Saturday, 31 October 2015

ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿನ : ಪ್ರತಿಜ್ಞಾ ವಿಧಿ ಸ್ವೀಕಾರ

ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಭಾರತದ ಪ್ರಧಾನಮಂತ್ರಿಗಳಾಗಿದ್ದ ದಿವಂಗತ ಇಂದಿರಾಗಾಂಧಿಯವರು ಹುತಾತ್ಮರಾದ ಅ. 31 ರ ದಿನವನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಮತ್ತು ಉಕ್ಕಿನ ಮನುಷ್ಯ ದಿ: ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಆಚರಿಸುವಂತೆ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
     ಪ್ರಭಾರಿ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ರಾಷ್ಟ್ರೀಯ ಸಂಕಲ್ಪ ದಿವಸದ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿ, ರಾಷ್ಟ್ರದ ಸ್ವಾತಂತ್ರ್ಯವನ್ನು ಕಾಪಾಡಲು ದೇಶ ರಕ್ಷಣೆ ಮಾಡಲು, ದೇಶದ ರಕ್ಷಣೆ ಮಾಡಲು ಹಾಗೂ ದೇಶದ ಸುಭದ್ರತೆ ಕಾರ್ಯದಲ್ಲಿ ತನು-ಮನ-ಧನದಿಂದ ಕಾರ್ಯವೆಸಗಲು ನಿಷ್ಠೆಯಿಂದ ಪ್ರತಿಜ್ಞೆ ಮಾಡುತ್ತೇವೆ.  ಎಂದಿಗೂ ಹಿಂಸೆಯ ಪ್ರಯೋಗ ಮಾಡುವುದಿಲ್ಲ, ಧರ್ಮ, ಜಾತಿ, ಭಾಷೆ, ಪ್ರಾಂತ ಮುಂತಾದ ವಿಷಯಗಳಲ್ಲದೆ ರಾಜಕೀಯ ಹಾಗೂ ಸಂವಿಧಾನಾತ್ಮಕವಾಗಿ ಇತ್ಯರ್ಥ ಮಾಡಲು ಪ್ರಯತ್ನಿಸಲಾಗುವುದು.  ಭಾರತೀಯ ಪ್ರಜೆಯಾದ ನಾವು ನಮ್ಮ ದೇಶದ ಪರಂಪರಾಗತ ಮೌಲ್ಯವಾದ ಅಹಿಂಸೆ ಮತ್ತು ತಾಳ್ಮೆಯಲ್ಲಿ ಅಪಾರ ನಂಬಿಕೆ ಇರಿಸಿದ್ದು, ಎಲ್ಲ ರೀತಿಯ ಭಯೋತ್ಪಾದನೆ ಮತ್ತು ಹಿಂಸಾಕೃತ್ಯಗಳನ್ನು ವಿರೋಧಿಸುತ್ತೇವೆ. ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ತಿಳುವಳಿಕೆಯಿಂದ, ಸಾಮಾಜಿಕ ಬಾಂಧವ್ಯ ಹಾಗೂ ಒಡನಾಡಿಗಳ ಜೊತೆಗೂಡಿ ಮಾನವ ಜೀವ ಹಾಗೂ ಮೌಲ್ಯಗಳನ್ನು ನಾಶಪಡಿಸುವ ವಿನಾಶಕಾರಿ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
     ರಾಷ್ಟ್ರೀಯ ಏಕತಾ ದಿವಸದ ನಿಮಿತ್ಯ ಪ್ರತಿಜ್ಞಾ ವಿಧಿ ಬೋಧಿಸಿ, ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನಮ್ಮನ್ನು ಅರ್ಪಿಸಿಕೊಳ್ಳುತ್ತೇವೆ ಮತ್ತು ನಮ್ಮ ದೇಶ ಬಾಂಧವರಲ್ಲಿ ಈ ಸಂದೇಶ ಸಾರಲು ಶ್ರಮಿಸುತ್ತೇವೆ.  ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯನ್ನು ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಪೂರ್ತಿಯನ್ನು ಕಾಪಾಡುವುದಾಗಿ ಪ್ರಮಾಣ ಮಾಡುತ್ತೇವೆ.  ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ನಮ್ಮದೇ ಆದ ಕೊಡುಗೆಯನ್ನು ನೀಡುತ್ತೇವೆಂದು ಎಲ್ಲ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 
     ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ರಾಷ್ಟ್ರೀಯ ಏಕತಾ ದಿವಸ ಹಾಗೂ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಬೋಧಿಸಿದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ನ. 01 ರಂದು ಈಶಾನ್ಯದ ಐಸಿರಿ 7 ನೇ ಸಂಚಿಕೆ ಪ್ರಸಾರ

ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸÀುವ “ಈಶಾನ್ಯದ ಐಸಿರಿ” ಸರಣಿಯ 7 ನೇ ಸಂಚಿಕೆ ನ. 01 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ. 
7ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ. ಸಂಸದ ಡಾ. ಮಲ್ಲಿಕಾರ್ಜುನ ಖರ್ಗೆಯವರು 371(ಜೆ) ವಿಧಿಯ ಉಪಯುಕ್ತತೆಯ ಕುರಿತು ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಯಲಬುರ್ಗಾದ ಶಾಸಕರಾಗಿರುವ ಬಸವರಾಜ ರಾಯರಡ್ಡಿಯವರು ತಮ್ಮ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕುರಿತು ತಮ್ಮ ಯೋಜನೆ-ಯೋಚನೆಗಳ ಅನುಷ್ಠಾನದ ಬಗೆಗೆ ಮಾತನಾಡಲಿದ್ದಾರೆ.  ಬೆಂಗಳೂರಿನ ಅಕ್ಷರ ಫೌಂಡೇಶನ್ನಿನ ಕ್ಷೇತ್ರ ಕಾರ್ಯ ಅಧಿಕಾರಿಯಾಗಿರುವ ಜೆ. ವಿ. ಶಂಕರ ನಾರಾಯಣ ಅವರಿಂದ ಗಣಿತ  ಕಲಿಕೆಯಲ್ಲಿ ಅದಕ್ಕಾಗಿಯೇ ರೂಪಿಸಲಾಗಿರುವ ‘ಕಿಟ್’ನ ಉಪಯುಕ್ತತೆ ಕುರಿತು ಮಾಹಿತಿ ನೀಡಲಿದ್ದಾರೆ. ಪರಿಣಿತಾ ಮಹಿಳಾ ಗುಂಪಿನ ಸದಸ್ಯೆಯರಿಂದ ಸೇವಿನ ಉಂಡಿ ತಯಾರಿಸುವ ಬಗೆ, ಕೇಸರಿಯ ಔಷಧೀಯ ಗುಣಧರ್ಮಗಳು ಹಾಗೂ ಝಾನ್ಸಿರಾಣಿ ಲಕ್ಷ್ಮೀಬಾಯಿ ಕುರಿತು ಮಾತುಕತೆ ಪ್ರಸಾರವಾಗಲಿದೆ. ಬಳ್ಳಾರಿಯ ರಂಗಭೂಮಿ ಕಲಾವಿದರಾಗಿರುವ ಕೆ.ಜಗದೀಶ್ ಅವರ ಸಾಧನೆಯ ಕುರಿತು ಒಂದು ಸಂಕ್ಷಿಪ್ತ ಪರಿಚಯ ಮೂಡಿ ಬರಲಿದೆ.  ಕುಷ್ಟಗಿಯ ಜನಪದ ಕಲಾವಿದರಾಗಿರುವ ವಾಲ್ಮೀಕಪ್ಪ ಯಕ್ಕರನಾಳ ಅವರು ತತ್ವಪದ ಹಾಡಲಿದ್ದಾರೆ.
    ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.
ಸರಣಿಯ ನಿರೂಪಣಾ ಸಾಹಿತ್ಯ, ನಿರ್ವಹಣೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಕಾರ್ಯಕ್ರಮ ಅಧಿಕಾರಿಯಾಗಿರುವ ಸೋಮಶೇಖರ ಎಸ್. ರುಳಿ ಅವರು ವಹಿಸಿಕೊಂಡಿದ್ದಾರೆ  ಎಂದು ನಿಲಯದ ಮುಖ್ಯಸ್ಥೆಯಾಗಿರುವ ಅಂಜನಾ ಯಾತನೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ನ. 1 ಮತ್ತು 02 ರಂದು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.
     ಸಚಿವರು ನ. 01 ರಂದು ಬೆಳಿಗ್ಗೆ 8-30 ಗಂಟೆಗೆ ಕೊಪ್ಪಳ ನಗರಕ್ಕೆ ಆಗಮಿಸಿ, ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ 60 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ 1-30 ಗಂಟೆಗೆ ಮುನಿರಾಬಾದಿನ ಇಂದ್ರಭವನಕ್ಕೆ ತೆರಳುವರು.  ಸಂಜೆ 5 ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು.  ನ. 02 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕೋಳಿ ಸಾಕಾಣಿಕೆ ಉಚಿತ ತರಬೇತಿ ಶಿಬಿರ

ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಇವರು ಕೋಳಿ ಸಾಕಾಣಿಕೆ ಬಗ್ಗೆ ಮೂರು ದಿನಗಳ ತರಬೇತಿ ಶಿಬಿರವನ್ನು ನವೆಂಬರ್ ತಿಂಗಳಿನಲ್ಲಿ ಆಯೋಜಿಸಿದ್ದು, ಆಸಕ್ತರು ಹೆಸರು ನೋಂದಯಿಸುವಂತೆ ಸೂಚನೆ ನೀಡಲಾಗಿದೆ.
       ಕೋಳಿ ಸಾಕಾಣಿಕೆಯಲ್ಲಿ ಅಧಿಕ ಉತ್ಪಾದನೆಗೆ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು.  ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.  ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ನ. 14 ರ ಒಳಗಾಗಿ ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ, ಬಾಗಲಕೋಟೆ-587103 ಇವರಿಗೆ ಸಲ್ಲಿಸಬೇಕು.  ಮಾಹಿತಿಗೆ 9482630790 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಉತ್ತಮ ಮಾವಿನ ಫಸಲಿಗೆ ರೈತರು ಅನುಸರಿಸಬೇಕಾದ ಕ್ರಮಗಳು : ಸಲಹೆಗಳು


ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಉತ್ತಮ ಮಾವಿನ ಫಸಲು ಮತ್ತು ಹೆಚ್ಚು ಇಳುವರಿಯನ್ನು ಪಡೆಯಲು ಈಗಿನಿಂದಲೇ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೊಪ್ಪಳದ ತೋಟಗಾರಿಕೆ ಸಲಹಾ ಕೇಂದ್ರದ ಅಧಿಕಾರಿಗಳು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
     ಮುಂಗಾರಿನ ಸಂಪೂರ್ಣ ವೈಫಲ್ಯ ರೈತರಿಗೆ ಮಾರಕವಾಗಿದ್ದರೂ, ಹಿಂಗಾರು ಆಶಾದಾಯಕವೆಂದೇ ಭಾವಿಸಲಾಗಿದೆಯಾದರೂ ಹಿಂಗಾರಿನ ಆರಂಭದಲ್ಲಿ ಕಾಣಿಸಿಕೊಂಡ  ಮಳೆ ಮತ್ತೆ  ಕೈಕೊಟ್ಟಂತಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನೊಂದೆರಡು ಒಳ್ಳೆ ಮಳೆಗಳಾದರೆ ಮಾತ್ರ ರೈತ ಒಳ್ಳೆ ಫಸಲನ್ನು  ನಿರೀಕ್ಷಿಸಬಹುದು. ಆದರೆ ಮಾವಿನ ಬೆಳೆಗೆ ಈ ಹಂತದಲ್ಲಿ  ಒಳ್ಳೆಯದೇ ಆಗಿದೆ. ಈ ಪರಿಸ್ಥಿತಿಯಲ್ಲಿ ಒಳ್ಳೆಯ ಮಾವಿನ ಫಸಲನ್ನು ನಿರೀಕ್ಷಿಸ ಬಹುದಾಗಿದೆ.
    ಅಕ್ಟೋಬರ್‍ನಲ್ಲಿ ರೋಗಗ್ರಸ್ತ ಒಣಗಿದ ರೆಂಬೆಗಳನ್ನು ತೆಗೆದು ಹಾಕಬೇಕು. ಸ್ಕರ್ಟಿಂಗ ಎಂದು ಕರೆಯಲ್ಪಡುವ ಚಾಟ್ನಿ ವಿಧಾನದಲ್ಲಿ ನೆಲಕ್ಕೆ ತಾಕುವ ಎಲ್ಲ ರಂಬೆಗಳನ್ನು ನೆಲದಿಂದ  1 ಮೀ. ವರೆಗೂ ವಿಶೇಷ ಕತ್ತರಿ ಸಹಾಯದಿಂದ ಕತ್ತರಿಸಿ ಶೇ.1ರ ಬೋರ್ಡೊ ಲೇಪನ ಮಾಡಬೇಕು. ನಂತರ ಕಾಂಡಕ್ಕೆ ಸಿ.ಓ.ಸಿ. ಮತ್ತು ಕ್ಲೋರೋಪೈರಿಫಾಸ್ ಲೇಪನ ಮಾಡಬೇಕು. 10 ವರ್ಷಗಳ ಆಯಸ್ಸಿನ ಗಿಡಗಳ ಬಿರುಕು, ಸಂದಿಗೊಂದಿಗಳನ್ನು ಸ್ವಚ್ಚಗೊಳಿಸಿ ಈ ಲೇಪನ ಮಾಡಬೇಕು. ಕಾಂಡ ಸೀಳಾಗಿ ಸೋರುತ್ತಿದ್ದರೆ  ಸೀಲರ್-ಹೀಲರ್ ಎನ್ನುವ ಜೌಷಧಿಯುಕ್ತ ಪುಡಿಯನ್ನು ಲೇಪಿಸಬೇಕು, ನಂತರ 3-4 ಮೀ. ನಷ್ಟು ಪಾತಿಮಾಡಿ ಶಿಫಾರಸು ಮಾಡಿದ ಗೊಬ್ಬರದ ಜೊತೆಗೆ ಬೇವಿನಹಿಂಡಿ ಅರ್ಧದಿಂದ 1 ಕಿ.ಗ್ರಾಂ ಮತ್ತು ಜಿಂಕ್ 100 ಗ್ರಾಂ., ಜೋರಾನ್ 100 ಗ್ರಾಂ. ಕೊಟ್ಟು ತಕ್ಷಣ ನೀರುಣಿಸಬೇಕು. ಸಾವಯವ ಪದ್ಧತಿ ಅನುಸರಿಸುವವರು ಎರೆಹುಳು ಗೊಬ್ಬರದೊಂದಿಗೆ ಟ್ರೈಕೋಡರ್ಮಾ, ಬೇವಿನ ಹಿಂಡಿ ಬೆರೆಸಿ ಕೊಟ್ಟಿಗೆ ಗೊಬ್ಬರ ನೀಡಿ ತಕ್ಷಣ ನೀರುಣಿಸಬೇಕು. ಬೋರ್ಡೊದ್ರಾವಣ ಲೇಪನ ಮಾಡಿ ಸಿ.ಓ.ಸಿ. ಒಂದು ಸಾರಿ ಸಿಂಪಡಿಸುವುದು ಸೂಕ್ತ.
    ನವೆಂಬರ್ ಎರಡನೇ ಪಾಕ್ಷಿಕದಿಂದ ಮಾವು ಸ್ಪೇಷಲ್ ಎನ್ನುವ ಫೋಷಕಾಂಶಕವನ್ನು 5 ಗ್ರಾಂ. 1 ಲೀ. ನೀರಿಗೆ ಬೆರೆಸಿ ಒಂದು ತಿಂಗಳ ಅಂತರದಲ್ಲಿ ಹೂ ಕಚ್ಚುವಾಗ, ಕಾಯಿಗಳು ಕಡಲೆ ಗಾತ್ರದಿದ್ದಾಗ ಮತ್ತು ಕಾಯಿಗಳ ಗಾತ್ರ ಹೆಚ್ಚಿಸಲು ಮೂರು ಸಾರಿ ಸಿಂಪಡಿಸಬೇಕು. ನವೆಂಬರ್‍ನಲ್ಲಿ ನೀರುಣಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.  ಹೂ ಕಚ್ಚಿಕೊಂಡಾಗ ಜಿಗಿಹುಳು ಮತ್ತು ಬೂದಿ ರೋಗದ ಹಾವಳಿ ಜಾಸ್ತಿಯಾಗಿರುತ್ತದೆ. ಹತೋಟಿಗಾಗಿ 1 ಗ್ರಾಂ ಟ್ರೈಯಾಡಿಮಾರ್ಫ ಜೊತೆಗೆ 0.30 ಮಿ.ಲೀ ಇಮಿಡಾಕ್ಲೋಪ್ರಿಡ್ 1 ಲೀ. ನೀರಿಗೆ ಬೆರೆಸಿ ಸಿಂಪರಿಸಬೇಕು. ಇದರ ಬದಲಾಗಿ ಸೇವಿನ್ 4ಗ್ರಾಂ. ಅಥವಾ 1 ಮಿ.ಲೀ ಲ್ಯಾಂಬ್ಡಾ ಅಥವಾ 0.30 ಗ್ರಾಂ.  ಥಯೋಮಿಥಾಕ್ಸಾಮ್ ಸಿಂಪರಿಸಬಹುದು. ಮೋಡ ಕವಿದ ವಾತಾವರಣವಿದ್ದರೆ ಚಿಬ್ಬು ರೋಗ ನಿಯಂತ್ರಿಸಲು 1 ಗ್ರಾಂ. ಥಯೋಫನೈಟ್ ಮಿಥೈಲ್ 1ಲೀ.  ನೀರಿಗೆ ಬೆರೆಸಿ ಸಿಂಪರಿಸಬೇಕು. ಅನಾವಶ್ಯಕವಾಗಿ ಸಿಂಪರಣೆ ಮಾಡಬಾರದು. ಬೇವಿನ ಎಣ್ಣೆ ಸಿಂಪರಿಸುವುದರಿಂದ ರಾಸಾಯನಿಕಗಳ ಬಳಕೆ ಕಮ್ಮಿ ಮಾಡಬಹುದು. ಯಾವುದೇ ಕಾರಣಕ್ಕೂ ಕೆಂಪು ತ್ರಿಕೋನ ಚಿನ್ಹೆ ಇರುವ ರಾಸಾಯನಿಕಗಳನ್ನು ತೋಟಗಾರಿಕೆ ಬೆಳೆಗಳಲ್ಲಿ ಬಳಸಬಾರದು ಮತ್ತು ಶಿಫಾರಸು ಮಾಡಿದ ರಾಸಾಯನಿಕಗಳನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಬಳಸುವುದರಿಂದ ಪರಿಸರ ಸಂರಕ್ಷಣೆ ಮಾಡುದಂತಾಗುತ್ತದೆ.
     ರೈತರು ವಿಶೇಷವಾಗಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ದಿ ಪಡಿಸಿದ  ಸೀಲರ್ ಮತ್ತು  ಹೀಲರ್ ಹಾಗೂ ಮಾವು ಸ್ಪೇಷಲ್‍ಗಳನ್ನು ತಜ್ಞರ ಸಲಹೆ ಪಡೆದು ಬಳಸಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಪ್ಪಳ ಮತ್ತು ಆಯಾ ತಾಲ್ಲೂಕು ತೋಟಗಾರಿಕೆ ಕಛೇರಿಗಳನ್ನು ಮತ್ತು  ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನ. 13 ರಿಂದ ಕಾರವಾರದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ

ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್‍ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾ ಕೂಟ ಗುಂಪು 02 ರಲ್ಲಿ (ಕಬಡ್ಡಿ,ಖೋಖೋ, ಟೇಬಲ್ ಟೆನ್ನಿಸ್)  ಕ್ರೀಡೆಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ನ. 13 ಮತ್ತು 14 ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ಗುಂಪು ಸ್ಪರ್ದೆಯಲ್ಲಿ  ಪ್ರಥಮ ಸ್ಥಾನ ಪqದುÀ ವಿಜೇತರಾದಂತಂಹ ಕ್ರೀಡಾ ಪಟುಗಳು ಮಾತ್ರ ಭಾಗವಹಿಸಲು ಅವಕಾಶ ವಿರುತ್ತದೆ.
     ಈ ಸ್ಪರ್ದೆಯಲ್ಲಿ ಭಾಗವಹಿಸುವ ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳು ನ. 13 ರಂದು ಬೆಳಿಗ್ಗೆ 11.00 ಗಂಟೆಯೊಳಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು. ಕ್ರೀಡಾ ಪಟುಗಳು ತಮ್ಮ ಜಿಲ್ಲಾ ತಂಡದ ಧ್ವಜದೊಂದಿಗೆ ಸಂಜೆ 4.30 ಘಂಟೆಗೆ ಪಥಸಂಚಲನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಮತ್ತು ಭಾಗವಹಿಸುವ ಕ್ರೀಡಾ ಪಟುಗಳು ನಿಗದಿತ ನಮೂನೆಯಲ್ಲಿ ತಮ್ಮ ಜನ್ಮ ದಿನಾಂಕ  ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಜಿಲ್ಲೆಯಿಂದ ಭಾಗವಹಿಸುವ ಕ್ರೀಡಾ ಪಟುಗಳಿಗೆ ಕಾರವಾರ ತಾಲ್ಲೂಕಿನಲ್ಲಿ ಸಾಮಾನ್ಯ ವಸತಿ ಮತ್ತು ಊಟೋಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.  ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಪಟುವು ಐ.ಡಿ ಕಾರ್ಡ ಮತ್ತು ತಮ್ಮ ಬ್ಯಾಂಕ ಖಾತೆಯ ನಂಬರ ಮತ್ತು ವಿಳಾಸದೊಂದಿಗೆ ಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಹೋಗಬೇಕು.
     ಜಿಲ್ಲೆಯಿಂದ ಭಾಗವಹಿಸುವ ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ಕೊಪ್ಪಳ ದಿಂದ ಕಾರವಾರ ತಾಲ್ಲೂಕಿನವರೆಗೆ ಹೋಗಿ ಬರುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು. ಈ ವೆಚ್ಚವನ್ನು ಕ್ರೀಡಾಕೂಟ ಮುಕ್ತಾಯವಾದ ದಿನದಂದು ಜಿಲ್ಲೆಯ ಮೇಲ್ಚಿಚಾರಕರಿಂದ ಪಾವತಿಸುವ ವ್ಯವಸ್ಥೆ ಮಾಡಲಾಗುವುದೆಂದು, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ :08539-201400 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ರಾಜ್ಯೋತ್ಸವ : ಕನ್ನಡ ಚಲನಚಿತ್ರ ಕಡ್ಡಾಯ ಪ್ರದರ್ಶನಕ್ಕೆ ಡಿ.ಸಿ. ಸೂಚನೆ

ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ನವೆಂಬರ್ ತಿಂಗಳಲ್ಲಿ ಒಂದು ವಾರ ಕಾಲ ಕಡ್ಡಾಯವಾಗಿ ಜಿಲ್ಲೆಯ ಎಲ್ಲ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಸೂಚನೆ ನೀಡಿದ್ದಾರೆ.
     ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳಲ್ಲಿ ನ. 01 ರಿಂದ 07 ರವರೆಗೆ ಜಿಲ್ಲೆಯ ಎಲ್ಲ ಚಿತ್ರಮಂದಿರಗಳು ಹಾಗೂ ವಿಡಿಯೋ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು.  ಅಲ್ಲದೆ ಸರ್ಕಾರದ ಆದೇಶದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿರುವ “ಬಾರಿಸು ಕನ್ನಡ ಡಿಂಡಿಮವ” ವಿಡಿಯೋ ಹಾಡನ್ನು ನವೆಂಬರ್ ತಿಂಗಳು ಪೂರ್ತಿ ಎಲ್ಲ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಪ್ರದರ್ಶನ ಮಾಡುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಚಿತ್ರಮಂದಿರಗಳ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಸೀಮೆಎಣ್ಣೆ ಸುರಿದು ಪತ್ನಿ ಕೊಲೆ : ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಪತ್ನಿಯ ಮೈಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಸಾಯಿಸಿದ ಆರೋಪಿ ಪತಿಗೆ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
     ಗಂಗಾವತಿಯ ವಿರುಪಾಪುರ ನಗರದ ಗಾಳೆಪ್ಪ ತಂದೆ ದೊಡ್ಡ ಗಾಳೆಪ್ಪ ಎಂಬಾತನೆ, ತನ್ನ ಪತ್ನಿ ಗಿರಿಜಮ್ಮ ಅವರ ಮೈಮೇಲೆ ಸೀಮೆಎಣ್ಣೆ ಸುರಿದು ಸಾಯಿಸಿ, ಇದೀಗ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ.  ಕಳೆದ 2014 ರ ಮಾರ್ಚ್ 18 ರಂದು ರಾತ್ರಿ ಮನೆಗೆ ಬಂದ ಗಾಳೆಪ್ಪ, ತನ್ನ ಪತ್ನಿ ಗಿರಿಜಮ್ಮಳೊಂದಿಗೆ ಜಗಳಕ್ಕಿಳಿದು, ನಂತರ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ.  ಸುಟ್ಟ ಗಾಯಗಳಿಂದ ಚೇತರಿಸಿಕೊಳ್ಳದೆ, ಗಿರಿಜಮ್ಮ ಒಂದು ತಿಂಗಳ ನಂತರ ಮೃತಪಟ್ಟಳು.  ಗಂಗಾವತಿ ನಗರ ಠಾಣೆಯ ಹೆಡ್‍ಕಾನ್ಸ್‍ಟೆಬಲ್ ಬಸವರಾಜ ಅವರು ಮೃತಳ ಮರಣಪೂರ್ವ ಹೇಳಿಕೆ ಪಡೆದಿದ್ದರು.  ನಗರಠಾಣೆ ಕಾಳಿಕೃಷ್ಣ ಅವರು ಪ್ರಕರಣದ ತನಿಖೆ ಕೈಗೊಂಡು, ಆರೋಪಿ ಗಾಳೆಪ್ಪನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ ಅವರು, ಆರೋಪಿಯ ಮೇಲಿನ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಭಾ.ದಂ.ಸಂ. ಕಲಂ 302 ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ.  ಭಾ.ದಂ.ಸಂ. ಕಲಂ 498(ಎ) ಅಪರಾಧಕ್ಕಾಗಿ 2 ವರ್ಷ ಸಾದಾ ಶಿಕ್ಷೆ ಹಾಗೂ 02 ಸಾವಿರ ರೂ.ಗಳ ದಂಡ ವಿಧಿಸಿದ್ದು, ಎರಡೂ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸುವಂತೆ ಆದೇಶಿಸಿದ್ದಾರೆ. ಸಾರ್ವಜನಿಕ ಅಭಿಯೋಜಕ ಎಂ.ಎ. ಪಾಟೀಲ ಅವರು ಸರ್ಕಾರದ ಪರವಾಗಿ ವಾದಿಸಿದ್ದರು.

