Friday, 28 August 2015

ಬರ : ಬೆಳೆ ಹಾನಿ ಸಮೀಕ್ಷೆ ವರದಿ ಶೀಘ್ರ ಸಲ್ಲಿಸಲು ಡಿ.ಸಿ. ರಮಣದೀಪ್ ಚೌದರಿ ಸೂಚನೆ

ಕೊಪ್ಪಳ ಆ. 28 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತಲೆದೋರಿರುವ ಬರ ಪರಿಸ್ಥಿತಿಯಿಂದ ಹಾನಿಯಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆ ಕುರಿತು ಸಮೀಕ್ಷಾ ವರದಿಯನ್ನು ಶೀಘ್ರ ಸಲ್ಲಿಸುವಂತೆ ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
         ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
         ಜಿಲ್ಲೆಯಲ್ಲಿ ಮುಂಗಾರು ಮಳೆ ಈ ಬಾರಿ ವಿಫಲವಾಗಿದ್ದು, ಬರ ಪರಿಸ್ಥಿತಿ ತಲೆದೋರಿದೆ.  ರೈತರು ಮಳೆಯ ನಿರೀಕ್ಷೆಯಲ್ಲಿ ಬಿತ್ತಿದ ಬೆಳೆಗಳು ಮಳೆಯ ಕೊರತೆಯಿಂದಾಗಿ ಒಣಗಿಹೋಗಿದ್ದು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ.  ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಈಗಾಗಲೆ ಸರ್ಕಾರ ಘೋಷಿಸಿದೆ.  ಜಿಲ್ಲೆಯಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಕುರಿತಂತೆ ಕ್ಷೇತ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಹಾನಿಯ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲು ನೀಡಿದ ಸೂಚನೆಯಂತೆ, ಸಮೀಕ್ಷಾ ಕಾರ್ಯ ಪ್ರಾರಂಭಗೊಂಡಿದೆ.  ಎಲ್ಲ ಹೋಬಳಿಗಳಿಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಆಯಾ ಅಧಿಕಾರಿಗಳು, ಸಂಬಂಧಿಸಿದ ಹೋಬಳಿಗಳಿಗೆ ಖುದ್ದು ಭೇಟಿ ನೀಡಿ, ಸಮೀಕ್ಷೆಯ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.  ನಿಖರವಾದ ಸಮೀಕ್ಷಾ ವರದಿಯನ್ನು ಆದಷ್ಟು ಶೀಘ್ರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇವು ಬ್ಯಾಂಕ್ ಸ್ಥಾಪನೆ : ಮಳೆ ಹಾಗೂ ತೇವಾಂಶ ಕೊರತೆಯಿಂದ ಸಮರ್ಪಕ ಪ್ರಮಾಣದಲ್ಲಿ ಮೇವು ಬೆಳೆಯದಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಗಳಿರುವುದರಿಂದ, ಕೊಪ್ಪಳ ಜಿಲ್ಲಾಡಳಿತ ಮೇವು ಬ್ಯಾಂಕ್ ಸ್ಥಾಪಿಸಿ ಜಾನುವಾರುಗಳಿಗೆ ಮೇವನ್ನು ಪೂರೈಕೆ ಮಾಡುವ ಕ್ರಮ ಕೈಗೊಂಡಿದೆ.  ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ, ಗಂಗಾವತಿ ತಾಲೂಕಿನ ಕನಕಗಿರಿ ಮತ್ತು ಹುಲಿಹೈದರ್, ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಕುಕನೂರು ಮತ್ತು ಯಲಬುರ್ಗಾ ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಈಗಾಗಲೆ ಆದೇಶ ನೀಡಲಾಗಿದೆ.  ಆಯಾ ತಾಲೂಕು ತಹಸಿಲ್ದಾರರು ಹಾಗೂ ಪಶುಸಂಗೋಪನೆ ಇಲಾಖೆಯವರು ಮೇವು ಬ್ಯಾಂಕ್ ನಿರ್ವಹಣೆಯಲ್ಲಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು.  ಸದ್ಯ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮೇವು ಬೆಳೆಯಲು ಉತ್ತೇಜಿಸಲು ಮೇವು ಬೀಜದ ಮಿನಿಕಿಟ್ ವಿತರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.  ಮೇವನ್ನು ಖರೀದಿಸುವ ಪೂರ್ವದಲ್ಲಿ ಮೇವಿನ ಗುಣಮಟ್ಟ ಸರಿ ಇರುವ ಕುರಿತು ಸ್ಥಳೀಯ ಪಶು ವೈದ್ಯಾಧಿಕಾರಿಗಳು ದೃಢೀಕರಣ ನೀಡಬೇಕು.  