Monday, 31 August 2015

ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ

ಕೊಪ್ಪಳ, ಆ.31(ಕರ್ನಾಟಕ ವಾರ್ತೆ) : ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆ.03 ರಂದು ಬೆಳಿಗ್ಗೆ 09 ಗಂಟೆಗೆ ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.
     ಇಂಡೋ-ಎಮ್‍ಐಎಮ್ ಟೆಕ್ ಪ್ರೈವೇಟ್. ಲಿಮಿಟೆಡ್. ಬೆಂಗಳೂರು-562114 ಎಂಬ ಕಂಪನಿಯು ಈ ಸಂದರ್ಶನವನ್ನು ಏರ್ಪಡಿಸಿದ್ದು, ಫಿಟ್ಟರ್, ಮಷಿನಿಷ್ಟ್ ಮತ್ತು ಟರ್ನರ್ ವೃತ್ತಿಗಳಲ್ಲಿ ಐ.ಟಿ.ಐ ಪಾಸಾದ, ಹಾಗೂ ಫಲಿತಾಂಶಕ್ಕಾಗಿ ಕಾಯುತ್ತಿರುವ ಹಾಗೂ 18 ರಿಂದ 21 ವರ್ಷದೊಳಗಿನ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡಾಟಾ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ಸಂದರ್ಶದಲ್ಲಿ ಹಾಜರಾಗಬಹುದಾಗಿದೆ ಎಂದು ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಗೌರಿ ಗಣೇಶ ಹಬ್ಬ : ಸೆ.03 ರಂದು ಪೂರ್ವಾಭಾವಿ ಸಭೆ

ಕೊಪ್ಪಳ, ಆ.31 (ಕರ್ನಾಟಕ ವಾರ್ತೆ): ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೊಪ್ಪಳದಲ್ಲಿ  ಸೆ.17 ರಿಂದ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಕುರಿತು ಪೂರ್ವಭಾವಿ ಸಭೆ ಸೆ. 03 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ರಮಣದೀಪ್ ಚೌಧರಿ ಅವರು ವಹಿಸುವರು ಎಂದು ಅಪರ ಜಿಲ್ಲಾಧಿಕಾರಿ ಡಾ||ಪ್ರವೀಣ ಕುಮಾರ ಜಿ.ಎಲ್. ಅವರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಮಾನವ ಅಭಿವೃದ್ಧಿ ವರದಿ ಪುಸ್ತಕ ಬಿಡುಗಡೆ

ಕೊಪ್ಪಳ ಆ. 31 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪಂಚಾಯತಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ವತಿಯಿಂದ ಪ್ರಕಟಗೊಂಡಿರುವ ‘ಕೊಪ್ಪಳ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2014’ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಬಿಡುಗಡೆ ಮಾಡಿದರು.
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇತ್ತಿಚೆಗೆ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ‘ಕೊಪ್ಪಳ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2014’ ಪುಸ್ತಕವನ್ನು ಬಿಡುಗಡೆ ಮಾಡಿದರು.  ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ರಮಣದೀಪ್ ಚೌಧರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಮುಂತಾದವರು ಉಪಸ್ಥಿತರಿದ್ದರು.

ಕಾನೂನು ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಆ. 31 (ಕರ್ನಾಟಕ ವಾರ್ತೆ) : ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು, ಪಶುಸಂಗೋಪನೆ ಹಾಗೂ ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ ಅವರು ಸೆ. 03 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ ಹೊಸಪೇಟೆಯಿಂದ ಹೊರಟು ಬೆ. 10 ಗಂಟೆಗೆ ಯಲಬುರ್ಗಾಕ್ಕೆ ಆಗಮಿಸುವರು.  ನಂತರ ಗೋಶಾಲೆಗಳಿಗೆ ಭೇಟಿ ನೀಡುವರು.  ಯಲಬುರ್ಗಾ ನಗರದಲ್ಲಿ ಶಾಸಕರ ವಿವೇಚನಾ ನಿಧಿಯಿಂದ ಹಾಗೂ ಧಾರ್ಮಿಕ ದತ್ತಿ ಮತ್ತು ಆರಾಧನಾ ಯೋಜನೆಯಲ್ಲಿ ವಿವಿಧ ದೇವಸ್ಥಾನ ಮತ್ತು ಮಸೀದಿ ಕಟ್ಟಡಗಳ ದುರಸ್ತಿಗಾಗಿ ಹಣ ಬಿಡುಗಡೆಯಾದ ಚೆಕ್‍ಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಬೆ. 11 ಗಂಟೆಗೆ ಬರಗಾಲದ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಸಚಿವರು ಅದೇ ದಿನ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

Friday, 28 August 2015

ಬರ : ಬೆಳೆ ಹಾನಿ ಸಮೀಕ್ಷೆ ವರದಿ ಶೀಘ್ರ ಸಲ್ಲಿಸಲು ಡಿ.ಸಿ. ರಮಣದೀಪ್ ಚೌದರಿ ಸೂಚನೆ

ಕೊಪ್ಪಳ ಆ. 28 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತಲೆದೋರಿರುವ ಬರ ಪರಿಸ್ಥಿತಿಯಿಂದ ಹಾನಿಯಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆ ಕುರಿತು ಸಮೀಕ್ಷಾ ವರದಿಯನ್ನು ಶೀಘ್ರ ಸಲ್ಲಿಸುವಂತೆ ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
         ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
         ಜಿಲ್ಲೆಯಲ್ಲಿ ಮುಂಗಾರು ಮಳೆ ಈ ಬಾರಿ ವಿಫಲವಾಗಿದ್ದು, ಬರ ಪರಿಸ್ಥಿತಿ ತಲೆದೋರಿದೆ.  ರೈತರು ಮಳೆಯ ನಿರೀಕ್ಷೆಯಲ್ಲಿ ಬಿತ್ತಿದ ಬೆಳೆಗಳು ಮಳೆಯ ಕೊರತೆಯಿಂದಾಗಿ ಒಣಗಿಹೋಗಿದ್ದು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ.  ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಈಗಾಗಲೆ ಸರ್ಕಾರ ಘೋಷಿಸಿದೆ.  ಜಿಲ್ಲೆಯಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಕುರಿತಂತೆ ಕ್ಷೇತ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಹಾನಿಯ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲು ನೀಡಿದ ಸೂಚನೆಯಂತೆ, ಸಮೀಕ್ಷಾ ಕಾರ್ಯ ಪ್ರಾರಂಭಗೊಂಡಿದೆ.  ಎಲ್ಲ ಹೋಬಳಿಗಳಿಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಆಯಾ ಅಧಿಕಾರಿಗಳು, ಸಂಬಂಧಿಸಿದ ಹೋಬಳಿಗಳಿಗೆ ಖುದ್ದು ಭೇಟಿ ನೀಡಿ, ಸಮೀಕ್ಷೆಯ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.  ನಿಖರವಾದ ಸಮೀಕ್ಷಾ ವರದಿಯನ್ನು ಆದಷ್ಟು ಶೀಘ್ರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇವು ಬ್ಯಾಂಕ್ ಸ್ಥಾಪನೆ : ಮಳೆ ಹಾಗೂ ತೇವಾಂಶ ಕೊರತೆಯಿಂದ ಸಮರ್ಪಕ ಪ್ರಮಾಣದಲ್ಲಿ ಮೇವು ಬೆಳೆಯದಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಗಳಿರುವುದರಿಂದ, ಕೊಪ್ಪಳ ಜಿಲ್ಲಾಡಳಿತ ಮೇವು ಬ್ಯಾಂಕ್ ಸ್ಥಾಪಿಸಿ ಜಾನುವಾರುಗಳಿಗೆ ಮೇವನ್ನು ಪೂರೈಕೆ ಮಾಡುವ ಕ್ರಮ ಕೈಗೊಂಡಿದೆ.  ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ, ಗಂಗಾವತಿ ತಾಲೂಕಿನ ಕನಕಗಿರಿ ಮತ್ತು ಹುಲಿಹೈದರ್, ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಕುಕನೂರು ಮತ್ತು ಯಲಬುರ್ಗಾ ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಈಗಾಗಲೆ ಆದೇಶ ನೀಡಲಾಗಿದೆ.  ಆಯಾ ತಾಲೂಕು ತಹಸಿಲ್ದಾರರು ಹಾಗೂ ಪಶುಸಂಗೋಪನೆ ಇಲಾಖೆಯವರು ಮೇವು ಬ್ಯಾಂಕ್ ನಿರ್ವಹಣೆಯಲ್ಲಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು.  ಸದ್ಯ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮೇವು ಬೆಳೆಯಲು ಉತ್ತೇಜಿಸಲು ಮೇವು ಬೀಜದ ಮಿನಿಕಿಟ್ ವಿತರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.  ಮೇವನ್ನು ಖರೀದಿಸುವ ಪೂರ್ವದಲ್ಲಿ ಮೇವಿನ ಗುಣಮಟ್ಟ ಸರಿ ಇರುವ ಕುರಿತು ಸ್ಥಳೀಯ ಪಶು ವೈದ್ಯಾಧಿಕಾರಿಗಳು ದೃಢೀಕರಣ ನೀಡಬೇಕು.  ಮೇವನ್ನು ರೈತರಿಂದ ಮಾತ್ರ ಖರೀದಿಸಬೇಕು.  ಮದ್ಯವರ್ತಿಗಳಿಂದ ಖರೀದಿಸುವಂತಿಲ್ಲ.  ಆಯಾ ತಹಸಿಲ್ದಾರರು ಮೇವು ಸಾಗಾಣಿಕೆದಾರರಿಂದ ಬರುವ ಮೇವಿನ ಪ್ರಮಾಣವನ್ನು ವೇ ಬ್ರಿಡ್ಜ್‍ನಲ್ಲಿ ತೂಕ ಮಾಡಿಸಿದ ನಂತರವೇ ಮೇವು ಬ್ಯಾಂಕಿಗೆ ಸರಬರಾಜು ಮಾಡಬೇಕು.  ಒಣ ಮೇವಿಗೆ ಪ್ರತಿ ಕೆ.ಜಿ.ಗೆ ರೂ. 3 ರಂತೆ ದರ ನಿಗದಿಪಡಿಸಲಾಗಿದ್ದು, ಭೂ ರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಪಶುಪಾಲಕರಿಗೆ ಆದ್ಯತೆ ಮೇರೆಗೆ ಮೇವನ್ನು ನೀಡಬೇಕು.  ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳನ್ನು ಹೊಂದಿದ ಬಗ್ಗೆ ದೃಢೀಕರಣ ಪತ್ರ ಮತ್ತು ಗ್ರಾಮ ಲೆಕ್ಕಾಧಿಕಾರಿಯಿಂದ ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಎನ್ನುವ ಬಗ್ಗೆ ಮಾಹಿತಿ ಪಡೆದು ಮೇವು ವಿತರಿಸಬೇಕು.  ಮೇವಿನ ಖರೀದಿ ಅಥವಾ ಮೇವು ಬ್ಯಾಂಕ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೆ ಅಥವಾ ಬೇಜವಾಬ್ದಾರಿತನ ತೋರಿದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿ.ಸಿ. ರಮಣದೀಪ್ ಚೌದರಿ ಎಚ್ಚರಿಕೆ ನೀಡಿದರು.
ಪರ್ಯಾಯ ಬೆಳೆ ಜಾಗೃತಿ ಮೂಡಿಸಿ : ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷೆಯಂತೆ ಆಗದ ಹಿನ್ನೆಲೆಯಲ್ಲಿ, ರೈತರು ಬೆಳೆಯಬಹುದಾದ ಪರ್ಯಾಯ ಬೆಳೆಗಳ ಬಗ್ಗೆ ಕೃಷಿ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು, ಜಿಲ್ಲೆಯಲ್ಲಿ ಪರ್ಯಾಯ ಬೆಳೆಗಳಾದ ಸಜ್ಜೆ, ನವಣೆ, ಸೂರ್ಯಕಾಂತಿ ಅಥವಾ ಹುರುಳಿ ಬೆಳೆಯನ್ನು ಬೆಳೆಯುವಂತೆ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭಿಸಲಾಗಿದ್ದು, ಈ ಬೆಳೆಗಳ ಬಿತ್ತನೆ ಬೀಜವನ್ನು ಸಾಕಷ್ಟು ದಾಸ್ತಾನು ಇರಿಸಿ, ರೈತ ಸಂಪರ್ಕ ಕೇಂದ್ರಗಳ ಮೂಲಕ ಶೇ. 50 ರ ಸಬ್ಸಿಡಿ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ.  ರಸಗೊಬ್ಬರಗಳ ದಾಸ್ತಾನು ಸಹ ಸಾಕಷ್ಟಿದ್ದು, ಬಿತ್ತನೆ ಬೀಜ ಅಥವಾ ರಸಗೊಬ್ಬರಗಳ ಯಾವುದೇ ಕೊರತೆ ಜಿಲ್ಲೆಯಲ್ಲಿ ಇಲ್ಲ ಎಂದರು.
         ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ಬರ ಪರಿಸ್ಥಿತಿ ನಿರ್ವಹಣೆ ನಿಟ್ಟಿನಲ್ಲಿ ಈಗಾಗಲೆ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಉದ್ಯೋಗ ದೊರಕಿಸುವ ಕಾರ್ಯ ಪ್ರಾರಂಭವಾಗಿದ್ದು, ಕೆರೆ ಹೂಳೆತ್ತುವ ಕಾಮಗಾರಿ, ಅರಣ್ಯೀಕರಣ ಸೇರಿದಂತೆ ಹಲವು ಕೂಲಿ ಆಧಾರಿತ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
          ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣ್ ಕುಮಾರ ಜಿ.ಎಲ್., ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರ ನಾಯಕ್, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಡಿವೈಎಸ್‍ಪಿ ರಾಜೀವ್. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಮನೋಹರ ವಡ್ಡರ್ ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸೆ.10 ರಂದು ತಾ.ಪಂ ಸಾಮಾನ್ಯ ಸಭೆ

ಕೊಪ್ಪಳ, ಆ.28 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಾ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಸೆ.10 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳ ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಗೆ ತಪ್ಪದೇ, ಖುದ್ದಾಗಿ ಹಾಜರಾಗಬೇಕು ಹಾಗೂ ಆಗಸ್ಟ್ 2015 ರ ಅಂತ್ಯದ ತಮ್ಮ ಇಲಾಖೆಯ ಪ್ರಗತಿ ವರದಿಯ 40 ಪ್ರತಿಗಳನ್ನು (ಎ-4 ಸೈಜಿನಲ್ಲಿ) ಸೆ.05 ರೊಳಗಾಗಿ ತಾಲೂಕಾ ಪಂಚಾಯಿತಿ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಕೊಪ್ಪಳ ತಾಲೂಕಾ ಪಂಚಾಯತ್‍ನ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಉಚಿತ ಕುರಿ ಮತ್ತು ಆಡು ಸಾಕಾಣಿಕೆ ಶಿಬಿರ

ಕೊಪ್ಪಳ, ಆ.28 (ಕರ್ನಾಟಕ ವಾರ್ತೆ) : ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ ಎರಡು ದಿನಗಳ ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ಶಿಬಿರವನ್ನು ಸೆಪ್ಟಂಬರ್ ತಿಂಗಳಿನಲ್ಲಿ ಆಯೋಜಿಸಲಾಗಿದೆ.
     ಶಿಬಿರದಲ್ಲಿ ಕುರಿ ಮತ್ತು ಆಡು ಸಾಕಾಣಿಕೆಯಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಶಿಬಿರವು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ ಅಥವಾ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಸೆ.05 ರೊಳಗಾಗಿ ಕೇಂದ್ರದಲ್ಲಿ ನೊಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-587103, ಮೊಬೈಲ್ : 9482630790 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಭಾರಿ ವಾಹನ ಚಾಲನಾ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಆ.28 (ಕರ್ನಾಟಕ ವಾರ್ತೆ) : ಕೊಪ್ಪಳದ ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ   ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿಯ ನಿರುದ್ಯೋಗಿ ವಿದ್ಯಾವಂತ ಯುವಕ, ಯುವತಿಯರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಕಳೆದ 15 ವರ್ಷಗಳಿಂದ  ಜಿಲ್ಲೆಯ ನಿವಾಸಿ ಆಗಿರಬೇಕು. ಪರಿಶಿಷ್ಟ ಜಾತಿಗೆ ಸೇರಿದ್ದು, ವಯೋಮಿತಿ 21 ರಿಂದ 40 ವರ್ಷದ ಒಳಗಿರಬೇಕು. ಲಘು ವಾಹನ ಚಾಲನೆ ಪರವಾನಿಗೆ ಪಡೆದು ಕನಿಷ್ಠ 1 ವರ್ಷ ಪೂರ್ಣಗೊಂಡಿರಬೇಕು ಅಥವಾ 2 ವರ್ಷಗಳ  ಟ್ರ್ಯಾಕ್ಟರ್ ಚಾಲನಾ ಪರವಾನಿಗೆ ಹೊಂದಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣ, ಅನುತ್ತೀರ್ಣ, ಟಿ.ಸಿ ಅಥವಾ ಅಂಕಪಟ್ಟಿ ಹೊಂದಿರಬೇಕು. ನಿಗಮದಿಂದ ವಿತರಿಸಲಾಗುವ ಅರ್ಜಿಗಳನ್ನು ಸ್ವತಃ ಅರ್ಜಿದಾರರೇ ಖುದ್ದಾಗಿ ಬಂದು, ತಮ್ಮ ವೈಯಕ್ತಿಕ  ದಾಖಲೆಗಳಾದ ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ, ಆಧಾರ್ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಪಡೆದುಕೊಳ್ಳಬೇಕು. ಮಧ್ಯವರ್ತಿಗಳಿಂದ ಪಡೆದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
     ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆ.05 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಕೊಠಡಿ ಸಂಖ್ಯೆ :109, ಜಿಲ್ಲಾಡಳಿತ ಭವನ, ಕೊಪ್ಪಳ, ದೂರವಾಣಿ ಸಂಖ್ಯೆ : 08539-221176 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನವೋದಯ ವಿದ್ಯಾಲಯ : 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಕೊಪ್ಪಳ, ಆ.28 (ಕರ್ನಾಟಕ ವಾರ್ತೆ) : ರಾಷ್ಟ್ರೀಯ ಶಿಕ್ಷಣ ನೀತಿಗನುಗುಣವಾಗಿ ಭಾರತ ಸರ್ಕಾರ ಆರಂಭಿಸಿರುವ ಜವಾಹರ ನವೋದಯ ವಿದ್ಯಾಲಯಗಳ 6ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಅಥವಾ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು. ಅಭ್ಯರ್ಥಿಯು 2003 ರ ಮೇ.01 ಕ್ಕಿಂತ ಮೊದಲು ಮತ್ತು 2007 ರ ಏ.30 ರ ನಂತರ ಜನಿಸಿರಬಾರದು. ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಒಳಗೊಂಡಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅನ್ವಯವಾಗುತ್ತದೆ. ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು, ಸಹಾಯಕ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಛೇರಿ ಅಥವಾ ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ, ಕುಕನೂರು (ಜಿಲ್ಲೆ ಕೊಪ್ಪಳ) ಇವರಿಂದ ಉಚಿತವಾಗಿ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೆ.30 ರೊಳಗಾಗಿ ಸಲ್ಲಿಸಬಹುದಾಗಿದೆ.
     ನವೋದಯ ವಿದ್ಯಾಲಯಗಳ 6ನೇ ತರಗತಿ ಪ್ರವೇಶ ಪರೀಕ್ಷೆಯು 2016 ರ ಜನೆವರಿ 09 ರಂದು ಬೆಳಿಗ್ಗೆ 11.30 ಗಂಟೆಗೆ ಆಯಾ ತಾಲೂಕಾ ಕೇಂದ್ರಗಳಲ್ಲಿ ನಡೆಯಲಿದೆ. ಪ್ರವೇಶ ಪರೀಕ್ಷೆಯು  ಎರಡು ಗಂಟೆಗಳ ಕಾಲ ನಡೆಯಲಿದ್ದು, ಇದರಲ್ಲಿ ಗಣಿತ, ಮಾನಸಿಕ ಸಾಮಥ್ರ್ಯ ಹಾಗೂ ಭಾಷಾ ಪರೀಕ್ಷೆಗಳು ಇರುತ್ತವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ  ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ, ಕುಕನೂರು (ಜಿಲ್ಲೆ ಕೊಪ್ಪಳ), ದೂರವಾಣಿ ಸಂಖ್ಯೆ : 08534-230444, 230051 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಬಿ. ಹೊಸಳ್ಳಿಯಲ್ಲಿ ಶಾಲಾ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ

ಕೊಪ್ಪಳ, ಆ.27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ  ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕಿನ ಬಿ.ಹೊಸಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆ.26 ರಂದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಶಾಲಾ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ವಿಶೇಷ ಪೋಲಿಸ್ ಘಟಕದ ಬಸಪ್ಪ ಹಾದಿಮನಿ ಮಾತನಾಡಿ, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ತಡೆ ಕಾಯ್ದೆ-2012 ನ್ನು ಜಾರಿಗೊಳಿಸಿದೆ. ಈ ಕಾಯ್ದೆಯಡಿ 18 ವರ್ಷದೊಳಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಸಂಜ್ಞೆ, ಶಾಬ್ಧಿಕವಾಗಿ ಕಿರುಕುಳನ್ನು ನೀಡುವುದು ಸಹ ದೌರ್ಜನ್ಯವೆಂದು ಪರಿಗಣಿಸಿ ಪ್ರಕರಣ ದಾಖಲಿಸಬಹುದಾಗಿದೆ. ಈ ಕಾಯ್ದೆಯಡಿ ಪ್ರಕರಣ ದಾಖಲಾದಲ್ಲಿ ಅದು ವಿಚಾರಣಾರ್ಹ ಮತ್ತು ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ 18 ವರ್ಷದೂಳಗಿನ ಬಾಲಕಿಯು ತಾನೇ ಸ್ವತಃ ಸ್ವ-ಇಚ್ಛೆಯಿಂದ ಯುವಕನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದರೂ ಸಹ ಈ ಕಾಯ್ದೆಯಡಿ ಆ ಯುವಕನದೆ ಅಪರಾಧ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುತ್ತದೆ. ಇಂತಹ ಅಪರಾಧಗಳಿಗೆ 7 ವರ್ಷ ಜೀವಾವಧಿ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಇಂದಿನ ಯುವಕ, ಯುವತಿಯರು ಪ್ರೀತಿ, ಪ್ರೇಮ ಎಂದು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳದೇ, ವಿದ್ಯಾಭ್ಯಾಸದ ಕಡೆ ಗಮನ ಹರಿಸಿ, ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಕಿವಿಮಾತು ಹೇಳಿದ ಅವರು, ಎಲ್ಲರೂ ಮಕ್ಕಳ ಹಕ್ಕುಗಳನ್ನು ಗೌರವಿಸೋಣ ಎಂದು ಕರೆ ನೀಡಿದರು.
     ಮಕ್ಕಳ ಸಹಾಯವಾಣಿಯ ಲತಾ ವಿ.ಜೆ ಮಾತನಾಡಿ ಸಂಕಷ್ಠದಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ನ್ನು ಆರಂಭಿಸಲಾಗಿದ್ದು, ಸಂಕಷ್ಠದಲ್ಲಿರುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆಮಾಡಬಹುದಾಗಿದೆ. ನೀವು ಕರೆ ಮಾಡಿದ 60 ನಿಮಿಷದೊಳಗಾಗಿ ಸದರಿ ಮಗುವನ್ನು ರಕ್ಷಿಸಿ, ಅಗತ್ಯ ಪುನರ್ವಸತಿ ಕಲ್ಪಿಸಲಾಗುವುದು ಎಂದರು.
     ಮಕ್ಕಳ ವಿಶೇಷ ಪೊಲೀಸ್ ಘಟಕದ ಜಗದೀಶ್ವರಯ್ಯ ಹಿರೇಮಠ,  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ಮಾತನಾಡಿದರು. ಬಿ.ಹೊಸಳ್ಳಿಯ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಂಗಳಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ರವಿ ಬಡಿಗೇರ ನಿರೂಪಿಸಿದರು. ಸಿದ್ದು ಪೂಜಾರ ವಂದಿಸಿದರು.

