್ ಬಳಸಿ ವಹಿವಾಟು ನಡೆಸುವ ಕುರಿತಂತೆ ತರಬೇತಿ ನೀಡಲಾಯಿತು.
     ಈಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಸೇರಿದಂತೆ ಜಿಲ್ಲಾ ಪಂಚಾಯತಿಯ ವಿವಿಧ ಸದಸ್ಯರುಗಳು, ಅಲ್ಲದೆ ಮುಖ್ಯ ಯೋಜನಾಧಿಕಾರಿ ಎಂ. ನಿಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು  ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.  ಸಿ.ಎಸ್.ಸಿ. ಜಿಲ್ಲಾ ವ್ಯವಸ್ಥಾಪಕ ಶಿವಶೇಖರಗೌಡ ಪಾಟೀಲ್ ಮಂಜುನಾಥ ಹಿರೇಮಠ ರವರು ಡಿಜಿಟಲಿಕರಣದ ಕುರಿತು ಈ ಸಂದರ್ಭದಲ್ಲಿ ವಿವರಣೆ ನೀಡಿದರು.

ಮೈನಳ್ಳಿಯಲ್ಲಿ ಊರುಗಾಳು ಪದ್ಧತಿ ತೊಗರಿ ಬೆಳೆ ಕ್ಷೇತ್ರೋತ್ಸವ


ಕೊಪ್ಪಳ ಡಿ. 27 (ಕರ್ನಾಟಕ ವಾರ್ತೆ): ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಕೃಷಿ ಇಲಾಖೆ, ಕೊಪ್ಪಳ ಇವರ ಜಂಟಿ ಸಹಯೋಗದಲ್ಲಿ “ಊರುಗಾಳು ಪದ್ಧತಿ ತೊಗರಿ ಬೆಳೆ ಕ್ಷೇತ್ರೋತ್ಸವ” ವನ್ನು ತಾಲೂಕಿನ ಮೈನಳ್ಳಿ ಗ್ರಾಮದ ಪ್ರಗತಿಪರ ರೈತ ಸಿದ್ದಾರೆಡ್ಡಿ ರವರ ತೊಗರಿ ಬೆಳೆ ಹೊಲದಲ್ಲಿ ಇತ್ತೀಚೆಗೆ ಆಚರಿಸಲಾಯಿತು.  

     ಡಾ. ಎಂ.ಬಿ. ಪಾಟೀಲ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ತೊಗರಿ ಬೆಳೆ ಒಂದು ಅತ್ಯುತ್ತಮ ವರಮಾನ ಬೆಳೆ ಅದನ್ನು ವೈಜ್ಞಾನಿಕವಾಗಿ ಬೆಳೆದು ಅದರ ಲಾಭವನ್ನು ನಮ್ಮ ರೈತರು ಎರಡು ವಿಧವಾಗಿ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.  ಮೊದಲನೆಯದು, ತೊಗರಿ ಬೆಳೆಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಎರಡನೆಯದು, ತೊಗರಿ ಬೆಳೆಯನ್ನು ಊರುಗಾಳು ಪದ್ಧತಿಯನ್ನು ಅನುಸರಿಸಿ ಬೆಳೆದರೆ ಖರ್ಚು ಕಡಿಮೆ ಮಾಡಿ ಇಳುವರಿಯನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.  ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ತೊಗರಿ ಬೆಳೆಯನ್ನು ಊರುಗಾಳು ಪದ್ಧತಿಯಲ್ಲಿ ಬೆಳೆಯಲಾಗಿದ್ದು, ಅನೇಕ ರೈತರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.  


     ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಮ ಪಂಚಾಯತ ಸದಸ್ಯ ಈಶಪ್ಪಹಳ್ಳಿ ವಹಿಸಿದ್ದರು, ವಿಷಯ ತಜ್ಞೆ ಕವಿತಾ ವೈ ಉಳ್ಳಿಕಾಶಿ, ಇವರು ತೊಗರಿ ಬೆಳೆಯ ಮೌಲ್ಯವರ್ಧನೆಯ ಬಗ್ಗೆ ವಿವರಿಸಿದರು.  ತೋಟಗಾರಿಕೆ ವಿಷಯ ತಜ್ಞ ಪ್ರದೀಪ ಬಿರಾದರ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡಿದರು, ಕೀತಶಾಸ್ತ್ರ ವಿಷಯತಜ್ಞೆ ಶ್ವೇತ ಇವರು ತೊಗರಿ ಬೆಳೆಯಲ್ಲಿ ಕೀಟದ ನಿರ್ವಹಣೆ ಬಗ್ಗೆ ತಿಳಿಸಿದರು.  ಕೃಷಿ ಅಧಿಕಾರಿ ಮಾರುತಿ ಪೂಜಾರ, ಸಹಾಯಕ ಕೃಷಿ ಅಧಿಕಾರಿ ವಿ.ಎನ್. ಮ್ಯಾಗೇರಿ,  ಗ್ರಾ.ಪಂ. ಸದಸ್ಯ ಬಸವರಾಜ, ರೈತ ಮುಖಂಡರಾದ ವಿದ್ಯಾಧರ ಹಿರೇಗೌಡರ, ಚೆನ್ನಪ್ಪಹಳ್ಳಿ, ಗುದ್ನೆಪ್ಪಾ ಬೆಳಗೆರೆ, ನಿಂಗರೆಡ್ಡಿ ಭಾಗವಹಿಸಿದ್ದರು.

ಜಲ ಸಂರಕ್ಷಣೆ ಜಾಗೃತಿ ಕುರಿತು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಡಿಸಿ ಸೂಚನೆ

ಕೊಪ್ಪಳ ಡಿ. 27 :(ಕರ್ನಾಟಕ ವಾರ್ತೆ): ಕೊಪ್ಪಳ ಗವಿಮಠ ಜಾತ್ರೆಯಲ್ಲಿ ‘ಜಲಸಂರಕ್ಷಣೆ’ ಎಂಬುದನ್ನು ಪ್ರಮುಖ ವಿಷಯವಾಗಿ ತೆಗದುಕೊಂಡು ಗವಿಮಠದ ವತಿಯಿಂದ ಜಿಲ್ಲಾಡಳಿತದ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
      ಭೂಮಿಯ ಮೇಲಿರುವ ಸಮಗ್ರ ಜೀವ ಸಂಕುಲಕ್ಕೆ ನೀರು ಅತ್ಯಗತ್ಯ,  ನೀರನ್ನು ಸಂರಕ್ಷಿಸಿ ಭೂಮಿಯ ಮೇಲೆ ಜೀವ ಸಂಕುಲ ಇರುವಂತೆ ನೋಡಿಕೊಳ್ಳಬೇಕಿದೆ.  ಭೀಕರ ಬರಗಾಲ ನಮ್ಮೆಲ್ಲರನ್ನೂ ಈಗಾಗಲೇ ಕಾಡುತ್ತಿದ್ದು ಇದ್ದನ್ನು ಹೋಗಲಾಡಿಸಬೇಕಾದರೆ, ನಾವೆಲ್ಲಾ ಜಲ ಸಂರಕ್ಷಣೆ ಮಾಡಲೇಬೇಕು ಆದ್ದರಿಂದ  ‘ಜಲಸಂರಕ್ಷಣೆ’ ಎಂಬ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಆಯೋಜಿಸಲು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಸೂಚನೆ ನೀಡಿದ್ದಾರೆ.
ಜಲ ನಿರ್ವಹಣೆ ತಪ್ಪುವುದು ಬರದ ಬವಣೆ: ಈ ವಿಷಯದ ಕುರಿತು ಜಿಲ್ಲೆಯ ಸರಕಾರಿ, ಅನುದಾನಿತ, ಖಾಸಗಿ ಪ್ರೌಢ ಶಾಲೆ, ಪ.ಪೂ ಕಾಲೇಜು ಹಾಗೂ ಪದವಿ ಕಾಲೇಜುಗಳಲ್ಲಿ ಪ್ರತ್ಯೇಕವಾಗಿ ಜ.5 ರಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗುವುದು. ಉತ್ತಮವಾದ ಪ್ರಬಂಧ ಬರೆದ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿ  ಜ.09 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ನಡೆಯುವ  ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು.  ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಗೆ ಭಾಗವಹಿಸಲು, ಆಯಾ ಶಾಲೆಯವರು ಒಬ್ಬರು ಶಿಕ್ಷಕರೊಂದಿಗೆ ಶಾಲಾ/ಕಾಲೇಜು ಹಂತದ ಉತ್ತಮ ಪ್ರಬಂಧಗಳೊಂದಿಗೆ ಕಳುಹಿಸಿಕೊಡಬೇಕು. 
ಜಲ ಸಂರಕ್ಷಣೆ ಜಾಗೃತಿ ನಡಿಗೆ: ಈ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಗ್ರಾಮ/ನಗರ ಪ್ರದೇಶಗಳಲ್ಲಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು, ಪ್ರೌಢ ಶಾಲೆಗಳು, ಪ.ಪೂ ಕಾಲೇಜು ಮತ್ತು ಪದವಿ ಕಾಲೇಜುಗಳು ಜ.11 ರಂದು ಬೆಳಿಗ್ಗೆ 9 ಗಂಟೆಯಿಂದ ಆಯಾ ಗ್ರಾಮ ಪಂಚಾಯತಿ, ಮಹಿಳಾ ಸ್ವಸಹಾಯ ಸಂಘಗಳು, ಅಂಗನವಾಡಿಗಳು, ಯುವಕ/ಯುವತಿ ಸಂಘಗಳು, ರೈತ ಸಂಘಗಳು,  ಪಾಲಕರು, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸೇರಿಕೊಂಡು ಜಾಗೃತಿ ನಡಿಗೆ ಆಯೋಜಿಬೇಕು.  ಜಿಲ್ಲಾ ಮಟ್ಟದಲ್ಲಿ ಜ.11 ರಂದು ಬೆಳಿಗ್ಗೆ 9 ಗಂಟೆಯಿಂದ ಜಾಗೃತಿ ನಡಿಗೆ ಕಾರ್ಯಕ್ರಮ ನಡೆಯಲಿದ್ದು, ಕೊಪ್ಪಳ ನಗರದ ಎಲ್ಲಾ ಶಾಲೆ ಕಾಲೇಜು, ಡಿ.ಎಡ್, ಬಿಎಡ್, ಪದವಿ, ಸ್ನಾತಕೋತ್ತರ ಪದವಿ (ಸರಕಾರಿ, ಅನುದಾನಿತ, ಖಾಸಗಿ) ವಿದ್ಯಾರ್ಥಿಗಳು ಭಾಗವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದ್ದಾರೆ.

