Wednesday, 30 September 2015

ಅ.02 ರಂದು ಸ್ವಚ್ಛತಾ ಅಭಿಯಾನ ಕುರಿತು ವಿಶೇಷ ಕಾರ್ಯಕ್ರಮ- ಜನಾರ್ಧನ ಹುಲಿಗಿ

ಕೊಪ್ಪಳ, ಸೆ.30 (ಕರ್ನಾಟಕ ವಾರ್ತೆ) :  ಕೊಪ್ಪಳ ತಾಲೂಕು ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 6 ಗ್ರಾಮ ಪಂಚಾಯಿತಿಗಳಲ್ಲಿ ಅ. 02 ರಿಂದ ವಿಶೇಷ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ಧನ ಹುಲಿಗಿ ಅವರು ತಿಳಿಸಿದ್ದಾರೆ.
     ಕೊಪ್ಪಳ ತಾಲೂಕಿನ ಹುಲಿಗಿ, ಅಗಳಕೇರಾ, ಬಂಡಿಹರ್ಲಾಪುರ, ಗುಳದಳ್ಳಿ ಹಾಗೂ ಬೂದಗುಂಪಾ ಗ್ರಾಮಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಆಯೋಜಿಸಿದ್ದು, ಇದರ ಉದ್ಘಾಟನಾ ಸಮಾರಂಭ ಅಕ್ಟೋಬರ್ 02 ಗಾಂಧಿ ಜಯಂತಿಯಂದು ಬೆಳಿಗ್ಗೆ 8 ಗಂಟೆಗೆ ಬಂಡಿಹರ್ಲಾಪುರ ಗ್ರಾಮ ಪಂಚಾಯತ್ ಆವರಣದಲ್ಲಿ ಏರ್ಪಡಿಸಲಾಗಿದೆ.
     ನಿರ್ಮಲ ಭಾರತ ಯೋಜನೆ ಅಡಿಯಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಡಿಯಲ್ಲಿ ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 6 ಗ್ರಾಮ ಪಂಚಾಯತ್‍ಗಳಿಗೆ ತ್ಯಾಜ್ಯ ವಿಲೇವಾರಿಗಾಗಿ ಟ್ರ್ಯಾಕ್ಟರ್ ಹಾಗೂ ಪುಟ್ಟಿಗಳನ್ನು ಈಗಾಗಲೇ ಪೂರೈಸಲಾಗಿದ್ದು, ಹುಲಿಗಿ ಹೊರತುಪಡಿಸಿ ಉಳಿದ 5 ಗ್ರಾಮ ಪಂಚಾಯತ್‍ಗಳಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಎಲ್ಲ ಮನೆಗಳಿಗೂ ಪುಟ್ಟಿಗಳನ್ನು ಹಾಗೂ ಸೂಚನಾ ಫಲಕಗಳನ್ನು ಗಾಂಧಿ ಜಯಂತಿಯಂದು ವಿತರಿಸಲಾಗುವುದು. ಅಭಿಯಾನದಡಿ ಆರೂ ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛತಾ ಅಭಿಯಾನ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಯ ಒಂದು ವಾರ್ಡಿನ ಸ್ವಚ್ಛತಾ ಸಮಿತಿಗೆ ಕನಿಷ್ಠ 25 ರಿಂದ 30 ಸ್ವಚ್ಛತಾ ಸದಸ್ಯರನ್ನು ನೇಮಿಸಲಾಗುವುದು. ಈ ಸದಸ್ಯರೆಲ್ಲರೂ ಆ ವಾರ್ಡಿನ, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಯುವಕ ಯುವತಿ ಸಂಘದ ಸದಸ್ಯರು ಹಾಗೂ ಸ್ವಚ್ಛತೆ ಬಗ್ಗೆ ಆಸಕ್ತಿ ಉಳ್ಳವರೆ ಆಗಿರುತ್ತಾರೆ. ಈ ಸಮಿತಿಗಳಲ್ಲಿ ಒಬ್ಬರನ್ನು ಸಂಚಾಲಕರನ್ನಾಗಿ, ಮತ್ತೊಬ್ಬರನ್ನು ಕಾರ್ಯದರ್ಶಿಯನ್ನಾಗಿ ಹಾಗೂ ಇನ್ನೋರ್ವರನ್ನು ಕೋಶಾಧಿಕಾರಿಯನ್ನಾಗಿ ನೇಮಕ ಮಾಡಲಾಗುವುದು.
     ವಾರ್ಡ್‍ಮಟ್ಟದ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸ್ವಚ್ಛತಾ ಅಭಿಯಾನ ಸಮಿತಿಗಳು ಗ್ರಾಮದ ಸ್ವಚ್ಛತೆಯನ್ನು ಕಾಪಾಡಲು ತ್ಯಾಜ್ಯವನ್ನು ವಿಂಗಡಿಸಿಕೊಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಹಾಗೂ ಅದನ್ನು ಉಪಯೋಗಿಸುವ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಿದ್ದು, ತ್ಯಾಜ್ಯವನ್ನು ರಸ್ತೆ ಮೇಲಾಗಲಿ, ಚರಂಡಿಯಲ್ಲಾಗಲಿ ಹಾಕದಂತೆ ನಿರ್ದಿಷ್ಟಪಡಿಸಿದ ಕಸದ ತೊಟ್ಟಿಗಳಲ್ಲಿ ವಿಂಗಡಿಸಿ ಹಾಕುವುದನ್ನು ಪ್ರೇರೇಪಿಸಲಿವೆ. ಅಲ್ಲದೆ, ವಾರ್ಡುಗಳಲ್ಲಿ ನಡೆಯುವ ಯಾವುದೇ ವೈಯಕ್ತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಗ್ರಾಮ ಪಂಚಾಯತ್ ಒದಗಿಸುವ ತಳ್ಳು ಬಂಡಿಯಲ್ಲಿ ಕಸ ಸಂಗ್ರಹಿಸಿ ಕ್ರಮ ಬದ್ಧವಾಗಿ ಸಂಸ್ಕರಣಾ ಘಟಕಕ್ಕೆ ಕಳುಹಿಸುವ ಜವಾಬ್ದಾರಿಯನ್ನು ಈ ಸಮಿತಿಗಳು ನಿರ್ವಹಿಸಲಿವೆ. ಮುಖ್ಯವಾಗಿ ಅಕ್ಟೋಬರ್ 02 ಗಾಂಧೀ ಜಯಂತಿಯಂದು ಎಲ್ಲಾ ಸಮಿತಿಗಳ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಬಂಡಿಹರ್ಲಾಪುರ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಲಿರುವ ಈ ಸ್ವಚ್ಛತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಗಾಂಧೀಜಿಯವರ ಹೆಸರಿನಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಿದ್ದಾರೆ ಮತ್ತು ನಂತರ ತ್ಯಾಜ್ಯ ಸಂಗ್ರಹಣಾ ವಾಹನದೊಂದಿಗೆ ಗ್ರಾಮ ಪಂಚಾಯಿತಿಯ ಪ್ರತಿ ಮನೆಗೂ ತೆರಳಿ ಕುಟುಂಬದ ಎಲ್ಲಾ ಸದಸ್ಯರಿಗೆ ಪ್ರತಿಜ್ಞಾ ವಿಧೀಯನ್ನು ಭೋಧಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಟಿ.ಜನಾರ್ಧನ ಹುಲಿಗಿ ತಿಳಿಸಿದ್ದಾರೆ.
Post a Comment