ಕೂಲಿಕಾರರ ಸಮಸ್ಯೆ ಬಗೆಹರಿಸಲು ಕಾಯಕಬಂಧುಗಳ ನೇಮಕ : ಕೃಷ್ಣ ಉದಪುಡಿ

ಕೊಪ್ಪಳ, ಆ.28 (ಕರ್ನಾಟಕ ವಾರ್ತೆ) : ಕೂಲಿಕಾರರ ಸಮಸ್ಯೆಗಳಾದ ಕೂಲಿ ಹಾಜರಾತಿ, ಕೆಲಸದ ಅಳತೆ, ಕೂಲಿ ಹಣ ಮುಂತಾದವುಗಳನ್ನು ನಿವಾರಿಸುವ ಸಲುವಾಗಿ ಸರ್ಕಾರದ ವತಿಯಿಂದ  ಕಾಯಕ ಬಂಧುಗಳನ್ನು ನೇಮಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಹೇಳಿದರು.
     ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಮತ್ತು ಕಾಯಕಬಂಧುಗಳ ಜವಾಬ್ದಾರಿಗಳು ಮತ್ತು ಕಾರ್ಯನಿರ್ವಹಣೆ ಕುರಿತು ಆ.26 ರಂದು ಕೊಪ್ಪಳ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
     ಕೂಲಿಕಾರರು ನೇರವಾಗಿ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೇ ಇರುವುದನ್ನು ಮನಗಂಡಿರುವ ಸರ್ಕಾರ ಕೂಲಿಕಾರರ ಮೇಲ್ವಿಚಾರಣೆಯನ್ನು ಸುಗಮವಾಗಿ ನಿರ್ವಹಿಸಲು ಕಾಯಕ ಬಂಧುಗಳನ್ನು ನೇಮಿಸಿದೆ. ಈ ಯೋಜನೆಯಡಿ ಕಾರ್ಯನಿರ್ವಹಿಸುವ 20 ರಿಂದ 25 ಜನ ಕೂಲಿಕಾರರರಿಗೆ ಒಬ್ಬ ಕಾಯಕ ಬಂಧುವನ್ನು ನೇಮಿಸಲಾಗಿರುತ್ತದೆ.  ಕಾಯಕ ಬಂಧುಗಳು ನೇರವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದರಿಂದ ಕೂಲಿಕಾರರ ಸಮಸ್ಯೆಗಳು ಬಹುಬೇಗನೆ ಇತ್ಯರ್ಥಗೊಳ್ಳಲಿವೆ. ಅಲ್ಲದೇ, ಪ್ರತಿಯೊಬ್ಬ ಕೂಲಿಕಾರನಿಗೆ ರೂ.3 ರಂತೆ ಕಾಯಕ ಬಂಧುಗಳಿಗೆ ಹೆಚ್ಚುವರಿಯಾಗಿ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
     ಪ್ರಸಕ್ತ ವರ್ಷದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಸರ್ಕಾರ ಈಗಾಗಲೇ ಕೊಪ್ಪಳ ಜಿಲ್ಲೆಯನ್ನು ಬರಗಾಲ ಪ್ರದೇಶ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗುಳೆ ಪ್ರಮಾಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾಯಕಬಂಧುಗಳು ಯಾವುದೇ ಕೂಲಿಕಾರರು ಗುಳೆ ಹೋಗದಂತೆ ಅವರಲ್ಲಿ ಮನವರಿಕೆ ಮಾಡಿ, ಕೂಲಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿ ಕೂಲಿಕಾರರು ಕೂಲಿ ಕೆಲಸ ನಿರ್ವಹಿಸುವಂತಹ ಕಾಮಗಾರಿಗಳನ್ನು ಆಯ್ದುಕೊಂಡು ಅನುಮೊದನೆ ಮಾಡಲಾಗಿದೆ. ಹೆಚ್ಚುವರಿಯಾಗಿ ಕೂಲಿಕಾರರು ಕೂಲಿ ಕೆಲಸ ಬಯಸಿದಲ್ಲಿ ಸಂಬಧಿಸಿದ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚುವರಿ ಕ್ರಿಯಾ ಯೋಜನೆ ಅನುಮೋದನೆ ಮಾಡಿ, ಅವರಿಗೆ ಕೂಲಿ ಕೆಲಸ ನೀಡಲಾಗುತ್ತದೆ. ದುಡಿಯುವ ಕೈಗಳಿಗೆ ಕೆಲಸ ಎಂಬ ಉದ್ದೇಶದಿಂದ ಜಾರಿಗೆ ತರಲಾಗಿರುವ ಈ ಯೋಜನೆಯಡಿ ಕೂಲಿ ವಿತರಿಸುವಲ್ಲಿ ಅನಗತ್ಯ ವಿಳಂಬ ಧೋರಣೆ ತೊರುವವರ ವಿರುದ್ಧ  ಕ್ರಮ ಜರುಗಿಸಲಾಗುವುದು. ಸರ್ಕಾರದ ಸುತ್ತೋಲೆಗಳಿಗೆ ನಾವೆಲ್ಲರೂ ಬದ್ಧರಾಗಿ ಯೋಜನೆಯಡಿ ಕೂಲಿ ನಿರ್ವಹಿಸಿ, ಗ್ರಾಮಗಳ ಅಭಿವೃದ್ಧಿಗೆ ಕಂಕಣಬದ್ಧರಾಗಿ ನಿಲ್ಲಬೇಕು ಎಂದು ಕೃಷ್ಣ ಉದಪುಡಿ ಅವರು ಕರೆ ನೀಡಿದರು.
      ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ತಾಲೂಕಿನ ಕವಲೂರು, ಬಂಡಿಹರ್ಲಾಪುರ, ಹುಲಿಗಿ, ಬಿಸರಳ್ಳಿ ಹಾಗೂ ಇತರೆ ಗ್ರಾಮ ಪಂಚಾಯಿತಿಗಳ ಕೂಲಿಕಾರರ ಸಮಸ್ಯೆಗಳನ್ನು ಆಲಿಸಿದ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಇದೇ ಸಂದರ್ಭದಲ್ಲಿ ಕಾಯಕ ಬಂಧುಗಳಿಗೆ ಹಳದಿ ಬಣ್ಣದ ಗುರುತಿನ ಚೀಟಿಗಳನ್ನು ವಿತರಿಸಿದರು.
     ಕಾರ್ಯಾಗಾರದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ ಅಶೋಕ ಕುಲಕರ್ಣಿ, ತಾಲೂಕಾ ಐಇಸಿ ಸಂಯೋಜಕ ದೇವರಾಜ ಪತ್ತಾರ, ಎಂಐಎಸ್ ಸಂಯೋಜಕ ಮಂಜುನಾಥ ಜವಳಿ, ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ಸೇರಿದಂತೆ ಕಿರಿಯ ಅಭಿಯಂತರರು, ವಿವಿಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು ಉಪಸ್ಥಿತರಿದ್ದರು. 

ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಅಂತಿಮ ಆದ್ಯತೆ ಪಟ್ಟಿ ಪ್ರಕಟ

ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಕೌನ್ಸಿಲಿಂಗ್ ಆ. 29 ರಂದು ರಾಜ್ಯ ಮಟ್ಟದ ಆದ್ಯತಾ ಕ್ರಮಾಂಕ 151 ರಿಂದ 350 ರವರೆಗೆ ನಡೆಸಲಾಗುವುದು.
     ಸಂಬಂಧಿತ ಕ್ರಮಾಂಕದವರು ಕೌನ್ಸಿಲಿಂಗ್‍ಗೆ ಹಾಜರಾಗಬಹುದಾಗಿದ್ದು, ಮುಂದಿನ ದಿನಗಳಲ್ಲಿನ ಕೌನ್ಸಿಲಿಂಗ್ ಹಾಜರಾಗಬೇಕಾದ ಶಿಕ್ಷಕರು ಪ್ರತಿ ದಿನ ಸಂಜೆ ಶಿಕ್ಷಣ ಇಲಾಖೆ ವೆಬ್‍ಸೈಟ್  www.schooleducation.kar.nic.in ನಲ್ಲಿ ಆದ್ಯತೆ ಕ್ರಮ ಸಂಖ್ಯೆಯನ್ನು ಗಮನಿಸಿ, ಅದರಂತೆ ನಿಗದಿಪಡಿಸಿದ ನಿಗದಿತ ದಿನಾಂಕದಂದು ಕೌನ್ಸಿಲಿಂಗ ವರ್ಗಾವಣೆಗೆ ಹಾಜರಾಗಬೇಕು.  ಅಲ್ಲದೆ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ ಇವರ ವೆಬ್‍ಸೈಟ್  www//cpigulbarga.kar.nic.in   ನಲ್ಲಿ ಸೂಚಿಸಿದಂತೆ ವರ್ಗಾವಣೆಗೆ ತರಬೇಕಾದ ಪೂರಕ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ನಿರ್ದೇಶಕ ಸಿ.ವಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 27 August 2015

ಏಳು ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ- ಡಿ.ಸಿ. ರಮಣದೀಪ ಚೌದರಿ ಆದೇಶ

ಕೊಪ್ಪಳ ಆ. 27 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತಲೆದೋರಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಜಿಲ್ಲೆಯ ಏಳು ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಆದೇಶಿಸಿದ್ದಾರೆ.
     ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆ ಆಗಿರುವುದರಿಂದ, ಸರ್ಕಾರ ಜಿಲ್ಲೆಯ ನಾಲ್ಕೂ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ.  ಮಳೆ ಹಾಗೂ ತೇವಾಂಶ ಕೊರತೆಯಿಂದ ಸಮರ್ಪಕ ಪ್ರಮಾಣದಲ್ಲಿ ಮೇವು ಬೆಳೆಯದಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಗಳಿರುವುದರಿಂದ, ಕೊಪ್ಪಳ ಜಿಲ್ಲಾಡಳಿತ ಮೇವು ಬ್ಯಾಂಕ್ ಸ್ಥಾಪಿಸಿ ಜಾನುವಾರುಗಳಿಗೆ ಮೇವನ್ನು ಪೂರೈಕೆ ಮಾಡುವ ಕ್ರಮ ಕೈಗೊಂಡಿದೆ.  ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ, ಗಂಗಾವತಿ ತಾಲೂಕಿನ ಕನಕಗಿರಿ ಮತ್ತು ಹುಲಿಹೈದರ್, ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಕುಕನೂರು ಮತ್ತು ಯಲಬುರ್ಗಾ ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಆದೇಶ ನೀಡಲಾಗಿದೆ.  ಒಣ ಮೇವಿಗೆ ಪ್ರತಿ ಕೆ.ಜಿ. ಗೆ ರೂ. 03 ರಂತೆ ದರ ನಿಗದಿಪಡಿಸಲಾಗಿದ್ದು, ಭೂ ರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಪಶುಪಾಲಕರಿಗೆ ಆದ್ಯತೆ ಮೇರೆಗೆ ಮೇವನ್ನು ನೀಡಲಾಗುವುದು.  ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳನ್ನು ಹೊಂದಿದ ಬಗ್ಗೆ ದೃಢೀಕರಣ ಪತ್ರ ಮತ್ತು ಗ್ರಾಮ ಲೆಕ್ಕಾಧಿಕಾರಿಯಿಂದ ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತ ಎನ್ನುವ ಬಗ್ಗೆ ಮಾಹಿತಿ ಪಡೆದು ಮೇವು ವಿತರಿಸಲಾಗುವುದು.  ಜಾನುವಾರುಗಳನ್ನು ಹೊಂದಿರುವ ಭೂರಹಿತರು, ಸಣ್ಣ ಮತ್ತು ಅತಿ ಸಣ್ಣ ರೈತ ಪಶುಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ಮೇವು ಬ್ಯಾಂಕ್‍ಗಳನ್ನು ಆಯಾ ತಹಸಿಲ್ದಾರರು ಕೂಡಲೆ ಸ್ಥಾಪಿಸಬೇಕು, ಮೇವು ಸಂಗ್ರಹಣೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಈಗಾಗಲೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ತಿಳಿಸಿದ್ದಾರೆ.

ಸದ್ಭಾವನಾ ದಿನ : ಭಾವೈಕ್ಯ ಮತ್ತು ಸೌಹಾರ್ದತೆಯ ಪ್ರತಿಜ್ಞಾ ವಿಧಿ ಸ್ವೀಕಾರ

ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋಮು ಸೌಹಾರ್ದ ಪಾಕ್ಷಿಕ ಆಚರಣೆಯ ಅಂಗವಾಗಿ ಗುರುವಾರದಂದು ಸದ್ಭಾವನಾ ದಿನವನ್ನಾಗಿ ಆಚರಿಸಿದ ನಿಮಿತ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾವೈಕ್ಯ ಮತ್ತು ಸೌಹಾರ್ದತೆಯ ಪ್ರತಿಜ್ಞಾ ವಿಧಿಯನ್ನು ಎಲ್ಲ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸ್ವೀಕರಿಸಿದರು.
     ಸರ್ಕಾರದ ಆದೇಶದಂತೆ ಆ. 20 ರಿಂದ ಸೆ. 03 ರವರೆಗೆ ಕೋಮು ಸೌಹಾರ್ದ ಪಾಕ್ಷಿಕದ ಅಂಗವಾಗಿ ಗುರುವಾರದಂದು ಸದ್ಭಾವನಾ ದಿನವನ್ನಾಗಿ ಆಚರಿಸಲಾಯಿತು.  ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾ ವಿಧಿ ಬೊಧಿಸಿದ ಅಪರ ಜಿಲ್ಲಾಧಿಕಾರಿ ಡಾ. ಜಿ.ಎಲ್. ಪ್ರವೀಣ್ ಕುಮಾರ ಅವರು,  ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಭೇದ ಭಾವವಿಲ್ಲದೆ, ಭಾರತದ ಎಲ್ಲ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇವೆ.  ಅಲ್ಲದೆ ವಯಕ್ತಿಕವಾಗಿಯಾಗಲಿ ಅಥವಾ ಸಾಮೂಹಿಕವಾಗಿಯಾಗಲಿ, ನಮ್ಮಲ್ಲಿರುವ ಎಲ್ಲ ಬೇಧಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ, ಸಮಾಲೋಚನೆ ಹಾಗು ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆಂದು ಪ್ರತಿಜ್ಞೆ ಮಾಡುವುದಾಗಿ ಪ್ರಮಾಣ ಸ್ವೀಕರಿಸಿದರು. 
     ಜಿಲ್ಲಾಧಿಕಾರಿ ರಮಣದೀಪ ಚೌದರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್,  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳು, ಗಣ್ಯರಾದ ವೆಂಕಣ್ಣ ಯಾದವ್, ರವಿ ಕುರುಗೋಡ್ ಅಲ್ಲದೆ ಶಿವಾನಂದ ಹೊದ್ಲೂರ್, ಮಂಜುನಾಥ ಗೊಂಡಬಾಳ್, ಮಹಾಂತೇಶ್ ಮಲ್ಲನಗೌಡರ ಹಾಗೂ ವಿವಿಧ ಗಣ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಸೆ. 05 ರಂದು ವಿಜೃಂಭಣೆಯಿಂದ ಶ್ರೀಕೃಷ್ಣ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ ಆ. 27 (ಕ.ವಾ) : ಈ ಬಾರಿಯ ಶ್ರೀ ಕೃಷ್ಣ ಜಯಂತಿಯನ್ನು ಸೆ. 05 ರಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ಹೇಳಿದರು.
     ಕೃಷ್ಣ ಜಯಂತಿಯನ್ನು ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೃಷ್ಣ ಜಯಂತಿಯನ್ನು  ಸರ್ಕಾರಿ ಕಾರ್ಯಕ್ರಮವನ್ನಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.  ದೇಶದ ಎಲ್ಲ ಸಮುದಾಯದವರೂ ಶ್ರೀ ಕೃಷ್ಣನ ಆರಾಧಕರಾಗಿದ್ದು, ಯಾವುದೇ ಒಂದು ಸಮುದಾಯಕ್ಕೆ ಶ್ರೀ ಕೃಷ್ಣನನ್ನು ಸೀಮಿತಗೊಳಿಸುವುದು ಸಮಂಜಸವಲ್ಲ. ಕೃಷ್ಣ ಜಯಂತಿಯನ್ನು ಎಲ್ಲ ಸಮುದಾಯದವರ, ಸಂಘಟನೆಗಳ, ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು.  ಸೆ. 05 ರಂದು ಶಿಕ್ಷಕರ ದಿನಾಚರಣೆಯೂ ಇರುವುದರಿಂದ, ಶ್ರೀ ಕೃಷ್ಣ ಜಯಂತಿ ಕುರಿತ ಮೆರವಣೆಗೆ ಅಂದು ಬೆಳಗಿನ ವೇಳೆಯ ಬದಲಿಗೆ ಮಧ್ಯಾಹ್ನ 3-30 ಗಂಟೆಗೆ ಕೊಪ್ಪಳದ ಶಿರಸಪ್ಪಯ್ಯನ ಮಠ ಬಳಿ ಇರುವ ಗೋಪಾಲಕೃಷ್ಣ ದೇವಸ್ಥಾನದಿಂದ ಹೊರಟು, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನ ತಲುಪುವುದು.  ಸಂಜೆ 6 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಲಿದೆ.  ಶಿಷ್ಠಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು, ಸಂಸದರು ಹಾಗೂ ವಿವಿಧ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುವುದು.  ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ರಮಣದೀಪ ಚೌದರಿ ಅವರು ಸೂಚನೆ ನೀಡಿದರು.
     ಸಭೆಯಲ್ಲಿ ಹಾಜರಿದ್ದ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣ್ ಕುಮಾರ ಜಿ.ಎಲ್. ಅವರು ಮಾತನಾಡಿ, ಶ್ರೀಕೃಷ್ಣ ಜಯಂತಿ ಆಚರಣೆಗೆ ಜಿಲ್ಲಾ ಮಟ್ಟದಲ್ಲಿ 50 ಸಾವಿರ ರೂ. ಹಾಗೂ ತಾಲೂಕು ಮಟ್ಟದಲ್ಲಿ 25 ಸಾವಿರ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.  ಅಲ್ಲದೆ ತಾಲೂಕು ಮಟ್ಟದಲ್ಲಿಯೂ ವಿಜೃಂಭಣೆಯಿಂದ ಆಚರಿಸಲು ಈಗಾಗಲೆ ಸಂಬಂಧಪಟ್ಟ ತಹಸಿಲ್ದಾರರಿಗೆ ಸೂಚನೆ ನೀಡಲಾಗಿದೆ.  ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಲು ಸೂಕ್ತ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.   
      ಮೆರವಣಿಗೆ ಸಂದರ್ಭದಲ್ಲಿ ರಸ್ತೆ ಸ್ವಚ್ಛತೆ ಹಾಗೂ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ವೇದಿಕೆ ಅಲಂಕಾರ, ಮೆರವಣಿಗೆ ವ್ಯವಸ್ಥೆ ಹಾಗೂ ಸಮರ್ಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಲಾಯಿತು.
     ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಮಾತನಾಡಿ, ಕೃಷ್ಣ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವಂತಾಗಲು ಇಲಾಖೆಯಿಂದ ಮೆರವಣಿಗೆಗೆ ಸಾಂಸ್ಕøತಿಕ ಕಲಾ ತಂಡವನ್ನು ಒದಗಿಸಲಾಗುವುದು ಎಂದರು.  
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿವೈಎಸ್‍ಪಿ ರಾಜೀವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಯಾದವ ಸಮಾಜದ ಮುಖಂಡರಾದ ವೆಂಕಣ್ಣ ಯಾದವ್, ರವಿ ಕುರುಗೋಡ್ ಅಲ್ಲದೆ ಶಿವಾನಂದ ಹೊದ್ಲೂರ್, ಮಂಜುನಾಥ ಗೊಂಡಬಾಳ್, ಮಹಾಂತೇಶ್ ಮಲ್ಲನಗೌಡರ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದು, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಕೊಪ್ಪಳ, ಆ.27 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಐ.ಎ.ಎಸ್, ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆ.30 ರಂದು ನಡೆಯಲಿರುವ ಪರೀಕ್ಷೆಯನ್ನು ಸುಗಮ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ಆದೇಶ ಹೊರಡಿಸಿದ್ದಾರೆ.   
     ಸ್ಪರ್ಧಾತ್ಮಕ ಪರೀಕ್ಷೆಗಳು ಕೊಪ್ಪಳದ ಎಸ್.ಎಫ್.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಪದವಿ ಕಾಲೇಜು, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸೇರಿದಂತೆ ಜಿಲ್ಲೆಯ ಒಟ್ಟು 05 ಪರೀಕ್ಷಾ ಕೇಂದ್ರಗಳಲ್ಲಿ ಆ.30 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ನಡೆಯಲಿದೆ. ಪರೀಕ್ಷೆ ಸುಗಮ ಹಾಗೂ ಶಾಂತಿಯುತವಾಗಿ ನಡೆಯಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1983 ರ ಕಲಂ 144 ರನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.
     ನಿಷೇಧಾಜ್ಞೆಯನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಝೆರಾಕ್ಸ್, ಟೈಪಿಂಗ್‍ಗೆ ನಿರ್ಬಂಧವಿದೆ ಹಾಗೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ.  ಈ ಆದೇಶವು ಮದುವೆ, ಶವ ಸಂಸ್ಕಾರ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು  ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಅಂತಿಮ ಆದ್ಯತೆ ಪಟ್ಟಿ ಪ್ರಕಟ

ಕೊಪ್ಪಳ ಆ. 27 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿಯನ್ನು ಆ. 26 ರಂದು ಶಿಕ್ಷಣ ಇಲಾಖೆ ವೆಬ್‍ಸೈಟ್  www.schooleducation.kar.nic.in  ನಲ್ಲಿ ಪ್ರಕಟಿಸಲಾಗಿದೆ.
    ಇದಕ್ಕೆ ಸಂಬಂಧಿಸಿದಂತೆ ಆ. 28 ರಿಂದ ಕೌನ್ಸಿಲಿಂಗ ವರ್ಗಾವಣೆಯು ಪ್ರಾರಂಭವಾಗುತ್ತವೆ. ಕೌನ್ಸಿಲಿಂಗ್‍ಗೆ ಹಾಜರಾಗಬೇಕಾದ ಶಿಕ್ಷಕರು, ವೆಬ್‍ಸಯಟ್‍ನಲ್ಲಿ ಆದ್ಯತೆ ಕ್ರಮ ಸಂಖ್ಯೆಯಂತೆ ನಿಗದಿಪಡಿಸಿದ ದಿನಾಂಕವನ್ನು ಗಮನಿಸಿ ನಿಗದಿತ ದಿನಾಂಕದಂದು ಕೌನ್ಸಿಲಿಂಗ ವರ್ಗಾವಣೆಗೆ ಹಾಜರಾಗಬೇಕು.  ಅಲ್ಲದೆ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ ಇವರ ವೆಬ್‍ಸೈಟ್  www//cpigulbarga.kar.nic.in   ನಲ್ಲಿ ಸೂಚಿಸಿದಂತೆ ವರ್ಗಾವಣೆಗೆ ತರಬೇಕಾದ ಪೂರಕ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ನಿರ್ದೇಶಕ ಸಿ.ವಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಆ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಆ. 28 ರಿಂದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಆ. 28 ರಂದು ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 3 ಗಂಟೆಗೆ ಜಿಲ್ಲೆಯ ಕಾರಟಗಿಗೆ ಆಗಮಿಸುವರು. ನಂತರ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ಮಾಡುವರು.  ಆ. 29 ರಂದು ಬೆಳಿಗ್ಗೆ 11-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು.  ಅಂದು ಸಂಜೆ 6 ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು.  ಸಚಿವರು ಆ. 30 ರಂದು ಕಾರಟಗಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Wednesday, 26 August 2015

ಕುಷ್ಟಗಿ ಪುರಸಭೆ : ತೆರವಾದ ಸ್ಥಾನಕ್ಕೆ ಚುನಾವಣೆ : ಅಧಿಸೂಚನೆ ಪ್ರಕಟ

ಕೊಪ್ಪಳ, ಆ.26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆಯಲ್ಲಿ ತೆರವಾದ 2ನೇ ವಾರ್ಡಿನ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ರಮಣದೀಪ ಚೌದರಿ ಅಧಿಸೂಚನೆ ಹೊರಡಿಸಿದ್ದಾರೆ.
        ಅಧಿಸೂಚನೆಯನ್ವಯ ವಾರ್ಡ್ ಸಂ. 02 ರ ಸದಸ್ಯ ಸ್ಥಾನದ ಮೀಸಲಾತಿ ಸಾಮಾನ್ಯ (ಮಹಿಳೆ) ಆಗಿರುತ್ತದೆ.  ಚುನಾವಣಾ ವೇಳಾಪಟ್ಟಿ ಇಂತಿದೆ. ಕುಷ್ಟಗಿ ಪುರಸಭೆಯಲ್ಲಿ ತೆರವಾದ 2ನೇ ವಾರ್ಡಿನ ಸದಸ್ಯ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವವರು ನಾಮಪತ್ರಗಳನ್ನು ಸಲ್ಲಿಸಲು ಸೆ.02 ಕೊನೆ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆ ಸೆ.03 ರಂದು ನಡೆಯಲಿದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಸೆ.05 ಕೊನೆ ದಿನಾಂಕವಾಗಿದೆ. ಸೆ.13 ರಂದು ಮತದಾನ ನಡೆಯಲಿದ್ದು, ಒಟ್ಟಾರೆ ಸೆ.15 ರೊಳಗಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕುಷ್ಟಗಿ ಪುರಸಭೆಯ 2ನೇ ವಾರ್ಡಿನ ವ್ಯಾಪ್ತಿಯಲ್ಲಿ ಆ.26 ರಿಂದ ಸೆ.15 ರವರೆಗೆ  ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆ : ಆ.27 ರಂದು ಪೂರ್ವಸಿದ್ಧತಾ ಸಭೆ

ಕೊಪ್ಪಳ, ಆ.26 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆ.30 ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಲಾಗಿದ್ದು,  ಈ ಕುರಿತ ಪೂರ್ವಾಭಾವಿ ಸಭೆ ಆ.27 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ವಹಿಸುವರು.  ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸರ್ಕಾರದ ವೆಚ್ಚದಡಿ ನೀಡಲಾಗುವ ಐ.ಎ.ಎಸ್, ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಆ.30 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅವರು ತಿಳಿಸಿದ್ದಾರೆ. 