ಕೊಪ್ಪಳ ನಗರಸಭೆ ಬಜೆಟ್ ಕುರಿತು ಸಲಹೆಗಳ ಸ್ವೀಕಾರಕ್ಕೆ ಪೂರ್ವಭಾವಿ ಸಭೆ

ಕೊಪ್ಪಳ ಡಿ. 27 :(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯ 2017-18 ನೇ ಸಾಲಿನ ಮುಂಗಡ ಪತ್ರ (ಬಜೆಟ್) ಮಂಡನೆಗೆ ಸಂಬಂಧಿಸಿದಂತೆ  ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ, ನಗರದ ಗಣ್ಯರು, ಉದ್ಯಮಿಗಳು, ಮಾಧ್ಯಮದವರು, ವೈದ್ಯರು, ನ್ಯಾಯವಾದಿಗಳು, ಹಿರಿಯ ನಾಗರೀಕರು ಮೊದಲಾದವರಿಂದ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಪೂರ್ವಭಾವಿ ಸಭೆಗಳನ್ನು ಆಯೋಜಿಸಲಾಗಿದೆ.
     ನಗರಸಭೆ ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಡಿ.31 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ನಿರ್ಮಿತಿ ಕೇಂದ್ರದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದ್ದು,  ಈ ಸಭೆಗೆ ನಗರದ ಗಣ್ಯರು, ಉದ್ಯಮಿಗಳು, ಮಾಧ್ಯಮದವರು, ಹಿರಿಯ ನಾಗರಿಕರು ಭಾಗವಹಿಸಿ, ನಗರದ ಅಭಿವೃದ್ಧಿಗೆ ಸಲಹೆ, ಸೂಚನೆಗಳನ್ನು ನೀಡಬಹುದಾಗಿದೆ. 
     ಅದೇ ರೀತಿ, ಜ. 02 ರಂದು ಬೆಳಿಗ್ಗೆ 11-30 ಗಂಟೆಗೆ ನಿರ್ಮಿತಿ ಕೇಂದ್ರದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದ್ದು,  ಸಭೆಗೆ ವೈದ್ಯರು, ನ್ಯಾಯವಾದಿಗಳು, ಅಭಿಯಂತರರು ಪಾಲ್ಗೊಂಡು ನಗರದ ಸ್ವಚ್ಛತೆ, ಕಾನೂನು ವಿಷಯಗಳು, ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆಗಳನ್ನು ನೀಡಿ, ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

Monday, 26 December 2016

ಡಿ. 29 ರಂದು ಕೊಪ್ಪಳದಲ್ಲಿ ಅರ್ಥಪೂರ್ಣ ವಿಶ್ವ ಮಾನವ ದಿನ ಆಚರಣೆ- ಡಾ. ರುದ್ರೇಶ್ ಘಾಳಿ

ಕೊಪ್ಪಳ, ಡಿ.26 (ಕರ್ನಾಟಕ ವಾರ್ತೆ): ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಡಿ. 29 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ವಿಶ್ವ ಮಾನವ ದಿನ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
     ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಕೊಪ್ಪಳದಲ್ಲಿ ವಿಶ್ವ ಮಾನವ ದಿನ ಆಚರಣೆ ಸಂಬಂಧ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
     ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ರಾಜ್ಯ ಸರ್ಕಾರದ ವತಿಯಿಂದ ಡಿ. 29 ರ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ.  ಕನ್ನಡ ನಾಡಿನ ಹಿರಿಮೆಯನ್ನು ತಮ್ಮ ಅದ್ಭುತ ಸಾಹಿತ್ಯ ಮತ್ತು ಕವನಗಳ ಮೂಲಕ ಜಗತ್ತಿಗೆ ಪರಿಚಯಿಸಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತಿರುವುದು ಅರ್ಥಪೂರ್ಣವಾಗಿದೆ.  ಕಾರ್ಯಕ್ರಮವನ್ನು ಡಿ. 29 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗುವುದು.  ಕಾರ್ಯಕ್ರಮದ ಅಂಗವಾಗಿ ಅಂದು ಕುವೆಂಪು ಅವರು ರಚಿಸಿರುವ ಕವನಗಳ ಗೀತಗಾಯನ ಕಾರ್ಯಕ್ರಮ ಅಲ್ಲದೆ  ಕುವೆಂಪು ರಚಿತ ‘ಓ ನನ್ನ ಚೇತನ’ ಮತ್ತು ‘ವಿಶ್ವ ಮಾನವ ಗೀತೆ’ ಗಳಿಗೆ ಕಲಾವಿದರಿಂದ ನೃತ್ಯ ರೂಪಕವನ್ನು ಏರ್ಪಡಿಸಲಾಗುವುದು.  ಖ್ಯಾತ ಸಾಹಿತಿ ಡಾ. ರಹಮತ್ ತರೀಕರೆ ಹಾಗೂ ಕೊಪ್ಪಳದ ವಿಶ್ರಾಂತ ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ ಅವರಿಂದ ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಏರ್ಪಡಿಸಲಾಗುವುದು.  ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.  ವಿಶ್ವ ಮಾನವ ದಿನವನ್ನು ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಲ್ಲಿ ಆಚರಿಸುವಂತೆ ಸೂಚನೆ ನೀಡಲಾಗುವುದು.   ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತಾಗಬೇಕು.  ಅಲ್ಲದೆ ಎಲ್ಲ ಸಾರ್ವಜನಿಕರು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಕೋರಿದರು.
     ಸಭೆಯಲ್ಲಿ ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಗೊಂಡಬಾಳ, ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಗಣ್ಯರಾದ ಬಸವರಾಜ ಶೀಲವಂತರ, ಶಿವಾನಂದ ಹೊದ್ಲೂರ, ಸಂತೋಷ ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ : ಡಿ. 31 ಕೊನೆಯ ದಿನ

ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಬೆಳೆ ವಿಮೆಗೆ ವಿಮಾ ಕಂತು ಪಾವತಿಸಲು ಡಿ. 31 ಕೊನೆಯ ದಿನವಾಗಿದೆ ಎಂದು ಜಂಟಿಕೃಷಿ ನಿರ್ದೇಶಕರು ತಿಳಿಸಿದ್ದಾರೆ.
     ನಿಗದಿತ ದಿನಾಂಕದೊಳಗೆ ರೈತರು ವಿಮಾ ಕಂತನ್ನು ಪಾವತಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ ರೈತರು ಕೃಷಿ ಇಲಾಖೆ ಅಥವಾ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಜಂಟಿಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.28 ರಂದು ಕುಷ್ಟಗಿಯಲ್ಲಿ ಎಸಿಬಿ ಯಿಂದ ಕುಂದುಕೊರತೆ ಹಾಗೂ ದೂರು ಸ್ವೀಕಾರ

ಕೊಪ್ಪಳ, ಡಿ.26 (ಕರ್ನಾಟಕ ವಾರ್ತೆ):  ಕೊಪ್ಪಳದ ಭ್ರಷ್ಠಾಚಾರ ನಿಗ್ರಹದಳದ ಆರಕ್ಷಕ ಉಪಾಧೀಕ್ಷಕರು, ಡಿ.28 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಕುಷ್ಟಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ದೂರು ಸ್ವೀಕರಿಸಿ, ಅಹವಾಲು ಆಲಿಸಲಿದ್ದಾರೆ.
       ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಬಹುದು ಹಾಗೂ ಸರ್ಕಾರಿ ಸೌಕರರು ಲಂಚದ ಹಣಕ್ಕೆ ಬೇಡಿಕೆ ಹಾಗೂ ಅಕ್ರಮ ಸಂಪತ್ತು ಹೊಂದಿದ್ದಲ್ಲಿ ದೂರು ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಗೆ ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಪಿಡಬ್ಲೂಡಿ ಕ್ವಾಟ್ರಸ್ ನಂ-5, ಈಶ್ವರ ಗುಡಿ ಹಿಂದುಗಡೆ, ಕೊಪ್ಪಳ ದೂ.ಸಂ: 08539-221833, ಮೊ-9480806319, 9480806320 ಇಲ್ಲಿಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಎಸಿಬಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್. ರಾಮಚಂದ್ರನ್ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಬೆಳಗಾವಿ ಜಿಲ್ಲೆಗೆ ಜಿಪಂ ಸಿಇಓ ಆಗಿ ವರ್ಗಾವಣೆಗೊಂಡ ಆರ್. ರಾಮಚಂದ್ರನ್ ಅವರಿಗೆ ಕೊಪ್ಪಳ ಜಿಲ್ಲಾ ಪಂಚಾಯತಿ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಸೋಮವಾರದಂದು ಆತ್ಮೀಯವಾಗಿ ಬೀಳ್ಕೊಡಲಾಯಿತು.

     ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷಮ್ಮ ನೀರಲೂಟಿ, ಜಿ.ಪಂ. ಸದಸ್ಯ ಭೀಮಣ್ಣ ಅಗಸಿ ಮಂದಿನ, ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು ಆರ್. ರಾಮಚಂದ್ರನ್ ಅವರಿಗೆ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.  ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ರಾಮಚಂದ್ರನ್ ಅವರಿಗೆ ಸನ್ಮಾನಿಸಿ ಬೀಳ್ಕೊಟ್ಟರು.  ವಿವಿಧ ತಾಲೂಕು ಪಂಚಾಯತಿ ಕಚೇರಿ, ಗ್ರಾ.ಪಂ. ಗಳ ಪಿಡಿಓ ಗಳು ಕೂಡ ರಾಮಚಂದ್ರನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.  ಕೊಪ್ಪಳ ಜಿಲ್ಲಾ ಪಂಚಾಯತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಐಎಎಸ್ ಅಧಿಕಾರಿ ವೆಂಕಟರಾಜಾ ಅವರನ್ನು ಹಾಗೂ ನೂತನ  ಉಪವಿಭಾಗಾಧಿಕಾರಿಯಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ ಐಎಎಸ್ ಅಧಿಕಾರಿ ಗುರುದತ್ ಹೆಗ್ಡೆ ಅವರನ್ನು ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾಡಳಿತದ ವತಿಯಿಂದ ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

     ವಿವಿಧ ಇಲಾಖೆಗಳ ಅಧಿಕಾರಿಗಳು ನಿಕಟಪೂರ್ವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಗ್ರಾ.ಪಂ. ಗಳ ಪಿಡಿಓಗಳು, ಜಿ.ಪಂ. ಕಚೇರಿಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮಚಂದ್ರನ್ ಅವರಿಗೆ ಬೀಳ್ಕೊಟ್ಟರು.