Friday, 30 October 2015

ಆಹಾರ ಇಲಾಖೆ ಅಧಿಕಾರಿಗಳ ದಾಳಿ : 1. 15 ಕೋಟಿ ರೂ. ಮೌಲ್ಯದ ಅಕ್ರಮ ದಾಸ್ತಾನು ವಶ


ಕೊಪ್ಪಳ ಅ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಶುಕ್ರವಾರದಂದು ದಾಳಿ ನಡೆಸಿ, ಅನಧಿಕೃತವಾಗಿ ದಾಸ್ತಾನು ಇರಿಸಿದ್ದ ಸುಮಾರು 1. 15 ಕೋಟಿ ರೂ. ಮೌಲ್ಯದ 1970 ಕ್ವಿಂ- ಕಡಲೆಕಾಳು, 650 ಕ್ವಿಂ.-ಹುರಳಿ ಹಾಗೂ  426 ಕ್ವಿಂ. ಎಳ್ಳು ಜಪ್ತಿ ಮಾಡಿದ್ದಾರೆ.
     ನೆರೆಯ ರಾಜ್ಯದ ಸೊಲ್ಲಾಪುರದ ಕೆಲವು ಟ್ರೇಡರ್ಸ್‍ಗಳು ಹಾಗೂ ಬಾಗಲಕೋಟೆ ಜಿಲ್ಲೆಯವರೂ ಸಹ ಕುಷ್ಟಗಿಯಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಕಡಲೆಕಾಳು, ಹುರುಳಿ ಹಾಗೂ ಎಳ್ಳು ದಾಸ್ತಾನು ಇರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪಹಣಿ, ಉತಾರೆ, ಜಮೀನಿನ ದಾಖಲೆಗಳು ಅಥವಾ ಖರೀದಿ ಮಾಡಿದ ಬಗ್ಗೆ ರಸೀದಿಗಳನ್ನಾಗಲಿ ಸಲ್ಲಿಸಿಲ್ಲ.  ಅಲ್ಲದೆ ದಾಸ್ತಾನು ವಹಿವಾಟಿನ ಬಗ್ಗೆ ಸಕ್ಷಮ ಪ್ರಾಧಿಕಾರಿಗಳಿಂದ ಲೈಸೆನ್ಸ್ ಪಡೆದಿರುವ ಬಗ್ಗೆ ದಾಖಲೆ ಹಾಜರುಪಡಿಸಿಲ್ಲ.  ಸಂಗ್ರಹಣಾ ಶುಲ್ಕ ಪಾವತಿಸುವ ಆಧಾರದ ಮೇಲೆ ದಾಸ್ತಾನು ಮಾಡಿಕೊಂಡಿದ್ದಾಗಿ ಉಗ್ರಾಣ ವ್ಯವಸ್ಥಾಪಕರು ತಿಳಿಸಿದರು.  ದಾಸ್ತಾನಿನ ಬಗ್ಗೆ ಇನ್ನಷ್ಟು ಪರಿಶೀಲಿಸಲಾಗಿ, ನಾಲ್ವರು ದಾಸ್ತಾನು ಮಾಡಿರುವುದಕ್ಕೆ ಅಧಿಕೃತವಾಗಿ ಯಾವುದೇ ದಾಖಲೆಗಳು ಅಂದರೆ, ಖರೀದಿ ಮಾಡಿರುವುದಕ್ಕೆ ರಸೀದಿ, ರೈತರು ಬೆಳೆದಿದ್ದಲ್ಲಿ ಪಹಣಿ, ವ್ಯವಹಾರಕ್ಕೆ ಲೈಸೆನ್ಸ್ ದಾಖಲೆಗಳು ಯಾವುದೂ ಇರುವುದಿಲ್ಲ.  ದಾಸ್ತಾನುದಾರರು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅನಧಿಕೃತವಾಗಿ ದಾಸ್ತಾನು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ, ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆಯನ್ವಯ  1970 ಕ್ವಿಂ- ಕಡಲೆಕಾಳು, 650 ಕ್ವಿಂ.-ಹುರಳಿ ಹಾಗೂ  426 ಕ್ವಿಂ. ಎಳ್ಳು ಜಪ್ತಿ ಮಾಡಲಾಗಿದ್ದು, ಸುಮಾರು 1. 15 ಕೋಟಿ ರೂ. ಗಳ ಮೌಲ್ಯದ ಅಂದಾಜು ಮಾಡಲಾಗಿದೆ.  ಜಪ್ತಿ ಮಾಡಿಕೊಂಡಿರುವ ಕಡಲೆಕಾಳು, ಹುರುಳಿ ಹಾಗೂ ಎಳ್ಳಿನ ಚೀಲಗಳನ್ನು ಸದ್ಯ ಮುಂದಿನ ಆದೇಶದವರೆಗೆ ಸುರಕ್ಷಿತವಾಗಿ ಇರಿಸಿಕೊಳ್ಳುವಂತೆ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.  ದಾಳಿ ಸಂದರ್ಭದಲ್ಲಿ ಕುಷ್ಟಗಿ ಆಹಾರ ನಿರೀಕ್ಷಕ ಶರಣಪ್ಪ ಅವರು ಉಪಸ್ಥಿತರಿದ್ದರು ಎಂದು ಆಹಾರ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು ತಿಳಿಸಿದ್ದಾರೆ.

ವರ್ಷಾಂತ್ಯದೊಳಗೆ ಕೇಬಲ್ ಟಿ.ವಿ ಡಿಜಿಟೈಜೇಶನ್ ಕಡ್ಡಾಯ : ಡಿ.ಸಿ. ಪ್ರವೀಣಕುಮಾರ್ ಸೂಚನೆ


ಕೊಪ್ಪಳ ಅ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸದ್ಯ ಅನಲಾಗ್ ಮೋಡ್‍ನಲ್ಲಿರುವ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು 2015 ರ ಡಿಸೆಂಬರ್ 31 ರೊಳಗಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸುವ ಮೂಲಕ ಡಿಜಿಟೈಜೇಶನ್‍ಗೊಳಿಸುವಂತೆ ಪ್ರಭಾರಿ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಕೇಬಲ್ ಆಪರೇಟರ್ಸ್‍ಗಳಿಗೆ ಸೂಚನೆ ನೀಡಿದರು.
     ಕೇಬಲ್ ಟಿ.ವಿ. ಡಿಜಿಟೈಜೇಶನ್ ಸಂಬಂಧ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಕೇಬಲ್ ಆಪರೇಟರ್ಸ್‍ಗಳೊಂದಿಗಿನ ಸಭೆಯಲ್ಲಿ ಈ ಸೂಚನೆ ನೀಡಿದರು.     ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ಡಿಜಿಟೈಜೇಶನ್ ಗೊಳಿಸುವಂತೆ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದೆ.  ಇದರ ಅನ್ವಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಕೇಬಲ್ ಟಿ.ವಿ. ವೀಕ್ಷಕರು ಸದ್ಯ ಅನಲಾಗ್ ಮೋಡ್‍ನಲ್ಲಿರುವ ಪ್ರಸಾರ ವ್ಯವಸ್ಥೆಯನ್ನು 2015 ರ ಡಿಸೆಂಬರ್ 31 ರ ಒಳಗಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸಿಕೊಳ್ಳುವ ಮೂಲಕ ಡಿಜಿಟೈಜೇಶನ್‍ಗೆ ಪರಿವರ್ತನೆ ಮಾಡಿಕೊಳ್ಳಬೇಕು.  ಅದೇ ರೀತಿ ಗ್ರಾಮೀಣ ಪ್ರದೇಶದ ಕೇಬಲ್ ಟಿ.ವಿ. ವೀಕ್ಷಕರು 2016 ರ ಡಿಸೆಂಬರ್ 31 ರ ಒಳಗಾಗಿ ಡಿಜಿಟೈಜೇಶನ್‍ಗೊಳಿಸಬೇಕು.  ಈ ವ್ಯವಸ್ಥೆಯನ್ನು ಸಂಬಂಧಪಟ್ಟ ಕೇಬಲ್ ಆಪರೇಟರ್ಸ್‍ಗಳು ಹಾಗೂ ಮಲ್ಟಿ ಸಿಸ್ಟಂ ಆಪರೇಟರ್ಸ್‍ಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಅಳವಡಿಸಿಕೊಳ್ಳಬೇಕು.  ಕೇಬಲ್ ಗ್ರಾಹಕರಿಗೆ ಈಗಿನಿಂದಲೇ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಾರಂಭಿಸಬೇಕು.   ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲು ಕಾಲಾವಕಾಶ ಕಡಿಮೆ ಇದೆ.  ಸೆಟ್‍ಟಾಪ್ ಬಾಕ್ಸ್ ಅಳವಡಿಕೆಯಿಂದ ಕೇಬಲ್ ಟಿ.ವಿ. ಗ್ರಾಹಕರಿಗೆ ಆಗುವ ಅನುಕೂಲಗಳ ಬಗ್ಗೆ ತಿಳುವಳಿಕೆ ಮೂಡಿಸಿ, ಅವರ ಮನವೊಲಿಸುವ ಕಾರ್ಯವನ್ನು ಕೈಗೊಳ್ಳಬೇಕು.  ಡಿಸೆಂಬರ್ 31 ರ ನಂತರ ಅನಲಾಗ್ ವ್ಯವಸ್ಥೆಯಲ್ಲಿ ಕೇಬಲ್ ಟಿ.ವಿ. ಪ್ರಸಾರ ಕೈಗೊಳ್ಳುವ ಕೇಬಲ್ ಸಂಸ್ಥೆಗಳ ಉಪಕರಣವನ್ನು ಜಪ್ತಿ ಮಾಡಲಾಗುವುದು.   ಕೇಬಲ್ ಸೇವೆ ಸ್ಥಗಿತಗೊಂಡಲ್ಲಿ, ಕೇಬಲ್ ಆಪರೇಟರ್ಸ್ ಮತ್ತು ಸಂಸ್ಥೆಗಳು ಗ್ರಾಹಕರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ.   ಇದಕ್ಕೆ ಅವಕಾಶ ನೀಡದಂತೆ, ಕೇಬಲ್ ಆಪರೇಟರ್ಸ್‍ಗಳು ಡಿಜಿಟೈಜೇಶನ್ ಅಳವಡಿಕೆಗೆ ಈಗಿನಿಂದಲೇ ಕಾರ್ಯತತ್ಪರರಾಗಬೇಕು.  ಕೇಬಲ್ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವುದೂ ಸಹ ಆಪರೇಟರ್ಸ್‍ಗಳ ಜವಾಬ್ದಾರಿಯಾಗಿದ್ದು, ಉತ್ತಮ ಗುಣಮಟ್ಟ ಸಿಗದಿದ್ದಲ್ಲಿ, ಚಂದಾದಾರರೂ ಸಹ ಡಿಟಿಹೆಚ್ ಸೇವೆಯತ್ತ ಮುಖ ಮಾಡುವ ಸಾಧ್ಯತೆಗಳಿರುತ್ತವೆ.  ಸೆಟ್‍ಟಾಪ್ ಬಾಕ್ಸ್ ಅಳವಡಿಕೆಗೆ ದರ ನಿಗದಿ ಮಾಡುವಾಗ, ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ಏಕರೂಪದ ದರ ನಿಗದಿ ಮಾಡಿಕೊಳ್ಳುವುದು ಸೂಕ್ತ.  ಮಕ್ಕಳ ಸಹಾಯವಾಣಿ 1098 ಕುರಿತು ಕೇಬಲ್ ಜಾಲದಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
     ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲು ಕೇವಲ ಎರಡು ತಿಂಗಳ ಕಾಲಾವಕಾಶ ಮಾತ್ರ ಇರುವುದರಿಂದ ಅವಧಿ ವಿಸ್ತರಣೆಗೆ ಅವಕಾಶ ನೀಡಬೇಕು ಎಂದು ಕೇಬಲ್ ಆಪರೇಟರ್ಸ್‍ಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೇಬಲ್ ಟಿವಿ ಡಿಜಿಟೈಜೇಶನ್ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಕಾಲಮಿತಿ ನಿಗದಿಪಡಿಸಿದ್ದು, ಅವಧಿ ವಿಸ್ತರಿಸುವ ಅಧಿಕಾರ ಜಿಲ್ಲಾಡಳಿತಕ್ಕಿಲ್ಲ.  ಕೇಬಲ್ ಆಪರೇಟರ್ಸ್‍ಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ತಮ್ಮ ಸೇವೆಯನ್ನು ತ್ವರಿತವಾಗಿ ಮತ್ತು ಸಮರ್ಪಕವಾಗಿ ವಿಸ್ತರಿಸಿಕೊಳ್ಳಲು, ಆಪರೇಟರ್ಸ್‍ಗಳಿಗೆ ಅನಗತ್ಯ ತೊಂದರೆ ನೀಡದೆ, ಅಗತ್ಯ ಸಹಕಾರವನ್ನು ನೀಡುವಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಸರ್ಕಾರಿ ವಾಹಿನಿಗಳ ಪ್ರಸಾರ ಕಡ್ಡಾಯ : ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ರೆಗ್ಯುಲೇಷನ್ ಕಾಯ್ದೆ ಅನ್ವಯ ಕೇಬಲ್ ಟಿ.ವಿ. ಆಪರೇಟರ್‍ಗಳು ಕೆಲವು ವಾಹಿನಿಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕಿರುತ್ತದೆ.  ಅದರಂತೆ ದೂರದರ್ಶನ, ಕಿಸಾನ್ ವಾಹಿನಿ, ಲೋಕಸಭಾ ಮತ್ತು ರಾಜ್ಯಸಭಾ ವಾಹನಿಗಳನ್ನು ಪ್ರೈಮ್‍ಬ್ಯಾಂಡ್‍ನಲ್ಲಿ ಕಡ್ಡಾಯವಾಗಿ ಪ್ರಸಾರ ಮಾಡಬೇಕು.  ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. 
     ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಜಿಲ್ಲೆಯ ಎಲ್ಲ ಕೇಬಲ್ ಆಪರೇಟರ್ಸ್‍ಗಳು, ಮಲ್ಟಿ ಸಿಸ್ಟಂ ಆಪರೇಟರ್ಸ್‍ಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯ 66 ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಕೊಪ್ಪಳ ಅ. 30 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್‍ಗಾಂಧಿ ಖೇಲ್‍ಅಭಿಯಾನ್(ಗ್ರಾಮೀಣ) ಕ್ರೀಡಾಕೂಟದ ಗುಂಪು-1 ರಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ಕೊಪ್ಪಳ ಜಿಲ್ಲೆಯಿಂದ 66 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ರಾಜೀವ್‍ಗಾಂಧಿ ಖೇಲ್‍ಅಭಿಯಾನ್ (ಗ್ರಾಮೀಣ) ಕ್ರೀಡಾಕೂಟಗಳಲ್ಲಿ ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ನಾಲ್ಕು ತಾಲೂಕಿನ ಕ್ರೀಡಾಪಟುಗಳು ಉಡುಪಿಯಲ್ಲಿ ಜರುಗುವ ಈ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಒಟ್ಟು 4 ಗುಂಪುಗಳಲ್ಲಿ ಜರುಗುವ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ 1ನೇ ಗುಂಪು ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಇಲಾಖೆಯಿಂದ ಟ್ರ್ಯಾಕ್‍ಸ್ಯೂಟ್‍ನ್ನು ವಿತರಿಸಲಾಗಿದೆ.  ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿಯವರು ಕ್ರೀಡಾಪಟುಗಳಿಗೆ ಟ್ರ್ಯಾಕ್‍ಸ್ಯೂಟ್ ವಿತರಿಸಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಶಾರದಾ ನಿಂಬರಗಿ, ದ್ವಿ.ದ.ಸ. ಕೆ.ಎಂ.ಪಾಟೀಲ್ ಸೇರಿದಂತೆ ಕಛೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಕಡಲೆ ಬೆಳೆಯಲ್ಲಿ ಹಸಿರು ಕೀಡೆಬಾಧೆ : ಹತೋಟಿಗೆ ಸಲಹೆಗಳು


ಕೊಪ್ಪಳ ಅ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕಡಲೆ ಮತ್ತು ಇತರೆ ಹಿಂಗಾರು ಬೆಳೆಗಳಿಗೆ ಹಾಗೂ ಮೊದಲು ಬಿತ್ತನೆ ಮಾಡಿದ ತೊಗರಿ ಬೆಳೆಯಲ್ಲಿ ಬಾಧಿಸುವ ಕೀಟ ಮತ್ತು ರೋಗಗಳ ನಿರ್ವಹಣೆಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ಕೊಪ್ಪಳದ ಸಹಯೋಗದಲ್ಲಿ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು, ಕೀಟ ಬಾಧೆ ಹತೋಟಿಗೆ ರೈತರಿಗೆ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು ಹೇಳಿದ್ದಾರೆ.
    ಇದಕ್ಕಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಗಂಗಾವತಿ, ಕುಷ್ಟಗಿ, ಕೊಪ್ಪಳ ಮತ್ತು ಯಲಬುರ್ಗಾ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳ ತಂಡವನ್ನು ರಚಿಸಿದ್ದು, ಜಂಟಿ ಸಮೀಕ್ಷೆಗೆ ಜಿಲ್ಲಾ ಜಂಟಿ ನಿರ್ದೇಶಕ ಡಾ. ಎ.ರಾಮದಾಸ್ ರವರು ಗುರುವಾರದಂದು ಚಾಲನೆ ನೀಡಿದರು.  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ, ಕನಕಗಿರಿ, ಹುಲಿಹೈದರ್, ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ಹನುಮನಾಳ, ದೋಟಿಹಾಳ, ಮುದೆನೂರು, ತಾವರಗೇರಾ, ಯಲಬುರ್ಗಾ ತಾಲ್ಲೂಕಿನ ಮಂಗಳೂರು, ಯಲಬುರ್ಗಾ, ಕುಕನೂರು, ತಳಕಲ್ ಹಾಗೂ ಕೊಪ್ಪಳ ತಾಲ್ಲೂಕಿನ ಅಳವಂಡಿ, ಕವಲೂರು ಭಾಗಗಳಲ್ಲಿ ಕಡಲೆ ಬಿತ್ತನೆಯಾಗಿದ್ದು ಕಡಲೆ ಬೆಳೆಯು ಸುಮಾರು ಹತ್ತು ದಿನಗಳಿಂದ ಒಂದು ತಿಂಗಳ ಬೆಳೆ ಇದ್ದು ಈ ಬೆಳೆಗೆ ಎಲೆ ತಿನ್ನುವ ಹಸಿರು ಕೀಡೆಗಳ ಬಾಧೆ ಆರ್ಥಿಕ ನಷ್ಟವನ್ನುಂಟುಮಾಡುವ ಹಂತವನ್ನು ದಾಟಿರುವುದು ಕಂಡುಬಂದಿದೆ ಹಾಗೂ ಈ ಕೀಡೆ ಮೊದಲನೇ ಹಂತದಲ್ಲಿದ್ದು ಈ ಕೂಡಲೇ ರೈತರು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯವಾಗಿರುತ್ತದೆ.  ಇಲ್ಲದಿದ್ದ ಪಕ್ಷದಲ್ಲಿ ಸಾಕಷ್ಟು ಬೆಳೆ ನಷ್ಟವಾಗುವ ಸಂಭವವಿರುತ್ತದೆ.
    ಈಗಾಗಲೇ ತೊಗರಿ ಹೂವಾಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿದ್ದು, ಹಸಿರು ಕಾಯಿ ಕೊರಕದ ಬಾಧೆ ಇಲ್ಲಿಯೂ ಕಂಡುಬಂದಿದೆ.  ರೈತರು ಶೀಘ್ರ ಹತೋಟಿಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.
ಹಸಿರು ಕೀಡೆಯ ನಿರ್ವಹಣಾ ಕ್ರಮಗಳು : ಹಕ್ಕಿಗಳು ಕೀಡೆಗಳನ್ನು ತಿನ್ನಲು ಆಶ್ರಯಕ್ಕೆ ಎತ್ತರವಿರುವ ಮರದ ಟೊಂಗೆಗಳನ್ನು ಅಲ್ಲಲ್ಲಿ ನೆಡಬೇಕು.  ಮೊದಲನೆಯ ಸಿಂಪರಣೆಯಾಗಿ ತತ್ತಿ ಹಾಗೂ ಮೊದಲ ಹಂತದ ಕೀಡೆಗಳನ್ನು ನಾಶಪಡಿಸಲು 0.6 ಗ್ರಾಂ ಮಿಥೋಮಿಲ್ 40 ಎಸ್.ಪಿ ಅಥವಾ 0.6 ಗ್ರಾಂ ಥೈಯೋಡಿಕಾರ್ಬ್ 75 ಡಬ್ಲ್ಯೂ ಪಿ ಅಥವಾ 2 ಮಿ.ಲೀ ಪ್ರೋಫೆನೋಫಾಸ್ 50 ಇ.ಸಿ ಪ್ರತೀ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಕೀಡೆಗಳು ಕಂಡು ಬಂದ ಬೆಳೆಗೆ  ಪ್ಲೂಬೆಂಡಿಯೊಮೈಡ್ 480 ಎಸ್.ಸಿ 0.075 ಮಿ.ಲೀ, ರೈನಾಕ್ಷಿಪೈರ್ 0.15 ಮಿ.ಲೀ, 0.3 ಮಿ.ಲೀ ಇಂಡಾಕ್ಸಕಾರ್ಬ್ 15 ಎಸ್.ಸಿ ಅಥವಾ 0.1 ಮಿ.ಲೀ ಸ್ಪೈನೋಸ್ಯಾದ್, 2.5 ಮಿ.ಲೀ ಕ್ಲೋರ್‍ಪೈರಿಫಾಸ್ 20 ಇ.ಸಿ ಅಥವಾ 2 ಮಿ.ಲೀ ಕ್ವಿನಾಲ್‍ಫಾಸ್ 25 ಇ.ಸಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  1 ಕೆ.ಜಿ ಬೆಳ್ಳುಳ್ಳಿಯನ್ನು 100 ಮಿ.ಲೀ ಸೀಮೆ ಎಣ್ಣೆಯಲ್ಲಿ ನೆನೆಸಿ ಮಿಕ್ಸಿಯಲ್ಲಿ ರುಬ್ಬಿ ಮೂರು ಲೀಟರ್ ದ್ರಾವಣ ತಯಾರಿಸಿ ಎರಡು ದ್ರಾವಣಗಳನ್ನು ನಾಲ್ಕು ನೂರು ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಸಿಂಪರಣೆಗೆ ಉಪಯೋಗಿಸಿ. ಶೇ.5ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು. ಈ ದ್ರಾವಣದ ಜೊತೆಗೆ 100 ಗ್ರಾಂ ಸಾಬೂನಿನ ಪುಡಿಯನ್ನು 300 ರಿಂದ 400 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಕಾಳು ಕಟ್ಟುವ ಹಂತದಲ್ಲಿ ಪ್ರತೀ ಎಕರೆಗೆ 10 ಸೇರು ಚುರುಮುರಿ (ಮಂಡಕ್ಕಿ/ಮಂಡಾಳು) ಹೊಲದ ತುಂಬೆಲ್ಲ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಡೆ ತಿನ್ನಲು ಪ್ರೋತ್ಸಾಹಿಸಿದಂತಾಗುತ್ತದೆ.  ಸಿಡಿ / ನೆಟೆ ರೋಗ ಪೀಡಿತ ಸಸ್ಯಗಳನ್ನು ಕಿತ್ತು ನಾಶಪಡಿಸಬೇಕು.
    ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಭಾಗಿತ್ವದಲ್ಲಿ ಸಂಬಂಧಪಟ್ಟ ಗ್ರಾಮಗಳಲ್ಲಿ ರೈತ ಸಂಪರ್ಕಕೇಂದ್ರದ ಮೂಲಕ ಕೀಡೆ ನಿರ್ವಹಣೆ ಎಚ್ಚರಿಕೆ ಅಭಿಯಾನವನ್ನು ಪ್ರಾರಂಭಿಸಿದ್ದು ಹಾಗೂ ಈ ಕೀಡೆಯ ಹತೋಟಿಗೆ ಬೇಕಾದಂತಹ ಕೀಟನಾಶಕಗಳನ್ನು ರೈತ ಸಂಪರ್ಕಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ರಿಯಾಯತಿ ದರದಲ್ಲಿ ಲಭ್ಯವಿರುತ್ತದೆ. ರೈತರು ಇದರ ಉಪಯೋಗ ಪಡೆಯಲು ಮನವಿ ಮಾಡಿಕೊಳ್ಳಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಎಲ್ಲಾ ರೈತ ಸಂಪರ್ಕಕೇಂದ್ರಗಳು, ಸಹಾಯಕ ಕೃಷಿ ನಿರ್ದೇಶಕರವರ ಕಛೇರಿ ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತಜ್ಞರನ್ನು ಸಂಪರ್ಕಿಸಬಹುದು ಎಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಹಾಗೂ ಜಂಟಿಕೃಷಿ ನಿರ್ದೇಶಕ ಡಾ. ಎ. ರಾಮದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಳೇ ಹೋಗಬೇಡಿ. ಉದ್ಯೋಗ ಖಾತ್ರಿಯಡಿ ಕೆಲಸ ಪಡೆಯಿರಿ ಕೃಷ್ಣ ಉದಪುಡಿ ಮನವಿ