ಕೊಪ್ಪಳ ನೂತನ ಅಪರ ಜಿಲ್ಲಾಧಿಕಾರಿಯಾಗಿ ಡಾ. ಪ್ರವೀಣ್ ಕುಮಾರ್


ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಕೊಪ್ಪಳ ನೂತನ ಅಪರ ಜಿಲ್ಲಾಧಿಕಾರಿಯಾಗಿ ಡಾ. ಪ್ರವೀಣ್‍ಕುಮಾರ್ ಜಿ.ಎಲ್. ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
     ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ. ಸುರೇಶ್ ಇಟ್ನಾಳ್ ಅವರು ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಕೊಪ್ಪಳ ಜಿಲ್ಲೆಗೆ ನೂತನ ಅಪರ ಜಿಲ್ಲಾಧಿಕಾರಿಯನ್ನಾಗಿ ಡಾ. ಪ್ರವೀಣ್‍ಕುಮಾರ್ ಜಿ.ಎಲ್. ಅವರನ್ನು ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿತ್ತು.  ಡಾ. ಪ್ರವೀಣ್‍ಕುಮಾರ್ ಅವರು ಈ ಹಿಂದೆ ಗದಗ ಮತ್ತು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು  ಕೊಪ್ಪಳಕ್ಕೆ ವರ್ಗವಾಗುವ ಪೂರ್ವದಲ್ಲಿ ಬೆಳಗಾವಿ ಜಿಲ್ಲೆ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಶಾಸಕ ರಾಘವೇಂದ್ರ ಹಿಟ್ನಾಳ್‍ರಿಂದ ಉದ್ಯೋಗಖಾತ್ರಿ ಕಾಮಗಾರಿ ವೀಕ್ಷಣೆ : ಗುಳೆ ಹೋಗದಂತೆ ಮನವಿ

ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಈಗಾಗಲೆ ಕೂಲಿ ಆಧಾರಿತ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಗ್ರಾಮೀಣ ಪ್ರದೇಶದವರು ಸ್ಥಳೀಯವಾಗಿಯೇ ಲಭ್ಯವಾಗುವ ಕೂಲಿ ಕೆಲಸವನ್ನು ಪಡೆಯಬಹುದಾಗಿದ್ದು, ಗುಳೇ ಹೋಗದಂತೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮನವಿ ಮಾಡಿಕೊಂಡರು.
     ಕೊಪ್ಪಳ ತಾಲೂಕು ಗೊಂಡಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ದಾಬಳ್ಳಿ ಗ್ರಾಮದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ 8 ಲಕ್ಷ ರೂ. ವೆಚ್ಚದಲ್ಲಿ ಡೊಣ್ಣೆಗುಡ್ಡ ಬಳಿಯ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿಕಾರರೊಂದಿಗೆ ಸಮಾಲೋಚನೆ ನಡೆಸಿದರು.
     ಈ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ, ಗ್ರಾಮ ಪಂಚಾಯತಿ ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳಲ್ಲಿ ಕೂಲಿ ಕೆಲಸ ನಿರ್ವಹಿಸಿ, ವೇತನ ಪಡೆಯಬಹುದಾಗಿದೆ.  ಕೂಲಿಕಾರರು ಸ್ಥಳೀಯವಾಗಿ ದೊರಕುವ ಕೆಲಸವನ್ನು ಪಡೆದುಕೊಂಡು, ಜೀವನ ನಿರ್ವಹಿಸಬಹುದಾಗಿದ್ದು, ಗುಳೇ ಹೋಗುವ ಅಗತ್ಯವಿಲ್ಲ.  ಸರ್ಕಾರ ಜಾರಿಗೆ ತಂದ ಉದ್ಯೋಗಖಾತ್ರಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷಕ್ಕೆ 100 ಮಾನವ ದಿನಗಳಂತೆ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗಿದೆ.  ಸಮುದಾಯ ಕಾಮಗಾರಿಗಳ ಜೊತೆಗೆ ವಯಕ್ತಿಕ ಕಾಮಗಾರಿಗಳಾದ ಕುರಿದೊಡ್ಡಿ/ದನದದೊಡ್ಡಿ, ಅರಣ್ಯೀಕರಣ, ತೋಟಗಾರಿಕೆ ಕಾಮಗಾರಿ ಅನುಷ್ಠಾನಕ್ಕೆ ಆಯಾ ಗ್ರಾಮ ಪಂಚಾಯತಿಗೆ ಉದ್ಯೋಗ ಕೋರಿ ಅರ್ಜಿ ಸಲ್ಲಿಸುವಂತೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮನವಿ ಮಾಡಿದರು.
     ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ನಮೂರ್ತಿ, ಗ್ರಾ.ಪಂ. ಅಧ್ಯಕ್ಷ ಶಂಕ್ರಪ್ಪ, ಪಿಡಿಓ ಲಕ್ಷ್ಮೀದೇವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆ.28 ರಂದು ತಾ.ಪಂ ತ್ರೈಮಾಸಿಕ ಕೆ.ಡಿ.ಪಿ ಸಭೆ

ಕೊಪ್ಪಳ, ಆ.26 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಾ ಪಂಚಾಯಿತಿಯ ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಆ.28 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಾ  ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಜೂನ್ 2015 ರವರೆಗಿನ ತಮ್ಮ ಇಲಾಖೆ ಸಾಧಿಸಿದ ಪ್ರಗತಿ ವರದಿಯೊಂದಿಗೆ ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಆ. 27 ರಂದು ಸದ್ಭಾವನಾ ದಿನ

ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಇದೇ ಆ. 27 ರ ದಿನವನ್ನು ಸದ್ಭಾವನಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಣದಲ್ಲಿ ಸದ್ಭಾವನಾ ದಿನದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
       ರಾಜ್ಯ ಸರ್ಕಾರವು ಸೆ. 03 ರವರೆಗೆ ಕೋಮು ಸೌಹಾರ್ದ ಪಾಕ್ಷಿಕ (Communal Harmony Fortnight) ವನ್ನಾಗಿ ಆಚರಿಸುವಂತೆ ಸೂಚನೆ ನೀಡಿದ್ದು, ಆ. 27 ರಂದು ಸದ್ಭಾವನಾ ದಿನವನ್ನಾಗಿ ಆಚರಿಸಲಾಗುವುದು.  ಇದರ ನಿಮಿತ್ಯ ಅಂದು ಬೆ. 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಲಿದೆ.  ಜಿಲ್ಲಾಡಳಿತ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡು ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣ್ ಕುಮಾರ್ ಜಿ.ಎಲ್. ಅವರು ತಿಳಿಸಿದ್ದಾರೆ.

ಅಂಗನವಾಡಿ ಹುದ್ದೆ : ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ

ಕೊಪ್ಪಳ, ಆ.26 (ಕರ್ನಾಟಕ ವಾರ್ತೆ) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಖಾಲಿ ಇರುವ 04 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 31 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲು ಆ.31 ಕೊನೆ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಗಂಗಾವತಿ ಇವರನ್ನು ಕಛೇರಿ ವೇಳೆಯಲ್ಲಿ   ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Tuesday, 18 August 2015

ಮಹಿಳೆಯರಿಗೆ ತಾರಸಿ ತೋಟದ ತರಬೇತಿ

ಕೊಪ್ಪಳ ಆ. 18 (ಕರ್ನಾಟಕ ವಾರ್ತೆ):  ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಮಹಿಳೆಯರಿಗೆ ತಾರಸಿ ಕೈತೋಟದ ಮಾದರಿ ಕುರಿತು ತರಬೇತಿಯನ್ನು ಕೊಪ್ಪಳದಲ್ಲಿ ನೀಡಲಾಯಿತು.
      ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾರಸಿ ತೋಟದ ಮಾದರಿಯನ್ನು ನಿರ್ಮಿಸಿ ಮಹಿಳೆಯರಿಗೆ ತರಬೇತಿ ನೀಡಲಾಯಿತು. ಈ ಸಂದಂರ್ಭದಲ್ಲಿ ವಿಷಯ ತಜ್ಞರುಗಳಾದ ಕವಿತಾ ಉಳ್ಳಿಕಾಶಿ ಮತ್ತು ಸುಧಾಕರ್ ಟಿ ಅವರು ವಿವಿಧ ಗ್ರಾಮದಿಂದ ಆಗಮಿಸಿದ್ದ ಮಹಿಳೆಯರಿಗೆ ತಾರಸಿ ತೋಟದ ನಿರ್ಮಾಣ ಮತ್ತು ಪೌಷ್ಠಿಕ ಆಹಾರದ ಬಗ್ಗೆ ತರಬೇತಿ ನೀಡಿದರು.
     ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ ಮಾತನಾಡಿ ಎಲ್ಲ ಮಹಿಳೆಯರು, ರೈತರು ಹಾಗು ರೈತ ಮಹಿಳೆಯರು ಇಂತಹ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ರಸಾಯನಿಕ ಮುಕ್ತ ಈರುಳ್ಳಿ ಬೆಳೆಯಲು ಸಲಹೆ

ಕೊಪ್ಪಳ ಆ. 18 (ಕರ್ನಾಟಕ ವಾರ್ತೆ): ಈರುಳ್ಳಿಯನ್ನು ಬಹಳಷ್ಟು ಸಂದರ್ಭಗಳಲ್ಲಿ ನೇರವಾಗಿ ಸೇವನೆ ಮಾಡುವುದರಿಂದ, ರೈತರು ರಸಾಯನಿಕ ಮುಕ್ತ ಈರುಳ್ಳಿ ಬೆಳೆಯಲು ಮುಂದಾಗಬೇಕು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಸಲಹೆ ನೀಡಿದರು.
     ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾಲೂಕಿನ ವದಗನಾಳ ಗ್ರಾಮದಲ್ಲಿ ರೈತರಿಗೆ ಈರುಳ್ಳಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಡಾ. ಎಂ.ಬಿ ಪಾಟೀಲ ಮಾತನಾಡಿ ಈರುಳ್ಳಿಯನ್ನು ನೇರವಾಗಿ ಸೇವನೆಗೆ ಉಪಯೋಗಿಸುವುದರಿಂದ, ಈರುಳ್ಳಿ ಬೆಳೆಗೆ ಕಡಿಮೆ ಔಷಧಿಗಳ ಬಳಕೆ ಸೂಕ್ತ, ಆದ್ದರಿಂದ ಸಾವಯವ ಮತ್ತು ಸುಧಾರಿತ ಕ್ರಮಗಳನ್ನು ಅನುಸರಿಸಬೇಕೆಂದು ಸಲಹೆ ನೀಡಿದರು.
    ಈ ಕಾರ್ಯಕ್ರಮದಲ್ಲಿ ತೋಟಗಾರಿಕಾ ವಿಷಯತಜ್ಞ ಸುಧಾಕರ್ ಟಿ ಅವರು ಈರುಳ್ಳಿ ತಳಿಗಳ ಆಯ್ಕೆ, ಭೂಮಿ ಸಿದ್ದತೆ, ಸಸಿ ಮಡಿ ತಯಾರಿಕೆ, ಬೀಜ ಬಿತ್ತನೆ ಮತ್ತು ಪೋಷಕಾಂಶಗಳ ನಿರ್ವಹವಣೆ ಬಗ್ಗೆ ಮಾಹಿತಿ ನೀಡಿದರು. ಬೇಸಾಯ ಮತ್ತು ಕೀಟಶಾಸ್ತ್ರ ತಜ್ಞರಾದ ಯೂಸುಪ್‍ಅಲಿ ನಿಂಬರಗಿ, ರೋಹಿತ್ ಅವರು ಈರುಳ್ಳಿಯಲ್ಲಿ ಕಳೆಗಳ ನಿರ್ವಹಣೆ, ಸೂಕ್ತ ಕಳೆನಾಶಕಗಳ ಬಳಕೆ, ಬಳಸುವ ಸಮಯ ಮತ್ತು ಕೀಟ ನಿರ್ವಹಣೆಯ ಬಗ್ಗೆ ವಿವರಿಸಿದರು.   ಕಾರ್ಯಕ್ರಮವನ್ನು ಬಸವನಗೌಡ ಬಿಳಿಎಲಿ ಅವರು ಆಯೋಜಿಸಿದ್ದರು. ರೈತರಾದ ರುದ್ರಪ್ಪ, ಸಕ್ರಗೌಡ ಪಾಟೀಲ, ಸಿದ್ದಪ್ಪ ಶಿವನಗೌಡ್ರ, ಹುಚ್ಚಪ್ಪ, ಬಸವರಾಜ ಹುಡೇದ ಮತ್ತಿತರು ಭಾಗವಹಿಸಿದ್ದರು.

ಆ.20 ರಂದು ಕೊಪ್ಪಳದಲ್ಲಿ ಅರಸು ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಕೊಪ್ಪಳ, ಆ.18 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ|| ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಆ.20 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
     ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಲೋಕಸಭಾ ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ್, ಅಮರನಾಥ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿನಯಕುಮಾರ ಎಂ ಮೇಲಿನಮನಿ, ಜಿ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದಗೌಡ ಪಾಟೀಲ್, ತಾಲೂಕ ಪಂಚಾಯತ ಅಧ್ಯಕ್ಷೆ ಬಾನು ಚಾಂದುಸಾಬ, ಉಪಾಧ್ಯಕ್ಷ ಬಾಳಪ್ಪ ಬೂದಗುಂಪಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದಿ|| ಡಿ.ದೇವರಾಜ ಅರಸು ಅವರ ಕುರಿತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ|| ಪ್ರಭುರಾಜ್ ನಾಯಕ ವಿಶೇಷ ಉಪನ್ಯಾಸ ನೀಡುವರು.  ಕಾರ್ಯಕ್ರಮದ ಅಂಗವಾಗಿ ಡಿ. ದೇವರಾಜ ಅರಸು ಅವರ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.


     ಸಮಾರಂಭಕ್ಕೂ ಮುನ್ನ ಅಂದು ಬೆಳಿಗ್ಗೆ 09 ಗಂಟೆಗೆ ದಿ|| ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆಯು ನಗರದ ಗವಿಸಿದ್ಧೇಶ್ವರ ಮಠದ ಆವರಣದಿಂದ ಆರಂಭಗೊಂಡು ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನ ತಲುಪಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಲ್ಲೇಶ್ ತಿಳಿಸಿದ್ದಾರೆ.

Monday, 17 August 2015

ನೂತನ ಜಿಲ್ಲಾಧಿಕಾರಿಯಾಗಿ ರಮಣದೀಪ್ ಚೌದರಿ ಅಧಿಕಾರ ಸ್ವೀಕಾರ

\

ಕೊಪ್ಪಳ, ಆ.17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ರಮಣದೀಪ್ ಚೌದರಿ ಅವರು ಸೋಮವಾರದಂದು ಅಧಿಕಾರ ವಹಿಸಿಕೊಂಡರು.

     ಜಿಲ್ಲಾಧಿಕಾರಿಯಾಗಿದ್ದ ಆರ್.ಆರ್. ಜನ್ನು ಅವರು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡು, ರಮಣದೀಪ್ ಚೌದರಿ ಅವರು ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು.  ಆರ್.ಆರ್. ಜನ್ನು ಅವರು ರಮಣದೀಪ್ ಚೌದರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.  ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  2008 ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ರಮಣದೀಪ್ ಚೌದರಿ ಅವರು, ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ, ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಆಯುಕ್ತರಾಗಿ ಮತ್ತು ಕೊಪ್ಪಳ ಜಿಲ್ಲಾಧಿಕಾರಿಯಾಗಿ ವರ್ಗವಾಗುವ ಪೂರ್ವದಲ್ಲಿ ಧಾರವಾಡ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಆರ್.ಆರ್. ಜನ್ನು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಕೊಪ್ಪಳ ಆ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳಿಂದ ಸೋಮವಾರದಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
     ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ಮಾಡಿದ್ದೇನೆ.  ಜಿಲ್ಲೆಯ ಜನರು ಸಹೃದಯಿಗಳಾಗಿದ್ದು, ಉತ್ತಮ ಸೇವೆ ಸಲ್ಲಿಸಲು ಸಹಕರಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಗೂ ಚುನಾಯಿತ ಪ್ರತನಿಧಿಗಳಿಗೆ ಧನ್ಯವಾದಗಳನ್ನು ಸಲ್ಲಿಸಬಯಸುತ್ತೇನೆ ಎಂದರು.
     ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ರಮಣದೀಪ್ ಚೌದರಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕೊಪ್ಪಳ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡು, ಇಲ್ಲಿ ಸೇವೆ ಸಲ್ಲಿಸಲು ಬಂದಿರುವುದಕ್ಕೆ ಸಂತಸವಾಗಿದೆ.  ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅದರ ನಿವಾರಣೆಯ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
     ಜಿಲ್ಲಾಡಳಿತದ ಪರವಾಗಿ ಆರ್.ಆರ್. ಜನ್ನು ಅವರಿಗೆ ಸನ್ಮಾನಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್ ಅವರು, ಜನ್ನು ಅವರು ತಾಳ್ಮೆ ಹಾಗೂ ಸಹನೆಯ ಪ್ರತಿರೂಪದಂತೆ ಇದ್ದರು, ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಜಿಲ್ಲೆಯ ಪ್ರಗತಿಗೆ ಶ್ರಮಿಸಿದರು ಎಂದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್, ಆಹಾರ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು, ಪತ್ರಕರ್ತ ಸಿದ್ದಪ್ಪ ಹಂಚಿನಾಳ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಮಾತನಾಡಿದರು.

ಗ್ರಂಥಾಲಯಗಳಿಗೆ ಪುಸ್ತಕಗಳ ಸರಬರಾಜು : ಲೇಖಕ, ಪ್ರಕಾಶಕರಿಂದ ಅರ್ಜಿ ಆಹ್ವಾನ

ಕೊಪ್ಪಳ, ಆ.17 (ಕರ್ನಾಟಕ ವಾರ್ತೆ): ಕಲಬುರಗಿಯ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನ ಹೆಚ್.ಕೆ.ಆರ್.ಡಿ.ಬಿ ಮೈಕ್ರೋ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ತಾಲೂಕಾ ಗ್ರಂಥಾಲಯಗಳಿಗೆ ಹೈದ್ರಾಬಾದ್ ಕರ್ನಾಟಕ ಭಾಗದ ಲೇಖಕರು ಬರೆದ ಪುಸ್ತಕಗಳನ್ನು ಹಂತ ಹಂತವಾಗಿ ಸರಬರಾಜು ಮಾಡಲು ಲೇಖಕರು ಅಥವಾ ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಈ ಯೋಜನೆಯಡಿ ಹೈದ್ರಾಬಾದ್ ಕರ್ನಾಟಕ ಭಾಗದ ಲೇಖಕರು ಕಳೆದ ಹತ್ತು ವರ್ಷಗಳಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಪುಸ್ತಕಗಳನ್ನು ಹಂತ ಹಂತವಾಗಿ ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು, ಲೇಖಕರು ಅಥವಾ ಪ್ರಕಾಶಕರು ಅರ್ಜಿ ಸಲ್ಲಿಸಬಹುದಾಗಿದೆ. ಪುಸ್ತಕ ಬರೆದ ಲೇಖಕರು ಕಡ್ಡಾಯವಾಗಿ ಹೈದ್ರಾಬಾದ್ ಕರ್ನಾಟಕ ವಿಭಾಗದವರಾಗಿರಬೇಕು.
      ಅರ್ಜಿ ನಮೂನೆಯಲ್ಲಿ ಪುಸ್ತಕದ ಕ್ರಮ ಸಂಖ್ಯೆ, ಪುಸ್ತಕದ ಹೆಸರು, ಲೇಖಕರ ಹೆಸರು ಮತ್ತು ವಿಳಾಸ, ಪ್ರಕಾಶಕರ ಹೆಸರು ಹಾಗೂ ವಿಳಾಸ, ಪ್ರಕಟಣೆಗೊಂಡ ವರ್ಷ ಮತ್ತು ಮುದ್ರಿತ ಪ್ರತಿಗಳ ಸಂಖ್ಯೆ(ಪುಸ್ತಕ ಪ್ರತಿ ಲಗತ್ತಿಸುವುದು), ಪುಸ್ತಕಗಳ ಮರುಮುದ್ರಣ ಸಂಖ್ಯೆ, ಪುಸ್ತಕದ ದರ, ರಿಯಾಯಿತಿ ದರ ಸೇರಿದಂತೆ ಪುಸ್ತಕಗಳ ವಿವರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು ಹಾಗೂ ಅದರೊಂದಿಗೆ ಪ್ರತಿಯೊಂದು ಪುಸ್ತಕದ ಪ್ರತಿ ಲಗತ್ತಿಸಬೇಕು. ಪುಸ್ತಕದ ಪ್ರತಿ ಲಗತ್ತಿಸದೇ ಇದ್ದಲ್ಲಿ ಹಾಗೂ ಅರ್ಜಿಯಲ್ಲಿನ ಮಾಹಿತಿ ಅಪೂರ್ಣವಾಗಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.  
     ನಿಗದಿತ ಅರ್ಜಿಯನ್ನು ಭರ್ತಿ ಮಾಡಿ, 371-ಜೆ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ ಹಾಗೂ ಕಡ್ಡಾಯವಾಗಿ ಪುಸ್ತಕದ ಒಂದು ಪ್ರತಿಯನ್ನು ಲಗತ್ತಿಸಿ, ಆ.31 ರೊಳಗಾಗಿ ಕಾರ್ಯದರ್ಶಿಗಳು, ಹೈದ್ರಾಬಾದ್ ಕರ್ನಾಟಕ, ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಸರಬರಾಜು : ಪ್ರಕಾಶಕರಿಂದ ಅರ್ಜಿ ಆಹ್ವಾನ