Saturday, 24 December 2016

ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಸಂಪುಟ ಉಪ ಸಮಿತಿಯಿಂದ ಬರ ಪರಿಶೀಲನೆ

ಕೊಪ್ಪಳ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಪರಿಶೀಲನೆಗೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಬರ ಪರಿಶೀಲನೆ ಸಂಪುಟ ಉಪ ಸಮಿತಿಯು ಡಿ. 24 ರ ಶನಿವಾರದಂದು ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳು ತೆಗೆಯಿಸಿ, ಕೆರೆಗೆ ತುಂಗಭದ್ರಾ ನೀರು ತುಂಬಿಸುತ್ತಿರುವುದನ್ನು ಪರಿಶೀಲನೆ ನಡೆಸಿತು. ನಂತರ ಕವಲೂರು ಗ್ರಾಮದ ಕೆರೆಗೆ ತುಂಗಭದ್ರಾ ನೀರು ತುಂಬಿಸಿ ಭರ್ತಿ ಮಾಡಿರುವುದನ್ನು ಪರಿಶೀಲಿಸಿದರು. ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಗ್ರಾಮವಾಗಿಸಿದ ಯೋಜನೆ, ಶುದ್ಧ ಕುಡಿಯುವ ನೀರು ಘಟಕ ಕಾರ್ಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.


ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ಬರ : ಜನವರಿ ಮೊದಲ ವಾರದಲ್ಲಿ ಗೋಶಾಲೆ ಪ್ರಾರಂಭ- ಎಚ್.ಕೆ. ಪಾಟೀಲ್

ಕೊಪ್ಪಳ ಡಿ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ತೀವ್ರ ಕೊರತೆಯ ಕಾರಣದಿಂದ ಜಾನುವಾರುಗಳಿಗೆ ಮೇವು ಲಭ್ಯತೆ ಸಾಧ್ಯತೆ ಕಡಿಮೆ ಇರುವುದರಿಂದ, ಜನವರಿ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ 06 ಗೋಶಾಲೆಗಳನ್ನು ಪ್ರಾರಂಭಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಪರಿಶೀಲನೆಗೆ ಕೊಪ್ಪಳಕ್ಕೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಬರ ಪರಿಶೀಲನೆ ಸಂಪುಟ ಉಪ ಸಮಿತಿಯು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾದ ಬರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಶೇ. 16 ರಷ್ಟು ಕೊರತೆಯಾಗಿದ್ದರೆ, ಹಿಂಗಾರು ಮಳೆ ಶೇ. 87 ರಷ್ಟು ಭಾರಿ ಕೊರತೆಯಾಗಿದೆ.  ಇದರಿಂದಾಗಿ ಜಾನುವಾರುಗಳಿಗೆ ಬರುವ ದಿನಗಳಲ್ಲಿ ಮೇವು ಲಭ್ಯವಾಗುವ ಸಾಧ್ಯತೆಗಳು ಬಹಳಷ್ಟು ಕಡಿಮೆ ಇದೆ.  ಜಿಲ್ಲೆಯಲ್ಲಿ 14 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ.  ಪ್ರತಿ ವಾರಕ್ಕೆ ಜಿಲ್ಲೆಯಲ್ಲಿನ ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ 19037 ಮೆ.ಟನ್ ಮೇವಿನ ಬೇಡಿಕೆ ಇದೆ.  ಜಿಲ್ಲೆಯಲ್ಲಿ ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಮೇವಿನ ಕೊರತೆಯಾಗುವ ಸಂಭವ ಹೆಚ್ಚಾಗಿದೆ.  ಮೇವು ಸಂಗ್ರಹಕ್ಕೆ ಮೇವು ಬ್ಯಾಂಕ್‍ಗಳನ್ನು ಪಂಚಾಯತಿ ಕೇಂದ್ರಗಳಲ್ಲಿ ಪ್ರಾರಂಭಿಸಬೇಕು.  ಅಲ್ಲದೆ ಜನವರಿ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಒಟ್ಟು 06 ಗೋಶಾಲೆಗಳನ್ನು ಪ್ರಾರಂಭಿಸಬೇಕು.  ಇದಕ್ಕೆ ಕೂಡಲೆ ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಸಚಿವ ಎಚ್.ಕೆ. ಪಾಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. 
ರೈತರ ವಿಮಾ ಕಂತು ಸರ್ಕಾರ ಭರಿಸಲು ಶಿಫಾರಸ್ಸು : ಕೆಲ ಜಿಲ್ಲೆಗಳಲ್ಲಿ ಸತತ ಬರದಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.  ಬೆಳೆ ಬಿತ್ತಿದ ಸಂದರ್ಭದಲ್ಲಿ ಬೆಳೆ ವಿಮೆಗೆ ವಿಮಾ ಕಂತು ತುಂಬಲು ಸಹ ರೈತರಿಗೆ ತೊಂದರೆಯಾಗುತ್ತಿದೆ.  ಬೆಳೆ ಸಾಲ ಪಡೆಯುವ ರೈತರು ಬೆಳೆ ವಿಮೆ ನೊಂದಣಿ ಮಾಡಿಸುವುದು ಕಡ್ಡಾಯವಾದರೆ, ಬೆಳೆ ಸಾಲ ಪಡೆಯದ ಬಹುತೇಕ ರೈತರು ಬೆಳೆ ವಿಮೆಗೆ ನೊಂದಣಿ ಮಾಡಿಸುತ್ತಿಲ್ಲ.  ಬರ ಇರುವ ಸಂದರ್ಭದಲ್ಲಿ ಬೆಳೆ ಕೈಗೆ ಬಾರದಿರುವುದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ರೈತರ ವಿಮಾ ಕಂತಿನ ಮೊತ್ತವನ್ನು ಸರ್ಕಾರವೇ ಭರಿಸುವ ಕುರಿತು ರಾಜ್ಯದ ಬಹಳಷ್ಟು ಜಿಲ್ಲೆಗಳ ಜನಪ್ರತಿನಿಧಿಗಳ ಒತ್ತಾಯವಿದೆ.  ವಿಮಾ ಕಂತು ಸರ್ಕಾರವೇ ಪಾವತಿಸಲು ನಿಯಮಗಳಲ್ಲಿ ಅವಕಾಶ ಇದೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಬೇಕಿದೆ.  ಸಂಪುಟ ಉಪ ಸಮಿತಿಯಂತೂ ಸರ್ಕಾರವೇ ರೈತರ ವಿಮಾ ಕಂತು ತುಂಬಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದರು.
ಬೆಳೆ ಕಟಾವು ಸಮೀಕ್ಷೆ ವ್ಯವಸ್ಥೆ ಮತ್ತು ನಿಯಮಗಳ ಪರಿಷ್ಕರಣೆ ಅಗತ್ಯವಿದೆ : ರಾಜ್ಯದಲ್ಲಿ ಬೆಳೆ ಇಳುವರಿಯ ಪ್ರಮಾಣ ನಿಗದಿಗೆ ಸದ್ಯ ಇರುವ ಬೆಳೆ ಕಟಾವು ಸಮೀಕ್ಷಾ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿವೆ.  ಇದರಿಂದಾಗಿ ಬೆಳೆ ಹಾನಿ ಅನುಭವಿಸಿದ ಬಹಳಷ್ಟು ರೈತರಿಗೆ ಅನ್ಯಾಯವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.  ಬೆಳೆ ಕಟಾವು ಸಮೀಕ್ಷಾ ವರದಿಯ ಆಧಾರದಲ್ಲಿಯೇ ಬೆಳೆ ವಿಮೆ ಪ್ರಮಾಣ ನಿರ್ಧಾರವಾಗುವುದರಿಂದ, ನಿಜವಾಗಿಯೂ ಬೆಳೆ ಹಾನಿ ಅನುಭವಿಸಿದ ರೈತರಿಗೆ ಬೆಳೆ ವಿಮೆ ಮೊತ್ತ ಲಭ್ಯವಾಗುತ್ತಿಲ್ಲ.  ಇದರ ಲಾಭ ಕೇವಲ ವಿಮಾ ಕಂಪನಿಗಳ ಪಾಲಾಗುತ್ತಿದೆ.  ಈ ವ್ಯವಸ್ಥೆ ಪರಿಷ್ಕರಣೆಯಾಗುವ ಅಗತ್ಯವಿದೆ.  ಸಂಪುಟ ಉಪ ಸಮಿತಿಯು ಈ ಕುರಿತು ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಶಿಫಾರಸು ಮಾಡಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದರು.
ಸಮಸ್ಯಾತ್ಮಕ 209 ಗ್ರಾಮಗಳಿಗೆ ನೀರು ಪೂರೈಸಲು ಕ್ರಮ ವಹಿಸಿ : ಜಿಲ್ಲೆಯಲ್ಲಿರುವ 739 ಜನ ವಸತಿ ಪ್ರದೇಶಗಳ ಪೈಕಿ 209 ಗ್ರಾಮಗಳು ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಗ್ರಾಮಗಳಲ್ಲಿ ಶೇ. 25 ಕ್ಕಿಂತಲೂ ಕಡಿಮೆ ನೀರು ಪೂರೈಕೆಯಾಗುತ್ತಿದೆ.  ಮುಂದಿನ 15 ದಿನಗಳ ಒಳಗಾಗಿ ಈ ಗ್ರಾಮಗಳಿಗೆ ಹೊಸ ಬೊರ್‍ವೆಲ್ ಕೊರೆಯಿಸಿ ಅಥವಾ ಖಾಸಗಿ ಬೋರ್‍ವೆಲ್ ಬಾಡಿಗೆ ಪಡೆದಾದರೂ, ಸಮರ್ಪಕ ನೀರು ಪೂರೈಕೆ ಆಗಬೇಕು.  ಒಂದು ವೇಳೆ ಯಾವುದೇ ಬೋರ್‍ವೆಲ್ ನೀರು ಲಭ್ಯವಾಗದೇ ಇದ್ದರೆ, ಟ್ಯಾಂಕರ್ ಮೂಲಕವಾದರೂ ಸರಿ, ನೀರು ಪೂರೈಕೆ ಆಗಲೇಬೇಕು ಎಂದು ಸಚಿವ ಎಚ್.ಕೆ. ಪಾಟೀಲರು ಹೇಳಿದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ನೀಲೋಗಿಪುರ ಗ್ರಾಮದ ಬಳಿ ಕಳೆದ ವರ್ಷ 12 ಲಕ್ಷ ವೆಚ್ಚ ಮಾಡಿ ತಾತ್ಕಾಲಿಕವಾಗಿ ಮರಳು ಚೀಲದಿಂದ ಬಂಡ್ ನಿರ್ಮಿಸಿ 30 ಗ್ರಾಮಗಳಿಗೆ ನೀರು ಪೂರೈಸಲಾಗಿತ್ತು.  ಇದಕ್ಕೆ ಶಾಶ್ವತ ಬಂಡ್ ನಿರ್ಮಾಣವಾದರೆ, 30 ಗ್ರಾಮಗಳಿಗೆ ಬೇಸಿಗೆಯಲ್ಲೂ ನೀರು ಪೂರೈಸಲು ಸಾಧ್ಯವಾಗಲಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದಕ್ಕಾಗಿ ಅಗತ್ಯವಿರುವ 4. 5 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗುವುದು.  ಕೂಡಲೆ ಕಾಮಗಾರಿ ಪ್ರಾರಂಭಿಸುವಂತೆ ಸೂಚನೆ ನೀಡಿದರು.
     ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಬೋರ್‍ವೆಲ್‍ಗಳು, ಖಾಸಗಿ ಬೋರ್‍ವೆಲ್‍ಗಳ ಸಂಖ್ಯೆ, ಅವುಗಳು ನೀಡುತ್ತಿರುವ ನೀರಿನ ಪ್ರಮಾಣ ಹಾಗೂ ಆಯಾ ಗ್ರಾಮಗಳ ಜನಸಂಖ್ಯೆವಾರು ಬೇಕಾಗಬಹುದಾದ ನೀರಿನ ಪ್ರಮಾಣ ಇವುಗಳ ಸಮೀಕ್ಷೆಯನ್ನು ಕೈಗೊಂಡು 15 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರಿಗೆ ಸೂಚನೆ ನೀಡಿದರು.  ಬರುವ ಬೇಸಿಗೆಯಲ್ಲಿ ಈ ವರದಿಯಿಂದ ಬಹಳಷ್ಟು ಸಹಕಾರಿಯಾಗಲಿದೆ ಎಂದರು.
     ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಯಾವ ಪ್ರದೇಶದಲ್ಲಿ ಬೋರ್‍ವೆಲ್ ಹಾಕಿದಲ್ಲಿ ನೀರು ಲಭ್ಯವಾಗುತ್ತದೆ ಎನ್ನುವುದರ ಬಗ್ಗೆ ಇಸ್ರೋ ಬಳಿ ಉಪಗ್ರಹ ಆಧಾರಿತ ನಕ್ಷೆ ಲಭ್ಯವಿದ್ದು, ಕೊಪ್ಪಳ ಜಿಲ್ಲಾಡಳಿತ ಇದನ್ನು ಆದಷ್ಟು ಶೀಘ್ರ ಪಡೆಯಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಸಂಪುಟ ಉಪಸಮಿತಿಯ ಸದಸ್ಯರು ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಇಕ್ಬಾಲ್ ಅನ್ಸಾರಿ, ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಜಿ.ಪಂ. ಉಪಾಧ್ಯಕ್ಷೆ ಲಕ್ಮಮ್ಮ ನೀರಲೂಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Friday, 23 December 2016