ಕೊಪ್ಪಳ, ಅ.29 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಗ್ರಾಮಸ್ಥರು ಉದ್ಯೋಗಕ್ಕಾಗಿ ಗುಳೆ ಹೋಗಬೇಡಿ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸ್ಥಳೀಯವಾಗಿ ಕೆಲಸ ಮಾಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
     ಪ್ರಸಕ್ತ ಸಾಲಿನ ಪ್ರಾರಂಭದಲ್ಲಿ ಮಳೆಯ ಅಭಾವ ಕಂಡು ಬಂದಿರುವುದರಿಂದ ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಲಸ ಅರಸಿ ಬೇರೆ ರಾಜ್ಯ ಅಥವಾ ಜಿಲ್ಲೆಗಳಿಗೆ ಗುಳೆ ಹೊರಡುವ ಗ್ರಾಮೀಣ ಭಾಗದ ಕೂಲಿಕಾರರು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಗುಳೆ ಹೋಗದೇ, ತಮ್ಮ ಊರಿನಲ್ಲಿಯೇ ಸ್ವ ಇಚ್ಛೆಯಿಂದ ಕೂಲಿ ಬೇಡಿಕೆ ಸಲ್ಲಿಸಿದಲ್ಲಿ ತುರ್ತಾಗಿ ಸಮುದಾಯಾಧಾರಿತ ಕಾಮಗಾರಿಗಳು ಅಲ್ಲದೆ, ನಮ್ಮ ಹೊಲ-ನಮ್ಮ ದಾರಿ ಇತ್ಯಾದಿ  ಕಾಮಗಾರಿಗಳನ್ನು ಹಾಗೂ ವೈಯಕ್ತಿಕ ಕಾಮಗಾರಿಗಳಾದ ಕುರಿ ಅಥವಾ ದನದ ದೊಡ್ಡಿ ಕಾಮಗಾರಿಗಳು, ಜೊತೆಗೆ ತಮ್ಮ ಜಮೀನಿನಲ್ಲಿರುವ ತೋಟಗಾರಿಕೆ ಕಾಮಗಾರಿಗಳಾದ ಗಿಡ, ತೋಟಗಾರಿಕೆ, ಭೂಮಿಯ ಫಲವತ್ತತೆ, ಕೆರೆ, ಕುಂಟೆ ನಿರ್ಮಿಸಿಕೊಳ್ಳಲು ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನ ಪೂರ್ತಿ ಕೆಲಸ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ.
     ಜಿಲ್ಲೆಯ ಗ್ರಾಮೀಣ ಭಾಗದ ಕೂಲಿಕಾರರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗವನ್ನು ನೀಡಿ, ಗುಳೆ ಹೋಗುವುದನ್ನು ತಡೆಗಟ್ಟಿ, ಗ್ರಾಮಸ್ಥರಲ್ಲಿ ಗುಳೇ ಹೋಗದಂತೆ ನೈತಿಕ ಮನೋಸ್ಥೈರ್ಯ ತುಂಬಲು ಸಿದ್ಧರಾಗಿರುವಂತೆ ಹಾಗೂ ಸ್ವ ಇಚ್ಛೆಯಿಂದ ಅರ್ಜಿ ಸಲ್ಲಿಸಿದ ಎಲ್ಲಾ ಕೂಲಿಕಾರರಿಗೆ ತುರ್ತಾಗಿ ಕೆಲಸ ನೀಡುವಂತೆ, ದೃತಿಗೆಡದೆ ಪೂರ್ವಾಭಾವಿ ಸಿದ್ಧತೆ ನಡೆಸಿ, ತಕ್ಷಣದಿಂದಲೇ ಕ್ರಮ ಕೈಗೊಳ್ಳುವಂತೆ ಪಿಡಿಓಗಳಿಗೆ ಈಗಾಗಲೆ ಸೂಚನೆ ನೀಡಲಾಗಿದೆ. ಎಲ್ಲ ಗ್ರಾಮೀಣರಿಗೂ ಸುಲಭವಾಗಿ ಕೆಲಸ ಸಿಗುವಂತೆ ಮಾಡಲು ಗ್ರಾಮೀಣ ಮಟ್ಟದಲ್ಲಿ ಆಂದೋಲನ ರೂಪದಲ್ಲಿ ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.  ಎಲ್ಲಾ ಸಾರ್ವನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ವೈಯಕ್ತಿಕ ಶೌಚಾಲಯದ ಸುತ್ತ ತೆಂಗಿನ ಮರ, ನಿಂಬೆ ಗಿಡ ಇತ್ಯಾದಿ ಗಿಡಗಳನ್ನು ನೆಟ್ಟು ಒಳ್ಳೆಯ ಪರಿಸರವನ್ನು ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
     ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೆಲಸ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದರೆ, ಕೂಡಲೇ ಜಿಲ್ಲಾ ಕಛೇರಿಯ ಸಹಾಯವಾಣಿ ದೂರವಾಣಿ ಸಂಖ್ಯೆ : 08539-220174 ನ್ನು ಹಾಗೂ ಮೊಬೈಲ್ : 9482030938 ನ್ನು ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಕೊಪ್ಪಳ ಇವರ ದೂರವಾಣಿ ಸಂಖ್ಯೆ : 9480871000 ಗೆ ಮೆಸೇಜ್ ಮೂಲಕ ತಮ್ಮ ಗ್ರಾಮದ ಕೆಲಸದ ಬಗ್ಗೆ ನಮೂದಿಸಿ, ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲಬುರ್ಗಾ : ಆಸ್ತಿ ತೆರಿಗೆ ಪಾವತಿ ಚಲನ್ ಸಲ್ಲಿಸಲು ಸೂಚನೆ

ಕೊಪ್ಪಳ, ಅ.29 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ವ್ಯಾಪ್ತಿಯಲ್ಲಿರುವ ಆಸ್ತಿ ತೆರಿಗೆದಾರರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಮಾಡಿದ ಚಲನ್ ಪ್ರತಿಗಳನ್ನು ಅ.31 ರೊಳಗಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
     ಸರ್ಕಾರದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಭೌಗೋಳಿಕ ಮಾಹಿತಿ ಆಧಾರಿತ ಆಸ್ತಿ ತೆರಿಗೆ ಪದ್ಧತಿ ಅಳವಡಿಸಲಾಗಿರುವುದರಿಂದ, ಆಸ್ತಿಗಳ ಮಾಲೀಕರು 2002-03 ರಿಂದ ಪ್ರಸಕ್ತ ಸಾಲಿನವರೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿಸಿರುವ ವಿವರಣಾ ಪಟ್ಟಿ ಹಾಗೂ ಚಲನ್ ಪ್ರತಿಗಳನ್ನು ಅ.31 ರೊಳಗಾಗಿ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸಿ, ಸ್ವೀಕೃತಿ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ಕಂದಾಯ ವಿಭಾಗವನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಕಾರ್ಯಾಲಯದ ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ.

Thursday, 29 October 2015

ಕೊಪ್ಪಳ ಜಿಲ್ಲೆಯ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಳ್ಳಾರಿಗರ ಪ್ರಶಂಸೆ


ಕೊಪ್ಪಳ ಅ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿಯು, ತಾಲೂಕಿನ ಹೊಸಳ್ಳಿ ಗ್ರಾಮದ ಬಳಿ ಸ್ಥಾಪಿಸಿರುವ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕವು ಕೊಪ್ಪಳ ಜಿಲ್ಲೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಹಾಗೂ ಜಿ.ಪಂ. ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.
     ಕೊಪ್ಪಳ ಜಿಲ್ಲೆಯಲ್ಲಿನ ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ನಿರ್ಮಾಣ ಹಾಗೂ ತಿಪ್ಪೆಗುಂಡಿಗಳನ್ನು ಜೈವಿಕ ಗೊಬ್ಬರವಾಗಿಸುವ ವ್ಯವಸ್ಥೆಯ ಯಶಸ್ವಿಯ ಬಗ್ಗೆ ಜಿಲ್ಲೆಯ ಗ್ರಾಮಗಳಿಗೆ ಅಧ್ಯಯನ ಭೇಟಿಗಾಗಿ   ಬಳ್ಳಾರಿ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಗುರುವಾರದಂದು ತಾಲೂಕಿನ ಹೊಸಳ್ಳಿ ಗ್ರಾಮದ ಬಳಿ ಸ್ಥಾಪಿಸಿರುವ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು, ಬಳ್ಳಾರಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ, ಹೊಸಳ್ಳಿ ಗ್ರಾಮದ ಬಳಿಯ ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಕಸ ವಿಲೇವಾರಿ, ವಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.  ಜಿಲ್ಲೆಯಲ್ಲಿ ಈಗಾಗಲೆ ಸುಮಾರು 01 ಲಕ್ಷಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಲಾಗಿದ್ದು, ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯನ್ನು ಹೊಂದಲಾಗಿದೆ.  ಗ್ರಾಮೀಣ ಸರ್ಕಾರವೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯತಿಗಳು, ಸ್ವಚ್ಛತೆಗೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ.  ಬಂಡಿಹರ್ಲಾಪುರ ಜಿ.ಪಂ. ವ್ಯಾಪ್ತಿಯ ಹುಲಿಗಿ, ಶಿವಪುರ, ಬಂಡಿಹರ್ಲಾಪುರ, ಬೂದಗುಂಪಾ, ಗುಳದಳ್ಳಿ ಹಾಗೂ ಅಗಳಕೇರಾ ಗ್ರಾಮಗಳನ್ನು ಒಳಗೊಂಡಂತೆ ಬಹುಗ್ರಾಮ ಕಸ ವಿಲೇವಾರಿ ಘಟಕವನ್ನು ಹೊಸಳ್ಳಿ ಗ್ರಾಮದ ಬಳಿ ಸ್ಥಾಪಿಸಲಾಗಿದ್ದು, ಈ ಘಟಕವನ್ನು ಮಾದರಿಯನ್ನಾಗಿಟ್ಟುಕೊಂಡು, ಜಿಲ್ಲೆಯ ಇತರೆ ದೊಡ್ಡ ದೊಡ್ಡ ಗ್ರಾಮ ಪಂಚಾಯತಿಗಳಿಗೂ ಇದೇ ವಿಧಾನ ಅನುಸರಿಸಲಾಗುವುದು ಎಂದರು.
     ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು, ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ, ಕಸದ ವಿಷಯವನ್ನು ಹಗುರವಾಗಿ ತೆಗೆದುಕೊಂಡಿದ್ದರಿಂದಲೇ ಬೃಹತ್ ನಗರ ಮತ್ತು ಪಟ್ಟಣಗಳಲ್ಲಿ ಇದರ ಸಮಸ್ಯೆ ತೀವ್ರ ಸ್ವರೂಪ ತಾಳಿದೆ.  ನಮ್ಮ ಮನೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುವ ಕಾಳಜಿ ಎಲ್ಲರಲ್ಲೂ ಇದ್ದಂತೆ, ನಮ್ಮ ಗ್ರಾಮ ಸ್ವಚ್ಛವಾಗಿರಬೇಕು ಎನ್ನುವ ಕಾಳಜಿ ಎಲ್ಲರಲ್ಲೂ ಮೂಡಬೇಕು.  ಹೀಗಾದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಮತ್ತು ಸ್ವಚ್ಛ ಗ್ರಾಮ ನಿರ್ಮಾಣವಾಗಲು ಸಾಧ್ಯ.  ಕಸ ವಿಲೇವಾರಿ ಘಟಕದಲ್ಲಿ ಸದ್ಯ, ಪ್ಲಾಸ್ಟಿಕ್ ತ್ಯಾಜ್ಯ, ಇತರೆ ಘನ ತ್ಯಾಜ್ಯ ಸೇರಿದಂತೆ ಎಲ್ಲ ಬಗೆಯ ತ್ಯಾಜ್ಯವನ್ನೂ ಸಹ ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ.  ಇದಕ್ಕೆ ಅಗತ್ಯವಿರುವ ವಾಹನ, ಸೆಗ್ರಿಗೇಟರ್ ಯಂತ್ರ, ಎರೆಹುಳು ಗೊಬ್ಬರದ ಘಟಕಗಳು, ಶೆಡ್ ಸೇರಿದಂತೆ ಎಲ್ಲವನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಗಿದೆ.  ಆರೂ ಗ್ರಾ.ಪಂ. ಗಳ ಅಧ್ಯಕ್ಷರು, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರುಗಳನ್ನು ಒಳಗೊಂಡ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ.  ಅಲ್ಲದೆ ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿಯೂ ಸ್ವಚ್ಛತಾ ಸಮಿತಿಯನ್ನು ರಚಿಸಿ, ಎಲ್ಲರಿಗೂ ಜವಾಬ್ದಾರಿಯನ್ನು ವಹಿಸಲಾಗಿದೆ.  ಗ್ರಾಮಸ್ಥರೂ ಸಹ ಇದಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಘಟಕದಲ್ಲಿ ಪ್ರತಿ ದಿನ ಸುಮಾರು 18 ಟನ್‍ನಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ.  ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕವು ಲಾಭದಾಯಕ ಘಟಕವಾಗುವ ವಿಶ್ವಾಸವಿದೆ.  ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಸ್ವಚ್ಛ ಗ್ರಾಮ ಹಾಗೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ನಿರ್ಮಾಣ ಕಷ್ಟ ಸಾಧ್ಯವೇನಲ್ಲ ಎಂದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ರಾಸಾಯನಿಕ ಗೊಬ್ಬರವು ಭೂಮಿಗೆ ವಿಷಕಾರಿಯಾಗುತ್ತಿದೆ ಎಂಬುದರ ಅರಿವು ರೈತರಲ್ಲಿ ಮೂಡುತ್ತಿದೆ.  ರೈತರೂ ಸಹ ಸಾವಯವ ಗೊಬ್ಬರ ಮತ್ತು ಜೈವಿಕ ಗೊಬ್ಬರಕ್ಕೆ ಆದ್ಯತೆ ನೀಡಲು ಆರಂಭಿಸಿದ್ದಾರೆ.  ಮುಂದಿನ ದಿನಗಳಲ್ಲಿ ಕಸದಿಂದ ಉತ್ಪಾದಿಸಲಾಗುವ ಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಬರಲಿದ್ದು, ಗ್ರಾಮ ಪಂಚಾಯತಿಗಳು ಇದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.
     ಅಧ್ಯಯನ ಭೇಟಿಗಾಗಿ ಆಗಮಿಸಿದ್ದ ಬಳ್ಳಾರಿ ಜಿಲ್ಲೆಯ ಹಲವು ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಕಸ ವಿಲೇವಾರಿ ಘಟಕದ ಬಗ್ಗೆ ಜಿಲ್ಲೆಯ ಜಿ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಮಾಹಿತಿ ಪಡೆದುಕೊಂಡರು.  ಇಲ್ಲಿನ ಕಸ ವಿಲೇವಾರಿ ಘಟಕದ ವ್ಯವಸ್ಥೆ ನಿಜಕ್ಕೂ ಉತ್ತಮವಾಗಿದೆ.  ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಇಂತಹ ಘಟಕ ಸ್ಥಾಪನೆಗೆ ಕೊಪ್ಪಳ ಜಿಲ್ಲೆಯ ಅಧಿಕಾರಿಗಳ ನೆರವು ಪಡೆದುಕೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು.
     ಬಳ್ಳಾರಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಮುಖ್ಯ ಲೆಕ್ಕಾಧಿಕಾರಿ ಚನ್ನಪ್ಪ ಎಸ್., ಕೊಪ್ಪಳ ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಿಡಿಓಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಬಳ್ಳಾರಿ ಜಿಲ್ಲೆಯ ಅಧ್ಯಯನ ತಂಡವು ಜಿಲ್ಲೆಯ ವಿವಿಧ ಸಂಪೂರ್ಣ ಬಯಲು ಬಹಿರ್ದೆಸೆ ಗ್ರಾಮಗಳು, ಜೈವಿಕ ವಿಧಾನದಲ್ಲಿ ತಿಪ್ಪೆಗುಂಡಿಗಳ ವಿಲೇವಾರಿ ವ್ಯವಸ್ಥೆಯ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.

ಆಹಾರ ಇಲಾಖೆ ಅಧಿಕಾರಿಗಳ ದಾಳಿ : 451 ಕ್ವಿಂ. ಕಡಲೆಕಾಳು ದಾಸ್ತಾನು ವಶ

ಕೊಪ್ಪಳ ಅ. 29 (ಕರ್ನಾಟಕ ವಾರ್ತೆ): ಕೊಪ್ಪಳ ನಗರದಲ್ಲಿನ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಗುರುವಾರದಂದು ದಾಳಿ ನಡೆಸಿ, ಅನಧಿಕೃತವಾಗಿ ದಾಸ್ತಾನು ಇರಿಸಿದ್ದ 903 ಕಡಲೆಕಾಳು ಚೀಲಗಳನ್ನು (451 ಕ್ವಿಂ) ಜಪ್ತಿ ಮಾಡಿದ್ದಾರೆ.
     ನಗರದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ಅನಧಿಕೃತವಾಗಿ ಕಡಲೆಕಾಳು ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ನೇತೃತ್ವದ ತಂಡ ಗೋದಾಮಿಗೆ ದಾಳಿ ನಡೆಸಿದರು.   ತನಿಖೆಯ ಸಂದರ್ಭದಲ್ಲಿ ಉಗ್ರಾಣ ವ್ಯವಸ್ಥಾಪಕರು ಹಾಜರಿದ್ದು, ದಾಸ್ತಾನು ಮಾಡಿರುವವರ ವಿವರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು.  ಅದರನ್ವಯ ಮಸಬಹಂಚಿನಾಳದ ಅಂದಪ್ಪ ರಾಜೂರ- 250 ಚೀಲಗಳು, ಸಂಗನಾಳದ ಹುಚ್ಚೀರಪ್ಪ ದಿವಟರ್- 225, ದ್ಯಾಂಪುರದ ಉಮೇಶಪ್ಪ ಮುರಡಿ- 200 ಹಾಗೂ ಆಡೂರಿನ ಚಂದಾಹುಸೇನ ಮಕ್ಕಪ್ಪನವರ ಅವರು ದಾಸ್ತಾನು ಇರಿಸಿದ್ದ 228 ಚೀಲಗಳು ಸೇರಿದಂತೆ ಒಟ್ಟು 903 ಚೀಲ ಕಡಲೆಕಾಳು ಅ. 28 ರಂದು ದಾಸ್ತಾನು ಮಾಡಿರುವುದು ಕಂಡುಬಂದಿದೆ.    ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪಹಣಿ, ಉತಾರೆ, ಜಮೀನಿನ ದಾಖಲೆಗಳು ಅಥವಾ ಖರೀದಿ ಮಾಡಿದ ಬಗ್ಗೆ ರಸೀದಿಗಳನ್ನಾಗಲಿ ಸಲ್ಲಿಸಿಲ್ಲ.  ಅಲ್ಲದೆ ಕಡಲೆಕಾಳು ದಾಸ್ತಾನು ವಹಿವಾಟಿನ ಬಗ್ಗೆ ಸಕ್ಷಮ ಪ್ರಾಧಿಕಾರಿಗಳಿಂದ ಲೈಸೆನ್ಸ್ ಪಡೆದಿರುವ ಬಗ್ಗೆ ದಾಖಲೆ ಹಾಜರುಪಡಿಸಿಲ್ಲ.  ಸಂಗ್ರಹಣಾ ಶುಲ್ಕ ಪಾವತಿಸುವ ಆಧಾರದ ಮೇಲೆ ದಾಸ್ತಾನು ಮಾಡಿಕೊಂಡಿದ್ದಾಗಿ ಉಗ್ರಾಣ ವ್ಯವಸ್ಥಾಪಕರು ತಿಳಿಸಿದರು.  ದಾಸ್ತಾನಿನ ಬಗ್ಗೆ ಇನ್ನಷ್ಟು ಪರಿಶೀಲಿಸಲಾಗಿ, ನಾಲ್ವರು ದಾಸ್ತಾನು ಮಾಡಿರುವುದಕ್ಕೆ ಅಧಿಕೃತವಾಗಿ ಯಾವುದೇ ದಾಖಲೆಗಳು ಅಂದರೆ, ಖರೀದಿ ಮಾಡಿರುವುದಕ್ಕೆ ರಸೀದಿ, ರೈತರು ಬೆಳೆದಿದ್ದಲ್ಲಿ ಪಹಣಿ, ಕಡಲೆಕಾಳು ವ್ಯವಹಾರಕ್ಕೆ ಲೈಸೆನ್ಸ್ ದಾಖಲೆಗಳು ಯಾವುದೂ ಇರುವುದಿಲ್ಲ.  ದಾಸ್ತಾನುದಾರರು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅನಧಿಕೃತವಾಗಿ ದಾಸ್ತಾನು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ, ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆಯನ್ವಯ 903 ಕಡಲೆಕಾಳು ಚೀಲಗಳನ್ನು (451 ಕ್ವಿಂ) ಜಪ್ತಿ ಮಾಡಲಾಗಿದ್ದು, ಸುಮಾರು 20. 31 ಲಕ್ಷ ರೂ. ಗಳ ಮೌಲ್ಯದ ಅಂದಾಜು ಮಾಡಲಾಗಿದೆ.  ಜಪ್ತಿ ಮಾಡಿಕೊಂಡಿರುವ 903 ಕಡಲೆಕಾಳು ಚೀಲಗಳನ್ನು ಸದ್ಯ ಮುಂದಿನ ಆದೇಶದವರೆಗೆ ಸುರಕ್ಷಿತವಾಗಿ ಇರಿಸಿಕೊಳ್ಳುವಂತೆ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು ತಿಳಿಸಿದ್ದಾರೆ.