ಕೊಪ್ಪಳ, ಆ.17 (ಕರ್ನಾಟಕ ವಾರ್ತೆ): ಕಲಬುರಗಿಯ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನ ಹೆಚ್.ಕೆ.ಆರ್.ಡಿ.ಬಿ ಮೈಕ್ರೋ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ತಾಲೂಕಾ ಗ್ರಂಥಾಲಯಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಪುಸ್ತಕಗಳನ್ನು ಸರಬರಾಜು ಮಾಡಲು ಆಸಕ್ತ ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಗ್ರಾಮ ಪಂಚಾಯಿತಿ ಹಾಗೂ ತಾಲೂಕಾ ಗ್ರಂಥಾಲಯಗಳಿಗೆ ಗ್ರಾಮರ್, ನಿಬಂಧಗಳು, ಎಸ್.ಡಿ.ಎ, ಎಫ್.ಡಿ.ಎ, ಪಿ.ಡಿ.ಓ, ಪಿ.ಎಸ್.ಐ, ಕೆ.ಎ.ಎಸ್, ಬ್ಯಾಂಕಿಂಗ್ ಮತ್ತು ರೈಲ್ವೆ, ಎಸ್.ಎಸ್.ಸಿ, ಬಿ.ಇ.ಡಿ, ಡಿ.ಇ.ಡಿ, ಟಿ.ಇ.ಟಿ, ಸಿ.ಇ.ಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ  ವಿಷಯಗಳ ಪುಸ್ತಕಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಗೈಡ್‍ಗಳನ್ನು ಸರಬರಾಜು ಮಾಡಲು ಇಚ್ಛಿಸುವ ಪ್ರಕಾಶಕರು ಅರ್ಜಿ ಸಲ್ಲಿಸಬಹುದಾಗಿದೆ.
      ಅರ್ಜಿ ನಮೂನೆಯಲ್ಲಿ ಪುಸ್ತಕದ ಕ್ರಮ ಸಂಖ್ಯೆ, ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟಣೆಗೊಂಡ ವರ್ಷ, ಪುಸ್ತಕದ ದರ, ರಿಯಾಯಿತಿ ದರ ಸೇರಿದಂತೆ ಪುಸ್ತಕಗಳ ವಿವರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು ಹಾಗೂ ಅದರೊಂದಿಗೆ ಪ್ರತಿಯೊಂದು ಪುಸ್ತಕದ ಪ್ರತಿ ಲಗತ್ತಿಸಬೇಕು. ಪುಸ್ತಕದ ಪ್ರತಿ ಲಗತ್ತಿಸದೇ ಇದ್ದಲ್ಲಿ ಅಥವಾ ಅರ್ಜಿಯಲ್ಲಿನ ಮಾಹಿತಿ ಅಪೂರ್ಣವಾಗಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು. ಎಲ್ಲಾ ಪುಸ್ತಕಗಳು ಪರೀಕ್ಷೆಗೆ ನಿಗದಿಪಡಿಸಿದ ಹೊಸಪಠ್ಯಕ್ರಮ ಹಾಗೂ ನಮೂನೆ ಅನ್ವಯ ಹೊಂದಿರಬೇಕು.
     ನಿಗದಿತ ಅರ್ಜಿಯನ್ನು ಭರ್ತಿ ಮಾಡಿ, 371-ಜೆ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ ಹಾಗೂ ಕಡ್ಡಾಯವಾಗಿ ಪುಸ್ತಕದ ಒಂದು ಪ್ರತಿಯನ್ನು ಲಗತ್ತಿಸಿ, ಆ.31 ರೊಳಗಾಗಿ ಕಾರ್ಯದರ್ಶಿಗಳು, ಹೈದ್ರಾಬಾದ್ ಕರ್ನಾಟಕ, ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆ.18 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಕೊಪ್ಪಳ, ಆ.17 (ಕರ್ನಾಟಕ ವಾರ್ತೆ): ತಾಂತ್ರಿಕ ಕಾರಣಗಳಿಂದಾಗಿ ಆ.18 ರಂದು ಕೊಪ್ಪಳ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
     ನಗರಕ್ಕೆ ನೀರು ಸರಬರಾಜು ಮಾಡುವ ಕಾತರಕಿ ಜಾಕ್‍ವೆಲ್‍ನಿಂದ ನಗರದ ಫಿಲ್ಟರ್ ಬೆಡ್ ವರೆಗಿನ ವಿದ್ಯುತ್‍ಲೈನ್ ಅನ್ನು ಆ.18 ರಂದು  ದುರಸ್ತಿಗೊಳಿಸಲಾಗುತ್ತಿದ್ದು, ಅಂದು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತ ರಮೇಶ ಪಟ್ಟೇದ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಆ.19 ರಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್

ಕೊಪ್ಪಳ, ಆ.17 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ ಇವರಿಂದ ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಯ ಕೌನ್ಸೆಲಿಂಗ್ ಪ್ರಕ್ರಿಯೆ ಆ.19 ರಿಂದ ಆರಂಭಗೊಳ್ಳಲಿದೆ. 
ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿಯನ್ನು ಈಗಾಗಲೇ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಅಂತಿಮ ಪಟ್ಟಿಯನುಸಾರವಾಗಿ ವರ್ಗಾವಣೆಯ ಕೌನ್ಸೆಲಿಂಗ್ ಪ್ರಕ್ರಿಯೆಯು ಆ.19 ರಿಂದ 22 ರವರೆಗೆ ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಕೊಪ್ಪಳದಲ್ಲಿ ನಡೆಯಲಿದೆ.
     ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರ ಆದ್ಯತಾ ಪಟ್ಟಿಯಲ್ಲಿ 01 ರಿಂದ 200  ರವರೆಗಿನ ಕ್ರಮ ಸಂಖ್ಯೆ ಹೊಂದಿರುವವರು ಆ.19 ರಂದು ಕೌನ್ಸಿಲಿಂಗ್‍ನಲ್ಲಿ ಭಾಗವಹಿಸಬೇಕು. ಆ. 20 ರಂದು 201 ರಿಂದ 450 ರವರೆಗೆ ಕ್ರಮ ಸಂಖ್ಯೆ ಹೊಂದಿರುವವರು. ಆ.21 ರಂದು 451 ರಿಂದ 600 ರವರೆಗೆ ಕ್ರಮ ಸಂಖ್ಯೆ ಹೊಂದಿರುವವರು.  ಆ. 22 ರಂದು 601 ರಿಂದ ಪೂರ್ಣಗೊಳ್ಳುವವರೆಗೆ ಕ್ರಮ ಸಂಖ್ಯೆ ಹೊಂದಿರುವವರು ಕೌನ್ಸೆಲಿಂಗ್‍ನಲ್ಲಿ ಭಾಗವಹಿಸಬಹುದಾಗಿದೆ.
          ಅದೇ ರೀತಿ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ (ಹೆಚ್‍ಪಿಎಸ್ ಹೆಚ್‍ಎಮ್ ಮತ್ತು ಎನ್‍ಜಿಹೆಚ್‍ಎಮ್) ಹಾಗೂ ವಿಶೇಷ ಶಿಕ್ಷಕರು (ಮ್ಯೂಸಿಕ್, ಕ್ರಾಫ್ಟ್, ಡ್ರಾಯಿಂಗ್, ಪೆಟ್) ಆದ್ಯತಾ ಪಟ್ಟಿಯಲ್ಲಿ ಕ್ರಮ ಸಂಖ್ಯೆ 01 ರಿಂದ ಮುಕ್ತಾಯದವರೆಗಿನ ಕ್ರಮ ಸಂಖ್ಯೆ ಹೊಂದಿರುವವರು ಕೂಡಾ ಆ.22 ರಂದು ಕೌನ್ಸೆಲಿಂಗ್‍ನಲ್ಲಿ ಭಾಗವಹಿಸಬಹುದಾಗಿದೆ.
     ಕೌನ್ಸೆಲಿಂಗ್‍ಗೆ ಹಾಜರಾಗುವ ಶಿಕ್ಷಕರು ತಮ್ಮೊಂದಿಗೆ ಅರ್ಜಿ ಪ್ರತಿ, ಬಿಇಓ ಅನುಮೋದಿತ ಅರ್ಜಿ ಪ್ರತಿ, ಆದ್ಯತೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದ ಮೂಲ ಪ್ರತಿ, ಸೇವಾ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ತಪ್ಪದೇ ತರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಕಾಶವಾಣಿಯಲ್ಲಿ ಸಂಸದ ಸಂಗಣ್ಣ ಕರಡಿ ಅವರ ಸಂದರ್ಶನ

ಕೊಪ್ಪಳ ಆ. 17 (ಕರ್ನಾಟಕ ವಾರ್ತೆ): ಕೇಂದ್ರ ಸರಕಾರದ ಸ್ವಚ್ಛಭಾರತ ಅಭಿಯಾನ, ಜನ-ಧನ, ಸಾಮಾಜಿಕ ಸುರಕ್ಷಾ, ಡಿಜಿಟಲ್ ಇಂಡಿಯಾ, ಸುಕನ್ಯಾ ಸಮೃದ್ಧಿ, ಸಂಸದರ ಆದರ್ಶ ಗ್ರಾಮ ಮತ್ತು ಇತರ ಯೋಜನೆಗಳು ಭಾರತ ಸರಕಾರದ ಸಾಧನೆಗಳು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಸಂದರ್ಶನವು ಇಂದು (ಮಂಗಳವಾರ- ಅ.18) ಬೆಳಿಗ್ಗೆ 8.55 ಕ್ಕೆ ಹೊಸಪೇಟೆ ಆಕಾಶವಾಣಿ ಎಫ್ ಎಂ. ಕೆಂದ್ರದಿಂದ ಪ್ರಸಾರವಾಗಲಿದೆ.
              ಈ ಕಾರ್ಯಕ್ರಮವನ್ನು 100.5 ಮೇಗಾಹಟ್ರ್ಸ್ ಗಳಲ್ಲಿ ಕೇಳಬಹುದು ಎಂದು ಹೊಸಪೇಟೆ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥೆ ಡಾ||ಅನುರಾಧ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 14 August 2015

ಕೊಪ್ಪಳದಲ್ಲಿ ಸ್ವಯಂ ಚಾಲಿತ ಹವಾಮಾನ ಕೇಂದ್ರ : ಆ. 15 ರಂದು ಉದ್ಘಾಟನೆ

ಕೊಪ್ಪಳ ಆ. 14 (ಕರ್ನಾಟಕ ವಾರ್ತೆ): ಕೊಪ್ಪಳದ ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸ್ವಯಂ ಚಾಲಿತ ಹವಾಮಾನ ಕೇಂದ್ರದ ಉದ್ಘಾಟನೆ ಆ. 15 ರಂದು ಬೆಳಿಗ್ಗೆ 10-30 ಗಂಟೆಗೆ ಜರುಗಲಿದೆ.
     ಕೇಂದ್ರ ಸರ್ಕಾರದಿಂದ ಕೊಪ್ಪಳಕ್ಕೆ ಮಂಜೂರಾಗಿರುವ ಸ್ವಯಂ ಚಾಲಿತ ಹವಾಮಾನ ಕೇಂದ್ರದ ಉದ್ಘಾಟನೆಯನ್ನು ಸಂಸದ ಸಂಗಣ್ಣ ಕರಡಿ ಅವರು ನೆರವೇರಿಸುವರು.  ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಕೊಪ್ಪಳ ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
     ಕೊಪ್ಪಳದಲ್ಲಿ ಹವಾಮಾನ ಕೇಂದ್ರ ಇಲ್ಲದಿದ್ದರಿಂದ, ಕೊಪ್ಪಳಕ್ಕೆ ಸಂಬಂಧಿಸಿದಂತೆ ಇದುವರೆಗೂ ನಿಖರ ಹವಾಮಾನ ವರದಿ ಲಭ್ಯವಾಗುತ್ತಿರಲಿಲ್ಲ.  ಇದೀಗ ಜಿಲ್ಲಾಡಳಿತ ಭವನದ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸ್ವಯಂ ಚಾಲಿತ ಹವಾಮಾನ ಕೇಂದ್ರದಿಂದ, ಪ್ರತಿ ನಿತ್ಯ, ಇಲ್ಲಿನ ಕನಿಷ್ಟ-ಗರಿಷ್ಠ ಉಷ್ಣಾಂಶ, ತೇವಾಂಶ, ಗಾಳಿಯ ವೇಗ ಮತ್ತು ಒತ್ತಡ ಹಾಗೂ ಗಾಳಿಯ ದಿಕ್ಕು, ಮಳೆ ಮಾಪನ ಸೇರಿದಂತೆ ಹವಾಮಾನಕ್ಕೆ ಸಂಬಂಧಿತ ನಿಖರ ವರದಿ ಲಭ್ಯವಾಗಲಿದೆ.  ಉಪಗ್ರಹ ಆಧಾರಿತ ನಿಯಂತ್ರಣದಲ್ಲಿ ಇದು ಕಾರ್ಯ ನಿರ್ವಹಿಸುವುದರಿಂದ, ಹವಾಮಾನದ ಮಾಹಿತಿಯನ್ನು ಸಾರ್ವಜನಿಕರು  www.imdaws.com ಅಂತರ್ಜಾಲದಿಂದ ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ಬೆಂಗಳೂರಿನ ಹಿರಿಯ ಹವಾಮಾನ ತಜ್ಞ ಎಸ್.ಎನ್.ಆರ್. ಗೋಪಾಲ್ ಅವರು.

ಪೊಲೀಸ್ ಕಾನ್ಸ್‍ಟೇಬಲ್ ನೇಮಕ : ಆ. 17 ರಿಂದ ದೇಹದಾಢ್ರ್ಯತೆ ಪರೀಕ್ಷೆ

ಕೊಪ್ಪಳ, ಆ.14 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳಿಯ ಅಭ್ಯರ್ಥಿಗಳಿಗಾಗಿ ಪ್ರಸಕ್ತ ಸಾಲಿನ ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ 48 ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್ ಹಾಗೂ ಮಹಿಳಾ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ ಆ. 17 ರಿಂದ 22 ರವರೆಗೆ ಕೊಪ್ಪಳದಲ್ಲಿ ನಡೆಯಲಿದೆ.
     ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆಯು ಕೊಪ್ಪಳ ನಗರದ ಗದಗ ರಸ್ತೆಯಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಆ.17 ರಿಂದ ಆ.22 ರವರೆಗೆ ಬೆಳಿಗ್ಗೆ 7.30 ಗಂಟೆಯಿಂದ ನಡೆಯಲಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಕರೆ ಪತ್ರಗಳನ್ನು ಪೊಲೀಸ್ ಇಲಾಖೆಯ ಅಧಿಕೃತ ವೆಬ್‍ಸೈಟ್  www.ksp.gov.in ನಿಂದ ಪಡೆಯಬಹುದಾಗಿದೆ. ಕರೆ ಪತ್ರವನ್ನು ಪಡೆಯದೇ ಪರೀಕ್ಷೆಗೆ ಹಾಜರಾದಲ್ಲಿ ಅಂತಹವರಿಗೆ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ. ದೈಹಿಕ ಪರೀಕ್ಷೆಗೆ ಬರುವಾಗ ಕರೆ ಪತ್ರದ ಜೊತೆಗೆ ಕರೆ ಪತ್ರದಲ್ಲಿ ನಮೂದಿಸಿದ ಎಲ್ಲಾ ದಾಖಲಾತಿ ಹಾಗೂ ಆನ್‍ಲೈನ್ ಮುಖಾಂತರ ಸಲ್ಲಿಸಿದ ಝರಾಕ್ಸ್ ಪ್ರತಿ, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಅಲ್ಲದೇ ಅಭ್ಯರ್ಥಿಗಳು ವಿದ್ಯಾರ್ಹತೆಗೆ ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಜು.28 ರೊಳಗೆ ಪಡೆದ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ದೃಢೀಕೃತ ಝರಾಕ್ಸ್ ಪ್ರತಿಗಳ ಒಂದು ಸೆಟ್ ತರಬೇಕು ಎಂದು ನೇಮಕಾತಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪೊಲೀಸ್ ಅಧೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮ ಲೆಕ್ಕಿಗರ ಹುದ್ದೆ : ತಾತ್ಕಾಲಿಕ ಪರಿಶೀಲನಾ ಪಟ್ಟಿ ಪ್ರಕಟ

ಕೊಪ್ಪಳ, ಆ.14 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಕಂದಾಯ ಇಲಾಖೆಯಲ್ಲಿನ ಗ್ರಾಮ ಲೆಕ್ಕಿಗರ ಹುದ್ದೆಗಳ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು  www.koppal.nic.in ನಲ್ಲಿ ಪ್ರಕಟಿಸಲಾಗಿದೆ.
     ಪರಿಶೀಲನಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಆ.24 ರಂದು ಜಿಲ್ಲಾಧಿಕಾರಿಗಳ ಕಛೇರಿ ಕೊಪ್ಪಳದಲ್ಲಿ ಏರ್ಪಡಿಸಲಾಗಿರುವ ದಾಖಲಾತಿ ಪರಿಶೀಲನೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

ಆ.17 ರಂದು ಕುಕನೂರಿನಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ

ಕೊಪ್ಪಳ, ಆ.14 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಕುಕನೂರಿನ ಜವಾಹರ ನವೋದಯ ವಿದ್ಯಾಲಯದ ವತಿಯಿಂದ 26 ನೇ ಕ್ಲಸ್ಟರ್ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಸಮಾರಂಭ ಆ.17 ಮತ್ತ 18 ರಂದು ಕುಕನೂರಿನ ಚಾಂಪಿಯನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.
     ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಆ.17 ರಂದು ಬೆಳಿಗ್ಗೆ 8.30 ಗಂಟೆಗೆ ನಡೆಯಲಿದ್ದು, ನವೋದಯ ವಿದ್ಯಾಲಯ ಕರ್ನಾಟಕ ಕ್ಲಸ್ಟರ್‍ನ ಅಸಿಸ್ಟಂಟ್ ಕಮಿಷನರ್ ಟಿ.ಗೋಪಾಲಕೃಷ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಪ್ಪಳದ ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ಕೊಪ್ಪಳ ಗವಿಸಿದ್ಧೇಶ್ವರ ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಬಡಿಗೇರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
     ಕ್ರೀಡಾಕೂಟದ ಸಮಾರೋಪ ಸಮಾರಂಭ ಆ.18 ರಂದು ಸಂಜೆ 5 ಗಂಟೆಗೆ ಕುಕನೂರಿನ ಚಾಂಪಿಯನ್ಸ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕುಕನೂರಿನ ಡಾ||ಜಿ.ಎಸ್.ಎಂ ರೂರಲ್ ಪಾಲಿಟೆಕ್ನಿಕ್‍ನ ಪ್ರಾಚಾರ್ಯ ಎನ್.ಆರ್.ಕುಕನೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಯಲಬುರ್ಗಾದ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ನಾಗರಾಜ ಕಮ್ಮಾರ, ಕುಕನೂರಿನ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ವಿಶ್ವನಾಥ ಹಿರೇಗೌಡರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
     ಬಾಗಲಕೋಟೆ, ಬಳ್ಳಾರಿ, ಬೀದರ್, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ವಿದ್ಯಾಲಯಗಳು ಈ 26 ನೇ ಕ್ಲಸ್ಟರ್ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಕೋಳೂರು ಬ್ಯಾರೇಜ್ ಕಂ ಬ್ರಿಜ್ ಆ. 15 ರಂದು ಉದ್ಘಾಟನೆ

ಕೊಪ್ಪಳ ಆ. 14 (ಕರ್ನಾಟಕ ವಾರ್ತೆ): ಜಲಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆ ವತಿಯಿಂದ ತಾಲೂಕಿನ ಕೋಳೂರು ಬಳಿ 05 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಬ್ಯಾರೇಜ್ ಕಂ ಬ್ರಿಜ್ ಉದ್ಘಾಟನಾ ಸಮಾರಂಭ ಆ. 15 ರಂದು ಮಧ್ಯಾಹ್ನ 1-30 ಗಂಟೆಗೆ ಕೋಳೂರು ಬಳಿ ನಡೆಯಲಿದೆ.
     5 ಕೋಟಿ ರೂ. ವೆಚ್ಚದಲ್ಲಿ ಹಿರೇಹಳ್ಳಕ್ಕೆ ಕೋಳೂರು ಬಳಿ ನಿರ್ಮಿಸಲಾಗಿರುವ ಈ ಬ್ಯಾರೇಜ್ ಕಂ ಬ್ರಿಜ್ ಮಂಗಳಾಪುರ ಹಾಗೂ ಕೋಳೂರು ಗ್ರಾಮಕ್ಕೆ ಸಂಪರ್ಕ ಸೇತುವೆಯೂ ಆಗಲಿದ್ದು, ಇಲ್ಲಿನ ಜನರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ.  ಈ ಬ್ಯಾರೇಜ್ ಕಂ ಬ್ರಿಜ್ ನಿರ್ಮಾಣದಿಂದ ಈ ಭಾಗದ ಅಂತರ್ಜಲ ಅಭಿವೃದ್ಧಿಯಾಗಲಿದ್ದು, ಕೃಷಿಕರಿಗೂ ಸಹ ನೆರವಾಗಲಿದೆ.  ಬ್ಯಾರೇಜ್ ಕಂ ಬ್ರಿಜ್ ನ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾ.ಪಂ. ಅಧ್ಯಕ್ಷೆ ಬಾನು ಚಾಂದಸಾಬ್, ಜಿ.ಪಂ. ಸದಸ್ಯರುಗಳಾದ ಭಾಗಿರಥಿ ಶಂಕರಗೌಡ ಪಾಟೀಲ್, ಕೋಳೂರು ಗ್ರಾ.ಪಂ. ಅಧ್ಯಕ್ಷೆ ಬಸಮ್ಮ ಪೂಜಾರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