ಸ್ಪಂದನ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಬಸವರಾಜ ರಾಯರಡ್ಡಿ ಚಾಲನೆ


ಕೊಪ್ಪಳ, ಡಿ.24 (ಕರ್ನಾಟಕ ವಾರ್ತೆ): ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ಒದಗಿಸಲಾಗುವ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗಲು ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರಾರಂಭಿಸಲಾಗಿರುವ ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಇಲಾಖೆ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಶನಿವಾರದಂದು ಚಾಲನೆ ನೀಡಿದರು.
 
     ಇದುವರೆಗೂ ತಾಲೂಕು ಕಚೇರಿ, ನಾಡ ಕಚೇರಿಗಳು, ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಸೇವೆಗಳು ಲಭ್ಯವಾಗುತ್ತಿದ್ದವು.  ಜಿಲ್ಲಾ ಕೇಂದ್ರದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂತಹ ಕೇಂದ್ರ ಪ್ರಾರಂಭವಾಗುತ್ತಿರುವುದು ಇದೇ ಮೊದಲು.  ಇನ್ನು ಮುಂದೆ, ಸಾರ್ವಜನಿಕರಿಗೆ ಕಂದಾಯ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಮೂಲಕ ನೀಡಲಾಗುವ ಹಲವು ಸೇವೆಗಳು ಒಂದೇ ಸೂರಿನಡಿ ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರದಲ್ಲಿ ಲಭ್ಯವಾಗಲಿದೆ.
    ಸರ್ಕಾರದಿಂದ ಲಭ್ಯವಾಗುವ ಸೇವೆಗಳಿಗಾಗಿ ಸಾರ್ವಜನಿಕರು ವಿನಾಕಾರಣ ತೊಂದರೆ ಅನುಭವಿಸುವುದು ಹಾಗೂ ಅನಗತ್ಯ ವಿಳಂಬಕ್ಕೆ ಒಳಗಾಗುವುದನ್ನು ತಪ್ಪಿಸಿ, ಒಂದೇ ಸೂರಿನಡಿ ಸಕಲ ಸೇವೆಗಳು ವಿಳಂಬರಹಿತವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ‘ಸ್ಪಂದನ’ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಿಸಿದೆ.  ಸಾರ್ವಜನಿಕರಿಗೆ ತ್ವರಿತವಾಗಿ ಸ್ಪಂದಿಸುವುದು ಸರ್ಕಾರದ ಉದ್ದೇಶವಾಗಿದೆ.  ಕಂದಾಯ ಇಲಾಖೆಯ 36 ಸೇವೆಗಳು ಸೇರಿದಂತೆ ಭೂಮಿ ಕೇಂದ್ರದಲ್ಲಿನ ಪಹಣಿ ಹಾಗೂ ಮ್ಯೂಟೇಶನ್ ವಿತರೆ ಮತ್ತು ಭೂಮಾಪನ ಇಲಾಖೆಯ ಸೇವೆಗಳು, ಆಹಾರ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಸೇವೆಗಳನ್ನು ಜಿಲ್ಲಾ ಕೇಂದ್ರದ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರು ಒಂದೇ ಸೂರಿನಡಿ ಪಡೆಯಬಹುದು.  ಸಾರ್ವಜನಿಕರು ಈ ಸ್ಪಂದನ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಮನವಿ ಮಾಡಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಏನೇನು ಸೇವೆಗಳು ಲಭ್ಯ ? : ಜಿಲ್ಲಾಡಳಿತ ಭವನದಲ್ಲಿ ಪ್ರಾರಂಭಿಸಲಾಗುವ ‘ಸ್ಪಂದನ’ ಕೇಂದ್ರದಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-1), ಅನುಸೂಚಿತ ಜಾತಿ ಅಥವಾ ಪಂಗಡಗಳ ಪ್ರಮಾಣ ಪತ್ರ (ಪ.ಜಾತಿ/ಪ.ಪಂ), ವಿಧವಾ ದೃಢೀಕರಣ ಪತ್ರ, ಮರು ವಿವಾಹವಾಗದಿರುವ ದೃಢೀಕರಣ ಪತ್ರ, ವಸಿ ದೃಢೀಕರಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಗೇಣಿ ರಹಿತ ದೃಢೀಕರಣ ಪತ್ರ, ವ್ಯವಸಾಯಗಾರರ ಕುಟುಂಬ ಸದಸ್ಯ ದೃಢೀಕರಣ ಪತ್ರ, ಜಮೀನು ಇಲ್ಲದಿರುವ ದೃಢೀಕರಣ ಪತ್ರ, ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ, ಕೃಷಿ ಕಾರ್ಮಿಕ ದೃಢೀಕರಣ ಪತ್ರ, ಬೋನಪೈಡ್ ದೃಢೀಕರಣ ಪತ್ರ, ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ, ವ್ಯವಸಾಯಗಾರರ ದೃಢೀಕರಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ, ಜನಸಂಖ್ಯೆ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ, ಮೇಲುಸ್ಥರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ, ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ, ಉದ್ಯೋಗ ಉದೇಶಕ್ಕೆ ಆದಾಯ ದೃಢೀಕರಣ ಪತ್ರ, ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ, ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ, ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ, ಜೀವಂತ ದೃಢೀಕರಣ ಪತ್ರ, ನಿರುದ್ಯೋಗಿ ದೃಢೀಕರಣ ಪತ್ರ, ವಂಶವೃಕ್ಷದ ದೃಢೀಕರಣ ಪತ್ರ, ಹೈದ್ರಾಬಾದ ಕರ್ನಾಟಕ ಪ್ರದೇಶದ ವಸತಿ ಮತ್ತು ಅರ್ಹತಾ ದೃಢೀಕರಣ ಪತ್ರ, ಬೆಳೆ ದೃಢೀಕರಣ ಪತ್ರ  ಸೇವೆಗಳನ್ನು ಪಡೆಯಬಹುದು. ಮತ್ತು 94 ಸಿ, 94 ಸಿಸಿ ಸೇವೆಯನ್ನು ಪಡೆಯಬಹುದು. ವಿವಿಧ ಮಾಸಾಶನ ಯೋಜನೆಗಳಾದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನ, ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ, ಮೈತ್ರಿ, ಮನಸ್ವಿನಿ, ಆಸಿಡ್ ದಾಳಿಗೊಳಗಾದವರಿಗೆ ಪಿಂಚಣಿ, ರೈರ ವಿಧವೆಯರ ಪಿಂಚಣಿ, ಅಂತ್ಯ ಸಂಸ್ಕಾರ ಯೋಜನೆ ಸೇವೆಗಳನ್ನು ಪಡೆಯಬಹುದು.
      ಇದೇ ಕೇಂದ್ರದಲ್ಲಿ ಭೂಮಿ ಯೋಜನೆಯ ಸೇವೆಗಳು ಕೂಡ ಲಭ್ಯವಿದ್ದು, ಆರ್‍ಟಿಸಿ, ಹಕ್ಕು ಬದಲಾವಣೆ ಪ್ರತಿ, ಖಾತಾ ಪ್ರತಿ, ಭೂಮಿ ಆನ್‍ಲೈನ್ ಕಿಯಾಸ್ಕ್ ಸೇವೆಯಲ್ಲಿ ಖಾತಾ ಬದಲಾವಣೆ (ಪೌತಿ, ವಿಲ್ ಹಾಗೂ ಮೈನರ್ ಗಾರ್ಡಿಯನ್). ಸರ್ಕಾರಿ ಆದೇಶ( ಭೂ ಮಂಜೂರು, ಭೂ ಸುಧಾರಣೆ ಮಂಜೂರು, ಮರು ಮಂಜೂರು). ಕೋರ್ಟ್ ತಡೆ (ತಡೆ ಆಜ್ಞೆ, ತಡೆ ಬಿಡುಗಡೆ). ಹಕ್ಕು ಮತ್ತು ಋಣಭಾರ (ಆಧಾಯ/ಭೋಗ್ಯ, ಬಿಡುಗಡೆ, ಸರ್ಕಾರಿ ನಿಬಂಧನೆ). ಭೂ ಪರಿವರ್ತನೆ (ನಿವೇಶನ, ಕಾರ್ಖಾನೆ ಇತ್ಯಾದಿ). ತಕರಾರು (30 ದಿವಸಗಳ ನೋಟಿಸ್ ಅವಧಿಯೊಳಗೆ ಇರುವ ವಹಿವಾಟುಗಳು)
     ಸರ್ವೆ ಇಲಾಖೆಯ ಮೋಜಿಣಿ ಯೋಜನೆಯ ಸೇವೆಗಳಾದ 11 ಇ-ಕ್ರಯ ವಿಭಾಗ, ದಾನ, ಕೋರ್ಟ್ ಡಿಕ್ರಿ, ಕೋರ್ಟ್ ಕಾಂಪ್ರಮೈಸ್, ಹಾಗೂ ಪ್ರಿ-ಅಲಿನೇಷನ್, ತತ್ಕಾಲ್ ಅರ್ಜಿ, ಹದ್ದುಬಸ್ತು, ಇ ಸ್ವತ್ತು ಸೇವೆಗಳು ಕೂಡ ಸಾರ್ವಜನಿಕರಿಗೆ ಸ್ಪಂದನ ಜನಸೇವಾ ಕೇಂದ್ರದಲ್ಲಿ ಲಭ್ಯವಿರಲಿದೆ.

