Friday, 31 July 2015

ಬೆಣಕನಾಳ ಗ್ರಾಮದಲ್ಲಿ ರೋಜಗಾರ ದಿವಸ್ ಆಚರಣೆ

ಕೊಪ್ಪಳ, ಜು.31 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆಣಕನಾಳ ಗ್ರಾಮದಲ್ಲಿ ಜು.30 ರಂದು ರೋಜಗಾರ್ ದಿವಸವನ್ನು ಆಚರಿಸಲಾಯಿತು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಂಗಾವತಿ ತಾಲೂಕಾ ಐಇಸಿ ಸಂಯೋಜಕ ಕೃಷ್ಣ ನಾಯಕ ಮಾತನಾಡಿ, ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ 100 ದಿನಗಳ ಉದ್ಯೋಗ ನೀಡುವ ನಿಟ್ಟಿನಲ್ಲಿ ಜನರಿಂದ ಕೆಲಸಕ್ಕೆ ಬೇಡಿಕೆ ಪಡೆಯುವುದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ರೋಜಗಾರ್ ದಿವಸದ ಮುಖ್ಯ ಉದ್ದೇಶವಾಗಿದೆ. ಅಲ್ಲದೇ, ಯೋಜನೆಯ ಸೌಲಭ್ಯ ಅವಕಾಶ ಮತ್ತು ಅನುಷ್ಠಾನ ಕಾರ್ಯವಿಧಾನಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಅಗತ್ಯತೆ ಇರುವ ಕಾರಣ ತಿಂಗಳಲ್ಲಿ ಒಂದು ಗುರುವಾರದಂದು ರೋಜಗಾರ ದಿವಸವನ್ನು ಗ್ರಾಮ ಪಂಚಾಯಿತಿಯ ವಾರ್ಡ್ ಮಟ್ಟದಲ್ಲಿ ಆಚರಿಸಲಾಗುವುದು ಎಂದು ಅವರು ತಿಳಿಸಿದರು.
     ಸುಳೇಕಲ್ ಗ್ರಾಮ ಪಂಚಾಯತ್‍ನ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.   ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 160 ಕೂಲಿ ಕಾರ್ಮಿಕರಿಂದ ನಮೂನೆ-06 ರ ಮೂಲಕ ಬೇಡಿಕೆಗಳನ್ನು ಪಡೆದು, ಅವರಿಗೆ ಅರಣ್ಯೀಕರಣ ಕೆಲಸವನ್ನು ನೀಡಲಾಯಿತು. ಅಲ್ಲದೇ, ಉದ್ಯೋಗ ಚೀಟಿ ಹೊಂದಿರದ ಕುಟುಂಬದವರು ನೋಂದಣಿಗಾಗಿ ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ ವಂಕಲಕುಂಟಿ, ಹನುಮಂತಪ್ಪ ಗುಬ್ಬಿ, ಸವಿತಾ ಮಲ್ಲಯ್ಯಸ್ವಾಮಿ ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ವೀರಣ್ಣ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಾಯಕಬಂಧುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. 
Post a Comment