Thursday, 13 August 2015

ಪ್ರೌಢಶಾಲಾ ಮುಖ್ಯ ಶಿಕ್ಷಕರ ವರ್ಗಾವಣೆ ಮುಂದೂಡಿಕೆ

ಕೊಪ್ಪಳ ಆ. 13 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಸಾಲಿನ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್ “ಬಿ” ವೃಂದದ ಅಧಿಕಾರಿಗಳ ಘಟಕದ ಹೊರಗಿನ ಕೋರಿಕೆ ವರ್ಗಾವಣೆ ದಿನಾಂಕವನ್ನು ಆ. 14 ರಂದು ನಿಗದಿಪಡಿಸಿ ಪ್ರಕಟಣೆ ನೀಡಲಾಗಿತ್ತು.
     ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸೂಚನೆಯಂತೆ ಘಟಕದ ಹೊರಗಿನ ಕೋರಿಕೆ ವರ್ಗಾವಣೆಯನ್ನು ಆ. 26 ಕ್ಕೆ ಮುಂದೂಡಲಾಗಿದೆ.  ದಿನಾಂಕ ಮುಂದೂಡಿರುವ ಬಗ್ಗೆ ಇಲಾಖೆಯ ಅಂತರ್ಜಾಲ  www.schooleducation.kar.nic.in ದಲ್ಲಿ ಲಭ್ಯವಿದ್ದು, ನಿಗಧಿಪಡಿಸಿದ ದಿನಾಂಕ, ಸಮಯಕ್ಕೆ ಘಟಕದ ಹೊರಗಿನ ಅಂತಿಮ ತಾತ್ಕಾಲಿಕ ಪಟ್ಟಿಯಲ್ಲಿರುವ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್ “ಬಿ” ವೃಂದದ ಅಧಿಕಾರಿಗಳು ನಿಗದಿತ ದಿನಾಂಕದಂದು ತಪ್ಪದೆ ಕೌನ್ಸಲಿಂಗ್‍ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿಯ ಅಪರ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ, ಆ.12 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಸರ್ಕಾರಿ ಬಾಲಕರ ಬಾಲ ಮಂದಿರದಿಂದ ದುರ್ಗಾ ಪ್ರಸಾದ ತಂದೆ,ಕೃಷ್ಣ ಮಾದಿಗೋಳ (12) ಎಂಬ ಬಾಲಕ ಆ.11 ರಿಂದ ಕಾಣೆಯಾಗಿರುವ ನ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ಪಿ.ಎಸ್.ಐ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಬಾಲಕನನ್ನು ಅಳವಂಡಿ ಪೊಲೀಸ್ ಠಾಣೆಯಿಂದ ತಾತ್ಕಾಲಿಕ ಪೋಷಣೆಗಾಗಿ ಆ.10 ರಂದು ಬಾಲಮಂದಿರಕ್ಕೆ ವರ್ಗಾಯಿಸಲಾಗಿತ್ತು. ಆದರೆ, ಈ ಬಾಲಕ ಆ.11 ರಂದು ಬೆಳಿಗ್ಗೆ 05.30 ಗಂಟೆಗೆ ಬಾಲಮಂದಿರದ ರಕ್ಷಕರ ಕಣ್ಣು ತಪ್ಪಿಸಿ ಹೊರಗೆ ಹೋದವನು ವಾಪಸ್ ಕೇಂದ್ರಕ್ಕೆ ಬಾರದೇ, ಎಲ್ಲಿಯೋ ಕಾಣೆಯಾಗಿದ್ದಾನೆ. ಕಾಣೆಯಾದ ಬಾಲಕನ ವಿವರ  ಇಂತಿದೆ.  ಹೆಸರು-ದುರ್ಗಾ ಪ್ರಸಾದ ವಯಸ್ಸು: 12 ವರ್ಷ, ಸಾ||ಹೊಸಪೇಟೆ, ಜಿಲ್ಲೆ|| ಬಳ್ಳಾರಿ, ಎತ್ತರ-04 ಫೀಟು 07 ಇಂಚು, ತೆಳ್ಳನೆಯ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದಾನೆ. ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ರೌಂಡ್ ನೆಕ್ ಟೀಶರ್ಟ್, ಖಾಕಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ.
     ಈ ಚಹರೆಯುಳ್ಳ ಬಾಲಕ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಂಡಲ್ಲಿ ಅಥವಾ ಬಾಲಕನ  ಬಗ್ಗೆ ಮಾಹಿತಿ ಸಿಕ್ಕಲ್ಲಿ ನಗರ ಪೊಲೀಸ್ ಠಾಣೆ, ಕೊಪ್ಪಳ, ದೂರವಾಣಿ: 08539-220333, ನಗರ ಪೊಲೀಸ್ ಠಾಣೆಯ ಪಿ.ಐ, ಮೊಬೈಲ್: 9480803745, ಕೊಪ್ಪಳ ಕಂಟ್ರೋಲ್ ರೂಂ: 08539-230100, 230222 ಇವರನ್ನು ಸಂಪರ್ಕಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ಪಿ.ಎಸ್.ಐ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಳಪೆ ಗುಣಮಟ್ಟದ ಔಷಧ ಪತ್ತೆ : ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚನೆ

ಕೊಪ್ಪಳ, ಆ.12 (ಕರ್ನಾಟಕ ವಾರ್ತೆ): ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಔಷಧ ಮಾರಾಟ ಸಂಸ್ಥೆಗಳ ತಪಾಸಣೆ ಮಾಡಿ ಮಾದರಿ ಪಡೆದ ಔಷಧಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿವಿಧ ಔಷಧಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂದು ಘೋಷಿಸಲ್ಪಿಟ್ಟಿವೆ. ಸಾರ್ವಜನಿಕರು ಈ ಕೆಳಗಿನ ಬ್ಯಾಚ್ ಸಂಖ್ಯೆಯ ಔಷಧಗಳನ್ನು ಉಪಯೋಗಿಸಬಾರದು ಹಾಗೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ರಾಜ್ಯ ಔಷಧ ನಿಯಂತ್ರಕ ರಘುರಾಮ ಭಂಡಾರಿ ಅವರು ತಿಳಿಸಿದ್ದಾರೆ.
     ಅಲ್‍ತ್ರೋಸಿನ್ ಲಿಕ್ವಿಡ್, ಬ್ಯಾಚ್ ಸಂಖ್ಯೆ: 1401002251, ತಯಾರಕರು: ಮೆ||ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ ಲಿ., ಹಿಮಾಚಲ ಪ್ರದೇಶ. ಫೆನಿಲೇಫ್ರೈನ್ ಹೈಡ್ರೋಕ್ಲೋರೈಡ್ ಲೆವೋಸಿಟಿರಿಜೈನ್ ಹೈಡ್ರೋಕ್ಲೋರೈಡ್, ಪ್ಯಾರಾಸಿಟಮೋಲ್ ಆಂಡ್ ಕಫೈನ್ ಟ್ಯಾಬ್ಲೆಟ್ಸ್, ಬ್ಯಾಚ್ ಸಂಖ್ಯೆ: ಆರ್‍ಪಿಆರ್‍ಟಿ-001, ತಯಾರಕರು: ಮೆ|| ಲೋಸಿಸ್ ರೆಮಿಡೀಸ್, ಹಿಮಾಚಲ ಪ್ರದೇಶ. ಓಜೋಟೆಲ್ ಟ್ಯಾಬ್ಲೆಟ್ಸ್, ಬ್ಯಾಚ್ ಸಂಖ್ಯೆ: ಜಿಇಒ-7013, ತಯಾರಕರು: ಮೆ||ಓಝೋನ್ ಫಾರ್ಮಾಸ್ಯುಟಿಕಲ್ಸ್ ಲಿ., ಗೌಹಾಟಿ. ಜಿ.ಬಿ.ಹೆಚ್.ಸಿ ಸೋಪ್, ಬ್ಯಾಚ್ ಸಂಖ್ಯೆ: 517, ತಯಾರಕರು: ಮೆ||ಕಾಸ್ ಹೆಲ್ತ್, ನ್ಯೂ ಡೆಲ್ಲಿ. ಕಾಂಪೌಂಡ್ ಬೆನ್‍ಜೈನ್ ಟಿಂಚರ್ ಐ.ಪಿ, ಬ್ಯಾಚ್ ಸಂಖ್ಯೆ: 3489, ತಯಾರಕರು: ಮೆ||ದ ಸ್ವಸ್ತಿಕ್ ಫಾರ್ಮಾಸ್ಯೂಟಿಕಲ್ಸ್, ವಿಜಯವಾಡ. ಅಲ್‍ತ್ರೋಸಿನ್ ಲಿಕ್ವಿಡ್, ಬ್ಯಾಚ್ ಸಂಖ್ಯೆ: 1401001851, ತಯಾರಕರು: ಮೆ||ಅಲೆಂಬಿಕ್ ಫಾರ್ಮಾಸ್ಯೂಟಿಕಲ್ಸ್ ಲಿ., ಹಿಮಾಚಲ ಪ್ರದೇಶ. ಜಿನೆಸೆಫ್, ಬ್ಯಾಚ್ ಸಂಖ್ಯೆ: ಸಿಡಿ-140185, ತಯಾರಕರು: ಮೆ||ಥಿಯಾನ್ ಫಾರ್ಮಾಸ್ಯೂಟಿಕಲ್ಸ್ ಲಿ.,ಹಿಮಾಚಲ ಪ್ರದೇಶ. ಪ್ಯಾರಾಸಿಟಮೋಲ್ ಅಂಡ್ ಡಾಂಪೆರಿಡೋನ್ ಟ್ಯಾಬ್ಲೆಟ್ಸ್, ಬ್ಯಾಚ್ ಸಂಖ್ಯೆ: ಎಮ್‍ಐಜಿ-1401, ತಯಾರಕರು: ಮೆ|| ಬಯೋಮಾಕ್ರ್ಸ್ ಡ್ರಗ್ಸ್ ಇಂಡಿಯಾ ಪ್ರೈ.ಲಿ., ಹಿಮಾಚಲ ಪ್ರದೇಶ. ನವಜೋಲ್-ಡಿ ಟ್ಯಾಬ್ಲೆಟ್ಸ್, ಬ್ಯಾಚ್ ಸಂಖ್ಯೆ: ಎನ್‍ವಿಟಿ-11, ತಯಾರಕರು: ಮೆ|| ಸಾರ್ಥಕ್ ಬಯೋಟೆಕ್ ಪ್ರೈ.ಲಿ.,198-ಎ, ಸೆಕ್ಟ್ರರ್-03, ಹೆಚ್‍ಎಸ್‍ಐಡಿಸಿ, ಹರಿಯಾಣ. ಅಸೆಲೋವಿನ್-ಎಸ್ ಟ್ಯಾಬ್ಲೆಟ್ಸ್, ಬ್ಯಾಚ್ ಸಂಖ್ಯೆ: 02080, ತಯಾರಕರು: ಮೆ||ಜಾಯ್ಸನ್ ಫಾರ್ಮಾಸ್ಯುಟಿಕಲ್ಸ್ ಪ್ರೈ.ಲಿ., ಹಿಮಾಚಲ ಪ್ರದೇಶ. ಸಾಹೀಬ್, ಅಪೋಲೊ-ಎಸ್‍ಪಿ ಟ್ಯಾಬ್ಲೆಟ್ಸ್, ಬ್ಯಾಚ್‍ಸಂಖ್ಯೆ: ಸಿಬಿಟಿ-114/14, ತಯಾರಕರು: ಮೆ|| ಸಿ.ಬಿ.ಹೆಲ್ತ್‍ಕೇರ್, ಹಿಮಾಚಲ ಪ್ರದೇಶ.  ಈ ಔಷಧಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂದು ಔಷಧ ನಿಯಂತ್ರಣ ಇಲಾಖೆಯಿಂದ ಘೋಷಿಸಲಾಗಿದೆ.
       ಔಷಧಿ ವ್ಯಾಪಾರಿಗಳು, ವೈದ್ಯರು, ಆಸ್ಪತ್ರೆಗಳು ಈ ಮೇಲಿನ ಔಷಧಗಳನ್ನು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ, ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ  ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ರಾಜ್ಯ ಔಷಧ ನಿಯಂತ್ರಕ ರಘುರಾಮ ಭಂಡಾರಿ ತಿಳಿಸಿದ್ದಾರೆ.

ಕೊಪ್ಪಳ : ಗ್ರಾಮ ಪಂಚಾಯತಿಗಳ ಜಮಾಬಂದಿ ನಡೆಸಲು ಸೂಚನೆ

ಕೊಪ್ಪಳ, ಆ.12 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಜಮಾಬಂದಿ ನಡೆಸುವ ದಿನಾಂಕ ಹಾಗೂ ಜಮಾಬಂದಿ ನಡೆಸುವ ಅಧಿಕಾರಿಗಳನ್ನು ನಿಗದಿಪಡಿಸಿ ವನ್ನು ನಿಗದಿಪಡಿಸಿ ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೂಚನೆ ನೀಡಿದ್ದಾರೆ.
     ಜಮಾಬಂದಿಯನ್ನು ನಿಯಮಾನುಸಾರವಾಗಿ ಆಯಾ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ದಾಖಲೆಗಳನ್ನು ಕಾಲೋಚಿತಗೊಳಿಸಲು  ಗ್ರಾಮ ಪಂಚಾಯಿತಿಗಳಿಗೆ ಅವಧಿ ನಿಗದಿಪಡಿಸಲಾಗಿದೆ. ಈ ಅವಧಿಯೊಳಗಾಗಿ ಜಮಾಬಂಧಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿ ತಾಲೂಕಾ ಪಂಚಾಯತ್ ಕಾರ್ಯಾಲಯಕ್ಕೆ ಠರಾವು ಪ್ರತಿ, ಸಿ.ಡಿ ಹಾಗೂ ಫೋಟೊಗಳೊಂದಿಗೆ ವರದಿಯನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದ್ದಾರೆ.  
     ಆ.17 ರಂದು ತಾಲೂಕಿನ ಅಳವಂಡಿ, ಲೇಬಗೇರಿ, ಮುನಿರಾಬಾದ್ ಡ್ಯಾಂ, ಹೊಸಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಜಮಾಬಂದಿ ಕಾರ್ಯಕ್ರಮ ನಡೆಯಲಿದೆ. ಆ.19-ಬೆಟಗೇರಿ, ಬಹದ್ದೂರಬಂಡಿ, ಭಾಗ್ಯನಗರ, ಹಿಟ್ನಾಳ. ಆ.21-ಬೋಚನಹಳ್ಳಿ, ಬೂದಗುಂಪಾ, ಗಿಣಗೇರಾ, ಕುಣಿಕೇರಿ, ಇಂದರಗಿ. ಆ.22-ಕಾತರಕಿ ಗುಡ್ಲಾನೂರು, ಗೊಂಡಬಾಳ, ಬಂಡಿಹರ್ಲಾಪುರ, ಶಿವಪುರ. ಆ.24-ಕೋಳೂರು, ಹಾಸಗಲ್, ಗುಳದಳ್ಳಿ, ಕವಲೂರು. ಆ.26-ಬಿಸರಳ್ಳಿ, ಇರಕಲ್‍ಗಡಾ, ಹಿರೇಸಿಂದೋಗಿ, ಕಿನ್ನಾಳ, ಹುಲಿಗಿ, ಮಾದಿನೂರು. ಆ.27-ಚಿಕ್ಕಬೊಮ್ಮನಾಳ, ಕಲ್‍ತಾವರಗೇರಾ. ಸೆ.01-ಹಟ್ಟಿ. ಸೆ.03-ಹಿರೇಬಗನಾಳ. ಸೆ.07-ಹಲಗೇರಿ, ಓಜನಹಳ್ಳಿ. ಸೆ.10-ಮತ್ತೂರು. ಸೆ.11 ರಂದು ಅಗಳಕೇರಾ ಗ್ರಾಮದಲ್ಲಿ ಜಮಾಬಂದಿ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಂಬಾಕು ಉತ್ಪನ್ನಗಳು ಅನಾರೊಗ್ಯಕ್ಕೆ ರಹದಾರಿ

ಕೊಪ್ಪಳ, ಆ.13 (ಕರ್ನಾಟಕ ವಾರ್ತೆ): ಬಹುಪಾಲು ಜನರಿಗೆ ತಂಬಾಕು ಸೇವನೆಯಿಂದ ಅಪಾಯ ಎಂದು ತಿಳಿದಿದ್ದರೂ, ಅದು ಎಷ್ಟರ ಮಟ್ಟಿಗೆ ಹಾನಿಕಾರ ಮತ್ತು ಅದರ ಕಾರಣಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲವಾಗಿದೆ.  ಇದರಿಂದ ತಂಬಾಕು ಉತ್ಪನ್ನಗಳು ಜನರ ಅನಾರೋಗ್ಯಕ್ಕೆ ರಹದಾರಿಯಾಗಿ ಪರಿಣಮಿಸಿವೆ.
     ತಂಬಾಕು ಸಂಸ್ಥೆಗಳು ಆಕರ್ಷಕ ಪ್ರಚಾರದ ಮುಖಾಂತರ ಗ್ರಾಹಕರಿಗೆ ತಂಬಾಕು ಸೇವನೆಯಿಂದಾಗಿ ಆರೋಗ್ಯದ ಮೇಲಾಗುವ ಪರಿಣಾಮದ ಕಟು ವಾಸ್ತವವನ್ನು ಮುಚ್ಚಿಟ್ಟು ದಿಕ್ಕು ತಪ್ಪಿಸುತ್ತಿವೆ.  ತಂಬಾಕು ಸೇವನೆಯಿಂದ ಆಗುವ ಹಾನಿಗಳ ಬಗ್ಗೆ ಚಿತ್ರಗಳ ಸಹಿತ ಇರುವ ಎಚ್ಚರಿಕೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ತಂಬಾಕು ಸೇವನೆಯನ್ನು ತ್ಯಜಿಸುವ ಅಥವಾ ಕಡಿಮೆ ಮಾಡುವ ಮೂಲಕ ಅದು ಮನೋವೃತ್ತಿಯನ್ನು ಬದಲಾಯಿಸುವ ಪ್ರೇರಣಾ ಶಕ್ತಿಯನ್ನು ಹೊಂದಿವೆ.
     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾಲಯಗಳ ಸಚಿವಾಲಯವು 2008ರ ಮೇ.30 ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ ಹಾಗೂ ರಾಜ್ಯಾದ್ಯಂತ 2008 ರ ಅಕ್ಟೋಬರ್.02 ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರ ತಿಳುವಳಿಕೆಗಾಗಿ ಹೋಟೆಲ್, ರೆಸ್ಟೋರೆಂಟ್, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಚಿತ್ರಮಂದಿರಗಳಲ್ಲಿ ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಆವರಣ ಸೇರಿ ಶಾಲಾ ಕಾಲೇಜುಗಳ ಆವರಣ, ಸಾರ್ವಜನಿಕ ಗ್ರಂಥಾಲಯಗಳು ಮತ್ತು ಅಂಚೆ ಮತ್ತು ಆಡಳಿತ ಕಛೇರಿಗಳಲ್ಲಿ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕಾಯ್ದೆಯಡಿ ನಿರ್ಬಂಧನೆಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, 200 ರೂ. ದಂಡ ಹಾಗೂ ಜೈಲು ವಾಸ ವಿಧಿಸುವ ನಿಯಮವಿದೆ.
     ತಂಬಾಕು ಹಾಗೂ ಧೂಮಪಾನ ಸೇವನೆ ದುಷ್ಪರಿಣಾಮಗಳ ಸಂಕೇತವಾಗಿದ್ದು, ಇವುಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳು, ಮನುಷ್ಯನನ್ನು ಕ್ಯಾನ್ಸರ್ ರೋಗಕ್ಕೀಡು ಮಾಡುತ್ತವೆ. ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಜಾಗತೀಕವಾಗಿ ಪ್ರತಿವರ್ಷ 5.4 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಪ್ರತಿವರ್ಷ 08 ರಿಂದ 09 ಲಕ್ಷ ಭಾರತೀಯರು ತಂಬಾಕು ಸಂಬಂಧಿ ರೋಗಗಳ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ ವಿಶ್ವದಲ್ಲಿ ಅತಿ ಹೆಚ್ಚು ಸಂಖ್ಯೆಯ ಬಾಯಿ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಕಂಡು ಬಂದಿವೆ. ಈ ಬಾಯಿ ಕಾನ್ಸರ್ ಕಾರಣಗಳು  ಶೇ.90 ರಷ್ಟು ತಂಬಾಕು ಸೇವನೆಯಿಂದ ಹುಟ್ಟಿಕೊಳ್ಳುತ್ತವೆ. ಭಾರತವೊಂದರಲ್ಲಿಯೇ ಧೂಮಪಾನದ ಕಾರಣದಿಂದಾಗಿ ಪ್ರತಿವರ್ಷ 10 ಲಕ್ಷ ಜನ ಸಾವಿಗೀಡಾಗುತ್ತಿದ್ದು, ಇದರಲ್ಲಿ ಶೇಕಡಾ 70 ರಷ್ಟು ಜನ 30 ರಿಂದ 60 ವರ್ಷದೊಳಗಿನವರಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುವವರ ಪೈಕಿ ಶೇ.80 ರಷ್ಟು ಮಂದಿ ಗ್ರಾಮೀಣ ಭಾಗದವರು ಎಂಬುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ದೇಶದಲ್ಲಿ ಹೆಚ್.ಐ.ವಿ, ಮಲೇರಿಯಾ, ಕ್ಷಯರೋಗಗಳಿಂದ ಉಂಟಾಗುವ ಮರಣ ಪ್ರಮಾಣಕ್ಕಿಂತ ತಂಬಾಕು ಸೇವನೆಯಿಂದ ಉಂಟಾಗುವ ಆನಾರೋಗ್ಯದ ಕಾರಣವಾಗಿ ಬರುವ ಮರಣವು ಹೆಚ್ಚಾಗಿರುವುದು ವಿಪರ್ಯಾಸ. 
ತಂಬಾಕು ಸೇವನೆಯ ದುಷ್ಪರಿಣಾಮಗಳು : ತಂಬಾಕು ಸೇವನೆಯಿಂದ ಹೃದ್ರೋಗ, ಶ್ವಾಸಕೋಶದ ಖಾಯಿಲೆಗಳು, ದೀರ್ಘಕಾಲಿಕ ಶ್ವಾಸಕೋಶದ ಅಡಚಣೆಯ ಖಾಯಿಲೆ, ಕಡಿಮೆ ತೂಕದ ಮಗುವಿನ ಜನನ, ಮೆದುಳಿನ ಸಂಕೋಚನ, ಅಲ್ಜೈಮರ್ ಖಾಯಿಲೆ, ಕುರುಡುತನ, ನಾಳೀಯ ಬಾಹ್ಯಾವರ್ಣದ ಖಾಯಿಲೆ, ಬ್ರಾಂಕೈಟಿಸ್, ಇಂಫಿಸಿಮಾ, ಲಕ್ಷಾ(ಪಾಶ್ರ್ವವಾಯು), ನೆನಪಿ ಶಕ್ತಿ ಕುಂದುವುದು, ಜ್ಞಾನಗ್ರಹಣದ ಕಾರ್ಯಹೀನತೆಯಂತಹ ಖಾಯಿಲೆಗಳು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಸುವಿಕೆಯಿಂದ ಸಂಭವಿಸುತ್ತವೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರವು ತಂಬಾಕಿನ ನಿಯಂತ್ರಣಕ್ಕಾಗಿ ಸೀಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು (
COTPA) ಜಾರಿಗೆ ತಂದಿದೆ.  ಈ ಕಾಯ್ದೆಯನ್ವಯ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಯಾರೂ ಕೂಡ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡಬಾರದು. ತಂಬಾಕು ವಸ್ತುಗಳನ್ನು ಶಾಲಾ ಕಾಲೇಜುಗಳಿಂದ 100 ಅಡಿ ಅಂತರದಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ, ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಬಸ್ ನಿಲ್ದಾಣ, ಚಲನಚಿತ್ರ ಮಂದಿರಗಳು, ಆಸ್ಪತ್ರೆಗಳು ಮುಂತಾದ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
     ಇಂದಿನ ದಿನಮಾನಗಳಲ್ಲಿ ಮಕ್ಕಳು ತಮ್ಮ 14ನೇ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಪೋಷಕರು ಮೊದಲು ಮಕ್ಕಳನ್ನು ರಕ್ಷಿಸುವುದು ಅತೀ ಮುಖ್ಯವಾಗಿದೆ. ಮಕ್ಕಳು ತಂಬಾಕು ಉತ್ಪನ್ನಗಳೆಡೆಗೆ ಆಕರ್ಷಿತರಾಗದಂತೆ ಮಾಡಲು ಪೋಷಕರು ತಂಬಾಕಿನ ದುಷ್ಪರಿಣಾಮಗಳನ್ನು ಮಕ್ಕಳ ಜೊತೆ ಮುಕ್ತವಾಗಿ ಚರ್ಚಿಸಬೇಕು. ತಮ್ಮ ಮಕ್ಕಳ ಮುಂದೆ ನೇರವಾಗಿ ತಂಬಾಕು ಇತ್ಯಾದಿಗಳನ್ನು ಸೇವಿಸಬಾರದು. ಧೂಮಪಾನ ಹವ್ಯಾಸಿ ಸ್ನೇಹಿತರಿಂದ ತಮ್ಮ ಮಕ್ಕಳನ್ನು ದೂರವಿಡುವುದು ಇನ್ನೂ ಉತ್ತಮ.