ನಗದು ರಹಿತ ವ್ಯವಹಾರದ ಕುರಿತು ಜಿಲ್ಲೆಯಲ್ಲಿ ತರಬೇತಿ ಕಾರ್ಯಕ್ರಮ

ಕೊಪ್ಪಳ ಡಿ. 23 :(ಕರ್ನಾಟಕ ವಾರ್ತೆ): ದೇಶದಲ್ಲಿ 1000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ನಗದು ರಹಿತ ಹಣಕಾಸು ವ್ಯವಹಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಗದು ರಹಿತ ವ್ಯವಹಾರ ಕುರಿತು ಅರಿವು ಮೂಡಿಸಲು ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.
     ಜಿಲ್ಲಾ ಮಟ್ಟದಲ್ಲಿ ಡಿ. 26 ರಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಲಾಗಿದ್ದು, ಜಿಲ್ಲಾ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಪಾಲ್ಗೊಳ್ಳುವರು.  ಡಿ. 27 ರಂದು ಎಲ್ಲ ತಾಲೂಕು ಪಂಚಾಯತಿಗಳಲ್ಲಿ ಸ್ಯಾಟ್ ಕಾಂ ಮೂಲಕ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಆಯಾ ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ತಾಲೂಕು ಮಟ್ಟದ ಅಧಿಕಾರಿಗಳು, ಬ್ಯಾಂಕ್‍ಗಳ ವ್ಯವಸ್ಥಾಪಕರು ಪಾಲ್ಗೊಳ್ಳಬೇಕು.  ಡಿ. 28 ರಂದು ಸಂಬಂಧಿಸಿದ ತಾಲೂಕಾ ಪಂಚಾಯತಿ ಮೂಲಕ ಸ್ಯಾಟ್ ಕೇಂದ್ರದಲ್ಲಿ ಆಯಾ ತಾಲೂಕಿನ ಎಲ್ಲ ಗ್ರಾ.ಪಂ. ಅಧ್ಯಕ್ಷರು, ಪಿಡಿಓ ಗಳು ಹಾಗೂ ಬ್ಯಾಂಕ್‍ಗಳ ವ್ಯವಸ್ಥಾಪಕರು ಪಾಲ್ಗೊಳ್ಳಬೇಕು.  2017 ರ ಜನವರಿ ಮೊದಲನೆ ವಾರದಲ್ಲಿ ಗ್ರಾಮೀಣ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ಏರ್ಪಡಿಸುವ ಮೂಲಕ ಗ್ರಾ.ಪಂ. ಸದಸ್ಯರುಗಳು, ಸ್ವಸಹಾಯ ಸಂಘದ ಸದಸ್ಯರು, ಸರ್ಕಾರೇತರ ಸಂಸ್ಥೆಗಳ ಸದಸ್ಯರು, ಎಪಿಎಂಸಿ ಸದಸ್ಯರು, ಹಾಲು ಉತ್ಪಾದಕರ ಸಂಘದ ಸದಸ್ಯರು, ಇತರೆ ಸಹಕಾರ ಸಂಘಗಳ ಸದಸ್ಯರು, ಗ್ರಾಮ ಸಭೆಗಳ ಸದಸ್ಯರು, ಅಲ್ಲದೆ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.  ತರಬೇತಿ ಸ್ಥಳವನ್ನು ಆಯಾ ಗ್ರಾಮ ಪಂಚಾಯತಿಗಳು ನಿರ್ಧರಿಸಲಿವೆ.  ಇದರ ವ್ಯವಸ್ಥೆಯನ್ನು ಗ್ರಾ.ಪಂ. ಪಿಡಿಓ ಗಳು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಕಚೇರಿ ಪ್ರಕಟಣೆ ತಿಳಿಸಿದೆ.

ಸಮಗ್ರ ಕೃಷಿ ಪದ್ಧತಿಯಿಂದ ವರ್ಷವಿಡೀ ಆದಾಯ ಸಾಧ್ಯ


ಕೊಪ್ಪಳ ಡಿ. 23 (ಕರ್ನಾಟಕ ವಾರ್ತೆ): ರೈತರು ಕೇವಲ ಒಂದೇ ಬೆಳೆಗೆ  ಆದ್ಯತೆ ನಿಡದೆ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ವರ್ಷವಿಡೀ ಆದಾಯ ಪಡೆಯಲು ಸಾಧ್ಯ ಎಂದು ಕೊಪ್ಪಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿರುಪಣ್ಣ ಅವರು ಹೇಳಿದರು.

       ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ, ಕೊಪ್ಪಳ ಇವರ ಸಹಯೋಗದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

     ರೈತರು ತಾವು ಕೃಷಿಕರು, ಜಗಕ್ಕೇ ಅನ್ನ ಕೊಡುತ್ತಿರುವುದಕ್ಕೆ ಹೆಮ್ಮೆ ಪಡಬೇಕು.  ಕೇವಲ ಒಂದೇ ಬೆಳೆಗೆ ಜೋತು ಬೀಳದೆ, ಸಮಗ್ರ ಕೃಷಿ ಬೆಳೆ ಅಳವಡಿಸಿಕೊಂಡರೆ ವರ್ಷವಿಡೀ ಆದಾಯ ಪಡೆಯಬಹುದು.  ಬೆಳೆಹಾನಿಯಾದಾಗ ಎದೆಗುಂದದೆ, ಆತ್ಮಹತ್ಯೆಗೆ ಶರಣಾಗದೆ ದೈರ್ಯವನ್ನು ಹೊಂದಿ, ವೈಜ್ಞಾನಿಕ ತಾಂತ್ರಿಕತೆಗಳ ಮಾಹಿತಿ ಪಡೆದು ಹೊಲದಲ್ಲಿ ಅಳವಡಿಸಬೇಕು ಎಂದು ವಿರುಪಣ್ಣ ಅವರು ಕರೆ ನೀಡಿದರು.
     ಕೃಷಿಕ ಸಮಾಜದ ಕೊಪ್ಪಳ ಜಿಲ್ಲೆಯ ರಾಜ್ಯ ಪ್ರತಿನಿಧಿ ಶಂಕರಪ್ಪ ಚೌಡಿ ಅವರು ಮಾತನಾಡಿ, ಕೃಷಿಕರು ಇಂದಿನ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಹಾಗೂ ತಮ್ಮ ಸಮಸ್ಯೆಗಳನ್ನು ಸಂಘಟನೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  
       ಪ್ರಸಕ್ತ ವರ್ಷದ ರಾಯಚೂರು ಕೃಷಿ ಮೇಳದಲ್ಲಿ ಶ್ರೇಷ್ಟ ಕೃಷಿಕ ಮಹಿಳೆ ಪ್ರಶಸ್ತಿ ಪಡೆದಿರುವ  ವೆಂಕಮ್ಮ ನಾಗೇಶಗೌಡ, ಕಲಕೇರಿ, ಶೇಖಮ್ಮವಾಣಿ ಕಲ್ಲತಾವರಗೇರ, ಶ್ರೇಷ್ಠ ಯುವ ಕೃಷಿಕ ಮಹಿಳೆ ಪ್ರಭಾವತಿ ಮಾಲೀ ಪಾಟೀಲರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಸನ್ಮಾನಿತರು ತಮ್ಮ ಕೃಷಿ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು.  ಇದಲ್ಲದೆ ಪ್ರಗತಿ ಪರ ರೈತರಾದ ಶಂಕ್ರಪ್ಪ ರಾಮಣ್ಣ ಹುಡೇದ, ಅಳವಂಡಿ, ಇಂದ್ರಗೌಡ, ಚಿಕ್ಕಸಿಂಧೋಗಿ ಅವರು ಕೂಡ ತಮ್ಮ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು. 
      ಪ್ರಭಾರಿ ಜಂಟಿಕೃಷಿ ನಿರ್ದೇಶಕ ವೀರೇಶ ಹುನುಗಂದ, ಅವರು ಇಲಾಖೆಯ ಸೌಲಭ್ಯಗಳ ಬಗ್ಗೆ ತಿಳಿಸಿದರು.  ವಿಷಯ ತಜ್ಞೆ ಕವಿತಾ ವೈ ಉಳ್ಳಿಕಾಶಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರು ಹವಾಮಾನ ವೈಪರಿತ್ಯದಿಂದ ಕೃಷಿಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ತಿಳಿಸಿದರು.  ಸಹಾಯಕ ಕೃಷಿ ನಿರ್ದೇಶಕ ತುಕಾರಾಂ ವಂದಿಸಿದರು.

ವಿಶ್ವ ಮಾನವ ದಿನ ಆಚರಣೆ : ಡಿ. 26 ರಂದು ಪೂರ್ವಭಾವಿ ಸಭೆ

ಕೊಪ್ಪಳ ಡಿ. 23 (ಕರ್ನಾಟಕ ವಾರ್ತೆ): ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಸರ್ಕಾರದ ವತಿಯಿಂದ ಡಿ. 29 ರಂದು ಆಚರಿಸಲಾಗುತ್ತಿದ್ದು, ಈ ಕುರಿತ ಸಿದ್ಧತೆಗಾಗಿ ಪೂರ್ವಭಾವಿ ಸಭೆ ಡಿ. 26 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ತಿಳಿಸಿದ್ದಾರೆ.

ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಡಿ. 23 (ಕರ್ನಾಟಕ ವಾರ್ತೆ): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರಾದ ತನ್ವೀರ್ ಸೇಠ್ ಅವರು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವ ತನ್ವೀರ್ ಸೇಠ್ ಅವರು, ಡಿ. 24  ರಂದು ಮ.1.30 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಜಿಲ್ಲೆಯಲ್ಲಿನ ಬರ   ಪರಿಸ್ಥಿತಿ ಮತ್ತು ಇತರೆ ನೈಸರ್ಗಿಕ ವಿಪತ್ತುಗಳ ಅಧ್ಯಯನ ನಡೆಸಿ ವಾಸ್ತವ್ಯ ಮಾಡುವರು.   ಡಿ. 25 ರಂದು ಬೆ. 8-00 ಗಂಟೆಗೆ ಕಲಬುರಗಿ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

Thursday, 22 December 2016

ಕೊಪ್ಪಳ ಜಿಲ್ಲಾ ಮಟ್ಟದ ಮಾಧ್ಯಮದವರ ಮೊಬೈಲ್ ಸಂಖ್ಯೆ ವಿವರಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಮಹಿಳೆ ಪ್ರಶಸ್ತಿಗಾಗಿ ಅರ್ಜಿ: ಅವಧಿ ವಿಸ್ತರಣೆ

ಕೊಪ್ಪಳ, ಡಿ.22 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಕೊಡಮಾಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ಆಪತ್ಕಾಲದಲ್ಲಿರುವ ವ್ಯಕ್ತಿಯ ಜೀವ ರಕ್ಷಿಸುವಲ್ಲಿ ಧೈರ್ಯ ಸಾಹಸ ಮೆರೆದ ಮಹಿಳೆಗೆ ನೀಡುವ ವೀರ ಮಹಿಳೆ ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಡಿ. 26 ರವರೆಗೆ ವಿಸ್ತರಿಸಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ : ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಟ 05 ವರ್ಷಗಳ ಸೇವೆ ಸಲ್ಲಿಸಿರಬೇಕು.  ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಕ್ರಮಗಳ ಮತ್ತು ಇತರೆ ಕ್ಷೇತ್ರಗಳಾದ ಕ್ರೀಡಾ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲೂ ವ್ಯಕ್ತಿಗಳು ಕೈಗೊಂಡ ಕಾರ್ಯಕ್ರಮಗಳ ನಿರ್ವಹಣೆಯ ಗುಣಮಟ್ಟವನ್ನು ಆಧಾರವಾಗಿ ಪರಿಗಣಿಸಲಾಗುವುದು.  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ವೇತನ ಪಡೆಯುವ ವ್ಯಕ್ತಿಗಳು ಅರ್ಹರಲ್ಲ.  ಪ್ರಶಸ್ತಿಯನ್ನು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಥವಾ ಸರ್ಕಾರ ನಿಗದಿಪಡಿಸುವ ದಿನದಂದು ಪ್ರದಾನ ಮಾಡಲಾಗುವುದು. 
ವೀರ ಮಹಿಳೆ ಪ್ರಶಸ್ತಿ : ಈ ಪ್ರಶಸ್ತಿಯು ಒಬ್ಬ ಮಹಿಳೆಯು, ಆಪತ್ಕಾಲದಲ್ಲಿರುವ ಮತ್ತೋರ್ವ ವ್ಯಕ್ತಿಯ ಜೀವ ಕಾಪಾಡುವಲ್ಲಿ ಅಥವಾ ಪ್ರಾಣ ರಕ್ಷಿಸುವಲ್ಲಿ ತನ್ನ ಜೀವದ ಹಂಗನ್ನು ತೊರೆದು, ಸಮಯ ಪ್ರಜ್ಞೆಯಿಂದ ಧೈರ್ಯ, ಸಾಹಸದೊಂದಿಗೆ ಅಪಾಯದಲ್ಲಿರುವ ವ್ಯಕ್ತಿಯ ಜೀವ ಕಾಪಾಡುವಂತಹ ಕಾರ್ಯವನ್ನು ಮಾಡಿರುವ 18 ರಿಂದ 45 ವರ್ಷದೊಳಗಿನ ಮಹಿಳೆಯರು ಈ ಪ್ರಶಸ್ತಿಗೆ ಅರ್ಹರು.  ಕಳೆದ ವರ್ಷದ ಜ. 01 ರಿಂದ ಡಿ. 31 ರವರೆಗಿನ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.  ಪ್ರಶಸ್ತಿಗೆ ಸಂಬಂಧಿಸಿದ ಮಹಿಳೆಯ ತಂದೆ/ತಾಯಿ/ ಪೋಷಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಪ್ರಶಸ್ತಿಗೆ ಆಯ್ಕೆಯಾದ ಮಹಿಳೆಗೆ ರಾಜ್ಯದ ವತಿಯಿಂದ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
     ಅರ್ಜಿ ಸಲ್ಲಿಸಲು ಈ ಮೊದಲು ಡಿ. 15 ಕೊನೆಯ ದಿನವನ್ನಾಗಿ ನಿಗದಿಪಡಿಸಲಾಗಿತ್ತು.  ಇದೀಗ ಅವಧಿಯನ್ನು ಡಿ. 26 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಪಡಿತರ ಸೀಮೆಎಣ್ಣೆ ದರ ಪರಿಷ್ಕರಣೆ : ಲೀಟರ್‍ಗೆ 25 ರೂ ನಿಗದಿ.

ಕೊಪ್ಪಳ, ಡಿ.22 (ಕರ್ನಾಟಕ ವಾರ್ತೆ):  ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲಾಗುತ್ತಿರುವ ಸಹಾಯಧನಯುಕ್ತ ಸೀಮೆಎಣ್ಣೆ ದರವನ್ನು ಪರಿಷ್ಕರಿಸಲಾಗಿದ್ದು, ಡಿಸೆಂಬರ್ ತಿಂಗಳಿನಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಸೀಮೆ ಎಣ್ಣೆ ದರವನ್ನು 25 ರೂ.ಗಳಿಗೆ ನಿಗದಿಪಡಿಸಲಾಗಿದೆ.
    ಪ್ರತಿ ಲೀಟರ್ ಸೀಮೆಎಣ್ಣೆ ದರ ಸದ್ಯ ಪ್ರತಿ ಲೀಟರ್‍ಗೆ 20 ರೂ. ಇದ್ದು, ಸರ್ಕಾರದ ಆದೇಶದಂತೆ ಪರಿಷ್ಕøತ ದರ 25 ರೂ. ಗೆ ನಿಗದಿಪಡಿಸಲಾಗಿದೆ.  ಪರಿಷ್ಕøತ ದರ ಇದೆ ಡಿಸೆಂಬರ್ ತಿಂಗಳಿನಿಂದ ಅನ್ವಯವಾಗಲಿದ್ದು ಎಲ್ಲಾ ಅನಿಲ ರಹಿತ ಪಡಿತರ ಚೀಟಿದಾರರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಾರ್ಯಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕಿಮ್ಸ್ ಸಂಸ್ಥೆಗೆ ಆಯ್ಕೆಯಾದ ಶುಶ್ರೂಷಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ಕೊಪ್ಪಳ, ಡಿ.22 (ಕರ್ನಾಟಕ ವಾರ್ತೆ):  ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾದ 117 ಶುಶ್ರೂಶಕ ಸಿಬ್ಬಂದಿಗಳು ಜ.05 ರೊಳಗಾಗಿ ಕೊಪ್ಪಳ ಕಿಮ್ಸ್ ಸಂಸ್ಥೆಗೆ ಸೂಕ್ತ ದಾಖಲೆಗಳ ಸಹಿತ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
     ಕಳೆದ ನ.25 ರಂದು ಆಯ್ಕೆಯಾದ 117 ಶುಶ್ರೂಶಕ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣಪತ್ರ ಹಾಗೂ ನಡತೆ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ, ಧೃಢೀಕರಿಸಿ ಕಿಮ್ಸ್ ಸಂಸ್ಥೆಗೆ ಕಳುಹಿಸಿಕೊಡಲು ಸಂಬಂಧಿಸಿದ ಪ್ರಾಧಿಕಾರಿಕ್ಕೆ ಕೋರಲಾಗಿತ್ತು.   ಈಗಾಗಲೇ ಈ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ ಆದ್ದರಿಂದ ಕೊಪ್ಪಳ ಕಿಮ್ಸ್ ಸಂಸ್ಥೆಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರಮಾಣ ಪತ್ರಗಳೊಂದಿಗೆಯಾಗಲಿ ಅಥವಾ ಸಂಬಂಧಿಸಿದ ಪ್ರಾಧಿಕಾರದಿಂದ ಪ್ರಮಾಣ ಪತ್ರಗಳನ್ನು ಪಡೆಯುವ ನಿರೀಕ್ಷೆಯಲ್ಲಿರುವ     ಎಲ್ಲಾ 117 ಶುಶ್ರೂಷ ಸಿಬ್ಬಂದಿಗಳು ಅಗತ್ಯ ದಾಖಲೆಗಳೊಂದಿಗೆ ಜನವರಿ.05 ರೊಳಗಾಗಿ ಹಾಜರಾಗಬೇಕು.
    ಈಗಾಗಲೇ ಸಿಂಧುತ್ವ ಪ್ರಮಾಣ ಪತ್ರ ಹೊಂದಿರುವ/ ಸಲ್ಲಿಸಿರುವ ಅಭ್ಯರ್ಥಿಗಳು ಜ.05 ರೊಳಗಾಗಿ ನೇಮಕಾತಿ ಆದೇಶ ಪಡೆದು, 7 ದಿನದೊಳಗೆ ಸೇವೆಗೆ ಹಾಜರಾಗಬೇಕು. ಹಾಗೂ ಸಿಂಧುತ್ವ, ಮೀಸಲಾತಿ (ಪ.ಜಾತಿ, ಪ.ಪಂ, ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಸಮಾನ್ಯ ಹಾಗೂ ಹೈ-ಕ ಪ್ರಮಾಣ ಪತ್ರ ಹಾಗೂ ನಡತೆ ಪ್ರಮಾಣ ಪತ್ರ ಇತರೆ) ದೃಢೀಕರಣ ಪ್ರಮಾಣ ಪತ್ರಗಳನ್ನು ಹೊಂದದೆ ಇರುವ ಅಭ್ಯರ್ಥಿಗಳು ಜ.20 ರೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಕರ್ತವ್ಯಕ್ಕೆ ಹಾಜರಾಗದ ಹಾಗೂ ಪ್ರಮಾಣ ಪತ್ರ ಸಲ್ಲಿಸದೇ ಇರುವ ಅಭ್ಯರ್ಥಿಗಳ ಹೆಸರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸಲಾಗುವುದು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿನ ನೀರು ಕುಡಿಯುವ ನೀರಿಗಾಗಿ ಮಾತ್ರ- ಭೋಜಾನಾಯ್ಕ ಕಟ್ಟಿಮನಿ

ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಲ್ಲಿ ಸದ್ಯ ಸಂಗ್ರಹವಿರುವ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಕಾಯ್ದಿರಿಸಲಾಗಿದ್ದು, ಯಾವುದೇ ಕಾರಣಕ್ಕೂ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ನೀರು ಒದಗಿಸಲಾಗುವುದಿಲ್ಲ ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಭೋಜಾನಾಯ್ಕ ಕಟ್ಟಿಮನಿ ತಿಳಿಸಿದ್ದಾರೆ.
     ತುಂಗಭದ್ರಾ ಜಲಾಶಯದಲ್ಲಿ ಪ್ರಸಕ್ತ ವರ್ಷ ನೀರಿನ ಸಂಗ್ರಹಣೆ ಕಡಿಮೆ ಇದ್ದು, ಸದ್ಯ ಲಭ್ಯವಿರುವ ನೀರನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸಲಾಗಿದೆ.  ಯಾವುದೇ ಕಾರಣಕ್ಕೂ 2016-17 ನೇ ಸಾಲಿನ ಹಿಂಗಾರು ಹಂಗಾಮಿಗೆ ನೀರನ್ನು ಒದಗಿಸಲಾಗುವುದಿಲ್ಲ.  ಕಾಲುವೆಯಲ್ಲಿ ಕುಡಿಯುವ ನೀರಿಗಾಗಿ ನೀರು ಹರಿಸುವ ಸಂದರ್ಭದಲ್ಲಿ ರೈತರು ಅನಧಿಕೃತವಾಗಿ ಬೆಳೆಗಳಿಗೆ ನೀರು ಪಡೆಯುವಂತಿಲ್ಲ.  ಒಂದು ವೇಳೆ ಅನಧಿಕೃತವಾಗಿ ಬೆಳೆಗಳಿಗೆ ನೀರು ಹಾಯಿಸಿಕೊಂಡಲ್ಲಿ, ಅಂತಹವರ ವಿರುದ್ಧ ಕಾನೂನಿನ ರೀತ್ಯ ಕ್ರಮ ಜರುಗಿಸಲಾಗುವುದು ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಭೋಜಾನಾಯ್ಕ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಸಿಮೆಣಸಿನಕಾಯಿ ಬೆಳೆಗೆ ವಿಮೆ ಮಾಡಿಸಲು ಡಿ. 30 ಕೊನೆಯ ದಿನ

ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹಸಿ ಮೆಣಸಿನಕಾಯಿ ಬೆಳೆಗೆ ಡಿ. 30 ಕೊನೆಯ ದಿನವಾಗಿದ್ದು, ರೈತರು ಬೆಳೆ ವಿಮೆಗಾಗಿ ನೋಂದಣಿ ಮಾಡಿಸುವಂತೆ ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮನವಿ ಮಾಡಿಕೊಂಡಿದ್ದಾರೆ.
    ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಟಾನಗೊಳಿಸಲು ಸರ್ಕಾರ ಮಂಜೂರಾತಿ ನಿಡಿದ್ದು, ಹೋಬಳಿವಾರು ಬೆಳೆಗಳನ್ನು ಅನುಸೂಚಿಸಲಾಗಿದೆ.
    ಹಸಿಮೆಣಸಿನಕಾಯಿ (ನೀರಾವರಿ) ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ ರೂ. 90,000 ಆಗಿದ್ದು, ರೈತರು ಪ್ರತಿ ಹೆ.ಗೆ ಪಾವತಿಸಬೇಕಾದ ವಿಮಾ ಕಂತು ರೂ. 4500.    ವಿಮೆಗೆ ನೋಂದಣಿ ಮಾಡಿಸಲು ಡಿ. 30 ಕೊನೆಯ ದಿನಾಂಕವಾಗಿದೆ.  ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದಿರುವ ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಭಾಗವಹಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.  ಬೆಳೆ ವಿಮೆಗೆ ನೋದಣಿ ಮಾಡಿಸಲು ರೈತರು ಭೂಮಿ ಹೊಂದಿರುವುದಕ್ಕೆ  ದಾಖಲೆಗಳಾದ ಪಹಣಿ /ಖಾತೆ ಪುಸ್ತಕ/ ಕಂದಾಯ ರಶೀದಿಯನ್ನು, ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಹಾಜರುಪಡಿಸಿ ನೊಂದಣಿ ಮಾಡಿಕೊಳ್ಳಬೇಕು.
     ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಕೊಪ್ಪಳ:08539-231304, ಗಂಗಾವತಿ:08533-230358, ಯಲಬುರ್ಗಾ: 08534-220429 ಮತ್ತು ಕುಷ್ಟಗಿ:08536-267838  ಕಚೇರಿಗೆ ಕರೆ ಮಾಡಿಯೂ ಮಾಹಿತಿ ಪಡೆಯಬಹುದಾಗಿದೆ.  ಈಲ್ಲೆಯಲ್ಲಿ ಸದ್ಯ ತೀವ್ರ ಬರ ಪರಿಸ್ಥಿತಿ ಇರುವುದರಿಂದ ಹಸಿಮೆಣಸಿನಕಾಯಿ (ನೀರಾವರಿ) ಬೆಳೆಯುವ ಎಲ್ಲ ರೈತರು ತಪ್ಪದೆ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕವಲೂರು ಪ್ರೌಢಶಾಲೆಗೆ ಭೇಟಿ ನೀಡಿ ಬಿಸಿಯೂಟ ಸವಿದ ಜಿಪಂ ಸಿಇಒ


ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಕವಲೂರಿನ ಪ್ರೌಢಶಾಲೆಗೆ ಆಕಸ್ಮಿಕ ಭೇಟಿ ನೀಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಅಲ್ಲಿನ ಮಕ್ಕಳೊಂದಿಗೆ ಸರದಿ ಸಾಲಿನಲ್ಲಿ ತಟ್ಟೆ ಹಿಡಿದು ನಿಂತು, ಬಿಸಿಯೂಟವನ್ನು ಸವಿದರು.
     ನಂತರ ಮಕ್ಕಳು, ಶಿಕ್ಷಕರು, ಬಿಸಿಯೂಟ ತಯಾರಕರಿಂದ ಬಿಸಿಯೂಟ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡರು.  ಅಲ್ಲದೆ ಶಾಲೆಯ ಸ್ಥಿತಿಗತಿಯ ಕುರಿತು ಪರಿಶೀಲನೆ ನಡೆಸಿದರು.  ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಅವರು ಸಹ, ಮಕ್ಕಳೊಂದಿಗೆ ಬೆರೆತು, ಬಿಸಿಯೂಟ ಸವಿದರು. 

ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಭೆ ಡಿ. 28 ಕ್ಕೆ ಮುಂದೂಡಿಕೆ

ಕೊಪ್ಪಳ ಡಿ. 22 :(ಕರ್ನಾಟಕ ವಾರ್ತೆ): ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಡಿ. 23 ರಂದು ನಡೆಸಲು ಉದ್ದೇಶಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಅನಿವಾರ್ಯ ಕಾರಣಗಳಿಂದಾಗಿ ಡಿ.28 ಕ್ಕೆ ಮುಂದೂಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.24 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ‘ ಸ್ಪಂದನ ’ ಕೇಂದ್ರದ ಉದ್ಘಾಟನೆ

ಕೊಪ್ಪಳ, ಡಿ.22 (ಕರ್ನಾಟಕ ವಾರ್ತೆ):  ಸಾರ್ವಜನಿಕರಿಗೆ ಕಂದಾಯ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸೇವೆಯನ್ನು ಒಂದೇ ಸೂರಿನಡಿ ಒದಗಿಸಬಹುದಾಗಿರುವ ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರವನ್ನು ಡಿ.24 ರಂದು ಬೆ. 10.30 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಆರಂಭಿಸಲಾಗುತ್ತಿದೆ.
    ಸರ್ಕಾರದಿಂದ ಲಭ್ಯವಾಗುವ ಸೇವೆಗಳಿಗಾಗಿ ಸಾರ್ವಜನಿಕರು ವಿನಾಕಾರಣ ತೊಂದರೆ ಅನುಭವಿಸುವುದು ಹಾಗೂ ಅನಗತ್ಯ ವಿಳಂಬಕ್ಕೆ ಒಳಗಾಗುವುದನ್ನು ತಪ್ಪಿಸಿ, ಒಂದೇ ಸೂರಿನಡಿ ಸಕಲ ಸೇವೆಗಳು ವಿಳಂಬರಹಿತವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರದ ವತಿಯಿಂದ ‘ಸ್ಪಂದನ’ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಿಸಲಾಗುತ್ತಿದೆ.
     ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರದ ಉದ್ಘಾಟನೆ ನೆರವೇರಿಸುವರು. ಡಿ.17 ರಂದು ಉದ್ಘಾಟನೆಗೊಳ್ಳಬೇಕಿದ್ದ ಏಕಗವಾಕ್ಷಿ ಕೇಂದ್ರ ಅನಿವಾರ್ಯ  ಕಾರಣದಿಂದ ಮುಂದೂಡಲಾಗಿತ್ತು.  ಇದೀಗ ಡಿ.24 ರಂದು ಉದ್ಘಾಟನೆಗೊಳ್ಳಲಿದೆ.  ಕಂದಾಯ ಇಲಾಖೆಯ 40 ಸೇವೆಗಳು ಸೇರಿದಂತೆ ಭೂಮಿ ಕೇಂದ್ರದಲ್ಲಿನ ಪಹಣಿ ಹಾಗೂ ಮ್ಯೂಟೇಶನ್ ವಿತರೆ ಮತ್ತು ಭೂಮಾಪನ ಇಲಾಖೆಯ ಸೇವೆಗಳು, ಆಹಾರ ಇಲಾಖೆಯ ಸೇವೆಗಳನ್ನು ಜಿಲ್ಲಾ ಕೇಂದ್ರದ ಜಿಲ್ಲಾಡಳಿತ ಭವನದ ಸ್ಪಂದನ ಕೇಂದ್ರದಲ್ಲಿ ಸಾರ್ವಜನಿಕರು ಒಂದೇ ಸೂರಿನಡಿ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.04 ರಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ

ಕೊಪ್ಪಳ, ಡಿ.22 (ಕರ್ನಾಟಕ ವಾರ್ತೆ):  ಕೊಪ್ಪಳ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ 2017 ರ ಜ. 04 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ವಹಿಸುವರು.  ಸಂಬಂಧಿಸಿದ ಅಧಿಕಾರಿಗಳು ಡಿ.28 ರೊಳಗಾಗಿ  ಜಿಲ್ಲಾ ಪಂಚಾಯತಿ ಕಚೇರಿಗೆ ಪ್ರಗತಿ ವರದಿ ಸಲ್ಲಿಸಬೇಕು.  ಸಭೆಯಲ್ಲಿ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ,  ಬರ ಪರಿಹಾರ ಕಾಮಗಾರಿಗಳ ಅನುಷ್ಠಾನ ಹಾಗೂ ಇತರೆ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.