ಅ. 30 ರಂದು ಚೆಂಡು ಹೂವಿನ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆ ಕುರಿತು ಕಾರ್ಯಾಗಾರ

ಕೊಪ್ಪಳ ಅ. 29 (ಕರ್ನಾಟಕ ವಾರ್ತೆ): ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ವಿಸ್ತರಣಾ ನಿರ್ದೇಶನಾಲಯ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಚೆಂಡು ಹೂ ಬೆಳೆಯ ಉತ್ಪಾದನೆ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆ ಕುರಿತು ಒಂದು ದಿನದ ಕಾರ್ಯಗಾರ ಹಾಗೂ ಚೆಂಡು ಹೂವಿನ ಪ್ರದರ್ಶನ ಅ. 30 ರಂದು ಬಾಗಲಕೋಟದ ವಿಸ್ತರಣಾ ನಿರ್ದೇಶನಾಲಯದ ತರಬೇತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
     ಇತ್ತೀಚಿನ ದಿನಗಳಲ್ಲಿ ಚೆಂಡು ಹೂವಿನ ಬೆಳೆಯು ವಾಣಿಜ್ಯ ಬೆಳೆ, ಪೂರ್ಣ ಹಾಗೂ ಅಂತರ ಬೆಳೆ ಹಾಗೂ ವೈದ್ಯಕೀಯ ಬೆಳೆಯಾಗಿ ಮತ್ತು ಚೆಂಡು ಹೂವು ಮಣ್ಣಿನ ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಬೆಳೆಯಾಗಿ ರೂಪುಗೊಳ್ಳುತ್ತಿದೆ. ಪ್ರಗತಿಪರ ರೈತರು ಕಬ್ಬು, ಪಪಾಯ, ದಾಳಿಂಬೆ, ಬಾಳೆ, ಅಡಿಕೆ ಹಾಗೂ ತರಕಾರಿ ಬೆಳೆಯಲ್ಲಿ ಅಂತರ ಬೆಳೆಯಾಗಿ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ಕರ್ನಾಟಕದಲ್ಲಿ ಬಾಗಲಕೋಟ, ಬೀದರ, ದಾವಣಗೆರೆ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಇದು ವಾಣಿಜ್ಯ ಬೆಳೆಯಾಗಿ ಪರಿಣಮಿಸಿದೆ. ಈ ಚೆಂಡು ಹೂವಿನ ಬೆಳೆಯು 60ನೇ ದಿನಕ್ಕೆ ಹೂ ಬಿಡಲು ಪ್ರಾರಂಭಿಸಿ 150-165 ದಿನದ ವರೆಗೆ ಪೂರ್ಣ ಬೆಳೆಯಾಗಿ ಬೆಳೆದಲ್ಲಿ ಎಕರೆಗೆ 8-10 ಟನ್‍ಗಳಷ್ಟು ಹಾಗೂ ಕಬ್ಬಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ಬೆಳೆದಲ್ಲಿ 3-3.5 ಟನ್‍ಗಳಷ್ಟು ಇಳುವರಿ ನೀಡಿ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ನೀಡುವ ಹೂವಿನ ಬೆಳೆಯಾಗಿದೆ.
    ಈ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಗಾರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಚೆಂಡು ಹೂವಿನ ತಳಿಗಳ ಸಸಿಗಳ ಸರಬರಾಜುದಾರರು, ಹೂ ಖರೀದಿಸುವ ಖರೀದಿದಾರರು, ಚೆಂಡು ಹೂವಿನ ಪ್ರಗತಿಪರ ರೈತರು ಹಾಗೂ ವಿವಿಧ ಪುಷ್ಪ ಕೃಷಿ ತಂತ್ರಜ್ಞರು ಭಾಗವಹಿಸುವವರು.   
    ಕಾರ್ಯಗಾರದ ಉದ್ಘಾಟನೆ ನಂತರ ರೈತರಿಂದ-ರೈತರ ಸಂವಾದ ಕಾರ್ಯಕ್ರಮದಲ್ಲಿ ಚೆಂಡು ಹೂವಿನ ಪ್ರಗತಿಪರ ರೈತರಾದ ಬೀದರ್‍ನ ಬಾಬುರಾವ ಎನ್. ಪಾಟೀಲ, ದಾವಣಗೆರೆಯ ಗೋಪಾಲ ನಾಯ್ಕ್, ಜಮಖಂಡಿಯ ಚನ್ನಪ್ಪ ಬಿರಾದಾರ ಮತ್ತು ಶಂಕರ ಜಂಗಣ್ಣನವರ, ಮುಧೋಳದ ಯಲ್ಲಪ್ಪ ಲೋಗಾಂವಿ ಹಾಗೂ ಬಸವನಗೌಡ ಪೋಲಿಸ ಪಾಟೀಲ ಇವರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ತದನಂತರ ಎ. ವ್ಹಿ. ಥಾಮಸ್ ನ್ಯಾಚುರಲ್ ಪ್ರೋಡಕ್ಟ್ಸ ಲಿಮಿಟೆಡ್ ಕಂಪನಿಯ ಡೆಪ್ಯುಟಿ ಮ್ಯಾನೆಜರ್ ಸುರೇಂದ್ರ ರೆಡ್ಡಿ ಅವರು ಹಾಗೂ ಮುಂಬೈನ ಚೆಂಡು ಹೂ ಖರೀದಿದಾರರಾದ ನಾಗರಾಜ ಕುಲಕರ್ಣಿ, ಬಾಲಾಜಿ ಪ್ಲಾವರ್ಸ್ ಮರ್ಚಂಟ್ಸ್ ಅವರು ಈ ಬೆಳೆಯ ಮಾರಾಟದ ಅವಕಾಶಗಳನ್ನು ತಿಳಿಸಿಕೊಡುವರು.  ರೈತರಿಂದ ರೈತರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಸ್ತರಣಾ ನಿರ್ದೇಶಕ ಮತ್ತು ತರಬೇತಿ ನಿರ್ದೇಶಕÀ ಡಾ. ಎ. ಬಿ. ಪಾಟೀಲ ಇವರು ವಹಿಸುವರು.
     ಮಧ್ಯಾಹ್ನದ ತಾಂತ್ರಿಕ ಅಧಿವೇಶನದಲ್ಲಿ ತೋವಿವಿ, ಬಾಗಲಕೋಟದ ವಿಜ್ಞಾನಿಗಳಾದ ಡಾ. ಸತೀಶ ಪಾಟೀಲ, ಸಹ ಪ್ರಾಧ್ಯಾಪಕರು, ಪುಷ್ಪ ವಿಜ್ಞಾನ : ಚೆಂಡು ಹೂವಿನ ಬೇಸಾಯ ಕ್ರಮಗಳು, ಡಾ. ಬಾಲಾಜಿ ಕುಲಕರ್ಣಿ, ಪ್ರಾಧ್ಯಾಪಕರು, ಪುಷ್ಪ ವಿಜ್ಞಾನ : ಚೆಂಡು ಹೂವಿನ ಮಾರುಕಟ್ಟೆ  ಹಾಗೂ ಮೌಲ್ಯವರ್ಧನೆ,  ಡಾ. ಆರ್. ಕೆ. ಮೆಸ್ತಾ, ಪ್ರಾಧ್ಯಾಪಕರು, ಸಸ್ಯರೋಗ ಶಾಸ್ತ್ರ : ಚೆಂಡು ಹೂವಿನ ರೋಗಗಳ ನಿರ್ವಹಣೆ, ಡಾ. ವೆಂಕಟೇಶಲು, ಪ್ರಾಧ್ಯಾಪಕರು, ಕೀಟಶಾಸ್ತ್ರ : ಚೆಂಡು ಹೂವಿನ ಕೀಟ ನಿರ್ವಹಣೆ ಕುರಿತು ಉಪನ್ಯಾಸ ನೀಡುವರು.  ಚೆಂಡು ಹೂವಿನ ಬೆಳೆಗಾರರು ಹಾಗೂ ಬೆಳೆಯಲು ಆಸಕ್ತಿವುಳ್ಳವರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಸ್ತರಣಾ ನಿರ್ದೇಶಕ ಡಾ. ಎ.ಬಿ. ಪಾಟೀಲ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕಬ್ಬರಗಿ ಗ್ರಾ.ಪಂ ಚುನಾವಣೆ : ಅಧಿಸೂಚನೆ ಪ್ರಕಟ

ಕೊಪ್ಪಳ, ಅ.29 (ಕರ್ನಾಟಕ ವಾರ್ತೆ) : ಅವಧಿ ಮುಕ್ತಾಯಗೊಳ್ಳಲಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿಯ ಚುನಾವಣಾ ವೇಳಾಪಟ್ಟಿಯೊಂದಿಗೆ ಪ್ರಭಾರಿ ಜಿಲ್ಲಾಧಿಕಾರಿ ಡಾ||ಜಿ.ಎಲ್.ಪ್ರವೀಣಕುಮಾರ ಅವರು ಅಧಿಸೂಚನೆ ಹೊರಡಿಸಿದ್ದಾರೆ.
     1993 ರ ಕರ್ನಾಟಕ ಪಂಚಾಯತ್‍ರಾಜ್ ಅಧಿನಿಯಮದ ಉಪನಿಬಂಧಗಳ ಮೇರೆಗೆ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯಿತಿಯ ಪದಾವಧಿಯು ಮುಕ್ತಾಯವಾದ ಹಿನ್ನೆಲೆಯಲ್ಲಿ ತೆರವಾಗುವ ಒಟ್ಟು 19 ಸದಸ್ಯ ಸ್ಥಾನಗಳನ್ನು ತುಂಬಲು,  ಚುನಾವಣೆ ನಡೆಯಲಿದೆ.  ಕಬ್ಬರಗಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳ ಮೀಸಲಾತಿ ವಿವರ ಇಂತಿದೆ. ಕಬ್ಬರಗಿ-01 ರಲ್ಲಿ 04 ಸ್ಥಾನಗಳಿದ್ದು ಹಿಂ. ವರ್ಗ-ಅ, ಹಿಂ.ವರ್ಗ-ಬ, ಸಾಮಾನ್ಯ (ಮ) ಮತ್ತು ಸಾಮಾನ್ಯ.  ಕಬ್ಬರಗಿ-02 ರಲ್ಲಿ 02 ಸ್ಥಾನಗಳಿದ್ದು, ಪ.ಜಾತಿ ಮತ್ತು ಸಾಮಾನ್ಯ (ಮ). ಕಬ್ಬರಗಿ-03 ರಲ್ಲಿ 02 ಸ್ಥಾನಗಳಿದ್ದು, ಪ.ಪಂಗಡ(ಮ) ಮತ್ತು ಸಾಮನ್ಯ.  ಸೇಬಿನಕಟ್ಟೆಯಲ್ಲಿ 03 ಸ್ಥಾನಗಳಿದ್ದು ಹಿಂ.ವರ್ಗ-ಅ(ಮ), ಸಾಮಾನ್ಯ(ಮ) ಮತ್ತು ಸಾಮಾನ್ಯ. ಬೀಳಗಿಯಲ್ಲಿ 02 ಸ್ಥಾನಗಳಿದ್ದು, ಪ.ಪಂಗಡ(ಮ) ಮತ್ತು ಸಾಮಾನ್ಯ.  ಮನ್ನೇರಾಳ-01 ರಲ್ಲಿ 03 ಸ್ಥಾನಗಳಿದ್ದು ಪ.ಜಾತಿ(ಮ), ಹಿಂ.ವರ್ಗ-ಅ(ಮ) ಮತ್ತು ಸಾಮಾನ್ಯ. ಮನ್ನೇರಾಳ ಕ್ಷೇತ್ರ ಸಂಖ್ಯೆ 02 ರಲ್ಲಿ 03 ಸ್ಥಾನಗಳಿದ್ದು ಪ.ಪಂಗಡ, ಸಾಮಾನ್ಯ(ಮ) ಮತ್ತು ಸಾಮಾನ್ಯ(ಮ) ಮಿಸಲಾತಿ ನಿಗದಿಪಡಿಸಲಾಗಿದೆ.   
    ಚುನಾವಣಾ ವೇಳಾಪಟ್ಟಿ ವಿವರ ಇಂತಿದೆ. ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 04 ಕೊನೆ ದಿನಾಂಕವಾಗಿದೆ. ನ.05 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ನ.07 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕಡೆ ದಿನಾಂಕವಾಗಿದ್ದು, ನ.15 ರಂದು ಮತದಾನ ನಡೆಯಲಿದೆ. ಒಟ್ಟಾರೆ ನ.18 ರೊಳಗಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Wednesday, 28 October 2015

ಜಿ.ಪಂ. ಅಧ್ಯಕ್ಷರಿಂದ ಅಂಗವಿಕಲರಿಗೆ ತ್ರಿಚಕ್ರ ಮೋಟಾರು ವಾಹನಗಳ ವಿತರಣೆ

ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ನಗರದ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗ ಕಚೇರಿ ಆವರಣದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಮೋಟಾರು ವಾಹನಗಳ ವಿತರಣೆ ಮಾಡಿದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷರ 2014-15 ನೇ ಸಾಲಿನ ಅಭಿವೃದ್ಧಿ (ಅನಿರ್ಬಂಧಿತ) ಅನುದಾನದಡಿ ಜಿಲ್ಲೆಯ 14 ಅಂಗವಿಕಲರಿಗೆ ಮಂಜೂರು ಮಾಡಲಾದ ತ್ರಿಚಕ್ರ ಮೋಟಾರು ವಾಹನಗಳನ್ನು ಸಂಬಂಧಪಟ್ಟ ಫಲಾನುಭವಿಗಳಿಗೆ ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು ಬುಧವಾರದಂದು ನಗರದ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕರ ಅಭಿಯಂತರರ ಕಚೇರಿ ಆವರಣದಲ್ಲಿ ವಿತರಿಸಿದರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಕಾರಿ ಕೃಷ್ಣ ಉದಪುಡಿ, ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕರ ಅಭಿಯಂತರ ಮನೋಹರ ವಡ್ಡರ್ ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಬಲ್ ಡಿಜಿಟೈಜೇಶನ್ : ಅ. 30 ರಂದು ಕೇಬಲ್ ಆಪರೇಟರ್‍ಗಳೊಂದಿಗೆ ಸಭೆ

ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲ ಕೇಬಲ್ ನೆಟ್‍ವರ್ಕ್ ಜಾಲವನ್ನು ಮುಂದಿನ ದಿನಗಳಲ್ಲಿ  ಕೇಬಲ್ ಟಿವಿ ಡಿಜಿಟೈಜೇಷನ್ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಇದಕ್ಕೆ ಸಂಬಂಧಿಸಿದಂತೆ, ಕೊಪ್ಪಳ ಜಿಲ್ಲೆಯ ಎಲ್ಲ ಕೇಬಲ್ ಆಪರೇಟರ್‍ಗಳು ಮತ್ತು ಮಲ್ಟಿ ಸಿಸ್ಟಮ್ ಆಪರೇಟರ್ಸ್‍ಗಳ ಸಭೆಯನ್ನು ಅ. 30 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ. ಪ್ರವೀಣ್‍ಕುಮಾರ್ ಜಿ.ಎಲ್. ಅವರು ವಹಿಸುವರು.  ಈ ಸಭೆಗೆ ಜಿಲ್ಲೆಯ ಎಲ್ಲ ನೋಂದಾಯಿತ ಕೇಬಲ್ ಆಪರೇಟರ್‍ಗಳು ಹಾಗೂ ಮಲ್ಟಿ ಸಿಸ್ಟಂ ಆಪರೇಟರ್‍ಗಳು ತಪ್ಪದೆ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಚಂದನ ವಾಹಿನಿಯಲ್ಲಿ ‘ಜನ-ಮನ’- ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳ ಸಂವಾದ

ಕೊಪ್ಪಳ ಅ. 28 (ಕರ್ನಾಟಕ ವಾರ್ತೆ):  ದೂರದರ್ಶನದ ಚಂದನ ವಾಹಿನಿಯಲ್ಲಿ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಅಕ್ಟೋಬರ್ 29 ರಂದು ರಾತ್ರಿ 8 ರಿಂದ  9 ಗಂಟೆಯ ವರೆಗೆ ನೇರ ಪ್ರಸಾರವಾಗುವ ‘ಜನ-ಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಅನ್ನಭಾಗ್ಯ, ಕ್ಷೀರಭಾಗ್ಯ ಹಾಗೂ ಕ್ಷೀರಧಾರೆ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ಹಾಗೂ ನೇರ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಡುವರು. 
     ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸ ಬಯಸುವವರು ದೂರವಾಣಿ ಸಂಖ್ಯೆ 080-23542599 ಅಥವಾ 080-23542699 ಗೆ ಕರೆ ಮಾಡಿ ಮುಖ್ಯಮಂತ್ರಿಯವರೊಡನೆ ಸಂವಾದ ನಡೆಸಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 10 ರಂದು ಮೈಸೂರು ಹುಲಿ ಟಿಪ್ಪುಸುಲ್ತಾನ್ ಜಯಂತಿ ಅದ್ದೂರಿ ಆಚರಣೆ- ಡಾ. ಪ್ರವೀಣಕುಮಾರ್

ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ನ. 10 ರಂದು ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.
     ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ದೇಶಭಕ್ತ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ನ. 10 ರಂದು ಅದ್ಧೂರಿಯಾಗಿ ಆಚರಿಸಲಾಗುವುದು.  ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ 50 ಸಾವಿರ ರೂ. ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲು ಸರ್ಕಾರ 25 ಸಾವಿರ ರೂ. ಅನುದಾನ ಒದಗಿಸಿದೆ.  ಟಿಪ್ಪು ಸುಲ್ತಾನ್‍ನ ದೇಶಭಕ್ತಿ ಹಾಗೂ ಶೌರ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಜಿಲ್ಲೆಯ ಎಲ್ಲ ಪದವಿಪೂರ್ವ, ಪ್ರೌಢ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಭಾಷಣ ಸ್ಪಧೆಯನ್ನು ಆಯೋಜಿಸಲಾಗುವುದು.  ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನ. 10 ರಂದು ಬೆಳಿಗ್ಗೆ 8-30 ಗಂಟೆಗೆ ನಗರ ಪೊಲೀಸ್ ಠಾಣೆ ಬಳಿಯ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಗಣ್ಯಮಾನ್ಯರಿಂದ ಹೂಮಾಲೆ ಅರ್ಪಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಗುವುದು.  ಬೆಳಿಗ್ಗೆ 9-30 ಗಂಟೆಗೆ ಟಿಪ್ಪು ಸುಲ್ತಾನ್ ಭಾವಚಿತ್ರದೊಂದಿಗೆ ಮೆರವಣಿಗೆಯು ನಗರದ ಸಿರಸಪ್ಪಯ್ಯನ ಮಠ ಬಳಿಯ ನೂರಾನಿ ಮಸೀದಿ ಆವರಣದಿಂದ ಪ್ರಾರಂಭವಾಗಲಿದೆ.  ಮೆರವಣಿಗೆಯು ಗಡಿಯಾರ ಕಂಭ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನವನ್ನು ತಲುಪಲಿದೆ.  ಮೆರವಣಿಗೆಯಲ್ಲಿ ಎಲ್ಲಾ ಸಂಘಟನೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಬೇಕು.   ಬೆ. 11-30 ಗಂಟೆಗೆ ಸಾಹಿತ್ಯ ಭವನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭ ಜರುಗಲಿದ್ದು, ಸಮಾರಂಭದಲ್ಲಿ ಗಣ್ಯಾತಿಗಣ್ಯರೆಲ್ಲರು ಭಾಗವಹಿಸಲಿದ್ದಾರೆ.   ಮೈಸೂರು ಹುಲಿ ಟಿಪ್ಪುಸುಲ್ತಾನ್ ಅವರ ಜೀವನ ಚರಿತ್ರೆ ಕುರಿತು ಹಾಗೂ ಜಯಂತಿ ಕಾರ್ಯಕ್ರಮದ ಮಹತ್ವ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಟಿಪ್ಪು ಸುಲ್ತಾನ್ ಕುರಿತ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು.   ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು.  ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಟಿಪ್ಪು ಸುಲ್ತಾನ್ ಜಯಂತಿಯನ್ನು  ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಮನವಿ ಮಾಡಿದರು. 
     ಟಿಪ್ಪು ಸುಲ್ತಾನ್ ಜಯಂತಿ ದಿನದಂದು ಹಾಗೂ ಮುನ್ನಾ ದಿನದಂದು, ನಗರದ ಜವಾಹರ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಯನ್ನು ಸ್ವಚ್ಛಗೊಳಿಸಲು ಅಲ್ಲದೆ ಮೆರವಣಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಟಿಪ್ಪು ಸುಲ್ತಾನ್ ಅವರ ದೇಶಭಕ್ತಿ ಹಾಗೂ ಜೀವನ ಚರಿತ್ರೆ ಕುರಿತ ಸಂದೇಶ ಎಲ್ಲರಿಗೂ ತಲುಪುವಂತೆ ಮಾಡುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಮುಖಂಡರಿಗೆ ಮತ್ತು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
     ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಆದೇಶ ಹೊರಡಿಸಿರುವುದು ಶ್ಲಾಘನೀಯ ಕ್ರಮವಾಗಿದ್ದು, ಇದರಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ದೇಶಭಕ್ತರಿಗೆ ಗೌರವ ಸಲ್ಲಿಸಿದಂತಾಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರೂ ಅಭಿನಂದನೆಗೆ ಅರ್ಹರು ಎಂದು ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.  ಮಂಜುನಾಥ ಗೊಂಡಬಾಳ ಅವರು ಈ ಸಂದರ್ಭದಲ್ಲಿ ಮಾತನಾಡಿ, ಯುವಚೇತನ ಶಿವರಾಜ ತಂಗಡಗಿ ವೇದಿಕೆ ವತಿಯಿಂದ ಟಿಪ್ಪು ಸುಲ್ತಾನ್ ಅವರ 2000 ಭಾವಚಿತ್ರಗಳನ್ನು ಶಾಲಾ, ಕಾಲೇಜುಗಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
     ಸಭೆಯಲ್ಲಿ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಡಿವೈಎಸ್‍ಪಿ ರಾಜೀವ್, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಟಿ.  ಸಮಾಜದ ಮುಖಂಡರುಗಳಾದ ಅಮ್ಜದ್ ಪಟೇಲ್, ಪೀರಾಹುಸೇನ್ ಹೊಸಳ್ಳಿ, ಕೆ.ಎಂ. ಸೈಯದ್, ಗೌಸ್ ಸಾಬ್ ಸರದಾರ್, ಪಾಶಾ ಕಾಟನ್, ಅಬ್ದುಲ್ ಅಜೀಜ್, ಎಂ.ಎ. ಮಾಜಿದ್ ಸಿದ್ದಿಕಿ, ಮೆಹಬೂಬ್ ಮಸ್ಕಿ, ಸಾದಿಕ್ ಅಲಿ, ಶಿವಾನಂದ ಹೊದ್ಲೂರ ಮುಂತಾದವರು ಉಪಸ್ಥಿತರಿದ್ದು, ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕುರಿತು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Wednesday, 21 October 2015

ವಸತಿ ನಿಲಯಗಳ ಆಹಾರದ ಗುಣಮಟ್ಟ ಹೆಚ್ಚಿಸಲು ಡಿ.ಸಿ. ಡಾ. ಪ್ರವೀಣಕುಮಾರ್ ಜಿ.ಎಲ್. ಸೂಚನೆ

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಆಹಾರದ ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಬಾರದು.  ಉತ್ತಮ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡುವಂತಾಗಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಕುರಿತಂತೆ ಮಂಗಳವಾರದಂದು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ತಾವು ಪ್ರವಾಸ ಕೈಗೊಂಡ ವೇಳೆಯಲ್ಲಿ ಹಲವು ಸರ್ಕಾರಿ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.  ಉತ್ತಮ ಆಹಾರ ಒದಗಿಸಲು ಅಗತ್ಯವಿರುವ ಅನುದಾನವನ್ನು ಸರ್ಕಾರ ಒದಗಿಸುತ್ತಿದ್ದು, ಆಹಾರದ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ.  ವಸತಿ ನಿಲಯಗಳಲ್ಲಿ ಆಹಾರದ ಮೆನು ಫಲಕ ಪ್ರದರ್ಶಿಸಬೇಕು  ಹಾಗೂ ಅದರಂತೆ ಆಹಾರ ಒದಗಿಸಬೇಕು.  ಮಕ್ಕಳಿಗೆ ವಸತಿ ನಿಲಯಗಳಲ್ಲಿ ಉತ್ತಮ ಊಟ, ವಸತಿ ಸೌಲಭ್ಯ ಕಲ್ಪಿಸುವುದರ ಜೊತೆಗೆ, ವ್ಯಾಸಂಗ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸಬೇಕು.  ಹಾಸ್ಟೆಲ್ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಆಟದ ಸಾಮಗ್ರಿಗಳನ್ನು ವಿತರಿಸುವ ಮೂಲಕ ಕ್ರೀಡೆಗಳಿಗೆ ಉತ್ತೇಜನ ನೀಡಬೇಕು. ಪ್ರತಿ ತಿಂಗಳಿಗೊಮ್ಮೆ ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ, ತಕ್ಷಣ ಪರಿಹಾರ ಕಂಡುಕೊಳ್ಳುವಂತಾಗಬೇಕು.  ಈ ನಿಟ್ಟಿನಲ್ಲಿ   ಅಗತ್ಯ ಕ್ರಮ ಜರುಗಿಸಬೇಕು ಎಂದು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಮೀನು ಖರೀದಿಸಿ : ಅಲ್ಪಸಂಖ್ಯಾತರ ಸಮುದಾಯದ ಶ್ರೇಯೋಭಿವೃದ್ಧಿಗೆ ಹಲವು ಯೋಜನೆಗಳು ಜಾರಿಗೊಂಡಿವೆ.  ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಭೂ ರಹಿತ ಅಲ್ಪಸಂಖ್ಯಾತರಿಗೆ ಭೂಮಿ ಒದಗಿಸುವ ಯೋಜನೆಗಾಗಿ, ಕೂಡಲೆ ಸಂಬಂಧಪಟ್ಟ ರೈತರಿಂದ ಜಮೀನು ಖರೀದಿಸಲು ಅಗತ್ಯ ಕ್ರಮ ಜರುಗಿಸಬೇಕು.  ಒಂದು ತಿಂಗಳ ಒಳಗಾಗಿ ಭೂಮಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ, ಅರ್ಹ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ವಿತರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳು ನಿಗಮದ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಗಂಗಾ ಕಲ್ಯಾಣ ಮಾಹಿತಿ ಒದಗಿಸಿ : ಹಲವು ಅಭಿವೃದ್ಧಿ ನಿಗಮಗಳ ಮೂಲಕ ಗಂಗಾ ಕಲ್ಯಾಣ ಯೋಜನೆಯಡಿ ಬಡವರ ಜಮೀನುಗಳಿಗೆ ಕೊರೆಯಿಸಲಾಗಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿ ಇದ್ದು, ಹಲವು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪದೇ ಪದೇ ಈ ವಿಷಯ ಚರ್ಚಿತವಾಗುತ್ತಿದೆ.  ಎಲ್ಲ ನಿಗಮಗಳ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇರುವ ಬಗ್ಗೆ ನಿಗಮಗಳ ವ್ಯವಸ್ಥಾಪಕರು ಹಾಗೂ ಜೆಸ್ಕಾಂನ ಸಂಬಂಧಿಸಿದ ತಾಲೂಕುಗಳ ಸಹಾಯಕ ಕಾರ್ಯ ಪಾಲಕ ಅಭಿಯಂತರರ ಜೊತೆಯಲ್ಲಿ ಸಭೆ ನಡೆಸಿ, ವಾರದೊಳಗೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳೂ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರ ಕಲ್ಪಿಸಿ : ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳ ಸಂಖ್ಯೆಯನ್ನು ಅವಲೋಕಿಸಿದಾಗ, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸವಿರುವ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳ ಸಂಖ್ಯೆ ಕಡಿಮೆ ಇದ್ದು, ಇಂತಹ ಸ್ಥಳಗಳನ್ನು ಗುರುತಿಸಿ, ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಬೇಕು.  ಸಾಧ್ಯವಿದ್ದಲ್ಲಿ ವಕ್ಫ್ ಆಸ್ತಿಗಳ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ಥಳಾವಕಾಶ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಕ್ಫ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್, ಡಿವೈಎಸ್‍ಪಿ ರಾಜೀವ್ ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನಿಗಮಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.

ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ : ಜಿ.ಎಲ್.ಪ್ರವೀಣಕುಮಾರ್

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ಪೌರಾಣಿಕ, ಐತಿಹಾಸಿಕ, ನೈಸರ್ಗಿಕವಾಗಿ ಸಾಕಷ್ಟು ಸ್ಥಳಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರಭಾರಿ ಜಿಲ್ಲಾಧಿಕಾರಿ ಜಿ.ಎಲ್.ಪ್ರವೀಣಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕೊಪ್ಪಳ ಜಿಲ್ಲೆಯ ಪ್ರವಾಸಿ ಸ್ಥಳಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಮೇಲ್ವಿಚಾರಣೆ ಹಾಗೂ ಉಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಯಡಿ ಲೋಕೋಪಯೋಗಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಸೆಪ್ಟಂಬರ್ 2015 ರ ಅಂತ್ಯಕ್ಕೆ ಒಟ್ಟು 11 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿರುವ ಗಂಗಾವತಿ ತಾಲೂಕಿನ ಸಂಗಾಪೂರ-ಮಲ್ಲಾಪೂರ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ, ಚಿಕ್ಕರಾಂಪೂರ-ಸಾಣಾಪುರ ರಸ್ತೆ ಡಾಂಬರೀಕರಣ, ಗಂಗಾವತಿ-ಆನೆಗೊಂದಿ-ಮುನಿರಾಬಾದ್, ಪಂಪಾಸರೋವರದ ವರೆಗೆ ಕೂಡು ರಸ್ತೆ ಅಭಿವೃದ್ಧಿಪಡಿಸುವುದು, ಕೊಪ್ಪಳ ನಗರದ ಕೋಟೆಗೆ ಕೂಡು ರಸ್ತೆ ಸೇರಿದಂತೆ ಯಲಬುರ್ಗಾ ತಾಲೂಕನ ಬಳಗೇರಿ ಗ್ರಾಮದಲ್ಲಿ ಚಾಲುಕ್ಯರ ಪುರಾತನ ಬಳ್ಳೇಶ್ವರ ದೇವಸ್ಥಾನಕ್ಕೆ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಪ್ರಾರಂಭವಾಗದೇ ಇರುವ ಒಟ್ಟು 05 ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೊಂಡು ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
     ಮುಕ್ತಾಯ ಹಂತದಲ್ಲಿರುವ ನಗರದ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಮಠದ ಯಾತ್ರಿ ನಿವಾಸ ಕಟ್ಟಡ ಕಾಮಗಾರಿ, ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ಯಾತ್ರಿ ನಿವಾಸ ಕಟ್ಟಡ, ತಳಕಲ್ ಗ್ರಾಮದ ಹಜರತ್ ಹುಸೇನ್ ಷಾವಲಿ ಮೌಲ ದರ್ಗಾದ ಯಾತ್ರಿ ನಿವಾಸ, ಕಲ್ಲೂರ ಗ್ರಾಮದ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನದ ಯಾತ್ರಿನಿವಾಸ, ಕುಷ್ಟಗಿ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದ ಯಾತ್ರಿ ನಿವಾಸ ಕಟ್ಟಡ, ಹನುಮಸಾಗರದ ಶ್ರೀ ವೆಂಕಟೇಶ್ವರ ದೇವಸ್ಥಾನದ ಯಾತ್ರಿ ನಿವಾಸ, ಶಿರಗುಂಪಿ ಗ್ರಾಮದ ಶ್ರೀ ಭಾರತಿ ಮುಖ್ಯ ಪ್ರಾಣೇಶ್ವರ ದೇವಸ್ಥಾನದ ಯಾತ್ರಿ ನಿವಾಸ, ಕೊಪ್ಪಳ ಮಳೇಮಲ್ಲೇಶ್ವರ ದೇವಸ್ಥಾನದ ಬಳಿಯಿರುವ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗಳನ್ನು  ಶೀಘ್ರದಲ್ಲಿಯೇ ಪೂರ್ಣಗೊಳಿಸುವಂತೆ ಸೂಚನೆ ನೀಡಿದ ಅವರು, ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಮಲ್ಲಯ್ಯನ ಗುಡಿ ಹತ್ತಿರ ಡಾರ್ಮಿಟರಿ ನಿರ್ಮಾಣ ಕಾಮಗಾರಿಗೆ ಸೂಕ್ತ ನಿವೇಶನ ಕೊರತೆ ಇರುವುದರಿಂದ ಸ್ಥಳ ಪರಿಶೀಲನೆ ಕೈಗೊಳ್ಳುವಂತೆ ಹಾಗೂ ಕಳೆದ 2012-13 ನೇ ಸಾಲಿನಲ್ಲಿ 3.00 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡು ಪ್ರಗತಿಯಲ್ಲಿರುವ ಕೊಪ್ಪಳ ನಗರದಲ್ಲಿರುವ ಐತಿಹಾಸಿಕ ಕೋಟೆಯ ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
     ಜಿಲ್ಲಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವರ್ಗದ ಜಿಲ್ಲಾಧಿಕಾರಿ ಬಿ.ಕಲ್ಲೇಶ್ ಮಾತನಾಡಿ,  ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ನೀಡುವ ಯೋಜನೆಗೆ 2013-14ನೇ ಸಾಲಿನಲ್ಲಿ ಒಟ್ಟು 33 ಅರ್ಜಿಗಳು ಬಂದಿದ್ದು, ಅಂತಿಮವಾಗಿ ಒಟ್ಟು 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, 03 ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ. ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಂದ ಒಟ್ಟು 20 ಅರ್ಜಿಗಳು ಬಂದಿದ್ದು, ಅಂತಿಮವಾಗಿ 15 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, 05 ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವರ್ಗದ ನಿರುದ್ಯೋಗಿ ಯುವಕರಿಂದ ಒಟ್ಟು 51 ಅರ್ಜಿಗಳು ಬಂದಿದ್ದು, ಅಂತಿಮವಾಗಿ ಒಟ್ಟು 48 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರವಾಸಿ ಟ್ಯಾಕ್ಸಿ ನೀಡುವ ಯೋಜನೆಗೆ 2014-15ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರಿಂದ ಒಟ್ಟು 30 ಅರ್ಜಿಗಳು ಬಂದಿದ್ದು, ಅಂತಿಮವಾಗಿ ಒಟ್ಟು 13 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಂದ ಒಟ್ಟು 04 ಅರ್ಜಿಗಳು ಬಂದಿದ್ದು, ಅಂತಿಮವಾಗಿ 03 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ, ಕೊಪ್ಪಳ ವಿಭಾಗದ ಲೋಕೋಪಯೋಗಿ ಮತ್ತು ಒಳ ಬಂದರು ಇಲಾಖೆ, ನಿರ್ಮಿತಿ ಕೇಂದ್ರ, ಕರ್ನಾಟಕ ರೂರಲ್ ಇನ್‍ಫ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ಲಿಮಿಟೆಡ್‍ನ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪೊಲೀಸರ ಸಾಹಸ, ಧೈರ್ಯ, ತ್ಯಾಗ ಸರ್ವರಿಗೂ ಮಾದರಿ : ಎಸ್. ಪ್ರಭಾಕರನ್ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ಸಮಾಜದ ಕಲ್ಯಾಣ ಕಾರ್ಯಗಳಿಗೆ ಹಾನಿಯನ್ನುಂಟು ಮಾಡುವ ಅಪರಾಧಗಳನ್ನು ತಡೆಗಟ್ಟುವಲ್ಲಿ ಅವಿರತ ಪರಿಶ್ರಮ ನಡೆಸುವ ಪೊಲೀಸರ ಧೈರ್ಯ, ಸಾಹಸ, ತ್ಯಾಗ ಮನೋಭಾವನೆ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಹೇಳಿದರು.
     ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
     1959 ರ ಅಕ್ಟೋಬರ್ 21 ರಂದು ಲಡಾಕ್‍ನಲ್ಲಿ ಚೀನಾ ಸೇನೆಯೊಂದಿಗೆ ನಡೆದ ಹೋರಾಟದಲ್ಲಿ ವೀರಮರಣ ಹೊಂದಿದ ಲೆಫ್ಟಿನೆಂಟ್ ಕರ್ನಲ್ ಕರಣ್‍ಸಿಂಗ್ ಹಾಗೂ ಅವರ ನೇತೃತ್ವದಲ್ಲಿ ಭಾಗವಹಿಸಿದ್ದ ಸಿಆರ್‍ಪಿಎಫ್ ಯೋಧರ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಪ್ರತಿ ವರ್ಷ ಅಕ್ಟೋಬರ್ 21 ರಂದು ದೇಶಾದ್ಯಂತ ಆಚರಿಸಲಾಗುತ್ತದೆ. ದೇಶದ ಸಾರ್ವಜನಿಕರ ರಕ್ಷಣೆಗಾಗಿ ತ್ಯಾಗ, ಬಲಿದಾನ ನೀಡಿದ ಪೊಲೀಸರನ್ನು ನೆನೆಯುವುದು ಆಚರಣೆಯ ಉದ್ದೇಶವಾಗಿದೆ. ಇಂದು ಪೊಲೀಸರು ದೇಶದ ಆಂತರಿಕ ರಕ್ಷಣೆಗೆ ಸೀಮಿತವಾಗಿರದೇ, ಪಂಜಾಬ್ ಟೆರರಿಸ್ಟ್ ಆಪರೇಷನ್, ಆಪರೇಶನ್ ಬ್ಲ್ಯೂಸ್ಟಾರ್ ನಂತಹ ಸೇನಾ ಮಟ್ಟದ ಕಾರ್ಯಾಚರಣೆಗಳಲ್ಲೂ ಸಹ ಭಾಗವಹಿಸಿ, ದೇಶಕ್ಕೆ ತಮ್ಮದೇ ಆದ ಅಮೂಲಾಗ್ರ ಸೇವೆಯನ್ನು ಸಲ್ಲಿಸುತ್ತಿರುವುದು ಶ್ಲಾಘನೀಯ.  ಚಂಬಲ್ ಕಣಿವೆಯ ಕಾರ್ಯಾಚರಣೆ, ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆ, ಮುಂಬೈ ಭಯೋತ್ಪಾದಕ ದಾಳಿಯ ವಿಶೇಷ ಕಾರ್ಯಾಚರಣೆ, ದೇಶದ ಕೆಲವು ರಾಜ್ಯಗಳಲ್ಲಿ ಕಂಡು ಬರುವ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಲ್ಲಿ ಅನೇಕ ಪೊಲೀಸರು ತಮ್ಮ ಪ್ರಾಣ ತ್ಯಾಗ ಮಾಡಿ, ಹುತಾತ್ಮರಾಗಿದ್ದಾರೆ. ಆಂತರಿಕವಾಗಿ ಅಥವಾ ಬಾಹ್ಯವಾಗಿ ಪೊಲೀಸರಿಲ್ಲದ ದೇಶವನ್ನು ಊಹಿಸುವುದು ಕೂಡಾ ಕಷ್ಟಸಾಧ್ಯ. ಸುಮಾರು 125 ಕೋಟಿಯಷ್ಟು ಬೃಹತ್ ಜನಸಂಖ್ಯೆ ಹೊಂದಿರುವ ಭಾರತದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ಪೊಲೀಸರ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಬಣ್ಣಿಸಿದರು. 

     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ತ್ಯಾಗರಾಜನ್ ಮಾತನಾಡಿ, ದೇಶದಲ್ಲಿ ಈ ವರ್ಷ ಕರ್ತವ್ಯದಲ್ಲಿರುವಾಗ ಬಲಿದಾನಗೊಂಡ ಪೊಲೀಸರ ಹೆಸರುಗಳನ್ನು ಸ್ಮರಿಸಿದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ತ್ಯಾಗರಾಜನ್ ಕೆ, ಡಿವೈಎಸ್‍ಪಿ ರಾಜೀವ್ ಮಾಂಗ್ ಸೇರಿದಂತೆ ಇಲಾಖಾಧಿಕಾರಿಗಳು, ಪತ್ರಕರ್ತರು, ಮುಖಂಡರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಲ್ಲಿಸಿದರು. ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯ ಆರ್.ಪಿ.ಐ ಮತ್ತು ಡಿ.ಎ.ಆರ್ ನೇತೃತ್ವದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಎರಡು ನಿಮಿಷ ಮೌನಾಚರಿಸಲಾಯಿತು.

ದಸರಾ ಹಬ್ಬ : ಜಿಲ್ಲಾ ಉಸ್ತುವಾರಿ ಸಚಿವರಿಂದ ಶುಭಾಷಯ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ) : ನಾಡಹಬ್ಬ ಎನಿಸಿರುವ ದಸರಾ ಹಬ್ಬವು, ರೈತರ ಸಂಕಷ್ಟವನ್ನು ದೂರ ಮಾಡಿ, ಈ ನಾಡಿನಲ್ಲಿ ಉತ್ತಮ ಮಳೆ, ಬೆಳೆಯೊಂದಿಗೆ ಜನರಿಗೆ ನೆಮ್ಮದಿ ಹಾಗೂ ಸಮೃದ್ಧಿಯನ್ನು ತರುವಂತಾಗಲಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಶುಭಾಷಯ ಸಂದೇಶದಲ್ಲಿ ಕೋರಿದ್ದಾರೆ.

ಗೌರವಧನ : ಅ. 28 ರ ಸಭೆಯಲ್ಲಿ ಮಾಹಿತಿ ಸಲ್ಲಿಸಲು ಸೂಚನೆ

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯ, ಕೊಪ್ಪಳ ಇವರಿಂದ, ಗೌರವಧನಕ್ಕೆ ಸಂಬಂಧಪಟ್ಟಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ಮಸ್ಜೀದ್‍ಗಳ ಪೇಶ್ ಇಮಾಮ್ ಮತ್ತು ಮೌಜ್ಜನರು ಅ.28 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿರುವ ಸಭೆಗೆ ಹಾಜರಾಗಿ ಮಾಹಿತಿ ಸಲ್ಲಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
     ಈಗಾಗಲೇ ಪೇಶ್ ಇಮಾಮ್ ಮತ್ತು ಮೌಜ್ಜನರಿಗೆ ಸರ್ಕಾರದಿಂದ ನೀಡಲಾಗುತ್ತಿರುವ  ಗೌರವಧನವನ್ನು ಇಲ್ಲಿಯವರೆಗೂ ಪಡೆಯದೇ ಇರುವವರು, ಬೇರೆಯವರ ಹೆಸರಿನ ಖಾತೆಗೆ ಗೌರವಧನ ಜಮಾ ಆದವರು ಹಾಗೂ ಗೌರವಧನ ಪಡೆಯಲು ಅರ್ಜಿ ಸಲ್ಲಿಸಲಿಚ್ಚಿಸುವವರು ತಮ್ಮ ಬ್ಯಾಂಕ್ ಖಾತೆಯ ವಿವರ, ಭರ್ತಿ ಮಾಡಿದ ಅರ್ಜಿ ಇತ್ಯಾದಿ ದಾಖಲೆಗಳೊಂದಿಗೆ ಅ.28 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿರುವ ಸಭೆಗೆ ಹಾಜರಾಗಿ ಮಾಹಿತಿ ಸಲ್ಲಿಸಬಹುದಾಗಿದೆ. ಅಲ್ಲದೆ ಸಭೆಯಲ್ಲಿ ಪ್ರಧಾನಮಂತ್ರಿ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದ್ದು, ಯೋಜನೆಯ ಲಾಭ ಪಡೆಯಲಿಚ್ಛಿಸುವವರು ಸಭೆಗೆ ಹಾಜರಾಗಿ ಸದುಪಯೋಗ ಪಡೆದುಕೊಳ್ಳುವಂತೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ಭಾರಿ ವಾಹನ ಚಾಲನಾ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕೌಶಲ್ಯ ಕಾರ್ಯಕ್ರಮದಡಿ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ನಿರುದ್ಯೋಗಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಆಯ್ಕೆಗೊಳ್ಳುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ಸಂಸ್ಥೆಗಳ ಮೂಲಕ ಬೆಂಗಳೂರು, ಮಳವಳ್ಳಿ, ಹಾಸನ, ಹುಮನಾಬಾದ್, ಹಗರಿಬೊಮ್ಮನಹಳ್ಳಿ ಮತ್ತು ಹುಬ್ಬಳ್ಳಿಯಲ್ಲಿ ತರಬೇತಿ ನೀಡಲಾಗುವುದು. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿದ್ದು, ತರಬೇತಿ ಭತ್ಯೆ ನೀಡಲಾಗುವುದು. ಆಸಕ್ತ ಪ್ರವರ್ಗ-01, 2ಎ, 3ಎ ಹಾಗೂ 3ಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಪಡೆದು, ಭರ್ತಿ ಮಾಡಿ, ನವೆಂಬರ್ 09 ರೊಳಗಾಗಿ ಅದೇ ಕಛೇರಿಗೆ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ ತಿಳಿಸಿದ್ದಾರೆ.

ಅ.22 ರಂದು ಮೋರನಾಳದಲ್ಲಿ ನಾಟಕ ಪ್ರದರ್ಶನ

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಪ್ಪಳ ಹಾಗೂ ಶ್ರೀ ಮಾರುತೇಶ್ವರ ಭಜನಾ ಸಂಘ, ಮೋರನಾಳ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ದೇವಿ ಮಹಾತ್ಮೆ ನಾಟಕ ಪ್ರದರ್ಶನವನ್ನು ಅ.21 ರಂದು ರಾತ್ರಿ 10.25 ಗಂಟೆಗೆ ತಾಲೂಕಿನ ಮೋರನಾಳ ಗ್ರಾಮದಲ್ಲಿ ಏರ್ಪಡಿಸಲಾಗಿದೆ.
     ಶಾಸಕ ಕೆ.ರಾಘವೇಂದ್ರ ಹಿಟ್ನಾಳ ನಾಟಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಸಂಸದ ಸಂಗಣ್ಣ ಕರಡಿ ಜ್ಯೋತಿ ಬೆಳಗಿಸುವರು. ಬೆಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹನುಮಮ್ಮ ಬಿ.ಕಂಬಳಿ ಅಧ್ಯಕ್ಷತೆ ವಹಿಸಲಿದ್ದು, ಗ್ರಾಮ ಪಂಚಾಯತ್ ಸದಸ್ಯ ದ್ಯಾಮಣ್ಣ ನೀರಲಗಿ, ಅಂದಪ್ಪ ಚಿಲಗೋಡ, ದೇವಕ್ಕ ಮಾಗಳದ, ಭರಮಣ್ಣ ಭಾವಿ, ಹನುಮವ್ವ ಹಾರನಹಳ್ಳಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿ.ಕೊಟ್ರಪ್ಪ ತಿಳಿಸಿದ್ದಾರೆ.