ದತ್ತಿ ಪ್ರಶಸ್ತಿಗೆ ‘ಗುನ್ನಾಳೇಶನ ವಚನಗಳು’ ಕೃತಿ ಆಯ್ಕೆ

ಕೊಪ್ಪಳ, ಆ.13 (ಕರ್ನಾಟಕ ವಾರ್ತೆ): ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರ ತಂದೆ ಅಮರಪ್ಪ ಅಮರಗುಂಡಪ್ಪ ಅರಳಿ ಸ್ಮಾರಕ ದತ್ತಿ ಪ್ರಶಸ್ತಿಗೆ ಕೊಪ್ಪಳದ ಸಾಹಿತಿ ಈಶ್ವರ ಹತ್ತಿ ರಚಿಸಿದ ‘ಗುನ್ನಾಳೇಶನ ವಚನಗಳು’ ಎಂಬ ಕೃತಿ ಆಯ್ಕೆಗೊಂಡಿದೆ.
     ಕೊಪ್ಪಳ ಜಿಲ್ಲೆಯ ಬರಹಗಾರರು ರಚಿಸಿರುವ ಕಾವ್ಯ ಕೃತಿಗಳಿಗೆ ಕೊಡಲ್ಪಡುವ ಈ ಪ್ರಶಸ್ತಿಗೆ 2014ರಲ್ಲಿ ಪ್ರಕಟಗೊಂಡ ಕಾವ್ಯ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಪ್ರಶಸ್ತಿಗಾಗಿ ಜಿಲ್ಲೆಯ ವಿವಿದೆಡೆಗಳಿಂದ ಒಟ್ಟು 08 ಕೃತಿಗಳು ಬಂದಿದ್ದವು. ಗಂಗಾವತಿಯ ಗಜಲ್ ಕವಿ ಅಲ್ಲಾಗಿರಿರಾಜ ಕನಕಗಿರಿ, ಕೊಪ್ಪಳದ ಪ್ರೊ.ಡಿ.ಎಂ.ಬಡಿಗೇರ, ಯಲಬುರ್ಗಾದ ಸಾಹಿತಿ ಶಾಂತಾ ಕುಡಗುಂಟಿ ಆಯ್ಕೆ ಸಮಿತಿಯಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಶೀಘ್ರದಲ್ಲಿಯೇ ಏರ್ಪಡಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಪ್ಪ ನಿಂಗೋಜಿ ತಿಳಿಸಿದ್ದಾರೆ.

ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ

ಕೊಪ್ಪಳ, ಆ.13 (ಕರ್ನಾಟಕ ವಾರ್ತೆ): ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್ ಹಾಗೂ ಡೀಸೆಲ್ ಮೆಕ್ಯಾನಿಕಲ್ ವೃತ್ತಿಯ ಶಿಶಿಕ್ಷು ತರಬೇತಿಗಾಗಿ ಆ.17 ರಂದು ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.
     ಮೆ||ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಬೇವಿನಹಳ್ಳಿ, ಕೊಪ್ಪಳ ಕಂಪನಿಯವರಿಂದ ಈ ಸಂದರ್ಶನ ಏರ್ಪಡಿಸಲಾಗಿದ್ದು, ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್ ಹಾಗೂ ಡೀಸೆಲ್ ಮೆಕ್ಯಾನಿಕಲ್ ವೃತ್ತಿಯಲ್ಲಿ ಐ.ಟಿ.ಐ ಪಾಸಾದ ಮತ್ತು ಪರೀಕ್ಷೆಗೆ ಹಾಜರಾಗಿ ಫಲಿತಾಂಶಕ್ಕಾಗಿ ಕಾದಿರುವ, ಗರಿಷ್ಠ 24 ವರ್ಷ ವಯೋಮಿತಿಯೊಳಗಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಸಂದರ್ಶನವು ಆ.17 ರಂದು ಬೆಳಿಗ್ಗೆ 9.30 ಗಂಟೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕುಕನೂರಿನಲ್ಲಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಬಯೋಡೇಟಾ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬದನೆಯಲ್ಲಿ ಕುಡಿ ಮತ್ತು ಕಾಯಿ ಕೊರೆಯುವ ಹುಳು ಬಾಧೆ : ನಿರ್ವಹಣೆಗೆ ಸಲಹೆಗಳು

ಕೊಪ್ಪಳ ಆ. 13 (ಕರ್ನಾಟಕ ವಾರ್ತೆ): ಬದನೆ ಬೆಳೆಯಲ್ಲಿ ಕುಡಿ ಮತ್ತು ಕಾಯಿ ಕೊರೆಯುವ ಹುಳು ಬಾಧೆ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಬದನೆಯಲ್ಲಿ ಕೀಟ ಬಾಧೆಗೆ ಸಿಲುಕಿದ ಕೊಂಬೆ ಮತ್ತು ಹಣ್ಣುಗಳನ್ನು ಕಿತ್ತು ನಾಶಪಡಿಸಬೇಕು. ಮೊಹಕ ಬಲೆಗಳ ಸಹಾಯದಿಂದ ಲೂಸಿನ್ ಲ್ಯೂರ್ ಉಪಯೋಗಿಸಿ ಈ ಕೀಟದ ಪತಂಗವನ್ನು ಸೆರೆಹಿಡಿದು ಕೈಯಿಂದ ಸಾಯಿಸಬೇಕು. ಈ ರೀತಿ ಮಾಡುವುದರಿಂದ ಕನಿಷ್ಟ ಅರ್ಧದಷ್ಟು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು, ಅದರಿಂದಾಗುವ ದುಷ್ಪರಿಣಾಮವನ್ನು ಮತ್ತು ಈ ಕೀಟ ನಿಯಂತ್ರಣಕ್ಕೆ ತಗುಲುವ ಖರ್ಚನ್ನು ಕಡಿಮೆ ಮಾಡಬಹುದು. ಒಂದು ಎಕರೆಗೆ 12 ರಿಂದ 16 ಮೋಹಕ ಬಲೆಗಳನ್ನು ಅಳವಡಿಸಬೇಕು ಮತ್ತು 15 ದಿನಗಳಿಗೊಮ್ಮೆ ಮೋಹಕ ಬಲೆಯ ಲ್ಯೂರನ್ನು ಬದಲಿಸಬೇಕು. ಬ್ಯಾಸಿಲ್ಲಸ್ ತುರೆನಜೆನಿಸ್ಸ್ 1 ಮಿ.ಲೀ ಜೈವಿಕ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.  ಪ್ರತಿ ಎಕರೆಗೆ 100 ಕಿ. ಗ್ರಾಂ ಬೇವಿನ ಹಿಂಡಿಯನ್ನು ಸಸಿ ನಾಟಿ ಮಾಡುವ ಸಮಯದಲ್ಲಿ ಕೊಟ್ಟಿಗೆ ಗೊಬ್ಬರದ ಜೊತೆಗೆ ಸೇರಿಸಬೇಕು, ನಂತರ ಪ್ರತಿ ತಿಂಗಳಿಗೊಮ್ಮೆ ಎರಡು ಬಾರಿ ಮಣ್ಣಿನಲ್ಲಿ ಸೇರಿಸಬೇಕು.  ಸ್ಪೈನೋಸಾಡ್ 45 ಎಸ್.ಸಿ 0.12 ಮಿ.ಲೀ, ಇಂಡಾಕ್ಸಾಕಾರ್ಬ್ 0.3 ಮಿ.ಲೀ, ಪ್ರೋಫೆನೊಫಾಸ್ 50 ಇ.ಸಿ 2.0 ಮಿ.ಲೀ, ಸೈಪರಮೆಥ್ರಿನ್ 10 ಇಸಿ 0.5 ಮಿ.ಲೀ, ರೈನಾಕ್ಸಿಪೈರ್ 20 ಎಸ್.ಸಿ 0.25 ಮಿ.ಲೀ, ಲಾಮ್ಡಾಸೆಹಾಲೋಥ್ರಿನ್ 5 ಇಸಿ 0.5 ಮಿ.ಲೀ, ಕೀಟನಾಶಕಗಳನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
     ಹೆಚ್ಚಿನ ಮಾಹಿತಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ- 08539-220305 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Wednesday, 12 August 2015

ಡಿ. ದೇವರಾಜ ಅರಸು ರವರ ಜನ್ಮ ಶತಮಾನೋತ್ಸವ ಅರ್ಥಪೂರ್ಣ ಆಚರಣೆ- ಪಿ.ಎಸ್. ಮಂಜುನಾಥ್


ಕೊಪ್ಪಳ ಆ. 12 (ಕರ್ನಾಟಕ ವಾರ್ತೆ): ಸಾಮಾಜಿಕ ಸಮಾನತೆಯ ಹರಿಕಾರ ದಿ: ಡಿ. ದೇವರಾಜ ಅರಸು ರವರ ಜನ್ಮ ಶತಮಾನೋತ್ಸವ ಆಚರಣೆಯನ್ನು ಆ. 20 ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಹೇಳಿದರು.
     ಡಿ. ದೇವರಾಜ ಅರಸು ರವರ ಜನ್ಮ ಶತಮಾನೋತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಸಾಮಾಜಿಕ ನ್ಯಾಯ ಹಾಗೂ ಪರಿವರ್ತನೆಯ ಹರಿಕಾರ ಎನಿಸಿರುವ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಈ ಬಾರಿ ವಿಶೇಷವಾಗಿದ್ದು, ಅವರ ಜನ್ಮ ಶತಮಾನೋತ್ಸವವನ್ನು ಆ. 20 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು.  ಅಂದು ಬೆಳಿಗ್ಗೆ 9 ಗಂಟೆಗೆ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ನಗರದ ಗವಿಮಠ ಆವರಣದಿಂದ ಪ್ರಾರಂಭಿಸಿ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನ ತಲುಪಲಿದೆ.  ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ.  ಬೆಳಿಗ್ಗೆ 11 ಗಂಟೆಗೆ ಸಾಹಿತ್ಯ ಭವನದಲ್ಲಿ ಸಮಾರಂಭ ಆಯೋಜಿಸಲಾಗುವುದು.  ಕಾರ್ಯಕ್ರಮದ ಅಂಗವಾಗಿ  ದೇವರಾಜ ಅರಸು ಕುರಿತಂತೆ ವಿಶೇಷ ಉಪನ್ಯಾಸ, ಎಸ್‍ಎಸ್‍ಎಲ್‍ಸಿ. ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಗಳಲ್ಲಿ ಉತ್ತಮ ಸಾಧನೆಗೈದಿರುವ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು.  ಡಿ. ದೇವರಾಜ ಅರಸು ಅವರ ಕುರಿತು ವಾರ್ತಾ ಇಲಾಖೆ ತಯಾರಿಸಿರುವ ಸಾಕ್ಷ್ಯ ಚಿತ್ರದ ಪ್ರದರ್ಶನ ಇದೇ ಸಂದರ್ಭದಲ್ಲಿ ಏರ್ಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಹೇಳಿದರು. 
     ದೇವರಾಜ ಅರಸು ಅವರ ಭಾವಚಿತ್ರ ಸಹಿತ ಮೆರವಣಿಗೆ ಸಾಗಿ ಬರುವ ರಸ್ತೆಯನ್ನು ಸ್ವಚ್ಛಗೊಳಿಸಬೇಕು.  ಅಲ್ಲದೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು ಎಂದು ಕೊಪ್ಪಳ ನಗರಸಭೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚನೆ ನೀಡಲಾಯಿತು.
     ಸಭೆಯಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಟಿ. ಕೊಟ್ರಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಆಹಾರ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರ್ ನಾಯಕ್, ಡಿಡಿಪಿಐ ಎ. ಶ್ಯಾಮಸುಂದರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸರ್ಕಾರಗಳ ಪ್ರತಿನಿಧಿಗಳು ಅವಿಭಕ್ತ ಕುಟುಂಬದ ಯಜಮಾನರಿದ್ದಂತೆ : ಎಚ್.ಕೆ. ಪಾಟೀಲ್


ಕೊಪ್ಪಳ, ಆ.12 (ಕರ್ನಾಟಕ ವಾರ್ತೆ): ಸ್ಥಳಿಯ ಸರ್ಕಾರಗಳ ಪ್ರತಿನಿಧಿಗಳು ಗ್ರಾಮವೆಂಬ ಅವಿಭಕ್ತ ಕುಟುಂಬದ ಯಜಮಾನರಿದ್ದಂತೆ. ಆ ಮೂಲಕ ತಮ್ಮ ಗ್ರಾಮದ ಆಪೇಕ್ಷೆ, ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಅಂದಾಗ ಮಾತ್ರ ಆದರ್ಶ ಗ್ರಾಮ ಸಾಕಾರಗೊಳ್ಳಲು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ   ಎಚ್.ಕೆ. ಪಾಟೀೀಲ್ ಹೇಳಿದರು.
     ನೂತನವಾಗಿ ಆಯ್ಕೆಯಾದಂತಹ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಸಾಮಥ್ರ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಕುರಿತಂತೆ ಸ್ಯಾಟ್‍ಕಾಂ ಮೂಲಕ ಕೊಪ್ಪಳ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸ್ಥಳಿಯ ಸರ್ಕಾರಗಳ ಪ್ರತಿನಿಧಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
     ದೇಶ ಉಸಿರಾಡುತ್ತಿರುವುದು ಹಳ್ಳಿಗಳಲ್ಲಿ, ಈ ನಿಟ್ಟಿನಲ್ಲಿ ಹಳ್ಳಿಗಳು ಅಭಿವೃದ್ಧಿ ಹೊಂದಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯ. ಹಳ್ಳಿಗಳ ಅಭಿವೃದ್ಧಿಗಾಗಿ ಆಯ್ಕೆಗೊಂಡಿರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸ್ಥಳೀಯ ಸರ್ಕಾರ ಸೃಷ್ಠಿಸುವಲ್ಲಿ ಜನರ ಪಾತ್ರ ಬಹುಮುಖ್ಯವಾದುದು. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಜಾತಿ, ಮತ, ಭೇದ ಎಲ್ಲವನ್ನು ತೊರೆದು ಜನತೆ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ ಎಲ್ಲ ವರ್ಗದ ಜನರ ಅಭಿವೃದ್ಧಿ ನೂತನ ಸದಸ್ಯರ ಮೇಲಿದೆ. ಆ ನಂಬಿಕೆಯನ್ನು ನೂತನ ಪ್ರತಿನಿಧಿಗಳು ಉಳಿಸಿಕೊಳ್ಳುವಲ್ಲಿ ಶ್ರಮಿಸಬೇಕಿದೆ. ಮಹಾತ್ಮಾ ಗಾಂಧೀಜಿಯವರ ರಾಮ ರಾಜ್ಯದ ಕನಸು ನಿಮ್ಮಿಂದ ಮಾತ್ರ ನನಸಾಗಿಸಲು ಸಾಧ್ಯ ಎಂದು ಅವರು ಆಶಯ ವ್ಯಕ್ತಪಡಿಸಿದರು.
     ಮಳೆಯ ಅಭಾವದಿಂದಾಗಿ ಇಂದು ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಹೆಚ್ಚಾನುಹೆಚ್ಚಾಗಿ ರೈತರು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವುದರಿಂದ ರೈತರ ಕಷ್ಟಗಳ ಬಗ್ಗೆ  ಸ್ಥಳಿಯ ಸರ್ಕಾರಗಳಿಗೆ ಬಹುಬೇಗನೆ ಗೊತ್ತಾಗುತ್ತದೆ. ಆಗ ಅವರಲ್ಲಿ ಆತ್ಮಸ್ಥೈರ್ಯ, ಬಲ ತುಂಬುವ ಕೆಲಸ ಸ್ಥಳೀಯ ಸರ್ಕಾರಗಳ ಪ್ರತಿನಿಧಿಗಳು ಕೈಗೊಳ್ಳಬೇಕು. ಹಲವಾರು ರೈತಪರ ಯೋಜನೆಗಳನ್ನು ಜಾರಿಗೆ ತಂದಂತಹ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನಾಚರಣೆ ಆ.20 ರಂದು ನಡೆಯಲಿದ್ದು, ಅಂದು ಪ್ರತಿನಿಧಿಗಳು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ಹಮ್ಮಿಕೊಂಡು, ರೈತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
     ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಪ್ರತಿ ಗ್ರಾಮ ಪಂಚಾಯಿತಿಯ ಉದ್ಯೋಗ  ಕಾರ್ಡುದಾರರಿಗೆ 50 ಲಕ್ಷದಿಂದ 3 ಕೋಟಿ ರೂ. ವರೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೇ, ಪ್ರತಿ ಗ್ರಾಮ ಪಂಚಾಯಿತಿಗೆ 10 ರಿಂದ 50 ಲಕ್ಷ ರೂ. ಅನುದಾನವನ್ನು ಸ್ಟ್ಯಾಚುಟರಿ ಫಂಡ್ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದ 6082 ಗ್ರಾಮ ಪಂಚಾಯಿತಿಗಳಿಗೆ 5623 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಈ ಹಣವನ್ನು ಸೂಕ್ತ ರೀತಿಯಲ್ಲಿ ಸದ್ವಿನಿಯೋಗ ಮಾಡಿಕೊಂಡಲ್ಲಿ ಆದರ್ಶ ಗ್ರಾಮದ ಕನಸು ನನಸಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
       ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸ್ಯಾಟ್‍ಕಾಂ ಮೂಲಕ ಸಚಿವರ ಸಂದೇಶ ಆಲಿಸಿದರು.

ಪುಸ್ತಕ ಬಹುಮಾನ : ಅರ್ಜಿ ಆಹ್ವಾನ

ಕೊಪ್ಪಳ, ಆ.12 (ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಯಕ್ಷಗಾನ(ತೆಂಕು, ಬಡಗು ಮತ್ತು ಘಟ್ಟದಕೋರೆ), ಮೂಡಲಪಾಯ ಯಕ್ಷಗಾನ, ಗೊಂಬೆಯಾಟ(ಸೂತ್ರದ ಮತ್ತು ತೊಗಲು ಗೊಂಬೆ), ಶ್ರೀಕೃಷ್ಣ ಪಾರಿಜಾತ, ಸಣ್ಣಾಟ, ದೊಡ್ಡಾಟ ಇತ್ಯಾದಿ ಕಲಾಪ್ರಕಾರಗಳಿಗೆ ಸಂಬಂಧಿಸಿದಂತೆ 2014 ರಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಪುಸ್ತಕ  ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯಕ್ಷಗಾನ ಮತ್ತು ಬಯಲಾಟದ ವಿವಿಧ ಆಯಾಮಗಳ ಬಗ್ಗೆ (ಸಂಗೀತ, ಆಹಾರ್ಯ, ಅಭಿನಯ ಇತ್ಯಾದಿ), ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಪುಸ್ತಕಕ್ಕೆ 5,000 ರೂ.ಗಳ ಬಹುಮಾನ ನೀಡಲಾಗುವುದು. ಪುಸ್ತಕ ಬಹುಮಾನಕ್ಕಾಗಿ ಸಲ್ಲಿಸುವ ಪುಸ್ತಕಗಳನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು. ಸಂಪಾದಿತ, ಅಭಿನಂದನಾ ಕೃತಿಯಾಗಿರಬಾರದು, ಕೃತಿಯು ಸ್ವರಚಿತವಾಗಿರಬೇಕು ಮತ್ತು ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು.
     ಆಸಕ್ತರು ಪುಸ್ತಕದ ನಾಲ್ಕು ಪ್ರತಿಗಳೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-560 002, ದೂರವಾಣಿ ಸಂಖ್ಯೆ: 080-22113146 ಇವರಿಗೆ ಆ.30 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ಆಯಾ   ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಒಳನಾಡು ಮೀನುಗಾರಿಕೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಆ.12 (ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕ ಬಿ.ಆರ್.ಪ್ರಾಜೆಕ್ಟ್‍ನ ಮೀನುಗಾರಿಕೆ ತರಬೇತಿ ಕೇಂದ್ರದ ವತಿಯಿಂದ ಪುರುಷ ಅಭ್ಯರ್ಥಿಗಳಿಗೆ ಒಳನಾಡು ಮೀನುಗಾರಿಕೆ ತರಬೇತಿ ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಮೀನು ಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಮೀನು ಸಾಕಣೆ, ಬಲೆ ಹೆಣೆಯುವುದು, ದುರಸ್ತಿ ಮಾಡುವುದು, ಹರಿಗೋಲು ನಡೆಸುವುದು, ಮೀನು ಹಿಡಿಯುವುದು, ಅಲಂಕಾರಿಕ ಮೀನು ಉತ್ಪಾದನೆ, ಪಾಲನೆ, ಇತ್ತೀಚಿನ ಬೆಳೆವಣಿಗೆಗಳು ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ತರಬೇತಿಯು 1 ತಿಂಗಳ ಅವಧಿಯದಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 2,000 ರೂ. ಶಿಷ್ಯವೇತನ ನೀಡಲಾಗುವುದು.   ತರಬೇತಿಯು ಸೆಪ್ಟಂಬರ್.07 ರಿಂದ ಆರಂಭವಾಗಲಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಕೊಪ್ಪಳ, ಬೀದರ್, ಗುಲ್ಬರ್ಗಾ, ಯಾದಗಿರಿ, ಚಿತ್ರದುರ್ಗ, ರಾಯಚೂರು, ಧಾರವಾಡ, ಬಿಜಾಪುರ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಗದಗ,   ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ ಜಿಲ್ಲೆಗೆ ಸೇರಿದವರಾಗಿರಬೇಕು. 18 ರಿಂದ 40 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. 10 ನೇ ತರಗತಿವರೆಗೆ (ಪಾಸ್, ಫೇಲ್) ಓದಿರಬೇಕು. ತರಬೇತಿ ಅವಧಿಯಲ್ಲಿ ಇಲಾಖೆಯು ಒದಗಿಸುವ ಉಚಿತ ವಸತಿ ಗೃಹದಲ್ಲಿ ಕಡ್ಡಾಯವಾಗಿ ತಂಗಬೇಕು. ಮೀನುಗಾರಿಕೆ ವೃತ್ತಿ ನಡೆಸುತ್ತಿರುವವರು, ಮೀನುಗಾರಿಕೆ ಸಹಕಾರ ಸಂಘದ ಸದಸ್ಯರು, ಇತರೆ ಸಂಘದ ಸದಸ್ಯರಿಗೆ ಆದ್ಯತೆ ನೀಡಲಾಗುವುದು. ಸಂದರ್ಶನದ ಮೂಲಕ ಅಭ್ಯರ್ಥಿಯ ಆಯ್ಕೆ ನಡೆಯಲಿದ್ದು, ಸಂದರ್ಶನಕ್ಕೆ ಅಭ್ಯರ್ಥಿಯು ಸ್ವಂತ ಖರ್ಚಿನಲ್ಲಿ ಹಾಜರಗಬೇಕು.
     ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಮೀನುಗಾರಿಕೆ ಕಛೇರಿಗಳಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ನಿಗದಿತ ದಾಖಲೆಗಳೊಂದಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-01), ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್.ಪ್ರಾಜೆಕ್ಟ್, ಭದ್ರಾವತಿ ತಾಲೂಕು, ಶಿವಮೊಗ್ಗ ಜಿಲ್ಲೆ, ದೂರವಾಣಿ ಸಂಖ್ಯೆ: 08282-256252 ಇವರಿಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ : ಅರ್ಜಿ ಆಹ್ವಾನ

ಕೊಪ್ಪಳ, ಆ.12 (ಕರ್ನಾಟಕ ವಾರ್ತೆ): ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ಎನ್.ಟಿ.ಎಸ್.ಇ,/ಎನ್.ಎಮ್.ಎಮ್.ಎಸ್) ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
     ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಎನ್.ಎಮ್.ಎಮ್.ಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎನ್.ಟಿ.ಎಸ್.ಇ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಶಾಲಾ ಮುಖ್ಯೋಪಾಧ್ಯಾಯರ ಮುಖಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಸೆಪ್ಟಂಬರ್.07 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಶಾಲೆಯ ಮುಖ್ಯಗುರುಗಳನ್ನು ಅಥವಾ ವೆಬ್‍ಸೈಟ್  www.dsert.kar.nic.in ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆ.15 ರಂದು ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ

ಕೊಪ್ಪಳ, ಆ.12 (ಕರ್ನಾಟಕ ವಾರ್ತೆ): ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ಆ.15 ರಂದು ಬೆಳಿಗ್ಗೆ 09 ಗಂಟೆಗೆ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
     ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ಧ್ವಜಾರೋಹಣ ನೆರವೇರಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ್, ಅಮರನಾಥ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿನಯಕುಮಾರ ಎಂ.ಮೇಲಿನಮನಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾಲೂಕ ಪಂಚಾಯತ ಅಧ್ಯಕ್ಷೆ ಬಾನು ಚಾಂದಸಾಬ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
     ಧ್ವಜಾರೋಹಣಕ್ಕೂ ಮುನ್ನ ಅಂದು ಬೆಳಿಗ್ಗೆ 08 ಗಂಟೆಗೆ ಜಿಲ್ಲಾಡಳಿತ ಭವನದಿಂದ ಅಶೋಕ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಸ್ಥಬ್ದ ಚಿತ್ರಗಳ ಮೆರವಣಿಗೆ ನಡೆಯಲಿದೆ. ಅದೇ ದಿನ ಸಂಜೆ 06 ರಿಂದ 09 ಗಂಟೆಯವರೆಗೆ ನಗರದ ಬಾಲಕಿಯರ ಪ.ಪೂ. ಕಾಲೇಜು ಆವರಣದಲ್ಲಿನ ಸಾರ್ವಜನಿಕ ಮೈದಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. 