Wednesday, 21 December 2016

ಫೆ. 07 ರಿಂದ ಜಿಲ್ಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ - ಡಿಸಿ ಕನಗವಲ್ಲಿ

ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಮಕ್ಕಳಿಗೆ ತೀವ್ರವಾಗಿ ಕಾಡುವ ದಡಾರ ಮತ್ತು ರುಬೆಲ್ಲಾ ರೋಗಗಳ ತಡೆಗಾಗಿ ರಾಷ್ಟ್ರೀಯ ಆರೋಗ್ಯ ಮಿಷನ್ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಫೆ. 07 ರಿಂದ 28 ರವರೆಗೆ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು, 09 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕುವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಹಮ್ಮಿಕೊಳ್ಳುವ ಕುರಿತು ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಡಾರ ಮತ್ತು ರುಬೆಲ್ಲಾ ಎನ್ನುವ ಎರಡೂ ರೋಗಗಳು, ಮಕ್ಕಳಿಗೆ ತೀವ್ರವಾಗಿ ಕಾಡುವಂತಹ ರೋಗಗಳಾಗಿದ್ದು, ಈ ರೋಗದಿಂದ ಮಕ್ಕಳನ್ನು ಮುಕ್ತರನ್ನಾಗಿಸುವ ಸಲುವಾಗಿ ರಾಷ್ಟ್ರೀಯ ಆರೋಗ್ಯ ಮಿಷನ್ ವತಿಯಿಂದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ ಫೆ. 07 ರಿಂದ 28 ರವರೆಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 09 ತಿಂಗಳಿನಿಂದ 15 ವರ್ಷದೊಳಗಿನ ಸುಮಾರು 4. 28 ಲಕ್ಷ ಮಕ್ಕಳಿಗೆ ಈ ಲಸಿಕೆಯನ್ನು ಹಾಕುವ ಗುರಿ ಹೊಂದಲಾಗಿದೆ. ಒಂದು ಲಸಿಕೆಯನ್ನು ನೀಡುವ ಮೂಲಕ ದಡಾರ ಮತ್ತು ರುಬೆಲ್ಲಾ ಎರಡೂ ರೋಗಗಳನ್ನು ತಡೆಗಟ್ಟಲು ಲಸಿಕಾ ಅಭಿಯಾನವು ಸಹಕಾರಿಯಾಗಲಿದೆ. 09 ತಿಂಗಳಿನಿಂದ 15 ವರ್ಷದೊಳಗಿನ ಜಿಲ್ಲೆಯ ಎಲ್ಲ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕುವಂತಾಗಬೇಕು. ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತವಾಗಬಾರದು. ಪ್ರಮುಖವಾಗಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರ, ಸ್ಥಳೀಯ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಈ ಇಲಾಖೆಗಳ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಿ, ಸೂಕ್ತ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು, ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮಕ್ಕಳಿಗೆ ಲಸಿಕೆ ಹಾಕಬೇಕು. ಯಾವುದೇ ಖಾಸಗಿ ಶಾಲೆಗಳು ಮಕ್ಕಳಿಗೆ ಲಸಿಕೆ ಹಾಕುವುದನ್ನು ನಿರಾಕರಿಸುವಂತಿಲ್ಲ. ಈ ಕುರಿತು ಡಿಡಿಪಿಐ ಅವರು ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಬೇಕು. ಒಟ್ಟಾರೆಯಾಗಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉತ್ತರ ಕರ್ನಾಟಕದತ್ತ ಹೆಚ್ಚಿನ ಗಮನ :
****************************ಸಭೆಯಲ್ಲಿ ಭಾಗವಹಿಸಿದ್ದ ದೆಹಲಿಯ ಲಸಿಕಾ ಅಭಿಯಾನ ಸಬಲೀಕರಣದ ಪ್ರಾದೇಶಿಕ ಸಲಹೆಗಾರ ಡಾ. ಜಯಂತ್ ಅವರು ಮಾತನಾಡಿ, ಕಳೆದ ಹಲವಾರು ವರ್ಷಗಳ ಇತಿಹಾಸವನ್ನು ನೋಡಿದಾಗ, ಪೋಲಿಯೋ ಮುಂತಾದ ಮಾರಕ ರೋಗ ಪ್ರಕರಣಗಳು ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ವರದಿಯಾಗುವ ಮೂಲಕ ದೇಶದ ಆರೋಗ್ಯ ಇಲಾಖೆಯ ಗಮನ ಸೆಳೆದಿತ್ತು. ಈಗಲೂ ಉತ್ತರ ಕರ್ನಾಟಕವನ್ನು ಹೈರಿಸ್ಕ್ ವಲಯವೆಂದೇ ಗುರುತಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸುವ ಮೂಲಕ, ಮಾರಕ ರೋಗಗಳನ್ನು ನಿಯಂತ್ರಿಸುವಲ್ಲಿ ಸಫಲವಾಗಿವೆ. ಆದಾಗ್ಯೂ, ಮುಂಜಾಗ್ರತಾ ಕ್ರಮವಾಗಿ ಲಸಿಕಾ ಅಭಿಯಾನದಂತಹ ಕಾರ್ಯಕ್ರಮಗಳನ್ನು ಈ ಭಾಗಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.
ದಡಾರ ಮತ್ತು ರುಬೆಲ್ಲ ಮಾರಕ ರೋಗಗಳು :
******************************ಲಸಿಕಾ ಅಭಿಯಾನ ಕುರಿತು ವಿವರಣೆ ನೀಡಿದ ಬಳ್ಳಾರಿಯ ಸರ್ವೆಲನ್ಸ್ ಮೆಡಿಕಲ್ ಆಫೀಸರ್ ಡಾ. ಎಸ್.ಆರ್. ಶ್ರೀಧರ್ ಅವರು, ದಡಾರ ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ನ್ಯುಮೋನಿಯಾ ಅತಿಸಾರ ಭೇದಿಯಂತಹ ಇನ್ನೂ ಅನೇಕ ಜೀವಕ್ಕೆ ಅಪಾಯವನ್ನುಂಟು ಮಾಡುವ ರೋಗಗಳಿಗೆ ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿನ ರುಬೆಲ್ಲಾ ರೋಗವು ಹುಟ್ಟುವ ಮಗುವಿಗೆ ಕುರುಡು, ಮಾನಸಿಕ ಅಸ್ವಸ್ಥತೆ, ಕಿವುಡುತನ, ಹೃದಯಸಂಬಂಧಿ ಹುಟ್ಟು ನ್ಯೂನ್ಯತೆಗಳಿಗೆ ಕಾರಣವಾಗುತ್ತದೆ. 2014 ರಲ್ಲಿ ಈ ಮಾರಕ ರೋಗಗಳ ಕಾರಣದಿಂದ 2013-14 ರಲ್ಲಿ ಜಗತ್ತಿನಲ್ಲಿ 49200 ಮಕ್ಕಳು ಮರಣವನ್ನಪ್ಪಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 05 ಪ್ರಕರಣಗಳು ವರದಿಯಾಗಿತ್ತು. 2015 ರಲ್ಲಿ ಕೈಗೊಂಡ ಮಿಷನ್ ಇಂದ್ರಧನುಷ್ ವಿಶೇಷ ಲಸಿಕಾ ಅಭಿಯಾನದ ಕಾರಣದಿಂದ, ಇಂತಹ ಪ್ರಕರಣಗಳ ವರದಿ ಕಡಿಮೆಯಾಗಿದೆ. ಭಾರತ ದೇಶದಲ್ಲಿ 41 ಕೋಟಿ ಮಕ್ಕಳು, ಕರ್ನಾಟಕ ರಾಜ್ಯದಲ್ಲಿ 1. 60 ಕೋಟಿ ಮಕ್ಕಳು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 4. 28 ಲಕ್ಷ ಮಕ್ಕಳಿಗೆ ದಡಾರ ಮತ್ತು ರುಬೆಲ್ಲ ರೋಗ ತಡೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದರು.
ಅಡ್ಡ ಪರಿಣಾಮವಿಲ್ಲ :
*****************ದಡಾರ ಮತ್ತು ರುಬೆಲ್ಲ ರೋಗ ತಡೆಗೆ ನೀಡಲಾಗುವ ಲಸಿಕೆಯಿಂದ ಲಸಿಕೆ ಹಾಕಿದ ಸ್ಥಳದಲ್ಲಿ ಸ್ವಲ್ಪ ಮಟ್ಟಿಗೆ ನೋವು ಹಾಗೂ ಜ್ವರ ಬರುವ ಸಾಧ್ಯತೆ ಇರುತ್ತದೆ ಅಷ್ಟೇ ಹೊರತು, ಇದೊಂದು ಸಂಪೂರ್ಣ ಸುರಕ್ಷಿತ ಲಸಿಕೆಯಾಗಿದೆ. ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಡಾ. ಶ್ರೀಧರ್ ಅವರು ಹೇಳಿದರು.
ಲಸಿಕಾ ಅಭಿಯಾನಕ್ಕೆ ವಿಶೇಷ ತಂಡ ರಚನೆ :
****************************ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಅಲಕಾನಂದ ಅವರು, ಲಸಿಕಾ ಅಭಿಯಾನದ ಸಮಗ್ರ ವಿವರಣೆ ನೀಡಿ, ಜಿಲ್ಲೆಯಲ್ಲಿ ಕಳೆದ ವರ್ಷ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಇಡೀ ರಾಜ್ಯಕ್ಕೆ ಜಿಲ್ಲೆ ಮಾದರಿಯಾಗಿದೆ. ಇದೀಗ ದಡಾರ ಮತ್ತು ರುಬೆಲ್ಲ ಲಸಿಕಾ ಅಭಿಯಾನವನ್ನೂ ಕೂಡ ಯಶಸ್ವಿಗೊಳಿಸಲು ತಂಡಗಳನ್ನು ರಚಿಸಿ ಯೋಜನೆ ಸಿದ್ಧಪಡಿಸಲಾಗಿದೆ. ಜಿಲ್ಲೆಯ 428915 ಮಕ್ಕಳಿಗೆ ಲಸಿಕೆಯನ್ನು ಹಾಕುವ ಗುರಿ ಹೊಂದಲಾಗಿದ್ದು, ಈ ಪೈಕಿ 1. 67 ಲಕ್ಷ ಅಂಗನವಾಡಿ ಮಕ್ಕಳು, 2. 52 ಲಕ್ಷ ಶಾಲಾ ಮಕ್ಕಳು, ಸ್ಲಂ ಏರಿಯಾದ 1523 ಮಕ್ಕಳು, ಅಲೆಮಾರಿ ಕುಟುಂಬಗಳ 811 ಮಕ್ಕಳು, ಇಟ್ಟಂಗಿ ಭಟ್ಟಿ ಮತ್ತು ಕಟ್ಟಡ ನಿರ್ಮಾಣ ಪ್ರದೇಶಗಳ 2296 ಮಕ್ಕಳು, ಇತರೆ ಸುಮಾರು 3700 ಮಕ್ಕಳಿಗೆ ಲಸಿಕೆಯನ್ನು ಹಾಕಲು ಯೋಜನೆ ರೂಪಿಸಿದ್ದೇವೆ. ಅಭಿಯಾನದ ಯಶಸ್ವಿಗೆ ವಿವಿಧ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಉಪವಿಭಾಗೀಯ ತಂಡದ ಮುಖ್ಯಸ್ಥರಾದ ತೆಲಂಗಾಣ ರಾಜ್ಯದ ಡಾ. ಪುಟ್ಟರಾಜ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಡಿಡಿಪಿಐ ಶ್ಯಾಮಸುಂದರ್, ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.