ಕೊಪ್ಪಳ : ನೀರನ್ನು ಕುದಿಸಿ, ಆರಿಸಿ ಕುಡಿಯಲು ಮನವಿ

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ಕೊಪ್ಪಳ ನಗರಸಭೆ ವತಿಯಿಂದ ನಗರಕ್ಕೆ  ಸರಬರಾಜಾಗುತ್ತಿರುವ ಕುಡಿಯುವ ನೀರನ್ನು ಕಾಯಿಸಿ, ಸೋಸಿ ಕುಡಿಯುವಂತೆ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
     ಕೊಪ್ಪಳ ನಗರಕ್ಕೆ ಸರಬರಾಜು ಮಾಡುತ್ತಿರುವ ತುಂಗಭದ್ರಾ ನದಿಯಲ್ಲಿನ ನೀರು ಕೆಲ ದಿನಗಳಿಂದ ಕಲುಷಿತಗೊಂಡಿರುವುದಾಗಿ ತಿಳಿದುಬಂದಿದೆ.  ಸಾರ್ವಜನಿಕರ ಬಳಕೆಗಾಗಿ ನದಿ ನೀರನ್ನು ಶುದ್ಧೀಕರಿಸಿ ನೀಡಲಾಗುತ್ತಿದೆ ಆದರೂ ಸಹ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಕುಡಿಯುವ ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು ಎಂದು ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ ಹಾಗೂ ಪೌರಾಯುಕ್ತ ರಮೇಶ ಪಟ್ಟೇದಾರ್ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಅ. 25 ರಂದು ಈಶಾನ್ಯದ ಐಸಿರಿ 6 ನೇ ಸಂಚಿಕೆ ಪ್ರಸಾರ

ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸÀುವ “ಈಶಾನ್ಯದ ಐಸಿರಿ” ಸರಣಿಯ 6 ನೇ ಸಂಚಿಕೆ ಅ. 25 ರಂದು ಬೆಳಿಗ್ಗೆ 9-55 ಗಂಟೆಗೆ ಕೊಪ್ಪಳ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
     ಈ ಕಾರ್ಯಕ್ರಮವನ್ನು ಕಲಬುರಗಿ ಆಕಾಶವಾಣಿ ಕೇಂದ್ರ ರೂಪಿಸಿದ್ದು, ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದೆ. ಈ ಸರಣಿಯ 6ನೆಯ ಸಂಚಿಕೆ ದಿನಾಂಕ 25-10-2015 ರಂದು ಬೆಳಿಗ್ಗೆ 9.55 ಕ್ಕೆ ಪ್ರಸಾರವಾಗಲಿದೆ. ಅಂದು ಪ್ರಧಾನಿಯವರ ‘ಮನ್ ಕಿ ಬಾತ ‘ ಪ್ರಸಾರವಾಗುವುದರಿಂದ 5 ನಿಮಿಷ ಮೊದಲೇ ಅಂದರೆ 9-55 ಕ್ಕೆ  “ಈಶಾನ್ಯದ ಐಸಿರಿ “ ಪ್ರಸಾರ ಪ್ರಾರಂಭವಾಗಲಿದೆ.  6ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಖಮರುಲ್ ಇಸ್ಲಾಂ ಅವರು ಭಾಗವಹಿಸಿ ತಮ್ಮ ಕನಸುಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಸಲದ ಸಂಚಿಕೆಯಲ್ಲಿ ತೊಗರಿ ಬೆಳೆಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಕೊಟ್ಟಿರುವ ಅನುದಾನದ ಬಗ್ಗೆ ಹೇಳಲಿದ್ದಾರೆ. ಯಾದಗಿರಿಯ ಶಾಸಕ ಡಾ. ಎ.ಬಿ. ಮಲಕರಡ್ಡಿಯವರು ತಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯ ಕುರಿತಾದ ತಮ್ಮ ಯೋಚನೆ -ಯೋಜನೆಗಳ ಕುರಿತು ಮಾತನಾಡಲಿದ್ದಾರೆ.  ಆಸ್ತಿ ಖರೀದಿ ಮಾಡುವಾಗ ಅವಲೋಕಿಸಬೇಕಾದ ಕಾನೂನು ಕ್ರಮಗಳ ಕುರಿತು ಕಲಬುರ್ಗಿ ರಾಜ್ಯ ಹೈಕೋರ್ಟಿನ ನ್ಯಾಯವಾದಿ ಪಿ. ವಿಲಾಸಕುಮಾರ ಅವರು ತಿಳಿಸಿಕೊಡಲಿದ್ದಾರೆ.  ಬೆಂಗಳೂರಿನ ಅಕ್ಷರ ಫೌಂಡೇಶನ್ನಿನ ಕ್ಷೇತ್ರ ಕಾರ್ಯದ ಮುಖ್ಯಸ್ಥರಾಗಿರುವ ಶಂಕರ ನಾರಾಯಣ ಅವರು ಶಾಲೆಗಳಲ್ಲಿ ಕೈಗೊಳ್ಳಲಾಗಿರುವ ಗಣಿತ ಕಲಿಕಾ ಆಂದೋಲನದ ಕುರಿತು ಹೇಳಲಿದ್ದಾರೆ.  ಪರಿಣಿತಾ ಗುಂಪಿನ ಮಹಿಳೆಯರು ಈ ಸಲ ಆಲೂಗಡ್ಡೆಯ ರಸ ಪಲ್ಯೆಯ ತಯಾರಿಕೆ, ಜೇನುತುಪ್ಪ ಹಾಗೂ ಲಿಂಬೆ ಹಣ್ಣುಗಳ ಔಷಧೀಯ ಮಹತ್ವ ಹಾಗೂ ಸರೋಜಿನಿ ನಾಯ್ಡು ಅವರ ಬಗ್ಗೆ ಮಾತುಕತೆ ನಡೆಸಲಿದ್ದಾರೆ.  ಯುವ ಪ್ರತಿಭಾವಂತ ಗಾಯಕರಾಗಿರುವ ಅನಂತರಾಜ ಮೇಸ್ತ್ರಿಯವರ  ಜೊತೆಗಿನ ಮಾತುಕತೆ ಮೂಡಿ ಬರಲಿದೆ.  ಕುಷ್ಟಗಿ ತಾಲುಕಾ ತೆಗ್ಗಿಹಾಳ ಗ್ರಾಮದ ಹಿರಿಯ ಜನಪದ ಕಲಾವಿದರಾಗಿರುವ ಬಸಪ್ಪ ಚೌಡಕಿಯವರಿಂದ ಚೌಡಕಿ ಪದವನ್ನು ಕೇಳಬಹುದು.
    ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.
    ಸರಣಿಯ ನಿರೂಪಣಾ ಸಾಹಿತ್ಯ, ನಿರ್ವಹಣೆ ಹಾಗೂ ನಿರ್ಮಾಣದ ಜವಬ್ದಾರಿಯನ್ನು ಕಾರ್ಯಕ್ರಮ ಅಧಿಕಾರಿಯಾಗಿರುವ ಸೋಮಶೇಖರ ಎಸ್. ರುಳಿ ಅವರು ವಹಿಸಿಕೊಂಡಿದ್ದಾರೆ  ಎಂದು ನಿಲಯದ ಮುಖ್ಯಸ್ಥೆಯಾಗಿರುವ ಅಂಜನಾ ಯಾತನೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊಹರಂ : ಗಿಡ-ಮರ ಕಡಿಯುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಕೊಪ್ಪಳ ಅ. 21 (ಕ.ವಾ): ಮೊಹರಂ ಹಬ್ಬದ ಆಚರಣೆ ಸಂದರ್ಭದಲ್ಲಿ ಯಾವುದೇ ಬಗೆಯ ಗಿಡ-ಮರಗಳನ್ನು ಕಡಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಎಚ್ಚರಿಕೆ ನೀಡಿದ್ದಾರೆ.
     ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಅರಣ್ಯೀಕರಣ ಅಭಿಯಾನಕ್ಕಾಗಿ ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಚಾಲನೆ ನೀಡಲಾಗಿದೆ.  ಆದರೆ ಗ್ರಾಮೀಣ ಪ್ರದೇಶದ ಕೆಲವೆಡೆ ಸರ್ವಧರ್ಮೀಯರ ಧಾರ್ಮಿಕ ಹಬ್ಬ ಮೊಹರಂ ಹಬ್ಬ ಆಚರಣೆ ಸಂದರ್ಭದಲ್ಲಿ ವಿನಾ ಕಾರಣ ಬೆಳೆಯುವ ಗಿಡಗಳನ್ನು ಕಡಿದು ಬಳಸುವ ಸಾಧ್ಯತೆಗಳಿರುವ ಬಗ್ಗೆ ವರದಿಗಳು ಬಂದಿವೆ.  ಇದರಿಂದಾಗಿ ಪರಿಸರ ನಾಶವಾಗುವುದಲ್ಲದೆ, ಇದರ ದುಷ್ಪರಿಣಾಮವನ್ನು ಇಡೀ ಮನುಕುಲ ಅನುಭವಿಸುವ ಸ್ಥಿತಿ ನಿರ್ಮಾಣವಾಗಲಿದೆ.  ಪರಿಸರ ನಾಶದ ಕಾರಣದಿಂದಾಗಿ ಮಳೆಯ ಕೊರತೆ ಉಂಟಾಗುತ್ತಿದ್ದು, ಬರ ಪರಿಸ್ಥಿತಿ ತಲೆದೋರಿದೆ.  ಇದರ ನೇರ ಪರಿಣಾಮವನ್ನು ರೈತ ಬಾಂಧವರು ಅನುಭವಿಸುತ್ತಿದ್ದಾರೆ. ಧಾರ್ಮಿಕ ಕಾರ್ಯಗಳಿಗೆ ಒಣಗಿರುವ ಕಟ್ಟಿಗೆ ಬಳಸುವುದನ್ನು ಬಿಟ್ಟು, ಬೆಳೆದು ಹೆಮ್ಮರವಾಗಬೇಕಾಗಿರುವ ಸಣ್ಣ ಗಿಡಗಳನ್ನು ಕಡಿಯುವುದು, ಅಥವಾ ಮರಗಳ ರೆಂಬೆಗಳನ್ನು ಕತ್ತರಿಸಿ ಉಪಯೋಗಿಸುವುದು ತರವಲ್ಲ.  ಪರಿಸರವನ್ನು ಕಾಪಾಡಿಕೊಳ್ಳುವುದು ಎಲ್ಲ ಸಾರ್ವಜನಿಕರ ಕರ್ತವ್ಯವಾಗಿದೆ.  ಗಿಡಗಳನ್ನು ಕಡಿಯುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೆ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಯಾರೂ ಗಿಡಗಳನ್ನು ಕಡಿಯದಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದಿಂದ ಟಿಪ್ಪು ಜಯಂತಿ : ಅ. 28 ರಂದು ಪೂರ್ವಭಾವಿ ಸಭೆ

ಕೊಪ್ಪ ಅ. 21 (ಕರ್ನಾಟಕ ವಾರ್ತೆ): ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ನವೆಂಬರ್ 10 ರಂದು ಸರ್ಕಾರದ ವತಿಯಿಂದ ಆಚರಿಸಲು ಈಗಾಗಲೆ ಸರ್ಕಾರ ಆದೇಶಿಸಿದ್ದು, ಈ ಕುರಿತು ಸಿದ್ಧತೆಗಳನ್ನು ಕೈಗೊಳ್ಳಲು ಪೂರ್ವಭಾವಿ ಸಭೆ ಅ. 28 ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಭೆಯ ಅಧ್ಯಕ್ಷತೆಯನ್ನು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ವಹಿಸುವರು.  ಈ ಸಭೆಗೆ ಅಲ್ಪಸಂಖ್ಯಾತರ ಸಮುದಾಯವೂ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಗೆ ಆಗಮಿಸುವಂತೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರು ಮನವಿ ಮಾಡಿದ್ದಾರೆ.

ಗಂಗಾವತಿ : 2014-15 ನೇ ಸಾಲಿನ ವಿದ್ಯಾರ್ಥಿ ವೇತನ ಅನುದಾನ ಬಿಡುಗಡೆ

ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗಂಗಾವತಿ ತಾಲೂಕಿನ 2014-15 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಪಾವತಿಗಾಗಿ ಒಟ್ಟು 24 ಲಕ್ಷ ರೂ. ಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಅವರು ತಿಳಿಸಿದ್ದಾರೆ.
     ಗಂಗಾವತಿ ತಾಲೂಕಿನ 2014-15 ನೇ ಸಾಲಿನ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಪಾವತಿಗಾಗಿ 9. 02 ಲಕ್ಷ ರೂ.  ಹಾಗೂ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಪಾವತಿಗಾಗಿ 14. 97 ಲಕ್ಷ ರೂ.ಗಳ ಅನುದಾನವನ್ನು ಸಂಬಂಧಪಟ್ಟ ಕಾಲೇಜು ಪ್ರಾಚಾರ್ಯರಿಗೆ ಹಾಗೂ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ.  ಪ್ರಾಚಾರ್ಯರುಗಳು ಕೂಡಲೆ ಈ ಕುರಿತು ಕ್ರಮ ಕೈಗೊಂಡು ಸಮಾಜ ಕಲ್ಯಾಣ ಇಲಾಖೆಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಅವರು ತಿಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ

ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ವಿಶೇಷ ಚಿಕಿತ್ಸಾ ಘಟಕ (ನಿರ್ಭಯ ಕೇಂದ್ರ) 181 ಜಾಗೃತಿ ಕಾರ್ಯಕ್ರಮವನ್ನು ಬುಧವಾರದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಯಿತು.
      ಈ ಕಾರ್ಯಕ್ರಮದಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಸಿಬ್ಬಂದಿಗಳು ಹಾಗೂ ಪ್ರಾಚಾರ್ಯರು/ ಸಿಬ್ಬಂದಿಗಳೂ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಉದ್ದೇಶ ಮತ್ತು ದೊರೆಯುವ ಉಚಿತ ಸೇವೆಗಳ ಬಗ್ಗೆ  ಈ ಕುರಿತು ಸಮಾಲೋಚಕರಾದ ಶಿಲ್ಪಾ ಬಾರಕೇರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು ನಂತರ ಕಾನೂನು ಸಲಹೆಗಾರರಾದ ಗೌರಮ್ಮ ದೇಸಾಯಿ ಅವರು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸಮಸ್ಯೆಗಳ ಬಗ್ಗೆ  ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಪೋಕ್ಸೋ ಕಾನೂನಿನ ತೀವ್ರತೆ ಕುರಿತು ಅಮಾಯಕ ವಿದ್ಯಾರ್ಥಿಗಳು ಅಪರಾಧಿಯಾಗಿ ನಿಲ್ಲುವಂತಹ ಸಂದರ್ಭಗಳು, ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಮಾಡಲಾಯಿತು.

ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ತಾಲೂಕಿನ ಭಾಗ್ಯನಗರ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಸರ್ಕಾರ ಮೇಲ್ದರ್ಜೆಗೇರಿಸಿದ್ದು, ಇದೀಗ ಇದರ ಆಡಳಿತಾಧಿಕಾರಿಯನ್ನಾಗಿ ಕೊಪ್ಪಳ ತಹಶೀಲ್ದಾರ್ ಪುಟ್ಟರಾಮಯ್ಯ ಅವರನ್ನು ನೇಮಿಸಿ, ಪ್ರಭಾರಿ ಜಿಲ್ಲಾಧಿಕಾರಿ ಡಾ|| ಜಿ.ಎಲ್.ಪ್ರವೀಣಕುಮಾರ ಆದೇಶ ಹೊರಡಿಸಿದ್ದಾರೆ.
     ಆಡಳಿತಾತ್ಮಕ ಹಿತದೃಷ್ಠಿಯಿಂದ ಮುಂದಿನ ಚುನಾಯಿತ ಕೌನ್ಸಿಲ್ ಅಸ್ತ್ತಿತ್ವಕ್ಕೆ ಬರುವವರೆಗೂ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ಕೊಪ್ಪಳ ತಹಶೀಲ್ದಾರ್ ಇವರನ್ನು ಆಡಳಿತಾಧಿಕಾರಿಯನ್ನಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ನೇಮಕಾತಿ ಮಾಡಿ ಪ್ರಭಾರಿ ಜಿಲ್ಲಾಧಿಕಾರಿ ಡಾ|| ಜಿ.ಎಲ್.ಪ್ರವೀಣಕುಮಾರ ಆದೇಶ ಹೊರಡಿಸಿದ್ದಾರೆ.

ಕಡಲೆ ಬೆಳೆಯಲ್ಲಿ ಎಲೆ ತಿನ್ನುವ ಕೀಡೆ ಬಾಧೆ : ನಿರ್ವಹಣೆಗೆ ಸಲಹೆಗಳು

ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದ್ದು ಮೊಳಕೆ ಹಾಗೂ ಬೆಳವಣಿಗೆ ಹಂತದಲ್ಲಿದೆ. ಈಗಾಗಲೆ ಕೆಲವು ಗ್ರಾಮಗಳಲ್ಲಿ ಈ ಬೆಳೆ ಎಲೆ ತಿನ್ನುವ ಹುಳುಗಳ ಬಾಧೆಗೊಳಗಾಗುತ್ತಿದೆ. ಎಲೆ ತಿನ್ನುವ ಕೀಡೆಗಳು ಪ್ರಾರಂಭಿಕ ಹಂತದಲ್ಲಿ ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ನಂತರ ಎಲೆ, ಮೊಗ್ಗು ಮತ್ತು ಕಾಯಿಗಳನ್ನು ತಿನ್ನುತ್ತವೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಸಾಕಷ್ಟು ಬೆಳೆ ನಷ್ಟವಾಗುವ ಸಂಭವವಿರುತ್ತದೆ.
     ಕೀಡೆ ಹಾಗು ರೋಗ ನಿರ್ವಹಣಾ ಕ್ರಮಗಳಿಗೆ ಸಲಹೆಗಳು ಇಂತಿವೆ.  ಕಡಲೆ ಬಿತ್ತುವಾಗ ಎಕರೆಗೆ 50 ಗ್ರಾಂ ನಷ್ಟು ಜೋಳ ಹಾಗೂ ಸೂರ್ಯಕಾಂತಿ ಬೀಜಗಳನ್ನು ಬಿತ್ತುವುದರಿಂದ ಪಕ್ಷಿಗಳಿಗೆ ಕೀಡೆಗಳನ್ನು ಹೆಕ್ಕಿ ತಿನ್ನಲು ಸಹಕಾರಿಯಾಗುತ್ತವೆ.  ಹಕ್ಕಿಗಳು ಕೀಡೆಗಳನ್ನು ತಿನ್ನಲು ಆಶ್ರಯಕ್ಕೆ ಎತ್ತರವಿರುವ ಮರದ ಟೊಂಗೆಗಳನ್ನು ಅಲ್ಲಲ್ಲಿ ನೆಡಬೇಕು.  ಮೊದಲನೆಯ ಸಿಂಪರಣೆಯಾಗಿ ತತ್ತಿಗಳನ್ನು ನಾಶಪಡಿಸಲು 0.6 ಗ್ರಾಂ ಮಿಥೋಮಿಲ್ 40 ಎಸ್.ಪಿ ಅಥವಾ 0.6 ಗ್ರಾಂ ಥೈಯೋಡಿಕಾರ್ಬ್ 75 ಡಬ್ಲ್ಯೂ ಪಿ ಅಥವಾ 2 ಮಿ.ಲೀ ಪ್ರೋಫೆನೋಫಾಸ್ 50 ಇ.ಸಿ ಪ್ರತೀ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  10 ಗಿಡಗಳಲ್ಲಿ ಒಂದು ಕೀಡೆ ಕಂಡುಬಂದರೆ ಪ್ಲೂಬೆಂಡಿಯೊಮೈಡ್ 480 ಎಸ್.ಸಿ 0.075 ಮಿ.ಲೀ, ರೈನಾಕ್ಷಿಪೈರ್ 0.15 ಮಿ.ಲೀ, 0.3 ಮಿ.ಲೀ ಇಂಡಾಕ್ಸಕಾರ್ಬ್ 15 ಎಸ್.ಸಿ ಅಥವಾ 0.1 ಮಿ.ಲೀ ಸ್ಪೈನೋಸ್ಯಾದ್, 2.5 ಮಿ.ಲೀ ಕ್ಲೋರ್‍ಪೈರಿಫಾಸ್ 20 ಇ.ಸಿ ಅಥವಾ 2 ಮಿ.ಲೀ ಕ್ವಿನಾಲ್‍ಫಾಸ್ 25 ಇ.ಸಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  1 ಕೆ.ಜಿ ಬೆಳ್ಳುಳ್ಳಿಯನ್ನು 100 ಮಿ.ಲೀ ಸೀಮೆ ಎಣ್ಣೆಯಲ್ಲಿ ನೆನೆಸಿ ಮಿಕ್ಸಿಯಲ್ಲಿ ರುಬ್ಬಿ ಮೂರು ಲೀಟರ್ ದ್ರಾವಣ ತಯಾರಿಸಿ ಎರಡು ದ್ರಾವಣಗಳನ್ನು ನಾಲ್ಕು ನೂರು ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಸಿಂಪರಣೆಗೆ ಉಪಯೋಗಿಸಿ. ಶೇ.5ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು. ಈ ದ್ರಾವಣದ ಜೊತೆಗೆ 100 ಗ್ರಾಂ ಸಾಬೂನಿನ ಪುಡಿಯನ್ನು 300 ರಿಂದ 400 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಕಾಳು ಕಟ್ಟುವ ಹಂತದಲ್ಲಿ ಪ್ರತೀ ಎಕರೆಗೆ 10 ಸೇರು ಚುರುಮುರಿ (ಮಂಡಕ್ಕಿ/ಮಂಡುಳು) ಹೊಲದ ತುಂಬೆಲ್ಲ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಡೆ ತಿನ್ನಲು ಪ್ರೋತ್ಸಾಹಿಸಿದಂತಾಗುತ್ತದೆ.
ನೆಟೆ/ಸಿಡಿ ರೋಗದ ನಿರ್ವಹಣೆಗೆ, ಬಿತ್ತುವಾಗ ಪ್ರತೀ ಕೆ.ಜಿ ಬೀಜಕ್ಕೆ 4 ಗ್ರಾಂ ಟ್ರೈಕೋಡರ್ಮ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಬೇಕು.  ರೋಗ ಪೀಡಿತ ಸಸ್ಯಗಳನ್ನು ಕಿತ್ತು ನಾಶಪಡಿಸಬೇಕು
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯ ತಜ್ಞರಾದ ರೋಹಿತ್ ಕೆ.ಎ (9845194328) ಇವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ (9480696319) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.04 ರಂದು ಕೊಪ್ಪಳ ಜಿ.ಪಂ. ಸಾಮಾನ್ಯ ಸಭೆ

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ನ. 04 ರಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ವಹಿಸುವರು.  ಸಭೆಯಲ್ಲಿ ಪ್ರಸಕ್ತ ಸಾಲಿನ ವಿವಿಧ ಯೋಜನೆಗಳ ಅನುಷ್ಠಾನ ವಿವರ, ಕುಡಿಯುವ ನೀರಿನ ಯೋಜನೆಗಳು, ಉದ್ಯೋಗ ಖಾತ್ರಿ ಕಾಮಗಾರಿಗಳ ಕ್ರಿಯಾ ಯೋಜನೆ ಹಾಗೂ ಅನುಷ್ಠಾನ, ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳಿಗೆ ಭೂದಾನ ನೀಡಿರುವ ಪ್ರಕರಣಗಳು, ವಯಕ್ತಿಕ ಶೌಚಾಲಯ ನಿರ್ಮಾಣ ಪ್ರಗತಿ, ಕಸ ವಿಲೇವಾರಿ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುವ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.