ಟಿಇಟಿ ತರಬೇತಿ : ನೋಂದಣಿ ಅವಧಿ ಆ. 20 ರವರೆಗೆ ವಿಸ್ತರಣೆ

ಕೊಪ್ಪಳ ಆ. 12 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ಸಹಯೋಗದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ ಪರೀಕ್ಷೆ) ತೆಗೆದುಕೊಂಡಿರುವ ಅಭ್ಯರ್ಥಿಗಳಿಗೆ ತರಬೇತಿ ಆಯೋಜಿಸಲಾಗಿದ್ದು, ನೋಂದಣಿ ಅವಧಿಯನ್ನು ಆ. 20 ರವರೆಗೆ ವಿಸ್ತರಿಸಲಾಗಿದೆ.
     ಟಿಇಟಿ ಪರೀಕ್ಷೆಗೆ ಹಾಜರಾಗುವ ಹೈದ್ರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಅಭ್ಯರ್ಥಿಗಳಿಗೆ ತರಬೇತಿಯನ್ನು ಆಯೋಜಿಸಲಾಗಿದ್ದು, ಅರ್ಜಿ ಸಲ್ಲಿಸಲು ಆ. 12 ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿತ್ತು.  ಹೆಚ್ಚಿನ ಅಭ್ಯರ್ಥಿಗಳು ಯೋಜನೆಯ ಸದುಪಯೋಗ ಪಡೆಯುವಂತಾಗಲಿ ಎನ್ನುವ ಸದುದ್ದೇಶದಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ಆ. 20 ರವರೆಗೆ ವಿಸ್ತರಿಸಲಾಗಿದೆ.   ತರಬೇತಿಯು ಆಯಾ ತಾಲೂಕಿನಲ್ಲಿ ಆ. 17 ರಿಂದಲೇ ಪ್ರಾರಂಭವಾಗಲಿದ್ದು, ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.  ಹೆಚ್ಚಿನ ವಿವರಗಳಿಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಕ್ಷೇತ್ರ ಸಮನ್ವಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕಲಬುರಗಿಯ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 11 August 2015

ಗುಳೇ ಹೋದ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ- ಅಮರೇಶ್ ಕುಳಗಿ

ಕೊಪ್ಪಳ ಆ. 11 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ, ಶಾಲೆಗೆ ಕರೆ ತರುವಲ್ಲಿ ಶಿಕ್ಷಣ ಇಲಾಖೆ ಕ್ರಮ ತೃಪ್ತಿದಾಯಕವಾಗಿಲ್ಲ.  ಗುಳೇ ಹೋಗಿರುವ ಕುಟುಂಬಗಳ ಮಕ್ಕಳ ಶಿಕ್ಷಣದ ಬಗ್ಗೆ ಆತಂಕವಿದ್ದು, ಒಟ್ಟಾರೆ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅಗತ್ಯ ವ್ಯವಸ್ಥೆ ರೂಪಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿ.ಪಂ. ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಕರೆ ತರುವಲ್ಲಿ ಶಿಕ್ಷಣ ಇಲಾಖೆ ಕ್ರಮ ತೃಪ್ತಿದಾಯಕವಾಗಿಲ್ಲ.  ಜಿಲ್ಲೆಯಲ್ಲಿ 01 ರಿಂದ 05 ನೇ ತರಗತಿ ವರೆಗಿನ ಮಕ್ಕಳ ಪೈಕಿ ಒಟ್ಟು 218 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಈ ಪೈಕಿ ಕೇವಲ 82 ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರಲಾಗಿದೆ.  ಅದೇ ರೀತಿ 6 ರಿಂದ 07 ನೇ ತರಗತಿವರೆಗಿನ 274 ಮಕ್ಕಳು ಶಾಲೆ ಬಿಟ್ಟಿದ್ದು, ಇವರಲ್ಲಿ ಕೇವಲ 27 ವಿದ್ಯಾರ್ಥಿಗಳನ್ನು ಮಾತ್ರ ಮರಳಿ ಶಾಲೆಗೆ ಸೇರಿಸಲಾಗಿದೆ.  ಶಾಲಾ ಆರಂಭಿಕ ಮಾಸದಲ್ಲಿಯೇ ಎಲ್ಲ ಮಕ್ಕಳನ್ನು ಶಾಲೆಗೆ ಕರೆತರುವಂತಾದಾಗ ಮಾತ್ರ, ಶೈಕ್ಷಣಿಕ ವರ್ಷದ ಪಾಠಗಳು ಮಕ್ಕಳಿಗೆ ಕಲಿಯಲು ಸಾಧ್ಯವಾಗಲಿದೆ.  ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಶಿಕ್ಷಣ ಇಲಾಖೆ ಸೂಕ್ತ ಕಾರ್ಯಕ್ರಮ ರೂಪಿಸಿ, ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.  ಜಿಲ್ಲೆಯಲ್ಲಿ ಗುಳೇ ಹೋಗುತ್ತಿರುವ ಪ್ರಕರಣಗಳು ವ್ಯಾಪಕವಾಗಿ ವರದಿಯಾಗುತ್ತಿದ್ದು, ಗುಳೇ ಹೋದ ಕುಟುಂಬದ ಮಕ್ಕಳ ಶಿಕ್ಷಣದ ಗತಿ ಏನು? ಎಂದು ಜಿ.ಪಂ. ಅಧ್ಯಕ್ಷರು ಪ್ರಶ್ನಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅವರು, ಗುಳೇ ಹೋದ ಕುಟುಂಬದ ಮಕ್ಕಳ ಬಗ್ಗೆ ಮಾಹಿತಿ ಪಡೆದು, ಅವರ ಮಕ್ಕಳ ಶಿಕ್ಷಣದ ಬಗ್ಗೆ ವರದಿ ಸಲ್ಲಿಸುವಂತೆ ಈಗಾಗಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.  ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.  ಈ ನಿಟ್ಟಿನಲ್ಲಿ ಗುಳೇ ಹೋದ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.  ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿಯೇ ಶೌಚಾಲಯದ ಮಹತ್ವ ಹಾಗು ಶೌಚಾಲಯ ಬಳಕೆ ಅಲ್ಲದೆ ಸ್ವಚ್ಛತೆಯ ಬಗ್ಗೆ ಪಠ್ಯೇತರ ಚಟುವಟಿಕೆ ಸಂದರ್ಭದಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿ.ಪಂ. ಅಧ್ಯಕ್ಷ ಅಮರೇಳ್ ಕುಳಗಿ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರ್ಯಾಯ ಬೆಳೆ ಮಾಹಿತಿ ನೀಡಿ: ಜಿಲ್ಲೆಯಲ್ಲಿ ಮುಂಗಾರು ಮಳೆ ವಿಫಲವಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಳ್ಳುವ ಮೇ ತಿಂಗಳಿನಿಂದ ಜುಲೈ ತಿಂಗಳಿನವರೆಗೆ 205. 50 ಮಿ.ಮೀ. ವಾಡಿಕೆ ಮಳೆಯ ಬದಲಿಗೆ ಕೇವಲ 108. 10 ಮಿ.ಮೀ. ಮಳೆಯಾಗಿದ್ದು ಶೇ. 47 ರಷ್ಟು ಕೊರತೆ ಕಂಡುಬಂದಿದೆ.  ಜುಲೈ ತಿಂಗಳು ಒಂದರಲ್ಲೇ ಶೇ. 80 ರಷ್ಟು ಮಳೆಯ ಕೊರತೆಯಾಗಿದೆ.  ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 252500 ಹೆ. ಪ್ರದೇಶದಲ್ಲಿ ಬಿತ್ತನೆ ಗುರಿಯ ಬದಲಿಗೆ 130847 ಹೆ., ಅಂದರೆ ಶೇ. 52 ರಷ್ಟು ಮಾತ್ರ ಬಿತ್ತನೆಯಾಗಿದೆ.  ಇದರಲ್ಲಿ 90808 ಹೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿದೆ.  ಮಳೆಯ ಕೊರತೆಯಿಂದಾಗಿ ಬಿತ್ತನೆಯಾಗಿರುವ ಬೆಳೆಗಳೂ ಸಹ ಒಣಗುತ್ತಿವೆ.  ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಭರವಸೆ ಆಶಾದಾಯಕವಾಗಿಲ್ಲ.  ರೈತರು ಧೃತಿಗೆಡದೆ, ಅಲ್ಪಾವಧಿ ಅಥವಾ ಪರ್ಯಾಯ ಬೆಳೆ ಬೆಳೆಯುವುದು ಸೂಕ್ತವಾಗಿದೆ.  ಬೆಳೆ ನಷ್ಟದ ಕುರಿತು ಈಗಾಗಲೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಂಟಿಕೃಷಿ ನಿರ್ದೇಶಕ ರಾಮದಾಸ್ ಸಭೆಗೆ ವಿವರಿಸಿದರು.  ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು.  ಹಾಗೂ ಇಂತಹ ಬೆಳೆಗಳ ಬಿತ್ತನೆ ಬೀಜ ಅಥವಾ ಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.
ಗೋಶಾಲೆ ಸೂಕ್ತ : ಜಿಲ್ಲೆಯಲ್ಲಿನ ಮೇವಿನ ಪರಿಸ್ಥಿತಿ ಪರಿಶೀಲಿಸಿದ್ದು ಕೇವಲ 6 ವಾರಗಳವರೆಗೆ ಆಗುವಷ್ಟು ಮೇವು ಮಾತ್ರ ಲಭ್ಯವಿರುವ ಸಾಧ್ಯತೆ ಇದೆ.  ಜಿಲ್ಲೆಯ 13 ಹೋಬಳಿಗಳಲ್ಲಿ ಮೇವಿನ ಸಮಸ್ಯೆ ತಲೆದೋರುವ ಸಂಭವವಿದೆ.  ಮೇವು ಬ್ಯಾಂಕ್ ಸ್ಥಾಪನೆ, ಗೋಶಾಲೆ ತೆರೆಯುವುದು ಅಥವಾ ಮೇವು ಸಾಗಾಣಿಕೆಗೆ ವ್ಯವಸ್ಥೆ ಕಲ್ಪಿಸುವ ಕುರಿತಂತೆ ಮಾರ್ಗೋಪಾಯಗಳ ಬಗ್ಗೆ ಈಗಾಗಲೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.  ಇಲಾಖೆಯಿಂದ ಮೇವು ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೀರಾವರಿ ಪ್ರದೇಶದ ರೈತರಿಗೆ ಉಚಿತ ಮೇವು ಬೀಜದ ಮಿನಿ-ಕಿಟ್ ವಿತರಣೆಗೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರನಾಯಕ್ ಅವರು ತಿಳಿಸಿದರು.  ಜಿಲ್ಲೆಯಲ್ಲಿ ಮೇವಿನ ಕೊರತೆ ಉಂಟಾದಲ್ಲಿ, ಜಾನುವಾರುಗಳ ರಕ್ಷಣೆಗೆ ಗೋಶಾಲೆ ತೆರೆಯುವುದು ಸೂಕ್ತ ಎಂದು ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅಭಿಪ್ರಾಯಪಟ್ಟರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿ.ಪಂ. ಸದಸ್ಯ ಅರವಿಂದಗೌಡ ಪಾಟೀಲ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಸೋಮಶೇಖರ ಹರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.  ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾ
ದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

ಕೈತೋಟ ಮತ್ತು ತಾರಸಿ ತೋಟ ಅರಿವು ಕಾರ್ಯಕ್ರಮ

ಕೊಪ್ಪಳ ಆ. 11 (ಕರ್ನಾಟಕ ವಾರ್ತೆ): ತೋಟಗಾರಿಕೆ ಪಿತಾಮಹ ದಿ, ಡಾ|| ಎಮ್. ಎಸ್. ಮರಿಗೌಡರ ಜನ್ಮ ದಿನಾಚರಣೆ ನಿಮಿತ್ತ ನಾಗರಿಕರಲ್ಲಿ ವಿಷಮುಕ್ತ ಮತ್ತು ರಾಸಾಯನಿಕ ಮುಕ್ತ ಆಹಾರದ ಬಗ್ಗೆ ಅರಿವು ಮೂಡಿಸಲು ಕೈತೋಟ ಮತ್ತು ತಾರಸಿ ತೋಟದ ಬಗ್ಗೆ ಅರಿವು ಕಾರ್ಯಕ್ರಮವನ್ನು ಕೊಪ್ಪಳದ ವಿವೇಕಾನಂದ ಆಂಗ್ಲ ಪ್ರೌಢಶಾಲೆಯಲ್ಲಿ ಯೋಗ ಶಿಭಿರಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು.
 ತೋಟಗಾರಿಕೆ ವಿಷಯ ತಜ್ಞ ವಾಮವ್ ಮೂರ್ತಿ ಅವರು ತೋಟಗಾರಿಕೆ ಸಪ್ತಾಹಕ್ಕೆ ಚಾಲನೆ ನೀಡಿ, ದಿನ ನಿತ್ಯದಲ್ಲಿ ತೋಟಗಾರಿಕೆ ಬೆಳೆಗಳಾದ ಹೂ, ಹಣ್ಣು, ತರಕಾರಿಗಳು ನಮ್ಮ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿದೆ. ಜಂಕ್ ಆಹಾರ ಜೊತೆಗೆ ಕೆಲವು ಸಿದ್ದಾಹಾರಗಳು ನಮ್ಮ ಆರೋಗ್ಯ ಹಾಳು ಮಾಡುತ್ತಿವೆ. ರಾಸಾಯನಿಕ ಮುಕ್ತ ಆಹಾರ ಸೇವನೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅತಿ ಮುಖ್ಯ. ಇದಕ್ಕಾಗಿ ತೋಟಗಾರಿಕೆ ಇಲಾಖೆ ಕೈತೋಟ ಮತ್ತು ತಾರಸಿ ತೋಟ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಗರಿಕರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
     ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರಶಾಂತ ನಾಯ್ಕ ಮಾತನಾಡಿ ಈ ಯೋಜನೆಯಡಿ ಫಲಾನುಭವಿಗಳಿಗೆ ಉಚಿತವಾಗಿ ಬೀಜ, ಸಾವಯುವ ಗೊಬ್ಬರ ಮತ್ತು ಕುಂಡಗಳನ್ನು ಇಲಾಖೆ ವತಿಯಿಂದ ನೀಡಲಾಗುತ್ತಿದೆ ಅದಲ್ಲದೆ ತಾಂತ್ರಿಕ ಸಲಹೆ ಕೂಡ ನೀಡಲಾಗುವುದೆಂದು ಎಂದರು.
       ಈಗಾಗಲೆ ಅಚ್ಚುಕಟ್ಟಾಗಿ ಕೈತೋಟ ನಿರ್ವಹಿಸಿರುವ ಕೊಪ್ಪಳದ ಮಲ್ಲಪ್ಪ ಗಟ್ಟಿ ದಂಪತಿಗಳ ಮನೆ ಕೈ ತೋಟದಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು.  ಸಹಾಯಕ ತೋಟಗಾರಿಕೆ ಅಧಿಕಾರಿ ಶರಣಬಸವ ಮನ್ನಾಪುರ ಮತ್ತು ತೋಟಗಾರಿಕೆ ಸಹಾಯಕ ಬಸವರಾಜ ರಾಂಪುರೆ, ಮಂಜುನಾಥ ಸಜ್ಜನ್, ಶರಣಬಸಪ್ಪ ಜವಳಿ  ಉಪಸ್ತಿತರಿದ್ದರು.
     ತೋಟಗಾರಿಕೆ ಸಪ್ತಾಹವನ್ನು ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿ,ಪಂ) ಕೊಪ್ಪಳ ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ (ಜಿ,ಪಂ) ಕೊಪ್ಪಳ ಗಳಲ್ಲದೆ ಎಲ್ಲಾ ತಾಲೂಕು ಕಛೇರಿಗಳಲ್ಲಿ ಆಗಸ್ಟ್ 15 ರವರೆಗೆ ಆಚರಿಸಲಾಗುತ್ತಿದೆ.  ತೋಟಗಾರಿಕೆ ಬಗ್ಗೆ ನಾಗರಿಕರು, ರೈತರು ಆಯಾ ತಾಲೂಕು ಅಧಿಕಾರಿಗಳನ್ನಾಗಲಿ ಅಥವ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೆಂದ್ರ 9482672039 ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ.

ಡಿಪ್ಲೋಮಾ ಪ್ರವೇಶಕ್ಕೆ : ಅರ್ಜಿ ಆಹ್ವಾನ

ಕೊಪ್ಪಳ, ಆ.10 (ಕರ್ನಾಟಕ ವಾರ್ತೆ): ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಖಾಲಿ ಉಳಿದಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಗೆ ಅನುಗುಣವಾದ ಪ್ರಥಮ ಸೆಮಿಸ್ಟರ್‍ನ ಇಸಿ ವಿಭಾಗದ-01 ಮತ್ತು ಸಿಎಸ್ ವಿಭಾಗದ-37 ಸೀಟುಗಳ ಡಿಪ್ಲೋಮಾ ಪ್ರವೇಶಕ್ಕಾಗಿ ಆಫ್-ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
     ನಿಗದಿತ ಅರ್ಜಿ ನಮೂನೆಯನ್ನು ಪಡೆಯಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು    State Bank of Mysore ಯಾವುದೇ ಶಾಖೆಗಳಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಚಾಲ್ತಿ ಖಾತೆ ಸಂಖ್ಯೆ: 64097386381 ಅಥವಾ  Sate Bank of Hyderabad ನ ಯಾವುದೇ ಶಾಖೆಗಳಲ್ಲಿನ ಖಾತೆ  ED-KEA-DCET-2015 Application Fee Collection Account No. 62417732180 ಗೆ ಪಾವತಿಸಿ, ಬ್ಯಾಂಕ್ ಚಲನ್ (CounterFoil)ನ್ನು ಪಡೆದು, ಸರ್ಕಾರಿ ಪಾಟಿಟೆಕ್ನಿಕ್, ಕೊಪ್ಪಳ ಸಂಸ್ಥೆಯಲ್ಲಿ ಸಲ್ಲಿಸಿ, ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಆ.14 ರ ಮಧ್ಯಾಹ್ನ 2.00 ಗಂಟೆಯ ಒಳಗಾಗಿ ಸಲ್ಲಿಸಬಹುದಾಗಿದ್ದು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.100/-, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.50/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗುಳೆ ಹೋಗದಂತೆ ಗ್ರಾಮಸ್ಥರಲ್ಲಿ ಜಿ.ಪಂ. ಸಿಇಓ ಕೃಷ್ಣ ಉದಪುಡಿ ಮನವಿ

ಕೊಪ್ಪಳ, ಆ.10 (ಕರ್ನಾಟಕ ವಾರ್ತೆ): ಮಳೆ ಅಭಾವದಿಂದಾಗಿ ಗುಳೆ ಹೊರಟಿರುವ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಜನತೆ ಗುಳೆ ಹೋಗದೆ, ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿ, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಮನವಿ ಮಾಡಿದ್ದಾರೆ.
     ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಪ್ರಾರಂಭದಲ್ಲಿ ಮಳೆ ಅಭಾವ ಕಂಡು ಬಂದಿರುವುದರಿಂದ ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದ ಕೂಲಿಕಾರರು ಕೆಲಸ ಅರಸಿ ಬೇರೆ ರಾಜ್ಯ ಅಥವಾ ಜಿಲ್ಲೆಗಳಿಗೆ ಗುಳೆ ಹೋಗುತ್ತಿದ್ದು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯದ ದೃಷ್ಠಿಯಿಂದ ಅವರು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಗ್ರಾಮಸ್ಥರು ಗುಳೆ ಹೋಗದೇ, ತಮ್ಮ ಊರಿನಲ್ಲಿಯೇ ಸ್ವ ಇಚ್ಛೆಯಿಂದ ಕೂಲಿ ಬೇಡಿಕೆ ಸಲ್ಲಿಸಿದಲ್ಲಿ ತುರ್ತಾಗಿ ಸಮುದಾಯಾಧಾರಿತ ಕಾಮಗಾರಿಗಳಾದ ನಮ್ಮ ಹೊಲ, ನಮ್ಮ ದಾರಿ, ವೈಯಕ್ತಿಕ ಕುರಿ, ದನದ ದೊಡ್ಡಿ, ತಮ್ಮ ಜಮೀನಿನಲ್ಲಿ ತೋಟಗಾರಿಕೆ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ತಮ್ಮ ಭೂಮಿಯ ಫಲವತ್ತತೆ, ಕೆರೆ ಕುಂಟೆ, ನೀರು ಸಂಗ್ರಹ ತೊಟ್ಟಿಗಳನ್ನು ನಿರ್ಮಿಸಿಕೊಳ್ಳಲು ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನ ಪೂರ್ತಿ ಕೆಲಸ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪಾಲ್ಗೊಂಡು ಆರ್ಥಿಕವಾಗಿ ಪ್ರಗತಿ ಕಾಣಬಹುದಾಗಿದೆ.
     ಜಿಲ್ಲೆಯ ಗ್ರಾಮೀಣ ಭಾಗದ ಕೂಲಿಕಾರರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗವನ್ನು ನೀಡಲಾಗುತ್ತಿದ್ದು, ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರಲ್ಲಿ ಗುಳೆ ಹೋಗದಂತೆ ನೈತಿಕ ಮನೋಸ್ಥೈರ್ಯ ತುಂಬಲು ಸ್ವ ಇಚ್ಛೆಯಿಂದ ಸಿದ್ಧರಾಗಬೇಕು. ಅಲ್ಲದೇ, ಅರ್ಜಿ ಸಲ್ಲಿಸಿದ ಎಲ್ಲಾ ಕೂಲಿಕಾರರಿಗೆ ತುರ್ತಾಗಿ ಕೆಲಸ ನೀಡಬೇಕು. ಗುಳೆಯಿಂದ ಧೃತಿಗೆಡದೇ ಪೂರ್ವಾಭಾವಿ ಸಿದ್ಧತೆಯನ್ನು ತಕ್ಷಣದಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಈಗಾಗಲೆ ಸೂಚನೆ ನೀಡಿದ್ದಾರೆ. ಈ ಯೋಜನೆಯಡಿ ಸುಲಭವಾಗಿ ಎಲ್ಲರಿಗೂ ಕೆಲಸ ಸಿಗುವಂತೆ ಮಾಡಲು ಗ್ರಾಮೀಣ ಮಟ್ಟದಲ್ಲಿ ಆಂದೋಲನ ರೂಪದಲ್ಲಿ ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ತಮ್ಮ ವೈಯಕ್ತಿಕ ಶೌಚಾಲಯದ ಸುತ್ತ ತೆಂಗಿನ ಮರ, ನಿಂಬೆ ಗಿಡ ಇತರೆ ಗಿಡಗಳನ್ನು ನೆಟ್ಟು ಒಳ್ಳೆಯ ಪರಿಸರವನ್ನು ನಿರ್ಮಾಣ ಮಾಡುವಂತೆ ಕೋರಿದ್ದಾರೆ.
     ಜಿಲ್ಲೆಯ ಯಾವುದೇ ಭಾಗದಲ್ಲಿ ಗುಳೆ ಹೊರಟಿರುವುದು ಕಂಡುಬಂದಲ್ಲಿ ಜಿಲ್ಲಾ ಕಛೇರಿಯ ಸಹಾಯವಾಣಿ ಸಂಖ್ಯೆ : 08539-220174 ಗೆ ಬೆಳಿಗ್ಗೆ 10 ರಿಂದ ಸಂಜೆ 05.30 ರವರೆಗೆ ಹಾಗೂ ಮೊಬೈಲ್ ಸಂಖ್ಯೆ: 9482030938 ಗೆ ಮಾಹಿತಿ ನೀಡಬಹುದಾಗಿದೆ. ಅಲ್ಲದೇ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಕೊಪ್ಪಳ, ದೂರವಾಣಿ : 9480871000 ಇವರಿಗೆ ಮೆಸೇಜ್ ಮೂಲಕ ತಮ್ಮ ಗ್ರಾಮದ ಕೆಲಸದ ಬಗ್ಗೆ ನಮೂದಿಸಿ ಕಳುಹಿಸಬಹುದಾಗಿದೆ ಎಂದು ಜಿ.ಪಂ. ಸಿಇಓ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ.10 ರಿಂದ ಜಿಲ್ಲಾದ್ಯಂತ ಹದಿಹರೆಯದ ಮಕ್ಕಳಿಗೆ ಜೀವನ ಕೌಶಲ್ಯ ತರಬೇತಿ