ಮೇವನ್ನು ರೈತರಿಂದ ಮಾತ್ರ ಖರೀದಿಸಬೇಕು.  ಮದ್ಯವರ್ತಿಗಳಿಂದ ಖರೀದಿಸುವಂತಿಲ್ಲ.  ಆಯಾ ತಹಸಿಲ್ದಾರರು ಮೇವು ಸಾಗಾಣಿಕೆದಾರರಿಂದ ಬರುವ ಮೇವಿನ ಪ್ರಮಾಣವನ್ನು ವೇ ಬ್ರಿಡ್ಜ್‍ನಲ್ಲಿ ತೂಕ ಮಾಡಿಸಿದ ನಂತರವೇ ಮೇವು ಬ್ಯಾಂಕಿಗೆ ಸರಬರಾಜು ಮಾಡಬೇಕು.  ಒಣ ಮೇವಿಗೆ ಪ್ರತಿ ಕೆ.ಜಿ.ಗೆ ರೂ. 3 ರಂತೆ ದರ ನಿಗದಿಪಡಿಸಲಾಗಿದ್ದು, ಭೂ ರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಪಶುಪಾಲಕರಿಗೆ ಆದ್ಯತೆ ಮೇರೆಗೆ ಮೇವನ್ನು ನೀಡಬೇಕು.  ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳನ್ನು ಹೊಂದಿದ ಬಗ್ಗೆ ದೃಢೀಕರಣ ಪತ್ರ ಮತ್ತು ಗ್ರಾಮ ಲೆಕ್ಕಾಧಿಕಾರಿಯಿಂದ ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಎನ್ನುವ ಬಗ್ಗೆ ಮಾಹಿತಿ ಪಡೆದು ಮೇವು ವಿತರಿಸಬೇಕು.  ಮೇವಿನ ಖರೀದಿ ಅಥವಾ ಮೇವು ಬ್ಯಾಂಕ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೆ ಅಥವಾ ಬೇಜವಾಬ್ದಾರಿತನ ತೋರಿದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿ.ಸಿ. ರಮಣದೀಪ್ ಚೌದರಿ ಎಚ್ಚರಿಕೆ ನೀಡಿದರು.
ಪರ್ಯಾಯ ಬೆಳೆ ಜಾಗೃತಿ ಮೂಡಿಸಿ : ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷೆಯಂತೆ ಆಗದ ಹಿನ್ನೆಲೆಯಲ್ಲಿ, ರೈತರು ಬೆಳೆಯಬಹುದಾದ ಪರ್ಯಾಯ ಬೆಳೆಗಳ ಬಗ್ಗೆ ಕೃಷಿ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು, ಜಿಲ್ಲೆಯಲ್ಲಿ ಪರ್ಯಾಯ ಬೆಳೆಗಳಾದ ಸಜ್ಜೆ, ನವಣೆ, ಸೂರ್ಯಕಾಂತಿ ಅಥವಾ ಹುರುಳಿ ಬೆಳೆಯನ್ನು ಬೆಳೆಯುವಂತೆ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭಿಸಲಾಗಿದ್ದು, ಈ ಬೆಳೆಗಳ ಬಿತ್ತನೆ ಬೀಜವನ್ನು ಸಾಕಷ್ಟು ದಾಸ್ತಾನು ಇರಿಸಿ, ರೈತ ಸಂಪರ್ಕ ಕೇಂದ್ರಗಳ ಮೂಲಕ ಶೇ. 50 ರ ಸಬ್ಸಿಡಿ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ.  ರಸಗೊಬ್ಬರಗಳ ದಾಸ್ತಾನು ಸಹ ಸಾಕಷ್ಟಿದ್ದು, ಬಿತ್ತನೆ ಬೀಜ ಅಥವಾ ರಸಗೊಬ್ಬರಗಳ ಯಾವುದೇ ಕೊರತೆ ಜಿಲ್ಲೆಯಲ್ಲಿ ಇಲ್ಲ ಎಂದರು.
         ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ಬರ ಪರಿಸ್ಥಿತಿ ನಿರ್ವಹಣೆ ನಿಟ್ಟಿನಲ್ಲಿ ಈಗಾಗಲೆ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಉದ್ಯೋಗ ದೊರಕಿಸುವ ಕಾರ್ಯ ಪ್ರಾರಂಭವಾಗಿದ್ದು, ಕೆರೆ ಹೂಳೆತ್ತುವ ಕಾಮಗಾರಿ, ಅರಣ್ಯೀಕರಣ ಸೇರಿದಂತೆ ಹಲವು ಕೂಲಿ ಆಧಾರಿತ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
          ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣ್ ಕುಮಾರ ಜಿ.ಎಲ್., ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರ ನಾಯಕ್, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಡಿವೈಎಸ್‍ಪಿ ರಾಜೀವ್. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಮನೋಹರ ವಡ್ಡರ್ ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Post a Comment