ನ.16 ರಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಇವರಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜಿಲ್ಲೆಯಾದ್ಯಂತ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು  ನ.16 ರಿಂದ ನ.30 ರವರೆಗೆ ಹಮ್ಮಿಕೊಳ್ಳಲಾಗಿದೆ.
     ಮಕ್ಕಳ ಗ್ರಾಮ ಸಭೆಯ ಉದ್ದೇಶ ಇಂತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸೇವಾ ನಿರ್ವಾಹಕರು ಒಗ್ಗೂಡಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಮಕ್ಕಳ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಹಂಚಿಕೊಳ್ಳುವುದು. ನಿರ್ದಿಷ್ಟ ಮಕ್ಕಳ ಅಭಿವೃದ್ಧಿ ಯೋಜನೆಯ ನಿರ್ಮಾಣ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಯಲ್ಲಿ ಭೌತಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಗಮನ ನೀಡುವುದರ ಜೊತೆಗೆ, ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆಗೆ ಆದ್ಯತೆ ನೀಡುವುದು ಮಾತ್ರವಲ್ಲದೆ, ಮಕ್ಕಳ ಹಕ್ಕುಗಳ ರಕ್ಷಣೆಗೆ ವ್ಯಾಪಕ ಚರ್ಚೆ ಹಾಗೂ ಪ್ರಚಾರ ನೀಡುವುದು ಕೂಡಾ ಮಕ್ಕಳ ಗ್ರಾಮ ಸಭೆಯ ಉದ್ದೇಶವಾಗಿದೆ.
     ವಿವಿಧ ಗ್ರಾಮಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯುವ ದಿನಾಂಕ ಮತ್ತು ಗ್ರಾಮಗಳ ವಿವರ ಇಂತಿದೆ. 
ಕೊಪ್ಪಳ ತಾಲೂಕು :  ನ.16 ಬೆಟಗೇರಿ, ಭಾಗ್ಯನಗರ, ಇಂದರಗಿ, ನ.17 ಗಿಣಿಗೇರಿ, ಕವಲೂರು, ಹಾಸಗಲ್, ನ.18 ರಂದು ಕುಣಿಕೇರಿ, ಗೊಂಡಬಾಳ, ಕಲಕೇರಿ, ನ.19 ಬಹದ್ದೂರಬಂಡಿ, ಇರಕಲ್‍ಗಡಾ, ಬೇವಿನಹಳ್ಳಿ, ನ.20 ಹುಲಿಗಿ, ಹೊಸಳ್ಳಿ, ಕೋಳೂರು, ನ.21 ಸಿಂಧೋಗಿ, ಹಟ್ಟಿ, ಬೋಚನಹಳ್ಳಿ, ನ.23 ಬಿಸರಹಳ್ಳಿ, ಕಿನ್ನಾಳ, ಚಿಕ್ಕಬೊಮ್ಮನಾಳ, ಮಾದಿನೂರು, ನ.24 ರಂದು ಹಿರೇಬಗನಾಳ, ಹಿಟ್ನಾಳ, ಹಲಗೇರಿ, ನ.25 ಬಂಡಿಹರ್ಲಾಪುರ, ಕಾತರಕಿ-ಗುಡ್ಲಾನೂರು, ಮುನಿರಾಬಾದ್, ನ.26 ಅಗಳಕೇರಾ, ಶಿವಪುರ, ಮತ್ತೂರು, ನ.27 ಬೂದಗುಂಪಾ, ಲೇಬಗೇರಿ, ಹಾಲವರ್ತಿ, ಗುಳದಳ್ಳಿ, ನ.30 ವಣಬಳ್ಳಾರಿ, ಓಜನಹಳ್ಳಿ, ಕಲ್‍ತಾವರಗೇರಾ, ಹಿಟ್ನಾಳ.
ಗಂಗಾವತಿ : ನ.16 ಯರಢೋಣಿ, ಕಾರಟಗಿ, ಬರಗೂರು, ನ.17 ಚಿಕ್ಕಡಂಕನಕಲ್, ಹಿರೇಖೇಡ, ಕರಡೋಣ, ನ.18 ಗೌರಿಪುರ, ಮುಸಲಾಪುರ, ಹೊಸಕೇರಾ, ಮೈಲಾಪುರ, ನ.19 ಆಗೋಲಿ, ಹಣವಾಳ, ಚಿಕ್ಕಮಾದಿನಾಳ, ನ.20 ವೆಂಕಟಗಿರಿ, ಹೇರೂರು, ಮರ್ಲಾನಹಳ್ಳಿ, ಸಾಣಾಪುರ, ನ.21 ಕೇಸರಹಟ್ಟಿ, ಬಸಾಪಟ್ಟಣ, ಮಲ್ಲಾಪುರ, ಹಿರೇಖೇಡ, ನ.23 ವಡ್ಡರಹಟ್ಟಿ, ಚಿಕ್ಕಜಂತಕಲ್, ಬಸರಿಹಾಳ, ಜೀರಾಳ, ನ.24 ಚಿಕ್ಕಬೆಣಕಲ್, ಹುಲಿಹೈದರ, ಉಳ್ಕಿಹಾಳ, ಡಣಾಪುರ, ನ.25 ಶ್ರೀರಾಮನಗರ, ಬೂದಗುಂಪ, ಸುಳೇಕಲ್, ನವಲಿ, ನ.26 ಮುಷ್ಟೂರು, ಕನಕಗಿರಿ, ಚಳ್ಳೂರು, ನ.27 ಯರಡೋಣಿ, ಸಿದ್ಧಾಪುರ, ಉಳೇನೂರು, ಸಂಗಾಪುರ, ನ.30 ಬೆನ್ನೂರು, ಗುಂಡೂರು, ಆನೆಗೊಂದಿ, ಜಂಗಮರಕಲ್ಗುಡಿ.
ಕುಷ್ಟಗಿ : ನ.16 ಮಾಳಗಿತ್ತಿ, ಹಿರೇಗೊನ್ನಾಗರ, ಜಾಗೀರ್‍ಗುಡದೂರು, ನ.17 ಯರಗೇರಾ, ಹನುಮಸಾಗರ, ತುಗ್ಗಲಡೋಣಿ, ನ.18 ಕಬ್ಬರಗಿ, ಕಾಟಾಪುರ, ಲಿಂಗದಳ್ಳಿ, ನ.19 ಹೂಲಗೇರಾ, ಅಡವಿಭಾವಿ, ನಿಲೂಗಲ್, ನ.20 ಚಳಗೇರಾ, ತಾವರಗೇರಾ, ಶಿರಗುಂಪಿ, ನ.21 ಕೊರಡಕೇರಾ, ಹಿರೇಬನ್ನಿಗೋಳ, ಕೇಸೂರು, ನ.23 ಕಂದಕೂರು, ಬಿಜಕಲ್, ಹನುಮನಾಳ, ನ.24 ದೋಟಿಹಾಳ, ಕ್ಯಾದಿಗುಪ್ಪಾ, ಹಿರೇನಂದಿಹಾಳ, ನ.25 ಹಿರೇಮನ್ನಾಪುರ, ಮುದೇನೂರು, ತುಮರಿಕೊಪ್ಪ, ನ.26 ತಾವರಗೇರಾ, ಮೆಣೆದಾಳ, ನ.27 ರಂದು ಜುಮಲಾಪುರ, ಕಿಲ್ಲಾರಹಟ್ಟಿ, ಸಂಗನಹಾಳ, ಬೆನಕನಹಾಳ, ನ.30, ಅಂಟರಠಾಣಾ, ಬಿಳೇಕಲ್, ಗುಮಗೇರಾ, ಹಾಬಲಕಟ್ಟಿ.
ಯಲಬುರ್ಗಾ : ನ.16 ಬನ್ನಿಕೊಪ್ಪ, ರಾಜೂರು, ಹಿರೇಮ್ಯಾಗೇರಿ, ನ.17 ಸಂಗನಹಾಳ, ಕುಕನೂರು, ಶಿರೂರು, ನ.18 ಭಾನಾಪುರ, ಬಳಗೇರಿ, ಚಿಕ್ಕಮ್ಯಾಗೇರಿ, ಮಸಬಹಂಚಿನಾಳ, ನ.19 ಮಂಡಲಗಿರಿ, ಹಿರೇವಂಕಲಕುಂಟಾ, ಯರೇಹಂಚಿನಾಳ, ತುಮ್ಮರಗುದ್ದಿ, ನ.20 ಮುಧೋಳ, ಕರಮುಡಿ, ಹಿರೇಬೀಡ್ನಾಳ, ನ.21 ವಣಗೇರಿ, ಮುರಡಿ, ವಟಪರವಿ, ಬಂಡಿ ನ.23 ಬಳೂಟಗಿ, ಬೇವೂರು, ತಾಳಕೇರಿ, ನ.24 ಕಲ್ಲೂರು, ಮಾಟಲದಿನ್ನಿ, ಇಟಗಿ, ನ.25 ಮಂಗಳೂರು, ಹಿರೇಅರಳಿಹಳ್ಳಿ, ಬೇವಿನಹಳ್ಳಿ, ನ.26 ಗದಗೇರಿ, ನ.27 ಕುದರಿಮೋತಿ, ಬೆಣಕಲ್, ಗಾಣದಾಳ, ನ.30 ಗುನ್ನಾಳ, ತಳಕಲ್, ವಜ್ರಬಂಡಿ.
     ನಿಗದಿತ ದಿನ ಹಾಗೂ ಗ್ರಾಮಗಳಲ್ಲಿ ತಪ್ಪದೇ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಕಡ್ಡಯವಾಗಿ ಹಮ್ಮಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ||ಜಿ.ಎಲ್.ಪ್ರವೀಣಕುಮಾರ ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನ.16 ರಿಂದ ಮಕ್ಕಳ ಹಕ್ಕುಗಳ ಗ್ರಾಮಸಭೆ ಆಚರಿಸಲು ಸೂಚನೆ

ಕೊಪ್ಪಳ,ಅ 21 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಸ್ಥಿತಿಗತಿಗಳನ್ನು ಚರ್ಚಿಸಿ ವಿಶ್ಲೇಷಿಸಿ ಪಂಚಾಯತ್ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ  ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಇದೇ ನ.16 ರಿಂದ ನ.30 ರವರೆಗೆ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಳ್ಳಲಾಗಿದ್ದು ವಿವಿಧ ಅಂಶಗಳ ಬಗ್ಗೆ ಚರ್ಚಿಸಲು ಸಂಬಂಧಿಸಿದ ಗ್ರಾ.ಪಂ. ಪಿಡಿಓ/ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989 ಜಾರಿಯಾಗಿ 25 ವರ್ಷಗಳನ್ನು ಪೂರೈಸುತ್ತಿದೆ. ಈ ಒಡಂಬಡಿಕೆಗೆ ಭಾರತ ಸರ್ಕಾರವು 1992ರಲ್ಲಿ ಸಹಿ ಮಾಡಿ ಮಕ್ಕಳ ಹಕ್ಕುಗಳ ರಕ್ಷಣೆಗೆ ತನ್ನ ಬದ್ಧತೆಯನ್ನು ಸೂಚಿಸಿ ಮಕ್ಕಳ ಪರವಾದ ಹಲವಾರು ನಿಯಮ, ಕಾಯ್ದೆ, ಯೋಜನೆ, ಕಾರ್ಯಕ್ರಮಗಳನ್ನು ದೇಶದಾದ್ಯಂತ ಜಾರಿಗೊಳಿಸುತ್ತಾ ಬಂದಿದೆ. ಮಕ್ಕಳು ನಮ್ಮ ಸಮಾಜದ ಅವಿಭಾಜ್ಯ ಅಂಗ. ಅವರ ಉಳಿವು, ರಕ್ಷಣೆ ಮತ್ತು ಅಭಿವೃದ್ಧಿ ಎಲ್ಲಾ ಸಮುದಾಯಗಳ ಕರ್ತವ್ಯ. ಆಡಳಿತ ವಿಕೇಂದ್ರೀಕರಣದ ಪ್ರಮುಖ ಹಂತವಾದ ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿಯೇ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ಗುರುತಿಸಿ ಅಂತಹವುಗಳನ್ನು ತಡೆದು ಮಕ್ಕಳನ್ನು ರಕ್ಷಿಸುವಲ್ಲಿ ಗ್ರಾಮ ಪಂಚಾಯತಿಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳ ಮಹತ್ತರ ಜವಾಬ್ದಾರಿಯಾಗಿದೆ.
ವಿವಿಧ ಅಂಶಗಳಾದ ಶಿಶು ಮರಣ ತಡೆಯುವುದು, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಠಿಕ ಆಹಾರವನ್ನು ಒದಗಿಸುವುದು, ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವುದು, ಎಲ್ಲಾ 3 ವರ್ಷದಿಂದ 6 ವರ್ಷದ ಮಕ್ಕಳು ಅಂಗನವಾಡಿಗಳಲ್ಲಿ, 6 ರಿಂದ 14 ವರ್ಷದ ಮಕ್ಕಳು ಶಾಲೆಗಳಲ್ಲಿ ದಾಖಲಾಗಿ ಶಿಕ್ಷಣವನ್ನು ಪಡೆಯುವುದು ಮತ್ತು 14 ರಿಂದ 18 ವರ್ಷದ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಇರುವಂತೆ ಮಾಡುವುದು. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಆಟಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು. ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಜೀತ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು ಮತ್ತು ಅವುಗಳನ್ನು ನಿರ್ಮೂಲನೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು. ಹೆಣ್ಣು ಮಕ್ಕಳ ಪೋಷಣೆ ಹಾಗೂ ರಕ್ಷಣೆ. ಮಕ್ಕಳ ಭಾಗವಹಿಸುವ ಹಕ್ಕನ್ನು ಖಾತರಿ ಪಡಿಸಬೇಕು.
ಮಕ್ಕಳ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಇಲಾಖೆಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚೆ ನಡೆಸಬೇಕು. ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳು, ಪಾಲಕರು, ಗ್ರಾಮಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಸಮುದಾಯ ಸಂಘಟಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂಧಿಗಳು, ಬಾಲ ಕಾರ್ಮಿಕ ಯೋಜನಾ ಸಂಘಧ ಸಿಬ್ಬಂಧಿಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಪೊಲೀಸ್ ಅಧಿಕಾರಿಗಳು, ಸ್ಥಳೀಯ ಗ್ರಾಮ ಲೆಕ್ಕಿಗರು, ಆರೋಗ್ಯ ಕಾರ್ಯಕರ್ತರು ಹಾಗೂ ಇತರರೊಂದಿಗೆ ಗ್ರಾಮ ಸಭೆಯನ್ನು ಆಯೋಜಿಸಬೇಕು.
ಗ್ರಾಮಸಭೆಯನ್ನು ನಡೆಸಬೇಕಾದ ಪೂರ್ವ ತಯಾರಿ ಸಭೆಯಲ್ಲಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಿ.ಡಿ.ಒ/ಕಾರ್ಯದರ್ಶಿ ಮತ್ತು ಎಲ್ಲಾ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳನ್ನು ಸೇರಿಸಿ ಆಯೋಜಿಸಬೇಕು. ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳು ಗ್ರಾಮ ಪಂಚಾಯತ್‍ನ ಮುಂದಿಡುವ ಸಮಸ್ಯೆಗಳಿಗೆ ಅಗತ್ಯ ಪರಿಹಾರ ಕ್ರಮಗಳನ್ನು ನಿಗದಿತ ಸಮಯದಲ್ಲಿ ಪೂರೈಸಬೇಕು. ಅಗತ್ಯವಿದ್ದರೆ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸುವುದು ಮತ್ತು ಅವುಗಳನ್ನು ಪಂಚತಂತ್ರ ತಂತ್ರಜ್ಞಾನದಲ್ಲಿ ಅಳವಡಿಸಬೇಕು. ಪೂರ್ವ ತಯಾರಿ ಸಭೆಯ ವರದಿ, ಗ್ರಾಮ ಸಭೆಯ ನಡಾವಳಿ ಮುಂತಾದ ವರದಿಗಳನ್ನು ಗ್ರಾಮ ಸಭೆ ಮುಗಿದ 10 ದಿನದ ಒಳಗೆ ಆಯಾ ತಾಲ್ಲೂಕುಗಳ ತಾಲ್ಲೂಕ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಡಾ. ಜಿ.ಎಲ್. ಪ್ರವೀಣಕುಮಾರ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 20 October 2015

ಮಕ್ಕಳ ಸಹಾಯವಾಣಿ 1098 ಬಗ್ಗೆ ವ್ಯಾಪಕ ಅರಿವು ಮೂಡಿಸಿ- ಡಾ. ಪ್ರವೀಣಕುಮಾರ್ ಜಿ.ಎಲ್.

ಕೊಪ್ಪಳ ಅ. 20 (ಕರ್ನಾಟಕ ವಾರ್ತೆ) : ಸಂಕಷ್ಟಕ್ಕೆ ಸಿಲುಕಿದ ಹಾಗೂ ಶೋಷಣೆಗೆ ಒಳಗಾದ ಮಕ್ಕಳ ರಕ್ಷಣೆಗಾಗಿ ಯಾವುದೇ ಸಾರ್ವಜನಿಕರು ಉಚಿತವಾಗಿ ಕರೆ ಮಾಡಿ ಮಾಹಿತಿ ನೀಡಲು ಅವಕಾಶವಿರುವ 1098- ಮಕ್ಕಳ ಸಹಾಯವಾಣಿ ಕುರಿತಂತೆ ಜನಸಾಮಾನ್ಯರಲ್ಲಿ ವ್ಯಾಪಕ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯವರಿಗೆ ಸೂಚನೆ ನೀಡಿದರು.
     ಮಕ್ಕಳ ಸಹಾಯವಾಣಿ-1098 ಯೋಜನೆ ಅನುಷ್ಠಾನ ಪರಿಶೀಲನೆ ಹಾಗೂ ಜಿಲ್ಲಾ ಮಟ್ಟದ ಮಕ್ಕಳ ಸಲಹಾ ಮಂಡಳಿ ರಚನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಮಕ್ಕಳ ಸಹಾಯವಾಣಿ- 1098 ಯೋಜನೆಯನ್ನು ಜಿಲ್ಲೆಯ ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ವಹಿಸುತ್ತಿದೆ.  ಶೋಷಣೆಗೆ ಒಳಗಾದ ಅಥವಾ ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ರಕ್ಷಣೆ ಮಹತ್ವದ ಕಾರ್ಯವಾಗಿದ್ದು, 1098 ಉಚಿತ ಸಹಾಯವಾಣಿ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆ ಇದೆ.  ಪೊಲೀಸ್ ಕರೆಗೆ 100, ಆ್ಯಂಬುಲೆನ್ಸ್‍ಗೆ 108 ಸಹಾಯವಾಣಿ ಕರೆ ಸಂಖ್ಯೆಗಳು ಹೇಗೆ ಜನಸಾಮಾನ್ಯರ ಬಾಯಲ್ಲಿ ಸುಲಭವಾಗಿ ಹರಿದಾಡುವುದೋ, ಅದೇ ರೀತಿ ಮಕ್ಕಳ ಸಹಾಯವಾಣಿ-1098 ಸಂಖ್ಯೆಯ ಬಗ್ಗೆ ಸಾರ್ವಜನಿಕರಿಗೆ ಮನದಟ್ಟಾಗುವಂತೆ, ವ್ಯಾಪಕ ಪ್ರಚಾರ ಕೈಗೊಳ್ಳಬೇಕು.  ಸಹಾಯವಾಣಿ ಕುರಿತಂತೆ ಎಲ್ಲ ಸರ್ಕಾರಿ ಬಸ್‍ಗಳು, ಶಾಲಾ ಕಾಲೇಜುಗಳ ಕಾಂಪೌಂಡ್‍ಗಳು, ಆಟೋಗಳಿಗೆ ಸ್ಟಿಕರ್ಸ್‍ಗಳನ್ನು ಹಚ್ಚಿಸಿ, ವ್ಯಾಪಕ ಪ್ರಚಾರ ಆಗುವಂತೆ ನೋಡಿಕೊಳ್ಳಬೇಕು.  ಕೋಳಿ ಫಾರಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಇರಿಸಿಕೊಳ್ಳುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಕಾರ್ಮಿಕ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ಕೋಳಿಫಾರಂಗಳಿಗೆ ಭೇಟಿ ನೀಡಿ, ಎಲ್ಲ ನಿಯಮಗಳ ಪಾಲನೆ ಆಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.  ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು.  ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಕ್ಕಳ ಸಹಾಯವಾಣಿಯ ಬಗ್ಗೆ ವ್ಯಾಪಕ ಅರಿವು ಮೂಡಿಸಲು ಇದುವರೆಗೂ ಕೈಗೊಂಡಿರುವ ಕಾರ್ಯ ತೃಪ್ತಿಕರವಾಗಿಲ್ಲ.  ಮುಂದಿನ ದಿನಗಳಲ್ಲಿಯಾದರೂ, ವ್ಯಾಪಕ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಜಿ.ಎಲ್. ಪ್ರವೀಣ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಾಲ್ಯ ವಿವಾಹ ತಡೆಗಟ್ಟಿ : ಜಿಲ್ಲೆಯಲ್ಲಿ ಮದುವೆಯಾಗುತ್ತಿರುವ ಹೆಣ್ಣು ಮಕ್ಕಳ ಸರಾಸರಿ ವಯಸ್ಸು ಎಷ್ಟು ಎಂದಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳಿದ್ದು, 15 ರಿಂದ 18 ವರ್ಷ.  ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಬಾಲ್ಯ ವಿವಾಹಗಳು ಜರುಗುವ ಸಂಗತಿ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು, ಪಿಡಿಓ ಗಳು, ಕಂದಾಯ ನಿರೀಕ್ಷಕರು ಇವರಿಗೆ ಮಾಹಿತಿ ಲಭ್ಯವಾದ ಕೂಡಲೆ, ಸಂಬಂಧಪಟ್ಟ ತಹಸಿಲ್ದಾರರರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಅಥವಾ ಯೂನಿಸೆಫ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.  ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮೂಹಿಕ ಮದುವೆಗಳನ್ನು ನಡೆಸುವ ಸಂಘಟಕರು, ಧಾರ್ಮಿಕ ಮುಖಂಡರುಗಳಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.  ಮಕ್ಕಳ ರಕ್ಷಣೆ ಹಾಗೂ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸಲು ಅನಗತ್ಯ ವಿಳಂಬ ಮಾಡುವುದು, ತಿರಸ್ಕರಿಸುವುದು ಇಂತಹ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.  ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಅಧಿಕಾರಿಗಳು, ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ಮೊದಲು ಸ್ವೀಕರಿಸಿ, ದಾಖಲಿಸುವ ಕಾರ್ಯ ಆಗಬೇಕು.  ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಡಿವೈಎಸ್‍ಪಿ ರಾಜೀವ್ ಅವರಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗರಾಜ್ ದೇಸಾಯಿ, ಶರಣಪ್ಪ, ಯುನಿಸೆಫ್‍ನ ಹರೀಶ್ ಜೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಅ.21 ರಂದು ಪೊಲೀಸ್ ಹುತಾತ್ಮರ ದಿನಾಚರಣೆ

ಕೊಪ್ಪಳ, ಅ.20 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಅ.21 ರಂದು ಬೆಳಿಗ್ಗೆ 08 ಗಂಟೆಗೆ ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಪೊಲೀಸ್ ಹುತಾತ್ಮ ಸ್ಮಾರಕ್ಕೆ ಪುಷ್ಪಗುಚ್ಛ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ತ್ಯಾಗರಾಜನ್ ಕೆ, ತಿಳಿಸಿದ್ದಾರೆ.

ಆಸ್ತಿ ತೆರಿಗೆ ಪಾವತಿಯ ಚಲನ್‍ಗಳನ್ನು ನಗರಸಭೆಗೆ ಸಲ್ಲಿಸಲು ಸೂಚನೆ

ಕೊಪ್ಪಳ, ಅ.19 (ಕರ್ನಾಟಕ ವಾರ್ತೆ) : ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಬ್ಯಾಂಕ್ ಮೂಲಕ ಪಾವತಿಸಿರುವ ಕೊಪ್ಪಳ ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು 2002-03 ರಿಂದ ಪ್ರಸಕ್ತ ಸಾಲಿನವರೆಗಿನ ವಿವರಪಟ್ಟಿ ಹಾಗೂ ಚಲನ್‍ಗಳನ್ನು ಅ.31 ರೊಳಗಾಗಿ ನಗರಸಭೆಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ತಿಳಿಸಿದ್ದಾರೆ.
     ಸರ್ಕಾರದ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭೌಗೋಳಿಕ ಮಾಹಿತಿ ಆಧಾರಿತ ಆಸ್ತಿ ತೆರಿಗೆ ಪದ್ಧತಿಯನ್ನು ಅಳವಡಿಸಲಾಗಿದ್ದು, ಕೊಪ್ಪಳ ನಗರಸಭೆ ಪರಿಮಿತಿಯ ಎಲ್ಲಾ ಆಸ್ತಿ ತೆರಿಗೆಯನ್ನು ಬ್ಯಾಂಕ್ ಮೂಲಕ ಪಾವತಿಸಿದ ನಂತರ ವಿವರಪಟ್ಟಿ ಹಾಗೂ ಚಲನ್‍ಗಳನ್ನು ಹಾಜರುಪಡಿಸಿರುವುದಿಲ್ಲ. ಇದರಿಂದ ತಾವು ಪಾವತಿಸಿರುವ ಆಸ್ತಿ ತೆರಿಗೆಯು ಕೆ.ಎಮ್.ಎಫ್-24 ಆಸ್ತಿ ತೆರಿಗೆ ವಹಿ ಹಾಗೂ ಆಸ್ತಿ ತೆರಿಗೆ ತಂತ್ರಾಶದಲ್ಲಿ ನೊಂದಾಯಿಸಲು ಸಾಧ್ಯವಾಗದೇ ತಮ್ಮ ಹೆಸರಿಗೆ ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ  ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಬ್ಯಾಂಕ್ ಮೂಲಕ ಪಾವತಿಸಿರುವ ಕೊಪ್ಪಳ ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು 2002-03 ರಿಂದ ಪ್ರಸಕ್ತ ಸಾಲಿನವರೆಗಿನ ವಿವರಪಟ್ಟಿ ಹಾಗೂ ಚಲನ್‍ಗಳ ಝರಾಕ್ಸ್ ಪ್ರತಿಗಳನ್ನು ಅ.31 ರೊಳಗಾಗಿ ನಗರಸಭೆಗೆ ಹಾಜರುಪಡಿಸಿ, ಕೆ.ಎಮ್.ಎಫ್-24 ಆಸ್ತಿ ತೆರಿಗೆ ವಹಿ ಹಾಗೂ ಆಸ್ತಿ ತೆರಿಗೆ ತಂತ್ರಾಶದಲ್ಲಿ ನೊಂದಾಯಿಸಲು ಸಹಕರಿಸಬೇಕು. ಹಿಂದಿನ ಬಾಕಿ ಇರುವ ಖಾಲಿ ನಿವೇಶನ ಮತ್ತು ಕಟ್ಟಡಗಳ ಆಸ್ತಿ ತೆರಿಗೆಯನ್ನು ಪ್ರಸಕ್ತ ಸಾಲಿನವರೆಗೂ ಹಾಗೂ ಹಿಂದಿನ ಬಾಕಿ ಹಾಗೂ ಚಾಲ್ತಿ ತಿಂಗಳವರೆಗಿನ ನೀರಿನ ತೆರಿಗೆಯನ್ನು ಕೂಡಲೇ ಪಾವತಿಸಿ, ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.22 ರಂದು ‘ನನ್ನವಳು’ ಬಿಡುಗಡೆ

ಕೊಪ್ಪಳ, ಅ.19 (ಕರ್ನಾಟಕ) : ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ದಿ||ಲಲಿತಾ ನಿಂಗೋಜಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ರಚಿಸಿರುವ ‘ನನ್ನವಳು’ ಕವನ ಸಂಕಲನದ ಬಿಡುಗಡೆ ಸಮಾರಂಭ ಅ.22 ರಂದು ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದಲ್ಲಿ ಜರುಗಲಿದೆ.
     ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ನಿವೃತ್ತ ಪ್ರಾಚಾರ್ಯ ಜಿ.ಎಂ.ನಿಂಗೋಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ವೀರಣ್ಣ ವಾಲಿ ಕೃತಿ ಕುರಿತು ಮಾತನಾಡಲಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ತಿಳಿಸಿದ್ದಾರೆ.