ಕೊಪ್ಪಳ, ಆ.10 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ಹಾಗೂ ಯುನಿಸೆಫ್ ಸಂಯುಕ್ತಾಶ್ರಯದಲ್ಲಿ ಬಾಲಿಕಾ ಸಂಘದ ಸದಸ್ಯರಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆ.10 ರಿಂದ ಜಿಲ್ಲಾದ್ಯಂತ ಆಯೋಜಿಸಲಾಗಿದೆ.
     ಜಿಲ್ಲಾಡಳಿತ ಮತ್ತು ಯುನಿಸೆಫ್ ಸಹಕಾರದೊಂದಿಗೆ ಅನುಷ್ಠಾನಗೊಳಿಸಲಾಗಿರುವ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲೆಯ 11 ರಿಂದ 18 ವರ್ಷ ವಯೋಮಾನದ ಹೆಣ್ಣುಮಕ್ಕಳನ್ನು ಸೇರಿಸಿ, ಪ್ರತಿ ಅಂಗನವಾಡಿ ಹಂತದಲ್ಲಿ ಕಿಶೋರಿ ಸಂಘ (ಬಾಲಿಕಾ ಸಂಘ)ಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಈಗ ಒಟ್ಟು 900 ಬಾಲಿಕಾ ಸಂಘಗಳಿದ್ದು, ಸುಮಾರು 35,000 ಕಿಶೋರಿಯರು ಸದಸ್ಯರಾಗಿದ್ದಾರೆ. ಜಿಲ್ಲೆಯ ಎಲ್ಲಾ ಹದಿಹರೆಯದ ಮಕ್ಕಳಿಗೆ ಬಾಲ್ಯವಿವಾಹ, ಲಿಂಗ ತಾರತಮ್ಯ, ಬಾಲ ಕಾರ್ಮಿಕ ಪದ್ಧತಿ, ಲೈಂಗಿಕ ದೌರ್ಜನ್ಯ, ಸಾಗಾಣಿಕೆ ಮುಂತಾದ ಅನಿಷ್ಠ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿ, ಅವರು ಬಲಿಯಾಗದಂತೆ ರಕ್ಷಣೆ ಮಾಡುವುದು ಈ ಸಂಘಗಳ ಉದ್ದೇಶವಾಗಿದೆ.  
      ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಹಂತ ಹಂತವಾಗಿ ಜೀವನ ಕೌಶಲ್ಯ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಿಶೋರಿಯರಿಗೆ ಹಾಗೂ ಪ್ರೌಢ ಶಾಲಾ ಮಟ್ಟದಲ್ಲಿ ಆಯಾ ಪ್ರೌಢಶಾಲೆಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ಆಯೋಜಿಸಲಾಗಿದೆ.
     ತರಬೇತಿಯಲ್ಲಿ ಬಾಲಿಕಾ ಸಂಘದ ಸದಸ್ಯರಿಗೆ ಲಿಂಗತಾರತಮ್ಯ ಹಾಗೂ ಲಿಂಗ ವ್ಯತ್ಯಾಸ ಬಗ್ಗೆ, ಮಕ್ಕಳ ಹಕ್ಕುಗಳ ಹಾಗೂ ವ್ಯವಸ್ಥೆಗಳ ಬಗ್ಗೆ, ಅಪೌಷ್ಟಿಕತೆ, ಆರೋಗ್ಯ, ಸ್ವಚ್ಛತೆ, ಶೌಚಾಲಯ ನಿರ್ಮಾಣ ಹಾಗೂ ನೈರ್ಮಲೀಕರಣ, ತಾಯಂದಿರ ಮರಣ ಮತ್ತು ಶಿಶುಮರಣ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ನಂತಹ ಅನಿಷ್ಟ ಪದ್ಧತಿಗಳಿಂದ ಮಕ್ಕಳ ರಕ್ಷಣೆ, ಹದಿಹರೆಯದಲ್ಲಿ ದೇಹ ಮತ್ತು ಮನಸ್ಸಿನಲ್ಲಾಗುವ ಪರಿವರ್ತನೆಗಳು ಹಾಗೂ ಚಂದದ ಬದುಕಿಗೆ ಬೇಕಾದ ಅಂಶಗಳು ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹದಿಹರೆಯದ ಮಕ್ಕಳಿಗೆ ಜೀವನ ಕೌಶಲ್ಯ ತರಬೇತಿ : ಕಾರ್ಯಕ್ರಮ ವೇಳಾಪಟ್ಟಿ

ಕೊಪ್ಪಳ, ಆ.10 (ಕರ್ನಾಟಕ ವಾರ್ತೆ) ಕೊಪ್ಪಳ ಜಿಲ್ಲಾಡಳಿತ ಹಾಗೂ ಯುನಿಸೆಫ್ ಸಂಯುಕ್ತಾಶ್ರಯದಲ್ಲಿ ಬಾಲಿಕಾ ಸಂಘದ ಸದಸ್ಯರಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆ.10 ರಿಂದ ಜಿಲ್ಲಾದ್ಯಂತ ಆಯೋಜಿಸಲಾಗಿದ್ದು, ಕಾರ್ಯಕ್ರಮದ ವೇಳಾಪಟ್ಟಿ ವಿವರ ಇಂತಿದೆ.
ಯಲಬುರ್ಗಾ ತಾಲೂಕು: ಆ.10-ಚಿಕ್ಕಮ್ಯಾಗೇರಿ, ಗದಗೇರಿ, ಆ.11-ಬಳೂಟಗಿ, ಬಂಡಿ, ಆ.12-ಮುಧೋಳ, ಕರಮುಡಿ, ಆ.13-ಬೇವೂರು, ವಣಗೇರಿ, ಆ.17-ಸಂಗನಾಳ, ರಾಜೂರು, ಆ.18-ಹಿರೇಮ್ಯಾಗೇರಿ, ಕಲ್ಲೂರು, ಆ.19-ಬೆಣಕಲ್, ಇಟಗಿ, ಆ.20-ಕುಕನೂರು, ಬಳಗೇರಿ, ಆ.21-ಮಂಡಲಗಿರಿ, ಯರೇಹಂಚಿನಾಳ, ಆ.24-ಮಂಗಳೂರು, ಕುದರಿಮೋತಿ, ಆ.25-ತಾಳಕೇರಿ, ಮಾಟಲದಿನ್ನಿ, ಆ.26-ಮುರಡಿ, ಹಿರೇವಂಕಲಕುಂಟಾ, ಆ.27-ತಳಕಲ್, ಬನ್ನಿಕೊಪ್ಪ.
ಕೊಪ್ಪಳ ತಾಲೂಕು: ಆ.31-ಬೆಟಗೇರಿ, ಸಿಂದೋಗಿ, ಸೆಪ್ಟಂಬರ್.01-ಕವಲೂರು, ಹಟ್ಟಿ, ಸೆ.02-ಬೋಚನಹಳ್ಳಿ, ಮತ್ತೂರು, ಸೆ.03-ಬಹದ್ದೂರಬಂಡಿ, ಗೊಂಡಬಾಳ, ಸೆ.04-ಗಿಣಗೇರಾ, ಹಿರೇಬಗನಾಳ, ಸೆ.07-ಇರಕಲ್‍ಗಡಾ, ಹಾಸಗಲ್, ಸೆ.08-ಓಜನಹಳ್ಳಿ, ಕೋಳೂರು, ಸೆ.09-ಕುಣಿಕೇರಿ, ಹುಲಿಗಿ.
ಗಂಗಾವತಿ ತಾಲೂಕು: ಸೆ.10-ಮುಸಲಾಪುರ, ಚಿಕ್ಕಮಾದಿನಾಳ, ಸೆ.11-ಹಣವಾಳ, ಚಿಕ್ಕಡಂಕನಕಲ್, ಸೆ.21-ಕರಡೋಣಾ, ಹಿರೇಖೇಡ, ಸೆ.22-ಗೌರಿಪುರ, ಆಗೋಲಿ, ಸೆ.23-ಶ್ರೀರಾಮನಗರ, ಹೊಸಕೇರಾ, ಸೆ.28-ಹೇರೂರು, ಕೇಸರಹಟ್ಟಿ, ಸೆ.29-ಚಿಕ್ಕಜಂತಕಲ್, ಢಣಾಪುರ, ಸೆ.30-ಆನೆಗುಂದಿ, ಮಲ್ಲಾಪುರ, ಅಕ್ಟೋಬರ್.01-ವಡ್ಡರಹಟ್ಟಿ, ಬಸಾಪಟ್ಟಣ, ಅ.05-ವೆಂಕಟಗಿರಿ, ಚಿಕ್ಕಬೆಣಕಲ್, ಅ.06-ಬೂದಗುಂಪಾ, ಯರಡೋಣ, ಅ.07-ಮರ್ಲಾನಹಳ್ಳಿ, ಉಳ್ಕಿಹಾಳ, ಅ.08-ಕಾರಟಗಿ, ಬೇವಿನಾಳ, ಅ.09-ಮುಷ್ಟೂರು, ಸುಳೇಕಲ್.
ಕುಷ್ಟಗಿ ತಾಲೂಕು: ಅ.13-ನಿಲೋಗಲ್, ಹನುಮನಾಳ, ಅ.14-ತುಗ್ಗಲಡೋಣಿ, ಮಾಲಗಿತ್ತಿ, ಅ.15-ಹಿರೇಗೊಣ್ಣಾಗರ, ಯರಗೇರಾ, ಅ.16-ಹನುಮಸಾಗರ, ಕಬ್ಬರಗಿ, ಅ.28-ಕಾಟಾಪುರ, ಹೂಲಗೇರಾ, ಅ.29-ಚಳಗೇರಾ, ಬೆನಕನಾಳ, ಅ.30-ತಳುವಗೇರಾ, ಕೊರಡಕೇರಾ, ಅ.31-ಬನ್ನಿಗೋಳ, ಬಿಜಕಲ್, ನವೆಂಬರ್.02-ದೋಟಿಹಾಳ, ಕ್ಯಾದಿಗುಪ್ಪ, ನ.03-ಕಂದಕೂರು, ಹಿರೇಮನ್ನಾಪುರ, ನ.04-ತಾವರಗೇರಾ, ಮೇಣದಾಳ, ನ.05-ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ವಿವಿಧ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ, ಆ.10 (ಕರ್ನಾಟಕ ವಾರ್ತೆ): ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಊಟ ಮತ್ತು ವಸತಿ ಸಹಾಯ ಯೋಜನೆ(ವಿದ್ಯಾಸಿರಿ), ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಮತ್ತು ಪೂರ್ಣಾವಧಿ ಪಿ.ಹೆಚ್.ಡಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ ಅಥವಾ ಫೆಲೋಷಿಪ್ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್  karepass.cgg.gov.in ಅಥವಾ      www.backwardclasses.kar.nic.in ಮೂಲಕ ಸಲ್ಲಿಸಬಹುದಾಗಿದೆ. ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಕಾರ್ಯಕ್ರಮಗಳ ಸರ್ಕಾರಿ ಆದೇಶಗಳಿಗಾಗಿ ಇಲಾಖೆಯ ವೆಬ್‍ಸೈಟ್  www.backwardclasses.kar.nic.in ಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಿಸಿಎಂ ಕಛೇರಿ, ಕೊಪ್ಪಳ, ದೂರವಾಣಿ ಸಂಖ್ಯೆ :08539-221606 ನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಬಿ.ಕಲ್ಲೇಶ ತಿಳಿಸಿದ್ದಾರೆ.

Monday, 10 August 2015

ಬರ ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ ಕೈಗೊಳ್ಳಿ- ಟಿ.ಕೆ. ಅನಿಲಕುಮಾರ್ ಸೂಚನೆ

ಕೊಪ್ಪಳ ಆ. 10 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಮಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಬರಪರಿಸ್ಥಿತಿ ತಲೆದೋರಿದ್ದು, ಕುಡಿಯುವ ನೀರು ಸರಬರಾಜು, ಜಾನುವಾರುಗಳಿಗೆ ಮೇವು ಪೂರೈಕೆ, ಪರ್ಯಾಯ ಕೃಷಿ ಚಟುವಟಿಕೆ ಹಾಗೂ ಉದ್ಯೋಖಾತ್ರಿ ಯೋಜನೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ರಾಜ್ಯ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಪರಾಮರ್ಶೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಈ ವರ್ಷ ಜನವರಿಯಿಂದ ಏಪ್ರಿಲ್ ವರೆಗೆ 26. 80 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 87. 40 ಮಿ.ಮೀ. ಹೆಚ್ಚು ಮಳೆಯಾಗಿದೆ.  ಆದರೆ ಕೃಷಿ ಚಟುವಟಿಕೆ ಚುರುಕುಗೊಳ್ಳುವ ಮೇ ತಿಂಗಳಿನಿಂದ ಜುಲೈ ತಿಂಗಳಿನವರೆಗೆ 205. 50 ಮಿ.ಮೀ. ವಾಡಿಕೆ ಮಳೆಯ ಬದಲಿಗೆ ಕೇವಲ 108. 10 ಮಿ.ಮೀ. ಮಳೆಯಾಗಿದ್ದು ಶೇ. 47 ರಷ್ಟು ಕೊರತೆ ಕಂಡುಬಂದಿದೆ.  ಜುಲೈ ತಿಂಗಳು ಒಂದರಲ್ಲೇ ಶೇ. 80 ರಷ್ಟು ಮಳೆಯ ಕೊರತೆಯಾಗಿದೆ.  ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 252500 ಹೆ. ಪ್ರದೇಶದಲ್ಲಿ ಬಿತ್ತನೆ ಗುರಿಯ ಬದಲಿಗೆ 130847 ಹೆ., ಅಂದರೆ ಶೇ. 52 ರಷ್ಟು ಮಾತ್ರ ಬಿತ್ತನೆಯಾಗಿದೆ.  ಇದರಲ್ಲಿ 90808 ಹೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿದೆ.  ಮಳೆಯ ಕೊರತೆಯಿಂದಾಗಿ ಬಿತ್ತನೆಯಾಗಿರುವ ಬೆಳೆಗಳೂ ಸಹ ಬಾಡುತ್ತಿವೆ.  ಈ ನಿಟ್ಟಿನಲ್ಲಿ ರೈತರು ಪರ್ಯಾಯ ಬೆಳೆ ಬೆಳೆಯಲು ಇರುವ ಅವಕಾಶಗಳ ಬಗ್ಗೆ ಕೃಷಿ ಇಲಾಖೆ ರೈತರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು ಆಗಸ್ಟ್ ತಿಂಗಳಿನ ಮೊದಲನೆ ಪಾಕ್ಷಿಕದಲ್ಲಿ ಮಳೆಯಾದಲ್ಲಿ ಮುಂಗಾರು ಹಂಗಾಮಿನ ಮುಖ್ಯ ಬೆಳೆಗಳಾದ ಮುಸುಕಿನಜೋಳ, ಸಜ್ಜೆ, ಶೇಂಗಾ, ಹೆಸರು ಬದಲಿಗೆ ನವಣೆ, ಸೂರ್ಯಕಾಂತಿ ಹಾಗೂ ಹುರುಳಿ ಬೆಳೆಗಳನ್ನು ಪರ್ಯಾಯವಾಗಿ ಬಿತ್ತನೆ ಮಾಡಬಹುದಾಗಿದೆ.  ಆಗಸ್ಟ್ ತಿಂಗಳ ಎರಡನೆ ಪಾಕ್ಷಿಕದಲ್ಲಿ ಮಳೆಯಾದಲ್ಲಿ ಸೂರ್ಯಕಾಂತಿ, ಹುರುಳಿ ಹಾಗೂ ಜಯಧರ್ ಹತ್ತಿ ಬಿತ್ತಬಹುದಾಗಿದೆ.  ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು ಇದೆ.  ಯಾವುದೇ ಕೊರತೆ ಇಲ್ಲ ಎಂದರು.
ಗೋಶಾಲೆ ಬಗ್ಗೆ ಸರ್ಕಾರ ನಿರ್ಧಾರ : ಜಿಲ್ಲೆಯಲ್ಲಿ ಮಳೆ ವಿಫಲವಾದ ಹಿನ್ನೆಲೆಯಲ್ಲಿ ಮೇವಿನ ಸಮಸ್ಯೆ ತಲೆದೋರುವ ಸಾಧ್ಯತೆಗಳಿರುವುದರಿಂದ, ಗೋಶಾಲೆಗಳನ್ನು ಪ್ರಾರಂಭ ಮಾಡುವುದರ ಬಗ್ಗೆ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದೆ.  ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸರ್ಕಾರಕ್ಕೆ ವರದಿ ಸಲ್ಲಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು.
ಮೇವು ಬೀಜ ಪೂರೈಕೆಗೆ ಆದ್ಯತೆ ನೀಡಿ : ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರನಾಯಕ್ ಅವರು ಮಾತನಾಡಿ, ಜಿಲ್ಲೆಯಲ್ಲಿ 339947 ಜಾನುವಾರುಗಳಿದ್ದು, ಒಂದು ವಾರಕ್ಕೆ ಕನಿಷ್ಟ 19037 ಮೆ. ಟನ್ ಮೇವು ಅಗತ್ಯ ಉಂಟಾಗುತ್ತದೆ.  ಸದ್ಯ ಜಿಲ್ಲೆಯಲ್ಲಿನ ಮೇವಿನ ಪರಿಸ್ಥಿತಿ ಪರಿಶೀಲಿಸಿದ್ದು ಕೇವಲ 6 ವಾರಗಳವರೆಗೆ ಆಗುವಷ್ಟು ಮೇವು ಮಾತ್ರ ಲಭ್ಯವಿರುವ ಸಾಧ್ಯತೆ ಇದೆ.  ಜಿಲ್ಲೆಯ 13 ಹೋಬಳಿಗಳಲ್ಲಿ ಮೇವಿನ ಸಮಸ್ಯೆ ತಲೆದೋರುತ್ತಿದ್ದು, ಕನಿಷ್ಟ 500 ಜಾನುವಾರುಗಳಿಗೆ 90 ದಿನಗಳಿಗೆ ಗೋಶಾಲೆ ತೆರೆಯಲು, ಪ್ರತಿ ಗೋಶಾಲೆಗೆ ಮೇವು, ನಿರ್ವಹಣೆ, ವಿದ್ಯುತ್ ಸಂಪರ್ಕ, ಮೂಲಭೂತ ಸೌಕರ್ಯ ಒದಗಿಸಲು 51. 21 ಲಕ್ಷ ರೂ. ವೆಚ್ಚವಾಗುವುದಾಗಿ ಅಂದಾಜಿಸಲಾಗಿದೆ.  ಈಗಾಗಲೆ ಇಲಾಖೆಯಿಂದ ಮೇವು ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೀರಾವರಿ ಪ್ರದೇಶದ ರೈತರಿಗೆ ಉಚಿತ ಮೇವು ಬೀಜದ ಮಿನಿ-ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.   ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಉಚಿತ ಮೇವಿನ ಬೀಜವನ್ನು ಪೂರೈಸಿ, ಮೇವು ಬೆಳೆಯಲು ಉತ್ತೇಜನ ನೀಡಲು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಕುಡಿಯುವ ನೀರು : ಜಿಲ್ಲೆಯ ನಗರ ಮತ್ತು ಪಟ್ಟಣಗಳಲ್ಲಿ ಮಳೆಯ ಕೊರತೆಯಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗಬಹುದಾದ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಕೊಪ್ಪಳ ಮತ್ತು ಗಂಗಾವತಿ ಮತ್ತು ಕುಷ್ಟಗಿಯಲ್ಲಿ ಸದ್ಯ ಕುಡಿಯುವ ನೀರಿನ ತೊಂದರೆ ಇಲ್ಲ.  ಆದರೆ ಯಲಬುರ್ಗಾ ಪಟ್ಟಣಕ್ಕೆ ತೊಂದರೆಯಾಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಉಳಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಬಗ್ಗೆ ಪರಿಸ್ಥಿತಿ ಪರಾಮರ್ಶೆ ನಡೆಸಬೇಕು.  ವಿದ್ಯುತ್ ಸಂಪರ್ಕ ಬಾಕಿ ಇರುವ ಕುಡಿಯುವ ನೀರಿನ ಘಟಕಗಳಿಗೆ ಕೂಡಲೆ ವಿದ್ಯುತ್ ಸಂಪರ್ಕ ಒದಗಿಸಿ, ನೀರು ಸರಬರಾಜು ಪ್ರಾರಂಭವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಮನೋಹರ್ ವಡ್ಡರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ಕೊರತೆ ಹಿನ್ನೆಲೆಯಲ್ಲಿ 143 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಲಾಗಿದ್ದು, ಸಮಸ್ಯೆ ಪರಿಹರಿಸಲು 807. 60 ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಗುಳೆ ತಡೆಗಟ್ಟಲು ವಿಶೇಷ ಯೋಜನೆ ರೂಪಿಸಿ : ಜಿಲ್ಲೆಯಲ್ಲಿ ಉದ್ಯೋಗ ಅರಸಿ, ಗುಳೆ ಹೋಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ.  ಗುಳೆ ತಡೆಗಟ್ಟಲು ಉದ್ಯೋಗಖಾತ್ರಿ ಯೋಜನೆಯಡಿ ವಿಶೇಷ ಕ್ರಿಯಾ ಯೋಜನೆ ರೂಪಿಸಿ, ಜಾರಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಓ ಕೃಷ್ಣ ಉದಪುಡಿ ಅವರು, ಜಿಲ್ಲೆಯಲ್ಲಿ ಈ ವರ್ಷ ಉದ್ಯೋಗಖಾತ್ರಿ ಯೋಜನೆಯಡಿ 56 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ, ಅನುಮೋದನೆ ನೀಡಲಾಗಿದೆ.  ಇದರಲ್ಲಿ ಕೂಲಿಯಾಧಾರಿತ ಯೋಜನೆ ರೂಪಿಸಲಾಗಿದ್ದು, ಕೊಪ್ಪಳ ತಾಲೂಕು -18 ಕೋಟಿ, ಗಂಗಾವತಿ-15 ಕೋಟಿ, ಕುಷ್ಟಗಿ-16 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಿ, ಈಗಾಗಲೆ ಆಯಾ ಗ್ರಾಮ ಪಂಚಾಯತಿಗಳಲ್ಲಿ ಕೆರೆ ಹೂಳೆತ್ತುವುದು, ರಸ್ತೆ ಕಾಮಗಾರಿಗಳಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಉದ್ಯೋಗ ನೀಡಲಾಗುತ್ತಿದೆ.  ರೋಜಗಾರ್ ಆಚರಣೆ ಮೂಲಕ ಉದ್ಯೋಗಖಾತ್ರಿ ಯೋಜನೆ ಕುರಿತಂತೆ ಮಾಹಿತಿ ನೀಡಿ, ಉದ್ಯೋಗಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದರು.
     ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಂಟಿಕೃಷಿ ನಿರ್ದೇಶಕ ರಾಮದಾಸ್, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಸೇರಿದಂತೆ ಎಲ್ಲ ತಾಲೂಕುಗಳ ತಾ.ಪಂ. ಕಾರ್ಯನಿರ್ವಾಹ ಅಧಿಕಾರಿಗಳು, ತಹಸಿಲ್ದಾರರು, ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.