ಮೆಟ್ರಿಕ್ ಪೂರ್ವ ಶಿಷ್ಯವೇತನ : ಅವಧಿ ವಿಸ್ತರಣೆ

ಕೊಪ್ಪಳ, ಅ.19 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಇವರಿಂದ ನೀಡಲಾಗುವ ಪ್ರಸಕ್ತ ಸಾಲಿನ ಮೆಟ್ರಿಕ್ ಪೂರ್ವ ಶಿಷ್ಯವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ಅ.30 ರವರೆಗೆ ವಿಸ್ತರಿಸಲಾಗಿದೆ.
     ಪರಿಶಿಷ್ಟ ಜಾತಿಯ 1 ರಿಂದ 10 ನೇ ತರಗತಿಯವರೆಗಿನ ಹಾಗೂ ಪರಿಶಿಷ್ಟ ಪಂಗಡದ 1 ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಈ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಅ.30 ರವರೆಗೆ ವಿಸ್ತರಿಸಲಾಗಿದೆ ಎಂದು ತಾಲೂಕಾ ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ, ಅ.20 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ   ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಅ.21 ರಿಂದ 25 ರವರೆಗೆ ಐದು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅ.21 ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಬಳಿಕ ಕಾರಟಗಿಯಲ್ಲಿ -  ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ನಡೆಸುವರು. ಅ,22 ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಧ್ಯಾಹ್ನ 3 ಗಂಟೆಗೆ ಬಾಗಲಕೋಟೆ ಜಿಲ್ಲೆಗೆ ಪ್ರಯಾಣ ಬೆಳೆಸುವರು.  ಅಂದು ರಾತ್ರಿ 09 ಗಂಟೆಗೆ ಕಾರಟಗಿಗೆ ಆಗಮಿಸಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ಕೈಗೊಳ್ಳುವರು. ಅ.23 ಮತ್ತು 24 ರಂದು ಕಾರಟಗಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ನಡೆಸುವರು. ಅ.25 ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವ ಸಚಿವರು, ಬಳಿಕ ಕಾರಟಗಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕಾನೂನು ಮಾಪನ ಶಾಸ್ತ್ರ ಇಲಾಖೆಯಡಿ 295 ಪ್ರಕರಣ ದಾಖಲು

ಕೊಪ್ಪಳ, ಅ.19 (ಕರ್ನಾಟಕ ವಾರ್ತೆ) : ಕಲಬುರಗಿ ಹಾಗೂ ಬೆಳಗಾವಿ ವಿಭಾಗದ ವ್ಯಾಪ್ತಿಗೆ ಬರುವ ಹುಬ್ಬಳ್ಳಿ ಕಾನೂನು ಮಾಪನ ಶಾಸ್ತ್ರ ಇಲಾಖೆ, ಕಾನೂನು ಮಾಪನ ಶಾಸ್ತ್ರ ನಿಯಂತ್ರಕರ ಕಛೇರಿಯ ಸಂಚಾರಿ ದಳ-03 ಇವರಿಂದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿ, ತೂಕ ಮತ್ತು ಅಳತೆ ಹಾಗೂ ಪೊಟ್ಟಣ ಸಾಮಗ್ರಿ ಕಾಯಿದೆ ಉಲ್ಲಂಘನೆಗಾಗಿ ಒಟ್ಟು 295 ಪ್ರಕರಣಗಳನ್ನು ದಾಖಲಿಸಲಾಗಿದೆ.
     ಸಂಚಾರಿ ದಳದಿಂದ ಪ್ರಸಕ್ತ ಸಾಲಿನ ಸೆಪ್ಟಂಬರ್ ಅಂತ್ಯದವರೆಗೆ ಒಟ್ಟು 1222 ಅಂಗಡಿ ಹಾಗೂ ಸಂಸ್ಥೆಗಳನ್ನು ತಪಾಸಣೆ ಮಾಡಿ, 209 ತೂಕ ಮತ್ತು ಅಳತೆ ಹಾಗೂ 86 ಪೊಟ್ಟಣ ಸಾಮಗ್ರಿ ಕಾಯಿದೆ ಉಲ್ಲಂಘನೆಗಾಗಿ ಒಟ್ಟು 295 ಮೊಕದ್ದಮೆಗಳನ್ನು ಹೂಡಲಾಗಿದ್ದು, ಒಟ್ಟು ರೂ.13,80,500/- ಅಭಿಸಂಧಾನ ಶುಲ್ಕ ವಸೂಲು ಮಾಡಲಾಗಿದೆ ಎಂದು ಸಂಚಾರಿ ದಳ-03 ಹುಬ್ಬಳ್ಳಿಯ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ಮಧುಕರ ಆರ್.ಘೋಡಕೆ ತಿಳಿಸಿದ್ದಾರೆ.

Monday, 19 October 2015

ಬಸ್‍ನಿಲ್ದಾಣದಲ್ಲಿ ಗಾಂಧೀಜಿ ವಿಶೇಷ ಛಾಯಾಚಿತ್ರ ವೀಕ್ಷಿಸಿದ ಪ್ರಯಾಣಿಕರು
ಕೊಪ್ಪಳ ಅ. 19 (ಕರ್ನಾಟಕ ವಾರ್ತೆ) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ.ಕ.ರ.ಸಾ.ಸಂಸ್ಥೆ ಕೊಪ್ಪಳ ವಿಭಾಗದವರ ಸಹಯೋಗದೊಂದಿಗೆ ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣ ಆವರಣದಲ್ಲಿ ಸೋಮವಾರದಂದು ಆಯೋಜಿಸಿದ್ದ, ಗಾಂಧೀಜಿಯವರ ಜೀವನ ಚರಿತ್ರೆಗೆ ಸಂಬಂಧಿಸಿದ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ನಿಲ್ದಾಣಕ್ಕೆ ಆಗಮಿಸಿದ್ದ ನೂರಾರು ಪ್ರಯಾಣಿಕರು ಹಾಗೂ ಸಾರ್ವಜನಿಕರು ವೀಕ್ಷಿಸಿದರು.
     ಗಾಂಧೀಜಿಯವರ ಜೀವನ ಚರಿತ್ರೆ ಕುರಿತ ಛಾಯಾ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ಈ.ಕ.ರ.ಸಾ. ಸಂಸ್ಥೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಎಸ್. ಹಾವೇರಿ ಅವರು ಛಾಯಾಚಿತ್ರ ಪ್ರದರ್ಶನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.  ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ ಪ್ರದೇಶಗಳು, ಅಸ್ಪøಷ್ಯತೆಯ ನಿವಾರಣೆಗಾಗಿ ಗಾಂಧೀಜಿಯವರು ನಡೆಸಿದ ಆಂದೋಲನ, 1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸ್ ಅಧಿವೇಶನ ಸೇರಿದಂತೆ ಅವರ ಜೀವನ ಚರಿತ್ರೆಯ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.   ಈ ವಿಶೇಷ ಛಾಯಾಚಿತ್ರ ಪ್ರದರ್ಶನ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ ಕೆಲ ಪ್ರಯಾಣಿಕರು  ಮಹಾತ್ಮಾ ಗಾಂಧೀಜಿಯವರ ಜೀವನದ  ಮಹತ್ವದ ಛಾಯಾಚಿತ್ರಗಳನ್ನು ಇದುವರೆಗೂ ನೋಡಿರಲಿಲ್ಲ. ಛಾಯಾಚಿತ್ರ ಪ್ರದರ್ಶನವು ಗಾಂಧೀಜಿಯವರ ಜೀವನದ ಕಾಲಘಟ್ಟ ಅರಿಯಲು ಸಹಕಾರಿಯಾಯಿತು ಎಂದರು. 
       ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಈ.ಕ.ರ.ಸಾ.ಸಂಸ್ಥೆ ಕೊಪ್ಪಳ ವಿಭಾಗದ ಆಡಳಿತಾಧಿಕಾರಿ ಬಿ.ಎಸ್. ಮುನಿರಾಮೇಗೌಡ, ಕೊಪ್ಪಳ ಬಸ್ ಡಿಪೋ ಮ್ಯಾನೇಜರ್ ಬಿ.ವಿ. ಬಟ್ಟೂರ, ಸಹಾಯಕ ಸಂಚಾರ ವ್ಯವಸ್ಥಾಪಕ ಆರ್.ಬಿ. ಮಾನೆ, ಸಹಾಯಕ ಕಾನೂನು ಅಧಿಕಾರಿ ಸುನಿಲ್, ವಾರ್ತಾ ಇಲಾಖೆಯ ಅವಿನಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು, 

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ- ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಕರೆ


ಕೊಪ್ಪಳ ಅ. 19 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದು, ಅಂತಹ ಕ್ರೀಡಾಪಟುಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಕರೆ ನೀಡಿದರು.
     ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ರಾಜೀವ ಗಾಂಧಿ ಖೇಲ್ ಅಭಿಯಾನ್ ಗ್ರಾಮೀಣ ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
    ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲೂ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದು, ಅಂತಹ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಉತ್ತಮ ಪ್ರೋತ್ಸಾಹ ನೀಡಿದಲ್ಲಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಜಿಲ್ಲೆಯ ಪ್ರತಿಭೆಗಳು ಮಿಂಚಲು ಸಾಧ್ಯವಾಗಲಿದೆ.  ನಗರದ ಜಿಲ್ಲಾ ಕ್ರೀಡಾಂಗಣ ಇನ್ನಷ್ಟು ಅಭಿವೃದ್ಧಿಯಾಗಬೆಕಿದ್ದು, ಇದಕ್ಕೆ ಜಿಲ್ಲಾ ಪಂಚಾಯಿತಿಯ ವಿವಿಧ ಯೋಜನೆಯಡಿ ಅನುದಾನ ಒದಗಿಸಲಾಗುವುದು.  ಗುಣಮಟ್ಟದ ಆಟದ ಮೈದಾನ, ವಸತಿ ಗೃಹ ಹಾಗೂ ಕ್ರೀಡಾಪಟುಗಳಿಗೆ ಶೌಚಾಲಯ, ಸ್ನಾನಗೃಹ ಸೇರಿದಂತೆ ಕಂಪೌಂಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಿರುವ ಕುರಿತು ಕ್ರೀಡಾ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಪಂನಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು.  ಪೈಕಾ ಕ್ರೀಡಾಕೂಟದಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯಿಂದ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಜಿಪಂನಿಂದ (ಟ್ರಾೃಕ್ ಶೂಟ್) ಸಮವಸ್ತ್ರ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ, ಕಲೆ ಪ್ರದರ್ಶನ ಮಾಡಬೇಕು. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳಸಿಕೊಳ್ಳಬೇಕು. ಇಲ್ಲಿಯ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಆಶಿಸಿದರು.
     ಮಂಜುನಾಥ ಗೊಂಡಬಾಳ ಕಾರ್ಯಕ್ರಮ ಕುರಿತು ಮಾತನಾಡಿದರು.  ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಶಾರದಾ ನಿಂಬರಗಿ ಪ್ರಾಸ್ತಾವಿಕ ಮಾತನಾಡಿದರು.
     ಕಾರ್ಯಕ್ರಮದಲ್ಲಿ ಕ್ರೀಡಾ ತರಬೇತುದಾರರಾದ ವಿಠ್ಠಲ್ ಬೈಲವಾಡಿಗ, ಎಂ.ಎಸ್.ಪಾಟೀಲ್, ಯತಿರಾಜ್, ಕರಿಬಸಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಭಕ್ತಿ-ಭಾವದಿಂದ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ ಅ. 19 (ಕರ್ನಾಟಕ ವಾರ್ತೆ) : ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಅ. 27 ರಂದು ಜಿಲ್ಲಾ ಕೇಂದ್ರದಲ್ಲಿ ಎಲ್ಲ ಸಮುದಾಯದ ಸಹಭಾಗಿತ್ವದಲ್ಲಿ ಭಕ್ತಿ ಭಾವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣ್‍ಕುಮಾರ್ ಜಿ.ಎಲ್. ಅವರು ಹೇಳಿದರು.
     ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಅಕ್ಟೋಬರ್ 27 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತವು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುವುದು.   ವಾಲ್ಮೀಕಿ ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಸಿರಸಪ್ಪಯ್ಯನ ಮಠ ಆವರಣದಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗುವುದು.  ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆಗೆ ಈ ಬಾರಿ ವೈಭವದ ಸಾರೋಟ್ ಬಳಸಲು ನಿರ್ಧರಿಸಲಾಗಿದೆ.  ಮೆರವಣಿಗೆಯಲ್ಲಿ ವಿವಿಧ ಸಾಂಸ್ಕøತಿಕ ಕಲಾತಂಡಗಳು, ಸ್ತಬ್ಧ ಚಿತ್ರಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.  ಮೆರವಣಿಗೆಯಲ್ಲಿ ಎಲ್ಲಾ ಸಂಘಟನೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಬೇಕು.  ಮೆರವಣಿಗೆಯ ನಂತರ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗಿದ್ದು, ಸಮಾರಂಭದಲ್ಲಿ ಗಣ್ಯಾತಿಗಣ್ಯರೆಲ್ಲರು ಭಾಗವಹಿಸಲಿದ್ದಾರೆ.  ಮಹರ್ಷಿ ವಾಲ್ಮೀಕಿಯವರ ಕುರಿತು ಹಾಗೂ ಜಯಂತಿ ಕಾರ್ಯಕ್ರಮದ ಮಹತ್ವ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಗುವುದು.  ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು.   ಸಾರ್ವಜನಿಕರು, ಸಂಘಟನೆಗಳ ಪದಾಧಿಕಾರಿಗಳು ವಾಲ್ಮೀಕಿ ಜಯಂತಿಯನ್ನು ಹಬ್ಬದ ವಾತಾವರಣದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಬೇಕು ಎಂದು   ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಮನವಿ ಮಾಡಿದರು.  ವಾಲ್ಮೀಕಿ ಜಯಂತಿ ದಿನದಂದು ಹಾಗೂ ಮುನ್ನಾ ದಿನದಂದು, ನಗರದ ಜವಾಹರ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಯನ್ನು ಸ್ವಚ್ಛಗೊಳಿಸಲು ಅಲ್ಲದೆ ಮೆರವಣಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಡಿವೈಎಸ್‍ಪಿ ರಾಜೀವ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೆದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರಾದ ಮಂಜುನಾಥ ಗೊಂಡಬಾಳ,  ರತ್ನಾಕರ್ ಟಿ., ದೇವೇಂದ್ರಪ್ಪ ಡೊಳ್ಳಿನ, ಶರಣಪ್ಪ ನಾಯಕ್, ರಾಮಣ್ಣ ಕಲ್ಲನ್ನವರ್, ನಾಗರಾಜ ಬಿಲ್ಗಾರ್ ಸೇರಿದಂತೆ, ಗಣ್ಯರಾದ ಇಂದಿರಾ ಬಾವಿಕಟ್ಟಿ, ಶಿವಾನಂದ ಹೊದ್ಲೂರ್ ಮತ್ತಿತರ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ : ಡಾ. ಪ್ರವೀಣ್‍ಕುಮಾರ್

ಕೊಪ್ಪಳ ಅ. 19 (ಕರ್ನಾಟಕ ವಾರ್ತೆ): ಪ್ರತಿ ವರ್ಷದಂತೆ ಈ ವರ್ಷ ಕೂಡ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.
     ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.  ರಾಜ್ಯೋತ್ಸವದ ಅಂಗವಾಗಿ ನವೆಂಬರ್ 01 ರಂದು ಬೆಳಿಗ್ಗೆ 7 ಗಂಟೆಗೆ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ತಹಸಿಲ್ದಾರರ ಕಚೇರಿಯಿಂದ ಹೊರಡಲಿದೆ.  ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಇದೇ ಸಂದರ್ಭದಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿ, ಅಭಿವೃದ್ಧಿ ಬಿಂಬಿಸುವ ಸ್ಥಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
     ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ವಿಧ್ಯುಕ್ತವಾಗಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.  ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಧ್ವಜಾರೋಹಣ ನೆರವೇರಿಸುವರು.  ಕಾರ್ಯಕ್ರಮದಲ್ಲಿ ನಾಡು ನುಡಿಗಾಗಿ ಶ್ರಮಿಸಿದ ಕಲಾವಿದರು, ಸಾಹಿತಿಗಳನ್ನು ಸನ್ಮಾನಿಸಲಾಗುವುದು.  ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.  ಅದೇ ದಿನ ಸಂಜೆ 6 ಗಂಟೆಗೆ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಮೈದಾನದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲು ವ್ಯವಸ್ಥೆ ಮಾಡಲಾಗಿದೆ.  ರಾಜ್ಯೋತ್ಸವ ಆಚರಣೆಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಪ್ರವೀಣ್‍ಕುಮಾರ್ ಜಿ.ಎಲ್.  ಅವರು ವಿವರಿಸಿದರು.
     ರಾಜ್ಯೋತ್ಸವದ ಹಿಂದಿನ ದಿನ ನಗರದ ಪ್ರಮುಖ ರಸ್ತೆ ಮತ್ತು ಜಿಲ್ಲಾ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.  ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವೇದಿಕೆ ಮತ್ತು ಸನ್ಮಾನ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಾಂಸ್ಕøತಿಕ ಸಮಿತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಅಧ್ಯಕ್ಷತೆಯಲ್ಲಿ ಸ್ತಬ್ಧಚಿತ್ರಗಳ ಸಮಿತಿ ಹಾಗೂ  ಈ ಸಂದರ್ಭದಲ್ಲಿ ರಚಿಸಲಾಯಿತು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಡಿವೈಎಸ್‍ಪಿ ರಾಜೀವ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೆದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರುಗಳಾದ ಇಂದಿರಾ ಬಾವಿಕಟ್ಟಿ, ಶಿವಾನಂದ ಹೊದ್ಲೂರ್ ಮಂಜುನಾಥ ಗೊಂಡಬಾಳ,  ರತ್ನಾಕರ್ ಟಿ., ದೇವೇಂದ್ರಪ್ಪ ಡೊಳ್ಳಿನ, ಶರಣಪ್ಪ ನಾಯಕ್, ರಾಮಣ್ಣ ಕಲ್ಲನ್ನವರ್, ನಾಗರಾಜ ಬಿಲ್ಗಾರ್ ಮತ್ತಿತರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Saturday, 17 October 2015

ಸಾಮಾಜಿಕ ಭದ್ರತೆ ಯೋಜನೆ ಸೌಲಭ್ಯವನ್ನು ಅರ್ಹರಿಗೆ ತಲುಪಿಸಿ- ಡಾ. ಪ್ರವೀಣ್ ಕುಮಾರ

ಕೊಪ್ಪಳ, ಅ.18 (ಕರ್ನಾಟಕ ವಾರ್ತೆ) : ಸಾಮಾಜಿಕ ಭದ್ರತೆ ಯೋಜನೆಗಳಾದ ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯ ಸಂಸ್ಕಾರ ಯೋಜನೆ ಮುಂತಾದ ಯೋಜನೆಗಳ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಅನಗತ್ಯ ವಿಳಂಬ ಮಾಡದೆ  ಶೀಘ್ರ ತಲುಪಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣ್‍ಕುಮಾರ್ ಜಿ.ಎಲ್. ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಂದಾಯ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳ ನೆರವಿಗೆ ಸರ್ಕಾರ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಸಾಮಾಜಿಕ ಭದ್ರತೆ ಯೋಜನೆಗಳು ಜಾರಿಯಾಗಿದ್ದು, ಇಂತಹ ಯೋಜನೆಗಳು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.  ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮುಖ್ಯಸ್ಥ ಮರಣವಾದಲ್ಲಿ, ಅವರ ವಾರಸುದಾರರಿಗೆ ನೆರವು ನೀಡಲು ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಜಾರಿಯಲ್ಲಿದೆ.  ಈ ಯೋಜನೆಗೆ ಜಿಲ್ಲೆಗೆ ಒಟ್ಟು 44. 90 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಈಗಾಗಲೆ ಅನುದಾನವನ್ನು ತಾಲೂಕುವಾರು ಮರು ಹಂಚಿಕೆ ಮಾಡಲಾಗಿದೆ.  ಅದೇ ರೀತಿ ಕಡು ಬಡತನದ ಕುಟುಂಬದಲ್ಲಿ ಮರಣ ಹೊಂದಿದ ಕುಟುಂಬ ಸದಸ್ಯರ ಅಂತ್ಯ ಸಂಸ್ಕಾರಕ್ಕಾಗಿ ಸರ್ಕಾರ ನೆರವು ಒದಗಿಸಲು ಅಂತ್ಯ ಸಂಸ್ಕಾರ ಯೋಜನೆ ಜಾರಿಯಲ್ಲಿದೆ.  ಈ ಯೋಜನೆಗಾಗಿ ಜಿಲ್ಲೆಗೆ ಈವರೆಗೆ 9. 68 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೆ ತಾಲೂಕು ವಾರು ಅನುದಾನವನ್ನು ಮರು ಹಂಚಿಕೆ ಮಾಡಲಾಗಿದೆ.  ಆಯಾ ತಾಲೂಕು ಆಡಳಿತದಲ್ಲಿ ಬಾಕಿ ಇರುವ ಅರ್ಜಿಗಳ ಪೈಕಿ ಅರ್ಹ ಫಲಾನುಭವಿಗಳಿಗೆ ಇಂತಹ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯವನ್ನು ಒಂದು ವಾರದ ಒಳಗಾಗಿ ತಲುಪಿಸಬೇಕು.  ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣ್‍ಕುಮಾರ್ ಜಿ.ಎಲ್. ಅವರು ತಹಸಿಲ್ದಾರರುಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ತ್ವರಿತವಾಗಲಿ : ಕೊಪ್ಪಳ ಜಿಲ್ಲೆಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಈಗಾಗಲೆ ಸಂಬಂಧಿಸಿದ ಮತದಾನ ಕೇಂದ್ರಗಳಲ್ಲಿ, ತಹಸಿಲ್ದಾರರ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಸದ್ಯ ಜಿಲ್ಲೆಯಲ್ಲಿ ನಡೆದಿದೆ.  ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು, ತಿದ್ದುಪಡಿ ಸೇರಿದಂತೆ ಪರಿಷ್ಕರಣೆ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳನ್ನು ಆಯಾ ತಹಸಿಲ್ದಾರರು ತ್ವರಿತವಾಗಿ ನಿರ್ವಹಿಸಬೇಕಿದೆ.  ಅನರ್ಹ ಮತದಾರರ ನೋಂದಣಿ ಕಂಡುಬಂದಲ್ಲಿ, ಪರಿಶೀಲಿಸಿ ನಿಯಮಾನುಸಾರ ಅಂತಹವರ ಹೆಸರನ್ನು ತೆಗೆದುಹಾಕುವುದು ಹಾಗೂ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳ ವಿಲೇವಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಹಸಿಲ್ದಾರರಿಗೆ ಸೂಚನೆ ನೀಡಿದರು.
ಸಮೀಕ್ಷೆ ಡಿಜಿಟಲೈಜೇಷನ್ ಪೂರ್ಣಗೊಳಿಸಿ : ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಈಗಾಗಲೆ ಕೈಗೊಳ್ಳಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಡಿಜಿಟಲೈಜೇಷನ್ ಕಾರ್ಯ ಬಾಕಿ ಉಳಿದಿದ್ದು, ಈ ಕಾರ್ಯವನ್ನು ಅ. 20 ರ ಒಳಗಾಗಿ ಪೂರ್ಣಗೊಳಿಸಿ, ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಸಭೆಯಲ್ಲಿ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ, ಗಂಗಾವತಿ ತಹಸಿಲ್ದಾರ್ ಎಲ್.ಡಿ. ಚಂದ್ರಕಾಂತ್ , ಯಲಬುರ್ಗಾ ತಹಸಿಲ್ದಾರ್ ಎಸ್. ಪಟ್ಟದಕಲ್, ಕುಷ್ಟಗಿ ತಹಸಿಲ್ದಾರ್ ವೇದವ್ಯಾಸ ಮುತಾಲಿಕ್, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರನಾಯಕ್ ಮುಂತಾದ ಅಧಿಕಾರಿಗಳು ಭಾಗವಹಿಸಿದ್ದರು.